Click here to Download MyLang App

ಯಾರಿಗೂ ಹೇಳ್ಬೇಡಿ - ಬರೆದವರು : ಸುಪ್ರಿಯಾ B

ಬಾನಲ್ಲಿ ಸೂರ್ಯ ಪೂರ್ವದಿಂದ ಪಶ್ಚಿಮದೆಡೆಗೆ ನಿಧಾನವಾಗಿ ಸಾಗಿದ್ದ. ಕತ್ತಲು ಆವರಿಸುತ್ತಾ ಬಂತು, ಮುಸ್ಸಂಜೆಯ ಹೊತ್ತು. ಆಚೆ ಬೀದಿ ಮನೆಯ ನಳಿನಿ ಸೋದರಅತ್ತೆ ಮನೆ ಕಡೆಗೆ ಹೋಗುತ್ತಿದ್ದಳು. ನಳಿನಿ ಹೋಗುವಾಗ ಆಕೆಯ ಸ್ನೇಹಿತ ಪ್ರದೀಪ್ ಸಿಕ್ಕನು, ಹಾಗೆ ಮಾತನಾಡುತ್ತ ಅಲ್ಲೆ ನಿಂತಳು.

ಅವರು ನಿಂತಿದ್ದ ಜಾಗದಿಂದ ಸ್ವಲ್ಪ ದೂರದಲ್ಲೆ ರಂಗಜ್ಜಿಯ ಮನೆ. ರಂಗಜ್ಜಿ ಎಲೆ ಕುಟ್ಟುತ್ತ ತನ್ನ ಮನೆ ಬಾಗಿಲಿನ ಜಗುಲಿಯ ಮೇಲೆ ಕುಳಿತು, ಹಾದಿಲಿ ಹೋಗೋರನ್ನ, ಬರೋರನ್ನ ಮಾತನಾಡಿಸಿ ಎಲ್ಲಾ ವಿಷಯಗಳನ್ನ ತಿಳಿದುಕೊಳ್ಳುತ್ತಿದ್ದಳು. ರಂಗಜ್ಜಿಗೆ ಕಣ್ಣು ಸರಿಯಾಗಿ ಕಾಣಲ್ಲ ಅಂದರು ಎಲ್ಲರನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಳು, ಘಾಟಿ ಮುದುಕಿ. ಒಳಗೆ ಇರೋದಕ್ಕಿಂತ,ಆಕೆ ಹೊರಗಡೆ ಕುಳಿತು ಬೇರಯವರ ಬಗ್ಗೆ ಆಡಿಕೊಳ್ಳೋದೆ ಜಾಸ್ತಿ. ರಂಗಜ್ಜಿಗೆ ಏನಾದ್ರು ವಿಷಯ ಸಿಕ್ಕರೆ ಸಾಕು ಎಲ್ಲರಿಗೂ ಹೇಳೊವರೆಗೂ ಆಕೆಗೆ ಸಮಾಧಾನ ಇರಲ್ಲ.

ನಳಿನಿ ರಂಗಜ್ಜಿಯ ಮನೆ ದಾಟಿ ಹೋಗುವಾಗ, ಅವಳ ಕಣ್ಣಿಗೆ ಬಿದ್ದಳು.
ರಂಗಜ್ಜಿ : " ಏನವ್ವಾ ನಳಿನಿ ಚೆನ್ನಾಗಿದ್ದೀಯಾ? "

ನಳಿನಿ : "ಹಾ....ಅಜ್ಜಿ ಚೆನ್ನಾಗಿದ್ದೀನಿ. ನೀನು ಚೆನ್ನಾಗಿದ್ದೀಯಾ? "

ರಂಗಜ್ಜಿ : "ಏನೋ ಹಿಂಗಿದ್ದೀನಿ. ಮನೆಲಿ ಎಲ್ಲಾರು ಚೆನ್ನಾಗಿದ್ದಾರಾ? ಮದುವೆ ಯಾವಾಗ್ಲೆ ನಿಂದು? ನಾನು ಮದುವೆ ಊಟ ಮಾಡಬೇಕು ಅಂತಾ ಕಾಯ್ತಾ ಇದೀನಿ (ನಗುತ್ತಾ ). "

ನಳಿನಿ : " ಚೆನ್ನಾಗಿದ್ದಾರೆ ಅಜ್ಜಿ ಎಲ್ಲಾರು. ಮದುವೆನಾ ಈಗಲೆ ಮಾಡಿಕೊಳ್ಳಲ್ಲಾ ಅಜ್ಜಿ, ಇನ್ನು ತುಂಬಾ ದೂರ( ನಗುತ್ತಲೆ ಮುಂದೆ ಹೆಜ್ಜೆ ಹಾಕಿದಳು)."

ರಂಗಜ್ಜಿ : " ಆಯ್ತು, ಆಯ್ತು ಅತ್ತೆ ಮನೆಗೇನೆ?"

ನಳಿನಿ : "ಹೌದಜ್ಜಿ, ಬರ್ತೀನಿ "

ರಂಗಜ್ಜಿ ಅವಳನ್ನೆ ನೋಡುತ್ತಿದ್ದಳು, ಅವಳು ಪ್ರದೀಪನೊಡನೆ ಮಾತನಾಡುವುದನ್ನು ಕಂಡಳು. ಅವರಿಬ್ಬರು ಏನು ಮಾತನಾಡುತ್ತಿರಬಹುದು ಅನ್ನೋದನ್ನ ಕೇಳಿಸಿಕೊಳ್ಳಲು ರಂಗಜ್ಜಿಯ ಕಿವಿಗಳು ನೆಟ್ಟಗಾದವು.

ಇತ್ತ ನಳಿನಿ ಮತ್ತು ಪ್ರದೀಪ ಅದರ ಪರಿವೆ ಇಲ್ಲದೆ ಮಾತನಾಡುತ್ತಿದ್ದರು.

ಪ್ರದೀಪ : " ಇಷ್ಟು ದಿನಗಳಿಂದ ಪ್ರೀತಿ ಮಾಡ್ತಾ ಇದ್ದೀವಿ, ಈಗಲಾದರು ಮನೆಲಿ ಒಪ್ಪಿಸಿ ಮದುವೆ ಆಗೋಣ."

ನಳಿನಿ : " ನಮ್ಮನೇಲಿ ಒಪ್ಪತಾ ಇಲ್ಲಾ ಮದುವೆಗೆ, ನಾನು ಮತಾಡಿದ್ದೀನಿ ಮನೆಲಿ. "

ಪ್ರದೀಪ : " ಹೌದಾ...ಒಪ್ಪಿಲ್ಲಾ ಅಂದ್ರೆ ಓಡಿ ಹೋಗೋಣ, ಇದೇ ನನ್ನ ಕೊನೆ ನಿರ್ಧಾರ."

ನಳಿನಿ : " ಹಾ ಅದೇ... ನಾನು ಅದನ್ನೆ ಹೇಳಬೇಕು ಅಂದುಕೊಂಡೆ. ಯಾವಾಗ ಮದುವೆ? "

ಪ್ರದೀಪ : " ಪ್ಲಾನ್ ಪ್ರಕಾರ ನಾಳೆನೆ ಮದುವೆ, ಮೈಸೂರಲ್ಲಿ ನೀನು ಬೇಗ ಬಂದಬಿಡು."

ನಳಿನಿ : " ಹಾ...ಆಯ್ತು."

ಪ್ರದೀಪ : " ಹಾ... ನಾಳೆ ಬೆಳಗ್ಗೆ ೬ ಗಂಟೆಗೆ ಮೈಸೂರಿಗೆ ಟ್ರೈನ್ ಇದೆ. ನೀನು ಬೆಳಗ್ಗೆ ಬಟ್ಟೆನೆಲ್ಲಾ ಪ್ಯಾಕ್ ಮಾಡಿಕೊಂಡು ಬಂದುಬಿಡು. ಕಾಯಿಸಬೇಡ ಬೇಗ ಬಂದುಬಿಡು."

ನಳಿನಿ : " ಆಯ್ತು ಬೇಗ ಹೊರಡುತ್ತೀನಿ ಮನೆಲಿ ಕಾಯ್ತಾ ಇರ್ತಾರೆ, ಬ್ಯಾಗ್ ಬೇರೆ ಪ್ಯಾಕ್ ಮಾಡಬೇಕು."

ಪ್ರದೀಪ : " ಸರಿ ಆಯ್ತು. "

ನಳಿನಿ ಅವರ ಅತ್ತೆ ಮನೆ ಕಡೆಗೆ ಹೊರಟಳು, ಪ್ರದೀಪ ತನ್ನ ಮನೆ ಕಡೆ ಹೊರಟ.
ಈಕಡೆ ಎಲ್ಲಾ ಮಾತುಗಳು ರಂಗಜ್ಜಿ ಕಿವಿಗೆ ಬಿತ್ತು, ಅವಳು ಸುಮ್ಮನೆ ಇರ್ತಾಳಾ, ಯಾರಿಗೆ ಯಾವಾಗ ಹೇಳಲಿ ಅಂತಾ ಕಾಯ್ತಾ ಇದ್ದಳು. ಆ ರಾತ್ರಿ ರಂಗಜ್ಜಿಗೆ ನಿದ್ದೆನೆ ಬಂದಿಲ್ಲಾ, ಹೊಟ್ಟೆ ಒಳಗೆ ಹುಳಾ ಓಡಾಡಿದ ಹಾಗೆ ಆಗ್ತಾ ಇತ್ತು.

ಹಕ್ಕಿಗಳ ಕಲರವ, ದೇವಸ್ಥಾನದ ಭಕ್ತಿಗೀತೆಗಳು ಕೇಳಿ ಬರುತ್ತಿತ್ತು. ಸೂರ್ಯನ ಕಿರಣಗಳು ಅಂಗಳದ ತುಂಬಾ ಹರಡಿತ್ತು. ನಳಿನಿ ತನ್ನ ಬ್ಯಾಗ ತೆಗೆದುಕೊಂಡು ಹೊರಟಳು. ಪ್ರದೀಪ ಬೆಳಗಾಗೊ ಮುಂಚೆಯೆ ಹೊರಟು ಹೋಗಿದ್ದ.

ಇದೇ ಸಮಯ ಕಾದಿದ್ದ ರಂಗಜ್ಜಿ ಯಾರಾದರೂ ಬರ್ತಾರಾ ಅಂತಾ ಕಾಯುತ್ತಾ ಇರೋವಾಗ ಲಕ್ಷ್ಮಮ್ಮ ಬಂದಳು.

ಲಕ್ಷ್ಮಮ್ಮ : " ಏನು ರಂಗಜ್ಜಿ, ಬೆಳಗ್ಗೆನೆ ಎಲೆ, ಅಡಿಕೆ ಹಾಕೋತಾ ಇದ್ದೀಯಾ. "

ರಂಗಜ್ಜಿ : " ಹೂಂ...ಕಣೇ ಲಕ್ಷ್ಮಮ್ಮ ಬಾ ಕೂತಕೊ ಬಾ."

ಲಕ್ಷ್ಮಮ್ಮ : " ಹಾ ರಂಗಜ್ಜಿ ಬಂದೆ. "

ರಂಗಜ್ಜಿ : " ವಿಷಯ ಗೊತ್ತಾಯ್ತಾ? "

ಲಕ್ಷ್ಮಮ್ಮ : " ಯಾವ ವಿಷಯ ? ಗೊತ್ತಿಲ್ಲಾ? "

ರಂಗಜ್ಜಿ : " (ಪಿಸುಮಾತಲ್ಲಿ) ಅದೇ ಆಚೆ ಬೀದಿ ಮನೆ, ನಮ್ಮ ರಾಮಣ್ಣ ಮತ್ತೆ ಸರಸಕ್ಕನ ಮಗಳು ನಳಿನಿ , ಅದೇ ನಮ್ಮ ರಾಜಣ್ಣನ ಮನೆ ಮುಂದಗಡೆ ಇಲ್ವಾ ಮನೆ ಆ ಮನೆಲಿರೋ ಹುಡುಗನ್ನ ಜೊತೆ ಓಡಿ ಹೋದ್ಲು. "

ಲಕ್ಷ್ಮಮ್ಮ : " ಸೋಮಣ್ಣನ ಮಗ ಪ್ರದೀಪ ನ ಜೊತೆನಾ, ಇಲ್ಲಾ ರಂಗಜ್ಜಿ ಆ ಹುಡುಗಿ ಅಂತವಳಲ್ಲಾ, ನಿನಗೆ ಯಾರು ಹೇಳಿದ್ರು, ಹೇಗೆ ಗೊತ್ತಾಯ್ತು ನಿನಗೆ? "

ರಂಗಜ್ಜಿ : " ಯಾರ ಯಾಕೆ ಹೇಳ್ತಾರೆ ನಾನೇ, ನನ್ನ ಕಣ್ಣಾರೆ ನೋಡಿದ್ದೀನಿ. ನಿನ್ನೆ ಅವರಿಬ್ಬರು ಮಾತಾಡೋದನ್ನ ನಾನೆ ಕೇಳಿಸಿಕೊಂಡಿದ್ದೀನಿ. ಇವತ್ತೆ ಮದುವೆ ಅಂತೆ ಮೈಸೂರಲ್ಲಿ, ಮನೆಯವರಿಗೆ ಯಾರಿಗೂ ಗೊತ್ತಿಲ್ಲಾ. ೬ ಗಂಟೆ ಟ್ರೈನ್ ಗೆ ಹೋಗೋಣ ಅಂತಾ ಮಾತಾಡ್ತಾ ಇದ್ರು."

ಲಕ್ಷ್ಮಮ್ಮ : " ( ಆಶ್ಚರ್ಯದಿಂದ) ಹೌದಾ."

ರಂಗಜ್ಜಿ : " ( ಹತ್ತಿರ ಕರೆದು, ಪಿಸುಮಾತಲ್ಲಿ) ನಾನು ಹೇಳಿದೆ ಅಂತಾ ಯಾರಿಗೂ ಹೇಳ್ಬೇಡ, ನೀನು ನಮ್ಮೋಳಲ್ವಾ ಅದಕ್ಕೆ ಗೊತ್ತಿರಲಿ ಅಂತಾ ಹೇಳಿದೆ."

ಲಕ್ಷ್ಮಮ್ಮ : "ಆ ಹುಡುಗಿ ಇಂತವಳು ಅಂತಾ ಗೊತ್ತಿರಲಿಲ್ಲಾ. ಅವರ ಮನೆ ವಿಷಯ ನಮಗ್ಯಾಕೆ ಬಿಡು ಅಜ್ಜಿ. ಬರ್ತೀನಿ ಮನೆಲಿ ಕೆಲಸ ಇದೆ."

ರಂಗಜ್ಜಿಗೆ ಈಗ ಸಮಾಧಾನ ಆಯ್ತು, ಹೊಟ್ಟೆಲಿರೊ ವಿಷಯಾನಾ ಹೊರಗಡೆ ಹಾಕಿದಳಲ್ಲಾ ಅದಕ್ಕೆ.
ಲಕ್ಷ್ಮಮ್ಮ ರಂಗಜ್ಜಿ ಮನೆಯಿಂದ ತಮ್ಮ ಮನೆಗೆ ಹೋಗದೆ ತನ್ನ ಗೆಳತಿ ಮಂಜುಳಾ ಮನೆಗೆ ಹೋದಳು.

ಮಂಜುಳಾ : " ಬಾ ಲಕ್ಷ್ಮಕ್ಕಾ, ಕೂತುಕೊ."

ಲಕ್ಷ್ಮಮ್ಮ : " ಹಾ ಬಂದೆ ಮಂಜುಳಾ, ಏನು ಮಾಡ್ತಾ ಇದ್ದೆ. ಮಕ್ಕಳು ಎಲ್ಲಿ? "

ಮಂಜುಳಾ : " ಅಡುಗೆ ಮಾಡ್ತಾ ಇದ್ದೆ, ಮಕ್ಕಳು ಇಲ್ಲೆ ಆಟ ಆಡುತ್ತಾ ಇರಬೇಕು."

ಲಕ್ಷ್ಮಮ್ಮ : " ನಿನಗೆ ವಿಷಯ ಗೊತ್ತಾಯ್ತಾ?"

ಮಂಜುಳಾ : " ಏನು? "

ಲಕ್ಷ್ಮಮ್ಮ : " (ರಂಗಜ್ಜಿ ಹೇಳಿದ್ದ ವಿಷಯ ಎಲ್ಲಾ ವಿವರಿಸಿದಳು) ಇಷ್ಟೆಲ್ಲಾ ಆಗಿದೆಯಂತೆ."

ಮಂಜುಳಾ : " ಹೌದಾ, ನಾನು ಒಂದು ಸಾರಿ ಅವರಿಬ್ಬರು ಮಾತಾಡಿದ್ದನ್ನ ನೋಡಿದ್ದೀನಿ. ಹಾಗಾದ್ರೆ ಮನೆಲಿರೊ ದುಡ್ಡು,ಒಡವೆ,ವಸ್ತ್ರ ಎಲ್ಲಾ ತಗೊಂಡು ಹೋಗಿರಬೇಕು."

ಲಕ್ಷ್ಮಮ್ಮ: " ಗೊತ್ತಿಲ್ಲಾ ತಗೊಂಡು ಹೋಗಿರಬಹುದು."

ಮಂಜುಳಾ : " ಹೂಂ..."

ಲಕ್ಷ್ಮಮ್ಮ: " ( ಪಿಸುಮಾತಲ್ಲಿ) ನನಗೂ ಹಾಗೆ ಸುದ್ದಿ ಬಂತು. ಯಾರಿಗೂ ಹೇಳ್ಬೆಡ, ಅದೂ ನಾನು ಹೇಳಿದೆ ಅಂತಾ."

ಅಲ್ಲಿಂದ ಹೊರ ನಡೆದಳು ಲಕ್ಷ್ಮಮ್ಮ.
ಮಂಜುಳಾ ಸುಮ್ಮನಿರಲಾರದೆ ತನ್ನ ಗಂಡ ಜಗದೀಶ ಬಂದೊಡನೆ ಅವನ ಕಿವಿಗೆ ಊದಿದಳು. ಲಕ್ಷ್ಮಮ್ಮ ಹೇಳಿದ್ದನ್ನೆಲ್ಲಾ ಹೇಳಿ ಒಡವೆ, ವಸ್ತ್ರ ಎಲ್ಲಾ ತಗೊಂಡು ಹೋಗಿದ್ದಾರಂತೆ ಅಂತಾನು ಸೇರಿಸಿ ಹೇಳಿದಳು. ಈ ವಿಷಯ ಯಾರಿಗೂ ಹೇಳ್ಬೇಡ್ರಿ, ಕಂಡೊರ ಮನೆ ವಿಷಯ ನಮಗ್ಯಾಕೆ ಬೇಕು ಅಂತಾ.
ಜಗದೀಶ ಹಾಗೆ ಮಾತಾಡ್ತಾ, ಮಾತಾಡ್ತಾ ತನ್ನ ಸ್ನಹಿತರಿಗೆಲ್ಲಾ ಹೇಳಿದ. ಯಾರಿಗೂ ಹೇಳ್ಬೇಡಿ ಅಂತಾನು ಹೇಳಿದ.

ಇತ್ತ ರಂಗಜ್ಜಿ ಮನೆಯ ಮುಂದೆ ಹೋಗೋರಿಗೆ, ಬರೋರಿಗೆ ಕರೆದು ಎಲ್ಲಾ ವಿಷಯ ಹೇಳಿದಳು. ಯಾರಿಗೂ ಹೇಳ್ಬೇಡಿ ಅಂತಾನು ಹೇಳಿದಳು.

ರಂಗಜ್ಜಿಯಿಂದ ಮಂಗಳಮ್ಮ,ಶಾಂತಮ್ಮ, ಅವರಿಂದ ಸರೋಜ, ಮಲ್ಲಮ್ಮ, ಹೀಗೆ ಗೀತಾ, ವತ್ಸಲಾ, ರತ್ನಮ್ಮ, ಶಾಮಣ್ಣ, ಬೀರಪ್ಪ , ಯಾರಿಗೂ ಹೇಳ್ಬೇಡಿ ಅಂತಾನೆ ಒಬ್ಬರ ಬಾಯಿಂದ ಮತ್ತೋಬ್ಬರಿಗೆ ವಿಷಯ ಹರಡುತ್ತಾ ಹೋಯಿತು. ಇದ್ದ ವಿಷಯದ ಜೊತೆಗೆ ಮತ್ತಷ್ಟು ಹೊಸ ವಿಷಯಗಳು ಸೇರಿ, ಸಂಜೆ ಆಗುವುದರೊಳಗೆ ಊರಿನ ತುಂಬಾ ಹರಡಿತ್ತು.

ಈ ವಿಷಯ ನಳಿನಿ ಹಾಗೂ ಪ್ರದೀಪನ ಮನೆಯವರೆಗೂ ಹರಡಿತ್ತು. ಮೊದಲು ಅವರು ನಂಬಲಿಲ್ಲಾ, ನಂತರ ಅವರಿಬ್ಬರ ಮನೆಯಲ್ಲಿ ತನಿಕೆ ಆರಂಭವಾಯಿತು. ನಳಿನಿ ಮನೆಯವರು ನಳಿನಿಗೆ ಹಾಗೂ ಪ್ರದೀಪನ ಮನೆಯವರು ಪ್ರದೀಪನಿಗೆ ಕರೆ ಮಾಡತೊಡಗಿದರೂ. ಈ ಕಡೆ ಪ್ರದೀಪನ ಫೋನು ಸ್ವಿಚ್ ಆಫ್ ಅಂತಾ, ಆಕಡೆ ನಳಿನಿ ಫೋನ್ ವ್ಯಾಪ್ತಿ ಪ್ರದೇಶದ ಹೊರಗಿದೆ ಅಂತಾ ಬರುತ್ತಿತ್ತು. ಮನೆಯವರಿಗೆಲ್ಲಾ ಆಘಾತ, ಸಿಟ್ಟು ಎಲ್ಲಾ ಒಟ್ಟೊಟ್ಟಿಗೆ ಬರತೊಡಗಿತು.

ಅಷ್ಟರಲ್ಲಿ ರಾತ್ರಿ ಕಳೆದು ಬೆಳಗಾಗಿತ್ತು. ನಳಿನಿಯ ಮನೆಯವರು ಪ್ರದೀಪನ ಮನೆಗೆ, ಪ್ರದೀಪನ ಮನೆಯವರು ನಳಿನಿ ಮನೆಗೆ ಹೊರಟಿದ್ದರು. ಎರಡು ಕುಟುಂಬಗಳು ಹನುಮಂತನ ಗುಡಿಯ ಮುಂದೆ ಎದುರಾದರು, ಮಾತಿಗೆ ಮಾತು ಬೆಳೆದು ದೊಡ್ಡ ಜಗಳವೇ ಶುರು ಆಯಿತು. ಊರಿನ ಎಲ್ಲಾ ಜನ ಸುತ್ತಲು ನಿಂತು ಜಗಳವನ್ನ ನೋಡುತ್ತಾ ನಿಂತರು, ರಂಗಜ್ಜಿಯು ಆ ಗುಂಪಿನಲ್ಲಿದ್ದಳು, ಊರಿನ ಹಿರಿಯರೆಲ್ಲಾ ಜಗಳ ಬಿಡಿಸಲು ಪ್ರಯತ್ನಿಸಿದರು ಬಗೆಹರಿಯಲಿಲ್ಲಾ.

ನಳಿನಿ ಮನೆಯವರು : " (ಜೋರಾಗಿ ಕೂಗುತ್ತಾ) ನನ್ನ ಮಗಳು ಒಳ್ಳೆಯವಳೆ ನಿನ್ನ ಮಗನೆ ಅವಳ ತಲೆ ಕೆಡಿಸಿದ್ದು. ಅವಳು ಮಂಗಳೂರಿಗೆ ಹೊಗ್ತೀನಿ ಅಂತಾ ಹೇಳಿ ಹೋಗಿದ್ದಾಳೆ."

ಪ್ರದೀಪನ ಮನೆಯವರು : "( ಆ ಧ್ವನಿಗೆ ಪ್ರತಿಯಾಗಿ ಜೋರಾಗಿ ಕೂಗುತ್ತಾ ) ಎಲ್ಲಾ ನಿನ್ನ ಮಗಳು ನನ್ನ ಮಗನ ಮೇಲೆ ಮಾಡಿದ ಮೋಡಿ ಪ್ರಭಾವ, ಎಲ್ಲದಕ್ಕೂ ನಿನ್ನ ಮಗಳೆ ಕಾರಣ."

ಹೀಗೆ ಅವರ ಜಗಳ ನಡಿಯುತ್ತಾ ಇತ್ತು, ಸ್ವಲ್ಪ ಸಮಯದ ನಂತರ ನಳಿನಿ ಬ್ಯಾಗ್ ಹಿಡಿದು ಬಸ್ ನಿಲ್ದಾಣದಿಂದ ಮನೆಗೆ ಬರುವಾಗ ಈ ದೊಡ್ಡ ಗಲಾಟೆ ನೋಡಿದಳು. ಯಾಕೆ ಏನು ಅಂತಾ ಕೇಳತೊಡಗಿದಳು. ಅವಳ ಮನೆಯವರು ನಡೆದ ವಿಚಾರ ತಿಳಿಸಿದರು.

ನಳಿನಿ : " ( ಕೋಪದಿಂದ) ಇದೆಲ್ಲಾ ಯಾರು ಹೇಳಿದರು, ಪ್ರದೀಪ ಎಲ್ಲಿದ್ದಾನೆ."
ಎಲ್ಲರೂ ಆಶ್ಚರ್ಯದಿಂದ ಅವಳನ್ನೆ ನೋಡಿದರು.

ಪ್ರದೀಪನ ಮನೆಯವರು : " ಆಹಾ...ನಿನಗೆ ಗೊತ್ತಿರಬೇಕಲ್ಲಮ್ಮ ಎಲ್ಲಿದ್ದಾನೆ ಅಂತಾ."

ನಳಿನಿ : " ನಿಮ್ಮ ಮಗ ನಿಮಗೆ ಗೊತ್ತಿರಬೇಕು, ನನಗೆ ಕೇಳಿದರೆ."

ಕಾಕತಾಳಿಯವೆಂಬಂತೆ ಅದೇ ಸಮಯಕ್ಕೆ ಪ್ರದೀಪನು ಅಲ್ಲಿಗೆ ಬಂದ. ಏನಾಯ್ತು ಅಂತಾ ಕೇಳಿದ , ನಡೆದ ಎಲ್ಲಾ ವಿಚಾರವನ್ನು ನಳಿನಿ ಪ್ರದೀಪನಿಗೆ ಹೇಳಿದಳು.

ಪ್ರದೀಪ : " ( ಆಶ್ಚರ್ಯದಿಂದ ) ಹೌದಾ, ಇಷ್ಟೆಲ್ಲಾ ಆಯ್ತಾ."

ನಳಿನಿ : " ಇಷ್ಟಕ್ಕೂ ನಾವು ಮಾತನಾಡಿದ್ದನ್ನ ತಪ್ಪಾಗಿ ಹೀಗೆ ಹೇಳಿದ್ದು ಯಾರು? "

ಪ್ರದೀಪ : "ಹೌದು, ಯಾರು ಇಷ್ಟಕ್ಕೆಲ್ಲಾ ಕಾರಣ. ಯಾರು ಅಂತಾ ಗೊತ್ತಾಗಲಿ ಅವಾಗಿದೆ ಅವರಿಗೆ ಮಾರಿ ಹಬ್ಬ."

ನಳಿನಿ,ಪ್ರದೀಪನ ಮನೆಯವರು : " ನೀವು ನೀವು ಏನು ಮಾತಾಡಕೊಳ್ಳುತ್ತಾ ಇದೀರಾ. ಮೊದಲು ಏನಾಯ್ತು ಅಂತಾ ಹೇಳಿ. ಮೈಸೂರು ಮದುವೆ ಅಂತಾ ಏನೆನೋ ಸುದ್ದಿ ಕೇಳಿದ್ವಿ, ಹೀಗೀಗೆ ಅಂತಾ ಹೇಳಿದ್ರೆ ನಾವೆ ಮಾತಾಡಿ ಮದುವೆ ಮಾಡ್ತಾ ಇದ್ವಲ್ಲಾ."

ಪ್ರದೀಪ : " ಆಯ್ತು, ಏನಾಯ್ತು ಮೊನ್ನೆ ಅಂತಾ ಹೇಳ್ತೀವಿ. ಆದರೆ ಈ ಸುದ್ದೀನ ಹೀಗೆ ಯಾರು ಹಬ್ಬಸಿದ್ದಾರೆ."

ನಳಿನಿ : " ಅಪ್ಪಾ, ಅಮ್ಮಾ ನಾನು ಮೊನ್ನೆ ಅತ್ತೆ ಮನೆಗೆ ಹೋಗಿದ್ನಲ್ಲಾ, ಆಗ ಪ್ರದೀಪ ನನಗೆ ದಾರಿಯಲ್ಲಿ ಸಿಕ್ಕ, ಚಿಕ್ಕಂದಿನಿಂದಲು ಸ್ನೇಹಿತ ಅಲ್ವಾ ಅದಕ್ಕೆ ಮಾತಾಡ್ತಾ ಇದ್ವಿ ಅಷ್ಟೆ."

ಪ್ರದೀಪ : " ಹೌದು, ಮಾತಾಡಿಸಿದರೆ ಪ್ರೀತಿ ಅಂತಾನಾ?"

ನಳಿನಿ , ಪ್ರದೀಪನ ಮನೆಯವರು : " ಹಾಗಾದ್ರೆ ಏನಾಯ್ತು?"

ಪ್ರದೀಪ : " ನಾನ್ ಹೇಳ್ತೀನಿ, ನಿನ್ನೆ ನನ್ನ ಸ್ನೇಹಿತನ ಮದುವೆ ಇತ್ತು ಮೈಸೂರಲ್ಲಿ, ಅಲ್ಲಿಗೆ ಹೋಗಿದ್ದೆ. ನಾನು ಮದುವೆ ಆಗೋಕಲ್ಲಾ. ಅಪ್ಪ, ಅಮ್ಮ ನಿಮಗೆ ಹೇಳಿಯೇ ಹೋಗಿದ್ನಲ್ಲಾ."

ಪ್ರದೀಪ ಮನೆಯವರು: " ಹೇಳಿದ್ದೆ , ಜನ ಹೇಳೋ ವಿಷಯ ನಾವು ನಂಬಿರಲಿಲ್ಲಾ, ಆದರೆ ನಿನ್ನ ಫೋನ್ ಸ್ವಿಚ್ಛ ಆಫ್ ಅಂತಾ ಬರ್ತಾ ಇತ್ತು."

ಪ್ರದೀಪ : " ಅದಾ, ನನ್ನ ಚಾರ್ಜರ್ ಇಲ್ಲೆ ಬಿಟ್ಟು ಹೋಗಿದ್ದೆ ಚಾರ್ಜ ಬೇರೆ ಖಾಲಿ ಆಯ್ತು ಸ್ನೇಹಿತನ ಚಾರ್ಜರ್ನಿಂದ ಮಾಡೋಕೆ ಆಗಲಿಲ್ಲಾ. ಹರೀಶನಿಗೆ ಫೋನ್ ಮಾಡಬಹುದ್ದಿತ್ತಲ್ವಾ."

ಪ್ರದೀಪ ಮನೆಯವರು: " ಆಗ ತಕ್ಷಣಕ್ಕೆ ತೋಚಲಿಲ್ಲಾ ಕಣೋ. "

ನಳಿನಿ : " ಅಲ್ಲಿಂದ ನಾನ್ ಹೇಳ್ತೀನಿ, ನಾನು ನನ್ನ ಪದವಿ ಪ್ರಮಾಣ ಪತ್ರ ತೆಗೆದುಕೊಂಡು ಬರೋಕೆ ಬೆಂಗಳೂರಿಗೆ ಹೋಗಿದ್ದೆ. ನಾನು ನಿಮಗೆ ಹೇಳಿದ್ನಲ್ಲ ಅಪ್ಪಾ, ಅಮ್ಮಾ."

ನಳಿನಿ ಮನೆಯವರು: " ಹಾ ನೀನೆನೋ ಹೇಳಿ ಹೋಗಿದ್ದೆ, ಆದರೆ ಜನ ಹೇಳೋದು ಕೇಳಿ ನಾವು ಮೂರ್ಖರಾಗೋದ್ವಿ. ನಿನ್ನ ಫೋನ್ ಕೂಡಾ ವ್ಯಾಪ್ತಿ ಪ್ರದೇಶದ ಹೋರಗಿದ್ದಾರೆ ಅಂತಾ ಬರ್ತಿತ್ತಲ್ಲಾ."

ನಳಿನಿ : " ನನ್ನ ಫೋನ್ ನೆಟ್ವರ್ಕ ಸರಿಯಾಗಿ ಬರ್ತಿಲ್ಲಾ, ಈಗಲೂ ಅದು ಹಾಗೆ ಬರ್ತಿದೆ. "

ನಳಿನಿ ಮನೆಯವರು : " ಹೌದಾ."

ನಳಿನಿ , ಪ್ರದೀಪ : " ಯಾರೋ ಏನೋ ಹೇಳ್ತಾರೆ ಅಂತಾ ನೀವು ಕೇಳಬಾರದು. ( ಜನರ ಕಡೆ ನೋಡ್ತಾ ) ನೀವು ಹಾಗೆ ಇಲ್ಲದನ್ನ ಇದೇ ಅನ್ನೋ ಥರ ಹೇಳಬಾರದು. ನಾವು ಯಾವಾಗ ಒಡವೆ, ವಸ್ತ್ರ ತಗೊಂಡು ಹೋಗಿದ್ವಿ?, ಮಾತಾಡಿದ ತಕ್ಷಣ ಓಡಿ ಹೋಗ್ತಾರೆ ಅನ್ನೋದು ತಪ್ಪಲ್ವಾ. 'ಪ್ರತ್ಯಕ್ಷವಾಗಿ ಕಂಡರು ಪ್ರಮಾಣಿಸಿ ನೋಡು' ಅಂತಾ ನೀವೇ ಹೇಳ್ತೀರಲ್ಲಾ, ಅದೆಲ್ಲಾ ಈಗ ನೆನಪಿಗೆ ಬರಲಿಲ್ವಾ. ಇನ್ಮುಂದೆ ಹೀಗೆಲ್ಲಾ ಸುಳ್ಳು ಸುದ್ದಿಗೆ ಕಿವಿಗೊಡಬೇಡಿ."

ನಳಿನಿ, ಪ್ರದೀಪ : " ( ಮನೆಯವರಿಗೆ ಕೈ ಮುಗಿದು ) ತಪ್ಪಾಯ್ತು ಏನಾದ್ರು ತಪ್ಪಾಗಿ ಮಾತನಾಡಿದ್ದರೆ ಕ್ಷಮಿಸಿ."

ಮನೆಯವರು : " ಚಿಕ್ಕವರಾಗಿ ನಿಮಗೆ ಇರೋ ಬುದ್ದಿ ನಮಗೆ ಬರಲಿಲ್ವಲ್ಲಾ, ನಮ್ಮನ್ನ ನೀವು ಕ್ಷಮಿಸಿ ."

ಅಂತಾ ಕ್ಷಮೆ ಕೇಳಿ ಮನೆ ಕಡೆ ಹೊರಟರು.
ರಂಗಜ್ಜಿ ಹಾಗೂ ಊರಿನ ಕೆಲವರು ತಾವು ಮಾಡಿದ ಎಡವಟ್ಟು ನೆನೆಸಿಕೊಂಡು, ತಲೆ ತಗ್ಗಿಸಿ ಮನೆ ಕಡೆಗೆ ಹೊರಟರು.

ಹಾಗಾದರೆ ರಂಗಜ್ಜಿ ಕೇಳಿಸಿಕೊಂಡಿದ್ದು ಸುಳ್ಳಾ?
.
.
.
.
ಇಲ್ಲಾ ನಮ್ಮ ರಂಗಜ್ಜಿ ಕೇಳಿಸಿಕೊಂಡಿದ್ದು ನಿಜಾ, ನಳಿನಿ ಮತ್ತು ಪ್ರದೀಪ ಹೇಳುತ್ತಿರುವುದು ನಿಜಾ.

ಅಂದು ಸಂಜೆ ಏನಾಯ್ತು ಅಂದ್ರೆ
ಇಬ್ಬರು ಯೋಗಕ್ಷೇಮ ವಿಚಾರಿಸಿ ಮಾತು ಮುಂದುವರೆಸಿದರು.
ಪ್ರದೀಪ : " ನಿನಗೆ ಗೊತ್ತಾ ನಮ್ಮ ತರಗತಿಲಿ ಇದ್ನಲ್ಲಾ ನಿಖಿಲ್."

ನಳಿನಿ : " ಹೌದು ಗೊತ್ತು."

ಪ್ರದೀಪ : " ಅವನು ಲತಾ ಅನ್ನೋ ಹುಡುಗಿನ ಪ್ರೀತಿಸುತ್ತಾ ಇದ್ದ. ಅವನು ಆಕೆಗೆ ಇಷ್ಟು ದಿನಗಳಿಂದ ಪ್ರೀತಿ ಮಾಡ್ತಾ ಇದ್ದೀವಿ, ಈಗಲಾದರು ಮನೆಲಿ ಒಪ್ಪಿಸಿ ಮದುವೆ ಆಗೋಣ, ಅಂತಾ ಕೇಳಿದ್ನಂತೆ. ಅವಳು ಕೂಡಾ ಒಪ್ಪಿಗೆ ಕೊಟ್ಟಿದ್ದಾಳೆ."

ನಳಿನಿ : "ಲತಾ ಅಂದ್ರೆ ಶೇಖರನ ತಂಗಿ, ಆಕೆಗೆ ನಾನು ಕೇಳಿದಾಗ ನಮ್ಮನೇಲಿ ಒಪ್ಪತಾ ಇಲ್ಲಾ ಮದುವೆಗೆ, ನಾನು ಮತಾಡಿದ್ದೀನಿ ಮನೆಲಿ ಅಂತಾ ಹೇಳಿದ್ಲು. "

ಪ್ರದೀಪ : " ಹೌದಾ...ಹಾಗೆಳಿದ್ಲಾ. ಒಪ್ಪಿಲ್ಲಾ ಅಂದ್ರೆ ಓಡಿ ಹೋಗೋಣ, ಇದೇ ನನ್ನ ಕೊನೆ ನಿರ್ಧಾರ. ಹಾಗೇನೋ ಪ್ಲಾನ್ ಮಾಡಕೊಂಡಿದ್ದರಂತೆ. ಮನೆಯವರನ್ನ ಎದುರು ಹಾಕಿಕೊಂಡು ಬೇಕಿತ್ತಾ ಇವರಿಗೆ ಮದುವೆ, ಒಪ್ಪಿಸಿ ಮಾಡಿಕೊಬಹುದಿತ್ತು."

ನಳಿನಿ : " ಹಾ ಅದೇ... ನಾನು ಅದನ್ನೆ ಹೇಳಬೇಕು ಅಂದುಕೊಂಡೆ. ಯಾವಾಗ ಮದುವೆ? "

ಪ್ರದೀಪ : " ಪ್ಲಾನ್ ಪ್ರಕಾರ ನಾಳೆನೆ ಮದುವೆ, ಮೈಸೂರಲ್ಲಿ ನೀನು ಬೇಗ ಬಂದಬಿಡು ಅಂತಾ ಈಗ ತಾನೆ ಫೋನ್ ಮಾಡಿದ್ದ ನಿಖಿಲ್."

ನಳಿನಿ : "ಹೌದಾ, ಲತಾ ಮದುವೆಗೆ ಕರಿತೀನಿ ಬಾ ಅಂದಿದ್ಲು, ನಾನು ಹಾ...ಆಯ್ತು ಬರ್ತೀನಿ ಅಂತಾ ಹೇಳಿದ್ದೆ."

ಪ್ರದೀಪನ ಫೋನ್ ರಿಂಗಣಿಸಿತು.
ಪ್ರದೀಪ : " (ಫೋನ್ ರಿಸಿವ್ ಮಾಡಿ ಸ್ನೇಹಿತನೊಡನೆ ಮಾತನಾಡತೊಡಗಿದ) ಹಾ... ನಾಳೆ ಬೆಳಗ್ಗೆ ೬ ಗಂಟೆಗೆ ಮೈಸೂರಿಗೆ ಟ್ರೈನ್ ಇದೆ. ನೀನು ಬೆಳಗ್ಗೆ ಬಟ್ಟೆನೆಲ್ಲಾ ಪ್ಯಾಕ್ ಮಾಡಿಕೊಂಡು ಬಂದುಬಿಡು. ಕಾಯಿಸಬೇಡ ಬೇಗ ಬಂದುಬಿಡು."

ನಳಿನಿ : " ಆಯ್ತು ಬೇಗ ಹೊರಡುತ್ತೀನಿ ಮನೆಲಿ ಕಾಯ್ತಾ ಇರ್ತಾರೆ, ಬ್ಯಾಗ್ ಬೇರೆ ಪ್ಯಾಕ್ ಮಾಡಬೇಕು."

ಪ್ರದೀಪ : " ಸರಿ ಆಯ್ತು. "

ಇಬ್ಬರು ಮನೆ ಕಡೆಗೆ ಹೊರಟರು.
ಇದನ್ನೆ ರಂಗಜ್ಜಿ ಕೇಳಿಸಿಕೊಂಡಿದ್ದು. ರಂಗಜ್ಜಿಗೆ ಕಣ್ಣು ಮಾತ್ರಾ ಅಲ್ಲಾ ಕಿವಿನು ಸರಿಯಾಗಿ ಕೇಳಿಸುತ್ತಿರಲಿಲ್ಲ. ಏನೇ ಆಗಲಿ ಪ್ರತ್ಯಕ್ಷವಾಗಿ ನೋಡಿದ್ದನ್ನ ಪ್ರಮಾಣಿಸಿ ನೋಡಿದರೆ ನಿಜಾಂಶ ಏನು ಅಂತಾ ಗೊತ್ತಾಗುತ್ತೆ. ಈ ಜಗತ್ತೆ ಹಾಗೆ ಅಲ್ವಾ ಏನಾಗಿದೆ ಅನ್ನೋದಕ್ಕಿಂತ, ಏನು ಕೆಟ್ಟದ್ದಾಗಿದೆ ಅನ್ನೋದೆ ಮುಖ್ಯ ಆಗಿರುತ್ತೆ.

ಬನ್ನಿ ಇಲ್ಲಿ ಕಿವಿ ಕೊಡಿ ಇದನ್ನೆಲ್ಲಾ ನಾನು ಹೇಳಿದೆ ಅಂತಾ ಯಾರಿಗೂ ಹೇಳ್ಬೇಡಿ😅😊.