Click here to Download MyLang App

ಮೋಹಿನಿಯ ಸೇಡು - ಬರೆದವರು : ಇಂದಿರಾ ಹೆಗ್ಡೆ | ಸಾಮಾಜಿಕ

(ಈ ಕತೆ ವನಿತಾ ಮಲ್ಲಿಗೆ, ಮಂಜುವಾಣಿ, ಮುಂಗಾರು, ಉತ್ಥಾನ, ಪ್ರಜಾಮತ, ಗೆಳತಿ, ಸುದ್ದಿಸಂಗಾತಿ, ಕಸ್ತೂರಿ, ಕನ್ನಡಪ್ರಭ- ಪತ್ರಿಕೆಗಳಲ್ಲಿ ಪ್ರಕಟವಾಗಿದೆ.)

‘ಅಮ್ಮಾ...’

ಮಲಗಿದ್ದ ವಿಜಯ ನರಳಿ ಮಗ್ಗುಲು ಬದಲಾಯಿಸಿದಾಗ ಆತ ಮಲಗಿದ್ದಾಗ ಹುರಿ ಹಗ್ಗದ ಮಂಚ ಕಟ ಕಟ ಶಬ್ದ ಮಾಡಿತು. ತನ್ನ ಮಂಚದಲ್ಲಿ ನಿದ್ದೆಯಿಲ್ಲದೆ ತೊಳಲಾಡುತ್ತಿದ್ದ ಶ್ರೀಧರ ವಿಜಯನತ್ತ ತಿರುಗಿದ. ಅವನಿಗೆ ವಿಜಯನನ್ನು ಕಂಡು ‘ಅಯ್ಯೊ’... ಅನಿಸಿತು. ‘ಮೈಗೆ ಹುಷಾರಿಲ್ಲದಿರಬೇಕು. ಪಾಪ . ಆರೈಕೆ ಮಾಡುವ ಬಂಧುಗಳಾರೂ ಇಲ್ಲ.’ ಶ್ರೀಧರ ತನ್ನೊಳಗೇ ಅಂದುಕೊಂಡು ಅಲ್ಲಿಂದೆದ್ದು ವಿಜಯನ ಬಳಿ ಬಂದ. ಆಳಕ್ಕಿಳಿದ ಕಣ್ಣುಗಳು! ಈ ತುಕಡಿಗೆ ವರ್ಗವಾಗಿ ಬರುವಾಗ ಆರೋಗ್ಯವಂತನಾಗಿದ್ದ ವಿಜಯನ ಸ್ಥಿತಿ ಇಂದು ಹೀಗಾಗಿತ್ತು!

ದೇಶ ಸೇವೆಯ ಆಶೆ ಹೊತ್ತು ಸೇನಾಪಡೆಗೆ ಸೇರ್ಪಡೆಯಾಗಿದ್ದ ಶ್ರೀಧರನಿಗೆ ಅಸ್ಸಾಂನ ಈ ಗುಡ್ಡಗಾಡಿಗೆ ವರ್ಗವಾದಾಗ ತುಂಬಾ ಬೇಸರವಾಗಿತ್ತು. ಅದರೇನು ಮಾಡಲು ಸಾಧ್ಯ? ಇಲ್ಲಿಗೆ ಬಂದ ಮೇಲೆ ಆತನಿಗೆ ಕನ್ನಡದ ಗೆಳೆಯರು ಯಾರೂ ದೊರಕಿರಲಿಲ್ಲ. ಆದರೆ ಶ್ರೀಧರ ಬಂದು ತಿಂಗಳೊಂದು ಕಳೆಯುವುದರೊಳಗೇ ವಿಜಯನೂ ಅಲ್ಲಿಗೆ ಬಂದಿದ್ದ. ತಾಯ್ನಾಡಿನಿಂದ ದೂರವಾದ ಮೇಲೆ ಒಬ್ಬ ಕನ್ನಡಿಗ ಮತ್ತೊಬ್ಬ ಕನ್ನಡಿಗನನ್ನು ಬಹು ಬೇಗ ಗುರುತಿಸುತ್ತಾನೆ. ಹಾಗೆಯೇ ಇವರಿಬ್ಬರ ಪರಿಚಯವೂ ಸ್ನೇಹಕ್ಕೆ ತಿರುಗಿತು.

ವಿಜಯನಿದ್ದ ತುಕಡಿಯಲ್ಲಿ ಆತನನ್ನು ಅರಿಯದವರು ಯಾರೂ ಇರಲಿಲ್ಲ. ಇದಕ್ಕೆ ಕಾರಣ ಆತನ ಸುಂದರ ವ್ಯಕ್ತಿತ್ವ. ಜೊತೆಗೆ ಮೃದು ಭಾಷಿ. ಸ್ಮಿತವದನ. ಯಾರಿಗಾದರೂ ಸರಿಯೇ ಆತನ ಬಳಿ ಮಾತನಾಡುತ್ತಿದ್ದರೆ ಆತನ ಮಾತುಗಳನ್ನು ಆಲಿಸುತ್ತಿದ್ದರೆ ಇನ್ನೂ ಕೇಳೋಣ ಎಂದೆನಿಸುತ್ತಿತ್ತು.

ಕ್ವಾರ್ಟರ್ ಮಾಸ್ಟರ್ ಆಗಿದ್ದ ಶ್ರೀಧರ ತನ್ನ ಸ್ಟೋರಿನಿಂದ ಹಾಲಿನ ಡಬ್ಬಗಳನ್ನೂ ಮೊಟ್ಟೆಗಳನ್ನೂ ತಂದು ವಿಜಯನಿಗೂ ಕೊಟ್ಟು ತಾನೂ ತಿನ್ನುತ್ತಿದ್ದ. ಶ್ರೀಧರನನ್ನು ಕಂಡಾಗ ಆತನ ಗೆಳೆಯರು “ನೀನು ಕ್ವಾರ್ಟರ್ ಮಾಸ್ಟರ್ ಎಂದು ನಿನ್ನನ್ನು ನೋಡುವಾಗಲೇ ಗೊತ್ತಾಗುತ್ತದೆ.” ಎಂದು ಹಾಸ್ಯ ಮಾಡುತ್ತಿದ್ದರು. ಆದರೆ ವಿಜಯ ಮಾತ್ರ ದಿನದಿಂದ ದಿನಕ್ಕೆ ಕ್ಷೀಣಿಸುತ್ತಾ ಬರುತ್ತಿದ್ದ.

ರಾತ್ರಿ ಮಲಗಲು ಇಬ್ಬರೂ ಒಂದೇ ಕೋಣೆಯನ್ನು ಆರಿಸಿದ್ದರು. ಗೋಡೆಗಳ ಪಕ್ಕದಲ್ಲಿ ಎರಡು ಮಂಚಗಳನ್ನು ಜೋಡಿಸಿದ್ದರು.

ಶ್ರೀಧರ ಅಲ್ಲೇ ನಿಂತಿರುವಾಗಲೇ ವಿಜಯ ಮತ್ತೊಮ್ಮೆ ನರಳಿದ. “ಅಯ್ಯಮ್ಮಾ...”

“ವಿಜಯಾ...” ಶ್ರೀಧರ ಮೃದುವಾಗಿ ಕರೆದ. ವಿಜಯ ಕಣ್ಣು ತೆರೆದು ನೋಡಿದ.

“ಏನಾಗುತ್ತಿದೆ ನಿನಗೆ?” ಆತನ ಮಂಚದಲ್ಲಿಯೇ ಜಾಗ ಮಾಡಿ ಕುಳಿತ ಶ್ರೀಧರ ಕೇಳಿದ.

“ಯಾಕೋ ತುಂಬಾ ನಿತ್ರಾಣವಾಗಿದೆ. ಕೈ ಕಾಲುಗಳಲ್ಲಿ ತುಂಬಾ ನಿಶ್ಯಕ್ತಿ” ವಿಜಯ ಸಣ್ಣಗೆ ನುಡಿದ.

“ಡಾಕ್ಟರಿಗಾದರೂ ತೋರಿಸಿ ಬರೋಣ ನಡಿ”

“ಬೇಡ ಬಿಡು. ಇಲ್ಲಿಯ ಹವ ಒಗ್ಗದೆ ಹೀಗಾಗಿರಬಹುದು” ಎಂದ ವಿಜಯ. ಶ್ರೀಧರನಿಗೆ ಮಾತ್ರ ಹವೆಯಿಂದ ಇಷ್ಟೊಂದು ಆರೋಗ್ಯ ಹಾಳಾಗಬಹುದೆಂದು ನಂಬಲಾಗಲಿಲ್ಲ. ಅವನು ಹಾಗೇ ಹೋಗಿ ತನ್ನ ಮಂಚದಲ್ಲಿ ಮಲಗಿದ.

ಎಷ್ಟು ಹೊತ್ತಾದರೂ ಶ್ರೀಧರನ ಕಣ್ಣಿನ ಬಳಿ ನಿದ್ದೆಯೇ ಸುಳಿಯಲಿಲ್ಲ. ಪಿ.ಟಿ.ಪರೇಡ್ ಎಂದರೆ ಒಗ್ಗದ ಶ್ರೀಧರನಿಗೆ ನಾಳೆಯ ಪೆರೇಡ್‍ಗೆ ಎಲ್ಲರೂ ಅಗತ್ಯ ಹಾಜರಾಗಬೇಕೆಂದು ರಾತ್ರಿಯ ‘ರೋಲ್‍ಕಾಲ್’ ನಲ್ಲಿ ಹೊರಡಿಸಿದ ಆಜ್ಞೆಯಿಂದಾಗಿ ಅಂದಿನ ನಿದ್ದೆ ಹಾರಿ ಹೋಯಿತು. ಕಛೇರಿ ಕೆಲಸವನ್ನು ಆಸಕ್ತಿಯಿಂದ ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಿದ್ದ ಈತನ ಮೇಲೆ ಕರ್ನಲ್‍ಗೆ ತುಂಬಾ ಅಭಿಮಾನ. ಹಾಗೆಂದು ಪೆರೇಡ್‍ಗೆ ಚಕ್ಕರ್ ಕೊಡಲು ಆಗುವುದಿಲ್ಲವಲ್ಲ. ಏನಾದರೂ ಒಂದು ಕಾರಣ ಕೊಟ್ಟರೆ ತಪ್ಪಿಸಬಹುದು. ಅದಕ್ಕಾಗಿ ಕಾರಣ ಹುಡುಕುತ್ತಲೇ ಹೊರಳಾಡಿ ಅರ್ಧ ರಾತ್ರಿ ಕಳೆದ.

“ಟಕ್!” ಬಾಗಿಲಿನ ಬೋಲ್ಟ್ ತೆಗೆದ ಸದ್ದು ಕೇಳಿದಾಗ ಶ್ರೀಧರ ಬಾಗಿಲಿನತ್ತ ಹೊರಳಿದ. ಜೊತೆಗೆ ಘಂಟೆಯೂ ಹನ್ನೆರಡು ಬಾರಿಸಿದ ಕುರುಹಾಗಿ ಕ್ವಾರ್ಟರ್ ಗಾರ್ಡ್ನಿಂದ ಘಂಟೆಯ ಸದ್ದು ಕೇಳಿಸಿತು. ಶ್ರೀಧರನಿಗೆ ಆಶ್ಚರ್ಯವಾಗಿ ಕಣ್ಣು ಹೊಸಕಿ ಎದ್ದು ಕುಳಿತ. ಈತನ ಬಿಳಿಯ ಸೊಳ್ಳೆ ಪರದೆಯೊಳಗಿನಿಂದ ವಿಜಯ ಹೊರ ನಡೆದುದು ಚೆನ್ನಾಗಿ ಕಾಣಿಸಿತು. ‘ಬಚ್ಚಲ ಮನೆ ಒಳಗಡೆ ಇರುವಾಗ ಈತನೆಲ್ಲಿ ಹೋಗುತ್ತಿದ್ದಾನೆ? ಎನ್ನುತ್ತಾ ತನ್ನ ಹೊದಿಕೆ ಸರಿಸಿ ಚಪ್ಪಲಿ ಮೆಟ್ಟಿ, ಶ್ರೀಧರ ಹೊರಗೆ ಬಂದ. ಅಷ್ಟರಲ್ಲಿ ಕಾಡಿನ ದಾರಿಯಾಗಿ ವಿಜಯ ಸರಸರಾಂತ ಸರಿದು ಹೋದ! ಶ್ರೀಧರ ಅಪ್ರತಿಭನಾದ. ಕೊನೆಗೆ ಸಾವರಿಸಿ ದಡ-ದಡ ಎಂದು ಭಗತ್‍ಸಿಂಗ್‍ನ ಕೋಣೆಯ ಬಾಗಿಲು ಬಡಿದ.

“ಏನಪ್ಪಾ...ಏನು ವಿಷಯ?” ನಿದ್ದೆ ಆವರಿಸಿದ ಕಣ್ಣುಗಳ ರೆಪ್ಪೆಗಳನ್ನು ಬಿಡಿಸಲು ಪ್ರಯತ್ನಿಸುತ್ತಾ ಭಗತ್‍ಸಿಂಗ್ ನುಡಿದ. ವಿಜಯ ನೆಟ್ಟಗೆ ನಡೆದು ಮರೆಯಾದ.

ಭಗತ್‍ಸಿಂಗ್ ಹೊರಬಂದಾಗ ಶ್ರೀಧರ ತಾನು ಕಂಡದ್ದನ್ನು ಆತನಲ್ಲಿ ಹೇಳಿದ. ಈಗ ಆತನ ನಿದ್ದೆಯೂ ಹೋಯಿತು! ಸ್ವಲ್ಪ ಹೊತ್ತು ಮೌನವಾದ ಆತ ಆಮೇಲೆ ಕೇಳಿದ-

“ನೀನು ವಿಜಯ ಹೋಗುವಾಗ ಮಾತನಾಡಿಸಿದ್ದೀಯಾ?”

“ಇಲ್ಲ” ಶ್ರೀಧರ್ ನುಡಿದ.

“ಒಳ್ಳೆಯದು, ಇನ್ನು ವಾಪಸ್ಸು ಬಂದ ಮೇಲೂ ಮಾತನಾಡಿಸಬೇಡ. ಈಗ ಹೋಗಿ ಮಲಗು ನಾಳೆ ಬೆಳಿಗ್ಗೆ ನೋಡುವ” ಎಂದು ತನ್ನ ಸಡಿಲಗೊಂಡ ಪಾಯಿಜಾಮದಿಂದ ಲಾಡಿಯನ್ನು ಬಿಗಿಗೊಳಿಸುತ್ತಾ ಭಗತ್‍ಸಿಂಗ್ ನುಡಿದಾಗ ಶ್ರೀಧರ್ ಮರು ಮಾತನಾಡದೆ ಬಂದು ಮಲಗಿದ.

ವಿಜಯ್ ಎಲ್ಲಿ ಹೋಗಿರಬಹುದು ಎಂಬ ಯೋಚನೆ ಶ್ರೀಧರನಿಗೆ ತಲೆ ತಿನ್ನತೊಡಗಿತು. ನಿದ್ದೆಯಲ್ಲಿ ಕೆಲವರು ನಡೆದಾಡುತ್ತಾರಂತೆ. ಆದರೆ ಈ ಕಾಡು ದಾರಿಯಲ್ಲಿ ನಡೆದಾಡುವಾಗ ಎಂಥವರ ನಿದ್ದೆಯಾದರೂ ಹಾರಿ ಹೋಗಬೇಕು. ಶ್ರೀಧರ ತನ್ನೊಳಗೆ ಯೋಚಿಸುತ್ತಿದ್ದ. ಅಷ್ಟರಲ್ಲಿ ಕ್ವಾರ್ಟರ್‍ಗಾರ್ಡ್ನಿಂದ ಒಂದು ಘಂಟೆಯಾದುದರ ಸೂಚನೆಯೂ ಬಂತು. ಸ್ವಲ್ಪ ಹೊತ್ತಲ್ಲೇ ಒಳ ಬಂದ ವಿಜಯ ಹಾಸಿಗೆಯಲ್ಲಿ ಉರುಳಿದಾಗ ಅವನ ಬಳಿ ಮಾತನಾಡುವ ಸಾಹಸ ಮಾಡಲಿಲ್ಲ ಶ್ರೀಧರ.

ಮರುದಿನ ಭಗತ್ ಹಾಗೂ ಶ್ರೀಧರ್ ಇಬ್ಬರೂ ವಿಜಯನ ಬಗ್ಗೆ ಚರ್ಚಿಸಿದರು. ಆ ದಿನ ಮೂರ್ನಾಲ್ಕು ಮಂದಿ ಧೈರ್ಯವಂತರು ಸೇರಿ ವಿಜಯನನ್ನು ಹಿಂಬಾಲಿಸುವುದೆಂದು ತೀರ್ಮಾನಿಸಿದರು.

ರಾತ್ರಿ ಹನ್ನೆರಡು ಘಂಟೆ ಬಾರಿಸಿದೊಡನೆ ವಿಜಯ ಎದ್ದು ಹೊರಟ. ಶ್ರೀಧರ್, ಭಗತ್ ಹಾಗೂ ಉಳಿದಿಬ್ಬರು ವಿಜಯನನ್ನು ಸುಮಾರು ದೂರದಿಂದ ಹಿಂಬಾಲಿಸಿ ನಡೆದರು. ವಿಜಯ ನಡೆದ ದಾರಿ ಇವರಿಗೆ ಎಡವಟ್ಟಾಗಿ ತೋರಿತು. ಮುಳ್ಳುಗಿಡಗಳು ಇವರ ಕಾಲಿಗೆ ಗೀರಿ ಕಾಲಿನಿಂದ ರಕ್ತ ಬರತೊಡಗಿತು. ಅಲ್ಲಿಯ ಕಾಡು ಪ್ರಾಣಿಗಳ ಭಯಕ್ಕಿಂತ ಹೆಚ್ಚಿನ ಭಯ ವಿಜಯನ ನಡವಳಿಕೆಯಿಂದ ಇವರಿಗಾಯಿತು!. ಕಾರ್ಗತ್ತಲೆಯ ಕಾನನದ ದಾರಿಯಲ್ಲಿ ಜೀರುಂಡೆಗಳ ಶಬ್ದ, ಹಾವು ಹಲ್ಲಿಗಳ ಹರಿದಾಟ, ಜೊತೆಗೆ ದೂರದಿಂದ ಕೇಳಿ ಬರುವ ನದಿಗಳ ಕೂಗು ರಾತ್ರಿಯ ಮೌನವನ್ನು ಭೇದಿಸುತ್ತಿದ್ದರೆ ಎಂಥವರಿಗೂ ನಡುಕ ಬರುವಂತಿತ್ತು. ಹೀಗಿರುವಾಗ ವಿಜಯನಂತಹ ಪುಕ್ಕಲು ವ್ಯಕ್ತಿ. ಈ ನಿರ್ಜನ ದಾರಿಯಲ್ಲಿ ಒಂಟಿಯಾಗಿ ನಡೆದುದನ್ನು ನೋಡಿದವರೇ ನಂಬಬೇಕು!

ಕೆಲವು ದಿನಗಳ ಹಿಂದೆಯಷ್ಟೇ ತುಕಡಿಯೊಂದರ ಆಹಾರ-ದಾಸ್ತಾನು ಮಳಿಗೆಗೆ ಆನೆಗಳ ಹಿಂಡೊಂದು ನುಗ್ಗಿ ತುಂಬಾ ಹಾವಳಿ ನಡೆಸಿತ್ತು. ಆ ಆನೆ ಗುಂಪನ್ನು ಲಾರಿಗಳ ಹೆಡ್‍ಲೈಟ್ ಬೆಳಗಿ ಚದುರಿಸಿದಾಗ ಈ ಯೋಧರುಗಳ ಜೀವ ಅರ್ಧವಾಗಿತ್ತು. ಅಲ್ಲದೆ ಒಂದು ಮುಂಜಾನೆ ಹೆಣ್ಣು ಹುಲಿಯೊಂದು ರಣಕಾಳಿಯಂತೆ ಇಬ್ಬರು ಯೋಧರನ್ನು ತನ್ನ ಪಂಜದಿಂದ ಸೀಳಿ, ಮೂರನೆಯವ ಆತ್ಮ ರಕ್ಷಣೆಗೆ ಮರ ಹತ್ತಿದಾಗ ಈ ಹುಲಿ ತನ್ನ ಪ್ರಾಣದ ಪರಿವೆಯಿಲ್ಲದೆ ಮರದ ಮೇಲೆ ಕುಳಿತ ವ್ಯಕ್ತಿಯ ರಕ್ತ ಬಸಿಯಲು ಮರದ ಬುಡದಲ್ಲೇ ಶತಪಥ ತಿರುಗಿ ಕೊನೆಯ ವೀರನೊಬ್ಬನ ಗುಂಡಿನೇಟಿಗೆ ಬಲಿಯಾದಾಗ ಹುಲಿಯ ವೀರಾವೇಶಕ್ಕೆ ವೀರರೆಲ್ಲರೂ ತಲೆದೂಗಿದ್ದರು. ಅಂದಿನಿಂದ ವಿಜಯ ಸಂಜೆಯಾಗುತ್ತಲೇ ತನ್ನ ಕೊಠಡಿ ಸೇರುತ್ತಿದ್ದ. ಅಂತಹ ವ್ಯಕ್ತಿ ಈ ಕಾಡುದಾರಿಯಲ್ಲಿ ಅದೂ ನಡು ರಾತ್ರಿಯಲ್ಲಿ ಒಂಟಿಯಾಗಿ ನಡೆಯಬೇಕಾದರೆ...? ವಿಜಯನನ್ನು ಹಿಂಬಾಲಿಸಿದ ನಾಲ್ವರಿಗೂ ಇದು ವಿಚಿತ್ರವಾಗಿ ತೋರಿತು.

ಒಂದು ಮೈಲಿಯಷ್ಟು ಹಿಂದೆ ತಾವಿರುವ ಕಾರ್ಯಾಗಾರ ಉಳಿಯಿತು ಎಂದು ಇವರಿಗನಿಸಿದಾಗ ದೂರದಲ್ಲಿ ವಿಜಯ ನಿಂತಂತೆ ತೋರಿತು. ಭಗತ್ ಸಿಂಗ್‍ನ ಸೂಚನೆಯಂತೆ ಜಾಗ್ರತೆಯಾಗಿ ಅಲ್ಲಿಂದ ನಾಲ್ಕು ಹೆಜ್ಜೆ ಮಾತ್ರ ಮುನ್ನಡೆದು ನಾಲ್ವರೂ ಪೊದೆಗಳ ಮರೆಯಲ್ಲಿ ಅಡಗಿ ಕುಳಿತರು. ಭಗತ್ ಹಾಗೂ ಶ್ರೀಧರ ಸ್ವಲ್ಪ ಮಾತ್ರ ತಲೆಯೆತ್ತಿ ವಿಜಯನತ್ತ ನೋಡುತ್ತಿದ್ದರು. ಮರದಡಿ ನಿಂತ ವಿಜಯ ತನ್ನ ಬಟ್ಟೆ ಧರಿಸಿ ತಾನು ಹೋದ ದಾರಿಯಲ್ಲಿಯೇ ತಿರುಗಿ ಬೇತಾಳನಂತೆ ನಡೆದು ಬಂದಾಗ ಆ ಕತ್ತಲಲ್ಲೂ ಶ್ರೀಧರ ವಿಜಯನ ಮುಖ ನೋಡಲು ಪ್ರಯತ್ನಿಸಿದ. ಇವರು ಕುಳಿತ ಸ್ವಲ್ಪ ದೂರದಿಂದಲೇ ಆತ ನಡೆದು ಹೋದಾಗ ಎಲ್ಲರೂ ಉಸಿರು ಬಿಗಿ ಹಿಡಿದು ಕುಳಿತರು.

ವಿಜಯ ಇತ್ತ ಬಂದ ಮೇಲೆ ನಾಲ್ವರು ವಿಜಯ ಮಲಗಿದ್ದ ಮರದಡಿ ಬಂದರು. ಆತ ಮಲಗಿದ್ದ ಜಾಗಕ್ಕೆ ಟಾರ್ಚ್ ಬೆಳಗಿದಾಗ ಅಲ್ಲಿ ವಿಜಯ ಮಲಗಿದ್ದುದರ ಗುರುತು ಕಲೆಗಳನ್ನು ಕಂಡು ದಿಗ್ಭ್ರಮೆಗೊಂಡರು. ಯಾರೂ ತುಟಿ ಬಿಚ್ಚಲಿಲ್ಲ.

“ನಡೆಯಿರಿ ಮನೆಗೆ” ಭಗತ್ ನುಡಿದಾಗ ಎಲ್ಲರೂ ಅನುಸರಿಸಿದರು. ಆದರೆ ಯಾರೂ ಮಾತನಾಡಲಿಲ್ಲ. ಶ್ರೀಧರ ತನ್ನ ಕೋಣೆಗೆ ಬಂದಾಗ ವಿಜಯ ಮಗುವಿನಂತೆ ಮಲಗಿ ನಿದ್ರಿಸುತ್ತಿದ್ದ.

ಮರುದಿನ ಶ್ರೀಧರ್ ಹಾಗೂ ಭಗತ್ ಇಬ್ಬರೂ ಸೇರಿ , ರಾತ್ರಿ ನೋಡಿದ ಜಾಗವನ್ನು ನೋಡಲು ಹೋದರು.

ಅದೊಂದು ಹಳೆಯ ರಸ್ತೆ. ಈಗ ಜನ ಸಂಚಾರವಿಲ್ಲದೆ ಮಾರ್ಗ ಮಧ್ಯದಲ್ಲಿ ಗಿಡಗಂಟಿಗಳು ಬೆಳೆದಿದ್ದವು. ಮಾರ್ಗದ ಇಕ್ಕೆಲಗಳಲ್ಲಿ ಕಾಡು ದಟ್ಟವಾಗಿರದಿದ್ದರೂ ದೂರದಲ್ಲಿಯ ಕಾಡಿನ ಗಗನಚುಂಬಿ ಮರಗಳು ಕಾಡಿಗೆ ಶೋಭೆಯನ್ನಿತ್ತಿದ್ದುವು. ಈ ದೃಶ್ಯವನ್ನು ನೋಡಿ ಸಂತಸ ಪಡುವ ಮನಸ್ಸು ಇವರಿಗಿರಲಿಲ್ಲ.

ಮರಳಿ ಬಂದ ಇವರು ರಾತ್ರಿ ಹನ್ನೊಂದು ಘಂಟೆಯವರೆಗೂ ಮಾತನಾಡುತ್ತಾ ಕಾಲ ಕಳೆದರು. ಆಮೇಲೆ ಯೂನಿಫಾರಂ ಧರಿಸಿ ಬೂಟಿನೊಂದಿಗೆ ಇನ್ನಿತರ ನಾಲ್ವರು ಯೋಧರನ್ನೊಡಗೂಡಿ ಕೈಯ್ಯಲ್ಲಿ ಲಾಠಿ ಹಿಡಿದು ಹೊರಟರು. ರೈಫಲ್ ಇದ್ದಿದ್ದರೆ ಇವರಿಗೆ ಇನ್ನೂ ಧೈರ್ಯ ಬರುತ್ತಿತ್ತು ಎಂದೆನಿಸಿತು. ಆದರೆ ಅದಕ್ಕೆ ಕರ್ನಲ್ ಸಾಬ್‍ನ ಪರ್ಮಿಷನ್ ಬೇಕು. ಯಾವ ಕಾರಣ ತೋರಿಸಿ ಪರ್ಮಿಷನ್ ಕೇಳುವುದು? ಆದ್ದರಿಂದ ದೊಣ್ಣೆಯನ್ನೇ ಹಿಡಿದು ಎಲ್ಲರೂ ಹೊರಟರು. ಎಲ್ಲರೂ ಸುರಕ್ಷಿತವೆಂದು ತೋರಿದ ಜಾಗದಲ್ಲಿ, ವಿಜಯ ಹಿಂದಿನ ದಿನ ಮಲಗಿದ್ದ ಮರದಡಿಗೆ ಸ್ವಲ್ಪ ದೂರದಲ್ಲಿ ಮರೆಯಾಗಿ ಕುಳಿತರು. ಅವರ ಕೈಯ್ಯಲ್ಲಿದ್ದ ವಾಚು ಹನ್ನೆರಡು ತೋರಿಸಿದಾಗ ಎಲ್ಲರೂ ಸ್ತಬ್ದರಾದರು. ಮತ್ತರ್ಧ ಗಂಟೆಯೊಳಗೆ ದೂರದಲ್ಲಿ ಬರುತ್ತಿದ್ದ ವಿಜಯನ ಆಕೃತಿ ಗೋಚರವಾಯಿತು. ಈಗ ಉಸಿರು ಬಿಗಿ ಹಿಡಿದು ಇವರು ಕಾಡಿನ ನೀರವತೆಯಲ್ಲಿ ಬೆರೆತು ಹೋದರು. ರಾತ್ರಿಯ ಕತ್ತಲೆಗೆ ಹೊಂದಿಕೊಂಡ ಶ್ರೀಧರನ ಕಣ್ಣುಗಳಿಗೆ ವಿಜಯನ ಪ್ರೇತ ಕಳೆ ಹೊತ್ತ ಮುಖದಲ್ಲೂ ಅಟ್ಟಹಾಸದ ನಗುವನ್ನು ಕಂಡಾಗ ಅವನ ಪ್ರಾಣ ಬಾಯಿಗೆ ಬಂದಂತಾಯಿತು. 1962 ರ ಚೀನೀ ಯುದ್ಧದ ಸಮಯದಲ್ಲಿ ಯುದ್ಧರಂಗದಲ್ಲೂ ಇಷ್ಟೊಂದು ನಡುಕವುಂಟಾಗಿರಲಿಲ್ಲ. ಈಗ ಜೋರಾಗಿ ಉಸಿರೂ ಬಿಡಲಾಗದ ಪರಿಸ್ಥಿತಿ. ಮಿಲಟರಿ ‘ಬೂಟು’ ಹಾಗೂ ‘ಬೆಲ್ಟ್’ ಇದ್ದಲ್ಲಿ ದೆವ್ವಗಳೂ ಬರಲಾರವೆಂಬುದು ಮಿಲಿಟರಿ ಜನರು ಹಿಂದಿನಿಂದ ನಂಬಿಕೊಂಡು ಬಂದಂತಹ ಮಾತು. ದೇಶ ಸೇವೆಯಲ್ಲಿ ಭಾಗವಹಿಸುವ ಈ ‘ಬೂಟು-ಬೆಲ್ಟ್’ ಗಳಿಗೆ ದೆವ್ವಗಳು ದೂರದಿಂದಲೇ ನಮಸ್ಕರಿಸಿ ಗೌರವ ಸೂಚಿಸುತ್ತಿದ್ದಿರಬೇಕು! ಅದು ಏನೇ ಇರಲಿ, ಸದ್ಯದ ಪರಿಸ್ಥಿತಿಯಲ್ಲಿ ಇವರೆಲ್ಲರ ಚದುರಿ ಹೋಗುವ ಧೈರ್ಯವನ್ನು ಒಂದು ಗೂಡಿಸುವ ಶಕ್ತಿಯಾಗಿತ್ತು ಈ ಮಾತು.

ವಿಜಯ ನೆಲದ ಮೇಲೆ ಮಲಗಿದಾಗ ಭಗತ್ ಕೂಡಲೇ ಪೊದೆಯಿಂದ ನೆಗೆದು ಅತ್ತ ಧಾವಿಸಲು ಉಳಿದವರು ಹಿಂಬಾಲಿಸಿದರು. ಕ್ಷಣದಲ್ಲಿ ಎಲ್ಲರೂ ವಿಜಯನ ಬೆನ್ನ ಮೇಲೆ ಕುಳಿತು ಕೈಯ್ಯಲ್ಲಿದ್ದ ಲಾಠಿಯನ್ನು ಊರುಗೋಲಾಗಿ ಹಿಡಿದರು. ಶ್ರೀಧರನಿಗೆ ವಿಜಯನ ಉಸಿರೇ ನಿಂತು ಹೋದರೆ ಎಂದು ಭಯ ! ಆದರೆ ಅನುಭವಿಯಾದ ಭಗತ್‍ನ ಎಲ್ಲಾ ಕೆಲಸವೂ ವಿಜಯನ ಒಳಿತಿಗೇ ಎಂಬ ಅಚಲ ವಿಶ್ವಾಸ.

ಅಷ್ಟರಲ್ಲಿ ವಿಜಯನ ದೇಹದ ಅಡಿಯಿಂದ ಹೆಣ್ಣಿನ ಚೀತ್ಕಾರ ಕೇಳಿಸಿದಂತಾಗಲು ಎಲ್ಲರೂ ಒಬ್ಬರನ್ನೊಬ್ಬರು ಹಿಡಿದುಕೊಂಡು ಮುಖ ಮುಖ ನೋಡಲಾರಂಭಿಸಿದರು. ಆಗ ಭಗತ್ ಸಿಂಗ್ ಇವರಲ್ಲಿ ಧೈರ್ಯ ತುಂಬಿದ. ಹೆಣ್ಣಿನ ಆರ್ತನಾದ ನಿಂತಂತಾದಾಗ ಭಗತ್ ಸಂತಸಗೊಂಡು ಎದ್ದ. ಇವನೊಟ್ಟಿಗೆ ಇತರರೂ ಎದ್ದು ವಿಜಯನನ್ನು ಕೈ ಹಿಡಿದು ಎಬ್ಬಿಸಿದರು.

ವಿಜಯನ ಮಂಪರು ಸರಿದಾಗ ಆತ ಭಯಾಶ್ಚರ್ಯ ನೇತ್ರಗಳಿಂದ ತನ್ನ ಸುತ್ತಲಿದ್ದವರನ್ನು ನೋಡತೊಡಗಿದ. ಆಗಲೇ ಅವನಿಗೆ ಅರಿವಾದುದು ತಾನು ನಗ್ನನಾಗಿರುವನೆಂದು! ಅವನ ಸ್ಥಿತಿಯನ್ನು ಅರ್ಥ ಮಾಡಿಕೊಂಡ ಭಗತ್ ಆತ್ಮೀಯತೆಯಿಂದ ನುಡಿದ.

“ಮಗೂ, ಹೆದರಬೇಡ , ನಾಚಿಕೊಳ್ಳುವ ಅಗತ್ಯವೂ ಇಲ್ಲ. ಯಾವುದೋ ಕೆಟ್ಟ ಘಳಿಗೆ ನಿನಗೆ ಈ ಅವಸ್ಥೆಯನ್ನು ತಂದೊದಗಿಸಿತು. ನಿನ್ನ ಗೆಳೆಯ ಶ್ರೀಧರ ನಿನ್ನ ಮೇಲೆ ನಿಗಾ ಇಟ್ಟುದರಿಂದ ನೀನು ಉಳಿದುಕೊಂಡೆ”. ವಿಜಯ ಶ್ರೀಧರನತ್ತ ಕೃತಜ್ಞತಾಭಾವದಿಂದ ನೋಡಿದ. ಶ್ರೀಧರ ಮೌನವಾಗಿ ವಿಜಯನ ಹೆಗಲಮೇಲೆ ಕೈ ಹಾಕಿ ಮನೆಯತ್ತ ತಿರುಗಿದ.

ವಿಜಯ ಇನ್ನು ಆ ಯೂನಿಟ್‍ನಲ್ಲಿರುವುದು ಬೇಡವೆಂದು ಅವನನ್ನು ಕೂಡಲೇ ರಜದ ಮೇಲೆ ಊರಿಗೆ ಕಳಿಸಿದರು. ಆತ ತಿರುಗಿ ಬರುವ ಮೊದಲು ಅವನ ವರ್ಗ ಮಾಡಿಸುವ ಭರವಸೆಯನ್ನೂ ಇತ್ತರು.

ವಿಜಯನನ್ನು ರೈಲು ಹತ್ತಿಸಿ ಬಂದ ಶ್ರೀಧರ ಭಗತ್‍ನನ್ನು ಉದ್ದೇಶಿಸಿ ಕೇಳಿದ-

“ವಿಜಯನ ಬಗ್ಗೆ ನಿನ್ನ ಅಭಿಪ್ರಾಯ ಹೇಳಲೇ ಇಲ್ಲ?”

“ಆತನನ್ನು ಮೋಹಿನಿ ಹಿಡಿದುಕೊಂಡಿರಬೇಕು” ಎಂದು ಭಗತ್ ಹೇಳಿದಾಗ ಶ್ರೀಧರ ಬೆಚ್ಚಿದ. “ಏನೆಂದೆ?ಇದನ್ನು ಈ ಶತಮಾನದಲ್ಲೂ ನಂಬುವವರು ಯಾರು? ಒಂದು ವೇಳೆ ನಂಬಿದರೂ ಅದು ವಿಜಯನನ್ನೇ ಯಾಕೆ ಮೋಹಿಸಬೇಕು?”

“ನಮ್ಮ ತುಕಡಿಯಲ್ಲಿ ವಿಜಯನನ್ನು ಮೀರಿಸುವ ಸೌಂದರ್ಯವಂತರು ಯಾರಾದರೂ ಇದ್ದಾರೆಯೇ? ಇಲ್ಲಿ ದೆವ್ವಗಳಷ್ಟೇ ಸಂಖ್ಯೆಯಲ್ಲಿ ಮಾಂತ್ರಿಕರೂ ಇದ್ದಾರೆ. ಅವರ ಬಳಿ ಹೋಗಿ ವಿವರಿಸುವಾ? ಭಗತ್ ನುಡಿದ.

ಮರುದಿನ ಒಬ್ಬ ಸ್ಥಳೀಯ ಜವಾನನೊಡಗೂಡಿ ಮೂವರೂ ಮಾಂತ್ರಿಕನ ಬಳಿ ಹೋದರು. ಅಲ್ಲಿ ಆತ ಹೇಳಿದ ಮಾತು ಇವರ ಆಸಕ್ತಿಯನ್ನು ಇನ್ನೂ ಕೆರಳಿಸಿತು. ಮೂವರೂ ಒಟ್ಟಾಗಿ ಸಮೀಪದ ಹಳ್ಳಿಗೆ ಹೋಗಿ ಅಲ್ಲಿಯ ಹಿರಿಯರನ್ನು ಭೇಟಿ ಮಾಡಿ ಮಾಂತ್ರಿಕ ಹೇಳಿದ ಮಾತಿನ ಬಗ್ಗೆ ಕೆದಕಿ ಕೇಳಿದರು.

ಐದು ವರುಷಗಳ ಹಿಂದೆ ನಡೆದ ಘಟನೆಯಂತೆ ಇದು. ಹದಿ ಹರೆಯದ ಸ್ಥಳೀಯ ಸುಂದರಿಯೊಬ್ಬಳು ತನ್ನ ಯೌವನದ ಕಲ್ಪನಾ ಲೋಕದಲ್ಲಿ ವಿವರಿಸುತ್ತಾ ನಿರ್ಜನ ರಸ್ತೆಯಲ್ಲಿ ಒಂಟಿಯಾಗಿ ನಡೆಯುತ್ತಿದ್ದಳು. ಒಮ್ಮೆಲೆ ಇವಳಿಗೆ ತಾಗಿದಂತೆ ಜೀಪೊಂದು ನಿಂತಾಗ ಬೆಚ್ಚಿದ ತರುಣಿ ಸರ ಸರನೆ ನಡೆದಳು. ಜೀಪಿನಲ್ಲಿದ್ದ ಸಮವಸ್ತ್ರ ಧಾರಿ ಜವಾನರು. “ಏ ಶರ್‍ಮೀಲಿ...” ಎಂದು ರಾಗ ಎಳೆದಾಗ ಅವಳ ಗಂಟಲೊಣಗಿತು. ಬಡಿದುಕೊಳ್ಳುತ್ತಿದ್ದ ಎದೆಯನ್ನು ಕೈಯಲ್ಲಿದ್ದ ಪುಸ್ತಕದಿಂದ ಒತ್ತಿ ಹಿಡಿದು, ಇದ್ದೆಲ್ಲ ಶಕ್ತಿಯನ್ನು , ಒಂದು ಗೂಡಿಸಿ ಪ್ರಯತ್ನಿಸಿ ಸೋತಳು. ನಾಲ್ಕು ಮಂದಿ ಜವಾನರು ಆಗಲೇ ಅವಳ ಸುತ್ತ ನೆರೆದಿದ್ದು ಹಸಿದ ಕಣ್ಣುಗಳಿಂದ ನೋಡುತ್ತಿದ್ದರು. ಕಿಟಾರನೆ ಕಿರುಚಿದ ಆಕೆ ಅವರಿಂದ ಬಿಡಿಸಿಕೊಳ್ಳಲು ಒದ್ದಾಡಿದಳು. ಇವಳ ಮಾನರಕ್ಷಣೆಯ ಕೂಗು ಆ ಕಾನನದ ದಾರಿಯ ನೀರವತೆಯನ್ನು ಭೇದಿಸಿತು.

ತರುಣಿಗೆ ಪ್ರಜ್ಞೆ ಮರಳಿದಾಗ ಮೈ ಮೇಲೆ ತುಂಡು ಬಟ್ಟೆ ಅಡ್ಡಲಾಗಿ ಬಿದ್ದಿತ್ತು. ನಿಧಾನಕ್ಕೆ ಎದ್ದು ಕುಳಿತ ಆಕೆ ಪಕ್ಕದಲ್ಲೇ ಇದ್ದ ಅವಳ ಸೀರೆಯ ಒಂದು ತುದಿಗೆ ಉರುಳನ್ನು ಬಿಗಿದು ಅದನ್ನು ಕುತ್ತಿಗೆಗೆ ಹಾಕಿ, ಉಳಿದ ಸೀರೆಯ ಭಾಗವನ್ನು ಹೆಗಲ ಮೇಲೆ ಹಾಕಿ ಪ್ರಯಾಸ ಪಟ್ಟು ಮರವೇರಿದಳು. ತನ್ನ ಕುತ್ತಿಗೆಗೆ ಬೀಗಿದ ಸೀರೆಯ ಇನ್ನೊಂದು ತುದಿಯನ್ನು ಮರಕ್ಕೆ ಕಟ್ಟಿ ಮರದಿಂದ ಕೆಳಗೆ ಜಿಗಿದಳು.

ಅಂದಿನಿಂದ ಆ ಜಾಗದಲ್ಲಿ ಮೋಹಿನಿ ಇರುವಳೆಂಬುದು ಮನೆ ಮಾತಾಯಿತು. ಜನರು ಆ ದಿಕ್ಕಿನಿಂದ ಓಡಾಡುವುದನ್ನು ನಿಲ್ಲಿಸಿದರು. ಮೋಹಿನಿ ಮಾತ್ರ ಅದೇ ಜಾಗದಲ್ಲಿ ಅಂದರೆ ತನ್ನ ಬಾಳು ಸೂರೆಯಾದ ಸ್ಥಳದಲ್ಲೇ ತನ್ನ ಸ್ಥಿತಿಗೆ ಕಾರಣರಾದ ಮಿಲಿಟರಿ ಜನರ ಮೇಲೆ ಸೇಡು ತೀರಿಸುವ ಕಾಯಕಕ್ಕಿಳಿದಳು. ಸುಂದರ ಸದೃಢ ತರುಣರನ್ನು ಬತ್ತಿಸಿ ಬರಡಿಸಿ ಒಣಗಿಸುವುದರಲ್ಲಿ ಆತ್ಮ ತೃಪ್ತಿ ಹೊಂದುತ್ತಿದ್ದಳು.

ಕಥೆ ಕೇಳಿದ ಶ್ರೀಧರನ ಬಾಯಿಂದ ಉದ್ಗಾರವೊಂದು ಹೊರಬಿತ್ತು. “ಯಾರ ತಪ್ಪು? ಶಿಕ್ಷೆ ಯಾರಿಗೆ?ಈ ಪ್ರಶ್ನೆಗೆ ಆ ಮೋಹಿನಿಯೇ ಉತ್ತರಿಸಬೇಕು! ವಿಚಿತ್ರ!”