Click here to Download MyLang App

ಮೈ-ತ್ರಿ - ಬರೆದವರು : ಡಾ.ಶಾಂತಲಾ | ಸಾಮಾಜಿಕ

“ ಥೂ ! ದಿನ-ವಾರ ಇಲ್ಲ! ಯಾವಗಂದ್ರೆ ಆವಾಗ ಕೋಳಿ-ಕುರಿ ಬೇಯಿಸ್ತಾಳೆ. ಗಬ್ಬು ವಾಸನೆ ತಡಿಯಕ್ಕೆ ಆಗಲ್ಲ!” ಮೂಗು ಮುಚ್ಚಿಕೊಂಡು, ಜೋರಾಗಿ ಫ್ಯಾನ್ ಹಾಕಿ, ರೊಟ್ಟು ತೆಗೆದುಕೊಂಡು ಗಾಳಿ ಬೀಸಿಕೊಳ್ಳುತ್ತಾರೆ. ಈ ಫ್ಲಾಟ್ ಗಳ ಹಣೆಬರಹವೇ ಇಷ್ಟು. ಪಕ್ಕ ಪಕ್ಕ ಮನೆಗಳು, ಜೋರಾಗಿ ಹೂಸಿದರೂ ಕೇಳಿಸಿಬಿಡುತ್ತೇನೋ ಎಂಬ ಭಯ.
ರಿಟೈರ್ ಆದ ಮೇಲೆ ತಮ್ಮ ಹಳ್ಳಿಯ ಮನೆಗೆ ಹೋಗಿ ಇದ್ದು ಬಿಡುವುದು ಎಂದು ತ್ರಿವೇಣಿ ಟೀಚರ್ ಎಣಿಸಿದ್ದರು. ಆದರೆ ವಿದೇಶದಲ್ಲಿರುವ ಮಕ್ಕಳು ಮಾತ್ರ, “ ಅಮ್ಮ, ಹಟ ಬೇಡ. ನಮ್ಮ ಹಳ್ಳಿಯಲ್ಲಿ ಜನರೆಲ್ಲ ಖಾಲಿಯಾಗ್ತಾ ಇದ್ದಾರೆ. ನೀನೊಬ್ಬಳೆ ಏನ್ ಮಾಡ್ತೀಯಾ? ವೈದ್ಯಕೀಯ ಸೌಕರ್ಯ ಇಲ್ಲ , ಹೊಲ-ಗದ್ದೆ ಅಂತ ಕೆಲಸಕ್ಕೂ ಜನ ಅಷ್ಟು ಸುಲಭವಾಗಿ ಸಿಗಲ್ಲ. ನಿನಗ್ಯಾಕೆ ಆ ತಲೆ ನೋವು? ನೀನು ಹಳಿಯಲ್ಲಿದ್ದಾರೆ ನಮಗೂ ನೆಮ್ಮದಿ ಇರುವುದಿಲ್ಲ. ಸಿಟಿನಲ್ಲಿ ಒಳ್ಳೆ ಮನೆ ಮಾಡೋಣ. ಆರಾಮವಾಗಿ ಇರು. ಎಲ್ಲ ಸೌಕರ್ಯಗಳೂ ಇರುವಂತಹ, ಯಾವುದಕ್ಕೂ ತೊಂದರೆಯಾಗದಂತಹ ಒಳ್ಳೆಯ ಲೊಕಾಲಿಟಿಯಲ್ಲಿ ಪ್ಲಾಟ್ ಕೊಳ್ಳೋಣ. ಪ್ರತ್ಯೇಕ ಮನೆಗಿಂತ ಪ್ಲಾಟ್ ತೆಗೆದುಕೊಳ್ಳೋದು ಒಳ್ಳೇದು. ಸೇಫ್ಟಿ ಇರತ್ತೆ!”
“ ಮಾಂಸಾ-ಮಡ್ಡಿ ತಿನ್ನೋರೇನಾದ್ರೂ ನಮ್ಮ ಪಕ್ಕದ ಫ್ಲಾಟ್ ತೊಗೊಂಡರೆ ? ಏನ್ ಮಾಡೋದು?”
“ ಅಮ್ಮ! ಯಾವ ಕಾಲದಲ್ಲಿ ಇದ್ದೀಯಾ? ಸಿಟಿನಲ್ಲಿ ಅದೆಲ್ಲ ನೋಡಕ್ಕೆ ಆಗಲ್ಲ. ನಮ್ಮ ಪಾಡಿಗೆ ನಾವು ಇರಬೇಕು. ಅಷ್ಟಕ್ಕೂ ನಮಗೆ ಲೋಕ್ಯಾಲಿಟಿ ಮುಖ್ಯ. ಸೌಕರ್ಯಗಳು ಮುಖ್ಯ. ಅಕ್ಕ-ಪಕ್ಕ ಯಾರಾದ್ರೇನು? “ ಅದ್ಯಾವ ಬಾಯಲ್ಲಿ ಹಾಗಂದಿದ್ದೆನೋ ತಿನ್ನೋರೇ ಪಕ್ಕದ ಫ್ಲಾಟ್ ಕೊಂಡು ಕೊಂಡು ಬಂದಿದ್ದರು.
ಮಾಂಸದ ವಾಸನೆಯ ಮೇಲೆ ಸೇಡು ತೀರಿಸಿಕೊಳ್ಳುವಂತೆ ತ್ರಿವೇಣಿ ತಮ್ಮ ಟಿ. ವಿ ಯ ದ್ವನಿಯನ್ನು ಹತ್ತಕ್ಕೆ ಏರಿಸಿದಾಗ, ತಮಗೇ ಕೇಳಲು ಆಗದಷ್ಟೂ ಜೋರಾದ್ದರಿಂದ ತಾವೇ ಬ್ಯಾಲ್ಕನಿಗೆ ಬಂದರು. ಒಂದು ನಿಮಿಷದ ನಂತರ ಪಕ್ಕದ ಮನೆಯವಳೂ ಬಂದಳು.
“ಆಂಟಿ ಸ್ವಲ್ಪ ನಿಮ್ಮ ಟಿ. ವಿ ವಾಲ್ಯೂಮ್ ಕಡಿಮೆ ಮಾಡಿ. ಇಷ್ಟು ಜೋರಾಗಿ ಹಾಕಿದರೆ ನಮಗೆ ಡಿಸ್ಟರ್ಬ್ ಆಗಲ್ವ ?”
“ಅಲ್ಲ? ನೀವು ಎರಡು ದಿನಕ್ಕೊಮ್ಮೆ ಹೇಗೆ ಗಬ್ಬು ವಾಸನೆಯ ಅಡಿಗೆ ಮಾಡುವುದನ್ನು ನಾನು ತಡೆದುಕೊಂಡಿಲ್ಲವಾ?” ನಂತರ ಜುಟ್ಟು-ಜನಿವಾರ ಹಿಡಿದುಕೊಂಡು ಜಗಳವಾಡುವಷ್ಟು ಅನಾಗರೀಕರಲ್ಲ ಇಬ್ಬರು. ಆದರೆ ಹಾಗೆ ಸುಲಭವಾಗಿ ಬಿಟ್ಟುಕೊಡಲು ಇಬ್ಬರ ಅಹಂಗಳಿಗೂ ಆಗದು. ವಟ-ವಟ ಅಂತ ಒಬ್ಬೊಬರಿಗೆ ಕೇಳುವಂತೆ ಗೋಣಗಿಕೊಳ್ಳುತ್ತಾರೆ ಇಬ್ಬರು.
‘ಶಾಂತಿ ರೇಸಿಡೆನ್ಸಿ ‘ ನಾಲಕ್ಕು ಫ್ಲಾಟ್ ಗಳಿರುವ ಅಂದವಾದ ಅಪಾರ್ಟ್ಮೆಂಟ್. ಮೊದಲ ಮಹಾಡಿಯಲ್ಲಿ ತ್ರಿವೇಣಿ ಟೀಚರ್ ದು ಒಂದು ಫ್ಲಾಟ್ ಮತ್ತು ಇನ್ನೊಂದರ ಒಡತಿ ಮೈಥಿಲಿ ಮಧುಸೂಧನ್. ಎರಡನೆಯ ಫ್ಲೋರ್ ನಲ್ಲಿ ಇದ್ದ ಎರಡು ಫ್ಲಾಟನ್ನು ಹುಡುಗಿಯರ ಪಿ. ಜಿ ಯಂತೆ ನಡೆಸುತ್ತಿದ್ದು ಆ ನಿವಾಸಿಗರು ಇದ್ದರೂ, ಇಲ್ಲದಿದ್ದರೂ ಏನೂ ವ್ಯತ್ಯಾಸವಿರಲಿಲ್ಲ. ಸಮಸ್ಯೆ ಇದ್ದದ್ದು ಮೊದಲ ಮಹಡಿಯ ಎರಡು ಫ್ಲಾಟ್ಗಳದ್ದೆ. ಸಣ್ಣ-ಪುಟ್ಟ ವಿಷಯಗಳನ್ನೂ ದೊಡ್ಡದು ಮಾಡಿ ಒಬ್ಬರನ್ನೊಬ್ಬರು ಹೀಯಾಳಿಸುತ್ತಲೇ ಇದ್ದರು .
“ಏನ್ ಟೀಚರ್ ಆಗಿದ್ದರೋ? ನಿಜವಾಗಲೂ ಮಕ್ಕಳು ವಿದೇಶದಲ್ಲಿ ಇದ್ದಾರೋ ಅಥವಾ ಈ ಯಮ್ಮನ ಜೊತೆಯಲ್ಲಿ ಬದುಕುವುದು ಕಷ್ಟ ಅಂತ ಓಡಿ ಹೋಗಿದ್ದಾರೋ !” ಮೈಥಿಲಿ ಗೋಣಗುಟ್ಟಿದರೆ, ತ್ರಿವೇಣಿ ಟೀಚರ್ರ ವರಸೆಯೇ ಬೇರೆ ಇರುತ್ತಿತ್ತು. “ನಾನು ನೋಡ್ತೀನಲ್ಲ, ಮಕ್ಕಳಿಗೆ ಶಿಸ್ತು ಕಲಿಸಿಯೇ ಇಲ್ಲ. ಸುಮ್ಮನೆ ಅಡುಗೆ ಮಾಡಿ ತುರಿಕಿದರೆ ಆಗುತ್ಯೆ? ಮಕ್ಕಳನ್ನು ಸಭ್ಯರಾಗಿ ಸುಸಂಕೃತರಾಗಿ ಬೆಳೆಸ ಬೇಕು. ಇವಳಿಗೇ ಅದು ಗೊತ್ತಿಲ್ಲ. ಇನ್ನು ಅವರಿಗೇನು ಹೇಳಿಕೊಡುತ್ತಾಳೆ!”
ಫ್ಲಾಟ್ ಗಳಲ್ಲಿ ಅಕ್ಕ ಪಕ್ಕ ದವರು ಎಷ್ಟು ಹೊಂದಿಕೊಂಡು ಹೋಗಬೇಕೋ ಅಷ್ಟೂ ತದ್ವಿರುದ್ಧವಾಗಿದ್ದರು ಈ ಎರಡು ಮನೆಯವರು. ಇಬ್ಬರೂ ಫ್ಲಾಟ್ಗಳನ್ನು ಕೊಂಡುಕೊಂಡು ಬಿಟ್ಟಿದ್ದರಿಂದ ಬಾಡಿಗೆದಾರರ ಹಾಗೆ ಮನೆ ಬದಲಿಸುವಂತೆಯೂ ಇರಲಿಲ್ಲ. ಒಬ್ಬರನ್ನೊಬ್ಬರು ಸಹಿಸಿಕೊಳ್ಳಲೇ ಬೇಕಾದ ಅನಿವಾರ್ಯತೆ ಇತ್ತು.
ಒಂದು ಶನಿವಾರದ ಬೆಳಿಗ್ಗೆ ಶಾಂತಿ ರೇಸಿಡೆನ್ಸಿಯ ಮುಂದೆ ಅಂಬ್ಯುಲೆನ್ಸ್ ಬಂದು ನಿಂತಿತು. ಪಿ. ಪಿ. ಇ ಕಿಟ್ ಹಾಕಿಕೊಂಡ ಇಬ್ಬರು ತ್ರಿವೇಣಿ ಟೇಚರ್ ಫ್ಲಾಟ್ ಒಳಗೆ ಹೋಗಿ ಆಕೆಯನ್ನು ಮೆಲ್ಲಗೆ ಕರೆದುಕೊಂಡು ಹೋದರು . ಮೈಥಿಲಿ ಮತ್ತು ಮಕ್ಕಳು ಬಾಗಿಲನ್ನು ತೆಗೆಯಲಿಲ್ಲ, ಬ್ಯಾಲ್ಕನಿ ಇಂದಲೇ ತ್ರಿವೇಣಿ ಟೀಚರ್ ಅಂಬ್ಯುಲೆನ್ಸ್ ಅನ್ನು ಹತ್ತಿದ್ದನ್ನು ನೋಡಿದರು.
“ಅಮ್ಮ ತ್ರಿವೇಣಿ ಟೀಚರಗೆ ಕೋವಿಡ್ ಆಗಿದ್ಯಾ ಅಮ್ಮ? “ ಮಕ್ಕಳು ಹಾಗೆ ಕೇಳಿದಾಗ ಮೈಥಿಲಿಗೆ ಭಯವಾಯಿತು. ಪಕ್ಕದ ಮನೆಯವರೆಗೂ ಬಂದ ಖಯಿಲೆ ನಮ್ಮ ಮನೆಗೂ ಬಂದು ಬಿಟ್ಟರೆ ಎಂದು ಭಯವಾಯಿತು . ಕೋವಿಡ್ ರೋಗಿಗಳು ಆಸ್ಪತ್ರೆಗೆ ಹೋದರೆ ವಾಪಸ್ ಬರುವ ಗ್ಯಾರಂಟಿ ಇಲ್ಲ ಎಂದು ಎಲ್ಲರೂ ಹೇಳುತ್ತಿದ್ದರು. ದಿನ ಬೆಳಗಾದರೆ ಟಿ ,ವಿಯಲ್ಲಿ ಅದೇ ವಿಷಯ ಹೇಳುತ್ತಿದ್ದರು. ದಿನೇ ದಿನೇ ಹೆಚ್ಚಾಗುತ್ತಿದ್ದ ಕೇಸ್ ಗಳು. ಸಾಯುತ್ತಿದ್ದವರ ಸಂಖ್ಯೆಯೂ ಹೆಚ್ಚುತ್ತಿತ್ತು. ಮನೆಯವರಿಗೂ ರೋಗಿಯನ್ನು ನೋಡಲು ಅನುಮತಿ ಇರುವುದಿಲ್ಲ ಎಂದು ನೆನಪಾಗುತ್ತಲೇ, ಮುಂದೆ ಯೋಚಿಸದೆ ಮೈಥಿಲಿ ಇನ್ನೇನು ಹೊರಡಲಿರುವ ಅಂಬ್ಯುಲೆನ್ಸ್ ಬಳಿ ಓಡಿದಳು. ದೂರದಲ್ಲಿಯೇ ನಿಂತು ಡ್ರೈವರ್ ಗೆ ಹೇಳಿದಳು
“ ಹಲೋ! ಇವರಿಗೆ ಏನಾಗಿದೆ? ಯಾವ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದು?”
“ಕೋವಿಡ್ ಇರಬಹುದು.” ಎಂದು ಹತ್ತಿರವೇ ಇದ್ದ ಆಸ್ಪತ್ರೆಗೆ ಎಂದು ಹೇಳಿದರು। “ ಸ್ವಲ್ಪ ಸೀರಿಯಸ್ ಇದ್ದಾರೆ ಅವರಿಗೆ ಮಾತನಾಡಲೂ ಕಷ್ಟವಾಗುತ್ತಿದೆ. ಅವರು ಮನೆಯಲ್ಲಿ ಒಬ್ಬರೇ ನಾ ಇರೋದು?”
“ ಹೌದು , ಈಕೆ ಒಬ್ಬರೇ ಇರುವುದು. ಮಕ್ಕಳಿಬ್ಬರೂ ಫಾರಿನ್ ನಲ್ಲಿ ಇದ್ದಾರೆ. ಈ ಊರಿನಲ್ಲಿ ಇನ್ಯಾರು ಇದ್ದಾರೋ ತಳಿಯದು.”
“ ಸರಿ. ಸಧ್ಯಕ್ಕೆ ನೀವೇ ಅವರುಗಳಿಗೆ ವಿಷಯ ತಿಳಿಸಿ. ಇವರು ಆಮೇಲೆ ಮಾತನಾಡುವ ಹಾಗಾದರೆ ಮಾತನಾಡಿಕೊಳ್ಳುತ್ತಾರೆ.”
“ನನ್ನ ಹತ್ರ ಅವರ ಮಕ್ಕಳ ನಂಬರ್ ಇಲ್ಲ.”
“ಮತ್ತೆ ಈಕೆಯ ದಿನದಿನದ ಯೋಗಕ್ಷೇಮ, ಚಿಕಿತ್ಸೆಗೆ ಸ್ಪಂದಿಸುತ್ತಿರುವುದು ಯಾರಿಗೆ ತಿಳಿಸುವುದು? ಈಗವರಿಗಿರುವ ಪರಿಸ್ಥಿತಿಯಲ್ಲಿ ಅವರಿಗೆ ಇನ್ನೂ ಎರಡು ಮೂರು ದಿವಸ ಯಾರೊಂದಿಗೂ ಮಾತನಾಡಲು ಆಗುವುದಿಲ್ಲ.”
“ಅಯ್ಯೋ! ಅದಕ್ಕೇನು ನನ್ನ ನಂಬರ್ ತೊಗೋಳಿ. ನಾನು ಅವರ ಪಕ್ಕದ ಫ್ಲಾಟಿನವಳು. ಮೈಥಿಲಿ ಮಧುಸೂದನ್ ಅಂತ ಬರ್ಕೋಳಿ. ಬೇಕಿದ್ದರೆ ನಮ್ಮ ಯಜಮಾನರ ನಂಬರ್ರೂ ತೆಗೆದುಕೊಳ್ಳಿ, “ ಎಂದು ತಮ್ಮಿಬ್ಬರ ಫೋನ್ ನಂಬರ್ ಕೊಟ್ಟಳು.
“ ಪೇಶೆಂಟ್ ಸ್ವಲ್ಪ ಸುಧಾರಿಸಿಕೊಂಡಮೇಲೆ ನೀವು ಬೇಕಿದ್ದರೆ ಅವರೊಂದಿಗೆ ಫೋನ್ ನಲ್ಲಿ ಮಾತಾಡಬಹುದು.”
“ನನ್ನ ಬಳಿ ಅವರ ನಂಬರ್ ಇಲ್ಲ.”
“ಏನು? ಫೋನ್ ನಂಬರ್ ಇಲ್ವಾ?ನೀವು ಅವರ ಪಕ್ಕದ ಮನೆಯವರು ತಾನೇ?”
“ಹೂಂ. ಪರವಾಗಿಲ್ಲ ಬಿಡಿ. ನಿಮ್ಮ ನಂಬರ್ ಕೊಟ್ರಲ್ಲ ಅಲ್ಲಿಗೇ ಕರೆ ಮಾಡಿ ಪೇಶೆಂಟ್ ನಂಬರ್ ಇಸ್ಕೊಂಡ್ರಾಯ್ತು . ನೀವೀಗ ಬೇಗ ಹೊರಡಿ. ”
ಎರಡನೆಯ ಅಂತಸ್ಥಿನ ಫ್ಲಾಟ್ ಗಳಲ್ಲಿದ್ದ ಹುಡುಗಿಯರೆಲ್ಲಾ ಆಗಲೇ ಖಾಲಿ ಮಾಡಿಕೊಂಡು ತಮ್ಮ ಮನೆಗಳಿಗೆ ಹೊರಟುಹೋಗಿದ್ದರು. ಮಧುಸೂದನ್ ಮನೆಯವರನ್ನು ಬಿಟ್ಟರೆ ಅಪಾರ್ಟ್ಮೆಂಟಿನಲ್ಲಿ ಬೇರೆ ಯಾರೂ ಇರಲಿಲ್ಲ.
ಪ್ರತಿ ದಿನ ಎರಡು ಬಾರಿ ಆಸ್ಪತ್ರೆಯಿಂದ ತ್ರಿವೇಣಿ ಟೀಚರ್ ಬಗ್ಗೆ ಮಾಹಿತಿ ಕೊಡಲು ಕರೆ ಬರುತ್ತಿತ್ತು. ಅದು ಮೈಥಿಲಿಯ ಫೋನಿಗೇ ಬರುತ್ತಿತ್ತು. ಆಕೆಯೂ ಬೆಳಿಗ್ಗೆ ಆರಕ್ಕೆ ಒಮ್ಮೆ ಮತ್ತು ಸಂಜೆ ಮಧುಸೂದನ್ ಬಂದ ಮೇಲೆ ಒಮ್ಮೆ ಆಸ್ಪತ್ರೆಗೆ ಕರೆ ಮಾಡಿ ಅವರ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಿದ್ದಳು . ದಾಖಲಾಗಿದ್ದ ಮೂರು ದಿವಸ ಅವರ ಸ್ಥಿತಿ ಬಹಳ ಗಂಭೀರವಾಗಿತ್ತು. ಅವರ ಮನೆಯವರಿಗೆ ವಿಷಯ ತಲುಪಿಸುವುದು ಮುಖ್ಯವಾಗಿತ್ತು. ಕೋವಿಡ್ ವಾರ್ಡುಗಳಿಗೆ ಪ್ರವೇಶವಿರಲಿಲ್ಲ. ಮೈಥಿಲಿ ಆಸ್ಪತ್ರೆಯ ಸಿಬ್ಬಂದಿಗೆ ವಿನಂತಿಸಿಕೊಂಡು ತ್ರಿವೇಣಿ ಟೀಚರ್ ಫೋನಿನಲ್ಲಿ ಸೇವಾಗಿದ್ದ ಅವರ ಮಕ್ಕಳ ನಂಬರ್ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದಳು. ಅವರಿಗೆ ಕರೆ ಮಾಡಿದಾಗ ಅವರೆಲ್ಲರೂ ಗಾಬರಿಯಾಗಿದ್ದು ಸಹಜ. ದೇಶಗಳ ಗಡಿಗಳನ್ನು ಮುಚ್ಚಿದ್ದರಿಂದ ಅವರು ಯಾರೂ ಭಾರತಕ್ಕೆ ಬರುವಂತಿರಲಿಲ್ಲ.” ನಾವು ಆಸ್ಪತ್ರೆಗೆ ಅಂತರರಾಷ್ಟ್ರೀಯ ಕರೆ ಮಾಡಲು ಆಗುವುದಿಲ್ಲ. ದಯವಿಟ್ಟು ನೀವೇ ಮಾಹಿತಿಯನ್ನು ತಿಳಿದುಕೊಂಡು ನಮಗೆ ವಿಷಯ ತಿಳಿಸಿ,” ಎಂದು ಮಕ್ಕಳಿ ಬ್ಬರೂ ಮೈಥಿಲಿಯನ್ನು ಕೇಳಿಕೊಂಡಿದ್ದರು.
ಐದನೇ ದಿವಸದ ಹೊತ್ತಿಗೆ ತ್ರಿವೇಣಿ ಟೀಚರ್ ಅವರ ಸ್ಥಿತಿ ಸ್ವಲ್ಪ ಸುಧಾರಿಸಿಕೊಂಡಿತು. ಐ. ಸಿ. ಯು ವಿನಿಂದ ಅವರನ್ನು ವಾರ್ಡ್ ಗೆ ವರ್ಗಾಯಿಸಿದ್ದರು. ಆದರೂ ಆಕೆಗೆ ಕರೆ ಮಾಡಿ ಮಾತನಾಡುವಷ್ಟು ಶಕ್ತಿ ಇರಲಿಲ್ಲ. ಮೈಥಿಲಿಯೇ ಅವರಿಗೆ ವಾಟ್ಸಾಪ್ ನಲ್ಲಿ ಸಂದೇಶ ಕಳುಹಿಸಿದಳು. ಚಿಕಿತ್ಸೆ ಸರಿಯಾಗಿ ಆಗುತ್ತಿದೆ, ನೀವು ಚೇತರಿಸಕೊಳ್ಳುತ್ತಿದ್ದೀರಿ, ಧೈರ್ಯವಾಗಿರಿ ಎಂದು ಮೊದಲ ಸಂದೇಶ ಅವಳೇ ಕಳುಹಿಸಿದ್ದಳು. ಒಂದು ವಾರದನಂತರ ತ್ರಿವೇಣಿಯವರನ್ನು ಡಿಸಚಾರ್ಜ್ ಮಾಡಿ ಆಸ್ಪತ್ರೆಯವರೇ ಮನೆಗೆ ತಂದು ಬಿಟ್ಟರು.
ಇನ್ನೂ ಹತ್ತು ದಿವಸಗಳು ಆಕೆ ಐಸೋಲೇಶನ್ ಅಲ್ಲಿ ಇರಬೇಕೆಂದು ಸಲಹೆ ಇಟ್ಟರು.ಮನೆಗೆ ಬಂದರೂ ತ್ರಿವೇಣಿಗೆ ಎದ್ದು ಇನ್ನೂ ಕೆಲಸ ಮಾಡಿಕೊಳ್ಳಲು ಆಗುತ್ತಿರಲಿಲ್ಲ. ಅತೀವ ನಿಶ್ಯಕ್ತಿ ಕಾಡಿತು. ಬೆಳಗಿನ ಝಾವ ಎದ್ದು ಒಂದು ಕಾಫಿ ಮಾಡಿಕೊಳ್ಳಲೂ ಆಗುತ್ತಿರಲಿಲ್ಲ. “ನೀವು ಚಿಂತಿಸ ಬೇಡಿ. ನಾವು ಫ್ಲಾಸ್ಕಲ್ಲಿ ಕಾಫಿ ಹಾಕಿ ನಿಮ್ಮ ಮನೆಯಾಚಿ ಇಟ್ಟು ಬೆಲ್ ಮಾಡ್ತೀವಿ. ನೀವು ಬಂದು ತೆಗೆದುಕೊಂಡು ಹೋಗಿ.” ಎಂದು ಮೈಥಿಲಿ ಸಂದೇಶ ಕಳಿಸಿದ್ದಳು. ವಾಸ್ತವವಾಗಿ ಅವರಿಬ್ಬರೂ ಕರೆ ಮಾಡಿ ಮಾತನಾಡಿಕೊಂಡಿರಲಿಲ್ಲ. ಚೆನ್ನಾಗಿದ್ದ ದಿನಗಳಲ್ಲಿ ಜಗಳವಾಡಿ ಗೋಣಗಾಡಿಕೊಳ್ಳುತ್ತಿದ್ದವರು ಏಕ್ದಂ ಸಭ್ಯರಾಗಿ ಮಾತನಾಡಲು ಸಂಕೋಚವಾಗಿತ್ತು ಇಬ್ಬರಿಗೂ. ಹಾಗಾಗಿ ಅವರ ವ್ಯವಹಾರ ಸಧ್ಯಕ್ಕೆ ಬರೀ ಸಂದೇಶದ ಮೂಲಕವೇ ಆಗಿತ್ತು.
ಬೆಳಿಗ್ಗೆ ಆರಕ್ಕೆ ಫ್ಲಾಸ್ಕಿನಲ್ಲಿ ಬಿಸಿ ಕಾಫಿ, ಜೊತೆಗೆ ಚಿಕ್ಕ ಪ್ಯಾಕೆಟ್ ಮಾರಿ ಅಥವಾ ಗುಡ್ಡೆ ಬಿಸ್ಕತ್ತು. ಮಧ್ಯಾಹ್ನ ಹನ್ನೊಂದಕ್ಕೆ ಟೀ ಮತ್ತು ಹೆಚ್ಚಿ ಹದವಾಗಿ ಉಪ್ಪು-ಮೆಣಸು ಹಾಕಿದ್ದ ಹಸಿ ತರಕಾರಿ ಸಾಲಡ್. ಒಂದಕ್ಕೆ ಸರಿಯಾಗಿ ಹಾಟ್ ಬಾಕ್ಸ್ ಕ್ಯಾರಿಯರ್ರಿನಲ್ಲಿ ಚಪಾತಿ,ಪಲ್ಯ, ಅನ್ನ, ಹುಳಿ, ಸಾರು. ಮೊಸರು, ಉಪ್ಪಿನಕಾಯಿ, ಡೆಸರ್ಟ್ ಬೇರೆ ಬಾಕ್ಸ್ ನಲ್ಲಿ ಇರುತ್ತಿತ್ತು. ಸಂಜೆ ಆರಕ್ಕೆ ಬಜ್ಜಿ, ಬೋಂಡ ಅಥವಾ ಏನಾದರೂ ಚಾಟ್ ಜೊತೆ ದೊಡ್ಡ ಲೋಟ ಕಾಫಿ. ರಾತ್ರಿಗೆ ರುಚಿಯಾದ ವಾಂಗಿಭಾತ್ ಅಥವಾ ಚಿತ್ರಾನ್ನದ ಜೊತೆ ಕಲೆಸಿದ ಮೊಸರನ್ನ ಮತ್ತು ಹಣ್ಣಿನ ಸಲಾಡ್ . ಇಷ್ಟೊಂದೆಲ್ಲಾ ಮೈಥಿಲಿ ಮಾಡಿಕೊಡುತ್ತಿರುವುದು ತ್ರಿವೇಣಿ ಟೀಚರರಿಗೆ ಬಹಳ ಮುಜುಗಾರವಾಯ್ತು. ಎರಡನೆಯ ದಿನ ಸಂದೇಶ ಕಳುಹಿಸಿದರು.
“ನಾನೀಗ ಬಹಳವಾಗಿ ಚೇತರಿಸಿಕೊಂಡಿರುವೆ. ಇನ್ನು ಮುಂದೆ ನಾನೇ ಅಡುಗೆ ಮಾಡಿಕೊಳ್ಳುವೆ. ಕಷ್ಟವಾದರೆ ಸ್ವಿಗ್ಗಿ ಝೊಮಾಟೊ ಇದ್ದೇ ಇದೆ.ಇಷ್ಟು ದಿವಸದ ನಿಮ್ಮ ಸಹಾಯಕ್ಕೆ ಧಾನ್ಯವಾದಗಳು ”
“ಅಯ್ಯೋ ಬೇಡಿ. ನಿಮಗೆ ಇನ್ನೂ ವಿಶ್ರಾಂತಿಯ ಅಗತ್ಯವಿದೆ. ಇನ್ನೂ ಸ್ವಲ್ಪ ದಿವಸ ಹೋಗಲಿ. ಹೊರಗಡೆಯ ಊಟ ತಿಂದರೆ ಮತ್ತೆ ಹುಷಾರು ತಪ್ಪಬಹುದು . ಅಷ್ಟಕ್ಕೂ ನಾನೇನು ನಿಮ್ಮೊಬ್ಬರಿಗೆ ಬೇರೆ ಮಾಡುತ್ತಿಲ್ಲ. ನಮ್ಮ ಮನೆಯಲ್ಲಿ ಮಾಡುವುದೇ ಕಳಿಸಿರುತ್ತೇನೆ. ಅದೂ ಅಲ್ಲದೆ ಈಗ ನಮ್ಮ ಮನೆಯಲ್ಲಿ ನಾವು ಸಧ್ಯಕ್ಕೆ ನಾನ್ ವೆಜ್ ಮಾಡುವುದು ನಿಲ್ಲಿಸಿದ್ದೇನೆ.”
ತ್ರಿವೇಣಿ ಟೀಚರ್ಗೆ ಕಣ್ತುಂಬಿ ಬಂತು.ಹಿಂದೆಯೇ ನಾಚಿಕೆಯೂ ಆಯ್ತು . ಮಾಂಸಾ-ಮಡ್ಡಿ ಜನ ಎಂದು ಅವರನ್ನು ಹೀಯಾಳಿಸಿದ್ದು ಜ್ಞಾಪಕವಾಯಿತು. ಅಲ್ಲದೆ ಅವರಿಗೆ ಇಷ್ಟು ದಿನಗಳಲ್ಲಿ ಒಮ್ಮೆಯೂ ಈ ನಾನ್ ವೆಜ್ ವಿಷಯ ಮನಸ್ಸಿಗೆ ಹೊಳೆದಿರಲಿಲ್ಲ.ಅವರ ಮನೆಯಲ್ಲಿ ವಿಶೇಷ ಅಡುಗೆ ಮಾಡಿದಾಗ ಮೂಗು ಮುಚ್ಚಿಕೊಂಡು ಗೋಣಗುತ್ತಿದ್ದವರಿಗೆ, ಅವರು ಅಡುಗೆ ಮಾಡುವಾಗ ಅದೇ ಪಾತ್ರೆ, ಸೌಟು, ಸ್ಪೂನು ಉಪಯೋಗಿಸುತ್ತಿರುತ್ತಾರೆಂಬ ಯೋಚನೆಯೂ ಬಂದಿರಲಿಲ್ಲ. ದೂರದೂರಿನಲ್ಲಿದ್ದ ಮಕ್ಕಳಿಗೆ ವಿಡಿಯೋ ಕರೆ ಮಾಡಿ ತಮ್ಮ ಪಕ್ಕದ ಮನೆಯ ಆಕೆ ತಮಗೆ ಎಷ್ಟು ಚೆನ್ನಾಗಿ ಆರೈಕೆ ಮಾಡುತ್ತಿದ್ದಾಳೆ ಎಂದು ತೋರಿಸಿ ಹೆಮ್ಮೆಯಿಂದ ಬೀಗಿದ್ದರು.
ಇನ್ನೇನು ಐಸೊಲೇಶನ್ ಮುಗಿಯುವ ಎರಡು ದಿವಸಗಳ ಮುಂಚೆ ಮೈಥಿಲಿಗೆ ಶುಭೋದಯದ ಸಂದೇಶದ ಜೊತೆ ಮತ್ತೊಂದು ಸಂದೇಶ ಕಳುಹಿಸಿದರು. “ಇನ್ನೆರಡು ದಿವಸಕ್ಕೆ ನನ್ನ ಐಸೋಲೇಶನ್ ಮುಗಿಯುತ್ತದೆ. ನಾನೀಗ ಚೆನ್ನಾಗಿದ್ದೀನಿ. ಅದಕ್ಕೆ ಇಂದಿನಿಂದ ನಾನೇ ಕಾಫಿ-ತಿಂಡಿ-ಅಡುಗೆ ಮಾಡಿಕೊಳ್ಳ ಬೇಕೆಂದಿರುವೆ, ಅನ್ಯಥಾ ಭಾವಿಸ ಬೇಡಿ. ಸ್ವಲ್ಪ ನನಗೂ ಚಟುವಟಿಕೆ ಬೇಕೆನಿಸಿದೆ.”
“ಸರಿ.” ಎಂದಷ್ಟೇ ಮೈಥಿಲಿ ಉತ್ತರಿಸಿದ್ದು ಅವರಿಗೆ ಆಶ್ಚರ್ಯವಾದರೂ, ಇನ್ನೆರಡು ದಿವಸಗಳ ನಂತರ ಖುದ್ದಾಗಿ ಭೇಟಿ ಮಾಡಿ ಧನ್ಯವಾದ ತಿಳಿಸಿದರೆ ಆಯಿತು ಎಂದು ಸುಮ್ಮನಿದ್ದುಬಿಟ್ಟರು. ಮಾರನೆಯ ದಿವಸ ಅವರ ಶುಭೋದ ಸಂದೇಶಕ್ಕೆ ಪ್ರತ್ಯುತ್ತರ ಇಲ್ಲ! ಆಂದೆಲ್ಲಾ ತ್ರಿವೇಣಿ ಟೇಚರ್ ಮನಸಿಗೆ ಬಹಳ ಬೇಸರವಾಯಿತು. ಮೈಥಿಲಿ ಇಷ್ಟು ಸೂಕ್ಷ್ಮದ ಮನಸಿನವಳೆ? ನಾನು ನಿಮ್ಮ ಮನೆಯ ಊಟ ಬೇಡ ಎಂದದ್ದಕ್ಕೆ ಬೇಸರಿಸಿಕೊಂಡಿಹಳೆ? ಇರಲಿ ನಾಳೆ ಐಸೋಲೇಶನ್ ಮುಗಿಯುತ್ತಿದ್ದಂತೆಯೇ ಅವರ ಮನೆಗೆ ಹೋಗಿ ಸಮಾಧಾನ ಮಾಡಿದರಾಯಿತು ಎಂದು ಯೋಚಿಸಿ ಸಮಾಧಾನ ಪಟ್ಟರು.
ಮಾರನೆಯ ಬೆಳಿಗ್ಗೆ ಅವರ ಐಸೋಲೇಶನ್ ಮುಗಿದಿತ್ತು. ಲಗುಭಗೆಯಿಂದ ಎದ್ದವರು ಬೇಗ ಕಾಫಿ, ಸ್ನಾನ ಮುಗಿಸಿದರು. ಪೂಜೆ ಮುಗಿಸಿ, ದೇವರಿಗೆ ಧನ್ಯವಾದ ಹೇಳಿ, ಒಡನೆಯೇ ಮೈಥಿಲಿಗೂ ಧನ್ಯವಾದ ತಿಳಿಸಬೇಕೆಂದು ತಮ್ಮ ಮನೆಯ ಬಾಗಿಲು ತೆರೆದು ಅತ್ತ ನೋಡಿದರು..
ಮೈಥಿಲಿಯ ಮನೆ ಬಾಗಿಲು ಅದಾಗಲೇ ಹಾರೆ ತೆಗೆದಿತ್ತು. ಸೀದಾ ಒಳಗೆ ಹೋಗಲು ಸಂಕೋಚವಾಗಿ ಬೆಲ್ ಒತ್ತಿದರು. ಯಾರೂ ಬಾರದಿದ್ದು ನೋಡಿ ಮತ್ತೊಮ್ಮೆ ಬೆಲ್ ಒತ್ತಿ ಒಳಗೆ ಇಣುಕಿದರು. ನೆಲದ ಮೇಲೆ ಮಕ್ಕಳ ಆಟ ಸಾಮನುಗಳು ಹರಡಿಕೊಂಡಿದ್ದವು. ಕಣ್ಣುಜ್ಜಿಕೊಳ್ಳುತ್ತಾ ಅವರ ದೊಡ್ಡ ಮಗಳು ಅವರ ಮುಂದೆ ಬಂದು ನಿಂತಳು. ಸುಮಾರು ಹತ್ತು ವರ್ಷವಿರಬಹುದು.
“ಹೈ ! ನಾನು ಎದಿರು ಮನೆ ಫ್ಲಾಟಿನ ತ್ರಿವೇಣಿ ಟೀಚರ್. ಅಮ್ಮ ಎಲ್ಲಿ?” ಮೈಥಿಲಿ ಇಷ್ಟೊತ್ತಿಗಾದರೂ ಬಾಗಿಲ ಬಳಿ ಬಂದಿರಲಿಲ್ಲ. ಹುಡುಗಿ ದಂಗಾಗಿ ಇವರನ್ನೇ ನೋಡುತ್ತಾ ನಿಂತಿತು. ಅಷ್ಟರಲ್ಲಿ ಅವರ ಚಿಕ್ಕ ಮಗಳು, ಬಹುಶಃ ಆರು ವರ್ಷದವಳಿರಬಹುದು,ಅಳುತ್ತಾ ಓಡಿ ಬಂದು..” ಅಮ್ಮನ್ನ ಡಾಕ್ಟರ್ ಬಂದು ಕರೆದುಕೊಂಡು ಹೋದರು !” ಎಂದಳು . ತ್ರಿವೇಣಿಗೆ ಗಾಭರಿ! “ಏಯ್! ಸಮ್ಮನಿರು! ಯಾರಿಗೂ ಹೇಳಬೇಡಿ ಅಂತ ಹೇಳಿ ಹೋಗಲಿಲ್ಲವಾ? ಟೀಚರ್ರಿಗೂ ಹುಷಾರಿಲ್ಲ. ಹೇಳಲೇ ಬೇಡಿ ಅನ್ನಲಿಲ್ಲವ ಅಮ್ಮ?” ತಂಗಿಯೇ ಬಾಯಿಯ ಮೇಲೆ ಕೈ ಇಟ್ಟು ಆ ಪುಟ್ಟ ಅಕ್ಕ ಹೇಳಿದಾಗ ತ್ರಿವೇಣಿಗೆ ಅಳುವೇ ಬಂದುಬಿಟ್ಟಿತು.
‘ಪುಟ್ಟಿ! ಹೇಳಮ್ಮ ಅಮ್ಮ ಎಲ್ಲಿ ಅಂತ. ನಾನೀಗ ಹುಷಾರಿದ್ದೀನಿ. ಡಾಕ್ಟರ್ ಯಾಕೆ ಅಮ್ಮನ್ನ ಕರ್ಕೊಂಡು ಹೋಗಿದ್ದು? ಅಪ್ಪ ಎಲ್ಲಿ? ಊರಲ್ಲಿಲ್ಲವಾ?” ತನ್ನ ಗಂಡ ಕೆಲವೊಮ್ಮೆ ಕೆಲಸದ ಮೇಲೆ ಬೇರೆ ಊರಿಗೆ ಹೋಗುತ್ತಿರುತ್ತಾರೆ ಎಂದು ಮೈಥಿಲಿ ಹೇಳಿದ್ದರು
“ಡಾಕ್ಟರ್ ಅಲ್ಲ! ಆಸ್ಪತ್ರೆಯವರು ನಿನ್ನೆ ರಾತ್ರಿ ಅಮ್ಮನ್ನೂ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಿಟ್ಟರು. ಅಪ್ಪನ್ನ ಎರಡು ದಿವಸದ ಮುಂಚೆಯೇ ಕರೆದುಕೊಂಡು ಹೋದರು !” ಇಷ್ಟನ್ನೂ ಬಿಕ್ಕುತ್ತಲೇ ಹೇಳಿತು ಆ ಹುಡುಗಿ
ಅಯ್ಯೋ ದೇವರೇ! ಕೋವಿಡ್ ಇವರ ಮನೆಗೂ ನುಗ್ಗಿತೆ? ಪಾಪ ಮೈಥಿಲಿ ಎರಡು ದಿವಸಗಳಿಂದ ಸಂಪರ್ಕಿಸದಿದ್ದು ಇದೇ ಕಾರಣಕ್ಕೆ?
“ಮತ್ತೆ ನಿಮ್ಮ ಜೊತೆ ಮನೆಯಲ್ಲಿ ಯಾರಿದ್ದಾರೆ?”
‘ಯಾರೂ ಇಲ್ಲ. ನಾವಿಬ್ಬರೆ. ಬಾಗಿಲು ಹಾಕಿಕೊಂಡಿರಿ. ನಾನು ಆಸ್ಪತ್ರೆಯಿಂದ ಫೋನ್ ಮಾಡ್ತೀನಿ ಅಂದ್ರು ಅಮ್ಮ. ಆದರೆ ಇಲ್ಲಿಯವರೆಗೂ ಫೋನ್ ಮಾಡೇ ಇಲ್ಲಾ.. ಆ ಆ ಆ ..” ಅಂತ ಮತ್ತೆ ಮಗು ಅಳಲಾರಂಭಿಸಿತು. ಅದನ್ನು ನೋಡಿ ಚಿಕ್ಕದೂ ಅಳು ಶುರುಮಾಡಿತು. ಅಳುತ್ತಿರುವ ಇಬ್ಬರು ಸಣ್ಣ ಮಕ್ಕಳು, ಅಪ್ಪ- ಅಮ್ಮ ಆಸ್ಪತ್ರೆಯಲ್ಲಿ .. ಮುಂದೇನು ಮಾಡುವುದು ಎಂದು ತ್ರಿವೇಣಿ ಟೀಚರಿಗೆ ತೋಚಲೇ ಇಲ್ಲ.
“ಅಳಬೇಡ ಪುಟ್ಟಿ. ಅಳಬೇಡ ಕಂದ. ನಿನ್ನೆ ರಾತ್ರಿ ಅಮ್ಮ ಆಸ್ಪತ್ರೆಗೆ ಹೋದದ್ದು. ಆಗಲಿಂದ ನೀವೇನಾದರೂ ತಿಂದಿದ್ದೀರ?”
“ಊಹೂಂ” ದೊಡ್ಡದು ಹೇಳಿದರೆ ಚಿಕ್ಕದು, “ನನಗೆ ಹಸಿವೆ ಆಗ್ತಿದೆ. ಊಟ ಬೇಕು..” ಎಂದು ಮತ್ತಷ್ಟು ಜೋರಾಗಿ ಅಳಲು ಆರಂಬಿಸಿತು. ಅಷ್ಟರ ಹೊತ್ತಿಗೆ ತ್ರಿವೇಣಿ ತಾವೂ ಅಳುತ್ತಲಿದ್ದರು.
ಸಾವರಿಸಿಕೊಂಡು, ಕಣ್ಣು ಒರೆಸಿಕೊಂಡು ,ಮಕ್ಕಳನ್ನು ತಬ್ಬಿಕೊಳ್ಳುತ್ತಾ, “ ಪುಟ್ಟಿ ಅಳಬೇಡ. ಚಿನ್ನು ಬಾ ಇಲ್ಲಿ , ಅಳ್ಬೇಡ . ನಾನಿದ್ದೇನಲ್ಲ? ಅಮ್ಮ-ಅಪ್ಪ ಹುಷಾರಾಗಿ ಬಂದೇ ಬರುತ್ತಾರೆ. ಮನೆಗೆ ಬನ್ನಿ . ನಿನಗೇನು ಬೇಕೋ ನಾನು ಅದನ್ನು ಮಾಡಿಕೊಡುತ್ತೇನೆ. ಬನ್ನಿ.” ಸಧ್ಯ ತಮ್ಮ ಕ್ವಾರಂಟೈನ್ ಮುಗಿದಿದೆಯಲ್ಲ ಎಂದು ನಿಟ್ಟುಸಿರು ಬಿಟ್ಟರು. ಮಕ್ಕಳಿಬ್ಬರನ್ನು ತಮ್ಮ ಮನೆಗೆ ಕರೆದುಕೊಂಡು ಬಂದರು. ಬೀಗದ ಕೈಯ್ಯನ್ನು ಹುಡುಕಿ, ಮೈಥಿಲಿಯ ಮನೆಗೆ ಬೇಗ ಹಾಕಿದರು. ಇಡೀ ಅಪಾರ್ಟ್ಮೆಂಟಿನಲ್ಲಿ ಎರಡು ಪುಟ್ಟ ಮಕ್ಕಳು ಮತ್ತು ನಾನೊಬ್ಬಳು ಇನ್ನೂ ಚೇತರಿಸಿಕೊಳ್ಳುತ್ತಿರುವ ಮುದುಕಿ ಎಂದು ಅರಿವಾಗ ಸ್ವಲ್ಪ ಭಯವಾಯಿತು.
ಯಾವ ಆಸ್ಪತ್ರೆಗೆ ಯಾವ ಸ್ಥಿತಿಯಲ್ಲಿ ದಂಪತಿಗಳಿಬ್ಬರೂ ದಾಖಲಾಗಿದ್ದರೋ, ಈಗ ಅವರುಗಳು ಹೇಗಿದ್ದಾರೋ ಎಂಬ ಪ್ರಶ್ನೆಗಳು ಅವರನ್ನು ಕಾಡಿದವು. ಬಹುಶಃ ಹತ್ತಿರದಲ್ಲಿಯೇ ಇರುವ, ತಾವು ದಾಖಲಾಗಿದ್ದ ಆಸ್ಪತ್ರೆಗೆ ಅವರುಗಳೂ ದಾಖಲಾಗಿರಬಹುದೆಂದು ಕರೆಮಾಡಲು ಪ್ರಯತ್ನಿಸಿದರು. ಆಕೆಗೆ ಫೋನ್, ಇಂಟರ್ನೆಟ್ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ. ಆದರೂ ಕರೆಯ ಮೇಲೆ ಕರೆ ಪ್ರಯತ್ನಿಸಿ, ಒಂದು ಘಂಟೆಯ ನಂತರ ಅವರಿಗೆ ಕೆಲವು ಮಾಹಿತಿಗಳು ದೊರಕಿದ್ದವು. ಇವರು ಅಂದು ದಾಖಲಾಗಿದ್ದ ಆಸ್ಪತ್ರೆಯಲ್ಲಿಯೇ, ಈಗ ಮೈಥಿಲಿ ತೀವ್ರ ಚಿಕಿತ್ಸಾ ಘಟಕ- ಐ. ಸಿ. ಯು – ವಿನಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ದಾಖಲಾಗಿದ್ದರು. ಆಕೆಯ ಗಂಡ ಮಧುಸೂಧನ್ ಅವರು ಮೂರು ದಿವಸಗಳ ಹಿಂದೆ ಇದೇ ಐ. ಸಿ. ಯು ವಿನಲ್ಲಿ ದಾಖಲಾಗಿದ್ದರು. ಹಿಂದಿನ ದಿನವಷ್ಟೇ ಅವರ ಸ್ಥಿತಿ ಮತ್ತಷ್ಟು ಹದಗೆಟ್ಟು, ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಮತ್ತೂ ದೊಡ್ಡ ಆಸ್ಪತ್ರೆಗೆ ವರ್ಗಾವಣೆ ಮಾಡಿದ್ದರು. ಆಸ್ಪತ್ರೆಯ ಖರ್ಚುಗಳನ್ನು ಹೇಗೆ ನಿಭಾಯಿಸುತ್ತಿದ್ದರು ಎಂದೂ ತಿಳಿದುಕೊಂಡರು. ಅವರಿಬ್ಬರಿಗೂ ವಿಮೆ ಇದೆಯೆಂದು ತಿಳಿದು ಬಂದು ಸ್ವಲ್ಪ ನಿರಾಳವಾಯಿತು. ತಮ್ಮ ಬಳಿ ಮಕ್ಕಳು ಕಳುಹಿಸುತ್ತಿದ್ದ ಸ್ವಲ್ಪ ಹಣ ಎಫ್. ಡಿ ಯಲ್ಲಿ ಇತ್ತು. ಅದನ್ನ ತೆಗೆಯಬಹುದು ಎಂದೂ ಯೋಚಿಸಿದ್ದರು.
ಮೈಥಿಲಿಯೊಂದಿಗೆ ಮಾತನಾಡಲು ಸಾಧ್ಯವಿರಲಿಲ್ಲ. ಆಕೆಗೆ ತನ್ನ ಗಂಡನನ್ನು ಬೇರೆ ಆಸ್ಪತ್ರೆಗೆ ವರ್ಗಾಯಿಸಿದ್ದಾರೆಂದೂ ತಿಳಿದಿದೆಯೋ ಇಲ್ಲವೋ? ಮಧೂಸೂದನ್ ದಾಖಲಾಗಿದ್ದ ಆಸ್ಪತ್ರೆಗೂ ಕರೆ ಮಾಡಿ ಅವರ ಆರೋಗ್ಯ ಮಾಹಿತಿಯನ್ನು ತಮಗೇ ತಿಳಿಸ ಬೇಕೆಂದು ತಮ್ಮ ಮಾಹಿತಿ ಕೊಟ್ಟರು. ಮಕ್ಕಳಿಗೆ ತಿಂಡಿ-ಹಾಲುಗಳನ್ನು ಕೊಟ್ಟು , ಸ್ನಾನ ಮಾಡಿಸಿ, ತಲೆ ಬಾಚಿ ಬಟ್ಟೆ ಹಾಕಿ ಮಲಗಿಸಿದಾಗ ಆಕೆಗೂ ಬಹಳ ದಣಿವಾಯಿತು. ಅಷ್ಟರಲ್ಲಿ ಮಧುಸೂಧನ್ ಧಾಖಲಾಗಿದ್ದ ಆಸ್ಪತ್ರೆಯಿಂದ ಕರೆ ಬಂದಿತು.
“ಹಲೋ ಇದು ಮಧುಸೂದನ್ . ಎಚ್ ಕಡೆಯವರ?” ಅತ್ತ ಕಡೆಯಿಂದ ದಣಿದ ದ್ವನಿ.
:”ಹೌದು!”
“ನೀವ್ಯಾರು ಮೇಡಂ? ಅವರ ಮಿಸೆಸ್-ಅ?”
“ಇಲ್ಲಪ್ಪಾ. ಮಧುಸೂದನ್ ಅವರ ಹೆಂಡತಿಯೂ ಆಸ್ಪತ್ರೆಯ ಐ. ಸಿ. ಯು ನಲ್ಲಿ ಇದ್ದಾರೆ. ನಾನು ಅವರ ಪಕ್ಕದ ಮನೆಯವರು.”
“ಮೇಡಂ ಬಹಳ ಸಾರಿ . ನಾವೆಷ್ಟು ಪ್ರಯತ್ನ ಪಟ್ಟರೂ, ಮಧುಸೂದನ್ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ. ಅವರ ಶರೀರ ಯಾವ ಉತ್ತಮ ಚಿಕಿತ್ಸೆಗೂ ಸ್ಪಂದಿಸಲಿಲ್ಲ!”
“ ಅಯ್ಯೋ ದೇವರೇ! ಸತ್ತೇ ಹೋದರೆ? ಇಷ್ಟು ಚಿಕ್ಕ ವಯಸ್ಸಿನವರು!? ಹೆಂಡತಿ, ಎರಡು ಚಿಕ್ಕ ಹೆಣ್ಣು ಮಕ್ಕಳಿದ್ದಾರೆ ಆವರಿಗೆ!” ತ್ರಿವೇಣಿ ಟೀಚರ್ಗೆ ದುಃಖ ಉಮ್ಮಳಿಸಿ ಬಂತು. ಕಂಪಿಸುವ ದ್ವನಿಯಲ್ಲಿಯೇ “ ಯಾವಾಗ ಹೋದರಪ್ಪ?” ಎಂದು ಕೇಳಿದರು.
“ ಅರ್ಧ ಘಂಟೆ ಹಿಂದೆ. ಆವರು ಕೊಟ್ಟಿದ್ದ ಎಲ್ಲಾ ನಂಬರುಗಳಲ್ಲಿ ಲೈನ್ ಸಿಕ್ಕಿದ್ದು ನಿಮದೆ. ಅದಕ್ಕೆ ನಿಮಗೇ ಮತ್ತೊಂದು ಮಾಹಿತಿ ತಿಳಿಸಬೇಕು . ನಮಗೆ ಹೇಳಕ್ಕೆ ಎಷ್ಟು ಕಷ್ಟವಾಗುತ್ತದೆಯೋ ಅದಕ್ಕಿಂತ ಹೆಚ್ಚು ನಿಮಗೆ ಘಾಸಿಯಾಗಿದೆ ಎಂದು ಗೊತ್ತು. ಆದರೆ ಹೇಳಲೇ ಬೇಕು.”
“ಹೇಳೀಪ್ಪ . ನಾನು ಕೇಳಿಸಿಕೊಳ್ಳುತ್ತಿದ್ದೇನೆ.”
“ ಕೋವಿಡ್ ಆದ್ದರಿಂದ, ಅವರ ಕಡೆಯವರು ಯಾರಿಗೂ ಅವರನ್ನು ನೋಡುವ ಅವಕಾಶ ಇರುವುದಿಲ್ಲ. ಅಂತ್ಯ ಸಂಸ್ಕಾರವನ್ನೂ ಮಹಾನಗರ ಪಾಲಿಕೆಯವರೇ ಮಾಡಿ ಮುಗಿಸುತ್ತಾರೆ. ಒಂದು ವಾರದ ನಂತರ ಕರೆಮಾಡಿ ಬಂದು ಎಲ್ಲ ದಾಖಲು ಪತ್ರ ಸರ್ಟಿಫಿಕೀಟುಗಳನ್ನು ತೆಗೆದುಕೊಂಡು ಹೋಗಬಹುದು. ನಿಮಗೆ ಏನಾದರೂ ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬೇಕೆಂದರೆ ಈ ಸಂಖ್ಯೆಗೆ ಕರೆ ಮಾಡಿ” ಎಂದು ಫೋನ್ ನಂಬರ್ ಕೊಟ್ಟರು.
“ಸರಿ.”
“ ಮತ್ತೆ ಮೇಡಂ, ಅವರ ಇನ್ನಿತರೆ ಸಂಬಂಧಿಕರಿಗೆ ಮತ್ತು ಆಫೀಸಿನವರಿಗೆ ನೀವೇ ತಿಳಿಸಿಬಿಡಿ.” ಎಂದು ಕರೆ ಕತ್ತರಿಸಿದರು.
ತ್ರಿವೇಣಿಗೆ ಮತ್ತೆ ಕಣ್ಕತ್ತಲು ಬಂದಂತಾಯಿತು. ಒಮ್ಮಗೆ ಇಷ್ಟೊಂದು ಆಘಾತಕಾರಿ ಸುದ್ದಿ ಆರಗಿಸಿಕೊಳ್ಳುವುದು ಹೇಗಪ್ಪಾ? ಪಕ್ಕದ ಮನೆಯವರು ಯಾರೆಂದು ತಿಳಿದುಕೊಳ್ಳುವ ಗೋಜಿಗಿರಲಿ, ಸದಾ ಅವರನ್ನು ದೂರವಿಟ್ಟಿದ್ದೆ! ಪರಸ್ಪರ ದೂಷಿಸಿಕೊಳ್ಳುತ್ತಿದ್ದೆವು. ಅಂತಹದ್ದು ಇವರ ನೆಂಟರು, ಸ್ನೇಹಿತರು, ಸಹೋದ್ಯೋಗಿಗಳು ಯಾರೆಂದು ಹೇಗೆ ತಿಳಿದುಕೊಳ್ಳುವುದು? ಇಬ್ಬರ ಮೊಬೈಲ್ ಫೋನುಗಳೂ ಅವರ ಬಳಿ ಇದೆ. ಒಬ್ಬರು ಐ. ಸಿ. ಯು ವಿನಲ್ಲಿ, ಮತ್ತೊಬ್ಬರು ಸತ್ತೇ ಹೋಗಿದ್ದರು. ಈ ಪುಟ್ಟ ಮಕ್ಕಳಿಗೆ ಯಾವ ಸಂಬಂಧಿಕರು, ಹೇಗೆ ಸಂಪರ್ಕಿಸುವುದು ಎಂದು ತಿಳಿಯುತ್ತದೆಯೇ ? ಹೇಗೋ ಹುಡುಕಾಡಿ ಊರುಗಳಲ್ಲಿ ಇರುವವರಿಗೆ ವಾರ್ತೆ ತಿಳಿಸಿದರೂ ಅವರುಗಳು ಯಾರೂ ಪ್ರಯಾಣ ಮಾಡುವಂತಿಲ್ಲ! ಹೊರಗಡೆ ಎಲ್ಲಾ ಕರ್ಫ್ಯು!
ಕರೆ ಕತ್ತರಿಸಿ ಪಕ್ಕ ನೋಡಿದರೆ, ಮಕ್ಕಳಿಬ್ಬರೂ ಅವರ ಬಳಿ ಬಂದು ನಿಂತಿದ್ದವು. ಅಪ್ಪನಿಗೆ ಏನೋ ಆಗಿದೆ ಎಂದು ದೊಡ್ಡವಳಿಗೆ ಅರ್ಥವಾದಂತಿತ್ತು. ಅಳುತ್ತಲೇ,” ಅಪ್ಪ ಮತ್ತೆ ಬಾರಲ್ವಾ? ಅಮ್ಮನಾದರೂ ಬರುತ್ತಾರ? ’ ಎಂದು ಕೇಳಿದರೆ ಚಿಕ್ಕದು ಮತ್ತೆ “ಅಮ್ಮ ಬೇಕು, ಅಮ್ಮ ಬೇಕು” ಎಂದು ಅಳಲಾರಂಬಿಸಿದಳು. ಅವರನ್ನು ನೋಡುತ್ತಲೇ ತ್ರಿವೇಣಿಯವರಿಗೆ ಮತ್ತೆ ವಾಸ್ತವದ ಅರಿವಾಯಿತು. ಅಪಾರ್ಟ್ಮೇಂಟಿನಲ್ಲಿ ಒಬ್ಬಳೇ, ಇನ್ನೂ ಕೋವಿಡ್ ನಿಂದ ಚೇತರಿಸಿಕೊಳ್ಳುತ್ತಿದ್ದೇನೆ. ಹೊರಗೆಲ್ಲಾ ಮೊದಲಿನಂತೆ ಬಂದು ಹೋಗುವಂತಿಲ್ಲ, ನಿರ್ಬಂಧನೆಗಳು. ಮಕ್ಕಳು ಈಗಷ್ಟೇ ಅಪ್ಪನನ್ನು ಕಳೆದುಕೊಂಡಿವೆ. ಅಮ್ಮನ ಪರಿಸ್ಥಿತಿಯೂ ಚಿಂತಾಜನಕ ಎಂದಿದ್ದಾರೆ. ಇಷ್ಟು ತಿಂಗಳುಗಳು ಅಕ್ಕ-ಪಕ್ಕ ಇದ್ದರೂ ಇವರ ಬಗ್ಗೆಯೇ ಗೊತ್ತಿರಲಿಲ್ಲ! ಇನ್ನು ಇವರ ಬಂಧು-ಬಳಗ ಸ್ನೇಹಿತರು ಯಾರೆಂದು ಹೇಗೆ ತಿಳಿದುಕೊಳ್ಳುವುದು?
ಹಿರಿಯಳಾಗಿದ್ದ ತಾನು, ಹತ್ತು ಜನಕ್ಕೆ ಬುಧ್ಧಿ-ಸಾಂತ್ವನ ಹೇಳಿ ಮಾರ್ಗದರ್ಶನ ಕೊಡುತ್ತಿದ್ದೆ. ಆದರೆ ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿರುವುದು ಮೊದಲು. ಮಕ್ಕಳಿಗೆ ತಮ್ಮ ನೆಂಟರಿಷ್ಟರ ಫೋನ್ ನಂಬರ್ ಆಗಲಿ, ವಿಳಾಸವಾಗಲಿ ಗೊತ್ತಿರಲಿಲ್ಲ. ಮೊಬೈಲ್ ಫೋನಿನ ಕಾಲದಲ್ಲಿ ಯಾರು ನಂಬರ್ಗಳಲನ್ನ ಬರೆದಿಟ್ಟುಕೊಳ್ಳುತ್ತಾರೆ? ಮೈಥಿಲಿ ಸ್ವಲ್ಪ ಸುಧಾರಿಸಿಕೊಂಡ ಮೇಲೆ ಅವರಿಂದಲೇ ಮಾಹಿತಿ ಪಡೆಯಬೇಕು. ಮೈಥಿಲಿ ನೆನಪಾಗುತ್ತಲೇ ಅವಳ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಕರೆ ಮಾಡಿದಳು.
“ ಪರವಾಗಿಲ್ಲ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. “ ಎಂದಿದ್ದರು. ಮುಂದಿನ ಎರಡು ದಿವಸಗಳು ಮಕ್ಕಳನ್ನು ನೋಡಿಕೊಂಡು, ತಮ್ಮ ಆರೋಗ್ಯದ ಬಗ್ಗೆಯೂ ನಿಗವಿರಿಸಿ, ಮೈಥಿಲಿಯ ಆರೋಗ್ಯದ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದರು. ಮಕ್ಕಳ ಸಭ್ಯವಾದ ನಡತೆಗೆ ಮಾರುಹೋದರು. ಸ್ವಲ್ಪವೂ ಹಟ ಇಲ್ಲ. ಒಮ್ಮೊಮ್ಮೆ ಅಪ್ಪ-ಅಮ್ಮನನ್ನ ನೆನಪಿಸಿಕೊಂಡು ಅಳುತ್ತಿದ್ದವು. ಇದು ಬೇಡ, ಅದು ಸೇರುವುದಿಲ್ಲ ಎಂಬ ರಂಪ ಇಲ್ಲ. ತಮ್ಮ ಆಟಸಾಮನುಗಳನ್ನು ಇಲ್ಲೇ ತಂದು ಆಡಿಕೊಂಡು ಇದ್ದವು. ತನ್ನನ್ನು ಆಂಟಿ ಎಂದು ಸಂಭೋಧಿಸುವ ಬದಲು ಅಜ್ಜಿ ಎನ್ನಬೇಕು ಎಂದು ತ್ರಿವೇಣಿಯವರು ಹೇಳಿದ್ದರು.
ನಾಲ್ಕನೆಯ ದಿನ ಮೈಥಿಲಿಗೆ ಹಾಕಿದ್ದ ವೆಂಟಿಲೇಟರ್ ತೆಗೆದು ಮೂಗಿಗೆ ಆಮ್ಲ್ಲ ಜನಕ ಹಾಕಿದ್ದರು. ಆಕೆಗೆ ಮಾತನಾಡಲು ಆಗುತ್ತಿರಲಿಲ್ಲ. ಮನೆಯವರನ್ನ ನೋಡಬೇಕು ಎಂದಾಗ ತ್ರಿವೇಣಿ ಟೀಚರ್ ಅವರ ಫೋನಿಗೇ ವಿಡಿಯೋ ಕರೆ ಮಾಡಿಸಿದ್ದರು. ಮಕ್ಕಳು ಅಮ್ಮನನ್ನು ನೋಡಿ “ಬೇಗ ಬಾಮ್ಮ!!” ಎಂದರೆ ಅಮ್ಮನಿಗೆ ಕಣ್ಣಲ್ಲಿ ನೀರು. ಹೂಂ ಅಂತ ಗೋಣಾಡಿಸಿದಳು. ಇವೆಲ್ಲವನ್ನೂ ನೋಡುತ್ತಲಿದ್ದ ತ್ರಿವೇಣಿ ತಾವೂ ಕ್ಯಾಮರಾಗೆ ಬಂದು, ಹೈ ಎನ್ನುವಂತೆ ಕೈಬೀಸಿ ನಕ್ಕರು. ಇವತ್ತಲ್ಲ ನಾಳೆ ಗಂಡನೆಲ್ಲಿ ಎಂದು ಕೇಳಿಬಿಟ್ಟರೆ ಹೇಗೆ, ಏನು ಹೇಳುವುದು ಎಂದು ಅಳುಕು ಅವರಿಗೆ.
ಮುಂದಿನ ಎರಡು ದಿವಸಗಳಲ್ಲಿ ಮೈಥಿಲಿ ಮಾತನಾಡುವಂತಾದರು. ದಿನಕ್ಕೆ ನಾಕಾರು ಬಾರಿ ಮಕ್ಕಳೊಂದಿಗೆ ಮಾತನಾಡಿದರೂ ಒಮ್ಮೆಯಾದರೂ ಅಪ್ಪ ಹೇಗಿದ್ದಾರೆ ಎಂದು ಕೇಳಿರಲಿಲ್ಲ. ಅಂದು ರಾತ್ರಿ ಹನ್ನೊಂದಕ್ಕೆ ಕರೆ ಮಾಡಿದಳು.
“ಮೈಥಿಲಿ! ಏನಮ್ಮ ಇಷ್ಟೊತ್ತಿಗೆ ಕರೆ ಮಾಡಿದ್ದೀಯ? ಹುಷಾರಿಲ್ಲವೇ? ಏನು ತೊಂದರೆಯಾಗುತ್ತಿದೆಯೇ ?” ಎಂದು ಗಾಬರಿಯಿಂದ ಕೇಳಿದರು.
“ ಸ್ಸಾರಿ ಆಂಟಿ, ಇಷ್ಟೊತ್ತಿಗೆ ಕರೆ ಮಾಡಿದ್ದಕ್ಕೆ. ನಾನು ಹುಷಾರಾಗಿಯೇ ಇದ್ದೇನೆ . ಮಕ್ಕಳು ಮಲಗಿಕೊಂಡರ?”
“ಹೂಂ . ಆಗಲೇ ಮಲಗಿಬಿಟ್ಟರು.”
“ ಮಧುಸೂದನ್ ಹೋಗಿಬಿಟ್ಟಿದ್ದು ನಿಮಗೆ ಗೊತ್ತಿತ್ತ? “
“ಹೂಂ. ನನ್ನ ನಂಬರ್ ಕೊಟ್ಟಿದ್ದೆನಲ್ಲ? ಅದಕ್ಕೆ ಆಸ್ಪತ್ರೆಯವರು ನನಗೇ ಮೊದಲು ಕರೆ ಮಾಡಿದ್ದು. ನೀನು ಆಗ ವೆಂಟಿಲೇಟಾರ್ ಮೇಲಿದ್ದೆ. ಅದಕ್ಕೆ ತಿಳಿಸಲಿಲ್ಲ. ಸ್ವಲ್ಪ ಹುಷಾರಾಗಲಿ ತಿಳಿಸೋಣ ಅಂದುಕೊಂಡಿದ್ದೆ.. ಆದರೆ..” ಆ ಕಡೆ ಮೈಥಿಲಿ ಅಳುವುದು ಕೇಳಿಸಿತು. “ ಸಮಾಧಾನ ಮಾಡ್ಕೊ ಮೈಥಿಲಿ. ಆಸ್ಪತ್ರೆಯವರು ಬಹಳ ಪ್ರಯತ್ನ ಪಟ್ಟರಂತೆ ಮಧುಸೂದನ್ ಶರೀರ ಸರಿಯಾಗಿ ಸ್ಪಂದಿಸಲೇ ಇಲ್ಲ.. ಅದೇನೋ ಹೆಸರು ಹೇಳಿದರು..”
“ಸೈಟೋಕೈನ್ ಸ್ಟಾರ್ಮ್ ಅಂತೆ.ಯಾರಿಗೂ ಮುಖ ನೋಡಲು ಆಗಲೇ ಇಲ್ಲ. ಮಕ್ಕಳಿಗೆ ಏನು ಹೇಳಲಿ?” ಬಿಕ್ಕಿ ಬಿಕ್ಕಿ ಅತ್ತಳು
“ ದೊಡ್ಡದಿಕ್ಕೆ ಗೊತ್ತಾಗಿದೆ. ಚಿಕ್ಕದಿಕ್ಕೆ ನಾನು ನೀವು ಬೇಗ ಬರುತ್ತೀರ ಅನ್ನುವುದನ್ನೇ ಒತ್ತುಕೊಡುತ್ತಾ ಹೇಳಿದ್ದೇನೆ. ಫೋನ್ಮಾಡಿದಾಗ ಅವರುಗಳ ಮುಂದೆ ನಿಮಗೆ ಹೇಳಬಾರದು ಅಂತ ಸುಮ್ಮನಿದ್ದೆ. ಆದರೆ ಹೇಗೋ ಗೊತ್ತಾಗಿದೆ? ”
“ಎರಡು ದಿನದ ಹಿಂದೆ ಅವರು ಕೆಲಸಮಾಡುತ್ತಿದ್ದ ಸಂಸ್ಥೆಯಿಂದ ಸಂತಾಪಸೂಚಕ ಈ-ಮೇಲ್ ಬಂತು.”
“ನೀನೊಬ್ಬಳೆ ಹುಷಾರಿಲ್ಲದಿದ್ದರೂ ಎಷ್ಟು ಧೈರ್ಯವಾಗಿ ಎದುರಿಸಿತ್ತಿದ್ದೀಯ ಮೈಥಿಲಿ! ಹ್ಯಾ ಟ್ಸ್ ಆಫ್ !ಮನೆ ಕಡೆ ಚಿಂತೆ ಮಾಡಬೇಡ. ಮಕ್ಕಳು ನನಗೆ ಚೆನ್ನಾಗಿ ಒಗ್ಗಿದ್ದಾರೆ.”
“ ತುಂಬ ಥ್ಯಾಂಕ್ಸ್ ಆಂಟಿ. ಯಾವ ಜನ್ಮದ ಪುಣ್ಯಯವೋ ನೀವು ನಮಗೆ ಸಿಕ್ಕಿದ್ದೀರ!” ಎರಡು ತಿಂಗಳು ಹಿಂದೆ ಗಂಡನಿಗೆ, ‘ಮುದುಕಿ ಕಾಟ ತುಂಬಾ ಆಯ್ತು. ನಾವು ಈ ಫ್ಲಾಟ್ ಮಾರಿ ಬೇರೆ ಕಡೆ ತೊಗೊಳೋಣ “ ಅಂತ ಗಂಡನಿಗೆ ದುಂಬಾಲು ಬಿದ್ದಿದ್ದನ್ನು ನೆನಪಿಸಿಕೊಂಡು ಮತ್ತೆ ಕಣ್ಣೀರಿಟ್ಟಳು.
“ಛೇ! ಮೈಥಿಲಿ . ಇಂತಹ ಸಮಯದಲ್ಲಿ ನಾನು ಒಂದು ಸಣ್ಣ ಸಹಾಯಾನೂ ಮಾಡದೆ ಇರುವಷ್ಟು ಕೆಟ್ಟವಳಲ್ಲ ನಾನು. ನೀನು ಇಲ್ಲಿಯ ಯೋಚನೆ ಬಿಡು. ಮನೆಗೆ ಕಳುಹಿಸಿದ ಮೇಲೆಯೂ ಹತ್ತು ಹನ್ನೆರಡು ದಿವಸ ಕ್ವಾರಂಟೀನ್ ಇರತ್ತೆ. ರೆಸ್ಟ್ ತೊಗೋ. ಮಕ್ಕಳು ನಮ್ಮ ಮನೆಯಲ್ಲಿ ಆರಾಮಾಗಿ ಇದ್ದಾರೆ!!”
“ಸರಿ. ತುಂಬ ಲೇಟಾಯ್ತು. ಮಲ್ಕೋಳಿ ಆಂಟಿ.”
“ಮೈಥಿಲಿ? ಅಮ್ಮ ಅಂತೀಯಾ? ನನಗೆ ಹಣ್ಣು ಮಕ್ಕಳಿಲ್ಲ!”
“ಗುಡ್ ನೈಟ್ ಅಮ್ಮ!”