Click here to Download MyLang App

ಮೂಲಾ ನಕ್ಷತ್ರ - ಬರೆದವರು : ಮೇಘನಾ ಕಾನೇಟ್ಕರ್ | ಸಾಮಾಜಿಕ

"ಆಚಾರ್ರ ಇಕಿನ ಕುಂಡಲಿ ನೋಡಿ ಈ ಜನುಮದಾಗ ಲಗ್ನ ಆಗ್ತದಿಲ್ಲೊ ಹೇಳಿ ಬಿಡ್ರಲಾ..." ಮಗಳು ಸಂಗೀತಾಳ ಕುಂಡಲಿಯನ್ನು ಹಣಮಪ್ಪನ ಗುಡಿ ಅರ್ಚಕ ಮಳಗಿ ಆಚಾರ್ಯರ ಎದುರು ಇಡುತ್ತಾ ಅಸಹಾಯಕಳಾಗಿ ನುಡಿದಳು ವತ್ಸಲಾಬಾಯಿ. ವಯಸ್ಸು ಇಪ್ಪತ್ತೇಳು ದಾಟುತ್ತಿತ್ತು ಆದರೂ ಸಂಗೀತಾಳಿಗೆ ಕಂಕಣಭಾಗ್ಯ ಒಲಿದಿರಲಿಲ್ಲ. ಮೂಲಾ ನಕ್ಷತ್ರದಲ್ಲಿ ಹುಟ್ಟಿದ ಹೆಣ್ಣು ಮಾವನಿಲ್ಲದ ಮನೆಗೆ ಸೊಸೆಯಾಗಿ ಹೋಗಬೇಕು. ಒಂದು ಪಕ್ಷ ಜಾತಕದಲ್ಲಿನ ಹಕೀಕತ್ತು ಮುಚ್ಚಿಟ್ಟು ಮದುವೆ ಮಾಡಿದರೆ ಮೂಲಾ ನಕ್ಷತ್ರದ ಸೊಸೆ ಕಾಲಿಟ್ಟ ವರುಷದೊಳಗೆ ಮಾವನಿಗೆ ಜೀವ ಕಂಟಕ ಎದುರಾಗುತ್ತದೆ.

ಸದಲಗಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹತ್ತನೇ ತರಗತಿಯವರಗೆ ಓದಿದ್ದ ಸಂಗೀತಾ ಮುಂದೆ ಓದಲು ಮನೆಯವರ ಅನುಮತಿ ಇಲ್ಲದ ಕಾರಣ ಓದನ್ನು ಅಲ್ಲಿಗೆ ಮೊಟಕುಗೊಳಿಸಿದ್ದಳು. ವತ್ಸಲಾಬಾಯಿ ತನ್ನ ಮಗಳಿಗೆ ಅಡುಗೆ ಕಲಿಸಿದ್ದರೆ; ಚಿಗವ್ವ ಕಮಲಾಬಾಯಿ ಕಸೂತಿ ಮತ್ತು ಹೊಲಿಗೆ ಕಲಿಸಿದ್ದಳು. ಅಜ್ಜಿ ಸಕ್ಕೂಬಾಯಿ ಹತ್ತಿ ಬತ್ತಿ ಮಾಡಲು, ದೇವರನಾಮ ಹಾಡಲು ಕಲಿಸಿದ್ದರು. ಒಟ್ಟಾರೆ ಮನೆಯಲ್ಲಿರುವ ಹೆಣ್ಣುಮಕ್ಕಳೆಲ್ಲ ಸಂಗೀತಾಳನ್ನು ಈಗಿಂದಲೇ ಮದುವೆಗೆ ತಯಾರಿ ಮಾಡುತ್ತಿದ್ದರೆ; ಅವಳ ಅಪ್ಪ ಶ್ಯಾಮರಾವ್, ಚಿಕ್ಕಪ್ಪ ಶ್ರೀನಿವಾಸ ತಮ್ಮ ಸ್ನೇಹಿತರ, ಪರಿಚಯಸ್ಥರ ವಲಯದಲ್ಲಿ ಅವಳಿಗೆ ಅನುರೂಪನಾದ ವರನನ್ನು ಹುಡುಕುವ ಜಾರಿಯಲ್ಲಿದ್ದರು. ಆದರೂ ಹನ್ನೊಂದು ವರ್ಷ ಅಲೆಯುವುದು ತಪ್ಪಲಿಲ್ಲ.

ಸಂಗೀತಾ ಚಿಕ್ಕಂದಿನಿಂದಲೂ ಕಲಿಕೆಯಲ್ಲಿ ಜಾಣೆ, ಚುರುಕು ಆದರೆ ಸ್ವಭಾವದಲ್ಲಿ ಸ್ವಲ್ಪ ಮೊಂಡು, ಹಠಮಾರಿಯೂ. ವತ್ಸಲಾಬಾಯಿಗೆ ಒಂದು ಕಡೆಯಿಂದ ತನ್ನ ಏಕೈಕ ಸುಪುತ್ರಿ ಮೂಲಾ ನಕ್ಷತ್ರದಲ್ಲಿ ಹುಟ್ಟಿದ್ದು ಶಾಪದಂತೆ ಕಾಡಿದರೆ, ಮತ್ತೊಂದು ಕಡೆ ಹೆಗಲೆತ್ತರಕೆ ಬೆಳೆದು ನಿಂತರೂ ದಾರಿಗೆ ಬರದ ಅವಳ ಹಠಮಾರಿ ಸ್ವಭಾವ ಚಿಂತೆಗೀಡು ಮಾಡಿತ್ತು. ಹೀಗೆ ಒಟ್ಟಾರೆ ಮಗಳ ಮದುವೆ ಒಂದು ಸವಾಲಾಗಿತ್ತು.
* * * * *
ದಿವಾಕರನಿಗೆ ಬೇಸಾಯದ ಮೇಲೆ ಬಹಳವಾಗಿ ಆಸಕ್ತಿ ಹೊಂದಿದ್ದ ಕಾರಣ ಜಮಖಂಡಿಯಲ್ಲಿ ಪಿಯುಸಿ ಮುಗಿಸಿದವನೇ ಧಾರವಾಡದ ಕೃಷಿ ವಿಶ್ವ ವಿದ್ಯಾಲಯದಲ್ಲಿ ಡಿಗ್ರಿ ಮಾಡಿಕೊಂಡಿದ್ದ. ಓದು ಮುಗಿದ ನಂತರ ವ್ಯಾವಹಾರಿಕ ಅನುಭವಕ್ಕಾಗಿ ಹುಬ್ಬಳ್ಳಿಯ ಅಗ್ರೊ ಇಂಡಸ್ಟ್ರಿಯಲ್ಲಿ ಎರಡು ವರ್ಷ ಕೆಲಸ ಮಾಡಿ ಪುನಃ ಜಮಖಂಡಿಗೆ ಬಂದು ಬರಡುಬಿದ್ದ ತಂದೆಯ ಜಮೀನನ್ನು ಅಭಿವೃದ್ಧಿಗೊಳಿಸುವತ್ತ ಗಮನ ಹರಿಸಿದ್ದ. ವಯಸ್ಸು ಮೂವತ್ತೊಂಭತ್ತಾದರೂ ದಿವಾಕರನಿಗೆ ಕಲ್ಯಾಣವಾಗಿರಲಿಲ್ಲ. ಕುಂಡಲಿ ಕೇಳಿ ಬಂದ ನೂರಕ್ಕೂ ಹೆಚ್ಚು ಸಂಬಂಧಗಳು ವರ ಹಳ್ಳಿಯಲ್ಲಿರುವನು, ಬರಡು ಭೂಮಿಯಲ್ಲಿ ಬೆಳೆ ತೆಗೆಯುವ ತುಘಲಕ್ ಕನಸು ಕಾಣುವನು ಎಂಬ ಪಿಳ್ಳೆನೆಪವೊಡ್ಡಿ ಫೋನ್ ಮಾಡಿ ತಿಳಿಸುತ್ತೇವೆ ಎಂದು ಹೋದವರು ಗಾಯಬ್ ಆಗುತ್ತಿದ್ದರು.

ಕುಳಿತು ತಿನ್ನುವಷ್ಟು ಆಸ್ತಿ ಇಲ್ಲದಿದ್ದರೂ ದಿವಾಕರನಿಗೇನು ಹಣಕಾಸಿನ ತೊಂದರೆ ಅಂತೂ ಇರಲಿಲ್ಲ. ಮನೆಯಲ್ಲಿ ತಾಯಿ ಮಗ ಇಬ್ಬರೇ ಇರುವುದು. ಮಾಲತಿ ಇಪ್ಪತ್ತು ವರ್ಷದಿಂದ ಇವರ ಮನೆಯಲ್ಲಿ ಅಡುಗೆ ಕೆಲಸಕ್ಕೆ ಇರುವವಳು. ಅದಕ್ಕೂ ಮುಂಚಿನಿಂದಲೂ ಜಮಖಂಡಿಯಲ್ಲಿ ಮನೆಮನೆಗಳಲ್ಲಿ ಅಡುಗೆ ಕೆಲಸ ಮಾಡಿಕೊಂಡೇ ಇದ್ದವಳು. ಗಂಡ ತೀರಿಕೊಂಡ ಬಳಿಕ ಕೌಶಲ್ಯಾಬಾಯಿ ಕುಲಕರ್ಣಿಯವರ ಮನೆಯಲ್ಲಿ ಖಾಯಂ ಅಡುಗೆಯವಳಾಗಿ ಉಳಿದು ಬಿಟ್ಟಳು. ಅವಳ ಮಗ ಪ್ರಭಾಕರ ದಿವಾಕರನ ಓರಗೆಯವನೆ. ಗುಣದಲ್ಲಿ ಇಬ್ಬರೂ ರಾಮ ಲಕ್ಷ್ಮಣರಂತಿದ್ದಾರೆ.

ಹತ್ತನೇ ತರಗತಿಯವರೆಗೂ ದಿವಾಕರನೊಟ್ಟಿಗೆ ಒಂದೇ ಶಾಲೆಯಲ್ಲಿ ಕಲಿತ ಪ್ರಭಾಕರ ಮುಂದೆ ಜಮಖಂಡಿಯ ಪಾಲಿಟೆಕ್ನಿಕ್ ಕಾಲೇಜ್ ನಲ್ಲಿ ಡಿಪ್ಲೋಮಾ ಕಂಪ್ಯೂಟರ್ ಸೈನ್ಸ್ ಓದಿಕೊಂಡು, ಜೊತೆ ಜೊತೆಗೆ ಅಗತ್ಯವಿರುವ ಒಂದಷ್ಟು ಕಂಪ್ಯೂಟರ್ ಕೋರ್ಸ್ ಗಳನ್ನೂ ಮಾಡಿಕೊಂಡಿದ್ದ. ಬಾಗಲಕೋಟೆಯಲ್ಲಿ ಸಣ್ಣಪುಟ್ಟ ಪ್ರೈವೇಟ್ ಕಂಪನಿಗಳಲ್ಲಿ ಐದಾರು ವರ್ಷ ಡೇಟಾ ಆಪರೇಟರ್ ಆಗಿ ಕೆಲಸ ಮಾಡಿದ ಅನುಭವದೊಂದಿಗೆ ಜಮಖಂಡಿಗೆ ಮರಳಿ ತನ್ನದೇ ಸ್ವಂತ ಕಂಪ್ಯೂಟರ್ ಕೋಚಿಂಗ್ ಸೆಂಟರ್ ಮತ್ತು ಸೈಬರ್ ಕೆಫೆ ತೆರೆದಿದ್ದ.
* * * * *
"ಅಯ್ಯ ವತ್ಸಲಾಬಾಯಾರ ಜನುಮದಾಗ ಅಂತೆಲ್ಲಾ ಯಾಕಂತೀರಿ? ಯಾರಂದಾರು ನಿಮ್ ಮಗಳಿಗೆ ಲಗ್ನ ಆಗೂದಿಲ್ಲಂತ?" ಮಳಗಿ ಆಚಾರ್ಯರು ಹೇಳಿದ ಮಾತು ಕೇಳಿ ವತ್ಸಲಾಬಾಯಿಗೆ ಕೊಂಚ ನಿರಾಳವೆನಿಸಿತು. "ಇಗಾ ನೋಡ್ರಿ ಇದು ಜಮಖಂಡಿ ಪುರೋಹಿತ ಕುಲಕರ್ಣಿಯವರ ಒಬ್ಬನೇ ಮಗ ದಿವಾಕರನ ಫೋಟೋ ಮತ್ತು ಕುಂಡಲಿ. ಇದರ ಜೋಡಿ ನಿಮ್ ಮಗಳ ಕುಂಡಲಿ ಕಲಿಸಿ ನೋಡೀನಿ. ಬರೊಬ್ಬರಿ ಇಪ್ಪತ್ಮೂರು ಗುಣ ಕಲಿತಾವ. ಹೆಂಗೂ ಹುಡುಗನಿಗೆ ಅಪ್ಪ ಇಲ್ಲ. ವಿಚಾರ ಮಾಡ್ರಿ." ಇನ್ನೂ ಏನೊ ಹೇಳುವವರಿದ್ದರು ಅಷ್ಟರಲ್ಲೆ ಮಧ್ಯ ಬಾಯಿ ಹಾಕಿದ ವತ್ಸಲಾ "ಆಚಾರ್ರ ನಿಮ್ ಬಾಯಿಗ್ ಸಕ್ಕರಿ ಬೀಳಲಿ ಎಂಥಾ ಛೊಲೊ ಸುದ್ದಿ ಹೇಳಿದ್ರಿ ನೀವು. ಸದ್ಯಕ್ಕ ಇಷ್ಟು ಸಾಕು ಬಿಡ್ರಿ ನಾ ಮನಿಗ್ಹೋಗಿ ಅತ್ಯಾರಿಗೆ ನಮ್ಮನಿವ್ರಿಗೆ ತಿಳಸ್ತೇನಿ. ಹ್ಞ ಮತ್ತ ನೀವೂನು ಹುಡುಗನ ಮನ್ಯಾಗ ನಮಗ್ ಒಪ್ಪಿಗಿ ಅದ ಅಂತ ಹೇಳ್ಬಿಡ್ರಿ."

ಹೆಂಗಾದರೂ ಸರಿ ತನ್ನ ಕೈ ಕಾಲು ಗಟ್ಟಿ ಇರುವುದರೊಳಗೆ ಮಗಳ ಮದುವೆ ಮಾಡಿಯೇ ತೀರುವೆನೆಂಬ ಆಸೆಗೆ ರೆಕ್ಕೆಬಂದಂತಾಗಿ ಜಿಂಕೆಯಂತೆ ಜಿಗಿಯುತ್ತ ಓಡುತ್ತ ಮನೆಗೆ ಹೋದವಳು, ಮೊದಲು ಎಲ್ಲರ ಬಾಯಿಗೆ ಕೊಬ್ಬರಿ ಸಕ್ಕರೆ ಹಾಕಿ ನಂತರ ಮಗಳಿಗೆ ವರ ಗೊತ್ತಾದ ಸುದ್ದಿ ಹೇಳಿ ನಿಟ್ಟುಸಿರಿಟ್ಟಳು ವತ್ಸಲಾ. ತನಗಾದ ಸಂತೋಷದಲ್ಲಿ ಹುಡುಗನ ವಯಸ್ಸು ತಿಳಿದುಕೊಳ್ಳುವ ಆತುರ ತೋರಲಿಲ್ಲ ವತ್ಸಲಾ. ಸಂಗೀತಾ ತಾನು ಮದುವೆ ಆಗುವ ಹುಡುಗ ಕೊಲ್ಹಾಪುರದಲ್ಲಿ ನೆಲೆಸಿರಬೇಕೆಂದು ಆಸೆ ಪಟ್ಟಿದ್ದಳು. ಆದರೆ ಹನ್ನೊಂದು ವರ್ಷ ಕಾದ ಬಳಿಕ ಈಗಲಾದರೂ ತನಗೆ ಕಂಕಣ ಭಾಗ್ಯ ಒಲಿಯಿತಲ್ಲ ಎಂದು ಸಂತೋಷವಿಲ್ಲದಿದ್ದರೂ ಸಮಾಧಾನ ಪಟ್ಟಿದ್ದಳು.
* * * * *
ದಿವಾಕರನನ್ನು ಖಾಸ ಅಣ್ಣನಂತೆ ಕಾಣುತ್ತಿದ್ದ ಪ್ರಭಾಕರ ಅವನ ಮದುವೆ ಆಗುವವರೆಗೆ ತಾನೂ ಆಗಲಾರೆ ಎಂದು ಗೆರೆ ಎಳೆದು ಕೂತಿದ್ದ. ಈಗ ಸದಲಗಾದಿಂದ ಬಂದ ಮಳಗಿ ಆಚಾರ್ಯರ ಸುದ್ದಿ ಕೇಳಿ ಖುಷಿಯಾಗಿ ವರನಿಗಿಂತ ಹೆಚ್ಚು ಇವನೇ ಕುಣಿದು ಕುಪ್ಪಳಿಸಿದ್ದ. ಕೌಶಲ್ಯಾಬಾಯಿಗೂ ಪ್ರಭಾಕರನ ಮೇಲೆ ಭಾರೀ ಅಚ್ಛೆ. ಅಂತೂ ಇಷ್ಟು ವರ್ಷಗಳ ನಂತರ ಮಗನಿಗೆ ಕಲ್ಯಾಣ ಆಗುತ್ತಿರುವ ಸಂತೋಷಕ್ಕೆ ಮದುವೆಯ ಪೂರ್ತಿ ಖರ್ಚನ್ನು ತಾವೇ ಭರಿಸುವುದಾಗಿ ತಿಳಿಸಿದ್ದರು. ದಿವಾಕರನಿಗೆ ತನ್ನ ಸಂಗಾತಿಯಾಗುವವಳ ಕುರಿತು ವಿಶೇಷವಾದ ಕನಸುಗಳೇನು ಇರಲಿಲ್ಲ. ಹಾಗಾಗಿ ಹುಡುಗಿಯ ಫೋಟೋ ನೋಡದೆ ಮದುವೆಗೆ ಒಪ್ಪಿಕೊಂಡಿದ್ದ.

ಸದಲಗಾ ದಲ್ಲಿ ಮದುವೆ ಮಾಡುವುದಾಗಿ ನಿಶ್ಚಯವಾಯ್ತು. ನೋಡ ನೋಡುತ್ತಲೇ ಮದುವೆಯೂ ಆಗಿ ಹೋಯ್ತು. ಮರುದಿವಸ ಮಗಳನ್ನು ಮನೆ ತುಂಬಿಸಲು ಸದಲಗಾ ದಿಂದ ಜಮಖಂಡಿಗೆ ಬಂದ ಶ್ಯಾಮರಾವ್ ದೇಶಪಾಂಡೆಯ ಕುಟುಂಬ ಬೀಗರ ಔತಣ ಮುಗಿಸಿ ಊರಿಗೆ ಮರಳಿದರು. ದಿವಾಕರ ಸಂಗೀತಾಳ ಸೌಂದರ್ಯಕ್ಕೆ ಮಾರು ಹೋಗಿದ್ದ. ಸಂಗೀತಾಳಿಗೆ ಅತ್ತೆ ಮನೆಯಲ್ಲಿ ಹೇಳಿಕೊಳ್ಳುವಷ್ಟೇನು ಕೆಲಸವಿರಲಿಲ್ಲ. ಅಡುಗೆಗೆ ಮಾಲತಿ ಇದ್ದರೆ, ಕಸ, ಪರಸಿ, ಬಟ್ಟೆ, ಭಾಂಡಿಗೆ ರೇಣವ್ವ ಇದ್ದಳು. ಹಳೆಯ ಹೆಂಚಿನ ಮನೆಯಾದರೂ ಸೌಕರ್ಯಗಳಿಗೇನು ಕೊರತೆಯಿರಲಿಲ್ಲ. ಆದರೂ ಸಂಗೀತಾಳಿಗೆ ಮನೆಯ ವಾತಾವರಣ ಅಷ್ಟಾಗಿ ಹಿಡಿಸಲಿಲ್ಲ.

ಕೌಶಲ್ಯಾಬಾಯಿ ದಿವಾಕರನ ಮದುವೆಯಲ್ಲಿ ಸಂಗೀತಾಳ ಚಿಕ್ಕಪ್ಪ ಶ್ರೀನಿವಾಸನ ಮಗಳು ಸವಿತಾಳ ಬಗ್ಗೆ ಸರ್ವೇ ಮಾಡಿದ್ದರು. ಆಗಲೇ ಇವಳು ಪ್ರಭಾಕರನಿಗೆ ತಕ್ಕ ಹುಡುಗಿ ಎಂದು ಲೆಕ್ಕಾಚಾರ ಹಾಕಿಟ್ಟಿದ್ದರು. ಮಾಲತಿಗೆ ಹೊರತುಪಡಿಸಿ ಬೇರೆ ಯಾರೆದುರೂ ಈ ವಿಷಯ ಪ್ರಸ್ತಾಪಿಸಿರಲಿಲ್ಲ. ಅವರ ಮನೆಯ ಸಂಪ್ರದಾಯದಂತೆ ಹೊಸದಾಗಿ ಮದುವೆಯಾದ ಜೋಡಿಗಳು ತಮ್ಮ ಕುಲದೇವರು ಯಲಗೂರಿನ ಹಣಮಪ್ಪನ ಗುಡಿಗೆ ಹೋಗಿ ಆಶೀರ್ವಾದ ಪಡೆದು ಬರುವುದಾಗಿ ದಿವಾಕರ-ಸಂಗೀತಾ ಹೊರಟಿದ್ದರು. ಸೊಸೆ ಸಂಗೀತಾಳಿಗೆ ಪ್ರಭಾಕರನ ಗುಣ-ಸ್ವಭಾವ ಹಿಡಿಸಿ ತಾನೇ ಖುದ್ದು ತನ್ನ ಚಿಕ್ಕಪ್ಪನಿಗೆ ಶಿಫಾರಸ್ಸು ಮಾಡಬಹುದೆಂಬ ದೂರಾಲೋಚನೆ ಹೊಂದಿದ್ದ ಕೌಶಲ್ಯಾ ಪ್ರಭಾಕರನನ್ನೂ ತಮ್ಮ ಮಗನಂತೆ ಕಾಣುವುದರಿಂದ ಹೊಸ ಜೋಡಿಯೊಂದಿಗೆ ಇವನನ್ನೂ ಜೊತೆ ಮಾಡಿ ಕಳುಹಿಸಲು ತೀರ್ಮಾನಿಸಿದ್ದರು.

"ಏ ತೆಗಿರಿ ಆಯಿ ಸಾಹೇಬ್ರ 'ಶಿವನ ಪೂಜ್ಯಾಗ ಕರಡಿ ಬಿಟ್ಟಂಗ' ನಾ ಯಾಕ ಹೋಗ್ಬೇಕು ಮೂರನೇವ್ರಂಗ?!" ಪ್ರಭಾಕರ ತನ್ನ ಅಸಮಾಧಾನ ಹೊರಗೆ ಹಾಕಿದ. ಸಂಗೀತಾಳಿಗೂ ತಮ್ಮಿಬ್ಬರ ಜೊತೆ ಇವನು ಬರುವುದು ಇಷ್ಟವಿರಲಿಲ್ಲ. ಆದರೂ ವಾದದಲ್ಲಿ ಸೋತ ಪ್ರಭಾಕರ ಅವರೊಂದಿಗೆ ಹೋಗಲು ಒಪ್ಪಿಕೊಳ್ಳಲೇಬೇಕಾಯ್ತು. ಅವರ ಮನೆಯಲ್ಲಿ ಹೊಸದಾಗಿ ಸೇರಿದ ಸೊಸೆ ಮೊದಲ ಬಾರಿ ಅಡುಗೆ ಮಾಡುವ ಮುನ್ನ ಒಲೆ ಪೂಜೆ ಮಾಡಿ ನಂತರ ಕೆಲಸ ಆರಂಭಿಸುವ ಸಂಪ್ರದಾಯವಿದೆ. ಅದರಂತೆ ಆ ದಿನ ಸಂಗೀತಾ, ಮಾಲತಿಯ ಸಹಾಯದಿಂದ ಶೇಂಗಾ ಹೋಳ್ಗಿ, ಚಪಾತಿ, ಮುದ್ದಿ ಪಲ್ಯ, ಪಚ್ಚಡಿ, ಅನ್ನ, ತೊವ್ವಿ ತಯಾರಿಸಿದ್ದಳು. ದಿವಾಕರ ಒಬ್ಬನೇ ಊಟಕ್ಕೆ ಕುಳಿತದ್ದು ಕಂಡು ಕೌಶಲ್ಯಾ ಪ್ರಭಾಕರನನ್ನೂ ಊಟಕ್ಕೆ ಆಹ್ವಾನಿಸಿದರು. ಈ ಬಾರಿ ಸಂಗೀತಾಳಿಗೆ ಅತ್ತೆಯ ವರ್ತನೆಯಿಂದ ಕೋಪವುಕ್ಕಿ ಬಂದರೂ ತೋರಗೊಡಲಿಲ್ಲ.
* * * * *
ದಿವಾಕರನ ಮದುವೆಯಾಗಿ ಹತ್ತತ್ರ ವರುಷ ತುಂಬುವುದರಲ್ಲಿತ್ತು. ತಾಯಿ ಮಗ ಇಬ್ಬರೂ ಹೆಜ್ಜೆ ಹೆಜ್ಜೆಗೂ ಪ್ರಭಾಕರನನ್ನು ಆದರಿಸುವುದ ಕಂಡು ಸಂಗೀತಾಳಿಗೆ ರೋಸಿ ಹೋಗಿತ್ತು. ಸಿಟ್ಟು, ಆಕ್ರೋಶದ ಬೆಂಕಿ ಒಳಗೊಳಗೆ ಹೊಗೆಯಾಡುತ್ತಲೇ ಇತ್ತು. ಹೊರಗೆಡುವಲು ಅವಕಾಶವಿಲ್ಲದೆ ಸಂಗೀತಾ ಅವನ ಮೇಲೆ ಸಿಡಿಸಿಡಿ ಮಾಡ ಹತ್ತಿದಳು. ಸಂಗೀತಾ ಮೊದಲೇ ಸ್ವಭಾವತಃ ಹಠಮಾರಿ. ಸೂಕ್ಷ್ಮ ಅರಿತ ಕೌಶಲ್ಯಾ ಸೊಸೆ ಇಂದಲ್ಲ ನಾಳೆ ಸುಧಾರಿಸಬಹುದು ಎಂದು ಸಹಿಸುತ್ತಲೇ ಬಂದರು. ಆದರೆ ಮಿತಿ ಮೀರಿದ ಅವಳ ನಡೆ ಕೊನೆಗೂ ಅವರ ಸಹನೆ ಕೆಡಿಸಿತು.

"ಯಾಕವಾ ಸಂಗೀತಾ 'ಬರಬರುತಾ ರಾಯರ ಕುದುರಿ ಕತ್ತಿ ಆಗ್ಲಿಕತ್ತದಲಾ' ಏನಾಗ್ಯದ ನಿಂಗ ಯಾಕಿಂಗ ಮಾಡ್ಲಿಕತ್ತಿ?" ಅತ್ತೆ ಹೀಗೆ ಕೇಳಬಹುದೆಂದು ಮೊದಲೇ ನಿರೀಕ್ಷಿಸಿದ್ದ ಸಂಗೀತಾ "ನಾ ಏನ್ ಮಾಡಿನ್ರಿ ಮಾಮಿ? ನನ್ಯಾಕ ನುಂಗು ಹಾಂಗ ನೋಡ್ತಿರಿ??" ಅವಳ ಉದ್ಧಟತನಕ್ಕೆ ಉಗ್ರವಾದ ಕೌಶಲ್ಯಾ "ಅತ್ತಿ ಅದೀನಿ ನಾ..ನನಗ ಜಬರ್ದಸ್ತಿ ಮಾಡ್ತಿ ನೀನು? ನನಗೇನು ಗೊತ್ತಾಗುದಿಲ್ಲ ಅಂದಿ? ನನಗೂಡ ಲಕ್ಷಿ ಇಟ್ಗೊಂಡು ಮಾತಾಡು" ಅವರ ಮಾತು ಮುಗಿಯುವ ಮುಂಚೆಯೆ ಸಂಗೀತಾ ಬೆವೆತು ಹೋಗಿದ್ದಳು. ಅಷ್ಟಕ್ಕೇ ಸೋಲೊಪ್ಪಿಕೊಳ್ಳದ ಅವಳು ಅತ್ತೆಯೊಂದಿಗೆ ವಾದಕ್ಕಿಳಿದಳು. ಗದ್ದಲ ಕೇಳಿ ಗಾಬರಿಗೊಂಡು ಹೊರಗೋಡಿ ಬಂದ ಮಾಲತಿ ಮೂಕ ಪ್ರೇಕ್ಷಕಳಂತೆ ನಿಂತಿದ್ದಳು. ಅದೇ ಸಮಯಕ್ಕೆ ಅಲ್ಲಿಗೆ ಬಂದ ಅಣ್ಣ-ತಮ್ಮ ತಾರಕಕ್ಕೇರಿದ ಅತ್ತೆ ಸೊಸೆಯ ವಾದವನ್ನು ಕಂಡು ದಂಗಾದರು.

"ಸಾಕು ಮಾಡ್ರಿ ಮಾಮಿ..ನನಗೂ ಸಾಕಾಗ್ಯದ ಹಿಂಗ ಸಂಜೀ ಮಟ ಎಳದಾಡಕೊತ ನಿಲ್ಲಾಕ ನನಗೂ ಇಚ್ಛಾ ಇಲ್ಲ. ನಾ ನೇರವಾಗಿ ವಿಷಯಕ್ಕ ಬರ್ತೀನಿ. ಹೇಳ್ರಿ ನಿಮಗ ಇವ್ರೊಬ್ರ ಮಗಾ ಹೌದಿಲ್ಲೊ?" ಸಂಗೀತಾ ಪಟ್ಟು ಬಿಡದಂತೆ ಗಟ್ಟಿಯೂರಿ ನಿಂತಳು. ಇದನ್ನೆಲ್ಲಾ ಕೌಶಲ್ಯಾ ಮೊದಲೇ ಅಂದಾಜು ಮಾಡಿದ್ದರೂ, ಇಂಥ ಮಾತು ಕೇಳುವೆನೆಂಬ ಖಾತ್ರಿ ಇರಲಿಲ್ಲ. ಈಗ ಸತ್ಯ ಹೇಳದೆ ಬೇರೆ ದಾರಿ ಕಾಣದ ಕೌಶಲ್ಯಾ ಅಸಹಾಯಕಳಾಗಿ "ಇಲ್ಲ..ಇಲ್ಲಾ ಇಬ್ಬರೂ ನನ್ನ ಹೊಟ್ಯಾಗ ಹುಟ್ಟಿದ ಮಕ್ಕಳಲ್ಲ. ಏನಂದಿ ನೀ ಆಗಾಳೆ..'ಮೂಲಾ ನಕ್ಷತ್ರದಾಗ ಹುಟ್ಟಿದ್ದಕ್ಕ ಇಂಥಾದ್ದೆಲ್ಲಾ ಅನುಭವಿಸಬೇಕು ಅಂತ ಮುಂಚೀನ ಗೊತ್ತಿದ್ರ ಲಗ್ನಾನ ಆಗ್ತಿದಿಲ್ಲಾ' ಅಂದಿ ಹೌದಿಲ್ಲೊ?!
ಲಕ್ಷಿ ಕೊಟ್ಟು ಕೇಳು..ನನ್ನ ಕುಂಡಲಿಯೊಳಗ ಕುಜದೋಷ ಇತ್ತು. ಕಟ್ಗೊಂಡ ಗಂಡ ವರುಷದಾಗ ಸಾಯ್ತಾನ ಅಂತ ನನ್ನ ಹಣೆಬರಹದಾಗಿತ್ತು. ಇವ್ರ ಕೂಡ ಲಗ್ನ ನಿಶ್ಚಯ ಆದಾಗ ಅರಳೀಮರದ ಜೋಡಿ ನನ್ನ ಲಗ್ನ ಶಾಸ್ತ್ರ ಮಾಡಿ ಆಮ್ಯಾಲ ನಂದು ಇವ್ರದ್ದು ಲಗ್ನ ಮಾಡಿದ್ರು.

ಆದ್ರ ಏನಾತ 'ಹಣಿಬಾರಕ್ಕ ಹೊಣಿ ಯಾರು' ಅಂದಂಗ ಐದು ವರ್ಷ ಸಂಸಾರ ಮಾಡಿದ್ರೂ ತಾಯಿ ಆಗೊ ಭಾಗ್ಯ ಪಡಕೊಂಡು ಬಂದಿರಲಿಲ್ಲ ನಾ. ಈಕಿ ಅದಾಳಲಾ ಮಾಲತಿ ಇಕಿಗೆ ಅವಳಿ ಗಂಡಸ ಮಕ್ಕಳು ಹುಟ್ಟಿದ್ವು. ನನ್ನ ಮಡ್ಲಾಗ ಒಬ್ಬಂವ ಮಗನ್ನ ಹಾಕಿ ಸಾವಿರ ಜನ್ಮದ ಪುಣ್ಯ ಕಟಗೊಂಡ್ಳು ಈ ಪುಣ್ಯಾತ್ಗಿತ್ತಿ" ಇಷ್ಟು ಹೇಳಿ ಮುಗಿಸುವ ಹೊತ್ತಿಗೆ ಗಂಟಲುಬ್ಬಿ ಬಂದಿತ್ತು ಆದರೂ ಮುಂದುವರಿಸಿದರು "ನೋಡು ಇಕಿನ ಒಂದ ಮಾತು ಹೇಳ್ತಿನಿ ನೆನಪಿನ್ಯಾಗ ಇಟ್ಗೊ ಈ ಕುಂಡಲಿ ಮಣ್ಣು-ಮಸಿದಿಂದೆಲ್ಲಾ ನಮಗ ಮೋಕ್ಷ ಸಿಕ್ಕೂದಿಲ್ಲ. ಏನಿದ್ರೂ ನಮ್ಮ ಗುಣ ನಡತಿದಿಂದಷ್ಟ ನಮ್ಮ ಬಾಳು ಹಸನಾಗ್ತದ." ಸೆರಗಿನಂಚಿನಿಂದ ಕಣ್ಣೀರು ಒರೆಸಿಕೊಳ್ಳುತ್ತ ವಾದಕ್ಕೆ ಪೂರ್ಣವಿರಾಮವಿತ್ತರು ಕೌಶಲ್ಯಾ.

ಇದನ್ನೆಲ್ಲಾ ಕೇಳುವ ಹೊತ್ತಿಗೆ ಸಂಗೀತಾಳಿಗ್ಯಾಕೊ ಸಂಕಟವಾಗಿ ಹೊಟ್ಟೆ ತೊಳೆಸಿದಂತೆನಿಸಿ ಹಿತ್ತಲಿಗೆ ಓಡಿದಳು. ಅವಳ "ವ್ಯಾಕ್ ವ್ಯಾಕ್" ಶಬ್ದ ಕೇಳಿ ಎಲ್ಲರೂ ಅಲ್ಲಿಗೆ ಬಂದರು. ಎಲ್ಲ ಮರೆತು ಅತ್ತೆಯ ಕಿವಿಯೊಳಗೆ ಏನೊ ಉಸುರಿ ಗಂಡನನ್ನು ನೋಡಿ ನಾಚಿಕೊಳ್ಳುತ್ತ ಹೋಗಿ ಖೋಲಿ ಸೇರಿದಳು ಸಂಗೀತಾ. ಅಂತೂ ಅವರ ಮನೆಯಲ್ಲಿ ಜೋಡು ತೊಟ್ಟಿಲು ಕಟ್ಟುವ ಸುಸಮಯ ಒದಗಿ ಬಂದಿತ್ತು.
-ಮೇಘನಾ ಕಾನೇಟ್ಕರ್