Click here to Download MyLang App

ಮುದ್ದಯ್ಯನ ದೀಪಾವಳಿ - ಬರೆದವರು : ಅಜಯ್ ಕುಮಾರ್ ಎಂ ಗುಂಬಳ್ಳಿ | ಸಾಮಾಜಿಕ


ಸಣ್ಣಪುಟ್ಟ ಹೈಕಳು ಪಟಾಕಿ, ಗನ್, ಹೂಕುಡಿಕೆ, ಭೂಚಕ್ರ, ಬಾನಬಿಲ್ಲು ಇಂತವುಗಳನ್ನು ಎರಡು ಮೂರು ದಿನಗಳಿಂದ ಬಳಸುತ್ತಿದ್ದರು. ತಾತನಿಗೆ ಕಿವಿ ಕೇಳದಿದ್ದರು ಪಟಾಕಿ ಸಿಡಿಸುವ ಹೈಕಳನ್ನು ಕಂಡರೆ ಉರಿದು ಬೀಳುತ್ತಿದ್ದ. ಅವರೆಡೆಗೆ ಬಿದುರು ದೊಣ್ಣೆ ಎಸೆದು ಆಕ್ರೋಶವನ್ನು ಹೊರಗೆಡುವುತ್ತ ‘ಥೂ ಬಡ್ಡೆತ್ತವ ಮಾಡೋಕೆ ಕ್ಯಾಮೆ ಇಲ್ವ’ ಎನ್ನುತ್ತಿದ್ದ. ಹೈಕಳ ಪರವಾಗಿ ನಿಂತವರಿಗೆ ಹೆಚ್ಚಿನ ಬೈಗುಳ ಮತ್ತು ಉಪದೇಶ ತಾತನಿಂದ ಫ್ರೀಯಾಗಿ ಸಿಗುತ್ತಿತ್ತು. ದೀಪದ ಬೆಳಕಿನಲ್ಲಿ ಹುಟ್ಟಿ ಬೆಳೆದಿದ್ದ ಗಟ್ಟಿಮುಟ್ಟು ಮನುಷ್ಯ ಇಂದಿಗೆ ಮುದುಕನಾಗಿ ಸಹಾಯಕ್ಕೆ ಕೋಲು ಇಟುಗೊಂಡಿದ್ದ.
ಮುಸ್ಸಂಜೆಗೆ ಗೌರಿಕಡ್ಡಿ ಹಚ್ಚಿದ ಸಿದ್ದಲಿಂಗ ಮೂಡ್ಲಾಗಿ ಕೈಮುಗಿದು ಮೊಮ್ಮಗನ ಕೈಗೆ ಕೊಟ್ಟು ಬೀದಿಗೆ ಇಳಿದ. ಅಕ್ಕಪಕ್ಕದವರು ಹಠ ಹಿಡಿದ ಹೈಕಳ ಕೈಗೆ ಗೌರಿಕಡ್ಡಿ ಹಿಡಿಸಿ ಕಸ್ಸಿಕೊಳ್ಳಲು ಕಳಿಸಿದರು. ಕುಣಿಯುತ್ತ, ನಲಿಯುತ್ತ ಒಂದು ಬಗೆಯ ಸಂತೋಷದಿಂದ ಮಕ್ಕಳು ಮುದ್ದಯ್ಯನ ಹಟ್ಟಿ ಬಾಗಿಲಿಗೆ ಬಂದರು. ಹೊರಗಿದ್ದ ಪುಟ್ನಂಜಿ ಹೈಕಳನ್ನು ತಾತನ ಕಣ್ಣಿಗೆ ಬೀಳದಂಗೆ ನಿಲ್ಲುವಂತೆ ಹೇಳಿ, ಪ್ರಸಾದನನ್ನು ಕಳಿಸಿದಳು. ಹೈಕಳಿದ್ದಲ್ಲಿಗೆ ಉರಿಯುತ್ತಿದ್ದ ಗೌರಿಕಡ್ಡಿ ತಂದು ಪ್ರಸಾದ ‘ನಮ್ದು ಚೆಂದಾಗಿ ಉರಿತ್ತ’ ಅಂದ ಉದ್ಗಾರದಿಂದ. ಜಗುಲಿ ಮೇಲೆ ಶಾಲು ಹೊದ್ದಿದ್ದ ತಾತ ತೂಕಡಿಸುತ್ತಿದ್ದ. ಅಲ್ಲಲ್ಲಿ ಗನ್‍ಗಳ ಶಬ್ದ ವಿಪರೀತವಾಗಿತ್ತು. ಹೆಂಗಸರು ಕಿಡಿಕಾಡಿದರೇ ಕೆಲವು ಗಂಡಸರು, ಯುವಕರು, ಪಟಾಕಿ-ಗನ್ ಹೊಡೆಯುವವರಿಗೆ ಪ್ರೋತ್ಸಾಹ ನೀಡುತ್ತಿದ್ದರು. ಎಲ್ಲೆಂದರಲ್ಲಿ ಬೆಳಕಿನೊಂದಿಗೆ ಶಬ್ದಮಾಲಿನ್ಯ ನಡೆಯುತ್ತಿತ್ತು. ಪ್ರಶ್ನಿಸಿದವರು ಹಬ್ಬದ ಸಡಗರವೆಂಬ ಸಾಮಾನ್ಯ ಉತ್ತರಕ್ಕೆ ಬಾಯಿ ಮುಚ್ಚಬೇಕಾಗಿತ್ತು.
ಹೊಂಚು ಹಾಕುವ ಬೆಕ್ಕಿನಂತೆ ಬಂದು ಪ್ರಮೋದ್ ದುಪ್ಪನೆ ಮಡಿಕೆ ಇಟ್ಟು ‘ಮಾವ ಊಟ ಆಯ್ತ’ ಎಂದು ಓಡಿದ. ಹಟ್ಟಿ ಬಾಗಲಲ್ಲಿ ಮಡಿಕೆ ಚೂರುಗಳು ಹರಡಿಕೊಂಡವು. ತಾತ ಎಚ್ಚರಗೊಂಡು ‘ಅದ್ಯಾವನುಡಾ’ ಅಂದು ಸಣ್ಣಗೆ ನಕ್ಕ. ಕೋಣೆಯೊಳಗಿದ್ದ ಪುಟ್ನಂಜಿ ನಗುತ್ತ ಹೊರಕ್ಕೆ ಬಂದವಳು ‘ಅದ್ಯಾವ ಸಂದೀಲಿ ಬಂದ ಆ ಗಂಡು’ ಎಂದು ಅಚ್ಚರಿಯಾಗಿ ಪ್ರಸಾದನ ಕೂಗಿದಳು. ಮಗಳು ಪವಿತ್ರ ‘ಯಾರವ್ವ ಮಡಿಕೆ ಹೊಡ್ದಿದ್ದು’ ಎಂದು ಕೇಳಿದಾಗ ನಗುತ್ತಲೇ ಪುಟ್ನಂಜಿ ‘ಸಿದ್ದಲಿಂಗು ಮೊಮ್ಮಗ’ ಎನ್ನುತ್ತ ಒಲೆ ಮುಂದಕ್ಕೆ ಓಡಿದಳು. ತನ್ನ ಹಟ್ಟಿಬಾಗಿಲಿಗೆ ಮಡಿಕೆ ಇಡಿಸಿದ್ದ ಸಿದ್ದಲಿಂಗನ ಮನೆಗೂ ಮಡಿಕೆ ಹೊಡೆಸಬೇಕಿತ್ತು. ಮಡಿಕೆಗಾಗಿ ಹುಡುಕಾಡುತ್ತ ನೆರೆಯವರನ್ನು ಕೇಳಲಾಗಿ ಇಲ್ಲವೆಂದರು. ಸಿಲ್ವರ್, ಅಲ್ಯುಮಿನಿಯಮ್, ಸ್ಟೀಲ್ ಪಾತ್ರೆಗಳು ಎಲ್ಲರ ಮನೆಗಳಲ್ಲಿ ತುಂಬಿರುವಾಗ ಮಡಕೆ-ಕುಡಿಕೆಗಳ ಬಳಕೆ ಅಪರೂಪವಾಗಿ ಮದುವೆ, ಹೊಸಮನೆ ಪ್ರವೇಶ, ದಾಸಯ್ಯ-ದೇವರ ಗುಡ್ಡರ ಬಿಡಿಸುವುದಕ್ಕೆ ಮತ್ತು ಗೌರಿ ಹಬ್ಬಕ್ಕೆ ಸೀಮಿತಗೊಂಡಿದ್ದವು. ಪುಟ್ನಂಜಿ ಕೋಟೆಮುದ್ದುಮಾದಯ್ಯನ ಹಿತ್ತಲಿಗೆ ಹೋಗುವಂತೆ ಪ್ರಸಾದನಿಗೆ ಹೇಳ್ತಲೆ ಪವಿತ್ರ ಅವ್ವನ ಮೇಲೆ ಸಿಟ್ಟಾಗಿ ‘ಹಿಟ್ಟು ಮಾಡುವ ಮಡಕೇನೆ ಕೊಡು. ಹೋಗಿ ಹೊಡೀಲಿ’ ಅಂದಳು. ಹಿಟ್ಟನ್ನು ಪಾತ್ರೆಯಲ್ಲಿಯೇ ಮಾಡುತ್ತಿದ್ದರಿಂದ ಮಡಕೆ ಇರಲಿಲ್ಲ. ಅಂದಹಾಗೆ ‘ಮಡಿಕೆ ಹೊಡೆಯುವುದು’ ಎಂದರೆ, ‘ಮಾವನ ಮನೆಗೆ ಅಳಿಯನಾಗಿ ಸಲ್ಲುವವನು ಹೋಗಿ ಮಡಕೆ ಹೊಡೆದರೆ ಅದು ಹೆಣ್ಣು ಕೇಳಿದ ಹಾಗೆ’ ಎಂಬುದು ಹಿಂದಿನವರು ಹೇಳಿರುವುದು ಮತ್ತು ನಡೆಸಿಕೊಂಡು ಬಂದಿದ್ದು. ಅದರಂತೆ ಊರು-ಕೇರೀಲಿ ದೀಪಾವಳಿ ಹಬ್ಬದ ದಿನಗಳಲ್ಲಿ ‘ಭಾವ-ಬಾಮೈದ’ ಸಂಬಂಧ ಹೊಂದಿರುವವರು ಪರಸ್ಪರರ ಮನೆಗಳಿಗೆ ಮಡಿಕೆ ಹೊಡೆಯುತ್ತಾರೆ. ಮಡಕೆಗಾಗಿ ತಡಕಾಡಿದ ಪುಟ್ನಂಜಿಗೆ ನಿರಾಶೆ ಆಯಿತು. ಪ್ರಸಾದ ಜೆಲ್ಲೆಮಲ್ಲಯ್ಯನ ಹಿತ್ತಲಿಗೆ ಓಡಲು ರೆಡಿಯಾಗಿದ್ದ. ಪುಟ್ನಂಜಿ ವಾರೆಗಿತ್ತಿ ಧೂಳು ಹಿಡಿದಿದ್ದ, ಜೇಡ ಕಟ್ಟಿದ್ದ ಹಳೇ ಮಡಕೆಯನ್ನ ಹುಡುಕಿ ಆಚೆಗೆ ತರುತ್ತ ‘ಅಕ್ಕ ಪ್ರಸಾದನ್ನ ಕರೀ ಮಡಿಕೆ ಸಿಕ್ತು’ ಅಂದಳು. ಪುಟ್ನಂಜಿ ಮುಖ ಇಷ್ಟಗಲ ಇದ್ದಿದ್ದು ವಿಸ್ತಾರ ಆಗಿ ‘ಹೋಗಿ ಸಿದ್ದಲಿಂಗನ ಹಟ್ಟಿಗೆ ಹೊಡೆದು, ನಿನ್ನ ಮಗುಳ್ನ ಕೊಡು ಅನ್ನು’ ಎಂದು ಮಗನಿಗೆ ಟ್ರೈನಿಂಗ್ ಕೊಟ್ಟು ಕಳಿಸಿದಳು. ಆ ಹೈದ ಅವ್ವನ ಮಾತಿಗೆ ಓಡಿತು. ಹಟ್ಟಿ ಮುಂದೆ ನೀರು ಇಟುಗೊಂಡು ಕುಂತಿದ್ದ ಸಿದ್ದಲಿಂಗ, ಮೊಮ್ಮಗನನ್ನು ದೂರಕ್ಕೆ ನಿಲ್ಲಿಸಿದ್ದು ಪ್ರಸಾದನ ವೀಕ್ಷಣೆಗೆ. ಅವನು ಬರುತ್ತಿದ್ದಂಗೆ ತಾತನಿಗೆ ಸುಳಿವು ನೀಡಿ, ಪ್ರಮೋದ್ ಓಡಿಬಂದ. ಗಾಬರಿಯಲ್ಲಿದ್ದ ಪ್ರಸಾದ ಮಡಕೆ ಎಲ್ಲಿಟ್ಟನೋ ಅವನಿಗೆ ಮರೆತುಹೋಗಿತ್ತು. ಇಟ್ಟೊಡನೆ ಕಬಡ್ಡಿಯ ರೈಡರ್‍ನಂತೆ ವಾಪಸ್ ನುಗ್ಗಿದ. ಆದರೂ ಸಿದ್ದಲಿಂಗು ಜಗ್ಗಿನಲ್ಲಿದ್ದ ನೀರು ಎರಚಿದ್ದ. ಪ್ರಸಾದನ ಬಟ್ಟೆ ತೇವವಾಗಿತ್ತು. ಮಗನ ಕಂಡು ಪುಟ್ನಂಜಿಗೆ ಪೂರ್ಣ ಪ್ರಮಾಣದ ತೃಪ್ತಿ ಆಗಲಿಲ್ಲ. ಒದ್ದೆ ಬಟ್ಟೆ ಕಳಚುವಂತೆ ಹೇಳಿ, ಇನ್ನೊಂದು ಮಡಕೆಗಾಗಿ ತಡಕಾಡಿದಳು.
ತೂಕಡಿಸುತ್ತಿದ್ದ ಮುದ್ದಯ್ಯ ಕಣ್ಬಿಟ್ಟಾಗ ಮಡಕೆ ಚೂರುಗಳನ್ನು ಕಂಡು ‘ಯಾವನುಡಾ ಹೊಡ್ದವ್ನು’ ಅನ್ನುತ್ತ ಮೊಮ್ಮಗನ ಕೂಗಿ ‘ನಮ್ ಕಾಲದಲ್ಲಿ ಹೆಂಗಿತ್ತು ಗೊತ್ತ’ ಎನ್ನತೊಡಗಿದ. ಅವ್ವನ ಮಾತು ಮರೆತು ಪ್ರಸಾದ ತಾತನ ಮುಂದೆ ಕೂತುಕೊಂಡಿದ್ದ. ಗೌರಿಕಡ್ಡಿ ಉರಿಸುತ್ತಿದ್ದ ಹೈಕಳು ಕಿರುಚಾಡುತ್ತ ಸಂಭ್ರಮಿಸುತ್ತಿದ್ದರು. ನಂಜಮ್ಮ ಬೀದೀಲಿ ತನ್ನ ಮಂಜುಗಣ್ಣಿಗೆ ಕಾಣಿಸಿದಷ್ಟನ್ನು ನೋಡಿ ‘ಎರಡೇ ಕಡ್ಡಿ ಉರೀತಾದ. ಆ ಕಾಲದಲ್ಲಿ ಇಡೀ ಕೇರಿಯೇ ಹೊಳೆಯೋ ಹಂಗೇ ಬೆಳಕಾವುವಷ್ಟು ಗೌರಿಕಡ್ಡಿಗಳು ಉರೀತಿದ್ವು’ ಎಂದು ನೆನೆಪಿಸಿಕೊಂಡಳು. ಮೊಮ್ಮಗ ಮುಂದೆ ಕೂತರೆ ಹಳೆಯದೆಲ್ಲವನ್ನು ಹೇಳುತ್ತಿದ್ದ ಮುದ್ದಯ್ಯ ಕೆಲವು ಸಲ ಅವನು ಅರ್ಧಕ್ಕೆ ಎದ್ದು ಹೋದರೆ ಬೇಜಾರು ಮಾಡಿಕೊಳ್ಳದೆ ‘ತಾತ ಕತೆಹೇಳು’ ಎಂದು ಮತ್ತೆ ಬಂದಾಗ ಮುಂದುವರೆಸುತ್ತಿದ್ದ. ‘ಕಂಬಿ ಗುಡ್ಡದಿಂದ ದನಗಳ ಹೊಡ್ಕೊಂಡು ಬರುವಾಗ ಒಬ್ಬೊಬ್ಬ ಹತ್ತಿಪತ್ತು ನೀಲಗಿರಿ ಕಡ್ಡಿಗಳನ್ನ ತರುತ್ತಿದ್ದೆವು. ಅವುಗಳನ್ನ ಗೂಡದಿಂದ ಚಚ್ಚಿ ಬಿಸಿಲಿಗೆ ಒಣಗಿಸಿ ದೀಪಾವಳಿಗೆ ಮನೆಗೆ ಎರಡು-ಮೂರು ಕಡ್ಡಿಗಳನ್ನು ಉರಿಸುತ್ತಿದ್ದವೆವು. ಮಾರನೆಗೆ ಮಡಿಕೆಗಳ ಚೂರುಗಳು ರಾಶಿಯಾಗಿ ಬಿದ್ದಿರುತ್ತಿದ್ದವು. ಪ್ರತಿಯೊಬ್ಬನು ಮಾವನ ಮನೆಗೆ ಮಡಿಕೆ ಹೊಡೆಯುವುದನ್ನ ತಪ್ಪಿಸುತ್ತಿರಲಿಲ್ಲ. ಅಡಿಗೆಗೆ ಆಗೆಲ್ಲ ಮಣ್ಣಿನ ಮಡಿಕೆ-ಕುಡಿಕೆಗಳನ್ನೆ ಬಳಸುತ್ತಿದ್ದೆವು. ಪಾತ್ರೆಪಗಡೆಗಳು ಹೆಚ್ಚಿರಲಿಲ್ಲ. ಮಡಕೆಯಲ್ಲಿ ಮಾಡಿದ ಸಾರಿನ ರುಚಿ ಈಗ ಎಂಥ ಪಾತ್ರೇಲಿ ಮಾಡಿದ್ರು ಬರಲ್ಲ. ಬೇಸಿಗೆಗೆ ಮಡಿಕೇಲಿ ನೀರು ತುಂಬಿಟ್ಟರೇ ಕುಳುಕುಳೋ ಎನ್ನುತ್ತಿತ್ತು. ಗೌರಿಕಡ್ಡಿ ಉರಿಸುತ್ತ ಪದ ಹೇಳುತ್ತಿದ್ದೆವು. ಪ್ರತಿ ಹಬ್ಬಕ್ಕೂ ಮಾರಿ ಕುಣಿತ ಹಾಕುತ್ತಿದ್ದೆವು. ಬೆಟ್ಟಗಳಿಗೆ ನಡೆದೇ ಸಾಗುತ್ತಿದ್ದೆವು. ಕಪ್ಪಣ್ಣ ಹತ್ತುಜನರ ಹಿಟ್ಟನ್ನು ಉಂಡು ಅವರೆಲ್ಲರ ನೇಗಿಲು, ನೊಗಗಳನ್ನು ಮೂರು ಮೈಲಿಯಿಂದ ತಾನೊಬ್ಬನೇ ಹೊತ್ತುಕೊಂಡು ಬಂದಿದ್ದ. ಅಂಥವನ ಜೊತೆಗಾರ ನಾನು’ ಎನ್ನುತ್ತ ಮುದ್ದಯ್ಯ ಹೇಳುತ್ತಿದ್ದಾಗ ಪ್ರಸಾದ ಊಟಕ್ಕೆಂದು ಓಡಿದ. ಅಲ್ಲಿಗೆ ತಾತನ ಬಾಯಿ ಮುಚ್ಚಿತು.
ಪುಟ್ನಂಜಿಗೆ ಆಶ್ಚರ್ಯವಾಗಿ ‘ಏನ ತಾತ’ ಅಂದಳು. ಮುದ್ದಯ್ಯನಿಗೆ ಕೇಳಿಸಿರಲಿಲ್ಲ. ಸುಮ್ಮನಿದ್ದ. ನಂಜಯ್ಯ ಬಂದವನೇ ‘ಅಪ್ಪ ಉಂಡಾ' ಎಂದು ಗಟ್ಟಿಯಾಗಿ ಕೇಳಿದಾಗ ಪುಟ್ನಂಜಿ ‘ಇಲ್ಲ ಕನಿ ಮಾವ’ ಅಂದಳು. ಅಪ್ಪನ ನುಡಿಗಳು ಕಿವಿಗೆ ಬಿದ್ದಿದ್ದರಿಂದ ‘ಎಂಥ ಕಾಲವಾಗಿತ್ತೂ ಆಗ’ ಅಂದು ನಂಜಯ್ಯ ತನ್ನ ಬಾಲ್ಯ, ಯೌವ್ವನವನ್ನ ನನೆದು ಅಪ್ಪನ ಕೈಮುಟ್ಟಿದ. ಮುದ್ದಯ್ಯ ಶಾಲು ತೆಗೆದು ಕೆಳಗಿಟ್ಟಾಗ ಮುದ್ದೆ, ಸೊಪ್ಪಿನ ಸಾರು ತಂದು ಪುಟ್ನಂಜಿ ಮುಂದಿಟ್ಟಳು. ತಟ್ಟೆಗೆ ಹಾಕಿ ‘ತಾತ ಉಣ್ಣಿ’ ಅಂದಳು. ಸುಕ್ಕಿನ ಚರ್ಮದ ಕೈಯನ್ನು ಮುದ್ದಯ್ಯ ತಟ್ಟೆಗೆ ಹಾಕಿದ. ಪ್ರಸಾದ ‘ಪಟಾಕಿ ಬೇಕು’ ಎಂದು ಹಠ ಹಿಡಿದಾಗ ಪುಟ್ನಂಜಿ ಹೈದನಿಗೆ ತಟ್ಟಿ ‘ಹೋಗು ಮಲಿಕೋ’ ಎಂದು ರೇಗಿದಳು.
ಆರು ಅಡಿ ಎತ್ತರವಿದ್ದ ಮುದ್ದಯ್ಯ ರಾವಣನಂತೆ ಬಲಿಷ್ಠವಾಗಿದ್ದ. ಕಪ್ಪು ಬಣ್ಣದ, ಉದ್ದಕೂದಲಿನ, ಅಗಲವಾದ ಎದೆಯ, ದಪ್ಪ ತೊಡೆಗಳಿದ್ದ ಅವನು ಹೆಂಗಸರಲ್ಲಿ ಆಸೆ ಉಕ್ಕಿಸುತ್ತಿದ್ದ. ಕೇರಿಯಲ್ಲಿ ಯಾವುದೇ ಮಾರಿಹಬ್ಬಕ್ಕು ಮರಿ ತರಿಯುತ್ತಿದ್ದುದು ಮುದ್ದಯ್ಯನೇ. ಇವನಾದರೇ ಒಂದೇ ಏಟಿಗೆ ಮೇಕೆಯ ರುಂಡ-ಮುಂಡ ಬೇರ್ಪಡುತ್ತಿತ್ತು. ಕಂಬಿಗುಡ್ಡೇಲಿ ಸೌದೆಗೆ ಹೋಗಿದ್ದಾಗ ಆನೆ ಓಡಿಸಿಕೊಂಡು ಬಂದಿತ್ತು. ಆದರೆ ಕೊಲ್ಲಿ ದಾಟಿ ಸಲಗದಿಂದ ತಪ್ಪಿಸಿಕೊಂಡಿದ್ದ. ಜಗಳದಲ್ಲಿ ಮೂವರನ್ನು ಒಬ್ಬನೇ ಎತ್ತಿ ಎಸೆಯುವಷ್ಟು ತಾಕತ್ತು ಅವನಿಗಿತ್ತು. ಎರಡಾಳು ಹೊರನಾರದ ತೂಕದ ಸೌದೆ ಹೊರೆಯನ್ನ ಕಾಡಿನಿಂದ ನಿರರ್ಗಳವಾಗಿ ತರುತ್ತಿದ್ದ. ಭತ್ತದ ಕುಯ್ಲಿನ ಸಮಯಕ್ಕೆ ಮುದ್ದಯ್ಯನಿಗೆ ಬೇಡಿಕೆ ಹೆಚ್ಚಿರುತ್ತಿತ್ತು. ಇಬ್ಬರು ಮಾಡುವ ಕೆಲಸ ಇವನೊಬ್ಬನಿಂದಲೇ ಆಗುತ್ತಿತ್ತು. ಭತ್ತದ ಮೂಟೆ ಹೊರುವುದು, ಹುಲ್ಲು ಕಟ್ಟುವುದು, ಕೊಳಗದಲ್ಲಿ ಭತ್ತವನ್ನು ಅಳೆಯುವುದು ಎಲ್ಲದಕ್ಕೂ ಮುದ್ದಯ್ಯನೇ ಮುಂದಾಳತ್ವ ವಹಿಸಬೇಕಿತ್ತು. ಎಂಥ ಘಾಟಿ ಎತ್ತುಗಳಾದರೂ ಚಾವಟಿ ಹಿಡಿಯದೇ ಮುದ್ದಯ್ಯ ಬೆದರಿಸುತ್ತಿದ್ದ. ದನದ ಮಾಂಸವನ್ನು ಬಹಳ ಇಷ್ಟಪಟ್ಟು ತಿನ್ನುತ್ತಿದ್ದ. ಕೇರಿಯಲ್ಲಿ ಗತ್ತಿನ ಮನುಷ್ಯ ಎಂದೇ ಖ್ಯಾತನಾಗಿದ್ದ ಅಂಥವನು ತನ್ನ ಅರವತ್ತನೇ ವಯಸ್ಸಿಗೆ ಕಿವುಡನಾಗಬೇಕಾಯ್ತು. ತುಂಡೈಕ ಗನ್ ಕಸ್ಸಿದ್ದು ಆಕಸ್ಮಿಕವಾಗಿ ಮುದ್ದಯ್ಯನ ಕಿವಿ ಹತ್ತರದಲ್ಲಿ ಸಿಡಿದು ಕಿವಿಯಲ್ಲಿ ರಕ್ತ ಬಂದಿತು. ತುಂಡೈಕ್ಳಿಗೆ ತಟ್ಟಿದ ಏಟಿಗೆ ಅವರು ತಿರುಗಿ ನೋಡದಂಗೇ ಹೊರಟರು. ಅಂದಿನಿಂದ ಅವನು ಪಟಾಕಿ, ಗನ್ ಹೊಡೆಯುವವರನ್ನು ಕಂಡರೆ ಕೋಪಗೊಳ್ಳುತ್ತಿದ್ದ.
ರಾತ್ರಿ ಹತ್ತರ ಮೇಲೂ ಗನ್‍ಗಳು ಢಂ ಢಂ ಸದ್ದು ಮಾಡುತ್ತಿದ್ದವು. ಮುದ್ದಯ್ಯ ಮಗನೊಂದಿಗೆ ಮಾತಾಡುತ್ತ ‘ನನ್ನ ವಾರಗೆಯವರು ಯಾರು ಇಲ್ಲ. ನಂಗೆ ಕಿವಿ ಹೋದದ್ದು ಇದೇ ದೀಪಾವಳೀಲಿ. ನಿಮ್ಮವ್ವ ಸತ್ತಿದ್ದು ಯುಗಾದಿ ಕಳೆದ ಮೂರು ದಿನಕ್ಕೆ.’ ಎನ್ನುತ್ತ ಅನಿಸಿದ್ದನ್ನು ಹೇಳುತ್ತ ಮಗನ ಕೈಯಿಂದ ಊಟ ಮಾಡಿಸಿಕೊಂಡಿದ್ದ.
ಮಬ್ಬಿಗೆ ಎದ್ದ ಪುಟ್ನಂಜಿ ಹಟ್ಟಿ ಮುಂದಿನ ಕಸದ ರಾಶಿ ನೋಡಿ ಬೆರಗಾಗಿ ನೀರಿಟ್ಟು ಕಸದ ಮಕ್ಕರಿ ಹೊತ್ತು ನಡೆದಳು. ಚಳಿಯ ಹೊಡೆತ ಕಮ್ಮಿ ಮಾಡಲು ಕಿವಿಗೆ ಕರ್ಚಿಫು ಕಟ್ಟಿದ್ದಳು. ಚಳಿಗೆ ಮೈ ನಡುಗುತ್ತಿತ್ತು. ಲುಂಗಿ ಹೊದ್ದಿದ್ದ ನಂಜಯ್ಯ ಬಿದ್ದಕೊಂಡೇ ಇದ್ದ. ಸೋಮಣ್ಣ ಎದ್ದವನೇ ತೆಂಗಿನ ಮರದ ಕಡೆಗೆ ನೋಡಿ ಹೋಟೆಲ್ಲಿಗೆ ಹೋದನು. ನಂಜಯ್ಯ ಅರೆಗಣ್ಣು ಬಿಟ್ಟು ದಟ್ಟಬೆಳಕ ನೋಡಿ ದಿಡೀರನೇ ಎದ್ದು ಹೊಲದೆಡೆಗೆ ನಡೆದ. ಸಿದ್ದಲಿಂಗು ಹೆಂಡ್ತಿ ಗಿರಿಜಮ್ಮ ದೊಡ್ಡ ಲೋಟದಲ್ಲಿ ಹಾಲು ತಂದು ‘ಪುಟ್ನಂಜಿ’ ಎಂದು ಕೂಗಿ ಯಾರ ಸದ್ದು ಬರದಿದ್ದಾಗ ಹಾಲನ್ನು ಕಿಟಕಿ ಮೇಲಿಟ್ಟು ಹೋಗಿದ್ದಳು. ನಡು ಮನೇಲಿ ಪ್ರಸಾದ ಮಲಗಿದ್ದರೆ, ಮುದ್ದಯ್ಯ ಜಗುಲಿ ಮ್ಯಾಲೆ ಮಲಗಿದ್ದ. ತಿಪ್ಪೆಯಿಂದ ಬಂದ ಪುಟ್ನಂಜಿ ಕಿಟಕಿ ಮೇಲಿದ್ದ ಹಾಲಿನ ಲೋಟ ಎತ್ತಿಕೊಂಡು ಸರಸರನೆ ಕೈತೊಳೆದು ಪಾತ್ರೆಗೆ ನೀರು, ಬೆಲ್ಲ, ಟೀ ಪುಡಿ ಹಾಕಿ ಒಲೆ ಮೇಲಿಟ್ಟಳು. ಟೀ ಮಾಡಿ ಲೋಟಕ್ಕೆ ತುಂಬಿ ಚಾಪೆ ಪಕ್ಕಕ್ಕಿಟ್ಟು ‘ತಾತ ತಾತ’ ಎಂದು ಕೂಗಿದಳು. ತಾತನಿಂದ ಯಾವುದೇ ಸದ್ದು ಬರಲಿಲ್ಲ. ರಗ್ಗು ಸರಿಸಿ ಎದೆ ಮೇಲೆ ಕೈಯಿಟ್ಟು, ಮೂಗಿನ ಹತ್ತಿರಕ್ಕೆ ಬೆರಳಿಡಿದಳು. ಬಡಿತವಿಲ್ಲ. ಉಸಿರಿನ ಬಿಸಿ ತಾಕಲಿಲ್ಲ. ಬೆಚ್ಚಿದಳು. ಮೈಯೆಲ್ಲ ತಣ್ಣಗಾಗಿತ್ತು. ಕಣ್ಣುಗಳು ಮುಚ್ಚಿದ್ದಂಗೆ ಇದ್ದವು. ಉಸಿರು ಹೋಗಿತ್ತು. ಮುದ್ದಯ್ಯ ಸತ್ತಿದ್ದ. ಜೋರಾಗಿ ಕಿರುಚಿ ಅಳುತಲಿದ್ದ ಸದ್ದಿಗೆ ಅಕ್ಕಪಕ್ಕದವರು ಬಂದು ನೋಡಲಾಗಿ ಸುದ್ದಿ ಇಡೀ ಕೇರಿಗೆ ಹಬ್ಬಿತು. ಹೊಲದಲ್ಲಿದ್ದ ನಂಜಯ್ಯ ಸುದ್ದಿ ಕೇಳಿ ಗಾಬರಿಯಿಂದ ಒಂದೇ ಸೂಲಿಗೆ ಓಡಿಬಂದು ಮಲಗಿದ್ದಲ್ಲಿಯೇ ಸತ್ತುಹೋಗಿದ್ದ ಅಪ್ಪನ ಮುಟ್ಟಿ ಗೋಳಾಡುತ್ತಿದ್ದ. ‘ರಾತ್ರಿ ನನ್ ಕೈಲಿ ಊಟ ತಿಂದಿದ್ದು ಇದಕ್ಕೇನ ಅಪ್ಪ’ ಅನ್ನುತ್ತ ಹೆಂಗಸರಂತೆ ಬಿದ್ದು ಒದ್ದಾಡುತ್ತ ಅತ್ತ. ಸೋಮಣ್ಣ ಆಟೋಗೆ ಪೆಂಡಾಲ್, ಛೇರ್‍ಗಳನ್ನು ತುಂಬಿಸುತ್ತಿದ್ದ. ಕೇರಿ ಜನರೆಲ್ಲರು ಸೇರಿದ್ದರು. ಮುದ್ದಯ್ಯ ಸತ್ತ ಸುದ್ದಿ ಜನರಲ್ಲಿ ಮರುಕ ಹುಟ್ಟಿಸಿತು. ರಾತ್ರಿ ತಾತನ ಮುಂದೆ ಹೆಚ್ಚು ಹೊತ್ತು ಕೂರದೇ ಓಡಿದ್ದ ಪ್ರಸಾದ ಮುದ್ದಯ್ಯನಿಗೆ ಹಾಕಿದ್ದ ಹೂ ಹಾರಗಳನ್ನು ಬೆರಗಿನಿಂದ ನೋಡುತ್ತಿದ್ದ.