Click here to Download MyLang App

ಮಾಯೆಯ ಹುಡುಗ - ಬರೆದವರು : ಭಾರ್ಗವ ಜೋಗಿ | ಸಾಮಾಜಿಕಯಾವನೋ ಶಿಳ್ಳೆಕ್ಯಾತ
" ಅಣ್ಣಾ....ಅಣ್ಣಾ... " ಎಂದು ಕರೆಯುತ್ತಿದ್ದುದು ಆ ಹುಡುಗನ ಕಪ್ಪುನಿದ್ದೆಯಲ್ಲಿ ಬೆಳಗಿನ ಮೂಡಲ ಬೆಳ್ಳಿರೇಖೆಯಂತೆ ಮೂಡಿತು.

"....ಏಳ....ಮಾರಾಯ ಬೆಳಗಾದ್ರೂ ಇನ್ನೂ ಎಮ್ಮೆತರ ಬಿದ್ದಿದ್ಯಲ. "
ದನಿ ಸ್ವಲ್ಪಸ್ವಲ್ಪವೇ ಸ್ಪಷ್ಟವಾಗುತ್ತ ಕೊನೆಗೆ ಹುಡುಗನ ಕನಸಿನಲ್ಲಿದ್ದ ಹೆಣ್ಣಿಗೆ ಬಟ್ಟೆ ಹಾಕಿಸಿ ಅವನ ಕಂಗಳನ್ನು ಬಿಡಿಸಿತು.
ಹೊರಗಡೆ ಬೆಳಗ್ಗೆ ಒಂಬತ್ತರ ಬಿಸಿಲು ತೆಳ್ಳಗೆ ಬಿದ್ದಿದ್ದರಿಂದ ಹೆಂಚುಮಾಡಿನ
ಬೆಳಕಿಂಡಿ ತುಸು ಜೋರಾಗೇ ಬೆಳಕು ಕಾರುತ್ತಿತ್ತಾಗಿ ಕಣ್ಣುಬಿಟ್ಟ ತಕ್ಷಣ ಕಣ್ಣೇ ಕುರುಡಾದಂತಾಯ್ತು ಹುಡುಗನಿಗೆ.
'ಅರೆ ಎಲ್ಲಿದೀನಪ್ಪಾ, ಯಾವ್ದೋ ದೆವ್ವದ ಮನೆ ಇದ್ದಾಂಗಿದೆ ' ಎಂದುಕೊಳ್ಳುತ್ತ ಹಾಸಿಗೆಯಿಂದ್ದೆದ್ದವನಿಗೆ ಕಂಡದ್ದು ಬರೀ ಚಡ್ಡಿಯಲ್ಲಿ ನಿಂತು ಹಲ್ಕಿರಿಯುತ್ತಿದ್ದ, ಹೆಚ್ಚುಕಡಿಮೆ ಐದುವರ್ಷ ವಯಸ್ಸಿನ ನರಪೇತಲ. ಭೂತಕಾಲದ ಎದೆಸೀಳಿಕೊಂಡು ಬಂದ ತನ್ನದೇ ಪ್ರತಿರೂಪದಂತೆ ನಿಂತಿದ್ದ ಆ ಶಿಳ್ಳೆಕ್ಯಾತನನ್ನು ನೋಡಿ ಹುಡುಗನಿಗೆ ಅಚ್ಚರಿಯಾಯ್ತು.

"ಎಂತ ನೋಡ್ತಿದ್ಯ, ಏಳು ಮಾರಾಯ ಬೇಗ.."
ಎಂದು ಶಿಳ್ಳೆಕ್ಯಾತ ಪಿತಪಿತ ವದರಲು ಹುಡುಗನಿಗೆ ಪೂರ್ತಿ ಎಚ್ಚರಾಯ್ತು.
ಆಗ ದೆವ್ವದ ಮನೆಯಂತೆ ಕಂಡಿದ್ದು ಈಗ ಬರೀ ಮನೆಯಂತೆ ಕಾಣತೊಡಗಿತು. ಕ್ರಮೇಣ ಎಲ್ಲವನ್ನೂ ಗುರುತು ಹಿಡಿಯುತ್ತ ಹುಡುಗ 'ಚಿರಂಜೀವಿ ಸೋಮಶೇಖರ ಪ್ರಸಾದ'ನಾಗಿ ಬದಲಾದ. ಅಷ್ಟರಲ್ಲಿ ಶಿಳ್ಳೆಕ್ಯಾತ ಅತ್ಯುತ್ಸಾಹದಿಂದ
"ಬಾರೋ ನೆನ್ನೆ ಕಿತ್-ಕೊಡ್ತೀನಿ ಅಂದಿದ್ಯಲ, ಬಾ ಕಿತ್ಕೊಡು" ಎಂದು ತನ್ನ ಕೋರಿಕೆಯನ್ನು ಮುಂದಿಟ್ಟ.

"ತಡಿಯೊ ಸೊಲ್ಪ, ತಲೆಯೆಲ್ಲ ನೋವು "

"ಊಹು...... ಬಾಬೇಗ... "

"ಎಲ್ಲೋ ನಿನ್ನಮ್ಮ? "

"ಅವಳೆಲ್ಲೋ ಹುಟ್ಟಿನ್ ಗರಿಣೀಗೆ ಹಿಟ್ ಮಾಡ್ಸಕ್ಕೆ ಅಂತ ಹೋದ್ಲಪ್ಪ ಚೀಲ ಹಿಡ್ಕಂಡು..... ಅವ್ಳ್ ಎಂತಕ್ಕೆ ನಿಂಗೀಗ.... ಬಾ ನೆನ್ನೆ ಹೇಳಿದ್ದು ಕಿತ್ಕೊಡು ಮೊದ್ಲು. "

"ತಡ್ಕಳ ಚೂರು, ತಲೆ ತಿನ್ಬೇಡ....ಮೊಕಗಿಕ ತೊಳಿಯದ್ ಬೇಡನ ಸೊಲ್ಪ..... ಅಲ್ ಕೂತ್ಗ ಬರ್ತೀನೀಗ "ಎನ್ನುತ್ತ ಮೈಮುರಿದೆದ್ದ ಸೋಮಶೇಖರ ಪ್ರಸಾದ್ ಅಲಿಯಾಸ್
ಸೋಮು ಬಚ್ಚಲುಮನೆ ಕಡೆ ನಡೆದನು . ಶಿಳ್ಳೆಕ್ಯಾತ ಚೂರೇಚೂರು ಮುಖ ಊದಿಸಿಕೊಂಡು ಜಗಲಿಗೆ ಹೋಗಿ ಕೂತ.

ಚಿಲಕವಿಲ್ಲದ ಆ ಬಚ್ಚಲು ಬಾಗಿಲನ್ನೆಳೆದುಕೊಂಡು ಮೂಲೆಯಲ್ಲಿ 'ಛೋರ್ರ್' ಅಂತ ಶಬ್ದ ಮಾಡುತ್ತ ಉಚ್ಚೆಹೊಯ್ದು ನಂತರ ಮಣ್ಣಿನ ಬಾನಿಯಲ್ಲಿದ್ದ ತಣ್ಣನೆಯ ನೀರಿನಲ್ಲಿ ಮುಖ ತೊಳೆದುಕೊಂಡ ಸೋಮುವಿಗೆ ಹಾಯೆನಿಸಿತು. ಆಮೇಲೆ ಅಲ್ಲೇ ತಂತಿಗೆ ನೇತಾಕಿದ್ದ ಯಾವುದೋ ಪುರಾಣಕಾಲದ ಕೆಂಪು ಟವೆಲ್ಲಿನಲ್ಲಿ ಮುಖ ಒರೆಸಿಕೊಂಡು ಜಗಲಿಗೆ ಬಂದ.
ಅವನ ಬರವನ್ನೇ ಕಾಯುತ್ತ ಜಗಲಿಯ ಗೋಡೆಗೊರಗಿ ನಿಂತಿದ್ದ ಆ ಶಿಳ್ಳೇಕ್ಯಾತ ಉದ್ವೇಗದಿಂದ "ಆಯ್ತಲ, ಈಗ ಬಾ ಹಂಗಾರೆ ಕಿತ್ಕೊಡು "ಎಂದನು.

ಸೋಮುಗೆ ರೇಜಿಗೆ ಹಿಡಿದಂತಾಗಿ "ಎಂತ ಕಿತ್ಕೊಡದ ನಿನ್ ತಲೆ" ಎಂದು ಬೈದ .

ಶಿಳ್ಳೆಕ್ಯಾತ ಪಟ್ಟು ಬಿಡದೆ " ನೀನೆ ಹೇಳಿದ್ಯಲ ನಿನ್ನೆ, ಕಿತ್-ಕೊಡ್ತೀನಿ ಅಂತ" ಎಂದ .

"ಎಂತ ಹೇಳಿದ್ನ ನಾನು....ಕತ್ತೆನ್ ತಂದು "

"ಅದೆ ಹಣ್ ಕಿತ್ ಕೊಡ್ತೀನಿ ಅಂದಿದ್ಯಲನಾ ನಿನ್ನೆ"

ಸೋಮುಗೆ ಎಂತದ್ದೂ ನೆನಪಾಗಲಿಲ್ಲ.
" ಅದ್ಯಂತ ಹಣ್ಣು ಮಾರಾಯ ನಾನ್ ಹೇಳಿದ್ದು? "

"ಅದೇ ಅದೆಂತದೋ ಚಳ್ಳೆಹಣ್ಣೋ ಎಂತದೋ ಅಂತಾರಲ್ಲ ಅದು ".
ಶಿಳ್ಳೆಕ್ಯಾತ ಮುಗ್ಧವಾಗಿ ಹೇಳಿದ.
ಸೋಮುವಿಗೆ ನಗು ಉಕ್ಕಿಬಂತಾದರೂ ಸಣ್ಣವರನಿಗೆ ಸದರ ಕೊಡಬಾರದೆಂದು ನಗು ತಡೆದುಕೊಂಡು "ನಿಂತಲೆ... ಚಳ್ಳೆಹಣ್ಣನ್ತೆ ಚಳ್ಳೆಹಣ್ಣು ? "
ಎಂದು ಮತ್ತೆ ಬೈದ.
ಶಿಳ್ಳೆಕ್ಯಾತನಿಗೆ ಅಪಮಾನವಾದಂತಾಗಿ "ಬಾ ಹಂಗಾರೆ ತೋರುಸ್ತೀನಿ "ಎನ್ನುತ್ತ ಸೋಮುವಿನ ಕೈ ಹಿಡಿದುಕೊಂಡು ಸರಸರ ಅಂಗಳಕ್ಕಿಳಿದು ಕಾಲಿಗೆ ಚಪ್ಪಲಿ ಸೇರಿಸಿಕೊಂಡು ಮನೆ ಮುಂದಿನ ಮಣ್ಣುರೋಡಿನಲ್ಲಿ ಹೊರಟೇಬಿಟ್ಟನು. ಸೋಮು ಕೊಂಚ ಕೊಸರಿದನಾದರೂ ಕೊನೆಗೆ ವಿಧಿಯಿಲ್ಲದೆ ಅವನ ಹಿಂದೆಯೇ ನಡಯಬೇಕಾಯ್ತು .

ಹೊರಗೆ ಬಿಸಿಲೋ ಬಿಸಿಲು. ಆಚೀಚೆ ಮನೆಯ ಮಕ್ಕಳೆಲ್ಲ ಆ ಬಿಸಿಲಲ್ಲೇ ಬಂಡಿಯಾಟ ಆಡುತ್ತಿದ್ದರು. ಪಕ್ಕದ ಮನೆಯ ಮುದುಕ ಮನೆ ಬೇಲಿ ಹತ್ತಿರ ಕೂತು ಗಡ್ಡ ತೆಗೆದುಕೊಳ್ಳುತ್ತಿದ್ದ. ಅವನ ಸೊಸೆ ಅಕ್ಕಿ ತೊಳೆದು ಬಿಸಿಲಿಗೆ ಹರಡುತ್ತ 'ತಾನಾನೋ ತಾನಾನೋ' ಮಾಡಿಕೊಳ್ಳುತ್ತಿದ್ದಳು. ಇವರ್ಯಾರನ್ನೂ ಗಮನಿಸದೆ
ನಡೆದ ಸೋಮು "ಇವನಮ್ಮ ಒಂದ್ ಇವನ್ನ ನನ್ ತಲೆಗ್ ಗಂಟ್ ಹಾಕಿ ಎಲ್ಲಿಗ್ ಹೋದ್ಲೊ" ಅಂದುಕೊಂಡ. ಅಷ್ಟರಲ್ಲಿ ಎದುರಿಂದ ಯಾವುದೊ ಲಂಬಾಣಿ ಹುಡುಗಿ ಸೊಂಟದ ಮೇಲೊಂದು ಮತ್ತೆ ತಲೆ ಮೇಲೊಂದು ನೀರಿನ ಬಿಂದಿಗೆಗಳನ್ನಿಟ್ಟುಕೊಂಡು ವಿಚಿತ್ರವಾಗಿ ಸರ್ಕಸ್ ಮಾಡುವವಳಂತೆ ನಡೆದುಕೊಂಡು ಇವರನ್ನು
ಸರಿದು ಹೋದಳು. ಆ ಹೆಂಗಸಿನಚಂದವನ್ನು ನೋಡಿದ್ದೇ ಸೋಮು ಗಂಭೀರನಾದ. ಅವನಿಗೇನೋ ನೆನಪಾಗಿತ್ತು.
'ನಿನ್ನೆ ಸಂಜೆ ಐದರ ಹೊತ್ತಿಗೆ ಆ ಬಡ್ಡೀಮಗ ರಾಮಿರೆಡ್ಡಿ ಮನೆಯಲ್ಲಿ ನಡೆದಿದ್ದು !'
'ಛೇ ನಾನ್ಯಾಕೆ ಹೋದೆನೋ ಆ ಹಾಳು ರೆಡ್ಡಿ ಮನೆಗೆ' ಅಂದುಕೊಂಡ.
ಹೀಗೆ ಏನೇನೋ ಯೋಚನೆ ಮಾಡುತ್ತ ಅವನ ನಡಿಗೆ ನಿಧಾನವಾಯ್ತು. ಶಿಳ್ಳೆಕ್ಯಾತ ಮುಂದೆ ಇದ್ದವನು ಸೋಮು ಮೆಲ್ಲಗೆ ಆಮೆಯಂತೆ ನಡೆಯುತ್ತಿದ್ದುದ್ದನ್ನು ನೋಡಿ "ಅಯ್ಯೊ ಹದುಗ್ತಿಯಪ್ಪ ಒಳ್ಳೆ... ಬಾರ ಮರಯ ಬೇಗ "ಎಂದನು ರಾಗವಾಗಿ.

ಮತ್ತೆ ನಿದ್ದೆಯಿಂದ ಎಚ್ಚೆತ್ತವನಂತೆ ಚಿಮ್ಮಿದ ಸೋಮು ಬೇಗಬೇಗ ತಡಬಡ ಮಾಡಿದನಾದರೂ 'ನೆನ್ನೆ ನಡೆದಿದ್ದು 'ಕಾಲಿಗೆ ತೊಡರುವ ಬಳ್ಳಿಯಂತೆ ತೊಡರಿತು.
ನೆನ್ನೆ ರಾತ್ರಿಯಿಡೀ ಅದರದ್ದೇ ಬೇರೆಬೇರೆ ಅವತಾರಗಳನ್ನು ಕನಸಿನಲ್ಲಿ ಕಂಡೂ ಕಂಡೂ ಬೇಜಾರು ಬಂದುಹೋಗಿದ್ದರೂ ಈಗ ಮತ್ತೆ ಅದನ್ನೇ ಯೋಚಿಸದೆ ವಿಧಿಯಿರಲಿಲ್ಲ. ಎಷ್ಟೆಂದರೂ ಅವನೂ ಇತರ ಮಾನವರಂತೆ ಕಾಲನ ದಾಸನಲ್ಲವೇ?
ಭೂತಕಾಲದ ಚೇಷ್ಟೆಮಾತ್ರವಲ್ಲವೇ ಮನುಷ್ಯ? ಹಾಗಾಗಿಯೇ 'ನೆನ್ನೆ ನಡೆದಿದ್ದು ' ಇವತ್ತಿನ ,ಈಗಿನ ಸೋಮುವಾಗಿಬಿಟ್ಟನು .

೨: ನೆನ್ನೆ ನಡೆದದ್ದು :

ರಾಮಿರೆಡ್ಡಿ ರೂಮಿನ ಬಾಗಿಲು ಹಾಕಿಕೊಂಡು 'ಪುಸುಪುಸು' ಅಂತ ಬೀಡಿ ಸೇದಿ-ಸೇದಿ ಬಿಡುತ್ತಿದ್ದರೆ ಸೋಮು ಮೂಲೆಯಲ್ಲಿ ಕೊಳಕು ತುಂಬಿದ್ದ ಹಾಸಿಗೆಗೊರಗಿಕೊಂಡು ಹೊಗೆಯನ್ನೇ ನೋಡುತ್ತಿದ್ದನು .ಮುಸ್ಸಂಜೆಯ ಇಳಿಬಿಸಿಲು ಮಾಡಿನ ಬಿರುಕುಗಳನ್ನ ತೂರಿಕೊಂಡು ನೆಲದ ಮೇಲೆ ಅಲ್ಲಲ್ಲಿ ಬಿದ್ದಿತ್ತು .ಪ್ರಪಂಚವೆಲ್ಲ ಕೆಂಬಣ್ಣಕ್ಕೆ ತಿರುಗಲು ಹವಣಿಸುವ ಹೊತ್ತು:ಯಾರಿಗಾದರೂ ಮಂಕು ಕವಿಸಬಹುದಾದ ಮಾಯಾಸಂಜೆ !
ಆದರೆ ಬೀಡಿ ಎಳೆಯುತ್ತಿದ್ದ ರಾಮಿರೆಡ್ಡಿಗೆ ಮಾತ್ರ ಮಂಡೆಯಲ್ಲೇನೋ ಮಿಂಚು ಹೊಡೆದಂತಾಗಿ "ಲೊ ಗಂಟೆ ಎಷ್ಟಾಯ್ತೋ ...?"ಎನ್ನುತ್ತ ಉದ್ವೇಗದಿಂದ ಹಾರಿಬಿದ್ದನು .
ಸೋಮು ಅಡರುತ್ತಿದ್ದ ಹೊಗೆಯನ್ನೇ ಮೆಚ್ಚುಗೆಯ ಕಂಗಳಿಂದ ನೋಡುತ್ತ ನಿರುದ್ವೇಗದಿಂದ "ಯಾರಿಗ್ಗೊತ್ತು ಬಿಡೋ ,ಎಷ್ಟೋ ಆಗಿರ್ಬೇಕು "ಎಂದ.

ರೆಡ್ಡಿ "ಐದಾಯ್ತ ಎಂತ ಕತೆ ..?"ಎನ್ನುತ್ತ ಎದ್ದು ಬಾಗಿಲಾಚೆ ಜಗಲಿಯಲ್ಲಿದ್ದ ಗಡಿಯಾರ ನೋಡಲು ಓಡಿದನು.
ಐದಾಗಿ ಐದು ನಿಮಿಷಗಳಾಗಿತ್ತು.
ಬಾಯಲ್ಲಿದ್ದ ಬೀಡಿಯನ್ನು ತೆಗೆದೆಸೆದು "ಐದಾಗೇ ಹೋಯ್ತಲ್ಲೋ ...ನೀನಿಲ್ಲೇ ಕೂತಿರು ಬರ್ತಿನೀಗ "ಎನ್ನುತ್ತ ಹಿತ್ತಲ ಕಡೆ ಓಡಿದ .
ಸೋಮು "ಐದಾದ್ರೆ ಏನೀಗ ನಿನ್ ಹೆಂಡ್ತಿ ಬರ್ತಾಳೇನೋ ? .." ಎಂದು ಹೇಳಿ ನಗಾಡುವುದರೊಳಗಾಗಿ ರೆಡ್ಡಿ ಮಾಯವಾಗಿದ್ದ.

*********

ಈ 'ರೆಡ್ಡಿ' ಅಂತಂದರೆ ಬಿ.ಎ ಕೊನೆವರ್ಷವನ್ನು ಮೂರು ವರ್ಷಗಳಿಂದ ಪ್ರಾಮಾಣಿಕವಾಗಿ ಓದುತ್ತಿದ್ದ ಒಬ್ಬ ಆದರ್ಶವಿದ್ಯಾರ್ಥಿ. ಅವನಗಿಂತ ಕೆಳಗಿನ ತರಗತಿಗಳಲ್ಲಿ ಆಗಷ್ಟೇ ಮೀಸೆ ಬೆಳೆಸಿಕೊಳ್ಳುತ್ತಿದ್ದ ಇತರ ಹುಡುಗರಿಗೆ ಪುರುಷೋತ್ತಮನಂತಿದ್ದವನು. ಬೀಡಿಯಿಂದ ಹಿಡಿದು ಸಾರಾಯಿವರೆಗೆ ಎಲ್ಲ ಸದ್ಗುಣಗಳನ್ನೂ ಮೈಗೂಡಿಸಿಕೊಂಡಿದ್ದ ರೆಡ್ಡಿ ಇಡೀ ಕಾಲೇಜಿಗೇ ಭೂಷಣವಾಗಿದ್ದ. ಅವ ಆಡದ ಆಟವಿರಲಿಲ್ಲ, ಮಾಡದ ಮಾಟವಿರಲಿಲ್ಲ.
ಅದು ಯಾವ ಮಾಯದಲ್ಲೋ ಏನೋ ಕಾಲೇಜು ಫೀಸು-ರೂಮ್ ಬಾಡಿಗೆಯಿಂದ ಹಿಡಿದು ತನ್ನ ಚಟಗಳಿಗೂ ಸೇರಿಸಿ ಹಣ ಹೊಂದಿಸಿಕೊಳ್ಳುತ್ತಿದ್ದ ಮಾಯಾಮನುಷ್ಯನವನು.
ಇಂತಹ ಮಾಯಾಮಾನವರ ಸಂಘ ತಂದೆಯಿಲ್ಲದ ,ತಾಯಿಯ ಕೈಗೆ ಸಿಗದ ಸೋಮುವಂತಹವರಿಗೆ ಅತೀ ಅವಶ್ಯಕವಾದದ್ದು. ದನಿ ಗಡುಸಾಗುತ್ತ ಹೋದಂತೆ ಜವ್ವನಿಗರಿಗೆ ರಾಮಿರೆಡ್ಡಿಯಂತಹ ಅನುಭವಸ್ತರ ಅಗತ್ಯ ಬೀಳುವುದು ಸಹಜವೇ. ಆದರೆ ನಿಜವಾಗಿಯೂ ಅಸಹಜವಾಗಿದ್ದೇನೆಂದರೆ ಪ್ರಭಾವಕ್ಕೊಳಗಾಗಿದ್ದರ ವೇಗ. ಮೂರ್ನಾಲ್ಕು ತಿಂಗಳ ಹಿಂದಷ್ಟೇ ಬಿ.ಎ ಮೊದಲ ವರ್ಷಕ್ಕೆ ಮೊದಲ ಬಾರಿ ಸೇರಿದ್ದ ಸೋಮು ಈಗ ರೆಡ್ಡಿ ಸೇದಿಬಿಟ್ಟ ಹೊಗೆಯನ್ನು ತಾನು ಕುಡಿಯುವಷ್ಟು ಹತ್ತಿರವಾಗಿಬಿಟ್ಟಿದ್ದನು....

***

ರೆಡ್ಡಿ ಹೊರಗೆ ಅವಸರವಸರವಾಗಿ ಹೊರಹೋದವನು ಹತ್ತುನಿಮಿಷ ಬಿಟ್ಟು ಅರಳಿದ ಮುಖದೊಂದಿಗೆ ವಾಪಸ್ಸಾದ.
"ಬಾ-ಬಾ ಬೇಗ.... ನಿಂಗೇನೋ ತಮಾಷೆ ತೋರ್ಸ್ತೀನಿ ..."

"ಎಂತದಾ? "

"ಬಾ ಹೇಳ್ತೀನಿ "ಎಂದ ರೆಡ್ಡಿ ಒಂದೇ ಉಸಿರಿನಲ್ಲಿ ಸೋಮುವಿನ ಕೈಹಿಡಿದು ಹಿತ್ತಲಕಡೆಗೆಳೆದುಕೊಂಡು ಹೋದನು. ಹಿತ್ತಲಿಗೆ ಹೋದಮೇಲೆ ಶಬ್ದಮಾಡದೆ ತನ್ನನ್ನು ಹಿಂಬಾಲಿಸುವಂತೆ ಸನ್ನೆಮಾಡಿ ಮೆಲ್ಲಗೆ ಕಳ್ಳಹೆಜ್ಜೆ ಇಡುತ್ತ ಪಕ್ಕದ ಮನೆಯ ಹಿತ್ತಲನ್ನು ತಲುಪಿದ.ಅಲ್ಲೆಲ್ಲ ಬಚ್ಚಲುನಾತ 'ಘಂಮ್' ಎನ್ನುತ್ತಿತ್ತು. ಹೊಲಸುನೀರು ಸೊಂಪಾಗಿ ನಿಂತಿತ್ತು. ಆ ಮನೆಗೆ ಅಂಟಿಕೊಂಡಿದ್ದ ಗೋಡೆಗೆ ಒತ್ತಿಕೊಂಡು ಸೋಮುವಿಗೆ ಕಿಟಕಿಯ ಮೂಲಕ ಒಳಗಿಣುಕುವಂತೆ ಸನ್ನೆ ಮಾಡಿದ ರೆಡ್ಡಿ 'ಒಳಗೆ ನೋಡಿದ ತಕ್ಷಣ ಸೋಮುವಿನ ಮುಖದಲ್ಲಾಗಬಹುದಾದ ಬದಲಾವಣೆ'ಯನ್ನು ನೋಡಲೋಸುಗ ಕುತೂಹಲದಿಂದ ನಿಂತನು. ಒಳಗೆ ಯಾರೋ 'ಚೊಳಚೊಳ' ಸ್ನಾನ ಮಾಡುವ ಸದ್ದು.
ಸೋಮು ಭಯಮಿಶ್ರಿತ ಕುತೂಹಲದಿಂದ ಒಳಗಿಣುಕಿದನು. ಮರುಕ್ಷಣ ಅವನ
ಉಸಿರೇ ನಿಂತುಹೋಯ್ತೆನೋ ಎಂಬಂತೆ ಮುಖ ಗಹನಗಂಭೀರವಾಯ್ತು. ಕಣ್ಣುಗಳು ಎರಡರಷ್ಟಾದವು. ಬಾಯಿ ಅರ್ಧದಷ್ಟಾಯ್ತು. ಮೊದಲನೇ ಸಲ ತೂರ್ಯದ ಅನುಭವ ಮಾಡಿದ ಶಿಷ್ಯ ಅದನ್ನು ವಿವರಿಸಲಾಗದೆ ಗುರುವಿಗೆ ಶರಣಾಗಿ ನಿಲ್ಲುವ ಹಾಗೆ ನಗ್ನವಾಗಿ ಮಜ್ಜನ ಮಾಡಿಕೊಳ್ಳುತ್ತಿದ್ದ ಯಾವುದೋ ಹೆಂಗಸನ್ನು ಕದ್ದು ನೋಡಿದ್ದ ಸೋಮು ಕಾಲ-ದೇಶಗಳನ್ನು ಮೀರಿ ಸಮಾಧಿಸ್ಥನಾಗಿ ನಿಂತ.
ಪ್ರಕೃತಿ ಹಲ್ಕಿರಿದು ವಿಕಟಾಟ್ಟಹಾಸ ಮಾಡಿದಂತಿತ್ತು; ತನ್ನ ಗೌಪ್ಯತೆಯ ಪ್ರಪಾತಕ್ಕೆ ಹೇಳದೆ-ಕೇಳದೆ ಸೆಳೆದುಕೊಂಡು ಬಾಲಕನಿಗೆ ಹುಚ್ಚು ಹಿಡಿಸಿ ನಕ್ಕಂತಿತ್ತು ..!
ಅವಳು ಸ್ನಾನ ಮುಗಿಸಿ ಹೋಗುವವರೆಗೂ ಅಲ್ಲೇ ನಿಂತಿದ್ದ ಇಬ್ಬರೂ ಆಮೇಲೆ ನಿಧಾನಕ್ಕೆ ಅಲ್ಲಿಂದ ಕಾಲ್ಕಿತ್ತರು.
ರೂಮಿಗೆ ಹೋದ ಮೇಲೆ ಮುಖಕ್ಕೆ ಪಿಶಾಚನಗುವೊಂದನ್ನು ತಂದುಕೊಂಡ ರೆಡ್ಡಿ ಸೋಮು ಕಡೆ ತಿರುಗಿ "ಹೆಂಗಿತ್ತೋ ವಿಶೇಷ , ದುಡ್ಡ್ಕೊಟ್ರೂ ಸಿಗಲ್ಲ ಇಂತವೆಲ್ಲ ತಿಳ್ಕ ಬಡ್ಡಿಮಗನೆ "ಎನ್ನುತ್ತ ಇನ್ನೊಂದು ಬೀಡಿಗೆ ಬೆಂಕಿ ಅಂಟಿಸಿದ.ಸೋಮು 'ಅಲ್ಲ ಆ ರೆಡ್ಡಿಗೇನ್ ಹೇಳ್ಬೇಕೋ ಏನೋ ...ಹಾಳಾದವ್ನು ...ಏನೇನೆಲ್ಲ ಮಾಡ್ತಾನಪ್ಪ .....ಅವನಿಂದಾಗಿ ರಾತ್ರಿಯಿಡೀ ನಿದ್ದೆ ಇಲ್ಲ ಎಂತ ಇಲ್ಲ ....
ಆದ್ರೂ ನೆನ್ನೆ ನೋಡಿದ್ ಮಾತ್ರ .....' ಅಂತೇನೋ ಯೋಚನೆ ಮಾಡೋದಕ್ಕೂ ಆ ಶಿಳ್ಳೇಕ್ಯಾತ "ನೋಡ ಹೆಂಗೆ ಜೊಂಕ್ಲು-ಜೊಂಕ್ಲು ನೇತಾಡ್ತವೆ ಹಣ್ಗಳು....ಇದ್ನೇ ಹೇಳಿದ್ದು ನಾನು ಚಳ್ಳೆಹಣ್ಣು ಅಂತ ...ಸ್ವಲ್ಪ ಹತ್ತಿ ಕೊಯ್ಕೊಡು ಮಾರಾಯಾ " ಅಂತ ಅತ್ಯುತ್ಸಾಹದಿಂದ ರಸ್ತೆಬದಿಯಲ್ಲಿದ್ದ ಸಳ್ಳೇಮರವೊಂದನ್ನು ನಿರ್ದೇಶಿಸಿ ಅರಚುವುದಕ್ಕೂ ಸರಿಹೋಯ್ತು ....
ಸೋಮು ಹಿಂದುಮುಂದು ನೋಡದೆ ಮರ ಏರತೊಡಗಿದ. ಕುಪ್ಪಳಿಸಿ-ಕುಪ್ಪಳಿಸಿ ಮೇಲೇರಿದಂತೆಲ್ಲ ಮೊದಮೊದಲು ಗಡುಸಾಗಿದ್ದ ಮರದ ಕಾಂಡ ಚೂರುಚೂರೇ ಮೆತ್ತಗಾಗತೊಡಗಿತು. ಕೊನೆಗೆ ರೂಪ ಬದಲಾಯಿಸಿಕೊಳ್ಳುತ್ತ ಹೆಂಗಸೊಬ್ಬಳ ದೈತ್ಯ ಬಿಳೀ ಕಾಲಾಗಿ ಪರಿವರ್ತನೆಯಾಗಿಹೋಯ್ತು. ಸೋಮು ಮತ್ತೂ ಕುಪ್ಪಳಿಸಿ ಮೊಣಕಾಲನ್ನು ದಾಟಿ ಮಂಡಿಯನ್ನು ತಬ್ಬಿ ಕುಳಿತ .
ಅವನಿಗ್ಯಾಕೋ ಜೋರಾಗಿ ನಗಬೇಕೆನಿಸಿತು.ಜೊತೆಜೊತೆಗೆ ತಾನು ಹಣ್ಣು ಕೀಳಲು ಯಾರದೋ ಕಾಲನ್ನೇರಿ ಹೋಗುತ್ತಿದ್ದದ್ದನ್ನು ಕಂಡು ಅಚ್ಚರಿಯೂ ಆಯ್ತು .
ಏನೂ ತೋಚದೆ ತಲೆಯೆತ್ತಿ ನೋಡುತ್ತಾನೆ; ನಾಚಿಕೊಳ್ಳುತ್ತ ನಿಂತಿದೆ ನೆನ್ನೆಯ ಹೆಂಗಸಿನ ಬೆತ್ತಲೆಮೈ..!
ಸೋಮುವಿಗೆ ಹುಚ್ಚು ಹಿಡಿದಂತಾಯ್ತು .ಆಕಾಶವೆಲ್ಲ ಕರಗುತ್ತಿರುವಂತೆ ಭಾಸವಾಗಿ ಏನೇನೋ ಆಗತೊಡಗಿತು .
' ಅರೆ ಅವಳೊಬ್ಬಳನ್ನು ಬಿಟ್ಟು ಎಲ್ಲವೂ ಎಲ್ಲಿಗೋ ಹೋಗುತ್ತಿದೆಯೇ ,ಸೃಷ್ಟಿ ಶಿವನಲ್ಲಿ ಐಕ್ಯವಾಗುತ್ತಿದೆಯೇ ?
ಎಲ್ಲ ಕಪ್ಪು-ಕಪ್ಪು .ಅಮಾವಾಸ್ಯೆಯಂತಹ ಕಪ್ಪು ...ಅಯ್ಯೊ….ದೇ.. ವ....'
ಇನ್ನೂ ಏನೇನೋ ಆಗುತಿತ್ತೇನೋ .ಆದರೆ ಅಷ್ಟರಲ್ಲಿ ಯಾವನೋ ಶಿಳ್ಳೆಕ್ಯಾತ "ಅಣ್ಣಾ...ಅಣ್ಣಾ…" ಎಂದು ಕರೆಯುತ್ತಿದ್ದುದು ಅವನ ಕಪ್ಪುನಿದ್ದೆಯಲ್ಲಿ ಮೂಡಲ ಬೆಳ್ಳಿರೇಖೆಯಂತೆ ಮೂಡಿತು.

"ಏಳ..ಮಾರಾಯ ..ಬೆಳಗಾದ್ರೂ ಇನ್ನೂ ಎಮ್ಮೆತರ ಬಿದ್ದಿದ್ಯಲ .."
ದನಿ ಸ್ವಲ್ಪಸ್ವಲ್ಪವೇ ಸ್ಪಷ್ಟವಾಗುತ್ತ ಕೊನೆಗೆ ಕನಸಿನಲ್ಲಿದ್ದ ಹೆಣ್ಣಿಗೆ ಬಟ್ಟೆ ಹಾಕಿಸಿ ಅವನ ಕಣ್ಗಳನ್ನು ಬಿಡಿಸಿತು ..!