Click here to Download MyLang App

ಮನಸ್ವಿನಿ - ಬರೆದವರು : ರಾಧಿಕಾ

ಅವನು ಆಫೀಸ್ನಲ್ಲಿ ಒಂದು ಇಂಪಾರ್ಟನ್ಟ್ ಮೀಟಿಂಗ್ ಅಲ್ಲಿದ್ದಾಗ ಪದೇ ಪದೇ ಕಾಲ್ ಬರುತ್ತಿತ್ತು ,ಈಗ್ನೋರ್... ಮಾಡಿದರೂ ಮತ್ತೇ ಮತ್ತೆ ಬರುತ್ತಿತ್ತು , ಅವನ ಹೆಂಡತಿಯೇ ಆಫೀಸ್ ಅವರ್ಸ್ನಲ್ಲಿ ಕಾಲ್ ಮಾಡುತ್ತಿರಲಿಲ್ಲ ಮಾಡಿದರು ಅವನು ಎರಡು ರಿಂಗ್ ಗೆ ರಿಸೀವ್ ಮಾಡಲಿಲ್ಲವೆಂದರೆ ಅರ್ಥ ಮಾಡಿಕೊಂಡು ಹಾಗೆ ಒಂದು ಮೆಸೇಜ್ ಹಾಕಿಬಿಡುತ್ತಿದ್ದಳು . ಆದರೆ ಈ ಕರೆ ಅವನು ರಿಸೀವ್ ಮಾಡುವವರೆಗೂ ಬಿಡುವುದಿಲ್ಲವೆನಿಸಿ ಅಸಹನೆಯಿಂದಲೇ "ಹಲೋ.." ಎಂದ
" ಹಲೋ ಆರವ್..... ನಾನ್ ಕಣೋ ವಿಕ್ಕಿ... " ಎಂದೊಡನೆ ಅರವ್ನ ಮುಖದಲ್ಲಿ ಖುಷಿಯ ಮಿಂಚು ಪಸರಿಸಿತು
" ಎಕ್ಸ್ ಕ್ಯೂಸ್ ಮಿ... ಜೆಂಟಲ್ಮೆನ್... " ಎಂದು ಹೇಳಿ ಕಾನ್ಫರೆನ್ಸ್ ಹಾಲ್ ಬಿಟ್ಟು ತನ್ನ ಕ್ಯಾಬಿನ್ ಗೆ ಬಂದ , ಕಾನ್ಫಾರೆನ್ಸ್ ಹಾಲ್ನಲ್ಲಿ ಗುಸು ಗುಸು ಶುರುವಾಯ್ತು , ಏಕೆಂದರೆ ಇಲ್ಲಿಯವರೆಗೂ ಅವನು ಮೀಟಿಂಗ್ಅನ್ನು ಬಿಟ್ಟು ಒಂದೇ ಒಂದು ಬಾರಿಯೂ ಬೇರೆ ಕಡೆ ಗಮನ ಕೊಟ್ಟವನಲ್ಲ .
" ಲೊ ವಿಕ್ಕಿ.... ಹೇಗೋ ಇದಿಯಾ... ಎಲ್ಲಿದಿಯ.... ಯಾಕೋ ಇಷ್ಟು ದಿನ ಕಾಲ್ ಇಲ್ಲ ಮೆಸೇಜ್ ಇಲ್ಲ.. ಎನ್ ಕಥೆ... ? "ಎಂದು ಒಮ್ಮೆಲೇ ಸುಮಾರು ಪ್ರಶ್ನೆಗಳನ್ನೆಲ್ಲ ಕೇಳಿದ.ಇದಕ್ಕೆ ಪ್ರತಿಕ್ರಿಯೆಯಾಗಿ
" ಅಪ್ಪ...ತಂದೆ... ಸ್ವಲ್ಪ ಸಮಾಧಾನ... ಈಗ ಕಾಲ್ ಮಾಡಿದ್ದು ಯಾಕೆ ಅಂದ್ರೆ ನಾಳೆ ನಮ್ಮ್ ಡಿಗ್ರಿ ಗೆಳೆಯರೆಲ್ಲರೂ ಸೇರಿ ಒಂದು ಬನ್ಫೈಟ್ ಮಾಡೋಣ ಅಂತ ಪ್ಲಾನ್ ಮಾಡಿದಿವಿ... ನಿಂಗೆ ಸರ್ಪ್ರೈಸ್..ಕೊಡೋಣ ಅಂತ ನಾವ್ಯಾರು ಹೇಳಿರ್ಲಿಲ್ಲ ಅದ್ಕೆ ಒಂದುದಿನ ಮುಂಚೆ ಕಾಲ್ ಮಾಡಿದ್ದು.. ನಿಂಗೆ ಎನ್ ಮೀಟಿಂಗ್ ಇದ್ರು ಪರ್ವಾಗಿಲ್ಲ ಎಲ್ಲ ಕ್ಯಾನ್ಸಲ್ ಮಾಡಿ ಮ್ಯಾಂಡೇರಿಯಲ್ ಒರಿಎಂಟಲ್ಗೆ ಬಾ ಬೆಳಿಗ್ಗೆ ಹತ್ತು ಗಂಟೆಗೆ ... " ಎಂದ .
" ಆಯ್ತು ಕಣೋ.. ಬರ್ತಿನಿ..."ಎಂದು ಕಟ್ ಮಾಡಿದವನೆ ಒಂದು ಕ್ಷಣ ತನ್ನ ಡಿಗ್ರಿಯ ಮಧುರ ನೆನಪೊಂದು ಹಾದು ಹೋಗಿ ನಗುವಿನಿಂದ ಶುರುವಾಗಿ ಭಾರವಾದ ನಿಟ್ಟುಸಿರಿಗೆ ಕೊನೆಯಾಯ್ತು... ಮೀಟಿಂಗ್ ಹಾಲ್ಗೆ ಬಂದು ಮನಸಿಲ್ಲದೆಯೇ ಮೀಟಿಂಗ್ ಮುಗಿಸಿ ತಲೆನೋವೆಂದು ಮನೆಗೆ ಬಂದ ,
ಹೆಂಡತಿಗೆ ಊಟ ಮಾಡುವಾಗ ನಾಳೆ ಬೆಳಿಗ್ಗೆ ಗೆಳೆಯರೆಲ್ಲರೂ ಬನ್ಫೈಟ್ ಇಟ್ಟುಕೊಂಡಿದ್ದರೆಂದೂ ಅವಳು ಬರಬೇಕೆಂದೂ ಹೇಳಿದ ಅವಳು
" ಅಯ್ಯೋ ಸಾರಿ ರೀ...ನಾಳೆ ಆಮ್ಮನ್ ಮನೆಗೆ ಹೋಗ್ಬೇಕಿದೆ ಆರ್ಯನ್ನ ಕರ್ಕೊಂಡ್ ಬರೋಕೆ ನೆನ್ನೆನೇ ಹೇಳಿದೇನಲ್ವ ನಿಮ್ಗೆ ... " ಎಂದಳು , ಆಗ ನೆನಪಾಯ್ತು ಮಗನನ್ನು ಅಜ್ಜಿಯ ಮನೆಯಲ್ಲೇ ಬಿಟ್ಟಿದ್ದು..ಆಯ್ತೆಂದ
ಅಂದು ಅವನಿಗೆ ನಿದ್ದೆಯೇ ಬರಲಿಲ್ಲ ಅದ್ಯಾವಾಗ ಬೆಳಿಗ್ಗೆಯಾಗುತ್ತದೋ ಎಂದು ಅವನ ಚಡಪಡಿಕೆಯನ್ನು ಗಮನಿಸಿ ಏನೋ ಆಫೀಸ್ ಟೆನ್ಷನ್ ಇರಬೇಕೆಂದುಕೊಂಡಳು ,ಆಕೆ ಕೇಳಿದರೂ ಎನಿಲ್ಲವೆಂದ ಜಾಸ್ತಿ ಕೇಳಿದರೆ ಕೋಪಿಸಿಕೊಳ್ಳುತ್ತಾನೆಂದು ಸುಮ್ಮನಾದಳು ಅವನ ಹೆಂಡತಿ .
ಅಂತೂ ಸಮಯ ಕಳೆಯಿತು ಬೆಳಿಗ್ಗೆ ಸ್ವಲ್ಪ ಮುತುವರ್ಜಿಯಿಂದ ತಯಾರಾದ ಅಲ್ಲಲ್ಲಿ ಒಂದೆರೆಡು ಬಿಳಿಯಾಗಿದ್ದ ಕೂದಲನ್ನು ಹಾಗೆ ನೀಟಾಗಿ ಬಾಚಿ ಕ್ರಾಪ್ ಮಾಡಿಕೊಂಡು ತನ್ನ ದಿನದಂತೆ ಅಫೀಶಿಯಲ್ ಲುಕ್ನಲ್ಲಿ ಹೋಗಲಿಚ್ಛಿಸದೆ ರಾಯಲ್ ಬ್ಲೂ ಬಣ್ಣದ ಪೊಲೊ ಶರ್ಟ್ ಧರಿಸಿ ಜೊತೆಗೆ ಬೂದುಬಣ್ಣದ ಫಾರ್ಮಲ್ ಪ್ಯಾಂಟ್ ಧರಿಸಿ ಕೈಗೆ ಕಪ್ಪು ಬಣ್ಣದ ಸ್ಮಾರ್ಟ್ ಬ್ಯಾಂಡ್ ಧರಿಸಿ ಕನ್ನಡಿಯ ಮುಂದೆ ನಿಂತಾಗ ಹಿಂದಿನಿಂದ ಬಂದ ಹೆಂಡತಿ ಕಣ್ಣಲ್ಲೇ ಮೆಚ್ಚುಗೆ ಸೂಚಿಸಿದಳು . ಹಿಂದೆಯಿಂದ ಬಂದು ತಬ್ಬಿ "ನಂಗೆ ಭಯ ... "ಎಂದು ಹೇಳಿದಾಗ ಆರವ್
" ಭಯ ಯಾಕೆ ... ಶ್ರೀಷಾ.. ? "
" ಮತ್ತೆ... ಇಷ್ಟು ಹ್ಯಾಂಡ್ಸಮ್ ಆಗಿರೋ ನನ್ನ್ ಗಂಡನ್ನ , ಆವ್ರ್ ಕಾಲೇಜ್ ಗೆಟ್ಟುಗೆದರ್ ಅಲ್ಲಿ ನಮ್ ಹಳೆ ಡವ್ ಅಂತ ಯಾರಾದ್ರೂ ಹುಡ್ಗಿ ಬಂದು ಹಾರಿಸ್ಕೊಂಡ್ ಹೋದ್ರೆ ಅಂತ.." ಎಂದು ಹೇಳಿದಾಗ ಸಿಕ್ಕಿ ಬಿದ್ದವನಂತೆ ಒದ್ದಾಡಿದನವ ಆದರೆ ಅವನ ಹೆಂಡತಿ ಶ್ರೀಷಾ ಮಾತ್ರ ಅವನ ಅಪ್ಪುಗೆಯಲ್ಲಿ ಕಳೆದುಹೋಗಿದ್ದಳು .
" ಸರಿ ಹೋಗ್ಬನ್ನಿ....ತಡ ಆಗೋದು ಬೇಡ ತುಂಬಾ ವರ್ಷ ಆದ್ಮೇಲೆ ಗೆಳೆಯರೆಲ್ಲ ಸಿಗ್ತಿದ್ದೀರಿ ಆರಾಮಾಗಿ ಕಳೆದಿದ್ದು ಬನ್ನಿ....ಹಾಗೆ ಆ ಮಾತು ತಮಾಷೆಗೆ ಆಡಿದ್ದು ಮನಸ್ವಿನಿಗೆ ಆಗ್ಲೇ ಮದ್ವೆ ಆಗಿದೆ ಅಲ್ವಾ ನನಗೇನು ಚಿಂತೆಯಿಲ್ಲ" ಬಿಡಿಸಿಕೊಳ್ಳುತ್ತ ತುಂಟತನದಿಂದ ನುಡಿದಳು. ಆಗ ಆರವ್ ನ ಗಾಬರಿಯ ಮುಖ ತಿಳಿಯಾಯಿತು.
ಅವಳನ್ನು ಸಣ್ಣದಾಗಿ ತಬ್ಬಿ" ಆರ್ಯ ಹುಷಾರು , ನೀನೂ ಅಷ್ಟೇ ಆರೋಗ್ಯದ ಕಡೆ ಗಮನ ಇರ್ಲಿ, ಅತ್ತೇನ ಕೇಳ್ದೆ ಅಂತ್ಹೇಳು " ಮಾತಲ್ಲಿ ಇದ್ದಿದ್ದು ನಿಜವಾದ ಕಾಳಜಿ , ಸಿಕ್ಕಿದ್ದು ಮುಗುಳ್ನಗೆಯ ಉತ್ತರ.
"ಎಷ್ಟು ದಿನ ಆಗುತ್ತೆ ಬರೋದು ..? " ಮತ್ತೆ ತಿರುಗಿ ಕನ್ನಡಿಯೆಡೆಗೆ ಮುಖ ಮಾಡಿ ಕೇಳಿದ.
" ಎರಡ್ಮೂರು ದಿನ..." ಎಂದಳು
" ಆಯ್ತು.... ನಾನಿನ್ನು ಬರ್ತೀನಿ..ನಿನ್ನನ್ನ ರಂಗಪ್ಪ ಇನ್ನೊಂದು ಕಾರ್ ಅಲ್ಲಿ ಅಮ್ಮನ ಮನೆಗೆ ಬಿಟ್ಟು ಬರ್ತಾನೆ. "
" ಹುಷಾರು ರೀ... " ಅವನು ಮೆಟ್ಟಿಲಿಳಿಯುತ್ತಿದ್ದಂತೆ ಅವನಾಕೆಯ ಧ್ವನಿ ಕೇಳಿಸಿತು.
" ಸರಿ..." ಎಂದನವ ಮುಗುಳ್ನಕ್ಕು
*************
"ಹಲೋ ಮಚ್ಛಾ.. ಹೇಗೋ ಇದಿಯಾ ಎಷ್ಟು ದಿನ ಆಗಿತ್ತು ನಿನ್ನ ನೋಡಿ ? " ಎಂದು ಕೇಳಿದ ಆರವ್ ಪರಿಶಿಕ್ತ್ ನಿಗೆ ತಬ್ಬಿ
"ನಾನು ಸುಪರ್ ಕಣೋ...ನಿ ಹೇಗಿದ್ದಿ...? "
" ನಾನೂ ಫೆಂಟಾಸ್ಟಿಕ್...... ಹೇ ನಿನ್ಗ್ ನೆನಪಿದ್ಯಾ ನಿನ್ ಮನಸು ಕದ್ದಿದ್ದ ಹುಡ್ಗಿ ಅದೇ ಕಣೋ ಮನಸ್ವಿನಿ...ಇಲ್ಲೇ ಬಂದಿದ್ದಾಳೆ ಇಲ್ಲೇ ಇದ್ದಳು ... "ವ್ಯಂಗವಾಗಿ ಮಾತನಾಡಿ ಅತ್ತಿತ್ತ ಹುಡುಕಾಡುತ್ತಿದ್ದ ಪರಿಶಿಕ್ತ್ ಆರವ್ ಗೆ ಕೋಪ ಉಕ್ಕಿ ಬರುತ್ತಿತ್ತು, ಜೊತೆಗೆ ಅಸಹನೆ
"ಮಗಾ....ಓಂದು ನಿಮಿಷ ಬಂದೆ... " ಕಾಲ್ ಬರದಿದ್ದರೂ ಕಾಲ್ ಬಂದಂತೆ ನಟಿಸಿ ಅಲ್ಲಿಂದ ಬಂದ
ಅದು ನಗರದ ಪ್ರತಿಷ್ಠಿತ ರೆಸಾರ್ಟ್ 'ಮ್ಯಾಂಡೇರಿಯಲ್ ಒರಿಯೆಂಟಲ್ 'ಕಾಲೇಜಿನ ಹಳೆ ವಿದ್ಯಾರ್ಥಿಗಳಿಂದ ಕಿಕ್ಕಿರಿದು ತುಂಬಿತ್ತು. ಎಲ್ಲರೂ ಹಳೆಯ ನೆನಪುಗಳನ್ನು ಮೆಲುಕುಹಾಕುತ್ತಾ ಮಾಡಿದ ಕೀಟಲೆಗಳನ್ನ ,ಅಪರೂಪದ ಘಳಿಗೆಗಳನ್ನ ನೆನೆದು ಛೇಡಿಸುತ್ತಾ ಮತ್ತೆ ಕಾಲೇಜಿನ ದಿನಕ್ಕೆ ಮರಳಿದ್ದರು.
************
ಅವನ ಮನಸು ಕದಡಿದ ಹಾಗಾಗಿತ್ತು ನನ್ನ ಜೀವನದಲ್ಲಿ ಬಂದು ಹೋದ ದೇವತೆಯಲ್ಲವೇ ಆಕೆ...?
ಜೀವನ ಪೂರ್ತಿ ಜೊತೆಯಾಗಿರಬೇಕು ಎಂದು ಬಯಸಿದ್ದೆವು , ಆದರೆ ನನ್ನ ತಂದೆಯ ದರ್ಪ ನಮ್ಮ ಪ್ರೀತಿಯನ್ನು ನುಚ್ಚು ನೂರಾಗಿಸಿತ್ತು
ಅವನ ಮನಸು ಒಂದಷ್ಟು ವರ್ಷಗಳ ಹಿಂದೋಡಿತು.
ನಾನಾಗ ಡಿಗ್ರಿ ಮೊದಲ ವರ್ಷ ಸಾಕಷ್ಟು ಶ್ರೀಮಂತ ಇಂಡಸ್ಟ್ರಿಯಲಿಸ್ಟ್ ಜಗನ್ನಾಥ್ ಅವರ ಒಬ್ಬನೇ ಮಗ , ನನಗೂ ನನ್ನಪ್ಪನ ಹಾಗೆಯೇ ಅತಿ ಶಿಸ್ತಿನ ಜೀವನ ಮಾಡಬೇಕು ಅವರಂತೆಯೇ ಕಂಪನಿಯನ್ನು ನಡೆಸಬೇಕು ಎಂಬ ಆಸೆ . ಕಾಲೇಜಿನಲ್ಲಿ, ಸ್ಕೂಲಿನಲ್ಲಿ ಅತೀ ಬುದ್ದಿವಂತ. ಆದರೆ ಪ್ರೀತಿಯ ಅರಿವೂ ಕೂಡ ಇರಲಿಲ್ಲ ಆಗ ನನಗೆ .
ಅಂದು ಎಂದಿನಂತೆ ಕ್ಲಾಸ್ಗೆ ಹೊರಟಿದ್ದವನಿಗೆ ಓಡಿ ಬಂದು ಢಿಕ್ಕಿ ಹೊಡೆದಿದ್ದಳು ಸಿಟ್ಟಿನಲ್ಲಿ ಬೈದೆ " ನೋಡಿಕೊಂಡು ಹೋಗೋಕೆ ಆಗೋಲ್ವಾ, ಹಾಗೆ ನುಗ್ತಿದ್ದೀರಲ್ಲ..."
ಆಕೆ ಬೆದರಿದ ಹರಿಣಿ ನನಗೆ ಅಯ್ಯೊ.ಪಾಪ ಎನಿಸಿತು
" ಅದು...ಕ್ಲಾಸ್ ಗೆ ಟೈಮ್ ಆಗಿತ್ತು ಅದ್ಕೆ ಹೋಗ್ತಿದ್ದೆ ಕ್ಷಮಿಸಿ..".ಎಂದು ಓಡಿಯೇ ಬಿಟ್ಟಳು ಅಂದಿನಿಂದ ನನ್ನ ಮನಸು ಅವಳನ್ನು ನೋಡಲು ಅರಸಿದಾಗೆಲ್ಲ ಸಿಗುತ್ತಿದ್ದಳು ಅದು ಹೇಗೆ ಗೊತ್ತಾಗುತ್ತಿತ್ತೋ ಏನೋ ಆ ಭಗವಂತನಿಗೆ ಗೊತ್ತು , ಸಿಕ್ಕಾಗ ಒಂದು ನಗು ವಿನಿಮಯವಾಗುತ್ತಿತು ಅಂತೂ ಒಮ್ಮೆ ಮಾತನಾಡುವ ಅವಕಾಶ ಸಿಕ್ಕಿತ್ತು .ಕಾಲೇಜಿನಲ್ಲಿ ಕಾನ್ಫರೆನ್ಸ್ ಏರ್ಪಡಿಸಿದ್ದರು ನಾನೂ ಭಾಗವಹಿಸಿದ್ದೇ ಅವಳು ಕೂಡ, ಒಬ್ಬರಾದ ಮೇಲೆ ಒಬ್ಬರು ವಿಷಯದ ಬಗ್ಗೆ ತಾವು ನಡೆಸಿದ ರಿಸರ್ಚ್ ಬಗ್ಗೆ ವಿವರಿಸಬೇಕಿತ್ತು, ಆಕೆ ತುಂಬಾ ಭಯಗೊಂಡಿದ್ದಳು ಎಂದು ಆಕೆಯ ಮುಖ ನೋಡಿದರೆ ತಿಳಿಯುತ್ತಿತ್ತು ನಾನು ಆಕೆಯ ಹತ್ತಿರ ಹೋಗಿ
" ಮೊದಲ ಸಲ ಪ್ರೆಸೆಂಟೇಶನ್ ಕೊಡ್ತಿರೋದ " ಎಂದ ಕೂಡಲೇ ಥಟ್ಟನೆ ಹೆದರಿ ಬಿಟ್ಟಳು , ಆಮೇಲೆ ಸಮಾಧಾನಗೊಂಡು
" ಹೌದು...." ಎಂದಳು
" ಡೋಂಟ್ ವರಿ... ನಿನ್ನ ಮುಂದೆ ಇರೋರು ಎಲ್ಲರೂ ಏನೂ ತಿಳಿಯದವರು ಅಂದುಕೊಂಡು ಪ್ರೆಸೆಂಟೇಶನ್ ಎಕ್ಸ್ಪ್ಲೇನ್ ಮಾಡು.... " ಎಂದೇ , ಅದೇನೋ ತಿಳಿಯದೆ ಮೊದಲ ಬಾರಿಗೆನೇ ಅವಳೊಟ್ಟಿಗೆ ಏಕವಚನದಲ್ಲಿ ಮಾತನಾಡಿದ್ದೆ .ಪ್ರತಿಯಾಗಿ ಅವಳು ತಲೆಯಾಡಿಸಿದ್ದಳಷ್ಟೇ.
ಮುಂದೆ ಅಲ್ಲಿ ನಿರೂಪಕಿ ಮನಸ್ವಿನಿ ಎಂದಿದ್ದೆ ತಡ " ಬರ್ತೀನಿ ನಂದೇ ಸರದಿ ಈಗ ... ಥಾಂಕ್ಯು ಫಾರ್ ದ ಸಜೇಶನ್ " ಎಂದು ಓಡಿದಳು ಆಗ ನನ್ನ ಮನಸು ನಕ್ಕು ನುಡಿದಿತ್ತು 'ಹುಚ್ಚು ಹುಡುಗಿ' ಎಂದು .
ಅದೆಷ್ಟು ಚೆಂದ ಎಕ್ಸ್ಪ್ಲೇನ್ ಮಾಡುತ್ತಿದ್ದಳು ಹುಡುಗಿ.. ಆಕೆಯ ದ್ವನಿ ನನ್ನ ಕಿವಿಗೆ ಕೋಗಿಲೆ ಉಲಿಯುತ್ತಿದ್ದಂತಿತ್ತು , ಆಕೆ ಕೊಂಚ ಭಯಕ್ಕೆ ಆಕೆಯ ನೀಳ ಬೆರಳು ಮೈಕನ್ನು ಹಿಡಿಯುವ ರೀತಿ , ಆಕೆಯ ಹಾರಾಡುವ ಮುಂಗುರುಳು ,ಹಣೆಯಲ್ಲಿ ಅಲ್ಲಲ್ಲಿ ನಿಂತ ಬೆವರ ಹನಿಯನ್ನ ಆಗಾಗ ಒರೆಸಿಕೊಳ್ಳುತ್ತಿದ್ದ ರೀತಿ ... ಆಕೆಯ ಮುಗ್ದತೆ ಎಲ್ಲವೂ ನನ್ನನ್ನು ಸೆರೆಹಿಡಿದಿತ್ತು. ಸೆಮಿನಾರ್ ಮುಗಿಸಿ ಬಂದಾಗ ಆಕೆಯ ಮುಖದಲ್ಲಿದ್ದ ಸಂತೃಪ್ತಿ ಕಂಡು ನನಗೂ ಖುಷಿಯಾಗಿತ್ತು , ಕೊನೆಯಲ್ಲಿ ವಿಜೇತರ ಆಯ್ಕೆ ಮಾಡಲಾಯಿತು ಮೊದಲ ಸ್ಥಾನ ನಾನೆಣಿಸಿದಂತೆ ಅವಳೇ ಬಂದಳು ಎರಡನೇ ಸ್ಥಾನ ನನ್ನದಾಯಿತು .
ಅಂದಿನಿಂದ ಶುರುವಾಯಿತು ನಮ್ಮಿಬ್ಬರ ಗೆಳೆತನ.
ಅವಳ ಹತ್ತಿರ ಆಗ ಮೊಬೈಲ್ ಇರಲಿಲ್ಲ ನನ್ನ ಹತ್ತಿರ ಕಿ ಪ್ಯಾಡ್ ಮೊಬೈಲ್ ಇತ್ತು, ರಜೆಯಲ್ಲಿ ಯಾವಾಗಳಾದರೊಮ್ಮೆ ಅವಳ ಮನೆ ಸ್ವಲ್ಪವೇ ಹತ್ತಿರವಿದ್ದ ಟೆಲಿಫೋನ್ ಬೂತ್ ಗೆ ಕರೆಮಾಡುತ್ತಿದ್ದೆ ಆಕೆಯ ಹತ್ತಿರ ಟೆಲಿಫೋನ್ ಕರೆ ಮಾಡಲೂ ಸಹ ಸಾಕಷ್ಟು ದುಡ್ಡು ಇರುತ್ತಿರಲಿಲ್ಲ ,ಉಳಿದ ದಿನವಂತು ಕಾಲೇಜಿನಲ್ಲಿಯೇ ಸಿಗುತ್ತಿದ್ವಿ ಮಾತನಾಡುತ್ತಿದ್ವಿ , ಆಕೆ ಬಿಎಸ್ಸಿ , ನಾನು ಬಿಬಿಎ , ಸಿಗುವುದು ಕಷ್ಟವಾಗುತ್ತಿತ್ತು ಆದರೂ ಸಮಯ ಮಾಡಿಕೊಂಡು ಸಿಗುತ್ತಿದ್ದೆವು ಅವಳಪ್ಪ ಒಬ್ಬ ಕೂಲಿ ಕಾರ್ಮಿಕ ಅಮ್ಮ ಇರಲಿಲ್ಲ ಒಂದು ಹೊತ್ತು ಊಟಕ್ಕೂ ಅವರು ದುಡಿದು ತರಬೇಕಿತ್ತು ಆಕೆ ಕಾಲೇಜು ಮುಗಿದ ಮೇಲೆ ಒಂದಷ್ಟು ಸಣ್ಣ ಹುಡುಗರಿಗೆ ಅಲ್ಲೊಂದು ದೇವಸ್ಥಾನದಲ್ಲಿ ಟ್ಯೂಷನ್ ಹೇಳುತ್ತಿದ್ದಳು ಅಲ್ಲಿಂದ ಅವರ ಮನೆಸ್ಥಿತಿ ಸ್ವಲ್ಪ ಸುಧಾರಿಸಿತ್ತು ಮನಸ್ವಿನಿಗೆ ಶ್ರೀಮಂತರೆಂದರೆ ಒಂದು ರೀತಿಯ ಭಯ , ದುಡ್ಡಿಗಾಗಿ ನಮ್ಮಂತವರ ಜೀವನವನ್ನ ಹಾಳು ಮಾಡಲು ಸಹ ಹಿಂದೆ ಸರಿಯುವವರಲ್ಲ ಎನ್ನುವುದು ಆಕೆಯ ಭಾವನೆ , ನಾನು ಎಷ್ಟೋ ಸಲ ಆಕೆಗೆ ತಿಳಿಸಲು ಪ್ರಯತ್ನಿಸಿದೆ ಎಲ್ಲರೂ ಹಾಗೆ ಇರುವುದಿಲ್ಲ ಎಂದು ಆದರೆ ಆ ಅಭಿಪ್ರಾಯವನ್ನು ಬದಲಿಸಲಾಗಲಿಲ್ಲ.
ನನ್ನ ಬಗ್ಗೆ ಆಕೆ ಕೇಳಿದಾಗ ನಾನು ನಿಜ ಹೇಳಿದರೆ ನನ್ನ ಗೆಳೆತನ ಬಿಡುವಳೋ ಎಂದು ಭಯವಾಗಿ ನಮ್ಮದೊಂದು ಮಧ್ಯಮ ವರ್ಗದ ಕುಟುಂಬ ನನ್ನಪ್ಪ ಟೀಚರ್ ಎಂದು ಸುಳ್ಳು ಹೇಳಿದೆ ಆದರೆ ಅದೇ ಸುಳ್ಳು ನನ್ನ ಪ್ರೀತಿಗೆ ಮುಳುವಾಗುತ್ತದೆ ಎಂದು ಮುಂದೆ ತಿಳಿಯಲಿತ್ತು .
ಆಕೆಯ ಮೇಲಿದ್ದ ಪ್ರೀತಿಯನ್ನ ಅಂದು ನಾನು ವ್ಯಕ್ತಪಡಿಸಿದ್ದೆ ಆಕೆ ಸಹ ಖುಷಿಯಿಂದಲೇ ಸಮ್ಮತಿಸಿದ್ದಳು
ಹೆಣ್ಣುಮಕ್ಕಳ ಮನಸ್ಥಿತಿ ಏನು , ಅವರೊಟ್ಟಿಗೆ ಹೇಗಿರಬೇಕು ಎನ್ನುವುದೇ ತಿಳಿದಿರಲಿಲ್ಲ ಅಮ್ಮನ ಜೊತೆ ಕೂತು ಮಾತನಾಡುವಾಗಲೂ ಫಾರ್ಮಾಲಿಟಿ ಮೆಂಟೇನ್ ಮಾಡುತ್ತಿದ್ದೆ ನಾನು ,ಆದರೆ ಆಕೆ ಬರುವಿಕೆ ನನ್ನ ಜೀವನದ ದಿಕ್ಕನ್ನೇ ಬದಲಾಯಿಸಿತು , ಅಮ್ಮನ ಮಡಿಲಿನ ಸುಖ ಅಲ್ಲಿಯ ಒಂದು ರೀತಿಯ ಬೆಚ್ಚನೆ ಭಾವ ಇಂದಿಗೂ ಮರೆಯಲು ಸಾಧ್ಯವೇ ಇಲ್ಲ ,ಶಿಸ್ತು ಎನ್ನುವ ಭರದಲ್ಲಿ ಅದೆಷ್ಟೋ ಭಾವನೆಗಳ ಅನುಭವವನ್ನ ಬಲಿಕೊಟ್ಟಿದ್ದರು ಅಪ್ಪ , ನಾನೂ ಕೂಡ ಅದೇ ಹಾದಿಯಲ್ಲೇ ಹೊರಟಿದ್ದೆನೇನೋ.
ಅಮ್ಮ ತನ್ನ ಮಗನಿಂದ ಅದೆಷ್ಟು ಪ್ರೀತಿ ಬಯಸಿದ್ದಳೋ ..ಅವಳ ಮನಸ್ಸನ್ನು ಅರಿಯಲೇ ಇಲ್ಲ. ಆದರೀಗ ನನ್ನ ತಪ್ಪನ್ನು ತಿದ್ದಿಕೊಂಡೇ ಅಮ್ಮನ ಮುದ್ದಿನ ಮಗ ಆದೇ ಅಮ್ಮ ಇಷ್ಟು ದಿನ ಹಿಡಿದಿಟ್ಟಿದ್ದ ಪ್ರೀತಿಯೆಲ್ಲವನ್ನು ಹರಿಸುತ್ತಿದ್ದಳು .
ಮೊದಮೊದಲು ಪ್ರತಿಯೊಂದರಲ್ಲೂ ಶಿಸ್ತು ,ಅಂತಸ್ತು ನೋಡುವಾಗ ಇಷ್ಟವಾಗುತ್ತಿದ್ದ ಅಪ್ಪನ ಗುಣ ಈಗ ನನಗೆ ಒಂದು ತರಹ ಇರಿಸುಮುರಿಸು, ಸಣ್ಣ ಪುಟ್ಟ ಕೆಲಸ ತಪ್ಪು ಮಾಡಿದಾಗ ಅಪ್ಪ ಕೆಲಸದವರನ್ನು ಬೈಯ್ಯುತ್ತಿದ್ದಾಗ ಅಪ್ಪನ ಹಿಂದೆ ನಿಂತು ನಾನು ಬಯ್ಯಲು ಕುಮ್ಮಕ್ಕು ಕೊಡುತ್ತಿದ್ದವ , ಆಕೆ ತಮ್ಮ ಮನೆಯ ಸುತ್ತ ಮುತ್ತಲಿದ್ದ ಪ್ರತಿ ಗಲ್ಲಿಗೂ ಕರೆದೊಯ್ದು ಅಲ್ಲಿಯ ಕಷ್ಟ ತೋರಿಸಿಕೊಟ್ಟಾಗ , ಈಗೇನಾದರೂ ಅಪ್ಪ ಬೈದರೆ ' ಹೋಗಲಿ ಬಿಡಿ ಅಪ್ಪ ' ಎಂದು ಹೇಳಿ ಅವರನ್ನು ಮತ್ತೆ ಕೆಲಸಕ್ಕೆ ಕಳುಹಿಸುತ್ತಿದ್ದೆ , ಅವರ ಸಂಬಳದಲ್ಲಿ ಏರಿಕೆ ಮಾಡಿಸಿದೆ , ದೀಪಾವಳಿ ,ಯುಗಾದಿಗೊಮ್ಮೆ ಅಮ್ಮನ ಜೊತೆ ಸೇರಿ ಬಟ್ಟೆ ವಿತರಿಸುತ್ತಿದ್ದೆ .
ನನ್ನ ನಡುವಳಿಕೆಯ ಬದಲಾವಣೆ ಅಮ್ಮನಿಗೆ ಹಿತವೆನಿಸಿದ್ದರೆ ,ಅಪ್ಪನಲ್ಲಿ ಸಂದೇಹದ ಮೊಳಕೆಯೊಡೆಯಲು ಸಮಯ ಬೇಕಿರಲಿಲ್ಲ.
ಕಡೆಗೂ ಅಪ್ಪನಿಗೆ ನಮ್ಮಿಬ್ಬರ ಪ್ರೀತಿಯ ವಿಷ್ಯ ತಿಳಿಯಿತು , ಯಾವುದೋ ಭಿಕಾರಿಯನ್ನು ಪ್ರೀತಿಸಿರುವೆಯಾ, ಈಗಲೇ ನಿರ್ಧರಿಸು ಅವಳು ಬೇಕಾ ಇಲ್ಲ ನಾನಾ.. ಎಂದಾಗ ಒಂದು ಕ್ಷಣವೂ ಯೋಚಿಸದೆ ಅವಳೇ ಬೇಕೆಂದೇ.
ಆ ಕ್ಷಣಕ್ಕೆ ಸುಮ್ಮನಾಗಿ ಒಳಹೋದರು , ಆದರೆ ಅವರು ಮಾಡಿದ್ದೇನು ಗೊತ್ತೆ , ಯಾರೋ ಒಂದಷ್ಟು ದಾಂಡಿಗರಿಗೆ ಹೇಳಿ ಅವಳಪ್ಪನನ್ನು ಹಿಗ್ಗಾ ಮುಗ್ಗಾ ಥಳಿಸಿದರು ನನ್ನ ತಂಟೆಗೆ ಬಂದರೆ ನಿನ್ನ ಮಗಳನ್ನು ಸಹ ಇದೆ ಸ್ಥಿತಿಗೆ ಬರುವಂತೆ ಮಾಡುತ್ತೇವೆ ಎಂದು ಎಚ್ಚರಿಸಿ ಬರುವಂತೆ ಮಾಡಿದರು . ಇದಕ್ಕೆ ಹೆದರಿದ ಅವಳಪ್ಪ ತಾವು ಗಾಯಾಳುವಾಗಿ ಆಸ್ಪತ್ರೆಯಲ್ಲಿದ್ದರೂ ಹಠ ಮಾಡಿ ತಮ್ಮ ಹೆಂಡತಿಯ ತಮ್ಮನ ಮಗನ ಜೊತೆಗೆ ಮನಸ್ವಿನಿಯ ವಿವಾಹ ಮಾಡಿದರು. ಇದೆಲ್ಲ ತಿಳಿದದ್ದು ನಾನು ಆಕೆಯ ಮನೆಗೆ ಹೋಗಿ ಯಾರು ಇಲ್ಲವೆಂದು ಪಕ್ಕದ ಮನೆಯವರಿಗೆ ಕೇಳಿದಾಗ ವಿಷ್ಯ ತಿಳಿದು ಆಸ್ಪತ್ರೆಗೆ ಹೋದಾಗ ಸಿಕ್ಕಿದ್ದು ಆಕೆಯಿಂದ ಬೈಗುಳ "ನಂಬಿದ್ದಕ್ಕೆ ತುಂಬಾ ಚೆನ್ನಾಗಿರೋ ಉಡುಗೊರೆ ಕೊಟ್ಟೆ ಇನ್ನೊಮ್ಮೆ ನಿನ್ ಮುಖ ತೋರಿಸಬೇಡ ಅಂತೂ ನಾನಂದುಕೊಂಡ ಹಾಗೆ ನೀವು ಶ್ರೀಮಂತರೆಲ್ಲ ಹೀಗೆ...ನಿಮ್ಮ ಕೆಲಸ ಆಗ್ಬೇಕು ಅಂದರೆ ಯಾರ ಜೀವವನ್ನ ಬೇಕಾದ್ರೂ ಬಲಿ ಕೊಡೋದಕ್ಕೆ ಹಿಂಜರಿಯುವುದಿಲ್ಲ .... ಹೊರಟುಹೋಗು..." ಎಂದಿದ್ದಳು ಆ ಮಾತುಗಳು ಕಪಾಳಕ್ಕೆ ಬಾರಿಸಿದಂತಿತ್ತು . ನನಗೇ ಅತಿ ದುಃಖವಾಯಿತು ಮನೆಗೆ ಬಂದು ಅಪ್ಪನೊಂದಿಗೆ ಜಗಳವಾಡಿದೆ . ಇಂಥಹ ಮನೇಲಿ ಇರೋದು ನನಗೆ ಅಸಹ್ಯ ಆಗುತ್ತೆ ಮನೆ ಬಿಟ್ಟು ಹೊರಡುತ್ತೆನೆಂದಾಗ ಅಮ್ಮ ಬಿಡಲಿಲ್ಲ , ಅಮ್ಮನ ಅಳು ನೋಡಿ ಹೋಗಳಾಗಲಿಲ್ಲ ಸರಿಯೆಂದು ಮನೆಯಲ್ಲಿಯೇ ಇದ್ದೆ , ಅಪ್ಪನನ್ನು ಮಾತನಾಡಿಸಲೇ ಹೋಗಲಿಲ್ಲ , ಎಂ ಬಿ ಎ ಕೂಡ ಮುಗಿಸಿದೆ, ಮನಸ್ವಿನಿಯ ತಂದೆ ತೀರಿಹೋದರೆಂದು ನನ್ನ ಗೆಳೆಯರಿಂದ ತಿಳಿಯಿತು ಆ ಸಾವಿಗೆ ನಾನೂ ಕಾರಣನಾದೇನಲ್ಲ ಎಂದು ದುಃಖ ಒತ್ತರಿಸಿ ಬಂತು ಅದೆಷ್ಟೋ ದಿನ ಒಬ್ಬಂಟಿಯಾಗಿ ನನ್ನ ರೀಡಿಂಗ್ ರೂಮಿನಲ್ಲೇ ಕಳೆದೆ ನನಗೆ ಮನಸ್ವಿನಿಗೆ ಕ್ಷಮೆ ಕೇಳಬೇಕಿತ್ತು ಮತ್ತೆ ಮನಸ್ವಿನಿಯ ಹತ್ತಿರ ಹೋಗಬೇಕೆಂದು ತುಂಬಾ ಸಲ ಎನಿಸಿತು ಈಗಾಗಲೇ ನನ್ನಿಂದ ಆಕೆಗೆ ತುಂಬಾ ನೋವಾಗಿದೆ ಮತ್ತೆ ಹೋಗಿ ಅವಳ ಬಾಳನ್ನು ಹಾಳು ಮಾಡಲು ಇಚ್ಛೆಯಾಗಲಿಲ್ಲ ,
ಅದೇ ಸಮಯದಲ್ಲಿ ಅಪ್ಪ ನಡೆಸುತ್ತಿದ್ದ ಕಂಪನಿಯ ಚುಕ್ಕಾಣಿ ಹಿಡಿದೆ , ಆಫೀಸ್ನಲ್ಲಿದ್ದ ಒಂದಷ್ಟು ಪ್ರಿನ್ಸಿಪಲ್ಗಳನ್ನು ಬದಲಾಯಿಸಿದೆ ಕಂಪನಿಯನ್ನು ಇನ್ನಷ್ಟು ಬೆಳೆಸಿದೆ ಅಪ್ಪ
ಅದೊಂದು ದಿನ ನನ್ನೆದುರಿಗೆ ಬಂದು ಮಗುವಂತೆ ಬಿಕ್ಕಿ ಅತ್ತರು ಕ್ಷಮಿಸೆಂದರು , ಈಗಲೇ ಬಾ ಮನಸ್ವಿನಿಯ ತಂದೆಯ ಕಾಲಿಗೆ ಬಿದ್ದಾದರು ಒಪ್ಪಿಸುತ್ತೇನೆಂದರು ," ಇಗೆಲ್ಲಿ ಅವರು ನೀವು ಕೊಟ್ಟ ಏಟಿನಿಂದ ಅವರು ಸುಧಾರಿಸದೆ ಜೀವವನ್ನೇ ಬಿಟ್ಟರು ಎಂದಾಗ ನಿಜಕ್ಕೂ ಅವರಿಗೆ ತುಂಬಾ ನೋವಾಯ್ತು....ಅವರ ದುಃಖ ಅವರ ಅಳು ನನ್ನ ಮನಸಿಗೆ ತುಂಬಾ ನೋವಾಗಿ ಹೋಗ್ಲಿ ಬಿಡಿ ಪಾ....ಏನೋ ಕೆಟ್ಟ ಘಳಿಗೆ ಆಗಿದ್ದು ಆಗಿ ಹೋಯ್ತು ಬಿಟ್ಟು ಬಿಡಿ ಎಂದು ಸಮಾಧಾನಿಸಿ ಕಳುಹಿಸಿದೆ . ಏನೋ ಒಂದು ರೀತಿಯ ನಿರಾಳ ಭಾವ ಅಪ್ಪ ಬದಲಾದರೆಂದು .
ಇತ್ತ ಅಮ್ಮ ನನಗಾಗಿ ಹುಡುಗಿಯನ್ನು ಹುಡುಕುತ್ತಲೇ ಇದ್ದಳು ಏನಾದರೂ ಕುಂಟು ನೆಪ ಹೇಳಿ ಬೇಡವೆನ್ನುತ್ತಿದ್ದೆ ಆದರೆ ಈ ಸಲ ಅಮ್ಮ ಹಠ ಹಿಡಿದಳು ಆಕೆಯ ಇಚ್ಛೆ ಪೂರೈಸಲು ಅಮ್ಮ ,ಅಪ್ಪ ತೋರಿಸಿದ ಶ್ರೀಷಾ ಎಂಬ ಹುಡುಗಿಯನ್ನು ಮದುವೆಯಾದೆ . ಭೂಮಿತಾಯಿಯಷ್ಟು ತಾಳ್ಮೆ , ಸಹನೆ ಅವಳಿಗೆ ಅದೆಷ್ಟು ಹೊಂದಿಕೊಂಡಳು ನಾನು ಅವಳಿಗೆ ನನ್ನ ಪ್ರೀತಿ ಮತ್ತು ನಡೆದ ಎಲ್ಲ ಘಟನೆಯನ್ನು ಹೇಳಿದೆ ಆಕೆ ಕಿರುಚಾಡಬಹುದು ಎಂದೇಣಿಸಿದ್ದೆ ಏಕೆಂದರೆ ಯಾವುದೇ ಹೆಣ್ಣಾದರೂ ತಾನು ಮದುವೆಯಾಗುವ ಹುಡುಗನ ಮೊದಲ ಪ್ರೀತಿ ತಾನೇ ಆಗಿರಬೇಕೆಂದು ಬಯಸುವುದು , ಶ್ರೀಷಾ ನನ್ನನ್ನು ಅನಾದರದಿಂದ ನೋಡುತ್ತಾಳೇ ನನ್ನನ್ನು ಹಳೆಯ ನೆನಪುಗಳನ್ನು ನೆನೆದು ಪದೇ ಪದೇ ಚುಚ್ಚುತ್ತಾಳೆ ಎಂದುಕೊಂಡಿದ್ದೆ ಆದರೆ ಅವಳು ನನ್ನನ್ನು ನನ್ನ ಅಪ್ಪ ಅಮ್ಮನನ್ನು ಮಗುವಂತೆ ನೋಡಿಕೊಳ್ಳುತ್ತಿದ್ದಳು, ನಾನು ಮನಸ್ವಿನಿಯನ್ನು ನೆನೆದು ದುಃಖಿಸಿದಾಗ ಅವಳೇ ಸಾಂತ್ವನ ನೀಡುತ್ತಿದ್ದಳು ಒಳ್ಳೆ ಸ್ನೇಹಿತೆಯಾಗಿದ್ದಳು ಬರುಬರುತ್ತಾ ಆಕೆಯ ಪ್ರೀತಿಯನ್ನು ನಾನು ಅರ್ಥಮಾಡಿಕೊಂಡೇ, ಒಪ್ಪಿಕೊಂಡೆ ನಮ್ಮ ಪ್ರೀತಿಯ ಪ್ರತೀಕವಾಗಿ ಆರ್ಯ ಹುಟ್ಟಿದ ನಮ್ಮ ಸಂಸಾರ ಅತಿ ಚೆಂದವಿದ್ದರೂ ಮನಸ್ವಿನಿಯ ನೆನಪು ಮಾತ್ರ ಮನದ ಮೂಲೆಯಲ್ಲಿ ಮಾಸದೆ ಉಳಿದಿತ್ತು .
********************
ಹಳೆಯ ದಿನಗಳಲ್ಲಿ ಕಳೆದು ಹೋದವನ ಹಿಂದೆ ಯಾರೋ ನಿಂತು ಕರೆದಂತಾಯ್ತು ಎಂದು ತಿರುಗಿದವನಿಗೆ ಆಶ್ಚರ್ಯ ಮನಸ್ವಿನಿಯ ಗಂಡ ಹೇಮಂತ್ ಮತ್ತು ಮನಸ್ವಿನಿ ಇಬ್ಬರು ನಗುತ್ತ ನಿಂತಿದ್ದಳು , ಅವಳು ಸ್ವಲ್ಪವೂ ಬದಲಾಗಿರಲಿಲ್ಲ ಅದೇ ನಗು ಅದೇ ಮುಖ ಆದರೆ ಸಣಕಲು ದೇಹದ ಮನಸ್ವಿನಿ ಈಗ ಮೈ ಕೈ ತುಂಬಿಕೊಂಡು ಸುಂದರಿಯಾಗಿದ್ದಳು ಹೇಮಂತ್ ಕಟ್ಟಿದ ತಾಳಿ ಆಕೆಯ ಕೊರಳಲ್ಲಿತ್ತು
" ಹೇಗಿದ್ದೀರಿ ಆರವ್...? " ಆಕೆಯೇ ಮುಂದಾಗಿ ಮಾತನಾಡಿಸಿದಳು .
" ನಾನ್.ನಾನು ಚೆನ್ನಾಗಿದಿನಿ ಮನಸ್ವಿನಿ ನೀವು ಹೇಗಿದ್ದೀರಿ...? " ಎಂದ
" ನಾನು ಚೆನ್ನಾಗಿದಿನಿ... ಇವ್ರು ನನ್ನ ಗಂಡ ಹೇಮಂತ್ "
" ನಮಸ್ತೆ..." ಎಂದ ಹೇಮಂತ್ ಹೀಗೆ ಪರಿಚಯ ವಿನಿಮಯ ಆದ ಮೇಲೆ ಹಾಗೆ ಮಾತನಾಡುತ್ತ ನಿಂತರು . ಸ್ವಲ್ಪ ಹೊತ್ತು ಕಳೆದ ನಂತರ ಹೇಮಂತ್ ಯಾರೋ ಹಳೆಯ ಗೆಳೆಯ ಸಿಕ್ಕರೆಂದು ಆ ಕಡೆಗೆ ನಡೆದ ಅಲ್ಲಿ ಉಳಿದದ್ದು ಮನಸ್ವಿನಿ ಆರವ್ . ಆರವನಿಗೆ ಮನಸಲ್ಲಿ ಸಂಕುಚಿತ ತಪ್ಪಿತಸ್ಥ ಭಾವನೆ ಮನಸ್ವಿನಿಯೇ ಮುಂದಾಗಿ ಮಾತನಾಡಿಸಿದಳು.
" ಹೇಗಿದಿರಿ ಆರವ್...ಹೇಗಿದ್ದಾರೆ ನಿಮ್ಮ ಹೆಂಡತಿ ಮಗು ಅಮ್ಮ ಅಪ್ಪ...? "
" ಎಲ್ರು ಚೆನ್ನಾಗಿದ್ದಾರೆ.." ಅವನಲ್ಲಿ ಮಾತುಗಳಿಲ್ಲ .
ಮತ್ತೆ ಮೌನ. ಈ ಸಲ ಆರವ್ ಮಾತನಾಡಿದ
" ಮನಸ್ವಿನಿ ದಯವಿಟ್ಟು ನನ್ನನು ಕ್ಷಮಿಸು...ನಾನು ನಿನ್ನನ್ನು ನಿಜವಾಗಿಯೂ ಪ್ರೀತಿಸಿದ್ದೆ...ಅಪ್ಪ ನನಗೆ ತಿಳಿಯದೆ ನಿನ್ನಪ್ಪನನ್ನು ಹಿಂಸಿಸಿದರು...ದಯವಿಟ್ಟು ಕ್ಷಮಿಸು ಮನಸ್ವಿನಿ ನಿನ್ನ ಜೀವನದಲ್ಲಿ ಆಟವಾಡಿಬಿಟ್ಟೆ .. " ದುಃಖಿಸಿದನವನು.
" ಬಿಡಿ ಆರವ್ ಅದೆಲ್ಲ ಹಳೆಯ ಮಾತು, ಆಗಿದ್ದು ಆಗಿ ಹೋಯ್ತು ...ನಾನು ನಿಮ್ಮ ತಂದೆಯಿಂದ ಇದೆಲ್ಲ ಆಯ್ತಲ್ಲ ಅನ್ನೋ ಸಿಟ್ಟಲ್ಲಿ ನಿಮಗೆ ಬಾಯಿಗೆ ಬಂದ ಹಾಗೆ ಬೈದುಬಿಟ್ಟೆ ಆಮೇಲೆ ಹೇಮಂತ್ ಗೆ ಹೇಳಿ ತುಂಬಾ ದುಃಖ ಪಟ್ಟೆ ಆಮೇಲೆ ಅವರೇ ಸಮಾಧಾನಿಸಿದರು"
" ಅಂದ್ರೆ ಅವರಿಗೆ ವಿಷ್ಯ ಗೊತ್ತಾ..." ಅವನು ಕೇಳಿದ
" ಹು...ನನ್ನ ಪ್ರತಿ ಹೆಜ್ಜೆಯನ್ನೂ ಸಹ ಗೈಡ್ ಮಾಡ್ತಾ ನನ್ ಜೊತೆಗಿದ್ದಾರೆ ಅವ್ರು ನಾನು ನಿಮ್ಮನ್ನ ಪ್ರೀತಿಸಿದ ವಿಷಯವು ಅವರಿಗೆ ಗೊತ್ತು...ನಾನು ಪ್ರತಿದಿನ ಅಂದುಕೊಳ್ತಿದ್ದೆ ನಿಮ್ ಹತ್ರ ನಾನು ನಡೆದುಕೊಂಡ ರೀತಿಗೆ ಕ್ಷಮೆ ಕೇಳಬೇಕು ಅಂತ...ತುಂಬಾ ನೊಂದುಕೊಂಡಿದಿನಿ ಈಗ ನಾವಿಬ್ಬರು ಮಾತಾಡಲಿ ಅಂತ ಸುಳ್ಳು ಹೇಳಿ ಅಲ್ಲಿ ಹೋಗಿ ಮಾತನಾಡ್ತ ನಿಂತಿದ್ದಾರೆ "
" ನಿಜವಾಗ್ಯು ನೀನು ನನ್ನ ಕ್ಷಮಿಸಿದ್ದಿಯಲ್ಲ ಮನಸ್ವಿನಿ.... "
" ಚೆ ಚೆ...ಕ್ಷಮಿಸೋಷ್ಟು ದೊಡ್ಡ ತಪ್ಪು ನೀವೇನು ಮಾಡಿಲ್ಲ ಆರವ್...ಏನೋ ಘಳಿಗೆ ಹಾಗಿತ್ತು ಬಿಟ್ಟು ಬಿಡಿ ಮರೆತು ಬಿಡಿ.." ಎಂದಳು ಅವಳು .
" ನಿಜಕ್ಕೂ ನಿನ್ನ ಮನಸು ತುಂಬಾ ದೊಡ್ಡದು ಮನಸ್ವಿನಿ ನನ್ನ ಜೀವನದಲ್ಲಿ ಅದೆಷ್ಟೋ ಬದಲಾವಣೆ ತಂದ ದೇವತೆ ನೀನು ನಿನಗೆ ನಾನು ಯಾವಾಗ್ಲೂ ಚಿರಋಣಿ .."
" ಹಾಗೆಲ್ಲ ಹೇಳ್ಬೇಡಿ ಆರವ್.... ಎಲ್ಲ ಆ ದೇವರ ಆಟ... ಹೋಗ್ಲಿ ಬಿಡಿ ಹಳೆಯದ್ದನ್ನೆಲ್ಲ ಮರೆತು ಇನ್ಮುಂದೆ ಖುಷಿಯಾಗಿರೋದನ್ನ ನೋಡೋಣ...." ಅಷ್ಟರಲ್ಲಿ ಹೇಮಂತ್ ಕೂಡ ಬಂದ
" ನಿಮ್ಮಿಬ್ಬರ ಮಧ್ಯೆ ಇದ್ದ ಭಿನ್ನಾಭಿಪ್ರಾಯ ದೂರ ಆಯ್ತಾ ಆರವ್ ..ಮನಸ್ವಿನಿ." ಹೌದೆನ್ನುವಂತೆ ತಲೆಯಾಡಿಸಿದಳು ಆಕೆ
" ಅಯ್ಯೋ ಎನ್ ಕೇಳ್ತೀರಿ ಆರವ್...ಎಷ್ಟು ತಲೆ ತಿಂತಿದ್ಲು ಅಂದ್ರೆ...ದಿನ ರಾತ್ರಿ ಲೀಟರ್ ಗಟ್ಟಲೆ ಕಣ್ಣೀರು ಸುರಿಸೋಳು...ಆರವ್ ನನ್ನನ್ನ ತಪ್ಪು ತಿಳಿದುಕೊಂಡು ಬಿಟ್ರು ಅಂತ....ಇವಳ ಅಳುಗೆ ಇಷ್ಟೊತ್ತಿಗಾಗ್ಲೇ ಕೆ ಆರ್ ಎಸ್ ತುಂಬಿ ಹೋಗ್ತಿತ್ತೇನೋ.." ಎಂದು ನಕ್ಕ ಹೇಮಂತ್ ಅವನ ನಗುವಿಗೆ ಆರವ್ ಜೊತೆಯಾದರೆ ಮನಸ್ವಿನಿಯಿಂದ ಹೇಮಂತ್ ಕೈಗೆ ಗುದ್ದು ಸಿಕ್ಕಿತು.
" ಸೋ..ಇವತ್ತು ನೀವಿಬ್ರು ನಮ್ ಮನೆಗೆ ಬರ್ತಿದಿರ ನನ್ ಹೆಂಡತಿಗೆ ಈ ವಿಷಯ ಏನೂ ತಿಳಿದಿಲ್ಲ ಎಲ್ಲ ವಿಷ್ಯ ತಿಳಿಸಿ ..ನಿಮ್ಮಿಬ್ಬರನ್ನು ಅವಳಿಗೆ ಪರಿಚಯಿಸ್ತೀನಿ... " ಎಂದ ಆರವ್ ನ ಮಾತಿಗೆ ಸರಿಎಂದು ಒಪ್ಪಿಉಳಿದ ಗೆಳೆಯರೊಟ್ಟಿಗೆ ಸೇರಿ ಅಂದಿನ ಪಾರ್ಟಿಯನ್ನ ಮುಗಿಸಿ ಮನೆಗೆ ಕರೆತಂದ ಆರವ್. ಅಷ್ಟರಲ್ಲಿ ಮನೆಯಲ್ಲಿ ಎಲ್ಲರೂ ಇದ್ದರು ಆರವ್ ಹೆಂಡತಿಗೆ ಕರೆಮಾಡಿ ಮನೆಗೆ ಬರಲು ಹೇಳಿದ್ದ.
ಹೇಮಂತ್ ಮತ್ತು ಮನಸ್ವಿನಿಯನ್ನು ಮನೆಯವರೆಲ್ಲರಿಗೂ ಪರಿಚಯಿಸಿದ ಆರವ್ ನ ತಂದೆ ಆಕೆಯಲ್ಲಿ ಕ್ಷಮೆ ಕೇಳಿದರು ಆಕೆ ದೊಡ್ಡವರೆಂದಿಗೂ ಚಿಕ್ಕವರಲ್ಲಿ ಕ್ಷಮೆ ಕೆಳ್ಬಾರ್ದು ಅಂಕಲ್..ಏನೋ ಕೆಟ್ಟ ಘಳಿಗೆ ಆಗಿ ಹೋಯ್ತು...ಮರೆತು ಬಿಡಿ " ಎಂದು ಸಂತೈಸಿದರು , ಇತ್ತ ಶ್ರೀಶಾಳಿಗೂ ಒಂದು ರೀತಿಯ ಸಮಾಧಾನ. ಆರ್ಯ ನ ಮುಗ್ದ ಮಾತುಗಳಿಂದ ಮನೆಯಲ್ಲಿ ನಗುವಿನ ಅಲೆ ಪಸರಿಸಿತ್ತು . ಇತ್ತ ಪಾಶ್ಚತಾಪದಲ್ಲಿ ನೊಂದಿದ್ದ ಆರವ್ ನ ಮನ ಸಂತೃಪ್ತಿಯಿಂದ ಬೀಗಿತು.