Click here to Download MyLang App

ಮಕ್ಕಳ ಕರ್ಮ - ಬರೆದವರು : ಇಂದಿರಾ ಹೆಗ್ಡೆ | ಸಾಮಾಜಿಕ

(ಈ ಕತೆ ವನಿತಾ ಮಲ್ಲಿಗೆ, ಮಂಜುವಾಣಿ, ಮುಂಗಾರು, ಉತ್ಥಾನ, ಪ್ರಜಾಮತ, ಗೆಳತಿ, ಸುದ್ದಿಸಂಗಾತಿ, ಕಸ್ತೂರಿ, ಕನ್ನಡಪ್ರಭ- ಪತ್ರಿಕೆಗಳಲ್ಲಿ ಪ್ರಕಟವಾಗಿದೆ.)

ತನ್ನ ಹೊಂಬಣ್ಣದ ಕಿರಣಗಳನ್ನು ಬೀರುತ್ತಾ, ರವಿಯು ನಿಶೆಯತ್ತ ನೋಡಿ ಮುಗುಳು ನಗುತ್ತಿದ್ದ. ಮೈ ಸುಡುತ್ತಿದ್ದ ಬಿಸಿಲ ಧಗೆಯನ್ನು ಪಡುವಣ ತೀರದ ತಂಗಾಳಿ ಕಮ್ಮಿಗೊಳಿಸಿತ್ತು.

ಸರಸರನೆ ಮರ ಏರಿದ ದೂಮ ಪೂಜಾರಿ ಎರಡು ಎಳ ನಿೀರನ್ನು ಕಿತ್ತೆಸೆದ. ಅದನ್ನು ಕೆತ್ತಿದ ದಿವಾಕರ ಗಟ ಗಟನೆ ಕುಡಿದು ತೇಗಿದ. ಅಷ್ಟರಲ್ಲಿ ದೂಮ ಪೂಜಾರಿ ಮತ್ತೊಂದು ಮರ ಏರಿದ್ದ!

“ಧಣಿಗಳೇ! ನಮ್ಮೂರಿಗೆ ಪೋಲೀಸರು ಬಂದಂತಿದೆ!” ಮರದ ಮೇಲಿದ್ದ ದೂಮ ಪೂಜಾರಿ ಆಶ್ಚರ್ಯದಿಂದಲೇ ನುಡಿದಾಗ ದಿವಾಕರನಿಗೂ ಅಚ್ಚರಿ!” “ನಿೀನು ಯಾರನ್ನು ಹೇಳ್ತಾ ಇದ್ದೀಯೋ... ಸರಿಯಾಗಿ ನೋಡು.” ದಿವಾಕರ ಕೆಳಗಿನಿಂದಲೇ ನುಡಿದ.

“ಇಲ್ಲ ಧಣೀ... ಪೊಲೀಸರೇ...ಅದೂ ನಿಮ್ಮ ಮನೆಯತ್ತಲೇ ಹೋಗುತ್ತಿದ್ದಾರೆ.” ದಿವಾಕರನಿಗೆ ಗಾಬರಿಯಾಯಿತು.

“ಒಂದ್ನಾಲ್ಕು ಎಳನಿೀರು ತಗೊಂಡು ನಿೀನು ಹಿಂದಿನಿಂದ ಬಾ. ನಾನು ಹೊರಟೆ” ಎಂದು ದಿವಾಕರ ಮನೆಯತ್ತ ಹೆಜ್ಜೆ ಹಾಕಿದ.

ಇದುವರೆಗೆ ಅವರ ಹಳ್ಳಿಗೆ ಪೊಲೀಸರ ಪ್ರವೇಶವಾದುದೇ ದಿವಾಕರನಿಗೆ ಗೊತ್ತಿಲ್ಲ. ಗದ್ದೆಯ ನ್ಯಾಯ, ನಿೀರಿನ ವ್ಯವಹಾರ, ಇವೇ ಮುಂತಾದ ಸಣ್ಣ ಪುಟ್ಟ ನ್ಯಾಯಗಳನ್ನು ಊರ ಹಿರಿಯರೋ ಅಥವಾ ಜುಮಾದಿ ಜಾರಂದಾಯನಂತಹ ಸತ್ಯ –ಧರ್ಮ ದೇವತೆಗಳೋ...... ಪರಿಹರಿಸುತ್ತಿದ್ದವು. ಪೊಲೀಸರ ಇಂದಿನ ಅನಿರೀಕ್ಷಿತ ಆಗಮನಕ್ಕೆ ಯಾವ ಕಾರಣವೂ ದಿವಾಕರನಿಗೆ ಹೊಳೆಯಲಿಲ್ಲ.

ಪೊಲೀಸರು ಮನೆ ತಲುಪುವ ಹೊತ್ತಿಗೆ ದಿವಾಕರನೂ ತಲುಪಿದ್ದ. ಪೊಲೀಸರ ಖಾಕಿ ಬಟ್ಟೆ ಕಂಡು ಗಾಬರಿಗೊಂಡಿದ್ದ ಪಂಕಜಮ್ಮನಿಗೆ ಮಗನನ್ನು ಕಂಡು ತುಸು ಸಮಾಧಾನವಾಯಿತು.

ಅಂಗಳದಲ್ಲಿ ಭತ್ತ ಕೆರೆಯುತ್ತಿದ್ದ ಹೆಂಗಳೆಯರು ಅಪರೂಪದ ವಸ್ತುವನ್ನು ಕಂಡಂತೆ ಪೊಲೀಸರನ್ನೇ ದಿಟ್ಟಿಸಿ ನೋಡುತ್ತಿದ್ದರು. ಅವರ ನೋಟವನ್ನು ಕಂಡ ಪೊಲೀಸ್ ಪೇದೆಯೊಬ್ಬ ಠೀವಿಯಿಂದ ತನ್ನ ಕೈಯಲ್ಲಿದ್ದ ಲಾಠಿಯನ್ನು ಬೀಸಿ ಸುತ್ತಲೂ ಪರೀಕ್ಷಿಸುವವನಂತೆ ನಟಿಸತೊಡಗಿದ.

ಇನ್ಸ್‍ಪೆಕ್ಟರ್ ಸತೀಶ್ ಮನೆಯ ಮುಂದೆ ಹಾಸಿದ್ದ ಚಪ್ಪರದಲ್ಲಿ ದಿವಾಕರ ತಂದಿಟ್ಟ ಕುರ್ಚಿಯ ಮೇಲೆ ಕುಳಿತರು. ಅಷ್ಟರಲ್ಲಿ ದೂಮಪೂಜಾರಿ ಎಳನಿೀರು ತಂದು ಎಲ್ಲರಿಗೂ ಕೊಟ್ಟ.

ಇನ್ಸ್‍ಪೆಕ್ಟರ್ ಸತೀಶ್ ನೇರವಾಗಿ ಮಾತಿಗಿಳಿದರು. “ಇಲ್ಲಿ ಮೀನಾಕ್ಷಿ ಎಂಬುವಳು ಕಾಣೆಯಾಗಿದ್ದಾಳಂತೆ” ಪೊಲೀಸ್ ಇನ್ಸ್‍ಪೆಕ್ಟರ್ ದಿವಾಕರನನ್ನುದ್ದೇಶಿಸಿ ಕೇಳಿದರು. ಅವರ ಮಾತನ್ನು ಆಲಿಸಲು ತಮ್ಮ ಕೈಯಲ್ಲಿದ್ದ ಮೊರವನ್ನು ನೆಲಕ್ಕೆ ಊರಿ ನಿಂತಿದ್ದ ಹೆಂಗಳೆಯರಿಗೆ ಒಮ್ಮೆಲೇ ವಿದ್ಯುದಾಘಾತವಾದಂತಾಯಿತು. ಪಂಕಜಮ್ಮನ ಸಮೇತ ಎಲ್ಲರ ನೋಟಗಳೂ ದಿವಾಕರನನ್ನು ಇರಿದುವು. ದಿವಾಕರ ತಲೆ ತಗ್ಗಿಸಿ ನಿಂತವನು ಸಾವರಿಸಿ ನುಡಿದ.

“ನಮಗೆ ಯಾರಿಗೂ ಆ ವಿಷಯ ಗೊತ್ತಿಲ್ಲ.”

“ಮೆಣ್ಕಪೂಜಾರಿ ನಿಮ್ಮ ಒಕ್ಕಲಲ್ಲಿ ಎಷ್ಟು ವರ್ಷ ಇದ್ದ?”

“ಸುಮಾರು ಅವನ ಹಿರಿಯರ ಕಾಲದಿಂದಲೂ” ದಿವಾಕರ ನುಡಿದ.

“ಈಗ ಇಲ್ಲಿಂದ ಆತ ಹೋಗಿ ಎಷ್ಟು ವರ್ಷ ಆಯ್ತು?”

“ಮೂರು ವರ್ಷದ ಹಿಂದೆ. ಸರಕಾರ ಕೊಟ್ಟ ಜಾಗದಲ್ಲಿ ಆತ ಮನೆ ಕಟ್ಟಿಕೊಂಡು ಹೋದ.”

“ಈಗ ಈ ಕಡೆ ಬರುತ್ತಿಲ್ಲವೋ?”

“ಕೆಲಸದ ತುರ್ಬು ಜಾಸ್ತಿ ಆದಾಗ ಬರುತ್ತಾನೆ.”

“ಮೀನಾಕ್ಷಿ ಇಲ್ಲಿಗೆ ಬರದೆ ಎಷ್ಟು ದಿನಗಳಾಯಿತು?”

“ಸುಮಾರು ಎರಡೂವರೆ ತಿಂಗಳಿರಬಹುದು. ಅವಳು ತವರು ಮನೆಗೆ ಹೋಗಿದ್ದಾಳೆ ಎಂದು ಸುದ್ದಿ”

“ಅವಳ ತವರು ಮನೆಯವರೇ ಮೀನಾಕ್ಷಿ ಕಾಣೆಯಾಗಿದ್ದಾಳೆ ಎಂದು ದೂರು ಕೊಟ್ಟಿರುವುದು.” ಪೊಲೀಸ್ ಇನ್ಸ್‍ಪೆಕ್ಟರ್ ನುಡಿದಾಗ ಯಾರೂ ಉತ್ತರಿಸಲಿಲ್ಲ. “ನಮ್ಮ ಜೊತೆ ಮೆಣ್ಕ ಪೂಜಾರಿಯ ಮನೆಯ ತನಕ ಬರುತ್ತೀರಾ?” ದಿವಾಕರನನ್ನು ಇನ್ಸ್‍ಪೆಕ್ಟರ್ ಕೇಳಿದಾಗ ಪಂಕಜಮ್ಮನ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತಾಯಿತು.

“ಇವನಿಗೇನು ಹೆಣ್ಣಿಗೆ ದರಿದ್ರವಿತ್ತೇ? ಹೋಗಿ ಹೋಗಿ ಅವಳ ಸಹವಾಸ ಮಾಡಿದ್ದಾನೆ. ತಾನು ಮದುವೆ ಮಾಡಿಸುತ್ತೇನೆಂದರೂ ಒಪ್ಪಲಿಲ್ಲ. ಈಗ ಅದೇನು ಗ್ರಹಚಾರ ನಮ್ಮ ಪಾಲಿಗೆ ಕಾದಿದೆಯೋ... ಎಂದುಕೊಂಡರು ಪಂಕಜಮ್ಮ.

ಗುತ್ತು ಮನೆಯಿಂದ ಮೂರು ಫರ್ಲಾಂಗು ದೂರದಲ್ಲಿ ಗುಡ್ಡದ ಮೇಲೆ ಮೆಣ್ಕ ಪೂಜಾರಿಯ ಮನೆ. ಮನೆಯ ಸುತ್ತಲೂ ತೆಂಗಿನ ಸಸಿಗಳನ್ನು ನೆಟ್ಟಿದ್ದ. ಸ್ವಲ್ಪ ದೂರದಲ್ಲಿ ಗೇರು, ಮಾವು, ಹಲಸಿನ ಗಿಡಗಳು ಮೈ ಕೈ ತುಂಬಿಕೊಂಡು ಬಲಿಯುತ್ತಿದ್ದವು. ಮನೆಗೆ ತಾಗಿದಂತೆಯೇ ಹಸುವಿನ ಕೊಟ್ಟಿಗೆ.

ಅಪರಿಚಿತರ ಆಗಮನವನ್ನು ಮನೆಯ ನಾಯಿ ವಿರೋಧಿಸಿತು. ಮೆಣ್ಕ ಪೂಜಾರಿಯ ಹತ್ತು ವರ್ಷದ ಮಗ ಆಡುತ್ತಾ ಇದ್ದವನು ಪೊಲೀಸರನ್ನು ನೋಡಿ ಬೆದರು ಕಣ್ಣುಗಳಿಂದ ಅವರನ್ನೇ ನೋಡುತ್ತಾ ನಿಂತ. ಅವನ ಐದು ವರ್ಷ ವಯಸ್ಸಿನ ತಂಗಿ ಶಶಿ ಅಣ್ಣನನ್ನು ಅಪ್ಪಿ ಹಿಡಿದು ಭಯದಿಂದ ಕಂಪಿಸುತ್ತಾ ಪೊಲೀಸರತ್ತ ಓರೆ ನೋಟ ಬೀರಿ ನೋಡುತ್ತಿದ್ದಳು. ಅವರ ಹತ್ತಿರ ಹೋದಪೊಲೀಸ್ ಪೇದೆ.

“ಎಲ್ಲೋ ನಿಮ್ಮ ಅಮ್ಮ?” ಅಂದ

ಹುಡುಗ ತುಟಿ ಬಿಚ್ಚಲಿಲ್ಲ.

“ಅಪ್ಪ ಎಲ್ಲಿ?”

“ಗೊತ್ತಿಲ್ಲ”

“ನಿಮ್ಮ ಚಿಕ್ಕಪ್ಪ ಎಲ್ಲಿ?” ದಿವಾಕರ ಮಧ್ಯೆ ಬಾಯಿ ಹಾಕಿದ.

“ಗೊತ್ತಿಲ್ಲ”

ಭಯವಿಹ್ವಲನಾದ ರವಿ ಏನು ಕೇಳಿದರೂ ಗೊತ್ತಿಲ್ಲ ಎಂದೇ ಉತ್ತರಿಸುತ್ತಿದ್ದ. ಪೊಲೀಸರು ಮನೆಯೊಳಗೆ ನುಗ್ಗಿ ತನಿಖೆ ಆರಂಭಿಸಿದರು.

ಮೂರು ವರುಷದ ಹಿಂದೆಯಷ್ಟೇ ಕಟ್ಟಿದ ಹೆಂಚಿನ ಮನೆಯದು. ಮರದ ತೊಲೆಗಳ ಬದಲಿಗೆ ಬಿದಿರಿನ ರಿಪೀಸ್ ಪಟ್ಟಿಗಳನ್ನು ತೊಲೆಗಳಂತೆ ಉಪಯೋಗಿಸಲಾಗಿತ್ತು. ಮನೆಗೆ ತಾಗಿಕೊಂಡೇ ಎಡ ಭಾಗದಲ್ಲಿ ಮುಳಿ ಹುಲ್ಲಿನ ಜೋಪಡಿ , ಅದರೊಳಗೆ ಒಂದು ಕರಿಯ ಹಸುವನ್ನು ಕಟ್ಟಲಾಗಿತ್ತು. ಮನೆಗೆ ಒಂದು ಸುತ್ತು ಹಾಕಿದ ಪೊಲೀಸರು ಒಮ್ಮೆ ಸುತ್ತಲೂ ನೋಡಿದರು. ಹತ್ತಿರ ಇನ್ನಾವ ಮನೆಗಳೂ ಇರಲಿಲ್ಲ.

“ಈ ಒಂಟಿ ಮನೆಯಲ್ಲಿ ಮಕ್ಕಳನ್ನು ಬಿಟ್ಟು ಹೋಗಿದ್ದಾರೆಲ್ಲ?” ಇನ್ಸ್‍ಪೆಕ್ಟರ್ ಸತೀಶ್ ಕೇಳಿದರು.

“ಎಲ್ಲವೂ ಅಭ್ಯಾಸ ಬಲ. ಮಕ್ಕಳಿಗೆ ಹಾಗೆಯೇ ಇದ್ದು ಅಭ್ಯಾಸವಾಗಿದೆ” ದಿವಾಕರ ನುಡಿದ.

“ಅಪ್ಪ ಬಂದಾಗ ಪೊಲೀಸ್ ಸ್ಟೇಷನಿ್ನಗೆ ಬರಹೇಳು” ಎನ್ನುತ್ತಾ ಇನ್ಸ್‍ಪೆಕ್ಟರ್ ಸತೀಶ್ ಪೇಟೆಯ ಕಡೆ ಮುಖ ಮಾಡಿದರು.

ಮೀನಾಕ್ಷಿ ಅದೃಶ್ಯಳಾದ ಸುದ್ದಿಯನ್ನು ಗಾಳಿಯೇ ಹಳ್ಳಿಯ ಮೂಲೆ ಮೂಲೆಗೂ ಕೊಂಡೊಯ್ಯಿತೆನ್ನಬಹುದು. ಈಗ ಎಲ್ಲರ ಗಮನ ಗುಡ್ಡದ ಮೇಲಿನ ಮೆಣ್ಕ ಪೂಜಾರಿಯ ಮನೆಯತ್ತ!

“ಯಾವನನ್ನು ಕಟ್ಟಿಕೊಂಡು ಓಡಿದಳೋ!”

“ಮುಂಡೇದಕ್ಕೆ ಮುತ್ತಿನಂತಹ ಆ ಎಳೆ ಕಂದಮ್ಮಗಳನ್ನು ಬಿಟ್ಟು ಹೋಗಲು ಮನಸ್ಸಾದರೂ ಹೇಗೆ ಬಂತು?”

“ಆ ಮೆಣ್ಕ ಪೂಜಾರಿಯನ್ನ ಜೀವಂತ ಕೊಂದಳು.”

ಹೀಗೆ ಒಬ್ಬೊಬ್ಬರ ಬಾಯಿ ತನಗೆ ತೋಚಿದಂತೆ ಅದುರಿತು.

“ಅವಳು ಮಾಯವಾದುದಾದರೂ ಹೇಗೆ? ಹೋದುದಾದರೂ ಎಲ್ಲಿ?” ಎಂಬ ಕುತೂಹಲಕಾರಿ ಪ್ರಶ್ನೆ ಜನರಿಗೆ ಚಿದಂಬರ ರಹಸ್ಯವಾಗಿಯೇ ಉಳಿಯಿತು.

ಆದರೂ ಊರವರು ಮೀನಾಕ್ಷಿಯ ಅದೃಶ್ಯದಿಂದ ಮಾನಸಿಕವಾಗಿ ನೆಮ್ಮದಿಯನ್ನು ಪಡೆದರು.

“ಹೋಗಲಿ ಇಲ್ಲವಾದರೆ ತನಗಿದ್ದ ಮಾದಕರೂಪವನ್ನು ಉಪಯೋಗಿಸಿ ಊರಿನ ತರುಣರೆಲ್ಲರ ಮುಂದೆ ನಿಂತು ಮನ್ಮಥನ ಕೂರಂಬು ಎಸೆದು ಎಲ್ಲರಿಗೂ ತನ್ನ ದಾಸರನ್ನಾಗಿಸುತ್ತಿದ್ದಳು.” ಎಂದು ಊರಿನ ಬಗ್ಗೆ ಕಾಳಜಿ ಇದ್ದ ಹಿರಿಯರ ಕಳಕಳಿಯ ಮಾತು.

ಊರಿನ ಯುವಕ ಮಂಡಲದತ್ತ ಈಗ ದಿವಾಕರ ತಲೆ ಹಾಕುತ್ತಲೇ ಇರಲಿಲ್ಲ. ಆತ ಅತ್ತ ಹೋದಾಗಲೆಲ್ಲ ಊರಿನ ಕಿಲಾಡಿ ಗಂಡುಗಳು,

 

“ಗಿಳಿಯು ಪಂಜರದೊಲಿಲ್ಲಾ ಹೇ ರಾಮ ರಾಮ...

ಗಿಳಿಯು ಪಂಜರದೊಳಿಲ್ಲಾ

ಅಕ್ಕ ನಿನ್ನ ಮಾತ ಕೇಳಿ

ಚಿಕ್ಕದೊಂದು ಗಿಳಿಯ ಸಾಕಿದೆ

ಅಕ್ಕ ನಾನಿಲ್ಲದ ವೇಳೆ

ಬೆಕ್ಕು ಕೊಂಡು ಹೋಯಿತಲ್ಲೋ...” ಎನ್ನುತ್ತಾ ತಮಗೆ ಗೊತ್ತಿದ್ದ ಹಳೆಯ ಹಾಡನ್ನು ರಾಗವಾಗಿ ಹಾಡ ತೊಡಗುತ್ತಿದ್ದರು.

ಮೂರು ದಿನದ ಬಳಿಕ ಪೊಲೀಸರು ಮತ್ತೆ ಹಾಜರಾದರು ಹಳ್ಳಿಗೆ. ಮೆಣ್ಕ ಪೂಜಾರಿ ಪೊಲೀಸ್ ಸ್ಟೇಶನ್‍ನಲ್ಲಿ ಕೊಟ್ಟ ಹೇಳಿಕೆ ಊರವರು ಹೇಳಿದಂತೆಯೇ ಆಗಿತ್ತು.

ಈ ಬಾರಿ ಬಂದ ಪೊಲೀಸರು ಮಕ್ಕಳನ್ನು ಜೊತೆಗೆ ಕರೆದೊಯ್ದರು. ನಿಷ್ಕಲ್ಮಷ ಮನದ ಮಕ್ಕಳ ಬಾಯಿಂದ ಸತ್ಯವನ್ನು ಹೊರಡಿಸಬಹುದೆಂಬ ಆಸೆಯೇ ಮಕ್ಕಳನ್ನು ಸ್ಷೇಷನಿ್ನಗೆ ಕೊಂಡೊಯ್ಯಲು ಇನ್ಸ್‍ಪೆಕ್ಟರ್ ಸತೀಶರ ಅಂತರಾತ್ಮವನ್ನು ಪ್ರೇರೇಪಿಸಿತ್ತು.

ಮೂರ್ನಾಲ್ಕು ದಿನದ ತಪಾಸಣೆಯಲ್ಲಿ ದಿವಾಕರ ಹಾಗೂ ಮೀನಾಕ್ಷಿಗೆ ಇದ್ದ ಅನೈತಿಕ ಸಂಬಂಧದ ಅರಿವು ಪೊಲೀಸರಿಗಾಯಿತು.

ಒಂದು ದಿನ ದಿವಾಕರನ ಗುತ್ತು ಮನೆಗೆ ಬಂದ ಪೊಲೀಸರು ಈ ಬಗ್ಗೆ ನೇರವಾಗಿ ದಿವಾಕರನನ್ನು ಕೇಳಿದಾಗ, ಅವನ ಮುಖ ಕಪ್ಪಿಟ್ಟಿತು. ಇಲ್ಲ ಎಂದು ಸಾಧಿಸಲು ಅವನ ನಾಲಗೆ ಉಡುಗಿತ್ತು. ಕಾರಣ ಅವನ ರಾಸಕ್ರೀಡೆಯನ್ನು ಕಂಡ ಅದೆಷ್ಟೋ ಮಂದಿ ಜನರು ಅದೇ ಹಳ್ಳಿಯಲ್ಲಿ ಇದ್ದರು.

ನಾಚಿಕೆ, ಅವಮಾನ, ಭಯಗಳಿಂದ ಕಂಗೆಟ್ಟ ದಿವಾಕರ ಕ್ಷೀಣಸ್ವರದಲ್ಲಿ ನುಡಿದ:

“ಅಂಥದೇನಿಲ್ಲ... ನಮ್ಮ ತೋಟದ ಕೆಲಸಗಳಿಗೆ... ಗದ್ದೆ ಕೆಲಸಗಳಿಗೆ ಬರುತ್ತಿದ್ದಳು... ತಮಾಷೆಯಾಗಿ ಇರ್ತಿದ್ದೆವು.”

ಇನ್ಸ್‍ಪೆಕ್ಟರ್ ಅದೇನು ಗೀಚಿದರೋ... ದಿವಾಕರ ಇತ್ತ ಎಳನಿೀರು ಕುಡಿದು ಹೊರಟು ಹೋದರು.

ಪಂಕಜಮ್ಮನಿಗೆ ಮಗನ ಮುಖ ನೋಡಲು ಹೇಸಿಗೆಯೆನಿಸಿತು. ಬಾಯಿಂದ ಬಾಯಿಗೆಬಂದ ಮಾತು ಪಂಕಜಮ್ಮನ ಕಿವಿಗೂ ಬಿದ್ದಿತು.

ದಿವಾಕರ ಹಾಗೂ ಮೀನಾಕ್ಷಿಯ ‘ರತಿ-ಮನ್ಮಥ’ ಲೀಲೆಯನ್ನು ಕಂಡಿದ್ದು ಮೆಣ್ಕ ಪೂಜಾರಿಯೇ ಅವಳನ್ನು ತವರಿಗಟ್ಟಿದ್ದ ಎಂಬ ವಿಷಯ ಹಳ್ಳಿಯ ಅಬಾಲವೃದ್ಧರಿಗೂ ತಿಳಿದಿತ್ತು.

ಹಾಗಾದರೆ ಮೀನಾಕ್ಷಿ ತನ್ನ ತವರೂರ ಹಳ್ಳಿಯಿಂದಲೇ ಯಾರನ್ನಾದರೂ ಕಟ್ಟಿಕೊಂಡು ಪೇಟೆಯತ್ತ ಓಡಿರಬಹುದೇ? ಎಂಬ ಸಂಶಯವೂ ಜನರಿಗೆ ಬಾರದಿರಲಿಲ್ಲ. ಆದರೆ ದಿವಾಕರನ ಹೇಳಿಕೆ ಪಡೆಯಲು ಬಂದಿದ್ದ ಪೊಲೀಸರು, ಮೀನಾಕ್ಷಿಯ ತವರವರು, ಅವಳು ಮೆಣ್ಕ ಪೂಜಾರಿಯ ಹಳ್ಳಿಗೇ ಹೋಗಿರುವಳೆಂದು ತಿಳಿಸಿದ್ದರು. ಈಗ ದಿವಾಕರನ ಮನೆಯವರ ಮೇಲೆ ಹಳ್ಳಿಯ ಜನರ ಕಾಕದೃಷ್ಟಿ ಬಿತ್ತು. ಮನೆಯ ಮಾನ ಉಳಿಸಲು ಅವನು ಏನಾದರೂ ... ಎಂಬ ಸಂಶಯ ಜನರಲ್ಲಿ ಉದ್ಭವಿಸಿತು.

ಆಗ ಚಿಕ್ಕಪ್ಪನನ್ನು ಕರೆದರು. ಚಿಕ್ಕಪ್ಪ ಹೋಗಲೊಪ್ಪಲಿಲ್ಲ. ಆಗ ಅಪ್ಪ ಅವರನ್ನೇ ಹೊಡೆಯಲು ಮುಂದಾದರು. ನಿರುಪಾಯರಾದ ಚಿಕ್ಕಪ್ಪ ಅಪ್ಪನಿಗೆ ಅಮ್ಮನನ್ನು ಸುತ್ತಿದ ಬಟ್ಟೆಯನ್ನು ಎತ್ತಿಕೊಂಡು ಹೋಗಲು ನೆರವಾದರು. ನಮ್ಮ ತೆಂಗಿನ ಮರದಡಿಯಲ್ಲಿ ಅಪ್ಪ ತೋಡಿದ ಗುಂಡಿಯಲ್ಲಿ ಅಮ್ಮನನ್ನು ಹಾಕಿ ಅದರ ಮೇಲೆ ಕೊಟ್ಟಿಗೆಯ ಗೊಬ್ಬರ ಹಾಕಿದ್ದಾರೆ.

ರವಿ ಹೇಳುತ್ತಿದ್ದಾಗ ಪುಟ್ಟಿ ಗಾಬರಿಯಿಂದ ಅಣ್ಣನನ್ನೊಮ್ಮೆ ಇನ್ಸ್‍ಪೆಕ್ಟರನ್ನೊಮ್ಮೆ ನೋಡುತ್ತಿದ್ದಳು. ತಂದೆ ತಾಯಿಗಳಿಬ್ಬರಿಂದಲೂ ದೂರವಾದ ಪುಟ್ಟ ಹೃದಯ ಅಣ್ಣನನ್ನೇ ಆಶ್ರಯಿಸಿತ್ತು.

ರವಿಯನ್ನು ಜೊತೆಗೂಡಿ ಇನ್ಸ್‍ಪೆಕ್ಟರ್ ಇತರ ಪೊಲೀಸರೊಡನೆ ಮೆಣ್ಕ ಪೂಜಾರಿಯ ಮನೆಯ ಬಳಿ ನಡೆದರು.

ರವಿ ತೋರಿಸಿದ ಗೊಬ್ಬರದ ರಾಶಿಯನ್ನು ಸರಿಸಿ ಕೆದಕಿದಾಗಲೇ ಮೂಗು ಮುಚ್ಚುವ ನಾತ ಬರಲಾರಂಭಿಸಿತು.

ಮೀನಾಕ್ಷಿಯ ದೇಹದ ಎಲ್ಲಾ ಭಾಗಗಳೂ ಕೊಳೆತು ನಿೀರಾಗಿತ್ತು. ಇದನ್ನು ನೋಡಿ ಕೆಲವರಿಗೆ ತಲೆ ತಿರುಗಿದರೆ, ಮತ್ತೆ ಕೆಲವರಿಗೆ ವಾಂತಿಯಾಯಿತು. ದಿವಾಕರನಾದಿಯಾಗಿ ಎಲ್ಲರ ಮುಂದೆ ಮೀನಾಕ್ಷಿಯ ಸುಂದರ ರೂಪ ತೇಲಿ ಬಂತು.

ಯಾವುದೇ ಕೆಟ್ಟ ಚಟಕ್ಕೆ ಬಲಿಯಾಗಿರದ ಮೆಣ್ಕ ಪೂಜಾರಿಯ ಇಂದಿನ ಅವಸ್ಥೆಗೆ ಊರವರೆಲ್ಲರ ಅನುಕಂಪ, ತನ್ನದೇ ಸ್ವಂತ ಮನೆ ಕಟ್ಟಿ, ಇದ್ದ ಆತನ ಕನಸುಗಳು ಹಲವಾರು. ಹಳ್ಳಿಯ ಜನರೆಲ್ಲರಿಗೂ ಅವನ ಒಳ್ಳೆಯ ಗುಣಗಳ ಪರಿಚಯವಿತ್ತು. ಮೃದು ಹೃದಯದ ಮೆಣ್ಕ ಪೂಜಾರಿ ಪತ್ನಿಯನ್ನು ಕೊಂದನೆಂದು ಹೇಳಿದರೆ ನಂಬುವ ಮಾತೇ ಆಗಿರಲಿಲ್ಲ. ಆದರೆ ಕಣ್ಣ ಮುಂದೆ ನೋಡಿದುದು ಸುಳ್ಳಾಗಲು ಸಾಧ್ಯವೇ? ಮೀನಾಕ್ಷಿಯ ಕೊಲೆಯ ಬಗ್ಗೆ ಊರಲ್ಲೇ ಚರ್ಚೆ ನಡೆಯಿತು. ‘ಗಂಡ ಜಾರನಾದರೂ ಹೆಂಡತಿ ಕ್ಷಮಿಸಿ ಸ್ವೀಕರಿಸುತ್ತಾಳೆ, ಹೆಂಡತಿ ಜಾರಿದರೆ ಕೊಂದೇ ಬಿಡುವುದೇ?’ ಮೀನಾಕ್ಷಿಯ ಬಗ್ಗೆ ಅನುಕಂಪವಿದ್ದವರ ಧ್ವನಿ. ಅದಕ್ಕೆ ಮತ್ತೊಬ್ಬರು ಉತ್ತರಿಸಿದರು:

ಮೆಣ್ಕ ಪೂಜಾರಿ ಕ್ಷಮಿಸದೆ ಹೋದರೂ ಅವಳನ್ನು ತವರು ಮನೆಗೆ ಅಟ್ಟಿದ್ದ. ಹಿರಿಯರು ಮತ್ತೆ ಅವರನ್ನು ಒಂದು ಗೂಡಿಸಿದರು. ಆಮೇಲೆ ಆದರೂ ಈಗ ಹೊಸ ಬಾಳು ಬಾಳಲು ಪ್ರಯತ್ನಿಸಬೇಕಿತ್ತು. ಆದರೆ ಮೀನಾಕ್ಷಿ ಹಾಗೆ ಮಾಡಲಿಲ್ಲ. ಬದಲಾಗಿ ಒಂದು ದಿನ ಗಂಡನ ಕೈಗೆ ಇಬ್ಬರೂ ಸಿಕ್ಕಿ ಬಿದ್ದರಂತೆ... ಅಂದೇ ಇಬ್ಬರನ್ನೂ ಕೊಲ್ಲಲು ಆತ ಮುಂದಾಗಿದ್ದನಂತೆ, ಆದರೆ ದಿವಾಕರ ತಪ್ಪಿಸಿಕೊಂಡಿದ್ದನಂತೆ. ಈಕೆ ಎಲ್ಲಿ ಹೋಗ್ತಾಳೆ.

“ಆದರೂ ಕೊಲ್ಲಬಾರದಿತ್ತು...” ಮತ್ತೊಂದು ಧ್ವನಿ

“ಯಾವನೇ ವ್ಯಕ್ತಿ ತಾನು ಇಂತಹ ದೃಶ್ಯ ಕಂಡರೆ ಸುಮ್ಮನಿರುವುದಿಲ್ಲ. ಹೆಚ್ಚೇಕೆ... ಪತಿಯಾದವಳು ತನ್ನ ಪತಿಯನ್ನು ಆ ಸ್ಥಿತಿಯಲ್ಲಿ ಕಂಡರೆ ಮುಗಿಸದೇ ಬಿಡುವಳೇ... ರೋಷ ಯುಕ್ತನಾದ ಗಂಡು ಮಚ್ಚಿನಿಂದ ಚಚ್ಚುತ್ತಾನೆ... ಚಾಣಾಕ್ಷಳಾದ ಹೆಣ್ಣು ವಿಷವಿಕ್ಕಿ ಕೊಲ್ಲುತ್ತಾಳೆ...”

“ಹೌದಪ್ಪ... ಇದು ಮಾತ್ರ ನಿಜ... ಪಾಪ... ಮೆಣ್ಕ ಪೂಜಾರಿಯ ಅವಸ್ಥೆ ಹೀಗಾಗಬಾರದಿತ್ತು. ಇದೆಲ್ಲವೂ ಅವನ ಕರ್ಮ...” ಹಿರಿಯ ವೃದ್ಧರು ನುಡಿದಾಗ ಮತ್ತೊಬ್ಬರು ಮಧ್ಯೆ ಬಾಯಿ ಹಾಕಿದರು:

“ಇದು ಮಕ್ಕಳ ಕರ್ಮ!”