ಬೇರುಗಳಿಲ್ಲದ ಬೋಳು ಮರ - ಬರೆದವರು : ಮೃಣಾಲಿನಿ. ಪಿ. ಅಗರಖೇಡ್ | ಸಾಮಾಜಿಕ
ಕೊರೆಯುವ ಜನೆವರಿ ಚಳಿ, ಗ್ಲಾಸ್ಸಿನಲ್ಲಿ ಮದ್ಯ ಹಾಕಿ ಕುಡಿಯುತ್ತಿದ್ದ ರವಿ, ಅವನ ಬಾಲ್ಯದ ನೆನೆಪುಗಳು ಅಂದು ಅವನ್ನನ್ನು ಶೂಲದಂತೆ ಇರಿಯುತ್ತಿದ್ದವು.
ಎಂಟು ವರ್ಷಕ್ಕೆಲ್ಲ ಉಪನಯನ ಮಾಡಿಕೊಂಡ ಅವನು, ಸಂಧ್ಯಾವಂದನೆ ಮಾಡಲು ಬಂದರೆ, ಅಮ್ಮ ಎಲ್ಲ ಪರಿಕರಗಳನ್ನು ಸಜ್ಜು ಮಾಡಿ ಇಡುತ್ತಿದ್ದಳು ಬೇಗ ಬೇಗ, ಸಂಧ್ಯಾವಂದನೆ ಮುಗಿಸಿ ಶಾಲೆಯ ಸಮವಸ್ತ್ರ ಹಾಕಿ ಕೊಳ್ಳುತ್ತಿರುವಾಗಲೇ, ಆ ಕಡೆಯಿಂದ ಅಮ್ಮ ತಿಂಡಿ ತಿನಿಸಿ, ತಲೆ ಬಾಚಿ, ಕೈಗೆ ಕರವಸ್ತ್ರ ಕೊಡುತ್ತಿದ್ದಳು. "ನೋಡು ನೀನು ಚೆನ್ನಾಗಿ ಓದಿ, ದೊಡ್ಡ ಇಂಜಿನಿಯರ್ ಆಗಬೇಕು, ಅಪ್ಪನ ಹಾಗೆ ಚಿಕ್ಕ ಸರಕಾರಿ ನೌಕರಿ ಮಾಡಿ, ಆರಕ್ಕೆರದೇ , ಮೂರಕ್ಕಿಳಿಯದೆ, ಇದೆ ಊರಲ್ಲಿ ಇದ್ದು ಬಿಡ ಬೇಡ. ದೊಡ್ಡ ಕನಸು ಕಂಡರೆ ತಾನೇ ಚಿಕ್ಕ ಕನಸಾದ್ರೂ ನನಸಾಗುವುದು. ಕನಸೇ ಇರದೆ ಎನೂ ಸಾಧಿಸಲಾಗದು " ಎಂದು ಹೇಳುತ್ತಿದ್ದಳು.
ಅಪ್ಪ, ನಿತ್ಯ ಪೂಜೆ, ಜಪ ತಪ, ನೌಕರಿ ಇದರಲ್ಲೇ ವ್ಯಸ್ತವರಾಗಿರುತ್ತಿದ್ದರು. ಆಗೊಮ್ಮೆ ಈಗೊಮ್ಮೆ ಗಣಿತದ ಲೆಕ್ಕ ಹೇಳಿಕೊಡುತ್ತಿದ್ದರು. ಪೌರಾಣಿಕ ಕಥೆಗಳನ್ನು ಹೇಳುತ್ತಿದ್ದರು. " ನೀ ಯಾವುದೇ ವೃತ್ತಿ ಸೇರಿಕೋ, ನಿಯತ್ತಾಗಿ ದುಡಿದರೆ ಸಾಕು, ನಿನಗೆ ಭಾಗ್ಯ ಲಕ್ಷ್ಮಿ ಹಾಗು ವಿಜಲಕ್ಷ್ಮಿ ಇಬ್ಬರು ಒಲಿಯುತ್ತಾರೆ ಅಂತ ಹೇಳುತ್ತಿದ್ದರು. ಯಾರನ್ನೋ ಒಲಿಸಿಕೊಳ್ಳದೆ, ಭಗವಂತನನ್ನು ಒಲಿಸಿಕೂ ಎಂದು ತಾವು ಕೇಳಿದ ಆಧ್ಯಾತ್ಮಿಕ ಪ್ರವಚನದ ಸಾರವನ್ನು ಹೇಳುತ್ತಿದ್ದರು.
ಮಗನಿಗೆ ಇಷ್ಟವಾದ ಹಣ್ಣು, ಹಸುವಿನ ತುಪ್ಪ, ವಿಧ ವಿಧ ತರಕಾರಿ , ದೂರದ ಮಾರ್ಕೆಟಗೆ ಹೋಗಿ, ಹೊರಲಾರದೇ ಹೊತ್ತು ತರುತ್ತಿದ್ದರು. ಎಲ್ಲರ ಹತ್ತಿರ ಸೈಕಲ್ ಇದ್ದರೆ, ಇವರು ಮಾತ್ರ ಯಾವಾಗ್ಲೂ ಕಾಲ್ನಡಿಗೆ. ಏಕಾದಶಿ ಮತ್ತಿತರೆ ವೃತ ನೇಮಗಳಿಂದ, ನೀರಹಾರ ಉಪವಾಸ, ಒಪ್ಪತ್ತು ಊಟ, ಹೀಗೆ ದೇಹವನ್ನು ದಂಡಿಸಿ, ನೋಡಲು ಕೃಶವಾಗಿದ್ದರೂ ಆರೋಗ್ಯವಾಗಿದ್ದರು. ಅದಕ್ಕೆ ತಕ್ಕಂತೆ ಸರಳ ಜೀವನ ನಡೆಸುತ್ತಿದ್ದ ರಾಧಾಬಾಯಿ. ಮಗನ ವಿದ್ಯಾಭ್ಯಾಸಕ್ಕೆ ಒಂದುಚೂರು ಕಷ್ಟ ಬರದಹಾಗೆ, ಎಲ್ಲ ಕಷ್ಟ ತಾವೇ ಸಹಿಸಿಕೊಳ್ಳುತ್ತಿದ್ದರು.
********** **** ****
ಮಗ ರವಿ, ತಂದೆ ಕೃಷ್ಣಾಚಾರ ಕಾಲಿಗೆ ನಮಸ್ಕರಿಸಿ, ಇಂಜಿನಿಯರಿಂಗಲ್ಲಿ, ಮೊದಲ ರಾಂಕ್ ಗಳಿಸಿದ ಸಿಹಿ ಸುದ್ದಿ ಹೇಳಿದನು, ಅಮ್ಮನಿಗೆ ಎಲ್ಲಿಲ್ಲದ ಸಂತೋಷ, ಅಪ್ಪ 'ಕಲ್ಯಾಣಮಸ್ತು ' ಅಂತ ಹೃದಯ ತುಂಬಿ ಹರಿಸಿದರು.
ಈ ಸಂತೋಷಕ್ಕೆ ಇನ್ನೊಂದು ಸಮಾಚಾರ ಸೇರಿಸಿ ಹೇಳಿದನು, ನಾನು ನ್ಯೂಯಾರ್ಕ್ನ ಪ್ರಸಿದ್ಧ ಯೂನಿವರ್ಸಿಟಿಯಲ್ಲಿ ಸ್ನಾತಕೋತ್ತರ ಪದವಿ ಮಾಡಲು ಬಯಸಿದ್ದೇನೆ, ಅದಕ್ಕೆ ಬೇಕಾದ ಅರ್ಹತಾ ಪರೀಕ್ಷೆಗಳಲ್ಲಿ ಪಾಸಾಗಿದ್ದೇನೆ. ಇನ್ನು ನಿಮ್ಮ ಅನುಮತಿ ಸಿಕ್ಕರೆ ಮುಂದಿನ ವಾರ ಅಮೇರಿಕಾಗೆ ಹೊರಡುತ್ತೇನೆ ಅಂತ ಹೇಳಿದ...
****************
ನ್ಯೂಯೋರ್ಕ್
ಚಟ್ನಿಪುಡಿ, ಮೆಂತ್ಯೆ ಹಿಟ್ಟು, ಬೇಸನ್ ಉಂಡಿ, ಅವಲಕ್ಕಿ ಮಾಡಿ ಕೊಟ್ಟ ಅಮ್ಮನ ಸೆರಗಿನಲ್ಲಿ ಇಂಗಿನ ಘಮ, ರವಿಗೆ, ತಿಂಡಿ ತಿನ್ನುವಾಗ ನೆನಪಾಗುತಿತ್ತು.
ಯಾವದೋ ಗೊತ್ತಿರದ ದೇಶ, ಪರಿಚಯವಿರದ ಸಂಸ್ಕೃತಿಯ ಮಧ್ಯೆ ನಾನು ಏನು ಮಾಡುತ್ತಿದ್ದೇನೆ, ಅಂತ ಅವನು, ತನ್ನನ್ನು ತಾನೇ ಪ್ರಶ್ನಿಸಿಕೊಳ್ಳುತ್ತಿದ್ದ. ನೀನು ಉನ್ನತ ಪದವಿ, ಒಳ್ಳೆ ಹುದ್ದೆ, ಕೈ ತುಂಬಾ ಡಾಲರ ಸಂಬಳ, ಐಷಾರಾಮಿ ಕಾರು ಬಂಗಲೆ ಇದನ್ನೆಲ್ಲಾ ಗಳಿಸುವ ಕನಸಿನ ಮೂಟೆ ಹೊತ್ತು ಕೊಂಡು ಪರಕೀಯರ ಮಧ್ಯೆ ಬಂದಿದ್ದೀಯಾ, ಅಂತ ಅವನ ಗುರಿ ಎಚ್ಚರಿಸುತ್ತಿತ್ತು.
ವರ್ಷಕ್ಕೊಮ್ಮೆ ತಂದೆ ತಾಯಿಯನ್ನು ಭೇಟಿಯಾಗಲು ಬರುತ್ತಿದ ರವಿ, ಒಂದು ದಿನ ಫೋನ್ ಮಾಡಿ, ಅಮ್ಮ ನನ್ನ ಮದುವೆ ಆಯಿತು, ಹೆಂಡತಿ ಜೊತೆಗೆ ಬರುತ್ತೇನೆ ಅಂತ ಹೇಳಿದ.
ಇದ್ದ ಒಬ್ಬ ಮಗನ ಮದುವೇಲಿ, ಹಸಿರು ಬಳೆ, ಹಸಿರು ಸೀರೆ ಉಟ್ಟು ಚೌಕಲಾಣಿ ( ಚೂಚ್ಚಲ ಮಗನ ಯೋಗಕ್ಷೇಮಕ್ಕೆ ಮಾಡುವ ಒಂದು ನೇಮ ) ಉದ್ಯಾಪನೆ ಮಾಡುವ ಕನಸು ಕಂಡ ರಾಧಾಬಾಯಿಗೆ ನಿರಾಸೆ ಕಾದಿತ್ತು. ಆದರೂ ಮಗನ ಈ ಮದುವೆಯಿಂದ ದೊಡ್ಡ ಕಂಪನಿಗೆ ಸಿಇಓ ಆಗುತ್ತಾನೆ ಅಂತ ತಿಳಿದು ತನ್ನ ಕಣ್ಣೀರನ್ನು ಮರೆಮಾಚಿದಳು.
' ನೋಡಿ ನನ್ನ ಮಗ, ಎಷ್ಟು ಧಾಡಸಿ, ಮೇಲಧಿಕಾರಿಯನ್ನು ಒಲಿಸಿಕೊಂಡು, ಅವರ ಮಗಳನ್ನು ಹಾಗು ಉನ್ನತ ಹುದ್ದೆಯನ್ನು ಇಷ್ಟು ಚಿಕ್ಕ ವಯಸ್ಸಿನಲ್ಲೇ ಗಳಿಸಿಕೊಂಡ ' ಅಂತ ಹೆಮ್ಮೆಯಿಂದ ಹೇಳಿಕೊಂಡಳು.
ಅಮೇರಿಕಾದಲ್ಲಿಯೇ ಹುಟ್ಟಿ, ಬೆಳದ ಸೊಸೆ ಹೇಗಿರುತಾಳೋ ಏನೋ ಅಂತ ಮನಸ್ಸಿನಲ್ಲಿ ಕಳವಳ ಪಡುತ್ತಿದ್ದರು ರಾಧಾಬಾಯಿ.
ಅದೇ ಕೊನೆ, ತಂದೆ ಮಗನ ಭೇಟಿ, ಮುಂದೆ ನಾಲ್ಕು ವರ್ಷವಾದರೂ ರವಿ ಹಾಗು ಅವನ ಪತ್ನಿ ರಾಕುಲ್ ಭಾರತಕ್ಕೆ ಬರಲಾಗಲಿಲ್ಲ. ಗ್ರೀನ್ ಕಾರ್ಡ್ ಪಡೆದು ಅಮೇರಿಕಾದ ಕಾಯಂ ಸಿಟಿಜನ್ ಆಗಲು ಹರಸಾಹಸ ನಡೆದಿತ್ತು. ಇದರ ನಡುವೆ ಒಂದು ಗಂಡು ಮಗುವಾಯಿತು. ಕಾನೂನಿನ ಕಟ್ಟುಪಾಡುಗಳು, ಕಛೇರಿಯಲ್ಲಿನ ಕಲಾಪಗಳು, ರವಿಗೆ ಮಾನಸಿಕವಾಗಿ ತುಂಬಾ ಒತ್ತಡ ಹೇರಲಾರಂಭಿಸಿದವು. ರವಿ ಮೆಲ್ಲಗೆ ಕುಡಿತದ ವ್ಯಸನಕ್ಕೆ ಬೀಳತೊಡಗಿದ.
ಆಗಾಗ ಅಪ್ಪನ ನೆನಪು ಬರುತ್ತಿತ್ತು. ಅಪ್ಪ ಸಣ್ಣ ನೌಕರಿ ಮಾಡುತ್ತಿದ್ದರು. ಆದರೆ ಅವರಿಗೆ ನೆಮ್ಮದಿ ದೊಡ್ಡದಾಗಿ ಲಭಿಸಿತ್ತು. ತಮ್ಮ ಮಾನಸಿಕ ಸದೃಢತೆಯನ್ನು ಅವರು ಆಧ್ಯಾತ್ಮದಿಂದ ಗಳಿಸಿದ್ದರು. ಅಪ್ಪನಿಗೆ ಕಡಿಮೆ ಸಂಬಳವಿತ್ತು, ಆದರೆ ದಿನನಿತ್ಯದ ಜೀವನಕ್ಕೆ ಅಂತಹ ಕಷ್ಟವೇನೂ ಇರಲಿಲ್ಲ. ಶ್ರೀಮಂತಿಕೆ, ಅಂತಸ್ತು, ಉನ್ನತ ಹುದ್ದೆ ಇದೆಲ್ಲ ಇರದೆಯೂ ನಮ್ಮ ಜೀವನ ಸಲೀಸಾಗಿಯೇ ನಡೆಯುತ್ತದೆ ಅಂದಮೇಲೆ , ಏಕೆ ಈ ಮಾಯಾಮೃಗದ ಬೆನ್ನಟ್ಟಬೇಕು ಎಂದು ಹಲವು ಬಾರಿ ಇಂಗ್ಲಿಷ್ ಸಾರಾಯಿ ನಶೆ ಅವನ್ನನ್ನು ಕನವರಿಸುವಂತೆ ಮಾಡುತ್ತಿತ್ತು. ರವಿ ತಾ ಬೆಳೆದ , ಸಂಸ್ಕೃತಿಯನ್ನು, ಆಚಾರ ವಿಚಾರಗಳನ್ನು ಬೇಕೆಂತಲೇ ಮುಸುಕು ಹಾಕಿ ಮಲಗಿಸಿದ್ದ. ಅದು ನೆನಪು ಬಂದಾಗ, ಮತ್ತೆ ಎರಡು ಗ್ಲಾಸ್ ವಿಸ್ಕಿ ಇಳಿಸುತ್ತಿದ್ದ.
2020ನೆ ಮಾರ್ಚ್ ತಿಂಗಳು ಕೊನೆಯ ವಾರ, ತಂದೆ ತಾಯಿ ಇಬ್ಬರಿಗೂ ಕರೋನಾ ಪಾಸಿಟಿವ್ ಆಗಿ ಆಸ್ಪತ್ರೆಗೆ ದಾಖಲಾಗಿದ್ದ ಸುದ್ದಿ ತಿಳಿಯಿತು. ಅವರನ್ನು ನೋಡಲು ಹೋಗಬೇಕೆಂಬ ಬಯಕೆ ಅಮೆರಿಕದಲ್ಲಿ ಆದ ಲಾಕ್ ಡೌನ್ ತಡೆಯೊಡ್ಡಿತು. ಅಂತರಾಷ್ಟ್ರೀಯ ವಿಮಾನ ಹಾರಾಟವನ್ನು ನಿಷೇಧಿಸಲಾಗಿತ್ತು. ಅಮೇರಿಕ ಹಾಗು ಯುರೋಪ್ ದೇಶವಾಸಿಗಳಿಗೆ, ಭಾರತ ಪ್ರವೇಶ ತಡೆ ಹಿಡಿದಿತ್ತು.
ರವಿಯ ಬಳಿ, ಅತಿ ಶೀಘ್ರದಲ್ಲಿ ಮುಟ್ಟುವ ಬಿಸಿನೆಸ್ ಕ್ಲಾಸ್ ಫ್ಲೈಟ್ಗೆ ಹೋಗುವ ದುಡ್ಡು ಇತ್ತು, ಆದರೆ ಫ್ಲೈಟ್ಗಳ ಹಾರಾಟವೇ ಸ್ಥಗಿತಗೊಂಡಿದ್ದವು . ಯಾವ ನೆಂಟರು, ನೆರೆಹೊರೆಯವರು, ತಂದೆ ತಾಯಿಯ ಸಹಾಯಕ್ಕೆ ಬರಲಿಲ್ಲ, ಕರೋನ ಒಬ್ಬರಿಂದ, ಒಬ್ಬರಿಗೆ ಹರಡುವ ಕಾಯಿಲೆ ಆದರಿಂದ ಪಾಲಿಕೆಯವರು ‘ಕೃಷ್ಣರಾಧಾ ನಿವಾಸವನ್ನು’ ' ಸೀಲ್’ ಮಾಡಿಬಿಟ್ಟರು. ರವಿ ಆಸ್ಪತ್ರೆಯ ವೈದ್ಯರ ಜೊತೆ ನೇರ ಸಂಪರ್ಕದಲ್ಲಿ ಇದ್ದನು. ಅವರನ್ನು ಪ್ರತಿಷ್ಠಿತ ಆಸ್ಪತ್ರೆಯಲ್ಲಿ ದಾಖಲಿಸಿರಿ ಎಂದು ಬೇಡಿಕೊಂಡನು. ಆದರೆ, ಎಲ್ಲೂ ಬೆಡ್ ಖಾಲಿ ಇರಲಿಲ್ಲ.
ಮೊದಲು ಸ್ವಲ್ಪ ಜ್ವರ, ನಂತರ ಇಬ್ಬರ ಆರೋಗ್ಯ ದಿನೇ ದಿನೇ ಹದಗೆಡುತ್ತಿತ್ತು. ಪಾಪ ರವಿ, ಭಾರತಕ್ಕೆ ಮರಳಲು ಹಲವು ಪ್ರಭಾವಿ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿದ್ದ. ಭಾರತ ಸರ್ಕಾರವು ಅಮೇರಿಕಾದಲ್ಲಿ ಸಿಕ್ಕಿಹಾಕಿಕೊಂಡ ಸಾವಿರ ಸಾವಿರ ಭಾರತೀಯರನ್ನು ಏರಲಿಫ್ಟ್ ಮಾಡುತ್ತದೆ ಎಂಬ ವಿಷಯ ತಿಳಿಯಿತು. ಅದರಲ್ಲಿ ಏನಾದರು ಭಾರತಕ್ಕೆ ತೆರಳಲು ಆಸ್ಪದವಿದೆಯೇ ಅಂತ ಯೋಚಿಸಿದ.
" ಅದು ಹೇಗೆ ನೀವು, ದನ ತುಂಬಿದ ಹಾಗೆ ತುಂಬಿ ಕೊಂಡು ಹೋಗುವ ಎಕಾನಮಿ ಕ್ಲಾಸ್ನಲ್ಲಿ ಹೋಗುವ ಯೋಚನೆ ಬಂತು" ಎಂದು ಹೆಂಡತಿ ರಾಕುಲ್ ಆಕ್ಷೇಪ ಎತ್ತಿದಳು.
" ಅಂತಹ ಜನಸಂದಣಿಯಲ್ಲಿ ಪ್ರವಾಸ ಮಾಡಿ, ನಿಮೆಗೆ ಸೋಂಕು ತಗುಲಿದರೆ, ಎನು ಮಾಡುವೆ ರವಿ? " ಅಂತ ಪ್ರಶ್ನೆ ಹಾಕಿದಳು. ವಯಸ್ಸಾದ ಮೇಲೆ ಕಾಯಿಲೆ ಬಂದೆ ಬರುತ್ತವೆ, ಸರಿ ಹೋಗುತ್ತಾರೆ ಬಿಡು ಅಂತ ಅಪಸ್ವರ ಎತ್ತಿದಳು.
ಆದರೂ, ಅವಳ ಮಾತು ಅಲಕ್ಷಿಸಿ, ಏರಲಿಫ್ಟ್ ಆಗುವ ಏರ್ಪೋರ್ಟ್ ಕಡೆಗೆ ಹೊರಟ, ದಾರಿ ಉದ್ದಕ್ಕೂ ಹೆಣಗಳ ಹೊತ್ತು ಸಾಗುವ ಕಪ್ಪು ವಾಹನಗಳು, ರೋಗಿಗಳನ್ನು ಸಾಗಿಸುವ ಆಂಬುಲೆನ್ಸ್ ಗಳು ಕಾಣಿಸಿದವು. ಇದೆಂತಹ ಪರೀಕ್ಷೆ ದೇವರೇ ಅಂತ ಮುಗಿಲಿನೆಡೆಗೆ ದೃಷ್ಟಿ ನೆಟ್ಟ. ಏರ್ಪೋರ್ಟ್ನಲ್ಲಿ ಭಾರತೀಯರು, ನಾಲ್ಕು ದಿನಗಳಿಂದ, ಉಪವಾಸ ವನವಾಸ ಅನುಭವಿಸುತ್ತಿದ್ದರು. ಕುಳಿತುಕೊಳ್ಳಲು ಸ್ಥಳವಿರದೆ ಪರದಾಡುತ್ತಿದ್ದರು, ಯಾರೋ ಕೊಟ್ಟ ಆಹಾರ ಪೊಟ್ಟಣವನ್ನು ಗಬ ಗಬನೆ ತಿನ್ನುತ್ತಿದ್ದರು. ರವಿಯದು ಇದು ಮೂರನೇ ದಿನ, ನೆನ್ನೆ ಸಿಕ್ಕ ಆಹಾರ ಪ್ಯಾಕೆಟ್ ಇಂದು ಸಿಗಲಿಲ್ಲ, ಜೇಬಿನಲ್ಲಿ ಡಾಲರ್ಸ್, ಕ್ರೆಡಿಟ್ ಕಾರ್ಡ್ಸ್ ನಗುತಿದ್ದವು, ಅವು ಯಾವ ಉಪಯೋಗಕ್ಕೂ ಬರಲಿಲ್ಲ. ದುಡ್ಡು ಇದ್ದರೆ ಸಾಕು ಬೇಕಾದ್ದೆಲ್ಲ ಕಾಲಿಗೆ ಬಂದು ಬೀಳುತ್ತದೆ ಅಂತ ತಿಳಿದ ರವಿಯ ಮೊಗ ಹಸಿವು, ನೀರಡಿಕೆಯಿಂದ ಕಪ್ಪಿಟ್ಟಿತು.
ಕೊನೆಗೆ ಯಾರಿದೋ ಕೈ ಕಾಲು ಹಿಡಿದು, ಫ್ಲೈಟ್ನ ಟಿಕೆಟ್ ಸಿಕ್ಕಿತು, ಇತ್ತ, ಅಪ್ಪ ಅಮ್ಮನನ್ನು ವೆಂಟಿಲೇಟರಗೆ ವರ್ಗಾಯಿಸಿದ ವಾರ್ತೆ ಬಂತು. ಸೋಂಕು ಶ್ವಾಸಕೋಶಗಳಲ್ಲಿ ಹರಡಿ, ಅದರ ಕಾರ್ಯಕ್ಷಮತೆಯನ್ನು ಕುಂಟಿಸುತ್ತಿದೆ ಎಂದು ವೈದ್ಯರು ಹೇಳಿದರು. ಬದುಕುವ ಗ್ಯಾರೆಂಟಿ ಕೊಡಲಾಗುವುದಿಲ್ಲ ಅಂತ ತಿಳಿ ಹೇಳಿದರು. ನಾನು ಬೇಕಾದಷ್ಟು ಹಣ ಕೊಡಲು ತಯಾರಿದ್ದೇನೆ, " "ಯಾವುದಾದರೂ ಇಂಜೆಕ್ಷನ್, ಔಷಧಿ, ಮಾತ್ರೆ ಏನಾದರೂ ಕೊಡಿ ಡಾಕ್ಟ್ರೇ ಅಂತ ಫೋನಿನಲ್ಲಿ ಅಂಗಲಾಚಿ ಕೊಂಡ. ಆದರೆ ವೈದ್ಯರು ಈ ರೋಗಕ್ಕೆ ಔಷಧಿ ಇಲ್ಲ. ಅಂತ ಹೇಳಿ ಸುಮ್ಮನಾದರು.
ಇನ್ನೇನು ಐದು ನಿಮಿಷದಲ್ಲಿ ವಿಮಾನ ಹೊರಡುವುದಿತ್ತು, ಅಷ್ಟರಲ್ಲಿ ಹೆಂಡತಿ ರಾಕುಲ್ ಸ್ನೇಹಿತೆ ಫೋನ್ ಮಾಡಿದಳು. “Since yesterday Rakul has high fever Ravi , when tested she is diagnosed with corona positive” ಅಂತ ಹೇಳಿದಳು.
ಅದನ್ನು ಕೇಳಿ ರವಿಗೆ ಆಕಾಶವೇ ಕಳಚಿ ಬಿದ್ದಂತಾಯಿತು. ಈ ವಿಚಾರ ಹೆಲ್ತ್ ಆಪ್ ಮೂಲಕ ವಿಮಾನ ಸಿಬ್ಬಂದಿಗೆ ಮುಟ್ಟಿತು, ಅವನನ್ನು ಮತ್ತೆ ಕೆಳಗಿಳಿಸಿ, ರಾಪಿಡ್ ಟೆಸ್ಟ್ ಗಾಗಿ ಕಳಿಸಲಾಯಿತು,ರಿಪೋರ್ಟ್ ನೆಗೆಟಿವ್ ಬಂತು.
ಇಷ್ಟೆಲ್ಲ ವಿಳಂಬವಾದ ಮೇಲೆ, ಹೇಗೋ ಇನ್ನೊಂದು, ಫ್ಲೈಟ್ ಏರಿದ. 24 ಗಂಟೆ, ಪ್ರವಾಸ, ಭಾರತಕ್ಕೆ ಬಂದು ಇಳಿದಾಗ, ತಂದೆ ತಾಯಿ ಇಹಲೋಕ ತ್ಯಜಿಸಿದರು.
ಇಂತಹ ಕಹಿ ಸುದ್ದಿ ಹೊತ್ತ ಮೆಸೇಜ್ ರವಿಯ ಮೊಬೈಲ್ಗೆ ಸಿಡಿಲಿನಂತೆ ಬಂದೆರಗಿತು.
ಅವನು ತನ್ನ ಊರಿಗೆ ತಲುಪುವದರೊಳಗೆ, ಆಸ್ಪತ್ರೆಯ ಸಿಬ್ಬಂದಿಯಿಂದ ಸಾಮೂಹಿಕ ಶವಸಂಸ್ಕಾರ ನಡೆಯಿತು. ತಂದೆ ತಾಯಿಯ ಮುಖ ಕೊನೆಗೂ ನೋಡದೆ ಇದ್ದಾಗ, ರವಿಗೆ ಕುಡಿಯುವ ನೀರು ಕೂಡ ಕಹಿಯಾದ ವಿಷ ಕುಡಿದಂತೆ ಭಾಸವಾಯಿತು.
ತಾನು ಹುಟ್ಟಿ ಬೆಳೆದ ಮನೆಗೆ ಬಂದು, ಯಾರೊಂದಿಗೆ ಕಣ್ಣೀರು ಹಾಕಬೇಕು ಎಂದು ಯೋಚಿಸುತ್ತಿರುವಾಗ, ಹೆಂಡತಿಯೂ, ತನ್ನನ್ನು ಅಗಲಿದ ಸುದ್ದಿ ಅಪ್ಪಳಿಸಿತು, ಮಗು ಮಾತ್ರ, ಸ್ನೇಹಿತೆಯ ಹತ್ತಿರ ಸುರಕ್ಷಿತವಾಗಿದೆ ಎಂದು ತಿಳಿದುಬಂತು.
ಇತ್ತ ತಂದೆ ತಾಯಿ ಅತ್ತ ಹೆಂಡತಿ ಕೊರೋನ ಹೆಮ್ಮಾರಿ ಬಲಿತೆಗೆದುಕೊಂಡಿತ್ತು. ಬೇಕಾದಷ್ಟು ದುಡ್ಡು ಕೊಳೆಯುತ್ತಿದ್ದರು, ಅಸಹಾಯಕನಾಗಿ ವಿಧಿಯಾಟದ ಮುಂದೆ ಕೈಚೆಲ್ಲಿ ನಿಂತಿದ್ದ. ದುಃಖವನ್ನು ತೋಡಿಕೊಂಡು ಅತ್ತು ಬಿಡಲೇ ಎಂದರೆ ಯಾರ ಅಪ್ಪುಗೆಯೂ ಸಿಗಲಿಲ್ಲ. ಅಪ್ಪನು ಪೂಜಿಸುತ್ತಿದ ದೇವರ ಕೋಣೆಗೆ ಹೋಗಿ ದೇವರಿಗೆ ಪ್ರೆಶ್ನೆ ಮಾಡಲು ಅವನಿಗೆ ಧೈರ್ಯ ಸಾಲಲಿಲ್ಲ. ಮೊದಲು ಹೋಗಿ ದೇವರ ಕೋಣೆಯ ಬಾಗಿಲನ್ನುಮುಚ್ಚಿ ಭದ್ರ ಪಡಿಸಿದ.
“ಯಾರನ್ನೋ ಒಲಿಸಿಕೊಳ್ಳುವ ಬದಲು ಪರಮಾತ್ಮನನ್ನು ಒಲಿಸಿಕೋ ಅಂತ ಅಪ್ಪ ಹೇಳುತ್ತಿದ್ದ ಮಾತು ದೇವರ ಕೋಣೆಯ ಕಿಂಡಿಗಳಿಂದ ಪ್ರತಿಧ್ವನಿಸುತ್ತಿತ್ತು.
ವಿಧಿಯಾಟದ ಮುಂದೆ ದುಡ್ಡಿನಾಟ ನಡೆಯುವುದಿಲ್ಲ ಅಂತ ಸಿದ್ಧವಾಯಿತು.
ಮನೆಯ ಮುಂದಿನ ಬೇವಿನ ಮರದ ಕಹಿ ಕಂಪು ವಿಷಾನಿಲದಂತೆ ರವಿಯ ಮೂಗಿಗೆ ರಾಚಿತ್ತು.
ಬೇರುಗಳನ್ನು ಬಿಟ್ಟು ಮರ ಬೆಳೆದು ಆಕಾಶ ಚುಂಬಿಸಲು ಸಾಧ್ಯವೇ?