Click here to Download MyLang App

ಅಪರಿಚಿತಳ ಚಿರಪರಿಚಿತ ಮಾತು - ಬರೆದವರು : ಮಹೇಶ್ ಸ ಸಂಕಣ್ಣವರ

"ಭಾಗ್ಯದ ಬಳೆಗಾರ ಹೋಗಿ ಬಾ ನನ್ನ ತವರಿಗೆ.‌‌‌.‌‌‌.,
ನಿನ್ನ ತವರೂರ ನಾನೇನೂ ಬಲ್ಲೆನೂ ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೇ ಬಾಲೆ....

ಜನಪದದ ಈ ಪದ್ಯ ನನ್ನ ಇಯರ್ ಪೋನಗಳಿಂದ ಕಿವಿಯೊಳಗೆ ಇಳಿದು ವಿಶೇಷ ಅನುಭೂತಿ ನೀಡುತಿತ್ತು.ನನಗೆ ಸಂಗೀತ,ಸಾಹಿತ್ಯ ಅಂದರೆ ಎಲ್ಲಿಲ್ಲದ ಹುಚ್ಚು. ಯಾವುದೋ ಸಾಹಿತಿ ಬರೆದ ಕಥೆ ನನ್ನದೇನಿಸುತ್ತದೆ,ಯಾವುದೋ ಸಂಗೀತಗಾರನ ಕೈಯಲ್ಲಿ ಮೈತಳೆದ ಹಾಡು ನನಗೆ ಮುಂಗಾರಿನ ಮಳೆಯಂತೆ ಆಪ್ತವಾಗಿ ನನ್ನೊಳಗೆ ಇಳಿದು ಬಿಡುತ್ತೆ.ನನ್ನ ಹೆಸರು ರವಿ.ಬಿ.ಎ.ಕಲಾ ವಿಭಾಗದ ಎರಡನೇ ವರ್ಷದ ವಿದ್ಯಾರ್ಥಿ.

ಈ ಮಳೆ ಇದರ ಜೊತೆ ಈ ಹಾಡು ವಾವ್ ಈ ತರಹದ ಸಂಜೆಗಳನ್ನ ನಾನು ತುಂಬಾ ಇಷ್ಟಪಡುತ್ತಿನಿ.ಬಸ್ ಸ್ಟಾಪನಲ್ಲಿ ಒಬ್ಬನೇ ಜೀನ್ಸ್ ಪ್ಯಾಂಟಿನ ಕಿಶೆಯೊಳಗೆ ಕೈ ಹಾಕಿ ನಿಂತ ನನ್ನನ್ನ ಸೆಳೆದಿದ್ದು ಅವಳು.ಅವಳೆಂದರೆ?ನನಗೆ ಗೊತ್ತಿಲ್ಲ. ಸುಮಾರು ಇಪ್ಪತೆಂಟು ಇಪ್ಪತ್ತೊಂಬತ್ತರ ಮಹಿಳೆ.ಮುಖದಲ್ಲಿ ದುಗುಡ ಎದ್ದು ಕಾಣುತಿತ್ತು. ಚಂಚಲತೆ ಅವಳು ಕುಡಿಯುತ್ತಿದ್ದ ಚಹಾ ಲೋಟವನ್ನ ಹಿಡಿದುಕೊಂಡ ಬೆರಳುಗಳಲ್ಲಿ ಕಾಣುತಿತ್ತು.

ನನಗೆ ಈ ತರಹ ಅಪರಿಚಿತ ವ್ಯಕ್ತಿಗಳ ವಿಚಿತ್ರ ವರ್ತನೆ ತುಂಬಾ ಕುತೂಹಲ ಉಂಟು ಮಾಡುತ್ತದೆ.ನಾನವಳನ್ನ ಮಾತನಾಡಿಸಲು ಹೋಗಲಿಲ್ಲ. ಸುಮ್ಮನೆ ಜಸ್ಟ್ ಅವಳನ್ನ ಗಮನ ಕೊಟ್ಟು ನೋಡುತ್ತಿದ್ದೆ.ಅವಳು ಚಹಾ ಕುಡಿದು ನಾನು ಅವಳನ್ನ ನೋಡುತ್ತಿದ್ದನ್ನ ಗಮನಿಸಿ ತನ್ನ ಸೀರೆ ಸೆರಗನ್ನ ಸರಿ ಮಾಡಿಕೊಂಡಳು.

ಚಹಾದವನಿಗೆ ಹಣ ಕೊಟ್ಟು ಪರ್ಸನಿಂದ ತನ್ನ ಮೊಬೈಲ್ ತೆಗೆದು ಯಾರಿಗೊ ಕಾಲ್ ಮಾಡಿದಳು.ಒಂದೆರಡು ಸಲ ಪ್ರಯತ್ನಿಸಿಸಿದ ನಂತರ ಆ ಕಡೆಯಿಂದ ಪ್ರತಿಕ್ರಿಯೆ ಬಂದಿರಬಹುದುಯಂದು ನನಗೆ ಅವಳು ಕೈಯಿಂದ ಚಲನವಲನ ಮಾಡಿ ಮಾತನಾಡ ತೊಡಗಿದಾಗ ಅನಿಸಿತು.ಸುಮಾರು ಸಮಯ ತನ್ನ ವಿಭಿನ್ನ ಚಲನವಲನಗಳ ಮೂಲಕ ಆ ಕಡೆಯಿರುವ ವ್ಯಕ್ತಿಯ ಜೊತೆ ಮಾತಾಡಿದ ಅವಳ ಮುಖದಲ್ಲಿ ಆಗಾಗ ಉದ್ವೇಗ, ಅಸಾಯಕತೆ,ಕಣ್ಣೀರು ಕಾಣಿಸಿಕೊಳ್ಳುತ್ತಿದ್ದವು.

ಕಡೆಯದಾಗಿ ಆ ಕಡೆ ಇರುವ ವ್ಯಕ್ತಿ ಕರೆ ಕಟ್ ಮಾಡಿದ ಹಾಗೆ ಖಂಡಿತು.ಅವಳು ಅಸಾಯಕತೆಯಿಂದ ಸೀರೆ ಸೆರಗನ್ನ ಬಾಯೊಳಗಿಟ್ಟುಕೊಂಡು ಅಳತೊಡಗಿದಳು.ಇವಳನ್ನ ಯಾರೂ ಅಷ್ಟಾಗಿ ಗಮನಿಸುತ್ತಿರಲಿಲ್ಲ.ಎಲ್ಲರೂ ನೋಡಿದರು ನೋಡಿದವರ ರೀತಿ ನಿಲ್ದಾಣ ಹೊರಗೆ ಒಳಗೆ ತಿರುಗಾಡುತಿದ್ದರು.

ಆ ಮಹಿಳೆ ತನ್ನ ಕರ್ಚಿಪಿನಿಂದ ಕಣ್ಣೀರು ಒರೆಸಿಕೊಳ್ಳುತ್ತ ಬಿರುಸಾಗಿ ನಿಲ್ದಾಣ ಹೊರಗೆ ನಡೆದಳು ಮಳೆ ಇನ್ನೂ ಜೋರಿರುವಾಗಲೆ ರೊಯ್ಯನೆ ಬೀಸುವ ಸುಂಟರಗಾಳಿಯಂತೆ.ನನಗೆ ಅವಳು ತುಂಬಾ ವಿಶೇಷವಾಗಿ ಕಂಡಳು.ಅಪರಿಚಿತ ಸ್ಥಳಗಳಲ್ಲಿ ಅಪರಿಚಿತ ವ್ಯಕ್ತಿಗಳ ಮಾತಾಡಿಸುವುದು ಒಂದು ದೊಡ್ಡ ಭಯವೇ.ಮತ್ತೆ ಅದೆಲ್ಲ ಎಲ್ಲಿ ಒಂದಕ್ಕೆ ಎರಡಾಗುತ್ತೊ ಯಂದುಕೊಂಡು ನಾನು ನನ್ನ ಬಸ್ಸಿಗಾಗಿ ಕಾಯುತ್ತ ನಿಂತೆ.

ಸುಮಾರು ಹತ್ತು ನಿಮಿಷದ ನಂತರ ನಾನು ಹುಬ್ಬಳಿಗೆ ತೆರಳಬೇಕಾದ ಬಸ್ಸು ಬಂದು ನನ್ನ ಎದುರಿಗೆ ನಿಂತಿತು.ನನ್ನ ಮನಸ್ಸಿನ ಒಂದು ಮೂಲೆಯಲ್ಲಿ ಅವಳಿನ್ನು ಉಸಿರಾಡುತಿದ್ದಳು.ಬಸ್ಸ ಹತ್ತಿ ಕುಳಿತ ನಾನು ಫೋನ್ ತೋರಿಸಿದ ಫೈವ್ ಪರ್ಸೆಂಟ್ ಚಾರ್ಜಗೆ ಉತ್ತರ ಕುಮಾರನಂತೆ ಹೆದರಿ ಸ್ವೀಚ್ ಆಫ್ ಮಾಡಿ ಕಿಸೆಯೊಳಗೆ ಇಟ್ಟುಕೊಂಡೆ.

ಬಸ್ಸು ಚಲಿಸ ತೊಡಗಿತು.ನನ್ನ ಮನಸ್ಸು ಕೂಡ ಕುತೂಹಲದ ಗಣಿಯಾಗಿ ಗಮನಕ್ಕೆ ಬಂದವಳ ಬಗ್ಗೆ ವಿಚಾರ ಮಾಡತೊಡಗಿತು. ಅವಳ್ಯಾರು?ಅವಳೇಕೆ ಹೀಗೆ ಅಸಾಯಕತೆಯನ್ನ,ದುಃಖವನ್ನ, ಪ್ರಕಟಿಸಬಾರದೆಂಬ ಎಚ್ಚರಿಕೆಯನ್ನ ಇಟ್ಟುಕೊಂಡು ಸೂಕ್ಷ್ಮವಾಗಿ ಪ್ರಕಟಿಸಿದಳು?,ಆ ಜೋರು ಮಳೆಯಲ್ಲಿ ಅವಳೇಕೆ ಬಿರುಸಾಗಿ ನಡೆದಳು?,ಯಂಬ ಸಾವಿರ ಪ್ರಶ್ನೆಗಳು ಕಟಕಟೆಯಲ್ಲಿ ನಿಂತ ಅಪರಾಧಿಗೆ ವಕೀಲರು ಕೇಳುವ ಪ್ರಶ್ನೆಗಳಂತೆ ಬಿರುಸಾಗಿ ಬಂದು ನನ್ನ ಚಿತ್ತದ ಮುಂದೆ ಪ್ರತಿಭಟಿಸತೊಡಿದವು.

ಈ ವಿಚಾರಗಳ ಸಂಘರ್ಷದಲ್ಲಿ ಇದ್ದ ನನ್ನ ಭಾವಲೋಕವನ್ನ ಬಡಿದೆಬ್ಬಿಸಿದ್ದು ಡ್ರೈವರ್ ಹಾಕಿದ ಎದೆಗೆ ಬಂದು ನಾಟುವ ಬ್ರಹ್ಮಾಸ್ತ್ರದಂತೆ ಕಾಣುವ ಬ್ರೇಕ್. ನಾನು ಸೀಟಿನಿಂದ ಮೇಲೆದ್ದು ಮುಂದೆ ನೋಡಿದೆ ಮುಂದಿನ ಗಾಜಿಗೆ ಮಳೆಯ ನೀರಿನ ಮಂಜು ಅಟ್ಟಿಕೊಂಡಿದ್ದರಿಂದ ನನಗೆ ಸರಿಯಾಗಿ ಏನೂ ಕಾಣಲಿಲ್ಲ.ಕುತೂಹಲ ತಡೆಯದೆ ನನ್ನ ಬಳಿಗೆ ಬಂದ ಕಂಡೆಕ್ಟರ್ ಗೆ " ಏನಾಗಿದೆ ಸರ್?"ಯಂದೆ.

ಆತ ನನಗೆ ಟಿಕೇಟ್ ಹರಿದುಕೊಡುತ್ತಾ ಅದ್ಯಾವುದೋ ಮಹಿಳೆ ಕಟ್ಟಡದಿಂದ ಬಿದ್ದು ಸತ್ತಿದಾಳಂತೆರಿ"ಯಂದ ಬರಸಿಡಿಲು ಬಡಿಯುವಂತ ವಿಷಯವನ್ನ ಮಾಮೂಲಾಗಿ ಕಾಣುವ ದೃಶ್ಯದಂತೆ.ನನ್ನ ಎದೆಬಡಿತ ಗನ್ನಿಂದ ಹೊರಬಂದು ಎದುರಾಳಿಯ ಎದೆ ಹೊಕ್ಕುವ ಗುಂಡಿನ ವೇಗದಲ್ಲಿ ಬಡಿದುಕೊಳ್ಳತೊಡಗಿತು.ಸೀಟಿನಿಂದ ಮೇಲೆದ್ದೆ ಬಸ್ಸು ಚಲಿಸತೊಡಗಿತು.ಮಳೆಯಲ್ಲೂ ಕಿಟಕಿ ಸರಿಸಿ ನೋಡಿದೆ.

ಹೌದು ಅವಳೇ.ಹತ್ತು ನಿಮಿಷದ ಹಿಂದೆ ನಾನು ನೋಡಿದ ಆ ಅಪರಿಚಿತ ಮುಗ್ಧೆಯೇ ಕಟ್ಟಡದಿಂದ ಬಿದ್ದು ಹೆಣವಾದವಳು.ನನ್ನ ಕಣ್ಣುಗಳಿಗೆ ಕತ್ತಲು ಕವಿಯತೊಡಗಿತು.ಶೂನ್ಯ ಲೋಕದ ಅನುಭೂತಿಯಲ್ಲಿ ಮನಸ್ಸು ಎಣ್ಣೆ ಇಲ್ಲದ ದೀಪದಂತೆ ಮಂಕಾಗಿ ಹೋಯಿತು. ಯಾರೊ ಹಿಂದಿನ ವ್ಯಕ್ತಿ ಜೋರಾಗಿ ನನ್ನ ಬೆನ್ನ ಮುಟ್ಟಿ"ಮಾರಾಯ ಕಿಟಕಿ ಹಾಕು.ಮಳೆ ನೀರು ಮುಖಕ್ಕೆ ಸಿಡಿತಿದೆ"ಯಂದ.ನಾನು ಯಾಂತ್ರಿಕವಾಗಿ ಗ್ಲಾಸೆಳೆದು ಕಿಟಕಿ ಮುಚ್ಚಿದೆ.ಮಳೆ ನೀರು ಗ್ಲಾಸಿನ್ ಕಿಟಕಿಯ ಎದೆಯ ಮೇಲೆ ಇಳಿಯತೊಡಗಿತು.ಅದ್ಯಾವುದೋ ಮೂಲೆಯಲ್ಲಿ ಕುಳಿತವನ ನೋಕಿಯಾದಿಂದ ಶುರುವಾದ,

ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ
ಹೇಳೂವುದು ಏನೋ ಉಳಿದು ಹೋಗಿದೆ"


ಎಂದು ಬಡಬಡಿಸಲು ಶುರುವಾದಾಗ ನಾನು ಮೌನಿಯಾಗಿದ್ದೆ ಆದರೆ ನನ್ನೊಳಗಿನ ಅವಳು ಮಾತನಾಡ ತೊಡಗಿದ್ದಳು.
###$###