Click here to Download MyLang App

ಬದುಕುಂಟೆ ಬೆಳಕಿರದೆ? - ಬರೆದವರು : ಸಂಧ್ಯಾ ರಮೇಶ್ | ಸಾಮಾಜಿಕಭಾನುವಾರ ಮುಂಜಾನೆ, ಬೆಳಗಿನ ಜಾವ ಕೆಲಸದ ಗಡಿಬಿಡಿ ಇಲ್ಲವೆಂಬ ಮಧುರ ನೆನಪಿನಿಂದಲೇ ಮೈಮನಗಳು ಹಗುರವಾದಂತೆನಿಸಿ, ಸಕ್ಕರೆ ನಿದ್ರೆಯನ್ನು ಸೊಂಪಾಗಿ ಸವಿಯುತ್ತಿದ್ದವಳಿಗೆ ಯಜಮಾನರು ಅಷ್ಟು ಬೇಗ (ಕೇವಲ ಎಂಟು ಗಂಟೆ) ಶುಭ ಮುಂಜಾನೆಯನ್ನು ಶಾಕಿಂಗ್ ನ್ಯೂಸ್ ನಿಂದಲೇ ಎಚ್ಚರಿಸಿದಾಗ, ಮೊದಲು ಕೋಪ ಬಂದರೂ, ಒಮ್ಮೆಲೇ ಭಯಭೀತಳಾಗಿ, ನಿದ್ರಾದೇವಿಯನ್ನು ದೂರತಳ್ಳಿ, ದಡಬಡಿಸಿ ಎದ್ದುಬಿಟ್ಟೆ.

’ನಮ್ಮ ಕಾರು ಸ್ವಚ್ಛಗೊಳಿಸುತ್ತಿದ್ದಾಗ, ಕಾಂಪೌಂಡ್ ಮುಂದಿನ ಕರೆಂಟ್ ಕಂಬದಲ್ಲಿ ಶಬ್ದವಾಗಿ ಕಿಡಿ ಬಂದಿದ್ದು ಕೆಲಸದ ಚೆನ್ನಪ್ಪ ನೋಡಿದನಂತೆ. ಆಗಿಂದ ನಮ್ಮ ಮನೇಲಿ ಕರೆಂಟೇ ಇಲ್ಲ. ನನಗೆ ಹೊತ್ತಾಯಿತು, ಕಾನ್ಫರೆನ್ಸಿಗೆ ಹೊರಟಿದ್ದೇನೆ’ ಅಂತ ಆತುರಾತುರವಾಗಿ ಹೇಳಿ ಹೊರನಡೆದು, ಕಾರ್ ಸ್ಟಾರ್ಟ್ ಮಾಡಿ ಹೊರಟೇ ಬಿಟ್ಟರು, ಸಮಯಪಾಲನೆಗೆ ಮತ್ತೊಂದು ಹೆಸರಾದ ಪತಿರಾಯರು. ’ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಎಲ್ಲಾ ಅಲ್ಲಿಯೇ’ ಅಂತ ಹಿಂದಿನ ದಿನ ಹೇಳಿದಾಗ, ಇಡೀ ರವಿವಾರ ತಿಂಡಿ. ಊಟದ ಸಮಯದ ಬಗ್ಗೆ ತಲೆಕೆಡಿಸಿಕೊಳ್ಳದೆ ಮನಸೋ ಇಚ್ಛೆ ಇರಬಹುದೆಂದು ಹಿರಿಹಿರಿ ಹಿಗ್ಗಿದ್ದವಳು ಈ ಕರೆಂಟಿನ ಸುದ್ದಿಯಿಂದ ಪಾತಾಳಕ್ಕೆ ಕುಗ್ಗಿ ಹೋದಂತೆನಿಸಿತು.

ಏನೇ ಆದರೂ, ಬೆಳಗಿನ ಕಾಫಿ ಹೀರುವ ತನಕ ಅರಿವು ತಿಳಿಯಾಗುವುದಿಲ್ಲವಲ್ಲ! ಕಾಫಿ ಸೇವಿಸಿದ ನಂತರ, ಸ್ವಲ್ಪ ಚೈತನ್ಯ ಬಂದಂತಾಗಿ, ಸುತ್ತಲೂ ಒಮ್ಮೆ ಕಣ್ಣಾಡಿಸಿದೆ. ಹಾಲಿನಲ್ಲಿ ಫ್ಯಾನ್ ತಿರುಗುತ್ತಿದೆ. ಅಡುಗೆ ಮನೆಯಲ್ಲಿ ಲೈಟ್ ಉರಿಯುತ್ತಿದೆ. ’ಅಯ್ಯೋ, ಅನಾಹುತವಾಗುತ್ತದೆ. ತುರ್ತು ಪರಿಸ್ಥಿತಿಗೆ ಸ್ವಲ್ಪ ಜೀವವಾದರೂ ಇರಲಿ ಎಂದು ಓಡಿ, ಇನ್ವರ್ಟರ್ ಆಫ್ ಮಾಡಿದೆ. ಈಗ ಮುಂದಿನ ಅವಶ್ಯ ಕೆಲಸಗಳಿಗೆ ಸಜ್ಜಾದೆ. ಸುತ್ತುಮುತ್ತಲಿನ ಮನೆಗಳಲ್ಲಿ ಕರೆಂಟ್ ಸಮಸ್ಯೆ ಆಗಿಲ್ಲ, ನಮ್ಮ ಮನೆಗಷ್ಟೇ ಸೀಮಿತ ಎಂದುಕೊಳ್ಳುತ್ತಿರುವಾಗಲೇ, ಪಕ್ಕದ್ಮನೆ ಪವನ, ನನ್ನ ಸಪ್ಪೆ ಮುಖದ ಕಾರಣ ತಿಳಿದು, ’ಆಂಟಿ, ನಿಮ್ಮ ಮನೆ ಫ್ಯೂಸ್ ಹೋಗಿರಬಹುದು. ನಾನೇ ನೋಡುತ್ತಿದ್ದೆ. ಆದ್ರೆ ಅರ್ಜೆಂಟಾಗಿ ಹೊರಗೆ ಹೋಗಬೇಕಾಗಿದೆ. ಸ್ನೇಹಿತರು ಕಾಯುತ್ತಿರುತ್ತಾರೆ. ನಿಮ್ಮ ಎಲೆಕ್ಟ್ರಿಷಿಯನ್ ಕರೆಸಿ ಚೆಕ್ ಮಾಡಿಸಿ’ ಎಂದು ನನ್ನಲ್ಲಿ ಆಶಾವಾದ ಮೂಡಿಸಿ ಸ್ಕೂಟರ್ ನಲ್ಲಿ ಹೊರಟೇಬಿಟ್ಟ. ’ರವಿವಾರ ಬೆಳಿಗ್ಗೆ ಸ್ನೇಹಿತರು ಅರ್ಜೆಂಟ್ ಕೆಲಸ ಎಂದರೆ ಇನ್ನೇನು, ಹೋಟೆಲ್ ನಲ್ಲಿ ಮಸಾಲೆದೋಸೆ ತಿನ್ನೋಕೆ ಧಾವಿಸ್ತಿರಬೇಕು ಮುಂಡೇವು’ ಎಂದು ಗೊಣಗಿಕೊಂಡೆ. ಆದರೂ ಅವನ ಕಾಮನ್ ಸೆನ್ಸ್ ಮೆಚ್ಚಿಕೊಂಡು, ನಮ್ಮ ಮನೆ ರೆಗ್ಯುಲರ್ ಎಲೆಕ್ಟ್ರಿಷಿಯನ್ ವೀರೇಶಿಗೆ ತಕ್ಷಣ ಬರಲು ವಿನಂತಿಸಿಕೊಂಡೆ.

’ಅಮ್ಮಾವ್ರೆ, ಟಿಫಿನ್ ಮಾಡಾಕ್ ಹತ್ತೀನಿ, ಹತ್ತು ನಿಮಿಷದಲ್ಲಿ ಬರ್ತೀನಿ’ ಅಂದವ್ನು ಅರ್ಧ ಗಂಟೆಯ ನಂತರ ಹಾಜರಾದ. ಫ್ಯೂಸ್ ಪ್ಲಗ್ ತೆಗೆದು ಕಣ್ಣಲ್ಲಿ ಕಣ್ಣಿಟ್ಟು ಪರೀಕ್ಷಿಸಿ, ’ಅಮ್ಮಾವ್ರೆ, ಫ್ಯೂಸ್ ಸರಿ ಐತ್ರಿ. ಇದು ಪೋಲ್ ನಲ್ಲೇ ಮಿಸ್ಟೇಕು. ಕೆ.ಇ.ಬಿ ಅವರಿಗೆ ಕಂಪ್ಲೇಂಟ್ ಮಾಡ್ರಿ’ ಎಂದು ನನ್ನ ಪಾತ್ರ ಮುಗೀತು ಎಂಬಂತೆ ದ್ವಿಚಕ್ರ ವಾಹನ ಏರಿ ಶಸ್ತ್ರಗಳ ಸಮೇತ ಮಾಯವಾದ. ಬೆಂಗಳೂರಿಗಳಾದರೂ, ಯಾವ ಜನ್ಮದ ಋಣವೋ, ಉತ್ತರ ಕರ್ನಾಟಕದ ಹುಬ್ಬಳ್ಳಿಯಲ್ಲಿ ನೆಲೆಸಿ, ಇಲ್ಲಿಯ ಕನ್ನಡದ ಸೊಗಡನ್ನು ಸವಿಯಬೇಕಾಗಿತ್ತು. ನೂರಕ್ಕೆ ನೂರು ಇದು ಎಲೆಕ್ಟ್ರಿಕ್ ಕಂಬದ್ದೇ ಸಮಸ್ಯೆ ಎಂದು ಖಚಿತವಾಗಿ, ಕೆ.ಇ.ಬಿ ಗೆ ಫೋನ್ ಮಾಡಲು ಅಣಿಯಾದೆ.

ನಯ, ವಿನಯ, ಮಾಧುರ್ಯ ಎಲ್ಲವನ್ನೂ ದನಿಯಲ್ಲಿ ಮೇಳೈಸಿಕೊಂಡು, ’ಹಲೋ, ಕೆ.ಇ.ಬಿ ನಾ?’ ಅಂತ ಕೇಳುತ್ತಲೇ, ಆ ಕಡೆಯಿಂದ ಗಡಸು ದನಿ ಕೇಳಿಸಿತು. ’ಹೌದ್ರೀ, ಏನ್ರೀ ಪ್ರಾಬ್ಲಮ್ಮು?’. ಅಂತ ಅತ್ತ ಕಡೆಯ ದನಿಗೆ ಸ್ವಲ್ಪ ಬೆಚ್ಚಿದರೂ, ಸಾವರಿಸಿಕೊಂಡು, ಅತಿ ವಿನಮ್ರಳಾಗಿ ಹೇಳಿದೆ.
’ನೋಡಿ, ನಾವು ಡಾ. ರಮೇಶ್ ಅವರ ಮನೆ, ಕೇಶ್ವಾಪುರದಿಂದ ಮಾತಾಡ್ತಿರೋದು’ ಎನ್ನುತ್ತಿದ್ದಂತೆಯೇ, ’ಸರಿ, ಸರಿ, ನಿಮ್ಮ ಅಡ್ರೆಸ್ ಹೇಳ್ರಿ’ ಮತ್ತೆ ಸಿಡುಕು.
’ಅಲ್ಲಾರೀ, ನಮ್ಮನೆ ಪ್ರಾಬ್ಲಮ್ ಹೇಳ್ತೀನಿ’
’ಪ್ರಾಬ್ಲಮ್ ಅಂದ್ರೆ ಏನಿರ್ತಾವ್ರೀ? ಅದೇ ಕರೆಂಟಿಂದು. ಅದು ಬಿಟ್ಟು ನಿಮ್ಮ ಸಂಸಾರದ ಪ್ರಾಬ್ಲಮ್ ಬಗೆಹರಿಸ್ಲಿಕ್ಕೇನು ನಾವಿರೋದು?’ ಸಿಡಿಮಿಡಿಗೊಂಡಂತಿತ್ತು ದನಿ.
’ಅದು ಹಾಗಲ್ಲ ಸಾರ್, ನಮ್ಮ ಮನೆ ಸುತ್ತಮುತ್ತ ಎಲ್ಲರ ಮನೆಯಲ್ಲೂ ಕರೆಂಟ್ ಇದೆ. ನಮ್ಮನೇಲಿ ಮಾತ್ರ ಇಲ್ಲ. ಕಂಬದಲ್ಲಿ ಶಬ್ದ ಬಂದು ಪವರ್ ಹೋಗಿದೆ’ ಎನ್ನುತ್ತಿದ್ದಂತೆ,
’ಏನ್ರೀ ಮೇಡಮ್ ನೀವು? ಜಡ್ಡು ಎಲ್ಲರಿಗೂ ಒಮ್ಮೆಲೇ ಬರ್ತಾವೇನ್ರೀ? ಒಬ್ಬೊಬ್ಬರಿಗೇ ಅಲ್ಲೇನ್ರೀ ಜಡ್ಡು ಬರೋದು? ಡಾಕ್ಟರ್ ಮನೀ ಅವ್ರು ಅಂತೀರಿ, ಅಷ್ಟೂ ತಿಳಿಯೋದಿಲ್ಲೇನ್ರಿ ನಿಮಗೆ, ಸರಿ ಸರಿ, ಅಡ್ರೆಸ್ ಹೇಳ್ರಿ’ ಅಂತ ಅವಸರಪಡಿಸಿದ.
ವಿಳಾಸ ಹೇಳಿ, ಅಂಜುತ್ತಲೇ ಧೈರ್ಯ ಮಾಡಿ ಕೇಳಿಬಿಟ್ಟೆ,
’ಅಲ್ಲಾರೀ, ಇವತ್ತು ರವಿವಾರ, ರಿಪೇರಿಗೆ ಕಳಿಸ್ತೀರಲ್ರೀ?’
’ರವಿವಾರ ಮುಂಜಾನೆ, ಮುಂಜಾನೆ ನಿಮ್ಮಂತವ್ರ ಗೋಳು ಕೇಳಲಿಕ್ಕೇ ನಾನು ಬಂದಿಲ್ಲೇನ್ರೀ? ಕಳಿಸ್ತೀವಿ, ಆದ್ರೆ ಲೇಟ್ ಆಗ್ತದೆ. ನೀವು ಮತ್ತೆ ಮತ್ತೆ ಫೋನ್ ಮಾಡಿ ತ್ರಾಸು ಕೊಡಬ್ಯಾಡ್ರಿ’ ಎಂದು ಅಂತಿಮ ಎಚ್ಚರಿಕೆ ಕೊಟ್ಟು ಪೋನ್ ಕುಕ್ಕಿದ.

ಕಂಪ್ಲೇಂಟ್ ಅಂತೂ ಕೊಟ್ಟದ್ದಾಯಿತು. ಲೇಟ್ ಆಗತ್ತೆ ಅಂತ ಬೇರೆ ಹೇಳಿದ್ದಾನೆ. ’ಏನಪ್ಪಾ ಗತಿ?’ ಮೇಲೆ ಟ್ಯಾಂಕ್ ನಲ್ಲಿ ನೀರು ’ನಾನು ಎಷ್ಟು ತಳದಲ್ಲಿದ್ದೇನೆ’ ಅಂತ ಅಣಗಿಸಿದಂತಾಯ್ತು. ಏನೇ ಕಷ್ಟಗಳಿರಲಿ, ಅದು ಹೊಟ್ಟೆಗೇನೂ ಅಲ್ಲವಲ್ಲ? ಇಷ್ಟು ಹೊತ್ತಿಗೆ ಹೊಟ್ಟೆ ಚುರುಗುಟ್ಟಲಾರಂಭಿಸಿತ್ತು. ಒಂದಷ್ಟು ಉಪ್ಪಿಟ್ಟು ಕೆದಕಿ ತಿಂದು ಮತ್ತೊಮ್ಮೆ ಕಾಫಿ ಕುಡಿದ ಮೇಲೆ ಸ್ವಲ್ಪ ತ್ರಾಣ ಬಂದಂತಾಯಿತು. ಪರಿಸ್ಥಿತಿ ನಿಭಾಯಿಸುವ ಯೋಜನೆಗಳತ್ತ ಮನ ತೊಡಗಿಸಿಕೊಳ್ಳಲು ಪ್ರೇರಿತವಾಯಿತು. ಅಷ್ಟರಲ್ಲಿ ಕೆಲಸದ ಕಮ್ಲಿ ಬಂದು ಗಿಡಗಳಿಗೆ ನೀರು ಹಾಯಿಸುವ ಪೈಪ್ ಜೋಡಿಸುತ್ತಿದ್ದು ಕಂಡು ಹೌಹಾರಿ ಓಡಿ ಬಂದೆ. ’ಕಮ್ಲಿ, ಈ ದಿನ ನೀರಿನ ತಂಟೆಗೆ ಹೋಗಬೇಡ. ಅರ್ಧ ಬಕೀಟು ನೀರಲ್ಲಿ ಪಾತ್ರೆ ತೊಳೆದು ಬಿಡು, ಅಷ್ಟು ಸಾಕು’ ಎಂದು ಎಲ್ಲಾ ವಿವರಿಸಿದೆ. ಅವಳಿಗೇನು ಸಂತೋಷವೇ ಆಯಿತು. ಎರಡು ಗಂಟೆ ಹಿಡಿಯುತ್ತಿದ್ದ ನಮ್ಮ ಮನೆ ಕೆಲಸ ಅರ್ಧ ಗಂಟೆಯಲ್ಲೇ ಮುಗಿಯುತ್ತೆ ಅಂದ್ರೆ ಅವಳಿಗೆ ಸಂತೋಷ ಆಗದಿರುತ್ತೇ? ಅರ್ಧ ಬಕೀಟು ನೀರಿನಲ್ಲಿ ಸ್ನಾನದ ಶಾಸ್ತ್ರ ಮುಗಿಸಿ, ’ಬೇಗ ಕರೆಂಟ್ ಬರುವಂತೆ ಮಾಡಪ್ಪಾ ತಂದೆ, ನಿನಗೆ ತುಪ್ಪದ ದೀಪ ಹಚ್ತೀನಿ’ ಅಂತ ದೇವರಿಗೆ ಕೈಮುಗಿದೆ. ಸೆಕೆಯಲ್ಲಿ ಕುಳಿತು, ಮಾಡಿದ್ದ ಬರೀ ಅನ್ನ, ತಿಳಿಸಾರು ಊಟ ಮಾಡುವಾಗ ಯಾಕೋ ಅಳು ಬಂದು ಬಿಟ್ಟಿತು. ’ಅಲ್ಲಾ, ನಾನಿಲ್ಲಿ ಇಷ್ಟೆಲ್ಲಾ ತೊಂದರೆ ತಾಪತ್ರಯ, ಬೆಳಿಗ್ಗೆ ಬೆಳಿಗ್ಗೆ ಕೆ.ಇ.ಬಿ ಯಿಂದ ಮಂತ್ರಪುಷ್ಪ ಎಲ್ಲಾ ಪರಿಪಾಟು ಪಡುತ್ತಿರುವಾಗ, ಈ ನನ್ನ ಯಜಮಾನರು, ನಗರದ ಅತ್ಯಾಧುನಿಕ ಹೋಟೆಲ್ ’ಕೂಲ್ ಬ್ರೀಝ್’ ನ ಎ.ಸಿ. ರೂಮಲ್ಲಿ ಊಟ ಸೊಗಸಾಗಿ ಸವಿದು, ಕೂಲಾಗಿ, ಭಾಷಣ ಕೇಳುತ್ತಾ ತೂಕಡಿಸುತ್ತಿರುತ್ತಾರಲ್ಲಾ? ಎಂದು ಕಲ್ಪಿಸಿಕೊಂಡೇ ಕೋಪ, ಅಸೂಯೆ, ಏಕಕಾಲದಲ್ಲಿ ಉಂಟಾಯಿತು. ’ಅವರವರು ಮಾಡಿದ ಕರ್ಮಫಲ! ಎಷ್ಟೋ ಬಡರೋಗಿಗಳಿಗೆ ಹಣ ತೆಗೆದುಕೊಳ್ಳದೆ, ಔಷಧಿಗಳನ್ನು ತಮ್ಮದೇ ಖರ್ಚಿನಲ್ಲಿ ಕೊಡಿಸಿ, ಪುಕ್ಕಟೆ ಚಿಕಿತ್ಸೆ ನೀಡಿ, ’ಬಡವರ ವೈದ್ಯ ಬಂಧು’ ಎಂಬ ಬಿರುದನ್ನು ಅವರಿಂದ ಗಳಿಸಿಕೊಂಡಿದ್ದರ ಫಲ ಅಂತ ಕಾಣುತ್ತೆ. ಈ ದಿನ ಕರೆಂಟ್ ಸಮಸ್ಯೆಯಿಂದ ಪಾರಾಗಿ, ಐಷಾರಾಮಿ ಹೋಟೆಲಿನಲ್ಲಿ ಆನಂದವಾಗಿ ಕಾನ್ಫರೆನ್ಸಿನಲ್ಲಿ ಭಾಗಿಯಾಗಿರುವುದು. ಆದರೆ ನಾನು?ಕೆಲಸದ ಕಮ್ಲಿಗೆ ಹೋದ ತಿಂಗಳು, ಅವರ ದೊಡ್ಡಪ್ಪನ ನಾದಿನಿಯ ಮೊಮ್ಮಗಳ ಮದುವೆಗೆ ಒಂದು ವಾರ ಹೋಗುತ್ತೇನೆಂದು, ಸಾವಿರ ರೂಪಾಯಿ ಕೇಳಿದಾಗ, ’ವಾರ ಪೂರ್ತಿ ಕೆಲಸ ತಪ್ಪಿಸೋದಲ್ಲದೆ, ಸಾವಿರ ರೂಪಾಯಿ ಬೇರೆ ಕೇಡು’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರ ಫಲ ಈಗ ನಾನು ಈ ಕಷ್ಟಗಳ ಸುಳಿಯಲ್ಲಿ ಸಿಲುಕುವಂತಾಯಿತು ಎಂದು ಪರಿತಪಿಸಿದೆ. ’ದೇವರೇ, ಬೇಗನೇ ಮನೆ ಕರೆಂಟ್ ನಿಂದ ಬೆಳಗಲಿ, ನಾಳೇನೇ ಕಮ್ಲಿಗೆ ಪ್ರಾಯಶ್ಚಿತ್ತವಾಗಿ ಎರಡು ಸಾವಿರ ರೂಪಾಯಿ ಕೊಡುತ್ತೇನೆ’ ಎಂದು ಹರಕೆ ಹೊತ್ತೆ.

ಇಷ್ಟರಲ್ಲೇ ಜೊಂಪು ಬಂದಂತಾಗಿ, ಗಾಳಿ ಹಾಕಿಕೊಳ್ಳುತ್ತಾ ಮಧ್ಯಾಹ್ನದ ಲಘುನಿದ್ರೆಗೆ ಜಾರಿದೆ. ಸಂಜೆ ನಾಲ್ಕಕ್ಕೆ ಬೆವರಿನ ಸ್ನಾನಕ್ಕೆ ಎಚ್ಚರವಾಗಿ, ಮುಷ್ಕರ ಹೂಡಿರುವ ಫ್ಯಾನಿನತ್ತ ಅಸಹಾಯಕ ನೋಟ ಬೀರಿದೆ. ’ಮತ್ತೆ, ಮತ್ತೆ ಫೋನ್ ಮಾಡಿ ತ್ರಾಸ ಕೊಡಬ್ಯಾಡ್ರಿ’ ಎಂಬ ಎಚ್ಚರಿಕೆಯ ಮಾತನ್ನು ನಿರ್ಲಕ್ಷಿಸಿ ಭಂಡ ಧೈರ್ಯದಿಂದ ಮತ್ತೆ ವಿದ್ಯುತ್ ಕಛೇರಿಗೆ ಫೋನಾಯಿಸಿದೆ. ಈ ಸಲ ಮಾತನಾಡಿದ ವ್ಯಕ್ತಿ ಬೇರೆಯಾಗಿದ್ದ. ’ಇನ್ನೂ ಯಾರೂ ಬಂದಿಲ್ವಾ ಮೇಡಮ್? ನೆನ್ನೆ ಗಾಳಿಗೆ ಮರಗಳು ಬಿದ್ದಿದ್ದು ಮೇಜರ್ ರಿಪೇರಿಗೆ ಹೋಗಿದ್ದಾರೆ. ಅದು ಮುಗಿಸಿಕೊಂಡು ನಿಮ್ಮಲ್ಲಿ ಬರ್ತಾರೆ’ ಅಂತ ನಯವಾಗಿಯೇ ಹೇಳಿದ.

ಸಂಜೆ ಆರು ಗಂಟೆಗೆ ನಮ್ಮ ರಾಯರು ಕಾನ್ಫರೆನ್ಸಿನಿಂದ ಮರಳಿ ಬಂದು, ’ಏನೇ, ಇನ್ನೂ ಬಂದಿಲ್ವಾ ಕರೆಂಟ್ ?’ ಎಂದರು.
’ಬರುತ್ತೇರಿ ಬರುತ್ತೆ. ನೀವಲ್ಲಿ ಆರಾಮಾಗಿ ಎ.ಸಿ ಸಭಾಂಗಣದಲ್ಲಿ ಕೂತು ಭಾಷಣ ಮಾಡಿ, ಕೇಳಿ ಬೇರೇ ಲೋಕದಲ್ಲೇ ಇದ್ರಿ. ನಾನು ಇಲ್ಲಿ ಕರೆಂಟಿಗೋಸ್ಕರ ಎಲ್ಲಾರ ಹತ್ರ ಗೋಗರೆದು, ಮಂತ್ರಪುಷ್ಪಾನೂ ಮಾಡಿಸಿಕೊಂಡು, ಬೆವರಿನಲ್ಲಿ ತೊಯ್ದು ಹೋಗಿದ್ದೀನಿ’ ಬೆಳಗಿನಿಂದ ಅದುಮಿಟ್ಟಿದ್ದ ಭಾವನೆಗಳೆಲ್ಲವನ್ನೂ ಹೊರಹಾಕಿದೆ.
’ಯಾಕೆ, ಹಾಗಿ ಸಿಡುಕ್ತೀಯಾ? ನಿಧಾನವಾಗಿ ಸರಿಯಾಗಿ ಹೇಳು’ ಸೋಫಾದಲ್ಲಿ ಒರಗುತ್ತಾ ಕೇಳಿದರು. ಎಲ್ಲಾ ಕಂತೆ ಪುರಾಣ ಬಿಚ್ಚಿಟ್ಟೆ.
ಕಷ್ಟದಲ್ಲಿ ಭಾಗಿಯಾಗಲು ನನ್ನೊಂದಿಗೆ ಸಪ್ತಪದಿ ತುಳಿದವರು ಬಂದರೆಂದು ಸಮಾಧಾನವಾಗಿತ್ತು.

’ನೋಡು, ತುಂಬಾ ಟೆನ್ಷನ್ ಮಾಡಿಕೊಂಡಿದ್ದೀಯಾ, ಫ್ರೆಷ್ ಆಗಿ ಬರ್ತೀನಿ. ಹಾಗೇ ಸುತ್ತಾಡಿಕೊಂದು ಬರೋಣ’ ಎಂದು ನನ್ನನ್ನು ಸಂತೈಸಿದರು. ಹೊರಗೆ ಸುತ್ತಾಡಿಕೊಂಡು ರಾತ್ರಿ ಎಂಟು ಗಂಟೆಗೆ ಬಂದಾಗ ನಮ್ಮ ಮನೆ ಹೊರತಾಗಿ ಎಲ್ಲಾ ಮನೆಗಳಲ್ಲೂ ಲೈಟುಗಳು ಪ್ರಜ್ವಲಿಸಿ, ನಮ್ಮ ಮನೆ ಮಾತ್ರ ಕತ್ತಲಲ್ಲಿ ಅನಾಥವಾದಂತೆ ಕಂಡು ದುಃಖ ಉಮ್ಮಳಿಸಿ ಬಂತು. ದೇವರ ದರ್ಶನಕ್ಕೆ ಕಾಯುವ ಭಕ್ತರಂತೆ, ಅಂಗಳದಲ್ಲಿ ಕುರ್ಚಿಗಳನ್ನು ಹಾಕಿಕೊಂಡು ರಸ್ತೆಯತ್ತಲೇ ನೋಡುತ್ತಾ ಕುಳಿತೆವು. ಯಾರೋ ಇಬ್ಬರು ಬೈಕ್ ನಲ್ಲಿ ಬಂದು,
’ಡಾ. ರಮೇಶ್ ಅವರ ಮನೆ ಇದೇ ಏನ್ರೀ? ಇದೇ ಏನ್ರೀ ಎಲೆಕ್ಟ್ರಿಕ್ ಪೋಲ್?’ ಎಂದರು. ನಿಧಿ ದೊರೆತಷ್ಟು ಸಂತೋಷವಾಗಿತ್ತು.
’ಬೆಳಗಿನಿಂದ ಕರೆಂಟ್ ಇಲ್ಲಾರೀ’ ಅನ್ನುತ್ತಿದ್ದಂತೆ ’ಅದಕ್ಕೇ ಬಂದಿರೋದು, ನಿಚ್ಚಣಿಕೆ ಕೊಡ್ರಿ ಬೇಗ’ ಎಂದರು.
’ಅದು ಸ್ವಲ್ಪ ಮುರಿದಿದೆ’ ಉಗುಳು ನುಂಗುತ್ತಾ ಹೇಳಿದೆ.
’ಇರ್ಲಿರೀ, ಎಷ್ಟು ಹಲ್ಲದಾವೆ?’ ಕತ್ತಲಲ್ಲಿ ಅವನ ಮುಖಭಾವ ಕಾಣಲಿಲ್ಲ.
’ಹಲ್ಲು!?’ ಗಲಿಬಿಲಿಗೊಂಡೆ. ’ಏಣಿ ಹತ್ತಕ್ಕೆ ಸ್ಟೆಪ್ಸ್ ಎಷ್ಟಿವೆ ಅಂತ ಕೇಳ್ತಿದ್ದಾನೆ’ ಪತಿರಾಯರು ವಿವರಿಸಿದರು, ಮತ್ತೆ ಅವರೇ, ’ಪರವಾಗಿಲ್ಲ, ಮೊನ್ನೆ ಸರಿ ಮಾಡ್ಸಿದೀವಿ’ ಎಂದು ಟೆರೇಸಿನ ಮೇಲಿದ್ದ ಏಣಿಯನ್ನು ಇಳಿಸಿಕೊಟ್ಟರು. ನಾನು ಟಾರ್ಚ್ ಹಿಡಿದು ಸೇವೆ ಮಾಡುತ್ತಿದ್ದೆ.
ಕಂಬವನ್ನು ಟಾರ್ಚ್ ಲೈಟಲ್ಲಿ ಪರಿಶೀಲಿಸಿ ’ಇಲ್ಲಿ ನಿಮ್ಮ ಕೇಬಲ್ ವೈರ್ ಸುಟ್ಟಿದ್ರಿ. ಇದು ನಮ್ಮ ವ್ಯಾಪ್ತಿಗೆ ಬರೋದಿಲ್ಲ. ನಿಮ್ಮ ಎಲೆಕ್ಟ್ರಿಷಿಯನ್ ಕರೆಸಿ ಸರಿ ಮಾಡಿಸಿಕೊಳ್ರಿ’ ಅಂತ ಡಯಾಗ್ನೋಸ್ ಮಾಡಿ ಸರ್ಜರಿಗೆ ರೆಫರ್ ಮಾಡಿ ಹೊರಟೇ ಬಿಟ್ಟರು.

ಮತ್ತೆ ವೀರೇಶನೇ ಗತಿ. ಯಥಾಪ್ರಕಾರ ಗೋಳು ತೋಡಿಕೊಂಡೆ.
’ಅಮ್ಮಾವ್ರೆ. ನಾನು ಸಿದ್ಧಾರೂಢ ಮಠದ ಹತ್ರ ಮಾವನ ಮನಿಗೆ ಬಂದೀನ್ರಿ. ಮುಂಜಾನೆ ಜಲ್ದೀ ಬಂದು ಸರಿಮಾಡಿಕೊಡ್ತೀನಿ’ ಅಂತ ಆಶ್ವಾಸನೆ ಕೊಟ್ಟ. ಎಲ್ಲಾ ಒಟ್ನಲ್ಲಿ ನನ್ನ ಗ್ರಹಚಾರ" ಕ್ಯಾಂಡಲ್ ಲೈಟ್ ಡಿನ್ನರ್ ಮುಗಿಸಿದೆವು. ಇಡೀ ದಿನದ ಮಾನಸಿಕ ಒತ್ತಡದಿಂದ, ಆಯಾಸಗೊಂಡಿದ್ದರ ಫಲವೋ ಎಂಬಂತೆ ನಿದ್ರಾದೇವಿ ತಾನೂ ಸೆಖೆಯಿಂದ ಬಸವಳಿದು ನನ್ನ ತಬ್ಬಿದ್ದಳು.

ಬೆಳಗಿನ ಕಾಫಿ, ಉಪಹಾರ ಸೇವಿಸಿ ನಮ್ಮವರು ಆಸ್ಪತ್ರೆಗೆ ಹೊರಟರು. ’ವೀರೇಶಿಗೆ ಬೇಗ ಫೋನ್ ಮಾಡು’ ಅಂತ ಹಾಸ್ಯವಾಗಿ ಆಜ್ಞಾಪಿಸಿದರು. ವೀರೇಶಿಗೆ ನೆನೆಪಿಸಿದಾಗ, ’ಅಮ್ಮಾವ್ರೆ, ನಮ್ಮ ಭಾವಮೈದ ಕಾರಿನಲ್ಲಿ ಕರ್ಕೊಂಡು ಬರ್ತಾನೆ. ಇನ್ನು ಹದಿನೈದು ನಿಮಿಷದಾಗೆ ಅಲ್ಲಿರ್ತೀನಿ’ ಮತ್ತೆ ಆಶ್ವಾಸನೆ ಕೊಟ್ಟ. ಯಾರ ಹೃದಯವೂ ಕರಗುವಂತೆ ಬಿನ್ನವಿಸಿಕೊಂಡೆ.
’ನಿಮ್ಮ ಕಷ್ಟ ಅರ್ಥ ಆಗ್ತೈತೆ ಅಮ್ಮಾವ್ರೆ. ಭಾವಮೈದ ರಾಣಿ ಚೆನ್ನಮ್ಮ ಸರ್ಕಲ್ ನಲ್ಲಿ ಬಿಟ್ಟು ಹೊರಟು ಹೋದ. ಸರ್ಕಲ್ ನಾಗೆ ಭಾರೀ ಗಲಾಟೆ ನಡೆದೈತ್ರೀ. ಯಾವುದೋ ಕಾರಣಕ್ಕೆ ಹುಬ್ಬಳ್ಳಿ ಬಂದ್ ಅಂತ ಆಟೋದವ್ರು ಬಿಡವಲ್ರಿ’ ಎಂದ. ಎದೆ ಧಸಕ್ಕೆಂದಿತು.
ಪೇಪರಿನಲ್ಲಿ ಬಂದಿತ್ತು. ತಕ್ಷಣ ಉಪಾಯ ಹೊಳೆದು, ಪರಿಹಾರ ಸೂಚಿಸಿದೆ. ’ನೋಡಪ್ಪಾ ವೀರೇಶಿ, ಹೇಗಾದರೂ ’ರೇವಣ್ ಕರ್ ಹೋಟೆಲಿನ ತನಕ ಬಾ. ಅಲ್ಲಿ ಮುಟ್ಟಿದ ತಕ್ಷಣ ನಮ್ಮ ಡಾಕ್ಟರಿಗೆ ಫೋನ್ ಮಾಡು. ನಿನ್ನನ್ನು ಕರೆದುಕೊಂಡು ಬರ್ತಾರೆ’ ಅಂತ ಹೇಳಿ
ನಮ್ಮ ರಾಯರ ನಂಬರ್ ಕಡೆ ಗಮನ ಹರಿಸಿದೆ.
’ಪೇಶಂಟ್ ಎಕ್ಸಾಮಿನ್ ಮಾಡುತ್ತಿದ್ದೇನೆ’ ಎನ್ನುತ್ತಿದ್ದಂತೆ ಮತ್ತೆ ಬಿ.ಪಿ. ಏರಿದಂತಾಗಿ, ’ರೀ, ಯಾವುದು ಎಮರ್ಜೆನ್ಸಿ?’ ನೆನ್ನೆಯಿಂದ ಕಂಗಾಲಾಗಿ ಹೋಗಿದ್ದೀನಿ. ವೀರೇಶಿ ಪೋನ್ ಬರುತ್ತಲೇ ತಕ್ಷಣ ಅವನನ್ನು ಕರೆದುಕೊಂಡು ಬಂದು ನಿಮ್ಮ ಬೇರೆ ಎಮರ್ಜೆನ್ಸಿ ಅಟೆಂಡ್ ಮಾಡಿ’ ಫೈನಲ್ ಎಂಬಂತೆ ಹೇಳಿಬಿಟ್ಟೆ.

ಅಂತೂ, ಇಂತೂ ಮಧ್ಯಾಹ್ನ ಹನ್ನೆರಡು ಗಂಟೆಗೆ ವೀರೇಶಿಯ ಆಗಮನವಾಯ್ತು. ಮೊದಲೇ ಹೇಳಿದ್ದರಿಂದ ಕೇಬಲ್ ವೈರ್, ಮತ್ತಿತರ ಶಸ್ತ್ರಗಳ ಸಮೇತ ಬಂದಿದ್ದ. ಏಣಿ ಹತ್ತಿ, ಶಸ್ತ್ರಚಿಕಿತ್ಸೆ ಮಾಡಿ, ಹೊಸ ಕೇಬಲ್ ವೈರ್ ಹಾಕಿ ಮೇನ್ಸ್ ಆನ್ ಮಾಡಿದ. ಹಾಕಿದ್ದ ದೀಪಗಳು ಬೆಳಗಲಾರಂಭಿಸಿದವು. ಫ್ಯಾನ್ ಗಳು ವಿಷ್ಣಚಕ್ರದಂತೆ ತಿರುಗಲಾರಂಭಿಸಿದವು. ತೆಪ್ಪಗಿದ್ದ ಫ್ರಿಜ್ ಕೆಲಸ ಶುರು ಮಾಡಿತು. ನೀರಿನ ಪಂಪ್ ಶಬ್ದ ಮಾಡುತ್ತಾ ಮೇಲಿನ ಟ್ಯಾಂಕ್ ತುಂಬಲಾರಂಭಿಸಿತು. ಹರ್ಷಾತಿರೇಕದಿಂದ ನನ್ನ ಹೃದಯ ತುಂಬಿ ಬಂದು ಕಂಗಳಲ್ಲಿ ಆನಂದ ಬಾಷ್ಪ ತಾನೇ ಕಾಣಿಸಿಕೊಂಡಿತ್ತು. ವೀರೇಶಿ ಆ ಕ್ಷಣ ನನಗೆ ಸಾಕ್ಷಾತ್ ಭಗವಂತನ ರೂಪದಂತೆ ಕಾಣಿಸಿಕೊಂಡಿದ್ದ. ನೂರರ ನೋಟುಗಳು ಕೈಗೆ ಸಿಕ್ಕಷ್ಟು ಅವನಿಗೆ ಸಂತೋಷದಿಂದ ಅರ್ಪಿಸಿದೆ.
’ಇಷ್ಟೊಂದು ಯಾಕೆ ಅಮ್ಮಾವ್ರೆ?’ ಅಂತ ಅವನೆಂದಾಗ, ’ವೀರೇಶಿ ನಿನ್ನ ಉಪಕಾರಕ್ಕೆ ಥ್ಯಾಂಕ್ಸ್ ಹ್ಯಾಗೆ ಹೇಳಬೇಕೆಂದು ಗೊತ್ತಾಗುತ್ತಾ ಇಲ್ಲಪ್ಪ. ಹುಬ್ಬಳ್ಳಿ ಬಂದ್ ಇದ್ದಾಗಲೂ ಬಂದು ನಮ್ಮ ಕಷ್ಟ ಪರಿಹಾರ ಮಾಡಿದೆ’ ಅಂತೆಲ್ಲಾ ಬಡಬಡಿಸಿದೆ.
’ಹಾಗೆಲ್ಲಾ ಹೇಳಬ್ಯಾಡ್ರಿ ಅಮ್ಮಾ, ನನಗೆ ಭಿಡೆ ಆಗ್ತದೆ. ನನ್ನ ಕೆಲಸ ನಾನು ಮಾಡೀನಿ. ಡಾಕ್ಟರು ನಮಗೆ ಮಾಡಿರೋ ಉಪಕಾರದ ಮುಂದೆ ಇದು ಏನೂ ಅಲ್ಲ ಬಿಡ್ರೀ’ ಅಂತ ಹೊರಟೇ ಬಿಟ್ಟ.

ಕರೆಂಟ್ ಬಂದ ಖುಷಿಯಲ್ಲಿ, ’ಇವತ್ತು ಏನಾದ್ರೂ ಸ್ವೀಟ್ ಮಾಡಿ ಸೆಲೆಬ್ರೇಟ್ ಮಾಡಲೇ ಬೇಕು’ ಅಂದುಕೊಳ್ಳುತ್ತಾ,
’ಕತ್ತಲು ಕಳೆಯಿತು, ಬೆಳಕದು ಮೂಡಿತು, ಹರುಷದಿ ಮನ ನಲಿನಲಿದಾಡಿತು’ ಕವಿತೆ ಮನದುಂಬಿ ಹಾಡುತ್ತಾ ಅಡುಗೆ ಮನೆಯತ್ತ ಹೆಜ್ಜೆ ಹಾಕಿದೆ.

++++++