Click here to Download MyLang App

ಪ್ರೇಮ ನಿವೇದನೆ - ಬರೆದವರು : ಸವಿರಾಜ್ | ರೋಮ್ಯಾನ್ಸ್

ನನ್ನ ನೂರ್,

ನಿನ್ನ ಅಪ್ಪುಗೆಯ ಸಹಾರೆ ತಪ್ಪಿಹೋಗಿ ಇವತ್ತಿಗೆ ಸರಿಯಾಗಿ ಹನ್ನೊಂದು ದಿನ, ಹನ್ನೆರಡು ರಾತ್ರಿ ಮತ್ತು ಅಷ್ಟೇ ಸಾಯಂಕಾಲಗಳು. ಈ ಕ್ಷಣಕ್ಕೂ ಅಲ್ಲಿ ನನ್ನ ಪುಟ್ಟ ಜೋಪಡಿಯ ಪ್ರತಿ ಮಣ್ಣಿನ ಹರಳಿನಲ್ಲೂ ನಿನ್ನ ಮೈಯ ಘಮವಿದೆ. ಕೆನ್ನೆಗಳ ಮೇಲೆ ನೀನಿತ್ತಿರೋ ಮುತ್ತುಗಳ ತೇವ. ಎದೆಯ ಮೇಲೆ ಮಲಗಿರುವ ಮೂರು ತಿಂಗಳ ಮಗು ಮುಹಬ್ಬತ್ ನಿನ್ನ ನೆನಪುಗಳಷ್ಟೇ ಅಗಾಧವಾದ ತನ್ನ ಕಣ್ಣುಗಳಿಂದ ಬಿಟ್ಟುಹೋದ ಅಮ್ಮೀಜಾನ್‍ಳನ್ನು ಹುಡುಕುತ್ತಿದೆ. ಮುಹಬ್ಬತ್‍ಗೆ ನೀನು ಬೇಕು, ನನಗೆ ನಿನ್ನ ಮುಹಬ್ಬತ್!

ಹಾಗೊಂದು ಮುಂಜಾವು ನೀ ನನಗೆ ಕಾಣದೆ ಹೋಗಿದ್ದರೆ, ಅಲ್ಲಾಹ್ ನನ್ನ ಅದೃಷ್ಟಹೀನ ಅಂಗೈನ ಮೇಲೆ ಅದೊಂದು ಬೆಳ್ಳಿಯ ರೇಖೆ ಗೀಚದೆ ಹೋಗಿದ್ದರೆ, ಈ ಫಕೀರನ ಬದುಕು ಎಷ್ಟೊಂದು ಖಾಲಿ ಖಾಲಿಯಾಗಿರುತ್ತಿತ್ತು. ನೀ ಬರುವ ಮುನ್ನ ಅಲ್ಲಿ ಲಾಹೋರ್ ನಗರಿಗೆ ಆತ್ಮವೇ ಇರಲಿಲ್ಲ. ನೀ ಬಂದ ಮೇಲೆಯೇ ಅಲ್ಲವೇ ಮೇರಿ ಜಾನ್, ಮೈ ತೋಯುವಷ್ಟು ಬೆಳದಿಂಗಳು ಸುರಿದಿದ್ದು, ಮನಸ್ಸು ಹೂವಾಗುವಷ್ಟು ಮಳೆ ಬಿದ್ದಿದ್ದು ಮತ್ತು ನಿನ್ನ ಸ್ಪರ್ಶದಷ್ಟೇ ಹಿತವಾದ ಬಿಸಿಲು ಚೆಲ್ಲಿದ್ದು.

ನಿನ್ನನ್ನು ಮೊದಲ ಸಲ ನೋಡಿದ ಮುಂಜಾವು ಇನ್ನೂ ಸ್ಪಷ್ಟವಾಗಿ ನೆನಪಿದೆ. ಲಾಹೋರದ ಗಡಿ ಕಾಯುವ ಸಿಪಾಯಿಯಾಗಿದ್ದ ನನ್ನನ್ನು ಮನ್‍ಸುಬಹ್‍ದಾರ್ ದಿಲ್‍ಷಾದ್‍ಖಾನರ ಮಹಲಿನ ಪಹರೆಗೆ ನೇಮಿಸಲಾಗಿತ್ತು. ಮುಂಜಾವು ಖಾವಂದರು ಮರ್ದಾನಾದ ಹಜ಼ಾರದಲ್ಲಿ ಹುಕುಮು ನೀಡುತ್ತಿದ್ದಾಗ, ಮಹಡಿಯ ಮೇಲಿನ ಜನಾನದ ಕಿಟಕಿಯ ಸರಳುಗಳ ಹಿಂದೆ ಅರ್ಧ ನಕಾಬು ಜಾರಿದ ಕಣ್ಣುಗಳೆರಡು ನನ್ನನ್ನೇ ದಿಟ್ಟಿಸುತ್ತಿದ್ದವು. ತಿಳಿಜೇನು ಬಣ್ಣದ ಕಣ್ಣಗೊಂಬೆಗಳ ಸುತ್ತ ಮೊಲದ ಬಿಳುಪು, ಸಾವಿರ ರಂಜ಼ಾನ್ ಚಂದ್ರರ ಹೊಳಪು! ನಾನೆಂಥ ಹುಚ್ಚ, ಇದೆಂತಹ ದಿವಾನಗಿ ನಂದು ನೀನೇ ಹೇಳು? ಜಗತ್ತಿನ ಹಕ್ಕಿಗಳ ಪುಚ್ಛಗಳನ್ನೆಲ್ಲ ಹೆಕ್ಕಿ ತಂದು ಮಸಿಯಲ್ಲಿ ಅದ್ದಿದರೂ, ನಿನ್ನ ಕಣ್ಣುಗಳ ಬಗ್ಗೆ ಬರೆದು ಮುಗಿಸಲಾದೀತೆ ಜಾನಮ್? ಅವತ್ತೇ ಈ ಖಾಲಿ ಎದೆಯ ಮೇಲೆ, ನೀನು ಮುಹಬ್ಬತ್ ಎಂಬ ಭಿತ್ತಿಪತ್ರ ಅಂಟಿಸಿ ಹೋಗಿದ್ದೆ. ಅದು ಸನ್ ೧೬೫5ನೇ ಇಸವಿ, ಪವಿತ್ರ ರಂಜ಼ಾನ್ ಮಾಸದ ಹದಿಮೂರನೇ ದಿನ.

ನಂತರ ನೀನು ನಿನ್ನ ನೌಕರಾನಿಯೊಂದಿಗೆ, ಆಲಿಯಾ ಇರ್ಫಾನಿಯಾ ದರ್ಗಾಕ್ಕೆ ಬಂದಾಗಲೆಲ್ಲ, ನಿಮ್ಮ ಅಬ್ಬಾಜಾನ್ ನಿನ್ನ ರಕ್ಷಣೆಗೆ ನನ್ನನ್ನೇ ಕಳಿಸುತ್ತಿದ್ದರು. ದರ್ಗಾದ ಹೊರಗೆ ನೀನು ಡೋಲಿಯಿಂದ ಇಳಿದ ಕ್ಷಣ, ನಿನ್ನ ಪರಿಮಳವನ್ನು ಹುಡುಕಿ, ನನ್ನ ಉಸಿರೇ ಬಳಲಿಬಿಡುತ್ತಿತ್ತು. ವಾಪಸು ಮಹಲಿಗೆ ಬರುವ ದಾರಿಯಲ್ಲಿ ಡೋಲಿ ಹೊರುವವನನ್ನು ಪಕ್ಕಕ್ಕೆ ಸರಿಸಿ, ತುಸು ದೂರ ನಾನು ಡೋಲಿಗೆ ಹೆಗಲು ಕೊಡುತ್ತಿದ್ದೆ. ಅಷ್ಟು ಮಾತ್ರದ ಅದೃಷ್ಟ ಕರುಣಿಸಿದ್ದಕ್ಕಾಗಿ, ನಾನು ಖುದಾನ ಸನ್ನಿದಿಯಲ್ಲಿ ಸಾವಿರ ಪ್ರಣಾಮಗಳನ್ನು ಸಲ್ಲಿಸುತ್ತಿದ್ದೆ.

ನನ್ನ ಜನ್ಮಗಳ ದುವಾಗಳಿಗೆ ಫಲ ಸಿಕ್ಕ ದಿನವನ್ನು ಹೇಗೆ ಮರೆಯಲಿ? ಮಹಲಿನಲ್ಲಿ ಬೆಳೆದ ಹುಡುಗಿ, ಅವತ್ತು ಸಂಜೆ ನನ್ನ ಜೋಪಡಿಯ ಕಪ್ಪು ನೆಲದ ಮೇಲೆ ಕಾಲಿಟ್ಟಿದ್ದೆ. ಲಾಹೋರ್ ಮುಳುಗಿ ಹೋಗುವಷ್ಟು ಮಳೆ ಸುರಿಯುತ್ತಿತ್ತು ಆ ಹೊತ್ತಲ್ಲಿ. ತಡಿಕೆಯ ಕಿಂಡಿಗಳಿಂದ ಮಳೆನೀರು ಸೋರಿ ನೆಲ ಕೆಸರಾಗಿತ್ತು. ಹಸೀ ನೆಲದ ಮೇಲೆ, ನಿನ್ನ ನೂಪುರದ ನಾದದಷ್ಟೇ ನಯವಾದ ಪಾದಗಳನ್ನು ಊರುತ್ತ ನಡೆದುಬಂದೆ. ಹಾಳಾದ ಮಳೆ ಬರದೇ ಹೋಗಿದ್ದರೆ, ತೋಟದಿಂದ ಗುಲಾಬಿ ಹೂಗಳ ಪಕಳೆಗಳನ್ನು ಬಿಡಿಸಿ ತಂದು ನೆಲದ ಮೇಲೆ ಸುರಿಯುತ್ತಿದ್ದೆ. ಜೋಪಡಿಯ ಬಾಗಿಲಿನಿಂದ ನನ್ನ ಮಂಚಕ್ಕೆ ಮೂರು ಹೆಜ್ಜೆ, ನೀನು ಹನ್ನೆರಡು ಹೆಜ್ಜೆಗುರುತುಗಳನ್ನು ಮೂಡಿಸಿ ನನ್ನ ಸನಿಹಕ್ಕೆ ಬಂದೆ. ಸುಮ್ಮನೇ ಬರಲಿಲ್ಲ, ಬಂದವಳು ಗೋಡೆಗೆ ತೂಗಿಹಾಕಿದ್ದ ಚಲಿಸುವುದನ್ನು ಮರೆತಿದ್ದ ಗಡಿಯಾರಕ್ಕೆ ಕೀಲಿ ಕೊಟ್ಟು, ಲಾಂದ್ರಕ್ಕೆ ಕಿಡಿ ಹತ್ತಿಸಿದೆ. ಲಾಂದ್ರದ ಬೆಳಕು ನಿಧಾನವಾಗಿ ನಮ್ಮಿಬ್ಬರ ಮೇಲೆ ಚೆಲ್ಲಿತು, ಆಗ ಸರಿಯಿತು ನಕಾಬು. ಸುಭನಲ್ಲಾಹ್! ಅಲ್ಲಿಯವರೆಗೆ ನಾನು ನೋಡಿದ್ದ ಸೌಂದರ್ಯವೆಲ್ಲ ನಿನ್ನ ಪಾದದ ಕೆಳಗಿನ ಧೂಳಲ್ಲದೆ ಇನ್ನೇನು? ಬೊಗಸೆಯ ತುಂಬಾ ಮಳೆನೀರು ಹಿಡಿದು, ಅದರಲ್ಲಿನ ನಿನ್ನ ಬಿಂಬವನ್ನು ಕಣ್ಣುಗಳೊಳಕ್ಕೆ ಬಸಿದುಕೊಳ್ಳುತ್ತಿದ್ದೆ. ನಿನ್ನ ಕಣ್ಣುಗಳಿಗೆ ಕಣ್ಣು ಸೇರಿಸುವಷ್ಟು ಧೈರ್ಯ ನಿಮ್ಮ ಅಬ್ಬಾಜಾನ್‍ರ ಕೆಳಗಿನ ಸಾಮಾನ್ಯ ಸಿಪಾಯಿಯಾದ ನನಗೆಲ್ಲಿಂದ ಬಂದೀತು? ನೀನು ಮರಳುವ ಹೊತ್ತಿನಲ್ಲಿ, ನಿನ್ನ ಬೆರಳುಗಳು ನನ್ನ ತಾಕಿದವು. ಅಷ್ಟೇ! ನಿನ್ನ ಅಂಗಾಂಗಗಳ ಪ್ರತಿಯೊಂದು ಕಂಪನವೂ, ನಿನ್ನ ಕಿರುಬೆರಳಿನ ಮೂಲಕ ನನ್ನೊಳಗೆ ಪ್ರವಹಿಸಿ ಎದೆಯಲ್ಲಿ ಝೇಂಕರಿಸಿತು!

ಅವತ್ತೇ ಕೊನೆ, ಆಮೇಲೆ ನಾನು ನಾನಾಗಿ ಉಳಿಯಲೇ ಇಲ್ಲ. ನಿನ್ನ ನೆನಪುಗಳ ಬೆಂಕಿಗೆ ನನ್ನ ಸಂಜೆಗಳು ಆಹುತಿಯಾದವು. ಕನಸಿನಲ್ಲಿ ನೀನು ಬರಬಹುದೆಂಬ ಅತಿ ಚಿಕ್ಕ ಆಸೆ ಹೊತ್ತು ನಿದ್ದೆಯೂ ಎಚ್ಚರವಾಗಿರುತ್ತಿತ್ತು. ಪ್ರೀತಿಯ ರಾವೀ ನದಿಯಲ್ಲಿ ನಿನ್ನ ಹೆಸರಿನ ಪ್ರಣತಿಗಳ ಮೆರವಣಿಗೆ ಹೊರಟಿತು. ನಂಗೆ ಇಷ್ಟು ಮಾತ್ರ ಅರ್ಥವಾಗಿ ಹೋಯಿತು, ನೀನು ಇಲ್ಲಿಯವಳಲ್ಲವೇ ಅಲ್ಲ. ಯಾವುದೋ ದೂರದ ನಕ್ಷತ್ರ ಲೋಕದಿಂದ, ನನ್ನ ವಿಷಾದಗಳ ವಿಷದ ಬಟ್ಟಲಿಗೆ, ಮುಹಬ್ಬತ್ ಎಂಬ ಮಧು ಸುರಿಯಲು ಬಂದ ಕಿನ್ನರಿ ನೀನು!

ಷಹಜ಼ಾದೇ ದಿಲ್‍ಷಾದ್‍ಖಾನ್ ನಿನ್ನ ನಿಕಾಹ್ ಕುರಿತು ಮಾತನಾಡಿದ ದಿನ, ನಿನ್ನ ಕಣ್ಣುಗಳು ಸಮುದ್ರವಾಗಿದ್ದವು. ಅವತ್ತು ನಮಗೆ ಲಾಹೋರ್ ತೊರೆಯದೆ ಬೇರೆ ದಾರಿಯಾದರೂ ಎಲ್ಲಿತ್ತು? ನಾವು ಲಾಹೋರ್ ಬಿಟ್ಟ ಮರುಕ್ಷಣವೇ, ನಿಮ್ಮ ಅಬ್ಬಾಜಾನ್‍ರ ಸೇನೆಯ ತುಕಡಿಯೊಂದು ನಮ್ಮ ಬೆನ್ನ ಹಿಂದೆಯೇ ಬರಲಿದೆ ಎಂಬುದು ನಮ್ಮಿಬ್ಬರಿಗೂ ತಿಳಿದಿತ್ತು. ಉಟ್ಟ ಬಟ್ಟೆಯಲ್ಲಿಯೇ ಲಾಹೋರ್ ತೊರೆದು, ವಾಘಾದ ವಿಶಾಲ ಬಯಲನ್ನು ಉತ್ತರಿಸಿ, ಅಮೃತಸರದ ಸುನ್ಹೇರಿ ಮಂದಿರದಲ್ಲಿ ತಲೆಬಾಗಿ, ಸಿಖ್ಖರು ಕಟ್ಟಿದ್ದ ಹೊಚ್ಚ ಹೊಸ ನಗರಿ ಕರ್ತಾರಪುರದ ಸೌಂದರ್ಯಕ್ಕೆ ಮಾರುಹೋಗಿ, ಕುರುಕ್ಷೇತ್ರದ ಪವಿತ್ರ ಸಮರಭೂಮಿಯನ್ನು ಹಾಯ್ದು ಕಡೆಗೂ ದಿಲ್ಲಿ ತಲುಪಿಯೇ ಬಿಟ್ಟೆವು. ನಮ್ಮ ಪ್ರೀತಿಯ ಆಸರೆಯೊಂದು ಇಲ್ಲದೆ ಹೋಗಿದ್ದರೆ, ಕಾಡುಗಳು, ಕೊರಕಲುಗಳು, ಇರುಕಾದ ಪರ್ವತಗಳು, ಸಾವಿನ ಕಣಿವೆಗಳಿಂದ ತುಂಬಿದ ದಾರಿಯಲ್ಲಿ ಪಯಣಿಸಿಯೂ ಬದುಕುಳಿಯಲು ಹೇಗೆ ಸಾಧ್ಯವಾಗುತ್ತಿತ್ತು?

ಲಾಹೋರದಲ್ಲಿ ಮುಳುಗಿದ ಸೂರ್ಯ ದಿಲ್ಲಿಯಲ್ಲಿ ಉದಯಿಸಿದ್ದ. ಲಾಲ್ ಖಿಲಾದ ಲಾಹೋರಿ ದರವಾಜ಼ಾದ ಎದುರಿನಿಂದ ಹಾಯ್ದು ಫತೇಪುರದ ಮಸಜೀದಿ ಸೇರುವ ದಾರಿಯುದ್ದಕ್ಕೂ ನಿನ್ನ ಕೈ ಬೆರಳುಗಳನ್ನು ಹಿಡಿದು ನಡೆಯುತ್ತಿದ್ದರೆ, ಜನ್ನತ್ ಇದಕ್ಕಿಂತ ಅಧ್ಬುತವಿರಲು ಸಾಧ್ಯವೇ ಎಂದು ನಾನು ಯೋಚಿಸುತ್ತಿದ್ದೆ. ಜಮ್ನಾ ನದಿಯ ಪೂರಬ್ ದಿಶೆಯ ತಟದಲ್ಲಿ ನಾವೊಂದು ಪುಟ್ಟ ಜೋಪಡಿ ಕಟ್ಟಿಕೊಂಡೆವು. ಇದೇ ನದಿಯ ತೀರದುದ್ದಕ್ಕೂ ನಡೆದಲ್ಲವೇ, ದಿಲ್ಲಿಯನ್ನು ತೊರೆದ ಪ್ರೇಮಕವಿ ಸಯ್ಯದ್ ಇಬ್ರಾಹಿಂ ರಸ್‌ಖಾನ್ ತನ್ನ ರಾಧಾಮಾಧವನನ್ನು ಅರಸುತ್ತಾ ಬೃಂದಾವನವನ್ನು ಸೇರಿದ್ದು. ಹಿಂದೂ ಲೋಗ್ ಈ ನದಿಯನ್ನು ಯಮುನೆ ಎಂದು ಕರೆದರು, ಅವರು ಖುದಾ ಎಂದು ನಂಬುವ ಕಿಶನ್ ಭಗವಾನ್ ತನ್ನ ರಾಧೆಯೊಂದಿಗೆ ಇದೇ ನದಿಯ ದಂಡೆಯ ಮಳಲಿನ ಮೇಲೆ ಮೈಚೆಲ್ಲಿ ಅನುರಾಗದ ಕ್ಷಣಗಳನ್ನು ಕಳೆಯುತ್ತಿದ್ದನಂತೆ. ನೆನಪಿದೆಯೇನು ನಿನಗೆ, ನಾವಿಬ್ಬರೂ ಹೊಳೆಯೊಳಗೆ ಕಾಲುಗಳನ್ನು ಇಳಿಬಿಟ್ಟು ರಸ್‌ಖಾನರ ದೋಹೆಗಳನ್ನು ಗುನುಗುತ್ತಾ ನೀರಿನಲ್ಲಿ ರಾಧಾಮಾಧವರ ಪ್ರತಿಬಿಂಬವನ್ನು ಹುಡುಕುತ್ತಿದ್ದೆವು:

ರಾಧಾ ಮಾಧವ ಸಖಿನ ಸಂಗ್
ಬಿಹರತ್ ಕುಂಜ್ ಕುಟೀರ್ ।
ರಸಿಕ್ ರಾಜ್ ರಸ್‌ಖಾನಿ ಜಹಂ
ಕೂಜತ್ ಕೋಯಿಲ್ ಕೀರ್ ।।

ಚಾಹರ್‌ಬಾಘ್ ಹೂದೋಟದಲ್ಲಿ ಮಾಲಿಯಾಗಿ ಹಗಲಿರುಳು ಮೆಹನತ್ ಮಾಡಿ ಕಡುಗೆಂಪು ಗುಲಾಬಿ ಹೂಗಳನ್ನು ಅರಳಿಸುತ್ತಿದ್ದೆ ನಾನು. ಭಕ್ಷೀಸಾಗಿ ದೊರೆತ ರುಪೈಯ್ಯಾ ಸಿಕ್ಕೆಗಳನ್ನು ಕೂಡಿಟ್ಟು, ಅದೊಂದು ದಿನ ಚಾಂದನೀ ಚೌಕದ ಬಜಾರದಿಂದ ಪಚ್ಚೆಹರಳಿನ ಕಾಲ್ಗೆಜ್ಜೆಯನ್ನು ಕೊಂಡುತಂದು ನಿನ್ನ ಬಂಗಾರದ ಬಣ್ಣದ ಪಾದಗಳಿಗೆ ತೊಡಿಸುವ ಹೊತ್ತಿಗೆ ಸರಿಯಾಗಿ, ಸೂರ್ಯ ಜಮ್ನಾ ನದಿಯೊಳಗೆ ಕಡುಮೋಹದಿಂದ ಮುಳುಗುತ್ತಿದ್ದ; ನಮ್ಮ ಜೋಪಡಿಯ ಹಿನ್ನೆಲೆಯಲ್ಲಿದ್ದ ಆಕಾಶದೆತ್ತರದ ತಾಜ ಮಹಲು ಅಸೂಯೆಯಿಂದ ಮುಖ ಕೆಂಪಾಗಿಸಿಕೊಳ್ಳುತ್ತಿತ್ತು. ಈಗ ನಮ್ಮಿಬ್ಬರ ಪ್ರೀತಿಯ ಕುರುಹಾಗಿ ನಮ್ಮ ಮಗುವಿತ್ತು. ಅದಕ್ಕೆ ’ಮುಹಬ್ಬತ್’ ಎಂಬ ಹೆಸರಿಟ್ಟ ದಿನ, ಕಲ್ಲುಸಕ್ಕರೆ ತಿಂದು ನಾವು ಮೂರೂ ಜೀವಗಳು ಸಂಭ್ರಮಿಸಿದ್ದೆವು. ಇದೆಲ್ಲಾ ಖುಷಿ, ಈ ದಿವ್ಯ ಸಂತೋಷದ ಅಂತ್ಯ ಕೆಲವೇ ದಿನಗಳ ಸನಿಹದಲ್ಲಿದೆ ಎಂಬ ಅರಿವಿದ್ದರೂ, ನಮ್ಮ ಪ್ರೀತಿಯ ದಿನಗಳಲ್ಲಿ ಅಂತಹ ಭಯಗಳು ನಮ್ಮನ್ನು ಘಾಸಿಗೊಳಿಸಲಿಲ್ಲ.

ಸನ್ ೧೬೫8ರ ಹೊಸ ವರ್ಷದ ಮೊದಲ ದಿನದ ಮುಂಜಾವು, ನಿನ್ನ ಅಬ್ಬಾಜಾನ್‌ರ ಸೈನಿಕರು ನಮ್ಮ ಜೋಪಡಿಯ ಬಾಗಿಲಿನಲ್ಲಿದ್ದರು. ನಿನ್ನನ್ನು ದೂರದ ಪೇಷಾವರಕ್ಕೆ ಎಳೆದೊಯ್ಯಲಾಯಿತು. ನಾನೀಗ ಲಾಹೋರದ ಕಾರಾಗೃಹದ ಬಂಧಿ. ನನ್ನ ಮಾತು ಬಿಡು, ಪ್ರೀತಿಗೋಸ್ಕರ ಅಮೃತಶಿಲೆಯ ಸೌಧವನ್ನೇ ಕಟ್ಟಿಸಿದ ದಿಲ್ಲಿಯ ಬಾದಷಹ ಶಹಜಹಾನರನ್ನೇ, ನಿನ್ನೆ ಆಗ್ರಾದ ಕೋಟೆಯೊಳಗೆ ಸೆರೆಯಾಳಾಗಿರಿಸಿ, ಷಹಜ಼ಾದೇ ಔರಂಗಜೇಬರು ಹಿಂದೂಸ್ಥಾನದ ತಖ್ತ್ ಮೇಲೆ ತಮ್ಮ ಕತ್ತಿಯನ್ನು ಊರಿದ್ದಾರೆ ಎಂದು ಜೈಲಿನ ಗೋಡೆಗಳು ಪಿಸುಮಾತಾಡುತ್ತಿವೆ. ಈಗೀಗ, ನನ್ನನ್ನು ಕೂಡಿಹಾಕಿರುವ ಜೈಲಿನ ಬೆಳಕಿಂಡಿಯಿಂದ ಚಿಮ್ಮುವ ಮಂದವಾದ ಬೆಳಕು ಕಣ್ಣಿಗೆ ಹಿತವೆನ್ನಿಸುತ್ತದೆ. ಕಾರಾಗೃಹದ ಗೋಡೆಯಾಚೆಗಿಂದ, ಹತ್ತಿಯ ಗಿರಣಿಗಳು ಕಟಕಟಿಸುವ ಶಬ್ದ, ಹಳ್ಳಿಗಾಡಿನ ರೈತರ ಮಾತುಕಥೆಗಳು, ಮೃದುವಾದ ಹತ್ತಿಯ ಬಟ್ಟೆಗಳನ್ನು ನೇಯುವ ಹೆಂಗಸರ ಪಟ್ಟಾಂಗ, ಮಕ್ಕಳ ಕಿಲಕಿಲ ನಗು ಕಿವಿಗೆ ಬಡಿದಾಗಲೆಲ್ಲ, ಇದು ಸೆರೆಮನೆಯೆಂಬುದೇ ಮರೆತುಹೋಗುವಷ್ಟು ಜೀವಂತಿಕೆ ಆವರಿಸಿಕೊಳ್ಳುತ್ತದೆ. ಆದರೆ ತಾನ್‌ಪೂರಾದ ಮಧುರಾಲಾಪದ ಮಧ್ಯೆ ಅಪಶೃತಿಯೆದ್ದಂತೆ, ಹತ್ತಿಯ ಬಟ್ಟೆಗಳನ್ನು ಕೊಳ್ಳಲು ಬರುವ ಫಿರಂಗಿಗಳ ಬೂಟಿನ ಸದ್ದು ಮನಸ್ಸನ್ನು ಅರ್ಥವಾಗದ ವಿಹ್ವಲತೆಯೆಡೆಗೆ ದೂಡುತ್ತದೆ. ನಿನಗೆ ಹೇಳಲು ಮರೆತೆ, ದಯಾಮಯಿಗಳಾದ ಖಾವಂದರು ನನಗೆ ಮರಣ ಶಿಕ್ಷೆ ವಿಧಿಸಿದ್ದಾರೆ. ಹೇಳೀ ಕೇಳೀ ಸೈನಿಕ ನಾನು, ನವಾಬರ, ಬಾದಷಹರ, ಮಹಾರಾಜರ ಕನಸಿನ ಸೌಧಗಳ ಕಾವಲು ಕಾಯುದಷ್ಟೇ ನನ್ನ ಕೆಲಸ; ಪ್ರೀತಿಸುವ ಅಧಿಕಾರವಿಲ್ಲ ನನಗೆ. ಯಾವ ಯುದ್ಧದಲ್ಲಿ, ಯಾರ ಕಾಡತೂಸು ಚಿಮ್ಮಿ ಛಿದ್ರವಾಗಬೇಕಿತ್ತೋ ನನ್ನ ಎದೆ, ನೀನು ಅಮಾಯಕ ಹಕ್ಕಿಯ ಹಾಗೆ ಅದರೊಳಗೆಯೇ ಗೂಡು ಕಟ್ಟಿ ಕುಳಿತೆ. ಈಗ ದುಃಖಿಸಬೇಡ, ಪ್ರೀತಿಗೆ ಕಾಲವಲ್ಲ ಇದು; ಇದೇನಿದ್ದರೂ ಯುದ್ಧದ, ಸೇಡಿನ, ಸಾಮ್ರಾಜ್ಯಗಳ ಗೆದ್ದು ಬೀಗುವ ಮಹತ್ವಾಕಾಂಕ್ಷೆಗಳ ಯುಗ. ಕುದುರೆಗಳ ಹೇಷಾರವದ ಗುಡುಗಿನಲ್ಲಿ, ಗುಬ್ಬಿಗಳ ಚಿಲಿಪಿಲಿ ಯಾರಿಗೆ ಅರ್ಥವಾದೀತು? ಪ್ರೇಮಿಗಳಿಗೆಂತಲೇ ಒಂದು ಕಾಲ ಎಂದಿಗೆ ಬಂದೀತೋ, ಅದೆಷ್ಟು ಶತಮಾನಗಳು ಕಾಯಬೇಕೋ, ಅದಿನ್ನೆಷ್ಟು ಬಲಿದಾನಗಳ ನೀಡಬೇಕೋ, ಲಾಹೋರ ಮತ್ತು ದಿಲ್ಲಿಯ ಮಧ್ಯೆ ರಕ್ತದ ಕಾಲುವೆಗಳೇ ಹರಿಯಬೇಕೋ, ಕಾಲವಷ್ಟೇ ಉತ್ತರಿಸೀತು!

ನಾಳೆ ಮುಂಜಾನೆ ನನ್ನ ಕುತ್ತಿಗೆಗೆ ಸಾವಿನ ಕುಣಿಕೆ ಬೀಳುತ್ತದೆ. ನನ್ನ ಜೊತೆ ಸಾವಿದೆ. ನಿನ್ನೊಂದಿಗೆ ನಿನ್ನ ಅಬ್ಬಾಜಾನ್, ನಿನ್ನ ಲಾಹೋರ್ ನಗರಿ ಇದೆ. ಆದರೆ ಮುಹಬ್ಬತ್? ಅಮ್ಮೀ, ಅಬ್ಬೂ ಇಲ್ಲದ ಮುಹಬ್ಬತ್ ಇನ್ನು ಅನಾಥ! ಆದರೂ ಅಲ್ಲಾಹ್ ಎಷ್ಟೊಂದು ಕರುಣಾಮಯಿ ನೋಡು? ಸಾವಿರ ಜನ್ಮಗಳಿಗಾಗುವಷ್ಟು ನಿನ್ನ ಪ್ರೀತಿ ಕೊಟ್ಟು, ಬದಲಿಗೆ ಕೇವಲ ಸಾವೆಂಬ ಪುಟ್ಟ ಕಂದಾಯ ಕಟ್ಟಿಸಿಕೊಳ್ಳುತ್ತಿದ್ದಾನೆ. ನಿನ್ನ ಪ್ರೀತಿಗೆ ಋಣಿ ನಾನು. ನನ್ನ ಮೇಲೆ ಕ್ಷಮೆ ಇರಲಿ ನೂರ್. ಎಲ್ಲ ಸವಾಲುಗಳನ್ನು ಎದುರಿಸಿ, ನಮ್ಮ ಕನಸಿನ ಗಮ್ಯವನ್ನು ಸೇರಿಸುವ ಹಡಗು ನನ್ನ ಬಳಿ ಇರಲಿಲ್ಲ. ನನ್ನಂಥ ನಿಕೃಷ್ಟ ತೇಲಿಬಿಟ್ಟ ಕಾಗದದ ನೌಕೆ ಖುದಾನ ಕರುಣೆ ಇದ್ದಷ್ಟು ಹೊತ್ತು ಮಾತ್ರ ಮುಂದೆ ಸಾಗುತ್ತಿತ್ತು!


೦೫-೦೨- ೧೬೫೫ ಅಲ್ಲಾಹ್ ಹಾಫೀಜ಼್!
ಲಾಹೋರ್