Click here to Download MyLang App

ಪ್ರೀತಿ ಫಲಿಸಿತು - ಬರೆದವರು : ಪ್ರಿಯಾಂಕಾ ನಟಶೇಖರ್

‘ಈ ಮಳೆಗತ್ತಲಲ್ಲಿ ಅದ್ಯಾರು ಬರ್ತಾರೆ ಅಂತ ನಾನು ಕಾಯ್ತಾ ಕೂರಬೇಕು...’ ನಂದನ ತನ್ನಲ್ಲೇ ಗೊಣಗಿಕೊಳ್ಳುತ್ತಾ, ಅಂಗಡಿ ಬಾಗಿಲು ಮುಚ್ಚಲು ಮುಂದಾದ. ‘ಲಾಸ್ಟ್ ಬಸ್ಸು ಬರೋ ತನಕ ಅಂಗ್ಡಿ ಬಾಗಿಲು ಹಾಕ್ಬೇಡ’ ಅಂತ ಜಗನ್ನಾಥ ಮಾವ ಸಂಜೆ ಹೋಗುವಾಗ ಎರಡೆರಡು ಬಾರಿ ಹೇಳಿದ್ದ. ದಿನಾ ರಾತ್ರಿ ಎಂಟೂವರೆಗೆ ಕ್ಲೋಸ್ ಆಗುವ ಅಂಗಡಿಯನ್ನು ಇವತ್ತು ಮಾತ್ರ ಯಾಕೆ ಒಂಬತ್ತರವರೆಗೆ ತೆರೆದಿಡಬೇಕು ಅಂತ ನಂದನನಿಗೆ ತಿಳಿಯಲಿಲ್ಲ, ಚಕ್ರಹಳ್ಳಿಗೆ ಕೊನೆಯ ಬಸ್ಸು ಬರುವುದು ಒಂಬತ್ತು ಗಂಟೆಗೆ. ಆ ಬಸ್ಸಿನಲ್ಲಿ ಜನರಿರುವುದೇ ಕಡಿಮೆ. ಡ್ರೈವರ್ ಮಂಜಪ್ಪನ ಮನೆ ಹತ್ತಿರದಲ್ಲೇ ಇರುವುದರಿಂದ ಅಂಗಡಿ ಎದುರು ಬಸ್ಸು ನಿಲ್ಲಿಸಿ, ಬೆಳಗ್ಗೆ ಇಲ್ಲಿಂದಲೇ ಉಡುಪಿಗೆ ಹೊರಡುತ್ತಾನೆ. ಅದಲ್ಲದಿದ್ದರೆ ಆ ಟೈಮಲ್ಲಿ ಊರಿನ ಜನಕ್ಕೆ ಆ ಬಸ್ಸು ಬೇಕೇ ಇರಲಿಲ್ಲವೇನೋ.

ಗಡಿಯಾರ ಎಂಟೂ ಮುಕ್ಕಾಲು ಅಂತ ತೋರಿಸುವಾಗಲೇ ನಂದನ ಹೊರಗಡೆ ಇದ್ದ ಈರುಳ್ಳಿ, ಆಲೂಗಡ್ಡೆ ಬುಟ್ಟಿಗಳನ್ನು, ಬಾಗಿಲಿಗೆ ಹತ್ತಿರದಲ್ಲಿ ನೇತು ಹಾಕಿದ್ದ ವಸ್ತುಗಳನ್ನೆಲ್ಲ ತೆಗೆದು ಒಳಗಿಡತೊಡಗಿದ. ಸುತ್ತಲಿನ ಐದಾರು ಹಳ್ಳಿಗಳಿಗೆ ಇರುವುದು ಇದೊಂದೇ ಅಂಗಡಿ. ಮೊದಲೆಲ್ಲ ಭರ್ಜರಿಯಾಗಿದ್ದ ವ್ಯಾಪಾರ ಇತ್ತೀಚಿಗಿನ ವರ್ಷಗಳಲ್ಲಿ ಕಡಿಮೆಯಾಗಿದೆ ಅಂತ ಮಾವನೇ ಹೇಳುತ್ತಿದ್ದುದು ನಂದನನಿಗೆ ನೆನಪಾಯ್ತು. ವ್ಯಾಪಾರ ಹೆಚ್ಚಿಸುವ ಬಗ್ಗೆ ಮಾವನಿಗೆ ಅಂಥಾ ಆಸ್ಥೆಯೇನಿಲ್ಲ ಅನ್ನೋದು ಅವನಿಗೆ ಗೊತ್ತಿರುವ ವಿಷಯವೇ. ಆದರೂ ಅವನ ಅಮ್ಮ ‘ಮಾವನಿಂದ ಅಂಗಡಿ ನಡೆಸೋದನ್ನಾದರೂ ಕಲಿಯಪ್ಪಾ..’ ಅಂತ ನಂದನನನ್ನು ಚಕ್ರಹಳ್ಳಿಗೆ ಕರೆದು ತಂದಿದ್ದಾಳೆ.

ಅಂದಹಾಗೆ ನಂದನ, ಜಗನ್ನಾಥನ ಸೋದರಳಿಯ. ನಂದನನ ಅಮ್ಮ ಜಾನಕಿಯ ಏಕೈಕ ತಮ್ಮ ಜಗನ್ನಾಥ ಐವತ್ತರ ಆಜುಬಾಜಿನ ಅವಿವಾಹಿತ. ಮೌನಿ, ಮೂಡಿ ಅಂತೆಲ್ಲಾ ಅನ್ನಬಹುದಾದರರೂ ಅಳಿಯನ ಜೊತೆ ಸಲುಗೆಯಿದೆ. ಶಿಲ್ಪಿಗಳ ತವರೂರು ಶಿವಾರಪಟ್ಟಣದಲ್ಲಿ ಹುಟ್ಟಿ ಬೆಳೆದು, ಕಲೆಯನ್ನು ಉಸಿರಾಡಿದ ನಂದನನಿಗೆ ಅಂಗಡಿಯಲ್ಲಿ ಕುಳಿತು ದುಡ್ಡು ಮಾಡುವುದರಲ್ಲಿ ಎಳ್ಳಷ್ಟೂ ಆಸಕ್ತಿಯಿಲ್ಲ. ಕೊಳಲು, ಚಿತ್ರಕಲೆ, ಶಿಲ್ಪ ಕೆತ್ತನೆಯ ಕೈಚಳಕಗಳನ್ನು ತಂದೆಯಿಂದ ಕಲಿತ ಅವನಿಗೆ ದೊಡ್ಡ ಕಲಾ ಶಾಲೆ ತೆರೆಯುವ ಕನಸಿದೆ. ಆದರೆ, ಬದುಕಿಗೆ ಕನಸುಗಳಿಗಿಂತ ಕಾಸೇ ಮುಖ್ಯ ಅಲ್ಲವಾ? ಶಿವಾರಪಟ್ಟಣದಲ್ಲಿ ಅಪ್ಪ ನಡೆಸುತ್ತಿದ್ದ ಕಲಾ ಶಾಲೆ ಸರಸ್ವತಿಗೆ ಪ್ರೀತಿಪಾತ್ರವಾಗಿತ್ತೇ ಹೊರತು, ಲಕ್ಷ್ಮಿ ಕಟಾಕ್ಷವನ್ನು ಪಡೆಯಲೇ ಇಲ್ಲ. ಕಲೆಯಿಂದಲೇ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದ ಗಂಡ ಒಂದು ದಿನ ಕೊಳಲು ಊದುತ್ತಲೇ ಉಸಿರು ಚೆಲ್ಲಿದ ಮೇಲೆ ಜಾನಕಮ್ಮ ತವರಿನ ದಾರಿ ಹಿಡಿದರು. ತವರು ಅನ್ನೋದು ಹೆಸರಿಗಷ್ಟೇ, ಅಲ್ಲಿರುವುದು ತಮ್ಮ ಮಾತ್ರ. ಅಂಗಡಿಯ ಗಲ್ಲಾಪೆಟ್ಟಿಗೆ ಮೇಲೆ ನಂದನ ಕುಳಿತುಕೊಳ್ಳುವಂತಾಗಿದ್ದು ಹೀಗೆ.ಇನ್ನೇನು ಅಂಗಡಿ ಬಾಗಿಲು ಮುಚ್ಚಿದೆ ಅನ್ನುವಾಗ ಯಾರೋ ಹಿಂದಿನಿಂದ ಸಣ್ಣಗೆ ಕೆಮ್ಮಿದಂತಾಯ್ತು. ತಿರುಗಿ ನೋಡಿದರೆ ಅರವತ್ತು ದಾಟಿದ ಅಪರಿಚಿತ ವ್ಯಕ್ತಿ.

‘ಜಗನ್ನಾಥ ಇಲ್ವಾ? ಬೆಳಗ್ಗೆ ಹೋಗುವಾಗ ರಾತ್ರಿ ಬರ್ತೀನಿ ಅಂದಿದ್ದೆ ಅವರತ್ರ. ಆದರೆ, ಚೀಟಿ ಕೊಟ್ಟು ಹೋಗೋಕೆ ಮರೆತೋಗಿತ್ತು. ಸ್ವಲ್ಪ ಹೊತ್ತಾಗಬಹುದು ನಿಮಗೆ ಕಟ್ಟಿ ಕೊಡೋಕೆ..’ ಅಂತ ಸಂಕೋಚದಿಂದ ಹೇಳುತ್ತ ಜೇಬಿನಿಂದ ಉದ್ದದ ಚೀಟಿಯೊಂದನ್ನು ತೆಗೆದು ನಂದನನ ಕೈಗಿಟ್ಟರು.

ಹಸಿಯುತ್ತಿರುವ ಹೊಟ್ಟೆ, ಹೊರಗೆ ಸುರಿಯುತ್ತಿರುವ ಜಿಟಿಜಿಟಿ ಮಳೆ, ಕೈಕೊಟ್ಟ ಕರೆಂಟು ನಂದನನ ತಾಳ್ಮೆಗೆಡಿಸಿದ್ದರೂ ಚೀಟಿಯಲ್ಲಿ ಮೂಡಿದ್ದ ಅಕ್ಷರಗಳು ಅವನನ್ನು ಸೆಳೆಯದೇ ಇರಲಿಲ್ಲ. ಸೂರ್ಯ ಬ್ರಾಂಡ್ ಕೊಬ್ಬರಿ ಎಣ್ಣೆ, ಸಣ್ಣ ರವೆ, ತೆಳು ಅವಲಕ್ಕಿ, ಬ್ಲೂ ಪಿಯರ್ಸ್ ಸೋಪು, ಡಾಬರ್ ಟೂತ್ ಪೇಸ್ಟ್, ಕೆಂಪು ಕಲ್ಲು ಸಕ್ಕರೆ (ಬಿಳಿಯದ್ದು ಬೇಡ), ಅಶ್ವಿನಿ ಹೇರ್ ಆಯಿಲ್... ಕಪ್ಪು ಇಂಕಿನಲ್ಲಿ ಕ್ಯಾಲಿಗ್ರಫಿಯಂತೆ ಮೂಡಿದ್ದವು ಅಕ್ಷರಗಳು. ಇಷ್ಟು ವಿವರವಾಗಿ ಬರೆದಿದ್ದಾರೆಂದರೆ ಖಂಡಿತ ಈ ಅಕ್ಷರಗಳು ಇವರದ್ದಲ್ಲ. ತಾನು ಹೇಳಿದ್ದನ್ನು ಮರೆತಾರೆಂದು ಹೆಂಡತಿಯೇ ಬರೆದು ಕಳಿಸಿರಬೇಕು. ಒಂದುವೇಳೆ ತಾನೀಗ ಕೆಂಪು ಕಲ್ಲು ಸಕ್ಕರೆ ಕಳಿಸಿದರೆ ಮನೆಯಲ್ಲಿ ಈ ಯಜಮಾನರು, ‘ನಾನು ಹೇಳಿದ್ದೇನು, ನೀವು ತಂದಿದ್ದೇನು?’ ಅಂತ ಹೆಂಡ್ತಿ ಕೈಲಿ ಬೈಸಿಕೊಳ್ಳಬಹುದಾ? ಛೇ ಛೇ ಇಷ್ಟು ಮುದ್ದಾಗಿ ಬರೆಯುವವರು ಗಯ್ಯಾಳಿ ಹೆಂಗಸಿನಂತೆ ಬೈಯಲು ಸಾಧ್ಯವೇ ಇಲ್ಲ. ಒಂದುವೇಳೆ ಈ ಅಕ್ಷರ ಅವರ ಮಗಳದ್ದಾಗಿದ್ದರೆ....ಹೀಗೆ ಏನೇನೋ ಯೋಚಿಸುತ್ತಾ ನಂದನ ಸಾಮಾನು ಕಟ್ಟಿಕೊಡತೊಡಗಿದ.

‘ಬ್ಲೂ ಪೀಯರ್ಸ್ ಸೋಪ್ ಇಲ್ಲ. ಮಾಮೂಲಿದು ಇದೆ, ಅದೇ ಕೊಡ್ಲಾ?’ ಇನ್ನೇನು ಎಲ್ಲಾ ಕಟ್ಟಿ ಮುಗಿಯಿತು ಅನ್ನುವಾಗ ಆ ಹಿರಿಯರನ್ನು ಕೇಳಿದ.

‘ಬೇಡ ಬೇಡ... ನೀಲೀದು ಇದ್ದರೆ ಕೊಡಿ. ಇಲ್ಲದಿದ್ದರೆ ಪರವಾಗಿಲ್ಲ...’ ಅಂದರವರು.

ಹಂಗಾದ್ರೆ ಖಂಡಿತಾ ಇವರು ಹೆಂಡತಿಗೆ ಹೆದರುತ್ತಾರೆ ಅಂತ ತನ್ನ ಹುಚ್ಚು ತರ್ಕಕ್ಕೆ ತಾನೇ ನಗುತ್ತಾ ನಂದನ ಸಾಮಾನು ತುಂಬಿದ ಚೀಲವನ್ನು ಅವರ ಕೈಗಿಟ್ಟ.

‘ಎಷ್ಟಾಯ್ತು ಅಂತ ಜಗನ್ನಾಥರಿಗೆ ಹೇಳಿ. ಅವರು ಬರೆದುಕೊಳ್ತಾರೆ.. ಅಂದ ಹಾಗೆ ನೀವು ಯಾರಂತ ತಿಳೀಲಿಲ್ಲ?’ ಕೇಳಿದರು ಹಿರಿಯರು.

‘ನಾನು ಅವರ ಸೋದರಳಿಯ..’

‘ಜಾನಕಮ್ಮನ ಮಗಾನ… ಒಳ್ಳೇದು ಒಳ್ಳೇದು ನಾನಿನ್ನು ಬರ್ತೀನಿ..’ ಅಂತ ಹೊರಟರು. ನಮ್ಮಮ್ಮನ ಗುರುತು ಇವರಿಗಿದೆಯಾ ಅನ್ನೋದಕ್ಕಿಂತ, ಯಾರಿಗೂ ಕಡ ನೀಡದ ಮಾವನ ಬಳಿಯೇ ಇವರು ಲೆಕ್ಕ ಬರೆಸಿಕೊಂಡು ಹೋಗ್ತಾರೆಂದರೆ ಇವರು ಯಾರಪ್ಪಾ ಅನ್ನೋ ಪ್ರಶ್ನೆ ನಂದನನನ್ನು ಕಾಡತೊಡಗಿತು. ಮನೆ ತಲುಪಿದಾಗ ಮಾವನ ಬಳಿ ಇವರ ಬಗ್ಗೆ ಕೇಳಬೇಕೆಂದುಕೊಂಡಿದ್ದ. ಆದರೆ, ಮಾವ ಸಂಜೆ ಪೇಟೆಗೆ ಹೋಗುವಾಗ ‘ಇವತ್ತು ಬರುವುದಿಲ್ಲ’ ಅಂತ ಅಮ್ಮನ ಬಳಿ ಹೇಳಿದ್ದನ್ನು ತಿಳಿದು, ಆ ಮುದ್ದು ಅಕ್ಷರಗಳನ್ನು ನೆನಪಿಸಿಕೊಳ್ಳುತ್ತಾ ಊಟ ಮಾಡಿ, ನಿದ್ದೆಗೆ ಜಾರಿದ ನಂದನ.

------------------

ಮಾರನೆದಿನ ಮಾವ ಅಂಗಡಿಗೆ ಬರುವಾಗ ಮಧ್ಯಾಹ್ನವಾಗಿತ್ತು. ಹಿಂದಿನ ದಿನ ಆ ಹಿರಿಯರು ಕೊಟ್ಟಿದ್ದ ಚೀಟಿಯನ್ನು ಮಾವನಿಗೆ ಕೊಟ್ಟ ನಂದನ- ‘ಯಾರಿವರು?’ ಅಂತ ಕೇಳುವುದನ್ನು ಮರೆಯಲಿಲ್ಲ. ‘ನನಗೆ ತುಂಬಾ ಬೇಕಾದವ್ರು. ನಾನಿಲ್ಲದಾಗ ಅವ್ರು ಬಂದ್ರೆ ಕೇಳಿದ್ದನ್ನು ಕೊಡು, ಐಟಮ್ಸ್ ಇಲ್ಲಾಂದ್ರೆ ತರಿಸಿಕೊಡ್ತೀವಿ ಅಂತ ಹೇಳು’ ಅಂದ ಜಗನ್ನಾಥ, ಪ್ರಶ್ನೆಗೆ ಉತ್ತರವನ್ನು ಮಾತ್ರ ಕೊಡಲಿಲ್ಲ. ಯಾರಾದ್ರೆ ನನಗೇನು ಅಂದುಕೊಂಡ ನಂದನ, ‘ನಾನು ಸ್ವಲ್ಪ ದೇವಸ್ಥಾನದ ಹತ್ತಿರ ಹೋಗಿ ಬರ್ತೀನಿ’ ಅಂತ ಹೊರಟ. ಅಳಿಯನಿಗೆ ಗುಡಿಯೊಳಗಿನ ಮೂರ್ತಿಗಿಂತ, ಹೊರಗಿನ ಶಿಲ್ಪಕಲೆಯೇ ದೇವರೆಂಬುದು ಜಗನ್ನಾಥನಿಗೆ ಗೊತ್ತು. ಸಣ್ಣವನಿದ್ದಾಗ ಚಕ್ರಹಳ್ಳಿಗೆ ಬರುತ್ತಿದ್ದುದು ಕಡಿಮೆಯೇ. ಆದರೆ ಬಂದಾಗೆಲ್ಲಾ, ಮಲ್ಲಿಕಾರ್ಜುನನ ಗುಡಿಗೆ ಹೋಗಿ ಗಂಟೆಗಟ್ಟಲೆ ಕೂತಿರುತ್ತಿದ್ದ ನಂದನ. ದೇವಸ್ಥಾನದ ಹಳೆಯ ಕಂಬಗಳು, ಅದರ ಮೇಲಿನ ಚಿತ್ತಾರಗಳು, ಸ್ವಲ್ಪ ದೂರದಲ್ಲಿರುವ ಪುಷ್ಕರಣಿ, ಮತ್ತದರ ಕಲ್ಲಿನ ಮೆಟ್ಟಿಲುಗಳನ್ನು ನೋಡುತ್ತಾ ಕಳೆದು ಹೋಗುವ ಅವನನ್ನು, ಗುಡಿಯೊಳಗಿನ ಪೂಜೆ ಪುನಸ್ಕಾರಗಳು ಆಕರ್ಷಿಸುವುದಿಲ್ಲ. ಹಾಗಾಗಿ, ಗುಡಿಯ ಬಾಗಿಲು ಹಾಕಿದ ಮೇಲೆ, ಮಟಮಟ ಮಧ್ಯಾಹ್ನದ ಹೊತ್ತೇ ಅವನು ಅಲ್ಲಿಗೆ ಹೋಗುವುದು.

ಅವತ್ತೂ ಅಷ್ಟೇ ಪುಷ್ಕರಣಿಯ ಮೆಟ್ಟಿಲುಗಳ ಮೇಲೆ ಕುಳಿತು ಮನಸೋ ಇಚ್ಛೆ ಕೊಳಲು ನುಡಿಸಿದ. ಚಕ್ರಹಳ್ಳಿಗೆ ಬಂದ ದಿನದಿಂದ ಖಿನ್ನವಾಗಿದ್ದ ಮನಸ್ಸು, ಬಿಟ್ಟು ಬಂದ ಶಿವಾರಪಟ್ಟಣದತ್ತಲೇ ಎಳೆಯುತ್ತಿತ್ತು. ಗೆಳೆಯನಂತಿದ್ದ ಅಪ್ಪ ನೆನಪಾಗುತ್ತಿದ್ದ. ಕಲೆಯೆಡೆಗೆ ಅಮ್ಮನಿಗಿದ್ದ ನಿರಾಸಕ್ತಿಯೂ ಅವನನ್ನು ಕಾಡುತ್ತಿತ್ತು. ಒಟ್ಟಿನಲ್ಲಿ ಮನಸ್ಸನ್ನು ಸಂತೈಸುವುದೇ ಬಹಳ ಕಷ್ಟವಾಗಿತ್ತು. ಎಷ್ಟೋ ದಿನಗಳಾದ ಮೇಲೆ ಅವನು ಹೀಗೆ ಕೊಳಲು ನುಡಿಸಿದ್ದು. ನುಡಿಸುತ್ತಾ, ನುಡಿಸುತ್ತಾ ಉಸಿರಿನ ಭಾರವೆಲ್ಲ ಕಳೆದು ಹಗುರಾದ ನಂದನ, ಇನ್ಮುಂದೆ ದಿನಾ ಇಲ್ಲಿಗೆ ಬಂದು ಕೊಳಲು ನುಡಿಸಬೇಕು. ಹಾಗಾದರೂ ಮನಸ್ಸಿಗೆ ನೆಮ್ಮದಿ ಸಿಕ್ಕಬಹುದೇನೋ. ಈ ಹೊತ್ತಿನಲ್ಲಿ ಬಂದರೆ ಯಾರೂ ಇರೋದಿಲ್ಲ ಅಂದುಕೊಳ್ಳುತ್ತಾ ಮತ್ತೆ ಅಂಗಡಿಯತ್ತ ಹೆಜ್ಜೆ ಹಾಕಿದ.

---------------------------

ಸಂಜೆ ಏಳೂವರೆಯ ಹೊತ್ತು. ಜೋರಾಗಿ ಮಳೆ ಸುರಿದು, ಕರೆಂಟು ಹೋಗಿತ್ತು. ಇನ್ನೇನು ಅಂಗಡಿ ಮುಚ್ಚಬೇಕು ಅನ್ನುವಷ್ಟರಲ್ಲಿ, ಹುಡುಗಿಯೊಬ್ಬಳು ಬಂದಳು. ಎತ್ತರಿಸಿ ಕಟ್ಟಿದ್ದ ತುರುಬು, ಕಣ್ಣಿಗಂಟಿರುವ ಗಾಢ ಕಪ್ಪು, ತೊಳೆದ ನಂತರವೂ ಬಣ್ಣದ ಛಾಯೆಯನ್ನು ಉಳಿಸಿದ ದಪ್ಪ ಮೇಕಪ್. ಚಿಮಣಿ ಹಚ್ಚಿಕೊಂಡು ಕುಳಿತಿದ್ದ ನಂದನನಿಗೆ ಆ ಮಂದ ಬೆಳಕಿನಲ್ಲಿ ಆಕೆ ಚೌಕಿಯಿಂದ ಅರ್ಧಕ್ಕೆ ಎದ್ದು ಬಂದ ಯಕ್ಷಗಾನದ ಪಾತ್ರದಂತೆ ಕಂಡಳು.

‘ಬ್ಲೂ ಪೀಯರ್ಸ್ ಸೋಪಿದ್ಯಾ?’ ಗಡಿಬಿಡಿಯಲ್ಲೇ ಕೇಳಿದ ಅವಳಿಗೆ ಇಲ್ಲವೆನ್ನುವಂತೆ ತಲೆಯಾಡಿಸಿದ ನಂದನ. ‘ಪ್ಚ್’ ಎಂದು ಜೋರಾಗಿಯೇ ಲೊಚಗುಟ್ಟಿ ಆಕೆ ಹೊರಟಾಗ, ಒಳಗಿದ್ದ ಮಾವ ‘ಯಾರದು?’ ಅಂತ ಕೇಳಿದ. ‘ಯಾರೋ ಯಕ್ಷಗಾನದವ್ರು..’ ಅಂತ ಕುಶಾಲಿನಲ್ಲಿ ಹೇಳಿದ ಮಾತು ಅವಳಿಗೆ ಕೇಳಿಸುತ್ತದೆಂದು ನಂದನ ಭಾವಿಸಿರಲಿಲ್ಲ.

ಹೊರಗಿಟ್ಟಿದ್ದ ಬ್ಯಾಗನ್ನು ಹೆಗಲೇರಿಸಿಕೊಳ್ಳುತ್ತಿದ್ದ ಆಕೆಗೆ ನಂದನನ ಮಾತು ಕೇಳಿದ್ದೇ ಸೀದಾ ಒಳಗೆ ಬಂದು, ‘ಯಾಕ್ರೀ ಯಕ್ಷಗಾನದೋರು ಅಂದ್ರೆ ಅಷ್ಟು ಸಸಾರನ ನಿಮ್ಗೆ. ಬಣ್ಣ ಹಚ್ಚಿದೋರನ್ನು ಕೀಳಾಗಿ ನೋಡೋ ನಿಮ್ಮಂಥವರಿಂದಲೇ ಕಲಾವಿದರಿಗೆ ಬೆಲೆ ಸಿಗದೇ ಇರೋದು...’ ಅಂತ ದಬಾಯಿಸಿದಳು. ಅವಳ ಏರುದನಿ ಕೇಳಿ ಜಗನ್ನಾಥರೇ ಒಳಗಿನಿಂದ ಓಡಿ ಬಂದರು.

‘ಯಾಕಮ್ಮಾ ಮಾನಸ ಸಿಟ್ಟು? ಏನೋ ತಮಾಷೆಗೆ ಹೇಳಿದ ಹುಡುಗ. ಬೇಜಾರು ಮಾಡ್ಕೋಬೇಡಮ್ಮ....’ ಜಗನ್ನಾಥರ ಮುಖ ನೋಡಿ ಅವಳಿಗೂ ಬೇರೆ ಮಾತು ಹೊರಡಲಿಲ್ಲ. ತಲೆ ತಗ್ಗಿಸಿ ಹೊರಡಲನುವಾದಳು. ‘ಪ್ರೋಗ್ರಾಂ ಮುಗಿಸಿ ಬರ್ತಿದ್ಯಾ?’ ಅನ್ನೋ ಅವರ ಪ್ರಶ್ನೆಗೆ “ಹೂಂ’ ಅಂತ ಮೆಲ್ಲಗೆ ಉತ್ತರಿಸಿ ಅಲ್ಲಿಂದ ಜಾಗ ಖಾಲಿ ಮಾಡಿದಳು ಮಾನಸ.

ಏನೋ ತಮಾಷೆಗೆ ಹೇಳಿದ ಮಾತಿಗೆ ಇಷ್ಟೊಂದು ಅವಮಾನ ಆಯ್ತಲ್ಲ, ಕಲೆಗೆ ಅಪಮಾನ ಮಾಡಿದೆ ಅಂದುಬಿಟ್ಟಳಲ್ಲ ಅಂತ ಪೆಚ್ಚಾಗಿ ನಿಂತ ಅಳಿಯನನ್ನು ನೋಡಿದ ಜಗನ್ನಾಥರು, ‘ ಅವಳಿಗೆ ಸ್ವಲ್ಪ ಸಿಟ್ಟು ಜಾಸ್ತೀನೆ. ಏನು ತಗೊಳ್ಳೋಕೆ ಬಂದಿದ್ದಳು?’ ಅಂತ ಕೇಳಿದರು. ‘ಬ್ಲೂ ಪಿಯರ್ಸ್’ ಅಂತ ಸಣ್ಣಗೆ ಗೊಣಗಿದ ನಂದನನಿಗೆ ಥಟ್ಟನೆ ಹೊಳೆಯಿತು, ಇವಳೇ ಅವಳಿರಬೇಕು! ಆ ಮುದ್ದು ಅಕ್ಷರದ ಹುಡುಗಿ.

‘ಮೊನ್ನೆ ಸಂಜೆ ಲೆಕ್ಕ ಬರೆಸಿದರಲ್ಲ ಅವರ ಮಗ್ಳಾ ಇವ್ಳು?’

‘ಹೌದು, ದತ್ತಣ್ಣನ ಒಬ್ಳೇ ಮಗಳು, ಮಾನಸಾ... ಭರತನಾಟ್ಯ ಕಲಾವಿದೆ. ಪೇಟೆಯಲ್ಲಿ ಯಾವುದೋ ಫಂಕ್ಷನ್ ಮುಗಿಸಿ ಗಡಿಬಿಡಿಯಲ್ಲಿ ಹಾಗೇ ಬಸ್ಸು ಹತ್ತಿ ಬಂದಿದ್ದಾಳೆ, ಮೇಕಪ್ ಕೂಡಾ ತೆಗೀದೆ...’ ಜಗನ್ನಾಥರ ಮಾತು ಪೂರ್ತಿಯಾಗಿ ನಂದನನ ಕಿವಿಗೆ ಬೀಳಲಿಲ್ಲ.

ಅಂದರೆ ತಾನು ಯಾರಿಗೆ ಬೈಯೋಕೆ ಬರಲ್ಲ ಅಂತ ಕಲ್ಪಿಸಿಕೊಂಡಿದ್ದೆನೋ ಅವರಿಂದಲೇ ಬೈಸಿಕೊಂಡೆನಲ್ಲ ಅಂತ ನಂದನನಿಗೆ ಸಿಟ್ಟು ಬಂತು. ಆದರೂ ಮುದ್ದು ಅಕ್ಷರದ ಮಾನಸಾ ಭರತನಾಟ್ಯ ಕಲಾವಿದೆ ಅನ್ನೋ ವಿಷಯ ಮನಸ್ಸಿಗೆ ಹಿತ ಕೊಟ್ಟಿದ್ದು ಸುಳ್ಳಲ್ಲ.

---------------------------

ದಿನಾ ಬೆಳಗ್ಗೆ ಮಲ್ಲಿಕಾರ್ಜುನನ ಮುಖ ನೋಡದೇ ಮಾನಸ ಯಾವ ಕೆಲಸವನ್ನೂ ಮಾಡುವುದಿಲ್ಲ. ಅರ್ಚಕರು ಪೂಜೆಗೆ ಬರುವ ಸಮಯಕ್ಕೆ ಸರಿಯಾಗಿ ಗುಡಿಯಲ್ಲಿ ಅವಳು ಹಾಜರಿರಬೇಕು. ಆಮೇಲೆ ತಿಂಡಿ ಮುಗಿಸಿ, ಬಸ್ಸು ಹಿಡಿದು ಶಾಲೆಗೆ ಹೋಗುವುದು. ಪಟ್ಟಣದ ಸರ್ಕಾರಿ ಶಾಲೆಯಲ್ಲಿ ಅವಳು ಅರೆಕಾಲಿಕ ಶಿಕ್ಷಕಿ. ಆದರೆ ಮಾನಸಾಗೆ ತನ್ನದೇ ಆದ ಡ್ಯಾನ್ಸ್ ಸ್ಕೂಲ್ ತೆರೆಯಬೇಕು, ಜೀವನವನ್ನು ಕಲೆಗಾಗಿ ಮೀಸಲಿಡಬೇಕೆಂಬ ಆಸೆ. ಅವಳ ಅಮ್ಮ ಶಾರದಾರ ಆಸೆಯೂ ಅದೇ ಆಗಿತ್ತು. ಆಗಿನ ಕಾಲಕ್ಕೇ ಅವರು ಭರತನಾಟ್ಯ ಕಲಿತಿದ್ದರು. ಆದರೆ ಹದಿನೆಂಟು ವರ್ಷಕ್ಕೆ, ದತ್ತಾತ್ರೇಯರನ್ನು ಮದುವೆಯಾಗಿ ಚಕ್ರಹಳ್ಳಿಗೆ ಬಂದ ಶಾರದಾಗೆ ಮತ್ತೆ ಗೆಜ್ಜೆ ಕಟ್ಟುವ ಅವಕಾಶ, ಪ್ರೋತ್ಸಾಹ ಸಿಗಲಿಲ್ಲ. ಶಿಕ್ಷಕರಾಗಿದ್ದ ದತ್ತಾತ್ರೇಯರದ್ದು ಸಂಪ್ರದಾಯಸ್ಥ ಕುಟುಂಬ. ತಲೆತಲಾಂತರದಿಂದ ಪೌರೋಹಿತ್ಯ ಮಾಡುತ್ತಾ, ಸುತ್ತ ಹತ್ತು ಹಳ್ಳಿಯಲ್ಲಿ ಹೆಸರಾಗಿದ್ದ ಮನೆತನ. ಅತ್ತೆ-ಮಾವನಿಗೆ ಅಂಜುತ್ತಿದ್ದ ಶಾರದೆ ಗಂಡನ ಮುಂದೆಯೂ ತನ್ನ ಕನಸುಗಳನ್ನು ಹೇಳಿಕೊಳ್ಳಲಾಗಲಿಲ್ಲ. ಆದರೆ, ಮಗಳು ಮಾನಸಾಗೆ ಭರತನಾಟ್ಯದ ಮೊದಲ ಪಾಠವಾಗಿದ್ದು ಶಾರದೆಯಿಂದ. ಹೆಂಡತಿಯ ಪ್ರತಿಭೆಯ ಅರಿವು ದತ್ತಾತ್ರೇಯರಿಗಾಗಿದ್ದು ಆಗಲೇ. ಕುಣಿಯುವ ನವಿಲನ್ನು ಇಷ್ಟು ವರ್ಷ ಕಟ್ಟಿ ಹಾಕಿದೆನಲ್ಲ ಅಂತ ಅವರೂ ವ್ಯಥೆಪಟ್ಟಿದ್ದರು. ಯಾವುದೋ ಜ್ವರ ಬಂದು ಹೆಂಡತಿ ಕೊನೆಯುಸಿರು ಎಳೆಯುವ ಮುನ್ನ, ‘ರೀ, ಮಾನಸಾಳ ಭರತನಾಟ್ಯಕ್ಕೆ ಮಾತ್ರ ಅಡ್ಡಿ ಮಾಡಬೇಡಿ. ಅವಳನ್ನು ಒಳ್ಳೆಯ ಕಲಾವಿದೆಯನ್ನಾಗಿ ಮಾಡೋ ಜವಾಬ್ದಾರಿ ನಿಮ್ಮದು..’ ಅಂತ ಅವರಿಂದ ಭಾಷೆ ತೆಗೆದುಕೊಂಡಿದ್ದರು. ಮಾನಸಾಳೂ ಅಮ್ಮನ ಕನಸನ್ನು ನೆರೆವೇರಿಸುವ ಪಣ ತೊಟ್ಟಿದ್ದಳು. ಆದರೆ, ಮಗಳು ಮದುವೆಯ ವಯಸ್ಸಿಗೆ ಬಂದರೂ ಡ್ಯಾನ್ಸ್ ಬಿಡಲಾರೆ ಎನ್ನುತ್ತಿರುವುದು ದತ್ತಾತ್ರೇಯರಿಗೆ ನುಂಗಲಾರದ ತುತ್ತಾಗಿತ್ತು. ಶಿಕ್ಷಕರಾಗಿ ನಿವೃತ್ತರಾದ ಅವರು, ಮಗಳೂ ತನ್ನಂತೆ ಶಿಕ್ಷಕಿಯಾಗಿ ನೆಮ್ಮದಿಯ ಜೀವನ ನಡೆಸಲಿ ಅಂತ ಒಳಗೊಳಗೇ ಬಯಸುತ್ತಿದ್ದರು. ಭರತನಾಟ್ಯದ ಕಾರಣದಿಂದಲೇ ಒಂದೆರಡು ಸಂಬಂಧಗಳು ತಪ್ಪಿಹೋಗಿದ್ದು ಅವರ ಆತಂಕವನ್ನು ಹೆಚ್ಚಿಸಿತ್ತು.

------------------------

ಅವತ್ತು ಭಾನುವಾರ. ಆದರೂ ಬೆಳಗ್ಗಿನ ಪೂಜೆಯ ಹೊತ್ತಿಗೆ ಮಾನಸಾ ಗುಡಿಯಲ್ಲಿದ್ದಳು. ಪೂಜೆ ಮುಗಿಸಿ ಮನೆಗೆ ಹೋದ ಆಕೆಗೆ, ಕಾಲಿನ ಗೆಜ್ಜೆ ಬಿದ್ದು ಹೋಗಿರುವುದು ಗೊತ್ತೇ ಆಗಿರಲಿಲ್ಲ. ಮಗಳ ಕಾಲ್ ಸಪ್ಪಳದೊಂದಿಗೆ ಮಿಳಿತವಾಗಿರುತ್ತಿದ್ದ ಗೆಜ್ಜೆಯ ಅನುಪಸ್ಥಿತಿಯನ್ನು ಗುರುತಿಸಿದವರು ದತ್ತಾತ್ರೇಯರೇ. ‘ಎಲ್ಲಮ್ಮಾ ನಿನ್ನ ಗೆಜ್ಜೆ?’ ಎಂದಾಗ, ಬೆಳಗ್ಗೆ ಗುಡಿಗೆ ಹೋದಾಗಲೇ ಕಳಚಿ ಬಿದ್ದಿರಬೇಕೆಂದುಕೊಂಡು, ‘ಅಪ್ಪಾ, ಈಗ ಹೋಗಿ ತಗೊಂಡು ಬರ್ತೀನಿ’ ಅಂತ ಓಡಿದಳು. ಅಮ್ಮನಿಂದ ಉಡುಗೊರೆಯಾಗಿ ಬಂದ, ಹಳೆಕಾಲದ, ಅಪರೂಪದ ವಿನ್ಯಾಸ ಹೊಂದಿದ್ದ ಪ್ರೀತಿಪಾತ್ರ ಗೆಜ್ಜೆಯದು. ಯಾವ ಕಾರಣಕ್ಕೂ ಅದನ್ನು ಕಳೆದುಕೊಳ್ಳಲು ಇಷ್ಟವಿಲ್ಲ ಮಾನಸಾಗೆ.

----------------------

ಬೆಳಗ್ಗೆ ಹನ್ನೊಂದೂವರೆ ಸಮಯ. ಮೋಡ ಕವಿದ ವಾತಾವರಣ. ದೇವಸ್ಥಾನಕ್ಕೆ ಬರುವವರೆಲ್ಲ ಬಂದು ಹೋಗಾಗಿದೆ. ಎಲ್ಲರ ಬೇಡಿಕೆ, ಅಹವಾಲು, ದೂರುಗಳನ್ನು ಕೇಳಿಸಿಕೊಂಡ ಮಲ್ಲಿಕಾರ್ಜುನ ಮೂಕನಾಗಿ ವಿಶ್ರಮಿಸುತ್ತಿದ್ದಾನೆ. ಇನ್ನು ನಾಳೆ ಬೆಳಗ್ಗೆವರೆಗೆ ತನಗೆ ಯಾರ ಕಾಟವೂ ಇರುವುದಿಲ್ಲ ಅಂದುಕೊಳ್ಳುವಾಗಲೇ ಯುವಕನೊಬ್ಬ ಕೈಯಲ್ಲಿ ಕೊಳಲು ಹಿಡಿದು ಬರುತ್ತಿದ್ದಾನೆ. ಹಾಗೆ ಬಂದವನು ಗುಡಿಯೊಳಗೆ ಬರದೇ, ಒಂದೊಂದೇ ಕಂಬಗಳನ್ನು ಸವರುತ್ತಾ ಗೋಡೆಗಳನ್ನು ದಿಟ್ಟಿಸುವ ಪರಿ ಮಲ್ಲಿಕಾರ್ಜುನನಿಗೂ ಹೊಸದೇ. ಕೆಳಗೆ ಬಿದ್ದ ಯಾವುದೋ ವಸ್ತುವನ್ನು ಜೋಪಾನವಾಗಿ ಎತ್ತಿಕೊಂಡು, ಪುಷ್ಕರಣಿಯ ಕಡೆ ಹೊರಟ ಅವನಲ್ಲಿ ಯಾವುದೇ ಕೋರಿಕೆಗಳಿರಲಿಲ್ಲ, ಹುಸಿ ಭಕ್ತಿಯ ಬೂಟಾಟಿಕೆ ಇರಲಿಲ್ಲ. ಸ್ವಲ್ಪ ಸಮಯದಲ್ಲೇ ಕೊಳಲಿನ ನಾದವೊಂದು ಇಡೀ ಪರಿಸರವನ್ನು ಆವರಿಸತೊಡಗಿದಾಗ, ಗುಡಿಯೊಳಗಿನ ನಂದಾದೀಪವೂ ಆನಂದದಲಿ ತೇಲಿದ್ದು ಸುಳ್ಳಲ್ಲ...ಗಡಿಬಿಡಿಯಲ್ಲಿ ಗುಡಿಯತ್ತ ಓಡಿಬಂದ ಮಾನಸಾ, ಅಲ್ಲೆಲ್ಲೂ ಗೆಜ್ಜೆ ಕಾಣದೆ ಕಂಗಾಲಾದಳು. ಯಾರಾದ್ರೂ ಎತ್ತಿಕೊಂಡು ಹೋಗಿಬಿಟ್ಟರಾ ಅಂತ ಎದೆ ಕಂಪಿಸತೊಡಗಿದಾಗಲೇ, ಕಲ್ಯಾಣಿಯ ಕಡೆಯಿಂದ ಕೊಳಲಿನ ದನಿ. ಅರೆ, ನಮ್ಮೂರಲ್ಲಿ ಅದ್ಯಾರಪ್ಪಾ ಇಷ್ಟು ಇಂಪಾಗಿ ಕೊಳಲು ನುಡಿಸುವವರು ಅಂತ ಕುತೂಹಲದಿಂದ ಅತ್ತ ನಡೆದರೆ, ಕೊನೆಯ ಕಲ್ಲಿನ ಮೆಟ್ಟಿಲಿನ ಮೇಲೆ ನೀಲಿ ಅಂಗಿಯ ಹುಡುಗನೊಬ್ಬ ಕೊಳಲನೂದುತ್ತ ಕೂತಿದ್ದಾನೆ. ಮುಖ ಕಾಣಿಸುತ್ತಿಲ್ಲ. ಆ ನೀಲಿ ಬಣ್ಣ, ಆ ಕೊಳಲ ಇಂಪು ಅವನೇ ಕೃಷ್ಣನೇನೋ ಎಂಬ ಭ್ರಮೆ ಮೂಡಿಸುತ್ತಿದೆ. ಆದದ್ದಾಗಲಿ, ಅವನ್ಯಾರು ಅಂತ ನೋಡಲೇಬೇಕೆಂದು ಸದ್ದಾಗದಂತೆ ಮೆಟ್ಟಿಲಿಳಿದು ಅವನಿಗಿಂತ ಎರಡೇ ಎರಡು ಮೆಟ್ಟಿಲ ದೂರದಲ್ಲಿ ನಿಂತಳು. ಆ ಹುಡುಗನ ಪಕ್ಕದಲ್ಲೇ ಇದೆ ಕಳೆದು ಹೋದ ತನ್ನ ಗೆಜ್ಜೆ! ಓಡಿ ಹೋಗಿ ಗಬಕ್ಕಂತ ಗೆಜ್ಜೆಯನ್ನೆತ್ತಿಕೊಳ್ಳುವ ಆಸೆಯಾದರೂ, ಎಲ್ಲಿ ಅವನು ಕೊಳಲನೂದುವುದನ್ನು ನಿಲ್ಲಿಸುತ್ತಾನೋ ಅಂತ ಉಸಿರು ಬಿಗಿದು ನಿಂತಲ್ಲೇ ಕಲ್ಲಾದಳು ಮಾನಸಾ.

ಎರಡ್ಮೂರು ನಿಮಿಷದ ನಂತರ ಉಸಿರೆಳೆದುಕೊಳ್ಳಲು ಕೊಳಲು ಕೆಳಗಿಳಿಸಿದ ನಂದನನಿಗೆ ಪುಷ್ಕರಣಿಯ ನೀರಿನಲ್ಲಿ ಹೆಣ್ಣಿನ ಪ್ರತಿಬಿಂಬ ಕಾಣಿಸಿ, ತಿರುಗಿ ನೋಡಿದ.

ನಿನ್ನೆ ತನ್ನಿಂದ ಬೈಸಿಕೊಂಡಿದ್ದ ಅದೇ ಹುಡುಗ! ಮಾನಸಾಳಿಗೆ ಮಾತೇ ಹೊರಡಲಿಲ್ಲ. ನಿನ್ನೆ ನಡೆದುದಕ್ಕೆ ಸಾರಿ ಕೇಳಬೇಕೋ, ಕೊಳಲ ನಾದವನ್ನು ಹೊಗಳಬೇಕೋ ಅಥವಾ ಗೆಜ್ಜೆ ಎತ್ತಿಕೊಂಡು ಓಡಿಬಿಡಬೇಕೋ ತಿಳಿಯದೆ ಪೆಚ್ಚಾಗಿ ನಿಂತಳು.

‘ಇದು ನಿಮ್ಮದೇ ಗೆಜ್ಜೆ ಅನ್ಸುತ್ತೆ. ತಗೋಳಿ..’ ಗೆಜ್ಜೆಯನ್ನು ಮುಂದೆ ಚಾಚಿ ಮುಗುಳ್ನಕ್ಕ ನಂದನ. ‘ನಿನ್ನೆ ನಡೆದಿದ್ದಕ್ಕೆ ಸಾರಿ, ನನ್ನ ಮಾತನ್ನ ನೀವು ಅಪಾರ್ಥ ಮಾಡಿಕೊಂಡ್ರಿ… ನನ್ ಹೆಸ್ರು ನಂದನ್. ಜಗನ್ನಾಥರ ಸೋದರಳಿಯ..’ ಅವನೇ ಮುಂದಾಗಿ ಪರಿಚಯ ಮಾಡಿಕೊಂಡ. ಈಗಲೂ ಕ್ಷಮೆ ಕೇಳದಿದ್ದರೆ ಸಣ್ಣವಳಾಗುತ್ತೇನೆ ಅಂತ ಅರಿತುಕೊಂಡ ಮಾನಸಾ, ‘ಛೇ ಛೇ ನಾನೇ ದುಡುಕಿ ಏನೇನೋ ಮಾತಾಡಿಬಿಟ್ಟೆ, ಸಾರಿ. ನಾನು ಮಾನಸಾ. ಗೆಜ್ಜೆ ಹುಡುಕ್ಕೊಂಡು ಬಂದೆ. ನೀವೂ ಒಬ್ರು ಕಲಾವಿದರು ಅಂತ ಗೊತ್ತಿಲ್ಲದೆ ಏನೋ ಹೇಳಿಬಿಟ್ಟೆ. ನಾನಿನ್ನು ಬರ್ತೀನಿ..’ ಬೆನ್ನು ತಿರುಗಿಸಿ ಓಡುತ್ತೋಡುತ್ತಾ ಮೆಟ್ಟಿಲೇರಿದಳು ಮಾನಸಾ.

‘ಮಾನಸಾ ನಿಲ್ಲಿ... ನಾನೂ ಬರ್ತೀನಿ, ತುಂಬಾ ಹೊತ್ತಾಯ್ತು ಇಲ್ಲಿಗೆ ಬಂದು’ ಅವಳ ಜೊತೆ ಹೆಜ್ಜೆ ಹಾಕುವ ಆಸೆಯಿಂದ ನಂದನನೂ ಅಲ್ಲಿಂದ ಎದ್ದು ಹೊರಟ. ಇಬ್ಬರೂ ಒಟ್ಟಿಗೇ ನಡೆದರಾದರೂ ಮಾನಸಾ ಹೆಚ್ಚೇನೂ ಮಾತಾಡಲಿಲ್ಲ. ಅವನ ಅಂಗಡಿಯನ್ನು ದಾಟಿಕೊಂಟೇ ಅವಳು ಮನೆ ಸೇರಬೇಕು. ಅವರಿಬ್ಬರೂ ಗುಡಿಯ ಕಡೆಯಿಂದ ಒಟ್ಟಿಗೆ ಬರುವುದನ್ನು ಅಂಗಡಿಯಲ್ಲಿ ಕುಳಿತೇ ನೋಡಿದ ಜಗನ್ನಾಥರು ವಿಷಾದದ ನಿಟ್ಟುಸಿರು ಚೆಲ್ಲಿದರು.‘ಮಾವ, ದತ್ತಣ್ಣನ ಬಗ್ಗೆ ನಿಮಗ್ಯಾಕೆ ಅಷ್ಟೊಂದು ಗೌರವ?’- ಮಧ್ಯಾಹ್ನ ಅಂಗಡಿಯಲ್ಲಿ ಕುಳಿತಿದ್ದ ಮಾವನನ್ನು ನಂದನ ಕೇಳಿಯೇಬಿಟ್ಟ. ತಕ್ಷಣ ಎದುರಾದ ಪ್ರಶ್ನೆಗೆ ಜಗನ್ನಾಥರಿಗೆ ಉತ್ತರ ಕೊಡಬೇಕೋ ಬೇಡವೋ ತಿಳಿಯಲಿಲ್ಲ. ಆದರೆ, ಇಷ್ಟು ವರ್ಷ ಯಾರೊಂದಿಗೂ ಹೇಳಿಕೊಂಡಿರದ ಮಾತುಗಳನ್ನು ಇವತ್ತಾದರೂ ಹೊರ ಚೆಲ್ಲಿ ಮನಸ್ಸು ಹಗುರ ಮಾಡಿಕೊಳ್ಳುತ್ತೇನೆ ಅಂತ ನಿಶ್ಚಯಿಸಿ ಮಾತಿಗಿಳಿದರು ಅವರು- ‘ದತ್ತಣ್ಣನ ಬಗ್ಗೆ ಇರೋದು ಗೌರವಾನೋ, ಅನುಕಂಪವೋ, ಪಶ್ಚಾತ್ತಾಪವೋ ನಂಗೆ ಇವತ್ತಿಗೂ ಗೊತ್ತಿಲ್ಲ. ಅವರಿಗೊಬ್ಬಳು ತಂಗಿಯಿದ್ದಳು, ಮಾಲತಿ! ಹರೆಯದ ದಿನಗಳಲ್ಲಿ ನಾನು ಪ್ರೀತಿಸಿದ ಹುಡುಗಿ. ಕಾಲೇಜಿನಲ್ಲಿ ನನಗಿಂತ ಎರಡು ವರ್ಷ ಜೂನಿಯರ್. ಹುಡುಗಾಟಿಕೆಯ ದಿನಗಳಲ್ಲಿ ನಾನು ಇನ್ನೂ ಒರಟೊರಟಾಗಿ ಇದ್ದೆ. ನನ್ನ ಒರಟುತನ ಅವಳಿಗಿಷ್ಟವಾಯಿತೋ, ಅವಳ ಮುಗ್ದತೆ ನನ್ನನ್ನು ಸೆಳೆಯಿತೋ ಗೊತ್ತಿಲ್ಲ. ಜಾತಿಯ ಬಗ್ಗೆ ಯೋಚಿಸದೆಯೇ ಪ್ರೀತಿಸತೊಡಗಿದೆವು. ಮಾಲತಿಯ ಡಿಗ್ರಿ ಮುಗಿಯುವುದರೊಳಗೆ ಮನೆಯಲ್ಲಿ ಹುಡುಗನನ್ನು ಹುಡುಕತೊಡಗಿದರು. ನಮ್ಮಿಬ್ಬರ ಸಂಬಂಧವನ್ನು ಅವರ ಮನೆಯವರು ಒಪ್ಪುವುದಿಲ್ಲ ಅಂತ ಗೊತ್ತಿತ್ತು. ಓಡಿ ಹೋಗಿ ಮದುವೆಯಾಗೋಣ ಅಂತ ಅವಳೂ ನನ್ನನ್ನು ಒತ್ತಾಯಿಸತೊಡಗಿದಳು. ನಿಮ್ಮ ಮನೆಗೆ ಬಂದು ನಾನೇ ಹೆಣ್ಣು ಕೇಳುತ್ತೇನೆ ಅಂದಿದ್ದಕ್ಕೆ ‘ಹುಚ್ಚುಚ್ಚಾಗಿ ಮಾತಾಡ್ಬೇಡಿ’ ಅಂದುಬಿಟ್ಟಳು. ಆದದ್ದಾಗಲಿ ಅಂತ ಒಂದಿನ ನಾನು ಮಾಲತಿ ಮನೆಗೆ ಹೋಗಿ, ಹೆಣ್ಣು ಕೇಳಿಯೇ ಬಿಟ್ಟೆ! ಎಣಿಸಿದಂತೆಯೇ ಅವಳ ಅಪ್ಪ ನನ್ನನ್ನೂ, ಜಾತಿಯನ್ನೂ ಸೇರಿಸಿ ಅವಮಾನ ಮಾಡಿಬಿಟ್ಟರು. ಅಪ್ಪನ ಮುಂದೆ ಮಾತಾಡಲೂ ಹೆದರುತ್ತಿದ್ದ ಮಾಲತಿ ಅವತ್ತು, ‘ಅಪ್ಪಾ, ನಾನೂ ಇವನನ್ನು ಪ್ರೀತಿಸುತ್ತಿದ್ದೇನೆ’ ಅಂತ ಬಾಯಿ ಬಿಡಲಿಲ್ಲ. ಹಾಗಂತ ಒಂದು ಮಾತು ಹೇಳಿದ್ದರೆ ಅವಳ ಕೈ ಹಿಡಿದು ಎಳೆದುಕೊಂಡು ಬರುತ್ತಿದ್ದೆ. ಆದರವಳು ಮೂಕಿಯಂತೆ ಒಳ ಮನೆ ಸೇರಿ ಅಳುತ್ತಿದ್ದಳು.

ಅವತ್ತು ನನಗಾದ ಅವಮಾನ ಎಷ್ಟರ ಮಟ್ಟಿಗೆಂದರೆ, ಇನ್ಮುಂದೆ ಮಾಲತಿಯ ಮುಖವನ್ನೂ ನೋಡುವುದಿಲ್ಲ ಅಂತ ನಿರ್ಧರಿಸಿದೆ. ಆದರೆ, ಅದೇ ದಿನ ಸಂಜೆ ದತ್ತಣ್ಣ ಮತ್ತು ಮಾಲತಿ ನನ್ನನ್ನು ಹುಡುಕಿಕೊಂಡು ಬಂದರು. ‘ಮಾಲತಿ ಎಲ್ಲಾ ವಿಷ್ಯ ಹೇಳಿದ್ದಾಳೆ. ಅಪ್ಪ ಈ ಮದ್ವೆಗೆ ಒಪ್ಪೋದಿಲ್ಲ ಅಂತ ಗೊತ್ತು. ಆದ್ರೆ, ನೀವಿಬ್ಬರೂ ದುಡುಕಬೇಡಿ. ನಿಮಗೊಂದು ಕೆಲಸ ಸಿಕ್ಕಿದ ಮೇಲೆ, ನೀವಿಬ್ಬರು ಎಲ್ಲಾದರೂ ದೂರ ಹೋಗಿ ಮದುವೆಯಾಗಿ. ಅಲ್ಲಿಯವರೆಗೆ ಮಾಲತಿ ಬೇರೆ ಯಾರನ್ನೂ ಮದುವೆಯಾಗದಂತೆ ನಾನು ನೋಡಿಕೊಳ್ಳುತ್ತೇನೆ’ ಅಂದರು ದತ್ತಣ್ಣ. ಆದ್ರೆ, ನನ್ನ ಬುದ್ಧಿಗೆ ಅವತ್ತು ಅದೇನಾಗಿತ್ತೋ ಗೊತ್ತಿಲ್ಲ. ನಾನೂ ಅವರನ್ನು ಅವಮಾನಿಸಬೇಕೆಂದು ಬಾಯಿಗೆ ಬಂದ ಹಾಗೆ ಮಾತಾಡಿದೆ. ಮಾಲತಿಯ ಪ್ರೀತಿಯೇ ಸುಳ್ಳು ಅಂದೆ. ಅವಳ ಮುಖ ನೋಡಲೂ ನನಗಿಷ್ಟ ಇಲ್ಲ ಅಂದುಬಿಟ್ಟೆ...’ ಅವಳು ಅಳುತ್ತಾ ವಾಪಸ್ ಹೋದಳು. ಮುಂದೆಂದೂ ನನಗೆ ಮುಖ ತೋರಿಸಲಿಲ್ಲ. ಮಾರನೆದಿನ ಬೆಳಗ್ಗೆ ಊರ ಕೆರೆಯಲ್ಲಿ ಮಾಲತಿಯ ದೇಹ ತೇಲುತ್ತಿತ್ತು! ಪ್ರೀತಿಸಿದ ಹುಡುಗಿಯನ್ನು ನಾನೇ ಕೊಂದುಬಿಟ್ಟೆ ಕಣೋ ನಂದನಾ....ಅವತ್ತು ದತ್ತಣ್ಣನ ಮಾತು ಕೇಳಿದ್ದರೆ, ನಾವಿಬ್ಬರೂ ಒಂದಾಗುತ್ತಿದ್ದೆವೇನೋ...ಅವಳ ಜೊತೆಗೆ ನನ್ನ ಜೀವಂತಿಕೆಯ ಒಂದು ಭಾಗವೂ ಸತ್ತುಹೋಯ್ತು...’

‘ನಾನೂ ದತ್ತಣ್ಣ ಇದುವರೆಗೂ ಮಾತಾಡಿಯೇ ಇಲ್ಲ. ಆದರೆ, ಅವರನ್ನು ನಾನು ಅಪಾರವಾಗಿ ಗೌರವಿಸ್ತೀನಿ. ಒಬ್ಬ ಅಣ್ಣನಾಗಿ ತಂಗಿಯ ಆಸೆ-ಆಕಾಂಕ್ಷೆಗಳನ್ನು ಪೂರೈಸಲು ಅವರು ಏನು ಮಾಡಲೂ ಸಿದ್ಧರಿದ್ದರು. ಆದ್ರೆ, ನಾನೇ ಅದನ್ನೆಲ್ಲ ಕೈಯಾರೆ ಹಾಳು ಮಾಡಿಕೊಂಡುಬಿಟ್ಟೆ...’

ನಂದನನಿಗೆ ಏನು ಹೇಳಬೇಕೋ ತಿಳಿಯಲಿಲ್ಲ. ಸುಮ್ಮನೆ ಮಾವನ ಭುಜವನ್ನೊತ್ತಿ ಅವರ ಪಕ್ಕ ಹೋಗಿ ಕುಳಿತ. ಕೆಲವೊಮ್ಮೆ ಸಾಂತ್ವನದ ಹುಸಿ ಮಾತುಗಳಿಗಿಂತ ಮೌನವೇ ಹೆಚ್ಚು ಅರ್ಥಪೂರ್ಣ.

ನಂದನನ ಭೇಟಿಯಾದ ಮೇಲೆ ಮಾನಸಾಳ ಮನಸ್ಸು ಮೊದಲಿನಂತಿರಲಿಲ್ಲ. ಅವನು ನುಡಿಸಿದ ಆ ಕೊಳಲು ಇನ್ನೂ ಕಿವಿಯಲ್ಲಿ ಗುಯ್ಗುಡುತ್ತಲೇ ಇತ್ತು. ಅವನ ಬಗ್ಗೆ ಹೆಚ್ಚಿನ ಆಸಕ್ತಿ ಬೇಡ ಅಂತ ತನಗೆ ತಾನೇ ಹೇಳಿಕೊಂಡಳು. ಯಾಕಂದ್ರೆ, ಪ್ರೀತಿ ಪ್ರೇಮ, ಮದುವೆ ಅನ್ನೋದರಲ್ಲಿ ಅವಳಿಗೆ ಆಸಕ್ತಿಯೇ ಇರಲಿಲ್ಲ. ತಾನು ನೋಡಿರದ ಮಾಲತಿ ಅತ್ತೆ ಮತ್ತು ಜಗನ್ನಾಥರ ಪ್ರೀತಿಯ ಬಗ್ಗೆ ಮಾನಸಾಳಿಗೂ ಅಲ್ಪಸ್ವಲ್ಪ ಗೊತ್ತಿತ್ತು. ಸಂಸಾರ ಬಂಧನದಲ್ಲಿ ಸಿಲುಕಿ ಕಮರಿ ಹೋದ ಅಮ್ಮನ ಪ್ರತಿಭೆ, ಸಾವಿನಲ್ಲಿ ಅಂತ್ಯ ಕಂಡ ಮಾಲತಿಯ ಪ್ರೀತಿ, ಸಂಬಂಧಗಳ ಬಗ್ಗೆ ಬೇರೆಯದೇ ವ್ಯಾಖ್ಯಾನವನ್ನು ಮೂಡಿಸಿದ್ದವು ಅವಳಲ್ಲಿ. ಆದರೂ, ನಂದನನ ಕೊಳಲ ನಾದ ಅಷ್ಟು ಸುಲಭಕ್ಕೆ ಮರೆತು ಬಿಡುವಂತದ್ದಾಗಿರಲಿಲ್ಲ.-------------------------

ಪ್ರತಿದಿನ ಬೆಳಗ್ಗೆ ಗುಡಿಗೆ ಹೋದಾಗಲೂ ಮಾನಸಾಳ ಕಣ್ಣು ಕಿವಿಗಳು ಪುಷ್ಕರಣಿಯತ್ತ ಸೆಳೆಯಲ್ಪಡುತ್ತಿದ್ದವು. ಆದರೆ, ಒಂದು ದಿನವೂ ನಂದನ ಅಲ್ಲಿ ಕಾಣ ಸಿಗಲಿಲ್ಲ. ಯಾವತ್ತೋ ಒಂದು ದಿನ ಅಂಗಡಿಯ ಬಳಿಯಲ್ಲಿ ಮಾನಸಾ ಸಿಕ್ಕಾಗ ಬಾಯ್ತುಂಬ ನಕ್ಕಿದ್ದ ನಂದನ ಮತ್ತೆ ಕಾಣಿಸಿದ್ದು ಭಾನುವಾರದಂದು ಗುಡಿಯಿಂದ ವಾಪಸ್ ಬರುವಾಗ. ಹೆಗಲ ಜೋಳಿಗೆಯಲ್ಲಿ ಕೊಳಲು, ಬಿಳಿಯ ಹಾಳೆ ಮತ್ತೇನನ್ನೋ ಹಿಡಿದು ದೇವಸ್ಥಾನದತ್ತ ಬರುತ್ತಿದ್ದ ನಂದನ, ಮಾನಸಾಳನ್ನು ನೋಡಿ- ‘ಗೆಜ್ಜೆ ಕಾಲಲ್ಲೇ ಇದೆಯಾ ನೋಡಿಕೊಳ್ಳಿ’ ಅಂತ ಜೋಕ್ ಮಾಡಿದ. ‘ಯಾಕೆ, ಯಾರಾದ್ರೂ ಏನಾದ್ರೂ ಬೀಳಿಸಿದ್ರೆ ಎತ್ಕೊಳ್ಳೋಣ ಅಂತ ಎಲ್ಲ ಹೋದ್ಮೇಲೆ ಗುಡಿಗೆ ಬರೋದ ನೀವು?’ ಸ್ವಲ್ಪ ಸಿಡುಕಾಗಿಯೇ ಉತ್ತರಿಸಿದಳು ಮಾನಸಾ.

‘ತೋ, ನನ್ನ ಎಲ್ಲ ಮಾತನ್ನೂ ಅಪಾರ್ಥ ಮಾಡಿಕೊಳ್ತೀನಿ ಅಂತ ದೇವರ ಹತ್ರ ಹರಕೆ ಏನಾದ್ರೂ ಹೊತ್ತಿದ್ದೀರೇನ್ರೀ? ನನಗೆ ಈ ಪರಿಸರದ ದೈವಿಕ ಮೌನ ಇಷ್ಟ. ಹಾಗಾಗಿ ಯಾರೂ ಇಲ್ಲದಿರೋವಾಗ ಬರ್ತೀನಿ ಅಷ್ಟೇ..ಸರಿ, ನಿಮಗೆ ಹೊತ್ತಾಗುತ್ತೆ ಹೊರಡಿ..’ ಅಂತ ಮೆಟ್ಟಿಲುಗಳನ್ನೇರಿ ನಡೆದ ನಂದನ.

ಛೇ, ನಾನ್ಯಾಕೆ ಅವನಿಗೆ ಹಾಗೆ ಹೇಳಿದೆ ಅಂತ ಹಣೆ ಚಚ್ಚಿಕೊಂಡಳು ಮಾನಸಾ. ಮನೆಯಲ್ಲಿ ಅಪ್ಪ ಮದುವೆ ವಿಷಯ ಎತ್ತಿದಾಗೆಲ್ಲ ಮಾನಸಾಳ ಮನಸ್ಸು ಕೆಡುತ್ತದೆ. ಅಪ್ಪನ ಎದುರು ಅವಳು ವಾದಿಸಲಾರಳು. ಆ ಅಸಹಾಯಕತೆ ಹೀಗೆ ಯಾರ್ಯಾರದ್ದೋ ಮೇಲೆ ಹರಿಹಾಯುವಂತೆ ಮಾಡುತ್ತದೆ.

ಮನೆಗೆ ಬಂದ ಮೇಲೂ ಬೆಳಗ್ಗಿನ ವಿಷಯವೇ ಕೊರೆಯುತ್ತಿತ್ತು. ನಂದನನ ಬಳಿ ಕ್ಷಮೆ ಕೇಳಿದರಷ್ಟೇ ತನಗೆ ಸಮಾಧಾನ ಅನ್ನಿಸಿದಾಗ ಎದ್ದು ಗುಡಿಯತ್ತ ಹೊರಟಳು. ಎದುರಿಗೆ ಸಿಕ್ಕ ಅಪ್ಪನಿಗೂ ವಿಷಯ ತಿಳಿಸಿ, ಕ್ಷಮೆ ಕೇಳಿ ಬರ್ತೀನಿ ಅಂತ ಸತ್ಯವನ್ನೇ ಹೇಳಿದಳು ಮಾನಸಾ.

ಕೆಲವೊಮ್ಮೆ ವಿನಾಕಾರಣ ಕಟುವಾಗಿ ಮಾತನಾಡುವ ಅವಳ ಗುಣ ದತ್ತಾತ್ರೇಯರಿಗೆ ಹೊಸದಲ್ಲ. ಆದರೆ, ಹೀಗೆ ಕ್ಷಮೆ ಕೇಳಬೇಕು ಅಂತ ಅವಳು ಹೊರಟಿದ್ದು ಅವರಿಗೆ ಅಚ್ಚರಿ ತಂದಿತ್ತು. ನಂದನನನ್ನು ಅವರು ಭೇಟಿ ಮಾಡಿದ್ದು ಐದಾರು ಬಾರಿಯೇ ಆದರೂ, ಅವನೊಬ್ಬ ಒಳ್ಳೆಯ ಕಲಾವಿದ, ಮೇಲಾಗಿ ಒಬ್ಬ ಸಂಭಾವಿತ ಮನುಷ್ಯ ಅನ್ನುವುದು ಅವರಿಗೆ ಅರ್ಥವಾಗಿತ್ತು. ಈ ಬಾರಿಯ ಚೌತಿಯಲ್ಲಿ ಅವನು ಮಾಡಿದ ಗಣಪತಿಗಳೇ ಹಲವರ ಮನೆಯಲ್ಲಿ ಪೂಜಿಸಲ್ಪಟ್ಟ ವಿಷಯವನ್ನು ಅವರು ಕೇಳಿದ್ದರು. ಇನ್ನು ಅವನು ಕೊಳಲು ನುಡಿಸುವುದನ್ನಂತೂ ಅವರೇ ಕಿವಿಯಾರೆ ಕೇಳಿ ಪ್ರಶಂಸಿಸಿದ್ದರು. ಎಲ್ಲ ವಿಷಯದಲ್ಲೂ ಅವನು ಮಾನಸಾಗೆ ಒಳ್ಳೆಯ ಸಂಗಾತಿಯಾಗಬಲ್ಲ ಅನ್ನಿಸಿತು. ಆದರೆ, ಜಾತಿ... ಯಾಕೋ ಮಾಲತಿ ನೆನಪಾದಳು..-----------------------

ಪುಷ್ಕರಣಿಯ ಮೆಟ್ಟಿಲ ಮೇಲೆ ಕುಳಿತು, ಮಲ್ಲಿಕಾರ್ಜುನ ಗುಡಿಯ ಚಿತ್ರವನ್ನೇ ಯಥಾವತ್ತಾಗಿ ಮೂಡಿಸುತ್ತಿದ್ದ ನಂದನನಿಗೆ ಬೆನ್ನ ಹಿಂದೆ ಯಾರೋ ಕೆಮ್ಮಿದಂತಾಯ್ತು. ತಿರುಗಿ ನೋಡಿದರೆ ಮಾನಸಾ.. ‘ಈ ಬಾರಿ ಖಂಡಿತಾ ನಿಮ್ಮ ಗೆಜ್ಜೆ ನನಗೆ ಸಿಕ್ಕಿಲ್ಲ..’ ಎನ್ನುತ್ತಾ ನಾಟಕೀಯವಾಗಿ ಕಿವಿ ಹಿಡಿದುಕೊಂಡ ಅವನನ್ನು ನೋಡಿ ಅವಳಿಗೆ ನಗು ಬಂತು.

‘ಸಾರಿ.. ಬೆಳಗ್ಗೆ ಕೆಟ್ಟ ಮೂಡಲ್ಲಿ ಏನೋ ಹೇಳ್ಬಿಟ್ಟೆ..’

‘ಅಯ್ಯೋ, ಅದಕ್ಕೆ ಸಾರಿ ಕೇಳೋಕಂತ ಬಂದ್ರಾ? ನಂಗೇನೂ ಬೇಜಾರಾಗಿಲ್ಲ..’

‘ನೀವು ಬಿಡಿಸ್ತಿರೋದು ನಮ್ಮ ಗುಡಿಯ ಚಿತ್ರ! ವಾವ್, ನೀವು ಒಳ್ಳೆಯ ಚಿತ್ರಕಾರ ಕೂಡಾ ಹೌದು..’

‘ಥ್ಯಾಂಕ್ಯೂ.. ನನ್ನಪ್ಪನಿಂದ ಕಲಿತಿದ್ದು ಇದೆಲ್ಲಾ. ಶಿವಾರಪೇಟೆಯಲ್ಲಿ ನಮ್ಮದೊಂದು ಕಲಾಶಾಲೆ ಕೂಡಾ ಇತ್ತು..’

‘ವಾವ್,,, ನಂಗೂ ನಮ್ಮಮ್ಮನೇ ಡ್ಯಾನ್ಸ್ ಕಲಿಸಿದ್ದು., ಚಿತ್ರ ಪೂರ್ತಿಯಾದ ಮೇಲೆ ಅದನ್ನು ನಂಗೆ ಕೊಡ್ತೀರಾ? ಮಲ್ಲಿಕಾರ್ಜುನ ನನ್ನ ಇಷ್ಟದ ದೇವರು...’

“ಯಾಕೆ, ನಿಮಗೆ ಕೃಷ್ಣ ಇಷ್ಟ ಇಲ್ವಾ?’

‘ನಿಮಗೆ ಕೊಳಲು ನುಡಿಸೋಕೆ ಬರುತ್ತೆ ಅಂತ ನಾನು ಕೃಷ್ಣನ್ನ ಇಷ್ಟಪಡಬೇಕಾ?’

‘ಮತ್ತೆ ಮತ್ತೆ ಜಗಳಕ್ಕೆ ಬರ್ತೀರಲ್ಲ ನೀವು. ನಾನು ನೋಡಿದ ಹಾಗೆ ಹುಡುಗಿಯರಿಗೆ ಕೃಷ್ಣನೇ ಇಷ್ಟ ದೇವರಾಗಿರ್ತಾನೆ.. ಹುಡುಗಿಯರಿಗೆ ರಾಧಾ-ಕೃಷ್ಣ, ಅಮ್ಮಂದಿರಿಗೆ ಯಶೋದಾ-ಕೃಷ್ಣ...’

‘ನೀವು ನೋಡಿರೋ ಹುಡುಗಿಯರ ಹಾಗಲ್ಲ ನಾನು. ನಂಗೆ ಮಲ್ಲಿಕಾರ್ಜುನ, ಅಂದ್ರೆ ಶಿವನೇ ಇಷ್ಟ’

‘ಶಿವನ ಯಾವ ಗುಣ ನಿಮಗಿಷ್ಟ? ಅವನು ನಟರಾಜ ಅಂತಾನ?

‘ನೃತ್ಯಗಾರರಿಗೆ ನಟರಾಜ ಯಾವತ್ತೂ ಇಷ್ಟ ದೇವರೇ. ಅದಲ್ಲದೆಯೂ ಶಿವನ ವೈರಾಗ್ಯ ನಂಗಿಷ್ಟ. ಅವನೊಬ್ಬ ನಿರ್ಮೋಹಿ. ಸ್ಮಶಾನದಲ್ಲೂ ಇರಬಲ್ಲ ಅವನು. ಅವನಿಗೆ ಯಾರೂ ಬೇಡ.. ನಂಗೂ ಹಾಗೆ ಯಾರೂ ಬೇಡ..’

‘ಅವನು ನಿರ್ಮೋಹಿ ಅಂದಿರಿ. ಹಂಗಾದ್ರೆ, ಮಡದಿ ದಾಕ್ಷಾಯಿಣಿಯ ಬಗ್ಗೆ ಅವನಿಗಿದ್ದ ಮೋಹ, ಪ್ರೀತಿ ಸುಳ್ಳಾ? ಅವನ ಮಾತನ್ನು ಧಿಕ್ಕರಿಸಿ ತವರಿಗೆ ಹೋಗಿದ್ದ ದಾಕ್ಷಾಯಿಣಿ ವಾಪಸ್ ಬಾರದೇ ಇದ್ದಾಗ, ಅವನು ಸುಮ್ಮನಿರಬಹುದಿತ್ತು ಅಲ್ವ.. ಅವನ ಆ ಸಿಟ್ಟಿನ ಹಿಂದೆ ಇದ್ದದ್ದು ಪ್ರೀತಿ, ಮೋಹವೇ ತಾನೆ? ಇನ್ನು, ಶಿವನಿಗೆ ಯಾರೂ ಬೇಡ ಅಂದ್ರಲ್ಲ, ನನ್ನೊಳಗೇ ನೀನಿರಬೇಕು ಅಂತ ಪಾರ್ವತಿಗೆ ತನ್ನ ಅರ್ಧ ದೇಹವನ್ನೇ ಬಿಟ್ಟುಕೊಡಲಿಲ್ವಾ ಅವನು? ಹೆಣ್ಣಿಗೂ ಗಂಡಿನಷ್ಟೇ ಮಹತ್ವ ಇದೆ, ಪ್ರಕೃತಿ-ಪುರುಷರಿಬ್ಬರೂ ಸಮಾನ ಅಂದ ಶಿವನಿಗಿಂತ ಫೆಮಿನಿಸ್ಟ್ ಯಾರಿದ್ದಾರೆ ಅಲ್ವಾ…‘ನಂದನ್, ನೀವು ತುಂಬಾ ಓದಿಕೊಂಡಿದ್ದೀರಿ. ನಾನು ಶಿವನ ಬಗ್ಗೆ ಹೀಗೆಲ್ಲಾ ಯೋಚಿಸಿಯೇ ಇರಲಿಲ್ಲ..’

‘ದೃಷ್ಟಿಕೋನ ಅನ್ನೋದು ಅದಕ್ಕೇ ಅಲ್ವಾ? ಇಡೀ ಜಗತ್ತನ್ನು ನಾವು ನಮ್ಮದೇ ದೃಷ್ಟಿಕೋನದಲ್ಲಿ ನೋಡ್ತೀವಿ, ವ್ಯಾಖ್ಯಾನಿಸ್ತೀವಿ. ಜಗತ್ತು ಒಬ್ಬೊಬ್ಬರಿಗೆ ಒಂದೊಂದು ರೀತಿ ಕಾಣೋದೂ ಅದಕ್ಕೇ...’

‘ಜಗತ್ತನ್ನು ನಮ್ಮ ರೀತಿಯೇ ನೋಡುವ ಸಂಗಾತಿ ಸಿಕ್ಕಿದ್ರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ? ಇಬ್ಬರ ಜಗತ್ತೂ ಒಂದೇ ಆಗಿರುತ್ತೆ. ಇಲ್ಲದಿದ್ರೆ, ಬದುಕು ನೀರಸ...’

‘ನಿಮಗೆ ಅಂಥ ಸಂಗಾತಿಯೇ ಸಿಗಲಿ ಅಂತ ಮಲ್ಲಿಕಾರ್ಜುನನಲ್ಲಿ ಕೇಳಿಕೊಳ್ತೀನಿ...’ ಮಾನಸಾಳ ಕಣ್ಣಲ್ಲಿ ಕಣ್ಣಿಟ್ಟು ಹೇಳಿದ ನಂದನ್. ಅದೇ ಸಮಯಕ್ಕೆ ಬೀಸಿದ ಜೋರು ಗಾಳಿಗೆ ಗುಡಿಯ ಗಂಟೆಗಳು ಮೊಳಗಿ, ಇಬ್ಬರೂ ವಾಸ್ತವಕ್ಕೆ ಮರಳಿದರು..

‘ಸರಿ ನಾನಿನ್ನು ಹೊರಡ್ತೀನಿ. ಚಿತ್ರ ಪೂರ್ಣಗೊಂಡ ಮೇಲೆ ಕೊಡೋದನ್ನು ಮರೀಬೇಡಿ...’ ಅಲ್ಲಿಂದ ಹೊರಟಳು ಮಾನಸಾ. ಅವಳು ಹೋದ ದಿಕ್ಕನ್ನೇ ನೋಡುತ್ತಾ ಮೈಮರೆತ ನಂದನ...ಯಾರನ್ನು ಎಲ್ಲಿಗೆ ಸೇರಿಸಬೇಕೋ ಅಲ್ಲಿಗೆ ಸೇರಿಸುತ್ತಾ, ಯಾರಿಗೆ ಯಾವುದು ಸಲ್ಲಬೇಕೋ ಅದನ್ನು ನೀಡುತ್ತಾ, ಎಲ್ಲರ ವಿಧಿಯನ್ನು ಬರೆಯುವ ಮಲ್ಲಿಕಾರ್ಜುನನಿಗೆ ಮಾನಸಾ-ನಂದನರ ಬದುಕಿನ ಕಥೆ ಏನಾಗುತ್ತದೆಂದು ಗೊತ್ತಿತ್ತು ಮತ್ತು ಅವನು ಅದನ್ನು ಹಾಗೆಯೇ ಬರೆಯುತ್ತಾ ಸಾಗಿದ....

‘ದತ್ತಣ್ಣ, ಇಪ್ಪತ್ತೆಂಟು ವರ್ಷಗಳ ನಂತರ ನಾನು ಮತ್ತೆ ನಿಮ್ಮನೆಯ ಜಗುಲಿಗೆ ಬಂದಿದ್ದೇನೆ. ನಿಮ್ಮ ಮನೆಯ ಹೆಣ್ಣು ಕೇಳಲು... ನಿಮ್ಮ ನಿರ್ಧಾರ ಏನೇ ಆಗಿದ್ದರೂ ನಾನದನ್ನು ಒಪ್ಪಿಕೊಳ್ಳುತ್ತೇನೆ...’

‘ಜಗನ್ನಾಥ, ಅವತ್ತು ನನ್ನ ನಿರ್ಧಾರ ಏನಾಗಿತ್ತೋ, ಇವತ್ತೂ ಅದೇ ಆಗಿದೆ. ಪ್ರೀತಿಸಿದವರು ಒಂದಾಗಬೇಕು! ಆದರೆ, ಮಾಲತಿಯ ವಿಚಾರದಲ್ಲಿ ಪರಿಸ್ಥಿತಿ ನನ್ನ ಕೈ ಮೀರಿ ಹೋಯ್ತು. ಆ ಬಗ್ಗೆ ನಿನ್ನ ಬಗ್ಗೆಯೂ ನನಗೆ ಬೇಸರವಿಲ್ಲ.. ಎಲ್ಲ ವಿಧಿ ಲಿಖಿತ, ಮಲ್ಲಿಕಾರ್ಜುನನ ಇಚ್ಛೆ. ನಮ್ಮಿಂದ ಮತ್ತೊಮ್ಮೆ ಯಾವ ತಪ್ಪೂ ಆಗುವುದು ಬೇಡ. ಮಕ್ಕಳು ಇಷ್ಟಪಟ್ಟಿದ್ದಾರೆ, ಅವರು ಮದುವೆಯಾಗಲಿ. ಇಬ್ಬರೂ ಕಲಾವಿದರು. ತಮ್ಮಿಷ್ಟದಂತೆ ಕಲಾ ಸೇವೆ ಮಾಡಲಿ...’

ಮಾನಸಾ-ನಂದನರು ಹಿರಿಯರ ಕಾಲಿಗೆರಗಿದರು. ಗೋಡೆಯ ಚಿತ್ರಪಟದ ಮಾಲತಿ-ಶಾರದೆಯರ ಕಣ್ಣಿನಲ್ಲೂ ಖುಷಿಯ ಮಿಂಚು ಮಿನುಗಿದಂತಾಯ್ತು..