Click here to Download MyLang App

ಪ್ರವಾಹ - ಬರೆದವರು : ಉಮಾ ಸುಧೀಂದ್ರ | ಸಾಮಾಜಿಕ

ಬೆಳ್ಳಿಯ ಮುಗಿಲು ಬಹಳ ಸುಂದರವಾಗಿ ಕಾಣಿಸುತ್ತಿತ್ತು. ವಾರಗಟ್ಟಲೆ ಬಿಟ್ಟೂ ಬಿಡದೆ‌ ಸುರಿದ‌ ಮಳೆ, ಕರಿ ಮೋಡ, ನೋಡಿ‌ ನೋಡಿ‌ ಬಹಳ ಬೇಸರವಾಗಿತ್ತು ನಾರಾಯಣನಿಗೆ. ಪಂಚೆಯೊಳಗಿನ ಪಟ್ಟಾ ಪಟ್ಟಿ ಚಡ್ಡಿಯೊಳಗೆ ಕೈ ಹಾಕಿ ಮೋಟು ಸಿಗರೇಟನ್ನು ತೆಗೆದು ತುಟಿಗಿಟ್ಟುಕೊಂಡವನಿಗೆ ಬೆಂಕಿಕಡ್ಡಿ ಇಲ್ಲದ್ದು ನೆನಪಾಯಿತು. ಸ್ವಲ್ಪ ಮುಂದೆ ಹೋದವನು ತುಂಬಿ ಹರಿಯುತ್ತಿದ್ದ ಹಳ್ಳಕ್ಕೆ ಹಾಕಿದ್ದ‌ ಅಡಿಕೆಯ ಸಂಕದ ಮೇಲೆ ಹೋಗಿ‌ ಕುಳಿತ. ಮೇಲೆ ಎಳೆ ಬಿಸಿಲು, ಕೆಳಗೆ ಜುಳು ಜುಳು ನೀರು ಹಿತವಾಗಿತ್ತು.

ಅಷ್ಟರಲ್ಲಿ ‌ಅದೇ ದಾರಿಯಲ್ಲಿ ಬರುತ್ತಿದ್ದ ಮಂಜ ಕಂಡ. ಅವನನ್ನು, "ಏ..ಮಂಜಾ, ಬೆಂಕಿಪಟ್ನ ಐತನ? ಯಂತಾ ಮಾರಾಯಾ, ವಾರಗಟ್ಲೆ‌ ಆತು‌..ಮಳೀ ಅಂದ್ರ್ ಮಳಿ. ಪ್ಯಾಟಿ ಕಡಿ ಹೋಗುಕು ಆಲಿಲ್ಲಾ. ಶಿಗರೇಟು ಕಾಲಿ ಆಗ್ತ್ ಬಂತು" ಎಂದು ನಿಲ್ಲಿಸಿದ‌ ನಾರಾಯಣ.

"ಇಲ್ಲ ನಾಣಣ್ಣ...ನನ್ ಕೂಡು ಖಾಲಿ ಆಗದೆ. ಪ್ಯಾಟಿ ಕಡೀಗೆ ಹೊಂಟಿದೆ, ಸಾಮಾನು ಇಲ್ಲ" ಮಂಜನೆಂದ. "ಬರಬ್ಬರಿ ಆತು ಹಂಗರೆ. ನಂದೂ ವಂದಷ್ಟು ಸಾಮಾನು ತರಾದೈತಿ. ತಕ ಬಂದ್ಬುಡಾ" ಇದ್ದ ನಾಲ್ಕು ಹಲ್ಲು ತೋರಿಸುತ್ತ ಹೇಳಿದ ನಾರಾಯಣ.

"ಮಾರಾಯ, ಹೆಗಡ್ರ ಕೂಡೆ ದುಡ್ಡು ಕೇಳಿದೆ. ಅವರು ತಂದಿದ್ದಿಲ್ಲಲ ಮಂಜಾ ಅಂದ್ರು. ಅಂತೂ ನಮ್ಮನಿ ಇದ್ರ ಕೈಯಾಗೆ ಇರಬರದೆಲ್ಲಾ ತಕ ಬಂದೀನಿ. ನಂಗೇ ಸಾಕಾಗದು ಡೌಂಟು. ನಿಂಗೆಲ್ಲಿಂದಾ ತರದ" ತಲೆ ಕೆರೆಯುತ್ತಾ ಹೊರಟ ಮಂಜ ಬಸ್ಸ್ಟಾಪ್ಗೆ ಹೋಗುವ ದಾರಿಯಲ್ಲಿ.

ಮಂಜನಿಂದಲೂ‌ ಏನೂ ಕೆಲಸವಾಗಲಿಲ್ಲವಲ್ಲ ಎಂದು ಅಲವತ್ತುಕೊಂಡ ನಾರಾಯಣ ಅಲ್ಲೇ ಇದ್ದ ಉದ್ದನೆಯ ಕೋಲನ್ನು ತೆಗೆದುಕೊಂಡು ನೀರಿನಲ್ಲಿ ಹಾಕುತ್ತ ನೀರಿನಾಳ ನೋಡತೊಡಗಿದ.

ನಾರಾಯಣನಿಗಾಗಲೇ ಎಪ್ಪತೊಂಭತ್ತು ಕಳೆಯುತ್ತ ಬಂದಿತ್ತು. ಯಾವ ದಿನ ಹುಟ್ಟಿದನೋ ಅವನಿಗೂ ಗೊತ್ತಿಲ್ಲ, ಅವನವ್ವನಿಗೂ ಗೊತ್ತಿಲ್ಲ. ಯಾವುದೋ ದಾಖಲೆಗೆ ಊರಿನ ಮಾಸ್ತರು ಕೊಟ್ಟದ್ದೇ ಜನ್ಮ ದಿನ ಅವನಿಗೆ; ಅದೂ ಈಗ ಹತ್ತು ವರ್ಷದ ಹಿಂದೆ! ಹೋಗಲಿ, ಯಾರಿಗೆ ಹುಟ್ಟಿದನೋ ಎಂಬುದು ಕೂಡ ತಿಳಿಯದು ಅವನಿಗೆ. ಪೂರ್ತಿ ದಡ್ಡಳೂ ಅಲ್ಲದ ಬುದ್ಧಿವಂತಳೂ‌ ಅಲ್ಲದ ಗಿರಿಜೆ ಯಾವುದೋ‌ ಗಂಡಸಿನ ಕ್ಷಣಿಕ ಸುಖಕ್ಕೆ ಬಲಿಯಾದ‌ ಫಲಿತಾಂಶವೇ ಈ ನಾರಾಯಣ!

ಬಡತನದ ಹಸಿವು ಒಂದೆಡೆಯಾದರೆ, ಮಗಳು ಮದುವೆಯಾಗದೇ ಬಸಿರಾಗಿ ಕುಳಿತ ಅಸಹಾಯಕತೆ ಇನ್ನೊಂದು ಕಡೆ. ಆಗೆಲ್ಲಾ ಊರಲ್ಲಿ ಪಂಚರದ್ದೇ ಕಾರುಭಾರು. ಎಲ್ಲ ಸೇರಿ, ಯಾರೋ ಗಂಡಸು ಮಾಡಿದ‌ ಕರ್ಮಕ್ಕೆ ಬಸರಿ ಹೆಂಗಸು ಗಿರಿಜೆಯನ್ನು ಊರಿನಿಂದ ಬಹಿಷ್ಕಾರ ಮಾಡಿ ಹೊರ ಹಾಕಿದ್ದರು. ಗಿರಿಜೆ ಏನನ್ನೂ ಹೇಳದೆ ಇದ್ದ ಎರಡು ಜೊತೆ ಬಟ್ಟೆ ತೆಗೆದುಕೊಂಡು ಹೊಟ್ಟೆ ಹೊತ್ತುಕೊಂಡು ಊರು ಬಿಟ್ಟಿದ್ದಳು. ಮುಂದೆ ಹೇಗೆ ಹೇಗೋ ಅಲೆದಾಟ ಮಾಡಿ ಅಂತೂ ಯಾವುದೋ ಊರಲ್ಲಿ ಮಗುವನ್ನು ಹಡೆದು, ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದಳು.

ನಾರಾಯಣನಿಗೆ ವಿದ್ಯೆ ತಲೆಗೆ ಹೋಗದಿದ್ದರೂ ವ್ಯವಹಾರದಲ್ಲಿ ಭಾರೀ ಚುರುಕು. ಏಳೆಂಟು ವರ್ಷಕ್ಕೇ ಕೂಲಿ ಕೆಲಸ ಮಾಡಲು ಶುರು ಮಾಡಿದವನು ತಾಯಿಯ ಭಾರವನ್ನು ಅರ್ಧ ಕಡಿಮೆ ಮಾಡಿದ್ದ. ಮರ ಹತ್ತುವುದರಲ್ಲಿ ನಿಸ್ಸೀಮನಾದವನು ಅಡಿಕೆ ಕೊನೆ ಕುಯ್ಯುವುದು, ತೆಂಗಿನ ಮರ ಹತ್ತಿ ಕಾಯಿ ಕುಯ್ಯುವುದು ಹೀಗೆ ಹಲವು ಕೆಲಸಗಳನ್ನು ಮಾಡತೊಡಗಿದ.

ನಾರಾಯಣ ಒಳ್ಳೆಯ‌ ಕಟ್ಟುಮಸ್ತಾದ ಆಳು. ಕಪ್ಪು ಮಶಿಯಂಥ ಮೈ ಬಣ್ಣವಾದರೂ, ದಿನವಿಡೀ ದುಡಿದು, ತಿನ್ನುವ ದೇಹ ಹದವಾಗಿ ಬೆಳೆದಿತ್ತು. ಹೊಳೆಯುವ ಹಲ್ಲುಗಳ ಸಾಲು ಅವನ ಕೇರಿಯ ಹೆಂಗಳೆಯರನ್ನು ಸೆಳೆಯುತ್ತಿತ್ತು. ನಾರಾಯಣನಿಗೂ ಪ್ರಾಯ ಉಕ್ಕುತ್ತಿತ್ತು. ಹಾಗಾಗಿ ಆಗಾಗ ಅವರಿವರ ಮನೆಯಲ್ಲಿ‌ ಅವನ ದರ್ಶನ ಭಾಗ್ಯ ಸಿಗುತ್ತಿತ್ತು.

ತನ್ನ ಗತವನ್ನು ನೆನೆಯುತ್ತ ಕುಳಿತಿದ್ದ ನಾರಾಯಣನಿಗೆ ಹರೆಯದ ಆಟಗಳನ್ನು ನೆನೆದು ನಗು ಬಂತು. ಕೈಯಲ್ಲಿದ್ದ ಕೋಲು ಮುರಿದು ಕೆಳಗೆ ಬಿತ್ತು. ಹೊಟ್ಟೆ ಚುರುಗುಟ್ಟುತ್ತಿರುವುದು ಅನುಭವಕ್ಕೆ ಬಂದಿತ್ತು ಆಗ!

ಮನೆಯಲ್ಲಿ ಬೇಯಿಸಿ ಹಾಕುವವರ್ಯಾರೂ ಇರಲಿಲ್ಲ. ಅದೇ ಹೊಳೆಯಲ್ಲಿ‌ ತಡಕಾಡಿ ನಾಲ್ಕು ಹೊಳೆ ಮೀನುಗಳನ್ನು ಒಂದು ಕೊಟ್ಟೆ ತುಂಬಿಕೊಂಡು ಹೊರಟ. ಮನೆಯಲ್ಲಿದ್ದಿದ್ದು‌ ಕೇವಲ‌ ಉಪ್ಪು ‌ಮತ್ತು‌ ನೀರು! ಅದರಲ್ಲೇ‌ ಏನೋ‌ ಮಾಡಿಕೊಂಡು ತಿಂದು‌ ಹಸಿವು‌ ನೀಗಿಸಿಕೊಂಡಿದ್ದ.

ಇಪ್ಪತ್ತನೆಯ ವಯಸ್ಸಿನಲ್ಲಿಯೇ ಅವನವ್ವ ಗಿರಿಜೆ ತೀರಿಹೋಗಿದ್ದಳು. ಆದರೆ ನಾರಾಯಣನ ಜೀವನವು ಅದರಿಂದ ಸ್ವಲ್ಪವೂ ವ್ಯತ್ಯಾಸವಾಗಲಿಲ್ಲ. ಅವ್ವನೂ ಇಲ್ಲದ್ದರಿಂದ ಬಿಡಾರಕ್ಕೇ ಹೆಂಗಸರನ್ನು ಕರೆಸಿಕೊಳ್ಳುತ್ತಿದ್ದ. ನಾರಾಯಣ‌ ಒಂದು‌ ಪ್ರಾಣಿಯಂತೆ‌ ಎಂದು ಊರವರು ಆಡಿಕೊಳ್ಳುತ್ತಿದ್ದರು. ಏಕೆಂದರೆ‌ ಪ್ರಾಣಿಗಳಂತೆಯೇ ಅವನಿಗೂ ಭಾವನೆಗಳು ಇರಲಿಲ್ಲ. ಕೇವಲ ಊಟ, ತಿಂಡಿ, ನಿದ್ದೆ ಮತ್ತು‌ ಹೆಂಗಸರು ಇಷ್ಟೇ‌ ಅವನ ಜೀವನ.

ಇಂತಿಪ್ಪ ನಾರಾಯಣನಿಗೆ ಮದುವೆಯಾಗಬೇಕೆಂಬ ಆಸೆ ಶುರುವಾಯಿತು. ಪಕ್ಕದೂರಿನಿಂದ ಒಬ್ಬಳು‌ ಹುಡುಗಿಯನ್ನು‌ ಮದುವೆಯಾಗಿ ಕರೆತಂದೇಬಿಟ್ಟ ಮನೆಗೆ.‌ ಅವಳೇ ನಾಗಿ, ಅಪ್ಪನಿಲ್ಲದ ಹುಡುಗಿಯನ್ನು ಮದುವೆ ಮಾಡುವುದು ಅವಳಮ್ಮನಿಗೂ‌ ಕಷ್ಟವಾಗಿತ್ತು.‌‌ ನಾರಾಯಣನೇ ಹೋಗಿ ಕೇಳಿದಾಗ ಇಲ್ಲವೆನ್ನಲು‌ ಕಾರಣವೇ‌ ಇರಲಿಲ್ಲ.‌‌ ಇದ್ದ ಅಲ್ಪ‌ ಸಲ್ಪ ಹಣವನ್ನೇ ನಾರಾಯಣನಿಗೆ ವರದಕ್ಷಿಣೆಯಾಗಿ ನೀಡಿದ್ದಳು.

ನಾಗಿ-ನಾರಾಯಣರು ನಾರಾಯಣನ ಬಿಡಾರದಲ್ಲಿ ಸಂಸಾರ ಹೂಡಿದ್ದರು. ನಾಗಿಯು ದಪ್ಪ ಶರೀರದ ಮುಂಬು ಹಲ್ಲಿನ ಕರ್ರಗಿನ ಹೆಣ್ಣು.‌ ನಾರಾಯಣನಿಗೊಂದು ಮದುವೆ ಬೇಕಿತ್ತು.‌ ಅವನ ಇತಿಹಾಸ ತಿಳಿದವರಾರೂ ಅವನಿಗೆ ಹೆಣ್ಣು ಕೊಡುತ್ತಿರಲಿಲ್ಲ. ನಾಗಿಯ ರೂಪಕ್ಕೆ,‌ ಮತ್ತವಳ‌ ವರದಕ್ಷಿಣೆ ಕೊಡಲಾಗದ ಅಸಹಾಯಕತೆಗೆ ಅವಳನ್ನು ಯಾರೂ ಮದುವೆಯಾಗುತ್ತಿರಲಿಲ್ಲ. ಹಾಗಾಗಿ ಇಬ್ಬರ ಜೋಡಿ ಕೂಡಿಬಂದಿತ್ತು.

ನಾರಾಯಣನಿಗೆ ತನ್ನ ಮದುವೆಯ‌ ನೆನಪಾಗಿತ್ತು. ಮಳೆಗಾಲದ ಮಲೆನಾಡಿನ ಮದುವೆಯನ್ನು ನೆನೆದಾಗ ಅದು ಹೇಗೆ ಮದುವೆಯಾದೆನೋ ಮಳೆಗಾಲದಲ್ಲಿ ಅಂದುಕೊಂಡ. ಮತ್ತೆ ಬಿಸಿಲು ಮರೆಯಾಗತೊಡಗಿತ್ತು. ಕರಿ ಮೋಡಗಳು ಒಂದೊಂದಾಗಿ ಸೇರತೊಡಗಿದ್ದವು. ದೂರದಲ್ಲೆಲ್ಲೋ ಗುಡುಗಿದಂತಾಯಿತು. ನಾರಾಯಣ ತನ್ನಷ್ಟಕ್ಕೇ ಬೈದುಕೊಂಡ, "ಈ ಮಳಿಗಾಲದ ಕಾಲದಾಗೆ ಆಗಿದ್ದಲ್ಲ, ಹೋಗಿದ್ದಲ್ಲ, ಮತ್ತೆ ಸುರುವಾತು ಚರ ಚರ ಮಳಿ...ಥೂ.."

ಜೋರು ಮಳೆ ಶುರುವಾಗಿತ್ತು. ಬೇರೇನೂ ಮಾಡಲು ತೋಚದವನು ಅಲ್ಲೇ ಚಾಪೆ ಹಾಸಿ ಮಲಗಿಕೊಂಡ. ಮತ್ತೆ ಹಳೆಯ ನೆನಪುಗಳು ಕಾಡಿದವು. ನಾಗಿಯ ರೂಪ ಹೇಗೇ ಇರಲಿ, ತುಂಬ ಒಳ್ಳೆಯ ಹೆಂಡತಿಯಾಗಿದ್ದಳು. ಅವರಿವರ ಮನೆಗೆ ಕೆಲಸಕ್ಕೆ ಹೋಗಿ ಒಂದಷ್ಟು ಕಾಸು ಮಾಡಿಕೊಂಡಿದ್ದಳು.

ಒಂದು ದಿನ ನಾರಾಯಣ ಕೆಲಸಕ್ಕೆ ಹೋದವನು ಎಷ್ಟೊತ್ತಾದರೂ ಬರಲೇ ಇಲ್ಲ. ಆಗ ನಾಗಿಯೇ ಅವನನ್ನು ಹುಡುಕಿಕೊಂಡು ಬರಲು ಹೋಗಿದ್ದಳು.
ಆದರೆ ನಾರಾಯಣ ಅಲ್ಲಿ ಇರಲಿಲ್ಲ. ಅಲ್ಲಿ ಇಲ್ಲಿ‌ ವಿಚಾರಿಸಿದ ನಾಗಿ ಕೊನೆಗೆ ಬಚ್ಚಿಯ ಮನೆಯ ಬಾಗಿಲು ತಟ್ಟಿದ್ದಳು. ಅವಳ ಊಹೆಯಂತೆ ನಿಜಕ್ಕೂ ನಾರಾಯಣ ಅಲ್ಲಿಯೇ ಇದ್ದ. ಎಲ್ಲರಿಗೂ ಗೊತ್ತಿರುವಂತೆ ಬಚ್ಚಿ ಊರಲ್ಲೇ ಹೆಸರುವಾಸಿಯಾದ ವೇಶ್ಯೆಯಾಗಿದ್ದಳು.

ನಾಗಿಗೆ ಆ ದಿನ ಬಹಳ ಬೇಸರವಾಗಿತ್ತು. ಮನೆಗೆ ಬಂದವಳು ಇನ್ನಿಲ್ಲದಂತೆ ಅತ್ತುಬಿಟ್ಟಳು. ಅವಳ ಹಿಂದೆಯೇ ಬಂದ ನಾರಾಯಣನಿಗೆ ಎಂದೂ ಕಾಡಿರದಂಥ ಭಾವನೆಯೊಂದು ಕಾಡಿತ್ತು. ನಾಗಿ ಅಳುವುದನ್ನು ಅವನಿಂದ ನೋಡಲಾಗಲಿಲ್ಲ. ಹೋಗಿ ಅವಳನ್ನು ತಬ್ಬಿಕೊಂಡು ಸಮಾಧಾನಪಡಿಸಿದ. ಇನ್ನೆಂದೂ ಬೇರೆ ಹೆಂಗಸಿನ ಸಹವಾಸ ಮಾಡುವುದಿಲ್ಲ ಎಂಬುದಾಗಿ ಅವಳಿಗೆ ಮಾತು ನೀಡಿದ.

ನಾಗಿಯ ಮನ ಹರ್ಷದ ಕಡಲಾಗಿತ್ತು. ನಾರಾಯಣನಿಗಾಗಿ ಯಾರಾದರೂ ಅತ್ತಿದ್ದು ಅವನ ಜೀವನದಲ್ಲಿ ಇದೇ ಮೊದಲ ಬಾರಿಯಾಗಿತ್ತು! ನಾರಾಯಣನಿಗೆ ಪ್ರೀತಿಯಾಗಿತ್ತು ನಾಗಿಯ ಮೇಲೆ!

ನಾರಾಯಣನ ಮೊಗದಲ್ಲಿ ನಾಚಿಕೆಯು ಮೂಡಿ ಮರೆಯಾಯಿತು. ಹೊರಗಿನ ಮಳೆಯಿಂದಾಗಿ ಸೋಗೆ ಬಿಡಾರದಲ್ಲಿ ಮಲಗಿದ್ದ ನಾರಾಯಣನಿಗೆ ಛಳಿ ತಡೆಯಲಾಗಲಿಲ್ಲ. ಮತ್ತೊಂದು ಕಂಬಳಿಯನ್ನು ಹೊದ್ದು ಮತ್ತಷ್ಟು ಮುದುಡಿ ಮಲಗಿದವನು ಅಲ್ಲೇ ನಿದ್ದೆ ಹೋಗಿದ್ದ. ಕನಸ ತುಂಬ ನಾಗಿಯೇ ತುಂಬಿಕೊಂಡಿದ್ದಳು.

ಅವನು ಕಣ್ಬಿಟ್ಟಾಗ ಆಗಲೇ ಸಂಜೆಯಾಗಿತ್ತು. ಮಳೆ ಮಾತ್ರ ಕಡಿಮೆಯಾಗಿರಲಿಲ್ಲ. ನಾರಾಯಣನಿಗೆ ಬಿಸಿ ಚಹಾ ಕುಡಿಯುವ ಬಯಕೆಯಾಯಿತು. ಸೀದಾ ಚಂದ್ರುವಿನ ಹೋಟೆಲ್ಲಿನ ಕಡೆ ಹೊರಟ. ಅವನ ಹರಕು ಕಂಬಳಿಯಿಂದ ನೀರು ಒಳಗೆ ಬಂದು ಅರ್ಧ ಒದ್ದೆಯಾಗಿದ್ದ.

ನಾರಾಯಣನ ಆಗಮನವಾಗುತ್ತಿದ್ದಂತೆಯೇ ಚಂದ್ರು ಚಹ ತಂದುಕೊಟ್ಟ. ನಾರಾಯಣ ಕಾಸು ಕೊಡುವುದಿಲ್ಲವೆಂಬುದು ತಿಳಿದಿದ್ದರೂ ಚಂದ್ರು ಚಹ ಕೊಡುತ್ತಿದ್ದ. ಅವನಿಗೆ ನಾರಾಯಣನನ್ನು ಕಂಡಾಗ ಏನೋ ಅನುಕಂಪ ತುಂಬಿದ ಆತ್ಮೀಯ ಭಾವ ಮೂಡುತ್ತಿತ್ತು‌. ಚಹ ಹೀರುತ್ತ ಕುಳಿತಿದ್ದ ನಾರಾಯಣನನ್ನು ನೋಡುತ್ತಿದ್ದ ತನ್ನ ಸಂಬಂಧಿ ಈರನಿಗೆ ಚಂದ್ರು ತನ್ನ ಬಗ್ಗೆ ಹೇಳುತ್ತಿರುವುದು ನಾರಾಯಣನಿಗೂ ಕೇಳಿಸುತ್ತಿತ್ತು.

ನಾರಾಯಣ ನಾಗಿಯನ್ನು ಬಿಟ್ಟು ಒಂದು ದಿನವೂ ಇರುತ್ತಿರಲಿಲ್ಲ. ಅವಳೆಂದರೆ ಅವನಿಗೆ ಜೀವ. ನಾಗಿಯಾದರೂ ಅಷ್ಟೇ. ಅವನನ್ನು ಬಿಟ್ಟು ತಾಯಿಮನೆಗೂ ಹೋಗುತ್ತಿರಲಿಲ್ಲ‌. ನಾಗಿ-ನಾರಾಯಣರನ್ನು ಕಲಿಯುಗದ ಲಕ್ಷ್ಮೀನಾರಾಯಣ ಎಂದು ಊರವರೆಲ್ಲ ಕರೆಯುತ್ತಿದ್ದರು‌. ಈ ನಡುವೆ ನಾಗಿ ಗರ್ಭ ಧರಿಸಿದ್ದಳು. ನಾರಾಯಣ ಹಗಲು ರಾತ್ರಿ ದುಡಿದು ಹಣ ಕೂಡಿಡತೊಡಗಿದ್ದ. ನಾಗಿಯನ್ನು ಕೆಲಸಕ್ಕೆ ಹೋಗಲೂ ಬಿಡುತ್ತಿರಲಿಲ್ಲ.

ಊರಿನಲ್ಲಿ ಆ ಸಮಯ ಭತ್ತ ಕುಯ್ಯುವ ಕಾಲವಾಗಿತ್ತು. ನಾರಾಯಣನ ಬಿಡಾರ ಗದ್ದೆಯ ಪಕ್ಕದಲ್ಲೇ ಇತ್ತು. ಅವನ‌ ಮನೆಗೆ ತಾಗಿದಂತೆ ಅವನ ಒಡೆಯನ ಒಂದಷ್ಟು ಜಾಗವಿತ್ತು. ಅಲ್ಲಿ ಭತ್ತ ಕುಯ್ದಾದ ಮೇಲೆ ಹುಲ್ಲನ್ನು ಜೋಡಿಸಿ ಗೊಣಬೆ ಮಾಡಿಡುವ ರೂಢಿಯಿತ್ತು. ನಾರಾಯಣನಿಗೆ ಆ ಸಮಯದಲ್ಲಿ ಕೈ ತುಂಬ ಕೆಲಸ. ಒಬ್ಬರ ಮನೆಯಾದ ಮೇಲೆ ಒಬ್ಬರ ಮನೆಯಲ್ಲಿ ಭತ್ತ ಸೆಳೆಯುವುದು, ಒಕ್ಕುವುದು, ಹುಲ್ಲು ಕಟ್ಟುವುದು, ಹೀಗೆ ಹಲವು ಕೆಲಸಗಳಿರುತ್ತಿದ್ದವು.
ರಾತ್ರಿ ಅವನು ಮನೆಗೆ ಬರಲು ಬಹಳ ತಡವಾಗುತ್ತಿತ್ತು.

ಒಂದು ದಿನ ನಾರಾಯಣ, ಹೆಗಡೇರ ಮನೆಗೆ ಭತ್ತ ಸೆಳೆಯಲು ಹೋಗಿದ್ದ. ರಾತ್ರಿ ಎಂಟು ಗಂಟೆಗೆ ಮನೆಗೆ ಬಂದವನು ನಾಗಿಯ ಜೊತೆಗೆ ಮೀನು ಸಾರು ಊಟ ಮಾಡಿ, ಅವಳ ಬಳಿ ನೀನು ಮಲಗು, ತಾನು ಬರುವುದು ತಡವಾಗುತ್ತದೆಂದು ಹೇಳಿ ಮತ್ತೆ ಕೆಲಸಕ್ಕೆ ಹೋಗಿದ್ದ. ಬಸುರಿ ಹೆಂಗಸು ಬೇಗನೆ ಮಲಗಿ ನಿದ್ದೆ ಮಾಡಿದ್ದಳು.

ರಾತ್ರಿ ಹನ್ನೊಂದಾಗಿತ್ತೇನೋ, ಇದ್ದಕ್ಕಿದ್ದಂತೆ ನಾರಾಯಣನ ಬಿಡಾರದ ಪಕ್ಕದ ಹುಲ್ಲು ಗೊಣಬೆಗೆ ಬೆಂಕಿ ಬಿದ್ದಿತ್ತು. ಗಾಢ ನಿದ್ದೆಯಲ್ಲಿದ್ದ ನಾಗಿಗೆ ಎಚ್ಚರವೇ ಆಗಲಿಲ್ಲ. ನಿಧಾನಕ್ಕೆ ಬೆಂಕಿಯ ಉರಿ ನಾರಾಯಣನ ಬಿಡಾರದ ಸೋಗೆಗೂ ತಾಗಿತ್ತು. ಒಣಗಿದ ಗರಿಗಳು ಬೆಂಕಿ ತಾಕಿದೊಡನೆ ಪಟಪಟನೆ ಉರಿಯತೊಡಗಿದ್ದವು. ಕ್ಷಣ ಮಾತ್ರದಲ್ಲಿ ಮನೆ ಹೊತ್ತಿ ಉರಿಯತೊಡಗಿತ್ತು. ಎಚ್ಚರಗೊಂಡ ನಾಗಿ ಭಯಭೀತಳಾಗಿದ್ದಳು.

ತಪ್ಪಿಸಿಕೊಂಡು ಹೊರ ಹೋಗೋಣವೆಂದು ಬಾಗಿಲ ಬಳಿ ಬಂದರೆ ಅಲ್ಲಿಯೂ ಮೇಲಿನಿಂದ ಬೀಳುತ್ತಿದ್ದ ಉರಿಯುತ್ತಿರುವ ಸೋಗೆ! ಅದೇ ಸಮಯಕ್ಕೆ ಮನೆಗೆ ಬರುತ್ತಿದ್ದ ನಾರಾಯಣ ದೂರದಿಂದಲೇ ಬೆಂಕಿಯನ್ನು ನೋಡಿ ಹೌಹಾರಿದ್ದ. ನಾಗಿ ಬೆಂಕಿಯಿಂದ ತಪ್ಪಿಸಿಕೊಂಡು ಬಾಗಿಲು ತೆಗೆಯಲು ಹರಸಾಹಸ ಮಾಡುತ್ತಿರುವಾಗಲೇ ನಾರಾಯಣ ಹೊರಗಿನಿಂದ ಬಾಗಿಲು ನೂಕಿದ್ದ. ಆ ರಭಸಕ್ಕೆ ಮೇಲಿನಿಂದ ಹತ್ತಾರು ಉರಿಯುವ ಸೋಗೆಗಳು ನಾಗಿಯ ಮೇಲೆ ಬಿದ್ದವು. ಅವಳ ಸೀರೆ ಭಗ್ಗೆಂದು ಹೊತ್ತಿಕೊಂಡಿತ್ತು.

ನಾರಾಯಣ ಅವಳನ್ನು ಹೊರಗೆ ಕರೆತಂದು ಕಂಬಳಿಯ ಸಹಾಯದಿಂದ ಬೆಂಕಿಯನ್ನು ಆರಿಸುತ್ತಿದ್ದ. ಅವನ ಮೈ ಕೈ ಎಲ್ಲ ಸುಡುತ್ತಿತ್ತು. ಅವನೆಷ್ಟೇ ಪ್ರಯತ್ನ ಪಟ್ಟರೂ ನಾಗಿಯ ಚರ್ಮ ಪೂರ್ತಿ ಸುಟ್ಟು ಹೋಗಿತ್ತು. ಅವಳ ಆರ್ತನಾದ ಕತ್ತಲಿನಲ್ಲಿ ಕರಗಿ ಹೋಗುತ್ತಲಿತ್ತು. ನಾರಾಯಣ ಮನೆಯ ಕಡೆ ಲಕ್ಷ್ಯ ಕೊಡದೇ ಅವಳನ್ನು ಹೊತ್ತುಕೊಂಡು ಸನಿಹದ ಸರ್ಕಾರಿ ಆಸ್ಪತ್ರೆಯ ಬಳಿ ಓಡುತ್ತಿದ್ದ. ಆಸ್ಪತ್ರೆಯ ಆವರಣ ತಲುಪುವುದರೊಳಗೆ ಕಂಬಳಿಯೊಳಗಿನ ದೇಹದ ಉಸಿರು ನಿಂತು ಹೋಗಿತ್ತು!

ನಾರಾಯಣನ ಬಾಳಿನಿಂದ ನಾಗಿ ಬಹುದೂರ ಹೊರಟು ಹೋಗಿದ್ದಳು. ಅಂದಿನಿಂದ ನಾರಾಯಣ ಮತ್ತೆ ಒಂಟಿ ಎನ್ನುತ್ತಾ ಚಂದ್ರು ಪಶ್ಚಾತ್ತಾಪ ವ್ಯಕ್ತಪಡಿಸಿದ. ನಾರಾಯಣನ ಕಥೆ ಕೇಳಿದ ಈರನಿಗೂ ಅವನ ಮೇಲೆ ಕರುಣೆಯುಕ್ಕಿತ್ತು. ನಾರಾಯಣನದ್ದು ಮಾತ್ರ ಅದೇ ಶೂನ್ಯ ಭಾವ!

ನಾರಾಯಣ ಹೊದ್ದ ಕಂಬಳಿಯನ್ನು ಹೋಟೆಲ್ಲಿನಲ್ಲಿಯೇ ಮರೆತು, ಮಳೆಯಲ್ಲಿಯೇ ಮನೆಗೆ ಹೋಗುತ್ತಿದ್ದ. ನಾಗಿ ಹೋದ ಮೇಲೆ ನಾರಾಯಣ ಬಹಳ ಬದಲಾಗಿದ್ದ. ಅವಳನ್ನು ಮನಸಾರೆ ಪ್ರೀತಿಸಿದವನಿಗೆ ಇನ್ನೊಂದು ಹೆಣ್ಣನ್ನು ಮುಟ್ಟಬೇಕೆಂದು ಅನ್ನಿಸಲೇ ಇಲ್ಲ. ಅವಳಿಗೆ ಕೊಟ್ಟ ಮಾತೂ ಕಾರಣವಿರಬಹುದೆನ್ನಿ!

ಅಪ್ಪನಿಲ್ಲದೇ ಹುಟ್ಟಿ ಬೆಳೆದ ನಾರಾಯಣನಿಗೆ ಅಮ್ಮನಿಂದಲೂ ಪ್ರೀತಿಯೇನು ಸಿಕ್ಕಿರಲಿಲ್ಲ. ಅವಳು ಅವನನ್ನು ಸಾಕಿದ್ದೇ ಹೆಚ್ಚಾಗಿತ್ತು. ಸಲ್ಪ ಸಮಯ ಕಳೆದ ಮೇಲೆ ಅವಳೂ ಅವನನ್ನು ಬಿಟ್ಟು ಹೋಗಿಬಿಟ್ಟಳು. ಪ್ರೀತಿ ಸಿಗದೇ ಪರಿತಪಿಸುತ್ತಿದ್ದ ನಾರಾಯಣನ ಬಾಳಿನಲ್ಲಿ ನಾಗಿ ತಂಗಾಳಿಯಂತೆ ಬಂದಳು. ಅವಳೊಂದಿಗಿನ ಒಂದೂವರೆ ವರ್ಷದ ಬಾಳಿನಲ್ಲಿ ಅವನು ಪ್ರೀತಿಯ ಅರ್ಥ ಕಂಡುಕೊಂಡಿದ್ದ. ಆದರೆ ಅವನು ಒಂಟಿ ಎಂದು ವಿಧಿ ಬರೆದಿಟ್ಟರೆ ಯಾರೇನು ಮಾಡಬಲ್ಲರು! ಮತ್ತೆ ಅವನನ್ನು ಒಂಟಿ ಮಾಡಿ ನಾಗಿಯೂ ಹೊರಟು ಹೋದಳು.

ನಾರಾಯಣ ಮಳೆಯಲ್ಲಿ ಪೂರ್ತಿ ತೋಯ್ದು ಹೋಗಿದ್ದ. ಅವನು ಹಳೆ ನೆನಪುಗಳ ಪ್ರವಾಹದ ಅಬ್ಬರಕ್ಕೆ ಸಿಲುಕಿ ಸೋತು ಹೋಗಿದ್ದ. ಆಗ ಹೊರಗಡೆ ಜೋರು ಸದ್ದು ಕೇಳಿಸಿತು. "ಈ ಕೂಡಲೇ ಎಲ್ಲರೂ ಮನೆ ಖಾಲಿ ಮಾಡಿ ನಮ್ಮ ಜೊತೆ ಬನ್ನಿ. ನೆರೆ ಉಂಟಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಸರ್ಕಾರ ಸಧ್ಯಕ್ಕೆ ಇರಲು ವ್ಯವಸ್ಥೆ ಮಾಡಿದೆ‌. ಅರ್ಧ ಗಂಟೆಯಲ್ಲಿ ಎಲ್ಲರೂ ಹೊರಡಲೇಬೇಕು".

ಊರವರೆಲ್ಲ ಸರ್ಕಾರದ ಗಾಡಿಗಳಲ್ಲಿ ಹೊರಟು ನಿಂತರು. ಮಂಜ ನಾರಾಯಣನ ಬಿಡಾರಕ್ಕೆ ಬಂದು, "ನಾಣಣ್ಣ ಬರಲ್ಲನಾ? ಎಲ್ಲಾ ಹೊಂಟಾತು. ನೀ ವಬ್ಬವಾ ಕಾಣ್ಲಾ ಹೇಳಿ ನೋಡ್ಕ ಹೋಗುವಾ ಹೇಳಿ ಬಂದೆ" ಎಂದು ಕೇಳಿದ. ನಾರಾಯಣನ ಕರ್ರಗಿನ ಮುಖದಲ್ಲಿ ನಗುವರಳಿ ಇದ್ದ ಸಲ್ಪ ಬಿಳಿ ಹಲ್ಲುಗಳು ಕಾಣಿಸಿದವು. "ಏ ಮಂಜಾ.. ನಂಗೆ ಯಾರು ಐದಾವೋ? ನೆರಿ ಬಂದ್ರೆಂತು, ತೊರಿ ಬಂದ್ರೆಂತು? ನಾ ಯಲ್ಲಿಗೂ ಬರಾವಲ್ಲ. ಇದ್ರೂ ಇಲ್ಲೆಯಾ, ಸತ್ರೂ ಇಲ್ಲೆಯಾ" ಎಂದವನ ಕಣ್ಣು ನೂರು ಅರ್ಥ ಸ್ಫುರಿಸಿತ್ತು.

ಮಂಜನಿಗೆ ಏನು ಹೇಳಬೇಕೋ ತಿಳಿಯಲಿಲ್ಲ. ಆಗಲೇ ಗಾಡಿಗಳು ಹೊರಟು ನಿಂತಿದ್ದವು. ಅವನಿಗೆ ಏನನ್ನಿಸಿತೋ, ತನ್ನ ಜೇಬಿನಿಂದ ನಾಲ್ಕು ಸಿಗರೇಟು ಮತ್ತು ಬೆಂಕಿ ಪೊಟ್ಟಣ ತೆಗೆದು ನಾರಾಯಣನ ಕೈಯಲ್ಲಿಟ್ಟು, ಅವನ ಬೆನ್ನು ತಟ್ಟಿ ನಡೆದಿದ್ದ. ಸಿಗರೇಟನ್ನು ಕಂಡ ನಾರಾಯಣನಿಗೆ ಬಹಳ ಆನಂದವಾಗಿತ್ತು.

ಮೂರು ಸಿಗರೇಟನ್ನು ಒಂದಾದ ಮೇಲೊಂದರಂತೆ ಸೇದಿ ಮುಗಿಸಿದವನು, ಒಂದನ್ನು ಮರುದಿನಕ್ಕಾಗಿ ಕಾದಿರಿಸಿದ್ದ. ಅಷ್ಟು ಹೊತ್ತಿಗಾಗಲೇ ಮಧ್ಯರಾತ್ರಿಯಾಗಿತ್ತು. ಸಿಗರೇಟಿನಲ್ಲೇ ಹೊಟ್ಟೆ ತುಂಬಿಸಿಕೊಂಡವನು ಒಂದು ಚೊಂಬು ನೀರು ಕುಡಿದು ಮಲಗಿದ್ದ. ಹೊರಗೆ ಧೋ ಎಂದು ಮಳೆ ಸುರಿಯುತ್ತಿತ್ತು.

ಮಲಗಿ ನಿದ್ರಿಸುತ್ತಿದ್ದ ನಾರಾಯಣನಿಗೆ ತನ್ನನ್ನು ನೀರ ಸೆಲೆ ಒಳಗೆ ಎಳೆದುಕೊಂಡಂತೆ ಕನಸು ಬಿದ್ದು ಎಚ್ಚರವಾಯಿತು. ನೋಡಿದರೆ ಅವನ ಸುತ್ತಮುತ್ತ ನೀರು ತುಂಬುತ್ತಲಿತ್ತು. ಕಳೆದ ರಾತ್ರಿ ಹವಾಮಾನ ಇಲಾಖೆ ನೀಡಿದ ಎಚ್ಚರಿಕೆ ಸತ್ಯವಾಗಿತ್ತು. ನದಿಯ ನೀರು ಉಕ್ಕಿ ಹರಿದು, ಎಲ್ಲವನ್ನೂ ಒಳಗೆಳೆದುಕೊಳ್ಳುತ್ತಿತ್ತು.

ನಾರಾಯಣ ಬೇಗ ಚಾಪೆಯಿಂದೆದ್ದು ಗೋಡೆಯ ಮೇಲೆ ಇಟ್ಟಿದ್ದ‌ ಬೆಂಕಿ ಪೊಟ್ಟಣ ಮತ್ತು ಉಳಿದಿದ್ದ ಸಿಗರೇಟನ್ನು ಎತ್ತಿಟ್ಟುಕೊಂಡ. ಸಿಗರೇಟನ್ನು ಬಾಯಿಯಲ್ಲಿಟ್ಟುಕೊಂಡು ಬೆಂಕಿ ಕಡ್ಡಿ ಗೀರಿ ಹೊತ್ತಿಸಿಕೊಂಡ. ಒಲೆಯ ಕಟ್ಟೆಯ ಮೇಲೆ ಹೋಗಿ ನೀರು ಆವರಿಸುವುದನ್ನೇ ನೋಡುತ್ತ ಕುಳಿತ.

ನೀರಿನ ಬಲ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಲೇ ಇತ್ತು. ಅವನ ಕತ್ತಿನವರೆಗೂ ನೀರು ಬಂದಿತ್ತು. ನಾರಾಯಣನ‌ ಸಿಗರೇಟು ನೀರಿನಲ್ಲಿ ತೇಲುತ್ತಿತ್ತು. ನಾರಾಯಣ ಅಲುಗಾಡದ‌ ಮುನಿಯಂತೆ ನಿಂತೇ ಇದ್ದ. ನೀರು ಮನೆಯನ್ನು ಆಕ್ರಮಿಸಿಕೊಂಡು ವಿಜ್ರಂಭಿಸುತ್ತಿತ್ತು.