Click here to Download MyLang App

ಪ್ರತಿಫಲ - ಬರೆದವರು : ಶ್ರೀಲಕ್ಷ್ಮಿ | ಸಾಮಾಜಿಕ

'ದೇವ್ರುಗೆ ಹಣ್ಣು ಕಾಯಿ ತೊಗೊಂಡ್ ಹೋಗಿ ಅಮ್ಮ', 'ದೇವ್ರುಗೆ ಹಣ್ಣು ಕಾಯಿ ತೊಗೊಂಡ್ ಹೋಗಿ ಅಕ್ಕ' ಹೀಗೆ ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಬಳಿ ಪೂಜಾ ಸಾಮಗ್ರಿಯ ಬುಟ್ಟಿಗಳನ್ನು ಮಾರುತ್ತಾ ದೇವಸ್ಥಾನದ ಮುಂದೆಲ್ಲಾ ಪ್ರತಿ ದಿನ ಬೆಳಗ್ಗೆ ಹಾಗು ಸಂಜೆಯ ವೇಳೆ ಓಡಾಡ್ತಿದ್ದ ರಾಜು. ಹದಿನಾಲ್ಕು ವರ್ಷದ ಹುಡುಗ ಮನೆಯ ಕಷ್ಟವನ್ನು ಅರ್ಥೈಸಿಕೊಂಡಿದ್ದ. ಓದಿನ ಜೊತೆ ಜೊತೆಗೆ ಕೆಲಸದಲ್ಲೂ ತೊಡಗಿ ಬಿಡುತ್ತಿದ್ದ. ನದಿಯ ತೀರದಲ್ಲಿದ್ದ ಈಶ್ವರನ ದೇವಾಲಯಕ್ಕೆ ವರ್ಷ ಪೂರ್ತಿ ಜನಸಂದಣಿ ಇರುತ್ತಿತ್ತು. ಸೋಮವಾರ, ಶಿವರಾತ್ರಿ, ಕಾರ್ತಿಕ ಸೋಮವಾರಗಳೊಂದು ರಾಜೂವಿಗೆ ಹಾಗು ಅವನ ತಾಯಿ ಗಂಗಮ್ಮನಿಗೆ ಹೆಚ್ಚಿನ ವ್ಯಾಪಾರ ಎಂದೇ ಹೇಳಬಹುದು. ದೇವಸ್ಥಾನದಿಂದ ನದಿಗೆ ಹೋಗುವ ಮಾರ್ಗದಲ್ಲಿ ಒಂದು ಪುಟ್ಟ ಪೂಜಾ ಸಾಮಗ್ರಿಗಳ ಅಂಗಡಿ. ಗಂಗಮ್ಮಳ ಗಂಡ ಈ ಅಂಗಡಿ ಶುರು ಮಾಡಿದಾಗ ಆ ದೇವಸ್ಥಾನದ ಬಳಿ ಇದ್ದದ್ದು ಒಂದೋ ಎರಡೂ ಇಂತಹ ಅಂಗಡಿಗಳು ಆದರೆ ವರ್ಷ ಕಳೆದಂತೆ ಹಲವು ದೊಡ್ಡ ಅಂಗಡಿಗಳು ಎದ್ದು ನಿಂತವು. ಇಷ್ಟಲ್ಲದೆ ವಾಹನ ನಿಲುಗಡೆಗೆ ಪ್ರತ್ಯೇಕ ಸ್ಥಳ ದೇವಸ್ಥಾನದ ಇನ್ನೊಂದು ಬದಿಯಲ್ಲಿ ಮಾಡಲಾಗಿ, ಬಹಳ ಜನ ಗಾಡಿಗಳಿಂದ ಇಳಿದ ಮೇಲೆ ಆ ದ್ವಾರದಿಂದಲೇ ದೇವಸ್ಥಾನ ಪ್ರವೇಶಿಸುತ್ತಿದುದರಿಂದ ಅಂಗಡಿ ಕಡೆ ಬರುವವರು ಸ್ವಲ್ಪ ಕಡಿಮೆಯಾದರು. ಇದರಿಂದಲೇ ಹಣ್ಣು ಕಾಯಿ ಬುಟ್ಟಿ ಹಿಡಿದು ದೇವಸ್ಥಾನದ ಮುಂದೆಲ್ಲಾ ವ್ಯಾಪಾರ ಶುರುಮಾಡಿದರು.

ಗಂಗಮ್ಮಳು ತನ್ನ ಗಂಡ ತೀರಿಕೊಂಡ ಮೇಲೆ ವ್ಯಾಪಾರವನ್ನು ನಿಲ್ಲಿಸಿ ಬೇರೆ ಏನಾದರೂ ಮಾಡಬೇಕು ಎಂದು ಬಹಳ ಸಲ ಯೋಚಿಸಿದರು ಸಹ ಅದ್ಯಾಕೋ ಈ ಕೆಲಸ ಕೈಬಿಡಲು ಅವಳಿಗೆ ಸಾಧ್ಯವಾಗಲಿಲ್ಲ. ಅಂಗಡಿಯ ಹಿಂಬದಿಗೆ ಅಂಟಿಕೊಂಡಂತೆ ಮನೆ, ಮನೆಯ ಹಿತ್ತಲಲ್ಲೆ ಹಲವು ಹೂವಿನ ಗಿಡಗಳು. ರಾಜು ಬೆಳಗ್ಗೆ ಬೇಗ ಎದ್ದು ಗಿಡದಲ್ಲಿ ಬಿಟ್ಟ ಹೂಗಳನ್ನು ಕೂಯ್ದು ದೊಡ್ಡ ಬುಟ್ಟಿ ಒಂದಕ್ಕೆ ಹಾಕಿ ನಂತರ ಶಾಲೆಗೆ ಹೊರಡುವ ತಯಾರಿ ನಡೆಸುತ್ತಿದ್ದ. ನದಿಗೆ ಸಮೀಪದಲ್ಲೇ ಇದ್ದುದರಿಂದ ನೀರಿನ ಸಮಸ್ಯೆ ಇರಲಿಲ್ಲ. ಎಲ್ಲಾ ಕಾಲದಲ್ಲೂ ಹಿತ್ತಲು ತುಂಬೆಲ್ಲಾ ಬಣ್ಣದ ಹೂಗಳ ರಾಶಿ. ಗಂಗಮ್ಮ ಪಕ್ಕದ ಅಂಗಡಿಯವಳಾದ ಪಂಕಜಳ ಜೊತೆ ತಿಂಗಳಿಗೊಮ್ಮೆ ಊರಿನಲ್ಲಿದ್ದ ಹೋಲ್ಸೇಲ್ ಅಂಗಡಿಗೆ ಹೋಗಿ ಊದಿನಕಡ್ಡಿ, ಕರ್ಪೂರ, ಧೂಪದ ಪ್ಯಾಕೆಟ್ ಹೀಗೆ ಪೂಜಾ ಸಾಮಗ್ರಿಗಳ ಬುಟ್ಟಿಗೆ ಬೇಕಾಗುವುದೆಲ್ಲವನ್ನು ತಂದಿಟ್ಟುಕೊಳ್ಳುತ್ತಿದ್ದಳು. ಪಂಕಜ ದೇವರ ಫೋಟೋಗಳು, ದೇವರ ಫೋಟೋ ಇರುವ ಪೆಂಡೆಂಟ್, ಕೀಚೈನ್ ಇಂತಹವುಗಳನ್ನು ಮಾರುವ ಪುಟ್ಟ ಅಂಗಡಿ ಇಟ್ಟಿದ್ದಳು. ಅಕ್ಕ ಪಕ್ಕದ ಅಂಗಡಿಯವರಾದುದರಿಂದ ಇಬ್ಬರಲ್ಲಿಯೂ ಹೊಂದಾಣಿಕೆ ಚೆನ್ನಾಗಿತ್ತು. ಭಕ್ತಾದಿಗಳು ನದಿಯಲ್ಲಿ ಸ್ನಾನ ಮಾಡಿ ದೇವಸ್ಥಾನದ ಕಡೆಗೆ ಹೋಗುವಾಗ ಸಿಗುವ ಅಂಗಡಿಗಳ ಪೈಕಿ ಇವರಿಬ್ಬರ ಅಂಗಡಿಗಳು ಇದ್ದವು. ಆದ್ದರಿಂದಲೇ ಬೆಳಗ್ಗೆ ಮುಂಚಿತವಾಗಿಯೇ ಅಂಗಡಿ ತೆಗೆದಿರುತ್ತಿದ್ದರು.

ಮಾರ್ಚ್ ತಿಂಗಳ ಕೊನೆ. ಜನ ಈ ಸಮಯದಲ್ಲಿ ಸುಮಾರು ಹೆಚ್ಚಿನ ಸಂಖ್ಯೆಯಲ್ಲೇ ಬರ್ತಿದ್ರು, ಏಕೋ ಏನೋ ಭಕ್ತಾದಿಗಳು ದೇವಸ್ಥಾನಕ್ಕೆ ಬರುವುದು ಕಮ್ಮಿಯಾಗುತ್ತಿದೆ ಅಲ್ವಾ? ಅಂತ ಪಂಕಜ ಗಂಗಮ್ಮನನ್ನು ಕೇಳಿದಳು. ಗಂಗಮ್ಮಳು, ಹೌದು ಅದೇನೋ ಕರೋನ ರೋಗ ಜಾಸ್ತಿ ಆಗ್ತೀದ್ಯಂತೆ. ರಾಜುವಿನ ಶಾಲೆಯಲ್ಲಿ ಈ ವಿಷಯವಾಗಿ ಅವರ ಮೇಷ್ಟ್ರು ಹೇಳುತ್ತಿದ್ದರು ಅಂತ ನೆನ್ನೆ ಅಷ್ಟೆ ನನಗೆ ಹೇಳುತ್ತಿದ್ದ. ಏನು ಅಂತ ಸರಿಯಾಗಿ ಗೊತ್ತಿಲ್ಲ ಎಂದಳು. ಅದಕ್ಕೆ ಪಂಕಜಾಳು, ನೆನ್ನೆ ಟಿವಿ ನೋಡ್ತಾ ನಮ್ಮನೇಲೂ ಎಲ್ಲರು ಇದೇ ವಿಷ್ಯ ಮಾತಾಡ್ತಿದ್ರು. ಅದೇನು ಅಂತ ಸರಿಯಾಗಿ ಅರ್ಥ ಆಗ್ಲಿಲ್ಲ. ಆ ಗುಡಿಲಿ ಇರೋ ಶಿವನೇ ಕಾಪಡ್ಬೇಕು ಅಂತ ಹೇಳಿ ಮಧ್ಯಾಹ್ನ ಅಂಗಡಿ ಮುಚ್ಚಿದಳು. ಗಂಗಮ್ಮಳು ಸಹ ಅಂಗಡಿ ಮುಚ್ಚುತ್ತಾ ಈಗ ಸಾವಿತ್ರಮ್ಮನವರ ಮನೆಗೆ ಹೋಗ್ಬೇಕು. ಅಕ್ಕಿ, ರಾಗಿ ಮಾಡ್ಕೊಡ್ಬೇಕು. ಬಿಡುವು ಮಡ್ಕೊಂಡು ಬಾ ಅಂತ ಎರಡು ದಿನದ ಹಿಂದೇನೆ ಫೋನ್ ಮಾಡಿದ್ರು. ಹೋಗಿ ಬರ್ತೀನಿ ಅಂತ ಹೇಳಿ ಹೊರಟಳು.

ಆ ದೇವಸ್ಥಾನದ ಹಿರಿಯ ಅರ್ಚಕರಾಗಿದ್ದ ಶ್ಯಾಮರಾಯರ ಮಡದಿ ಸಾವಿತ್ರಮ್ಮ ಮನೆಯಲ್ಲಿ ಹೆಚ್ಚಾಗಿ ಕೆಲಸ ಇದ್ದಾಗ ಗಂಗಮ್ಮನಿಗೆ ಬರಲು ಹೇಳುತ್ತಿದ್ದರು. ದೇವಸ್ಥಾನಕ್ಕೆ ಬರುತ್ತಿದ್ದ ಅಕ್ಕಿ, ಬೇಳೆ, ಧನ್ಯಗಳನ್ನು ಒಂದು ಸಲ ಆರಿಸಿ ನಂತರ ಅದನ್ನು ದೇವಸ್ಥಾನದ ಪಾಕಶಾಲೆಗೆ ಕಳಿಸುತ್ತಿದ್ದರು. ಇಂತಹ ಕೆಲಸಗಳಿಗೆ ಅವರು ಗಂಗಮ್ಮನನ್ನೇ ಕರೆಯುತ್ತಿದ್ದರು. ಅಂದು ಅವಳು ಕೆಲಸಕ್ಕೆ ಬಂದಾಗ ನಡುಮನೆಯಲ್ಲಿ ಹೂ ಬತ್ತಿಗಳನ್ನು ಹೊಸೆಯುತ್ತ ಕುಳಿತಿದ್ದ ಸಾವಿತ್ರಮ್ಮನವರು ಏನು ಗಂಗಮ್ಮ? ಮೂರ್ನಾಲ್ಕು ದಿನ ಆಯ್ತು ನೀನು ಈ ಕಡೆ ಬಂದು? ಆ ರೋಗದ ಬಗ್ಗೆ ಗೊತ್ತಾಯ್ತಾ? ಹುಷಾರಾಗಿರಿ. ಒಬ್ಬರಿಂದ ಒಬ್ಬರಿಗೆ ಬರತ್ತಂತೆ. ಆಗಾಗ ಕೈ ತೊಳ್ಕೊ ಬೇಕು. ಮೂಗು, ಬಾಯಿ ಮುಚ್ಚುವ ಹಾಗೆ ಮಾಸ್ಕ್ ಹಾಕೋ ಬೇಕು. ಸದ್ಯಕ್ಕೆ ಆ ಸೀರೆ ಸೆರ್ಗನ್ನು ಮುಖಕ್ಕೆ ಅಡ್ಡ ಕಟ್ಕೋ. ಮಗ ಅಮೇರಿಕಾ ಇಂದ ಫೋನ್ ಮಾಡಿದ್ದ. ಅಲ್ಲೂ ಸಹ ಈ ಕರೋನ ದಿನೇ ದಿನೇ ಜಾಸ್ತಿನೇ ಆಗ್ತಿದ್ಯಂತೆ. ಹುಷಾರಾಗಿರಿ ಅಂತ ತುಂಬಾ ಹೇಳ್ದ. ಆದರೆ ಇಲ್ಲಿಯ ಜವಾಬ್ಧಾರಿ ಅವನಿಗೆ ಅರ್ಥವಾಗೋಲ್ಲ. ಅದಕ್ಕೆ ಇನ್ಮುಂದೆ ದಿನ ಮಧ್ಯಾಹ್ನ ಬಂದು ಬಿಡು ಎಂದರು. ದಿನಾ ಬರಬೇಕೆ? ಎಂದಳು ಗಂಗಮ್ಮ. ಹೌದು, ಮೊನ್ನೆ ದೇವಸ್ಥಾನದ ಟ್ರಸ್ಟ್ ನವರು ಮೀಟಿಂಗ್ ನಡೆಸಿ ಸರ್ಕಾರದ ಸೂಚನೆ ಬಂದ ತಕ್ಷಣ ದೇವಸ್ಥಾನವನ್ನು ಮುಚ್ಚಬೇಕಾಗಬಹುದು. ಆದ್ರಿಂದ ಇಬ್ಬರು ಅರ್ಚಕರು ಮಾತ್ರ ಮುಂಜಾವಿನಲ್ಲಿ ಹಿಂಬದಿಯ ದ್ವಾರದಿಂದ ದೇವಸ್ಥಾನಕ್ಕೆ ಹೋಗಿ ಅಭಿಷೇಕ, ಪೂಜೆ, ನೈವೇದ್ಯ ಮಾಡಿ ಬರುವುದು ಎಂಬ ಮಾತಾಗಿದೆ. ನೀನು ಇಲ್ಲೇ ಪಕ್ಕದ ಬೀದಿಯಲ್ಲಿ ಇರುವುದರಿಂದ ಮದ್ಯಾಹ್ನ ಈ ವೇಳೆಗೆ ಬಂದು ಒಂದಿಷ್ಟು ಅಕ್ಕಿ ಆರಿಸೋದು, ಕಾಯಿ ಸುಲಿಯೋದು, ಬೆಲ್ಲ ಕುಟ್ಟಿ ಪುಡಿ ಮಾಡಿ ಕೊಡೋದು ಹೀಗೆ ಒಂದಿಷ್ಟು ಕೆಲಸ ಮಾಡಿಕೊಟ್ರೆ ನನಗೆ ಸಹಾಯ ಆಗುತ್ತೆ. ಗುಡಿಯಲ್ಲಿ ಇರುವ ಎಲ್ಲಾ ದೇವರಿಗು ನೈವೇದ್ಯಕ್ಕೆ ಇಲ್ಲಿಂದಲೇ ಮಾಡಿ ಕಳಿಸಬೇಕಾಗಿದೆ ಎಂದರು. ಗಂಗಮ್ಮಳು ದೇವಸ್ಥಾನ ಮುಚ್ಚುವ ವಿಷಯ ಕೇಳಿ ಒಂದು ನಿಮಿಷ ಅವಳ ವ್ಯಾಪಾರದ ಬಗ್ಗೆ ಯೋಚಿಸಿ, ಮನಸ್ಸಿನಲ್ಲೇ 'ಶಿವಾ, ಎನ್ ಗತಿಯಪ್ಪ?' ಎಂದುಕೊಂಡಳು ನಂತರ 'ಸರಿ ಅಮ್ಮ ಬರ್ತೀನಿ ಎಂದು ಹೇಳಿ, ಅಲ್ಲೇ ಮೂಟೆಯಲ್ಲಿದ್ದ ಅಕ್ಕಿಯನ್ನು ಆರಿಸಲು ಮರಕ್ಕೆ ಹಾಕಿಕೊಂಡಳು.

ಸಂಜೆ ಅಂಗಡಿಯಲ್ಲಿ ಹೂವನ್ನು ಕಟ್ಟುತ್ತಾ ಕುಳಿತ್ತಿದ್ದ ಗಂಗಮ್ಮನ ಬಳಿ ಅವಳ ಮಗ ರಾಜು ಬಂದು, ಅಮ್ಮ, ಎರಡು ಮೂರು ಬುಟ್ಟಿ ವ್ಯಾಪಾರವಾಗೋದೆ ಕಷ್ಟವಾಗ್ತಿದೆ. ಸುಮ್ನೆ ಜಾಸ್ತಿ ಹೂವು ಕಟ್ಟಿ, ಬುಟ್ಟಿ ರೆಡಿ ಮಾಡಿಡ್ಬೇಡ ಅಂದ. ಶಾಲೆಗಳು ಮುಚ್ಚಬೇಕು ಎಂಬ ಆದೇಶ ಬಂದಿದ್ಯಂತೆ ಅದಕ್ಕೆ ಇಂದು ಶಾಲೆಯಲ್ಲಿ ಮೇಷ್ಟ್ರು ನನಗೆ ಓದಲು ಅವರ ಬಳಿ ಇದ್ದ ಕೆಲವು ಪುಸ್ತಕಗಳನ್ನು ಕೊಟ್ಟಿದ್ದಾರೆ. ಓದ್ಕೋತಾ ಇರು, ಮುಂದಿನ ವರ್ಷ ಹತ್ತನೇ ಕ್ಲಾಸು, ಸಮಯ ಹಾಳುಮಾಡ್ಬೇಡ ಅಂತ ಹೇಳಿದ್ದಾರೆ. ನನಗೆ ಅರ್ಥವಾಗದೆ ಇರೋದನ್ನ ಒಂದು ಕಡೆ ಬರೆದು ಇಟ್ಕೊಂಡಿದ್ರೆ ಮುಂದಿನ ಸಲ ಸಿಕ್ಕಾಗ ಹೇಳ್ಕೊಡ್ತೀನಿ ಅಂದಿದ್ದಾರೆ ಎಂದು ಹೇಳಿ ಬುಟ್ಟಿಗಳನ್ನು ಹೊತ್ತು ದೇವಸ್ಥಾನದ ಮುಂಭಾಗಕ್ಕೆ ಹೊರಟ. ಇತ್ತ ಪಂಕಜಳು, ಗಂಗೂ ನಾಡಿದ್ದಿನಿಂದ ಲಾಕ್ಡೌನ್ ಅಂತೆ. ಈಗಷ್ಟೇ ಟಿವಿ ಯಲ್ಲಿ ಹೇಳುದ್ರು ಅಂತ ವಿಷಯ ತಿಳಿಸಿದ್ಲು.

ಲಾಕ್ಡೌನ್ ಶುರುವಾಗಿ ಒಂದೆರಡು ದಿನ ಕಳಿಯಿತು. ಬೇಗ ಎದ್ದು ನದಿಗೆ ಹೋಗಿ ಸ್ನಾನ ಮಾಡಿ, ನಂತರ ಮನೆಯ ಹಿತ್ತಲಲ್ಲಿದ್ದ ಹೂವ್ಗಳನ್ನು ಕುಯ್ಯೋದು ರಾಜುವಿನ ಪ್ರತಿನಿತ್ಯದ ಕೆಲಸವಾಗಿತ್ತು. ಆದರೆ ಗ್ರಾಮ ಪಂಚಾಯತಿ ಅವರು ನದಿಯ ಬಳಿ ಯಾರು ಹೋಗಬಾರದೆಂದು ಅಡ್ಡ ಕಟ್ಟಿದ್ದರು. ಆದರಿಂದ ರಾಜು ಮನೆಯಲ್ಲೇ ಸ್ನಾನಮಾಡಿ ಹಿತ್ತಲಿಗೆ ಹೋದ. ಆ ಹೂಗಳ ರಾಶಿ ನೋಡಿ ಅವನಿಗೆ ಅದನ್ನು ಹೇಗಾದರೋ ಮಾಡಿ ಗುಡಿಯಲ್ಲಿನ ದೇವರ ಪೂಜೆಗೆ ಅರ್ಪಿಸಬೇಕು ಎಂಬ ಮನಸ್ಸಾಯಿತು. ಅವನ ಅಮ್ಮನ ಬಳಿ ಬಂದು, ಅಮ್ಮ ನೀನು ಹೇಳಿದ ಹಾಗೆ ಗುಡಿಯಲ್ಲಿ ದೇವರ ಪೂಜೆ ನಿಂತಿಲ್ಲ. ಇಷ್ಟು ದಿನ ಹೂವನ್ನು ಜನರಿಗೆ ಮಾರುತ್ತಿದ್ದೆವು. ಈಗಲಾದರೋ ಒಂದು ಅವಕಾಶ ಸಿಕ್ಕಿತೆಂದು ಭಾವಿಸಿ ದೇವರಿಗೆ ಹೂವನ್ನು ಹಾಗೆಯೇ ಅರ್ಪಿಸೋಣ ಎಂದನು. ಇದನ್ನು ಕೇಳಿಸಿಕೊಂಡ ಗಂಗಮ್ಮಳಿಗೆ ಮಗನ ಮೇಲೆ ಅಭಿಮಾನ ಹೆಚ್ಚಾಯ್ತು. ಇಷ್ಟು ದಿನ ನಿನ್ನನ್ನು ಬರಿ ಬುದ್ಧಿವಂತ ಎಂದು ಭಾವಿಸಿದ್ದೆ ಆದರೆ ನಿನಗೆ ಒಳ್ಳೆಯ ಮನಸ್ಸು ಸಹ ಇದೆ. ಹಾಗೆ ಮಾಡು ಎಂದಳು. ರಾಜು ಪ್ರತಿನಿತ್ಯ ಸೂರ್ಯೋದಯಕ್ಕೆ ಮೊದಲೇ ಹೋಗಿ ಒಂದು ದೊಡ್ಡ ಬೆತ್ತದ ಬುಟ್ಟಿ ಪೂರ್ತಿ ಹೂಗಳನ್ನು ದೇವಸ್ಥಾನದ ಹಿಂಬದಿಯ ಬಾಗಿಲ ಬಳಿ ಇಟ್ಟು ಬರುತ್ತಿದ್ದನು. ಇಬ್ಬರು ಅರ್ಚಕರು ಮಾತ್ರ ದೇವಸ್ಥಾನಕ್ಕೆ ಹೋಗುತ್ತಿದ್ದರು. ಈ ಹೂವಿನ ಬುಟ್ಟಿಯಲ್ಲಿರುವ ಹೂವನ್ನು ತೆಗೆದುಕೊಂಡು ಹೋಗುತ್ತಿದ್ದರು. ಇಂತಹ ಸಮಯದಲ್ಲೂ ಯಾರೊ ಇಷ್ಟೊಂದು ಹೂವು ತಂಡಿಟ್ಟು ಹೋಗುತ್ತಾರೋ? ಪುಣ್ಯಾತ್ಮರು ಅಂತ ಹೇಳಿ ಅರ್ಚಕರು ಅವರವರಲ್ಲೇ ಮಾತನಾಡಿಕೊಂಡರು. ಒಟ್ಟಿನಲ್ಲಿ ರಾಜು ಒಂದು ದಿನವೂ ತಪ್ಪಿಸದ ಹಾಗೆ ಈ ಕೆಲಸ ಮುಂದುವರೆಸಿದ. ವ್ಯಾಪಾರದ ಕೆಲಸವಿಲ್ಲದಿದ್ದುದರಿಂದ ಅವರ ಶಾಲೆಯಲ್ಲಿ ಮೇಷ್ಟ್ರು ಕೊಟ್ಟ ಪುಸ್ತಕಗಳನ್ನು ಓದಿಕೊಳ್ಳುತ್ತಿದ್ದ.

ಇತ್ತ ಗಂಗಮ್ಮಳು ಸಾವಿತ್ರಮ್ಮನವರ ಮನೆಗೆ ಪ್ರತಿದಿನ ಮಧ್ಯಾಹ್ನ ಹೋಗಿ ಅವರು ಹೇಳಿದ ಕೆಲಸ ಮಾಡಿ ಕೊಡುತ್ತಿದ್ದಳು. ಮನಸ್ಸಿನೊಳಗೆ ಮಾತ್ರ ಅವಳಿಗೆ ವ್ಯಾಪಾರ ಇಲ್ಲದಿರುವ ನೋವು ಇದ್ದಿತು. ಆದರೂ ಕೂಡಿಟ್ಟಿರುವ ಹಣದಲ್ಲೇ ಎಲ್ಲವನ್ನು ನಿಭಾಯಿಸುತ್ತಿದ್ದಳು. ಹೀಗೆ ಒಂದು ದಿನ ಕೊಬ್ಬರಿ ಗಿಟಕುಗಳನ್ನು ಕತ್ತರಿಸುತ್ತಾ ಇದ್ದ ಗಂಗಮ್ಮಳ ಬಳಿ ಬಂದ ಸಾವಿತ್ರಮ್ಮ ತೊಗೋ ಈ ಹತ್ತು ಸಾವಿರ ರೂಪಾಯಿ. ನನ್ನ ಮಗ ಅಮೇರಿಕಾ ಇಂದ ಕಳಿಸಿ, ನಮ್ಮೂರಿನಲ್ಲಿ ಯಾರಿಗಾದ್ರೋ ಕಷ್ಟದಲ್ಲಿ ಇರುವವರಿಗೆ ಈ ಕರೋನ ಸಮಯದಲ್ಲಿ ಕೊಡಮ್ಮ ಎಂದು ಹೇಳಿ ಕಳಿಸಿದ್ದಾನೆ ಎಂದರು. ಅಯ್ಯೋ ಬೇಡ, ನೀವು ನನ್ನ ಕೆಲಸಕ್ಕೆ ಕೊಡುವ ಹಣವೇ ಸಾಕು ಎಂದಳು ಗಂಗಮ್ಮ. ಸುಮ್ಮನೆ ತೊಗೋ, ನಿನಗೆ ಈಗ ಅಂಗಡಿ ವ್ಯಾಪಾರವು ಇಲ್ಲ. ಮಗನನ್ನು ಓದಿಸಿ ನೋಡಿಕೊಳ್ಳಬೇಕು ಎಂದು ಹೇಳಿ ಅವಳ ಮುಂದೆ ಇಟ್ಟು ಹೋದರು. ಸರಿ ಎಂದು ಆ ಹಣವನ್ನು ತೆಗೆದುಕೊಳ್ಳುವ ಸಮಯಕ್ಕೆ ಶ್ಯಾಮರಾಯರು 'ಅದ್ಯಾರೋ ಪುಣ್ಯಾತ್ಮರು ದಿನ ದೇವಸ್ಥಾನದ ಬಳಿ ಹೂವಿಟ್ಟು ಹೋಗ್ತಾರೆ' ಅಂತ ಸಾವಿತ್ರಮ್ಮನವರಿಗೆ ಹೇಳೋದನ್ನ ಕೇಳುಸ್ಕೊಂಡ ಗಂಗಮ್ಮ ಮನಸ್ಸಿನಲ್ಲೇ ಅಂದುಕೊಂಡ್ಲು 'ಪ್ರತಿಫಲಾಪೇಕ್ಷೆ ಇಲ್ಲದೆಯೇ ಪ್ರತಿಫಲ ದೊರಕಿತಲ್ಲಾ' ಎಂದು.