Click here to Download MyLang App

ಪುಟ್ಟಿಯ ಸರ - ಬರೆದವರು : ಡಾ. ಅಶೋಕ್.‌ ಕೆ. ಆರ್‌

ಸೂರ್ಯ ಮುಳುಗುವ ಸಮಯದಲ್ಲಿ ಚಂದ್ರ ಚಿಂತನೆಗಳ ಚಿಂತೆಯಲ್ಲಿ ಬೇಯುತ್ತಿದ್ದ. ಇವತ್ತಾಗಲೇ ಇಪ್ಪತ್ತೆಂಟು. ಇನ್ನು ಎರಡು ದಿನ ಕಳೆದರೆ ಈ ತಿಂಗಳು ಮಗುಚಿಬೀಳುತ್ತದೆ. ಹೊಸ ತಿಂಗಳಿನ ಆರಂಭವೆಂದರೆ ಚಂದ್ರನಿಗೆ ನಡುಕ. ಅಪ್ಪನನ್ನು ಮೈಸೂರಿಗೆ ಕರೆದೊಯ್ಯಬೇಕು, ಡಾಕ್ಟರಿಗೆ ತೋರಿಸಲು. ತಿಂಗಳಿಗಾಗುವಷ್ಟು ಮಾತ್ರೆ ಬರೆದುಕೊಡುತ್ತಾರೆ. ಅವರ ಫೀಸು, ಔಷಧಿಗಳಿಗಾಗುವ ದುಡ್ಡು, ಹೋಗಿಬರುವ ಖರ್ಚು.....ಇವುಗಳ ಬಗ್ಗೆ ಯೋಚಿಸಿದಷ್ಟೂ ವಿಹ್ಹಲಗೊಳ್ಳುತ್ತಿದ್ದ. ಛೇ! ಹಾಳಾದ ಅಪ್ಪ ......ಸತ್ತಾದರೂ ಹೋಗಬಾರದಿತ್ತೇ ಎಂಬಾಲೋಚನೆ ಸುಳಿದು ಥೂ ಥೂ...ಇದೇನು ನನ್ನ ಮನಸ್ಥಿತಿ ಹೆತ್ತಪ್ಪನನ್ನೇ ಸಾಯಿಸುವಷ್ಟು ಕೆಟ್ಟುಹೋಗಿದೆಯಲ್ಲ ಎಂದು ತಲೆಕೊಡುವುವುದು ಅವನ ದಿನಚರಿಯ ಭಾಗವೇ ಆಗಿತ್ತು.ಇವುಗಳ ಮಧ್ಯೆ ಉಳುಮೆ ಮಾಡಲು, ಬೀಜ ಖರೀದಿಸಲು, ಔಷಧಿ ಸಿಂಪಡಿಸಲು ಹಣದ ಅಭಾವ. ಕಳೆದ ವರ್ಷ ಬ್ಯಾಂಕಿನಲ್ಲಿ ವ್ಯವಸಾಯಕ್ಕಾಗಿ ಮಾಡಿದ ಸಾಲವೆಲ್ಲ ಅಪ್ಪನ ಚಿಕಿತ್ಸೆಗೇ ವ್ಯಯವಾಗಿತ್ತು. ಅದನ್ನಿನ್ನೂ ತೀರಿಸಲಾಗಿರಲಿಲ್ಲ. ಬ್ಯಾಂಕಿನಿಂದ ನೋಟೀಸೂ ಬಂದಿತ್ತು, ಎರಡು ಬಾರಿ. ಹತ್ತಿರದಲ್ಲಿ ಯಾವ ಚುನಾವಣೆಯೂ ಇಲ್ಲ. ನಿರೀಕ್ಷೆಯಂತೆ ಸರಕಾರ ಬೀಳುವಂತಾಗಿ ಚುನಾವಣೆಯ ಗುಮ್ಮವಾದರೂ ಬಂದಿದ್ದರೆ ಸಾಲಮನ್ನಾ ಮಾಡುತ್ತಿದ್ದರೋ ಏನೋ?! ಊರಿನಲ್ಲಿ ನನಗೆ ಸಾಲ ಕೊಡುವವರ್ಯಾರಾದರೂ ಉಳಿದಿದ್ದಾರಾ ಎಂದು ಗುಣಿಸುತ್ತಿದ್ದಾಗ ‘ಚಂದ್ರಣ್ಣ.....ಚಂದ್ರಣ್ಣ’ ಎಂದು ಯಾರೋ ದೂರದಲ್ಲಿ ಕೂಗಿದ್ದು ಕೇಳಿಸಿತು. ಸೂರ್ಯನಿಗಭಿಮುಖವಾಗಿ ಹೊಂಗೆ ಮರದ ಕೆಳಗೆ ಕುಳಿತ್ತಿದ್ದವನಿಗೆ ವಿರುದ್ಧ ದಿಕ್ಕಿನಿಂದ ಬಂದ ಧ್ವನಿಯ ಒಡೆಯ ಕಾಣಲಿಲ್ಲ. ‘ಚಂದ್ರಣ್ಣ.....ಚಂದ್ರಣ್ಣ....’ ಎಂಬ ಕೂಗು ಹತ್ತಿರವಾಗುತ್ತಿದ್ದಾಗ ಮರದಿಂದೀಚೆ ಸರಿದು ನಿಂತು ನೋಡಿದ. ಆಲೆಮನೆ ಪ್ರಕಾಶನ ಮೊದಲನೇ ಮಗ ರಾಜ ಓಡಿಬರುತ್ತಿದ್ದ. ಜೊತೆಗೆ ಅವನ ವಾರಿಗೆಯದೇ ಒಂದು ಹುಡುಗಿ. ಯಾರೆಂದು ಗುರುತಿಸಲಾಗಲಿಲ್ಲ. ಬಹುಶಃ ಬಾಣಂತನಕ್ಕೆ ತವರಿಗೆ ಬಂದಿರುವ ಪ್ರಕಾಶನ ಅಕ್ಕನ ಮಗಳಿರಬೇಕು. ನೋಡಿ ಬಹಳ ವರ್ಷವಾಗಿದ್ದರಿಂದ ಗುರುತು ಸಿಗುತ್ತಿಲ್ಲವೇನೋ ಎಂದುಕೊಂಡ. ಅವರೆಡೆಗೆ ಬಿರುಸಿನಿಂದ ಹೆಜ್ಜೆ ಹಾಕುತ್ತಿದ್ದ ಚಂದ್ರನಿಗೆ ‘ನಮ್ಮಕ್ಕನ ಹೆರಿಗೆ ವೇಳೆಗಾದರೂ ಐದು ಸಾವಿರ ತೀರಿಸಪ್ಪ’ ಎಂದು ಪ್ರಕಾಶ ಹೇಳಿದ್ದು ನೆನಪಾಗೆ ಹೆಜ್ಜೆಗಳು ಭಾರವಾದವು. ಹಣ ಕೇಳೋದಿಕ್ಕೆ ಕಳಿಸಿದ್ದಾನಾ? ಇರಲಿಕ್ಕಿಲ್ಲ. ಪ್ರಕಾಶ ಮತ್ತು ಚಂದ್ರ ಒಟ್ಟೊಟ್ಟಿಗೆ ಓದಿ ಬೆಳೆದವರು. ಚಂದ್ರನ ಮನೆಯ ಕಷ್ಟ ನೋಡಿರುವವನು. ಮನೆ ಕಡೆ ಪ್ರಕಾಶನಿಗೆ ಸದ್ಯಕ್ಕೆ ಅಂಥ ಅನಾನುಕೂಲವೇನಿಲ್ಲ. ಈಗಿರುವಾಗ ವ್ಯವಸಾಯ ಆರಂಭಿಸಬೇಕಾದ ಹೊತ್ತಿನಲ್ಲಿ ಹಣ ಹಿಂದಿರುಗಿಸಲು ಒತ್ತಾಯಿಸಲಾರ ಎಂದು ಸಮಾಧಾನಗೊಳ್ಳುತ್ತಿರುವಾಗ ಇಬ್ಬರೂ ಹತ್ತಿರ ಬಂದರು. “ಯಾಕೋ ರಾಜ? ಇಷ್ಟು ಅವಸರದಲ್ಲಿದ್ದೀಯ. ಯಾವುದೋ ಹುಡುಗೀನ ಬೇರೆ ಓಡಿಸಿಕೊಂಡು ಬರುತ್ತಿದ್ದೀಯ” ನಗುತ್ತಾ ಕೇಳಿದ. ಆರೆಂಟು ತಿಂಗಳ ಹಿಂದಷ್ಟೇ ಮೈನೆರೆದಿದ್ದ ಹುಡುಗಿ ನಾಚಿ ರಾಜನ ಹಿಂದೆ ಅವಿತಳು. ಥೇಟು ಪ್ರಕಾಶನ ಅಕ್ಕನದೇ ರೂಪು. ನಾಚಲೂ ಪುರುಸೊತ್ತಿಲ್ಲದವನಂತೆ ರಾಜ “ಥೂ ಹೋಗಣ್ಣ. ಅಲ್ಲಿ .....ಮೇನ್ ರೋಡ್.......ಕೆರೆ.......ವ್ಯಾನು....ಎಲ್ಲಾ ಹೋಗಿಬಿಟ್ಟವರೆ” ಮಧ್ಯೆ ಮಧ್ಯೆ ತಡೆದು ಓಡಿದುದಕ್ಕೆ ಆದ ಆಯಾಸವನ್ನು ಪರಿಹರಿಸಲು ಉಸಿರೆಳೆದುಕೊಳ್ಳುತ್ತಾ ಉದ್ಗರಿಸಿದ. ಚಂದ್ರನಿಗೆ ಸ್ಥೂಲವಾಗಿ ವಿಷಯ ತಿಳಿದರೂ ಪೂರ್ಣ ಗ್ರಹಿಕೆಗೆ ಬರಲಿಲ್ಲ. “ಅದೇನು ಸ್ವಲ್ಪ ಸರಿಯಾಗಿ ತಿಳಿಸೋ” ಎಂದ. ಒಂದರೆಗಳಿಗೆ ಸುಮ್ಮನಾಗಿ ಶ್ವಾಸಕೋಶ ಸಮಸ್ಥಿತಿಗೆ ಬರುವವರೆಗೆ ಕಾದು “ಚಂದ್ರಣ್ಣ, ಅಪ್ಪ ನಿಮ್ಮನ್ನ ಅರ್ಜೆಂಟಾಗಿ ಕರ್ಕೊಂಡು ಬಾ ಅಂತ ಕಳಿಸವುರೆ. ನೆರ್ವಿಗೋ ಮದುವೆಗೋ ಹೋಗಿ ವಾಪಸಾಗ್ತಿದ್ದ ವ್ಯಾನು ಕೆರೆಗೆ ಬಿದ್ದೋಗದೆ. ನಾಕೈದು ಜನರನ್ನು ಬಿಟ್ಟರೆ ಉಳಿದವರೆಲ್ಲ ಸತ್ತೋಗವ್ರೇ. ಕೆರೆಯಿಂದ ಹೆಣಗಳನ್ನೇತೋದಕ್ಕೆ ನೀವು ಬಿರ್ನೆ ಬರ್ಬೇಕಂತೆ”. ಹಾಳಾದ್ ಸರ್ಕಾರ. ರಸ್ತೆ ರಿಪೇರಿ ಮಾಡಿಸ್ತೀವಿ ಮಾಡಿಸ್ತೀವಿ ಎಂದ್ಹೇಳಿ ಮೂರು ಎಲೆಕ್ಷನ್ ಮುಗಿದುಹೋಯ್ತು. ಇವತ್ತಂದೂ ಸೇರಿ ಎಷ್ಟನೇ ಆ್ಯಕ್ಸಿಡೆಂಟೋ? ಕೆರೆ ಭರ್ತಿಯಾಗಿದ್ದಾಗ ಯಾರದ್ರೂ ಬಿದ್ದು ಸತ್ತರೆ ಅವರ ಹೆಣ ತೆಗೆಯುವಷ್ಟರಲ್ಲಿ ಬದುಕಿದವರ ಹೆಣ ಬಿದ್ದುಹೋಗುತ್ತಿತ್ತು. ಘಂಟೆಗಟ್ಟಲೆ ನೀರಿನ ಮೇಲೆ ಮಲಗುತ್ತದ್ದ ಸುಸ್ತಿಲ್ಲದೇ ಈಸುತ್ತಿದ್ದ ಚಂದ್ರನ ನೆರವೇ ಬೇಕು. ಮೈಸೂರಿನಿಂದ ಸರಕಾರದ ಜನ ಬಂದು ತಲುಪುವಷ್ಟರಲ್ಲಿ ಚಂದ್ರ ಚಕಚಕನೆ ದೇಹವನ್ನೊರಗೆಳೆಯುತ್ತಿದ್ದ. ಎಷ್ಟೇ ಬಿರುಸಾಗಿ ನಡೆದರೂ ಹತ್ತು ನಿಮಿಷವಾದರೂ ಬೇಕು ಕೆರೆ ತಲುಪಲು. “ಗೌರ್ನಮೆಂಟೋರು ಯಾರಾದ್ರೂ ಬಂದವ್ರಾ?” ಕೇಳಿದ ಚಂದ್ರ. “ಇನ್ನೂ ಇಲ್ಲ. ದಾರೀಲೂ ಎಲ್ಲೋ ಆ್ಯಕ್ಸಿಡೆಂಟಾಗಿ ಟ್ರಾಫಿಕ್ಜಾಮಾಗಿದೇಂತ ಹೇಳ್ತಿದ್ರು”. “ಕೆರೆಗೆ ಹೆಂಗ್ ಬಿತ್ತಂತೆ ಗಾಡಿ”. “ಊರವರ್ಯಾರು ನೋಡಿದಂಗಿಲ್ಲ. ಮೂರು ವ್ಯಾನಿನಲ್ಲಿ ಹೋಗ್ತಿದ್ರಂತೆ. ಮುಂದಿನ ವ್ಯಾನಲ್ಲಿ ಗಂಡು ಹೆಣ್ಣು ಇದ್ರಂತೆ. ಎರಡನೇ ವ್ಯಾನು.....ಅದೇ ಈಗ ಕೆರೆಗೆ ಬಿದ್ದಿರೋದು....ಆ ವ್ಯಾನಲ್ಲಿ ಹೆಂಗಸು ಮಕ್ಕಳೇ ಇದ್ರಂತೆ. ಡ್ರೈವರ್ ಕುಡಿದಿದ್ನೋ ಅಥವಾ ಗಾಡೀನೇ ಕೈಕೊಡ್ತೋ ಗೊತ್ತಿಲ್ಲ, ವ್ಯಾನು ಸೀದಾ ಹೋಗಿ ಕೆರೆಗೆ ಮಗುಚಿಬಿತ್ತಂತೆ. ಬೇರೆ ವ್ಯಾನವ್ರು ಕೆಳಗಿಳಿದು ಬರೋಷ್ಟರಲ್ಲಿ ವ್ಯಾನು ಪೂರಾ ನೀರೊಳಗೆ ಹೋಗಿಬಿಟ್ಟಿತ್ತಂತೆ. ಅವರಲ್ಲೇ ಈಜು ಗೊತ್ತಿರೋರು ನೀರಿಗಿಳಿದು ನಾಲ್ಕೈದು ಜನರನ್ನು ಉಳಿಸಿದ್ರಂತೆ. ಒಂದು ಹದಿನೈದು ಜನ ಸತ್ತೋಗವ್ರೇ ಅಂತಿದ್ರು. ಊರವರೆಲ್ಲ ಅಲ್ಲೇ ಸೇರವ್ರೆ. ಒಂದಷ್ಟು ಬಾಡೀನ ಹೊರಗೆ ತೆಗೆದ್ರು. ಕೆರೆಲೀ ನೀರು ಜಾಸ್ತಿ ಇರೋದ್ರಿಂದ ಅವರಿಗೂ ಹೆಚ್ಚು ಆಳಕ್ಕೆ ಹೋಗೋದಿಕ್ಕೆ ಭಯ. ಅದಿಕ್ಕೆ ಅಪ್ಪ ನಿಮ್ಮನ್ನು ಕರೆಯೋದಿಕ್ಕೆ ಫೋನ್ ಹಚ್ಚಿದ್ರು. ನೀವ್ಯಾಕೋ ರಿಸೀವೇ ಮಾಡ್ತಿಲ್ಲ ಅಂತ ನನ್ನನ್ನು ಕಳಿಸಿದ್ರು. ಮನೇಲಿ ಹೇಳಿದ್ರು ಬೆಳಿಗ್ಗೆ ಗದ್ದೆ ಹತ್ರ ಹೋದೌನು ಇನ್ನೂ ಬಂದಿಲ್ಲಾಂತ. ಓಡಿ ಬಂದೆ ಅದಿಕ್ಕೆ” ಎಂದ. “ಡ್ರೈವರ್ರೂ ಕ್ಲೀನರ್ರೂ ಅದ್ಯಾವುದೋ ಮಾಯದಲ್ಲಿ ಓಡಿಹೋಗವ್ರಂತೆ ನೋಡಣ್ಣ” ಅಂತ್ಹೇಳುವುದನ್ನು ಮರೆಯಲಿಲ್ಲ.
* * *
“ಅಲ್ರೀ ನಿಮಗೆ ಮೊಬೈಲಿಗೆ ದುಡ್ಡಿರುತ್ತೆ. ಅಪ್ಪನ್ನ ಆಸ್ಪತ್ರೆಗೆ ಕರೆತರೋದಿಕ್ಕೆ ದುಡ್ಡಿರಲ್ಲ” ಡಾಕ್ಟರ್ ಸುದರ್ಶನಮೂರ್ತಿ ಅಪ್ಪನ ನಾಡಿ ನೋಡುತ್ತಾ ರೇಗಿದಾಗ ಫೋನ್ ಕರೆಯನ್ನು ಕಟ್ ಮಾಡುತ್ತ ಪ್ಯಾಲಿ ನಗು ಚೆಲ್ಲಿದ ಚಂದ್ರ. ಅಪ್ಪನಿಗೆ ಲಕ್ವ ಹೊಡೆದು ಎಡಭಾಗ ಪೂರ್ತಿ ಬಿದ್ದು ಹೋಗಿ ಹದಿನೈದು ದಿನದ ಮೇಲಾಗಿತ್ತು. ಲಕ್ವ ಹೊಡೆದ ದಿನ ಊರಿನಲ್ಲಿರುವ ಪುಟ್ಟ ಆಸ್ಪತ್ರಯಲ್ಲಿ ತೋರಿಸಿದ್ದ. ಅವರು ಆ ತುರ್ತಿನಲ್ಲಿ ಮಾಡಬೇಕಿದ್ದ ಚಿಕಿತ್ಸೆ ಮಾಡಿ ಮರುದಿನವೇ ಮೈಸೂರಿನ ದೊಡ್ಡಾಸ್ಪತ್ರೆಗೆ ಕೊಂಡೊಯ್ಯಲು ತಿಳಿಸಿದ್ದರು. ನೆಂಟರಿಷ್ಟರಿಗೆಲ್ಲ ವಿಷಯ ತಿಳಿದು ಪ್ಚೂ ಪ್ಚೂ ಎಂದು ಕನಿಕರಿಸಿ ತಲೆಗೆರಡರಂತೆ ಸಲಹೆಗಳನ್ನು ನೀಡಿ ಮೈಸೂರಿಗೆ ಹೋಗುವ ತೀರ್ಮಾನಕ್ಕೆ ಎಳ್ಳುನೀರು ಬಿಟ್ಟು ಎರಡೂರಾಚೆಯ ನಾಟಿ ವೈದ್ಯರೊಬ್ಬರ ಬಳಿ ಅಪ್ಪನನ್ನು ಕರೆದುಕೊಂಡು ಹೋಗಿದ್ದ. ಅಲ್ಲಿ ಮತ್ತೊಮ್ಮೆ ಲಕ್ವ ಹೊಡೆದು ಮಾತೂ ತೊದಲಲಾರಂಭಿಸಿದ ಮೇಲೆ ಗಾಬರಿ ಬಿದ್ದು ಮತ್ತೆ ಊರಿನಾಸ್ಪತ್ರೆಗೆ ಹಿಂದಿರುಗಿ ಆಸ್ಪತ್ರೆಯವರ ಕೈಲಿ ಬೈಸಿಕೊಳ್ಳಬೇಕಾಯಿತು. ‘ಮೊದಲು ಮೈಸೂರಲ್ಲಿ ತೋರಿಸಿ. ಸ್ಕ್ಯಾನ್ ಮಾಡಿ ನೋಡ್ತಾರೆ. ಆ ನಾಟಿ ವೈದ್ಯರು ತೈಲ ತಿಕ್ಕಿ ಮಾಡೋ ಮಸಾಜು ಪ್ರಯೋಜನವಿಲ್ಲದ್ದು ಅಂತೇನೂ ತಿಳೀಬೇಡಿ. ನಾವು ಕೊಡೋ ಮಾತ್ರೆ ಜೊತೆಗೆ ಮಸಾಜೂ ಮಾಡಿಸಿದರೆ ಬೇಗ ಗುಣಮುಖವಾದರೂ ಆಗಬಹುದು’ ಎಂದಿದ್ದರು.
“ಸರಕಾರಿ ಆಸ್ಪತ್ರೆಗೆ ಸೇರಿಸೋ ಬದಲು ಸೀದಾ ಸ್ಮಶಾನಕ್ಕೆ ಕರೆದುಕೊಂಡು ಹೋಗಿ ಮಲಗಿಸಲಿಕ್ಕೆ ಹೇಳು ನಿನ್ನ ಮಗನಿಗೆ” ತೊದಲುತ್ತಲೇ ಹೇಳಿದ್ದರು ಅಪ್ಪ. ‘ಊರಲ್ಲಿರೋ ಆಸ್ಪತ್ರೆಯೇನು ಟಾಟಾ ಬಿರ್ಲಾದಂತ’ ಎಂದು ರೇಗಬೇಕೆನಿಸಿದರೂ ಚಟಪಟಾಂತ ಓಡಾಡುತ್ತಿದ್ದ ಅಪ್ಪ ಹಾಸಿಗೆಗೆ ಅಂಟಿಕೊಂಡಂತೆ ಮಲಗಿದ್ದ ಸ್ಥಿತಿಯನ್ನು ಕಂಡು ಬೇಸರದಲ್ಲಿ ಏನೂ ಮಾರುತ್ತರ ಕೊಡದೆ ಲಕ್ವ ಡಾಕ್ಟರ್ ಸುದರ್ಶನಮೂರ್ತಿಯವರ ನರ್ಸಿಂಗ್ ಹೋಮಿಗೆ ಕರೆದೊಯ್ದಿದ್ದ.
“ತಲೆ ಇದೆಯೇನ್ರೀ ನಿಮಗೆ. ಹದಿನೈದು ದಿನದಿಂದ ಏನು ಮಾಡ್ತಿದ್ರಿ? ಈಗ ಕರೆತರೋ ಬದಲು ಒಟ್ಟಿಗೇ ಸತ್ತಮೇಲೆ ಕರೆತರಬೇಕಿತ್ತು” ಸಿಡುಕಿನಿಂದ ಹೇಳಿದರು. ಆ ಕ್ಷಣಕ್ಕೆ ಹೊಳೆದಿದ್ದನ್ನು ಹೇಳಿದ “ದುಡ್ಡು ಹೊಂದಿಸೋದಿಕ್ಕೆ ಇಷ್ಟು ದಿನ ಆಯಿತು” ಎಂದು. ಚಂದ್ರ ಮಾತು ಮುಗಿಸುವಷ್ಟರಲ್ಲಿ ಅವನ ಮೊಬೈಲ್ ರಿಂಗಣಿಸಿತ್ತು. ಅದಕ್ಕೂ ಸಲ್ಲಬೇಕಾದ ಮಾತುಗಳನ್ನು ಸಲ್ಲಿಸಿದರು ಮೂರ್ತಿ.
ಹದಿನೈದು ದಿನ ಅಪ್ಪ ನರ್ಸಿಂಗ್ ಹೋಮಿನಲ್ಲಿದ್ದರು. ಸ್ಕ್ಯಾನಿಂಗು, ಔಷಧಿ, ನರ್ಸಿಂಗ್ ಹೋಮ್ ದುಡ್ಡೂ....ಕೈಯಲ್ಲೆಷ್ಟು ದುಡ್ಡಿದ್ದರೂ ಸಾಲದಾಗಿತ್ತು. ಒಂದಷ್ಟು ದುಡ್ಡು ಕಡಿಮೆ ಮಾಡುವಂತೆ ಕೇಳಲು ಮೂರ್ತಿಯವರ ಮನೆಗೆ ಹೋಗಿದ್ದ. ಟೆರೇಸಿನ ಮೇಲೆ ಉಯ್ಯಾಲೆ ಕುರ್ಚಿಯಲ್ಲಿ ಕುಳಿತು ಸಿಗರೇಟು ಸೇದುತ್ತಾ ಯಾವುದೋ ಪುಸ್ತಕ ಓದುತ್ತಿದ್ದರು. ಆಸ್ಪತ್ರೆಗೆ ಸಂಬಂಧಪಟ್ಟವರು ಮನೆಯವರೆಗೆ ಬರೋದು ನನಗಿಷ್ಟವಾಗುವುದಿಲ್ಲ ಎಂಬುದನ್ನು ಅವರ ಮುಖಭಾವವೇ ಹೇಳುತ್ತಿತ್ತು. ಬಂದ ವಿಷಯ ಹೇಳಿದ ಚಂದ್ರ. ಕೇಳಿ ಮುಗಿದ ಮೇಲೆ ಮುಗುಳ್ನಗುತ್ತ “ಅಲ್ಲಪ್ಪ ಚಂದ್ರ. ಲಲಿತ್ ಮಹಲ್ ಗೆ ಹೋಗಿ ಊಟ ಮಾಡಿ ಬಿಲ್ಲಲ್ಲಿ ಐವತ್ರುಪಾಯಿ ಕಡಿಮೆ ಮಾಡಿ ಅಂತ ಕೇಳಿದ್ರೆ ಒಪ್ತಾರಾ? ನನ್ನ ಫೀಸು ಇಷ್ಟು. ಅದನ್ನು ಕಟ್ಟು. ನನ್ಹತ್ರ ಯಾವುದಾದರೂ ಔಷಧಿಯ ಸ್ಯಾಂಪಲ್ ಇದ್ದರೆ ಕೊಟ್ಟು ಕಳಿಸಬಲ್ಲೆನೇ ಹೊರತು ಇನ್ಯಾವ ಫೀಸ್ನೂ ಕಡಿಮೆ ಮಾಡಲ್ಲ” ಕಡ್ಡಿಮುರಿದಂತೆ ಹೇಳಿದ್ದರು. ಹೇಳಿದ ಮಾತಿನಂತೆ ಎರಡು ತಿಂಗಳಿಗಾಗುವಷ್ಟು ಬಿ.ಪಿ ಮಾತ್ರೆ ಕೊಟ್ಟು ಕಳುಹಿಸಿದರು.
* * *
ಆಗ ಶುರುವಾದ ಸಾಲದ ಲೆಕ್ಕ ಮುಗಿಯುವುದಾದರೂ ಯಾವಾಗ ಎಂದು ಯೋಚಿಸುತ್ತಿದ್ದ ಚಂದ್ರ. ಬಿಪಿ, ಡಯಾಬಿಟೀಸೂ, ಲಕ್ವ, ಮಲಗೇ ಇರುತ್ತಿದ್ದರಿಂದ ಬೆನ್ನಿನ ಮೇಲಾಗುತ್ತಿದ್ದ ಗಾಯಕ್ಕೆ ಔಷಧಿ........ಮಾತ್ರೆಗೆ ದುಡ್ಡು ಸುರಿ ಸುರಿದೇ ಚಂದ್ರನಿಗೆ ಅಪ್ಪ ಇನ್ನೂ ಯಾಕಾದರೂ ಬದುಕಿದ್ದಾರೋ ಎಂದೆನಿಸಲು ಶುರುವಾಗಿದ್ದು. ಕೆರೆ ಇನ್ನೂ ಅಷ್ಟು ದೂರದಲ್ಲಿದ್ದಾಗಲೇ ಜನರ ಗಡಿಬಿಡಿಯ ಓಡಾಟ, ಸತ್ತ ನೆಂಟರಿಷ್ಟರ ಆಕ್ರಂದನ ಕೇಳಲಾರಂಭಿಸಿತು. ಅವರೆಲ್ಲರ ನಡುವೆ ದಾರಿ ಮಾಡಿಕೊಂಡು ಕೆರೆಯ ಬಳಿಗೆ ಬರುತ್ತಲೇ ‘ಚಂದ್ರ ಬಂದ’ ‘ಚಂದ್ರಣ್ಣ ಬಂದ’ ಎಂಬ ಗುಸುಗುಸು ಆರಂಭವಾಯಿತು. ಪ್ರಕಾಶ ಇವನ ಬಳಿಗೆ ಬಂದು “ಮೊಬೈಲ್ ಯಾಕಾದ್ರೂ ತೆಗೆದುಕೊಂಡಿದ್ದೀಯ ಗುರುವೇ? ನಡಿನಡಿ ಬೇಗ” ಎಂದು ವ್ಯಾನು ಬಿದ್ದಿದ್ದ ಜಾಗಕ್ಕೆ ಕರೆದುಕೊಂಡು ಹೋದ. ಆಗಲೇ ಹತ್ತನ್ನೆರಡು ಶವಗಳನ್ನು ಹೊರತೆಗೆದಿದ್ದರು. ಅವರ ಸಂಬಂಧಿಕರ ರೋದನ ಕಂಡ ಊರ ಜನರ ಕಣ್ಣಲ್ಲೂ ನೀರಾಡುತ್ತಿತ್ತು. ಮದುವೆ ಊಟ ಮುಗಿಸಿ ರೇಷ್ಮೆ ಸೀರೆಯಲ್ಲೇ ಪವಡಿಸಿದವರಂತೆ ಕಾಣುತ್ತಿದ್ದವರನ್ನು ನೋಡಿ ಚಂದ್ರನಿಗೆ ಬೇಸರವೆನಿಸಿದರೂ ಮನಃಸ್ಥಿತಿ ಸರಿಯಿಲ್ಲದಕ್ಕೋ ಇಂಥ ಅಪಘಾತಗಳನ್ನು ಪದೇಪದೇ ನೋಡುತ್ತಿದುದಕ್ಕೋ ದುಃಖವಾಗಲಿಲ್ಲ. “ಇನ್ನೂ ಎಷ್ಟು ಬಾಡಿ ತೆಗೀಬೇಕು” ಪ್ರಕಾಶನ ಕಡೆಗೆ ನೋಡುತ್ತಾ ಕೇಳಿದ. “ಇಬ್ಬರು ಮುದುಕೀರು, ಒಂದು ಹುಡುಗಿ, ಮತ್ತೊಂದು ಮಗು ಅಂತ ಹೇಳ್ತಾ ಇದ........”ನೀರಿಗಿಳಿದಿದ್ದ ಪೋಲೀಸರಿಬ್ಬರು ಮುದುಕಿಯೊಬ್ಬಳ ಶವವನ್ನು ನೀರಿನ ಮೇಲ್ಮೆಗೆ ತಂದಿದ್ದನ್ನು ಕಂಡು ಊರಿನ ಯುವಕರು ಅವರ ಸಹಾಯಕ್ಕೆ ಧಾವಿಸಿದರು. ಪೋಲೀಸರಿಬ್ಬರು ಶವದೊಡನೆ ನೀರಿನಿಂದ ಹೊರಬಂದವರೇ “ಉಸ್ಸಪ್ಪ! ನಮ್ಮ ಕೈಲಿ ಮತ್ತೆ ನೀರಿಗಿಳಿಯುವಷ್ಟು ಶಕ್ತಿಯಿಲ್ಲ” ಎನ್ನುತ್ತ ನೆಲಕ್ಕೆ ಒರಗಿದರು. ಚಂದ್ರ ಬಟ್ಟೆ ಕಳಚಿ ಕೆರೆಗೆ ದುಮುಕುವಷ್ಟರಲ್ಲಿ ಮೂಲೆಮನೆ ಶೇಖರ ಹುಡುಗಿಯ ಶವವನ್ನು ಎಳೆದುತಂದ. ಶೇಖರನೂ ಏದುರಿಸುಬಿಡುತ್ತಿದುದನ್ನು ನೋಡಿ ಚಂದ್ರನಿಗೆ ಅಳುಕುಂಟಾಯಿತು. ನೀರಿನ ಒತ್ತಡ ತುಂಬಾನೇ ಇರಬೇಕು ಇವತ್ತು. ನಿನ್ನೆಯಷ್ಟೇ ಹುಣ್ಣಿಮೆ. ಬೆಳಿಗ್ಗೆ ಹಣದ ಬಗ್ಗೆಯೇ ಚಿಂತಿಸುತ್ತಿದವನಿಗೆ ಅರ್ಧಕ್ಕಿಂತ ಹೆಚ್ಚು ಮುದ್ದೆ ತಿನ್ನಲಾಗಿರಲಿಲ್ಲ. ನೀರಿಗಿಳಿದರೆ ಮತ್ತೆಷ್ಟು ಸುಸ್ತೋ? ಈಗ ವಾಪಸ್ಸಾಗುವ ಹಾಗೂ ಇಲ್ಲ ಎಂದುಕೊಳ್ಳುತ್ತಾ ದುಮುಕಿದ. ಇನ್ನುಳಿದಿದ್ದು ಒಂದು ಮಗು ಒಂದು ಮುದುಕಿ. ದುಮುಕಿದವನು ಒಮ್ಮೆ ನೀರಿನ ಮೇಲೆ ಬಂದು ದೀರ್ಘವಾಗಿ ಉಸಿರೆಳೆದುಕೊಂಡು ಮುಳುಗಿದ. ಬಹಳ ಸಮಯದಿಂದ ಜನರೆಲ್ಲ ಎಬ್ಬಿಸಿದ ರಾಡಿಯಿಂದ ನೀರಿನೊಳಗೆ ಕಣ್ಣು ಹೊಂದಿಸಲು ಕಷ್ಟಪಟ್ಟ. ಗಾಡಿಗಳು ಕೆರೆಯ ಈ ಜಾಗದಲ್ಲಿ ಉರುಳಿದಾಗ ಮಾಮೂಲಿಯಾಗಿ ದೇಹಗಳು ಸಿಕ್ಕಿಕೊಳ್ಳುತ್ತಿದ್ದ ಜಾಗವನ್ನು ನೋಡಿದ. ರೇಷ್ಮೆ ಸೀರೆಯ ಹರಿದ ತುಂಡುಗಳಿದ್ದವು. ಇಲ್ಲಿ ಸಿಕ್ಕಿಕೊಂಡ ಶವಗಳನ್ನು ಆಗಲೇ ಸಾಗಿಸಿರಬೇಕು. ಉಳಿದೆರಡು ದೇಹಗಳು ಆಳಕ್ಕೆ ಜಾರಿಹೋಗಿರಬೇಕು. ಮತ್ತೊಮ್ಮೆ ಮೇಲೆ ಬಂದ. ‘ಸಿಕ್ತಾ’ ‘ಸಿಕ್ತಾ’ ‘ಸಿಕ್ತಾ’ ಎಂಬ ಕುತೂಗಲಭರಿತ ಪ್ರಶ್ನೆಗಳಿಗೆ ಉತ್ತರವನ್ನೀಯದೆ ಮತ್ತೆ ಮುಳುಗಿದ. ಆಳಕ್ಕಿಳಿದಂತೆ ಬೆಳಕೂ ಕಡಿಮೆಯಾಗಿ ಇದು ಕಷ್ಟದ ಕೆಲಸವೇ ಎಂದೆನಿಸಿತು. ಸರಿ ಮೈಸೂರಿನಿಂದ ಬರುವವರಿಗೆ ಕಾಯೋಣ ಇಲ್ಲ ನಾಳೆ ಹುಡುಕೋಣ ಎಂದೆಣಿಸಿ ತಿರುಗಬೇಕೆನ್ನುವಷ್ಟರಲ್ಲಿ ಯಾವುದೋ ಹಳದಿ ಬಣ್ಣ ಕಂಡಂತಾಯಿತು ತಳದಲ್ಲಿ. ಇನ್ನೂ ಹತ್ತಿರಕ್ಕೆ ಹೋದ. ಮುದುಕಿಯ ಸೊಂಟದ ಸುತ್ತ ಇದ್ದ ಡಾಬು ಆ ಮಬ್ಬುಬೆಳಕಿನಲ್ಲೂ ಹೊಳೆಯುತ್ತಿತ್ತು. ಮತ್ತಷ್ಟು ಆಳಕ್ಕೆ ಸರಿದ. ಕೈಗೆರಡರಂತೆ ನಾಲ್ಕು ಬಳೆ, ಸೊಂಟದಲ್ಲಿ ಒಂದಿಂಚಗಲದ ಡಾಬು, ಮಾಂಗಲ್ಯ ಸರದ ಜೊತೆಗೆ ಕತ್ತಿನಲ್ಲಿ ಎರಡು ಕಾಸಿನ ಸರ. ‘ಪಾಪ ಮುದುಕಿ. ಈ ವಯಸ್ನಲ್ಲೂ ಎಷ್ಟು ಆಸೆ ಚಿನ್ನದ ಮೇಲೆ’ ಎಂದುಕೊಂಡು ಜುಟ್ಟಿಡಿದು ಮೇಲೇರಲಾರಂಭಿಸಿದ. ‘ಮೊದಲೇ ಕಷ್ಟ ಅಂತೀಯ. ಬೇಕಾದ್ರೆ ಒಂದು ಸರಾನೋ ಬಳೆನೋ ತಕ್ಕೋ ಮಗ’ಎಲ್ಲಿಂದಲೋ ತೂರಿಬಂದ ದನಿಯನ್ನು ಕೇಳಿ ಗಾಬರಿಗೆ ಮುದುಕಿಯ ಮೇಲಿನ ಹತೋಟಿ ತಪ್ಪಿತು. ಮುದುಕಿ ಪ್ರಶಾಂತ ಮುಖಭಾವದಿಂದ ಮತ್ತೆ ತಳದೆಡೆಗೆ ಜಾರುತ್ತಿದ್ದಳು. ಪೂರ್ತಿ ತಳ ತಲುಪಲು ಬಿಡದೆ ಹಿಡಿದುಕೊಂಡ. ‘ಹೌದಲ್ಲ ಈಯಮ್ಮನ ಮೈಮೇಲೆ ಇಷ್ಟೊಂದು ಚಿನ್ನವಿದೆ. ನಾನು ಒಂದು ಬಳೇನೋ ಅಥವಾ ಬಳೆಗಿಂತ ತೂಕವಾಗಿರೋ ಕಾಸಿನ ಸರಾನೋ ತೆಗೆದುಕೊಂಡರೆ ಯಾರಿಗೆ ತಿಳಿಯುತ್ತೆ. ನನ್ನ ಕಷ್ಟವೆಲ್ಲ ಸದ್ಯಕ್ಕಂತೂ ಮುಗಿಯುತ್ತೆ. ಛೇ ಶವವನ್ನು ದೋಚುವ ಯೋಚನೆ ಮಾಡುತ್ತಿದ್ದೀನಲ್ಲ’ ಮೇಲೇರುತ್ತಿದ್ದಂತೆ ಹಣದ ಅಭಾವ ಸೃಷ್ಟಿಸಿದ ಸಂಕಷ್ಟಗಳೆಲ್ಲ ನೆನಪಾದವು. ಮಾತನಾಡಿದರೆ ಎಲ್ಲಿ ಸಾಲ ಕೇಳ್ತೀನೋ ಅನ್ನೋ ಭಯ ಊರವರಿಗೆ. ಇರೋ ಐದು ಎಕರೇಲಿ ಒಂದೆಕರೆ ಮಾರಿದರೆ ಸಾಲವೆಲ್ಲ ತೀರಿಹೋಗುತ್ತೆ ಅಂದ್ರೆ ಅಪ್ಪನ ವರಾತ. ನಾನು ಸತ್ರೂ ಸಹಿ ಮಾಡೋದಿಲ್ಲ ಅಂತಾರೆ. ಸತ್ತುಹೋಗಿದ್ರೆ ಮಾರೋ ಪರಿಸ್ಥಿತಿನೂ ಬರ್ತಿರಲಿಲ್ಲ, ಮಾರೋದಿಕ್ಕೆ ಅವರ ಸಹಿ ಕೂಡ ಬೇಕಿರಲಿಲ್ಲ. ಆಗಿದ್ದಾಗಲೀ ಒಂದು ಸರ ತೆಗೆದುಕೊಂಡೇ ಬಿಡೋಣ ಎಂದು ಮುದುಕಿಯ ಕತ್ತಿನೆಡೆಗೆ ಕೈಹಾಕುವಷ್ಟರಲ್ಲಿ ಚಂದ್ರನ ಕುತ್ತಿಗೆ ನೀರಿನ ಮೇಲೆ ಬಂದಿತ್ತು. ‘ಚಂದ್ರ ಬಂದ’ ಮುದ್ಕಿ ಬಾಡಿ ಬಂತು’. ‘ಥೂ ನನ್ನ ಜನ್ಮಕ್ಕೆ’ ಚಂದ್ರ ತನ್ನ ನಿಧಾನಗತಿಯ ಯೋಚನೆಗೆ ಬಯ್ದುಕೊಂಡ. ಮುದುಕಿಯ ಬಾಡಿಯನ್ನು ದಡಕ್ಕೆಳೆದು ತಂದರು.
“ಪ್ರಕಾಶ, ಒಳಗೆ ಏನೂ ಕಾಣ್ತಾನೇ ಇಲ್ಲ. ಇನ್ನುಳಿದಿರೋದು ಮಗು. ನೀರು ತುಂಬಾನೇ ಒಳಗೆಳೆದುಕೊಂಡಿರಬೇಕು. ಬೆಳಿಗ್ಗೆ ಹುಡುಕಿದ........” “ಅಯ್ಯಯ್ಯೋ ಅಂಗನ್ನಬ್ಯಾಡ ಕಣಪ್ಪ.........ನನ್ನ......” ಆರ್ದ್ಯ ದನಿಯೆಡೆಗೆ ತಿರುಗಿ ನೋಡಲೂ ಧೈರ್ಯವಾಗದೆ ಮತ್ತೆ ನೀರಿಗಿಳಿದ. ಆ ಮುದುಕಿ ಸಿಕ್ಕಿದ್ದ ಜಾಗದಿಂದ ಒಂದಷ್ಟು ದೂರದಲ್ಲಿ ಬಿದ್ದಿತ್ತು ಮಗು. ಎರಡ್ಮೂರು ವರ್ಷದ ಹುಡುಗಿ. ಬಲಗೈಯಲ್ಲೊಂದು ಪುಟ್ಟ ಬೊಂಬೆಯನ್ನು ಹಿಡಿದು ತಳಕ್ಕೊರಗಿದ್ದ ಮಗುವನ್ನು ನೋಡಿ ಚಂದ್ರನ ಕಣ್ಣ ನೀರು ಕೆರೆಯೊಳಗೆ ಬೆರೆಯಿತು. ಜುಟ್ಟಿಡಿದೆಳೆಯಲು ಮನಸ್ಸಾಗದೇ ಸೊಂಟಕ್ಕೆ ಕೈಹಾಕಿ ಎತ್ತಿಕೊಂಡ. ಬೊಂಬೆಯನ್ನು ಗಟ್ಟಿಯಾಗಿ ಹಿಡಿದಿತ್ತು ಮಗು. ಅರ್ಧ ಮೇಲೇರಿದಾಗ ಗಮನಿಸಿದ. ಪುಟ್ಟಿಯ ಕೊರಳಲ್ಲಿ ಸಣ್ಣದೊಂದು ಸರವಿತ್ತು. ಮತ್ತೆ ಮನಸಲ್ಲಿ ಗೊಂದಲ. ‘ನನ್ದು ಗೊಂಬೆ. ಕೊಡಲ್ಲ ನಾನು’ ಎಂಬ ಮುಖಭಾವವಿದ್ದ ಹುಡುಗಿ. ನನ್ನ ಕಷ್ಟ ತೀರಿಸಬಲ್ಲ ಚಿನ್ನ. ಏನು ಮಾಡ್ಲಿ ಏನು ಮಾಡ್ಲಿ. ಸತ್ತೋರೇನು ಚಿನ್ನ ಹೊತ್ಕೊಂಡು ಹೋಗ್ತಾರಾ? ಇಲ್ಲ ಇಲ್ಲ ಇದು ತಪ್ಪು......ಯೋಚನಾಸರಣಿ ಅತ್ತಿತ್ತ ತುಯ್ದಾಡಿ ಕೊನೆಗೆ ನೈತಿಕತೆಯೇ ಜಯಿಸಿ ಹುಡುಗಿಯ ಶವವನ್ನೆತ್ತುಕೊಂಡು ಮೇಲೆ ಬಂದಾಗ ನೆರೆದವರೆಲ್ಲರ ರೋದನ ಮುಗಿಲು ಮುಟ್ಟಿತು. ಯಾರೋ ಬಂದು ಚಂದ್ರನ ಕೈಯಿಂದ ಮಗುವನ್ನಿಸಿದುಕೊಂಡು ಅದರ ತಾಯಿಯ ಬಳಿಗೆ ಕರೆದೊಯ್ದರು. ಪ್ರಕಾಶ ತರಿಸಿದ್ದ ಟವೆಲಿನಿಂದ ಮೈಒರೆಸಿಕೊಂಡ ಶಾಸ್ತ್ರ ಮುಗಿಸಿ ಪ್ಯಾಂಟು ಶರ್ಟು ತೊಟ್ಟು ಮನೆಯೆಡೆಗೆ ಹೊರಟವನಿಗೆ ಯಾಕೋ ಆ ಮಗುವನ್ನು ಮತ್ತೊಮ್ಮೆ ನೋಡಬೇಕೆನ್ನಿಸಿತು. ಜನರೆಲ್ಲಾ ಆ ತಾಯಿ ಮಗುವನ್ನು ಸುತ್ತಿಕೊಂಡಿದ್ದರು. ನುಸುಳಿಕೊಂಡು ಒಳಬಂದ.
ಆ ಹುಡುಗಿಯ ಕತ್ತಿನಲ್ಲಿ ಸರವಿರಲಿಲ್ಲ. ಬೊಂಬೆ ನೆಲದ ಮೇಲೆ ಬಿದ್ದಿತ್ತು. ‘ಅಯ್ಯೋ ! ಪೆದ್ದು ಮಾಮ ನೀನು’ ಎಂದವಳು ನಕ್ಕಂತಾಗಿ ಚಂದ್ರನಿಗೆ ಕತ್ತಲು ಕವಿಯಿತು.