ಪಾರ್ವತಿ - ಬರೆದವರು : ಇಂದಿರಾ ಹೆಗ್ಡೆ | ಸಾಮಾಜಿಕ
(ಈ ಕತೆ ವನಿತಾ ಮಲ್ಲಿಗೆ, ಮಂಜುವಾಣಿ, ಮುಂಗಾರು, ಉತ್ಥಾನ, ಪ್ರಜಾಮತ, ಗೆಳತಿ, ಸುದ್ದಿಸಂಗಾತಿ, ಕಸ್ತೂರಿ, ಕನ್ನಡಪ್ರಭ- ಪತ್ರಿಕೆಗಳಲ್ಲಿ ಪ್ರಕಟವಾಗಿದೆ.)
ಮದಗಜಗ ಮನೆಯಂತೆ ಹರಿಯುತ್ತಿರುವ ಬ್ರಹ್ಮಪುತ್ರಾ ನದಿ. ಅದರ ಈ ದಂಡೆಯಲ್ಲಿ ತೇಜಾಪುರ. ಆ ದಂಡೆಯಲ್ಲಿ ಗೌಹಾಟಿ. ತೇಜಪುರದ ದಂಡೆಯಲ್ಲಿ ನಿಂತು ಗೌಹಾಟಿಯತ್ತ ದೃಷ್ಟಿ ಹಾಯಿಸಿದರೆ ಸೂಕ್ಷ್ಮ ದೃಷ್ಟಿಯುಳ್ಳವರ ದೃಷ್ಟಿ ಮಾತ್ರ ಗೌಹಾಟಿಯ ಹಸಿರು ಮನಸಿರಿಯನ್ನು ಚುಂಬಿಸುವಲ್ಲಿ ಯಶಸ್ವಿಯಾದೀತು. ನದಿಯ ಮಧ್ಯದಲ್ಲಿ ಮರಳಿನ ದ್ವೀಪಗಳು. ಸಮುದ್ರದಂತೆ ಅಲ್ಲಿಯೂ ಅಲೆಗಳು!
ನದಿಯಿಂದ ಹತ್ತು ಕಿಲೋಮೀಟರ್ ದೂರದಲ್ಲಿ ನಮ್ಮ ’58 ಪ್ಲಾನ್ಟ್ ಕೊಯ್’ ಬೀಡು ಬಿಟ್ಟಿತ್ತು. ಹಿಮಾಲಯದ ತಪ್ಪಲು ಪ್ರದೇಶ. ‘ನಿತ್ಯನೂತನ ಸಸ್ಯ ಶಾಮಲೆ’ ಎಂದೆಲ್ಲ ಪ್ರಕೃತಿಯ ಬಗ್ಗೆ ಕವಿಗಳು ವರ್ಣಿಸುತ್ತಾರಲ್ಲ ಅಂತಹ ದೃಶ್ಯ. ಇಲ್ಲಿ ಮುನ್ನೂರರುವತ್ತೈದು ದಿನವೂ ಕಾಣ ಸಿಗುತ್ತದೆ. ಆನೆಗಳ ಘೀಳಿಡುವಿಕೆ, ಹುಲಿಗಳ ಘರ್ಜನೆ, ನರಿಗಳ ಕೂಗು, ಜೀರುಂಡೆಗಳ ಝೇಂಕಾರ, ಹುಳ ಹುಪ್ಪಡಿಗಳ ಏಕತಾನ... ಎಲ್ಲವೂ ನಮ್ಮ ರಾತ್ರಿಯ ನಿದ್ದೆಗೆ ಜೋಗುಳ ಹಾಡುತ್ತಿದ್ದವು. ನಿಸರ್ಗ ಪ್ರೇಮಿಗಳ ದೃಷ್ಟಿಯಲ್ಲಿ ನಾವೆಷ್ಟು ಭಾಗ್ಯಶಾಲಿಗಳು! ಆದರೆ ನಮ್ಮವರೆಲ್ಲರಿಂದ ಬಹು ದೂರ ಬಂದಿರುವ ನಮಗೆ ನಮ್ಮವರ ನೆನಪೇ ಸರ್ವಸ್ವ!
ರಜೆ ಮುಗಿದು ಕೆಲಸಕ್ಕೆ ಹಾಜರಾಗಿದ್ದೆ. ಇಂದಿರೆಯ ಮುಖ ಕಣ್ಣೆದುರು ಸ್ಥಿರವಾಗಿ ನಿಂತಿದೆ. ಅವಳಿಂದ ಬಂದಿರುವ ಪ್ರೇಮ ಪತ್ರಗಳೇ ನನ್ನ ಬರಡು ಬಾಳಿಗೆ ಚೈತನ್ಯ ನೀಡಬಲ್ಲ ಅಮೃತವಾಹಿನಿಯಾಗಿದ್ದುವು.
ನಾವು ಕೆಲ ಮಿತ್ರರು ಕೂಡಿ ಸಂಜೆ ಹೊತ್ತು ಅಷ್ಟು ದೂರ ನಡೆದು ವಾಪಸ್ಸಾಗುತ್ತಿದ್ದೆವು. ಇಲ್ಲಿಯೇ ಹತ್ತಿರದಲ್ಲಿ ಒಂದು ಸಣ್ಣ ನದಿ ಹರಿಯುತ್ತಿದ್ದು ಅದರಲ್ಲಿ ಸ್ವೇಚ್ಛೆಯಾಗಿ ಈಜಾಡಿ ಮರಳುವುದು ನಮ್ಮ ನಿತ್ಯ ಪದ್ಧತಿ. ಕತ್ತಲಾಗುವ ಮೊದಲು ಕಾಡು ದಾರಿಯಿಂದ ಹೊರ ಬರಬೇಕೆಂದು ನಮ್ಮೊಳಗೆ ತೀರ್ಮಾನವಾಗಿತ್ತು.
ಅಂದು ನಾನು ಹಾಗೂ ಗಣಪತಿ ಮಾತ್ರ ಹೊರಡಬೇಕಾಯಿತು. ಫಣಿಕ್ಕರ್ ಟೆಲಿಫೋನ್ ಡ್ಯೂಟಿಯ ಮೇಲಿದ್ದ. ತಾರಾಲೋಚನ್ಸಿಂಗ್ ಜ್ವರ ಬಂದು ಮಲಗಿದ್ದ.
ಸ್ವಲ್ಪ ದೂರ ನಡೆಯುವುದರೊಳಗೇ ದೂರದಲ್ಲಿ ಜನರ ಗುಂಪು ಕಾಣಿಸಿತು. ನಾವು ಅತ್ತ ನಡೆದೆವು.
ಹತ್ತಿರ ಹೋದಾಗ ಅದು ಕೋಳಿ ಅಂಕದ ಕಟ್ಟೆಯೆಂದು ತಿಳಿಯಿತು. ಅಲ್ಲಲ್ಲಿ ಗೂಟಕ್ಕೆ ಬಿಗಿದಿದ್ದ ಹಲವಾರು ಹುಂಜಗಳು ರೆಕ್ಕೆ ಬಡಿದು ‘ಕೊಕ್ಕೊ...ಕ್ಕೊ... ಅನ್ನುತ್ತಾ ತಮ್ಮ ಕಾರ್ಯ ಪ್ರದರ್ಶಿಸುತ್ತಿದ್ದುವು. ಕೆಲವರು ಗಾಳಿ ಹಾಕುತ್ತಿದ್ದರು.
ನಾನು ಗುಂಪಿನ ಮಧ್ಯೆ ನುಸುಳಿದೆ. ಎರಡು ಹುಂಜಗಳು ಕದನಕ್ಕೆ ಸಿದ್ಧವಾಗಿ ನಿಂತಿದ್ದವು. ಎಲ್ಲರೂ ಬಾಜಿ ಕಟ್ಟುವ ಗಡಿಬಿಡಿಯಲ್ಲಿದ್ದರು.
“ನಾನು ಬಾಜಿ ಕಟ್ಟಲಾ?” ಅಂದೆ ಗಣಪತಿಯತ್ತ ನೋಡಿ.
“ಸುಮ್ಮನೆ ಬಾಲ ಮುದುರಿ ಕೂತಿರು” ಅಂದ.
ನಾನು ಪ್ಯಾಂಟಿನ ಜೇಬಿಗೆ ಕೈ ಹಾಕಿ ನೋಟಿನ ಕಂತೆಯನ್ನು ತೆಗೆದು ಕೆಂಪು ಕೋಳಿಗೆ ಬಾಜಿ ಕಟ್ಟಿದೆ. ಕೋಳಿಯ ಒಡೆಯ ಅರವತ್ತರ ಮುದುಕ ನನ್ನತ್ತ ನೋಡಿ ಮೀಸೆ ಕುಣಿಸಿದ. ಕೋಳಿಗಳೆರಡೂ ಹೋರಾಟಕ್ಕೆ ಸಿದ್ಧವಾಗಿ ಕಾಲು ಕೆರೆದು ಬಳಿಯ ಗರಿಗಳನ್ನು ಕುಣಿಸಿದವು. ರಪ್ಪನೆ ಎದುರಾಳಿ ಹುಂಜ ಹಾರಿದಾಗ ನನ್ನ ಕೆಂಪು ಕೋಳಿ ಅದರಡಿಯಲ್ಲಿ ತೂರಿ ರೆಪ್ಪೆ ಮುಚ್ಚುವುದರೊಳಗೆ ಮರು ಹೊಡೆತ ಕೊಟ್ಟಿತು! ಮತ್ತೊಂದು ಏಟಿಗೆ ಎದುರಾಳಿ ಹುಂಜದ ಶಕ್ತಿ ಕುಂದಿತು. ಗಣಪತಿ ನನ್ನ ಕೈ ಕುಲುಕಿದ.
ನಾವಿಬ್ಬರೂ ಡೇರೆಯತ್ತ ಹೆಜ್ಜೆ ಹಾಕಿದೆವು. ನಾನು ಮಂಗಳೂರಿನಲ್ಲಿ ನಡೆಯುತ್ತಿದ್ದ ಕೋಳಿ ಅಂಕಗಳ ಬಗ್ಗೆ ಗಣಪತಿಗೆ ವಿವರಿಸುತ್ತಾ ನಡೆಯುತ್ತಿದ್ದೆ.
“ಸಾಬ್... ಸಾಬ್...” ಕರೆ ಕೇಳಿ ತಿರುಗಿದವು.
ಎಡಗೈ ಕಂಕುಳಲ್ಲಿ ಗೆದ್ದ ಕೆಂಪು ಕೋಳಿ ಠೀವಿಯಿಂದ ಕುಳಿತಿತ್ತು. ಬಲಗೈಯಲ್ಲಿ ಸೋತ ಎದುರಾಳಿ ಹುಂಜವನ್ನು ನೇತಾಡಿಸುತ್ತಾ ಬರುತ್ತಿದ್ದ ಮುದುಕ, ಅದನ್ನು ಕಂಡು ಆ ಕ್ಷಣ ನನಗೆ ಮಿಂಚು ಹೊಡೆದಂತಾಯಿತು. ಒಂದು ವಿಧದಲ್ಲಿ ನಮ್ಮ ಜೀವನವೂ ಈ ಹುಂಜಗಳಂತೆ; ಕಾಳಗದಲ್ಲಿ ಒಂದೋ ಗೆಲುವು, ಇಲ್ಲ ಸೋಲು.
“ಸಾಬ್ , ಆಪ್ ಲೋಗ್ ಆಜ್ ಯೇ ಗರೀಬ್ ಕಾ ಘರ್ ಕಾ ಆತಿಥ್ಯ ಸ್ವೀಕಾರ್ ಕರ್ನಾ ಹೋಗಾ...” ಮುದುಕನ ಮಾತಿನಲ್ಲಿ ವಿನಯದ ಜೊತೆಗೆ ಅಪ್ಪಣೆಯ ಭಾವವೂ ಅಡಕವಾಗಿತ್ತು.
“ನಹೀ ದಾದಾ, ಆಜ್ ನಹೀ, ಔರ್ ಕಭೀ...” ಗಣಪತಿ ಉತ್ತರಿಸಿದ.
“ನಹೀ ಸಾಬ್, ಯೇ ಕೈಸೆ ಹೋ ಸಕ್ತಾ ಹೈ? ಆಜ್ ತೋ ಹಮಾರಾ ಮುರ್ಗಾ ಜೀತ್ಲಿಯಾನಾ, ಇಸ್ಕ ಖುಷಿ ಮನನಾ ಹೈ, ಆಫ್ ಲೋಗ್ ನಹೀ ಆಯಾತೋ ಯೇ ಮುರ್ಗಾ ಮೇರಾ ರಾಜಾ ನರಾಜ್ ಹೋಗಾ...”
ತಾತನ ಮಾತು ಕೇಳಿ ನನಗೆ ನಗು ಬಂತು. ಅವನ ಒತ್ತಾಯಕ್ಕೆ ಮಣಿದು ಅವನನ್ನು ಹಿಂಬಾಲಿಸಿದೆವು.
ಅದೊಂದು ಸಣ್ಣ ಹಳ್ಳಿ. ಅಲ್ಲಿ ಹಲವಾರು ಸಣ್ಣಪುಟ್ಟ ಗುಡಿಸಲುಗಳಿದ್ದವು. ಅಂಗಳದಲ್ಲಿ ಬಿದಿರುಗಳನ್ನು ಒಣ ಹಾಕಿದ್ದರು. ನಮ್ಮನ್ನು ಕಂಡು ನಾಯಿಗಳು ಬೊಗಳಿದವು. ಗುಡಿಸಲುಗಳಿಂದ ಹೆಣ್ಣು, ಗಂಡುಗಳು ಇಣುಕತೊಡಗಿದವು.
ತಾತನ ಜೊತೆ ನಾವೂ ಗುಡಿಸಲು ಹೊಕ್ಕೆವು. ಕೋಳಿಯನ್ನು ಒಂದು ಮೂಲೆಯಲ್ಲಿ ಕಟ್ಟಿದ ತಾತಾ “ಬೇಟಿ...” ಅಂದ.
ಸುಮಾರು ಹದಿನಾಲ್ಕು ಹದಿನೈದರ ಹರೆಯದ ಸುಂದರಿಯೊಬ್ಬಳು ಹೊರಬಂದು ‘ನಮಸ್ತೇ’ ಅಂದಳು. ನಾವು ಪ್ರತಿ ನಮಸ್ಕರಿಸಿದೆವು. ತಾತ ‘ಮೂಡ’ ಗಳೆರಡನ್ನು ( ಮೂಡ-ಬಿದಿರಿನಿಂದ ಹೆಣೆಯಲಾದ ಉರುಟಾದ ಆಸನ) ನಮ್ಮ ಹತ್ತಿರ ತಳ್ಳಿ.
“ಬೇಟೀ, ಬೇಗ ಬೇಗ ಅಡಿಗೆ ಮುಗಿಸು. ಸಾಬ್ಗಳಿಗೆ ಜಲ್ದಿ ಹೋಗಬೇಕು” ಅಂದ.
ಆತ ಒಳಗೆ ಹೋಗಿ ಕೋಳಿಯ ಪುಕ್ಕ ತೆಗೆದು ಶುದ್ಧ ಮಾಡಿ ಕೊಟ್ಟು ಬಂದಾಗ ನಾವಿಬ್ಬರೂ ಕೋಳಿ ಅಂಕದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದೆವು. ತಾತ ಬಂದುದರಿಂದ ನಮ್ಮ ಮಾತು ನಿಂತು ಹೋಯಿತು.
ಈಗ ಆತ ಒಂದು ಮಡಕೆಯನ್ನು ತಂದು ನಮ್ಮ ಮುಂದಿರಿಸಿದ ಜೊತೆಗೆ ಮೂರು ಗ್ಲಾಸುಗಳು.
“ಇವನು ಕುಡಿಯುವುದಿಲ್ಲ” ಎಂದ ಗಣಪತಿ ನಾನು ಏನೂ ಹೇಳಲಿಲ್ಲ. “ಇದು ಸರಾಯಿ ಅಲ್ಲ, ಹೆಂಡ ಈಚಲು ಮರದ್ದು” ತಾತ ನುಡಿದ.
“ಕುಡಿಯುತ್ತೀಯೇನೋ?”
“ಚಿಕ್ಕಂದಿನಲ್ಲಿ ಕುಡಿದಿದ್ದೆ...”
“ಹಾಗಾದರೆ ಕುಡಿ ಮತ್ತೆ.”
ಹೆಂಡ ರುಚಿಯಾಗಿತ್ತು. ಅಷ್ಟಾಗಿ ಹುಳಿಯಿರಲಿಲ್ಲ. ಒಂದು ಲೋಟ ಮುಗಿಸಿ ತಾತ ಕಥೆ ಹೇಳಲಾರಂಭಿಸಿದ. ಅವನಿಗೆ ಒಬ್ಬಳೇ ಮಗಳಂತೆ. ಅವಳ ತಾಯಿ ಹಿಂದಿನ ವರ್ಷ ಮಲೇರಿಯಾ ಬಂದು ತೀರಿಕೊಂಡಳಂತೆ.
ಹುಡುಗಿಯೇ ನಮಗೆ ಬಡಿಸಿದಳು. ಹುಡುಗಿಯನ್ನು ನೋಡುವಾಗಲೆಲ್ಲ ನನಗೆ ಇಂದಿರೆಯ ನೆನಪಾಗತೊಡಗಿತು. ಅವಳದೂ ಇದೇ ವಯಸ್ಸು. ಹೀಗಾಗಿ ನಾನು ಕಳ್ಳ ದೃಷ್ಟಿಯಿಂದ ಅವಳತ್ತ ಎರಡು ಬಾರಿ ನೋಡಿದೆ.
ಊಟ ಮುಗಿಸಿ ಹೊರಟಾಗ ತಾತ “ಆಗಾಗ ಬರುತ್ತಿರಿ” ಅಂದ. ನಾವು ಒಪ್ಪಿಗೆ ಸೂಚಿಸಿ ಹೊರಟೆವು.
“ಅಡುಗೆ ರುಚಿಯಾಗಿತ್ತು” ದಾರಿಯಲ್ಲಿ ನಾನೆಂದೆ.
“ಹೌದಾ ನನಗೇಕೋ ರುಚಿಯಾಗಿರಲಿಲ್ಲ.”
ಗಣಪತಿಯ ಮಾತಲ್ಲಿ ಅಣಕ ಅಡಗಿತ್ತು. ಆಶ್ಚರ್ಯದಿಂದ ಅವನತ್ತ ನೋಡಿದೆ.
“ಹುಡುಗಿ ಚೆನ್ನಾಗಿದ್ದಳು”
ನನ್ನತ್ತ ದೃಷ್ಟಿ ಹರಿಸದೆ ಗಣಪತಿ ನುಡಿದಾಗ “ನಿನಗೆ ಬೇರೇನೂ ಕೆಲಸವಿಲ್ಲ” ಅಂದೆ ನಾನು.
“ಆದ್ದರಿಂದಲೇ ಅವಳತ್ತ ಕಳ್ಳ ದೃಷ್ಟಿ ಹರಿಸಿದ್ದು”
ಗಣಪತಿ ಬಿಟ್ಟು ಕೊಡದೆ ನುಡಿದಾಗ ಈ, ಸಿ,ಐ,ಡಿ ಕೈಗೆ ಸಿಕ್ಕಿ ಹಾಕಿ ಕೊಂಡಾಯ್ತು, ಇನ್ನು ಕೆಟ್ಟೆ ಎಂದುಕೊಂಡೆ.
ಡೇರೆಗೆ ಬಂದ ತಾರಾಲೋಚನ್ ಇನ್ನೂ ಮಲಗಿರಲಿಲ್ಲವೆಂದು ಗೊತ್ತಾಯ್ತು. ಅವನ ಡೇರೆಯಲ್ಲಿ ಲಾಟೀನು ಉರಿಯುತ್ತಿತ್ತು. ಅವನ ಡೇರೆಯೊಳಗೇ ಇಬ್ಬರೂ ನುಗ್ಗಿದೆವು.
“ಯಾಕೆ ತಾರಾಲೋಚನ್ , ಇನ್ನೂ ಮಲಗಿಲ್ಲ?”
“ನಿಮಗೆ ಹೇಳುವವರು ಕೇಳುವವರು ಯಾರೂ ಇಲ್ಲವಾ? ಕತ್ತಲಾಗುವ ಮೊದಲು ಡೇರೆ ಸೇರಬೇಕೆಂಬ ಪ್ರಜ್ಞೆಯೇ ಮೈ ಮೇಲಿಲ್ಲ. ನೀವು ಎಲ್ಲಿ ಹೋದಿರಿ, ಏನಾದಿರಿ ಎಂದು ಎದೆ ಒಂದೇ ಸಮನೆ ಹಾರಿಕೊಳ್ಳುತ್ತಿತ್ತು.
“ಹಾಗಾದರೆ ನೀನು ಸೈನಿಕನಾಗಲು ಯೋಗ್ಯನಲ್ಲ” ಅವನ ಎದೆಯ ಮೇಲೆ ಕೈಯಿಟ್ಟು ನಗುತ್ತಾ ನುಡಿದ ಗಣಪತಿ.
“ಹಾಗಲ್ಲ , ಜ್ವರ ಬಂದು ಎದೆಗುಂಡಿಗೆ ಹಾರುತ್ತಿರಬೇಕು” ನಾನು ನಗು ಸೇರಿಸಿ ನುಡಿದೆ.
ತಾರಾಲೋಚನ್ ಮುಖ ಇನ್ನೂ ಕೆಂಪಾಗಿಯೇ ಇತ್ತು, “ಇಷ್ಟೊತ್ತು ಎಲ್ಲಿದ್ದುದು?” ತಾರಾಲೋಚನ್ ಗುಡುಗಿದ.
“ಕೋರ್ಟ್ ಮಾರ್ಷಲ್ ಮಾಡ್ತಿದ್ದೀಯಾ?” ಅಂದೆ ನಾನು.
“ಪ್ರಶ್ನೆಗೆ ಉತ್ತರಬೇಕು” ತಾರಾಲೋಚನ್ಗೆ ನಿಜವಾಗಿಯೂ ಕೋಪ ಬಂದಿತ್ತು.
“ನೀನು ಹೇಳೋ” ಗಣಪತಿಯತ್ತ ನೋಡಿ ಹೇಳಿದೆ ನಾನು.
“ನಿನ್ನ ಗೆಳೆಯನಿಂದಾಗಿ ಈ ತಾಪತ್ರಯ. ಒಂದು ಹುಡುಗಿಯ ಹಿಂದೆ ಬಿದ್ದಿದ್ದಾನೆ.”
“ಹಾಂ!” ತಾರಾಲೋಚನ್ ಎದ್ದು ದಿಂಬಿಗೊರಗಿ ಕುಳಿತ.
ನಾನು ಗಣಪತಿಯತ್ತ ನೋಡಿ ದುರುಗುಟ್ಟಿದೆ.
“ಹಾಗೇಕೆ ದುರುಗುಟ್ಟುವಿ? ನಾನು ಹೇಳಿದ್ದು ಸುಳ್ಳಾ?” ಅನ್ನುತ್ತಾ ಗಣಪತಿ ನಡೆದ ಘಟನೆಯನ್ನು ವಿವರಿಸತೊಡಗಿದ. ನಾನು ಎದ್ದು ಡೇರೆಯತ್ತ ನಡೆದೆ. ರಾತ್ರಿಯಿಡೀ ಇಂದಿರೆಯ ನೆನಪಿನಲ್ಲೆ ಕಾಲ ಕಳೆದೆ.
ಮರುದಿನ ಫಣಿಕ್ಕರ್ ಬಳಿಯೂ ಗಣಪತಿ ಚಾಡಿ ಹೇಳಿದ. ಮೂವರೂ ಸೇರಿ ನನ್ನನ್ನು ಹಿಂಡತೊಡಗಿದರು. ನಾನು ಮಾತ್ರ ಇಂದಿರೆಯ ಪತ್ರದ ದಾರಿ ಕಾಯುತ್ತಿದ್ದೆ.
ಎರಡು ದಿನದ ಬಳಿಕ ದಾರಿಯಲ್ಲಿ ಕೋಳಿ ಅಂಕದ ತಾತ ಸಿಕ್ಕಿದ್ದರು. ಮಗುವಿಗೆ ಜ್ವರ ಬಂದು ಮಲಗಿದೆಯೆಂದು ಅವರು ಹೇಳಿದಾಗ ‘ ನಿಮ್ಮ ಮನೆಯಲ್ಲಿ ಮಗು ನೋಡಿದ್ದ ನೆನಪು ಇಲ್ಲವಲ್ಲ’ ಅಂದೆ ನಾನು.
“ಮಗು ಅಂದರೆ ಪಾರ್ವತಿ, ನನ್ನ ಮಗಳು” ಅಂದರು.
“ಈಗ ಡಾಕ್ಟರರ ಬಳೀ ಹೋಗಿದ್ದೀರಾ?” ಅಂದ.
“ಇಲ್ಲ ತೇಜಾಪುರಕ್ಕೆ ಹೋಗಬೇಕು, ಇಲ್ಲಿ ಹತ್ತಿರದಲ್ಲಿ ಡಾಕ್ಟರು ಇಲ್ಲ” ತಾತನ ಮುಖ ವೇದನಾಮಯವಾಗಿತ್ತು.
ಲೋ ರಾಮ್, ನೀನೆ ಮದ್ದು ಕೊಡಬಹುದಲ್ಲ?” ಫಣಿಕರ್ ಕೇಳಿದಾಗ ಅವನ ಮಾತಿನಲ್ಲಿ ವ್ಯಂಗ್ಯವನ್ನು ಹುಡುಕಿದೆ ನಾನು. ನನ್ನ ಮುಖ ಗಂಭೀರತೆಯಿಂದಿರುವುದನ್ನು ಕಂಡು ಫಣಿಕ್ಕರ್ ಮಾತು ಮುಂದುವರಿಸಿದ-
“ಇಲ್ಲ ರಾಮ್, ನಾನು ತಮಾಷೆ ಮಾಡುತ್ತಿಲ್ಲ, ನಿಜವಾಗಿ ಹೇಳ್ತಿದ್ದೀನಿ” ಪುನಃ ತಾತನತ್ತ ನೋಡಿ, “ನೀವು ಮನೆಗೆ ಹೋಗಿ, ನಾವು ಹೊರಗೆ ಹೋಗಿ ಔಷಧಿ ತರ್ತೀವಿ” ಎಂದ.
ನಾನು ಎಮ್.ಬಿ.ಬಿ.ಎಸ್ ಆಗ ತಾನೇ ಮುಗಿಸಿದ್ದೆ. ಸಣ್ಣ ಪುಟ್ಟ ಕಾಯಿಲೆಗೆ ನಾನು ಮದ್ದು ಕೊಟ್ಟು ಯಶಸ್ವಿಯಾಗಿದ್ದುದರಿಂದ ಡೇರೆಗೆ ಬಂದು ನನ್ನ ಕೈ ಚೀಲದೊಂದಿಗೆ ಇಬ್ಬರೂ ಹೊರಟೆವು.
ನಾವು ಗುಡಿಸಲು ಒಕ್ಕಾಗ ಹುಡುಗಿ ಮುಸುಕೆಳೆದು ಮಲಗಿದ್ದಳು. ಹೆಜ್ಜೆಯ ಸಪ್ಪಳ ಕೇಳಿ ಎದ್ದು ಕುಳಿತುಕೊಳ್ಳಲು ಪ್ರಯತ್ನಿಸಿದಳು.
“ಬೇಡ , ನೀನು ಮಲಗಿರು” ಎಂದೆ ನಾನು. ಅವಳು ಮತ್ತೂ ಏಳಲು ಪ್ರಯತ್ನಿಸಿದಾಗ ಅವಳಿಗೆ ಆಸರೆ ಕೊಟ್ಟು ದಿಂಬಿಗೊರಗಿಸಿದೆ.
ಅವಳನ್ನು ಪರೀಕ್ಷಿಸುವಾಗ ನನ್ನೆದೆಯು ಡವಗುಟ್ಟುತ್ತಿತ್ತು. ಓರೆ ನೋಟ ಬೀರಿ ಫಣಿಕ್ಕರ್ನತ್ತ ನೋಡಿದೆ, ಅವನು ಗಂಭೀರವದನನಾಗಿದ್ದ.
ಪಾರ್ವತಿಗೆ ಮದ್ದು ಕೊಟ್ಟು ಹೊರಡಲಣಿಯಾದೆ, ತಾತ ಹೆಂಡದ ಮಡಕೆ ತಂದಾಗ, “ಬೇಡ, ಇಂದು ಖಂಡಿತ ಬೇಡ” ಅಂದೆ ನಾನು.
ಫಣಿಕ್ಕರ್ ಗಡದ್ದಾಗಿ ಕುಡಿದ.
ನಾನು ದಿನಾ ತಾತನ ಮನೆಗೆ ಹೋಗಬೇಕಾಯಿತು. ಈ ನಡುವೆ ಪಾರ್ವತಿ ಸಂಪೂರ್ಣ ಗುಣ ಹೊಂದಿದ್ದಳು. ಒಂದೆರಡು ಬಾರಿ ನನ್ನ ಜೊತೆ ಗಣಪತಿ ಬಂದಿದ್ದ. ಅವನನ್ನುಳಿದು ಮಿಕ್ಕವರು ನನ್ನ ಜೊತೆ ಬರುವುದು ನನಗೇ ಇಷ್ಟವಿರಲಿಲ್ಲ.
ಪಾರ್ವತಿಯ ಮನೆಗೆ ಬಂದಾಗಲೆಲ್ಲ ಇಂದಿರೆಯ ನೆನಪಿನಿಂದ ನಾನು ಹೊರ ಬರುತ್ತಿದ್ದೆ. ಅವಳ ಕುಲುಕುಲು ನಗು, ನನಗೆ ಇಂದಿರೆಯ ನೆನಪನ್ನು ಮತ್ತೆ ಮರಳಿಸುತ್ತಿತ್ತು. ಮಾಡಿದ ತಿಂಡಿಯನ್ನು ನನಗಾಗಿ ಎತ್ತಿಡುತ್ತಿದ್ದಳು.
ಒಂದು ತಿಂಗಳೊಳಗೆ ನಾನೂ ಪಾರ್ವತಿಯ ಮನೆಯ ಸದಸ್ಯನಂತಾದೆ, ಗೆಳೆಯರ ಚೇಷ್ಟೆಗೆ ಹೆದರಿ ಹೋಗದ ದಿನ ತಾತ ನನ್ನನ್ನು ಹುಡುಕಿ ಅವರೇ ಬರುತ್ತಿದ್ದರು.
ನಾನು ಇಂದಿರೆಗೆ ಪತ್ರ ಬರೆಯುವಂತಿರಲಿಲ್ಲ. ಅವಳ ಮನೆಗೆ ಬರೆದರೆ ಎಡವಟ್ಟಾದೀತು ಎಂಬ ಭಯ. ಕಾನ್ವಂಟಿಗೆ ಬರೆಯಲು ಸಾಧ್ಯವಿಲ್ಲ. ವಿದ್ಯಾರ್ಥಿನಿಯರಿಗೆ ಬರುವ ಪತ್ರವನ್ನು ಓದಿಕೊಡುವ ಪರಿಪಾಠವಂತೆ. ಹೀಗಾಗಿ ಯಾವಾಗಲಾದರೊಮ್ಮೆ ಅವಳೇ ಬರೆಯುವ ಪತ್ರದ ದಾರಿ ಕಾಯುತ್ತಾ ನಾನು ಸಮಾಧಾನಪಟ್ಟುಕೊಳ್ಳಬೇಕು.
ರಾತ್ರಿ ಮಲಗಿದ್ದೆ ನಿದ್ದೆ ಬಂದಿರಲಿಲ್ಲ. ಮಂಚದ ಕಟಕಟ ಸದ್ದು ಕೇಳಿಸುವಷ್ಟಿತ್ತು.
“ಪ್ರೇಮ ಅಂದರೇನೋ?” ಗಣಪತಿಯ ಪ್ರಶ್ನೆ ಕೇಳಿ ತಬ್ಬಿಬ್ಬಾದೆ.
“ನಿನಗೆ ನಿದ್ದೆ ಬಂದಿಲ್ಲವಾ” ಅಂದೆ ನಾನು.
“ನನ್ನ ಪ್ರಶ್ನೆಗೆ ಉತ್ತರ ಕೊಡು. ‘ಪ್ರೇಮ’ ಎಂಬ ಶಬ್ದಕ್ಕೆ ವಿವರಣೆ ಕೊಡು” ಗಣಪತಿಯ ಧ್ವನಿಯಲ್ಲಿ ಅಪ್ಪಣೆಯಿತ್ತು.
‘ಪ್ರೇಮ’ ಈ ಎರಡಕ್ಷರದ ಪದಕ್ಕೆ ಉತ್ತರ ಕೊಡಲು ಪ್ರೇಮಿಯಿಂದಲೇ ಅಸಾಧ್ಯವೆಂಬಂತೆ ನನಗೆ ಈಗ ತಿಳಿಯಿತು. ಹೀಗಾಗಿ ನಾನು ಮೌನಿಯಾದೆ.
“ನನ್ನ ಪ್ರಶ್ನೆಗೆ ಉತ್ತರ ಬಂದಿಲ್ಲ.”
“ನನಗೆ ಗೊತ್ತಿಲ್ಲ.”
“ವಾರೆವ್ಹಾ, ಪ್ರೇಮಿಯಾದ ನಿನಗೆ ಗೊತ್ತಿಲ್ಲವೆಂದರೆ? ನನಗೆ ಗೊತ್ತಾ?”
“............”
“ನೀನು ಪಾರ್ವತಿಯನ್ನು ಪ್ರೇಮಿಸುತ್ತಿಲ್ಲವೆ?”
“ಅಂದರೆ?! ನಾನು ಬೆಚ್ಚಿ ಕೇಳಿದ.
“ನನ್ನ ಮಾತು ಅರ್ಥವಾಗುತ್ತಿಲ್ಲವಾ? ಹಿಂದಿಯಲ್ಲಿ ಹೇಳಲಾ?”
“ನಾನು ಅವರ ಮನೆಗೆ ಹೋಗುತ್ತಿರುವುದಕ್ಕೆ ತಾನೇ ನೀನು ಹೀಗೆ ಹೇಳುತ್ತಿರುವುದು?”
“ಇನ್ಯಾತಕ್ಕೆ?”
ನಾನು ಮುಸುಕೆಳೆದು ಮಲಗಿದೆ. ಗಣಪತಿ ಸ್ವಲ್ಪ ಹೊತ್ತು ಕುಳಿತಿದ್ದು ಮಲಗಿದ.
ನಿದ್ದೆ ನನ್ನ ಬಳಿ ಸುಳಿಯಲಿಲ್ಲ. ಇಂದಿರಾ ಹಾಗೂ ಪಾರ್ವತಿ ನನ್ನನ್ನು ಎರಡೂ ದಿಕ್ಕಿನಿಂದ ಹಿಡಿದು ಜಗ್ಗಾಡತೊಡಿದರು.
ನಾನು ಇಂದಿರೆಯನ್ನು ಮರೆತೆನೆ? ಖಂಡಿತಾ ಇಲ್ಲ. ಅವಳಿಗಾಗಿ ನನ್ನ ಮನಸ್ಸು ರೋಧಿಸುತ್ತಿದೆ.
ಹಾಗಾದರೆ ಪಾರ್ವತಿಯ ಬಳಿ ಎಂತಹ ಆಕರ್ಷಣೆ?
ಈ ಪ್ರಶ್ನೆಗೆ ಉತ್ತರ ದೊರೆಯಲ್ಲ. ಗಣಪತಿಗೆ ಇಂದಿರೆಯ ವಿಚಾರ ಗೊತ್ತಿಲ್ಲ. ಗೊತ್ತಾದ ದಿನ ಅವನನ್ನು ಮತ್ತೆ ಎದುರಿಸಬೇಕು.
ಬೆಳಿಗ್ಗೆ ಎಚ್ಚರವಾದಾಗ ಬೆಳ್ಳಂ ಬೆಳಕಾಗಿತ್ತು. ಎದ್ದು ಹೊರಬಿದ್ದೆ. ಭಾನುವಾರವಾದ್ದರಿಂದ ಕಛೇರಿ ಕೆಲಸವಿಲ್ಲ. ಫಣಿಕ್ಕರ್ ಒಂದು ಡಬ್ಬದಲ್ಲಿ ಮೊಟ್ಟೆ ತಂದ. ಮೊಟ್ಟೆಯನ್ನು ಒಡೆದು ದೋಸೆಯಂತೆ ಹುಯಿದ. ಹಾಲಿನ ಡಬ್ಬದಿಂದ ಹಾಲನ್ನು ಸುರಿದು ಕುದಿಸಿ ನೆಸ್ಕೆಫೆ ಬೆರೆಸಿದ.
ಕಾಫಿ ತಿಂಡಿ ಮುಗಿಸಿ ತೇಗಿದ ತಾರಾಲೋಚನ, “ಇಂದಿನ ಪ್ರೋಗ್ರಾಂ ಏನು?” ಅಂದ. ನಾವ್ಯಾರು ಅವನ ಮಾತಿಗೆ ಪ್ರತಿಕ್ರಿಯಿಸಲಿಲ್ಲ.
“ತೇಜ್ಪುರಕ್ಕೆ ಹೋಗೋಣವೇ?” ಮತ್ತೆ ಅದೇ ಮಾತನ್ನು ಮುಂದುವರಿಸಿದ.
“ನಾನು ಬರಲಾರೆ” ನಾನಂದೆ’
“ನೀನು ಬರಬೇಡ ನಿನ್ನನ್ನು ನಾನು ಕರೆಯಲೂ ಇಲ್ಲ. ನೀನು ಪಾರ್ವತಿಯ ಮಂದಿರಕ್ಕೆ ನಡೆ”
ತಾರಾಲೋಚನ ಗಹಗಹಿಸಿದಾಗ ಎಲ್ಲರ ನಗುವೂ ಅವನ ನಗುವಿನೊಂದಿಗೆ ಬೆರೆಯಿತು. ತಾರಾಲೋಚನನ ಕೆನ್ನೆಗೆ ಬೀಸಿ ಹೊಡೆಯುವಷ್ಟು ಕೋಪ ಬಂತು ನನಗೆ. ಅದರೂ ನಿಗ್ರಹಿಸಿದ.
ಸ್ವಲ್ಪ ಹೊತ್ತಿನ ಬಳಿಕ ಗಣಪತಿಯೂ ತನಗೆ ಕೆಲಸವಿದೆ ಅಂದ. ಫಣಿಕ್ಕರ್ ಜೊತೆ ತಾರಾಲೋಚನ ತೇಜಪುರಕ್ಕೆ ಹೊರಟ. ನಾನು ಮತ್ತು ಗಣಪತಿ ಇಬ್ಬರೇ ಡೇರೆಯಲ್ಲಿ ಉಳಿದೆವು. ನನಗೀಗ ಗಣಪತಿಯ ಜೊತೆ ಒಂಟಿಯಾಗಿ ಇರಲು ಭಯವೆನಿಸಿತು. ಅವನ ಪ್ರಶ್ನೆಗಳಿಗೆ ಉತ್ತರಿಸುವಷ್ಟು ತಾಕತ್ತು ನನ್ನಲಿಲ್ಲ. ಇಂದಿನಿಂದ ಹೇಗಪ್ಪಾ ಬಚಾವಾಗುವುದು?-ಎಂದು ಯೋಚಿಸುತ್ತಾ ಕುಳಿತಿದ್ದೆ. ಬೂಟು ಬೆಲ್ಟ್ಗಳನ್ನು ಪಾಲಿಷ್ ಮಾಡಲೆಂದು ಎದ್ದು ಮಣ್ಣನ್ನು ಕಲಸಿ ಬೆಲ್ಟ್ಗೆ ಸವರತೊಡಗಿದೆ. ಗಣಪತಿ ದೀರ್ಘ ಯೋಚನೆಯಲ್ಲಿದ್ದವು. “ನಿನ್ನೆ ನನ್ನ ಪ್ರಶ್ನೆಗೆ ಉತ್ತರಕೊಡದೆ ಮಲಗಿದೆಯಲ್ಲ?” ಅಂದ.
ನಾನು ಉತ್ತರಿಸಿರಲಿಲ್ಲ. ಇವನಿಗ್ಯಾಕೆ ಪ್ರೇಮದ ಬಗ್ಗೆ ತಲೆಬಿಸಿ ಎಂದು ಅಂದುಕೊಂಡೆ.
“ಇಂದಿರೆ ಅಂದರೆ ಯಾರು?”ಎತ್ತಲೋ ನಿರ್ಲಕ್ಷ್ಯದಿಂದ ನೋಡುತ್ತಾ ಗಣಪತಿ ಕೇಳಿದಾಗ ನನ್ನ ಮುಖ ಬಿಳಿಚಿತು. ಅವನನ್ನೇ ನಾನು ನೋಡತೊಡಗಿದೆ.
ಅವನು ತನ್ನ ಮಾತು ಮುಂದುವರಿಸಿದ
“ಇದಕ್ಕೂ ಉತ್ತರ ಕೊಡಲಾರೆಯಾ?”
ಅವನ ಮಾತಿಗೆ ಏನೆಂದು ಉತ್ತರ ಕೊಡುವುದು? ಇಂದಿರೆ ನಾನು ಪ್ರೇಮಿಸುವ ಹುಡುಗಿ ಅಂದರೆ ‘ಪಾರ್ವತಿ ಯಾರು?’ ಎಂದು ಕೇಳಬಹುದು. ಹೀಗಾಗಿ ಮೌನವೇ ವಾಸಿ ಎಂದು ಮಣ್ಣನ್ನು ಬೆಲ್ಟಿಗೆ ಲೇಪಿಸುತ್ತಾ, ಇಂದಿರೆಯಿಂದ ಏನಾದರೂ ಪತ್ರ ಬಂದಿರಬಹುದೇ ಎಂದು ಯೋಚಿಸತೊಡಗಿದೆ.
“ಇದೇನಿದು?”
ಗಣಪತಿಯ ಧ್ವನಿ ಕೇಳಿ ಹಿಂತಿರುಗಿದೆ. ಅವನ ಕೈಯ್ಯಲ್ಲಿ ದಪ್ಪ ಲಕೋಟೆಯೊಂದಿತ್ತು. ಒಂದೇ ನೆಗೆತಕ್ಕೆ ಹಾರಿ ಅದನ್ನು ಕಸಿಯಲು ಪ್ರಯತ್ನಿಸಿದೆ. ಅಷ್ಟೇ ರಭಸದಿಂದ ಆತ ತನ್ನ ಕೈಯನ್ನು ಸರಕ್ಕೆಂದು ಹಿಂದಕ್ಕೆಳೆದು ಕವರನ್ನು ಉಳಿಸಿಕೊಂಡ.
“ಮೊದಲು ಇವಳಾರು ಹೇಳು?” ದೃಢವಾದ ಸ್ವರದಲ್ಲಿ ಗಣಪತಿ ಕೇಳಿದ.
“ನಾವಿಬ್ಬರೂ ಪ್ರೀತಿಸುತ್ತಿದ್ದೇವೆ” ತಲೆ ತಗ್ಗಿಸಿ ನುಡಿದೆ, “ಕಾಗದ ಕೊಡು”
“ನಿನ್ನ ಕಾಗದ ಹಿಡಿದು ನನಗೇನೂ ಆಗಬೇಕಿಲ್ಲ , ತಗೋ” ಎಂದು ಕಾಗದವನ್ನು ನನ್ನತ್ತ ನೀಡಿದ ಗಣಪತಿ ಮತ್ತೆ ಮಾತು ಮುಂದುವರಿಸಿದ.
“ನೋಡು, ಎರಡು ದೋಣಿಗಳ ಮೇಲೆ ಕಾಲಿಟ್ಟಿದ್ದೀಯಾ? ಎರಡರಲ್ಲಿ ಒಂದು ದೋಣಿ ಮಗಚಬಹುದು ಅಥವಾ ಎರಡೂ ಮಗುಚಿ ನೀನೂ ನೀರುಪಾಲಾಗುವ ಸಂಭವವಿದೆ. ಮುಂದಿಡುವ ಹೆಜ್ಜೆಯನ್ನು ಯೋಚಿಸಿ ಇಡು” ಗಣಪತಿ ಹೊರಗೆ ನಡೆದೇ ಬಿಟ್ಟ.
ಕಾಗದವನ್ನು ಓದುವ ಆತುರವೇ ಈಗ ಉಳಿಯಲಿಲ್ಲ. ಪತ್ರ ಓದಿ ಮುಗಿಸಿ ಹಳೆಯ ದಿನಗಳನ್ನು ಮೆಲುಕಿದೆ. ‘ನಾನೇನಾಗುತ್ತಿದ್ದೇನೆ?’ ಎಂಬ ಭಯ ನನ್ನನ್ನು ಕಾಡತೊಡಗಿತು. ಇಂದಿರೆಯ ದುಃಖತಪ್ತ ಮುಖ ಎದುರಾಗುವಾಗಲೇ ಪಾರ್ವತಿಯ ನಗು ಮೊಗ ಎದುರಾಗುತ್ತಿತ್ತು. ನಾನು ಇಂದಿರೆಯನ್ನು ಪ್ರೀತಿಸುತ್ತಿರುವುದು ಸತ್ಯ. ಪಾರ್ವತಿಯನ್ನು ಪ್ರೀತಿಸುವುದಿಲ್ಲ ಎಂದು ಹೇಳಿದರೆ ಅದು ಆತ್ಮವಂಚನೆಯಾದೀತು.
ಆ ದಿನ ಎಲ್ಲೂ ಹೋಗದೆ ಡೇರೆಯಲ್ಲೇ ಉಳಿದೆ.
ಹದಿನೈದು ದಿನ ಪಾರ್ವತಿಯ ಹಳ್ಳಿಯತ್ತ ಮುಖ ಮಾಡಲಿಲ್ಲ. ಇಂದಿರೆಯ ಪತ್ರವನ್ನು ಮತ್ತೆ ಮತ್ತೆ ಓದುತ್ತಾ ಕುಳಿತೆ.
ಒಂದು ಭಾನುವಾರ ತಾತ ಹುಡುಕಿ ಬಂದ. ಈಗ ನಾನು ನಿರುಪಾಯವಾಗಿ ಅವರನ್ನು ಹಿಂಬಾಲಿಸಿದೆ. ತಾತ ಹಾಗೂ ಅವನ ಮಗಳ ಪ್ರೀತಿಯ ಮುಂದೆ ನನ್ನ ನಿರ್ಧಾರ ಕರಗುತ್ತಿದ್ದುದು ಮಾತ್ರವಲ್ಲ ಇಂದಿರೆಯ ಮುಖವೂ ಮಾಯವಾಗುತ್ತಿತ್ತು.
ಪಾರ್ವತಿಯನ್ನು ಸಮಾಧಾನಪಡಿಸಲು ಸಾಕು ಬೇಕಾಯಿತು. ಅವಳು ಇದುವರೆಗೂ ನನ್ನನ್ನು ಪ್ರೀತಿಸುತ್ತೇನೆಂದು ಬಾಯಲ್ಲಿ ನುಡಿದಿಲ್ಲ. ಪೆನ್ನಲ್ಲಿ ಗೀಚಿಲ್ಲ. ಆದರೆ ಅವಳ ಕಂಗಳು ಮನದ ಇಂಗಿತವನ್ನು ಗುಟ್ಟಿನಲ್ಲೇ ತಿಳಿಸಿದ್ದವು. ತಾತ ನನ್ನನ್ನು ಗುಡಿಸಲ ಬಳಿ ಬಿಟ್ಟು ಎತ್ತಲೋ ಹೋದ.
ಈಗ ಪಾರ್ವತಿ ಮುಖ ಮುಚ್ಚಿ ಅಳತೊಟಗಿದಳು. ನಾನು ನಿರುಪಾಯನಾಗಿ ಕೈ ಕಟ್ಟಿ ಕುಳಿತಿದ್ದೆ. ಬಿಕ್ಕುತ್ತಿದ್ದವಳು ನೇರವಾಗಿ ಕೇಳಿದಳು. “ಆಪ್ ಮುಜ್ಸೇ ಶಾದೀ ನಹೀ ಕರೇಗಾ ಕ್ಯಾ?” ನಾನೇನು ಉತ್ತರಿಸಲಿ! ನನಗಾಗಿ ಜೀವ ಕೈಯಲ್ಲಿ ಹಿಡಿದು ಕುಳಿತಿರುವ ಇಂದಿರೆ ಅಲ್ಲಿ, ಒಂದು ದಿನ ನಾನು ಕಾಣದೆ ಹೋದರೆ ಒದ್ದಾಡುವ ಪಾರ್ವತಿ ಇಲ್ಲಿ! ಇವರಿಬ್ಬರಲ್ಲಿ ಕೊನೆಯವರೆಗೆ ನನ್ನ ಬಳಿ ಉಳಿಯುವವರಾರು? ಯಾರನ್ನು ಉಳಿಸಿಕೊಳ್ಳಲಿ ? ಹೇಗೆ ಉಳಿಸಿಕೊಳ್ಳಲಿ?
ಪರ್ಸ್ನಲ್ಲಿ ಇಂದಿರೆಯ ಛಾಯಾಚಿತ್ರ ಬೆಚ್ಚಗೆ ಕುಳಿದಿತ್ತು. ಪ್ಯಾಂಟಿನ ಕಿಸೆಯಿಂದ ಪರ್ಸ್ ತೆಗೆದು ಅದರಿಂದ ಪೋಟೋ ಹೊರ ತೆಗೆದು ಮಾತನಾಡದೆ ಪಾರ್ವತಿಯ ಮುಂದೆ ಹಿಡಿದೆ. ಅವಳಿಗೆ ಎಲ್ಲ ಅರ್ಥವಾಯಿತು. ಅವಳ ಮುಖ ಗಂಭೀರವಾಯಿತು. ಫೋಟೋ ಕೈಯ್ಯಲ್ಲಿ ಹಿಡಿದು ತದೇಕಚಿತ್ತದಿಂದ ನೋಡಿ, “ಭಾಬಿ ಬಹುತ್ ಅಚ್ಛಿ ಹೈ, ಧನ್ಯಹೋ ತೂ...”ಅಂದಳು. ‘ಭಾಭಿ ಎಂಬ ಅವಳ ಶಬ್ದ ನನ್ನ ಗಮನ ಸೆಳೆಯಿತು.
“ತುಮ್ಸೇ ಅಚ್ಛೀ ನಹೀ ಹೈ ವೋ...” ಅಂದೆ ನಾನು.
“ಫಿರ್ಭೀ ಆಪ್ ಜೈಸೆ ಪತಿಕೊ ಪಾಲಿಯಾನಾ...” ಎಂದವಳೇ
“ಭೈಯ್ಯಾ ಮುಝೇ ಮಾಫ್ ಕರ್ನಾ” ಅನ್ನುತ್ತಾ ನನ್ನ ಕಾಲು ಮುಟ್ಟಿದಾಗ ನಾನು ತಬ್ಬಿಬ್ಬಾದೆ. ನಾನು ಎಚ್ಚರಗೊಳ್ಳುವುದರೊಳಗೆ ಪಾರ್ವತಿ ಎದ್ದು ಗೊಡೆಯತ್ತ ಮುಖಮಾಡಿ ಕೆನ್ನೆಯೊರಸಿಕೊಳ್ಳುತ್ತಿದ್ದಳು.
ನಮ್ಮಿಬ್ಬರ ಮಧ್ಯೆ ಗಾಢ ಮೌನ, ನನ್ನ ನಾಲಗೆಯಂತೂ ಮರಗಟ್ಟಿ ಹೋಗಿತ್ತು. ಸ್ವಲ್ಪ ಹೊತ್ತಿನ ಬಳಿಕ ಒಳ ಹೋಗಿ ಮುಖ ತೊಳೆದು ಬಂದ ಪಾರ್ವತಿ ಚಹಾ ಮಾಡಿ ತಂದಿತ್ತಳು.
ನಾನು ಚಹಾ ಕುಡಿಯುತ್ತಾ , ಮಧ್ಯೆ ಮಧ್ಯೆ ಅವಳತ್ತ ನೋಡಿದೆ.
ಈಗ ಪಾರ್ವತಿ ಇಂದಿರೆಯ ಬಗ್ಗೆ ವಿಚಾರಿಸತೊಡಗಿದಳು. ‘ಅವಳಿಗೂ ನಿನ್ನದೇ ವಯಸ್ಸು’ ಅಂದೆ ನಾನು. ಬಾಕಿ ವಿವರವನ್ನೆಲ್ಲ ಹೇಳಿ ಕೊನೆಗೆ ನುಡಿದೆ. “ನಿನ್ನ ತ್ಯಾಗ ಅವಳಿಗೆ ನನ್ನನ್ನು ಮರಳಿಕೊಟ್ಟಿತು.”
“ಅಲ್ಲ ಹಾಗಲ್ಲ, ಭಾಭಿ ನಿಮ್ಮ ಮೇಲಿಟ್ಟಿರುವ ಪ್ರೀತಿ ನಿಮ್ಮನ್ನು ಉಳಿಸಕೊಟ್ಟಿತು” ಎಂದಳು.
ಪಾರ್ವತಿಗೆ ವಿದಾಯ ಹೇಳಿ ಡೇರೆಯತ್ತ ಕಾಲೆಳೆದೆ.
ಇಂದಿರೆಯ ಜೊತೆ ನನ್ನ ವಿವಾಹವಾಯಿತು. ಅಗಲಿದ್ದ ಹೃದಯಗಳೆರಡು ಒಂದಾದಾಗ ನೂರೊಂದು ವಿಷಯಗಳು ಮಾತಿಗೆ. ಒಂದು ರಾತ್ರಿ ಪಾರ್ವತಿಯ ಪರಿಸ್ಥಿತಿ ಬಗ್ಗೆ ಮುಚ್ಚು ಮರೆ ಇಟ್ಟುಕೊಳ್ಳದೇ ಇಂದಿರೆಗೆ ಹೇಳಿದೆ. ಸಾವಧಾನದಿಂದ ಕೇಳಿದ ಅವಳ ಮನಸ್ಸು ಅರ್ಥವಾಗಲಿಲ್ಲ. ಮಲಗಿದ್ದವ ತಿರುಗಿ ಇಂದಿರೆಯನ್ನು ಬಳಸಿ ನುಡಿದೆ. “ನಿನ್ನ ಪ್ರೀತಿ ನನ್ನನ್ನು ನಿನ್ನ ಬಳಿ ಎಳೆದು ತಂದಿತು.”
“ಅಲ್ಲ ಹಾಗಲ್ಲ, ಪಾರ್ವತಿಯ ತ್ಯಾಗ ನಿಮ್ಮನ್ನು ನನ್ನ ಬಳಿ ಅಟ್ಟಿತು” ಎಂದಾಗ ನನ್ನ ಕೈ ನನಗರಿವಿಲ್ಲದಂತೆ ವಾಪಾಸಾದವು.