Click here to Download MyLang App

ಪತ್ತೆ - ಬರೆದವರು : ಸಂಪತ್ ಸಿರಿಮನೆ

“ವಾವ್ ಒಳ್ಳೇ ಶೆರ್ಲಾಕ್ ಹೋಮ್ಸ್ ತುಂಡು ಕಣಯ್ಯಾ ನೀನು!, ಏನಾಯ್ತು ಕೊನೆಗೆ?, ಆ ಬ್ಯಾಗ್ ಯಾರು ತಗೊಂಡ್ರು?”
ಅಲೋಕ ನನ್ನ ಅನುಭವಾಮೃತವನ್ನು ಕೇಳಿಸಿಕೊಳ್ಳುವುದರಲ್ಲಿ ತಲ್ಲೀನನಾಗಿದ್ದ. ಕೇಳುವವರ ಕಿವಿಗಳು ನನ್ನ ಕಥೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿವೆಯೆಂದರೆ ಮುಗಿಯಿತು, ನನ್ನ ನಾಲಿಗೆಯನ್ನು ಹಿಡಿಯುವವರೇ ಇರಲಿಲ್ಲ. ಅಂತ್ಯ ಕೇಳಲು ಉತ್ಸುಕವಾಗಿದ್ದ ಅಲೋಕನ ಕಣ್ಣುಗಳನ್ನು ನೋಡಿ ನನ್ನ ಮಾತಿನ ಶೈಲಿಯ ಬಗ್ಗೆ ನನಗೇ ಹೆಮ್ಮೆಯಾಯಿತು.
“ತುಂಡೂ ಇಲ್ಲ ಅಂಡೂ ಇಲ್ಲ, ಯಾರು ತಗೊಂಡಿರ್ಬೋದು ಗೆಸ್ ಮಾಡ್ತಾ ಇರು, ಬಂದೆ ಒಂದ್ನಿಮಿಷ”
ಕುತೂಹಲವನ್ನು ಇನ್ನೂ ಸ್ವಲ್ಪ ಕಾದಿಡೋಣ ಎಂದು ಅಲ್ಲಿಂದ ಎದ್ದು ನಸುನಗುತ್ತಾ ನೀರು ಕುಡಿಯಲು ಒಳಗೆ ಬಂದೆ. ಇಲ್ಲಿಯವರೆಗೆ ಏನೇನು ಹೇಳಿದೆನೋ ಎಲ್ಲಾ ಘಟನೆಗಳೂ ಮತ್ತೊಮ್ಮೆ ಕಣ್ಣಮುಂದೆ ಹಾದುಹೋದವು.

ಹೊಸಪೇಟೆಯಲ್ಲಿ ನಡೆಯಲಿದ್ದ ವಿಶು ದೊಡ್ಡಪ್ಪನ ಮಗನ ಅಂದರೆ ನನ್ನಣ್ಣನ ಮದುವೆಗೆಂದು ನಮ್ಮೂರಿನಿಂದ ದಿಬ್ಬಣ ಹೊರಟಿತ್ತು. ಮದುಮಗ ಮತ್ತು ಅವನ ತಂದೆ, ತಾಯಿ ಕಾರಿನಲ್ಲಿ ಝಮ್ಮಂತ ಮುಂದೆ ಹೋದರೆ ಹಿಂದೆ ಕೀಲುನೋವಾಗಿರುವ ಕುದುರೆಯಂತೆ ಕುಂಟುತ್ತಾ ಸಾಗುತ್ತಿದ್ದ ಬೆನಕ ಬಸ್ಸಿನಲ್ಲಿ ನಮ್ಮ ಕುಟುಂಬದವರೆಲ್ಲರೂ ಹೊರಟಿದ್ದೆವು. ಯಾವ ಊರಿಗೆ ಹೋಗಬೇಕಾದರೆ ಯಾವ ದಾರಿ ಅತೀ ಹತ್ತಿರದ್ದು ಎಂದು ಹುಡುಕಿ ಮಾರ್ಗದರ್ಶನ ಕೊಡುವುದರಲ್ಲೆಲ್ಲಾ ನಾನು ಭಾರೀ ಮುಂದಾದರೂ ಇಂದು ಮಾತ್ರ ಬಸ್ಸು ನೇರ ದಾರಿ ಬಿಟ್ಟು ಸುತ್ತಿಬಳಸಿ ಹೊರಟಿದ್ದರೂ ಏನೂ ಮಾತನಾಡದೇ ಹಿಂದಿನ ಸೀಟಿನಲ್ಲಿ ಬಾಯಿಮುಚ್ಚಿಕೊಂಡು ಕುಳಿತಿದ್ದೆನೆಂದರೆ ಅದಕ್ಕೆ ಕಾರಣ ಚಾಲಕನ ಪಕ್ಕ ಕುಳಿತಿದ್ದ ಸೀನ ದೊಡ್ಡಪ್ಪ. ಕುಟುಂಬದಲ್ಲಿ ಯಾರಿಗೂ ಅವರನ್ನು ಕಂಡರೆ ಆಗುತ್ತಿರಲಿಲ್ಲ. ನಮ್ಮ ಮುತ್ತಾತನ ಕಾಲದಿಂದಲೂ ಎಲ್ಲರೂ ಕೃಷಿ, ಸರ್ಕಾರಿ ನೌಕರಿ ಇತ್ಯಾದಿ ಮಾಡಿಕೊಂಡು ಬದುಕಿದ್ದರೆ ಇವರು ಮಾತ್ರ ವಿಚಿತ್ರವಾಗಿ ಶೃಂಗೇರಿ ಪೇಟೆಯಲ್ಲಿ ಚಪ್ಪಲಿ ಅಂಗಡಿ ತೆರೆದು ಹಿರಿಯರೆಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಅಜ್ಜನ ವೈದಿಕಕ್ಕೆಂದು ಅವರು ಬಂದಾಗ ಬೇಕೆಂದೇ ಅವರಿಗೆ ಮಡಿ ಬಟ್ಟೆಯನ್ನು ತೆಗೆದಿಡದೇ ಜಗ್ಗು ದೊಡ್ಡಪ್ಪ “ಜಾತಿ ಬಿಟ್ಟೋರು ಜಾತಕ ತೋರಿಸಿದಂಗೆ ಇಡೀ ದಿನಾ ಕೈಯಲ್ಲಿ ಚಪ್ಲಿ ಮುಟ್ಟೋರಿಗೆಂತ ಮಡಿ ಮೈಲಿಗೆ ಮಾರಾಯಾ?!” ಎಂದು ಗೇಲಿ ಮಾಡಿ ಅದಕ್ಕೆ ಪ್ರತಿಯಾಗಿ ಇವರು “ಯಾವಾಗ್ಲೂ ಆ ಎಂ.ಎಲ್.ಎ ಸುರೇಶನ್ ಚಪ್ಲಿ ನೆಕ್ತಾ ಇರ್ತೀಯಾ, ನಾನ್ ಬರೀ ಕೈಯಲ್ಲಿ ಮುಟ್ಟಿದ್ದಕ್ಕೆ ಮಾತಾಡ್ತೀಯಲ್ಲೋ!” ಎಂದು ಹೇಳಿ, ಅದಕ್ಕೆ ಕೆಲವರು ಜೋರಾಗಿ ನಕ್ಕು, ಜಗ್ಗು ದೊಡ್ಡಪ್ಪನಿಗೆ ಅವಮಾನವಾದಂತಾಗಿ ಎಲ್ಲರೆದುರು ಇಬ್ಬರೂ ಪಂಚೆ ಹರಿದುಕೊಳ್ಳುವ ಮಟ್ಟಿಗೆ ಜಗಳವಾಡಿದ್ದರು. ಅಜ್ಜಯ್ಯ ಕೂಡಾ ಆ ದಿನ ಇಬ್ಬರೂ ಕೈ ಕೈ ಹಿಡಿದು ತಪ್ಪಾಯಿತು ಎಂದು ಹೇಳುವವರೆಗೆ ಪಿಂಡ ತಿನ್ನಲು ಬಾರದೇ ಸತಾಯಿಸಿದ್ದರು!.
ಸೀನ ದೊಡ್ಡಪ್ಪನನ್ನು ದೂರಲು, ದೂರವಿಡಲು ಇದರ ಹೊರತಾಗಿಯೂ ಬೇಕಾದಷ್ಟು ಕಾರಣಗಳು ನಮ್ಮ ಕುಟುಂಬದವರಿಗೆ ಸಿಕ್ಕಿದ್ದವು. ರಾಜಕೀಯವಾಗಿ ನಮ್ಮ ಇಡೀ ಕುಟುಂಬ ತಲೆಮಾರುಗಳಿಂದ ಬೆಂಬಲಿಸಿಕೊಂಡು ಬರುತ್ತಿದ್ದ ಪಕ್ಷವನ್ನು ಬಿಟ್ಟು ಅವರು ಇನ್ನೊಂದು ಪಕ್ಷದ ಜೊತೆ ಸೇರಿ ಕಾರ್ಯಕರ್ತರಾಗಿಯೂ ದುಡಿದು ಎಲ್ಲರಿಗೆ ಸಿಟ್ಟುಬರಿಸಿದ್ದರು. ಆ ಪಕ್ಷ ಅಧಿಕಾರಕ್ಕೆ ಬಂದಾಗ ಬಡವರಿಗೆ ಸಿಗಬೇಕಾದ ಸೈಟುಗಳಲ್ಲಿ ಒಂದಷ್ಟನ್ನು ಸುಳ್ಳುಪತ್ರ ತೋರಿಸಿ ತೆಗೆದುಕೊಂಡು, ಅದನ್ನು ನಂತರದಲ್ಲಿ ಮಾರಿ ಒಂದಿಷ್ಟು ದುಡ್ಡು ಮಾಡಿಕೊಂಡು ಕಾರು, ಬಂಗಲೆ ಮಾಡಿಕೊಂಡಿದ್ದರೆಂದೂ ವದಂತಿಯಿತ್ತು. ವೈಯಕ್ತಿಕವಾಗಿ ನನಗೆ ಅವರ ಮೇಲೆ ಯಾವ ದ್ವೇಷವೂ ಇರಲಿಲ್ಲ. ಮೊನ್ನೆ ತಾನೇ ಸೆಮಿಸ್ಟರ್ ಮುಗಿಸಿ ರಜಕ್ಕೆ ಊರಿಗೆ ಹೋದಾಗ ಒಳ್ಳೆ ದರ್ಜೆಯ ಚಪ್ಪಲಿಗಳನ್ನು ಉಚಿತವಾಗಿ ಉಡುಗೊರೆಯಂತೆ ಕೊಟ್ಟಿದ್ದರು, ಎಲ್ಲಿ ಕಂಡರೂ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಆದರೆ ಅವರ ಜೊತೆ ನಾನು ನಗುತ್ತಾ ಮಾತನಾಡಿದಾಗಲೆಲ್ಲಾ ಉಳಿದ ಸಂಬಂಧಿಕರು ನನ್ನನ್ನು ವಿಚಿತ್ರವಾಗಿ ನೋಡುತ್ತಿದ್ದಿದ್ದಲ್ಲದೇ ಅಪ್ಪ-ಅಮ್ಮನ ಕೈಯಲ್ಲಿ ಸರಿಯಾಗಿ ಬೈಗುಳ ಕೇಳಬೇಕಾಗುತ್ತಿತ್ತು. ಅದೇ ಕಾರಣಕ್ಕೆ ಆ ಗೊಡವೆಯೇ ಬೇಡ ಎಂದೇ ನಾನು ಹಿಂದಿನ ಸೀಟಿನಲ್ಲಿ ತಲೆಮರೆಸಿಕೊಂಡಿದ್ದೆ.
ಬಸ್ಸು ಶಿವಮೊಗ್ಗಕ್ಕೆ ಬರುತ್ತಿದ್ದಂತೆಯೇ ಪ್ರತಿದಿನ ಕಾಡು, ಗುಡ್ಡ, ಹಸಿರು, ಹಕ್ಕಿ ನೋಡಿ ಅಭ್ಯಾಸವಾಗಿದ್ದ ನಮ್ಮ ಸಂಬಂಧಿಕರಿಗೆ ಹೊಸಲೋಕ ಕಂಡಂತೆನಿಸಿ ದೊಡ್ಡಮ್ಮಂದಿರಿಬ್ಬರು ಆಟದ ಮೈದಾನ ನೋಡಿಕೊಂಡು “ಅಲ್ನೋಡು ಬಯಲುಸೀಮೆ ಶುರುವಾಯ್ತು” ಎಂದು ಉದ್ಘರಿಸಿದರು. ಅಷ್ಟರಲ್ಲಿ ಬಸ್ಸು ಹಂಪ್ ಹಾರಿಸಿ ನಾನು ಸೀಟು ಬಿಟ್ಟು ಎಗರಿದಾಗ ನನ್ನ ಮುಖ ಕಂಡು ಸೀನ ದೊಡ್ಡಪ್ಪ “ಓ ಮಾಣಿ ಒಂಚೂರು ಮೊಬೈಲಲ್ಲಿ ದಾರಿ ನೋಡಿ ಹೇಳು ಮಾರಾಯಾ, ನೀ ಕೂತಿದ್ದೇ ಕಾಣ್ಲಿಲ್ಲ” ಎಂದು ನನ್ನನ್ನು ಕರೆದೇಬಿಟ್ಟರು. ಹಿಂದಿನ ಸೀಟಿನಿಂದ ಗೇರ್ ಬಾಕ್ಸಿನವರೆಗಿನ ನನ್ನ ಒಂದೊಂದು ಹೆಜ್ಜೆಯೂ ಕೆಂಡದ ಮೇಲಿಟ್ಟಂತೆಯೇ ಭಾಸವಾಗುತ್ತಿತ್ತು. ಅಮ್ಮನ ಮುಖದಲ್ಲಿ ಆಗಲೇ ಸಿಟ್ಟು ಜಮೆಯಾಗತೊಡಗಿದ್ದು ಕಾಣಿಸಿತು. ಎತ್ತಲೂ ನೋಡದೇ ಚಾಲಕನ ಬಳಿ ಬಂದು “ಹರಿಹರದ ಮೇಲೆ ಹೋಗಿ, ಅದೇ ಹತ್ರ, ಚಿತ್ರದುರ್ಗದ್ ಮೇಲೆ ಬೇಡ” ಎಂದು ಹೇಳಿದೆ. ಸೀನ ದೊಡ್ಡಪ್ಪ “ರಿಸಲ್ಟ್ ಬಂತೇನೋ ಮಾಣಿ?, ಹೆಂಗಿದೆ ಚಪ್ಲಿ?, ಕೊಲ್ಲಾಪುರದ್ದು, ಒಳ್ಳೆ ಗಟ್ಟಿಯಿದೆ, ನಮ್ಮೂರ್ ಮಳೆಗೆ ಭರ್ಜರಿ ಆಗುತ್ತೆ” ಎಂದು ಮಾತನಾಡಲು ಶುರುವಿಟ್ಟರು. ಇತ್ತ ಕಣ್ಣುಹಾಯಿಸಿದರೆ ಜಗ್ಗು ದೊಡ್ಡಪ್ಪ ಕೆಕ್ಕರಿಸಿ ನೋಡುತ್ತಿದ್ದರು. ಆ ಕ್ಷಣದಲ್ಲಿ ಜ್ಞಾನೋದಯದಂತದ್ದೇನೋ ಆಯಿತು. ಈಗ ಇಲ್ಲಿ ಸೀನ ದೊಡ್ಡಪ್ಪ ಇರದಿದ್ದರೆ ಎಲ್ಲರೂ ಜಗ್ಗು ದೊಡ್ಡಪ್ಪನನ್ನು ದುರುಗುಟ್ಟಿಕೊಂಡು ನೋಡುತ್ತಿದ್ದರು, ಅವರಿಲ್ಲದಿದ್ದರೆ ಅನಂತು ಚಿಕ್ಕಪ್ಪನನ್ನು, ಅವರಿಲ್ಲದಿದ್ದರೆ ಮತ್ತೊಬ್ಬರನ್ನು!.
ಪಾಲು ಮಾಡಿದಾಗ ತಮಗೆ ಕಡಿಮೆ ಜಮೀನು ಸಿಕ್ಕಿತೆಂಬ ಸಿಟ್ಟಿಗೆ ಉಳಿದ ಅಣ್ಣತಮ್ಮಂದಿರ ಜಮೀನುಗಳಲ್ಲಿ ಸರ್ಕಾರಿ ಕಾಡು ಒತ್ತುವರಿಯಾಗಿ ಅಮೂಲ್ಯ ಮರಗಳು ನಾಶವಾಗಿವೆಯೆಂದು ಪರಿಸರವಾದಿಗಳನ್ನು ಅವರ ವಿರುದ್ಧ ಎತ್ತಿಕಟ್ಟಿ ವರ್ಷಗಳ ಕಾಲ ಕೋರ್ಟು-ಕಛೇರಿ ಅಲೆಯುವಂತೆ ಮಾಡಿದ್ದರು ಎಂಬ ಗುಮಾನಿಯ ಕಾರಣ ಜಗ್ಗು ದೊಡ್ಡಪ್ಪನಿಗೆ ಅವರಿಲ್ಲದಾಗ ಎಲ್ಲರೂ ಕಚಡಾ ನನ್ಮಗ ಎಂದು ಬೈಯುತ್ತಿದ್ದರು. ಇನ್ನು ತನ್ನ ತೋಟ-ಗದ್ದೆಗಳಿಗಿಂತ ಇನ್ಯಾರದಾದರೂ ಗದ್ದೆಗಳಲ್ಲಿ ಭರ್ಜರಿ ಬೆಳೆಯಾದರೆ ಹೊಟ್ಟೆಕಿಚ್ಚಿನಿಂದ ದನ, ಹಂದಿಗಳನ್ನು ಜಮೀನಿಗೆ ಬಿಟ್ಟು ಬೆಳೆ ಹಾಳು ಮಾಡುವ ಹಲ್ಕಾ ನನ್ಮಗ ಎಂದು ಅನಂತು ಚಿಕ್ಕಪ್ಪನಿಗೆ ಎಲ್ಲರೂ ಬೈಯುತ್ತಿದ್ದರು. ಇನ್ನು ನಾಗು ದೊಡ್ಡಪ್ಪ ತಮ್ಮ ಮಗಳಿಗೆ ಇನ್ನೂ ಮದುವೆಯಾಗದ ಕಾರಣ ನಮ್ಮ ಕುಟುಂಬದಲ್ಲಿ ಅವಳಿಗಿಂತ ಚಿಕ್ಕ ಹುಡುಗಿಯರಿಗೆ ಮದುವೆ ಗೊತ್ತಾದರೆ “ಹುಡುಗಿ ಸರಿಯಿಲ್ಲ” ಎಂದು ಮೂಗರ್ಜಿ ಬರೆದು ಮದುವೆ ತಪ್ಪಿಸುವ ಮನೆಹಾಳ ಕೆಲಸ ಮಾಡುತ್ತಾರೆ ಎಂಬ ಮಾತಿತ್ತು. ಮತ್ತೊಬ್ಬ ಮಾವ ಅಡಿಕೆ ಕುಯಿಲಿನ ಸಮಯದಲ್ಲಿ ಕೆಲಸಗಾರರಿಗೆ ಎಲ್ಲರ ಬಗ್ಗೆ ಚಾಡಿ ಹೇಳಿ ಸರಿಯಾದ ಸಮಯಕ್ಕೆ ಕುಯಿಲಾಗಲು ಬಿಡದೇ ನರಳುವಂತೆ ಮಾಡುತ್ತಾರೆ ಎಂಬ ಸಂಶಯವಿತ್ತು. ಯಾರ ಸಹವಾಸವೂ ಬೇಡ ಎಂದು ಊರುಬಿಟ್ಟು ಅಮೆರಿಕಾ ಸೇರಿದ್ದ ಕೊನೇ ಚಿಕ್ಕಪ್ಪನ ಮೇಲೂ ಆರೋಪಗಳಿಲ್ಲದೇ ಇರಲಿಲ್ಲ. ಅನಂತು ಚಿಕ್ಕಪ್ಪನ ಮಗಳು ಬೆಂಗಳೂರಿಗೆ ಹೋಗಿ ಯಾರನ್ನೋ ಪ್ರೀತಿ ಮಾಡಿ ಮದುವೆಯಾಗುತ್ತೇನೆಂದಾಗ ಆಕೆ ರೀತಿ ರಿವಾಜು ಬಿಟ್ಟು ಅಸಹ್ಯ ಮಾಡಿರುವುದಕ್ಕೆ ಕೊನೇ ಚಿಕ್ಕಪ್ಪನದೇ ಕುಮ್ಮಕ್ಕು, ಅಮೆರಿಕಾ ಸಂಸ್ಕೃತಿ ಪರಿಚಯಿಸಿ ಹೆಣ್ಮಕ್ಕಳನ್ನು ಹಾಳುಗೆಡವುತ್ತಿದ್ದಾನೆ ಎಂದು ಎಲ್ಲರೂ ಬೈಯುತ್ತಿದ್ದರು. ಮೇಲಿನ ಯಾರ ಮೇಲೂ, ಯಾವ ಆರೋಪಗಳೂ ಸಾಬೀತಾಗಿರದಿದ್ದರೂ ಅನುಮಾನಗಳನ್ನು ನಂಬುವುದಾದರೆ ಬಸ್ಸಿನ ಪೂರ್ತಿ ಧಗಾಕೋರರೂ, ಖದೀಮರೂ, ಕುಟುಂಬದವರ ಮೇಲೆಯೇ ಕಿಡಿಕಾರುವ ಪರಮದುಷ್ಟರೂ ತುಂಬಿಕೊಂಡಿದ್ದರೆನ್ನಬಹುದು !.

ಹೊಸಪೇಟೆಯಲ್ಲಿ ಬೀಗರ ಪರಿಚಯದ ಬ್ಯಾಂಕ್ ಮ್ಯಾನೇಜರ್ ಒಬ್ಬರು ನಮ್ಮೆಲ್ಲರಿಗಾಗಿ ಅವರ ಮೂರಂತಸ್ತಿನ ಮನೆಯ ಮೇಲುಗಡೆ ಇದ್ದ ವಿಶಾಲ ಕೋಣೆಯನ್ನು ಬಿಟ್ಟುಕೊಟ್ಟಿದ್ದರು. ಇರುವೆಗಳ ಸಾಲಿನಂತೆ ಐವತ್ತರಿಂದ ಅರವತ್ತು ಹಾಸಿಗೆಗಳನ್ನು ನೆಲ ಮುಚ್ಚುವಂತೆ ಹಾಸಲಾಗಿತ್ತು. ಚಿಕ್ಕಮಕ್ಕಳೆಲ್ಲಾ ಸ್ವರ್ಗ ಸಿಕ್ಕಂತೆ ಹಾಸಿಗೆಗಳ ಮೇಲೆ ಬಿದ್ದೆದ್ದು ಒದ್ದಾಡಿ ಆಟವಾಡಲು ಶುರುಮಾಡಿದರು. ಗಂಡಸರೆಲ್ಲರೂ ಆ ರಾತ್ರಿ ಅಲ್ಲೇ ಕಳೆಯುವುದೆಂದು ನಿರ್ಧಾರವಾಯಿತು. ರಾತ್ರಿಯೂಟ ಮುಗಿಸಿ ನಾನು ಪ್ಯಾಂಟು ಬದಲಿಸಿ ಬರ್ಮುಡಾ ಹಾಕುವುದರೊಳಗೆ ದೊಡ್ಡಪ್ಪಚಿಕ್ಕಪ್ಪಂದಿರಾದಿಯಾಗಿ ಎಲ್ಲರೂ ಇಸ್ಪೀಟು ಶುರುಮಾಡಿದ್ದರು. ಹತ್ತು ರೂಪಾಯಿ ಮತ್ತು “ಫ್ರೆಂಡ್ಲಿ ಆಗಿ ಒಂದೆರಡು ಆಟ ಅಷ್ಟೇ” ಎಂಬ ಮಾತಿನೊಂದಿಗೆ ಶುರುವಾದ ಜೂಜು ಸಾವಿರದ ಲೆಕ್ಖ ಮುಟ್ಟಿ ಅದಾಗಲೇ ಕೆಲವರ ಮುಖದಲ್ಲಿ ಗೆಲ್ಲುತ್ತಿರುವ ಕುಹಕದ ನಗೆಯೂ, ಹಲವರ ಮುಖದಲ್ಲಿ ಜೇಬು ಖಾಲಿಯಾಗುತ್ತಿರುವ ಅಸಹನೆಯೂ ಕಾಣುತ್ತಿತ್ತು. “ಅದೃಷ್ಟಕ್ಕೆ ಐದಾಟ ಗೆದ್ದು ಅರ್ಧಕ್ಕೆ ಬಿಟ್ಟುಹೋಗೋ ಹೇಡಿ ಮುಂಡೇಮಕ್ಳನ್ನೆಲ್ಲಾ ಆಟಕ್ ಯಾಕೆ ಸೇರಿಸ್ತೀರಾ?”, “ಅದೃಷ್ಟ ನಿನ್ ಪಿಂಡ, ಇಸ್ಪೀಟ್ ಅಂದ್ರೆ ಕ್ರಿಕೆಟ್ಟು-ಕಬಡ್ಡಿ ತರ ಕೈಕಾಲು ಅಲ್ಲಾಡ್ಸೋದಲ್ಲ, ತಲೆ ಬೇಕು, ನಿಂಗಿಲ್ಲ ಅದು” ಎಂದೆಲ್ಲಾ ಬೈಗುಳಗಳು ಕೇಳಿಸಲು ಶುರುವಾಗಿ ಸಣ್ಣಮಟ್ಟದ ಕೈ-ಕೈ ಮಿಲಾಯಿಸುವಿಕೆಯೂ ಆಯಿತು. ಆ ಗುಂಪನ್ನು ನೋಡಿದವರಾರೂ ಇವರೆಲ್ಲಾ ಒಂದೇ ಕುಟುಂಬದವರು ಎಂದು ಹೇಳಲು ಸಾಧ್ಯವೇ ಇರಲಿಲ್ಲ.
ಮೊಬೈಲಲ್ಲಿ ಆಟವಾಡುತ್ತಿದ್ದ ನನ್ನತ್ತ ತಿರುಗಿ ಜಗ್ಗು ದೊಡ್ಡಪ್ಪ “ಏನೋ ಮಾಣಿ, ಇಂಜಿನಿಯರಿಂಗಲ್ಲಿ ಯಾವ್ದೋ ಹುಡುಗೀನ ಹುಡುಕ್ಕಂಡಿದ್ಯಾ ಅಂತ ಕಾಣುತ್ತೆ, ಅವಾಗಿಂದ ಮೆಸೇಜು ಮಾಡ್ತಿದೀಯಾ” ಎಂದು ಹೇಳಿದಾಗ ಅವರ ಮಾತು ನಿಜವಾದರೂ ಆಗಬಾರದಿತ್ತೇ ಎಂದೆಣಿಸಿ “ಹಂಗೇನಿಲ್ಲ ದೊಡ್ಡಪ್ಪಾ” ಎಂದು ಸುಮ್ಮನಾದೆ. ಇನ್ನು ಎಚ್ಚರವಿದ್ದರೆ ಎಲ್ಲರೂ ಮಾರ್ಕು, ಕ್ಯಾಂಪಸ್ಸು ಅಂತ ಬುಡಕ್ಕೇ ಬೆಂಕಿ ಇಡುತ್ತಾರೆನ್ನುವ ಭಯವಾಗಿ ಮೊಬೈಲು ಬದಿಗಿಟ್ಟು ಜೇಬಿನಿಂದ ಪರ್ಸು ತೆಗೆದು ದುಡ್ಡೆಷ್ಟಿದೆ ಎಂದೊಮ್ಮೆ ಎಣಿಸಿ ಬದಿಯಲ್ಲಿ ನೇತುಹಾಕಿದ್ದ ಪ್ಯಾಂಟಿನ ಜೇಬಿನೊಳಗೆ ಪರ್ಸನ್ನು ಹಾಕಿ ಹೊದಿಕೆಯೆಳೆದುಕೊಂಡು ಕಣ್ಣುಮುಚ್ಚಿದೆ. “ಮಾಣಿ ಭಾರೀ ದುಡ್ಡಿಟ್ಟಂಗೆ ಕಾಣುತ್ತೆ, ಒಂದ್ ಐನೂರು ಕೊಟ್ಟಿರೋ, ಒಂದ್ ಗಂಟೇಲಿ ಸಾವಿರ ಮಾಡಿಕೊಡ್ತೀನಿ” ಎಂಬ ನಾಗು ದೊಡ್ಡಪ್ಪನ ಮಾತು ಕೇಳಿ ಕಣ್ಣು ಬಿಡಲೋ ಬೇಡವೋ ಎಂಬ ಗಾಬರಿ ಮತ್ತು ಗೊಂದಲದಲ್ಲಿರುವಾಗಲೇ “ಲೇ ನಾಗು, ಮುಚ್ಕೊಂಡು ಆಟ ಆಡೋ, ಮಕ್ಳ ಹತ್ರ ದುಡ್ಡು ಕೇಳ್ತೀಯಲ್ಲ, ಮಾನ ಮರ್ಯಾದೆ ಇಲ್ವಾ?” ಎಂಬ ಅನಂತು ಚಿಕ್ಕಪ್ಪನ ಮಾತು ಕೇಳಿ ಕಣ್ತೆರೆಯದೇ ಹಾಗೇ ಮಲಗಿದೆ.

ಮದುವೆಯ ದಿನ ಬೆಳಗ್ಗೆ ಎದ್ದು ಸ್ನಾನ ಮಾಡಿ, ನಾವು ಉಳಿದುಕೊಂಡಿದ್ದ ಮನೆಯಿಂದ ಐನೂರು ಮೀಟರ್ ದೂರದಲ್ಲಿದ್ದ ಕಲ್ಯಾಣ ಮಂಟಪದ ಕಡೆಗೆ ಹೊರಡೋಣ ಎಂದು ಪ್ಯಾಂಟು ಹಾಕಿಕೊಳ್ಳಲು ಹೋದರೆ ಹಗುರವೆನ್ನಿಸಿತು. ತಡಕಾಡಿ ನೋಡಿದಾಗ ನನ್ನ ಪರ್ಸು ಮಂಗಮಾಯವಾಗಿತ್ತು!. ಒಂದು ಕ್ಷಣ ಎದೆ ಝಲ್ಲೆಂದಿತು. ನನ್ನ ವೋಟರ್ ಐಡಿ, ಆಧಾರ್ ಕಾರ್ಡು, ಡ್ರೈವಿಂಗ್ ಲೈಸೆನ್ಸು, ಕಾಲೇಜ್ ಐಡಿ ಎಲ್ಲವೂ ಇದ್ದ ಅದು ಹೋದರೆ ನಾನು ಭಾರತೀಯ ನಾಗರಿಕನೆಂದು ಸಾಬೀತುಪಡಿಸುವುದಕ್ಕೆ ದಾಖಲೆಗಳೇ ಇರಲಿಲ್ಲ!. ಜೊತೆಗೆ ಒಂದುಸಾವಿರ ದುಡ್ಡು ಬೇರೆ ಕಳೆದುಕೊಂಡಿದ್ದಕ್ಕಾಗಿ ಮನೆಯಲ್ಲಿ ಕೇಳಬೇಕಾದ ಬೈಗುಳ ನೆನಪಾಗಿ ಕಣ್ಣುಕತ್ತಲಿಟ್ಟಿತು. ಸಾವರಿಸಿಕೊಂಡು ಸುತ್ತಲೂ ನೋಡಿದೆ. ನಾನೀಗ ಪತ್ತೇದಾರಿಕೆ ಮಾಡಲೇಬೇಕಾಗಿತ್ತು. ಎಲ್ಲರೂ ಪಂಚೆ ಉಟ್ಟು ಹೊರಡಲು ತಯಾರಾಗುತ್ತಿದ್ದರು. ಇದು ಕಳ್ಳತನವೆನ್ನುವುದರಲ್ಲಿ ನನಗೆ ಯಾವ ಸಂಶಯವೂ ಉಳಿದಿರಲಿಲ್ಲವಾದ್ದರಿಂದ ತಕ್ಷಣ ಹೋಗಿ ಬಾಗಿಲಿಗಡ್ಡನಿಂತು ಒಬ್ಬೊಬ್ಬರನ್ನೇ ಪರೀಕ್ಷಿಸಿ ತಪಾಸಣೆ ಮಾಡಿ ಹೊರಗೆ ಬಿಡಲೇ ಎಂದು ಯೋಚಿಸಿದೆ. ಐವತ್ತು ಜನರ ಪಂಚೆ ಬಿಚ್ಚಿಸಿ ಬರ್ಮುಡಾಕ್ಕೆ ಕೈಹಾಕುವುದು ಸಮಂಜಸವೆನ್ನಿಸಲಿಲ್ಲ. “ಯಾರ್ ನನ್ ಪರ್ಸ್ ತಗೊಂಡಿದೀರೋ ಮುಚ್ಕೊಂಡು ವಾಪಸ್ ಕೊಡಿ” ಎಂದು ಕಿರುಚೋಣ ಎನ್ನಿಸಿದರೂ ಸುತ್ತಮುತ್ತಲಿರುವವರೆಲ್ಲಾ ಸಂಬಂಧಿಕರೇ ಆಗಿದ್ದರಿಂದ ಸುಮ್ಮನಾದೆ. ತಾಳ್ಮೆಯಿಂದ ಯೋಚಿಸಿದಾಗ ಅಷ್ಟು ದಪ್ಪ ಪರ್ಸನ್ನು ಅಡಗಿಸಿ ಹೊರಗಡೆ ತೆಗೆದುಕೊಂಡು ಹೋಗುವ ಸಾಧ್ಯತೆ ಕಡಿಮೆ, ಇಲ್ಲೇ ಅಡಗಿಸಿಡುತ್ತಾರೆ ಎಂದೆನಿಸಿತು. ಇಡೀ ಕೋಣೆಯನ್ನು ಕೂಲಂಕುಷವಾಗಿ ಪರಿಶೀಲಿಸಲು ಕೋಣೆ ಖಾಲಿಯಾಗಬೇಕಿತ್ತು. ಉಕ್ಕಿ ಬರುತ್ತಿದ್ದ ಆಕ್ರೋಶವನ್ನು ಅದುಮಿಟ್ಟುಕೊಂಡು ಎಲ್ಲರೊಡನೆ ಮಂಟಪದ ಕಡೆಗೆ ಹೊರಟೆ. ಎಲ್ಲರೂ ತಮ್ಮ ಬ್ಯಾಗುಗಳನ್ನು ಕೋಣೆಯಲ್ಲಿಯೇ ಬಿಟ್ಟಿದ್ದರು. ಕೊನೆಯಲ್ಲಿ ಸೀನ ದೊಡ್ಡಪ್ಪ ಮಾತ್ರ ಕೋಣೆಯಲ್ಲಿ ಉಳಿದಿದ್ದರು.
ತಿಂಡಿ ಮುಗಿಸಿ ಎಲ್ಲರೂ ಮದುವೆ ಶಾಸ್ತ್ರಗಳಿಗೆ ಸಾಕ್ಷಿಯಾಗಲು ಮಂಟಪದ ಕಡೆಗೆ ಹೋಗುತ್ತಿದ್ದರು. ಎಲ್ಲರನ್ನೂ ಸೂಕ್ಷ್ಮವಾಗಿ ಗಮನಿಸಿದೆನಾದರೂ ನಾಗು ದೊಡ್ಡಪ್ಪನ ಮೇಲೆಯೇ ನನ್ನ ಸಂಶಯವಿದ್ದದ್ದು. ಅದಕ್ಕೆ ತಕ್ಕಂತೆ ಯಾರ ಬಳಿಯೂ ಮಾತನಾಡದೇ ಅವರು ಅನುಮಾನಾಸ್ಪದವಾಗಿ ಬದಿಯಲ್ಲಿ ಕುಳಿತಿದ್ದರು. “ಎಂತದಾ ಇಸ್ಪೀಟಲ್ಲಿ ದುಡ್ಡು ಸೋತಿದ್ದಕ್ಕೆ ಮಾತೇ ನಿಲ್ಸೋದಾ?” ಎನ್ನುತ್ತಾ ಬಂದ ಸೀನ ದೊಡ್ಡಪ್ಪ ನಾಗು ದೊಡ್ಡಪ್ಪನ ಪಕ್ಕ ಕುಳಿತರು. ಅವರಿಬ್ಬರ ಲೋಕಾಭಿರಾಮ ಅಂತ್ಯವಾಗುವುದರೊಳಗೆ ಒಂದು ಯುಗ ಕಳೆದಂತೆನ್ನಿಸಿತು. ಸೀನ ದೊಡ್ಡಪ್ಪ ಎದ್ದ ಕೂಡಲೇ ಅವರ ಬಳಿ ಕೀ ಕೇಳಿದೆ. “ರೂಮಲ್ಲಿ ಬಿದ್ದಿದ್ರೆ ಪರ್ವಾಗಿಲ್ಲ, ಯಾರಾದ್ರೂ ತಗೊಂಡಿದ್ರೆ ಮಾತ್ರ ಸಿಗೋದು ಕಷ್ಟ ನೋಡು” ಎಂದು ಅವರು ಹೇಳಿದ್ದನ್ನು ಕೇಳಿಸಿಕೊಂಡು ಗಾಬರಿಯಲ್ಲೇ ಓಡಿಬಂದು ಒಳಗಿನಿಂದ ಕೋಣೆಯ ಚಿಲಕ ಹಾಕಿ ನೇರ ನಾಗು ದೊಡ್ಡಪ್ಪನ ಬ್ಯಾಗಿಗೆ ಕೈ ಹಾಕಿದೆ. ಇಡೀ ಕುಟುಂಬದಲ್ಲಿ ಬಟ್ಟೆ ಬ್ಯಾಗು ಬಳಸುವವರು ಅವರೊಬ್ಬರೇ ಆಗಿದ್ದರು. ಒಂದೆರಡು ಪಂಚೆ ಬನಿಯನ್ನು ಬಿಟ್ಟರೆ ಅದರಲ್ಲಿ ಏನೂ ಇರಲಿಲ್ಲ. ದುಡ್ಡನ್ನು ಮಾತ್ರ ಇಟ್ಟುಕೊಂಡು ಪರ್ಸನ್ನು ಬಿಸಾಕಿದರಾ?, ಅಥವಾ ಚೂರೂ ಉಬ್ಬು ಕಾಣದಂತೆ ಬರ್ಮುಡಾದೊಳಗೆ ಅಡಗಿಸಿಟ್ಟುಕೊಂಡರಾ?, ಅಥವಾ ನಾಗು ದೊಡ್ಡಪ್ಪ ಕದ್ದೇ ಇಲ್ಲವಾ?, ನಿನ್ನೆ ಅವರು ಮಾತಾಡಿದ್ದನ್ನು ನೆನೆಸಿಕೊಂಡು ವೃಥಾ ಅನುಮಾನಪಟ್ಟೆನಾ?, ಹಾಗಾದರೆ ಕದ್ದವರು ಯಾರು??. ಸುತ್ತಲೂ ನೋಡಿದೆ. ಐವತ್ತಕ್ಕೂ ಹೆಚ್ಚಿನ ಬ್ಯಾಗುಗಳು ಬಿದ್ದಿದ್ದವು. ಹತಾಶೆಯಿಂದ ಕುಸಿದು ಕುಳಿತೆ.
ಸಂಭಾಳಿಸಿಕೊಂಡು ಯಾವ ಬ್ಯಾಗಿನಿಂದ ತಪಾಸಣೆ ಶುರುಮಾಡಲಿ ಎಂದು ತಲೆಯೆತ್ತಿದಾಗ ಸಾಮಾನುಗಳನ್ನಿಡಲಿಕ್ಕಾಗಿ ಗೋಡೆಗೆ ಅಂಟಿಕೊಂಡಂತೆ ಮಾಡಿದ್ದ ಉದ್ದ ಸ್ಲ್ಯಾಬಿನ ತುದಿಯಲ್ಲಿ ಎರಡು ಗೋಡೆಗಳು ಕೂಡುವ ಬಿಂದುವಿನಲ್ಲಿ ಒಂದು ಬ್ಯಾಗು ಕಾಣಿಸಿತು. ಇಡೀ ಕೋಣೆಯಲ್ಲಿ ಅದೊಂದು ಬ್ಯಾಗನ್ನು ಮಾತ್ರ ಯಾರಿಗೂ ಸುಲಭಕ್ಕೆ ಕಾಣದಂತೆ ಮೇಲೆ ಅಡಗಿಸಿಟ್ಟಿದ್ದರು. ಕೈಚಾಚಿ ಕೆಳಗೆಳೆದು ಪರಿಶೀಲಿಸಿದೆ. ಯಾವ ಅಚ್ಚರಿಯೂ ಇರಲಿಲ್ಲ, ಪರ್ಸು ಅಲ್ಲಿಯೇ ಇತ್ತು!. ಅದರಲ್ಲಿ ನೂರು ರೂಪಾಯಿ ತೆಗೆದುಕೊಂಡಿದ್ದರು, ಉಳಿದದ್ದೆಲ್ಲ ಹಾಗೇ ಇತ್ತು. ಪರ್ಸನ್ನು ಜೇಬಿಗಿಳಿಸಿ ಬ್ಯಾಗನ್ನು ಮತ್ತೆ ಅದೇ ಜಾಗದಲ್ಲಿ ಇಟ್ಟೆ. ಪತ್ತೇದಾರಿಕೆ ಸುಲಭವಾಗಿ ಮುಗಿದಿತ್ತು. ಆದರೆ ಆ ಬ್ಯಾಗು ಯಾರದ್ದು, ಕದ್ದವರು ಯಾರು ಎಂಬ ಪ್ರಶ್ನೆಗಳು ಹಾಗೇ ಉಳಿದುಕೊಂಡಿದ್ದವು.

“ದಾರೀಲಿ ಬಿದ್ದಿತ್ತು” ಎನ್ನುತ್ತಾ ಸೀನ ದೊಡ್ಡಪ್ಪನಿಗೆ ಕೀ ವಾಪಸ್ ಕೊಟ್ಟಾಗ “ನಿನ್ ಅದೃಷ್ಟ ಚೆನ್ನಾಗಿದೆ ಮಾರಾಯಾ” ಎಂದರು. ಅವರ ಮುಖದಲ್ಲೇನೋ ಕಳವಳ ಕಂಡಂತೆ ನನಗೆ ಭಾಸವಾಯಿತು. ಸುಮ್ಮನೆ ಮದುವೆ ನೋಡುತ್ತಾ ಕುಳಿತೆ. ತಾಳಿಕಟ್ಟಿ ಊಟವಾದ ಮೇಲೆ ಸಂಜೆ ಎಲ್ಲರೂ ತುಂಗಭದ್ರಾ ಡ್ಯಾಮ್ ನೋಡಲು ಹೋಗುವುದು ಎಂದು ತೀರ್ಮಾನವಾಯಿತು. ನಾನು ಸೀನ ದೊಡ್ಡಪ್ಪನನ್ನೇ ಗಮನಿಸುತ್ತಿದ್ದೆ. ಆಗ ಇದ್ದಕ್ಕಿದ್ದಂತೆ “ನಂಗೆ ಅರ್ಜೆಂಟ್ ಕೆಲ್ಸ ಇದೆ ಮಾರಾಯಾ, ಊರಿಗೆ ಹೊರಡ್ಬೇಕು” ಎಂದು ಅನಂತು ಚಿಕ್ಕಪ್ಪ ಗಡಿಬಿಡಿಯಲ್ಲಿ ಕೀ ಇಸ್ಕೊಂಡು ರೂಮಿನತ್ತ ಹೋದರು. ನನಗೆ ಗೊಂದಲ ಶುರುವಾಯಿತು. ಎರಡು ಸಾವಿರ ರೂಪಾಯಿ ಚಪ್ಪಲಿಯನ್ನು ಉಚಿತವಾಗಿ ಕೊಟ್ಟ ಸೀನ ದೊಡ್ಡಪ್ಪನಿಗೆ ಒಂದುಸಾವಿರ ದೊಡ್ಡದಲ್ಲ, ಅನಂತು ಚಿಕ್ಕಪ್ಪ ನಿನ್ನೆ ಇಸ್ಪೀಟಲ್ಲಿ ದುಡ್ಡು ಕಳೆದುಕೊಂಡಿರಬೇಕು, ಅದಕ್ಕೇ ಕದ್ದಿರಬೇಕು ಎಂದೆಣಿಸಿದೆ. ನನ್ನ ಗೊಂದಲವನ್ನು ದ್ವಿಗುಣಗೊಳಿಸುವಂತೆ ಕೀ ವಾಪಸ್ ಕೊಡಲು ಬಂದ ಅನಂತು ಚಿಕ್ಕಪ್ಪನ ಕೈಯಲ್ಲಿ ಬೇರೆ ಯಾವುದೋ ಬ್ಯಾಗ್ ಇತ್ತು. ಅವರು ಹಾಗೇ ಬಸ್ ನಿಲ್ದಾಣಕ್ಕೆ ಹೊರಟಾಗ “ಇನ್ಯಾರಿರಬಹುದು?” ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು.

ಡ್ಯಾಮ್ ವೀಕ್ಷಣೆ ಮುಗಿಸಿ, ರಾತ್ರಿಯೂಟ ಮುಗಿಯುವವರೆಗೆ ಯಾರೂ ಕೋಣೆಯ ಬಳಿ ಹೋಗಲೇ ಇಲ್ಲ. ರಾತ್ರಿಯೇ ಇಲ್ಲಿಂದ ಎಲ್ಲರೂ ವಾಪಸ್ ಹೊರಡುವ ತೀರ್ಮಾನವಾಗಿದ್ದರಿಂದ ಬ್ಯಾಗುಗಳನ್ನು ತೆಗೆದುಕೊಳ್ಳಲು ಕೊನೆಯ ಬಾರಿಗೆ ಎಲ್ಲರೂ ಕೋಣೆಯತ್ತ ಹೊರಟೆವು. ನನ್ನೆರಡು ಕಣ್ಣುಗಳು ಎಲ್ಲರ ಮುಖವನ್ನೂ ಗಮನಿಸುತ್ತಿದ್ದವು. ಇದ್ದಕ್ಕಿದ್ದಂತೆ ಹಿಂದಿನಿಂದ ಬಂದ ಶಂಕರ ಮಾವ ಸೀನ ದೊಡ್ಡಪ್ಪನ ಬಳಿ ಕೀ ಇಸ್ಕೊಂಡು ಮುಂದೆ ಓಡಲು ಶುರು ಮಾಡಿದರು. ಅಷ್ಟು ಜನರಲ್ಲಿ ಯಾರಾದರೂ ಕದ್ದಿರುವ ಸಾಧ್ಯತೆ ತೀರಾ ಕಡಿಮೆಯಿರಬಹುದಾದರೆ ಅದು ಶಂಕರಮಾವ ಮಾತ್ರ. ಯಾರ ಜೊತೆಯೂ ಜಗಳವಾಡದೇ ತಮ್ಮಷ್ಟಕ್ಕೆ ತಾವಿರುವ ಅವರನ್ನು ಕಳ್ಳರಂತೆ ಕಲ್ಪಿಸಿಕೊಳ್ಳುವುದು ಕಷ್ಟವಿತ್ತು. ಆದರೆ ಅವರು ಓಡುತ್ತಿರುವ ವೇಗ, ಮುಖದಲ್ಲಿದ್ದ ಅಸಹನೆ, ಗಾಬರಿ ಅದನ್ನೇ ಪ್ರಚುರಪಡಿಸುತ್ತಿತ್ತು. ಒಮ್ಮೆ ಅವರು ಹಿಂದೆ ತಿರುಗಿ ನೋಡಿದಾಗ ಮುಖದ ನೆರಿಗೆಗಳು ಒಟ್ಟುಸೇರಿ ಅವರು ಖದೀಮನ ಮುಖಲಕ್ಷಣ ಹೊಂದಿದ್ದು ಕಾಣಿಸಿತು. ಇಷ್ಟು ಕ್ರೂರ ಮುಖ ಹೊಂದಿರುವವರು ಪೂರ್ತಿ ಒಳ್ಳೆಯವರಾಗಿರಲು ಸಾಧ್ಯವೇ ಇಲ್ಲ ಎಂದು ಮನಸ್ಸು ಹೇಳಿತು. ಓಡಿಹೋಗಿ ಬೌಲಿಂಗ್ ಮಾಡುವವನಂತೆ ನಟಿಸುತ್ತಾ ಉಳಿದವರಿಗಿಂತ ಮುಂದೆ ಬಂದು ಕೋಣೆಯೊಳಗೆ ಕಾಲಿಟ್ಟೆ. ಬ್ಯಾಗು ಅಲ್ಲೇ ಇತ್ತು, ಕೋಣೆಯಲ್ಲಿ ಯಾರೂ ಇರಲಿಲ್ಲ. ಅಷ್ಟರಲ್ಲಿ ಶಂಕರಮಾವ ಪಂಚೆ ಸರಿ ಮಾಡಿಕೊಳ್ಳುತ್ತಾ ಟಾಯ್ಲೆಟ್ಟಿನಿಂದ ಹೊರಬಂದು “ಜಲಬಾಧೆ ತಡಿಯಕ್ಕೇ ಆಗಲ್ಲ ನೋಡು ನಂಗೆ” ಎನ್ನುತ್ತಾ ಕೆಳಗಿಟ್ಟಿದ್ದ ಯಾವುದೋ ಬ್ಯಾಗು ತಗೊಂಡರು. ನನಗೆ ನಿರಾಸೆಯಾಯಿತು.
ಸ್ತಬ್ಧನಾಗಿ ನಿಂತಿದ್ದ ನನ್ನ ಹಿಂದೆ ಯಾರೋ ಬಂದು ನಿಂತಂತಾಯಿತು. ನೋಡಿದರೆ ಜಗ್ಗು ದೊಡ್ಡಪ್ಪ ತಮ್ಮ ಎಂದಿನ ಗಂಟುಮುಖದೊಂದಿಗೆ ನಿಂತಿದ್ದರು. ಇಬ್ಬರೂ ಮಾತಾಡಲಿಲ್ಲ. ಅವರ ಮೌನದಲ್ಲಿ ನನಗೆಲ್ಲೋ ಉತ್ತರ ಸಿಕ್ಕಂತೆನಿಸಿತು. ಅಷ್ಟರಲ್ಲಿ ಅವರು “ಬದಿಗ್ ಬಾರೋ ಮಾಣಿ, ಎಲ್ರಿಗೂ ಅಡ್ಡ ನಿಲ್ಲು ಅಂತ ಆ ಸೀನ ಹೇಳ್ಕೊಟ್ನಾ?” ಎಂದು ಗುಡುಗಿ ನನ್ನನ್ನು ದಾಟಿಕೊಂಡು ಒಳಬಂದು ಬೇರಾವುದೋ ಬ್ಯಾಗು ಎತ್ತಿಕೊಂಡರು. ನಿಂತು ನೋಡುತ್ತಿರುವಂತೆಯೇ ಸೀನ ದೊಡ್ಡಪ್ಪ, ಶೇಖರಮಾವ, ಆಚೆಮನೆ ದೊಡ್ಡಪ್ಪ ಎಲ್ಲರೂ ಬ್ಯಾಗು ತೆಗೆದುಕೊಂಡು ಹೊರಟರು. ಸ್ಲ್ಯಾಬಿನ ಮೇಲಿದ್ದ ಬ್ಯಾಗು ಇನ್ನೂ ವಾರಸುದಾರರನ್ನು ಕಾಯುತ್ತಿತ್ತು. ನಮ್ಮ ಕುಟುಂಬದಲ್ಲಿ ಅತಿಹೆಚ್ಚಿನ ಅಧಮರೆನ್ನಿಸಿಕೊಂಡವರಾರೂ ಆ ಬ್ಯಾಗನ್ನು ಮುಟ್ಟಿರಲಿಲ್ಲ.
ಉಳಿದವರೆಲ್ಲರೂ ಬಾಗಿಲಿನ ಮೂಲಕ ಒಳಬಂದರು. ಕಣ್ಣೆವೆಯಿಕ್ಕದೇ ನೋಡುತ್ತಿದ್ದೆ. ಪುರುಷಿ ಚಿಕ್ಕಪ್ಪ ಕೈ ಎತ್ತಿದರು . “ಕಳ್ಳ ಸಿಕ್ಕಿಹಾಕಿಕೊಂಡ, ಎಷ್ಟಾದರೂ ಸೊಸೈಟಿಯಲ್ಲಿ ಅಕ್ಕಿ ಕದ್ದವರಲ್ಲವೇ” ಎನ್ನುವಷ್ಟರಲ್ಲಿ ತೋಳು ತುರಿಸಿಕೊಂಡು ಕೈ ಕೆಳಗಿಳಿಸಿದರು. ಸಂತು ಮಾವ ಬ್ಯಾಗಿದ್ದ ಮೂಲೆಗೆ ಹೋದರು. “ಇವರಾ?, ಅಚ್ಚರಿಯೇನಿಲ್ಲ, ಚೀಟಿ ದುಡ್ಡು ಹೊಡೆದವರಲ್ಲವೇ” ಎನ್ನುವಷ್ಟರಲ್ಲಿ ಕೆಳಗೆ ಬಿದ್ದಿದ್ದ ತಮ್ಮ ಪ್ಯಾಂಟೆತ್ತಿಕೊಂಡು ಈಚೆ ಬಂದರು. ತಲೆ ಭಾರವೆನ್ನಿಸಿ ಈಚೆ ತಿರುಗಿದೆ. ಇನ್ನಷ್ಟು ಸಂಬಂಧಿಕರು ಒಳಬರುತ್ತಿದ್ದರು. ಅವರನ್ನು ನೋಡುತ್ತಿದ್ದಂತೆಯೇ ಎಲ್ಲವೂ ಸ್ತಬ್ಧವಾದಂತೆನ್ನಿಸಿತು. ಅದಾಗಲೇ ನಾನು ನನ್ನ ಬಂಧುಗಳಲ್ಲಿ ಅರ್ಧಕ್ಕಿಂತ ಹೆಚ್ಚಿನ ಜನರ ಮೇಲೆ ವೃಥಾ ಕೆಟ್ಟದಾಗಿ ಅನುಮಾನಪಟ್ಟಿದ್ದೆ. ನನ್ನ ಬಗ್ಗೆ ನನಗೇ ನಾಚಿಕೆಯಾಯಿತು. ನನ್ನ ಬ್ಯಾಗೆತ್ತಿಕೊಂಡು ಒಮ್ಮೆ ಜೇಬಲ್ಲಿದ್ದ ಪರ್ಸು ಮುಟ್ಟಿ ಬಾಗಿಲ ಬಳಿ ಬಂದು ನಿಂತೆ.

“ಏನಾಯ್ತು ಹೇಳು ಮಾರಾಯಾ, ಯಾರ್ ತಗೊಂಡ್ರು ಬ್ಯಾಗನ್ನ? ಯಾರು ಕಳ್ಳ?”
ಅಲೋಕ ಅಂತ್ಯ ತಿಳಿಯಲು ಉತ್ಸುಕನಾಗಿದ್ದ.
“ಆ ಬ್ಯಾಗ್ ಯಾರ್ ತಗೊಂಡ್ರು ಅಂತ ನಾನು ಹಿಂದೆ ತಿರುಗಿ ನೋಡ್ಲೇ ಇಲ್ಲ ಕಣೋ, ಬಸ್ಸಲ್ಲೂ ನಾನು ಯಾರ ಬ್ಯಾಗನ್ನೂ ಗಮನಿಸ್ಲಿಲ್ಲ, ಈಗಾಗಲೇ ನಮ್ಮ ಕುಟುಂಬದಲ್ಲಿ ಸುಖಾಸುಮ್ಮನೆ ಸುಮಾರು ಜನ ಖದೀಮರಾಗಿದ್ದಾರೆ. ಮತ್ತೊಬ್ಬ ಹೊಸಾ ಕಳ್ಳನ್ನ ಹುಟ್ಟುಹಾಕೋದರಲ್ಲಿ ಯಾವ ಮಜವೂ ನನಗೆ ಕಾಣಲಿಲ್ಲ, ಆ ಬ್ಯಾಗ್ ಯಾರದ್ದೂ ಅಲ್ಲ ಅನ್ಸುತ್ತೆ ಬಿಡು” ಎಂದೆ.
“ನಿನ್ ತಲೆ!, ನಿನ್ ಡಬ್ಬಾ ಕಥೆ ಕೇಳಿ ಟೈಂ ವೇಸ್ಟ್ ಮಾಡಿದೆ” ಎಂದು ಸಿಟ್ಟಿನಿಂದ ಅಲೋಕ ಬೈದ.
“ಕೆಲವೊಂದ್ಸಲ ಅಪರಾಧೀನ ಪತ್ತೆ ಮಾಡೋದಕ್ಕಿಂತ ಸುಮ್ಮನೇ ಇರೋದ್ರಲ್ಲೇ ಜಾಸ್ತಿ ನೆಮ್ಮದಿ ಸಿಗುತ್ತೆ” ಎಂದು ನಸುನಕ್ಕೆ.