Click here to Download MyLang App

ಪಟ್ಟದರಸಿಗೆ ಕೊಟ್ಟ ಉಡುಗೊರೆ - ಬರೆದವರು : ಅನಘಾ ಎ

"ಬಾಸ್.... ಬಾಸ್..." ಎಂದು ಕರೆಯುವುದು ಕೇಳಿ ಕೈಯಲ್ಲಿದ್ದ ಪೇಪರ್ ನ್ನು ಸರಿಸಿ
"ಹೇಳು... ಏನು?" ಎಂದು ಕೇಳಿದರು ಪ್ರಸಾದ್.
"ಟೈಮ್ ಆಯ್ತು... ಮಗಳನ್ನು ಕರೆದುಕೊಂಡು ಬರಲು ಹೋಗೋದಿಲ್ವಾ?" ಎಂದು ಎಚ್ಚರಿಸಿದಳು ಹೆಂಡತಿ.
ಅದನ್ನು ಕೇಳಿದ್ದೇ ತಡ ಕೈಗಡಿಯಾರದತ್ತ ನೋಡಿದ ಪ್ರಸಾದ್ "ಹಾಂ... ಗಂಟೆ ಆಗಿಲ್ಲ... ಇನ್ನು ಸಮಯ ಇದೆ.. ಮೆಲ್ಲನೆ ಹೊರಟರಾಯಿತು ಬಿಡು" ಎನ್ನುತ್ತಾ ಪೇಪರ್ ಟೇಬಲ್ ಮೇಲಿಟ್ಟು ಒಳಗೆ ಹೆಜ್ಜೆ ಹಾಕಿದರು.
ಅವರ ಹೆಂಡತಿ ದೇವರಕೋಣೆಯಲ್ಲಿ ಪೂಜೆಗೆ ತಯಾರಿ ನಡೆಸುತ್ತಿದ್ದರು, ಬಾಗಿಲಿನಿಂದ ಮೆಲ್ಲನೆ ಇಣುಕಿದವರೇ
"ಬಾಸ್ ಏನಿದು? ಪೂಜೆ ಏನಾದರೂ ಇಟ್ಕೊಂಡಿದ್ಯಾ?" ಎಂದು ಕೇಳಿದರು.
"ಹಾಂ, ನೆನಪಿಲ್ವಾ! ಇವತ್ತು ಯಾವ ದಿನ ಅಂತಾ?" ಎಂದು ಕೇಳಿದರು.
ಈ ದಿನ ಏನಪ್ಪಾ ಸ್ಪೆಷಲಿಟಿ? ಎಂದು ತಲೆ ಕೆರೆಯುತ್ತಾ ಯೋಚಿಸಿದವರೇ ನೆನಪಿಗೆ ಬರದೇ ಶರಣಾದರು.
"ಈ ಗಂಡಸರಿಗೆ ದಿನಾಂಕ ಎಲ್ಲಾ ಎಲ್ಲಿ ನೆನಪಿರುತ್ತೇ ಹೇಳಿ?" ಎಂದು ಎಲ್ಲರಂತೆ ಗದರುತ್ತಾ ಹೊರಗೆ ಬಂದರು.
ಅವರ ಮುಖದಲ್ಲಿ ಕೋಪಕ್ಕಿಂತ ಸವಿನೆನಪಿನ ನಗುವಿತ್ತು.
"ಯಾವುದೇ ಹಬ್ಬ ಈ ತಿಂಗಳು ಇಲ್ಲ... ಮತ್ತೇನಿದೆ? ಹೇಳು..." ಎಂದು ಪ್ರಸಾದ್ ರವರು ಮತ್ತೆ ಕೇಳಿದಾಗ ಧನಲಕ್ಷ್ಮೀಯವರು ತಮ್ಮ ಮಾಂಗಲ್ಯವನ್ನು ಹಿಡಿದು
"ಬಾಸ್ ಮೂವತ್ತೈದು ವರ್ಷದ ಹಿಂದೆ ಕಟ್ಟಿದ್ದು.. ನೆನಪಿದ್ಯಾ?" ಎಂದು ಕೇಳಿದಾಗ
ಪ್ರಸಾದ್ ಅವರು ನಗುತ್ತಾ " ಅಯ್ಯೋ.... ವೆಡ್ಡಿಂಗ್ ಡೇ..." ಎಂದು ತಲೆಗೆ ಮೆಲ್ಲನೆ ಹೊಡೆದುಕೊಂಡವರೇ ಹೆಂಡತಿಯ ಹೆಗಲು ಹಿಡಿದು, "ಹ್ಯಾಪಿ ವೆಡ್ಡಿಂಗ್ ಆ್ಯನಿವರ್ಸರಿ ಬಾಸ್" ಎಂದಾಗ ಸಂತೋಷದಲ್ಲಿ ಕಿರುನಗುವಿನೊಂದಿಗೆ ಗಂಡನ ಎದೆಗೊರಗಿ " ನಿಮ್ಗೂ... ವಿಶಸ್.. ನನ್ನನ್ನು ಸಹಿಸಿ ಕೊಂಡಿದ್ದಕ್ಕೆ" ಎಂದರು.
ಮೂವತ್ತೈದು ವರ್ಷ ಹೇಗೆ ಕಳೆದು ಹೋಯಿತು!!! ಎಂದು ಯೋಚಿಸುತ್ತಾ ಇಬ್ಬರು ಒಂದು ಕ್ಷಣ ಕಳೆದು ಹೋದರು.
"ಬೇಗ ರೆಡಿಯಾಗಿ... ಮಗಳನ್ನು ಕರೆದುಕೊಂಡು ಬರಬೇಕು ತಾನೆ???" ಎಂದು ಎಚ್ಚರಿಸಿದರು ಧನಲಕ್ಷ್ಮೀ.
"ಹಾಂ... ಅದಕ್ಕಿಂತ ಮೊದಲು... ನಿಂಗೆ ಏನ್ ಗಿಫ್ಟ್ ಬೇಕು ಹೇಳೇ.... ಎಷ್ಟು ವರ್ಷ ಆಯಿತು ಈ ರೀತಿ ಕೇಳದೆ.. ಇಬ್ಬರೂ ಮಗಳನ್ನು ನೋಡಿಕೊಳ್ಳುವುದರಲ್ಲಿ ಬ್ಯೂಸಿಯಾಗಿದ್ವಿ... ನಾನು ಆಫೀಸ್ ಎಂದು ನಮಗಾಗಿ ಸಮಯ ಕೂಡ ಕೊಡಲಾಗಲೇ ಇಲ್ಲ... ಹೇಳು ಏನ್ ಬೇಕು?" ಎಂದು ಪಂಪರ್ ಆಫರ್ ಹೆಂಡತಿ ಮುಂದೆ ಇರಿಸಿದರು ಪ್ರಸಾದ್.
"ನಂಗೆ ಏನ್ ಬೇಕು ಅಂತ ನೀವೇ ಯೋಚ್ನೇ ಮಾಡಿ... ಸಿಗಬಹುದು..." ಎಂದು ಏನೋ ಕೆಲಸದ ನೆಪ ಹೇಳುತ್ತಾ ಅಡುಗೆಕೋಣೆಯತ್ತ ಹೋದರು.
ಪ್ರಸಾದ್ ರವರು ಇವಳಿಗೆ ಬೇಕಾಗಿರೋದು ಏನಪ್ಪಾ? ಎಂದು ಯೋಚಿಸುತ್ತಾ ಸೊಂಟಕ್ಕೆ ಕೈಯಿರಿಸಿದರು. ಒಳಗಿನಿಂದ ಹೊರಡಿ ಎಂದು ಕೂಗಿದರು ಧನಲಕ್ಷ್ಮೀಯವರು.
ಪ್ರಸಾದ್ ಹಾಗೂ ಧನಲಕ್ಷ್ಮೀ ಮೂವತ್ತೈದು ವರ್ಷಗಳ ಹಿಂದೆ ತಮ್ಮ ಜೀವನವನ್ನು ಜೊತೆಯಾಗಿ ಹೊಸ ಅಧ್ಯಾಯವಾಗಿ ಶುರು ಮಾಡಿದ್ದರು. ಪರಸ್ಪರ ಪ್ರತಿ ಹೆಜ್ಜೆಯಲ್ಲೂ ಹೆಗಲಾಗಿ ಮುಂದೆ ಸಾಗಿದವರು. ಅವರಿಗೆ ಇತ್ತು ಕಷ್ಟಗಳು... ಆದರೆ ಎಲ್ಲಿಯೂ ಅವರು ಹಿಂಜರಿಯಲಿಲ್ಲ... ಎಲ್ಲವನ್ನೂ ಎದುರಿಸಿದರು. ಮದುವೆ ಆದ ಎರಡು ವರ್ಷದಲ್ಲಿ ಧನಲಕ್ಷ್ಮೀಯವರು ಮುದ್ದಾದ ಒಂದು ಹೆಣ್ಮಗುವಿಗೆ ಜನ್ಮ ನೀಡಿದರು. ಪ್ರಸಾದ್ ಅವರು ಮಗಳಿಗೆ ದಿ ಬೆಸ್ಟ್ ಲೈಫ್ ನೀಡುವ ಆಸೆಯೊಂದಿಗೆ ತಮ್ಮ ಕೆಲಸದಲ್ಲಿ ಹೆಚ್ಚು ಗಮನವಿಡುತ್ತಾ ತಮ್ಮನ್ನು ಬಲಪಡಿಸುತ್ತಾ ಹೋದರು. ಅದೇ ಧನಲಕ್ಷ್ಮೀ ಮಗಳಿಗೆ ದಿ ಬೆಸ್ಟ್ ಅಮ್ಮ ಆದರು. ತಮ್ಮ ಕನಸುಗಳನ್ನೆಲ್ಲಾ ಮಗಳ ಮೂಲಕ ಕಾಣುತ್ತಾ ತಮ್ಮ ಇಪ್ಪತ್ತೈದು ವರ್ಷದ ಪ್ಲ್ಯಾನ್ ಶುರು ಮಾಡಿದರು. ಮಗಳಿಗೆ ಒಳ್ಳೆ ಸಂಸ್ಕಾರ ಕೊಡುವುದರ ಜೊತೆಗೆ ಒಳ್ಳೆ ಶಿಕ್ಷಣವನ್ನು ನೀಡಿದರು. ವೈದೇಹಿಗೆ ಅಪ್ಪ ಅಮ್ಮ ಎನ್ನುವುದಕ್ಕಿಂತ ಬೆಸ್ಟ್ ಫ್ರೆಂಡ್ ಆಗಿದ್ದರು. ಎಂದೂ ಅವಳ ಆಸೆಗೆ ಅಡ್ಡಿ ಬಂದವರೂ ಅಲ್ಲ.. ಅವಳ ಕನಸನ್ನು ಕೂಡ ನೆರವೇರಿಸಿದರು, ಆಕಾಶದಲ್ಲು ಹಾರಾಡುವುದು!!!!!!!
ಅವಳು ರೆಕ್ಕೆ ಕಟ್ಟಿ ದೇಶದಿಂದ ದೇಶಕ್ಕೆ ಹಾರಾಡುತ್ತಾ ಅನುಭವಗಳನ್ನು ಹೆಚ್ಚಿಸಿದಳು. ಎರಡು ವರ್ಷದ ಹಿಂದೆ ಅವಳನ್ನು ಲಕ್ಷ್ಯ ಯಾದವ್ , ಅವಳು ಆಸೆಪಟ್ಟ ಹುಡುಗನ ಜೊತೆ ವಿವಾಹ ಕೂಡ ಮಾಡಿಕೊಟ್ಟರು. ಅವಳು ಸಂತೋಷವಾಗಿ ಜೀವನ ನಡೆಸುತ್ತಿದ್ದಾಳೆ. ಕಳೆದ ವರ್ಷ ಕೆಲಸದಿಂದ ನಿವೃತ್ತಿ ಕೂಡ ಆದಮೇಲೆ ಪ್ರಸಾದ್ ಹೆಂಡಿತಿಯೊಂದಿಗೆ ಸಮಯ ಕಳೆಯುತ್ತಿದ್ದಾರೆ.
ಇದೆಲ್ಲಾ ಅವರ ಕಣ್ಣ ಮುಂದೆ ಹಾಗೆ ಹಾದು ಹೋಗುತ್ತಿರುವಾಗ ಏಯರ್ ಪೋರ್ಟ್ ತಲುಪಿತು. ಮಗಳು, ಅಳಿಯ ಮತ್ತು ಮೊಮ್ಮಗ ಡೆಲ್ಲಿಯಿಂದ ಬಂದು ಇಳಿದರು.
"ಡ್ಯಾಡಿ..." ಎಂದು ಮಗಳು ಅಪ್ಪನನ್ನು ಅಪ್ಪಿಕೊಂಡಾಗ ಕಣ್ಣಂಚಿನಿಂದ ತಿಳಿಯದೇ ಒಂದು ಹನಿ ಜಾರಿತು.
"ಹೇಗಿದ್ಯಾ?" ಎಂದು ವಿಚಾರಿಸಿದಾಗ ಫೈನ್ ಎಂದವಳೇ ನಗುತ್ತಾ ಲಕ್ಷ್ಯನತ್ತ ನೋಡಿದಳು.
"ನಮಸ್ತೆ ಮಾವ..." ಎಂದಾಗ ಅವನು ಪ್ರಸಾದ್ ಹೆಗಲು ಹಿಡಿದು ಅಪ್ಪಿಕೊಳ್ಳುತ್ತಾ ಮೊಮ್ಮಗನನ್ನು ಎತ್ತಿಕೊಂಡರು.
"ಬನ್ನಿ.... ಹೊರಡುವಾ.. ನಿನ್ನ ಅಮ್ಮ ಕಾಯುತ್ತಿದ್ದಾಳೆ..." ಎಂದು ಕಾರಿನತ್ತ ನಡೆದರು.
ಅಳಿಯ ಡ್ರೈವ್ ಮಾಡುವುದಾಗಿ ಹೇಳಿದಾಗ ಪ್ರಸಾದ್ ಮೊಮ್ಮಗನ ನ್ನು ಹಿಡಿದು ಎದುರು ಕೂತುಕೊಂಡರು.
"ಸಾಮ್ರಾಟ್... ಇವನಿಗೆ ಕನ್ನಡ ಎಲ್ಲಾ ಕಲಿಸ್ತಿದ್ಯಾ ತಾನೆ.. ಅಲ್ಲ ಹಿಂದಿನಾ?" ಎಂದು ಕೇಳಿದಾಗ
"ಮಾವ... ಅವನಿಗೆ ಎರಡು ಭಾಷೆ ಕಲಿಸಬೇಕು... " ಎಂದನು ಲಕ್ಷ್ಯ.
"ಹೂಂ.. ಎಲ್ಲಾ ಭಾಷೆ ಕಲಿಯಲಿ... ಕಲಿತಷ್ಟು ಪಾಂಡಿತ್ಯ ಜಾಸ್ತಿ ಆಗತ್ತೆ..." ಎಂದು ನಕ್ಕರು.
"ಡ್ಯಾಡಿ... ನಿಮ್ಗೊಂದು ಸಪ್ರೈಸ್ ಇದೆ..." ಎಂದಳು ವೈದೇಹಿ.
"ಸಪ್ರೈಸ್! ಏನದು?" ಎಂದು ಆಶ್ಚರ್ಯದಿಂದ ಕೇಳಿದರು.
"ಅದೆಲ್ಲಾ ಮನೆಗೆ ಹೋದ್ಮೇಲೆ ಹೇಳ್ತೀವಿ... ಕಾಯಿರಿ" ಎಂದಳು.
ಸಪ್ರೈಸ್ ಗಿಫ್ಟ್ ಏನಾದರೂ ಕೊಡುತ್ತಿರಬಹುದು ಎಂದು ಸುಮ್ಮಾದರು ಪ್ರಸಾದ್. ಆದರೆ ಅವರ ತಲೆಯಲ್ಲಿ ಹೆಂಡತಿಗೆ ಏನ್ ಗಿಫ್ಟ್ ಕೊಡೋದು ಎನ್ನುವುದೇ ಆಗಿತ್ತು ಚಿಂತೆ.
ಮನೆಯ ಎದುರು ಕಾರು ನಿಲ್ಲಿಸಿದ್ದೇ ತಡ ಧನಲಕ್ಷ್ಮೀಯವರು ಮೊಮ್ಮಗನನ್ನು ನೋಡಲು ಓಡೋಡಿ ಬಂದರು.
"ಸಾಮ್ರಾಟ್.... ಪುಟ್ಟ..." ಎನ್ನುತ್ತಾ ಪ್ರಸಾದ್ ಅವರ ಕೈಯಿಂದ ಎತ್ತಿಕೊಂಡರು. ಮಗುವಿಗೆ ಯಾರಿದು ಎಂದು ಗುರುತು ಹಿಡಿಯಲು ಸ್ವಲ್ಪ ಸಮಯ ಹಿಡಿದಿತ್ತು. ಅದು ಅಪ್ಪನನ್ನು ನೋಡಿ ಅಳಲಾರಂಭಿಸಿದಾಗ "ಅಯ್ಯೋ, ತೆಗೋಪ್ಪಾ... ಅಳ್ಬೇಡ ಕಂದ..." ಎನ್ನುತ್ತಾ ಅಳಿಯ ಕೈಗೆ ನೀಡುತ್ತಾ "ಒಳಗೆ ಬನ್ನಿ..." ಎಂದು ಒಳಗೆ ನಡೆದರು.
ಪ್ರಸಾದ್ ಮಗಳೊಂದಿಗೆ ಬ್ಯಾಗ್ ಹಿಡಿದು ಒಳಗೆ ನಡೆದರು. ಬಾಯಾರಿಕೆ ಎಲ್ಲಾ ಆಗಿ ಬೇಗ ಫ್ರೆಶ್ ಆಗಿ ಬರಲು ಸೂಚಿಸಿದರು ಧನಲಕ್ಷ್ಮೀಯವರು.
"ಅಮ್ಮ... ನೀನು ಸುಮ್ಮನೆ ಕೂತ್ಕೊ... ನಾನು ಅಡುಗೆ ಮಾಡ್ತೀನಿ.." ಎಂದಳು ಮಗಳು.
ಅದಕ್ಕೆ ನಗುತ್ತಾ ಮೊದಲು ಹೋಗಿ ಸ್ನಾನ ಮಾಡಿ ಬಾ ಎಂದು ಕಳುಹಿಸಿದರು.
"ಬಾಸ್, ನಾನು ಸ್ವಲ್ಪ ಹೊರಗೆ ಹೋಗಿ ಬರ್ತೀನಿ... ಒಂದು ಕೆಲಸ ಇದೆ... ಬೇಗ ಬರ್ತೀನಿ" ಎಂದರು ಪ್ರಸಾದ್ .
"ಬಾಸ್, ಈಗ್ಲೇ ಹೋಗ್ಬೇಕು! ಪೂಜೆ ಇದೆ....?"
"ಹತ್ತು ನಿಮಿಷ ಹೀಗೆ ಹೋಗಿ ಹಾಗೆ ಬರ್ತೀನಿ... ಕಂದಾ.. ಪ್ಲೀಸ್" ಎಂದು ಕೆನ್ನೆ ಹಿಂಡಿದಾಗ ಅವರಿಗೆ ಬೇಡ ಎನ್ನಲಾಗಲಿಲ್ಲ.
"ಸರಿ, ಬೇಗ ಹೋಗಿ ಬನ್ನಿ..." ಎಂದು ಮುನಿಸಿಕೊಂಡೆ ಕಳುಹಿಸಿದರು.
ಬೆಳಗ್ಗಿನ ತಿಂಡಿಯನ್ನು ಸರಿ ಮಾಡುತ್ತಿರಬೇಕಾದರೆ ಮಗಳು ಬಂದು ಸೇರಿಕೊಂಡಳು.
"ಅಮ್ಮ... ಹ್ಯಾಪಿ ಎಡ್ಡಿಂಗ್ ಆ್ಯನಿವರ್ಸರಿ..." ಎಂದು ಬಿಗಿಯಾಗಿ ಅಪ್ಪಿಕೊಳ್ಳುತ್ತಾ ವಿಶ್ ಮಾಡಿದಳು.
"ಥ್ಯಾಂಕ್ಯೂ ಕಂದಾ...." ಎಂದು ಮಗಳ ಕೆನ್ನೆಗೊಂದು ಮುತ್ತಿಟ್ಟರು.
ಅವರನ್ನು ಮಗಳು ಕುರ್ಚಿಯಲ್ಲಿ ಕೂತುಕೊಳ್ಳಿಸಿದವಳೇ
"ಹೌದು ಏನ್ ಪ್ಲ್ಯಾನ್? ಪೂಜೆ ಆದ್ಮೇಲೆ?" ಎಂದು ಕೇಳಿದಳು.
"ಏನ್ ಪ್ಲ್ಯಾನ್ ಇಲ್ಲ.. ಪೂಜೆ ಮಾತ್ರ.. ಈ ವರ್ಷ ಅವರು ಇಲ್ಲೇ ಮನೆಯಲ್ಲೇ ಇದ್ದಾರೆ ಅಷ್ಟೇ... ಬೇರೆನೂ ವಿಶೇಷ ಇಲ್ಲ..." ಎಂದು ನಕ್ಕರು.
ಆ ಕಣ್ಗಳಲ್ಲಿ ಅವರು ನನ್ನೊಂದಿಗೆ ಇದ್ದಾರೆ ಎನ್ನುವ ಸಂಭ್ರಮವಿತ್ತು, ಅದಕ್ಕಿಂತ ಮಿಗಿಲಾಗಿ ಏನೂ ಬೇಡ ಎನ್ನುವ ಭಾವ ಮಗಳಿಗೆ ಕಾಣಿಸಿತ್ತು.
"ಅಪ್ಪ... ಏನೇ ಹೇಳು... ಯೂ ಬೋತ್ ಆರ್ ದಿ ಬೆಸ್ಟ್ ಕಂಪಲ್ ಇನ್ ಮೈ ಲೈಫ್..." ಎಂದಾಗ ತುಟಿಯಂಚಿನಲಿ ಕಿರುಲಜ್ಜೆ ನಗುವಿತ್ತು.
"ಹೌದು, ಅವರು ನನ್ನನ್ನು ಯಾವತ್ತೂ ದೂರವಿಡಲಿಲ್ಲ... ಜಗಳಗಳಾಗಿದೆ... ಆದರೆ ಎಂದೂ ತಮ್ಮ ಎದೆಯಿಂದ ನನ್ನನ್ನು ದೂರ ಸರಿಸಲಿಲ್ಲ.... ಪ್ರತಿದಿನ ಸಂಜೆ ಮಲ್ಲಿಗೆ ಹೂ ತಂದು ಮುಡಿಸದಿದ್ದರೂ, ಪ್ರತಿದಿನ ಅವರ ಪ್ರೀತಿಯ ಒಂದು ನೋಟ ಸಾಕಾಗಿತ್ತು... ಕೆಲವು ಗಂಟೆಯಲ್ಲಿ ಬಾಡಿ ಹೋಗುವ ಮಲ್ಲಿಗೆಗಿಂತ ಅದು ಶಾಶ್ವತವಾಗಿತ್ತು... ನಿನಗಾಗಿ ಅವರು ಕಷ್ಟಪಡುತ್ತಿದ್ದಾಗ ಅನ್ನಿಸಿದ್ದೆ ನನಗೆ ಯಾವಾಗ ಸಮಯ ಕೊಡುತ್ತಾರೆ ಅಂತ... ಆದರೆ ಅವರಿಗೆ ಭವಿಷ್ಯದ ಬಗ್ಗೆ ಯೋಜನೆಗಳಿತ್ತು... ಆರಾಮವಾಗಿ ನಿವೃತ್ತಿ ಬದುಕಿಗೆ ಆಗ ಅವರು ಯೋಚನೆ ಮಾಡಿಕೊಂಡಿದ್ದರು... ಅವರು ದಿ ಬೆಸ್ಟ್ ಮ್ಯಾನ್" ಎಂದಾಗ ಕಣ್ಣಿನಿಂದ ಆನಂದದಿಂದ ಜಾರಿದ ಹನಿಗಳು ಅದಕ್ಕೆ ಸಾಕ್ಷಿಯಾಗಿತ್ತು.
"ಅಮ್ಮ..... ಸೋ ಸ್ವೀಟ್" ಎಂದು ಮಗಳು ನಕ್ಕಳು.
ಅವರು ಕಣ್ಣೀರು ಒರೆಸುತ್ತಾ ನಗುತ್ತಾ "ಹೌದು... ಹೊರಗಡೆ ಹೋಗಿ ಬರ್ತೀನಿ ಅಂತ ಹೋದವರು ಇನ್ನೂ ಬಂದಿಲ್ಲ... ನೋಡುವಾ ಕಾಲ್ ಮಾಡಿ ಬರ್ತೀನಿ ಇರು..." ಎಂದು ಕುರ್ಚಿಯಿಂದ ಮೇಲೆದ್ದು ಹಾಲಿನತ್ತ ನಡೆಯುವಷ್ಟರಲ್ಲಿ ಕಾರಿನ ಸದ್ದು ಕೇಳಿಸಿತು.
"ಹಾಂ... ಬಂದರು ಅನ್ನಿಸತ್ತೆ... ಬಾಸ್... ಬಾಸ್.. ಬಂದ್ರಾ?" ಎಂದು ಕೇಳಿದಾಗ "ಎಸ್... ಬಾಸ್ ಶುರು ಮಾಡಿ" ಎನ್ನುವ ಉತ್ತರ ಕೇಳಿಸಿತು.
ಕುಟುಂಬದೊಂದಿಗೆ ಪೂಜೆ ಮುಗಿಸಿಕೊಂಡರು. ದೇವರ ಅನುಗ್ರಹದಿಂದ ಮುಂದಿನ ದಿನಗಳು ಹೀಗೆ ಸಂತೋಷದಿಂದ ಕೂಡಿರಲಿ ಎನ್ನುವ ಬೇಡಿಕೆಯನ್ನು ದೇವರ ಮುಂದಿರಿಸಿದರು. ಮಗಳು, ಅಳಿಯ ಮತ್ತು ಮೊಮ್ಮಗನೊಂದಿಗೆ ಜೊತೆಯಾಗಿ ತಿಂಡಿ ಮುಗಿಸಿದರು. ಪ್ರಸಾದ್ ರವರು ಅಳಿಯನೊಂದಿಗೆ ಕ್ಯಾರಾಂ ಆಡುತ್ತಾ ಲೋಕಾಭಿರಾಮ ಮಾತನಾಡುತ್ತಿದ್ದರೆ, ಅಮ್ಮ ಮಗಳು ಅವರದ್ದೇ ಲೋಕದಲ್ಲಿ ಬ್ಯೂಸಿಯಾಗಿದ್ದರು.

ಸಂಜೆ ಅಲ್ಲೇ ಪಕ್ಕದಲ್ಲಿ ದೇವಸ್ಥಾನಕ್ಕೆ ಹೊರಟಾಗ ಮಗಳು ಮತ್ತು ಅಳಿಯ ನೀವಿಬ್ಬರೇ ಹೋಗಿ ಬನ್ನಿ ಎಂದು ಕಳುಹಿಸಿದಾಗ ಪ್ರಸಾದ್ "ಇದೇನಾ ಸಪ್ರೈಸ್?" ಎಂದು ನಗುತ್ತಾ ಕೇಳಿದರು.
"ಡ್ಯಾಡಿ... ನೀವು ಹೋಗಿ ಲೇಟ್ ಆಗಿ ಬನ್ನಿ" ಎಂದಳು.
"ಎರಡನೆ ಬಾರಿ ಫಸ್ಟ್ ನೈಟ್ ಏನಾದರೂ ಪ್ಲ್ಯಾನ್ ಮಾಡ್ತಿದ್ದೀರಾ?" ಎಂದು ತಮಾಷೆಯಾಗಿ ಕೇಳಿದರು.
"ಹೆಲೋ... ನಿಮ್ಗೆ ಬೇರೇನೂ ಕೆಲಸ ಇಲ್ವಾ? ಹೊರಡಿ... ದೇವರ ದರ್ಶನ ಮಾಡಿ ಬರುವಾಗ... ಈ ರೀತಿ ??" ಎಂದು ತುಸು ನಗುತ್ತಾ ಗದರಿದರು.
"ಮಗಳು, ನಿನ್ನ ಅಮ್ಮನಿಗೆ ಆಸೆಯಿಲ್ಲದೇ ಏನಲ್ಲ.. ನೋಡು ಕೆನ್ನೆ ಕೆಂಪಾಗಿದೆ...." ಎನ್ನುತ್ತಾ ಕಾರನ್ನೇರಿದರು.
"ಏಯ್.. ಈ ನೆರಿಗೆ ಬಿದ್ದ ಮುಖದಲ್ಲಿ ನಿಮ್ಗೆ ಕೆಂಪಾಗುವುದು ಕಾಣುವುದೆಲ್ಲಿ.. ಸುಮ್ನೆ ಹೊರಡಿ" ಎನ್ನುತ್ತಾ ಕಾರನ್ನೇರಿದರು.
"ಓಕೆ.. ಮಗಳು... ಹುಷಾರು... ಬರ್ತೀವಿ" ಎಂದು ಪ್ರಸಾದ್ ರವರು ಗಾಡಿ ಮುಂದಕ್ಕೆ ತೆಗೆದರು.

ಇಬ್ಬರು ದೇವರ ದರ್ಶನ ಮುಗಿಸಿದವರೇ ಪ್ರಸಾದವನ್ನು ಪಡೆದು ಕಲ್ಯಾಣಿಯ ಮೆಟ್ಟಿನಲ್ಲಿ ಕುಳಿತುಕೊಡರು.
"ತೆಗೊಳ್ಳಿ.." ಎಂದು ಪಂಚಕಜ್ಜಾಯ ನೀಡಿದರು ಧನಲಕ್ಷ್ಮೀ.
"ಬಂಗಾರಿ... ಇಷ್ಟು ಬೇಗ ಇಷ್ಟು ವರ್ಷ ಆಯ್ತಾ?" ಎಂದಾಗ ಧನಲಕ್ಷ್ಮೀ ಆಶ್ಚರ್ಯದಿಂದ ತಿರುಗಿದರು. ಬಂಗಾರಿ ಎಂದು ಕರೆಯದೇ ವರ್ಷಗಳೇ ಸಂದಿದ್ದವು.
"ಬಂಗಾರಿ.. ಇನ್ನು ನೆನಪಿದ್ಯಾ?" ಎಂದು ಕೇಳಿದಾಗ ಹೆಂಡಿತಿಯ ಹೆಗಲು ಹಿಡಿದು,
"ಎಲ್ಲಾ ನೆನಪಿದೆ... ಆದರೆ ಲೈಫ್ ನಮ್ಮನ್ನು ತುಂಬಾ ಬ್ಯೂಸಿಯಾಗಿತ್ತು... ಆದರೆ ಇನ್ಮುಂದೆ ಯಾರಿಗಾಗಿಯೂ ಇಲ್ಲ... ನಮಗಾಗಿ ಮಾತ್ರ..." ಎಂದು ಹಣೆಗೊಂದು ಮುತ್ತಿಟ್ಟರು.
"ಹೂಂ... ಬಾಸ್, ಮಗಳು ತುಂಬಾ ಮೆಚ್ಯೂರ್ ಆಗಿದ್ದಾಳೆ ಗಮನಿಸಿದ್ರಾ? ತಾಯ್ತನ..." ಎಂದು ಹೇಳಿದರು ಧನಲಕ್ಷ್ಮೀ.
"ಅವಳು ನಮ್ಮ ಬದುಕಿಗೆ ಬಂದಾಗಲೇ ನನಗೆ ಗೊತ್ತಾಗಿದ್ದು, ನೀನು ಎಷ್ಟು ಸ್ಟ್ರಾಂಗ್ ಅಂತ... ಎಲ್ಲಾ ಹೆಣ್ಣು ಕೂಡ ಮಕ್ಕಳಿಗಾಗಿ ಏನ್ ಬೇಕಾದರೂ ಮಾಡ್ತಾರೆ... ಅಂದು ಅವಳಿಗೆ ಜ್ವರ ಬಂದಾಗ ಮಧ್ಯರಾತ್ರೆ ನೀನು ಅವಳನ್ನು ಹಿಡಿದುಕೊಂಡು ಆ ಜಡಿ ಮಳೆಗೆ ಆಸ್ಪತ್ರೆ ಕರೆದುಕೊಂಡು ಹೋಗಿದ್ದು... ನಾನು ಕೆಲಸದ ನಿಮಿತ್ತ ಬೇರೆ ಹೋಗಿದ್ದಾಗ.." ಎಂದು ಹಳೆಯ ನೆನಪಿನ ಬುತ್ತಿಯನ್ನು ಒಂದೊಂದಾಗಿ ಬಿಚ್ಚಿಟ್ಟರು. ಅವರಿಗೆ ಸಮಯ ಹೋಗಿದ್ದು ಗೊತ್ತೇ ಆಗಲಿಲ್ಲ. ಫೋನ್ ರಿಂಗಣಿಸಿದಾಗಲೇ ಇಬ್ಬರು ಎಚ್ಚೆದ್ದುಕೊಂಡಿದ್ದು.
"ಮಗಳು... ಲೇಟ್ ಆಯ್ತು ಅನ್ನಿಸತ್ತೆ..." ಎಂದು ನಕ್ಕರು ಪ್ರಸಾದ್.
"ಹಾಂ, ಹೊರಡುವಾ..." ಎಂದಾಗ ಪ್ರಸಾದ್ ಅವರು ಮೇಲೆದ್ದು ಕೈ ಚಾಚಿದರು. ಅವರ ಕೈ ಹಿಡಿದು ಮೇಲೆದ್ದವರೇ ಕಾರಿದ್ದಲ್ಲಿಗೆ ಹೆಜ್ಜೆ ಹಾಕಿದರು.


ಮನೆಯಲ್ಲಿ ಮಗಳು ಮತ್ತು ಅಳಿಯ ಕಾಯುತ್ತಿದ್ದರು.
"ಏನೋ ದೊಡ್ಡದಾಗಿ ಪ್ಲ್ಯಾನ್ ಮಾಡಿರಬೇಕು!" ಎನ್ನುತ್ತಾ ನಗುತ್ತಾ ಕಾರಿನಿಂದ ಇಳಿದರು ಧನಲಕ್ಷ್ಮೀ.
"ಹೌದು... ಎನ್ಮಾಡ್ತಿದ್ರಿ! ಅದು ಇಷ್ಟು ಹೊತ್ತು?" ಎಂದು ಹುಬ್ಬೇರಿಸುತ್ತಾ ಮಗಳು ಪ್ರಶ್ನಿದಾಗ
"ಅದೆಲ್ಲಾ ಕೇಳೋ ಹಾಗಿಲ್ಲ..." ಎಂದು ಕಣ್ಣ ಹೊಡೆಯುತ್ತಾ ಹೇಳಿದರು ಪ್ರಸಾದ್.
"ವ್ಹಾ, ಮಾವ... ಫುಲ್ ರೊಮ್ಯಾಂಟಿಕ್ ಮೂಡ್ ನಲ್ಲಿದ್ದೀರಾ ಬಿಡಿ..." ಎಂದಾಗ ನಗುತ್ತಾ ಅಳಿಯ ಹೆಗಲು ಹಿಡಿದು "ನಿನ್ನ ಅತ್ತೆ ಅದೆಲ್ಲಿ ಬಿಡ್ತಾಳೆ..." ಎಂದು ತಮಾಷೆ ಮಾಡುತ್ತಾ ಒಳಗೆ ನಡೆದರು.
ಮಗಳು ಮತ್ತು ಅಳಿಯ ಸೇರಿ ಇಬ್ಬರಿಗಾಗಿ ಒಂದು ಕ್ಯಾಂಡಲ್ ಲೈಟ್ ಡಿನ್ನರ್ ಪ್ಲ್ಯಾನ್ ಮಾಡಿದ್ದರು. ಟೆರೇಸ್ ಮೇಲೆ, ಒಂದು ಸುಂದರವಾದ ಸೆಟ್ ಕೂಡ ಹಾಕಿದ್ದರು.
"Today is your day.... Enjoy it" ಎಂದು ಇಬ್ಬರನ್ನು ಟೆರೇಸ್ ಮೇಲೆ ಕರೆದುಕೊಂಡು ಹೋಗಿ ಬಿಟ್ಟರು.
"ಏಯ್.. ಏನಿದೆಲ್ಲಾ... ಈ ವಯಸ್ಸಿಗೆ ಇದೆಲ್ಲಾ ಯಾಕೇ?? ಸುಮ್ನಿರೇ...." ಎಂದು ಧನಲಕ್ಷ್ಮೀ ಹೊರಟಾಗ, ಪ್ರಸಾದ್ ಅವರು ಕೈ ಹಿಡಿದು,
"ಏಯ್.... ಅವರು ಇಷ್ಟೇಲ್ಲಾ ಕಷ್ಟಪಟ್ಟಿದ್ದಾರೆ... ಇರು... ನಂಗೂ ಮಾತನಾಡಲು ತುಂಬಾ ಇದೆ..." ಎಂದಾಗ ಅವರಿಗೆ ಒಂಥರ ನಾಚಿಕೆಯಾಗಿತ್ತು.
"ಮಕ್ಕಳ ಎದುರು ನಿಮ್ಮದೇನೂ??" ಎಂದಾಗ
"ನಾವೇನೂ ನೋಡಿಲ್ಲ... ನಾವೇನೂ ಕೇಳಿಲ್ಲ.." ಎಂದು ಇಬ್ಬರು ಹೊರಟರು.
"ಲಕ್ಷ್ಯ್.... ಇರೋ.." ಎಂದವರೇ ಅಳಿಯ ಬಳಿ ಹೋಗಿ ಕಿವಿಯಲ್ಲಿ ಏನೋ ಹೇಳಿದರು.
"ಹಾಂ... ತರ್ತೀನಿ ಮಾವ.." ಎಂದು ಕೆಳಗೆ ಓಡಿದನು. ಪ್ರಸಾದ್ ರವರು ಬಾಗಿಲಿನ ಬಳಿ ಕಾಯುತ್ತಿದ್ದರು. ಧನಲಕ್ಷ್ಮೀಯವರು ಮಕ್ಕಳು ಅದೇನು ಮಾಡಿದ್ದಾರೆ ಎಂದು ನೋಡುತ್ತಿದ್ದರು.
"ಎಂಜಾಯ್ ಮಾವ" ಎನ್ನುತ್ತಾ ಲಕ್ಷ್ಯ್ ಕವರ್ ಕೊಟ್ಟು ಹೊರಟನು.
ಪ್ರಸಾದ್ ರವರು ನಗುತ್ತಾ ಥ್ಯಾಂಕ್ಯೂ ಎಂದು ಕವರ್ ನ್ನು ಜೇಬಿನೊಳಗೆ ಇರಿಸಿ ಹೆಂಡತಿಯತ್ತ ನಡೆದರು.
"ಏಯ್... ನೋಡಿದ್ರಾ ನಿಮ್ಮ ಫೇವರೇಟ್ ನ್ಯೂಡಲ್ಸ್! ನನ್ನ ಫೇವರೇಟ್ ಸ್ವೀಟ್ಸ್ ಜಿಲೇಬಿ ಬೇರೆ ಇದೆ.." ಎನ್ನುತ್ತಾ ಟೇಬಲ್ ಎದುರು ಕುಳಿತುಕೊಂಡರು.
"ಥ್ಯಾಂಕ್ಯೂ ಎನ್ನುವ ಪದ ತುಂಬಾ ಸಣ್ಣದು, ಆದರೆ ಅದಕ್ಕಿಂತ ಸೂಕ್ತವಾದ ಪದಗಳು ನನ್ನ ಶಬ್ದಕೋಶದಲ್ಲಿ ಇಲ್ಲ ಬಂಗಾರಿ... ನಿನ್ನನ್ನು ಬದುಕಿಗೆ ಸ್ವಾಗತಿಸುವಾಗ ಹೇಗಿದ್ಯೋ ಹಾಗೇ ಅಪರಂಜಿಯಂತೆ ಇಂದು ಈ ಕ್ಷಣ ಕೂಡ ನನಗಾಗಿ ಏನು ಮಾಡಲು ಸಿದ್ಧವಾಗಿ ಇದ್ದೀಯಾ... ಮದುವೆ ಆದಾಗಿನಿಂದ ನಂಗೆ ಅದು ಬೇಕು ಇದು ಬೇಕು ಎಂದು ಹೇಳಿದ್ದು ತೀರ ವಿರಳ... ನಿನ್ನ ಕನಸುಗಳನ್ನೆಲ್ಲಾ ನಾನು ನೆರವೇರಿಸಿದ್ದೇನಾ ನಂಗೊತ್ತಿಲ್ಲ... " ಎನ್ನುತ್ತಿರುವಾಗ ಅರ್ಧದಲ್ಲಿ ತಡೆದವರೇ
"ಚುಪ್... ಈಗ ಅದೆಲ್ಲಾ ಯಾಕೆ??? ಸುಮ್ಮನಿರಿ... ನೀವು ಜೊತೆಗಿರುವಾಗ ನನಗಿನ್ನೇನು ಬೇಕು... ? ಈಗ ತುಂಬಾ ಹಸಿವೆ ಆಗ್ತಿದೆ... ತಿನ್ನುವ ಪ್ಲೀಸ್?" ಎಂದಾಗ ಜೋರಾಗಿ ನಕ್ಕವರೇ ಹಾಂ ಎಂದು ತಲೆಯಾಡಿಸಿದರು.
"ಆದರೆ ಒಂದು ಕಂಡೀಷನ್.. ನಾನು ನಿನ್ನ ಪಕ್ಕದಲ್ಲಿ ಕೂತ್ಕೊಳ್ತೀನಿ... ನೀನೇ ತಿನ್ನಿಸ್ಬೇಕು ಅಷ್ಟೇ..." ಎಂದರು.
ಅದಕ್ಕೆ ಯಾರೂ ತಾನೆ ಇಲ್ಲ ಅಂತಾರೆ.. ಅದು ಆ ಏಕಾಂತದಲ್ಲಿ!!!!! ಇಬ್ಬರು ಪರಸ್ಪರ ತಿನ್ನಿಸುತ್ತಾ ಮಾತನಾಡುತ್ತಾ ಡಿನ್ನರ್ ಮುಗಿಸಿದರು.
"ನಾವು ಈ ರೀತಿ ಆಕಾಶ ನೋಡುತ್ತಾ ಮಾತನಾಡಿದ್ದು ಯಾವಾಗ ಹೇಳು?" ಎಂದು ಪ್ರಸಾದ್ ಕೇಳಿದರು.
"ಫಸ್ಟ್ ಆ್ಯನಿವರ್ಸರಿಗೆ ನಾನೇ ಪ್ಲ್ಯಾನ್ ಮಾಡಿದ್ದು... ನಿಮ್ಗೆ ಅದೆಲ್ಲಿ ನೆನಪಿತ್ತು???" ಎಂದು ಆಗೀನ ಮುನಿಸಿ ಈಗಲೂ ಇರುವುದನ್ನು ಹೇಳಿಕೊಂಡರು.
"ನಂಗೆ ಡೇಟ್ಸ್ ನೆನಪಿಲ್ಲದೇ ಇರಬಹುದು... ಆದರೆ ಅಂದು ನೀನು ಹೇಳಿದ ಒಂದು ಕನಸು ಮಾತ್ರ ನೆನಪಿದೆ... ಈಗ ಅದನ್ನು ನೆರೆವೇರಿಸ್ಲಾ?" ಎಂದು ಹುಬ್ಬು ಹಾರಿಸುತ್ತಾ ಕೇಳಿದರು.
"ಹಾಂ! ಆಗ ನಾನು ಏನ್ ಹೇಳಿದ್ದೇ? ನಿಜವಾಗ್ಲೂ ನಂಗೆ ಯಾವುದೂ ನೆನಪಿಲ್ಲ....." ಎಂದಾಗ,
ಜೇಬಿನಿಂದ ಕವರ್ ತೆಗೆದವರೇ,
"Once again Happy wedding anniversary my dear sweet heart" ಎಂದು ಚಾಚಿದರು.
"ಏನಿದು?" ಎನ್ನುತ್ತಾ ಕವರ್ ಪಡೆದುಕೊಂಡವರೇ, ತೆರೆದು ನೋಡಿದರು.
"Pasighat... Arunachal Pradesh.....???" ಎಂದು ಓದಿದವರೇ ಗಂಡನತ್ತ ತಲೆಯೆತ್ತಿ ನೋಡಿದರು.
ಪ್ರಸಾದ್ ನಗುತ್ತಾ ಕೈ ಚಾಚಿದವರೇ
"ಸೂರ್ಯನನ್ನು ನೋಡಲು......" ಎಂದು ನಕ್ಕಾಗ
ಅವರ ಬಾಹುಗಳಿಗಿಂತ ಸಂತೋಷವಾದ ಜಾಗ ಧನಲಕ್ಷ್ಮೀಗೆ ಇರಲಿಲ್ಲ.......

"Happy and safe journey to Mr and Mrs Prasad"