Click here to Download MyLang App

ಪಕ್ಷ ಮಾಸದಲ್ಲಿ ಜೋಯಿಸರು - ಬರೆದವರು : ಮೇಘನಾ ಕಾನೇಟ್ಕರ್ | ಹಾರರ್

ಅದು ಪಕ್ಷ ಮಾಸ ಅಂದರೆ ಭಾದ್ರಪದ-ಆಶ್ವೀಜ ಮಧ್ಯೆ ಬರುವ ಮಾಸ ಆಗ ಪೂರ್ತಿ ಪಿತೃಪಕ್ಷ ದ್ದೇ ಹಾವಳಿ. ಜೋಯಿಸರು ಬರೀ ಶುಭ ಕಾರ್ಯಗಳನ್ನು ಮಾತ್ರ ನಡೆಸಿ ಕೊಡುತ್ತಿದ್ದರು. ಎಂದೂ ಅಪರ ಕರ್ಮಗಳನ್ನು ಮಾಡಿದವರಲ್ಲ.

ಹೀಗಿರುವಾಗ ಪಕ್ಷ ಮಾಸದಲ್ಲಿ ತಮ್ಮ ಹಳ್ಳಿ ಮಂಚಿಗದ್ದೆಯಿಂದ ಒಂದೂವರೆ ಗಂಟೆ ಪ್ರಯಾಣದ ಹಾದಿ ಕ್ರಮಿಸಿ ಹೋಗುವ ತುಸುವೇ ದೂರದ ಅಕ್ಕಲುಮುರಿಗೆ ಹಳ್ಳಿಯ ಶಿವರಾಮ ಭಾಗವತರ ತೋಟದ ಬಾವಿ ಕಟ್ಟಲು ಜಾಗದ ವಾಸ್ತು ನೋಡಿ ಮುಹೂರ್ತ ತೆಗೆಸಿ ಕೊಡಲು ಹೋಗುವವರಿದ್ದರು.

ಆಗೆಲ್ಲ ಈಗಿನ ತರಹ ನಿಮಿಷಕ್ಕೊಂದು ಬಸ್ ಇರಲಿಲ್ಲ. ಅದೂ ಅಲ್ಲದೆ ಮಂಚಿಗದ್ದೆಯಿಂದ ಪೇಟೆಯಲ್ಲಿರುವ ಬಸ್ ನಿಲ್ದಾಣಕ್ಕೆ ಬರೊಬ್ಬರಿ ಇಪ್ಪತ್ತು ನಿಮಿಷದ ಅವಧಿ ನಡೆದು ಬರಬೇಕಾಗಿತ್ತು. ಇನ್ನು ಅಕ್ಕಲುಮುರಿಗೆಯದು ಇದಕ್ಕೆ ಹೊರತಾಗೇನಿಲ್ಲ. ಸಮೀಪದ ಬಸ್ ನಿಲ್ದಾಣದಲ್ಲಿ ಇಳಿದು ಭಾಗವತರ ಮನೆಗೆ ಇಪ್ಪತ್ತು ನಿಮಿಷ ನಡೆದೇ ಹೋಗಬೇಕಿತ್ತು. ಆದರೆ ಪೂರ್ತಿಯಾಗಿ ನಡೆದುಕೊಂಡು ಕ್ರಮಿಸಲು ಇದರ ದುಪ್ಪಟ್ಟು ಸಮಯ ಹಿಡಿಯುವುದಂತೂ ಹೌದೇ ಹೌದು.

ಅಲ್ಲದೆ ಜೋಯಿಸರ ಬಳಿ ಎತ್ತಿನ ಗಾಡಿ ಎಲ್ಲಿಂದ ಬರಬೇಕು ಹೇಳಿ? ಅವರ ಬಳಿ ಸೈಕಲ್ ಏನೊ ಇದೆಯಾದರೂ ಅದನ್ನು ತುಳಿದಿದ್ದಕ್ಕಿಂತ ತಳ್ಳಿಕೊಂಡು ಹೋಗಿದ್ದೇ ಹೆಚ್ಚು. ಅಂಥದ್ರಲ್ಲಿ ಈಗ ಹೆಚ್ಚು ಬಿಸಿಲೂ ಇಲ್ಲದ ಮಳೆಯೂ ಬಾರದ ಸಾಧಾರಣ ಹವೆಯಲ್ಲಿ ನಡೆದುಕೊಂಡು ಪ್ರಯಾಣಿಸುವುದೇ ಉತ್ತಮ ಎಂದುಕೊಂಡು ಬೆಳಗ್ಗೆ ಎದ್ದು ಸ್ನಾನ ಸಂಧ್ಯಾವಂದನೆ ಮುಗಿಸಿ ಫರಾಳ ಮಾಡಿ ಹನ್ನೊಂದಕ್ಕೆ ಹೊರಟರು. ಸ್ವಲ್ಪ ದೂರ ಹೋದ ಬಳಿಕ ಮಧ್ಯದಲ್ಲಿ ಕೆಲ ಹೊತ್ತು ವಿಶ್ರಾಂತಿ ಪಡೆದು ಸುಧಾರಿಸಿಕೊಂಡು ಪ್ರಯಾಣ ಮುಂದುವರಿಸಿದರು. ಒಟ್ರಾಶಿ ಭಾಗವತರ ಮನೆ ತಲುಪುವಷ್ಟರಲ್ಲಿ ಮಧ್ಯಾಹ್ನ ಗಂಟೆ ಎರಡಾಗಿತ್ತು. ಸರೀ ಊಟದ ಹೊತ್ತು ಅದು. ಜೋಯಿಸರು ಉಂಡು ಗಡದ್ದಾಗಿ ಮಲಗಿದರು.

ಎದ್ದಾಗ ಸಂಜೆ ಐದು ಗಂಟೆ. ಒಂದು ಸುತ್ತು ಚಹಾ ಜೊತೆಗೆ ಒಂದ್ಹಿಡಿ ಕುಟ್ಟವಲಕ್ಕಿ ಹೊಟ್ಟೆಗಿಳಿಸಿ ಪೇಟಿ ತೆಗ್ದು ಕವಳ ಜಗಿದು ತೋಟದ ಕಡೆ ಕಾಲೆಳೆದರು ಜೋಯಿಸರು. ಭಾಗವತರು ಮತ್ತವರ ಮನೆಯವರು ಹಿಂಬಾಲಿಸಿ ಹೊರಟರು. ಜೋಯಿಸರು ಅಂಗೈಯಲ್ಲಿ ತೆಂಗಿನಕಾಯಿ ಹಿಡಿದು ಸುತ್ತ ತಿರುಗಿದಾಗ ಒಂದು ಜಾಗದಲ್ಲಿ ಭಾರೀ ನೀರಿನ ಸುಳಿ ಸಿಕ್ಕಿತು. ಅಲ್ಲೆ ಬಾವಿ ತೋಡುವುದು ಎಂದು ತೀರ್ಮಾನವಾಯ್ತು. ಆ ಜಾಗದ ವಾಸ್ತು ಪ್ರಾಶಸ್ತ್ಯವಾಗಿದೆ ತೋಟಕ್ಕೆ ಅಭಿವೃದ್ಧಿ ಆಗಲಿದೆ ಎಂದು ಜೋಯಿಸರು ಭಾಗವತರಿಗೆ ಅಭಯವಿತ್ತು ಪಂಚಾಂಗ ನೋಡಿ ಗುದ್ದಲಿ/ಭೂಮಿ ಪೂಜೆಗೆ ಮುಹೂರ್ತ ತಿಳಿಸಿದರು.

ಇಷ್ಟೆಲ್ಲಾ ಮುಗಿಯುವ ವೇಳೆಗೆ ಸಂಜೆ ಏಳು ಗಂಟೆ. ಜೋಯಿಸರಿಗೆ ಇಲ್ಲಿನ ಕೆಲಸ ಬೇಗ ಮುಗಿಸಿ ಗೋಕರ್ಣಕ್ಕೆ ಹೋಗುವುದಿತ್ತು. ಹಾಗಾಗಿ ಭಾಗವತರು ಆ ರಾತ್ರಿ ಅವರ ಮನೆಯಲ್ಲೆ ತಂಗಿದ್ದು ಬೆಳಗ್ಗೆ ಹೊರಡಿ ಎಂದು ಒತ್ತಾಯ ಮಾಡಿದರೂ ಜೋಯಿಸರು ಅಲ್ಲಿ ಉಳಿಯಲೊಪ್ಪದೆ ಗೋಕರ್ಣದ ಕಡೆಗೆ ನಡೆದೇ ಬಿಟ್ಟರು. ಇನ್ನೊಂದು ಅರ್ಧ ಮುಕ್ಕಾಲು ಗಂಟೆ ಕ್ರಮಿಸಿದರೆ ಗೋಕರ್ಣ ತಲುಪಬಹುದು. ಆದರೆ ಜೋಯಿಸರೆಗೆ ನಡೆದು ನಡೆದೂ ಸುಸ್ತಾಗಿ ಸಿಕ್ಕಾಪಟ್ಟೆ ಹಸಿವಾಗ ತೊಡಗಿತು. ಬಾಯಾಡಿಸಲು ಜೋಳಿಗೆಯಲ್ಲಿ ಕಲ್ಲುಸಕ್ಕರೆ ಸಹ ಇರಲಿಲ್ಲ. ಇನ್ನೇನು ಸಂಕಟ ತಾಳಲಾರದೆ ನಿಂತಲ್ಲೆ ಕುಸಿಯುವವರಿದ್ದರು ಅಷ್ಟರಲ್ಲೇ ಅನತಿ ದೂರದಲ್ಲಿ ಒಂದು ಹಟ್ಟಿ ಕಾಣಿಸಿತು. ಹಟ್ಟಿಯಲ್ಲಿ ದೀಪ ಉರಿಯುತ್ತಿರುವುದು
ಜನ ಇರುವ ಲಕ್ಷಣ ತೋರಿಸಿತು.

ಜೋಯಿಸರು ಮೈಯಲ್ಲಿರುವ ಶಕ್ತಿಯನ್ನೆಲ್ಲ ಒಗ್ಗೂಡಿಸಿಕೊಂಡು ಸರಸರ ಹೆಜ್ಜೆ ಹಾಕಿ ಹಟ್ಟಿ ತಲುಪಿದರು. ಬಾಗಿಲು ತೆರೆದೇ ಇತ್ತು. ಒಳಗಡೆ ಪಾತ್ರೆ ಸದ್ದು ಕೇಳಿ ಬರುತ್ತಿತ್ತು ಜೊತೆಗೆ ಬಿಸಿಬಿಸಿ ಅಡುಗೆಯ ಪರಿಮಳ ಬರುತ್ತಿತ್ತು. ಮನಸಂತುಷ್ಟರಾದ ಜೋಯಿಸರು ಒಳಗಡೆ ಇರುವವರನ್ನು ಕೂಗಿ ಕರೆಯಬೇಕೆನ್ನುವಷ್ಟರಲ್ಲಿ ಒಳಗಿನಿಂದ ನಡುವಯಸ್ಸಿನ ಓರ್ವ ಹೆಂಗಸೊಬ್ಬಳು ಹೊರಬಂದು ಜೋಯಿಸರನ್ನು ವಿಚಾರಿಸಿ ಕಾಲು ತೊಳೆಯಲು ನೀರು ಕೊಟ್ಟು ಒಳಗಡೆ ಕರೆದಳು. ಜೋಯಿಸರು ಒಳಗಡೆ ಬಂದು ಕುಳಿತು ಸುಧಾರಿಸಿಕೊಳ್ಳುತ್ತಿರುವಾಗ ಆ ಹೆಂಗಸು ಕುಳಿತುಕೊಳ್ಳಲು ಮಣೆ ಇಟ್ಟು ಕುಡಿ ಬಾಳೆಎಲೆ ಹಾಸಿ ಜೋಯಿಸರನ್ನು ಊಟಕ್ಕೆ ಕರೆದು ಬಿಸಿಬಿಸಿ ಅಡುಗೆ ಬಡಿಸಿದಳು. ಅವರು ಉಂಡು ಕೈ ತೊಳೆದು ಬರುವಷ್ಟರಲ್ಲಿ ಜಗಲಿ ಮೇಲೆ ಚಾಪೆ ದಿಂಬು ಹೊದಿಕೆ ಸಿದ್ಧ ಮಾಡಿ ಮಲಗಲು ವಿನಂತಿಸಿದಳು. ಸುಸ್ತಾದ ಕಾರಣ ಜೋಯಿಸರು ಅವಳ ಪೂರ್ವಾಪರ ವಿಚಾರಿಸದೆ ದಿಂಬಿಗೆ ತಲೆಯಿಡುತ್ತಲೇ ನಿದ್ದೆಗೆ ಜಾರಿದರು.

ಬೆಳಗ್ಗೆ ಸೂರ್ಯ ಕಣ್ಣು ಕುಕ್ಕುತ್ತಿದ್ದ ಹೊಡೆತಕ್ಕೆ ಎಚ್ಚರವಾಯ್ತು. ಎದ್ದು ಮೈಮರಿದು ಕಣ್ಣು ತೆರೆದಾಗ ಆ ಮನೆಯ ಬಾಗಿಲಿಗೆ ಬೀಗ ಹಾಕಿತ್ತು. ಮನೆಯ ಮುಂದೆ ವರುಷಗಳಿಂದ ಸಾರಿಸದೆ ರಂಗೋಲಿ ಕಾಣದ ಅಂಗಳ ನೋಡಿ ಆಶ್ಚರ್ಯ ಆಯಿತಾದರೂ ಹೆಚ್ಚಿನ ವಿಚಾರ ಮಾಡದೆ ತಮ್ಮ ಪಂಚೆ ಅಡ್ಡವಸ್ತ್ರ ಸರಿ ಮಾಡಿಕೊಂಡು ಸುತ್ತಲೂ ಒಮ್ಮೆ ಗಮನಿಸಿದರು. ಸಮೀಪದಲ್ಲಿ ನೀರಿನ ಶಬ್ದ ಕೇಳಿಬಂತು. ಇಲ್ಲೆಲ್ಲೊ ನದಿ ಇರಬಹುದು ಎಂದು ಊಹಿಸಿ ಆ ದಿಕ್ಕಿನಲ್ಲಿ ಸರಸರ ಹೆಜ್ಜೆ ಹಾಕಿ ಹೊರಟಾಗ ನದಿ ಸಿಕ್ಕು ಸ್ವಲ್ಪ ಸಮಾಧಾನವಾಯ್ತು. ಆ ನದಿ ದಂಡೆಯ ಮೇಲೆ ಶ್ರಾದ್ಧ ಕಾರ್ಯ ನಡೆಯುತ್ತಿತ್ತು. ಅಪ್ಪ, ‌ಮಕ್ಕಳು ಹಾಗೂ ಅರ್ಚಕರು ಮಾತ್ರ ಇದ್ದರು. ಅಲ್ಲೆ ಪಕ್ಕದಲ್ಲಿದ್ದ ಪೊಟರೆಯಲ್ಲಿ ಶೌಚ ಮುಗಿಸಿ ನದಿಯಲ್ಲಿ ಮುಳುಗು ಹಾಕಿ ಸ್ನಾನ ಮಾಡಿ ಮೇಲೆದ್ದು ಬಂದ ಜೋಯಿಸರಿಗೆ ನದಿ ದಂಡೆಯ ಮೇಲೆ ಕಣ್ಣಿಗೆ ಬಿದ್ದ ದೃಶ್ಯ ನೋಡಿ ಜೀವ ಬಾಯಿಗೆ ಬಂದಂತಹ ಅನುಭವವಾಗಿ ಕ್ಷಣದಲ್ಲೇ ಮೂರ್ಛೆ ತಪ್ಪಿ ಬಿದ್ದರು.

-ಮೇಘನಾ ಕಾನೇಟ್ಕರ್