Click here to Download MyLang App

ನೆಲೆ - ಬರೆದವರು : ಬಿ.ಕೆ.ಮೀನಾಕ್ಷಿ | ಸಾಮಾಜಿಕ

ರಾಹುಲ್ ದಡದಡನೆ ಮೆಟ್ಟಿಲಿಳಿದು ಓಡುತ್ತಾ
ಹೋಗಿ ಡಾಕ್ಟರನ್ನು ತಡೆದು ನಿಲ್ಲಿಸಿದ. ಡಾಕ್ಟರ್
ಅವನ ಆವೇಗದ ವರ್ತನೆಗೆ ಅರ್ಥ ಹುಡುಕುತ್ತಾ
ಅವನ ಮುಖ ನೋಡುತ್ತಾ ನಿಂತರು.
`ಅವರಿಗೆ ಏನಾಗಿದೆ ಸರಿಯಾಗಿ ಹೇಳಿ ಡಾಕ್ಟರ್ ಯಾವ
ಟ್ರೀಟ್‍ಮೆಂಟ್ ಬೇಕಾಗಿದೆ?’’ ಡಾಕ್ಟರ್‍ಗೆ ಅವನ
ಮಾತಿನಿಂದ ಅಸಹನೆಯುಕ್ಕಿ
`ನಿಮಗೆ ಒಮ್ಮೆ ಹೇಳಿದ್ದು ಅರ್ಥವಾಗಲಿಲ್ಲವಾ?. ಪದೇ
ಪದೇ ಕೇಳಿದ್ದನ್ನೇ ಕೇಳ್ತೀರಲ್ಲಾ? ಎಷ್ಟು ಸಾರಿ,
ಸಾರಿ ಸಾರಿ ಹೇಳಿದಿನಿ, ಅವರಿಗೆ ಧೈರ್ಯದ
ಅವಶ್ಯಕತೆಯೊಂದೆ ಇರೋದು ಅಂತ? ನಿಮಗೆ
ಅರ್ಥವಾಗಲ್ಲವೇನ್ರಿ?’’’
’ ಸಿಡುಕುತ್ತಾ ಹೊರಟುಹೋದರು. ರಾಹುಲ್
ತಣ್ಣೀರೆರಚಿಸಿಕೊಂಡವನಂತೆ ಸಪ್ಪಗಾಗಿ ಲಸಿತಳ
ರೂಮಿಗೆ ಹಿಂದಿರುಗಿದ. ಲಸಿತ ರಾಹುಲನನ್ನೇ
ಸುಮ್ಮನೆ ಪ್ರಶ್ನಾರ್ಥಕವಾಗಿ ನೋಡಿದಳು. `ಏನೂ

ಇಲ್ಲ ಹುಷಾರಾಗ್ತೀಯಂತೆ. ಹೆದರಬೇಡ್ವಂತೆ’’ಲಸಿತ
ಅವನ ಮಾತಿನ ಧೋರಣೆಗೆ ಪೇಲವವಾಗಿ
ನಕ್ಕಳು. ಅವಳಿಗೆ ಗೊತ್ತು, ತನಗೆ
ವಾಸಿಯಾಗದ ಖಾಯಿಲೆಯೇನೋ ಬಂದಿದೆಯೆಂದು
ತಿಳಿದಿದ್ದಾನೇನೋ, ಆದರೆ ನನಗಾಗಿರುವುದಾರೂ
ಏನೆಂದು ಅವನಿಗೆ ಗೊತ್ತಿಲ್ಲ. ಲಸಿತ ಅವನ
ಮುಖವನ್ನು ನೋಡುತ್ತಲೇ ಇದ್ದು, ಮುಖ
ಕೆಳಗೆ ಹಾಕಿದಳು. ತಾನಿವನ ಮನೆಗೆ ಸೇರಿ ಇವನಿಗೆ
ಕೊಟ್ಟ ಸುಖವಾದರೂ ಏನು? ಚಿಂತೆಯಲ್ಲಿ
ಮುಳುಗಿದ ಲಸಿತ ಮೌನವಾದಳು. ರಾಹುಲ್ ಅವಳ
ಕೈ ಹಿಡಿದು ವಾತ್ಸಲ್ಯದಿಂದ ನುಡಿದ, `ಲಸಿ, ನಿನಗೇನೂ
ಆಗಿಲ್ಲವಂತೆ. ಖಾಯಿಲೆಯಿಲ್ಲದ ಮೇಲೆ ನೀನು
ಹುಷಾರಾಗಿದ್ದೀಯಾ ಅಂತ ತಾನೇ ಅರ್ಥ? ಯಾಕೆ
ಯಾವಾಗಲೂ ಮನಸ್ಸಿನಲ್ಲಿ ಚಿಂತೆ ತುಂಬಿಕೊಂಡು
ಕೊರಗುತ್ತಿರುತ್ತೀಯಾ? ನಿನ್ನ ಕೊರಗೇ
ಅರ್ಧ ನಿನ್ನನ್ನು ಹಾಸಿಗೆ ಹಿಡಿವಂತೆ ಮಾಡಿದೆ. ನೀನು
ಆರಾಮವಾಗಿರು. ನೀನಾಗೆ ನೀನೇ
ಸುಧಾರಿಸಿಕೊಳ್ಳುತ್ತೀಯಾ.’ ರಾಹುಲನ
ಧೈರ್ಯದ ಮಾತುಗಳು ಲಸಿತಳಿಗೆ ಆ
ಸಮಯಕ್ಕೆ ಧೈರ್ಯ ತುಂಬಿ ಚಿಂತೆಯನ್ನೆಲ್ಲ
ಕೊಡವಿಕೊಳ್ಳುತ್ತಿದ್ದಳು. ಆದರೆ ಅವಳ
ಹೊಟ್ಟೆಯ ನೋವು ಅವಳನ್ನು ಹಾಸಿಗೆಯಿಂದ
ಏಳಲು ಬಿಡುತ್ತಿರಲಿಲ್ಲ. ಅವಳಿಗೆ
ಹೊಟ್ಟೆನೋವೊಂದೇ ಅಲ್ಲ ಬಾಧಿಸುತ್ತಿದ್ದುದು.
ಇದ್ದಕ್ಕಿದ್ದಂತೆ ತಲೆ ಸುತ್ತುವುದು, ವಾಂತಿ
ಬಂದೇಬಿಟ್ಟಿತು ಎನ್ನುವಷ್ಟರಲ್ಲಿ, ಹಾಗೇ
ಸರಿಹೋಗಿಬಿಡುವುದು. ಕಣ್ಣುಗಳಲ್ಲಿ ನಕ್ಷತ್ರ
ತುಂಬಿಕೊಂಡಂತಾಗುವುದು, ಹೀಗೆ ಲಸಿತಳಿಗೆ
ನಾನಾವಿಧವಾಗಿ ಅವಳ ಆರೋಗ್ಯ
ಕೈಕೊಡುತ್ತಿತ್ತು. ಇದೆಲ್ಲ ಅವಳ ಭ್ರಾಂತಿಯೋ,
ಅಥವಾ ತಾನು ಸತ್ತುಹೋಗಿಬಿಡಬೇಕೆಂಬ
ಆತುರದಿಂದ ಈ ಖಾಯಿಲೆಗಳನ್ನು
ಹುಟ್ಟುಹಾಕಿಕೊಂಡಿದ್ದಾಳೋ, ಅವಳಿಗೇ ತಿಳಿಯದು.
ಅವಳ ಅತ್ತೆಮಾವ ಏನೊಂದೂ ತೋಚದೆ,
`ಸಂಸಾರ ಗುಟ್ಟು ವ್ಯಾಧಿ ರಟ್ಟು’ ಎನ್ನುತ್ತಲೇ
ಯಾರಾದರೊಬ್ಬರಿಂದ ನನ್ನ ಸೊಸೆಯ ರೋಗ
ವಾಸಿಯಾಗಬಹುದೆನೋ, ಎಂದುಕೊಂಡು
ಸಿಕ್ಕಸಿಕ್ಕವರಿಗೆಲ್ಲ ಲಸಿತಳ ಬಗ್ಗೆ ಹೇಳುತ್ತಿದ್ದರು.
ಆದರೆ ಯಾರಿಂದಲೂ ಶಾಶ್ವತ ಪರಿಹಾರ
ದೊರೆಯಲಿಲ್ಲ. ಆದರೂ, ಅವರು ತಮ್ಮ
ಪ್ರಯತ್ನ ಬಿಟ್ಟಿರಲಿಲ್ಲ. ರಾಹುಲನಿಗೆ ತಂದೆ
ತಾಯಿಯರ ಪರದಾಟ, ಅವರ ಹಪಾಹಪಿ

ನೋಡನೋಡುತ್ತಾ ಅವರ ಬಗ್ಗೆ ಕನಿಕರ
ಮೂಡುತ್ತಿತ್ತು. ಲಸಿತಳಿಗೂ ಅಷ್ಟೆ,
ಅತ್ತೆಮಾವರು ಪರಿತಪಿಸುವುದನ್ನು ನೋಡಿ,
ಹೃದಯ ಒಡೆದು ಹೋದಂತಾಗುತ್ತಿತ್ತು.
ಆದರೆ ಏನು ಮಾಡಲೂ ಸಾಧ್ಯವಿರಲಿಲ್ಲ. ಡಾಕ್ಟರು
ಆತ್ಮವಿಶ್ವಾಸ ತುಂಬಿರಿ ಎನ್ನುತ್ತಾರೆ, ಲಸಿತ ಹೀಗೆ
ಏನೇನೋ ಆಗುತ್ತದೆ ಎನ್ನುತ್ತಾಳೆ, ತನಗೋ
ಯಾವುದನ್ನು ನಿರ್ವಹಿಸಲಿ ಎಂಬ ಪೇಚಾಟ! ಸಾಕಾಗಿದೆ!
ಮದುವೆಯಾಗಿ ಲಸಿತಾ ಮನೆಗೆ ಬಂದು
ಒಂದೆರಡು ತಿಂಗಳಷ್ಟೆ ಚೆನ್ನಾಗಿ
ಓಡಾಡಿಕೊಂಡಿದ್ದುದು. ಆನಂತರ ನಿಧಾನವಾಗಿ
ತಲೆನೋವು ಬರತೊಡಗಿತು. ರಾಹುಲ್ ಮಾತ್ರೆ
ತಂದುಕೊಟ್ಟನು. ಲಸಿತಾ ಮನೆಯಲ್ಲಿ
ಕುಳಿತವಳಲ್ಲ, ಅವಳಿಗೂ ಕಂಪನಿಯ
ಕೆಲಸವಿತ್ತು. ಕೈತುಂಬಾ ಸಂಬಳ, ಯಾವುದಕ್ಕೂ
ಕೊರತೆಯಿಲ್ಲದ ಸಂಸಾರ, ಒಬ್ಬ ನಾದಿನಿಯು
ಮದುವೆಯಾಗಿ ಗಂಡನ ಮನೆ ಸೇರಿದ್ದಾಳೆ.
ಒಂದೇ ಊರಿನಲ್ಲಿರುವುದರಿಂದ ಆಗಾಗ ಬಂದು
ಹೋಗುವುದಲ್ಲದೆ, ಅತ್ತಿಗೆಯ ಜೊತೆ
ಒಳ್ಳೆಯ ಸಂಬಂಧವನ್ನೂ ಹೊಂದಿರುವುದರಿಂದ

ನಗುನಗುತ್ತಾ ಬಂದು ಹೋಗುವುದು
ರೂಢಿಯಾಗಿದೆ. ಲಸಿತಾಳ ಖಾಯಿಲೆಯ ಚಿಹ್ನೆಗಳಿಂದ
ಅವಳು ನೂರೆಂಟು ಊಹೆಗಳನ್ನು ಮಾಡಿದರೂ
ಸಮರ್ಥಿಸಲು ಬಲವಾದ ಕಾರಣವಿರಲಿಲ್ಲ. ಲಸಿತಳಿಗೆ ನಾದಿನಿ
ತನುವಿನ ಕಳಕಳಿಯಿಂದ ಮುಜುಗರವಾದರೂ,
ತೋರಿಸಿಕೊಳ್ಳದೆ,
`ಬಿಡು ತನು, ಪರವಾಗಿಲ್ಲ, ವಾಸಿಯಾಗುತ್ತದೆ.
ಏನಂತಹ ದೊಡ್ಡದಿಲ್ಲ.’
ಎಂದು ಅವಳನ್ನೇ
ಸಮಾಧಾನಗೊಳಿಸುತ್ತಿದ್ದಳು. ಮದುವೆಯಾಗಿ
ವರ್ಷವಾಗುತ್ತಾ ಬಂತು, ಕೇವಲ ಮೋಡ
ಮುಸುಕಿದ ವಾತಾವರಣವೇ ಮನೆಯ ತುಂಬ.
ನೆಮ್ಮದಿಯೆನ್ನುವುದು ಎಲ್ಲರಿಗೂ
ದೂರದಬೆಟ್ಟವೇ.
*
ರಾಹುಲ್ ಕಾಫಿ ಹೀರುತ್ತಿದ್ದವನು ನಿಲ್ಲಿಸಿ,
`ಇದಕ್ಕೇನು ಪರಿಹಾರ ಸವಿ?’’ಎಂದು ಎದುರಿಗೆ
ಕುಳಿತ ಸವಿಯ ಕೈ ಹಿಡಿದು ಕೇಳಿದ. ಸವಿ
ಸುಮ್ಮನೆ ಅವನ ಮುಖ ನೋಡಿದಳು. ಏನು

ಹೇಳಿದರೆ ಇವನಿಗೆ ಸಮಾಧಾನ ಸಿಗಬಹುದು
ಎಂಬುದು ಅವಳ ಅಂತರಾಳದ
ಯೋಚನೆಯಾಗಿತ್ತು. ಏನೂ ಮಾತಾಡದೆ ಅವನ
ಕೈಯ್ಯನ್ನು ತನ್ನ ಎರಡೂ ಕೈಗಳಲ್ಲೂ
ಹಿಡಿದು, ಸಂತೈಸುವಂತೆ ಹಿಡಿತವನ್ನು
ಬಿಗಿಗೊಳಿಸಿದಳು. ಕೆಲವು ನಿಮಿಷಗಳ ನಂತರ,
ಕೈ ಬಿಡಿಸಿಕೊಂಡ ರಾಹುಲ್, `ಕಾಫಿ ಕುಡಿ.’’ ಎಂದನು.
`ಯಾವ ರೋಗವೂ ಇಲ್ಲವಂತೆ ಅವಳಿಗೆ. ಕೆಲಸಕ್ಕೆ
ಹೋಗಲು ಇಷ್ಟವಿಲ್ಲದಿದ್ದರೆ ಬಿಟ್ಟುಬಿಡು ಎಂದೆ. ಇಲ್ಲ
ಬಿಡುವುದಿಲ್ಲ ಎನ್ನುತ್ತಾ ಬೇಸರಿಸಿಕೊಳ್ಳುತ್ತಾಳೆ.
ಈಗಾಗಲೇ ಅವಳನ್ನು ಕೆಲಸದಿಂದ ತೆಗೆದು
ಹಾಕಿದ್ದಾರೆ ಅನಿಸುತ್ತದೆ. ಇವಳು ಹೋದ
ಕೂಡಲೇ ಲೆಟರ್ ಕೊಡುತ್ತಾರೆ.’
ಸವಿ ಎಲ್ಲವನ್ನೂ ಕೇಳಿಸಿಕೊಂಡವಳು,
`ನಾನೊಮ್ಮೆ ಬಂದು ಮಾತಾಡಲೆ?’’
ಎಂದು ಅನುಮಾನದಿಂದಲೇ ಕೇಳಿದಳು. ಇದಕ್ಕೆ
ಮೊದಲು ಒಂದೆರಡು ಬಾರಿ ಲಸಿತ ಮತ್ತು ಸವಿ
ಭೇಟಿಯಾಗಿದ್ದರು. ಲಸಿತ ಅವಳನ್ನು ಹಾರ್ದಿಕವಾಗಿ
ಮಾತಾಡಿಸಿ ಕಾಫಿ ತಿಂಡಿಯನ್ನು ಕೊಟ್ಟಿದ್ದಳು.

ಹೆಚ್ಚೇನೂ ಮಾತಾಡದೆ, ಕೆಲಸದ ನೆಪದಲ್ಲಿ
ಒಳಗೆ ಸೇರಿಕೊಂಡಿದ್ದಳು. ಅವಳ ಸ್ವಭಾವವೇ
ಹಾಗೆಂದುಕೊಂಡು ಸವಿ, ರಾಹುಲ್ ಮತ್ತವನ
ತಾಯಿತಂದೆಯರನ್ನು ಮಾತಾಡಿಸಿಕೊಂಡು,
ಲಸಿತಳಿಗೆ ಬೈ ಹೇಳಿ ಬಂದಿದ್ದಳು. ಇನ್ನೊಂದು ಸಾರಿ
ಕೂಡ ಸೇಮ್ ರಿಪೀಟ್ ಆಗಿತ್ತು. ಆಗಲೂ ಸವಿ
ಸುಮ್ಮನೆ ವಾಪಸಾಗಿದ್ದಳು. ಹೀಗಿರುವಾಗ,
ಅವಳನ್ನು ಹೋಗಿ ಮಾತಾಡಿಸುವುದು ಹೇಗೆ?
ಅವಳ ಅಂತರಂಗವನ್ನು ಬೆದಕುವುದು ಹೇಗೆ?
ಏಕೋ ಇದು ಆಗದ ಕೆಲಸವೆನಿಸಿತು.
`ರಾಹುಲ್ ನೀನು ಅವಳನ್ನು ಅವರ ತವರಿಗೇಕೆ
ಕಳಿಸಿ ನೋಡಬಾರದು? ಬದಲಾವಣೆಯಾದರೆ
ಸರಿಹೋಗಬಹುದೇನೋ.’
ರಾಹುಲ್‍ಗೆ ಹೌದೆನ್ನಿಸಿತು.
`ಒಳ್ಳೆಯ ಸಲಹೆ. ಆದರೆ ಅವರ ಮನೆಯವರೆಲ್ಲ
ಆಗಾಗ ಬಂದು ಹೋಗಿದ್ದಾರೆ. ಅವಳ ತಮ್ಮ ಸಚಿನ್
ಕೂಡ ಪದೇ ಪದೇ ಬಂದು ಮಾತಾಡಿಸಿಕೊಂಡು
ಹೋಗುತ್ತಾನೆ. ಚೆನ್ನಾಗಿ ಮಾತನಾಡಿಸುತ್ತಾಳೆ.
ನನಗೆ ಮತ್ತೆ ನನ್ನ ಅಪ್ಪ ಅಮ್ಮನಿಗೇ ಈಗ

ಕಷ್ಟವಾಗಿರುವುದು, ನನ್ನ ಪ್ರಾರಬ್ಧ ಕಣೆ
ಇದು.’’
ರಾಹುಲ್ ಮುಖದಿಂದ ಬಂದ ಈ ಮಾತಿಗೆ ಸವಿ,
ಆಶ್ಚರ್ಯದಿಂದ ನೋಡಿದಳು.
ಹೌದು, ಸವಿಗೆ ಇದು ಆಶ್ಚರ್ಯದ ವಿಷಯವೇ.
ನೀನು ನನಗೆ ಇಷ್ಟ ಎಂಬುದನ್ನು
ಪ್ರತಿನಡೆನುಡಿಯಲ್ಲೂಸವಿ ತೋರಿಸುತ್ತಲೇ
ಬಂದಿದ್ದಳು. ಇಬ್ಬರೂ ಒಂದೇ ಕಂಪನಿಯ
ಕೆಲಸಗಾರರು. ಮೂರು ವರ್ಷಗಳ ಪರಿಚಯ
ಸ್ನೇಹವಾಗಿತ್ತು. ಇಬ್ಬರೂ ಪರಸ್ಪರ ಬಹಳ
ಸಹೃದಯಿಗಳಾಗಿದ್ದರು. ಇಬ್ಬರ ಮನೆಯ
ಜನರೂ, ಇಬ್ಬರಿಗೂ ಚಿರಪರಿಚಿತರು. ಸವಿಯ
ಮನದಲ್ಲಿ ಮೊಳಕೆಯೊಡೆದ ಪ್ರೀತಿ ರಾಹುಲನ
ಹೃದಯದಲ್ಲಿ ಚಿಗುರಲಿಲ್ಲ. ಅವನು ಅದನ್ನು
ಗಮನಿಸುತ್ತಿರುವನೋ ಇಲ್ಲವೋ ಎಂಬುದು
ಕೂಡ, ಅವಳಿಗೆ ತಿಳಿಯದಾಗಿತ್ತು. ಇಂತಹ
ಸಂದರ್ಭದಲ್ಲೇ ರಾಹುಲ್
`ಸವಿ ನಿಂಗೊಂದು ಸರ್ಪ್ರೈಸ್.’

ಎನ್ನುತ್ತಾ ಲಸಿತಳ ಫೋಟೋ ತೋರಿಸಿದ. ಆ
ಕ್ಷಣವೇ ಸವಿಯ ಕನಸುಗಳೆಲ್ಲ ಮುಳ್ಳು
ತಾಗಿದ ಬಲೂನ್‍ನಂತೆ ಉಸಿರು ಕಳೆದುಕೊಂಡಿದ್ದವು.
ಆದರೆ ಅದನ್ನೊಂದೂ ತೋರಗೊಡದೆ, ಸಹಜವಾಗಿ
ಅವನಿಗೆ ಅಭಿನಂದಿಸಿ ತನ್ನ ದುಗುಡವನ್ನು
ಎದುರಿಗಿದ್ದ ನೀರು ಕುಡಿದು ಪರಿಹರಿಸಿಕೊಂಡಿದ್ದಳು.
ಅಲ್ಲಿಂದ ಮುಂದಕ್ಕೆ ಸವಿ ರಾಹುಲ್ ನಿಂದ ಅಂತರ
ಕಾಪಾಡಿಕೊಳ್ಳತೊಡಗಿದ್ದಳು. ಈಗ ಮನೆಯ ಈ
ಪರಿಸ್ಥಿತಿಯನ್ನು ಇವಳ ಬಳಿ ವಿಶದೀಕರಿಸಿ ಸಲಹೆ
ಕೇಳಿದ್ದನು. ಆದರೆ ಒತ್ತಾಯಪೂರ್ವಕವಾಗಿ
ಇದನ್ನೇ ಮಾಡು ಎಂದು ಹೇಳಲಾರಳು. ಅಷ್ಟು
ಸ್ವತಂತ್ರ ತೆಗೆದುಕೊಳ್ಳುವ
ಅಧಿಕಪ್ರಸಂಗತನ ಅವಳದಲ್ಲ. ಆದರೆ
ರಾಹುಲನ ತಳಮಳ ಆತಂಕಗಳಿಗೆ ಅವಳ
ಮನಸ್ಸು ಕರಗುತ್ತದೆ. ಏನು ಮಾಡುವುದು
ಎನ್ನುವುದಕ್ಕೆ ಉತ್ತರ ಶೂನ್ಯ! ಕಾಲವೇ ಇದಕ್ಕೆ
ಉತ್ತರಿಸಬೇಕೆನ್ನುವುದೇ ಅವಳ ನಿರೀಕ್ಷೆ!
ರಾಹುಲ್ ಚಿಂತಾಕ್ರಾಂತನಾದರೂ,
ಪರಿಹಾರೋಪಾಯಗಳನ್ನು ಅನ್ವೇಷಿಸುತ್ತಲೇ
ಇದ್ದನು. ಅವನು ಮನೆಗೆ ಬಂದು ತಪಾಸಣೆ ನಡೆಸಿ

ಹೋಗುವ ಡಾಕ್ಟರ್, ಧೈರ್ಯ ತುಂಬಲು ಸಲಹೆ
ನೀಡುತ್ತಿದ್ದರು. ಆದರೆ ಲಸಿತ ಏತಕ್ಕೆ
ಹತಾಶಳಾಗಿದ್ದಾಳೆಂಬುದಾದರೂ ತನಗೆ
ತಿಳಿಯಬೆಕಲ್ಲಾ? ಆಗ ಸಮಸ್ಯೆ ಪರಿಹರಿಸಿ, ಧೈರ್ಯ
ಕಳೆದುಕೊಳ್ಳಬೇಡ ಎನ್ನಬಹುದು, ಅವಳ
ಆತ್ಮವಿಶ್ವಾಸ ಹೆಚ್ಚಲು ಮಾರ್ಗಗಳನ್ನು
ಹುಡುಕಬಹುದು. ಆದರೆ ಅವಳಿಗೆ ಆರೋಗ್ಯ
ಸರಿಯಿಲ್ಲವೋ, ಮಾನಸಿಕವಾಗಿ ಬಳಲಿರುವಳೊ
ಏನೊಂದೂ ಸರಿಯಾಗಿ ತಿಳಿಯದಲ್ಲ? ಇಲ್ಲ, ಇವತ್ತು
ಅವಳನ್ನು ಬೇರೊಬ್ಬ ಡಾಕ್ಟರ್ ಬಳಿ
ಕರೆದೊಯ್ಯುವೆ, ಎಂದು ನಿರ್ಧರಿಸಿದವನೇ
ಮನೆಯ ಕಡೆಗೆ ವೇಗವಾಗಿ ಕಾರು ಓಡಿಸಿದನು
ರಾಹುಲ್. ಒಬ್ಬ ಮನೋವೈದ್ಯರನ್ನೂ ಕಾಣಬೇಕು.
ಇಲ್ಲದಿದ್ದರೆ ಇದೇ ಮುಂದುವರಿದು, ಲಸಿತಳ ಸ್ಥಿತಿ
ಏನಾಗುತ್ತದೋ ಅಂದುಕೊಳ್ಳುತ್ತಿದ್ದಂತೆ
ಅವನ ಮನಸ್ಸು ಅಳುಕಿತು.
ಮನೆಗೆ ಬಂದವನೇ ಸೀದಾ ಲಸಿತಳ ಬಳಿ ನಡೆದು
`ಎದ್ದು ಮುಖ ತೊಳೆ. ಹೊರಗೆ ಹೋಗೋಣ.’’
ಲಸಿತ ಅವನ ಮುಖವನ್ನೇ ತೀಕ್ಷ್ಣವಾಗಿ
ನೋಡಿದಳು.

`ನನಗೇನೂ ಆಗಿಲ್ಲ ರಾಹುಲ್, ಯಾಕೆ ಈಗ
ಹೊರಗೆ ಹೋಗಬೇಕು?’’ ರಾಹುಲನಿಗೆ
ಆಶ್ಚರ್ಯವಾಯಿತು. ತಾನಿನ್ನು ಏನೂ ಹೇಳೇ ಇಲ್ಲ,
ಅಷ್ಟು ಬೇಗ ಇವಳಿಗೆ ಅರ್ಥವಾಗಿಹೋಯ್ತೇ
`ಸುಮ್ಮನೆ ಹೊರಗೆ ಹೋಗುವುದಷ್ಟೆ.
ರೆಡಿಯಾಗು.’’
ಮುಂದಿನ ಮಾತಿಗೆ ಅವಕಾಶವಿಲ್ಲದಂತೆ ತಾನು
ರೆಡಿಯಾಗಲು ಹೊರಟ. ಬಹಳ ಜನಪ್ರಿಯ ಮತ್ತು
ಒಳ್ಳೆಯ ಡಾಕ್ಟರೊಬ್ಬರ ವಿಳಾಸ
ಪಡೆದುಕೊಂಡಿದ್ದವನು ಅವರ ಬಳಿಗೇ ಸೀದಾ
ಹೊರಟ. ಉದ್ದಕ್ಕೂ ಅವರಿಬ್ಬರ ನಡುವಿನ ಮಾತಿಲ್ಲದ
ಶೂನ್ಯತೆ , ಸಮಯವನ್ನು ಲಂಬಿಸುತ್ತಿತ್ತು.
ಸೀದಾ ಡಾಕ್ಟರರ ಶಾಪ್ ಬಳಿಯೇ ಕಾರು ನಿಲ್ಲಿಸಿದ್ದು.
ಲಸಿತ ಪ್ರಜ್ಞೆ ತಪ್ಪಿ ಸೀಟಿಗೆ ಒರಗಿದಳು.
*
`ಏನಾಗಿದೆ ಲಸಿತ ನಿನಗೆ? ಅಮ್ಮನ
ಮನೆಗೇನಾದ್ರೂ ಹೋಗ್ತೀಯಾ?’’ ರಾಹುಲ್
ಅಸಹನೆಯಿಂದ ಕಿರುಚಿದ. ಅದಕ್ಕೆ ಕಾರಣ, ತಾನು

ಕರೆದುಕೊಂಡು ಹೋದ ಯಾವ ಡಾಕ್ಟರಿಗೂ
ಲಸಿತ ಸ್ಪಂದಿಸಿರಲಿಲ್ಲ.
`ನನಗೇನಾದರೆ ನಿಮಗೇನು? ಸುಮ್ಮನಿದ್ದುಬಿಡಿ
ರಾಹುಲ್.’’
`ನನಗೇನೂ ಆಗಬೇಕಾಗಿಲ್ಲವೇ? ಇದು ನಿನ್ನ
ಮಾತೇ ಲಸಿತ? ತಲೇಲಿ ಬುದ್ಧಿ ಇದೆಯಾ?’’
ಅಷ್ಟರಲ್ಲಿ ಅತ್ತೆ ಮಾವನವರೂ ಬಂದಿದ್ದರಿಂದ
ಮಾತು ನಿಲ್ಲಿಸಿದಳು.
`ಲಸಿತ, ನಿನ್ನ ಮನಸಿನಲ್ಲೇನಿದೆ ಅಂತಾದ್ರೂ ಹೇಳು.
ಯಾಕೆ ಹೀಗಾಗುತ್ತಿದೆ ಹೇಳಮ್ಮಾ. ಆಗಲೆ
ಏಳೆಂಟು ತಿಂಗಳೇ ಕಳೆಯುತ್ತಾ ಬಂತು.
ನಮ್ಮಿಂದೇನಾದರೂ ಬೇಸರವೇ?’’
ಲಸಿತ ಮಾತಾಡಲಿಲ್ಲ ಅವಳ ಕಣ್ಣುಗಳು ತುಂಬಿ
ಬಂದವು. ಅತ್ತೆಮಾವ ಇಬ್ಬರೂ ಬಂದು ಅವಳ ಬಳಿ
ಕುಳಿತು ಅವಳ ಗಲ್ಲ ಹಿಡಿದು, ಸಮಾಧಾನಿಸಿದರು.
`ಯಾಕಮ್ಮಾ ಅಳುತ್ತಿದ್ದೀಯಾ?
ಏನಾಗಿದೆಯಮ್ಮಾ? ಏನು ಚಿಂತೆ
ಮಾಡುತ್ತಿದ್ದೀಯಾ? ಹೇಳಮ್ಮಾ.’’

ತಲೆಯನ್ನು ಎರಡೂ ಕೈಗಳಿಂದ ಭದ್ರವಾಗಿ
ಹಿಡಿದು ಕುಳಿತಳು. ಕುಳಿತವಳು ಹಾಸಿಗೆಗೆ ಒರಗಿ
ಕಣ್ಮುಚ್ಚಿದಳು.
ಎಲ್ಲರೂ ರೂಮಿನಿಂದಾಚೆ ಬಂದರು. ರಾಹುಲ್ ಲೈಟು
ಆರಿಸಿ, ಬಾಗಿಲು ಮುಂದೆ ಎಳೆದುಕೊಂಡನು. ಅವನ
ಸ್ಥಿತಿ ನಿಜಕ್ಕೂ ಕರುಣಾಜನಕವಾಗಿತ್ತು. ಯಾವ
ಡಾಕ್ಟರೂ ಏನೊಂದೂ ಖಾಯಿಲೆಯನ್ನೂ
ಗುರುತಿಸಿರಲಿಲ್ಲ. ಮನೋವೈದ್ಯರ ಬಳಿ ತನ್ನ
ಮನದಲ್ಲಿ ಏನೂ ಇಲ್ಲ ತಾನು ಆರಾಮವಾಗಿದ್ದೇನೆ
ಎಂದೇ ಸಲೀಸಾಗಿ ಮಾತಾಡಿದ್ದಳಂತೆ. ಅವರಿಗೆ ಯಾವ
ತೊಂದರೆಯೂ ಇಲ್ಲವೆಂದೇ ಡಾಕ್ಟರ್
ಹೇಳಿದ್ದರು. ಮನೋವೈದ್ಯರ ಅಭಿಪ್ರಾಯವೂ
ಅದೇ ಆಗಿತ್ತು. ಲಸಿತ ಎಲ್ಲರೂ
ಹೊರಹೋಗುತ್ತಿದ್ದಂತೆಯೇ ಹಾಸಿಗೆಯಲ್ಲಿ
ಬಿದ್ದು ಬಿಕ್ಕಿಬಿಕ್ಕಿ ಅತ್ತಳು. ಅವಳ ದುಃಖ ಮೇರೆ
ಮೀರಿತ್ತು. ಊಹೆಗೆ ನಿಲುಕದಾಗಿತ್ತು. ಯಾರೂ
ಅವಳ ದುಃಖವನ್ನು ಶಮನ ಮಾಡಲು
ಸಾಧ್ಯವಿರಲಿಲ್ಲ. ಯಾರಿಗೆ ಏನು ಹೇಳಲಿ? ನನಗಾದ
ನಷ್ಟವನ್ನು ಯಾರಿಂದ ತುಂಬಿ ಕೊಡಲು ಸಾಧ್ಯ?
ಲಸಿತಳ ಪ್ರಶ್ನೆಗಳಿಗೆ ಅವಳಲ್ಲೇ

ಉತ್ತರವಿರಲಿಲ್ಲ. ಏನೆಂದು ಉತ್ತರಿಸಿಕೊಳ್ಳುತ್ತಾಳೆ?
ಉತ್ತರವಿರದ ಪ್ರಶ್ನೆಗಳಿಗೆ ಲಸಿತ ಸದಾ
ದುಃಖಿಸುವುದೊಂದೇ ಉಳಿದ ಮಾರ್ಗ. ಹಾಗಾದರೆ
ಆಗಿದ್ದಾದರೂ ಏನು?
ಲಸಿತ ಸುಂದರ, ಮುಗ್ಧ ಹುಡುಗಿ
ಶ್ರೀಮಂತಳೂ, ಉತ್ತಮ ಮನೆತನದವಳು.
ಮುದ್ದಿನಿಂದ ಬೆಳೆದ ಹುಡುಗಿ. ಕಲಾರಾಧಕಿ.
ಕಲೆಯ ಎಲ್ಲ ವಿಷಯಗಳಲ್ಲೂ
ಕೈಯ್ಯಾಡಿಸಿದವಳು. ಅದು ಅಪೂರ್ಣವಾದರೂ, ಎಲ್ಲ
ಕಲೆಗಳ ಬಗ್ಗೆ ತಿಳಿವಳಿಕೆಯುಳ್ಳವಳು.
`ಶರಣ್, ನಾನು ಮನೆಗೆ ಹೋಗ್ಬೆಕು. ಮನೇಲಿ
ಕಾಯ್ತಿರ್ತಾರೆ. ಹೊರಡಲಾ?’’
`ಇನ್ನು ಸ್ವಲ್ಪ ಹೊತ್ತು ಜೊತೇಲಿರು ಲಸಿತ.
ನಿನ್ನನ್ನು ನಾನೇ ಮನೆಗೆ ಬಿಡುತ್ತೇನೆ.’’
`ಬೇಡ ಬೇಡ. ಮನೇಲಿ ನನ್ನನ್ನೂ ನಿನ್ನನ್ನೂ
ಒಟ್ಟಿಗೆ ನೋಡಿದರೆ ದೇವರೇ ಗತಿ. ಮನೆಯ
ಒಳಗೆ ಬಂದು ಒಮ್ಮೆ ನಿನ್ನ ಪರಿಚಯ ಮಾಡ್ಕೋ
ಎಂದು ಎಷ್ಟು ಹೇಳಿದ್ರೂ ಕೇಳ್ಳಿಲ್ಲ. ಈಗ ಇಷ್ಟು

ಹೊತ್ತಲ್ಲಿ ನಾನು ನಿನ್ನ ಜೊತೆ ಮನೆಗೆ ಹೋದರೆ
ದೇವರೇ ಗತಿ.’’
ಶರಣ್ ಅವಳ ಆತ್ಮೀಯ ಸ್ನೇಹಿತ . ಕಾಲೇಜಿನಲ್ಲಿ
ಅವಳ ಸೀನಿಯರ್. ದಿನ ಕಳೆದಂತೆ ಒಂದು
ಶುಭಘಳಿಗೆಯಲ್ಲಿ ಶರಣ್ ಅವಳ ಮನ
ಗೆದ್ದುಬಿಟ್ಟ. ಇದನ್ನು ಮನೆಯಲ್ಲಿ ಹೇಳುವುದು
ಹೇಗೆಂಬುದೇ ದೊಡ್ಡ ಸಮಸ್ಯೆ ಲಸಿತಳಿಗೆ. ಶರಣ್
ಇವಳನ್ನ ಒಂದು ದಿನ ಮೀಟ್ ಮಾಡದಿದ್ದರೆ
ಏನನ್ನೋ ಕಳೆದುಕೊಂಡಂತಾಡುತ್ತಿದ್ದ. ಲಸಿತ
ಅವನಿಗಾಗಿ ಮನೆಯಿಂದ ತಿಂಡಿ ತಿನಿಸು ತರುವುದಲ್ಲದೆ,
ಬೆಲೆಬಾಳುವ ಉಡುಗೊರೆಗಳನ್ನು
ಕೊಡುತ್ತಿದ್ದಳು. ಇಂತದೇ ಒಂದು ದಿನ.....
`ಲಸಿತ, ಇವರೆಲ್ಲ ನನ್ನ ಬೆಸ್ಟ್ ಫ್ರೆಂಡ್ಸ್.’’
ಎಂದು ತನ್ನೊಡನಿದ್ದ ಐದು ಜನರನ್ನು ಭೇಟಿ
ಮಾಡಿಸಿದನು. ಲಸಿತ ಅಷ್ಟು ಜನ ಹುಡುಗರ
ಮಧ್ಯೆ ಇರಲು ಮುಜುಗರಗೊಂಡು,
ಹೊರಡಲನುವಾದಳು.
`ನೀನು ಹೊರಡು, ತಡವಾಗುತ್ತೆ.’

ಎಂದು ಅವಳನ್ನು ಬೀಳ್ಕೊಟ್ಟನು. ಲಸಿತ
ಮಾರನೆದಿನ ಸಿಕ್ಕಾಗಲೂ ಎಲ್ಲರೂ ಒಟ್ಟಿಗಿದ್ದು,
ಹತ್ತಿರದ ಟೀ ಅಂಗಡಿಯಲ್ಲಿ ಟೀ
ಕುಡಿಯುತ್ತಿದ್ದರು. ಐದು ನಿಮಿಷ ಮಾತನಾಡಿ
ಹೊರಟುಹೋದಳು. ಇವನ ಸ್ನೇಹಿತರ
ದೆಸೆಯಿಂದ ಈ ಶರಣ್ ನನಗೆ ಈಗೀಗ ಮಾತನಾಡಲು
ಸಿಗುವುದೇ ಇಲ್ಲವೆಂದು ಗೊಣಗುತ್ತಾ
ಹೊರಟುಹೋದಳು. ಇಂತಹ ಭೇಟಿಗಳು
ನಾಲ್ಕಾರು ಬಾರಿ ಆದ ಮೇಲೆ ಲಸಿತ ಕೊಂಚ ಮೈಚಳಿ
ಬಿಟ್ಟಳು.
ಒಂದು ದಿನ ಸ್ಟಾರ್ ಹೋಟೆಲ್ ಒಂದರಲ್ಲಿ ಶರಣ್
ಮತ್ತು ಅವನ ಗೆಳೆಯರು ಮತ್ತು ಲಸಿತ
ಸಂಜೆ ಕಾಫಿ ಮತ್ತು ಸ್ನ್ಯಾಕ್ಸ್ ತೆಗೆದುಕೊಂಡು,
ತಿಂದು ಮುಗಿದ ಮೇಲೆ ಹೋಟೆಲ್‍ನಿಂದ
ಹೊರಟರು. ಲಸಿತ ಕೂಡ ಅವರ ಜೊತೆಯೇ
ಹೊರಟು ಮನೆಯ ದಾರಿಗೆ
ತಿರುಗಿದಳು.....ಮುಂದೆ......
*
ಆ ಆರ್ಧ ರಾತ್ರಿಯಲ್ಲಿ ಲಸಿತಳಿಗೆ ಎಚ್ಚರವಾದಾಗ
ಕಣ್ಣಿಗೆ ಕತ್ತಲೆ ಮುತ್ತಿಕೊಂಡಿತ್ತು. ಎಲ್ಲಿದ್ದೇನೆ

ಎಂದು ಕಣ್ಣನ್ನು ಕತ್ತಲೆಗೆ ಹೊಂದಿಸಿಕೊಂಡಳು.
ಊಹ್ಞೂಂ! ಎಲ್ಲಿದ್ದೇನೆಂದು ತಿಳಿಯುತ್ತಿಲ್ಲ. ತಲೆ
ಭಾರವಾಗಿ, ಮೈಕೈ ಎಲ್ಲಾ ನೋಯುತ್ತಿತ್ತು.
ಎಲ್ಲೋ ಕಲ್ಲುಗಳ ಮೇಲೆ ಮಲಗಿರುವಂತೆ
ಭಾಸವಾಗುತ್ತಿತ್ತು. ಸುತ್ತಲೂ ಕೈ ಆಡಿಸಿದಳು.
ಹೌದು ಕಲ್ಲುಗಳ ಮೇಲೇ! ದೂರ ದೂರಕ್ಕೆ
ಕೈ ನೀಡಿದಂತೆ, ಬೆರಳುಗಳಿಗೆ ರೈಲ್ವೇ
ಕಂಬಿಗಳು ತಾಗಿದವು. ಕಷ್ಟಪಟ್ಟು ಎದ್ದು
ಕುಳಿತಳು. ಏನಾಗಿದೆ ನನಗೆ? ನನ್ನ ಜೊತೆಗಿದ್ದ
ಶರಣ್ ಮತ್ತವನ ಗೆಳೆಯರೆಲ್ಲಿ? ಅವರೆಲ್ಲ ಎಲ್ಲಿ
ಹೋದರು? ತನ್ನ ಮೈ ಸವರಿಕೊಂಡಳು.....
ಸಂಪೂರ್ಣ ಬೆತ್ತಲೆ! ಒಂದು ದಾರದ ಎಳೆಯೂ
ಮೈ ಮೇಲಿಲ್ಲ. ನಡುಗಿಹೋದಳು!
ಬಟ್ಟೆಗಳನ್ನು ತಡಕಾಡತೊಡಗಿದಳು. ಇಲ್ಲ!
ಎಲ್ಲೂ ಕಾಣುತ್ತಿಲ್ಲ. ಎಷ್ಟು ಹುಡುಕಿದರೂ ಒಂದು
ಸಣ್ಣ ಬಟ್ಟೆಯೂ ಸಿಗುತ್ತಿಲ್ಲ. ಏನಾಯಿತು ಎಂದು
ಯೋಚಿಸುತ್ತಾ ಉಕ್ಕಿಬಂದ ದುಃಖದಲ್ಲಿ
ಬೋರಾಡಿಕೊಂಡು ಅತ್ತಳು. ದೂರದಲ್ಲಿ
ಯಾವುದೋ ವಾಹನದ ಹೆಡ್ ಲೈಟುಗಳು
ಬೆಳಕು ಬೀರತೊಡಗಿದವು. ಅಯ್ಯೋ!
ಯಾರಾದರೂ ಹೀಗೆ ತನ್ನನ್ನು

ನೋಡಿಬಿಟ್ಟರೆ.....ತನ್ನ ಕೈಗಳಿಂದ ಎರಡೂ
ಕಾಲುಗಳನ್ನು ಬಿಗಿಯಾಗಿ ಬಳಸಿ ಎದೆಗಪ್ಪಿಕೊಂಡು
ಕುಳಿತಳು. ಆ ವಾಹನದ ಲೈಟುಗಳು ನಿಧಾನವಾಗಿ
ಬೆಳಕು ಬೀರಿಕೊಂಡು ಈ ಕಡೆಗೇ
ಬರತೊಡಗಿದಂತೆ, ಲಸಿತಳಿಗೆ , ರೈಲೊಂದು ನನ್ನ
ಮೇಲೆ ಬಂದು ತನ್ನನ್ನು ಛಿದ್ರ ಛಿದ್ರ
ಮಾಡಬಾರದೇ ಎಂಬ ಯೋಚನೆಯಲ್ಲಿ,
ಅಳುತ್ತಳುತ್ತಲೇ ವಾಹನದ ಕಡೆ ದೃಷ್ಟಿ ನೆಟ್ಟು
ಕುಳಿತಳು. ತನ್ನ ಕಡೆಗೆ ಬೆಳಕು ಬಿದ್ದು
ಮಂಡಿಯೊಳಗೆ ಮುಖ ಹುದುಗಿಸಿದಳು.
`ಅಯ್ಯೋ.....! ಅಪ್ಪಾ...... ಲಸಿತಾ...! ಲಸಿತಾನೇ ಅಪ್ಪಾ
ಅಲ್ಲಿರೋದು!’ ಅಣ್ಣನ ಧ್ವನಿ!
*
ರಾಹುಲ್ ಮೆಲ್ಲಗೆ ಲಸಿತಳ ಬಳಿ ಬಂದು ಅವಳ ತಲೆ
ನೇವರಿಸಿದ. ಲಸಿತ ಏನು ಎನ್ನವಂತೆ ಸುಮ್ಮನೆ
ನೋಡಿದಳು. ರಾಹುಲ ಪುಟ್ಟ
ಮಗುವನ್ನೆತ್ತಿಕೊಂಡು ಬಂದಿದ್ದ. `ನೋಡಿಲ್ಲಿ, ಈ
ಪಾಪುನಾ?’
ಎದ್ದು ಕುಳಿತ ಲಸಿತ ಮಗುವನ್ನೆತ್ತಿಕೊಂಡಳು.
ರಾಹುಲ್ ಅವಳ ಪಕ್ಕದಲ್ಲಿ ಕುಳಿತ. ‘

`ಈ ಮಗು ಯಾರದೆಂದು ಗೊತ್ತಾಯಿತಾ?’’
ಲಸಿತ ಏನೂ ಮಾತಾಡದೆ ಪ್ರಶ್ನಾರ್ಥಕವಾಗಿ
ಅವನನ್ನು ನೋಡಿದಳು. ರಾಹುಲ್ ಶಾಂತವಾದ
ದನಿಯಿಂದ,
`ನಮ್ಮದು.’
ಮಗುವನ್ನು ಮುದ್ದಿಸಿದ.
`ನಿಮ್ಮ ಮನೆಗೆ ಹೋಗಿದ್ದೆ. ಎಲ್ಲ ಗೊತ್ತಾಯಿತು.
ಅನಾಥಾಶ್ರಮಕ್ಕೂ ಹೋಗಿಬಂದೆ. ಯಾರೋ ಒಡ್ಡಿದ
ಮೋಸದ ಬಲೆಗೆ ಬಿದ್ದಿದ್ದಕ್ಕೆ ಕೊರಗಬೇಕೇಕೆ?
ಲಸಿತ, ಇನ್ನು ಯಾವತ್ತೂ ನಿನ್ನ ಮುಖ ಚಿಂತೆಯಿಂದ
ಬಾಡಬಾರದು. ನಾನಿದ್ದೇನೆ. ಎಲ್ಲದಕ್ಕೂ ನಾನಿದ್ದೇನೆ
ಲಸಿತ. ಹೆದರಬೇಡ.’’’’
ಲಸಿತ ರಾಹುಲನನ್ನು ತಬ್ಬಿಕೊಂಡು
ಮಗುವಿನಂತೆ ಅತ್ತಳು. ಅದು ಕೃತಜ್ಞತೆಗೋ,
ತನ್ನ ಮಗುವಿಗೆ ಆಸರೆ ದೊರಕಿದ್ದಕ್ಕೋ,
ವಡ್ಡು ಕಟ್ಟಿಕೊಂಡಿದ್ದ ಗುಟ್ಟಿನ ಗೂಡು
ಮುರಿದು ಬಿದ್ದದ್ದಕ್ಕೋ, ಸುರಕ್ಷತೆಯ ಭಾವ
ಅವನ ಆಲಿಂಗನದಲ್ಲಿ
ಸ್ಥಿರವಾದದ್ದಕ್ಕೋ..ಯಾತಕ್ಕೋ, ಅವಳ ಅಳು

ನಿಲ್ಲಲಿಲ್ಲ. ರಾಹುಲ್ ಅವಳನ್ನು ಸಮಾಧಾನಿಸಲಿಲ್ಲ,
`ಅತ್ತುಬಿಡಲಿ.....ಅತ್ತು ಹಗುರಾಗಲಿ.’’ ಅವನ ಮನ
ಅವಳಿಗಾಗಿ ಮಮಕಾರದಿಂದ ತುಂಬಿಹೋಗಿತ್ತು.
ಕರುಣೆಯ ಮೂರ್ತಿಯಾಗಿ, ತನ್ನ ಪಾಲಿನ
ದೈವವಾಗಿ ಅವಳಿಗೆ ರಾಹುಲ್
ತೋರತೊಡಗಿದ್ದನು.
(`ಕನ್ನಡಿ’ ಬ್ಲಾಗ್‍ನ ಕಥಾಮಂಥನ ಸ್ಪರ್ಧೆಯಲ್ಲಿ
ಬಹುಮಾನ ಪಡೆದ ಕತೆ)’