Click here to Download MyLang App

ದೊಡ್ಡಪ್ಪ - ಬರೆದವರು : ನಗುವಾ ನಯನಾ | ಸಾಮಾಜಿಕ

"ಮಗಾ... ನಿನ್ನಪ್ಪ ಈ ಮನೆಗೆ ಅಂತ ಎಷ್ಟು ದುಡಿದರು; ಹಗಲೂ-ರಾತ್ರಿ, ಬಿಸಿಲು-ಮಳೆ ಅಂತ ನೋಡದೇ ದುಡಿದರು.. ಆದರೆ ಈಗ ? ಈಗ ನೋಡು ನಿನ್ನಪ್ಪನಿಗೆ ಸಿಕ್ಕ ಮರ್ಯಾದೆ... ಮನೆ ಮಂದಿಯ ಮನಸು ಸರಿ ಹೊಂದುತ್ತಿಲ್ಲ ಅನ್ನುವ ನೆಪ ಹೂಡಿ ನಿನ್ನ ದೊಡ್ಡಪ್ಪ ಆಸ್ತಿ ಪಾಲಾಗಲಿ ಅಂದರು. ಎಲ್ಲದರಲ್ಲೂ ಸಿಂಹ ಪಾಲು ದೊಡ್ಡಪ್ಪನಿಗೇ ಹೋಗಿದೆ ಮಗಾ.. ನಿನ್ನಪ್ಪನಿಗೆ ಸಿಕ್ಕಿದ್ದೆಲ್ಲಾ ಆಯ್ದು ಬಿಟ್ಟವೇ .. ನಾವು ನಂಬಿ ಮೋಸ ಹೋದೆವು ಮಗಾ ..!! "

ಅಮ್ಮನ ಮಾತು. ಅಮ್ಮ ಹೇಳಿದ್ದ ಕೊನೆಯ ಮಾತುಗಳವು.

ಅದಾದ ಮೇಲೆ, ಅಲ್ಲೇನಾಯಿತು? ಮುಂದೇನಾಯಿತು? ಅಂತ ಕೇಳಲು ಅಪ್ಪ-ಅಮ್ಮ ಉಳಿದಿರಲಿಲ್ಲ.

ಸುಧನ್ವ ಮತ್ತೊಮ್ಮೆ ತಲೆ ಕೊಡವಿಕೊಂಡ. ದುಃಖದೊಡನೆ ದ್ರೋಹವುಂಡ ಮನಸು ಕುದಿಯಾಯಿತು.

ಅಪ್ಪ, ಅಮ್ಮ - ದೊಡ್ಡಪ್ಪ, ದೊಡ್ಡಮ್ಮನಿಗೆ ಸುಧನ್ವನೊಬ್ಬನೇ ಮುದ್ದಿನ ಮಗ. ಅವರ ಕುಟಂಬದ ಏಕೈಕ ವಾರಸುದಾರ. ಯಾರೊಬ್ಬರ ಅಕ್ಕರೆಯಲ್ಲೂ ಲೋಪ ಕಂಡಿರದ ಸುಧನ್ವ, ಅಮ್ಮನಿಗಿಂತಲೂ ದೊಡ್ಡಮ್ಮನ ಮಡಿಲಲ್ಲೇ ಬೆಳೆದದ್ದು ಹೆಚ್ಚು. ಅಪ್ಪನಿಗಿಂತಲೂ ದೊಡ್ಡಪ್ಪನನ್ನ ಅವಲ೦ಬಿಸಿದ್ದೇ ಹೆಚ್ಚು. ಓದಿನಲ್ಲಿ ಸದಾ ಮುಂದಿದ್ದ ಸುಧನ್ವ ಮಹತ್ವಾಕಾಂಕ್ಷಿ. ವಿಜ್ಞಾನಿಯಾಗಿ ಸಂಶೋಧನೆ ಮಾಡುವ ಹಂಬಲ ಅವನಿಗೆ.. ಅಪ್ಪ-ಅಮ್ಮ ಒಪ್ಪದಿದ್ದಾಗ, ದೊಡ್ಡಪ್ಪನಿಗೆ ದುಂಬಾಲು ಬಿದ್ದಿದ್ದ, ದೂರದ ಊಟಿಯ ಗುಡ್ಡದ ತಪ್ಪಲಿನಲ್ಲಿರುವ ವಸತಿ ಶಾಲೆಯಲ್ಲಿ ತನ್ನನ್ನು ದಾಖಲು ಮಾಡುವಂತೆ. ಅವನ ಕನಸಿಗೆ ಸಾಕಾರವಾಗುವ ಎಲ್ಲ ಅವಕಾಶಗಳಿದ್ದವು ಅನ್ನುವುದನ್ನ ಕೇಳಿ ತಿಳಿದುಕೊಂಡಿದ್ದ.

ಅಲ್ಲಿಂದ ಮುಂದೆ ಸುಧನ್ವ ಮನೆಗೆ ಬಂದದ್ದೇ ವಿರಳ. ಸ್ಕೂಲು, ಕಾಲೇಜು, ಡಿಗ್ರಿ, ಡಬಲ್ ಡಿಗ್ರಿ ಅದೇನೇನು ಪದವಿ ಪಡೆದುಕೊಂಡನೋ. ಮನೆಯನ್ನೇ ಮರೆವಷ್ಟು ತನ್ನ ಗುರಿಯೆಡೆಗೆ ಮುಳುಗಿಹೋಗಿದ್ದ. ಆದರೆ, ಸಿಕ್ಕ ಅಲ್ಪ ಸಮಯದಲ್ಲಿ ಮನೆಗೆ ಬಂದಾಗಲೆಲ್ಲ ಮನೆಯ ವಾತಾವರಣ ಏನೋ ಬದಲಾದಂತೆ ಅನಿಸುತ್ತಿತ್ತವನಿಗೆ.

ಕಂಪನಿಯೊಂದರ ಕಾಂಟ್ರಾಕ್ಟ್ ಮೇಲೆ, ಸಂಶೋಧನೆಗೆ ಅಂತ ನಾಲ್ಕು ವರ್ಷ ವಿದೇಶಕ್ಕೆ ಹೋಗಿ, ಅದಾಗಲೇ ಮೂರುವರೆ ವರ್ಷ ಕಳೆದಿದ್ದ ಸುಧನ್ವನಿಗೆ ಅಪ್ಪ-ಅಮ್ಮನ ಸಾವಿನ ಸುದ್ದಿ ಸಿಕ್ಕಿತ್ತು. ಎಲ್ಲಾ ಫಾರ್ಮಾಲಿಟಿಸ್ ಮುಗಿಸಿ ಅಲ್ಲಿಂದ ಹೊರಡುವ ಹೊತ್ತಿಗೆ ವಾರಗಳೇ ಕಳೆದು ಹೋಗಿದ್ದವು. ಅಪ್ಪ-ಅಮ್ಮನ ಮುಖವನ್ನ ಕೊನೆಯ ಬಾರಿಯೂ ನೋಡಲಾಗದ ತನ್ನ ಸ್ಥಿತಿಯನ್ನ ನೆನೆದು ಸಂಕಟವೆನಿಸಿತ್ತವನಿಗೆ.

ಅಮ್ಮನ ಕೊನೆಯ ಮಾತುಗಳೇ ರಿಂಗಣಿಸಿದ್ದವು.

* * * * *

"ದೊಡ್ಡಪ್ಪ, ಈ ಮನೆಗೆ ಏನು ಮಾಡಿದ್ದಾರೆ ಮಗಾ ? ರಾಜಕೀಯ, ಸಮಾಜ-ಸೇವೆ, ಮಣ್ಣು-ಮಸಿ ಅಂತ ಊರುದ್ಧಾರ ಮಾಡುವ ನೆಪದಲ್ಲಿ ಅಪ್ಪನನ್ನ ಜೀತದಾಳಂತೆ ನಡೆಸಿಕೊಂಡಿದ್ದೇ ಬಂತು. ಅವರನ್ನ ನಂಬಿ ನಾವೂ ಹಾಯಾಗಿದ್ದೆವು. ಎಷ್ಟಂದರೂ ಒಡಹುಟ್ಟಿದವರಲ್ಲವೇ ?
... ಒಂದು ಲೆಕ್ಕ ಇಡಲಿಲ್ಲ; ಖರ್ಚಿನ ಬಾಬತ್ತು ಬರೆದಿಡಲಿಲ್ಲ; ಶೋಕಿಗೇನೂ ಕಡಿಮೆ ಇರಲಿಲ್ಲ; ಎಲ್ಲೆಲ್ಲಿ, ಎಷ್ಟು ದುಡ್ಡು ಕೂಡಿಟ್ಟರೋ? ನಿನ್ನ ದೊಡ್ಡಮ್ಮನಿಗೆ ಎಷ್ಟೆಷ್ಟು ಒಡವೆ-ವಸ್ತ್ರ ಮಾಡಿಸಿಕೊಟ್ಟರೋ ? ಹಿಸೆ ಮಾಡುವಾಗ, ಲೆಕ್ಕ ಕೇಳಿದರೆ ಒಂದಕ್ಕೂ ಮಾತಾಡಲೇ ಇಲ್ಲ ನೋಡು. ಕೋಪ ತಡೆಯಲಾಗದೇ ನಾನೂ ನಾಲ್ಕು ಮಾತಂದು ಬಿಟ್ಟೆ... ದೊಡ್ಡಪ್ಪ ದ್ರೋಹ ಮಾಡಿಬಿಟ್ಟ ಮಗಾ. ನಂಬಿ ಮೋಸ ಹೋದೆವು ನಾವು .. " ಕೊನೆಗಾಲದಲ್ಲಿ ಫೋನ್ ಮಾಡಿದಾಗಲೆಲ್ಲ ಅಮ್ಮನೊಬ್ಬಳೇ ಮಾತಾಡುತ್ತಿದ್ದುದು. ಅರ್ಧ ಅಳುವಲ್ಲೇ ಮುಗಿಯುತ್ತಿತ್ತು ಅವಳ ಮಾತು.

ದೊಡ್ಡಪ್ಪ-ದೊಡ್ಡಮ್ಮನ ನೆನೆದು ಮನಸು ಕಹಿಯಾಯಿತು.. ಅವರ ಇನ್ನೊಂದು ಮುಖ ನೆನೆದು ಮನಸು ಹುಳಿಯಾಯಿತು.

"ಸುಧಾ.... ಮನೆ ಬಂತು ಏಳು ಕಂದಾ" ಮಾವ ಕರೆದಾಗಲೇ ವಾಸ್ತವಕ್ಕೆ ಬಂದಿದ್ದ ಸುಧನ್ವ. ತನ್ನಮ್ಮನ ಅಣ್ಣ ಅವನಾದರೂ, ದೊಡ್ಡಪ್ಪನ ಬಾಲ್ಯ ಸ್ನೇಹಿತ. ನನ್ನ ಮಟ್ಟಿಗಿನ ನಂಬಿಗಸ್ಥ ಸಧ್ಯದ ಪರಿಸ್ಥಿತಿಯಲ್ಲಿ.

ಅಂಗಳಕ್ಕೆ ಕಾಲಿಡುವಾಗ ದುಃಖ ಒತ್ತರಿಸಿಕೊಂಡು ಬಂದಿತ್ತು.

ಮನೆಯೊಳಗೆಲ್ಲ ಓಡಾಡಿ ಬಂದೆ. ನೆರಳಿನಂತೆ ನೆನಪುಗಳು ಹಿಂಬಾಲಿಸಿದ್ದವು.

ಈಗಲೂ ಹಾಗೆಯೇ ಇದೆ ಮನೆ. ಇಬ್ಭಾಗವಾದ ಕುರುಹೇ ಇಲ್ಲ. ಮುರುಟಿದ ಮಾಲೆಯ ಹಿಂದೆ ಅಪ್ಪ-ಅಮ್ಮನ ಫೋಟೋ. ಉಳಿದರಿಬ್ಬರು ? ಇನ್ನೂ ಬದುಕಿದ್ದಾರೆ ಹಾಗಾದರೆ. ಎಲ್ಲಿದ್ದಾರೆ ?

"ಸುಧಾ.. ತಗೋ ಎಳನೀರು" ಮಾವನೊಡನೆ ಹೊರಾಂಗಣದ ಜಗುಲಿಯ ಮೇಲೆ ಕುಳಿತ ಸುಧನ್ವ. ಮಾವನ ಮಾತು ಮುಂದುವರೆದಿತ್ತು,

"ಸುಧಾ.. ನಿನ್ನ ಕಣ್ಣಲ್ಲೀಗ ದೊಡ್ಡಪ್ಪ-ದೊಡ್ಡಮ್ಮ ಕೆಟ್ಟವರಲ್ಲವಾ ? ಅಪ್ಪ-ಅಮ್ಮನಿಗೆ ದುರ್ಗತಿ ಬಂದದ್ದು, ಕೊರಗಿ ಸತ್ತದ್ದು ಎಲ್ಲದಕ್ಕೂ ಅವರೇ ಕಾರಣ ಅಲ್ಲವಾ ? ನಿಮ್ಮಗಳಿಗೆಲ್ಲ ಮೋಸ ಮಾಡಿ ದೂರದಲ್ಲೆಲ್ಲೋ ಐಷಾರಾಮವಾಗಿ ಬದುಕುತ್ತಿರಬಹುದಲ್ಲವಾ ? "

ಮಾವ ತನ್ನ ಮನಸ್ಸಿನಾಳಕ್ಕೆ ಕೈ ಹಾಕಿದ್ದರು ಅನಿಸಿತ್ತು ಸುಧನ್ವನಿಗೆ.

"ತಪ್ಪು ಸುಧನ್ವ. ಇನ್ನೂ ಬಾಯಿ ಕಟ್ಟಿಕೊಂಡು ಇದ್ದರೆ ಆ ಭಗವಂತ ನನ್ನನ್ನ ಮೆಚ್ಚಲಾರ. ದೇವರ ಸ್ವರೂಪ ಕಣೋ ನಿನ್ನ ದೊಡ್ಡಪ್ಪ-ದೊಡ್ಡಮ್ಮ. ಕೇಳಿಲ್ಲಿ, ಅವರಿಗೆ ಅವಳಿ ಹೆಣ್ಣು ಮಕ್ಕಳು. ಮೂರನೆಯವನೇ ನೀನು. ಅದೇ ದಿನ ನಿನ್ನಮ್ಮ ಅನಿಸಿಕೊಂಡವಳಿಗೂ ಹೆರಿಗೆಯಾಗಿತ್ತು. ಒಂದು ಹೆಣ್ಣು ಮಗು ಸತ್ತು-ಹುಟ್ಟಿತ್ತು. ನಿನ್ನಮ್ಮ - ನಿನ್ನಜ್ಜಿಯ ದೂ(ದು)ರಾಲೋಚನೆಯೊಂದಾಗಿ ಹುಟ್ಟಿದ ಮಕ್ಕಳಿಬ್ಬರನ್ನ ಬದಲಾಯಿಸಲಾಗಿತ್ತು. ನಾನು, ನಿನ್ನ ದೊಡ್ಡಪ್ಪ ಅದನ್ನ ನೋಡಿ ಬಿಟ್ಟಿದ್ದೆವು. ಗೊತ್ತಿದ್ದೂ ಸುಮ್ಮನಿದ್ದರು. ತಮ್ಮನ ಮಡಿಲು ಬರಿದಾಗದಿರಲಿ ಅನ್ನುವ ಮಹದಾಸೆಯಿಂದ. ಸುಮ್ಮನಿರುವಂತೆ ನನ್ನಿಂದಲೂ ಮಾತು ತೆಗೆದುಕೊಂಡರು. ಅವರ ದುರಾದೃಷ್ಟ, ಅವಳಿ ಹೆಣ್ಣು ಮಕ್ಕಳಿಬ್ಬರೂ ದೇವಸ್ಥಾನದ ಕೆರೆಯಲ್ಲಿ ಶವವಾಗಿದ್ದವು. ಮುಂದೆ ಎಲ್ಲ ಸರಿಯಿತ್ತು ನೀನು ಊಟಿಯನ್ನ ಸೇರುವವರೆಗು; ನಿನ್ನಪ್ಪ ಅನಿಸಿಕೊಂಡವ ದಾರಿ ತಪ್ಪುವವರೆಗೂ.. !!

... ತಮ್ಮನಿಗಾಗಿ, ಮನೆಗಾಗಿ, ನಿನಗಾಗಿ ಎಷ್ಟು ಅವಮಾನ ಸಹಿಸಿಬಿಟ್ಟರು ಗೊತ್ತಾ ? ಪೊಲೀಸು - ಕೋರ್ಟು ಅಂತ ಓಡಾಡಿದ್ದೂ ಆಗಿ ಹೋಗಿತ್ತು ನಿನ್ನಪ್ಪನಿಂದಾಗಿ. ತಮ್ಮನನ್ನ ನಂಬಿ, ಮನೆ ವ್ಯವಹಾರ ಕೊಟ್ಟರೆ ದುಡ್ಡು ಮನೆಯ ಅಕೌಂಟಿಗೆ ಜಮೆಯಾಗುತ್ತಲೇ ಇರಲಿಲ್ಲ. ಒಂದಕ್ಕೂ ಲೆಕ್ಕ ಕೊಡಲಿಲ್ಲ. ಅಣ್ಣನ ಮಾತನ್ನ ಕೇಳಲಿಲ್ಲ. 'ಒಡಹುಟ್ಟಿದವನನ್ನ ಸಂಶಯಿಸುತ್ತೀ; ನನಗೂ ಏನೋ ಖರ್ಚುಗಳಿರಿತ್ತವೆ.. ಎಲ್ಲದಕ್ಕೂ ನಿನ್ನ ಅಡಿಯಾಳಾಗಬೇಕೇ?' ಅಂತ ಎಗರಾಡಿ, ಆಕಾಶ-ಭೂಮಿ ಒಂದು ಮಾಡುತ್ತಿದ್ದ.

... ಸ್ವಾರ್ಥದ ಶೋಕಿಗೇನೂ ಕಡಿಮೆಯಿರಲಿಲ್ಲ. ಸಿನೆಮಾ - ಮೋಜು - ಮಸ್ತಿ - ಜೂಜು - ಕುಡಿತ, ಒಂದೆರಡಲ್ಲ ಸುಧಾ.

... ಯಾವಾಗ ಪರಿಸ್ಥಿತಿ ಹದಮೀರಿ ಮನೆಯ ಒಡವೆ, ದೇವರ ಬೆಳ್ಳಿ ಸಾಮಾನುಗಳು ಕಾಣೆಯಾಗತೊಡಗಿದವೋ, ದೊಡ್ಡಪ್ಪ ನಿನ್ನಪ್ಪನ ಕೈ ಕಟ್ಟಿಬಿಟ್ಟರು. ಆಗ ಸೊಲ್ಲೆತ್ತಿದ್ದು ನಿನ್ನಮ್ಮ. ಅಡಿಯಾಳಾಗಿ ಬಾಳುವುದಕ್ಕಿಂತ ಆಸ್ತಿ ಪಾಲಾಗಲಿ ಅಂತ. ಆಸ್ತಿ ವಿಷಯದಲ್ಲಿ ಭಾವ ಮೋಸ ಮಾಡಿಬಿಟ್ಟ ಅಂತ ಊರು ತುಂಬೆಲ್ಲ ಡಂಗುರ ಹೊಡೆದು ದೊಡ್ಡಪ್ಪನನ್ನ ಕುಗ್ಗಿಸಿಬಿಟ್ಟಿದ್ದಳು ನಿನ್ನಮ್ಮ.
... ನಿನಗೊಂದು ವಿಷಯ ಗೊತ್ತಾ ? ಪಿತ್ರಾರ್ಜಿತವಾಗಿ ಇಲ್ಲಿ ಇದ್ದದ್ದು ಕೇವಲ ಎರಡೇ ಎಕರೆ. ಉಳಿದ ಆರು ಎಕರೆ ತೋಟ, ಒಂದು ಎಕರೆ ತೆಂಗು, ನಿನ್ನ ದೊಡ್ಡಪ್ಪನ ಸ್ವಯಾರ್ಜಿತ...!! ಯೋಚನೆ ಮಾಡು, ಬರೀ ಒಂಭತ್ತನೇ ಕ್ಲಾಸಿಗೆ ಓದು ನಿಲ್ಲಿಸಿ, ತನ್ನಪ್ಪ ಕಾಲವಾದಾಗ ಮನೆ ಜವಾಬ್ದಾರಿ ಹೊತ್ತು; ಹತ್ತು ವರ್ಷಕ್ಕೂ ಚಿಕ್ಕವನಾದ ನಿನ್ನಪ್ಪನನ್ನ ಬಿ.ಎಸ್.ಸಿ ಓದಿಸೋದು ಅಂದರೆ ಸುಲಭವೇ ? ಅವರ ಶ್ರಮವಿಲ್ಲದೇ ಇಲ್ಲಿ ಇಷ್ಟೆಲ್ಲಾ ಸಿರಿ-ಸಂಪತ್ತು ತುಂಬುತ್ತಿತ್ತೇ? ನಿನ್ನಪ್ಪ ಓದು ಮುಗಿಸಿ ಮನೆಗೆ ಬರುವ ಹೊತ್ತಿಗೆ, ಬಿಸಿ-ಬಿಸಿ ಊಟ ತಯಾರಿತ್ತು ಅಷ್ಟೇ.. ಊಟಕ್ಕಾಗಿ ಶ್ರಮ ಪಡುವ ಅವಶ್ಯಕತೆಯೇ ಇರಲಿಲ್ಲ. ದೊಡ್ಡಪ್ಪನಿಗೆ ಗೊತ್ತಿತ್ತು. ಹೀಗೇ ಬಿಟ್ಟರೆ ಸುಧನ್ವನಿಗೆ ಏನೂ ದಕ್ಕದು ಅಂತಲೂ ಅರಿವಿತ್ತು. ಪಿತ್ರಾರ್ಜಿತದಲ್ಲಿ ಸಮಪಾಲು ಕೇಳಿದ್ದರು ಅವರು. ಸ್ವಯಾರ್ಜಿತದಲ್ಲಿ ಕುಡಿಗಾಳನ್ನೂ ಕೊಡಲಾರೆ ಅಂತಂದು ಕೆಟ್ಟವರಾಗಿ ಬಿಟ್ಟರು. ಮನೆಯನ್ನ ಒಡೆಯುವುದು ಅವರಿಗೆ ಇಷ್ಟವಿರಲಿಲ್ಲ, ಅದೂ ಅವರದೇ ಸ್ವಯಾರ್ಜಿತ. ಅದನ್ನ ನಿನ್ನ ಹೆಸರಿಗೆ ಬರೆದು ಎಲ್ಲರ ನಿಷ್ಠುರ ಕಟ್ಟಿಕೊಂಡರು. ಇಲ್ಲದಿದ್ದರೆ ಮಾಡಿಕೊಂಡ ಸಾಲಕ್ಕೆ ನಿನ್ನಪ್ಪ ಇದನ್ನೂ ಮಾರಿ ಬಿಡುತ್ತಿದ್ದ... ಮನೆ ಬಿಟ್ಟು ಹೋಗುವಾಗ ನಿನ್ನ ದೊಡ್ಡಮ್ಮನಿಗಿದ್ದದ್ದು ಒಂದು ಜೊತೆ ಓಲೆ, ಮೂಗುತಿ, ಕಾಲುಂಗುರ, ಮಾಂಗಲ್ಯವಷ್ಟೇ ... ಉಳಿದವುಗಳನ್ನು ನಿನ್ನಮ್ಮನಿಗೆ ಮಡಿಲು ತುಂಬಿ ನಡೆದಿದ್ದರು. ಎಲ್ಲಿಹೋದರೆಂಬ ಸುಳಿವಿಲ್ಲ ಕಾಶೀ ಯಾತ್ರೆ ಅಂತಂದಿದ್ದು ಮಾತ್ರ ನಿಜ... "

ಸುಧನ್ವನಿಗೆ ಮುಂದೆ ಕೇಳುವ ಮನಸಾಗಲಿಲ್ಲ.

ಮನೆ, ದೊಡ್ಡಪ್ಪನ ಜಮೀನು ಎಲ್ಲದಕ್ಕೂ ವಾರಸುದಾರ ಅವನೀಗ. ಮನೆಯ ಖರ್ಚನ್ನು ಮಿಕ್ಕಿ ಉಳಿದ ಹಣ ಎಲ್ಲಿ ಹೋಗುತಿತ್ತು ಅನ್ನುವುದಕ್ಕೆ ಸಾಕ್ಷಿಯಾಗಿ ತನ್ನ ಹೆಸರಲ್ಲಿದ್ದ ಫಿಕ್ಸೆಡ್ ಡೆಪಾಸಿಟ್ ಅಣಕಿಸುತ್ತಿತ್ತು.

ದೊಡ್ಡಪ್ಪ - ದೊಡ್ಡಮ್ಮ? ಅಲ್ಲಲ್ಲ, ತನ್ನಪ್ಪ-ಅಮ್ಮನನ್ನ ನಿಜಾರ್ಥದಲ್ಲಿ ಕಳೆದುಕೊಂಡು, ಎಲ್ಲಾ ಇದ್ದೂ - ಏನೂ ಇಲ್ಲದ ಪಕೀರನಾಗಿದ್ದ ಅವನೀಗ.

ದೊಡ್ಡಪ್ಪ ಅರ್ಥಾತ್ ತನ್ನಪ್ಪನ ಕೋಣೆಯನ್ನ ನೋಡುವ ಮನಸಾಗಿತ್ತು ಚಿಕ್ಕವನಿದ್ದಾಗ ಕುತೂಹಲಕ್ಕೆ ಇಣುಕುತ್ತಿದ್ದರೆ, ಇವತ್ತು ತನ್ನಲ್ಲಿ ಯಾವ ಭಾವವಿದೆ ಅನ್ನುವುದನ್ನ ಹೊಂದಿಸಲಾಗದೇ ತಡಕಾಡಿದ ..

ವಿಶಾಲವಾದ ಕೋಣೆಯಲ್ಲಿ, ಒಂದು ಮೂಲೆಗೆ ಮಂಚ, ಅದಕ್ಕೆ ತಾಕಿಕೊಂಡು ತಿಜೋರಿ; ಇನ್ನೊಂದು ಮೂಲೆಯಲ್ಲಿ ಟೇಬಲ್ಲು - ಕುರ್ಚಿ. ಅದರ ಎದಿರು ಗೋಡೆಗೆ ಬಾಗಿಲಿಲ್ಲದ ಮರದ ಷೆಲ್ಫ್ಗಳು. ಪ್ರತೀ ಶೆಲ್ಫಿನ ಪಟ್ಟಿಗೆ ಇಸವಿಯನ್ನ ಬರೆದಿಡಲಾಗಿತ್ತು.. ೧೯೭೩ ಮಾರ್ಚಿನಿಂದ, ಕಳೆದ ದೀಪಾವಳಿಯ ವರೆಗಿನ ಎಲ್ಲ ಕಡತಗಳಿದ್ದವಲ್ಲಿ.

ಸೋತು ಹೋದ ಸುಧನ್ವ; ಹೊರಗಡಿಯಿಡುತ್ತಿದ್ದವನ ಕಾಲಡಿಗೆ ಸಿಕ್ಕಿಕೊಂಡ ರಸೀತಿಯನ್ನ ಬಗ್ಗಿ ತೆಗೆದುಕೊಂಡ...

ಭಗವಂತಾ...!!

ಮನೆಗೆ ಬಂದ ಮೊದಲ ಲ್ಯಾಂಡ್ಲೈನ್ ಫೋನಿನ, ಮೊದಲ ರಸೀತಿ - ನಂಬಿ ಕೆಟ್ಟವರ್ಯಾರೆಂಬುದನ್ನ ಮತ್ತೆ ನೆನಪಿಸಿತ್ತು ಸುಧನ್ವನಿಗೆ ..!!