Click here to Download MyLang App

ದೇಹ ದೇಗುಲ - ಬರೆದವರು : ಅನಂತ ಕುಣಿಗಲ್

ಸುಗಂದ ಸೂಸುತ್ತಿದ್ದ ರೂಮಿನಿಂದ ಸುನೀತಾ ಒಂದು ಊಟದ ಬಾಕ್ಸನ್ನು ಕೈಯಲ್ಲಿಡಿದುಕೊಂಡು ಹೊರಗೆ ಬರುವಾಗ ಅವಳ ಕಣ್ಣುಗಳು ಒದ್ದೆಯಾಗಿದ್ದವು. ಈ ಮೊದಲು ಒಳಗೆ ಹೋಗುವಾಗ ಅವಳ ಮೈಮೇಲೆ ಕೆಲವು ಒಡವೆಗಳಿದ್ದವು. ಈಗ ಅವುಗಳೆಲ್ಲ ಆ ಬಾಕ್ಸಿನೊಳಗೆ ಬಂಧಿಯಾಗಿವೆ. ಯಾವ ನಿರೀಕ್ಷೆಯೂ ಇಲ್ಲದೆ ಅವಳ ದಾರಿ ಕಾಯುತ್ತಿದ್ದ ಸೋಮುವಿನ ಕೈಗೆ ಬಾಕ್ಸನ್ನು ಇಡುತ್ತಾ, "ನನ್ ಹತ್ರ ಇದ್ದಿದ್ದೆಲ್ಲ ಈ ಡಬ್ಬಿ ಒಳಗಡೆ ಹಾಕಿದಿನಿ. ನೀವು ಹೋಗಿ ನಾಳೆಗೆ ಅದೇನ್ ತಯಾರಿ ಮಾಡ್ಕೊಳ್ಳಿ. ಇನ್ನೊಂದು ವಾರದಲ್ಲಿ ನಮ್ ಏರಿಯಾ ಹುಡ್ಗೀರ್ ಜೊತೆ ಮಾತಾಡಿ ಮಿಕ್ಕಿದ್ದಕ್ಕೆಲ್ಲ ವ್ಯವಸ್ಥೆ ಮಾಡ್ತೀನಿ" ಎಂದು ಧೈರ್ಯ ತುಂಬಿ ಅವನ ಕಣ್ಣುಗಳನ್ನ ಭರವಸೆಯಿಂದ ನೋಡುತ್ತಾ ನಿಂತಳು. ಬಾಕ್ಸ್ ನ ಭಾರ ಹೊತ್ತ ಅವನ ಕೈಗಳು ಹಿಂದೆ ಸರಿಯುವಾಗ ಅವಳ ಕಣ್ಣ ಹನಿಯೊಂದು ಅವನ ಕೈ ಸೋಕಿತು. ಆ ಕ್ಷಣಕ್ಕೆ ಅವನಲ್ಲಿ ಇದುವರೆಗೂ ಆಗಿರದ ಕಂಪನವಾಯ್ತು. ಮಾತನಾಡಲು ಸಾವಿರ ಇದ್ದರೂ ಆತ ಮೌನಕ್ಕೆ ಶರಣಾಗಿದ್ದ. ಅವನ ಕಾಲುಗಳಿಗೂ ಅಲ್ಲಿಂದ ಹೆಜ್ಜೆ ಕೀಳಲು ಮನಸ್ಸಾಗಲಿಲ್ಲ. ಹಾಗೇ ಆ ಮೃದು ಮನಸ್ಸಿನ ಚೆಲುವೆಯನ್ನು ನೋಡುತ್ತಾ ದಿನ ಕಳೆದುಬಿಡಬೇಕೆಂಬ ಆಸೆಯಿಂದ ಮೂಕವಿಸ್ಮಿತನಾಗಿ ನಿಂತಿದ್ದ. ಆದರೆ ಆಕೆ, ಅವನು ಹೋಗುವುದನ್ನೇ ಕಾಯುತ್ತಿದ್ದಳು. ಹೀಗೆ ಸ್ವಲ್ಪ ಹೊತ್ತು ಇಬ್ಬರನ್ನು ಇಬ್ಬರು ನೋಡುತ್ತಾ ನಿಂತಿರಬೇಕಾದರೆ ಡೋರ್ ಬೆಲ್ ಸದ್ಧಾಯಿತು. ಆಕೆ ತಡಬಡಿಸಿದಳು. ಆತನೂ ಎಚ್ಚರಗೊಂಡ. ಅಲ್ಲಿಂದ ಬೇಗ ಹೋಗುವಂತೆ ಅವನನ್ನು ಪರಿಪರಿಯಾಗಿ ಬೇಡಿಕೊಂಡಳು. ಆಕೆಯನ್ನು ನೋಡುತ್ತಲೇ ಆತ ಬಾಗಿಲಿನ ಕಡೆಗೆ ಹೆಜ್ಜೆ ಹಾಕಿದ. ಬಾಗಿಲು ತೆಗೆದ ತಕ್ಷಣ ಎದುರಿಗೆ ಒಬ್ಬ ಫೋಲೀಸ್ ಇನ್ಸ್ ಪೆಕ್ಟರ್ ನಿಂತಿದ್ದ. ಪೋಲೀಸ್ ಕೈಯಲ್ಲೂ ಒಂದು ಡಬ್ಬಿ ಇತ್ತು. ಹೊರ ಜಗತ್ತಿನ ಯಾವ ಪರಿವೆ ಇಲ್ಲದೆ ಆಕೆಯನ್ನೇ ನೋಡುತ್ತಾ ಹೊರಹೋಗುತ್ತಿದ್ದ ಸೋಮುವಿನ ಕಣ್ಣುಗಳು ಬಾಗಿಲಿನ ಪಟ್ಟಿಯ ಮೇಲೆ ಬರೆದಿದ್ದ ಸಾಲುಗಳ ಕಡೆಗೆ ಹೊರಳಿದವು. 'ಇದು ದೇಹ ದೇಗುಲ, ನಾಚಿಕೆ ಬಿಟ್ಟು ಒಳಗೆ ಬನ್ನಿ'. ಆತ ಆ ಸಾಲನ್ನು ಪದೇ ಪದೇ ಓದುತ್ತ ಮರೆಯಾಗುತ್ತಿದ್ದ. ಪೋಲೀಸ್, ಸೋಮುನನ್ನೇ ಗುರಾಯಿಸಿಕೊಂಡು ನೋಡುತ್ತಾ ಆವೇಶದಿಂದ ಆತನ ಕೆಪಾಳಕ್ಕೆ ರಭಸದಿಂದ ಹೊಡೆಯುವಂತೆ ಬಾಗಿಲನ್ನು ರಪ್ ಎಂದು ಶಬ್ದ ಬರುವಹಾಗೆ ಮುಚ್ಚಿ, ಸುನಿತಾಳ ಸುಕ್ಕುಗಟ್ಟಿದ ಸೀರೆಯನ್ನೇ ಗಮನಿಸುತ್ತಾ ಹತ್ತಿರ ಬಂದ.

"ಯಾರದು ಹೊಸ ಗಿರಾಕಿ? ಏನೋ ಡಬ್ಬ ತಗೊಂಡ್ ಹೋದಂಗಿತ್ತು?" ಫೋಲೀಸ್ ಅನುಮಾನಾಸ್ಪದವಾಗಿ ಕೇಳಿದ.
"ಸೋಮು ಅಂತ. ತುಂಬಾ ಒಳ್ಳೆಯವನು. ನನ್ ಥರ ಹಳ್ಳಿ ಗಮಾರ. ನೀನಂದ್ಕೊಂಡಿರೋ ಕೆಲಸಕ್ಕೇನು ಬಂದಿರ್ಲಿಲ್ಲ. ಹೀಗೆ ಒಂದು ತಿಂಗಳ ಹಿಂದೆ ಪರಿಚಯ ಆದ. ಅವನಿಗೆ ನಾನ್ ಮಾಡೋ ತಂಗಳು ಉಪ್ಪಿಟ್ಟು ಅಂದ್ರೆ ತುಂಬಾ ಇಷ್ಟ. ಅದ್ಕೆ ಆಗಾಗ ಬರ್ತಾನೆ. ಪಾಪ ಅವನಿಗೇನ್ ಗೊತ್ತು ಅದು ನೀನ್ ತಂದ್ಕೊಡೋ ಉಪ್ಪಿಟ್ಟು ಅಂತ!" ಎಂದೇಳಿ ನಕ್ಕಳು. ಫೋಲೀಸ್ ಮತ್ತೆ ಮಾತು ಮುಂದುವರಿಸಲಿಲ್ಲ. ಅವನ ಕೈಯಲ್ಲಿದ್ದ ಬಾಕ್ಸನ್ನು ಅವಳಿಗೆ ಕೊಟ್ಟು, ರೂಮಿಗೆ ಹೋಗಿ ತನ್ನ ಯೂನಿಫಾರ್ಮ್ ಬಿಚ್ಚಿಟ್ಟು, ಒಳ ಉಡುಪುಗಳಲ್ಲಿ ಮುಂಚದ ಬಳಿಗೆ ಬಂದ. ಅವಳು ಬಾಕ್ಸಿನಲ್ಲಿದ್ದ ಉಪ್ಪಿಟ್ಟನ್ನು ಅರ್ಧ ತಿಂದು ಮುಗಿಸಿ, ಮಿಕ್ಕಿದ್ದನ್ನು ಡಬ್ಬಿಯಲ್ಲೇ ಉಳಿಸಿ ಅದಕ್ಕೆ ಮುಚ್ಚಳವನ್ನೂ ಮುಚ್ಚದೆ ಹಾಗೇ ಬಿಟ್ಟು, ಸೆರಗು ಸರಿಸಲು ರೆಡಿಯಾಗಿ ಮಂಚದ ಮೇಲೆ ಮಲಗಿದ್ದಳು. ಅವಳು ಮುಡಿದಿದ್ದ ಮಲ್ಲಿಗೆ ಘಮವನ್ನು ಹೀರುತ್ತಾ ಫೋಲೀಸ್ ಮಂಚವೇರಿದ. ಆಕೆ ಬಾಕ್ಸಿನಲ್ಲಿದ್ದ ಉಪ್ಪಿಟ್ಟನ್ನು ನೋಡುತ್ತಾ ಕಣ್ಮುಚ್ಚಿದಳು. ಒಬ್ಬಳಿಗೆ ನೋವಾದರೆ, ಅದೇ ನೋವು ಮತ್ತೊಬ್ಬನಿಗೆ ಸುಖ ನೀಡುತ್ತದೆ. ಇಂಥಾ ಅಚ್ಚರಿ ಸಂಗತಿಯ ಜೊತೆಗೆ ಸುನೀತ ದಿನವೂ ನಾಲ್ಕೈದು ಪ್ರಯಾಣಗಳನ್ನು ಮುಗಿಸುತ್ತಿದ್ದಳು. ನೋವನ್ನು ಅನುಭವಿಸಲಿಕ್ಕಾಗಿ ಅಲ್ಲ, ಬದಲಾಗಿ ತನ್ನ ಬದುಕಿಗೆ ಹಾತುಬಿದ್ದಿರುವ ಎಷ್ಟೊಂದು ನೋವುಗಳ ಕೊಂಡಿಯನ್ನು ಕಳಚಿಕೊಳ್ಳಲಿಕ್ಕಾಗಿ. ತನ್ನ ಮೇಲೆ ಪೋಲೀಸಪ್ಪನ ಸವಾರಿ ಶುರುವಾದಂತೆ ಪ್ರತಿಯಾಗಿ ಯಾವ ಪ್ರತಿಕ್ರಿಯೆಯನ್ನೂ ಕೊಡದೆ ಸುನೀತ ಸೋಮುವಿನ ಬಗ್ಗೆಯೇ ಚಿಂತಿಸುತ್ತಿದ್ದಳು.

* * *

ಸೋಮು ಹಳ್ಳಿಯಿಂದ ಚಲನಚಿತ್ರ ನಿರ್ದೇಶನದ ಕನಸು ಹೊತ್ತು ಬೆಂಗಳೂರಿಗೆ ಬಂದಿದ್ದ. ಆತನಲ್ಲಿ ಚಿತ್ರಕತೆಗಳಿಗೆ ಬೇಕಾದ ಕಚ್ಚಾ ಸಾಮಾಗ್ರಿಗಳು ಬಹಳಷ್ಟಿದ್ದವು. ಸರ್ಕಾರಿ ಕಾಲೇಜಿನಲ್ಲಿ ಕಷ್ಟಪಟ್ಟು ಡಿಗ್ರಿಯನ್ನು ಇಂಗ್ಲೀಷಿನಲ್ಲಿಯೇ ಓದಿ, ಒಳ್ಳೆಯ ಅಂಕಗಳನ್ನು ಪಡೆದುಕೊಂಡು ಇನ್ನೇನು ಸರ್ಕಾರಿ ಕೆಲಸಕ್ಕೆ ಸೇರಿ, ಕುಟುಂಬದ ಭಾರಗಳನ್ನೆಲ್ಲ ಇಳಿಸಿಬಿಡುತ್ತಾನೆ ಎಂಬ ಆತನ ತಾಯಿಯ ಮಹದಾಸೆಯನ್ನು ಸೋಮು ನುಚ್ಚುನೂರು ಮಾಡಿದ್ದ. ತಂದೆ ಇಲ್ಲದ ಹುಡುಗ ಅಂತ ಮುದ್ದಾಗಿ ಸಾಕಿದ್ದಕ್ಕೆ ಆ ತಾಯಿಯೂ ವಿಪರೀತ ನೊಂದುಕೊಂಡಿದ್ದಳು. ದಿನವೂ ಕಾಡಿಗೆ ಹೋಗಿ ಗೌಡರ ಮನೆಯ ಆರು ಎಮ್ಮೆಗಳು, ನಾಲ್ಕು ಮೇಕೆಗಳೂ ಸೇರಿದಂತೆ ಮೂರು ಕುರಿಗಳನ್ನು ಮೇಯಿಸುವ ಕೂಲಿ ಕೆಲಸ ಅವಳದ್ದಾಗಿತ್ತು. ತಿಂಗಳು ಪೂರ್ತಿ ಮೇಯಿಸಿದರೂ ಆಕೆಗೆ ಸಿಗುತ್ತಿದ್ದದ್ದು ದಿನವೂ ಒಂದೊತ್ತಿನ ಊಟ ಹಾಗೂ ತಿಂಗಳಿಗೆ ಮೂರುಸಾವಿರ ರೂಪಾಯಿ ಕೂಲಿ. ಅಷ್ಟರಲ್ಲೇ ಇನ್ನೇನು ಮುರಿದು ಬೀಳುವ ಹಳೇ ಗುಡಿಸಲೊಂದರಲ್ಲಿ ಸೋಮುನ ಯಾವುದಕ್ಕೂ ಕಡಿಮೆ ಮಾಡದೆ ಸಾಕಿ ಸಲುಹಿದಳು. ಆದರೆ ಸೋಮು ಪಿಯುಸಿ ಓದಲು ಹಾಸ್ಟೆಲ್ ಸೇರಿದ್ದರ ಪರಿಣಾಮವಾಗಿ ಆತನಿಗೆ ಸಿನೆಮಾ ಹುಚ್ಚು ಹತ್ತಿತು. ಮೊದಲೇ ಕನ್ನಡ ಓದಿಕೊಂಡು ಬಂದ ಹುಡುಗ. ಏಕಾಏಕಿ ಪಿಯುಸಿಯನ್ನು ಇಂಗ್ಲೀಷಿನಲ್ಲಿ ಓದಲು ಆತನಿಗೂ ಕಷ್ಟವಾಯಿತು. ಹಾಸ್ಟೆಲ್ಲಿನಲ್ಲಿದ್ದ ಇತರ ಹುಡುಗರು ಪ್ರತಿದಿನ ರಾತ್ರಿ ಗುಂಪು ಕಟ್ಟಿಕೊಂಡು ಹೊಸದಾಗಿ ಬಿಡುಗಡೆಯಾದ ಚಲನಚಿತ್ರಗಳು, ಹೀರೋಯಿನ್ ಗಾಸಿಪ್ ಗಳು ಮತ್ತು ಲೀಕ್ ಆಗಿರುವ ಸಿ.ಡಿ ಕಥೆಗಳ ಬಗ್ಗೆ ಮಧ್ಯರಾತ್ರಿಯವರೆಗೂ ಹರಟಿಸುತ್ತಿದ್ದರು. ಹಾಸ್ಟೆಲ್ಲಿನಲ್ಲಿ ಸಿಗುತ್ತಿದ್ದ ಆ ಒಂದೇ ಒಂದು ಮನರಂಜನೆಯನ್ನು ಮಿಸ್ ಮಾಡಿಕೊಳ್ಳಲು ಸೋಮುವಿಗೆ ಇಷ್ಟವಿರಲಿಲ್ಲ. ಹಾಗಾಗಿ ಆತನೂ ಗೆಳೆಯರ ಹಸಿಬಿಸಿ ಹರಟೆಯಲ್ಲಿ ಪಾಲುದಾರನಾಗಿಬಿಟ್ಟ.

ಹರಟೆ ಮಾಡುತ್ತಾ ಮಾಡುತ್ತಾ ತಾನೇ ತನ್ನ ಕನಸಿನ ಸಿನೆಮಾದ ಹೀರೋ ಆಗಿಬಿಟ್ಟ. ಹೀರೋ ಆಗುವುದರಲ್ಲೇನು ಮಜಾ? ಅಂಥಹ ನೂರಾರು ಹೀರೋಗಳನ್ನು ಸೃಷ್ಟಿಸುವ ನಿರ್ದೇಶಕನಾದರೆ ಚೆಂದ ಎಂದು ನಿರ್ಧರಿಸಿದ. ಕ್ಲಾಸ್ ರೂಮಿನಲ್ಲಿ, ಆಟದ ಮೈದಾನದಲ್ಲಿ ಕೂತು, ತಲೆಗೆ ತೋಚಿದ ಸಾಲುಗಳನ್ನೆಲ್ಲಾ ಬರೆದು, ಗೆಳೆಯರ ಮುಂದೆ ಡೈಲಾಗ್ ಹೇಳಿ ಶಹಬ್ಬಾಷ್ ಗಿರಿಯನ್ನೂ ಪಡೆಯುತ್ತಿದ್ದ. ಆತನ ಕನಸುಗಳಿಗೆ ರೆಕ್ಕೆ ಬರಲು ಶುರುವಾಯಿತು. ಆತನ ಶೈಕ್ಷಣಿಕ ಓದು ಕ್ರಮೇಣ ಇಳಿಮುಖ ಮಾಡಿತು. ಆದರೂ ಎಲ್ಲೂ ಫೇಲ್ ಆಗದೆ ಬೃಹದಾಕಾರದ ಕನಸಿನೊಂದಿಗೆ ಡಿಗ್ರಿಯಲ್ಲಿ ಪ್ರಥಮ ದರ್ಜೆಯಲ್ಲೇ ತೇರ್ಗಡೆಹೊಂದಿದ. ಊರಿನವರೆಲ್ಲ ಬೇರೆ ಬೇರೆ ಕೆಲಸಗಳನ್ನು ಸೂಚಿದರು. ಯಾವುದಕ್ಕೂ ಕಿವಿಗೊಡದೆ, ತಾನು ಸಿನೆಮಾ ಮಾಡೋಕೆ ಬೆಂಗಳೂರಿಗೆ ಹೋಗ್ತೀನಿ ಅಂತ ತನ್ನವ್ವನ ಮುಂದೆ ಧೈರ್ಯವಾಗಿ ಹೇಳಿಬಿಟ್ಟ. ಆ ತಾಯಿಗೆ ಎದೆಯೇ ಒಡೆದಂತಾಗಿ, ತನ್ನ ಬಾಳು ನಾಯಿ ತಿನ್ನುವ ಹೆಣವಾಗಬಾರದು ಅಂತ ಪರಿಪರಿಯಾಗಿ ಬೇಡಿಕೊಂಡು ಸೋಮುವಿನ ನಿರ್ಧಾರನ್ನು ನಿರಾಕರಿಸಿ ಬೆಂಗಳೂರಿಗೆ ಹೋಗಬೇಡ ಅಂತ ಅಡ್ಡಗಟ್ಟಿ ನಿಂತಳು. ಸೋಮುವಿಗೆ ತನ್ನ ತಾಯಿಯ ಅಳಲು ಆ ಕ್ಷಣಕ್ಕೆ ತಾಕಲಿಲ್ಲ. ರಾತ್ರೋರಾತ್ರಿ ಮನೆಬಿಟ್ಟು, ತಾನು ಕೂಡಿಟ್ಟಿದ್ದ ಸ್ಕಾಲರ್ ಶಿಪ್ ಹಣದಲ್ಲಿ ಬೆಂಗಳೂರಿನ ಕಡೆಗೆ ಬಂದುಬಿಟ್ಟ.

ಬೆಂಗಳೂರಿನ ರೆಸ್ಟೋರೆಂಟ್ ಒಂದರಲ್ಲಿ ರಾತ್ರಿ ಹೊತ್ತು ಕೆಲಸ ಮಾಡಿಕೊಂಡು, ಬೆಳಗಿನ ಜಾವ ದೊಡ್ಡ ದೊಡ್ಡ ನಿರ್ದೇಶಕರ ಮನೆಬಾಗಿಲಿಗೆ ಅಲೆದಲೆದು ಚಪ್ಪಲಿ ಸವೆಸಿ ಸುಸ್ತಾಗಿ ಕೊನೆಗೂ ಒಬ್ಬ ಹೊಸ ನಿರ್ದೇಶಕನ ಬಳಿ ಕೆಲಸಕ್ಕೆ ಸೇರಿದ. ದಿನಕ್ಕೆ ನೂರು ರೂಪಾಯಿ ಬಿಟ್ಟರೆ ಬೇರೆ ಯಾವ ಸೌಲಭ್ಯಗಳೂ ಸೋಮುವಿಗೆ ಸಿಗಲಿಲ್ಲ. ಸಿಕ್ಕ ನೂರು ರೂಪಾಯಿಗಳಲ್ಲಿ ಐವತ್ತು ರೂಪಾಯಿಗಳನ್ನು ಊಟ-ತಿಂಡಿಗೆ ಬಳಸಿಕೊಂಡು ಮಿಕ್ಕ ಐವತ್ತು ರೂಪಾಯಿಗಳನ್ನು ಕೂಡಿ ಇಡುತ್ತಿದ್ದ. ತನಗೆ ಪರಿಚಯವಿರುವ ಯಾರಾದರೂ ತನ್ನೂರಿಗೆ ಹೋಗುವುದು ಗೊತ್ತಾದರೆ, ಅಂಥವರ ಕೈಯಲ್ಲಿ ತನ್ನ ತಾಯಿಗೆ ಹಣ ಕಳಿಸುತ್ತಿದ್ಧ. ಆರು ತಿಂಗಳು ಒಂದು ಚಿತ್ರದಲ್ಲಿ ಕೆಲಸ ಮಾಡಿ ಅದೇ ಚಿತ್ರದ ನಿರ್ಮಾಪಕನ ಪ್ರಶಂಶೆಗೆ ಪಾತ್ರನಾದ. ಒಳ್ಳೆ ಕಥೆ ಮಾಡಿ ನಿರ್ಮಾಪಕರನ್ನು ಓಲೈಸಿಕೊಳ್ಳಲು ಆತ ಮಾಡಿದ ಪ್ರಯತ್ನಗಳೆಲ್ಲವೂ ಮಣ್ಣುಪಾಲಾದವು. ನಿರ್ಮಾಪಕರಿಗೆ ಬೇಕಾದ ಹಸಿಬಿಸಿ ಪಂಚ್ ಡೈಲಾಗ್ ಗಳು, ರೇಪ್ ಸೀನುಗಳು, ಡಬಲ್ ಮೀನಿಂಗ್ ಕಾಮೆಡಿಗಳು, ಚೇಸಿಂಗ್ ಸೀಕ್ವೆನ್ಸ್ ಗಳು ಸೋಮುವಿನ ಬಳಿ ಇರಲಿಲ್ಲ. ಬದಲಾಗಿ ಹಳ್ಳಿ ವಾತಾವರಣದ, ಸ್ಕೂಲ್ ಲವ್ ಸ್ಟೋರಿಗಳು ಮತ್ತು ಕಳ್ಳತನದ ಕಚ್ಚಾ ಕಥೆಗಳಿದ್ದವು. ನಿರ್ಮಾಪಕರು ತನ್ನ ಕಥೆಯನ್ನು ಒಪ್ಪದ ಕಾರಣ ಮತ್ತೊಂದು ಚಿತ್ರಕ್ಕೆ ನಿರ್ದೇಶನ ತಂಡದಲ್ಲಿ ಕೆಲಸ ಮಾಡಲು ಸೇರಿದ. ಒಂದೇ ವರ್ಷದಲ್ಲಿ ಮೂರು ಚಿತ್ರಗಳಲ್ಲಿ ಕೆಲಸ ಮಾಡಿ ಮತ್ತೆ ನಿರ್ಮಾಪಕರಿಗೆ ಕಥೆ ಹೇಳಲು ಅಲೆದನು. ಎರಡು ತಿಂಗಳಲ್ಲಿ ಏಳೆಂಟು ಜನ ನಿರ್ಮಾಪಕರಿಗೆ ಕಥೆ ಹೇಳಿದರೂ ಯಾರೂ ಕೂಡ ಸೋಮುವಿನ ಕಥೆಗಳನ್ನು ಪೂರ್ತಿಯಾಗಿ ಕೇಳಲು ಮನಸ್ಸು ಮಾಡಲಿಲ್ಲ. ಇದರಿಂದ ಬೇಸತ್ತ ಸೋಮು ಹಸಿಬಿಸಿ ಕಥೆಗಳನ್ನು ಹೆಣೆಯಲು ಹುಡುಕಾಡಿದ. ಹಸಿಬಿಸಿ ಕಥೆಗಳು ಸಿಗುವ ಮೂಲಗಳನ್ನು ಪತ್ತೆಹಚ್ಚಿದ. ರೌಡಿಸಂ ನಡೆಯುವ ಸ್ಲಂಗಳು, ವೇಶ್ಯಾವಾಟಿಕೆ ನಡೆಯುವ ಏರಿಯಾಗಳು, ರಾಜಕೀಯ ಸಭೆಗಳು ಸೇರಿದಂತೆ ಎಲ್ಲಾ ಕಡೆ ಸುತ್ತಾಡಿದ. ಅದರ ಫಲವಾಗಿ ಸುನೀತ ಸಿಕ್ಕಳು.

ಒಂದು ದಿನ ರಾತ್ರಿ ಬೆಂಗಳೂರಿನ ಮೆಜೆಸ್ಟಿಕ್ ಅಂಡರ್ ಪಾಸ್ ಒಳಗೆ ಸೂಳೆಯರಿಗಾಗಿ ಎದುರುನೋಡುತ್ತಾ ಸೋಮು ಸ್ವತಃ ತಾನೇ ಒಬ್ಬ ಗಂಡುಸೂಳೆಯಂತೆ ವಯ್ಯಾರದಿಂದ ನಿಂತಿದ್ದ. ಹೋಗಿಬರುವ ತೃತೀಯಲಿಂಗಿಗಳು ಈತನ ಮೈಕೈ ಚಿವುಟಿ ಹೋಗುತ್ತಿದ್ದರು. ಸುಮಾರು ಹೊತ್ತು ಕಳೆದ ಮೇಲೆ ಅಲ್ಲಿದ್ದವರೆಲ್ಲ ಜಾಗ ಖಾಲಿ ಮಾಡಲು ಶುರುಮಾಡಿದರು. ಅದೇ ಸಮಯಕ್ಕೆ ಒಬ್ಬಳು ಆಂಟಿ ತನ್ನ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದಳು. ಸೋಮು ಅವಳ ಹಿಂದೆಯೇ ಓಡುತ್ತಾ "ಬರ್ತೀರಾ..?" ಎಂದು ಕೇಳಿಬಿಟ್ಟ. ಆಕೆ ಈತನ ಕಡೆ ತಿರುಗಿ ನಗುತ್ತಾ "ನಾನ್ ಬರಲ್ಲ. ನೀನೇ ಬರ್ಬೇಕು. ಇವತ್ತು ಟೈಂ ಆಗಿದೆ. ನಾಳೆ ಬಾ.." ಎಂದಳು. "ಇಲ್ಲ ಇವತ್ತೇ ಬೇಕು. ಎಷ್ಟಾದ್ರೂ ಪರವಾಗಿಲ್ಲ. ನೀವ್ ಕರೆದಿದ್ದ ಜಾಗಕ್ಕೆ ಬರ್ತೀನಿ" ಎಂದ. ಆಕೆ ಸೋಮುನ ದುರುಗುಟ್ಟಿ ನೋಡುತ್ತಾ ಒಳ್ಳೆಯ ಹುಡುಗ ಎನಿಸಿದ ಮೇಲೆ "ಸರಿ ಬಾ.." ಎಂದು ಒಪ್ಪಿಕೊಂಡು, ಒಂದು ಆಟೋ ಹಿಡಿದು ಪೀಣ್ಯಾ ಎರಡನೇ ಹಂತಲ್ಲಿರುವ ಆಕೆಯ ರೂಮಿಗೆ ಕರೆದುಕೊಂಡುಹೋದಳು.

ಆಕೆಯ ರೂಮಿನಲ್ಲಿ ಇನ್ನಿಬ್ಬರು ಹುಡುಗಿಯರಿದ್ದರು. ಅವರಲ್ಲಿ ಸುನೀತ ಒಬ್ಬಳಾಗಿದ್ದಳು. ಅವಳನ್ನು ನೋಡಿದ ತಕ್ಷಣ ಸೋಮು ಬೆರಗಾದ. ತಾನು ಇಷ್ಟು ದಿನ ಹುಡುಕುತ್ತಿದ್ದ ಕಥೆಗಳು ಆಕೆಯ ಮುಖದಲ್ಲಿ ಎದ್ದು ಕಾಣುತ್ತಿದ್ದವು. ಅವಳ ಕಥೆ ಕೇಳಲು ಸೋಮುವಿಗೆ ಆಸೆಯಾಯಿತು. ಆಕೆಯನ್ನೇ ನೋಡುತ್ತಾ ನಿಂತಿದ್ದ. ಆಂಟಿ, ಸೋಮುನ ಮಂಚವಿರುವ ರೂಮಿಗೆ ಕರೆದಳು. ಸೋಮು ರೂಮೊಳಗೆ ಬಂದು ಕೂತುಕೊಂಡ. ಅದನ್ನು ನೋಡಿ ಆಂಟಿ, "ಅಪ್ಪಿ, ಕೂತ್ಕೋಳೋಕ್ ಇಲ್ಲಿವರ್ಗೂ ಬಂದಾ? ಪೋಲೀಸ್ನೋರ್ ಕಾಟ ಬೇರೆ. ಬೇಗ ಕೆಲ್ಸ ಮುಗ್ಸ್ಕೊಂಡ್ ಹೋಗು" ಅಂತ ಹೇಳಿದಳು. "ನನಗೆ ಹೊರಗಿದ್ದಾಳಲ್ಲ ಬೆಳ್ಳುಗೆ, ಕುಳ್ಳಗೆ, ಕನ್ನಡಕದ ಹುಡುಗಿ ಅವಳು ಬೇಕು" ಅಂದ. ಆಂಟಿಗೆ ಕೋಪ ಬಂದು, "ಕೆಲಸಕ್ಕೆ ಬಾರದವು. ನೋಡಿದ್ದೆಲ್ಲ ಬೇಕು ಬೇಕು ಅಂತವೆ. ಪಾಪ ಒಳ್ಳೆ ಹುಡ್ಗ ಅಂತ ಅಲ್ಲಿಂದ ಕರ್ಕೊಂಡ್ ಬಂದ್ರೆ ನಕರ ಮಾಡ್ತಿಯಾ? ಮೊದ್ಲು ಹೋಗು ಇಲ್ಲಿಂದ" ಅಂತ ಸೋಮುನ ರೂಮಿನಿಂದ ಹೊರಗೆ ತಳ್ಳಿ, ಬಾಗಿಲು ಹಾಕಿಕೊಂಡಳು.

ನಾಳೆ ರಾತ್ರಿ ಅದೇ ಸಮಯಕ್ಕೆ ಸೋಮು ರೂಮಿನ ಬಳಿ ಬಂದು ಬಾಗಿಲು ತಟ್ಟಿದ. ಸುನೀತಾ ಬಾಗಿಲು ತೆಗೆದಳು. ಅವತ್ತು ಆಂಟಿ ಇರಲಿಲ್ಲ. ಸೋಮು ಒಳಗೆ ಬಂದ. ಸುನೀತ ಮುಂಚವಿದ್ದ ರೂಮಿನ ಕಡೆಗೆ ಹೋದಳು. ಸೋಮು ಕೂಡ ಅದೇ ರೂಮಿಗೆ ಹೋಗಿ ಸುನೀತಾಳನ್ನ ನೋಡುತ್ತಾ ಕೂತ. "ನೆನ್ನೆ ನಡೆದಿದ್ದೆಲ್ಲ ಆಂಟಿ ಹೇಳುದ್ರು. ನಾನ್ ಬೇಕು ಅಂದ್ರೆ ದುಡ್ಡು ಜಾಸ್ತಿ ಆಯ್ತದೆ ಪರವಾಗಿಲ್ವಾ?" ಅಂತ ಸುನೀತ ನಾಚಿಕೆ ಬಿಟ್ಟು ಕೇಳಿದಳು. "ದುಡ್ಡು ಎಷ್ಟಾದ್ರೂ ಪರವಾಗಿಲ್ಲ. ನನಗೆ ನೀನ್ ಬೇಡ. ನಿನ್ ಕಥೆ ಬೇಕು" ಅಂದ. ಆಕೆಗೆ ಏನು ಮಾತನಾಡಬೇಕೆಂದು ಗೊತ್ತಾಗದೆ ಯಾವುದೋ ಪತ್ರಕರ್ತನ ಕೈಗೋ, ಮಫ್ತಿಯಲ್ಲಿರುವ ಪೋಲೀಸಿಗೋ ಸಿಕ್ಕಿಹಾಕಿಕೊಂಡಂತೆ ಭಯದಿಂದ ಈತನನ್ನೇ ನೋಡುತ್ತಿದ್ದಳು. ಇಬ್ಬರ ಕಣ್ಣುಗಳು ಸುಮಾರು ಹೊತ್ತು ಸಂಧಿಸಿ ಸಾವಿರ ಕಥೆಗಳನ್ನು ಹೇಳುವ ಮಹಾಪಯಣವೊಂದಕ್ಕೆ ನಾಂದಿಯಾದವು. ಸೋಮು ತನ್ನ ಬಗ್ಗೆ ಎಲ್ಲಾ ಹೇಳಿ ಸುನೀತಾಳ ನಂಬಿಕೆ ಗಿಟ್ಟಿಸಿಕೊಂಡ. ದಿನವೂ ಸುನೀತಾಳನ್ನು ತನ್ನ ಕತೆ ಹೇಳುವಂತೆ ಸೋಮು ಪೀಡಿಸುತ್ತಿದ್ದ. ಆದರೆ ಸುನೀತ ಕಥೆ ಹೇಳದೆ ಸತಾಯಿಸುತ್ತಾ ದಿನ ಮುಂದೂಡುತ್ತಿದ್ದಳು. ಅವರಿಬ್ಬರ ಪರಿಶುದ್ಧ ಗೆಳೆತನಕ್ಕೆ ಆ ನಾಲ್ಕು ಗೋಡೆಗಳು ಸಾಕ್ಷಿಯಾದವು.

ಸೋಮು ದಿನವೂ ರೂಮಿಗೆ ಬರುವುದು ಆಂಟಿಗೂ ಗೂತ್ತಾಗಿತ್ತು. "ನನ್ ಕಥೆ ಹೇಳ್ತೀನಿ ಬಾರೋ.. ಸಿನೆಮಾ ಮಾಡು" ಅಂತ ರೇಗಿಸುತ್ತಿದ್ದಳು. ಸೋಮು ಪ್ರತಿಯಾಗಿ, "ಆಂಟಿ ನಿನ್ ಕಥೆ ಮಾಡೋಕೆ ಬಿಗ್ ಬಜೆಟ್ ಬೇಕು. ಅಂತ ಪ್ರೊಡ್ಯೂಸರ್ ಸಿಕ್ದಾಗ ಕಥೆ ಕೇಳ್ತೀನಿ" ಅಂತ ಆಂಟಿಯನ್ನು ಅಟ್ಟಕ್ಕೇರಿಸುತ್ತಿದ್ದ. ಒಂದು ದಿನ ಸೋಮು ಕುಡಿದು ಸುನೀತಾಳ ರೂಮಿಗೆ ಬಂದ. ಏನಾದರೂ ಸರಿಯೇ ಕಥೆ ಹೇಳುವ ತನಕ ರೂಮು ಬಿಟ್ಟು ಕದಲುವುದಿಲ್ಲ ಅಂತ ಪಟ್ಟು ಹಿಡಿದು ಕೂತ. ದಾರಿ ಕಾಣದೆ ಸುನೀತ, ಸೋಮುನ ಕರೆದುಕೊಂಡು ಒಂದು ಸ್ಲಂ ಏರಿಯಾಗೆ ಬಂದು ಅಲ್ಲಿನ ರೌಡಿ ನಯಾಜ್ ಅನ್ನು ಪರಿಚಯಿಸಿದಳು. "ನನ್ ಕಥೆಗೆ ಇವರೇ ಸೂತ್ರದಾರ. ನೀನ್ ಏನೇ ಕೇಳೋದಿದ್ರು ಇವರನ್ನೇ ಕೇಳಿಕೋ" ಎಂದು ಹೇಳಿ ಬಿಟ್ಟು ಹೋದಳು. ಸ್ವಲ್ಪ ಹೊತ್ತು ಕಳೆದ ಮೇಲೆ ನಯಾಜ್, ಸುನೀತಾಳ ಕಥೆ ಹೇಳಲು ಶುರುಮಾಡಿದ.

" ಅವಳು ನಿನ್ ತರಾನೇ ಹಳ್ಳಿ ಗಮಾಡು. ಚಿಕ್ಕೋಳಿದ್ದಾಗ್ಲೆ ಅವರ ಅಮ್ಮ ಏನೋ ರೋಗ ಬಂದು ಸತ್ತೋದ್ಲಂತೆ. ವಿದ್ಯೆನೂ ತಲೆಗೆ ಹತ್ಲಿಲ್ಲ. ನೋಡೋಕ್ ಬರೋ ಗಂಡುಗಳೆಲ್ಲ ಅವರಮ್ಮನ ಸ್ಟೋರಿ ಕೇಳಿ ಹಂಗೆ ವಾಪಾಸ್ ಹೋಗ್ಬಿಡ್ತಿದ್ರು. ಅವರಮ್ಮ ಯಾರ್ನೋ ಇಟ್ಕೊಂಡಿದ್ಲಂತೆ. ನೀನು ಈ ಊರಲ್ಲಿದ್ರೆ ಯಾರು ನಿನ್ನ ಮದ್ವೆ ಆಗಲ್ಲ ಬಾ ನನ್ ಜೊತೆ ಅಂತ ಅವರ ಚಿಕ್ಕಪ್ಪ ಬೆಂಗಳೂರಿಗೆ ಕರ್ಕೊಂಡ್ ಬಂದ್ರು. ಚಿಕ್ಕಪ್ಪನ ಕಡೆಯಿಂದ ಒಬ್ಬ ಮದ್ವೆ ಗಂಡು ಇವಳನ್ನ ನೋಡೋಕೆ ಬಂದ. ಸುನೀತಾಗೂ ಅವನು ಇಷ್ಟ ಆಗಿದ್ದ. ಮದ್ವೆ ಮಾತುಕತೆ ಎಲ್ಲ ಆಗಿತ್ತು. ಒಂದಿನ ಹುಡುಗ ಹೊರಗೋಗೋಣ ಬಾ ಅಂತ ಕರುದ್ನಂತೆ. ಇವಳಿಗೂ ಅವನ ಮೇಲೆ ನಂಬಿಕೆ ಇದ್ದಿದ್ರಿಂದ ಅವನ ಜೊತೆ ಹೋಗಿ ಸಲುಗೆ ಇಂದ ನಡ್ಕೊಂಡಿದಾಳೆ. ಅವ್ನು ಮದ್ವೆ ಆಗೋ ಆಸೆ ತೋರ್ಸಿ ತನ್ನ ಕೆಲ್ಸ ಎಲ್ಲ ಮುಗಿಸ್ಕೊಂಡಿದಾನೆ. ಅವನಾದಮೇಲೆ ಅವನ ಫ್ರೆಂಡ್ಸ್ ರೂಮೊಳಗೆ ಬಂದು ಹೋಗಿದ್ರಂತೆ. ಅದೇ ರೂಮಲ್ಲಿ ಊಟ ನೀರು ಇಲ್ದೆ ಎರಡು ದಿನ ನರಳಾಡಿದ್ಲು. ಪೋಲೀಸೋರಿಗೆ ವಿಷ್ಯ ಗೊತ್ತಾಗಿ ಜೈಲಿಗೆ ಹಾಕಿದ್ರು. ನಾನು ನಮ್ಮುಡುಗರನ್ನ ಬಿಡಿಸ್ಕೊಂಡ್ ಬರಣ ಅಂತ ಸ್ಟೇಷನ್ ಹತ್ರ ಹೋಗಿದ್ದಾಗ, ಇನ್ಸ್ಪೆಕ್ಟ್ರು ಇವಳ ಬಗ್ಗೆ ಹೇಳಿದ್ರು. ಸುನೀತಾನ ನೋಡಿದ್ ತಕ್ಷಣ ಸತ್ತೋಗಿರೋ ನನ್ ತಂಗಿ ನೆನಪಾದ್ಲು. ಅದ್ಕೆ ಪೋಲೀಸೋರು ಜೊತೆ ಮಾತಾಡಿ ಅವಳನ್ನ ಅಲ್ಲಿಂದ ಬಿಡಿಸ್ದೆ. ಜೈಲಿಂದ ಹೊರಗೆ ಬಂದು ಸೀದಾ ಅವಳು ನರಳಾಡಿದ್ದ ರೂಮ್ ಹತ್ರ ಹೋದ್ಲು. ಆ ರೂಮಲ್ಲಿ ಅದೇನು ಸೆಳೆತ ಇತ್ತೋ ಗೊತ್ತಿಲ್ಲ. ಅವತ್ತಿಂದ ಆ ರೂಮ್ ನ ದೇವಸ್ಥಾನ ಮಾಡ್ಕೊಂಡ್ಳು. ಅಲ್ಲಿಗೆ ಬರೋ ಹೊಸ ಗಿರಾಕಿಗಳಿಗೆಲ್ಲ ಮೊದ್ಲು ಒಂದು ರೋಸ್ ಹೂ ಕೊಟ್ಟು ಆಮೇಲೆ ಮಂಚಕ್ಕೆ ಹತ್ತುತ್ತಾಳೆ. ನೀವು ದಿನಾ ಸುನೀತಾನ ನೋಡೋಕ್ ಹೋಗ್ತಿರಲ್ಲಾ ಅದೇ ಆ ರೂಮು. ಸ್ಪಲ್ಪ ದಿನ ಆದ್ಮೇಲೆ ನನಗೆ ಗೊತ್ತಾಗಿದ್ದೇನಂದ್ರೆ, ಅವರ ಚಿಕ್ಕಪ್ಪ ಮತ್ತೆ ಗಂಡ ಆಗ್ಬೇಕಾದ ಹುಡುಗ ಇಬ್ರು ಸೇರಿ ಸುನೀತಾನ ದುಡ್ಡಿನ ಆಸೆಗೆ ಆ ಮನೆ ಓನರ್ ಗೆ ಮಾರಿದ್ದಾರೆ ಅಂತ. ಬಡತನದಲ್ಲಿ ಬೆಳೆದಿದ್ದ ಅವಳಿಗೆ ಸುಲಭವಾಗಿ ಕೈತುಂಬಾ ಹಣ ಸಂಪಾದಿಸೋ ದಾರಿ ಸಿಕ್ತು. ಎಷ್ಟು ಕೇಳ್ಕೊಂಡ್ರು ನಾನು ಇದೇ ಕೆಲ್ಸ ಮಾಡ್ತೀನಿ. ನನಗೆ ಇದ್ರಲ್ಲೇ ನೆಮ್ಮದಿ ಇದೆ. ನೀವು ನನ್ನ ಜೊತೆ ಅಣ್ಣನ ಥರ ಇರಿ ಅಂತ ಹೇಳ್ಬಿಟ್ಳು. ಅವಳ ಲೈಫಲ್ಲಿ ಅವಳಿಗೆ ಬೇಕಾಗಿದ್ದೆಲ್ಲಾ ಮಾಡ್ಕೊಂಡು ಖುಷಿಯಾಗಿದ್ದಾಳೆ. ಆ ಮನೆಗೆ ಈಗ ಇವಳೇ ಓನರ್. ಅವರಪ್ಪ ಸತ್ತೋಗಿರೋ ನ್ಯೂಸ್ ಬಂದ್ರೂ ನೋಡೋಕ್ ಹೋಗ್ಲಿಲ್ಲ. ಈ ಜನ್ಮದಲ್ಲಿ ಚಿಕ್ಕಪ್ಪನ್ ಮುಖ ನೋಡ್ಬಾರ್ದು ಅಂತ ಬೇರೆ ನಿರ್ಧಾರ ಮಾಡಿದಾಳೆ. ಅಲ್ಲಿರೂ ಮೂರ್ನಾಲ್ಕು ಜನ ಹುಡ್ಗೀರು ಬಿಟ್ರೆ ಅವಳಿಗೆ ಅಂತ ಯಾರು ಇಲ್ಲ" ಅಂತ ಹೇಳಿ ತುಂಬಾ ಭಾವುಕತೆಯಿಂದ ನಯಾಜ್ ಕಣ್ಣೀರು ಹಾಕಿದರು.

ಕಥೆ ಕೇಳಿದ ಸೋಮುವಿಗೆ ಮೌನವೇ ಎದುರುತ್ತರವಾಗಿತ್ತು. ಅಲ್ಲಿಂದ ನಡೆದುಕೊಂಡು ಸುನೀತಾಳ ಮನೆಗೆ ಬಂದು, ಅವಳನ್ನ ಗಟ್ಟಿಯಾಗಿ ತಬ್ಬಿಕೊಂಡು ಅತ್ತುಬಿಟ್ಟ. ಸುನೀತಾ, ಸೋಮುವಿನ ಕಣ್ಣೀರು ಒರೆಸಿದಳು. ಆಗಿನಿಂದ ಆಗಾಗ ಬಂದು ರೂಮಲ್ಲಿರುವ ಹುಡುಗಿಯರ ಕಥೆ, ಅವರಿಗೆ ಪರಿಚಯವಿರುವ ಆಂಟಿಯರ ಕಥೆ ಎಲ್ಲವನ್ನೂ ಕಲೆ ಹಾಕಿದ. ಪುಟ್ಟಣ್ಣ ಕಣಗಾಲ್ ಶೈಲಿಯಲ್ಲಿ, ಆರತಿ ಪಾತ್ರದಲ್ಲಿ ಸುನೀತಾಳನ್ನ ಇಟ್ಟುಕೊಂಡು ಮತ್ತೊಂದು ಕಥಾಸಂಗಮ ಹೆಣೆಯಲು ಮುಂದಾದ. ಕಥೆಗೆ ಅರ್ಧದಷ್ಟು ಬಂಡವಾಳ ಹೂಡಲು ನಯಾಜ್ ಮುಂದೆ ಬಂದ. ಇನ್ನರ್ಧ ಬಂಡವಾಳ ಸುನೀತಾಳ ಜವಾಬ್ದಾರಿಯಾಯ್ತು.

* * *

ಪೋಲೀಸ್ ತನ್ನ ವೀರ್ಯ ಸ್ಲಖಿಸುವ ವೇಳೆಗೆ ಸುನೀತಾ ತನ್ನ ಹಾಗೂ ಸೋಮುವಿನ ಕಥೆ ನೆನೆದು ತುಂಬಾ ಭಾವುಕಳಾಗಿ ಕಣ್ಣೀರು ಸುರಿಸಿದ್ದಳು. "ಯಾಕ್ ದಿನಾ ಇದ್ದಂಗೆ ಇವತ್ತು ಇಲ್ಲ. ಆ ಡಬ್ಬಿ ಹುಡ್ಗನ ರುಚಿ ಬಿತ್ತೇನೋ ಅಮ್ಮಣ್ಣಿಗೆ??" ಅಂತ ಪೋಲೀಸ್ ಸಾವಿರದ ನೋಟೊಂದನ್ನು ಜೇಬಿನಿಂದ ತೆಗೆದು ಸುನೀತಾಳ ಮುಖದ ಮೇಲೆ ಒಗೆದ. ಎಷ್ಟೇ ನೋವು ತಿಂದರೂ ಯಾವತ್ತೂ ತನ್ನ ಆಕ್ರೋಶ ವ್ಯಕ್ತಪಡಿಸದ ಸುನೀತ ತನ್ನ ಸೆರಗು ಸರಿಮಾಡಿಕೊಂಡು ಪೋಲೀಸ್ ಎಸೆದಿದ್ದ ನೋಟನ್ನು ಹಿಂತಿರುಗಿಸಿ ಎಸೆದು, "ಇದೇ ಕೊನೆ ಇನ್ಸ್ಪೆಕ್ಟ್ರೆ ಇನ್ಮೇಲೆ ಈಕಡೆ ಬರ್ಬೇಡಿ. ಯಾಕಂದ್ರೆ ನಾಳೆ ನಾನು ಹೀರೋಯಿನ್ ಆಗಿ ಆಕ್ಟ್ ಮಾಡ್ತಿರೋ ಫಿಲ್ಮ್ ದು ಮುಹೂರ್ತ ಇದೆ. ಡಬ್ಬಿ ಹಿಡ್ಕೊಂಡ್ ಹೋದ್ನಲ್ಲ ಆ ಹುಡ್ಗನೇ ಡೈರೆಕ್ಟರ್. ಈಗ ನಿಮ್ ಉಪ್ಪಿಟ್ಟು ಡಬ್ಬ ತಗೊಂಡು ಜಾಗ ಖಾಲಿ ಮಾಡಿ" ಎಂದು ಅಬ್ಬರಿಸಿ ರೂಮಿನಿಂದ ಹೊರನಡೆದು ಅಡುಗೆ ಕೋಣೆಯ ಕಡೆಗೆ ಹೋಗಿ ಬಾಗಿಲು ಹಾಕಿಕೊಂಡಳು.

ಇನ್ಸ್ಪೆಕ್ಟ್ರು ತನ್ನ ಮುಂದೆ ನಡಿಯಬಾರದ್ದೇನೋ ನಡೆದುಹೋಯಿತಲ್ಲಾ ಅಂತ ಸುಮಾರು ಹೊತ್ತು ಯೋಚಿಸುತ್ತಾ ಒಂದು ಸಿಗರೇಟ್ ಹಚ್ಚಿಕೊಂಡ. ನಾಳೆಯ ಸಿನೆಮಾ ಮುಹೂರ್ತಕ್ಕೆ ಬರುವ ಎಲ್ಲರಿಗೂ ಉಪ್ಪಿಟ್ಟು ಬಡಿಸುವ ಸಲುವಾಗಿ ಸುನೀತ ಉಪ್ಪಿಟ್ಟು ಮಾಡುವುದನ್ನು ಕಲಿಯಲು ಎಲ್ಲ ತಯಾರಿಮಾಡಿಕೊಂಡು ಗ್ಯಾಸ್ ಸ್ಟವ್ ಹಚ್ಚಿ ಒಗ್ಗರಣೆ ಹಾಕಿದಳು. ಒಗ್ಗರಣೆಯ ಘಮದಲ್ಲಿ ಸುನೀತಾಳ ಮೈ ಬೆವರು ಬೆರೆತು ಇನ್ಸ್ಪೆಕ್ಟ್ರು ಮೂಗಿಗೆ ಬಡಿಯಿತು. ಇನ್ಸ್ಪೆಕ್ಟ್ರುಗೆ ಸುನೀತಾ ಮಾಡುತ್ತಿರುವ ಉಪ್ಪಿಟ್ಟನ್ನು ತಿನ್ನಬೇಕೆನಿಸಿತು. ಆದರೆ ಆ ಉಪ್ಪಿಟ್ಟು ಸೋಮುವಿನ ಬರುವಿಕೆಗಾಗಿ ಹೊಸ ಡಬ್ಬಿಯೊಂದರಲ್ಲಿ ಅವಿತುಕೊಂಡು ಕಾಯತೊಡಗಿತು.