Click here to Download MyLang App

ದೆವ್ವದ ಮರ - ಬರೆದವರು : ಪ್ರೀತಿನಿ

ಸುಮಾರು ವರ್ಷಗಳ ಹಿಂದೆ ಸಿಟಿ ಯಿಂದ ಹದಿನೈದು ಕಿಲೋಮೀಟರ್ ದೂರವಿದ್ದ ಒಂದು ಗ್ರಾಮ ಸಂಪಿಗೆಹಳ್ಳಿ. ಆ ಊರು ಅಷ್ಟೇನೂ ಮುಂದುವರೆದಿರಲಿಲ್ಲ. ಊರಿಗೆ ದಿನದಲ್ಲಿ ಒಮ್ಮೆ ಒಂದು ನಿಗದಿತ ಸಮಯದಲ್ಲಿ ಮಾತ್ರ ಬಸ್ ಬರುತ್ತಿತ್ತು ಆ ಗ್ರಾಮದಲ್ಲಿ ನಾಡಹೆಂಚಿನ ಮನೆಗಳು ಇದ್ದವು. ಆ ಊರಿನವರೆಲ್ಲರೂ ತಮ್ಮ ಜೀವನಕ್ಕಾಗಿ ವ್ಯವಸಾಯವನ್ನೇ ಅವಲಂಬಿಸಿದ್ದರು. ಆ ಊರಿನಲ್ಲಿ ಇದ್ದ ಒಬ್ಬ ವ್ಯಕ್ತಿ ಮಾಧವ. ಅವನು ಮನೆಗೆ ಹಿರಿಯ ಮಗ ಎಸ್ಎಸ್ಎಲ್ಸಿ ಓದಿದ್ದ ಅವನು ಅದರ ನಂತರ ತನ್ನ ಓದನ್ನು ಮೊಟಕುಗೊಳಿಸಿ ವ್ಯವಸಾಯದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದನು. ದಿನವೂ ಅವನು ತನ್ನ ಹೊಲಕ್ಕೆ ಹೋಗಿ ದುಡಿಯುವುದರ ಜೊತೆಯಲ್ಲಿ ಆಲೆಮನೆಯಲ್ಲಿ ಬೆಲ್ಲದ ಪಾಕ ತೆಗೆಯುವುದಕ್ಕಾಗಿ ತನ್ನ ಹಸುಗಳನ್ನು ಆಲೆಮನೆಗೆ ಕರೆದುಕೊಂಡು ಹೋಗಿ ಗಾಣಕ್ಕೆ ಕಟ್ಟುತ್ತಿದ್ದನು. ಆ ಆಲೆಮನೆಯಲ್ಲಿ ಮೂರು ಹೊತ್ತು ಬೆಲ್ಲದ ಅಚ್ಚು ತೆಗೆಯುತ್ತಿದ್ದರು. ಅಲ್ಲಿ ತಯಾರಿಸುತ್ತಿದ್ದ ಬೆಲ್ಲ ರುಚಿಕರವಾಗಿರುತ್ತಿತ್ತು ಸುತ್ತಲ ಹಳ್ಳಿಯವರೆಲ್ಲ ಅಲ್ಲಿಯೇ ಬೆಲ್ಲವನ್ನು ಕೊಳ್ಳುತ್ತಿದ್ದರು.


ಆ ಆಲೆಮನೆಗೆ ಸ್ವಲ್ಪ ದೂರದಲ್ಲಿಯೇ ಒಂದು ಬಾವಿ ಇತ್ತು ಅದರ ಪಕ್ಕದಲ್ಲಿಯೇ ಒಂದು ಒಣಗಿದ ಮರ ತುಂಬಾ ವರ್ಷಗಳಿಂದ ಬಿದ್ದಿತ್ತು. ಅದೆಷ್ಟು ಒಣಗಿದ್ದ ಮರವಾಗಿದ್ದರು ಸಹ ಆ ಹಳ್ಳಿಯವರಾರೂ ಆ ಮರವನ್ನು ಕಡಿದುಕೊಂಡು ಹೋಗುತ್ತಿರಲಿಲ್ಲ. ಮಾಧವನೂ ಸಹ ಆ ಮರವನ್ನು ಆಲೆಮನೆಗೆ ಹೋಗುವಾಗೆಲ್ಲ ನೋಡುತ್ತಿದ್ದ. ಹಾಗೆಯೇ ಒಂದು ದಿನ ಅಲೆಮನೆಗೆ ಗಾಣ ಅರೆಯಲು ಹಸುಗಳನ್ನು ಕರೆದುಕೊಂಡು ಹೋಗುವಾಗ ಅವನ ಜೊತೆಯಲ್ಲಿ ಬರುತ್ತಿದ್ದ ಸೋಮನಿಗೆ " ಸೋಮಣ್ಣ ಈ ಮರ ಎಷ್ಟು ಚೆನ್ನಾಗಿ ಒಣಗಿದೆ ಇದನ್ನ ಕಡಿದು ಬೆಲ್ಲ ಬೇಯಿಸಕ್ಕೆ ಒಲೆಗೆ ಹಾಕಿದ್ರೆ ಏನಿಲ್ಲ ಅಂದ್ರೂ ಒಂದು ವಾರ ಒಲೆ ಉರಿಸಬಹುದು ಅಲ್ವಾ" ಎಂದಾಗ ಅವನ ಮಾತು ಕೇಳಿ ಸೋಮಣ್ಣ ಬೆಚ್ಚಿದ "ಲೇ ಮಾಧು ತಲೆ ನೆಟ್ಟಗೆ ಇಲ್ವ ನಿಂಗೆ. ಊರಿನ ಜನ ಎಲ್ಲ ಆ ಮರದ ಮೇಲೆ ದೆವ್ವ ಅದೆ ಅಂತ ಮಾತಡ್ಕೊತಾರೆ. ಅದಿಕ್ಕೆ ನೋಡು ಈ ಮರ ಬಿದ್ದು ಇಷ್ಟು ವರ್ಷ ಅದ್ರೂನೂ ಅಷ್ಟು ಚನ್ನಾಗಿ ಮರ ಒಣಗಿದ್ರೂನೂ ಸಹ ಒಬ್ಬರೂ ಸಹ ಆ ಮರಕ್ಕೆ ಕೈ ಹಾಕಿಲ್ಲ" ಎಂದಾಗ ಅವನು ನಗುತ್ತಾ "ಏನ್ ಸೋಮಣ್ಣ ನೀನು ಬಿದ್ದೋಗಿರೋ ಮರದಲ್ಲಿ ದೆವ್ವ ಇರತ್ತ ಅವರೆಲ್ಲ ಹೇಳ್ತಾರೆ ಅಂತ ನೀನೂ ನಂಬುತ್ತೀಯಲ್ಲ" ಎಂದನು. ಅದಕ್ಕೆ ಸೋಮಣ್ಣ "ನಗ್ತೀಯಲ್ಲ ಮಾದು ನೀನೇ ಯೋಚ್ನೆ ಮಾಡು ಈ ಮರ ಬಿದ್ದು ಏನಿಲ್ಲ ಅಂದ್ರೂ 30 ವರ್ಷದ ಮೇಲಾಗಿದೆ ಆದ್ರೂ ಒಂಚೂರು ಗೆದ್ದಲು ಹತ್ತಿಲ್ಲ ಅಂದ್ರೆ ನೀನೇ ಅರ್ಥ ಮಾಡ್ಕೊ" ಎಂದಾಗ ಅವನು ನಗುತ್ತಾ "ಓಹ್ ಹಾಗಾದ್ರೆ ಆ ನಿಮ್ ದೆವ್ವ ಅದರ ಮೇಲೆ ಕೂತ್ಕೊಂಡು ಆ ಗೆದ್ದಲನ್ನೆಲ್ಲ ಓಡಿಸ್ತಿದೀಯ" ಎಂದನು ಅದಕ್ಕೆ ಸೋಮಣ್ಣ ಏನೂ ಮಾತನಾಡದೆ ಸುಮ್ಮನಾದನು. ನಂತರ ಅವರಿಬ್ಬರೂ ತಮ್ಮ ತಮ್ಮ ಕೆಲಸದಲ್ಲಿ ನಿರತರಾದರು.


ಮಾರನೆಯ ದಿನ ಎಂದಿನಂತೆ ಮಾಧವ ಗಾಣ ಅರೆಯಲು ಬಂದಾಗ ಬೆಲ್ಲದ ಪಾಕ ಬೇಯಿಸುವವರು " ಮಾದಣ್ಣ ಸೌದೆ ಕಾಲಿಯಾಗಕ್ಕೆ ಬಂದೈತೆ ಒಂದಿಬ್ಬರು ಜನಕ್ಕೆ ಹೇಳಿ ಕಾಡಿಂದ ಸೌದೆ ತರಿಸ್ಬೇಕು" ಎಂದಾಗ ಮಾಧವ "ಯೇ ಸೌದೆ ತರೋಕೆ ಯಾಕೆ ಕಾಡಿಗೋಗ್ಬೇಕು ಇಲ್ಲೇ ಬಾವಿ ಹತ್ರ ಒಂದು ಒಣಗಿರೋ ಮರ ಬಿದ್ದಿದೀಯಲ್ಲ ಅದನ್ನೇ ಕಡಿಸಿ ಹಾಕಣ ಏನಿಲ್ಲ ಅಂದ್ರೂ ಒಂದು ವಾರ ಆಗತ್ತೆ" ಎಂದಾಗ ಅವರೆಲ್ಲರೂ ಭಯದಿಂದ ಅವನ ಮುಖ ನೋಡಿದರು ಆಗ ಅವನು "ಯಾಕ್ರಲ ಹಂಗೆ ನೋಡ್ತಿದೀರ ಏನಾಯ್ತು" ಎಂದಾಗ ಅವರು "ಅಲ್ಲ ಕನಣ್ಣ ಮೊದ್ಲೆ ಊರಿನ ಜನ ಎಲ್ಲ ಆ ಮರದಾಗೆ ದೆವ್ವ ಐತೆ ಅಂತ ಮಾತಾಡ್ತವ್ರೆ ಸಾಲದಕ್ಕೆ ಇನ್ನ ಮೂರು ದಿನದಲ್ಲಿ ಅಮಾವಾಸ್ಯೆ ಬೇರೆ ಐತೆ ಇಂತ ಸಮಯದಲ್ಲಿ ........" ಎಂದು ರಾಗ ಎಳೆದರು ಅದಕ್ಕೆ ಮಾಧವ "ಅಯ್ಯೋ ರಾಮ ನೀವುಗಳೋ ನಿಮ್ಮ ಕತೆಗಳೂ. ನೀವು ಬರ್ನಿಲ್ಲ ಅಂದ್ರೆ ಅಷ್ಟೇ ನಾನೇ ಹೋಗಿ ಆ ಮರ ಕಡ್ಕೊಂಡು ತತ್ತೀನಿ ನೋಡೇ ಬಿಡೋಣ ಆ ಮರದಾಗಿರೋ ದೆವ್ವ ನನ್ನ ಏನ್ ಮಾಡ್ತದೆ ಅಂತ" ಎಂದು ಹೇಳಿದವನೆ ಕೊಡಲಿ ಎತ್ತಿಕೊಂಡು ಉಳಿದವರು ಎಷ್ಟೇ ತಡೆದರೂ ಸಹ ಕೇಳದೆ ಆ ಮರದ ಬಳಿ ಸಾಗಿ ಆ ಮರಕ್ಕೆ ಕೊಡಲಿ ಯಿಂದ ಒಂದೇಟು ಹಾಕಿಯೇ ಬಿಟ್ಟನು. ನಂತರ ಉಳಿದವರ ಕಡೆ ತಿರುಗಿ "ಎಲ್ಲಿ ನಿಮ್ಮ ದೆವ್ವ ಬರಲೇ ಇಲ್ಲ" ಎಂದವನೆ "ಸರಿ ಸರಿ ಬೇಗ ಬೇಗ ನಾನು ಸೌದೆ ಕಡಿದು ಹಾಕ್ತೀನಿ ನೀವು ತಗೊಂಡು ಹೋಗಿ ಅಲ್ಲಿ ಒಟ್ಟು ಮಾಡಿ" ಎಂದು ಹೇಳಿ ಆ ಮರವನ್ನು ಕಡಿಯಲು ಶುರು ಮಾಡಿದನು. ಅವನ ಹಿಂದೆಯೇ ಕೆಂಗಣ್ಣು ಬೀರುತ್ತಾ ನಿಂತ ಆತ್ಮ ಅಲ್ಲಿದ್ದವರಾರಿಗೂ ಕಾಣಿಸಲೇ ಇಲ್ಲ. ಆ ಆತ್ಮ "ಹೇಯ್ ಬಿಡ್ರೋ ಅದು ನನ್ನ ಜಾಗ ಬಿಡ್ರೋ" ಎಂದು ಕೂಗುತ್ತಿದ್ದದ್ದು ಯಾರಿಗೂ ಕೇಳಲೇ ಇಲ್ಲ. ಮಾಧವ ಹೇಳಿದಂತೆ ಅವರೆಲ್ಲರೂ ಅವನು ಕಡಿದು ಹಾಕಿದ ಮರದ ತುಂಡುಗಳನ್ನು ಆಲೆಮನೆಗೆ ಸಾಗಿಸಿದರು ಆ ಆತ್ಮವೂ ಸಹ ಅವರ ಜೊತೆಯಲ್ಲೇ ಹೋಯಿತು.


ರಾತ್ರಿ ಇನ್ನೊಂದು ಕೊಪ್ಪರಿಗೆ ಬೆಲ್ಲವನ್ನು ತಯಾರಿಸಬೇಕಿದ್ದರಿಂದ ಕೆಲವರು ಅಲ್ಲಿಯೇ ಉಳಿದರೆ ಮಾಧವ ತನ್ನ ಮನೆಗೆ ತೆರಳಿದ. ಉರಿಯುತ್ತಿದ್ದ ಒಲೆಗೆ ಮಾಧವನು ಕಡಿದು ತಂದಿದ್ದ ಮರವನ್ನು ಹಾಕಿದರು ಒಲೆ ಧಗಧಗಿಸಿ ಉರಿಯಲು ಶುರು ಮಾಡಿತು. ಸುಮಾರು ಸಮಯ ಕಳೆದ ಮೇಲೆ ಆಲೆಮನೆಯಲ್ಲಿದ್ದವರು ಬೆಲ್ಲ ಸಿದ್ಧವಾಗಿದೆಯೇ ಎಂದು ಪರೀಕ್ಷಿಸಿ ನೋಡಲು ಬಂದವರೆ ಆ ಕೊಪ್ಪರಿಗೆಯನ್ನು ನೋಡಿ ತಬ್ಬಿಬ್ಬಾದರು.


ಮಾರನೆಯ ದಿನ ಎಂದಿನಂತೆ ಮಾಧವ ಆಲೆಮನೆಗೆ ತನ್ನ ಎತ್ತುಗಳೊಡನೆ ಬಂದಾಗ ಹಿಂದಿನ ರಾತ್ರಿ ಬೆಲ್ಲವಿಳಿಸಲು ತಂಗಿದ್ದವರು ತಕ್ಷಣವೇ ಅವನ ಬಳಿ ಬಂದು "ಮಾದಣ್ಣ ನೆನ್ನೆ ನಾವು ಎಷ್ಟೆಳಿದ್ರೂ ಕೇಳಲಿಲ್ಲ ನೀನು ಆ ಮರದ ಸೌದೆನೆ ಹಾಕಿಸ್ದೆ ಒಲೆಗೆ ನೋಡೀಗ ಏನಾಗಿದೆ. ಇಷ್ಟು ವರ್ಷದಿಂದ ಬೆಲ್ಲ ಮಾಡ್ತಿದೀವಿ ಒಂದು ದಿನಾನೂ ಬೆಲ್ಲ ಕೆಟ್ಟಿರಲಿಲ್ಲ ಆದ್ರೆ ನೆನ್ನೆ ಆ ಸೌದೆ ಹಾಕಿ ತೆಗೆದ ಬೆಲ್ಲ ಮಾತ್ರ ಹಾಳಾಗಿದೆ" ಎಂದರು ಆಗ ಮಾಧವ ರಾತ್ರಿ ಅವನಿಗಾದ ಅನುಭವವನ್ನು ನೆನೆಯುತ್ತಾ "ಸರಿ ತಲೆ ಕೆಡಿಸ್ಕೊಬೇಡಿ. ಒಲೆಯಿಂದ ಕೆಂಡನೆಲ್ಲ ತೆಗೆದು ನೀರು ಹಾಕಿ ಮಿಕ್ಕಿರೊ ಸೌದೆ ಜೊತೆಗೆ ಆ ಕೆಂಡನೂ ತಗೊಂಡು ಹೋಗಿ ಆ ಮರ ಬಿದ್ದಿದ್ದ ಜಾಗದಲ್ಲೇ ಹಾಕಿ ಬಂದುಬಿಡಿ" ಎಂದು ಹೇಳಿದನು. ಅವರೆಲ್ಲರೂ ಅವನು ಹೇಳಿದಂತೆಯೇ ಮಾಡಲು ಹೋದರು. ಅವರತ್ತ ಹೋಗುತ್ತಿದ್ದಂತೆ ಮಾಧವ ಹಿಂದಿನ ರಾತ್ರಿ ತನಗೆ ಬಿದ್ದ ಕನಸನ್ನು ನೆನಪಿಸಿಕೊಂಡ.


ಮಾಧವ ಸಂಜೆ ಅವರಿಗೆಲ್ಲ ಸೌದೆ ಕಡಿದು ಕೊಟ್ಟು ಮನೆಗೆ ಹೋದವನು ಊಟ ಮಾಡಿ ಮಲಗಿದ್ದನು ಆಗ ಯಾರೋ ಒಬ್ಬ ಅವನ ಮೇಲೆ ಕೂತು "ಹೇಯ್ ಎಷ್ಟೋ ಧೈರ್ಯ ನಿನಗೆ ನನ್ನ ಜಾಗನೆ ಇಲ್ಲದಂತೆ ಮಾಡ್ತೀಯ" ಎಂದು ಕೆಂಗಣ್ಣು ಬಿಡುತ್ತಾ ಅವನ ಕುತ್ತಿಗೆ ಹಿಸುಕಲು ಶುರು ಮಾಡಿದರು. ಮಲಗಿದ್ದ ಮಾಧವನಿಗೆ ಉಸಿರು ಕಟ್ಟಿದಂತಾಗುತ್ತಿತ್ತು ತಕ್ಷಣ ಕಣ್ಣು ಬಿಟ್ಟ ಅವನು ಎದ್ದಾಗ ಪೂರ್ತಿ ಬೆವೆತು ಹೋಗಿದ್ದನು. ಅದು ಕನಸೆಂದು ತಿಳಿದು ನಿಟ್ಟುಸಿರಿಟ್ಟ ಅವನು ನೀರು ಕುಡಿದು ಮಲಗಿದನು ಅಟ್ಟದ ಮೇಲಿನಿಂದ ಒಂದು ಆಕೃತಿ ಅವನನ್ನೇ ಆಕ್ರೋಶಭರಿತ ಕಂಗಳಿಂದ ನೋಡುತ್ತಿತ್ತು.


ತನಗೆ ಬಿದ್ದ ಕನಸನ್ನು ನೆನಪಿಸಿಕೊಂಡ ಅವನು ನಂತರ ತಲೆ ಕೊಡವುತ್ತಾ ಹಸುಗಳಿಗೆ ನೀರು ಕುಡಿಸಿಕೊಂಡು ಬರಲೆಂದು ಬಾವಿಯ ಬಳಿ ಕರೆದುಕೊಂಡು ಹೋದನು. ಅಲ್ಲಿಗೆ ಹೋದ ಒಂದೆರಡು ನಿಮಿಷಗಳಲ್ಲಿಯೇ ಹಸುಗಳು ಅವನನ್ನು ಬಿಟ್ಟು ಬೆದರಿ ಆಲೆಮನೆಯ ಬಳಿ ಓಡಿದವು. ಬರಿ ಹಸುಗಳು ಬಂದಿದ್ದನ್ನು ನೋಡಿ ಅಲ್ಲಿದ್ದವರು ಮಾಧವನೆಲ್ಲಿ ಎಂದು ನೋಡಲು ಅವನು ವಿಚಿತ್ರವಾಗಿ ಆಡುತ್ತಾ ಆ ಮರವಿದ್ದ ಸ್ಥಳದಲ್ಲಿ ಕುಳಿತಿದ್ದನು. ಅವನನ್ನು ಅಲ್ಲಿ ಆಡುತ್ತಿದ್ದ ರೀತಿಯನ್ನು ಕಂಡೊಡನೆ ಅಲ್ಲಿದ್ದವರು ಅವನನ್ನು ಅಲುಗಾಡದಂತೆ ಗಟ್ಟಿಯಾಗಿ ಹಿಡಿದುಕೊಂಡು ಅವನ ಮನೆಯ ಬಳಿ ಕರೆದುಕೊಂಡು ಹೋಗತೊಡಗಿದರು. ಅವನು ಮಾತ್ರ ದಾರಿಯುದ್ದಕ್ಕೂ "ಹ್ಮ್ಮ್.....ಹಾ........ಆ......." ಎಂದು ಕಿರುಚುತ್ತಾ ಹೋಗುತ್ತಿದ್ದನು. ಮಾತ್ರವಲ್ಲದೆ ಆಗಾಗ ವಾಂತಿ ಮಾಡಿಕೊಳ್ಳುತ್ತಿದ್ದನು. ಅವನನ್ನು ಆ ಪರಿಸ್ಥಿತಿಯಲ್ಲಿ ನೋಡಿದ ಅವನ ತಂದೆತಾಯಿಯರಿಗೆ ಗಾಬರಿಯಾಯಿತು. ಏನಾಯಿತೆಂದು ಅವನ ಜೊತೆಯಲ್ಲಿ ಬಂದವರನ್ನು ಕೇಳಲು ಅವರು ಎಲ್ಲ ವಿಷಯವನ್ನು ಹೇಳಿದರು. ಅವನನ್ನು ಮನೆಯ ಒಳಗೆ ಕರೆದುಕೊಂಡು ಹೋಗಲು ನೋಡಿದರೆ ಅವನು "ಹೇಯ್ ಬಿಡ್ರೋ ಇದು ನನ್ನ ಮನೆಯಲ್ಲ ಬಿಡ್ರೋ" ಎಂದು ಕೂಗುತ್ತಿದ್ದನು. ಆಗ ಅಲ್ಲಿ ನೆರೆದಿದ್ದ ಊರಿನವರು ಅವನನ್ನು ಆಂಜನೇಯನ ಗುಡಿಯ ಬಳಿ ಕರೆದುಕೊಂಡು ಹೋಗಲು ನಿರ್ಧರಿಸಿ ಅಲ್ಲಿಗೆ ಅವನನ್ನು ಬಿಡದೆ ಎಳೆದುಕೊಂಡು ಹೋದರು. ಅಲ್ಲಿ ಗುಡಿಯ ಪೂಜಾರಿ ಅವನ ಮೈ ಮೇಲೆ ಆಂಜನೇಯ ಸ್ವಾಮಿಯ ತೀರ್ಥ ಹಾಕಿ ಕುಂಕುಮವನ್ನು ಅವನ ಮೇಲೆ ಎರಚಿದಾಗ ಒದರಾಡುವುದನ್ನು ನಿಲ್ಲಿಸಿದನು ಆಗ ಅರ್ಚಕರು "ಯಾರು ನೀನು ಇವನ ಮೈ ಮೇಲೆ ಯಾಕೆ ಬಂದಿದೀಯ" ಎಂದಾಗ ಅವನ ಮೈನಲ್ಲಿದ್ದ ಆತ್ಮ "ನಾನು ಮೂವತ್ತು ವರ್ಷದಿಂದ ಆ ಬಾವಿ ಹತ್ರ ಇರೋ ಮರದಲ್ಲಿ ಇದ್ದೆ . ಅದರ ಮೇಲೆ ಕೂತ್ಕೊಂಡು ಆ ಬಾವಿಗೆ ನೀರಿಗೆ ಬರೋರ್ನೆಲ್ಲ ನೋಡ್ತಾ ಇದ್ದೆ . ಯಾರೂ ಸಹ ಇದುವರೆಗೂ ಆ ಮರದ ತಂಟೆಗೆ ಬಂದಿರಲಿಲ್ಲ ಆದ್ರೆ ಇವನು... ಇವನಿಗೆ ಎಷ್ಟು ಕೊಬ್ಬಿದ್ರೆ ನನ್ನ ಜಾಗ ಆಗಿದ್ದ ಆ ಮರನ ಕಡಿದು ಬೆಂಕಿಗೆ ಹಾಕ್ತಾನೆ. ನನಗೆ ಇರೋಕೆ ಜಾಗ ಇಲ್ಲದಂತೆ ಮಾಡ್ತಾನೆ ಅದಿಕ್ಕೆ ಇವನನ್ನ ಸಾಯ್ಸೋಕೆ ಅಂತ ಇವನ ಮೇಲೆ ಬಂದೆ" ಎಂದಿತು. ಅದಿಕ್ಕೆ ಆ ಅರ್ಚಕರು "ಅವನು ಹಾಗೆ ಮಾಡಿದ ಅಂತ ನೀನು ಅವನನ್ನ ಸಾಯಿಸೋದು ತಪ್ಪು . ಇವನನ್ನ ಬಿಟ್ಟು ಹೊರಟು ಹೋಗು " ಎಂದರು ಅದಕ್ಕೆ ಆ ಆತ್ಮ ಹೋಗುವುದಿಲ್ಲವೆಂದಾಗ ಅವರು ಮತ್ತೆ ಅವನ ಮೇಲೆ ತೀರ್ಥ ಎರೆಚಿದರು ಆಗ ಆ ಆತ್ಮ "ಬೇಡ.... ಬೇಡ.... ನಾನು ಹೋಗ್ತೀನಿ ನಾನು ಹೋಗ್ತೀನಿ" ಎಂದು ಹೇಳಿತು ಅದಾದ ಮರುಕ್ಷಣವೇ ಮಾಧವ ದೊಪ್ಪೆಂದು ನೆಲದ ಮೇಲೆ ಬಿದ್ದನು. ಆಗ ಆ ಗುಡಿಯ ಅರ್ಚಕರು "ಆ ದೆವ್ವ ಇವನ ದೇಹ ಬಿಟ್ಟು ಹೋಯಿತು ನೀವಿನ್ನ ಇವನನ್ನು ಮನೆಗೆ ಕರೆದುಕೊಂಡು ಹೋಗಿ" ಎಂದರು. ಅವನ ತಂದೆತಾಯಿ ಊರಿನವರ ಸಹಾಯದಿಂದ ಅವನನ್ನು ಮನೆಗೆ ಕರೆದುಕೊಂಡು ಹೋದರು.


ಮನೆಗೆ ಬಂದು ಸ್ವಲ್ಪ ಸಮಯವಾದ ಮೇಲೆ ಮಾಧವ ಕಣ್ಣು ತೆರೆದ. ಅವನ ಮುಖದಲ್ಲಿ ಆಯಾಸ ಕಾಣಿಸುತ್ತಿತ್ತು. ಅವನು ಯಾರೊಂದಿಗೂ ಮಾತನಾಡಲಿಲ್ಲ ಸುಮ್ಮನೆ ತನ್ನ ಪಾಡಿಗೆ ತಾನು ಕುಳಿತ್ತಿದ್ದನು. ಅವನಿಗೆ ಊಟ ನೀಡಿದರೂ ಸಹ ಮಾಡಲಿಲ್ಲ. ಅವನ ತಾಯಿ ಸುಸ್ತಿಗೆ ಹೀಗಾಡುತ್ತಿದ್ದಾನೆಂದು ಸುಮ್ಮನಾದರು. ಅವನು ಮಾರನೇ ದಿನವೂ ಊಟ ಮಾಡದಿದ್ದಾಗ ಅವನ ಗೆಳೆಯರು "ಅಮ್ಮ ಇವನನ್ನ ಒಂದು ಸರಿ ಪೇಟೆಲಿರೋ ಆಸ್ಪತ್ರೆ ಗೆ ತೋರಿಸ್ಕೊಂಡು ಕರ್ಕೊಂಡ್ ಬರ್ತೀವಿ" ಎಂದಾಗ ಮಗ ಹೇಗೋ ಸರಿಹೋದ್ರೆ ಸಾಕೆಂದುಕೊಂಡ ಆ ಜೀವ ಒಪ್ಪಿಕೊಂಡಿತು. ಅವರೆಲ್ಲರೂ ಮಾಧವನನ್ನು ಕರೆದುಕೊಂಡು ಬಸ್ ನಲ್ಲಿ ಹೊರಟರು. ಮಾಧವ ಅವನ ಸ್ನೇಹಿತನೊಬ್ಬನ ಭುಜದ ಮೇಲೆ ತಲೆಯಿಟ್ಟುಕೊಂಡು ಕಣ್ಣುಮುಚ್ಚಿ ಕುಳಿತುಕೊಂಡ. ಅವನ ತಾಯಿ ಅವನ ಸ್ನೇಹಿತರಿಗೆ "ಹುಷಾರು ಕನಪ್ಪ" ಎಂದು ಹೇಳಿ ಬಸ್ ಹೊರಡುವವರೆಗೂ ಅಲ್ಲಿಯೇ ಇದ್ದು ಮನೆಗೆ ಹೊರಟರು. ಇತ್ತ ಅವನ ಸ್ನೇಹಿತರು ಬಸ್ ಸಿಟಿ ತಲುಪಿದಾಗ ಮಾಧವನನ್ನು ಎಚ್ಚರಿಸಲು "ಮಾಧವ.... ಮಾಧವ...." ಎಂದು ತಟ್ಟಿ ಭುಜದ ಮೇಲಿಂದ ಅವನ ತಲೆಯನ್ನು ಎತ್ತಿದಾಗ ಅವನು ಹಾಗೆ ಕೆಳಕ್ಕೆ ಬಿದ್ದನು. ಅವನ ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿತು. ಇತ್ತ ಆ ಆತ್ಮ ಕ್ರೂರವಾಗಿ ನಗುತ್ತಾ ಮಾಯವಾಯಿತು.

★★★ಮುಕ್ತಾಯ★★★