Click here to Download MyLang App

ದೂರವಿಡುವ ಬೇರು - ಬರೆದವರು : ಸಿಂಧುಚಂದ್ರ ಹೆಗಡೆ

ಅವಳು ಮತ್ತೆ ಬಂದಿದ್ದಾಳೆ. ಆ ಬದಿಗೆ ಈ ಬದಿಗೆ ನೋಡುತ್ತಾ ಏನನ್ನು ಯೋಚಿಸುತ್ತಿರಬಹುದು, ಇದೀಗ ಅವಳು ಬಂದಿರುವುದು ನಾಲ್ಕನೇ ಬಾರಿಗೆ. ನನಗೆ ಇಂದಿಗೂ ಅನಿಸುತ್ತಿರುವುದು ಅವಳು ನಿಜ ಹೇಳುತ್ತಿಲ್ಲ. ಇಷ್ಟು ಬಾರಿಯೂ ಅವಳು ಹೇಳಿದ್ದು ಸುಳ್ಳೇ ಎಂದು ಪದೇ ಪದೇ ಅನಿಸಿದರೂ , ಹೇಳಲಾಗುತ್ತದೆಯೇ..? ಆದರೆ ಇವತ್ತು ಕೇಳಬೇಕು, ನಿಜ ಹೊರಗೆಡವಲೇ ಬೇಕು, ಕುಸುಮಜ್ಜಿ ಮನಸಿನಲ್ಲಿಯೇ ಮಾತಾಡಿಕೊಂಡಳು. ಕುಸುಮಜ್ಜಿ ಔಷದಿ ಕೊಡುವುದು ಭಾನುವಾರ ಮತ್ತು ಗುರುವಾರ ಮಾತ್ರ. ಆ ಎರಡು ದಿನ ಭಾವಿಕೈ ಊರಿನ ಬಸ್ಸಿಗೆ ರಶ್ಯೋ ರಶ್ಯು. ಇತ್ತೀಚೆಗೆ ಆ ಎರಡು ದಿನ ಭಾವಿಕೈ ಊರಿನ ಬಾಗಿಲಿಗೆ ನಾಲ್ಕಾರು ಕಾರುಗಳೂ ಬಂದು ನಿಂತಿರುತ್ತವೆ. ಒಟ್ಟಾರೆ ಕುಸುಮಜ್ಜಿಯ ಬೇರಿನ ಔಷದಿಯ ಮಹಿಮೆ ಸಾಕಷ್ಟು ಹರಡಿದೆ ಶಿರಸಿ ಸಿದ್ದಾಪುರ ಸೀಮೆಯಲ್ಲೆಲ್ಲಾ. ಕುಸುಮಜ್ಜಿಯ ಬಳಿ ಒಂದೆರಡು ನಮೂನೆ ಔಷದಿಗೆ ಬರುವುದಿಲ್ಲ, ಮಕ್ಕಳಾಗದವರು, ಮುಟ್ಟಿನ ನೋವಿನವರು, ಮಗುವಿಗೆ ಮಾತು ಬರಲಿಲ್ಲ ಎಂದು ಬರುವವರು, ಕಜ್ಜಿ ಇನ್ನಿತರ ಚರ್ಮ ವ್ಯಾಧಿಯವರು, ಊಟ ಸೇರದವರು, ತೆಳ್ಳಗಾಗಲು ಬಯಸುವವರು, ದಪ್ಪ ಆಗಬೇಕೆಂದವರು, ರಕ್ತಹೀನತೆಯವರು, ಒಂದೇ ಎರಡೇ ಯಾವದೇ ಕಾಯಿಲೆಯಿದ್ದರೂ ಕುಸುಮಜ್ಜಿಯ ಬಳಿ ಬಂದರೆ ಮೂರು ಬೇರು ತಯಾರಿರುತ್ತಿತ್ತು. ಒಂದು ಬೇರು ಕೆಂಪು ದಾರದಲ್ಲಿ ಕಟ್ಟಿಸಿಕೊಂಡು ಕುತ್ತಿಗೆಗೆಂದು, ಇನ್ನೊಂದು ಲಿಂಬೆಹುಳಿಯಲ್ಲಿ ತೇಯ್ದು ನೆಕ್ಕಲೆಂದು, ಮತ್ತೊಂದು ನೀರಿನಲ್ಲಿ ತೇಯ್ದು ಕುಡಿಯಲೆಂದು. ಆಶ್ಚರ್ಯವೆಂದರೆ ಎಲ್ಲಾ ರೋಗಕ್ಕೂ ಕುತ್ತಿಗೆಗೆ ಕಟ್ಟುವ ಬೇರು ಹೆಚ್ಚು ಕಡಿಮೆ ಒಂದೇ ನಮೂನೆ ಇರುತ್ತಿತ್ತು. ಲಿಂಬೆಹುಳಿಯಲ್ಲಿ ತೇಯ್ದು ನೆಕ್ಕುವ ಬೇರು ಬಹುಶಃ ಬೇರೆ ಬೇರೆ ರೋಗಕ್ಕೆ ಬೇರೆ ಬೇರೆಯದಿರಬಹುದು. ಯಾರೂ ಆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಕುಸುಮಜ್ಜಿಯ ಬಳಿ ಬಂದವರು ಎಲ್ಲರೂ ಒಂದು ಸಮಾಧಾನದಲ್ಲಿ ತೆರಳುತ್ತಿದ್ದರು. ಬಹುತೇಕ ಜನರ ಆರೋಗ್ಯದ ಸಮಸೈಗಳು ಅವಳ ಬಳಿ ಪರಿಹರಿಸಲ್ಪಡುತ್ತಿತ್ತು.ಹೀಗಾಗಿ ಕುಸುಮಜ್ಜಿಯ ಖ್ಯಾತಿ ದಿನೇ ದಿನೇ ಹೆಚ್ಚಾಗುತ್ತಾ ಹೆಚ್ಚಾಗುತ್ತಾ, ಆ ಸೀಮೆಯಲ್ಲಿ ಯಾರಿಗೇ ಏನೇ ಆದರೂ ಒಂದು ಸರ್ತಿ ಭಾವಿಕೈ ಕುಸುಮಜ್ಜಿ ಹತ್ತಿರ ಹೋಗಿ ಬೇರು ಕಟ್ಟಿಸ್ಕೋ ಬಾ, ಎಲ್ಲಾ ಸರಿ ಹೋಗುತ್ತೆ ಎಂದು ಹೇಳುವಷ್ಟರ ಮಟ್ಟಿಗೆ ಬೆಳೆದಿತ್ತು.

ಕುಸುಮಜ್ಜಿಯ ಬಳಿಗೆ ಔಷಧಿಗೆ ಹೋಗುವವರಲ್ಲಿ ಅತ್ಯಂತ ನಾಚಿಕೆಪಟ್ಟುಕೊಳ್ಳುತ್ತಿದ್ದುದು ಹೆಣ್ಣುಮಕ್ಕಳು. ಯಾಕೆಂದರೆ ಕುಸುಮಜ್ಜಿ ಅಲ್ಲೇ ಜಗುಲಿ ಮೇಲೆ ಕುಳಿತು ಅವರ ಕಥೆ ಕೇಳಿದ ನಂತರ ಬೇರು ಕೊಡುತ್ತಿದ್ದಳು. ಮುಟ್ಟಿನ ನೋವು ಅಂತ ತೀರಾ ಸಣ್ಣಕೆ ಪಿಸುಗುಟ್ಟಿದ್ರೂ ಸಹ, ಕುಸುಮಜ್ಜಿ ದೊಡ್ಡದಾಗಿ ಓಹೋ, ರಾಶಿ ರಕ್ತ ಹೋಗ್ತಾ ಮತ್ತೆ ..ಎಂದು ಏರು ಧ್ವನಿಯಲ್ಲಿ ಕೇಳಿ , ಹೊರಗೆ ಪಡಿಮಾಡಿನಲ್ಲಿ ಕುಳಿತಿರುವ ಇತರರಿಗೆ ಅದು ಕೇಳಿಸುವಂತೆ ಮಾಡಿ, ಬೇರು ಕಟ್ಟಿಕೊಡುತ್ತಿದ್ದಳು. ಹೊರಗೆ ಕುಳಿತಿರುವವರೆಲ್ಲರಿಗೂ ತಮ್ಮ ಗುಟ್ಟೆಲ್ಲಾ ತಿಳಿದುಹೋಯಿತೆಂಬ ಮುಜುಗರದಲ್ಲಿ ಆ ಹೆಣ್ಣುಮಕ್ಕಳು ದೇಹ ಹಿಡಿ ಮಾಡಿಕೊಂಡು ,ಹೊರಬೀಳುತ್ತಿದ್ದರು. ಔಷಧಿ ಕೇಳಿ ಬಂದವರಿಗ್ಯಾರಿಗೂ ಕುಸುಮಜ್ಜಿ ಮೊದಲಿನಿಂಲೂ ಇಂತಿಷ್ಟೇ ಕೊಡಿ ಎಂದು ಬಾಯಿಬಿಟ್ಟು ಹೇಳಿದವಳಲ್ಲ, ಒಂದು ತೆಂಗಿನಕಾಯಿಯೊಂದಿಗೆ ಹತ್ತು ರೂಪಾಯಿಯಿಂದ ಹಿಡಿದು ನೂರು ರೂಪಾಯಿಯವರೆಗೂ ಅವರವರ ಯಥಾನುಶಕ್ತಿಗನುಸಾರವಾಗಿ ಇಟ್ಟು ಕೊಡುತ್ತಿದ್ದರು. ಇವಳು ನಕ್ಕು ಬೇರಿನ ದಾರ ಲಡ್ಡಾದರೆ ಮತ್ತೆ ಕಟ್ಟಿಸಿಕೊಳ್ಳಲು ಬಂದುಬಿಡಿ ಎಂದು ಅವರನ್ನು ಕಳಿಸಿಕೊಡುತ್ತಿದ್ದಳು.

ಅಂದು ಗುರುವಾರ. ಕುಸುಮಜ್ಜಿ ಹೊರಗೆ ಬಂದು ನೋಡಿದಳು. ಪಡಿಮಾಡಿನಲ್ಲಿರುವ ಮರದ ಬೆಂಚಿನ ಮೇಲೆ ಹದಿನೈದಕ್ಕೂ ಹೆಚ್ಚು ಜನರಿದ್ದಾರೆ. ಕುಸುಮಜ್ಜಿ ಅವಳಿಗಾಗಿ ಹುಡುಕಿದಳು. ನಸುಗೆಂಪು ಬಣ್ಣದ ಕಾಟನ್ ಸೀರೆಗೆ ಎಳೆಲಿಂಬೆ ಬಣ್ಣದ ಅಂಚಿನ ಸೀರೆಯುಟ್ಟು ಅವಳು ಡೇರೆಹೂವಿನ ಗಿಡದತ್ತ ಸುಳಿಯುತ್ತಿದ್ದಾಳೆ. ಅಂದರೆ ಅವಳು ಬೇಕೆಂತಲೇ ಸರದಿ ತಪ್ಪಿಸಿದ್ದಾಳೆ. ಅಂದರೆ ಅವಳಿಗೆ ತಾನೊಬ್ಬಳೇ ಇದ್ದಾಗ ಮಾತಾಡುವ ಉದ್ದೇಶವಿರುವಂತಿದೆ. ಕುಸುಮಜ್ಜಿ ಜಗುಲಿಯ ಮೇಲೆ ಕುಳಿತಿದ್ದೇ ತಡ ಒಬ್ಬೊಬ್ಬರಾಗಿ ಒಳಗೆ ಬಂದರು. ಅಲ್ಲಿ ಡಾಕ್ಟರ್ ಮನೆಯಂತೆ ಹೆಸರು ಹಚ್ಚಿಸುವ ಪದ್ದತಿಯೂ ಇಲ್ಲ, ನಂಬರ್ ಕೊಡುವ ಪದ್ದತಿಯೂ ಇಲ್ಲ. ಬಸುರಿಯೋ, ಬಾಳಂತಿಯೋ ಬಂದರೆ ಅವರವರೇ ಹೊಂದಾಣಿಕೆ ಮಾಡಿಕೊಂಡು , ಒಳಗೆ ಯಾರು ಹೋಗುವುದೆಂದು ತೀರ್ಮಾನಿಸುತ್ತಿದ್ದರು. ನಾ ಮೊದಲು ತಾ ಮೊದಲು ಎಂದಲ್ಲಿ ಗಲಾಟೆಯಾದ ದಾಖಲೆಯೇ ಇರಲಿಲ್ಲ. ಜನ ಒಬ್ಬೊಬ್ಬರಾಗಿ ಕರಗಿದಂತೆ , ತಂದಿಟ್ಟುಕೊಂಡಿದ್ದ ಬೇರೂ ಸಹ ಖಾಲಿಯಾಗತೊಡಗಿತು. ಕುಸುಮಜ್ಜಿ ಅವಳಿಗಾಗಿ ಕಾಯುತ್ತಿದ್ದಳು. ಸೆರಗಿಗೆ ತಾಗಿದ್ದ ಡೇರೆಯ ಪರಾಗಕುಸುಮವನ್ನು ಉದುರಿಸಿಕೊಳ್ಳುತ್ತಾ ಅಂದಿನ ಮಟ್ಟಿಗೆ ಕೊನೆಯವಳಾಗಿ ಅಂತೂ ಅವಳು ಒಳಗೆ ಬಂದಳು. ಕುಸುಮಜ್ಜಿಗೆ ಸರಕ್ಕನೆ ಅವಳ ಹೆಸರು ನೆನಪಾಗಲಿಲ್ಲ. ಸಾಮಾನ್ಯವಾಗಿ ಒಂದೆರೆಡು ಬಾರಿ ಬಂದು ಹೋದವರ ಹೆಸರು ಅವಳಿಗೆ ನೆನಪಿರುತ್ತದೆ. ಆದರೆ ಇವಳ ಹೆಸರು ನೆನಪಿಲ್ಲ. ಒಂದು ನಲವತ್ತು ವರ್ಷ ಇರಬಹುದು, ಮೂಗಿಗೆ ಒಂದು ರಿಂಗ್, ಕಿವಿಗೂ ಒಂದು ರಿಂಗ್, ವಿಚಿತ್ರ ಎಂದರೆ ಮೂರೆಳೆ ಕರಿಮಣಿ, ಹೋದ ಬಾರಿ ಬಂದಾಗ ಕುತ್ತಿಗೆಗೆ ಕಟ್ಟಿದ್ದ ಬೇರು ಹಾಗೇ ಇದೆ. ಕೈಗೆ ಹಸಿರು ಬಳೆ, ಕಪ್ಪಗಾಗಿರೋ ಬೆಳ್ಳಿ ಚೈನು. ಅವಳು ನಕ್ಕು ಕುಳಿತುಕೊಂಡಳು. ಕುಸುಮಜ್ಜಿಯೇ ಕೇಳಿದಳು, . ಹೆಸರೇನು ಹೇಳಿದ್ದೆ..?

ಪಾರ್ವತಿ

ಕಳೆದ ಬಾರಿ ಊಟ ಸೇರಲ್ಲ ಅಂತ ಅಲ್ವೇ ಬೇರಿಗೆ ಬಂದಿದ್ದು..?

ಹ, ಹೌದು.. ಈಗ ಸೇರ್ತಾ ಇದೆ…

ಮತ್ತೆ..ಅದಕ್ಕೂ ಮೊದಲು ಬಂದಾಗ ತಲೆನೋವು ಅಂದ ಹಾಗಿತ್ತು..

ಅದೂ ಕೂಡ ಕಡಿಮೆಯಾಗಿದೆ ಈಗ.

ಹು..ಮತ್ತೆ ಈಗ…?

ಈಗ…

ಪಾರ್ವತಿ ಆ ಕಡೆ ಈ ಕಡೆ ನೋಡಿದಳು..

ಯಾರೂ ಇಲ್ಲ, ನೀನೇ ಕಡೆಯವಳು.. ಹೇಳು ಮಾರಾಯ್ತಿ..

ಅದೂ.. ಅದೂ….

ಮುಟ್ಟಿನ ತೊಂದರೆನಾ..?

ಊಹೂ…ಅದಲ್ಲ.

ಕುಸುಮಜ್ಜಿಗೆ ಒಂದು ಕ್ಷಣ ಭಗ್ ಎಂದು ತಲೆಯಲ್ಲಿ ಬೆಂಕಿಕಿಡಿ ಹೊತ್ತಿದ ಹಾಗಾಯ್ತು. ಮಧ್ಯಾಹ್ನ ಒಂದುವರೆಯೂ ಆಗಿದ್ದರಿಂದ ಹಸಿವೆಯೂ ಕೆಣಕಿತ್ತು. ಮೊದಲೆಲ್ಲಾ ಇದ್ದ ಸಹನೆ ಇತ್ತೀಚೆಗೆ ಕೈ ಕೊಡಲು ಆರಂಭಿಸಿತ್ತು. ಏನು ಹೇಳಬೇಕೆಂದು ತೋಚಲಿಲ್ಲ. ಇಲ್ಲಿ ಕೇಳು ಪಾರ್ವತಿ, ನಿನಗೆ ಹೇಳಲು ತೊಂದರೆಯಾದರೆ ಮುಂದಿನ ಬಾರಿ ಬರುವಾಗ ನಿನ್ನ ಗಂಡನನ್ನು ಜೊತೆಗೆ ಕರೆದುಕೊಂಡು ಬಾ, ಅವನು ಹೇಳಲಿ ಎಂದು ಏಳಲು ಹಣಕಿದಳು,.
ಆಗ ಪಾರ್ವತಿ , ಪಟ್ಟನೆ ಎಚ್ಚರಾದವಳಂತೆ , ಇಲ್ಲ ಕುಸುಮಜ್ಜಿ, ಇದನ್ನು ನಾನೇ ಹೇಳಬೇಕು. ಎಂದು ದೀನ ಸ್ವರದಲ್ಲಿ ಬೇಡಿಕೊಳ್ಳುತ್ತ , ನೆಟ್ಟಗೆ ಕುಳಿತಳು.

ಕುಸುಮಜ್ಜಿ ಮತ್ತೊಮ್ಮೆ ಅಪ್ಪಳಿಸಿ ಕುಳಿತು, ಏನು ಎಂಬಂತೆ ಪಾರ್ವತಿಯನ್ನೇ ದಿಟ್ಟಿಸಿದಳು. ತಡಬರಿಸುತ್ತಾ ಪಾರ್ವತಿ, ಹೇಗಾದರೂ ಮಾಡಿ ನನ್ನ ಗಂಡ ನನ್ನ ಹತ್ತಿರ ಸುಳಿಯದಂತೆ ಏನಾದರೂ ಔಷಧಿಯಿದ್ದರೆ ಹೇಳು ಕುಸುಮಜ್ಜಿ. ನನಗದು ಭಯಂಕರ ಹಿಂಸೆ. ನಾನದರಿಂದ ತಪ್ಪಿಸಿಕೊಂಡು ಎಲ್ಲಿಗೆ ಹೋಗಲಿ..? ನನಗದು ಬೇಡ.. ದಯವಿಟ್ಟು ಏನಾದರೂ ಹೇಳು..ಪಾರ್ವತಿ ಬಡಬಡಿಸುತ್ತಲೇ ಇದ್ದಳು..

ಕುಸುಮಜ್ಜಿ ಒಂದೂ ಮಾತಾಡಲಿಲ್ಲ. ಔಷಧಿಯನ್ನು ಯಾರಿಗೆ ಕೊಡುವುದು.? ಇವಳಿಗೋ? ಇವಳ ಗಂಡನಿಗೋ? ಇದಕ್ಕೆಲ್ಲ ನನ್ನತ್ರ ಔಷಧಿ ಇಲ್ಲ ಎಂದವಳೇ ಗುಡಗುಡು ಎದ್ದು ನಡೆದೇಬಿಟ್ಟಳು. ಈ ಪಾರ್ವತಿಗೆ ತಲೆ ಕೆಟ್ಟಿದೆ ಎಂದು ಬೈದುಕೊಂಡು ಕೈಕಾಲು ತೊಳೆಯಲು ಬಚ್ಚಲಿಗೆ ಹೋದವಳು, ಅಲ್ಲಿಂದಲೇ ಹಿತ್ತಲಿನ ಬಾಗಿಲಿನಿಂದ ಹೊರಗೆ ಬಂದು ಇವಳು ಹೋದ್ಲೋ ಇಲ್ವೋ ನೋಡಿಕೊಂಡು ಬಂದು ಅಡುಗೆಮನೆಯಲ್ಲಿ ಕುಳಿತು ದೀರ್ಘ ಉಸಿರು ಬಿಟ್ಟಳು.

ಪಾರ್ವತಿ ಹೇಳಬೇಕಾದ್ದೇನೋ ಹೇಳಿದ್ದಳು. ಆದರೆ ಅರ್ಧವನ್ನಷ್ಟೇ ಹೇಳಿದ್ದಳು. ಅವಳಿಗೆ ಕುಸುಮಜ್ಜಿಯ ಮೇಲೆ ತುಸು ಕೋಪವೂ ಬಂದಿತ್ತು. ಯಾಕೆ ತಾನು ಹಾಗೆ ಹೇಳುತ್ತಿದ್ದೇನೆ ಎಂದು ಪೂರ್ತಿಯಾದರೂ ಕೇಳಬಹುದಿತ್ತು. ಮೊದಲಿನಿಂದಲೂ ಹೀಗೆ ಇತ್ತೇ ಎಂದಾದರೂ ಕೇಳಬಹುದಿತ್ತು., ಏನನ್ನೂ ಕೇಳಲಿಲ್ಲ. ದಡಬಡ ಎದ್ದೋಗಿಬಿಟ್ರು. ಯಾರ ಬಳಿಯೂ ಹೇಳಲಾಗದೇ ಇದ್ದುದನ್ನು ಇಲ್ಲಿ ಬಂದು ಹೇಳಿದ್ದೆ, ಛೆ . ಏನೂ ಉಪಯೋಗವಾಗಲಿಲ್ಲ. ಯಾಕೋ ಕಣ್ಣಂಚಿನಲ್ಲಿ ನೀರು ಬಂದಂತಾಯಿತು. ಬಸ್ ಸ್ಟಾಪಿಗೆ ಆತುಕೊಂಡು ಬೆಳೆದಿದ್ದ ಕವಳಿ ಮಟ್ಟಿಯೊಳಗಿಂದ ಕವಳಿಹಣ್ಣುಗಳನ್ನು ಕಂಡು ಚಿತ್ತಚಂಚಲವಾದರೂ ಕೂಡ, ಕುಸುಮಜ್ಜಿಯೇ ಮತ್ತೆ ನೆನಪಾಗಿ ಭಾವಿಕೈ ಬಸ್ಸಿಗೆ ಕಾಯತೊಡಗಿದಳು.

ಇತ್ತ ಕುಸುಮಜ್ಜಿಗೆ ಪಾರ್ವತಿಯ ಸಮಸ್ಯೆ ಕೇಳಿದಾಗಿನಿಂದ ಏನೋ ಸಮಾಧಾನವಿಲ್ಲ. ಮಲಗಿದರೂ ನಿದ್ರೆ ಸುಳಿಯುತ್ತಿಲ್ಲ.ತಾನ್ಯಾಕೆ ಅವಳ ಕಥೆಯನ್ನು ಪೂರ್ಣ ಕೇಳಲಿಲ್ಲ,. ತನಗೇಕೆ ಆ ವ್ಯವಧಾನ ಇರಲಿಲ್ಲ. ತನ್ನದೇ ಸಮಸೈಯನ್ನು ಅವಳು ಹೇಗೆ ಬಡಬಡಿಸಿದಳು.? ತಾನೂ ಹೀಗೇ ಅಲ್ಲವೇ ಬರೋಬ್ಬರಿ 20 ವರ್ಷಗಳ ಕಾಲ ಅನುಭವಿಸಿದ್ದು. ಗಂಡ ದೂರವೇ ಇರಲಿ ಎಂದು ತಾನು ಮಾಡಿದ ನಾಟಕ ಒಂದೆರೆಡು ನಮನಿಯದ್ದೇ..? ಊರವರಿಗೆಲ್ಲಾ ಔಷಧಿ ಕೊಡುತ್ತಿದ್ದ ಅಜ್ಜಿಯ ಮುಂದೆ ತಾನೂ ಸಹ ಹೀಗೇ ಅತ್ತಿದ್ದೆನಲ್ಲವೇ..?

ತಲೆತಲಾಂತರದಿಂದ ಬಂದ ಎಲ್ಲಾ ಔಷಧಿಗಳ ರಹಸ್ಯವನ್ನು ಅಜ್ಜಿ ನನಗೆ ದಾಟಿಸುವಾಗ ನನ್ನ ಸಮಸ್ಯೆಗೆ ಪರಿಹಾರವನ್ನೂ ಹೇಳಿದ್ದಳು,.ಈಗ ಅದೆಲ್ಲಾ ಕಾಲಗರ್ಭದಲ್ಲಿ ಹೂತುಹೋಗಿದೆ. ಅದೆಲ್ಲವನ್ನೂ ಮರೆತು ನಾನೀಗ ಹದಿನಾರು ಅಂಕಣದ ಮನೆಯಲ್ಲಿ ಒಬ್ಬಂಟಿಯಾಗಿ ಬದುಕುತ್ತಿದ್ದೇನೆ. ಈಗ ಇವಳೆಲ್ಲಿಂದ ಬಂದಳು ಪಾರ್ವತಿ ಧುತ್ತನೇ ಎದುರಿಗೆ,? ಕಾಲು ನಡುಗುತ್ತಿದೆ ಅವಳಾಡಿದ ಮಾತುಗಳು ನೆನಪಾದರೆ,.. ಕುಸುಮಜ್ಜಿ ಕಂಪಿಸುತ್ತಿದ್ದಳು ಮಲಗಿದಲ್ಲಿಯೇ.

ಕುಸುಮಜ್ಜಿಗೆ ಮದುವೆಯಾದಾಗ ಹನ್ನೆರಡೋ, ಹದಿಮೂರು ವಯಸ್ಸು. ರಾತ್ರಿ ಏಕೆ ಆಗುತ್ತದೆ ? ಎಂಬಷ್ಟರ ಮಟ್ಟಿಗೆ ಹೇಸಿಗೆ ಹುಟ್ಟಿತ್ತು ಕುಸುಮಜ್ಜಿಗೆ ಗಂಡನ ಮೇಲೆ ಕೇವಲ ಆರು ತಿಂಗಳಿನಲ್ಲಿ. ಯಾರಾದರೂ ನೆಂಟರು ಮನೆಗೆ ಬಂದರೆ ಸಾಕು, ಅವರ ಜೊತೆ ಹೋಗಿ ಸುದ್ದಿ ಹೇಳುತ್ತಾ ಅವರ ಜೊತೆಯೇ ಮಲಗುತ್ತಿದ್ದಳು. ತಿಂಗಳಲ್ಲಿ ನಾಲ್ಕು ದಿನ ರಜೆ ಎಂದು, ನಾಲ್ಕು ದಿನ ತಲೆನೋವೆಂದು, ನಾಲ್ಕು ದಿನ ಹೊಟ್ಟೆಯಲ್ಲಿ ತ್ರಾಸೆಂದು , ಮತ್ತೊಂದೆರಡು ದಿನ ಸುಸ್ತೆಂದು ತಳ್ಳಿದರೂ , ಒಂದೆರೆಡು ದಿನ ಗಂಡನ ಜೊತೆ ಮಲಗುವುದು ಅನಿವಾರ್ಯವಾಗಿಬಿಡುತ್ತಿತ್ತು. ಮೈಯೆಲ್ಲಾ ಮುಳ್ಳು ಮಾಡಿಕೊಂಡು ಬೇಗ ಮುಗಿದರೆ ಸಾಕು ಎಂಬ ಧ್ಯಾನದಲ್ಲಿ ಆ ಕ್ಷಣಗಳನ್ನು ಆಕೆ ಅಕ್ಷರಶಃ ನರಕದಂತೆ ಕಳೆಯುತ್ತಿದ್ದಳು. ಹೇಗೆ ಇದರಿಂದ ತಪ್ಪಿಸಿಕೊಳ್ಳುವುದು. ? ಏನು ಮಾಡಿದರೂ ಉಪಾಯ ಗೊತ್ತಾಗದಿದ್ದಾಗ , ಮನೆಯಲ್ಲಿಯೇ ನಾಟಿ ಔಷಧಿ ಕೊಡುತ್ತಿದ್ದ ಆಯಿಯ ಅಮ್ಮ ನೆನಪಾಗಿದ್ದಳು. ಒಂದೆರೆಡು ಬಾರಿ ಹೋಗಿ ಸುಳ್ಳೆಪಳ್ಳೆ ಹೊಟ್ಟೆನೋವೆಂದು ಹೇಳಿ ಬೇರು ತಂದ ಪರಿಗೆ , ಕುಸುಮ ನಿಜ ಹೇಳುತ್ತಿಲ್ಲವೆಂದು ಆಯಿಯ ಅಮ್ಮನಿಗೆ ತಿಳಿದು ಹೋಗಿತ್ತು. ಇವಳಿಗೆ ಹೇಳಲಾಗುವುದಿಲ್ಲ, ಅವಳಿಗೆ ತಿಳಿದುಕೊಳ್ಳಲಾಗುತ್ತಿಲ್ಲ. ಕಡೆಗೂ ಕುಸುಮಜ್ಜಿಗೆ ಒಂದು ಉಪಾಯ ಹೊಳೆದಿತ್ತು. ನನಗೆ ಔಷಧಿ ಸಸ್ಯಗಳಲ್ಲಿ ವಿಪರೀತ ನಂಬುಗೆ. ನನಗೂ ನಾಟಿ ಔಷಧಿಯ ಬಗ್ಗೆ ಕಲಿಸಿಕೊಡು ಎಂದು ಆಯಿಯ ಅಮ್ಮ ಭಾಗಜ್ಜಿಗೆ ದುಂಬಾಲು ಬಿದ್ದಳು. ಶುರುವಾಯಿತು ಪಾಠ. ಆ ನೆಪದಲ್ಲಿ ಕುಸುಮ ಮನೆ ಬಿಟ್ಟು ಬಂದು ಇಲ್ಲಿಯೇ ಉಳಿಯುತ್ತೇನೆ ಎಂದಾಗ ಭಾಗಜ್ಜಿ ಗೆ ತುಸು ಗಾಬರಿಯೂ, ಸಂದೇಹವೂ ಉಂಟಾದರೂ ಅದನ್ನು ತೋರ್ಗೊಟ್ಟಿರಲಿಲ್ಲ.

ಒಂದು ಮುಸ್ಸಂಜೆ ದೇವರಿಗೆ ದೀಪ ಹಚ್ಚಿ, ದೇವರ ಒಳದಲ್ಲಿ ಶ್ಲೋಕ ಹೇಳುತ್ತಿದ್ದ ಭಾಗಜ್ಜಿ ಯ ಬಳಿ ಕುಳಿತ ಬಾಲೆ ಕುಸುಮ, ಕಣ್ಣಲ್ಲಿ ನೀರು ತುಂಬಿಕೊಂಡು ,

ಅಜ್ಜಿ ನಿನ್ನಲ್ಲಿ ಒಂದು ವಿಷಯ ಹೇಳಬೇಕು.

ಹೇಳು , ಕೂಸೆ

ನನ್ನನ್ನು ವಾಪಸ್ ಕಳಿಸಿಕೊಡಬೇಡಿ ಗಂಡನ ಮನೆಗೆ ದಯವಿಟ್ಟು.

ಮಗಾ , ಹಾಗೆಲ್ಲಾ ಹೇಳಬಾರದು . ಅದು ನಿನ್ನ ಮನೆ ಈಗ.

ಅಜ್ಜಿ , ಅದು ಹಾಗಲ್ಲ…

ಹಾಗೂ ಅಲ್ಲ, ಹೀಗೂ ಅಲ್ಲ, ನಡಿ ಮಲಗು.

ಅಜ್ಜಿ, ಒಂದು ಔಷಧಿ ಹೇಳು ಹಾಗಾದರೆ..

ಎಂತದು

ಗಂಡ ನನ್ನಿಂದ ದೂರ ಇರಬೇಕು, ಅಂತ ಔಷಧಿ ಯಾವುದಾದರೂ ಇದ್ದರೆ ಹೇಳು.

ಕುಸುಮಾ .. ಮಳ್ಳೇ ನಿನಗೆ.. ಪೂರ್ತಿ ಹುಚ್ಚೇ ಹಿಡಿದಿದೆಯೇ..?

ಅಜ್ಜಿ .. ನನ್ನಿಂದ ಅದು ಸಾಧ್ಯವಿಲ್ಲ,, ಹಿಂಸೆ ಅದು

ಮದುವೆಯಾಗಿ 16 ನೇ ದಿನಕ್ಕೆ ಗಂಡನನ್ನು ಕಳೆದುಕೊಂಡಿದ್ದ ಭಾಗಜ್ಜಿಗೆ ಗಂಡ ಎಂದರೇನೆಂಬುದೇ ಮರೆತಿರುವಾಗ, ದತ್ತು ತೆಗೆದುಕೊಂಡ ಹೆಣ್ಣುಮಗಳಿಂದ ಮಡಿಲಿಗೆ ಬಂದಿದ್ದ ಮೊಮ್ಮಗಳು ಕೇಳುತ್ತಿರುವ ಪ್ರಶ್ನೆಗೆ ಹೊಟ್ಟೆ ಕಿವುಚಿದಂತಾಗುತ್ತಿದೆ. ಏನು ಕೇಳಲಿ. ಏನು ಹೇಳಲಿ? ಮಗು ಎಷ್ಟು ನೊಂದಿದೆಯೋ.? ಏನು ಮಾಡುವುದು, ಕೆಂಡಕ್ಕೆ ಹಾಕಿದ ಸಾಸಿವೆಯಂತಾಗಿದೆ ಮನಸ್ಸು. ಭಾಗಜ್ಜಿ ದೇವರ ಒಳದಲ್ಲಿ ಮಲಗಿದ್ದ ಕುಸುಮಳ ಹಣೆ ಸವರಿ ಅಂಕಣ ನೋಡುತ್ತಾ ಮಲಗುವಷ್ಟರಲ್ಲಿ ಬೆಳಗಿನ ಹಕ್ಕಿ ಕೂಗತೊಡಗಿತ್ತು.

ಇತ್ತೀಚೆಗೆ ಅಜ್ಜಿ ಮೊಮ್ಮಗಳ ನಡುವೆ ಹೆಚ್ಚಿನ ಮಾತುಕಥೆಯಿಲ್ಲ. ಯಾರಾದರೂ ಔಷಧಿ ಒಯ್ಯಲು ಬಂದರೆ ಅವರ ಕಥೆ ಕೇಳುವುದು, ಅವರಿಗೆ ಅಜ್ಜಿ ಯಾವ ಬೇರು ಕೊಡುತ್ತಿದ್ದಾಳೆಂದು ಮೊಮ್ಮಗಳು ಗಮನಿಸುವುದು, ನಂತರ ಪಾಠ ಹೀಗೇ ದಿನ ಕಳೆದುಹೋಗುತ್ತಿದೆ.

ಆ ದಿನ ಭೂಮಿ ಹುಣ್ಣಿಮೆ. ಬಾ ತೋಟಕ್ಕೆ ಹೋಗೋಣ ಎಂದು ಭಾಗಜ್ಜಿಯೇ ಮೊಮ್ಮಗಳನ್ನು ಕರೆದೊಯ್ದಿದ್ದಾಳೆ. ಭೂಮಿ ಪೂಜೆ ಆದ ನಂತರ ,ಬಾ ಇಲ್ಲೇ ಕೆಳಗಿನ ತೋಟದ ಹೊಂಡದ ಬಳಿ ಹೋಗೋಣ. ಎನ್ನುತ್ತಾ ಮೊಮ್ಮಗಳನ್ನು ಕರೆದೊಯ್ದಿದ್ದಾಳೆ. ಬಾಗಜ್ಜಿ ಯ ಸೆರಗು ಹಿಡಿದು ಸಾಗಿದ ಮೊಮ್ಮಗಳಿಗೆ ಬಾಗಜ್ಜಿ , ಹೊಂಡದ ಬಳಿ ಹೋದ ಬಳಿಕ ಹೇಳಿದ್ದೇನೆಂದರೆ. ,

ನೋಡು ಕುಸುಮಾ , ಐವತ್ತು ವರ್ಷದಿಂದ ನಾನು ನಾಟಿಔಷಧಿ ಕೊಟ್ಟಿದ್ದರೂ ಈವರೆಗೆ ಯಾರೂ ನನ್ನ ಬಳಿ ಗಂಡ ಹತ್ತಿರ ಬರದಿರಲು ಏನಾದರೂ ಔಷಧಿ ಕೊಡಿ ಎಂದು ಕೇಳಿದ್ದಿಲ್ಲ. ಆದರೆ ನೀನು ನನ್ನ ಜೀವಕ್ಕಂಟಿದವಳು , ಇಂತಹ ಒಂದು ಔಷಧಿ ಇದೆಯೇ ಎಂದು ಕೇಳುವಾಗ, ಆ ನಮನಿ ಔಷಧಿ ಇಲ್ಲ ಎಂದು ಹೇಳಲು ಮನಸ್ಸೊಪ್ಪುತ್ತಿಲ್ಲ. ಆದರೆ ಈಗಲೂ ನಾನು ಹೇಳುವುದಿಷ್ಟೇ, ಇದನ್ನು ನಿನ್ನ ಬದುಕಿನಲ್ಲಿ ಪ್ರಯೋಗಿಸಿಕೊಳ್ಳುವ ಮೊದಲು ಹತ್ತು ಬಾರಿ ಯೋಚಿಸು. ಮುಂದೆ ನೀನು ಔಷಧಿ ನೀಡುವ ಕಾಲಕ್ಕೆ ಸಹ , ಯಾರಾದರೂ ತೀರಾ ಅನಿವಾರ್ಯ ಪರಿಸ್ಥಿತಿಯಲ್ಲಿ ಇದ್ದಾರೆ ಎಂದು ಅನಿಸಿದರೆ ಮಾತ್ರ ಈ ಬೇರನ್ನು ಕೊಡಬೇಕು .

ಭಾಗಜ್ಜಿಯ ಕಣ್ಣಲ್ಲಿ ಧಳಧಳ ನೀರಿಳಿಯುತ್ತಿದೆ, . ಕಣ್ಣೀರು ಕೆನ್ನೆಗಿಳಿದ ವೇಗದಲ್ಲಿಯೇ ಅವಳು ಹೊಂಡ ಇಳಿದು ಅಲ್ಲಿ ತೇಲಾಡುತ್ತಿದ್ದ ಆಕಾಶಗಂಗೆಯ ನಮೂನೆಯಲ್ಲಿ ಬೆಳೆದಿದ್ದ ಬಳ್ಳಿಯೊಂದನ್ನು ಹರಿದುಕೊಂಡು ಮೇಲೆ ಬಂದಳು. ಇದು ನೋಡು ಆ ಗುಣವಿರುವ ಬಳ್ಳಿ, ಇದನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡು, ನಿತ್ಯ ರಾತ್ರಿ ಹಾಲಿನಲ್ಲಿ ಮೂರು ಚಿಟಿಕೆ ಬೆರೆಸಿ ನೀಡಿದರೆ ಕ್ರಮೇಣ ಗಂಡಸಿನ ಪುರುಷತ್ವವೇ ಹೊರಟುಹೋಗುತ್ತದೆ, . ಅವನಿಗೆ ಯಾವ ಲೈಂಗಿಕ ಆಸಕ್ತಿ, ಆಕಾಂಕ್ಷೆಗಳೂ ಉಳಿಯುವುದಿಲ್ಲ,. ಅವನು ಹೆಣ್ಣಿನ ಹತ್ತಿರ ಸುಳಿಯುವುದೂ ಇಲ್ಲ . ಎನ್ನುತ್ತಾ ಬಳ್ಳಿಯನ್ನು ಮೊಮ್ಮಗಳಿನ ಕೈಗಿತ್ತಿದ್ದಳು.

ಇದೆಲ್ಲಾ ಮರೆತುಹೋಗುವಂತಾಗಿದೆ ಕುಸುಮಜ್ಜಿಗೆ . ಅವಳ ಬದುಕಿನಲ್ಲಿ ಸ್ವತಃ ಅವಳ ಗಂಡನ ಮೇಲೆ ಆ ಬಳ್ಳಿಯನ್ನು ಪ್ರಯೋಗಿಸಿದ ನಂತರ ಅವಳ ಜೀವಮಾನದಲ್ಲಿ ಯಾರೂ ಸಹ ಈ ವಿಷಯವನ್ನು ಪ್ರಸ್ತಾಪಿಸಿರಲಿಲ್ಲ. ಇದೀಗ ಪಾರ್ವತಿ ಬಂದಿದ್ದಾಳೆ. ಏನು ಮಾಡಲಿ? ಏನು ಕೇಳಲಿ? ಮತ್ತೆ ಹುಡುಕಲೇ ಆ ಬಳ್ಳಿಯನ್ನು? ಸಾಸಿವೆ ಕಾಳು ಕೆಂಡಕ್ಕೆ ಪುನಃ ಬಿದ್ದಿದೆ. ಮನಸ್ಸು ಚಿಟಿಪಿಟಿ ಚಿಟಿಪಿಟಿ,. ಪಾರ್ವತಿ ಮತ್ತೆ ಬರದಿರಲಿ ತನ್ನ ಬಳಿ ಎಂದುಕೊಳ್ಳುತ್ತಲೇ , ಬೆಳಿಗ್ಗೆ ಬೇಗ ಎದ್ದು ಅಜ್ಜಿಮನೆಯ ಹೊಂಡದ ಬಳಿಯೊಮ್ಮೆ ಓಡಾಡಿಕೊಂಡು ಬರಬೇಕು ಎಂದು ನಿರ್ಣಯಿಸಿದಳು. ಅಂಕಣಕ್ಕೆ ಹಿಡಿದುಕೊಂಡು ಅರೆಬರೆ ಜೋತಾಡುತ್ತಿದ್ದ ಜೇಡರ ಬಲೆ, ದೇವರ ದೀಪದ ಮಂದ ಬೆಳಕಿನಲ್ಲಿ ಚೇಳಿನಂತೆ ಭಾಸವಾಗುತ್ತಿದ್ದರೂ ಕುಸುಮಜ್ಜಿ ಕೊಂಚವೂ ವಿಚಲಿತಗೊಳ್ಳದೇ ಕತ್ತಲೆಡೆಗೆ ಮುಖ ಮಾಡಿ ಮಲಗಿದಳು. ಪುನಾರವರ್ತನೆ ಗೊಳ್ಳುವ ಬೆಳಗು ನಿತ್ಯವೂ ಹೊಚ್ಚಹೊಸದೆಂಬ ಉತ್ಸಾಹದಲ್ಲಿಯೇ ತೆರೆದುಕೊಳ್ಳುವ ಪರಿಯನ್ನು ನೋಡಲು ಹೆಬ್ಬಾಗಿಲು ಕಾದಿತ್ತು.