Click here to Download MyLang App

ತಿರುವಿನಾಚೆಯ ಮನೆ - ಬರೆದವರು : ಕಾರ್ತಿಕ್ ಆರ್

ಇಪ್ಪತ್ತು ವರ್ಷಗಳ ನಂತರ ಊರಿಗೆ ಹೋಗಿ ಬರುವ ಉಮೇದಿನಲ್ಲಿದ್ದ ಅನಂತುವಿಗೆ, ಊರಿನಲ್ಲಿದ್ದ ತನ್ನ ಹುಟ್ಟಿದ ಮನೆ ಕೆಡವಿ, ಅಲ್ಲೊಂದು ಹೊಸ ಮನೆ ಕಟ್ಟಿದ್ದಾರೆಂಬ ಸಂಗತಿ ತಿಳಿದಾಗ ಹೇಳಿಕೊಳ್ಳಲಾಗದ ವೇದನೆಯಾಯಿತು. ಆನಂತರ ಅವನ ಬುದ್ದಿ ಮತ್ತು ಯೋಚನೆಗಳಿಗೆ ಕವಿದಿದ್ದ ಮಂಕು ಇನ್ನೂ ಇಳಿದಿರಲ್ಲಿಲ್ಲ. ತನಗೆ ಸಂಕಟವಾಗುತ್ತಿರುವುದು ತನ್ನ ಮನೆ ಇಲ್ಲವೆಂಬ ಕಾರಣಕ್ಕೋ, ಅಥವಾ ಅಷ್ಟು ದಿನದಿಂದ ಮಾಡಿಕೊಂಡಿದ್ದ ಊರು ನೋಡುವ ಯೋಚನೆಗೆ ಆ ಸುದ್ದಿಯಿಂದ ಹಿನ್ನೆಡೆ ಉಂಟಾಯಿತು ಎಂಬ ಕಾರಣಕ್ಕೋ ಎಂಬುದು ಅವನಿಗೂ ತಿಳಿಯಲಿಲ್ಲ. ಊರು, ಮನೆ, ಹಳೆ ನೆನಪು ಎಂದೆಲ್ಲ ಏನೇನೋ ಬಡಬಡಿಸುತ್ತಿದ್ದವನಿಗೆ, ಹೊರಡುವ ಎರಡು ದಿನಕ್ಕೆ ಮೊದಲು ಅಮ್ಮ, ‘ಹೋಗೋದಾದರೆ ಹೋಗು, ಆದರೆ ಅಲ್ಲಿ ಹೋಗಿ ನೋಡೋದಕ್ಕೆ,ಮಾಡೋದಕ್ಕೆ ಎಂತದೂ ಇಲ್ಲ ಮಾರಾಯ! ಹಳೇ ಮನೆ ಬೀಳಿಸಿ ಮೂರು ಮಾಡಿಯ ಮನೆ ಕಟ್ಟಿದ್ದಾರಂತೆ, ಎರಡು ವರ್ಷ ಹಿಂದೆ’ ಎಂದಾಗ ತಕ್ಷಣಕ್ಕೆ ಆಘಾತ ಆಶ್ಚರ್ಯಗಳೆರೆಡೂ ಆಗಿತ್ತಾದರೂ, ಸ್ವಲ್ಪ ಹೊತ್ತು ಕಳೆದ ಮೇಲೆ, ಸಂಕಟದ ಜಾಗೆಯಲ್ಲಿ ವಿಲಕ್ಷಣ ಉದಾಸೀನವೊಂದು ಕವಿದುಕೊಂಡಿತ್ತು. ‘ಅಲ್ಲಾ! ನಾನು ಇಷ್ಟು ದಿನ ಊರಿಗೆ ಹೋಗ್ತೀನಿ, ಮನೆ ನೋಡ್ತೀನಿ ಎಂದೆಲ್ಲ ಬಡಕೊಳ್ಳುತ್ತಿದಾಗಲಾದ್ರೂ ಹೇಳಿ ಸಾಯಬಾರದಿತ್ತೇನೇ?'’ ಎಂದೊಮ್ಮೆ ಹೇಳಿದ್ದು ಬಿಟ್ಟರೆ ಮತ್ತೆ ಅದರ ಬಗ್ಗೆ ಅಮ್ಮನೊಡನೆ ಮಾತನಾಡಿರಲಿಲ್ಲ. ಆದರೂ ಆ ನಿಮಿಷದಿಂದ ತಾನು ತಾನಾಗಿರಲು ಆಗುತ್ತಿಲ್ಲವೆಂಬುದು ಅವನ ಅರಿವಿಗೆ ಬಂತು.
ಮೂವತ್ತೆರೆಡು ವರ್ಷ ವಯಸ್ಸಿನ, ಬ್ಯಾಂಕೊಂದರಲ್ಲಿ ನೌಕರಿ ಮಾಡುವ ಅನಂತು, ಬದುಕಿನ ಕಳೆದ ಇಪ್ಪತ್ತು ವರ್ಷಗಳನ್ನು ತಾನು ಹುಟ್ಟಿದೂರಿನಿಂದ ಹೊರಗೆ ಕಳೆದಿದ್ದಾನೆ. ಈ ಇಪ್ಪತ್ತು ವರ್ಷಗಳಲ್ಲಿ ಹಲವಾರು ಊರುಗಳನ್ನು ಬದಲಾಯಿಸಿದ್ದಾನೆ ಮತ್ತು ಪ್ರತೀ ಬಾರಿ ಊರು ಬದಲಾಯಿಸಿದಾಗಲೂ ತನ್ನ ಹುಟ್ಟಿದೂರಿನಿಂದ ಒಂದೊಂದೇ ಹೆಜ್ಜೆ ದೂರ ಹೋಗುತ್ತಿರುವ ಭಾವದಲ್ಲಿ ಒದ್ದಾಡಿದ್ದಾನೆ. ತನ್ನ ಈ ವರೆಗಿನ ಬದುಕಿನ ಮುಕ್ಕಾಲರಷ್ಟನ್ನು ಬೇರೆ ಬೇರೆ ಊರುಗಳಲ್ಲಿ ಕಳೆದಿದ್ದ ಅನಂತು, ತನ್ನ ಊರಿಗೆ ಸಂಬಂಧಿಸಿದ ಏನೋ ಒಂದು ತನ್ನೊಳಗೆ ಈಗಲೂ ಹಾಗೇ ಉಳಿದುಕೊಂಡಿದೆ ಎಂದು ನಂಬಿಕೊಂಡಿದ್ದ. ಏನೇನೋ ಸಕಾರಣ ಮತ್ತು ಅಕಾರಣ ವಿಚಾರಗಳು ಒಟ್ಟುಗೂಡಿ ಮನೆ ಮಾರಿ ಊರು ಬಿಟ್ಟಿದ್ದ ಅನಂತುವಿನ ಕುಟುಂಬ ಹಲವು ಊರುಗಳನ್ನು ಹಾದು ಕಡೆಗೆ ಈ ಮಹಾನಗರದಲ್ಲಿ ನೆಲೆ ನಿಲ್ಲುವಷ್ಟರಲ್ಲಿ ತಾವು ಯಾವ ಊರಿನವರು ಎಂಬ ಪ್ರಶ್ನೆಯನ್ನು ಸಾಕಷ್ಟು ಬಾರಿ ಎದುಸಿರಿದೆ. ಹೊಸತರಲ್ಲಿ ಮನೆಯವರೆಲ್ಲ ಸಹಜವಾಗಿ ಬಿಟ್ಟೂರಿನ ಹೆಸರನ್ನು ಹೇಳುತ್ತಿದ್ದರು, ಆದರೆ ಕಾಲ ಕಳೆದಂತೆ ತಾವು ಆ ಊರಿನವರು ಎಂದು ಹೇಳಿದಾಗ, ಪ್ರಶ್ನೆ ಕೇಳಿದವರು 'ಓ ಅಲ್ಲಿ ಯಾರ ಮನೆ', 'ಅಲ್ಲಿ ಕಾಮತರದೊಂದು ಹೊಟೇಲಾಗಿದೆ ಗೊತ್ತಲ್ಲ', 'ಹಾ, ಈ ಸಾರಿ ಕಾಫಿ ರೇಟಿಲ್ಲಂತಲ್ಲ ಛೇ' ಎಂದೆಲ್ಲ ಮಾತನಾಡಿ, ಮನೆಯವರಿಗೆ ಆ ಊರಿನಲ್ಲಿ ಹೊಸತಾಗಿ ನಡೆಯುವ ವಿಚಾರಗಳೆಲ್ಲ ತಮಗೆ ತಿಳಿದಿಲ್ಲವೆಂದು ಮುಜುಗರವಾಗುತ್ತಿತ್ತು. ಆಗ 'ಇಲ್ಲಾ, ನಾವು ಆ ಊರು ಬಿಟ್ಟು ತುಂಬ ಸಮಯವಾಯ್ತು' ಎಂದಾಗ ಎದುರಿನವರಿಗೆ ರಸಭಂಗದಂಥದ್ದೇನೋ ಆಗಿ ಅವರಲ್ಲಿ 'ಓ... ಹಾಗಾ' ಎಂಬ ಮುಖ ಭಾವ ಮೂಡಿದಾಗ ರೇಜಿಗೆಯಾಗುತ್ತಿತ್ತು. ಕಾಲ ಕಳೆದಂತೆ ಅಂತಹ ಪ್ರಶ್ನೆಗಳಿಗೆ ಹಾರಿಕೆಯ ಉತ್ತರ ಕೊಟ್ಟು ಮಾತು ಮರೆಸಿಬಿಡುವ ವಿದ್ಯೆ ಮನೆಯವರಿಗೆಲ್ಲಾ ಸಾಮೂಹಿಕವಾಗಿ ಸಿದ್ದಿಸಿದೆ. ಕಾಲದ ಸಳೆವು ಮತ್ತು ಬದುಕಿನೊಂದಿಗೆ ಸೋವಿಯಾಗಿ ದೊರಕುವ ಅಸಂಖ್ಯ ಸಿಕ್ಕುಗಳಿಂದ ಬಿಡಿಸಿಕೊಳ್ಳುವಷ್ಟರಲ್ಲಿ ಊರು ಮನೆಯ ಅವೆಷ್ಟೋ ನೆನಪುಗಳು ಇಷ್ಟಿಷ್ಟೇ ಮಾಸುತ್ತ ಕಡೆಗೊಮ್ಮೆ ಬರಿಯ ಪರಿಚಯವಿರುವ ಆದರೆ ಆಕಾರವಿಲ್ಲದ ಅಸ್ಪಷ್ಟ ಗುರುತುಗಳಂತೆ ಉಳಿದುಬಿಟ್ಟಿವೆ.
ಮೊದಮೊದಲು ಯಾರದೋ ಮದುವೆಗೋ, ಯಾವುದೋ ಸರ್ಟಿಫಿಕೇಟಿಗೋ, ಮತ್ತಾರೋ ಕರೆದರೆಂದೋ ಊರಿಗೆ ಹೋಗಿ ಬರುವ ಪ್ರಮೇಯವಾದರೂ ಇರುತ್ತಿತ್ತು. ಆದರೆ ವರ್ಷಗಳುರುಳಿದಂತೆ ಅಂತ ನೆಪಗಳೂ ಇಲ್ಲವಾಗಿ ತಾನು ಹುಟ್ಟಿದ, ಬೆಳೆದ, ಎಂದಿಗೂ ಇಲ್ಲೇ ಇರುತ್ತೇನೆಂದುಕೊಂಡಿದ್ದ ಊರು, ಮುಂಜಾವಿನ ಸಕ್ಕರೆ ನಿದ್ದೆಯಲ್ಲಿ ಬಿದ್ದು ಸವಿಯಾದ ಎಂಥದೋ ಭಾಸವನ್ನಷ್ಟೇ ಉಳಿಸಿಹೋಗುವ ಅಕಾರಣ ಕನಸಾಗಿಯಷ್ಟೇ ಉಳಿದುಕೊಂಡಿತ್ತು. ಇಷ್ಟಾದರೂ, ತನ್ನ ಸಂಸಾರದ ನಿತ್ಯ ವ್ಯಾಪಾರಗಳೊಳಗೆ ಊರಿನ ಕೆಲ ಕುರುಹುಗಳು ಜೀವಂತವಾಗಿವೆ ಎಂಬುದು ಅನಂತುವಿಗೆ ಗೊತ್ತು. ಯಾವ ಊರಿಗೆ ಹೋದರೂ ಮತ್ತು ಇರುವ ಮನೆ ಎಷ್ಟೇ ಚಿಕ್ಕದಿದ್ದರೂ ಹಿತ್ತಿಲಲ್ಲೋ, ಬಾಲ್ಕನಿಯ ಇರುಕಿನಲ್ಲೋ ಅವನ ಅಪ್ಪ ಹಳೆಯ ಬಕೇಟುಗಳಲ್ಲಿ ಮಣ್ಣು ತುಂಬಿಸಿ ಕೆಸುವಿನ ಗೆಡ್ಡೆಗಳನ್ನು ಬಿತ್ತುತ್ತಿದ್ದ, ಅವುಗಳಿಂದ ಚಿಗುರುವ ಗಿಣಿಹಸಿರಿನ ಕೆಸುವಿನೆಲೆಗಳನ್ನು ಅಮ್ಮ ಗಂಟುಕಟ್ಟಿ ಖಾರಖಾರವಾದ ಪಲ್ಯ ಮಾಡುತ್ತಿದ್ದಳು, ಅದರ ದಂಟಿನ ಹುಳಿ ಮಾಡುತ್ತಿದ್ದಳು. ಸ್ವಲ್ಪವೇ ಇರುತ್ತಿದ್ದ ಆ ಪಲ್ಯ ಹುಳಿಗಳನ್ನು ಒಂದಿಡೀ ವಾರಕ್ಕಾಗುವಂತೆ ಸ್ವಲ್ಪಸ್ವಲ್ಪವೇ ಬಡಿಸಿಕೊಳ್ಳುತ್ತಿದ್ದ ತನ್ನ ಮನೆಯವರ ಕ್ರಮದಲ್ಲಿ ಊರಿಗೆ ಸಂಬಂಧಿಸಿದ ನೆನಪೊಂದನ್ನು ಸಾಧ್ಯವಾದಷ್ಟೂ ಹೆಚ್ಚು ಕಾಲ ಮೆಲುಕು ಹಾಕುವ ಚಡಪಡಿಕೆ ಗೋಚರಿಸಿಬಿಡುತ್ತಿತ್ತು. ಎಂದೋ ತಂದ ಕಳಲೆ ಉಪ್ಪಿನಕಾಯಿಯನ್ನು ಮನೆತನದ ಆಸ್ತಿಯೋ ಎಂಬಂತೆ ಫ್ರಿಜ್ಜಿನಾಳದಲ್ಲಿ ಹುದುಗಿಸಿಟ್ಟು, ಅದರ ಒಂದೊಂದೇ ಹೋಳುಗಳನ್ನು ಊಟಕ್ಕೆ ಬಡಿಸುವ ಅಮ್ಮನ ಜೋಪಾನದಲ್ಲಿಯೂ ಅಂಥದೇ ಸಾಹಸವಿತ್ತು. ಬಡಾವಣೆಗೊಂದರಂತೆ ತಲೆ ಎತ್ತಿದ್ದ ಮಂಗಳೂರು ಸ್ಟೋರ್ಸುಗಳಿಗೆ ಹೋದಾಗ, ಅಲ್ಲಿ ಜೋಡಿಸಿಟ್ಟ ಹಲಸಿನ ಬಡಕು, ಪತ್ರೊಡೆ, ಬಸಲೆ, ಕಳಲೆಯ ಕಟ್ಟುಗಳನ್ನು ಮುಟ್ಟಿ ಮುಟ್ಟಿ ನೋಡುವಾಗ ತನಗಾಗುವ ಅಮಾಯಕ ಪುಳಕದಲ್ಲೂ ಊರಿನೆಡೆಯ ಸೆಳೆತವೇ ಇತ್ತು.
ಅಷ್ಟೇ ಅಲ್ಲದೇ, ಅದರ ಐಹಿಕ ಇರವಿಗಿಂತ, ದೂರದಲ್ಲೆಲ್ಲೋ ತನಗೆ ಸಂಬಂಧಿಸಿದ ಜಾಗೆಯೊಂದಿದೆ ಎಂಬ ಆಪ್ತ ಭಾವ ಹೆಚ್ಚು ಕಡಿಮೆ ಇಪ್ಪತ್ತು ವರ್ಷಗಳ ನಂತರವೂ ಅನಂತುವನ್ನು ಕಾಡುತ್ತಲೇ ಇತ್ತು. ನ್ಯೂಸು ಪೇಪರಿನಲ್ಲೋ ಟೀವಿಯಲ್ಲೋ ಅಚಾನಕವಾಗಿ ಊರಿನ ಹೆಸರು ಬಂದಾಗಲೆಲ್ಲಾ ಅವನಿಗೆ ಸಂಕಟ ಮತ್ತು ಸಂತೋಷಗಳ ನಡುವಿನದ್ದೇನೋ ಆಗುತ್ತಿತ್ತು. ಕೆಲವೊಮ್ಮೆ ಅನಿರೀಕ್ಷಿತವಾಗಿ ತನ್ನೂರಿಗೆ ಹೋಗುವ ಬಸ್ಸುಗಳು ಎದುರಾದಾಗೆಲ್ಲ ಏಕಾಏಕಿ ಏನೋ ಉಮ್ಮಳಿಸಿದಂತಾಗುತ್ತಿದ್ದು ಅವನಿಗೆ. ಅಜ್ಜಿ ಆಗಾಗ ಹೇಳುತ್ತಿದ್ದ 'ನಾವು ಇದ್ದೂರೇ ನಮ್ಮೂರು' ಎಂಬ ಮಾತಿನಲ್ಲಿ ಎಷ್ಟು ಪ್ರಯತ್ನಿಸಿದರೂ ಅನಂತುವಿಗೆ ನಂಬಿಕೆ ಬಂದಿರಲಿಲ್ಲ. ಇದೇ ನಮ್ಮೂರಾದರೆ, ಆ ಊರು ನನಗೆ ಏನಾಗಬೇಕು? ಎಂಬ ಪ್ರಶ್ನೆಯಷ್ಟೇ ತೀವ್ರವಾಗಿ 'ಅಲ್ಲಿ ಹುಟ್ಟಿ ಸ್ವಲ್ಪ ಕಾಲ ಬೆಳದ ಮಾತ್ರಕ್ಕೆ ಅದು ನನ್ನೂರಾಗುವುದಾದರೆ, ಬದುಕು ಕೊಟ್ಟ ಈ ಊರಿನದ್ದು ಅದಕ್ಕೂ ಮೀರಿದ ನಂಟಲ್ಲವೇ? ಎಂಬ ಪ್ರಶ್ನೆಯೂ ಕಾಡುತ್ತಿತ್ತು. ಕೆಲವೊಮ್ಮೆ ಊರಿಗೆ ಸಂಬಂಧಿಸಿದ್ದು ಏನೋ ನೆನಪಾದಾಗ, ಆ ನೆನಪು ನಿಜಕ್ಕೂ ಅಲ್ಲಿಗೇ ಸಂಬಂಧಿಸಿದ್ದೋ, ಅಥವಾ ಆ ಊರಿನ ವ್ಯಕ್ತಿತ್ವಕ್ಕೆ ತನಗೆ ತೋಚಿದ್ದನ್ನೆಲ್ಲ ಆರೋಪಿಸಿಬಿಡುವ ತನ್ನ ಖಯಾಲಿಯಿಂದಾಗಿ ಸುಮ್ಮನೇ ಹಾಗೆನಿಸುತ್ತಿದೆಯೋ ಎಂದು ಸೋಜಿಗವೂ ಆಗುತ್ತಿತ್ತು. ಒಟ್ಟಿನಲ್ಲಿ ಅನಂತುವಿನ ಊರು ಅವನೊಳಗೆ ಜೀವಂತವಾಗಿತ್ತು.
ಮುಂಜಾವಿನ ಆರು ಗಂಟೆಗೆಲ್ಲ ಎದ್ದು ಬಿಡುವ ಅನಂತು, ಆರೂ ಮುಕ್ಕಾಲರವರೆಗೂ ಸುಮ್ಮನೇ ಬಿದ್ದುಕೊಂಡಿರುತ್ತಾನೆ. ಬೂದು ಬೂದು ಕತ್ತಲಿನಲ್ಲಿ, ಎಲ್ಲ ಮೌನವಾಗಿರುತ್ತದೆ, ಮಳೆಯಿದ್ದರೆ ಪಕ್ಕದ ತಾರಸಿಯಿಂದ ಒಂದೇ ಲಯದಲ್ಲಿ ಕೆಳಗೆ ಧುಮುಕುವ ನೀರಿನ ಸದ್ದು ಕೇಳುತ್ತಿರುತ್ತದೆ, ಇಲ್ಲವಾದರೆ ನಿರಾಳವಾದ ಮೌನವೊಂದನ್ನು ಹೊರತು ಪಡಿಸಿ ಬೇರೇನೂ ಇರುವುದಿಲ್ಲ. ಹಾಯೆನಿಸುತ್ತದೆ. ಸಾವಿರಾರು ಕರ್ಕಶಗಳನ್ನೇ ತನ್ನ ಒಡಲಿನಲ್ಲಿ ತುಂಬಿಕೊಂಡಿರುವ ಈ ಧಡೂತಿ ನಗರದಲ್ಲಿ ಇಂತಹುದೊಂದು ಮೌನ ಮೂಲೆಯಿದೆಯೆಂಬುದು ಸೋಜಿಗವೆನಿಸುತ್ತದೆ ಅವನಿಗೆ. ಆಗೊಮ್ಮೆ ಈಗೊಮ್ಮೆ ಅವನು ಕಿಟಕಿಯನ್ನೂ ಪೂರಾ ತೆಗೆದು ಎರಡು ಮನೆಗಳ ನಡುವಿನ ಈ ನಿಶಬ್ದ ಓಣಿಯ ಮೌನವನ್ನೇ ಕೇಳುತ್ತ ನಿಂತಾಗ, ಆ ಮೌನಕ್ಕೂ ಎಲ್ಲ ಸದ್ದುಗಳನ್ನೂ ನುಂಗಿ ಉಳಿದುಕೊಂಡಂತಹ ದನಿಯೊಂದಿರುವಂತೆ ಭಾಸವಾಗುತ್ತದೆ. ಹಿಂದು ಮುಂದಿನ ಎರಡೂ ಬೀದಿಗಳಲ್ಲಿ ಹುಟ್ಟಿ ಊರು ತಿರುಗಲೆಂದು ಓಡುತ್ತ ಹೊರಟ ಧ್ವನಿಗಳು ಈ ಓಣಿಯಂತಹ ಜಾಗೆಯನ್ನು ತಲುಪಿದಾಗ ಗಕ್ಕನೇ ನಿಂತು, ಮೌನವಾಗಿ ದಾಟಿ ಮತ್ತೆ ಗದ್ದಲ ಮಾಡಿಕೊಂಡು ಮುಂದುವರೆಯುತ್ತವೇನೋ ಎಂದೆಲ್ಲ ಯೋಚಿಸುವ ಅನಂತುವಿಗೆ ಆ ನೀರವದಲ್ಲಿ ಊರಿನ ನೆನಪು ಬಹಳವೇ ಕಾಡುತ್ತವೆ. ಎಳವೆಯಲ್ಲಿ ಸಂಜೆ ಶಾಲೆಯಿಂದ ಮರಳಿದವನನ್ನು ಅಮ್ಮ ಹಿತ್ತಲಿನ ಬಟ್ಟೆಒಗೆಯುವ ಕಲ್ಲಿನ ಮೇಲೆ ಓದಲು ಕೂಡಿಸಿ ಕೈತೋಟಕ್ಕೆ ನೀರು ಹಾಕುತ್ತಾ, ಹರವೆ, ಸಂಬಾರ, ಮೆಂತೆ ಸೊಪ್ಪುಗಳ ಪಾತಿ ಒಪ್ಪ ಮಾಡುತ್ತಾ, ಕಳೆ ತೆಗೆಯುತ್ತಾ ಇರುತ್ತಿದ್ದಳು. ಅಪ್ಪನೇನಾದರೂ ಬೇಗ ಬಂದರೆ, ಅನಂತುವನ್ನು ತೋಟದಂಚಿನ ಕುಳ್ಳಗಿನ ರಾಮಫಲದ ಮರದ ತೊಂಗೆಯೊಂದರ ಮೇಲೆ ಹತ್ತಿ ಕೂರಿಸಿ, ದೂರದ ಬೆಟ್ಟದೆಡೆಗೆ ಬೊಟ್ಟು ಮಾಡಿ, 'ಅಲ್ಲಿ ನೋಡು ಅಣ್ಣಾ, ಅದು ಕುದುರೆಮುಖದ ಬೆಟ್ಟ' ಎಂದಾಗೆಲ್ಲ ಅನಂತುವಿಗೆ ಸರಿಯಾಗಿ ಕಾಣಿಸದಿದ್ದರೂ ಬೆರಗಾಗುತ್ತಿತ್ತು. ಆಗಲೂ ಇಂಥದ್ದೇ ಮೌನವಲ್ಲದ ಮೌನವೊಂದು ಅನಂತುವನ್ನು ಸುತ್ತುವರೆಯುತ್ತಿತ್ತು. ದೂರದಲ್ಲಿ ಕಾಣಿಸದೆಯೂ ಕಾಣಿಸುವ ಕುದುರೆಮುಖ, ಸುತ್ತ ತೋಟದ ಮರಗಿಡಗಳು, ಒಂದು ಪಕ್ಕ ಕಾಣಿಸುತ್ತಿದ್ದ ಮನೆಯ ಮೇಲಿನ ಹೆಂಚಿನ ಮಾಡು, ಅದರಾಚೆಗಿನ ರಸ್ತೆ, ಮತ್ತೊಂದು ಪಕ್ಕದಲ್ಲಿ ಪಕ್ಕದ ಮನೆಯ ಹಿತ್ತಿಲುಗಳೆಲ್ಲ ಹೊಸತೇ ಕೋನದಿಂದ ಕಂಡು ಕೆಳಗಿನದ್ದಕ್ಕಿಂತ ಭಿನ್ನವಾದ ಪ್ರಪಂಚವೊಂದು ಗೊಚರಿಸುತ್ತಿತ್ತು. ಅಂತಹುದೇ ಹೊಸ ಲೋಕದ, ತನ್ನೂರಿನ ತುಣುಕೊಂದು, ಮನೆ ಪಕ್ಕದ ಓಣಿಯಂಥ ಜಾಗೆಯಲ್ಲಿದೆ ಎನಿಸಿ ಹಿತವೆನಿಸುತ್ತಿತ್ತು. ಅಷ್ಟರ ಮಟ್ಟಿಗೆ ಊರು ಮನೆಗಳೆಂಬ ಸಂಗತಿಗಳನ್ನು ಧೇನಿಸುತ್ತಲೇ ಇರುತ್ತಿದ್ದ ಅನಂತುವಿನಲ್ಲಿ, ತನ್ನ ಭಾವಲೋಕಕ್ಕೆ ಸಂಬಂಧಿಸಿದ ವಿಚಾರಗಳೆಲ್ಲದರ ಕೇಂದ್ರದಂತಿದ್ದ ತನ್ನ ಮನೆಯೇ ಈಗಿಲ್ಲ ಮತ್ತು ಅದು ಇಲ್ಲವಾಗಿ ಬಹಳ ಕಾಲವೇ ಆಯಿತು ಎಂಬ ಸುದ್ದಿ ವಿಚಿತ್ರ ಗೊಂದಲ ಮೂಡಿಸಿತ್ತು.
ಅದೇ ಗುಂಗಿನಲ್ಲಿದ್ದವನು ಮರುದಿನ ಬೇಗನೇ ಆಫೀಸು ತಲುಪಿದ. ಕೆಲಸದ ಸಮಯದಲ್ಲಿ ಸದಾಕಾಲ ಜಂಗುಳಿ ಗದ್ದಲವೇ ತುಂಬಿಕೊಂಡಿರುತ್ತಿದ್ದ ಬ್ರಾಂಚು ಮೌನವಾಗಿತ್ತು. ಕಿಟಕಿ ಪಕ್ಕದ ಅವನ ಡೆಸ್ಕಿನ ಮೇಲೆ ಮುಚ್ಚಿದ ಕರ್ಟನ್ನಿನ ಸಂದಿಯಿಂದ ಒಳಬರುತ್ತಿದ್ದ ಸೂರ್ಯನ ಪುಟ್ಟ ಪುಟ್ಟ ಕಿರಣಗಳು ನೆರಳು ಬೆಳಕಿನ ಪಟ್ಟೆಗಳನ್ನು ಬಿಡಿಸಿದ್ದುವು. ಹಗೂರವಾಗಿ ಕಿಟಕಿಯ ಬ್ಲೈಂಡ್ಸುಗಳನ್ನು ಸರಿಸುತ್ತಿದ್ದಂತೆಯೇ ಟಿಂಟೆಡ್ ಗ್ಲಾಸಿನಾಚೆಯಿಂದ ತೆಳೂ ನೇರಳೆ ಬಣ್ಣದ ಬೆಳಕು ತೂರಿ ಬಂದು ಇವನ ಸಮೇತ ಕೋಣೆಯ ಆ ಪಕ್ಕದ ಡೆಸ್ಕು, ಚೇರು, ಕಂಪ್ಯೂಟರು, ಪೆನ್ನುಗಳು, ಫೈಲುಗಳು, ಇಂಕು ಪ್ಯಾಡು, ಸೀಲುಗಳಿಗೆಲ್ಲ ಬಿಸಿಲಿನ ಸ್ನಾನ ಮಾಡಿಸಿತು. ಅದೇ ಹೊತ್ತಿಗೆ ಅಟೆಂಡರನೊಬ್ಬ ಆ ಬದಿಯ ಪರದೆಗಳನ್ನೂ ಸರಿಸಿ ಕಿಟಕಿಯಾಚೆಗಿದ್ದ ಸರಕಾರೀ ಮ್ಯೂಸಿಯಮ್ಮಿನ ಕೆಂಪು ಕಟ್ಟಡ ಕಂಡಿತು. ಮುಂಜಾವಿನ ಬಿಸಿಲಿನಲ್ಲಿ ಮೀಯುತ್ತಿದ್ದ ಆ ಹಳೆಗಾಲದ ಕಟ್ಟಡ ಕಬ್ಬನ್ ಪಾರ್ಕಿನ ಹಸಿರಿನ ಹಿನ್ನೆಲೆಯಲ್ಲಿ ಮನೋಹರವಾಗಿ ಕಾಣಿಸಿ ಅನಂತುವಿಗೆ ಒಂದು ಕ್ಷಣ ಹಾಯೆನಿಸಿತು. ಅವನು ಕೂರುವ ಡೆಸ್ಕಿನ ಪಕ್ಕದ ಕಿಟಕಿಯ ಆಚೆ ಪಕ್ಕದಲ್ಲೊಂದು ಪುಟ್ಟ ಬಾಲ್ಕನಿಯಿತ್ತು. ಕುಂಡೆ ತುರಿಸಿಕೊಳ್ಳಲೂ ಪುರಸೊತ್ತಿಲ್ಲದಿರುವ ಆ ಕಚೇರಿಯಲ್ಲಿ ಆ ಬಾಲ್ಕನಿಗೆ ಹೋಗುವವರಿಲ್ಲದ ಕಾರಣ, ಹಳೆಯ ಬೇಡಾದ ಸಾಮನುಗಳನ್ನೆಲ್ಲ ಅಲ್ಲಿ ಒಟ್ಟಿರುತ್ತಿದ್ದರು. ಬಾಲ್ಕನಿಯ ಒಂದು ಪಕ್ಕದ ಬಳಿ ಬಸವನ ಪಾದದ ಮರವೊಂದರ ಟೊಂಗೆಗಳು ಚಾಚಿಕೊಂಡಿದ್ದವು, ಸಾಮಾನ್ಯಕ್ಕಿಂತ ತುಸು ಎತ್ತರವೇ ಇದ್ದ ಆ ಮರದ ಕಡು ಹಸಿರಿನ ಹಸುವಿನ ಗೊರಸಿನಾಕಾರದ ಎಲೆಗಳ ನೆರಳು ಗಾಜಿನ ಕಿಟಕಿಯಮೇಲೆ ಬಿದ್ದು ಇವನ ಡೆಸ್ಕಿನ ಮೇಲೆ ಚೆಂದದ ಚಿತಾರಗಳನ್ನು ಮೂಡಿಸುತ್ತಿದ್ದುವು. ಬಾಲ್ಕನಿಗೆ ಹೋಗುತ್ತಿದ್ದ ಕೆಲವೇ ಜನರಲ್ಲಿ ಒಬ್ಬನಾಗಿದ್ದ ಅನಂತುವಿಗೆ ಅಲ್ಲಿಯೂ ತನಗಿಷ್ಟವಾಗುವ ಮೌನವೊಂದು ದಕ್ಕಿಬಿಡುತ್ತಿತ್ತು. ಪ್ಯಾಂಟ್ರಿಯಿಂದ ಕಾಫಿ ತೆಗೆದುಕೊಂಡು ಆ ಬಾಲ್ಕನಿಯ ಅಂಚಿಗೆ ಆತುಕೊಂಡು ನಿಂತವನಿಗೆ ಕೆಳಗಿನ ಪಾರ್ಕಿಂಗು ಲಾಟಿನ ಆಸ್ಬೆಸ್ಟಾಸ್ ಸೂರಿನ ಮೇಲೆ ಹಬ್ಬಿಕೊಂಡಿದ್ದ ಕನಕಾಂಬರ ಬಣ್ಣದ ಚೀಟಿ ಹೂವಿನ ಬಳ್ಳಿ ಕಾಣಿಸಿತು. ಆ ಸೂರನ್ನಷ್ಟೇ ಅಲ್ಲದೇ, ಆ ಬಳ್ಳಿಯು ಪಕ್ಕದೆಲ್ಲೇ ಇದ್ದ ಸಣ್ಣ ಅಪಾರ್ಟುಮೆಂಟಿಗೂ ಹಬ್ಬಿಕೊಂಡಿತ್ತು. ಕೊಂಚ ಹೊತ್ತು ಅಲ್ಲಿನ ತಣ್ಣನೆ ಏಕಾಂತದಲ್ಲಿ ಮೈಮರೆತು ನಿಂತ. ಹಸಿರು ಪಾಚಿಗಟ್ಟಿದ್ದ ಪಾರ್ಕಿಂಗ್ ಲಾಟಿನ ಸೂರಿನ ಮೇಲೆ ಅಕ್ಷಯವಾಗಿ ಹಬ್ಬಿಕೊಂಡಿದ್ದ ಕನಕಾಂಬರ ಬಣ್ಣದ ಹೂವುಗಳು ಮತ್ತು ಆಗಲೇ ಬೀಸಿದ ತಣ್ಣನೆ ಗಾಳಿ ಅವನಿಗೆ ಮತ್ತೇನನ್ನೋ ನೆನಪು ಮಾಡಿಕೊಟ್ಟವು. ಅದೇನು ಎಂದು ಅರಿವಾಗುತ್ತಲೇ ಮಂಕಾದ ಅನಂತು, ಆಫೀಸಿನೊಳಕ್ಕೆ ಹೋಗಿಬಿಟ್ಟ.
ಮಂಗಳೂರು ಹೆಂಚಿನ, ಮಣ್ಣಿನ ಗೋಡೆಯ ತನ್ನ ಮಲೆನಾಡು ಸೀಮೆಯ ಮನೆಯ ಸುತ್ತಲೂ ಶೀತಲವಾದ ಏಕಾಂತವಿರುತ್ತಿತ್ತು. ಮನೆಯ ಜಗುಲಿಯ ಎರಡು ಪಾರ್ಶ್ವಗಳಲ್ಲಿದ್ದ ಕೆಂಪು ಪೈಂಟು ಬಳಿದ ಸೀಟುಗಳಂತಹ ಕಟ್ಟೆಗಳ ಮೇಲೆ ಓದುತ್ತಲೋ, ಆಡುತ್ತಲೋ ಅನಂತುವಿನ ದಿನಗಳು ಕಳೆಯುತ್ತಿದ್ದುವು, ಜಗುಲಿಯ ಮುಂದಿನ ಮೆಟ್ಟಿಲಿನ ಮೇಲೆ ತುಸು ಮುಂದೆ ಚಾಚಿಕೊಂಡಿದ್ದ ಹೆಂಚಿನ ನೆರಳು ಹಿತವಾಗಿ ಹರಡಿಕೊಂಡಿರುತ್ತಿತ್ತು. ಅವರದ್ದು ರಸ್ತೆ ಪಕ್ಕದ ಮನೆಯಾಗಿದ್ದರೂ, ಪಕ್ಕದವೆರೆಡು ಮನೆಗಳಿಗಿಂತ ಸ್ವಲ್ಪ ಹಿಂಭಾಗದಲ್ಲಿದ್ದುದರಿಂದ ಉಂಟಾದ ಜಾಗೆಯಲ್ಲಿ ಸದಾಕಾಲ ಮುಸುಕು ಹಾಕಿಕೊಂಡಿರುತ್ತಿದ್ದ ಕಾರೊಂದು ಕಾಯಿಲೆ ಹಿಡಿದ ಬೆಕ್ಕಿನಂತೆ ನಿಂತಿರುತ್ತಿತ್ತು. ಅವನಿಗೆ ನೆನಪಿರುವಂತೆ, ಆ ಕಾರು ಅವರಿಗೆ ಸೇರಿದ್ದಲ್ಲ, ಆದರೂ ಅಲ್ಲಿರುತ್ತಿತ್ತು! ಅದು ಯಾವ ಕಾರು, ಯಾರ ಕಾರು, ಹೋಗಲಿ ಅದು ನೋಡುವುದಕ್ಕೆ ಹೇಗಿದೆ? ಯಾವ ಬಣ್ಣ? ಅಲ್ಲಿ ಅದು ಯಾಕೆ ನಿಂತಿದೆ? ಒಳಗಿರುವುದು ಕಾರೇ ಹೌದೋ? ಊಹೂಂ! ಆ ಮನೆಯಲ್ಲಿರುವ ತನಕ ಅವನಿಗೆ ಅದರ ಬಗ್ಗೆ ಏನೂ ತಿಳಿದಿರಲಿಲ್ಲ, ಮನೆಗೆ ಸಂಬಂಧಿಸಿದ ಇತರ ಸ್ಥಿರ ವಸ್ತುಗಳಲ್ಲಿ ಆ ಅನಾಮಿಕ ಕಾರೂ ಕೂಡ ಒಂದಾಗಿತ್ತು. ಅವರು ಮನೆ ಖಾಲಿ ಮಾಡುತ್ತಿದ್ದಾಗಲೂ ಅದರ ಬಗ್ಗೆ ಯಾವ ಚರ್ಚೆ ನಡೆದ ನೆನಪು ಅನಂತುವಿಗಿಲ್ಲ. ಊರು ಬಿಡುವ ದಿನ ಅವರಿದ್ದ ಟೆಂಪೋವಿನಿಂದ ಮನೆಯೆಡೆಗೆ ಹೊರಳಿ ನೋಡಿದಾಗ ಕೊನೆಯದಾಗಿ ಅವನಿಗೆ ಆ ಕಾರಷ್ಟೇ ಕಾಣಿಸಿತ್ತು! ಊರು ಬಿಟ್ಟ ಮೇಲೆ ಸ್ವಲ್ಪ ಕಾಲವಿದ್ದ ನಮ್ಮ ಕಾರು ಎಂಬ ನೆನಪು, ಕಾಲ ಕಳೆದಂತೆ ಹಳೆಯ ಡೈರಿಯೊಳಗೆ ಬರೆದು ಮರೆತ ಯಾರೋ ಪರಿಚಯದವರ ವಿಳಾಸದಂತೆ ಮಾಸಿ ಹೋಗಿತ್ತು! ಕಾರಿನ ಪಕ್ಕದಲ್ಲೊಂದು ಸಣಕಲು ನಾಗ ಸಂಪಿಗೆಯ ಮರವಿರುತ್ತಿತ್ತು ಮತ್ತು ಅದರಿಂದ ಉದುರಿದ ಒಣ ಮತ್ತು ಹಸಿ ಬಿಳಿ ಗುಲಾಲಿ ಮಿಶ್ರ ಹೂಗಳು ಕಾರಿನ ಸುತ್ತ ಮಂದವಾದ ಸಿಹಿ ಘಮ ಬೀರುತ್ತಾ ಬಿದ್ದುಕೊಂಡಿರುತ್ತಿದ್ದವು. ಹೂವು ಮರದಿಂದ ಉದುರಿದುವೋ, ಕಾರಿನಿಂದಲೇ ಹುಟ್ಟಿದುವೋ ಎಂಬ ಅನುಮಾನ ಬರುವಷ್ಟು ಆ ಮರ ಮತ್ತು ಕಾರು ಒಂದನ್ನೊಂದು ಬೆಸೆದುಕೊಂಡಂತಿರುತ್ತಿದ್ದುವು. ಆ ಜಾಗೆಯಲ್ಲಿ ಅಯಾಚಿತ ಮೌನವೊಂದು ಹಬ್ಬಿರುತ್ತಿತ್ತು. ಆ ಮೌನ ಮತ್ತು ಮನೆಯೆದುರಿನ ಆ ಏಕಾಂತದ ತುಣುಕುಗಳೇ ತಾನು ಹೋದ ಊರುಗಳಲ್ಲೆಲ್ಲ ತನ್ನನ್ನು ಕಾದಿವೆ ಎಂದು ಅನಂತುವಿಗೆ ಬಲವಾಗಿ ಅನಿಸುತ್ತಿತ್ತು. ತನ್ನ ಮನೆ ಪಕ್ಕದ ಓಣಿ, ಆಫೀಸಿನ ಬಾಲ್ಕನಿ ಮೊದಲಾದ ತನ್ನ ಮೌನ ಮೂಲೆಗಳನ್ನೂ ಆ ತುಣುಕುಗಳೇ ಕಾಪಾಡಿಕೊಂಡು ಬಂದಿವೆ ಎಂದೂ ಅನಿಸುತ್ತಿತ್ತು. ಈಗ ಆ ನಂಬಿಕೆ ಕದಡಿದಂತಾಗಿ ಅವನ ಮನಸ್ಸು ಹತೋಟಿ ತಪ್ಪಿತ್ತು.
ಆಫೀಸಿನಲ್ಲಿ ಆ ದಿನ ಬರೀ ಊರಿನದ್ದೇ ಮಾತು! ಇನ್ನೇನು ಎರಡು ದಿನ ಕಳೆದರೆ ದೀಪಾವಳಿಯ ರಜೆ ಬರುವುದಿತ್ತು. ಬುಧವಾರ ನರಕ ಚತುರ್ದಶಿ, ಶುಕ್ರವಾರ ಬಲಿಪಾಡ್ಯಮಿ ಮತ್ತು ಮರುದಿನ ನಾಲ್ಕನೇ ಶನಿವಾರ! ಹೀಗಾಗಿ ನಡುವೆ ರಜೆ ಇಲ್ಲದ ಗುರುವಾರ ಸೀಎಲ್ಲು ಹಾಕಿ ಊರಿಗೆ ಹೋಗುವ ಚಡಪಡಿಕೆಯಲ್ಲಿ ಎಲ್ಲರೂ ಇದ್ದರು. ಕರಾವಳಿಯವರೇ ತುಂಬಿಕೊಂಡಿದ್ದ ಆಫೀಸಿನಲ್ಲಿ, ಊರು ಎಂಬ ಪದವನ್ನು ಮಂಗಳೂರು ಅಥವಾ ದಕ್ಷಿಣ ಕನ್ನಡ ಎಂಬುದಕ್ಕೆ ಪರ್ಯಾಯವಾಗಿಯೇ ಬಳಸುತ್ತಿದ್ದರು. 'ದಾನೆ, ಊರ್ಗು ಪೋಪರಾ?", "ಬಸ್ಸು ಏಪ?" "ಯಾನ್ ಎಲ್ಲೆ ಕಾಂಡೆ ಊರ್ಗ್ ಪೋಂದುಲ್ಲೆ", "ಆ ಬೊಸುಡಿ ರಜೆ ಕೊಡಲ್ಲ ಮಾರ್ರೆ, ಎಂತ ಸಾವ ಏನ" ಮೊದಲಾದ ಗಲಾಟೆಯೇ ಹೆಚ್ಚಾಗಿ ಅನಂತುವಿಗೆ ತಲೆ ಚಿಟ್ಟುಹಿಡಿದಂತಾಯ್ತು! ಇವನ ಪಕ್ಕ ಕೂರುವ, ತುಳು ಬರದ ಸತೀಶ ಪರಾಡ್ಕರನು, 'ಏನು, ಊರಿಗೆ ಹೊರಟದ್ದಾ ಹೇಗೆ?' ಎಂದಾಗ 'ನನಗೆಂತ ಊರು ಮಾರಾಯ, ನನ್ನದು ಬೆಂಗಳೂರೇ' ಎಂದು ನುಣುಚಿಕೊಂಡವನು ಕೆಲಸದಲ್ಲಿ ಮುಳುಗಿದ. ಊಟದ ಹೊತ್ತಿನಲ್ಲಿ ಟಿಫಿನ್ ಡಬ್ಬಿ ತೆಗೆದಾಗ, ಆಚೆ ಮೂಲೆಯಲ್ಲಿದ್ದ ಐತಾಳ್ ಮೇಡಂ, 'ಹೊಯ್ ಅನಂತ, ಎಂತ ಮೂಲಂಗಿ ಹುಳಿಯಾ! ಪರಿಮ್ಮಳ ಪರಿಮ್ಮಳ, ಒಳ್ಳೆ ಬೀಬೀಎಂಪೀ ಮೋರಿ ತೆಗೆದ ಹಾಗೆ" ಎಂದು ಹೇಳಿ ಪಕಪಕ ನಕ್ಕಾಗಲೂ ಅವನಿಗೆ ನಗಬೇಕೆನಿಸಲಿಲ್ಲ. ಬದಲಿಗೆ ಇನ್ನು ತಾನು ಮೊದಲಿನಂತೆ ಲವಲವಿಕೆಯಿಂದ ಇರಲು ಸಾಧ್ಯವೇ ಇಲ್ಲವೇನೋ ಎಂದು ದುಗುಡವಾಯಿತು. ಕೊಂಚ ಹೊತ್ತು ಬಾಲ್ಕನಿಯಲ್ಲಿ ನಿಲ್ಲಲು ಹೋದವನಿಗೆ ಅಲ್ಲಿಯೂ ಸಮಾಧಾನವಾಗದೇ ಸಂಜೆ ಮನೆಗೆ ಬೇಗ ಹೊರಟ.
ಶನಿವಾರ ಸಂಜೆ ಅನಂತು ಊರಿಗೆ ಹೊರಟು ನಿಂತ. ಪ್ರಯಾಣದುದ್ದಕ್ಕೂ ಮನಸ್ಸಿನಲ್ಲಾಗುತ್ತಿದ್ದ ತುಮುಲಕ್ಕೆ ನಿದ್ದೆ ಹತ್ತದೇ, ಊರು ಹತ್ತಿರವಾಗುತ್ತಿದ್ದಂತೆ ವಿಚಿತ್ರ ದಿಗಿಲಾಗುತ್ತಿತ್ತು. ಇಷ್ಟೆಲ್ಲ ವರ್ಷ ಊರಿನ ಬಗ್ಗೆ ಏನೆಲ್ಲಾ ಯೋಚಿಸಿ, ಕಲ್ಪಿಸಿಕೊಂಡಿದ್ದ ತನಗೆ, ಆ ಕಲ್ಪನೆಗಳ ಮೂಲಾಧಾರವಾದ ಜಾಗೆಯನ್ನು ನೋಡಲು ಯಾಕೆ ಆತಂಕವಾಗುತ್ತಿದೆ ಎಂಬ ಬೆರಗಿನಲ್ಲೇ ಜೊಂಪು ಹತ್ತಿತು. ನಿದ್ರೆ ಮತ್ತು ಎಚ್ಚರದ ನಡುವಿನ ವಿಭ್ರಾಂತ ಸ್ಥಿತಿಯಲ್ಲಿ ಮುಂಜಾವಿನ ಐದು ಗಂಟೆ ಸುಮಾರಿಗೆ ಬಸ್ಸಿಳಿದವನಿಗೆ ಎಲ್ಲ ಕನಸಿನಂತೆ ಅನಿಸತೊಡಗಿ, ಎಷ್ಟು ಬಾಚಿಕೊಂಡರೂ ಮುಗಿಯದ ನೆನಪುಗಳ ಗುಡ್ಡೆಯೆದುರು ನಿಂತಂತಾಯಿತು! ಆ ಹೊತ್ತಿಗಾಗಲೇ ನಿದ್ರೆಯಿಂದೇಳುತ್ತಿದ್ದ ಊರಿನ ಅವೇ ಪರಿಚಿತ ರಸ್ತೆಗಳಲ್ಲಿ ನಡೆಯುವಾಗ ಎದುರು ಸಿಕ್ಕವರೆಲ್ಲಾ ತನ್ನನ್ನೇ ನೊಡುತ್ತಿದ್ದಾರೆಂದು ಅನಿಸುತ್ತಿತ್ತು. ಅವರಿಗೆಲ್ಲ ಒಂದೋ ತನ್ನ ಗುರುತು ಹತ್ತಿದೆ, ಇಲ್ಲವೇ ನಾನು ಇಲ್ಲಿನವನಲ್ಲವೆಂದು ಗೊತ್ತಾಗಿದೆ ಎಂದೆಲ್ಲ ಅನ್ನಿಸಿ ವಿಪರೀತ ಮುಜುಗರವಾಗತೊಡಗಿತು. ಆದಷ್ಟು ಬೇಗ ಮನೆಯಿದ್ದ ಜಾಗೆಯನ್ನು ನೋಡಿ ಹೊರಟು ಬಿಡಬೇಕೆಂಡು ಕೊಂಡರೂ ಊರಿನ ಒಂದೊಂದೂ ಮೂಲೆಯೆಡೆಗೂ ಮನಸ್ಸು ಹರಿಯುತ್ತಿತ್ತು! ಮಳೆಗೆ ಒದ್ದೆಯಾಗಿದ್ದ ಕಡುಗಪ್ಪಿನ ಟಾರು ರಸ್ತೆಯ ಇಕ್ಕೆಲಗಳಲ್ಲಿ ಅವನು ಅಲ್ಲಿದ್ದ ಕಾಲದ ಏನೇನೋ ವಿವರಗಳು ಹರಡಿ ಕೊಂಡಿರುವಂತೆನಿಸುತ್ತಿತ್ತು. ಊರಿನ ಮೂಲ ವಿನ್ಯಾಸ ಹಾಗೇ ಇತ್ತಾದರೂ, ಅದಕ್ಕೆ ಹೊಸ ಹೊಸ ವಿವರಗಳೆಲ್ಲ ಸೇರಿಕೊಂಡಿರುವುದರಿಂದ, ತಾನು ಬೇರೆಯದೇ ಜಾಗೆಯಲ್ಲಿದ್ದೇನಾ ಎಂಬ ಗೊಂದಲವಾಯಿತು ಅನಂತುವಿಗೆ. ಪುರಸಭೆಯ ಮೈದಾನದ ಹಿಂದಿನ ರಸ್ತೆಯಲ್ಲಿದ್ದ ನೀರಿನ ಟ್ಯಾಂಕಿನಿಂದ ಜೀಸೀ ಹಾಲಿನ ನಡುವೆ ಒಂದು ಕಾಲದಲ್ಲಿ ದೂರ ದೂರ ಒಂದೆರೆಡು ಮನೆಗಳಿದ್ದ ಬಯಲಿನಂಥ ಪ್ರದೇಶದ ತುಂಬಾ ಬಣ್ಣ ಬಣ್ಣದ ಚಿಕ್ಕ ದೊಡ್ಡ ಮನೆಗಳು ಕಿಕ್ಕಿರಿದಿದ್ದುವು. ಅಮ್ಮನ ಶಾಲೆ ಹಿಂದಿದ್ದ ಅಡಿಗರ ಮನೆಯ ಪಕ್ಕ ದಾಸಯ್ಯ ಮತ್ತು ಅವನ ಹೆಂಡತಿ ವಾಸವಿದ್ದ ಪುಟ್ಟ ಗೂಡಿನಂಥ ಮನೆಯಿದ್ದಲ್ಲಿ ಈಗ ಎರಡಂತಸಿನ ಮನೆಯೊಂದು ನಿಂತಿತ್ತು. ಎದುರಿಗಿದ್ದ ಶಾಲೆಯ ಸುತ್ತಲೂ ಎದ್ದಿದ್ದ ಎರಡಾಳೆತ್ತರದ ಗೋಡೆಯ ಮೇಲೆ ಉದ್ದನೆಯ ಕೆಂಪು ಪೆನ್ಸಿಲ್ಲಿನ ಮೇಲೆ ಸವಾರಿ ಮಾಡುತ್ತಿದ್ದ ಇಬ್ಬರು ಪುಟ್ಟ ಮಕ್ಕಳ ಚಿತ್ರ ಬಿಡಿಸಲಾಗಿತ್ತು. ಆ ಮಕ್ಕಳ ಕಣ್ಣುಗಳ ಭಾಗದ ಬಣ್ಣವನ್ನು ಯಾರೋ ಕೆತ್ತಿಬಿಟ್ಟು, ಅವು ಕಣ್ಣು ಕಿತ್ತ ಗೊಂಬೆಗಳಂತೆ ಕಂಡು ಅನಂತುವಿಗೆ ದಿಗಿಲಾಯ್ತು. ಇನ್ನೂ ನೂರು ಮೀಟರಿನಷ್ಟು ಮುಂದೆ ಸಾಗಿ ಅಲ್ಲಿ ಕಾಣುತ್ತಿರುವ ಸೋಡಿಯಂ ಲೈಟು ಕಂಬದ ಪಕ್ಕ ಏಡಕ್ಕೆ ತಿರುಗಿದರೆ ಅಲ್ಲಿ ತನ್ನ ಮನೆಯಿದೆ ಎಂದುಕೊಂಡ ಮರುಕ್ಷಣವೇ, ಅಲ್ಲಿ ಮನೆಯಿಲ್ಲವೆಂಬ ಆ ಕ್ಷಣದ ವಾಸ್ತವದ ಅರಿವಾಗಿ ಗಕ್ಕನೆ ನಿಂತು ಬಿಟ್ಟ. ಎದುರು ಆಕಾಶದಂಚಿನಲ್ಲಿ ಮೆಲ್ಲನೆ ಮೂಡುತ್ತಿದ್ದ ಗುಲಾಬಿ ಬಣ್ಣದ ಬೆಳಕಿನ ಪ್ರಭೆಯನ್ನೇ ದಿಟ್ಟಿಸುತ್ತ ನಿಂತ.
ಮನಸ್ಸಿನಲ್ಲಿ ಉಳಿದುಬಿಟ್ಟಿರುವ ಮನೆಯ ಚಿತ್ರ ಕಣ್ಣೆದುರು ಮೂಡಿದಂತಾಗಿ ಅನಂತುವಿಗೆ ಒಂದು ಹೆಜ್ಜೆಯೂ ಮುಂದಿಡಲು ಆಗಲಿಲ್ಲ. ಆಗಿದ್ದಾಗಲಿ ಎಂದುಕೊಂಡು ಮನೆಯಿದ್ದ ಜಾಗದಲ್ಲಿ ಈಗೇನಿದೆ ಎಂದು ನೋಡಿಬಿಟ್ಟರೆ, ಇಷ್ಟು ಕಾಲದಿಂದ ತನ್ನೊಳಗೆ ಬೆಚ್ಚಗಿದ್ದ ಊರು, ಮನೆಯ ಚಿತ್ರಗಳೆಲ್ಲ ಅಳಿಸಿಹೋಗಿ ತಾನು ಖಾಲಿಯಾಗಿ ಬಿಡುತ್ತೇನೆ ಎಂದು ಭಯವಾಯಿತು. ಆ ತಿರುವಿನಾಚೆ ಏನು ಕಾದಿದೆಯೋ ಯಾರಿಗೆ ಗೊತ್ತು? ಅಲ್ಲಿ ಕಂಡು ಬಿಡುವ ಅಥವಾ ಕಾಣದೇ ಹೋಗುವ ಯಾವುದೋ ಸಂಗತಿಯಿಂದ ತನ್ನ ಇಡೀ ಭಾವಲೋಕವೇ ನಾಶವದೀತು ಎನಿಸಿತು. ಇಲ್ಲಿಯವರೆಗೆ ಬದುಕಿನ ಪ್ರಯಾಣದುದ್ದಕ್ಕೂ ಬೆಚ್ಚಗೆ ಜತೆಗಿದ್ದ ಮನೆಯೆಂಬ ಭಾವಕ್ಕೆ ಸ್ವಲ್ಪವೇ ಧಕ್ಕೆಯಾದರೂ ತಾನು ಇನ್ನೆಂದಿಗೂ ನೆಮ್ಮದಿಯಾಗಿರಲಾರ ಎನಿಸಿತು. ಅತ್ಯಂತ ಖಾಸಗೀ ಲೋಕವೊಂದನ್ನು ಹೀಗೆ ವಾಸ್ತವದ ಬೀದಿಗೆಳೆದು ತರಲು ಹೊರಟಿದ್ದ ತನ್ನ ಬಗ್ಗೆಯೇ ರೇಜಿಗೆಯೆನಿಸಿತು. ಇಲ್ಲ! ತನಗಿದು ಸಾಧ್ಯವಿಲ್ಲ. ಮುಂದಿನ ತಿರುವಿನಲ್ಲಿ ತನ್ನ ಮನೆ, ಮನೆಯೆದುರಿನ ನಾಗ ಸಂಪಿಗೆ ಮರ, ಕಾರು ಮತ್ತು ಅವುಗಳ ನಡುವಿನ ದಿವ್ಯ ಏಕಾಂತವಿನ್ನೂ ಹಾಗೆ ಇವೆ ಮತ್ತು ಇರಬೇಕು. ಇಷ್ಟು ಕಾಲ ಕಾಣದೆಯೂ ಜೀವಂತವಾಗಿದ್ದ ಮನೆಯೆಂಬ ಭಾವವನ್ನು, ಹಾಗೇ ಉಳಿಸಿಕೊಳ್ಳಬೇಕು. ತನ್ನೊಳಗಿನ ಊರು, ಊರಿನ ಮನೆ ಮತ್ತು ಅಲ್ಲಿನ ಮೌನ ಹಾಗೇ ಉಳಿಯಬೇಕಿದ್ದರೆ, ತಾನು ಅಲ್ಲಿಂದ ಹೊರಡಬೇಕು ಎಂಬ ಯೋಚನೆ ಹೆಪ್ಪುಗಟ್ಟತೊಡಗಿ, ಲೈಟು ಕಂಬಕ್ಕೆ ಬೆನ್ನು ಹಾಕಿ ನಡೆಯತೊಡಗಿದ. ಓಡು ನಡಿಗೆಯಲ್ಲೇ ಮರಳಿ ಹೊರಟವನಿಗೆ, ಊರಿಗೂರೇ ಹಿಂದೆ ಓಡಿ ಬರುತ್ತಿರುವಂತೆ, ತಾನಿಲ್ಲದಿದ್ದ ಇಷ್ಟು ವರ್ಷಗಳಲ್ಲಿ ತನಗೆ ಸಂಬಂಧಿಸಿದ ಯಾವ ಸಂಗತಿಗಳು ಬದಲಾಗಿಯೋ, ಇನ್ನಿಲ್ಲವಾಗಿಯೋ ಮರೆಯಾಗಿ ಹೋಗಿವೆ ಎಂಬುದನ್ನು ತನಗೆ ತಿಳಿಸಲು, ಈವರೆಗೆ ತನ್ನನ್ನು ಪೊರೆದ, ಪೊರೆಯುತ್ತಿರುವ ತನ್ನೊಳಗಿನ ಮೌನವನ್ನು ಬರಿದುಮಾಡಿ, ಆ ಜಾಗೆಯಲ್ಲಿ, ಅನಾಥ ನಿರ್ವತವನ್ನೂ, ಬದಲಾದ ಊರಿನ ಕರ್ಕಶಗಳನ್ನು ತುಂಬಲು ತನ್ನನ್ನು ಅಟ್ಟಿಸಿಕೊಂಡು ಬರುತ್ತಿದೆ ಎನಿಸಿ ಓಡತೊಡಗಿದ, ಓಡುತ್ತಲೇ ಬಸ್ ಸ್ಟಾಪು ತಲುಪಿ ಸಿಕ್ಕ ಬಸ್ಸು ಹತ್ತಿ ಕಿಟಕಿ ಮುಚ್ಚಿ ಕುಳಿತುಬಿಟ್ಟ. ಬಸ್ಸು ಚಲಿಸಿದಂತೆ ಸಾವರಿಸಿಕೊಂಡು ಕೂತಲ್ಲೇ ಹಿಂದುರಿಗಿ ನೋಡಿದ. ಹಗಲಾದರೂ ಇನ್ನೂ ಉರಿಯುತ್ತಿದ್ದ ಸೋಡಿಯಂ ಲೈಟಿನ ಕಡು ಹಳದಿ ಬಣ್ಣದ ಎರಡು ಪ್ರಕಾಶಮಾನ ಬಿಂದುಗಳು ತುಸುವೇ ಆಲುಗಾಡುತ್ತಾ ದೂರವಾಗುತ್ತಿದ್ದುವು.