Click here to Download MyLang App

ತಲ್ಲಣಿಸದಿರು....! - ಬರೆದವರು : ಸವಿತಾ ಎಸ್ ಪಿ ತುಮಕೂರು

ಎಂದಿನಂತೆ ಅಂದೂ ಸಹ ಆಫೀಸಿನ ಕೆಲಸ ಮುಗಿಯಲಿಲ್ಲ. ಯಶೋಮತಿ ಹೊರಟಾಗ ಯಾರೆಂದರೆ ಯಾರೂ ಇರಲಿಲ್ಲ. ಹೊರಬಾಗಿಲಿಗೆ ಬಂದಾಗ ಸುದರ್ಶನ್ ಹಲ್ಲು ಕಿರಿಯುತ್ತ ನಿಂತಿದ್ದ. ನೋಡಿಯೂ ನೋಡದಂತೆ ಆಚೆ ಬಂದಳು. ಹೊಲಸು ಮನುಷ್ಯನಿಗೆ ಎಷ್ಟು ಧೈರ್ಯ ಎಂದು ಸಹಸ್ರ ನಾಮ ಹಾಕುತ್ತಾ ಆಟೋ ಹತ್ತಿ ಕುಳಿತಳು. ಮನೆಯ ಹೊರಗೆ ಮಗಳು ಕಾಯುತ್ತಿರಬಹುದು. ಬೇಗ ಹೋಗಬೇಕಿತ್ತು ಎಂದು ಪರಿತಪಿಸಿದಳು. ನನ್ನ ಜೀವನ ಎಲ್ಲಿಂದ ಎಲ್ಲಿಯವರೆಗೆ ಬಂದು ನಿಂತಿದೆಯಲ್ಲಾ ಎಂದು ಯೋಚಿಸುತ್ತಾ ಯಶೋಮತಿಯ ಮನ ಹಿಂದೆ ಜಾರಿತು….!!

ಯಶೋಮತಿ ತುಂಬು ಕುಟುಂಬದ ಹೆಣ್ಣುಮಗಳು. ತಿದ್ದಿ ತೀಡಿದ ಗೊಂಬೆಯಂಥವಳು. ಓದಿನಲೂ ಬುದ್ಧಿವಂತೆ. ಬಿ. ಕಾಂ ನಲಿ ಗೋಲ್ಡ್ ಮೆಡಲ್ ಗಳಿಸಿದ ಪ್ರತಿಭಾವಂತೆ. ತಂದೆ ಭಾಸ್ಕರ್ , ತಾಯಿ ಭಾರ್ಗವಿಯ ಒಬ್ಬಳೇ ಮಗಳು ಯಶೋಮತಿ. ಚಿಕ್ಕಪ್ಪಂದಿರಾದ ಮನೋಹರ್, ಶೇಖರ್, ಚಿಕ್ಕಮ್ಮಂದಿರಾದ ಹಾಸಿನಿ, ಶಾರ್ವರಿ, ತಮ್ಮಂದಿರಾದ ಅನೂಪ್, ಪಯೋನಿಧಿ, ಅಭಿಷೇಕ್, ಪುಟ್ಟ ತಂಗಿಯರಾದ ರಿಧಿ, ಅನ್ವಿ, ಶ್ರೇಯಾ ಎಲ್ಲರಿಗೂ ಪ್ರೀತಿಪಾತ್ರಳಾಗಿದ್ದಳು ಯಶೋಮತಿ.

ಆದರೆ ಬದುಕಿನ ಲೆಕ್ಕಾಚಾರದಲ್ಲಿ, ಬಾಳ ಸಂಗಾತಿಯ ಆಯ್ಕೆಯ ವಿಷಯದಲ್ಲಿ ಎಡವಿಬಿಟ್ಟಿದ್ದಳು. ಯೌವನದ ಹುಮ್ಮಸ್ಸಿನಲಿ, ಸಹಪಾಠಿ ಹೃತ್ವಿಕ್ ನನ್ನು ಪ್ರೀತಿಸಿದಳು. ಅವನ ಮೋಡಿ ಮಾಡುವ ರೂಪ, ಬಣ್ಣಬಣ್ಣದ ಮಾತುಗಳನ್ನು ಇನ್ನಿಲ್ಲದಂತೆ ನಂಬಿಬಿಟ್ಟಳು. ಮನೆಯವರ ಯಾವ ಬುದ್ಧಿ ಮಾತನ್ನು ಕೇಳಲಿಲ್ಲ. ಪ್ರೀತಿಯಲ್ಲಿ ಕುರುಡಾಗಿ ಬಿಟ್ಟಿದ್ದಳು. ಮುಂದೆ ನಮ್ಮ ಮನೆಯ ಕಡೆ ತಿರುಗಿ ನೋಡಬೇಡ, ಈ ಮದುವೆಯಾದರೇ ನೀನು ನಮ್ಮನ್ನು ಮರೆಯಬೇಕಾಗುತ್ತದೆ ಎಂದು ಹೆದರಿಸಿದರೂ ತನ್ನ ಹಠ ಬಿಡಲಿಲ್ಲ. ಅಪ್ಪ, ಅಮ್ಮ ಮತ್ತು ಇಡೀ ಕುಟುಂಬವನ್ನು ವಿರೋಧಿಸಿ ಮದುವೆಯಾದಳು. ಮೊದಲೆರಡು ವರ್ಷ ಅಲ್ಲಿ ಇಲ್ಲಿ ದುಡಿದು ನೆರವಾಗುತ್ತಿದ್ದನು ಹೃತ್ವಿಕ್. ಒಂದೆರಡು ವರ್ಷ ಜೀವನ ಸುಸೂತ್ರವಾಗೇ ಸಾಗಿತ್ತು. ಅವರ ಸಂಸಾರದಲ್ಲಿ ಪುಟ್ಟ ಕಂದಮ್ಮನ ಆಗಮನವೂ ಆಯಿತು. ಮಗಳು ಪೂರ್ವಿಯನ್ನು ತುಂಬಾ ಪ್ರೀತಿಸುತ್ತಿದ್ದ ಹೃತ್ವಿಕ್. ಆದರೆ ಅನಂತರದ ದಿನಗಳಲ್ಲಿ ಕುಡುಕ ಸ್ನೇಹಿತರ ಜೊತೆ ಸೇರಿ ಹಾಳಾದನು. ಏನೂ ಕೆಲಸ ಮಾಡದೆ ಯಾವ ಜವಾಬ್ದಾರಿ ತೆಗೆದುಕೊಳ್ಳದೆ ಹಾಗೆ ಓಡಾಡುತ್ತಿದ್ದ. ಅವನ ಮನೆಯವರೂ ಸಹ ಈ ಮದುವೆಗೆ ವಿರೋಧಿಸಿದ್ದರಿಂದ ಅವರ ಸಂಪರ್ಕವೂ ಇರಲಿಲ್ಲ. ಯಶೋಮತಿಯ ಪರಿಸ್ಥಿತಿ ಚಿಂತಾಜನಕವಾಯಿತು. ಹೃತ್ವಿಕ್ ಗೆ ಯಾವ ಹಿರಿಯರ ಭಯವೂ ಇಲ್ಲದೆ ಅವನಾಡಿದ್ದೇ ಆಟವಾಯಿತು. ದುಡಿಯಬೇಕು. ನಮ್ಮ ಸಂಸಾರ ಚೆನ್ನಾಗಿರಬೇಕು...., ಎಂಬ ಯಾವ ಮಹತ್ವಾಕಾಂಕ್ಷೆಯೂ ಅವನಿಗಿರಲಿಲ್ಲ. ಯಾವ ಕೆಲಸಕ್ಕೂ ಸರಿಯಾಗಿ ಹೋಗದೆ, ದೊಡ್ಡತಲೆನೋವಾಗಿದ್ದ. ಯಶೋಮತಿ, ನಾವಿಬ್ಬರೂ ಎಲ್ಲರ ವಿರೋಧ ಎದುರಿಸಿ ಮದುವೆಯಾಗಿದ್ದೇವೆ. ನಮ್ಮ ದಾಂಪತ್ಯ ಮಾದರಿಯಂತೆ ಇರಬೇಕು. ಎಲ್ಲರೂ ಆಶ್ಚರ್ಯ ಪಡುವಂತೆ ಚೆನ್ನಾಗಿ ಬಾಳಬೇಕು. ಎಂದೆಲ್ಲಾ ಬಯಸುತ್ತಿದ್ದಳು. ಇಂದಲ್ಲ ನಾಳೆ ಗಂಡ ಸರಿ ಹೋಗುವನೇ ಎಂದು ಕಾಯುತ್ತಿದ್ದಳು.

ಯಶೋಮತಿ ಒಂದು ಮಾರ್ಕೆಟಿಂಗ್ ಕಂಪನಿಯಲ್ಲಿ ಸೆಕ್ರಟರಿಯಾಗಿ ಕೆಲಸಕ್ಕೆ ಸೇರಿ ಐದು ವರ್ಷವಾಯಿತು. ಕಂಪನಿಯ ಬಾಸ್ ರಾಜೇಶ್ ವರ್ಮಾ. ತುಂಬಾ ಒಳ್ಳೆಯ ವ್ಯಕ್ತಿ. ಆಫೀಸ್ ನ ಎಲ್ಲ ಸಿಬ್ಬಂದಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಹೆಣ್ಣುಮಕ್ಕಳ ಬಗ್ಗೆ ವಿಶೇಷ ಕಾಳಜಿವಹಿಸುತ್ತಿದ್ದರು. ಪ್ರತಿಯೊಬ್ಬರನ್ನು ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದರು. ಆಫೀಸಿನ ಪ್ರತಿಯೊಬ್ಬ ಸಿಬ್ಬಂದಿಯ ಸಂಸಾರ ತಾಪತ್ರಯಗಳು ಅವರಿಗೆ ಗೊತ್ತಿರುತ್ತಿತ್ತು. ಅಷ್ಟು ಸಲೀಸಾಗಿ ಎಲ್ಲರೊಡನೆ ಬೆರೆಯುತ್ತಿದ್ದರು. ಹಾಗೆಯೇ ಕಷ್ಟ ಸುಖಗಳಿಗೂ ಸ್ಪಂದಿಸುತ್ತಿದ್ದರು. ಅವರಿಗೆ ಒಬ್ಬಳೇ ಮಗಳು ಶ್ರಾವಣಿ. ಪ್ರತಿ ವರ್ಷ ಅವಳ ಹುಟ್ಟು ಹಬ್ಬದ ದಿನ ದೊಡ್ಡ ಪಾರ್ಟಿ ಮಾಡಿ ಆಫೀಸ್ ನ ಅಷ್ಟೂ ಸಿಬ್ಬಂದಿ ವರ್ಗಕ್ಕೆ ಒಳ್ಳೆಯ ಊಟ ಹಾಕಿಸುತ್ತಿದ್ದರು. ಬೆಲೆಬಾಳುವ ಉಡುಗೊರೆಗಳನ್ನು ಕೊಡುತ್ತಿದ್ದರು.

ಅವರ ಮಗಳು ಶ್ರಾವಣಿ ಸುಂದರಿ ಹಾಗೆ ಜಾಣೆ. ಎಂಜಿನಿಯರಿಂಗ್ ಓದುತ್ತಿದ್ದಾಗ ಆಫೀಸಿಗೆ ಆಗಾಗ ಬರುತ್ತಿದ್ದಳು ಮಗಳ ಇಂಜಿನಿಯರಿಂಗ್ ಓದು ಮುಗಿದ ತಕ್ಷಣ ಮದುವೆ ನಿರ್ಣಯ ಮಾಡಿದ್ದರು. ಮದುವೆಗೆ ಹೋದಾಗ ಅಲ್ಲೇ ಕಂಪನಿಯ ಎಲ್ಲಾ ಸಿಬ್ಬಂದಿಯ ಮುಂದೆ ನೋಡಿ, ಇವರು ನನ್ನ ಮುದ್ದಿನ ಮಗಳ ಗಂಡ. ನನ್ನ ಹೆಮ್ಮೆಯ ಅಳಿಯ. ಸುದರ್ಶನ್ ಎಂ. ಟೆಕ್ ಮಾಡಿದ್ದಾರೆ. ಫಾರಿನ್ ನಲಿ ಕೆಲಸ ಮಾಡಿದ ಅನುಭವವಿದೆ. ಇನ್ನು ಮುಂದೆ ಕಂಪನಿಯನ್ನು ವಿಶಾಲವಾಗಿ ಬೆಳೆಸಿ, ಇದನ್ನು ಅಂತರಾಷ್ಟೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಲು ನಿಮ್ಮೆಲ್ಲರ‌ ಸಹಕಾರ ಇವರಿಗೆ ಬೇಕು ಇನ್ನು ಮುಂದೆ ಇವರೇ ನಿಮ್ಮ ಬಾಸ್. ನಾನೂ ಸಹ ಇರುತ್ತೇನೆ. ನನಗೆ ಎಷ್ಟು ಗೌರವ ಕೊಡುತ್ತಿರೋ ನನ್ನ ಅಳಿಯನಿಗೂ ಅಷ್ಟೇ ಗೌರವ ಕೊಡಬೇಕು ಎಂದೆಲ್ಲಾ ಹೇಳಿದ್ದರು.

ವಯಸ್ಸಾದ ರಾಜೇಶ್ ವರ್ಮಾರವರು ಆಫೀಸ್ ಅನ್ನು ಹಂತಹಂತವಾಗಿ ಅಳಿಯನಿಗೆ ಒಪ್ಪಿಸಿ ತಾವು ಈ ಮಾರ್ಕೆಟಿಂಗ್ ವ್ಯವಹಾರಗಳಿಂದ ನಿವೃತ್ತಿ ಪಡೆದು, ಆರಾಮಾಗಿರಬೇಕೆಂದು ಯಾವಾಗಲೋ ಒಮ್ಮೊಮ್ಮೆ ಬರುತ್ತಿದ್ದರು. ಮದುವೆಯಾದ ಕೆಲವೇ ತಿಂಗಳಿಗೆ ಎದೆನೋವು ಎಂದು ಮಲಗಿದವರು ಏಳಲೇ ಇಲ್ಲ. ಅವರ ಸಾವು ಇಡೀ ಕಂಪನಿಯ ಸಿಬ್ಬಂದಿಗಳಿಗೆ ಅನಿರೀಕ್ಷಿತವಾಗಿತ್ತು. ಎಲ್ಲರನ್ನೂ ತುಂಬು ಅಕ್ಕರೆಯಿಂದ ಕುಟುಂಬ ವರ್ಗದವರಂತೆ ನೋಡಿಕೊಳ್ಳುತ್ತಿದ್ದ ಅವರ ಸಾವು ಎಲ್ಲರಿಗೂ ಅತ್ಯಂತ ಆಘಾತವನ್ನು ನೋವನ್ನು ಕೊಟ್ಟಿತು. ಅವರು ಇದ್ದಾಗ ವಿನಮ್ರವಾಗಿ ಇರುತ್ತಿದ್ದ ಸುದರ್ಶನ್ ಅವರ ನಂತರ ತಾನೇ ಸರ್ವಾಧಿಕಾರಿಯಂತೆ ವರ್ತಿಸತೊಡಗಿದ. ಮಹಿಳಾ ಸಿಬ್ಬಂದಿಗಳ ಜೊತೆ ಅನುಚಿತವಾಗಿ ನಡೆದುಕೊಳ್ಳುತ್ತಿದ್ದ. ಯಶೋಮತಿ ಪರ್ಸನಲ್ ಸೆಕ್ರಟರಿಯೂ ಆಗಿದ್ದುದರಿಂದ ಅವಳು ಅನಿವಾರ್ಯವಾಗಿ ಆಗಾಗ ಅವನ ಛೇಂಬರ್ ಗೆ ಹೊಗಲೇಬೇಕಿತ್ತು.

ಮನೆಯ ಬಳಿ ಆಟೋ ನಿಂತಾಗ ಇವಳ ಯೋಚನೆಗೂ ಬ್ರೇಕ್ ಬಿದ್ದಿತು. ಮನೆಯ ಬಾಗಿಲಲ್ಲಿ ಮಗಳಾಗಲೇ ಕಾಯುತ್ತಿದ್ದಳು.‌ ಅಡುಗೆ ಕೆಲಸ ಮುಗಿಸಿ, ಮಗಳಿಗೆ ಪಾಠ ಹೇಳಲು ಕುಳಿತರೂ ಇತ್ತೀಚೆಗೆ ಆ ಸುದರ್ಶನ್ ನಡೆದುಕೊಳ್ಳುವ ರೀತಿ ನೆನಪಾಗಿ ಮನಸ್ಸು ಕಂಗೆಟ್ಟಿತ್ತು. ಈ ರೀತಿ ಆದರೆ ಅಲ್ಲಿ ಕೆಲಸದಲ್ಲಿ ಹೇಗೆ ಮುಂದುವರೆಯುವುದು ಎಂಬ ಯೋಚನೆಯಿಂದ ನಿದ್ದೆ ಹತ್ತಿರ ಸುಳಿಯಲಿಲ್ಲ. ಅವನೊಬ್ಬ ವಿಕೃತ ಕಾಮಿಯಂತೆ ಹೋದಲ್ಲಿ ಬಂದಲ್ಲಿ ಒಂದು ತೆರನಾಗಿ ನೋಡುವುದು. ಛೇಂಬರ್ ಗೆ ಹೋದಾಗ ಡಿಕ್ಟೇಷನ್ ಕೊಡುವಾಗ ಬೇಕೆಂದೇ ಕೈ ಮೈ ತಗುಲಿಸುವುದು ಮಾಡುತ್ತಿದ್ದ. ಒಮ್ಮೆ ಜೋರಾಗಿ ಗಲಾಟೆಯೂ ಮಾಡಿದ್ದಳು. ಅದರೆ ಇವನೇ ಓನರ್ ಯಾರ ಹತ್ತಿರ ಹೇಗೆ ಕಂಪ್ಲೈಂಟ್ ಮಾಡುವುದು...? ಏನೆಂದು..? ಪೋಲೀಸರ ಬಗ್ಗೆ ಅದೆಷ್ಟೂ ಕಹಿಘಟನೆಗಳನ್ನು ಕೇಳಿ ತಿಳಿದಿದ್ದ ಯಶೋಮತಿಗೆ ಕಂಪ್ಲೈಂಟ್ ಕೊಟ್ಟರೆ ನ್ಯಾಯ ಸಿಗುವ ಬದಲು ಇನ್ನೂ ಹಲವಾರು ಗೋಜಲುಗಳಿಗೆ ನನ್ನ ಜೀವನ ತುತ್ತಾಗುತ್ತದೆ ಎಂಬ ಹೆದರಿಕೆ. ಹೀಗೇ ಹಲವಾರು ಯೋಚನೆಗಳಿಂದ ಅವಳ ಮನಸ್ಸು ಜರ್ಜರಿತವಾಗಿತ್ತು. ಗಂಡನ ಹತ್ತಿರ ಹೇಳಿಕೊಳ್ಳೋಣವೆಂದರೆ, ಅವನು ಮನೆ ಸೇರುವುದೇ ಅಪರೂಪ. ಸದಾ ಕುಡಿದ ಅಮಲಿನಲ್ಲಿರುವ ಅವನನ್ನು ನೋಡಿ ಜೀವನದ ಬಗ್ಗೆಯೇ ಜಿಗುಪ್ಸೆ. ಸಾಯೋಣವೆಂದುಕೊಳ್ಳುತ್ತಿದ್ದಳು. ಆದರೆ ಮಗಳು ಪೂರ್ವಿಗಾಗಿ ಧೈರ್ಯ ತಂದುಕೊಳ್ಳುತ್ತಿದ್ದಳು. ಬಾಡಿಗೆ ಕಾರು ಓಡಿಸುವೆ ಎಂದಾಗ ಆಫೀಸಿನಲ್ಲಿ ಸಾಲ ಮಾಡಿ ಒಂದು ಸೆಕೆಂಡ್ ಕಾರು ಕೊಡಿಸಿದ್ದಳು. ಆ ಬಾಡಿಗೆ ಹಣವನ್ನು ಸರಿಯಾಗಿ ತಂದು ಕೊಡದೆ ಸತಾಯಿಸುತ್ತಿದ್ದ. ಹೀಗಾದರೆ ಸಾಲ ಹೇಗೆ ತೀರಿಸಲಿ ಎಂದು ಗಲಾಟೆ ಮಾಡಿದರೆ ಅಲ್ಪ ಸ್ವಲ್ಪ ಕೊಡುತ್ತಿದ್ದನು. ಇಲ್ಲವಾದರೆ ಅದನ್ನು ಕುಡಿದು ಹಾಳು ಮಾಡುತ್ತಿದ್ದನು.

ಹಿಂದಿನ ತಿಂಗಳು ಸ್ಟಾಕ್ ವೆರಿಫಿಕೇಷನ್ ಗಾಗಿ ಕೆಲವು ಹಳೆಯ ಫೈಲ್ಸ್ ಹುಡುಕಲು ಸ್ಟೋರ್ ರೂಮಿಗೆ ಹೋದ ಯಶೋಮತಿಗೆ ಸುದರ್ಶನ್ ಒಳಗೆ ಬಂದಿದ್ದು ತಿಳಿಯಲಿಲ್ಲ. ಫೈಲ್ ಜೋಡಿಸಿ ಹಿಂದೆ ತಿರುಗಿದರೆ ಬಹಳ ಹತ್ತಿರವೇ ನಿಂತಿದ್ದ ಸುದರ್ಶನ್...., ಅಲ್ಲಿಂದ ಬರಲು ಜಾಗವನ್ನೇ ಬಿಡದೆ ಇವಳನ್ನು ಆಲಂಗಿಸಲು ಬಂದ. ಕೂಗಲು ಬಾಯಿ ತೆರೆದರೆ ಬಾಯಿಯನ್ನು ಒಂದು ಕೈಯಿಂದ ಜೋರಾಗಿ ಅದುಮಿ ಹಿಡಿದುಕೊಂಡಿದ್ದಾನೆ. ಇವಳಿಗಂತೂ ಅಲ್ಲಾಡಲು ಆಗುತ್ತಿಲ್ಲ. ಕಾಲಿನಿಂದ ತಲೆಯವರೆಗೂ ಅವನ ಮೈಸೋಕಿ ಅಸಹ್ಯವಾಗಿ, ಇದ್ದ ಬದ್ದ ಶಕ್ತಿಯನ್ನೆಲ್ಲಾ ಒಟ್ಟುಗೂಡಿಸಿ ಕಾಲಿನಿಂದ ಅವನ ಹೊಟ್ಟೆಗೆ ಜೋರಾಗಿ ಒದ್ದು, ಅವನನ್ನು ದೂಕಿ, ಬದುಕಿದೆಯಾ ಬಡಜೀವವೇ..., ಎಂದು ಓಡಿ ಬಂದ ಯಶೋಮತಿಗೆ ಅವಳ ಹೃದಯ ಭಯದಿಂದ ಬಡಿದುಕೊಳ್ಳುವುದು ಅವಳಿಗೇ ಕೇಳುತ್ತಿತ್ತು. ಆ ನಂತರ ಅವನ ನಡತೆಯೇ ಬದಲಾಯಿತು. ಬೇಕೆಂದೇ ಎಲ್ಲರ ಮುಂದೆ ಅವಳ ಕೆಲಸದಲ್ಲಿ ತಪ್ಪು ಹುಡುಕಿ ಬೈಯುತ್ತಿದ್ದನು. ಸಂಬಳ ಕಟ್ ಮಾಡ್ತಿನಿ ರೀ ನೀವು ಈ ರೀತಿ ಕೆಲಸ ಮಾಡಿದರೆ ಎಂದು ಜೋರು ಮಾಡುತ್ತಿದ್ದ‌. ಅವನ ದುರುದ್ಧೇಶ ಅವಳಿಗೆ ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಆದರೆ ಅವನು ಮಾಡುತ್ತಿದ್ದ ಎಲ್ಲ ರೀತಿಯ ಅವಮಾನಗಳಿಗೆ ಮೂಲಕಾರಣ ನನ್ನ ಆಸೆ ಇವಳು ಈಡೇರಿಸಲಿಲ್ಲ ಈ ರೀತಿ ತೊಂದರೆ ಕೊಟ್ಟರೆ ಮುಂದೆ ಒಂದಲ್ಲ ಒಂದು ದಿನ ನನಗೆ ಸಹಕಾರ ಕೊಟ್ಟೇ ಕೊಡುತ್ತಾಳೆ. ಅವಳಿಗೆ ಬೇರೆ ದಾರಿಯಾದರೂ ಏನಿದೆ…? ಎಂಬ ಅನಿಷ್ಟ ಹುನ್ನಾರ ಅವನದು.

ಯಶೋಮತಿಯ ಸ್ಥಿತಿ ಚಿಂತಾಜನಕವಾಗಿತ್ತು. ಮರ್ಯಾದೆ ಕಳೆದುಕೊಂಡು ಕೆಲಸ ಮಾಡಲು ಅವಳ ಆತ್ಮಸಾಕ್ಷಿ ಧಿಕ್ಕರಿಸುತ್ತಿತ್ತು. ಮುಂದೆ ಏನು ಮಾಡಲಿ... ? ಏನು ಮಾಡಲಿ....? ಎಂಬ ಬೃಹದಾಕಾರದ ಪ್ರಶ್ನೆ...? ಕೆಲಸ... , ಮನೆ ಖರ್ಚು...., ಜೀವನ....? ಮಗಳ ಶಿಕ್ಷಣ....? ಸದಾ ಅದೇ ಯೋಚನೆ.

ಇವರಿದ್ದ ಮುಂದಿನ ಬೀದಿಯಲ್ಲಿನ ವಿದ್ಯಾನಿಕೇತನ ಶಾಲೆಯಲ್ಲಿ ಒಂದು ಕ್ಲರ್ಕ್ ಹುದ್ದೆ ಖಾಲಿ ಇರುವುದು ಯಶೋಮತಿಗೆ ಗೊತ್ತಾಯಿತು. ಅಲ್ಲಿಗೆ ಹೋಗಿ ವಿಚಾರಿಸಿ ಅರ್ಜಿ ಹಾಕಿ ಬಂದಳು. ಹಾಗೆ ಕೆಲವು ಬೇರೆ ಬೇರೆ ಕಂಪನಿ ಗಳಿಗೂ ಸಹ ರೆಸ್ಯೂಮ್ ಗಳನ್ನು ಕೊಟ್ಟುಬಂದಳು.

ಅವತ್ತು ಆಫೀಸ್ ಕೆಲಸ ಮುಗಿಸಿ ಹೊರಡುತ್ತಿದ್ದಳು. ಆಫೀಸ್ ಬಾಯ್ ಸಿದ್ಧೇಶ್, "ಮೇಡಂ, ಸುದರ್ಶನ್ ಸರ್ ಕರೆಯುತ್ತಿದ್ದಾರೆ.." ಎಂದು ಹೇಳಿದ. ಸುತ್ತ ಮುತ್ತ ನೋಡಿದಳು ಯಾರೂ ಇಲ್ಲ. ಒಳಗೊಳಗೆ ಭಯವಾದರೂ ಸಿದ್ಧೇಶ್ ಗೆ ಕೇಳಿಕೊಂಡಳು. " ದಯವಿಟ್ಟು ಬಾಗಿಲ ಬಳಿ ಇರು. ನಾನು ಬರುವವರೆಗೂ" ಎಂದಳು. ಅವನಿಗೂ ಆಫೀಸ್ ನ ಸೂಕ್ಷ್ಮಗಳು ಚೆನ್ನಾಗಿ ತಿಳಿದಿತ್ತು. ಯಶೋಮತಿಯ ಬಗ್ಗೆ ಅವನಿಗೆ ಅಪಾರ ಗೌರವವೂ ಇತ್ತು. ಸುದರ್ಶನ್ ಎಂಥಾ ನಡತೆಯವನು ಎಂದೂ ಗೊತ್ತಿತ್ತು, "ಆಗಲಿ ಮೇಡಂ. ಇಲ್ಲೇ ಇರುವೆ. ನೀವು ಬರುವವರೆಗೂ ಹೋಗಿ ಬನ್ನಿ ಹೆದರಬೇಡಿ " ಎಂದು ಹೇಳಿದ. ಆಗ ಧೈರ್ಯವಾಗಿ ಛೇಂಬರ್ ಒಳಕ್ಕೆ ಹೋದಳು. "ಆಫೀಸ್ ಅಕೌಂಟ್ಸ್ ಷೀಟ್ ನೋಡಿ, ಸರಿಯಾಗಿ ಬ್ಯಾಲೆನ್ಸ್ ಆಗ್ತಿಲ್ಲ..., ಕುಳಿತು ಕೊಳ್ಳಿ…." ಎಂದ. "ನಾಳೆ ನೋಡುವೆ ಸರ್. ಈಗ ಲೇಟ್ ಆಗಿದೆ. ಮಗಳು ಮನೆಯಲ್ಲಿ ಕಾಯುತ್ತಿರುತ್ತಾಳೆ" ಎಂದಳು. "ಕುಳಿತುಕೋ, ಪರವಾಗಿಲ್ಲ" ಎಂದು ಏಕವಚನದಲ್ಲಿ ಮಾತಾಡಿಸುತ್ತಾ ಹತ್ತಿರ ಬಂದು ಕೈಹಿಡಿದುಕೊಂಡ. "ನೋಡು, ಹಠ ಮಾಡಬೇಡ. ನನ್ನ ಮಾತು ಕೇಳಿದರೆ ನಿನಗೆ ಒಳ್ಳೆಯದು. ನಿನ್ನ ಜೀವನ ಚೆನ್ನಾಗಿರುತ್ತದೆ. ಸಂಬಳವನ್ನೂ ಹೆಚ್ಚಿಸುತ್ತೇನೆ. ಬೋನಸ್ ಕೂಡ ಕೊಡುತ್ತೇನೆ. ಯಾರಿಗೂ ಗೊತ್ತಾಗದಂತೆ ಮ್ಯಾನೇಜ್ ಮಾಡೋಣ. ಇಲ್ಲವಾದರೆ ಇಲ್ಲದ ತೊಂದರೆ ನೀನೇ ಮೈಮೇಲೆ ಎಳೆದುಕೊಂಡಂತಾಗುತ್ತದೆ. ಯೋಚಿಸು. ನಿನ್ನ ಕಷ್ಟಗಳೆಲ್ಲಾ ತೀರುತ್ತವೆ. ಬಾ ಒಂದೇ ಒಂದ್ ಸಲ ನನ್ನ ಅಸೆ ಪೂರೈಸು" ಎಂದು ಹೇಳುತ್ತಾ ನೇರವಾಗಿ ಸೆರಗಿಗೇ ಕೈ ಹಾಕಿದ. ಇವನಿಗೆ ಇವತ್ತು ಗತಿ ಕಾಣಿಸುತ್ತೇನೆ ಎಂದು ನಿರ್ಧರಿಸಿದ ಯಶೋಮತಿ ಅಲ್ಲೇ ಮೂಲೆಯ ಕಬ್ ಬೋರ್ಡ್ ಹಿಂದಿದ್ದ ನೆಲ ಒರೆಸುವ ಮಾಪ್ ತೆಗೆದುಕೊಂಡು ಇರುವ ಶಕ್ತಿಯನ್ನೆಲ್ಲಾ ಒಟ್ಟುಗೂಡಿಸಿ ರಪರಪ ಬಾರಿಸತೊಡಗಿದಳು. " "ಏನ್ ಅಂದುಕೊಂಡಿದ್ದೀಯೋ ಪಾಪಿ...., ಕೆಲಸಕ್ಕೆ ಬರುವ ಹೆಣ್ಣು ಮಕ್ಕಳು ಅಂದ್ರೆ ಏನ್ ತಿಳ್ಕೊಂಡಿದ್ದೀಯಾ...? ನಿನ್ನ ಓದು ಏನು...,? ನಿಮ್ಮ ಮಾವ ಎಂಥಾ ಮಹಾನ್ ವ್ಯಕ್ತಿ ಅಂಥವ್ರಿಗೆ ನಿನ್ನಂಥ ಮನೆಹಾಳ್ ಅಳಿಯಾ ಥೂ ರಾಸ್ಕಲ್.... ಕೆಲಸ ಮಾಡೋಕೆ ಬರೋರು ಮನೆಯಲ್ಲಿ ಇರುವವರ ತುತ್ತಿನ ಚೀಲ ತುಂಬಿಸೋಕೆ ಬರ್ತಾರೆ......ಜೀವನೋಪಾಯಕ್ಕೆ ದುಡಿಯಲು ಬರ್ತಾರೆ....., ಅವರೆಲ್ಲಾ ಮಾನ ಮರ್ಯಾದೆ ಬಿಟ್ಟು ಬಂದಿರ್ತಾರೆ ಅಂದುಕೊಂಡಿದ್ದಿಯಾ....? ನೀನು ಸಾಕು...! ನಿನ್ನ ಆಫೀಸ್ ಕೆಲಸಾನೂ ಸಾಕು.....! ನಿನ್ನ ಅಸಹ್ಯ ಉಪದ್ರವಗಳು ಸಾಕು.....!" ಎಂದು ಕೂಗಾಡುತ್ತಾ...., ಬೈಯುತ್ತಾ....., ಆಚೆ ಬಂದಳು. ಅವಳ ಮೈ ಪೂರಾ ಕೋಪದಿಂದ ಅದುರುತ್ತಿತ್ತು. ಮುಖ ಕೆಂಡಾಮಂಡಲವಾಗಿತ್ತು. ಆದರೆ ಹೊರಗೆ ಬರುತ್ತಿದ್ದ ಅವಳ ಹೆಜ್ಜೆಗಳಲ್ಲಿ ದೃಢತೆ ಇತ್ತು. ಎಲ್ಲವನ್ನೂ ಸರಿ ಮಾಡಿಕೊಳ್ಳುವ ಆತ್ಮವಿಸ್ವಾಸವಿತ್ತು.

ನಾಳೆಯಿಂದ ನನಗೆ ಕೆಲಸವಿಲ್ಲ ಬೇರೆ ಕಡೆ ಕೆಲಸದ ಬೇಟೆ ಪ್ರಾರಂಭಿಸಬೇಕು ಎಂದು ಅರಿವಿದ್ದರೂ, ಒಬ್ಬ ಕಾಮ ಪಿಶಾಚಿಯಿಂದ ತಪ್ಪಿಸಿಕೊಂಡೆ ಎಂಬ ಸಮಾಧಾನ...ಹಾಗೆಯೇ ಮುಂದೆ ಜೀವನ ಹೇಗೆ.....? ಮಗಳ ವಿದ್ಯಾಭ್ಯಾಸ, ಮನೆ ಖರ್ಚು.... ಎಂಬೆಲ್ಲಾ ಚಿಂತೆಗಳೂ ಕಾಡುತ್ತಿದ್ದವು. ಅದ್ಹೇಗೆ ಆಟೋ ಸ್ಟ್ಯಾಂಡಿಗೆ ಬಂದಳೋ, ಆಟೋ ಹತ್ತಿ ಕುಳಿತಳೋ ಅರಿವೇ ಇರಲಿಲ್ಲ……

"ತಲ್ಲಣಿಸದಿರು ಕಂಡ್ಯಾ....|| ತಾಳು ಮನವೇ...., ಎಲ್ಲರನೂ ಸಲಹುವನೂ ಇದಕೆ ಸಂಶಯ ಬೇಡ......!!!" ಮೊಬೈಲ್ನಲ್ಲಿ ಒಂದೇ ಸಮನೆ ಹಾಡು ಕೇಳಿಬರುತ್ತಿತ್ತು. ಯಾವುದೋ ಜ್ಞಾನದಲ್ಲಿದ್ದವಳು ಯಾರದು ಕಾಲ್ ಎಂದು ನೋಡಿದರೆ, ವಿದ್ಯಾನಿಕೇತನ ಶಾಲೆಯಿಂದ……!!!!!