Click here to Download MyLang App

ತರ್ಕ - ಬರೆದವರು : ಡಾ. ಪ್ರೇಮಲತ ಬಿ. | ಥ್ರಿಲ್ಲರ್


’ಧಪ್ಪೆಂದು ’ ಹಿಂದಿನಿಂದ ತಲೆಯ ಮೇಲೆ ಭಾರೀ ಹೊಡೆತವೊಂದು ಬಿದ್ದದ್ದೇ ಅವನು ಮುಗ್ಗರಿಸಿ ಮುಂದಕ್ಕೆ ಬಿದ್ದ. ಅನಿರೀಕ್ಷಿತವಾಗಿ ಬಿದ್ದ ಕಾರಣ ವಾಕಿ-ಟಾಕಿ ಹಿಡಿದ ಅವನ ಬಲಗೈ ಅವನ ದೇಹದ ಅಡಿಯೇ ಹೂತು ಹೋಯಿತು. ಅರೆಕ್ಷಣ ಎಲ್ಲವೂ ಮಂದವಾಗುತ್ತಿರುವ ಅನುಭವ. ದಬ,ದಬನೆಂದು ಯಾರೋ ಓಡಿಹೋದ ಹೆಜ್ಜೆಗಳ ಶಬ್ದ... ತಲೆಯಲ್ಲಿ ಚೂಪಾದ ನೋವು. ಮಾರ್ಕ್ ನ ಎಡಗೈ ನಿಧಾನವಾಗಿ ಅವನ ಬೋಳುತಲೆಯ ಕಡೆಗೆ ಚಲಿಸಿತು. ಬುಳು-ಬುಳನೆಂದು ಕತ್ತಿನ ಮೇಲೆ ಸುರಿದ ಬೆಚ್ಚಗಿನ ದ್ರವ ರಕ್ತವೆನ್ನುವುದನ್ನು ತಿಳಿಯಲು ಅವನಿಗೆ ಹೆಚ್ಚು ಹೊತ್ತೇನು ಬೇಕಾಗಲಿಲ್ಲ. ಆಗಲೇ ಕಣ್ಣ ಮುಂದೆ ಪ್ರಶಾಂತ ಕತ್ತಲೆ ಹರಡತೊಡಗಿದ್ದು. ಅದೇ ಅವನ ಕೊನೆಯ ನೆನಪು....
2
“ಮೆಮೊರಿ ಲಾಸ್ ಇಲ್ಲದ್ದು ಒಳ್ಳೆಯ ಲಕ್ಷಣ “- ಎಂದ ಹೇಳಿದ್ದು ವೈದ್ಯೆಯಿರಬೇಕು. ಮಾರ್ಕ್ ಗೆ ಎಚ್ಚರವಾದದ್ದು ಅವಳಿಗೆ ವಯಕ್ತಿಕವಾದ ಸಂತೋಷವನ್ನು ತಂದಿತೇನೋ ಎನ್ನುವಂತೆ ಅವಳು ಮುಖವರಳಿಸಿ ನಕ್ಕಳು. ಮಾರ್ಕ್ ನ ಮುಖ ಸಡಿಲವಾಗಲಿಲ್ಲ. ಅವನ ಮಿದುಳಿನ್ನೂ ಆಗ ತಾನೇ ಎಚ್ಚರಗೊಳ್ಳುತ್ತಿತ್ತು. “ನಿಮ್ಮ ಕೆಲಸದ ಸ್ಥಳಕ್ಕೆ ಫೋನ್ ಮಾಡಿ ತಿಳಿಸಿದ್ದೇವೆ. ಅವರು ನಿಮ್ಮ ಸಂಸಾರಕ್ಕೆ ಹೇಳುತ್ತೇವೆ ಎಂದಿದ್ದಾರೆ “-ಮತ್ತೊಂದು ಕಡೆ ನಿಂತ ನರ್ಸ್ ದನಿಗೂಡಿಸಿದಳು. ಬಳಿದರೆ ಕೈ ತುಂಬಾ ಮೆತ್ತಿ ಬರುವಷ್ಟು ಮೇಕಪ್ಪು ಅವಳ ಮುಖದಲ್ಲಿತ್ತು. ಮಾರ್ಕ್ ಬೇರೆಡೆ ದೃಷ್ಠಿ ತಿರುಗಿಸಿದ.ಅವನು ಏನೋ ಮರೆತಿದ್ದ. ಅದನ್ನು ನೆನಸಿಕೊಳ್ಳುವ ಪ್ರಯತ್ನದಲ್ಲಿ ಮುಖ ಕಿವಿಚಿದ.ಇಬ್ಬರೂ ಮಾತು ನಿಲ್ಲಿಸಿದರು.ಒಂದಿಷ್ಟು ಪರೀಕ್ಷೆ ಮಾಡಿ ನೋಟ್ಸ್ ಬರೆದು ಮುಗಿಸಿದ ನಂತರ “ ಮಲಗಿ ರೆಸ್ಟ್ ತಗೊಳ್ಳಿ, ವಿ ವಿಲ್ ಕಮ್ ಅಗೈನ್.. “- ಎಂದು ಹೇಳಿ ಅವನ ಮಂಚದ ಸುತ್ತಲಿನ ಪರದೆಗಳನ್ನೆಳೆದು ಹೊರಟುಹೋದರು.
ಮಾರ್ಕ್ ಯೋಚಿಸತೊಡಗಿದ.
’ ಅಸ್ಸಾಲ್ಟ್ ಕೇಸ್...? ’ – ಅದರಲ್ಲಿ ಅವನಿಗೇನೂ ಅನುಮಾನವಿರಲಿಲ್ಲ. ಏನೋ ಮೇಲಿನಿಂದ ಬಿತ್ತೆಂದು ಹೇಳಲು ಆ ಓಣಿಯಲ್ಲಿ ಮರಗಳಾಗಲೀ, ಮನೆಗಳಾಗಲೀ ಇರಲಿಲ್ಲ. ಅವನು ಕೆಲಸ ಮಾಡುತ್ತಿದ್ದ ಸೆಕ್ಯೂರಿಟಿ ಸಂಸ್ಥೆ ಈ ಹಲ್ಲೆಯ ಬಗ್ಗೆ ಪೋಲೀಸರಿಗೆ ತಿಳಿಸಲು ಹೇಳುತ್ತಾರೆ. ಇನ್ನೇನು ಹೆಂಡತಿ ಮತ್ತು ಮಗಳು ಕೂಡ ಬರಬಹುದು. ಸಹೋದ್ಯೋಗಿಗಳೂ ಬರುತ್ತಾರೆ. ಈಗ ಸಮಯವೆಷ್ಟು? ಮಾರ್ಕ್ ಸುತ್ತಲೂ ನೋಡಿದ.ಅವನನ್ನು ಯಾರೋ ಅಸ್ಪತ್ರೆಯ ಗೌನಿಗೆ ಬದಲಾಯಿಸಿದ್ದರು. ಅವನ ಯೂನಿಫಾರಂ, ಒಳಬಟ್ಟೆಗಳು, ಫೋನ್, ಪರ್ಸ್ ಮತ್ತು ಅವನ ಸಾಧನಗಳನ್ನೆಲ್ಲ ಒಂದು ಟ್ರೇ ಯಲ್ಲಿ ಹಾಕಿ ಒಂದು ಕುರ್ಚಿಯ ಮೇಲ್ಲಿಟ್ಟಿದ್ದರು.ಮಾರ್ಕ್ ಫೋನ್ ಗಾಗಿ ಕೈಚಾಚಿದ. ಅವನ ದೇಹ ಆಘಾತದಲ್ಲಿ ಭಾರಗೊಂಡು ಅದೆಷ್ಟು ನಿತ್ರಾಣವಾಗಿದೆ ಎಂಬುದು ಆಗಲೇ ಅವನಿಗೆ ತಿಳಿದದ್ದು. ಅಸ್ಪತ್ರೆಯವರು ಆಗಾಗಲೇ ರಕ್ತವನ್ನು ಕೂಡ ನೀಡಿದ್ದರಂತೆ.
ಮಾರ್ಕ್ ಆರಡಿಗಿಂತಲೂ ಎತ್ತರಕ್ಕಿದ್ದ ವ್ಯಕ್ತಿ. ಆದರೆ ಉಬ್ಬಿದ ಮಾಂಸಖಂಡಗಳ ಕಾರಣ ಅವನು ಸ್ವಲ್ಪ ಕುಳ್ಳಗೇ ಕಾಣುತ್ತಿದ್ದ ಎನ್ನಬಹುದು. ಚಾಚಿದ್ದ ಅವನ ಕೈಯುದ್ದಕ್ಕೂ ಡ್ರಾಗನ್ ಹಚ್ಚೆಯಿತ್ತು ಜಿಮ್ ನಲ್ಲಿ ದಂಡಿಸಿದ ಮರದ ದಿಮ್ಮಿಯಂತಹ ದೇಹ.ಬೋಳು ತಲೆ. ಮೀಸೆ ಗಡ್ಡವನ್ನು ನೀಟಾಗಿ ಕತ್ತರಿಸಿಕೊಂಡಿದ್ದ. ಅವನ ಕತ್ತಿನ ಮೇಲೂ ಹಸಿರು ಹಚ್ಚೆಗಳು.ಬ್ಯಾಂಡೇಜು ಸುತ್ತಿದ್ದ ಅವನ ತಲೆ ದಿಮ್ಮೆನ್ನುತ್ತಿತ್ತು. ಅದನ್ನು ಮೆತ್ತನ್ನ ದಿಂಬಿನ ಮೇಲೆ ಹೊರಳಿಸಲು ಯತ್ನಿಸಿದ. ಆಗಲಿಲ್ಲ. ಕೈ ಚಾಚಿದರೂ ಅವನ ವಸ್ತುಗಳಿದ್ದ ಟ್ರೇ ಸಿಗಲಿಲ್ಲ. ತಲೆಯನ್ನು ಇದ್ದಲ್ಲೇ ಇಟ್ಟುಕೊಂಡು ದೇಹವನ್ನು ಮತ್ತಷ್ಟು ಜರುಗಿಸಿ ಟ್ರೇಯನ್ನು ತಲುಪಲು ಕೈ ಚಾಚಿದ. ಆ ಕೈ ....
ಹಕ್ಕಿಯ ಕಾಲಿನ ಅಸ್ಥಿಪಂಜರದಂತಹ ಆ ಕೈ... ಹೌದು ...ಅದನ್ನೇ ಅವನು ನೆನಪಿಸಿಕೊಳ್ಳಲು ಯತ್ನಿಸಿದ್ದಲ್ಲವೇ?..ಆದರೆ ಯಾಕೆ?
3
ಝುಲು ೯... ಲೌಡ್ ೫ ಕಾಲಿಂಗ್, ಲಿಲ್ಲಿ ಸ್ಟೋರ್ಸ್, ಅನುಮಾನಾಸ್ಪದ ಯೂರೋಪಿಯನ್ ಮೇಲ್, ಗ್ರೀನ್ ಜಾಕೆಟ್, ನಾಟ್ ಕ್ಲಿಯರ್ ಟು ಈಗಲ್ ಐಸ್, ಪಿಲ್ಲರ್ ಬ್ಲಾಕಿಂಗ್ ದಿ ವ್ಯೂ “- ಎನ್ನುವ ಕರೆ ಅವನ ವಾಕಿಟಾಕಿಯಲ್ಲಿ ಹರಿದು ಬಂದಿತ್ತು. ಅವತ್ತು ಗ್ರೌಂಡ್ ಫ್ಲೋರ್ ನಲ್ಲಿ ಸೆಕ್ಯೂರಿಟಿ ಕಾವಲಿಗಿದ್ದ ಮಾರ್ಕ್, ಸಕಲ ವಸ್ತುಗಳೂ ಸಿಗಬಲ್ಲವು ಎನ್ನುವಂತಿದ್ದ ಲಿಲ್ಲಿ ಸ್ಟೋರ್ಸ್ ಗೆ ಧಾವಿಸಿ ಬಂದಿದ್ದ.
ಕ್ರಿಸ್ ಮಸ್ ಕಾರಣ ಅಂಗಡಿಯ ತುಂಬ ಕಿಕ್ಕಿರಿದ ಜನ. ಅವರ ನಡುವೆ ಗ್ರೀನ್ ಜಾಕೆಟ್ ನ್ನು ಹುಡುಕತೊಡಗಿದ . ಇವತ್ತೊಬ್ಬ ಶಾಪ್ ಲಿಫ್ಟರ್ ನನ್ನು ಹಿಡಿಯಬಹುದು ಎನ್ನುವ ಉತ್ಸಾಹದಲ್ಲಿ ಮಾರ್ಕ್ ನ ಹದ್ದಿನ ದೃಷ್ಟಿ ಆಷ್ಟೂ ಜನರನ್ನು ಸದ್ದಿಲ್ಲದಂತೆ ಸ್ಕಾನ್ ಮಾಡತೊಡಗಿತು.
ತೋಳಿಲ್ಲದ ಹಸಿರು ಹಾಫ್ ಜಾಕೆಟ್ ನ ವ್ಯಕ್ತಿಯೊಬ್ಬ ದಟ್ಟ ಜನಸಂದಣಿಯ ನಡುವೆ ಜೋಡಿಸಿದ್ದ ಒಂದು ರಾಶಿ ವಸ್ತುಗಳ ಹಿಂದಿನಿಂದ ಎದ್ದು ನಿಲ್ಲುತ್ತಿದ್ದ. ಅವನ ಅಸ್ಥಿ ಪಂಜರದದಂತ ಕೈ ಜೋಡಿಸಿಟ್ಟಿದ್ದ ವಸ್ತುಗಳ ಸಂಧಿಯಿಂದ ಹೊರಬಂದದ್ದು ಮಾರ್ಕ್ ನ ದೃಷ್ಟಿಗೆ ಬೀಳುತ್ತಿರುವಂತೆ ವ್ಯಾಪಾರ ಮಾಡುತ್ತಿದ್ದ ಒಂದಿಬ್ಬರು ಜನ ಅವನ ಮುಂದೆ ಬಂದು ಅವನು ಮಾಯವಾದ.
ಮಾರ್ಕ್ “ ಝುಲು ೯, ಗ್ರೀನ್ ಸ್ಪಾಟೆಡ್..ಫಾಲ್ಲೋವಿಂಗ್” -ಎನ್ನುವ ಸಂದೇಶವನ್ನು ಬಿತ್ತರಿಸಿದವನೇ ಹಸಿರು ಜಾಕೆಟ್ ಧರಿಸಿದ್ದ ವ್ಯಕ್ತಿಯೆಡೆ ದಾಪುಗಾಲಿಟ್ಟ. ಅಷ್ಟರಲ್ಲಾಗಲೇ ಹಸಿರು ಜಾಕೆಟ್ ಪ್ರವೇಶ ದ್ವಾರವನ್ನು ದಾಟಿ ಶಾಪಿಂಗ್ ಮಾಲ್ ನ ಎಕ್ಸಿಟ್ ಕಡೆಗೆ ವೇಗವಾಗಿ ನಡೆಯುತ್ತಿದ್ದ.
ಮಾರ್ಕ್ ಹಿಂಬಾಲಿಸುತ್ತಿರುವ ಸುಳಿವು ಸಿಕ್ಕ ಕೂಡಲೇ ಹಸಿರು ಜಾಕೆಟ್ ನವ ಮುಖವನ್ನು ಅವನ ಜಾಕೆಟ್ ನ ಹುಡ್ ನಿಂದ ಮುಚ್ಚಿ,ತಲೆ ತಗ್ಗಿಸಿ ಓಡತೊಡಗಿದ. ಮಾರ್ಕ್ ನ ಸಂಶಯದ ವಾಸನೆ ಜಾಗೃತವಾಯ್ತು. ಸಿ.ಸಿ.ಟಿ.ವಿ.ಗೂ ಮುಖ ಕಾಣಿಸದಂತೆ ಎಚ್ಚರಿಕೆ ವಹಿಸುವುದನ್ನು ನೋಡಿದ ಮಾರ್ಕ್ ಗೆ ಮತ್ತೊಂದು ಕೆಂಪು ಸಿಗ್ನಲ್ ದೊರಕಿತ್ತು. ’ಪಳಗಿದ ಆಸಾಮಿ ’- ಎಂದು ಮನಸ್ಸಿನಲ್ಲೇ ಅಂದುಕೊಂಡ. ಇಂಥವರು ಇಡೀ ಮಾಲ್ ನನ್ನು ಅಧ್ಯಯನ ಮಾಡಿಯೇ ಕಸುಬಿಗಿಳಿಯುತ್ತಾರೆ. ಮಾದಕ ದ್ರವ್ಯ ವ್ಯಸನಿ ಇದ್ದರೂ ಇರಬಹುದು.ದುಡ್ಡಿಗಾಗಿ ಇಂತವರು ಯಾವ ಕೆಲಸವನ್ನು ಬೇಕಾದರೂ ಮಾಡುತ್ತಾರೆ. ಹೊಟ್ಟೆಗೆ ಇಲ್ಲದಿದ್ದರೂ ಡ್ರಗ್ಸ್ ಗೆ ಹಣ ಹೊಂಚಬೇಕಲ್ಲ?-ಅಂದುಕೊಂಡ ಮಾರ್ಕ್.
ಜನರ ನಡುವೆ ಯೂನಿಫಾರಂ ನಲ್ಲಿದ್ದ ಗಾರ್ಡ್ ಒಬ್ಬ ಓಡಿದರೆ ಎಲ್ಲರೂ ಅನುಮಾನದಿಂದ ನಿಂತು ನೋಡುವಂತಾಗುತ್ತಿತ್ತು. ಅಕಸ್ಮಿಕ ಆ ವ್ಯಕ್ತಿ ಇನ್ಯಾವುದೋ ತುರ್ತಿನಲ್ಲಿ ಓಡಿದ್ದರೆ ಅವನನ್ನು ಹಿಡಿದರೂ ಮಾರ್ಕ್ ನ ಮೇಲೆ ಹಸಿರು ಜಾಕೆಟ್ ನವನು ದೂರು ನೀಡಬಹುದಿತ್ತು.ಮಾರ್ಕ್ ಪೂರ್ತಿ ಶಕ್ತಿ ಬಿಟ್ಟು ವೇಗವಾಗಿ ಜನರ ನಡುವೆ ನುಸುಳುತ್ತ ನಡೆಯತೊಡಗಿದ. ’ಹಸಿರು ಜಾಕೆಟ್ ’ ಬೆರ್ರಿ ಮಾಲ್ ನ ಹೊರ ಪ್ರಾಂಗಣಕ್ಕೆ ತಲುಪಿದ್ದ. ಅಲ್ಲಿಂದ ಸರಕ್ಕನೆ ತಿರುಗಿ ಪಕ್ಕದ ಓಣಿಯಲ್ಲಿ ಓಡಿದ. ಮಾರ್ಕ್ ಅಲ್ಲಿಗೆ ಹೋಗಲು ಕ್ಷಣಕಾಲ ಹಿಂತೆಗೆದ. ಇಡೀ ಮಾಲ್ ನ ನಕ್ಷೆ ಮಾರ್ಕ್ ನ ತಲೆಯಲ್ಲಿ ಅಚ್ಚೊತ್ತಿತ್ತು. ಆ ಸಣ್ಣ ಓಣಿಯಲ್ಲಿ ಯಾವುದೇ ಸಿ.ಸಿ.ಟಿ.ವಿ. ಕ್ಯಾಮರ ಇರಲಿಲ್ಲ. ಆದರೆ, ಅವನ ಕೆಲಸದಲ್ಲಿ ತತ್ ಕ್ಷಣದ ಸಾಕ್ಷಿ ಬೇಕಿತ್ತು. ಅಕಸ್ಮಾತ್ ಆ ಹಸಿರು ಜಾಕೆಟ್ ನ ವ್ಯಕ್ತಿ ಮಾಲ್ ನಿಂದ ಕದ್ದ ವಸ್ತುವನ್ನು ಈಗಾಗಲೇ ಎಸೆದುಬಿಟ್ಟಿರಬಹುದು. ಹಾಗಾದಲ್ಲಿ ಮಾರ್ಕ್ ಅವನನ್ನು ಕದ್ದ ವಸ್ತುವಿನ ಸಮೇತ ಹಿಡಿಯಲಾಗುತ್ತಿರಲಿಲ್ಲ.ಆದರೆ ಕುತೂಹಲ ಮತ್ತು ಸೋಲೊಪ್ಪದ ಹಠ ಮಾರ್ಕ್ ನನ್ನು ಆ ಓಣಿಯಲ್ಲೊಮ್ಮೆ ಇಣುಕಿಹಾಕಲು ಪ್ರಚೋದಿಸಿತು.ಆ ಓಣಿಯನ್ನು ಪ್ರವೇಶಿಸಿ ಇನ್ನೂರು ಗಜವನ್ನೂ ಅವನು ಕ್ರಮಿಸಿರಲಿಲ್ಲ. ಅಷ್ಟರಲ್ಲಿ....ಧಪ್ಪೆಂದು ಅವನ ಬೋಳು ಬುರುಡೆಯ ಮೇಲೆ ಏಟು ಬಿದ್ದಿತ್ತು.ಅರಿವು ತಪ್ಪಿ ಕುಸಿದುಬಿದ್ದಿದ್ದ ಅವನ ದೇಹವನ್ನು ನೋಡಿದ ಯಾರೋ ನಂತರ ಆಂಬ್ಯುಲೆನ್ಸ್ ಗೆ ಫೋನ್ ಮಾಡಿದ್ದರು.
4

ಮಾರ್ಕ್ ಎಂದು ಕರೆಸಿಕೊಳ್ಳುತ್ತಿದ್ದ ಮಾರ್ಕಂಡೇಯ ಬೆರ್ರಿಮಾಲ್ ನಲ್ಲಿ ಸೆಕ್ಯೂರಿಟಿ ಕೆಲಸಕ್ಕೆ ಸೇರುವ ಮುನ್ನ ’ಹಾಕ್ ಐ” ತರಭೇತಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದ. ಅದಕ್ಕಿನ್ನ ಮೊದಲು ೧೦ ವರ್ಷ ಸೈನ್ಯದಲ್ಲಿ ಕೆಲಸ ಮಾಡಿದ್ದ. ಸೈನ್ಯದಲ್ಲಿ ಅವನಿಗೆ ದೊರೆತಿದ್ದ ತರಭೇತಿಗೆ ಹೋಲಿಸಿದರೆ ಇದು ಕವಡೆ ಕಾಸಿನ ಬೆಲೆಯದ್ದಲ್ಲ. ಆದರೆ ಇದೇ ಬೇರೆ, ಅದೇ ಬೇರೆ.
ಮಾರ್ಕ್ ಸೈನ್ಯ ಸೇರುತ್ತೇನೆ ಎಂದಾಗ ಅವನ ತಂದೆ-ತಾಯಿಯರು ಹೌಹಾರಿದ್ದರು.ಬೇಡವೆಂದು ಗೋಗರೆದಿದ್ದರು.ಏಷಿಯನ್ ಕುಟುಂಬದ ಜನರ್ಯಾರೂ ವಿದೇಶಿ ನೆಲವನ್ನು ಕಾಯಲು ಸೈನ್ಯ ಸೇರುವುದಿಲ್ಲ, ಬದಲು ತಮ್ಮಂತೆಯೇ ಕಾರ್ನರ್ ಶಾಪ್ ನಡೆಸಲು ಬಂಡವಾಳ ಕೊಡುತ್ತೇವೆಂದು ಆಮಿಷ ಒಡ್ಡಿದ್ದರು. ಅವನನ್ನು ಕರಾಟೆ, ಜೂಡೋ ಕಲಿಯಲು ಕಳಿಸಿದ್ದೇ ತಪ್ಪಾಯ್ತೆಂದು ಅಲವತ್ತಿದ್ದರು. ಆದರೆ ಮಾರ್ಕ್ ನ ಬಿಸಿರಕ್ತ ಅಡ್ರಿನಲಿನ್ ಜಂಕಿಯಾಗಿತ್ತು. ಲಾರಿ ಬೇಕಾದರೆ ಓಡಿಸುತ್ತೇನೆ ಆದರೆ ಅಂಗಡಿಯ ಗಲ್ಲಾದ ಮೇಲೆ ಕೂರುವುದಿಲ್ಲವೆಂದು ಹಠಹಿಡಿದ. ಓದಿನಲ್ಲಿ ಹಿಂದಿದ್ದ ಈ ಹಠಮಾರೀ ಕಿರಿಯ ಮಗ ಕಣ್ಣಿಗೆಸರಾಗಿ ಏನನ್ನೂ ಮಾಡದೆ ಒಂದು ವರ್ಷ ಮನೆಯಲ್ಲೇ ಉಳಿದಾಗ ವಯಸ್ಸಾಗಿದ್ದ ಅವರು ಮೆತ್ತಗಾಗಿದ್ದರು. “ಎಲ್ಲಾದರೂ ಮಣ್ಣು ಹೊರು..” ಎಂದು ಆಶೀರ್ವದಿಸಿ ಅವನನ್ನು ಹೋಗಗೊಟ್ಟಿದ್ದರು. ಸೈನ್ಯದಲ್ಲಿ ಹತ್ತುವರ್ಷ ಕೆಲಸಮಾಡುವಲ್ಲಿ ಆಘಾತವೊಂದರಲ್ಲಿ ಕಾಲಿನ ಎರಡು ಬೆರಳುಗಳನ್ನು ಕಳೆದುಕೊಂಡು ಮಾರ್ಕ್ ಮನೆಗೆ ಬಂದಿದ್ದ. ಅಷ್ಟರಲ್ಲಿ “ ಯುದ್ಧಗಳೆಂದರೆ ಯುವಜನರ ಸಾವು , ಮುತ್ಸದ್ದಿ ಮುದುಕರ ಗೆಲುವು” ಎನ್ನುವ ಕಟುಸತ್ಯ ಅವನಿಗೆ ಅರಿವಾಗಿತ್ತು. ’ಟಾಲ್ -ಡಾರ್ಕ್ --ಹ್ಯಾಂಡ್ಸಮ್ ’- ಎಂದು ಅವನನ್ನು ಒಲಿದು ಬಂದು ಅವನ ಬದುಕನ್ನು ಹಂಚಿಕೊಳ್ಳಲು ತಯಾರಾದ ಮಿಷೆಲ್ ಎಂಬ ಇಂಗ್ಲಿಷ್ ಹುಡುಗಿಯೊಂದಿಗೆ ನೆಮ್ಮದಿಯ ಜೀವನ ಕಂಡುಕೊಂಡಿದ್ದ. ಮಿಷೆಲ್ ಅವನ ಮಗಳಿಗೆ ಒಳ್ಳೆಯ ಅಮ್ಮನಾಗಿದ್ದಳು.
ಮಾರ್ಕ್ ಪೋಲಿಸನಾಗಿರಲಿಲ್ಲ, ಪತ್ತೇದಾರನೂ ಆಗಿರಲಿಲ್ಲ. ಅವನು ಲಂಡನ್ ಮಾಲ್ ಒಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಸೇರಿದ್ದ.ಆದರೆ ಅವನು ತನ್ನ ಕೆಲಸದಲ್ಲಿ ಕಳ್ಳತನವನ್ನು ಪತ್ತೆಹಚ್ಚುವ ಪತ್ತೇದಾರರೂ ಜೊತೆಗೆ ಕಳ್ಳರನ್ನು ಹಿಡಿವ ಪೋಲೀಸ್ ಕೂಡ ಆಗಬೇಕಿತ್ತು. ವ್ಯತ್ಯಾಸವೆಂದರೆ ಅವನ ಈ ಕೆಲಸದ ನಮೂನೆ ಮಾತ್ರ ಪೂರ್ತಿ ಬೇರೆಯಾಗಿತ್ತು.
ಸೆಕ್ಯೂರಿಟಿ ಗಾರ್ಡ್ ಗಳು ಜನ ಸಾಮಾನ್ಯ ಜನರೊಂದಿಗೆ ಅತಿ ನಾಜೂಕಿನಿಂದ ನಡೆದುಕೊಳ್ಳಬೇಕಿತ್ತು. ಸಾಮಾನ್ಯರ ಬಟ್ಟೆಯಲ್ಲಿರುವ ಐನಾತಿ ಶಾಪ್ ಲಿಫ್ಟರ್ ಗಳನ್ನು ಹಿಡಿಯಬೇಕಿತ್ತು. ಅವರು ಕಳ್ಳರೇ ಆದರೂ ಅವರನ್ನು ಮುಟ್ಟುವಂತಿರಲಿಲ್ಲ. ಗದರುವಂತಿರಲಿಲ್ಲ. ಅನುನಯಿಸಿ ಕೇಳಬೇಕು. ಅವರು ಸ್ಪಂದಿಸದಿದ್ದರೆ ಅಧಿಕಾರ ವಾಣಿಯನ್ನು ಬಳಸಬಹುದಿತ್ತು. ಅವರೇನಾದರೂ ಹೊಡೆದಾಟಕ್ಕಿಳಿದರೆ ಅಂತವರನ್ನು ಬಂಧಿಸಿ ಪೋಲೀಸರನ್ನು ಕರೆಯಬಹುದಾಗಿತ್ತು. ಮಾರಕಾಸ್ತ್ರಗಳ ಹಲ್ಲೆಯೇನಾದರೂ ನಡೆದಲ್ಲಿ ಸೆಕ್ಯೂರಿಟಿ ಗಾರ್ಡ್ ಗಳಿಗೆ ಪಿಸ್ತೂಲನ್ನು ಬಳಸುವ ಅಧಿಕಾರವೂ ಇತ್ತು.ಆದರೆ ಅಂತಹ ಅಗತ್ಯ ಎಂದಿಗೂ ಬಿದ್ದಿರಲಿಲ್ಲ.
ಅತ್ತಿತ್ತ ನೋಡುತ್ತ ಸಿ.ಸಿ.ಟಿ.ವಿ.ಗಳಿಂದ ಮರೆಯಾಗುವ ಸ್ಥಳಗಳಲ್ಲಿ ನಿಲ್ಲುವ ಜನರು ಅವನಲ್ಲಿ ವಿಶೇಷ ಆಸಕ್ತಿ ಕೆರಳಿಸುತ್ತಿದ್ದರು. ಅಷ್ಟುದೊಡ್ಡ ಮಾಲ್ ನಲ್ಲಿ ಇವನೂ ಸೇರಿದಂತೆ ಒಟ್ಟು ಹನ್ನೆರಡು ಜನ ಸೆಕ್ಯೂರಿಟಿ ಗಾರ್ಡ್ ಗಳಿದ್ದರು . ಅವರಿಗೆಲ್ಲ ಒಂದೊಂದು ಕೋಡ್ ನೇಮ್ ಇದ್ದವು. ತಟ್ಟನೆ ತಮ್ಮದಲ್ಲದ ವಸ್ತುಗಳನ್ನು ಕದ್ದು ತಮ್ಮ ಬ್ಯಾಗಿನೊಳಗೋ ಬಟ್ಟೆಯೊಳಗೋ ಸೇರಿಸಿಬಿಡುವ ಹೆಂಗಸರು, ಗಂಡಸರು, ಗಣ್ಯರು, ಬಡವರು, ಕನಸುಗಣ್ಣಿನವರು, ವಿದ್ಯಾರ್ಥಿಗಳು, ವಿದೇಶಿಗರು, ಪದೇ ಪದೇ ಬರುವ ಪರಿಚಿತ ಕಸುಬುದಾರರು ಎಲ್ಲ ಥರಾವರಿ ಜನಗಳನ್ನು ಮಾರ್ಕ್ ಹಿಡಿಯುತ್ತಲೇ ಇರುತ್ತಿದ್ದ. ಪಿಕ್-ಪಾಕೆಟ್ ಮಾಡುವವರೂ ಸಿಕ್ಕಿ ಬೀಳುತ್ತಿದ್ದರು. ಅವರು ಕದ್ದ ವಸ್ತುಗಳನ್ನು ಹಿಂತುರುಗಿಸಿ, ಕ್ಷಮಾಪಣೆ ಕೇಳಿದರೆ ಅವರಿಗೆ ಎಚ್ಚರಿಕೆ ಕೊಟ್ಟು ಬಿಟ್ಟು ಬಿಡುತ್ತಿದ್ದರು. ಇಲ್ಲದಿದ್ದರೆ ಅವರ ಫೋಟೋ ತೆಗೆದು ಒಂದು ವರ್ಷ ಅವರು ಮತ್ತೆ ಆ ಮಾಲ್ ಪ್ರವೇಶಿಸದಂತೆ ನಿರ್ಭಂದನೆ ಮಾಡುತ್ತಿದ್ದರು. ಅಕಸ್ಮಿಕ ಮತ್ತೆ ಬಂದರೆ ಫೇಶಿಯಲ್ ರೆಕಾಗ್ನಿಷನ್ ಟೆಕ್ನಾಲಜಿ ಬಳಸಿದ ಕಂಪ್ಯೂಟರ್ ಗಳು ಅವರನ್ನು ಪತ್ತೆ ಹಚ್ಚಿ ಗಾರ್ಡ್ ಗಳನ್ನು ಎಚ್ಚರಿಸುತ್ತಿದ್ದವು.
ಇಷ್ಟು ವರ್ಷಗಳಲ್ಲಿ ಮಾರ್ಕ್ ಹಲವಾರು ಶತ್ರುಗಳನ್ನು ಸಂಪಾದಿಸಿದ್ದ. ಸೆಕ್ಯೂರಿಟಿ ಕೆಲಸದಲ್ಲಿ ಅವನ ಕೋಡ್ ನೇಮ್ ’ಝುಲು-೯ ’ ಎಂದಾಗಿತ್ತು. ಸಿ.ಸಿ.ಟಿ.ವಿ.ಯ ಕ್ಯಾಮೆರಾದ ಹಿಂದೆಯೇ ಕೂತಿರಲಿ ಅಥವಾ ಮಾಲ್ ನ ಆಯಕಟ್ಟಿನ ಸ್ಥಳಗಳಲ್ಲೇ ನಿಂತಿರಲಿ ಅವನ ಹದ್ದಿನ ಕಣ್ಣುಗಳು ಚುರುಕಾಗಿ ಕೆಲಸಮಾಡುತ್ತಿದ್ದವು. ಬಹುತೇಕರು ಸಣ್ಣ ಪುಟ್ಟ ಕಳ್ಳರಾಗಿದ್ದ ಕಾರಣ ಸೆಕ್ಯೂರಿಟಿ ಗಾರ್ಡ್ ಗಳ ಸುರಕ್ಷತೆಗೇನೂ ತೊಂದರೆಯಿರಲಿಲ್ಲ. ಪದೇ ಪದೇ ಸಿಕ್ಕಿಹಾಕಿಕೊಳ್ಳುವ ಕೆಲವರು “ ಹೊರಗೆ ಬಾ ನೋಡಿಕೊಳ್ಳುತ್ತೇವೆ” ಎಂದು ಮಾರ್ಕ್ ನ ಪ್ರಾಣಕ್ಕೆ ಬೆದರಿಕೆ ಹಾಕಿದ್ದೂ ಇತ್ತು.ಆದರೆ ಮಾರ್ಕ್ ನ ಗಟ್ಟಿ ದೇಹ, ಹಚ್ಚೆಗಳು, ಸೊಂಟದಲ್ಲಿ ನೇತಾಡುವ ಪಿಸ್ತೂಲು, ವಾಕಿ-ಟಾಕಿ ಇವನ್ನೆಲ್ಲ ನೋಡಿದ ನಂತರ ಯಾರೂ ಅವನನ್ನು ಘಾಸಿಗೊಳಿಸಲು ಯತ್ನಿಸಿರಲಿಲ್ಲ.ಹನ್ನೆರಡು ವರ್ಷದ ಅವನ ಅನುಭವದಲ್ಲಿ ಯಾವ ಪುಟ್ಟ ಹಲ್ಲೆಯೂ ನಡೆದಿರಲಿಲ್ಲ. ಈ ಮಾರಣಾಂತಿಕ ಹಲ್ಲೆ ನಡೆಸಿದ್ದು ಹಸಿರು ಜಾಕೆಟ್ ನವನೇ ಇರಬೇಕು.ಆದರೆ ಯಾಕೆ?
ಅವನನ್ನು ಮಾರ್ಕ್ ಕಳ್ಳನೆಂದು ಇನ್ನೂ ಹಿಡಿದೇ ಇರಲಿಲ್ಲ. ಆದರೂ ಅಷ್ಟೊಂದು ಅಪಾಯಕಾರಿ ಆಕ್ರಮಣ ನಡೆಸಲು ಕಾರಣವೇನಿತ್ತು? ಹಸಿರು ಜಾಕೆಟ್ಟಿನವನು ತನ್ನ ಮುಖವನ್ನು ಮಾರ್ಕ್ ನೋಡಿಬಿಟ್ಟಿರಬುದೆಂದು ನಂಬಿಕೊಂಡಿದ್ದನೇನೋ? ಅಂದರೆ ಅವನು ಸುತಾರಾಂ ಸೆಕ್ಯೂರಿಟಿಯವರಿಗೆ ಸಿಕ್ಕಿಬೀಳಲು ತಯಾರಿರಲಿಲ್ಲ. ಆದರೆ ಅಂಥಹ ಯಾವ ದೊಡ್ಡ ತಪ್ಪನ್ನು ಮಾಡಿದ್ದ? ಸುಮ್ಮ ಸುಮ್ಮನೆ ಹೆದರಿ ಧುಡುಕಿದನೇ?ಇದೀಗ ಸಿಕ್ಕಿಬಿದ್ದರೆ ಕೊಲೆಯ ಆಪಾದನೆ ಅವನ ಮೇಲೆ ಬರುತ್ತಿತ್ತು.ಅಥವಾ ಕಾಕತಾಳೀಯ ಎನ್ನುವಂತೆ ಇನ್ಯಾರೋ ಹಳೆಯ ಶತ್ರುಗಳು ನಡೆಸಿದ ಹಲ್ಲೆಯೋ? ’ ಥಿಂಕ್ ಲ್ಯಾಟೆರಲ್... ’ಎಂದು ಅವನಿಗವನು ಹೇಳಿಕೊಂಡ. ಆದರೆ ಅವನಲ್ಲಿ ಎಂಥದ್ದೋ ಕಸಿವಿಸಿ. ಏನೋ ತಪ್ಪುಮಾಡುತ್ತಿದ್ದೇನೆ ಎನ್ನುವ ಆರನೇ ಇಂದ್ರಿಯ, ಆದರೆ ಯಾವ ಯೋಚನೆಗಳೂ ಒಂದು ಕ್ರಮಕ್ಕೆ ಸಿಗುತ್ತಿಲ್ಲ... ನಡೆದ ಘಟನೆ ಮತ್ತು ಹಲ್ಲೆಗಳು ತಾಳೆಯಾಗುತ್ತಿಲ್ಲ.. ಏಕೆ?
ಕೊಬ್ಬು, ಮಜ್ಜೆಯೇ ಇಲ್ಲದ ಹಕ್ಕಿಯ ಕಾಲುಗಳಂತೆ ಕಾಣುವ ಅಸ್ಥಿಪಂಜರದಂಥಹ ಸಣಕಲು ಕೈ...ಅದ್ಯಾಕೆ ತನ್ನ ಯೋಚನೆಯನ್ನು ತುಂಡುಗೊಳಿಸುತ್ತಿದೆ? ಮಾರ್ಕ್ ಅರೆಕ್ಷಣ ಕಣ್ಣು ಮುಚ್ಚಿ ನಡೆದ ಘಟನೆಗಳ ನೆನಪಿನ ವೀಡಿಯೋವನ್ನು ಮತ್ತೆ ಮಿದುಳಿಗೆ ಆವಾಹಿಸಿಕೊಂಡ.
ಮತ್ತದೇ ಕೈ....
ಮಾರ್ಕ್ ಈ ಬಾರಿ ಹೌ ಹಾರಿದ. ಅವನ ಬೆನ್ನ ಹುರಿಯಲ್ಲೊಂದು ಚಳುಕು ಹಾದುಹೋಯಿತು. ಮಲಗಿದ್ದಲ್ಲೇ ಒಮ್ಮೆ ತರತರನೆ ನಡುಗಿದ.ತನ್ನ ಮಂಚಕ್ಕೆ ಅಳವಡಿಸಿದ್ದ ತುರ್ತು ಕರೆಗಂಟೆಯನ್ನು ಮಾರ್ಕ್ ಜೋರಾಗಿ ಒತ್ತಿಬಿಟ್ಟ. ನಿಮಿಷಾರ್ಧದಲ್ಲಿ ಇಬ್ಬರು ನರ್ಸ್ ಗಳು ಅವನ ಮುಂದೆ ಬಂದು ನಿಂತಿದ್ದರು. ಮಾರ್ಕ್ ತನ್ನ ಫೋನ್ ನ ಕಡೆ ಬೆರಳು ತೋರಿಸಿದ. “ ಇಷ್ಟೆಯೇ ?.. “.ಎನ್ನುವಂತೆ ಕೆಕ್ಕರಿಸಿ ನೋಡಿದ ನರ್ಸೊಬ್ಬಳು ಮುಖ ಸೊಟ್ಟಗೆ ಮಾಡಿಕೊಂಡು ಫೋನ್ ನ್ನು ಅವನಿಗೆ ನೀಡಿ ನಿರ್ಗಮಿಸಿದಳು.
ತನ್ನ ಫೋನ್ ಬಳಸಿದ ಮಾರ್ಕ್ ನೇರವಾಗಿ ಬೆರ್ರಿ ಮಾಲಿನ ಸೆಕ್ಯೂರಿಟಿ ರೂಂ ಗೆ ಕರೆಮಾಡಿದ. “ ಝುಲು-೯...ಐ ಯಾಂ ಫೈನ್ ನೌ..ಕಾಲಿಂಗ್ ಫ್ರಂ ದಿ ಹಾಸ್ಪಿಟಲ್......ಅಂತೇನೋ ಐದು ನಿಮಿಷ ಬಡಬಡಿಸಿದ. ತನ್ನ ಉದ್ರೇಕವನ್ನೆಲ್ಲ ಹೊರಹಾಕಿದ ನಂತರ ಅವನ ಎದೆ ಹಕ್ಕಿಯಂತೆ ಹಗುರಾಯಿತು. ಹಸಿರು ಜಾಕೆಟ್ಟಿನವನು ಲಿಲ್ಲಿ ಸ್ಟೋರ್ಸ್ ನಿಂದ ಅಸಲು ಏನನ್ನೂ ಕದ್ದಿರಲಿಲ್ಲ....!
5
ಅವನ ಸಂಸಾರ ಅವನ ಸುತ್ತಲೂ ನೆರೆದಿದ್ದರು. ಅವನ ಫೋನ್ ನಲ್ಲಿ “ ಕಂಗ್ರಾಜುಲೇಷನ್ಸ್ “ ..” ಬ್ರಾವೊ ಬ್ರೊ” . “.ಗೆಟ್ ವೆಲ್ ಸೂನ್ ” ಮೆಸೇಜುಗಳು ಹರಿದುಬರತೊಡಗಿದ್ದವು. ಅವನಿಗೇ ಅದನ್ನು ನಂಬಲಾಗಿರಲಿಲ್ಲ.ಮಾರ್ಕನ ಸಂದರ್ಶನಕ್ಕೆ ಕೋರಿ ಬಂದ ಮಾಧ್ಯಮಗಳ ಕರೆಗಳನ್ನು ಆಸ್ಪತ್ರೆಯವರು ಇವನ ಅಣತಿಯ ಮೇರೆಗೆ ನಿರಾಕರಿಸಿದ್ದರು. ನ್ಯೂಸ್ ಹೇಗೋ ಮಾಧ್ಯಮದವರ ಕೈಗೆ ಸೇರಿ ಬಿಟ್ಟಿತ್ತು.ಮಾರ್ಕ್ ನನ್ನು ಆ ವರ್ಷದ ಶೌರ್ಯ ಪ್ರಶಸ್ತಿಗೆ ಶಿಫಾರಸ್ಸು ಮಾಡಿರೆಂದು ಹಲವರು ನಾಯಕರು, ನಾಗರಿಕರು ಸರ್ಕಾರವನ್ನು ಒತ್ತಾಯಿಸಿ ಸಂದೇಶ ಕಳಿಸಿದ್ದರು. ಅವನ ಮಗಳು ತನ್ನಪ್ಪ ಎಲ್ಲರ ಹೀರೋ ಆದ ಬಗ್ಗೆ ಅಭಿಮಾನದಿಂದ ನೋಡಿದ್ದಳು.
ಮಾರ್ಕ್ ನನ್ನು ಕಾಡಿದ್ದ ಸಣಕಲು ಕೈ ಅಸಲು ಏನನ್ನೂ ಕದ್ದಿರಲಿಲ್ಲ. ಹಿಂದಕ್ಕೆ ಬಂದಿದ್ದ ಆ ಕೈ ಖಾಲಿಯಿತ್ತು!
ಬರಿ ಗೈ ....ಅದೇ ಮಾರ್ಕ್ ನ ಮಿದುಳನ್ನು ಕಾಡುತ್ತಿದ್ದ ಹೊಂದಾಣಿಕೆಯಾಗದಿರುವ ತರ್ಕವಾಗಿ, ಅವನ ಸುಪ್ತ ಮಿದುಳು ಪದೇ ಪದೇ ಅದನ್ನು ನಿರಾಕರಿಸುತ್ತಿತ್ತು.
ಏನನ್ನೂ ಕದ್ದಿರದಿದ್ದರೂ ಹಸಿರು ಜಾಕಟ್ಟಿನವನು ಸೆಕ್ಯೂರಿಟಿಯನ್ನು ತಪ್ಪಿಸಿ ಓಡಿದ್ದ.
ಮಾರ್ಕ್ ಫೋನ್ ಮಾಡಿದ್ದೂ ಒಂದು ಊಹೆಯ ಮೇಲೆ. ಕಲ್ಪನೆಯ ಮೇಲೆ.”ಸುಮ್ಮನೆಯಾದರೂ ಒಮ್ಮೆ ಹೋಗಿ ಚೆಕ್ ಮಾಡಿ ಬನ್ನಿ..ಪ್ಲೀಸ್ “ ಎಂದು ಮಾರ್ಕ್ ಗೋಗರೆದಿದ್ದ. ಅವನ ಕರೆಯನ್ನು ಯಾರೂ ತಕ್ಷಣಕ್ಕೆ ನಂಬದಿದ್ದರೂ ಅವಶ್ಯಕ ಅಲ್ಲಿಗೆ ಹೋಗಿ ಚೆಕ್ ಮಾಡಿದ್ದರು.ಸೆಕ್ಯೂರಿಟಿ ಕ್ಯಾಮರದ ಕಣ್ಣಿಗೆ ಕಾಣದಂತಿದ್ದ ಆ ಜಾಗದಲ್ಲಿ ಮಾರ್ಕ್ ನ ಊಹೆಯಂತೆಯೇ ಒಂದು ಸ್ಪೋಟಕ ಬಾಂಬ್ ಪತ್ತೆಯಾಗಿತ್ತು. ಅದನ್ನು ಅಲ್ಲಿಟ್ಟು ಹೊರಹೋಗಿ ಡೆಟೊನೇಟ್ ಮಾಡುವ ಹುನ್ನಾರದಲ್ಲಿದ್ದ ಹಸಿರು ಜಾಕೆಟ್ಟಿನವ ಮಾರ್ಕ್ ಹಿಂಬಾಲಿಸಿದ್ದನ್ನು ನೋಡಿ ತನ್ನ ಕೃತ್ಯ ಬಯಲಾಯಿತೆಂದೇ ಬಗೆದು ಓಡಿದ್ದ.ಅಕಸ್ಮಾತ್ ಸಿಕ್ಕಿಬಿದ್ದರೆ ತನ್ನ ಮೈ ಮೇಲೆ ಏನೂ ಸಿಗದಿರಲಿ ಎಂದು ತನ್ನ ಬಳಿಯಿದ್ದ ರಿಮೋಟ್ ಡಿವೈಸ್ ನ್ನು ಆ ಗಲ್ಲಿಯಲ್ಲಿ ಎಸೆದು ಅಡಗಿಕೊಂಡಿದ್ದ. ಅವನು ಆತ್ಮಾಹುತಿ ಮಾಡಿಕೊಳ್ಳಲಾಗಲೀ, ಜೈಲಿಗೆ ಹೋಗಲಾಗಲಿ ಸಿದ್ದನಿರದ ಬಾಡಿಗೆ ಭಯೋತ್ಪಾದಕನಿದ್ದಿರಬಹುದು. ಅವನ ಸಣಕಲು ಕೈ ಮಾದಕ ವ್ಯಸನಿಯೋರ್ವನಂತಿತ್ತು.
ಅವನ ಹಿಂದೆಯೇ ಗಲ್ಲಿಯನ್ನು ಪ್ರವೇಶಿದ ಮಾರ್ಕ್ ನ ತಲೆಗೆ ಕಲ್ಲೊಂದರಲ್ಲಿ ಜಜ್ಜಿದ್ದ.ತಾನು ಎಸೆದ ರಿಮೋಟ್ ನ್ನು ಹುಡುಕುವ ಗೋಜಿಗೆ ಹೋಗದೆ ತಪ್ಪಿಸಿಕೊಳ್ಳುವ ಒಂದೇ ಉದ್ದೇಶದಿಂದ ಓಡಿ ಹೋಗಿದ್ದ. ಅವನು ಎಸೆದ ರಿಮೋಟ್ ಕೂಡ ಪತ್ತೆಯಾದ ನಂತರ ಮಾರ್ಕ್ ನ ಕಥೆಗೆ ಪೂರ್ಣ ಆಧಾರಗಳು ದೊರಕಿದ್ದವು.
ಇನ್ನೂ ಶಾಪಿಂಗ್ ನಲ್ಲೇ ಇದ್ದ ಜನರನ್ನು ಸೆಕ್ಯೂರಿಟಿಯವರು ಆ ತತ್ ಕ್ಷಣವೇ ಹೊರಗೆ ಕಳಿಸಿದ್ದು ನ್ಯಾಷನಲ್ ನ್ಯೂಸ್ ಆಗಿ ಬಿಟ್ಟಿತ್ತು. ಬಾಂಬ್ ಸ್ಕ್ವಾಡ್ ನವರು ಬಂದು ಸ್ಪೋಟಕ ಬಾಂಬನ್ನು ನಿಷ್ಕ್ರಿಯಗೊಳಿಸಿದ್ದರು. ಮಾಧ್ಯಮದವರಿಗೆ ಬೆರ್ರಿ ಮಾಲ್ ನ ಘಟನೆಯ ಸುಳಿವು ಸಿಕ್ಕ ಕೂಡಲೇ ಈ ಕಥೆಯ ಬೆನ್ನು ಹತ್ತಿದ್ದರು. ತಮ್ಮ ಹೊಸ ಹೀರೋನ ಸಂದರ್ಶನವನ್ನು ಪಡೆಯಲು ಹಿಂದೆ ಬಿದ್ದಿದ್ದರು.ಸೆಕ್ಯೂರಿಟಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದ ಹಸಿರು ಜಾಕೆಟ್ಟಿನವನ ಅಸ್ಪಷ್ಟ ಚಿತ್ರಗಳನ್ನು ಎಲ್ಲ ನ್ಯೂಸ್ ಚಾನೆಲ್ ಗಳು ಬಿತ್ತರಿಸುತ್ತಿದ್ದವು.
ಶಾಪಿಂಗ್ ಮಾಲ್ ನಲ್ಲಿ ವ್ಯಾಪಾರ ಮಾಡುತ್ತಿದ್ದ ನೂರಾರು ಮುಗ್ಧ ನಾಗರಿಕರ ಜೀವಗಳು ಮಾರ್ಕ್ ನ ಧೈರ್ಯ ಮತ್ತು ಊಹಿಸಬಲ್ಲ ಬುದ್ಧಿಶಕ್ತಿಯಿಂದ ಉಳಿದದ್ದು ತಲೆಬರಹದ ಮುಖ್ಯಸುದ್ಧಿಯಾಗಿ ಎಲ್ಲ ಪತ್ರಿಕೆಗಳು, ರೇಡಿಯೋ ಮತ್ತು ಟಿ.ವಿ.ಗಳಲ್ಲಿ ಒಂದೇ ಸಮನೆ ಪ್ರಸಾರವಾಗುತ್ತಿತ್ತು.
ಮಾರ್ಕ್ ಎನ್ನುವ ಪುಟ್ಟ ಹೆಸರಿನಿಂದ ಕರೆಸಿಕೊಳ್ಳುತ್ತಿದ್ದ ಮಾರ್ಕಂಡೇಯ ತನ್ನ ಇನ್ನೊಂದು ದಿನದ ಕರ್ತವ್ಯವನ್ನು ದಿವಿನಾಗಿ ಮುಗಿಸಿದ ಅದ್ಭುತ ಅನುಭವದಿಂದ ಉಲ್ಲಸಿತನಾಗಿದ್ದ. ಮುಂದಿನ ವಿಚಾರ ಭಯೋತ್ಪಾದಕರನ್ನು ಹಿಡಿವ ತಂಡದವರದಾಗಿತ್ತು. ಮೆತ್ತನೆ ದಿಂಬಲ್ಲಿ ನೋಯುತ್ತಿದ್ದ ತಲೆಯನ್ನು ಹುದುಗಿಸಿದ ಮಾರ್ಕಂಡೇಯ ತನ್ನ ಮೇಲಿದ್ದ ಭಾರವೆಲ್ಲ ಹಗೂರವಾದಂತೆ ನಸುನಕ್ಕ.