Click here to Download MyLang App

ಡಿಯರ್ ರಿಚ್ಚಿ, - ಬರೆದವರು : ಸವಿರಾಜ್ | ರೋಮ್ಯಾನ್ಸ್

ಎಷ್ಟು ಹೊತ್ತು ಹೀಗೆಯೇ ಮಲ್ಕೊಂಡಿರ್ತೀಯಾ, ನಿದ್ದೆಬುರುಕ? ಎದ್ದೇಳು! ನಂಗೆ ನಿನ್ನ ಜೊತೆ ಇವತ್ತು ಎಷ್ಟೊಂದು ಮಾತಾಡೋಕಿದೆ. ನಿನ್ನ ಮೆದುವಾದ ಮುದಿಕೆನ್ನೆಗಳನ್ನು ಹಿಂಡಿಹಿಪ್ಪೆ ಮಾಡಿ ಮುದ್ದಾಡುವುದಕ್ಕಿದೆ. ನಿನ್ನ ಉದ್ದನೆಯ ಬಿಳಿಗಡ್ಡಕ್ಕೆ, ಮುತ್ತುಗಳ ಜೋಕಾಲಿ ಕಟ್ಟಿ ಆಡುವುದಕ್ಕಿದೆ. ಛಳಿಗಾಲ ಹತ್ತಿರ ಬರುತ್ತಿದೆ ನೋಡು, ಶಿಮ್ಲಾದಲ್ಲಿ ನಿನ್ನೆ ಸಣ್ಣಗೆ ಹಿಮಪಾತವಾಯಿತಂತೆ. ನಿನಗೆಂದು ನನ್ನ ಅಪ್ಪುಗೆಯಷ್ಟು ಬೆಚ್ಚಗಿನ ಸ್ವೆಟರ್ ನಿಟ್ ಮಾಡುತ್ತಿದ್ದೇನೆ, ಇನ್ನೇನು ತೋಳುಗಳನ್ನು ಜೋಡಿಸುವುದೊಂದು ಬಾಕಿ ಇದೆ ಅಷ್ಟೇ!

ನೀನು ಹೀಗೆ ಎಚ್ಚರ ತಪ್ಪಿದ ಹಾಗೆ ಮಲಗಿದ್ದು ಕಂಡಾಗಲೆಲ್ಲ, ಆಗುಂಬೆಯ ದಿನಗಳು ನೆನಪಾಗುತ್ತವೆ. ತೀರ್ಥಹಳ್ಳಿ ರಸ್ತೆಯಲ್ಲಿ ಕಲ್ಲಿನ ಇಟ್ಟಿಗೆಗಳ ನಿನ್ನ ದೊಡ್ಡ ಮನೆಯಿತ್ತು. ಮೈಸೂರಿನ ಬಳಿಯ ಹಳ್ಳಿಯೊಂದರಲ್ಲಿ ಅನೇಕ ವರ್ಷ ಸರ್ಕಾರಿ ಡಾಕ್ಟರ್ ಆಗಿ ಕೆಲಸ ಮಾಡಿದವನು, ಈ ಊರಿಗೆ ವರ್ಗ ಮಾಡಿಸಿಕೊಂಡು, ಹೆಂಡತಿ ಮಕ್ಕಳನ್ನು ಕಟ್ಟಿಕೊಂಡು ಬಂದಿದ್ದೆ. ಅದೇ ವರ್ಷ ಅಮ್ಮ ಆಗುಂಬೆಯ ಶಾಲೆಯಲ್ಲಿ ಹಿಂದಿ ಟೀಚರ್ ಕೆಲಸ ಹಿಡಿದಿದ್ದಳು. ಗೋಪಾಲಕೃಷ್ಣಸ್ವಾಮಿ ದೇವಸ್ಥಾನದ ರಥಬೀದಿಯಲ್ಲಿ, ಒಂದೇ ಕೋಣೆಯ ಬಾಡಿಗೆ ಮನೆಯಲ್ಲಿ ನಾನೂ, ಅವಳೂ ಹೊಸ ಬದುಕನ್ನು ಕಟ್ಟಿಕೊಳ್ಳುತ್ತಿದ್ದೆವು. ಹಿಂದಿನ ವರ್ಷವಷ್ಟೇ ಅಪ್ಪ, ಅಪಘಾತದಲ್ಲಿ ತೀರಿಕೊಂಡಿದ್ದರು. ಅಮ್ಮನಿಗೆ ಅಪ್ಪನ ಸಾವಿನ ಆಘಾತದಿಂದ ಹೊರಬರಬೇಕಿತ್ತು, ನನ್ನನ್ನೂ ಹೊರತರಬೇಕಿತ್ತು. ಶಿವಮೊಗ್ಗ ಪೇಟೆಯಲ್ಲಿದ್ದ ಮನೆಯನ್ನು ಮಾರಿ, ಬಂದ ಹಣವನ್ನು ನನ್ನ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಇಟ್ಟಳು. ಮಗಳನ್ನು ಇಂಜಿನಿಯರ್ ಮಾಡಿಯೇ ತೀರಬೇಕೆಂಬ ಹಠವಿತ್ತು ಅವಳಲ್ಲಿ, ಆದರೆ ನನ್ನ ಆಸಕ್ತಿ ಇದ್ದುದು ನಟನೆಯಲ್ಲಿ, ಅಷ್ಟರಲ್ಲಾಗಲೇ ನಾನು ಕುವೆಂಪು ನಾಟಕದ ರಕ್ತಾಕ್ಷಿಯಾಗಿ ಶಿವಮೊಗ್ಗದಲ್ಲಿ ಹೆಸರು ಮಾಡಿದ್ದೆ. ಎಸ್‌ಎಸ್‌ಎಲ್‌ಸಿ ಕೂಡಾ ಅಲ್ಲಿಯೇ ಮುಗಿಸಿದ್ದರೂ, ಆಗುಂಬೆಯಲ್ಲಿ ಕಾಲೇಜು ಓದುವ ಸೌಕರ್ಯ ಇರಲಿಲ್ಲ. ಅಮ್ಮ ಹರಿಹರಪುರದ ಕಾಲೇಜಿನಲ್ಲಿ ಪಿಸಿಎಂಬಿ ಕಾಂಬಿನೇಶನ್ನು ಕೊಡಿಸಿ, ಅಡ್ಮಿಶನ್ ಮಾಡಿಸಿದ್ದಳು. ಬೆಳಿಗ್ಗೆ ಏಳೂವರೆಯ ಬಸ್ ಹಿಡಿದು ಕಾಲೇಜು ತಲುಪಿದರೆ, ಸಂಜೆ ಆರು ಘಂಟೆಗೊಂದು ಬಸ್ ಹರಿಹರಪುರದಿಂದ ಆಗುಂಬೆಗೆ ಹೊರಡುತ್ತಿತ್ತು. ದಿನನಿತ್ಯದ ಬಸ್ಸಿನ ನೂಕುನುಗ್ಗಲಿನಲ್ಲಿ ಪರಿಚಯವಾದವಳು ನಿನ್ನ ಮಗಳು ಮಾಧವಿ. ಅವಳೂ ನನ್ನದೇ ಕಾಲೇಜಿನಲ್ಲಿ ಆರ್ಟ್ಸ್ ಓದುತ್ತಿದ್ದಳು. ನಾನವಳನ್ನು ಮುದ್ದಿನಿಂದ ಮಧೂ ಎಂದು ಕರೆಯುತ್ತಿದ್ದೆ. ಪರಿಚಯವಾದ ಕೆಲವೇ ತಿಂಗಳುಗಳಲ್ಲಿ ಅವಳನ್ನು ಎಷ್ಟು ಹಚ್ಚಿಕೊಂಡೆನೆಂದರೆ, ಬೇರೆ ಹುಡುಗಿಯರ ಜೊತೆ ಅವಳು ಗೆಳೆತನ ಬೆಳೆಸಿದರೆ ಹೊಟ್ಟೆಕಿಚ್ಚಾಗುವಷ್ಟು!

ಶನಿವಾರ ನಮ್ಮ ಕಾಲೇಜು ಮಧ್ಯಾಹ್ನಕ್ಕೇ ಮುಗಿದುಬಿಡುತ್ತಿತ್ತು. ನಾನು ಮತ್ತು ಮಧೂ ಸಿಕ್ಕ ಬಸ್ಸು ಹಿಡಿದು ಬಿದರಗೋಡಿಗೆ ಬಂದು, ಅಲ್ಲಿಂದ ಬಸ್ಸು ಬದಲಿಸಿ ಆಗುಂಬೆ ತಲುಪುತ್ತಿದ್ದೆವು. ಅವಳಿಗೇನೋ ಮನೆ ಸೇರಲು ಯಾವಾಗಲೂ ಆತುರವಿರುತ್ತಿತ್ತು. ಆದರೆ ನಾನೇನು ಮಾಡಲಿ ಮನೆಗೆ ಹೋಗಿ? ಅಮ್ಮ ಹತ್ತನೆಯ ತರಗತಿಯ ಹುಡುಗರಿಗೆ ಶನಿವಾರ ಮಧ್ಯಾಹ್ನ ಸ್ಪೆಶಲ್ ಕ್ಲಾಸ್ ತೆಗೆದು, ಮನೆಗೆ ಮರಳುವ ಹೊತ್ತಿಗೆ ಸಂಜೆಯಾಗುತ್ತಿತ್ತು. ಒಬ್ಬಳೇ ಮನೆಯಲ್ಲಿದ್ದರೆ, ಅಪಘಾತದಲ್ಲಿ ಛಿದ್ರಗೊಂಡಿದ್ದ ಅಪ್ಪನ ಮುಖವೇ ಕಣ್ಣ ಮುಂದೆ ಬರುತ್ತಿತ್ತು. ಒಂದೊಂದು ಕ್ಷಣವನ್ನೂ ದೂಡುವುದು ಹಿಂಸೆಯೆನಿಸುತ್ತಿತ್ತು.

ನನ್ನ ಮನಸ್ಸಿನ ತಳಮಳಗಳು ಮಧೂಗೆ ಅರ್ಥವಾಗಿರಬೇಕು. ಅದೊಂದು ಶನಿವಾರದ ಮಧ್ಯಾಹ್ನ ಬಸ್ಸು ಇಳಿದ ತಕ್ಷಣ, "ಬಾ, ಇವತ್ತು ನಮ್ಮನೆಗೆ ಹೋಗೋಣ" ಎಂದು ಕೈ ಹಿಡಿದು ಕರೆದೊಯ್ದಳು. ಗಾಳಿ - ಬೆಳಕು ಅಪರೂಪವಾಗಿದ್ದ ಒಂಟಿ ಕೋಣೆಯಲ್ಲಿ ಬೆಳೆಯುತ್ತಿದ್ದ ಹುಡುಗಿಗೆ, ಅವತ್ತು ಅವಳ ವಿಶಾಲವಾದ ಮನೆಯನ್ನು ನೋಡಿ ಹೊಟ್ಟೆಕಿಚ್ಚು ಮೂಡಿದ್ದು ಸುಳ್ಳಲ್ಲ. ನಿನ್ನ ಹೆಂಡತಿ ನನ್ನನ್ನು ತುಂಬು ಅಕ್ಕರೆಯಿಂದ ಮಾತನಾಡಿಸಿದ್ದರು. ಮಧೂ ತನ್ನ ಮನೆಯ ಮೂಲೆ ಮೂಲೆಯನ್ನೂ ಸಡಗರದಿಂದ ಪರಿಚಯಿಸುತ್ತಾ ಹೋದಳು: "ಇದು ಹಾಲ್, ಇದು ನನ್ನ ಬೆಡ್‌ರೂಮ್, ಇದು ಕಿಚನ್, ಈ ಕಡೆ ಬಂದ್ರೆ ಡೈನಿಂಗ್ ಹಾಲ್, ಮತ್ತಿದು ಅಪ್ಪನ ರೂಮು!" ಅಲ್ಲಿ ಮಲಗಿದ್ದೆ ನೀನು, ಈಗ ಮಲಗಿಕೊಂಡಿದ್ದೀಯಲ್ಲ, ಥೇಟು ಹೀಗೆಯೇ; ಖುದ್ದು ದೇವರೇ ಧ್ಯಾನದಲ್ಲಿ ಮುಳುಗಿದ ಹಾಗೆ! ನಿನ್ನ ಕೋಣೆ ಭಯ ಹುಟ್ಟಿಸುವಷ್ಟು ಶುಚಿಯಾಗಿತ್ತು, ಜಗತ್ತಿನಲ್ಲಿ ಯಾರೂ ಇಷ್ಟಪಡದ ಆಸ್ಪತೆಯ ವಾಸನೆಯ ಜೊತೆಜೊತೆಗೆ ಅಪರಿಚಿತ ಗಾಂಭೀರ್ಯ ಆವರಿಸಿತ್ತು. ಇನ್ನೇನು ನಾನು ನಿನ್ನ ರೂಮಿನಿಂದ ಹೊರನಡೆಯಬೇಕು, ಆಗ ಕಂಡಿತು ಅದು!! ಗೋಡೆಯ ಮೇಲೆ ರಾಜಪೋಷಾಕಿನಲ್ಲಿ ಧೀರಗಂಭೀರ ಭಂಗಿಯಲ್ಲಿ ನಿಂತ ಚೆಲುವನೊಬ್ಬನ ಫೋಟೋ ತೂಗುತ್ತಿತ್ತು. ನಾನು ಕಣ್ಣೆವೆ ಆಡಿಸುವುದನ್ನೂ ಮರೆತು ಅದನ್ನೇ ನೋಡುತ್ತಾ ಎಷ್ಟು ಹೊತ್ತು ನಿಂತಿದ್ದೆನೋ. "ನಮ್ ಕನ್ನಡ ಟೆಕ್ಸ್ಟಲ್ಲಿ ಕಾರ್ನಾಡರ ’ಯಯಾತಿ’ ನಾಟಕ ಇದೆ ನೋಡು, ಅದರಲ್ಲಿ ಅಪ್ಪ ಯಯಾತಿಯ ಪಾರ್ಟ್ ಮಾಡ್ತಿದ್ರು", ವಿವರಣೆ ಕೊಡುತ್ತಿದ್ದ ಮಧೂಳ ದನಿಯಲ್ಲಿ ನಾನು ಹಾಗೆ ಮೈ ಮರೆತಿದ್ದರ ಬಗ್ಗೆ ಅಸಹನೆಯಿತ್ತು!

ಅವತ್ತೇ ಸಂಜೆ ನಾನು ’ಯಾಯಾತಿ’ ನಾಟಕದ ಸಂಭಾಷಣೆಗಳನ್ನು ಓದುತ್ತಾ, ಇಷ್ಟು ಪ್ರಶಾಂತವಾಗಿ ಮಲಗಿದ್ದ ನಿನಗೆ, ಯಯಾತಿಯ ಲಂಪಟತೆಯನ್ನು ಅಭಿನಯಿಸಲು ಹೇಗೆ ಸಾಧ್ಯವಾಯಿತು ಎಂದು ಅಚ್ಚರಿಗೊಳ್ಳುತ್ತಿದ್ದೆ. ಮುಂದೆ ಪ್ರತಿ ಶನಿವಾರವೂ ಮಧೂ ನನ್ನನ್ನು ತನ್ನ ಮನೆಗೆ ಕರೆದೊಯ್ಯುತ್ತಿದ್ದಳು. ನಿನ್ನದು ಯಥಾಪ್ರಕಾರ ಕುಂಭಕರ್ಣ ನಿದ್ದೆ, ನಾನು ಬಂದು ಹೋದ ಪರಿವೆಯೂ ಇರುತ್ತಿರಲಿಲ್ಲ. ಅವತ್ತು ನನಗೇನೂ ಅದರ ಬಗ್ಗೆ ದೂರುಗಳಿರಲಿಲ್ಲ, ನಿನ್ನ ಮೇಲೆ ವಿಶೇಷವಾದ ಆಸಕ್ತಿಯೂ ಇರಲಿಲ್ಲ. ಆದರೆ ಗೋಡೆಯ ಮೇಲಿದ್ದ ಯಯಾತಿಯ ಪಟ ಮಾತ್ರ, ನನ್ನನ್ನು ಶರ್ಮಿಷ್ಠೆಯಾಗುವಂತೆ ಮೋಹಗೊಳಿಸುತ್ತಿತ್ತು.

ಆಗುಂಬೆಯ ಮಳೆ ನಕ್ಷತ್ರಗಳು, ನಿನ್ನನ್ನು ಮೊದಲ ಸಲ ಭೇಟಿಯಾಗುವ ಮುಹೂರ್ತವನ್ನು ಸೃಷ್ಟಿಸಿಯೇ ಬಿಟ್ಟವು. ಮಲೆನಾಡಿನ ಮಳೆಗಾಳಿಗೆ ಜ್ವರ ಹಿಡಿದು ಮಲಗಿದ್ದ ನನ್ನನ್ನು, ಅಮ್ಮ ನಿನ್ನ ಕ್ಲಿನಿಕ್‌ಗೆ ಕರೆದೊಯ್ದಿದ್ದಳು. ನೀನು ನನ್ನ ಹಣೆ, ಕುತ್ತಿಗೆ ಮುಟ್ಟಿ ನೋಡಿ, ನಾಡಿ ಹಿಡಿದು, ಸ್ಟೆಥಾಸ್ಕೋಪಿಗೆ ಕಿವಿಗೊಟ್ಟು, ತೋಳು ಹಿಡಿದು ಒಂದಿನಿತೂ ನೋವಾಗದಂತೆ ಇಂಜೆಕ್ಷನ್ ಚುಚ್ಚುತ್ತಿದ್ದರೆ; ಸ್ವಾರಸ್ಯವೇ ಇಲ್ಲದ ಈ ವ್ಯಕ್ತಿ, ಫೋಟೋದಲ್ಲಿನ ಚಂಚಲ ಕಣ್ಣುಗಳ ಆ ರಾಜಕುಮಾರ, ಒಬ್ಬನೇ ಆಗಿರಲು ಸಾಧ್ಯವೇ ಇಲ್ಲ ಎಂದೆನಿಸಿತ್ತು.

ಮುಂದಿನ ಶನಿವಾರ ನಿನ್ನ ಮನೆಗೆ ಬಂದಾಗ ನೀನು ಮಲಗಿರಲಿಲ್ಲ. ಒಂದಿಷ್ಟು ನವೋಲ್ಲಾಸದ ಹುಡುಗರನ್ನು ಕೂರಿಸಿಕೊಂಡು, ನಿನ್ನ ರೆಪರ್ಟರಿ ಆರಂಭಿಸುವ ಕನಸನ್ನು ಅವರೊಳಗೆ ಬಿತ್ತುತ್ತಿದ್ದೆ. ಮೊದಲ ಪ್ರದರ್ಶನಕ್ಕೆ ಯಯಾತಿ ನಾಟಕ ಆಡುವುದೆಂದು ನಿರ್ಧಾರವಾಯಿತು. ಆದರೆ ಸ್ತ್ರೀ ಪಾತ್ರಗಳಿಗೆ ಕಲಾವಿದರನ್ನು ಹೊಂದಿಸುವುದೇ ಕಷ್ಟವಾಯಿತು, ಆಗುಂಬೆಯಂತಹ ಪುಟ್ಟ ಹಳ್ಳಿಯಲ್ಲಿ ಆ ಕಾಲಕ್ಕೆ, ಹೆಣ್ಣು ಮಕ್ಕಳಿಗೆ ನಾಟಕಗಳಲ್ಲಿ ನಟಿಸುವಷ್ಟು ಸ್ವಾತಂತ್ರ್ಯವಿರಲಿಲ್ಲ. ಕಡೆಗೆ ವಿಧಿಯಿಲ್ಲದೆ ನಟನೆಯ ಅನುಭವವಿದ್ದ ನಿನ್ನ ಹೆಂಡತಿ ದೇವಯಾನಿಯಾದರು, ಮಧೂ ಚಿತ್ರಲೇಖೆಯಾದಳು, ಶರ್ಮಿಷ್ಠೆಯ ಪಾತ್ರಕ್ಕೆ ಯಾರೂ ಸಿಕ್ಕದಿದ್ದಾಗ ಮಧೂ ಇಷ್ಟವಿಲ್ಲದಿದ್ದರೂ ನನ್ನನ್ನು ಕೇಳಿದಳು. ನಿನ್ನ ಕೋಣೆಯೊಳಗೆಯೇ ನನ್ನ ಸ್ಕ್ರೀನ್‌ಟೆಸ್ಟ್ ಪಡೆದುಕೊಂಡಿದ್ದೆ. ರಕ್ತಾಕ್ಷಿಯ ಆವೇಶ ಹೊಕ್ಕವಳ ಮೈ ಅದುರುತ್ತಿತ್ತು, ಕಣ್ಣುಗಳಲ್ಲಿ ಕೆಂಡದ ಮಳೆ. ಮಾರ್ವೆಲಸ್ ಎಂದು ಚಪ್ಪಾಳೆ ತಟ್ಟಿದ ನಿನ್ನ ಕಣ್ಣುಗಳಲ್ಲಿ ಮೆಚ್ಚುಗೆಯ ಮಿಂಚು ಹೊಳೆಯುತ್ತಿತ್ತು.

ನನ್ನ ದೃಷ್ಠಿಯಲ್ಲಿ ಮನುಷ್ಯ ಮೂರು ಬಗೆಯ ಸಾಂಗತ್ಯಗಳಿಗಾಗಿ ಸದಾ ಹಾತೊರೆಯುತ್ತಿರುತ್ತಾನೆ: ಬೌದ್ಧಿಕ, ಭಾವನಾತ್ಮಕ ಹಾಗೂ ದೈಹಿಕ. ಕಡೆಯ ಎರಡು ಸಾಂಗತ್ಯಗಳು ನಿನ್ನ ಹೆಂಡತಿಯಿಂದ ನಿನಗೆ ಯಥೇಚ್ಛ ದೊರೆಯುತ್ತಿತ್ತು. ಆದರೆ ನೀನು ಕೇವಲ ನಟ, ವೈದ್ಯ ಮಾತ್ರ ಆಗಿರಲಿಲ್ಲ, ನಿನ್ನ ವ್ಯಕ್ತಿತ್ವ ಅದರಾಚೆಗೂ ತನ್ನ ರೆಕ್ಕೆಗಳನ್ನು ಚಾಚಿಕೊಂಡಿತ್ತು. ನೀನು ಭಾರತೀಯ ದರ್ಶನಗಳನ್ನು ಆಳವಾಗಿ ಓದಿಕೊಂಡಿದ್ದೆ, ಜಿಡ್ಡು ಕೃಷ್ಣಮೂರ್ತಿ ನಿನ್ನ ಮೇಲೆ ಅಗಾಧವಾದ ಪ್ರಭಾವ ಬೀರಿದ್ದರು, ಬಿ ಸಿ ರಾಮಚಂದ್ರ ಶರ್ಮರ ಕವಿತೆಗಳನ್ನು ಬಹುವಾಗಿ ಮೆಚ್ಚುತ್ತಿದ್ದೆ. ನಾಟಕದ ರಿಹರ್ಸಲ್ಲುಗಳ ಮಧ್ಯೆ ನಾವು ಘಂಟೆಗಟ್ಟಲೆ ಮಾತನಾಡುತ್ತಿದ್ದೆವು. ನಾನು ನಿನ್ನಷ್ಟು ಬುದ್ಧಿವಂತಳಲ್ಲದಿದ್ದರೂ, ನಿನ್ನ ತುಡಿತಗಳಿಗೆ ಸ್ಪಂದಿಸುವಷ್ಟು ಸೂಕ್ಷ್ಮತೆ ನನ್ನಲ್ಲಿತ್ತು. ರೆಪರ್ಟರಿಯ ಬಗ್ಗೆಯೇ ನಿನಗೆ ಬೇರಾರೊಂದಿಗೂ ಹಂಚಿಕೊಳ್ಳಲಾಗದಷ್ಟು ದೊಡ್ಡ ದೊಡ್ಡ ಕನಸುಗಳಿದ್ದವು. ನಿನ್ನೊಳಗೆ ಹೊಸ ಹೊಸ ಕನಸುಗಳು ಚಿಗುರೊಡೆದಂತೆಲ್ಲ, ನನ್ನ ಬಳಿಗೆ ಬರುತ್ತಿದ್ದೆ, ನಾನು ನಿನ್ನ ಕನಸುಗಳನ್ನು ನನ್ನದೂ ಆಗಿಸಿಕೊಂಡು ನೀರೆರೆಯುತ್ತಿದ್ದೆ. ನಾವಿಬ್ಬರೂ ಸೇರಿ "ನಿದರ್ಶನ - ಪ್ರದರ್ಶನ - ಸಂದರ್ಶನ" ಎನ್ನುವ ಪರಿಕಲ್ಪನೆಯಡಿಯಲ್ಲಿ ರೂಪಿಸಿದ್ದ, ಭಾರತದ ವಿವಿಧ ರಂಗಪ್ರಕಾರಗಳ ಪ್ರಾತ್ಯಕ್ಷಿಕೆಯ ಮೂಲಕ ನಿದರ್ಶನ, ಅತ್ಯುತ್ತಮ ನಾಟಕಗಳ ಪ್ರದರ್ಶನ ಮತ್ತು ಶ್ರೇಷ್ಟ ನಾಟಕಕಾರರ ಸಂದರ್ಶನ ಕಾರ್ಯಕ್ರಮ, ಕರ್ನಾಟಕದ ರಂಗಾಸಕ್ತರ ಮೆಚ್ಚುಗೆ ಪಡೆದಿತ್ತು. ಒಮ್ಮೊಮ್ಮೆ ಇಬ್ಬರೂ ತಡರಾತ್ರಿಯವರೆಗೂ ನಿನ್ನ ಕೋಣೆಯೊಳಗೆ ಭಿತ್ತಿಪತ್ರಗಳನ್ನು ಬರೆಯುತ್ತಿರುತ್ತಿದ್ದೆವು, ನಾನು ಯಾವುದೋ ಸರಿಹೊತ್ತಿನಲ್ಲಿ ನನಗೇ ಅರಿವಿಲ್ಲದೆ ನಿದ್ದೆಗೆ ಜಾರುತ್ತಿದ್ದೆ, ನೀನು ನನ್ನ ಮೇಲೊಂದು ಬ್ಲಾಂಕೆಟ್ ಹೊದಿಸಿ ಕೆಲಸ ಮುಂದುವರೆಸುತ್ತಿದ್ದೆ. ನಿನ್ನ ಹೆಂಡತಿ, ಮಗಳು ಒಂದೇ ಒಂದು ದಿನಕ್ಕೂ ನಮ್ಮನ್ನು ಅನುಮಾನದ ದೃಷ್ಟಿಯಿಂದ ನೋಡಲಿಲ್ಲ. ಖುದ್ದು ನಮಗೇ ಒಬ್ಬರೊಬ್ಬರ ಮೇಲೆ ಅನುಮಾನಗಳು ಇರಲಿಲ್ಲ, ನಮ್ಮಿಬ್ಬರ ನಡುವೆ ಬಿಡಿಸಲಾಗದ ಬಂಧವೊಂದು ಮೂಡಬಹುದೆಂಬ ಕಲ್ಪನೆಯೂ ಇರಲಿಲ್ಲ. ಆ ದಿನಗಳಲ್ಲಿಯೇ ಖ್ಯಾತ ನಟ ಶಂಕರನಾಗ್ ಆಗುಂಬೆಯಲ್ಲಿ ತಮ್ಮ ’ಮಾಲ್ಗುಡಿ ಡೇಸ್’ ಧಾರಾವಾಹಿಯ ಚಿತ್ರೀಕರಣ ನಡೆಸುತ್ತಿದ್ದರು, ನೀನು ಅವರ ಪಕ್ಕದಲ್ಲಿ ನನ್ನನ್ನು ನಿಲ್ಲಿಸಿ ತೆಗೆದಿದ್ದ ಕಪ್ಪು ಬಿಳುಪು ಫೋಟೋ ಈಗಲೂ ನನ್ನ ಬಳಿಯಲ್ಲಿದೆ.

ಪಿಯು ಮುಗಿಸಿದ ನನಗೆ ಮೈಸೂರಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ಸಿಕ್ಕಿತು. ಮೈಸೂರಿನ ಬಸ್ಸು ಹತ್ತಿಸುವ ಸಂಜೆ, ಮಧೂ ನನ್ನನ್ನು ತಬ್ಬಿಕೊಂಡು ಭೋರ್ಗರೆದು ಅತ್ತಿದ್ದಳು. ಇಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್‌ನಲ್ಲಿ ಹೊಸ ಗೆಳತಿಯರು ಸಿಕ್ಕುವವರೆಗೆ ನಾನೂ ಕೂಡಾ ಮಧೂಳನ್ನು ತುಂಬಾನೇ ಮಿಸ್ ಮಾಡ್ತಿದ್ದೆ. ಆದರೆ ಕೆಲವೇ ದಿನಗಳಲ್ಲಿ ನನ್ನನ್ನು ವಿವರಿಸಲಾಗದ ಖಾಲಿತನ ಆವರಿಸತೊಡಗಿತು. ಕಾರಣವೇ ಇಲ್ಲದೆ ಕಣ್ಣಂಚಿನಲ್ಲಿ ನೀರು ಜಿನುಗುತ್ತಿತ್ತು. ನಿನ್ನನ್ನು ನೋಡಲೇಬೇಕೆಂದು ಮನಸ್ಸು ಹಾತೊರೆಯುತ್ತಿತ್ತು. ನೀನು ಜೊತೆಗೇ ಇದ್ದಾಗ ಹುಟ್ಟದಿದ್ದ ಬಾಂಧವ್ಯ ದೂರಾದ ಮೇಲೆ ಹೇಗೆ ಹುಟ್ಟಿತು ಎಂಬ ನನ್ನ ಪ್ರಶ್ನೆಗೆ ಇನ್ನೂ ಉತ್ತರವೇ ಸಿಕ್ಕಿಲ್ಲ. ದಸರಾ ಹಬ್ಬಕ್ಕೆ ಒಂದು ವಾರ ರಜೆ ಸಿಕ್ಕಿದ್ದೇ ತಡ, ಗೂಡಿನೆಡೆಗೆ ತುಡಿಯುವ ಹಕ್ಕಿಯಂತೆ ನಿನ್ನ ಬಳಿಗೆ ಓಡಿ ಬಂದಿದ್ದೆ. ಅವತ್ತು ನನ್ನ ಕಂಡ ತಕ್ಷಣ ನೀನೇಕೆ ಅಷ್ಟು ಭಾವುಕನಾಗಿದ್ದೆ ರಿಚ್ಚಿ?!

ಯಾವಾಗ ರಜೆ ಸಿಕ್ಕರೂ ನಾನು ನಿನಗೋಸ್ಕರ ಓಡಿ ಬರುತ್ತಿದ್ದೆ. ನೀನು ಆಗುಂಬೆಯ ಸೂರ್ಯಾಸ್ತವನ್ನು ತೋರಿಸುತ್ತಾ ಕುವೆಂಪುರ ’ಆನಂದಮಯ ಈ ಜಗಹೃದಯ’ ಕವಿತೆಯನ್ನು ಹಾಡಲು ಕಲಿಸಿದೆ. ಪೌರಾಣಿಕ ಪಾತ್ರಗಳಲ್ಲಷ್ಟೇ ನಟಿಸಿದ್ದ ನನಗೆ, ಸಾಮಾಜಿಕ ನಾಟಕಗಳ ರೂಪುರೇಖೆ, ಮಾತಿನ ಸಹಾಯವಿಲ್ಲದೆಯೂ ಪಾತ್ರದ ಒಳಗನ್ನು ತೆರೆಯುವುದನ್ನು ನಟಿಸಿ ತೋರಿಸಿದೆ. ನನ್ನನ್ನು ಇನ್ನಿಲ್ಲದ ಕಾಳಜಿಯಿಂದ ತಿದ್ದಿದೆ, ತೀಡಿದೆ. ಎರಡನೇ ವರ್ಷದ ಕೋರ್ಸು ಮುಗಿದ ಮೇಲಿನ ಒಂದು ತಿಂಗಳ ರಜೆಯಲ್ಲಿ ಪುತಿನರ ಗೋಕುಲ ನಿರ್ಗಮನವನ್ನು ರಂಗಕ್ಕೆ ತಂದೆವು, ನಿನ್ನ ಕೃಷ್ಣ, ನನ್ನದು ರಾಧೆ. ನಿನ್ನ ಕೃಷ್ಣನ ಕೊಳಲ ಉಲಿ ಕೇಳಿ ನಾನು ಸಮ್ಮೋಹಿತಳಾಗುತ್ತಿದ್ದೆ, ನೀನು ಗೋಕುಲವನ್ನು ತೊರೆಯುವ ಕ್ಷಣದಲ್ಲಿ ನಿಜಕ್ಕೂ ವ್ಯಾಕುಲಳಾಗುತ್ತಿದ್ದೆ. ಈಗಂತೂ ಒಬ್ಬರನ್ನೊಬ್ಬರು ಬಿಟ್ಟಿರುವುದೇ ದುಸ್ತರವಾಯಿತು. ನೀನು ತಿಂಗಳಿಗೆ ಎರಡು ಸಲವಾದರೂ ನನ್ನನ್ನು ಹುಡುಕಿಕೊಂಡು ಮೈಸೂರಿಗೆ ಬರುತ್ತಿದ್ದೆ, ನಾನು ಕ್ಯಾಲೆಂಡರ್‌ನ ಮೇಲೆ ರಜೆಗಳನ್ನು ಗುರುತು ಹಾಕಿ ಕಾಯುತ್ತಿದ್ದೆ.

ಗಂಧದ ಕಾಡಿಗೆ ಬೆಂಕಿ ಬಿದ್ದರೆ, ಊರಿಗೆ ಪರಿಮಳ ವ್ಯಾಪಿಸದೆ ಇರುತ್ತದೆಯೇ? ಮೊದಲೇ ಪುಟ್ಟ ಊರು ಆಗುಂಬೆ. ಜನರು ಬಾಯಿಗೊಂದರಂತೆ ಮಾತಾಡಿದರು. ಕೆಲವರು “ಮಗಳ ವಯಸ್ಸಿನ ಹುಡುಗಿಯ ತಲೆ ಕೆಡಿಸಿದ್ದಾನೆ ಇವನು” ಎಂದರು; ಮತ್ತೆ ಕೆಲವರು “ದುಡ್ಡಿನ ಆಸೆಗೆ ಡಾಕ್ಟರಪ್ಪನ್ನ ಬುಟ್ಟಿಗೆ ಹಾಕಿಕೊಂಡಿದಾಳೆ” ಅಂದರು. ಅಸಲಿಗೆ ನಿನಗೆ ನನ್ನ ಮೇಲೆ ದೈಹಿಕ ಆಕರ್ಷಣೆಯೇ ಇರಲಿಲ್ಲ, ನಾನು ಮೆಚ್ಚಿದ್ದು ನಿನ್ನೊಳಗಿನ ನಟ, ತತ್ತ್ವಜ್ಞಾನಿ ಮತ್ತು ಮನುಷ್ಯನನ್ನು, ಡಾಕ್ಟರ್‌ನನ್ನಲ್ಲ. ನಿನ್ನ ಮಗಳು ನಡುರಸ್ತೆಯಲ್ಲಿ ನಿಲ್ಲಿಸಿ ನನ್ನ ಕಪಾಳಕ್ಕೆ ಹೊಡೆದಳು; ನನ್ನ ಅಮ್ಮ ಟೀಚರ್ ಕೆಲಸಕ್ಕೆ ರಾಜೀನಾಮೆ ನೀಡಿ, ಮನೆ ಖಾಲಿ ಮಾಡಿ ನನ್ನೊಂದಿಗೆ ಮೈಸೂರಿಗೆ ಬಂದು ಕಾವಲಾಗಿ ನಿಂತಳು.

ಮೈಸೂರಿನಲ್ಲಿ ನಿನ್ನ ನೆನಪು ತೀವ್ರವಾಗಿ ಕಾಡಿದಾಗಲೆಲ್ಲ ರಂಗಾಯಣದ ನಾಟಕಗಳನ್ನು ನೋಡಲು ಹೋಗುತ್ತಿದ್ದೆ. ನನ್ನೊಳಗಿನ ನಟಿ ನನ್ನನ್ನು ಕೇವಲ ಪ್ರೇಕ್ಷಕಳಾಗಿ ಉಳಿಯಲು ಬಿಡಲಿಲ್ಲ, ಕ್ರಮೇಣ ಅಲ್ಲಿನ ಕಲಾವಿದರು, ನಿರ್ದೇಶಕರ ಪರಿಚಯವಾಯಿತು. ನಿನ್ನ ಶಿಷ್ಯೆಯೆಂದು ತಿಳಿದ ಮೇಲಂತೂ ಅವರು ನನ್ನನ್ನು ಇನ್ನಷ್ಟು ಆತ್ಮೀಯತೆಯಿಂದ ಕಂಡರು. ರಂಗಾಯಣದ ನಟನಾ ಶಿಬಿರಗಳ ಭಾಗವಾದೆ, ಕೋರ್ಸು ಮುಗಿಯುತ್ತಿದ್ದಂತೆ ಪೂರ್ತಿಯಾಗಿ ರಂಗಭೂಮಿಗೆ ನನ್ನನ್ನು ನಾನು ಅರ್ಪಿಸಿಕೊಂಡೆ. ಅಲ್ಲಿ ಗುರುವಾಗಿ ಸಿಕ್ಕವರು ಬಿ ವಿ ಕಾರಂತರು. ಆಂಗಿಕ, ಧ್ವನಿ ಅಭ್ಯಾಸ, ಸಂಗೀತ ಎಲ್ಲವನ್ನೂ ವಿಸ್ತಾರವಾಗಿ ಹೇಳಿಕೊಡುತ್ತಿದ್ದರು. ಮಿಡ್ ಸಮ್ಮರ್ ನೈಟ್ಸ್ ಡ್ರೀಮ್, ಕತ್ತಲೆ ಬೆಳಕು, ಅಲೆಗಳಲ್ಲಿ ರಾಜಹಂಸ, ಚಂದ್ರಹಾಸ ಮೊದಲಾದ ನಾಟಕಗಳಲ್ಲಿ ನಟಿಸಿದೆ. ರಂಗಭೂಮಿಯ ಅನುಭವ ಸಿನಿಮಾಗೆ ಮೆಟ್ಟಿಲಾಯಿತು. ನಟಿಸಿದ ಮೊದಲ ಚಿತ್ರಕ್ಕೇನೇ ಶ್ರೇಷ್ಟ ಪೋಷಕ ನಟಿ ರಾಜ್ಯ ಪ್ರಶಸ್ತಿ ಘೋಷಣೆಯಾಯಿತು. ಸಂಭ್ರಮದ ನಡುವೆಯೂ ನಿನ್ನ ನೆನಪು ತೀವ್ರವಾಗಿ ಬಾಧಿಸುತ್ತಿತ್ತು.

ರಾಜ್ಯ ಪ್ರಶಸ್ತಿ ಸ್ವೀಕರಿಸಿ ಚಪ್ಪಾಳೆಗಳ ನಡುವೆ ವೇದಿಕೆಯಿಂದ ಕೆಳಗಿಳಿದರೆ, ಅಲ್ಲಿ ಮುಗುಳ್ನಗುತ್ತ ನಿಂತಿದ್ದೆ ನೀನು! ಸುತ್ತಲೂ ಪತ್ರಕರ್ತರಿದ್ದಾರೆ, ದೊಡ್ಡ ಜನಸಮೂಹವಿದೆ ಎನ್ನುವ ಪರಿವೇ ಇಲ್ಲದೆ ಬಿಗಿಯಾಗಿ ತಬ್ಬಿಕೊಂಡು ಮೈಮರೆತಿದ್ದೆವು. ಮಾರನೆಯ ದಿನವೇ ಮಧೂ ನಿನ್ನನ್ನು ಅಹಮದಾಬಾದ್‌ನ ತನ್ನ ಗಂಡನ ಮನೆಗೆ ಕರೆದೊಯ್ದಳು. ಈ ಸಲ ನಿನ್ನನ್ನು ಕಳೆದುಕೊಳ್ಳಲು ನಾನು ತಯಾರಿರಲಿಲ್ಲ. ನಿನ್ನನ್ನೇ ಹಿಂಬಾಲಿಸಿ ಅಹಮದಾಬಾದ್‌ಗೂ ಬಂದೆ. ಬುದ್ಧಿ - ಭಾವಗಳನ್ನೂ ಮೀರಿದ ಉತ್ಕಟತೆಯೊಂದು ನಮ್ಮಿಬ್ಬರನ್ನೂ ಇನ್ನಷ್ಟು ಹತ್ತಿರಕ್ಕೆ ತರುತ್ತಿತ್ತು. ಅಂತಹ ಉತ್ಕಟ ಕ್ಷಣಗಳ ಫಲವಾಗಿ ನನ್ನ ಮಗಳು ನಕ್ಷತ್ರ ಭೂಮಿಗೆ ಬಂದಳು.

ಅಮ್ಮನ ಹೃದಯ ದೊಡ್ಡದು, ನನ್ನ ಮಗಳನ್ನು ತನ್ನ ಮಗಳಿಗಿಂತಲೂ ಅಕ್ಕರೆಯಿಂದ ಸಾಕಿದಳು. ಸುತ್ತಲಿನ ಜಗತ್ತು ಕುಹಕದ ನಗೆ ನಕ್ಕಾಗಲೆಲ್ಲ, ನನ್ನನ್ನು ಅಪ್ಪಿ ಸಾಂತ್ವನಗೊಳಿಸುತ್ತಿದ್ದಳು. ಆದರೆ ಎಲ್ಲ ಸಂತೋಷಗಳಿಗೂ ಒಂದು ಅಂತ್ಯವಿರಲೇಬೇಕಲ್ಲ. ಮೊಮ್ಮಗಳನ್ನು ತೊಡೆಯ ಮೇಲೆ ಮಲಗಿಸಿಕೊಂಡು ಜೋಗುಳ ಹಾಡುತ್ತಿದ್ದವಳ ಉಸಿರು ನಿಂತ ದಿನ ನಾನು ಅನಾಥಳಾಗಿದ್ದೆ. ತಬ್ಬಿಕೊಂಡು ಅಳಲಾದರೂ ನಿನ್ನ ತೋಳು ಬೇಕಿತ್ತು, ಆದರೆ ನಿನ್ನ ಹೆಂಡತಿ, ಮಗಳು ನಿನ್ನನ್ನು ದೂರದ ಹಿಮಾಚಲ ಪ್ರದೇಶದ ಧರ್ಮಶಾಲಾಗೆ ಒಯ್ದಿದ್ದರು.

ಯಾವಾಗ ನೀನು ರಕ್ತದ ಕ್ಯಾನ್ಸರ್‌ಗೆ ತುತ್ತಾದ ವರ್ತಮಾನ ತಲುಪಿತೋ, ನನಗಿಲ್ಲಿ ನಿಲ್ಲಲಾಗಲಿಲ್ಲ. ಮೊದಲ ವರ್ಷದ ಪಿಯು ಓದುತ್ತಿರುವ ಮಗಳನ್ನು ಕಟ್ಟಿಕೊಂಡು, ಧರ್ಮಶಾಲಾದಲ್ಲಿ ನಿನ್ನ ಮನೆಯ ಪಕ್ಕದ ಬೀದಿಯಲ್ಲಿ ಮನೆ ಮಾಡಿದೆ. ನೀನು ಮುಂಜಾವು ವಾಕ್ ಮಾಡುವ ನೆಪದಲ್ಲಿ ನಿನ್ನ ವಾಕಿಂಗ್ ಸ್ಟಿಕ್ ಊರುತ್ತಾ ನನ್ನ ಮನೆಯೆಡೆಗೆ ನಡೆದು ಬರುತ್ತಿದ್ದೆ. ಈ ಕೆಟ್ಟ ಖಾಯಿಲೆ ನಿನ್ನನ್ನು ಕೆಲವೇ ವರ್ಷಗಳಲ್ಲಿ ನಿತ್ರಾಣಗೊಳಿಸಿತು, ಮುಖ ಸುಕ್ಕುಗಟ್ಟಿತು, ತಲೆ ಬೋಳಾಯಿತು, ಆಸರೆಯಿಲ್ಲದೆ ನಡೆಯುವುದಕ್ಕೂ ಆಗದಷ್ಟು ವೃದ್ಧನನ್ನಾಗಿ ಮಾಡಿತು. ಆದರೂ ನಿನ್ನ ಮುಖದ ಮೇಲಿನ ಮುಗುಳ್ನಗೆ ಮಾಸಲಿಲ್ಲ. ನೀನೀಗ ಮೋಹಕ ನಿಲುವಿನ ಯಯಾತಿಯಲ್ಲ, ಅನಿರೀಕ್ಷಿತ ವೃದ್ಧಾಪ್ಯವನ್ನು ಘನತೆಯಿಂದ ಸ್ವೀಕರಿಸಿದ ಈ ಶರ್ಮಿಷ್ಠೆಯ ಮುದ್ದು ಮಗು ಪುರು. ನನ್ನ ಮಡಿಲಿನ ಮೇಲೆ ಮಲಗಿಕೊಂಡು ನನ್ನ ರಂಗಗೀತೆಗಳಿಗೆ ಕಿವಿಯಾಗುತ್ತಿದ್ದೆ, ನಿನ್ನ ಮಡಿಲಿನ ಮೇಲೆ ನಮ್ಮ ಮಗಳು.

ಇವತ್ತು ಬೆಳಗ್ಗಿನ ಜಾವ ನೀನು ಹೊರಟುಹೋದ ಸುದ್ದಿ ತಲುಪಿತು. ನಿನ್ನ ಶವವನ್ನು ಮುಟ್ಟುವ, ಮುತ್ತಿಕ್ಕುವ, ದುಃಖಿಸುವ ಅವಕಾಶ ನನಗಿಲ್ಲ. ಅದೇನಿದ್ದರೂ ನಿನ್ನ ಹೆಂಡತಿ, ಮಗಳಿಗೆ ಮಾತ್ರ. ನಾನು ಮನೆಯ ಎದುರಿಗಿನ ರಸ್ತೆಯಲ್ಲಿ ನಿಂತು, ಮಲಗಿರುವ ನಿನ್ನ ಧ್ಯಾನಸ್ಥ ಮೊಗವನ್ನು ದಿಟ್ಟಿಸುತ್ತಿದ್ದೇನೆ. ನಕ್ಷತ್ರ ಎಷ್ಟು ಕರೆದರೂ ಬರಲಿಲ್ಲ, ಮನೆಯಲ್ಲಿಯೇ ಬಿಕ್ಕುತ್ತ ಮಲಗಿದ್ದಾಳೆ, ನಿನ್ನನ್ನು ಹೀಗೆ ನೋಡುವ ಧೈರ್ಯವಿಲ್ಲವಂತೆ ಅವಳಿಗೆ. ನಾಟಕ ಮುಗಿಯುವ ಮುನ್ನವೇ ನನ್ನೊಬ್ಬಳನ್ನೇ ರಂಗದ ಮೇಲೆ ಬಿಟ್ಟು ಏಕೆ ನಿರ್ಗಮಿಸಿದೆ? ಮಲಗಿದ್ದು ಸಾಕು, ಎದ್ದೇಳು ರಿಚ್ಚಿ, ಎದ್ದೇಳೂ...