Click here to Download MyLang App

ಜೊತೆಗಿರುವೆ ನಾನು ಎಂದೆಂದಿಗೂ - ಬರೆದವರು : ವಿ. ಕೆ. ಎಸ್. ಶೆಟ್ಟಿ | ಸಾಮಾಜಿಕ


"ಏನೋ.. ನಟರಾಜ್, ಎಲ್ಲಿಗೆ ಹೊರಟಿದ್ದೀಯಾ?" ಎಂದು ತನ್ನ ಬಟ್ಟೆ ಬರೆಗಳನ್ನು ಪ್ಯಾಕ್ ಮಾಡುತ್ತಿದ್ದ ನಟರಾಜನನ್ನು ಆತಂಕದಿಂದ ಕೇಳಿದಳು ವಿದ್ಯಾ.

" ನೋಡೇ.. ಯಾರದರೂ ಒಳ್ಳೆಯ ಕೆಲಸಕ್ಕೆ ಹೋರಟಿರುವರನ್ನು ಎಲ್ಲಿಗೆ ಹೋಗುತ್ತಿದ್ದೀಯಾ ಎ೦ದು ಕೇಳಬಾರದು ಎಂದು ನಮ್ಮ ಅಜ್ಜಿ ಹೇಳುತ್ತಿದ್ದರು. ಆಗ ನಾವು ಹೊರಟ ಕೆಲಸ ಯಶಸ್ವಿಯಾಗುವುದಿಲ್ಲವಂತೆ" ಎ೦ದು ಗದರಿದ ವಿದ್ಯಾಳಿಗೆ.

"ಅದು ಎಲ್ಲಾ ಮೂಡ ನಂಬಿಕೆ. ನಿನ್ನಂತ ವಿದ್ಯಾವಂತರು ಅದನ್ನೆಲ್ಲಾ ತಲೆಯಲ್ಲಿ ಇಟ್ಟುಕೊಳ್ಳಬಾರದು. ಯಾವಾಗಲೂ ಧನಾತ್ಮಕವಾಗಿ ಯೋಚಿಸಿ ಹೊರಟರೆ ನಿನ್ನ ಕೆಲಸದಲ್ಲಿ ಯಶಸ್ವಿಯಾಗುತ್ತೀಯಾ. ಆಯ್ತು ಈಗಲಾದರೂ ಹೇಳು. ನೀನು ದೂರ ಹೊರಟಿದ್ದೀಯಾ?" ಎಂದು ಮತ್ತೆ ಪ್ರಶ್ನಿಸಿದಳು ವಿದ್ಯಾ.

"ಮುಂಬೈ ನಗರಿಗೆ ಹೋರಟಿದ್ದೇನೆ. ನನಗೆ ಈ ಬೆಂಗಳೂರು ಇಷ್ಟವಾಗುತ್ತಿಲ್ಲ. ಅಲ್ಲಿ ನನ್ನಲ್ಲಿರುವ ಪ್ರತಿಭೆಗಳಿಗೆ ತುಂಬಾ ಅವಕಾಶಗಳಿವೆ. ಮುಂಬೈಗೆ ಕೂಡಲೇ ಬಂದು ಬಿಡು ಅಂತ ಮೊನ್ನೆ ಒಬ್ಬ ನಿರ್ಮಾಪಕರೇ ಸ್ವತಃ ಫೋನ್ ಮಾಡಿದ್ದರು" ಎ೦ದು ಉತ್ತರಿಸಿದ ನಟರಾಜ.

"ಹಾಗಿದ್ದರೆ ನೀನು ನನ್ನನ್ನು ಬಿಟ್ಟು ಹೋಗುತ್ತಿದ್ದೀಯಾ? ನೀನು ನನ್ನ ಬಿಟ್ಟು ಅತ್ತ ಹೋದರೆ ನನಗೆಲ್ಲಿ ಗೌರವ ಇದೆ ಇಲ್ಲಿ?"

"ಆದರೆ, ನಿನ್ನ ಜೊತೆಗಿದ್ದರೆ ನನಗೆಲ್ಲಿ ಸುಖವಿದೆ? ನಾನು ಜೀವನದಲ್ಲಿ ಏನೇನೋ ಸಾಧನೆ ಮಾಡಬೇಕೆಂದಿದ್ದೇನೆ. ನಿನ್ನನ್ನೇ ನಂಬಿಕೊಂಡು ಬೆಳಿಗ್ಗೆಯಿಂದ ರಾತ್ರಿಯ ತನಕ ದುಡಿಯುವ ವ್ಯವಧಾನ ನನ್ನಲ್ಲಿ ಇಲ್ಲ. ನಿನ್ನನ್ನು ನಂಬಿಕೊಂಡರೆ ಸಾವಿರವೋ ಅಥವಾ ಲಕ್ಷವೋ ಸಂಪಾದಿಸಬಹುದು. ನನಗೆ ಕೋಟಿ ಕೋಟಿ ಗಳಿಸಬೇಕೆಂದ ಗುರಿ ಇದೆ. ಮುಂದೆ ಒಂದು ದಿನ ನಾನೊಬ್ಬ ಎಲ್ಲರಿಂದಲೂ ಗುರುತಿಸುವಂತಹ ವ್ಯಕ್ತಿ ಆಗಬೇಕು. ಇದು ನನ್ನ ಆಸೆ. ನಿನ್ನ ಜೊತೆಗಿದ್ದರೆ ಅದೆಲ್ಲಾ ಕನಸಿನ ಮಾತುಗಳು".

"ನನ್ನ ಜೊತೆಗೆ ಸಂತೋಷದ ಬದುಕು ನಡೆಸಲು ಸಾಧ್ಯವಿಲ್ಲ ಮತ್ತು ನಾನು ನಿನಗೆ ಅಗತ್ಯವಿಲ್ಲ ಎಂದ ಮೇಲೆ, ಯಾಕೆ ಇಷ್ಟು ಕಷ್ಟ ಪಟ್ಟು ನನ್ನನ್ನು ನಿನ್ನ ಜೊತೆಗೆ ಕರೆದು ಕೊಂಡು ಬಂದಿದ್ದೀಯಾ?"

"ನಿನ್ನ ಪ್ರಶ್ನೆಗಳಿಗೆಲ್ಲ ಉತ್ತರಿಸಲಿಕ್ಕೆ ನನಗೆ ಸಮಯ ಇಲ್ಲ. ಕೇವಲ ಅಪ್ಪ ಅಮ್ಮನ ಆಸೆ ಈಡೇರಿಸಲು ನಿನ್ನನ್ನು ಕರೆದು ತಂದೆ ಅಷ್ಟೇ. ನಾನು ಮದ್ಯಾಹ್ನದ ಫ್ಲೈಟ್ ಗೆ ಹೋಗಬೇಕು. ಆ ಮೇಲೆ ನಿನ್ನ ಹತ್ತಿರ ಮಾತನಾಡುತ್ತೇನೆ" ಎ೦ದು ಹೇಳಿ " ಅಮ್ಮಾ... ಅಮ್ಮಾ..." ಎಂದು ಕೂಗಿದ.

ಶಾರದಮ್ಮ ಬಂದು "ಯಾಕೋ ಕೂಗಿದ್ದು ಎ೦ದು" ಕೇಳಿದರು.

"ಅಮ್ಮಾ ನಾನು ಮುಂಬೈಗೆ ಹೋಗುತ್ತಿದ್ದೇನೆ. ಆಶೀರ್ವಾದ ಮಾಡಮ್ಮ" ಎ೦ದು ಕಾಲಿಗೆ ನಮಸ್ಕರಿಸಿದ.

"ನಮ್ಮ ಆಶೀರ್ವಾದ ಯಾವಾಗಲೂ ನಿನ್ನ ಮೇಲೆ ಯಾವಾಗಲೂ ಇರುತ್ತದೆ. ಅಷ್ಟು ಅರ್ಜೆಂಟ್ ಆಗಿ ಮುಂಬೈಗೆ ಹೋಗುವ ಕೆಲಸ ಏನಿದೆ?" ಎಂದು ಕೇಳಿದರು ಶಾರದಮ್ಮ .

"ಮೊನ್ನೆ ಮುಂಬೈನಿಂದ ಸಿನೇಮಾ ನಿರ್ಮಾಪಕರೊಬ್ಬರು ಫೋನ್ ಮಾಡಿ, ಅಲ್ಲಿ ನನ್ನ ಪ್ರತಿಭೆಗೆ ಸಿನಿಮಾದಲ್ಲಿ ಒಳ್ಳೆಯ ಅವಕಾಶ ಇದೆ. ಬೇಗ ಬಾ ಎ೦ದು ತಿಳಿಸಿದ್ದರು " ಎಂದು ಹೇಳಿದ.

"ನೀನು ಹೀಗೆ ಹೇಳದೆ ಕೇಳದೇ ಹೊರಟು ಬಿಟ್ಟರೆ ನಿನ್ನ ವಿದ್ಯಾಳ ಕಥೆ ಏನೋ?" ಎ೦ದು ಪ್ರಶ್ನಿಸಿದಾಗ ನಟರಾಜನ ಬಾಯಲ್ಲಿ ಅದೇ ಉತ್ತರ ಬಂತು "ಇವಳಿಗೋಸ್ಕರ ನಾನು ಇಲ್ಲೇ ಇದ್ದರೆ, ನಾನು ಹಗಲು ರಾತ್ರಿ ದುಡಿದರೂ ಎಷ್ಟು ಸಂಪಾದನೆ ಮಾಡಲು ಸಾಧ್ಯ ಅಂತ ನೀನೇ ಹೇಳಮ್ಮ. ಸಿನಿಮಾ ಇಂಡಸ್ಟ್ರೀಯಲ್ಲಿ ಕೋಟಿ ಕೋಟಿ ಹಣ ಎಣಿಸಬಹುದು. ನನ್ನಲ್ಲಿ ತುಂಬಾ ಪ್ರತಿಭೆ ಇದೆ. ಅದನ್ನು ಉಪಯೋಗಿಸಿ ಕೊಳ್ಳುವುದೇ ನಮ್ಮ ಜಾಣತನ " ಎ೦ದು ಉತ್ತರಿಸಿದಾಗ ಶಾರದಮ್ಮನವರಿಗೆ ತುಂಬಾ ಬೇಸರವಾಯಿತು.

"ಅಲ್ವೋ, ನಿನಗೆ ವಿದ್ಯಾಳ ಜೊತೆಗೆ ಜೀವನ ಮಾಡಲು ಸಾಧ್ಯವಿಲ್ಲವೆಂದ ಮೇಲೆ ಅವಳನ್ನು ಯಾಕೆ ಕರೆದುಕೊಂಡು ಬಂದೆಯೋ? ನಿನ್ನ ಅಪ್ಪ ಎಷ್ಟು ಹಣ ಖರ್ಚು ಮಾಡಿದ್ದರು ಅಂತ ಗೊತ್ತೇನೋ? ನಿನಗೆ ಇಷ್ಟವಿಲ್ಲ ಎಂದ ಮೇಲೆ ಮೊದಲೇ ಹೇಳಬಹುದಿತ್ತಲ್ಲ. ಈ ವಿದ್ಯಾ ಇನ್ನಾರದೋ ಬಾಳು ಬೆಳಗುತ್ತಿದ್ದಳಲ್ಲ. ಇನ್ಯಾರದೋ ಬದುಕಿಗೆ ಬೆಳಕಾಗುತ್ತಿದ್ದಾಳಲ್ಲ?"

"ನಾನು ಮೊದಲೇ ಹೇಳಿದ್ದೇನಲ್ಲ ನಿನ್ನಲ್ಲಿ. ನನ್ನ ಗುರಿಯೇ ಬೇರೆ ಅಂತ. ಮುಂದೆ ಒಂದು ದಿನ ನನ್ನನ್ನು ಎಲ್ಲರೂ ಗುರುತಿಸುವಂತಹ ವ್ಯಕ್ತಿ ಆಗಬೇಕು. ನನ್ನಲ್ಲಿರುವ ಟ್ಯಾಲೆಂಟ್ ಉಪಯೋಗಿಸಿಕೊಂಡು ಕಷ್ಟ ಪಡದೇ ಕೋಟಿ ಕೋಟಿ ಹಣ ಸಂಪಾದನೆ ಮಾಡಬೇಕು. ನಿಮ್ಮಿಬ್ಬರ ಮಹಾದಾಸೆ ಪೂರೈಸಲು ಈ ವಿದ್ಯಾಳನ್ನು ಕರೆದು ತಂದೆ. ಅದೂ ನಿಮ್ಮಿಬ್ಬರಿಗೆ ಸಂತೋಷವಾಗಲಿ ಎ೦ದು. ಅವಳು ಬೇಕಾದರೆ ನಿಮ್ಮ ಜೊತೆಯಲ್ಲಿಯೇ ಇರಲಿ" ಎ೦ದು ಖಡಾಖಂಡಿತವಾಗಿ ಹೇಳಿದ.

ಈಗ ಶಾರದಮ್ಮನವರ ಕಣ್ಣು ಒದ್ದೆ ಆಯಿತು. ಆದರೂ ಸಾವರಿಸಿಕೊಂಡು ಹೇಳಿದರು "ನೋಡು ನಟರಾಜ. ನೀನು ಬೆಳೆದು ದೊಡ್ಡವನಾದರೂ, ಪ್ರಪಂಚವನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಸಿನಿಮಾ, ಟೀವಿ, ಮಾಡೆಲ್ಲಿಂಗ್ ಮತ್ತು ಮನೋರಂಜನೆಗಳೆಲ್ಲಾ ಗ್ಲಾಮರ್ ..... ಅಂದರೆ ಭ್ರಮಾ ಲೋಕ. ಅದು ಎಂದೆಂದಿಗೂ ಶಾಶ್ವತವಲ್ಲ. ಯಾವಾಗ ಪುಟಿದೇಳುತ್ತಾರೆ ಯಾವಾಗ ಬೀಳುತ್ತಾರೆ ಎ೦ದು ಹೇಳಲೂ ಸಾಧ್ಯವೇ ಇಲ್ಲ. ಅಲ್ಲಿ ಮಾನವರ ಸಂಬಂಧಗಳನ್ನೂ ಕೇವಲ ಹಣದ ಮೌಲ್ಯದ ಮೂಲಕವೇ ಅಳೆಯುತ್ತಾರೆ ವಿನಹ ಯಾವುದೇ ಭಾವನಾತ್ಮಕವಾದ ಸಂಬಂಧ ಇರದು. ಯಾವುದಕ್ಕೂ ಒಮ್ಮೆ ಯೋಚನೆ ಮಾಡು. ಯಾವುದೇ ಕಾರಣಕ್ಕೂ ನಿನ್ನ ವಿದ್ಯಾಳನ್ನು ಕೈ ಬಿಡಬೇಡ".

ಅಮ್ಮ ಮಗನ ಸಂಭಾಷಣೆಗಳನ್ನು ಪಕ್ಕದಲ್ಲಿಯೇ ಇದ್ದ ವಿದ್ಯಾ ಮೌನವಾಗಿ ಕೇಳಿಸಿಕೊಳ್ಳುತ್ತಿದ್ದಳು. "ನಟರಾಜ್ ನೀನು ನನ್ನನ್ನು ಕಡೆಗಣಿಸಿ ಭ್ರಮಾಲೋಕದ ಬೆನ್ನತ್ತಿ ಮಾಯಾನಗರಿಗೆ ತೆರಳಬಹುದು. ಒಂದು ವಿಷಯ ಮಾತ್ರ ನೆನಪಿನಲ್ಲಿಟ್ಟಿರು ನಟರಾಜ್, ನನ್ನನ್ನು ನೀನು ಸ್ವೀಕರಿಸಿ ಆಯಿತು. ನಿನ್ನ "ಜೊತೆಯಾಗಿ ನಾನಿರುವೆ ಎಂದೆಂದಿಗೂ" ಇದು ನೆನಪಿರಲಿ ನಿನಗೆ ಎಂದೆಂದಿಗೂ " ಎ೦ದು ತನ್ನ ಮನಸ್ಸಿನಲ್ಲಿಯೇ ಅಂದುಕೊಂಡಳು.

"ನಿನ್ನ ಅಪ್ಪನಿಗೆ ಹೇಳಿದ್ದೀಯೇನೋ ನೀನು ಮುಂಬೈಗೆ ಹೋರಟಿರುವ ವಿಚಾರ?" ಎ೦ದು ಕೇಳಿದರು ಶಾರದಮ್ಮ.

"ನನ್ನ ನಿರ್ಧಾರವನ್ನು ಮೊನ್ನೆಯೇ ಅವರಿಗೆ ತಿಳಿಸಿದ್ದೇನೆ, ಅಮ್ಮಾ"

"ಅವರು ಒಪ್ಪಿಗೆ ನೀಡಿದ್ದಾರಾ?"

"ಅವರು ಏನು ಹೇಳುತ್ತಾರೆ ಅಂತ ನಿನಗೆ ಗೊತ್ತಿದೆಯಲ್ಲ ಅಮ್ಮಾ. ಅವರು ಕೂಡಾ ನೀನು ಹೇಳಿದ್ದನ್ನೇ ಹೇಳಿ, ನಿನ್ನ ಭವಿಷ್ಯ ನಿನ್ನ ಕೈಯಲ್ಲಿಯೇ ಇದೆ. ಕೊನೆಗೆ ನಿನ್ನ ಇಷ್ಟ ಎ೦ದು ಬಿಟ್ಟರು."

"ಅವರ ಮಾತಿನಲ್ಲಿಯೂ ಸತ್ಯ ಇದೆ. ನಿನಗೆ ಯಾವುದು ಇಷ್ಟ ಅಂತ ಕಾಣಿಸುತ್ತದೆಯೋ, ಅದರಲ್ಲಿಯೇ ನಿನ್ನ ಬದುಕನ್ನು ರೂಪಿಸಿಕೊಳ್ಳು. ಆದರೂ ಎಂದಿಂದಿಗೂ ಧರ್ಮವನ್ನು ಕೈ ಬಿಡಬೇಡ. ಅದೇ ನಿನ್ನನ್ನು ರಕ್ಷಿಸುತ್ತದೆ" ಎ೦ದು ಮಗನನ್ನು ಹರಸಿದರು.

.......

ಕೊನೆಗೂ ನಟರಾಜ ಅದೇ ದಿನ ಸಾಯಂಕಾಲ ವಿಮಾನ ನಿಲ್ದಾಣಕ್ಕೆ ಹೋಗಿ ಮುಂಬೈ ವಿಮಾನ ಹತ್ತಿದ. ಅವನ ವಿದ್ಯಾ ಮಾತ್ರ ಮನೆಯಲ್ಲಿ ಅವನ ಕೊಠಡಿ ಸೇರಿ ಮೌನವಾಗಿ ಕುಳಿತಳು. ಮತ್ತೆ ಮತ್ತೆ ಮನಸ್ಸಿನಲ್ಲಿಯೇ ಅಂದು ಕೊಂಡಳು ಜೊತೆಯಾಗಿ ನಾನಿರುವೆ ಎಂದೆಂದಿಗೂ....ಇದು ನೆನಪಿರಲಿ ನಿನಗೆ ಎಂದೆಂದಿಗೂ .

. . . . .

ಹೀಗೆಯೇ ಐದಾರು ತಿಂಗಳು ಕಳೆದವು. ಮುಂಬೈಗೆ ಹೋದ ನಟರಾಜ ಯಾವಾಗಲೋ ಒಮ್ಮೆ ಅಮ್ಮನಿಗೆ ಕರೆ ಮಾಡಿ ವಿಚಾರಿಸುತ್ತಿದ್ದ.
ಮೊದ ಮೊದಲು ತುಂಬಾ ಉತ್ಸಾಹ ಭರಿತನಾಗಿದ್ದ ನಟರಾಜ. .

ಆದರೆ ಇತ್ತೀಚೆಗೆ ಶಾರದಮ್ಮ "ಮಗನೇ ಹೇಗಿದ್ದೀಯಾ?" ಎಂದು ಕೇಳಿದರೆ, ಚೆನ್ನಾಗಿದ್ದೇನೆ ಅಮ್ಮ ಅರಿತ ಹಾರಿಕೆಯ ಉತ್ತರ ನೀಡಿ ಸುಮ್ಮನಾಗುತ್ತಿದ್ದ.

ನಟರಾಜನನ್ನು ಮುಂಬೈಗೆ ಕರೆಯಿಸ ಕೊಂಡ ಆ ವ್ಯಕ್ತಿ ಹೊಸ ಹೊಸ ಸಿನಿಮಾಗಳಲ್ಲಿ ನಾಯಕನ ಪಾತ್ರಕ್ಕೆ ಅವಕಾಶ ಕೊಡಿಸುತ್ತೇನೆ ಎಂದು ಹಲವಾರು ನಿರ್ದೇಶಕರು ಮತ್ತು ನಿರ್ಮಾಪಕರ ಹತ್ತಿರ ಕರೆದುಕೊಂಡು ಹೋಗಿ ಪರಿಚಯ ಮಾಡಿಸುತ್ತಿದ್ದ. ನಟರಾಜನ ಹತ್ತಿರ ಲಕ್ಷಾಂತರ ರೂಪಾಯಿ ಹಣ ಸುಲಿದಿದ್ದ. ನಟರಾಜ ಬೆಂಗಳೂರಿನಲ್ಲಿ ಇರುವಾಗಲೇ ಬ್ಯಾಂಕಿನಿಂದ ವೈಯಕ್ತಿಕ ಸಾಲ ಪಡೆದು ಕಳುಹಿಸಿದ್ದ. ಮುಂಬೈಗೆ ಹೋಗುವಾಗಲೂ ಅಕೌಂಟಿನಲ್ಲಿ ನಾಲ್ಕೈದು ಲಕ್ಷ ರೂಪಾಯಿ ಹಣವಿದ್ದಿತ್ತು. ಬ್ಯಾಂಕಿನಲ್ಲಿ ಇರುವ ಹಣವೂ ಕರಗುತ್ತಾ ಬಂತು. ತನ್ನ ಶ್ರೀಮಂತ ಗೆಳೆಯರಿಂದಲೂ ಸಾಲ ಪಡೆದಿದ್ದ.

ಕೊನೆಗೂ ಅವನಿಗೆ ತಿಳಿಯಿತು. ತನ್ನನ್ನು ಮುಂಬೈಗೆ ಕರೆಸಿದ ಆ ನಿರ್ಮಾಪಕ ದೊಡ್ಡ ಮೋಸಗಾರನೆಂದು. ಆರು ತಿಂಗಳೂ ಕಳೆದರೂ ಸಿನಿಮಾದಲ್ಲಿ ಆಗಲಿ ಅಥವಾ ಕಿರುತೆರೆಯಲ್ಲಿ ಆಗಲಿ ಒಂದೇ ಒಂದು ಅವಕಾಶ ಸಿಗದೇ ಮಾನಸಿಕವಾಗಿ ಕುಗ್ಗಿ ಹೋದ.

ಇದರ ಮಧ್ಯೆಯೇ ದೇಶದಲ್ಲಿ ಕೊರೊನಾ ವೈರಸ್ ಉಪಟಳ ಪ್ರಾರಂಭವಾಯಿತು. ಇಡೀ ದೇಶದಲ್ಲಿ ಲಾಕ್ ಡೌನ್ ಘೋಷಣೆಯಾಗಿ ಫಿಲಂ ಮತ್ತು ಎಂಟರಟೈನಮೆಂಟ್ ಇಂಡಸ್ಟ್ರೀ ನೆಲ ಕಚ್ಚಿ ಬಿಟ್ಟಿತು. ನಟರಾಜ ತುಂಬಾ ಡಿಪ್ರೆಶನ್ ಗೆ ಒಳಗಾದ ಈಗ. ಅಪ್ಪ ಅಥವಾ ಅಮ್ಮನಿಗೆ ವಿಷಯ ತಿಳಿದರೆ ಅವರು ತುಂಬಾ ಆತಂಕಕ್ಕೆ ಒಳಗಾಗುತ್ತಾರೆ ಎಂದು ತಿಳಿದು, ತನ್ನ ವೈದ್ಯಕೀಯ ಕಾಲೇಜಿನ ಸಹಪಾಠಿ ಮತ್ತು ಬೆಂಗಳೂರಿನ ಪ್ರಸಿದ್ಧ ಮಾನಸಿಕ ತಜ್ಞೆ ಡಾ. ಸುಪರ್ಣಾಳಿಗೆ ಕರೆ ಮಾಡಿ ತನ್ನ ಕಷ್ಟ ನಷ್ಟಗಳ ಪರಿಸ್ಥಿತಿಯ ಎಲ್ಲಾ ವಿಷಯಗಳನ್ನು ತಿಳಿಸಿದ. ಅವಳಿಂದಲೂ ಸ್ವಲ್ಪ ಹಣ ಸಹಾಯ ಕೇಳಿದ ಮತ್ತು ತನ್ನ ಬದುಕಿಗೆ ಏನಾದರೂ ದಾರಿ ತೋರಿಸು ಎಂದು ಅಂಗಲಾಚಿ ಬೇಡಿಕೊಂಡ.

...... .....

ನಟರಾಜನನ್ನು ಮೆಡಿಕಲ್ ಕಾಲೇಜಿಗೆ ಸೇರಿದ ದಿನದಿಂದಲೂ ಬಲ್ಲವಳು ಡಾ. ಸುಪರ್ಣ. ತುಂಬಾ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ನಟರಾಜ್. ಎಂಬಿಬಿಸ್ ಮುಗಿದ ನಂತರ ಉನ್ನತ ವ್ಯಾಸಂಗ ಮಾಡುವ ಆಸಕ್ತಿ ಇದ್ದಿರಲಿಲ್ಲ ಅವನಿಗೆ. ಆದರೂ ತುಂಬಾ ಶ್ರೀಮಂತರಾಗಿದ್ದ ಪ್ರಕಾಶ್ ರಾವ್ ತನ್ನ ಮಗನನ್ನು ಮಾನಸಿಕ ರೋಗ ತಜ್ಞನಾಗಿ ಮಾಡಿಸಬೇಕೆಂದು ಬೆಂಗಳೂರಿನ ಪ್ರತಿಷ್ಠಿತ ಮೆಡಿಕಲ್ ಕಾಲೇಜ್ ನಲ್ಲಿ ಎಂ.ಡಿ. ಸೀಟು ಕೊಡಿಸಿದ್ದರು. ಡಾ. ಸುಪರ್ಣಾ ಕೂಡಾ ಅದೇ ಕಾಲೇಜಿನಲ್ಲಿ ಎಂ.ಡಿ. ಸೀಟು ಸಿಕ್ಕಿ ಓದುತ್ತಿದ್ದುದರಿಂದ ಇಬ್ಬರೂ ಉತ್ತಮ ಗೆಳೆಯರಾಗಿದ್ದರು.

ನಟರಾಜ್ ಮನಸ್ಸಿಲ್ಲದ ಮನಸ್ಸಿನಿಂದ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾನಂತ ಗೊತ್ತು ಅವಳಿಗೆ. ವಿದ್ಯಾರ್ಥಿ ಜೀವನದಿಂದಲೂ ಶಾಲಾ ಕಾಲೇಜುಗಳಲ್ಲಿ ನಡೆಯುವ ನಾಟಕ ಮತ್ತು ಮನೋರಂಜನೆ ಕಾರ್ಯಕ್ರಮಗಳಲ್ಲಿ ತಪ್ಪದೇ ಭಾಗವಹಿಸುತ್ತಿದ್ದ. ಒಳ್ಳೆಯ ನಟ ಮತ್ತು ನಿರ್ದೇಶಕನೆಂದು ಹೆಸರು ಪಡೆದಿದ್ದ. ಆದ್ದರಿಂದ ಅವನ ಗಮನವೆಲ್ಲ ವಿದ್ಯಾಭ್ಯಾಸಕ್ಕಿಂತ ಹೆಚ್ಚಾಗಿ ನಟನೆ ಮಾಡೆಲ್ಲಿಂಗ್, ಸಿನಿಮಾ ಮತ್ತು ಮನೋರಂಜನೆಗಳಲ್ಲಿ ಇರುತ್ತಿತ್ತು. ಆದರೂ ಓದಿನಲ್ಲಿ ಎಂದೂ ಹಿಂದೆ ಬೀಳುತ್ತಿರಲಿಲ್ಲ, ಅಷ್ಟೊಂದು ಪ್ರತಿಭೆ ಅವನದು.

ಕಾಲೇಜಿನಲ್ಲಿ ಎಂ.ಡಿ. ಮಾಡುತ್ತಿರವಾಗಲೂ ಸುಪರ್ಣಾಳನ್ನು ಭೇಟಿಯಾದಾಗಲೆಲ್ಲ ನನಗೆ ಈ ವೃತ್ತಿಯೇ ಇಷ್ಟವಿಲ್ಲ. ಇಲ್ಲಿ ಬರೀ ಹುಚ್ಚರ ಸಂತೆ. ನಮ್ಮ ಅಪ್ಪ ತುಂಬಾ ಶ್ರೀಮಂತರು...... ನನಗ್ಯಾಕೆ ಇದೆಲ್ಲಾ? ಎಂದು ಋಣಾತ್ಮಕವಾಗಿಯೇ ಯೋಚಿಸುತ್ತಿದ್ದ. ನನಗೆ ಈ ವೃತ್ತಿಯೇ ಬೇಡ. ಅಪ್ಪ ಅಮ್ಮನ ಆಸೆಗೋಸ್ಕರ ಎಂ.ಡಿ. ಮುಗಿಸುತ್ತೇನೆ. ಆಮೇಲೆ ತನ್ನ ದಾರಿಯೇ ಬೇರೆ ಎಂದು ಹೇಳುತ್ತಿದ್ದ. ಸುಪರ್ಣಾ, ಅವನ ಮನಸ್ಸನ್ನು ಹೇಗಾದರೂ ಮಾಡಿ ಪರಿವರ್ತನೆ ಮಾಡಬೇಕೆಂದು ಸಾಕಷ್ಟು ಪ್ರಯತ್ನ ಪಟ್ಟಿದ್ದಳು ಅಂದು.

ಎಂಡಿ ಮುಗಿದ ಮೇಲೆ ಡಾ. ಸುಪರ್ಣ ಒಂದು ಪ್ರಸಿದ್ಧ ಆಸ್ಪತ್ರೆಯಲ್ಲಿ ಮಾನಸಿಕ ರೋಗ ತಜ್ಞೆಯಾಗಿ ಕೆಲಸ ಮಾಡಿದರೆ, ಡಾ. ನಟರಾಜ್ ಮಾತ್ರ ಅಲ್ಲಿ ಇಲ್ಲಿ ವೈದ್ಯಕೀಯ ಸಲಹೆಗಾರನಾಗಿ ಕೆಲಸ ಮಾಡಿದರೂ, ಎಲ್ಲಿಯೂ ಒಂದೇ ಕಡೆ ನೆಲೆಯಾಗಲಿಲ್ಲ. ಕೊನೆಗೂ ತನ್ನ ವೈದ್ಯಕೀಯ ವೃತ್ತಿಗೆ ತಿಲಾಂಜಲಿ ಹೇಳಿ ಮುಂಬೈನ ಬಾಲಿವುಡ್ ಲೋಕಕ್ಕೆ ಹೋಗಲು ನಿರ್ಧಾರ ಮಾಡಿದ್ದ.

ಮುಂಬೈಗೆ ಹೋಗಬೇಕೆಂದು ಗಟ್ಟಿ ನಿರ್ಧಾರ ಮಾಡಿದ ದಿನವೇ ಡಾ. ಸುಪರ್ಣಾಳನ್ನು ಭೇಟಿಯಾಗಿ ಚರ್ಚೆ ಮಾಡಿದ್ದ ನಟರಾಜ್ .
"ಸುಪರ್ಣ .....ನನಗೆ ಈ ವೈದ್ಯಕೀಯ ವೃತ್ತಿಯೇ ಇಷ್ಟವಿಲ್ಲ. ನನ್ನ ಅಪ್ಪ ಅಮ್ಮನ ಇಬ್ಬರ ಮನಸ್ಸಿನಲ್ಲಿಯೂ ನಾನು ಡಾಕ್ಟರ್ ಆಗಿ ಜನರ ಸೇವೆ ಮಾಡಬೇಕೆಂಬ ಆಸೆ ಇದ್ದಿತ್ತು. ಅವರ ಬಯಕೆಯನ್ನು ಈಡೇರಿಸಲು ಡಾಕ್ಟರ್ ಪದವಿ ಪಡೆದೆ ಅಷ್ಟೇ. ಬೆಳಿಗ್ಗೆಯಿಂದ ರಾತ್ರಿ ತನಕ ದುಡಿದು ಎಷ್ಟು ಹಣ ಮಾಡಬಹುದು?" ಎ೦ದು ತನ್ನ ಬೇಸರವನ್ನು ವ್ಯಕ್ತ ಪಡಿಸುತ್ತಿದ್ದ.

ಆಗ ಸುಪರ್ಣ "ಹಾಗೇ ಹೇಳ ಬೇಡವೋ ನಟರಾಜ್ . ನಾವು ಎಲ್ಲವನ್ನೂ ಕೇವಲ ಹಣದಲ್ಲಿಯೇ ಅಳೆಯಬಾರದು. ಈ ವೈದ್ಯಕೀಯ ಸೇವೆ ನಿಜವಾಗಿಯೂ ಅತ್ಯಂತ ಶ್ರೇಷ್ಠವಾದ ವೃತ್ತಿ. 'ವೈದ್ಯೋ ನಾರಯಣೋ ಹರಿ' ಎಂದು ಹೇಳುತ್ತಾರೆ. ಒಳ್ಳೆಯ ವೈದ್ಯ ದೇವರಿಗೆ ಸಮಾನ ಎ೦ದು ಅರ್ಥ. ನಮ್ಮ ಗಡಿ ಕಾಯುವ ಸೈನಿಕರು ರಾತ್ರಿ ಹಗಲೆನ್ನದೇ, ಬಿಸಿಲು ಚಳಿಯನ್ನದೇ ತಮ್ಮ ಜೀವದ ಹಂಗು ತೊರೆದು ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಮುಂದೆ ನಾವೇನು ಮಹಾ?" ಎ೦ದು ಕೇಳಿದಳು.

ಆಗ ನಟರಾಜ್ "ನೀನು ಹೇಳಿದ್ದು ಸರಿನೇ. ಆದರೆ, ಅಷ್ಟು ಕಷ್ಟ ಪಟ್ಟರೂ ಅವರಿಗೆ ಸಿಗುವ ಸಂಭಾವನೆ ಎಷ್ಟು? ಒಬ್ಬ ಸೈನಿಕ ಯುದ್ಧ ಭೂಮಿಯಲ್ಲಿ ಶೌರ್ಯದಿಂದ ಹೋರಾಡಿ ರಿಯಲ್ ಹೀರೋ ಆಗುತ್ತಾನೆ. ಆದರೆ, ಅವನ ಹೆಸರಿನಲ್ಲಿಯೇ ಸಿನಿಮಾ ಮಾಡಿ ಅಲ್ಲಿ ನಟಿಸಿದ ರೀಲ್ ಹೀರೋನನ್ನೇ "ಮಹಾ ಹೀರೋ" ಎ೦ದು ಪೂಜಿಸುತ್ತಾರೆ ಜನ. ರೀಲ್ ಹೀರೋಗೆ ಸಿಗುವ ಸಂಭಾವನೆ ಕೋಟಿ ಕೋಟಿ ರೂಪಾಯಿಯಲ್ಲಿ ಲೆಕ್ಕ ಹಾಕುತ್ತಾರೆ. ಇದಕ್ಕೆ ಏನು ಹೇಳುತ್ತೀಯಾ ಸುಪರ್ಣಾ?" ಎ೦ದು ಪ್ರಶ್ನಿಸಿದ.

"ಹೌದು ಇದು ಇಂದಿನ ವಿಪರ್ಯಾಸವೇ ಸರಿ. ಇದಕ್ಕೆಲ್ಲಾ ಕಾರಣ ನಿಮ್ಮಂತಹ ಯುವ ಜನತೆಯೇ. ಗ್ಲಾಮರ್ ಜಗತ್ತಿಗೆ ಮರುಳಾಗಿ, ಅಲ್ಲಿ ಯಶಸ್ಸು ಗಳಿಸಿದ ಕೇವಲ ಬೆರಳೆಣಿಕೆಯ ಮಂದಿಯನ್ನು ನೋಡಿ ತಾನೂ ಹಾಗೆಯೇ ಆಗಬೇಕೆಂದು ಕನಸು ಕಾಣುತ್ತಿದ್ದಾರೆ ನಿನ್ನಂತ ಕೆಲವು ಯುವಕರು. ಆದರೆ ಅಲ್ಲಿಯೂ ಪ್ರಯತ್ನಿಸಿ ಸೋತವರು ಯಾರ ಕಣ್ಣಿಗೂ ಬೀಳದೇ ಮೂಲೆ ಸೇರಿದ್ದನ್ನು ಯಾರೂ ಗಮನಿಸಲಾರರು" ಎ೦ದಳು.

"ನೀನು ಹೇಳಿದ್ದು ನಿಜ. ಕೆಲವರಿಗೆ ಪ್ರತಿಭೆ ಇರುವುದಿಲ್ಲ ಮತ್ತು ಜೀವನದಲ್ಲಿ ಹೇಗೆ ಯಶಸ್ಸು ಗಳಿಸಬಹುದೆಂಬ ಪರಿಜ್ಞಾನವೇ ಇರುವುದಿಲ್ಲ. ಇಂತವರು ಅಲ್ಲಿ ಏನನ್ನೂ ಸಾಧಿಸಲಾರರು. ನನ್ನ ಹತ್ತಿರ ಹಣ, ರೂಪ, ಪ್ರತಿಭೆ, ವಿದ್ಯಾಭ್ಯಾಸ ಮತ್ತು ಜ್ಞಾನ ಎಲ್ಲವೂ ಇವೆ. ನಾನು ಅಲ್ಲಿ ಹೋಗಿ ಏನಾದರೂ ಸಾಧನೆ ಮಾಡಬಲ್ಲೆ ಎಂಬ ಆತ್ಮ ವಿಶ್ವಾಸ ಇದೆ "

" ನಟರಾಜ್, ನಿನ್ನಲ್ಲಿರುವ ಪ್ರತಿಭೆ ನನಗೆ ಗೊತ್ತು. ನಿನಗೆ ಲಕ್ಷ್ಮಿ ಮತ್ತು ಸರಸ್ವತಿ ಇಬ್ಬರ ಕೃಪಾ ಕಟಾಕ್ಷವೂ ಇದೆ. ಇವರ ಜೊತೆಗೆ ನಟನೆಯ ಪ್ರತಿಭೆಯೂ ಸೇರಿ ಕೊಂಡಿದೆ. ಆದರೂ, ನನ್ನ ಒಂದು ಮಾತು ಕೇಳು ನಿನ್ನಲ್ಲಿರುವ ಸ೦ಪತ್ತು ಶಾಶ್ವತ ಅಲ್ಲ. ಆದರೆ ನೀನು ಕಲಿತ ವಿದ್ಯೆ ಶಾಶ್ವತ. ನಿನ್ನಲ್ಲಿರುವ ಸಂಪತ್ತು ದಾನ ಮಾಡಿದ ಹಾಗೆ ಕರಗುತ್ತಾ ಹೋದರೆ, ನೀನು ಕಲಿತ ವಿದ್ಯೆ ದಾನ ಮಾಡಿದ ಹಾಗೆ ವೃದ್ಧಿಯಾಗುವುದು. ನಿನ್ನೊಂದಿಗೆ ಎಂದೆಂದಿಗೂ ಜೊತೆಯಾಗಿ ಇರುವುದು ನೀ ಕಲಿತ ವಿದ್ಯೆಯೊಂದೆ. ನೀನು ಕಲಿತ ವೃತ್ತಿ ಸಮಾಜದ ಸಾವಿರಾರು ಮಂದಿಗೆ ಉಪಯೋಗ ಆಗಬಲ್ಲದು. ನಿನ್ನಿಂದ ಗುಣ ಹೊಂದಿದ ರೋಗಿಗಳು ನಿನ್ನನ್ನು ದೇವರೆಂದು ಪೂಜಿಸುತ್ತಾರೆ. ಆದ್ದರಿಂದ ನೀನು ಕಷ್ಟ ಪಟ್ಟು ಕಲಿತ ವೈದ್ಯಕೀಯ ವೃತ್ತಿಯನ್ನು ಮರೆಯದಿರು. ಇದರ ಜೊತೆಗೆ ನಿನ್ನ ಇತರ ಪ್ರತಿಭೆಗಳಾದ ನಟನೆ, ನಿರ್ದೇಶನ ಮತ್ತು ಮಾಡೆಲ್ಲಿಂಗ್ ಪ್ರವೃತಿಯಾಗಿರಲಿ. ಒಂದು ವೇಳೆ ಅದರಲ್ಲಿ ನೀನು ತುಂಬಾ ಯಶಸ್ವಿಯಾದರೆ ನೀನು ಅದನ್ನೇ ಮುಖ್ಯ ಪ್ರವೃತ್ತಿಯನ್ನಾಗಿಸಿಕೊಂಡು, ನೀ ಕಲಿತ ವಿದ್ಯೆಯನ್ನು ಪ್ರವೃತ್ತಿಯನ್ನಾಗಿ ಮಾಡಿಕೊಂಡು ಕೆಲವು ರೋಗಿಗಳ ಸೇವೆಯನ್ನು ಮಾಡು. ಮತ್ತೊಮ್ಮೆ ಹೇಳುತ್ತೇನೆ ಮರೆಯದಿರು ನೀ ಕಲಿತ ವಿದ್ಯೆ ನಿನ್ನ ಜೊತೆಯಾಗಿ ಇರುವುದು ಎಂದೆಂದಿಗೂ " ಎಂದು ಮಾತು ಮುಗಿಸಿದಳು ಡಾ. ಸುಪರ್ಣಾ .

ಎಲ್ಲಾ ಬಿಟ್ಟು ಮುಂಬೈಗೆ ಹೋಗುವುದೆಂದು ನಿರ್ಧಾರ ಮಾಡಿದ ಡಾ. ನಟರಾಜ್ ಗೆ ಅವಳು ಹೇಳಿದ ಮಾತುಗಳು ಮನದಾಳಕ್ಕೆ ಇಳಿದು ಗೊಂದಲಕ್ಕೆ ಒಳಗಾದರೂ, ತನ್ನ ನಿರ್ಧಾರವನ್ನು ಬದಲಿಸದವನಾದ. ಆದರೂ ಅವನ ಸುಪ್ತ ಮನಸ್ಸಿನಲ್ಲಿ ಡಾ. ಸುಪರ್ಣಾ ಕೊನೆಗೆ ಹೇಳಿದ ಮಾತುಗಳು ಪ್ರತಿಧ್ವನಿಸುತ್ತಲೇ ಇತ್ತು.

ಕೊನೆಗೂ ತಾನು ಮೊದಲೇ ನಿರ್ಧರಿಸಿದಂತೆ ಮುಂಬೈಗೆ ಹೊರಡಲು ತಯಾರಿ ಮಾಡಿಕೊಳ್ಳುವಾಗಲೇ, ಅವನ ಸುಪ್ತ ಮನಸ್ಸಿನಲ್ಲಿ ಪ್ರತಿಧ್ವನಿಸಿದ್ದೇ ಆ ವಿದ್ಯಾಳ ಮಾತುಗಳು . ವಿದ್ಯಾ ಅಂದರೆ ಯಾವ ಹುಡುಗಿಯೂ ಅಲ್ಲ. ಅವನ ಕಷ್ಟ ಪಟ್ಟು ಗಳಿಸಿ ಅವನ ಹಿಂದೆ ಒಲಿದು ಬಂದ ವೈದ್ಯಕೀಯ ಪದವಿಗೆ ಇಟ್ಟ ಕಲ್ಪನೆಯ ಹೆಸರು ಅಷ್ಟೇ.

...... .. .... .....

ಅಂದು ತಾನು ಅಷ್ಟೊಂದು ಬುದ್ಧಿ ಹೇಳಿದರೂ ಕೆಳದೆ ಗ್ಲಾಮರ್ ಲೋಕದ ಸುಳಿಯ ಸೆಳೆತಕ್ಕೆ ಸಿಕ್ಕು ಮುಂಬೈನ ಬಾಲಿಹುಡ್ ಗೆ ಹಾರಿ ಹೋದ ಡಾ. ನಟರಾಜ್ ಇಂದು ತುಂಬಾ ಕಷ್ಟದಲ್ಲಿ ಇದ್ದೇನೆ ಸಹಾಯ ಮಾಡು ಎ೦ದು ತನ್ನನ್ನು ಮತ್ತೆ ನೆನಪಿಸಿಕೊಂಡಾಗ ಡಾ. ಸುಪರ್ಣಾಳಿಗೆ ಆದ ಸಂತೋಷಕ್ಕೆ ಪಾರವೇ ಇಲ್ಲ.

ಅವನನ್ನು ಹೇಗಾದರೂ ಮಾಡಿ ವೈದ್ಯಕೀಯ ಸೇವೆಯ ಮುಖ್ಯವಾಹಿನಿಗೆ ತರಬೇಕೆಂದು ತಾನು ಮಾಡಿದ್ದ ಪ್ರಯತ್ನಕ್ಕೆ ಇಂದು ಯಶಸ್ಸು ಸಿಗುತ್ತಿದೆ ಎಂಬ ವಿಶ್ವಾಸದೊಂದಿಗೆ ತನ್ನ ಆಸ್ಪತ್ರೆಯ ಮುಖ್ಯ ವೈದ್ಯರ ಹತ್ತಿರ ಡಾ. ನಟರಾಜ್ ನ ವಿಚಾರ ತಿಳಿಸಿ ಆಸ್ಪತ್ರೆಯಲ್ಲಿ ಮಾನಸಿಕ ರೋಗಿಗಳ ಕೌನ್ಸಿಲಿಂಗ್ ಸೇವೆಗೆ ಒಂದು ಅವಕಾಶ ಮಾಡಿಕೊಡಲು ಕೇಳಿಕೊಂಡಳು.

ಆದರೆ ಎಲ್ಲಾ ಕಡೆ ಲಾಕ್ ಡೌನ್ ಇರುವುದರಿಂದ, ಮುಂಬೈನಿಂದ ಬೆಂಗಳೂರಿಗೆ ಕರೆಸಿಕೊಳ್ಳುವುದು ಅಸಾಧ್ಯದ ಮಾತು ಆಗ. ಕೊನೆಗೂ ಅಲ್ಲಿಂದಲೇ ತಮ್ಮ ಆಸ್ತತ್ರೆಯ ಹಲವಾರು ಮಾನಸಿಕ ರೋಗಿಗಳಿಗೆ ಅವರವರ ಮನೆಯಲ್ಲಿಯೇ ಡಾ. ನಟರಾಜ್ ಆನ್ಲೈನ್ ಮೂಲಕವೇ ಮೆಡಿಕಲ್ ಕೌನ್ಸಿಲಿಂಗ್ ಮಾಡುವ ಸೇವೆಯನ್ನು ಪ್ರಾರಂಭ ಮಾಡಿದರು. ಲಾಕ್ ಡೌನ್ ಸಮಯದಲ್ಲಿ ಇತ್ತ ಆಸ್ಪತ್ರೆಗೆ ಬರಲಾಗದ ರೋಗಿಗಳಿಗೂ ಸಹಾಯವಾಯಿತು, ಅತ್ತ ಮುಂಬೈನಿಂದ ಬೆಂಗಳೂರಿಗೆ ಬರಲಾಗದ ಡಾ. ನಟರಾಜನಿಗೂ ಸುಲಭವಾಯಿತು.

ಅಭಿನಯದ ಜೊತೆಗೆ ಒಳ್ಳೆಯ ವಾಕ್ಚತುರನೂ ಆಗಿದ್ದ ಡಾ. ನಟರಾಜ್, ಕೇವಲ ಆರು ತಿಂಗಳಿನಲ್ಲಿಯೇ ಮಾನಸಿಕ ರೋಗಿಗಳಿಗೆ ಒಬ್ಬ ಅತ್ಯುತ್ತಮ ವೈದ್ಯನಾಗಿ ಹೆಸರು ಪಡೆದ. ಸಾವಿರಾರು ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡಿ ಗುಣಪಡಿಸಿ ಮರು ಜನ್ಮ ನೀಡಿ ಪ್ರಸಿದ್ಧನಾದ.

ಅಂದು ನಿನ್ನ ಜೊತೆಯಾಗಿ ನಾನಿರುವೆ ಎಂದೆಂದಿಗೂ ಎ೦ದು ಅವನು ಕಲಿತ "ವೈದ್ಯಕೀಯ ವಿದ್ಯೆ" ಹೇಳಿದ ಮಾತು ಇಂದು ನಿಜವಾಯಿತು.