Click here to Download MyLang App

ಜಾಹ್ನವಿ - ಬರೆದವರು : ಅಶ್ವಿನಿ ಸುನಿಲ್ | ಸಾಮಾಜಿಕಕೈಯಲ್ಲಿನ ಕೊಡೆ ಈ ಗಾಳಿ ಮಳೆಗೆ ಯಾವ ಲೆಕ್ಕ? ನೆನೆದು ತೊಪ್ಪೆಯಾಗಿದ್ದಳು ಜಾಹ್ನವಿ. ಕೈ ಸಡಿಲವಾದರೆ ಕೊಡೆ ಎಲ್ಲಿ ಹಾರಿ ಹೋಗುವುದೋ ಎಂದು ಭಯದಿಂದ ಎರಡು ಕೈಯಲ್ಲಿ ಗಟ್ಟಿಯಾಗಿ ಹಿಡಿದು ಕೊಂಡಿದ್ದಳು. ಆಗೊಮ್ಮೆ ಈಗೊಮ್ಮೆ ಬರುವ ಸಿಡಿಲು ಮಿಂಚು ಅವಳ ವೇಗದ ನಡಿಗೆಗೆ ಅರೆಕ್ಷಣ ತಡೆಯೊಡ್ಡುತ್ತಿತ್ತು.

ಮತ್ತೆ ತಿರುಗಿ ನೋಡಿದಳು ಅಯ್ಯೋ ಅವನಿನ್ನೂ ನನ್ನನ್ನು ಹಿಂಬಾಲಿಸುತ್ತಲೇ ಬರುತ್ತಿದ್ದಾನೆ. ವೇಗವಾಗಿ ಹೆಜ್ಜೆ ಇಡುವ ಯತ್ನದಲ್ಲಿದ್ದರೂ, ಕಾಲು ಮುಂದೆ ಇಡಲೇ ಆಗುತ್ತಿಲ್ಲ. ಜೋರಾಗಿ ಸುರಿಯುತ್ತಿರುವ ಮಳೆಗೆ ಬಟ್ಟೆಯೆಲ್ಲ ಒದ್ದೆಯಾಗಿ, ಕಾಲಿಗೆ ಅಂಟಿಕೊಂಡು ವೇಗವಾಗಿ ನಡೆಯುವ ಅವಳ ಪ್ರಯತ್ನಕ್ಕೆ ತಡೆಯೊಟ್ಟುತ್ತಿದೆ. ಗಂಟೆ 6:30 ಇರಬಹುದು, ಕತ್ತಲಾದದ್ದು ನೋಡಿದರೆ ರಾತ್ರಿ 8 ಗಂಟೆ ಇರಬಹುದೆಂದು ಅನಿಸುತ್ತಿದೆ.

ಐದು ರೂಪಾಯಿ ಉಳಿಸುವ ಆಸೆಗೆ ಹೋಗಿ ಈ ಪರಿಸ್ಥಿತಿ ಬಂತು!! ತನ್ನನ್ನೇ ಹಳಿದುಕೊಂಡಳು ಜಾಹ್ನವಿ. ಕಾಲೇಜಿನಿಂದ ಮನೆಗೆ ಬರುವಾಗ ಸರ್ಕಾರಿ ಬಸ್ಸಿನಲ್ಲಿ ಬಂದರೆ ಪಾಸ್ ಇರುವುದರಿಂದ ಉಚಿತವಾಗಿ ಬರಬಹುದು. ಇಲ್ಲದಿದ್ದರೆ ಜೀಪು ವ್ಯಾನ್ ಗಳಲ್ಲಿ ಬಂದರೆ ಐದು ರೂಪಾಯಿ ಕೊಡಬೇಕು. ಆ ಐದು ರುಪಾಯಿ ಯಾವುದಕ್ಕಾದರೂ ಬರುತ್ತದೆ ಎಂಬ ಆಸೆಗೆ, ಒಂದು ಗಂಟೆ ಕಾದು ಸರ್ಕಾರಿ ಬಸ್ಸಿನಲ್ಲೇ ಬಂದಿದ್ದಳು. ಬಸ್ಸಿಳಿದು ಆರು ಕಿಲೋಮೀಟರ್ ದೂರ ಕಾಡುದಾರಿಯಲ್ಲಿ ನಡೆಯಬೇಕು. ಪ್ರತಿದಿನ ಜೊತೆಗಿರುತ್ತಿದ್ದ ಗೆಳತಿ ಶಾಂಭವಿ, ಇಂದು ಕಾಲೇಜಿಗೆ ಬಂದಿಲ್ಲ. ಎರಡು ದಿನದಿಂದ ಸುರಿಯುತ್ತಿರುವ ಮಳೆಗೆ ದಾರಿಯೆಲ್ಲಾ ಕೆಸರುಮಯ, ನದಿ ತೋಡುಗಳೆಲ್ಲ ತುಂಬಿ ಹರಿಯುತ್ತಿದೆ.


ಜಾಹ್ನವಿಯ ಅಮ್ಮನಿಗೆ ಮಗಳು ಅಷ್ಟು ದೂರ ಕಾಲೇಜಿಗೆ ಹೋಗುವುದು ಸುತರಾಂ ಇಷ್ಟವಿರಲಿಲ್ಲ. ಪಕ್ಕದ ಊರಿನಲ್ಲಿರುವ ಆರ್ಟ್ಸ್ ಕಾಲೇಜ್ ಗೆ ಸೇರಿಕೋ ಅಂದರೆ ಜಾಹ್ನವಿ ಗೆ ಮೆಡಿಕಲ್ ಓದುವ ಬಯಕೆ . ಅದಕ್ಕಾಗಿ ತಾಲ್ಲೂಕು ಕೇಂದ್ರದಲ್ಲಿರುವ ಏಕೈಕ ಸೈನ್ಸ್ ಕಾಲೇಜಿಗೆ ಸೇರುವೆನೆಂಬ ಆಕೆಯ ಹಟಕ್ಕೆ, ತಂದೆಯ ಒತ್ತಾಸೆ ಬೇರೆ. ಈಗಿನ ಕಾಲದಲ್ಲಿ ಹೆಣ್ಣುಮಕ್ಕಳು ದೂರ ಹೋಗಿ ಕಲಿಯುವುದು ಸಾಮಾನ್ಯ ಎಂದು ಜಾಹ್ನವಿ ಗೆ ಧೈರ್ಯ ತುಂಬಿದ್ದರು ತಂದೆ .ಸೈನ್ಸ್ ತೆಗೆದುಕೊಂಡ ಕಾರಣ ಪ್ರಾಕ್ಟಿಕಲ್, ಸ್ಪೆಷಲ್ ಕ್ಲಾಸ್ ಎಂದೆಲ್ಲಾ ಐದು ಗಂಟೆಯವರೆಗೆ ತರಗತಿ ಇರುತ್ತಿತ್ತು. ಐದು ಮೂವತ್ತಕ್ಕೆ ಊರಿಗೆ ಹೋಗುವ ಬಸ್ಸು. ಅದು ತಪ್ಪಿದರೆ ಮತ್ತೆ ರಾತ್ರಿ 7ಗಂಟೆಗೆ. ಕೆಲವೊಮ್ಮೆ ಬಸ್ಸು ತಡವಾಗಿ ಬರುವುದೂ ಇತ್ತು. ಇಂದು ಕೂಡ ಹಾಗೆ ಐದು ಮೂವತ್ತಕ್ಕೆ ಬರಬೇಕಿದ್ದ ಬಸ್ಸು ಬರುವಾಗ ಆರು ಗಂಟೆಯಾಗಿತ್ತು .

ಮಧ್ಯದಲ್ಲಿ ಕುಡುಕನೊಬ್ಬ ಚಿಲ್ಲರೆಗಾಗಿ ಕಂಡಕ್ಟರ್ ಬಳಿ ಜಗಳ ಮಾಡಿದ್ದಕ್ಕೆ ಸಿಟ್ಟುಗೊಂಡ ಡ್ರೈವರ್ ಬಸ್ಸನ್ನು ಅಲ್ಲೇ ಪಕ್ಕದಲ್ಲಿ ನಿಲ್ಲಿಸಿದ್ದ. ಅವರ ಜಗಳ ತಾರಕಕ್ಕೇರಿ, ಕೊನೆಗೆ ಯಾರೋ ಕೆಲವರು ಅವರಿಬ್ಬರನ್ನು ಸಮಾಧಾನಪಡಿಸಿ, ಶಾಂತವಾದ ಮೇಲೆಯೇ ಡ್ರೈವರ್ ಮತ್ತೆ ಬಸ್ಸು ಸ್ಟಾರ್ಟ್ ಮಾಡಿದ್ದು.

ಬಸ್ಸಿನಿಂದ ಇಳಿದು ಮತ್ತೆ ಆರು ಕಿಲೋಮೀಟರ್ ನಡೆದು ಮನೆ ತಲುಪುವುದು ಜಾಹ್ನವಿಗೇನು ಕಷ್ಟವಲ್ಲ. ಹಳ್ಳಿಯಲ್ಲಿ ಬೆಳೆದವಳು ನಡೆಯುವುದಕ್ಕೆ, ಗಾಳಿ, ಮಳೆ ಬಿಸಿಲಿಗೆ ಹೆದರುವುದುಂಟೆ?


ಅಂದು ಬಸ್ಸಿಗೆ ಹತ್ತುವಾಗಲೇ ಆಕೆಯ ಕಣ್ಣು ಆತನತ್ತ ಹರಿದಿತ್ತು. ನೋಡಲು ತುಸು ಸ್ಮಾರ್ಟ್ ಅನ್ನಿಸುವ ಆತನನ್ನು ಈ ಹಿಂದೆ ಬಸ್ಸಿನಲ್ಲಿ ನೋಡಿರಲಿಲ್ಲ . ಸಾಮಾನ್ಯವಾಗಿ ಬಸ್ಸಿನಲ್ಲಿ ಪ್ರಯಾಣಿಸುವ ಎಲ್ಲರೂ ಪರಿಚಿತರೇ ಆಗಿರುತ್ತಾರೆ. ಆಗೊಮ್ಮೆ ಈಗೊಮ್ಮೆ ಯಾರ ಮನೆಗಾದರೂ ಅತಿಥಿಗಳು ಬಂದಾಗ ಬಸ್ಸಿನಲ್ಲಿ ಹೊಸ ಮುಖ ಕಾಣುವುದುಂಟು.ಈತ ಊರಿಗೆ ಹೊಸಬನಿರಬೇಕು. ಆತನೂ ಅದೇ ಸಮಯಕ್ಕೆ ಸರಿಯಾಗಿ ಅವಳತ್ತ ನೋಡಿದಾಗ ಗಲಿಬಿಲಿಗೊಂಡ ಜಾಹ್ನವಿ ದೃಷ್ಟಿ ತಪ್ಪಿಸಿ ಬೇರೆಡೆಗೆ ನೋಡತೊಡಗಿದಳು. ಜಾಹ್ನವಿ ಮತ್ತೊಮ್ಮೆ ಆತನತ್ತ ದೃಷ್ಟಿ ಹಾಯಿಸಿದಾಗಲೂ ಆತ ಜಾಹ್ನವಿಯತ್ತಲೇ ನೋಡುತ್ತಿದ್ದ. ಇದೊಂದು ಪೀಡೆ ಎಲ್ಲಿಂದ ವಕ್ಕರಿಸಿತೋ ತನ್ನಷ್ಟಕ್ಕೆ ಗೊಣಗಿಕೊಂಡಳು.

ಬಸ್ಸಿನಿಂದ ಇಳಿಯುವಾಗ ಮಳೆ ಇನ್ನಷ್ಟು ಜೋರಾಗಿ ಸುರಿಯತೊಡಗಿತ್ತು, ಜೊತೆಗೆ ಕತ್ತಲಾಗಿತ್ತು. ವೇಗವಾಗಿ ಹೆಜ್ಜೆ ಇಡಲಾರಂಭಿಸಿದಳು ಜಾಹ್ನವಿ. ಆ ವ್ಯಕ್ತಿಯೂ ಅದೇ ಸ್ಟಾಪ್ ನಲ್ಲಿ ಇಳಿದು ಪಕ್ಕದ ಅಂಗಡಿಗೆ ಹೋದದ್ದು ಕಂಡಿತು. ಅಬ್ಬ ಪೀಡೆ ತೊಲಗಿತು ಎಂದುಕೊಂಡಳು.

ಜಾಹ್ನವಿ ಸ್ವಲ್ಪ ದೂರ ನಡೆದು ಹಿಂತಿರುಗಿ ನೋಡಿದಾಗ ದೂರದಲ್ಲಿ ಯಾರೋ ಬರುವುದು ಕಾಣಿಸಿತು.ಇನ್ನಷ್ಟು ದೂರ ಹೋದ ಮೇಲೆ ಮತ್ತೆ ನೋಡಿದಾಗ ನನ್ನ ಹಿಂದೆಯೇ ಬರುತ್ತಿದ್ದಾನೆ ಆತ. ಅವನೇ ಬಸ್ಸಿನಲ್ಲಿದ್ದ ಯುವಕ. ಆತನು ಕೂಡಾ ನನ್ನ ವೇಗಕ್ಕೆ ಸರಿಯಾಗಿ ನಡೆಯಲು ಯತ್ನಿಸುತ್ತಿದ್ದಾನೆ. ಮೊದಲ ಬಾರಿಗೆ ದುಃಖ, ಭಯ ಜೊತೆಜೊತೆಗೆ ಬಂದಿತ್ತು ಧೈರ್ಯವಂತೆ ಜಾಹ್ನವಿಗೆ. ಜೋರಾಗಿ ರಾಮ ರಕ್ಷೆ ಸ್ತೋತ್ರವನ್ನು ಪಠಿಸುತ್ತಾ ಹೆಜ್ಜೆ ಹಾಕಲಾರಂಭಿಸಿದಳು..

ಎರಡು ತಿಂಗಳ ಹಿಂದೆ ಪಕ್ಕದ ಊರಿನ ಯುವತಿಯೋರ್ವಳನ್ನು ಕಾಲೇಜಿನಿಂದ ಹಿಂತಿರುಗುವಾಗ ಅತ್ಯಾಚಾರ ಮಾಡಿ, ಕೊಲೆ ಮಾಡಿ ಪೊದೆಯಲ್ಲಿ ಎಸೆದ ಘಟನೆಯನ್ನು ಪತ್ರಿಕೆಗಳಲ್ಲಿ ಓದಿದ್ದಳು. ಅದನ್ನು ಓದಿ ಜಾಹ್ನವಿಯ ಅಮ್ಮ ವಿಪರೀತ ಭಯಗೊಂಡಿದ್ದರು. ಮೊದಲೇ ಜಾಹ್ನವಿ ಅಷ್ಟುದೂರದ ಕಾಲೇಜಿಗೆ ಹೋಗುವುದು ಇಷ್ಟವಿಲ್ಲದಿದ್ದ ಅವರಿಗೆ ಈ ಘಟನೆ ಕಂಗೆಡಿಸಿತ್ತು.
ಮೊನ್ನೆ ಯುವತಿಗಾದ ಸ್ಥಿತಿಯೇ ನನಗೆ ಬರುತ್ತದೋ ಏನೋ. ನಾಳೆ ನನ್ನ ಹೆಸರು ಪತ್ರಿಕೆಯಲ್ಲಿ ಬರುವುದು ನಿಶ್ಚಿತ. ಅಪ್ಪ-ಅಮ್ಮ, ತಮ್ಮನ ನೆನಪಾಗಿ ದುಃಖ ಉಕ್ಕಿ ಬಂತು ಜಾಹ್ನವಿಗೆ.

ದುಃಖ- ಭಯ ಎರಡೂ ಜೊತೆಗೆ ಸೇರಿ ಹರಿದ ಕಣ್ಣೀರು ಮಳೆ ನೀರಿನೊಡನೆ ಸೇರಿ ಮಾಯವಾಗುತ್ತಿತ್ತು. ಅಳುತ್ತಲೇ ವೇಗವಾಗಿ ನಡೆಯುವ ಯತ್ನದಲ್ಲಿದ್ದಳು ಜಾಹ್ನವಿ.
ಮೊನ್ನೆ ನಡೆದ ಪರೀಕ್ಷೆಯಲ್ಲಿ ತರಗತಿಗೆ ಪ್ರಥಮ ಸ್ಥಾನ ಪಡೆದ ಸಂಭ್ರಮವನ್ನು ಮನೆಯಲ್ಲಿ ಹೇಳಬೇಕೆಂದು ಉತ್ಸಾಹದಿಂದ ಕಾಲೇಜಿನಿಂದ ಹೊರಟಿದ್ದರೆ, ಈಗ ಒಮ್ಮೆ ಮನೆ ತಲುಪಿದರೆ ಸಾಕು ಎನ್ನುವಂತಾಗಿತ್ತು‌. ತಿರುಗಿ ನೋಡಿದಾಗ ಆತನೂ ಬರುತ್ತಿದ್ದಾನೆ.

ಇನ್ನು ಸ್ವಲ್ಪ ಮುಂದೆ ಹೋದರೆ ಗುಡ್ಡದ ಮೇಲೆ ಸೋಮಪ್ಪನ ಮನೆ ಇದೆ. ನೇರವಾಗಿ ಸೋಮಪ್ಪನ ಮನೆಗೆ ಹೋಗಿ ಆತನನ್ನು ಜೊತೆಗೆ ಕರೆದುಕೊಂಡು ಮನೆಗೆ ಹೋಗುವುದು ಎಂದು ನಿಶ್ಚಯಿಸಿ, ಗುಡ್ಡ ಹತ್ತಿ ಸೋಮಪ್ಪನ ಮನೆಗೆ ಬಂದರೆ, ಸೋಮಪ್ಪನ ಮನೆಗೆ ಬೀಗ ಹಾಕಿದೆ. ಬಹುಶಃ ಕೂಲಿ ಕೆಲಸಕ್ಕೆ ಹೋಗುವ ಸೋಮಪ್ಪ ಮತ್ತು ಆತನ ಹೆಂಡತಿ ಇನ್ನೂ ಮನೆಗೆ ಮರಳಿ ಬಂದಿಲ್ಲ. ಮನೆಯ ಹೊರಗಿನ ಕೊಟ್ಟಿಗೆಯಲ್ಲಿ ನೇತಡಿಸಿದ್ದ ಕತ್ತಿ ಕಣ್ಣಿಗೆ ಬಿತ್ತು. ಧೈರ್ಯಕ್ಕೆ ಜೊತೆಗಿರಲಿ, ಬದುಕಿ ಉಳಿದರೆ ನಾಳೆ ಸೋಮಪ್ಪನಿಗೆ ವಾಪಸು ಕೊಟ್ಟರಾಯಿತು ಅಂತ ಕತ್ತಿಯನ್ನು ಅಲ್ಲಿಂದ ಎಳೆದುಕೊಂಡು, ಥೇಟ್ ಭದ್ರಕಾಳಿಯ ಅವತಾರದಲ್ಲಿ ಹೊರಟಳು. ನಾನು ಸತ್ತರೂ ಪರವಾಗಿಲ್ಲ ಆತನನ್ನು ಮಾತ್ರಾ ಸುಮ್ಮನೆ ಬಿಡುಬಾರದು ಎಂದುಕೊಂಡು ಪಕ್ಕದ ದಾರಿಯಿಂದ ನಡೆಯತೊಡಗಿದಳು.ತಿರುಗಿ ನೋಡಿದರೆ ಆ ವ್ಯಕ್ತಿಯೂ ಸೋಮಪ್ಪನ ಮನೆಯ ಕಡೆಯಿಂದ ಬರುತ್ತಿದ್ದಾನೆ. ಅಯ್ಯೋ ಈತ ನನ್ನನ್ನು ಹಿಂಬಾಲಿಸುತ್ತಿರುವುದು ಖಚಿತ. ದಾರಿಹೋಕ ನಾಗಿದ್ದರೆ ಸೋಮಪ್ಪನ ಮನೆಗೇಕೆ ಬರಬೇಕಿತ್ತು? ಎಂದು ಇನ್ನಷ್ಟು ವೇಗವಾಗಿ ನಡೆಯತೊಡಗಿದಳು.

ಮಳೆಯ ಆರ್ಭಟ ಸ್ವಲ್ಪ ಕಡಿಮೆಯಾಗತೊಡಗಿತ್ತು. ಹೆಚ್ಚುಕಮ್ಮಿ ಓಡಿಕೊಂಡೇ ಎಂಬತೆ ಮನೆ ತಲುಪಿದಳು ಜಾಹ್ನವಿ. ಕೈಯಲ್ಲಿ ಕತ್ತಿ ಹಿಡಿದುಕೊಂಡು ರಣಚಂಡಿಯಂತೆ ಓಡಿಬಂದ ಮಗಳನ್ನು ನೋಡಿ ಜಾಹ್ನವಿ ಯ ಅಮ್ಮನಿಗೆ ಆಶ್ಚರ್ಯವಾಯಿತು. ಅಮ್ಮನನ್ನು ಕಂಡೊಡನೆ ತಬ್ಬಿಕೊಂಡು ಒಂದೇ ಸಮನೆ ಜೋರಾಗಿ ಅಳತೊಡಗಿದಳು. ಮನೆಯವರೆಲ್ಲಾ ಏನಾಯಿತೆಂದು ಕೇಳುತ್ತಿದ್ದರೆ ಜಾಹ್ನವಿ ಉತ್ತರಿಸುವ ಸ್ಥಿತಿಯಲ್ಲಿರಲಿಲ್ಲ.

ಅಷ್ಟುಹೊತ್ತಿಗೆ ಗದ್ದೆಯ ಬದಿಯಲ್ಲಿ ಯಾರೋ ನಡೆದು ಬರುತ್ತಿರುವುದು ಕಾಣಿಸಿತು. ನೋಡಿದರೆ ಅದೇ ವ್ಯಕ್ತಿ. ಜಾಹ್ನವಿ ಭಯದಿಂದ ಜೋರಾಗಿ ಕಿರಿಚುತ್ತಾ " ನೋಡಿ, ನೋಡಿ ಅದೇ ವ್ಯಕ್ತಿ ನನ್ನನ್ನು ಹಿಂಬಾಲಿಸಿದ್ದು" ಎನ್ನುತ್ತಾ ಭಯದಿಂದಕೋಣೆಯೊಳಗೆ ಓಡಿ ಬಾಗಿಲು ಹಾಕಿಕೊಂಡು ಕುಳಿತು ಅಳತೊಡಗಿದಳು.

ಜಾಹ್ನವಿಯ ಅಪ್ಪ ಹೊರಗೆ ಬಂದು ನೋಡಿದಾಗ ಆ ವ್ಯಕ್ತಿ ಅಂಗಳ ತಲುಪಿದ್ದ. ಆತನನ್ನು ನೋಡಿದ ಕೂಡಲೇ ಜಾಹ್ನವಿಯ ತಂದೆ ಆಶ್ಚರ್ಯದಿಂದ "ಅಯ್ಯೋ ಶರತ್ ಇದೇನು ??ಆಶ್ಚರ್ಯ, ನೀನು ಹೇಗೆ ಬಂದೆ ಇಲ್ಲಿಗೆ ? ದಾರಿ ಗೊತ್ತಾಯ್ತ? ಬರುವುದು ಮೊದಲೇ ಹೇಳಬಾರದೆ ? ಅದೂ ಈ ಮಳೆಗೆ, ಕೆಸರಿನ ದಾರಿಯಲ್ಲಿ .... ನಿನಗೆ ಮೊದಲೇ ಇಂಥ ರಸ್ತೆಯಲ್ಲಿ ನಡೆದು ಅಭ್ಯಾಸ ಇಲ್ಲ. ಹೇಗೆ ನಡೆದು ಬಂದೆಯೋ ಪಾಪ!!! ಒಳಗೆ ಬಾ, ಎಂದು ಕರೆಯುತ್ತಿದ್ದರೆ, ಜಾಹ್ನವಿ ಆಶ್ಚರ್ಯದಿಂದ ಹೊರಗೆ ಬಂದು ತಂದೆಯ ಮುಖ ನೋಡಿದಳು.

ಜಾಹ್ನವಿ , ಇವನು ಶರತ್. ಮುಂಬೈಯಲ್ಲಿರುವ ನಿನ್ನ ಸೋದರತ್ತೆಯ ಮಗ. ನೀನು ಚಿಕ್ಕವಳಿದ್ದಾಗ ಮನೆಗೆ ಬಂದಿದ್ದ. ಅತ್ತೆಯಾದರೂ ವರ್ಷಕ್ಕೊಮ್ಮೆ ಯಾವುದಾದರೂ ಸಮಾರಂಭಕ್ಕೆ ಊರಿಗೆ ಬರುತ್ತಾರೆ. ಇವನು ನೋಡು ಬರದೆ ಎಂಟತ್ತು ವರ್ಷಗಳೇ ಆಯ್ತು. ಗೊತ್ತಾಯ್ತಾ ನಿನಗೆ ಎಂದು ಕೇಳುತ್ತಿದ್ದರೆ ಜಾಹ್ನವಿ ಏನೇನೋ ಕಲ್ಪಿಸಿಕೊಂಡ ತನ್ನ ದಡ್ಡತನಕ್ಕೆ ನಾಚಿಕೊಂಡು ಒಳಗೋಡಿದಳು.

ಶರತ್ ಹೇಳುವುದು ಕಿವಿಗೆ ಕೇಳುತ್ತಿತ್ತು.
ಮಾವ ನಿಮ್ಮ ಮಗಳು ಪಿಟಿ ಉಷಾಳನ್ನು ಮೀರಿಸುತ್ತಾಳೆ. ಬಸ್ಸಿನಿಂದ ಇಳಿದು ಪಕ್ಕದ ಅಂಗಡಿಯಲ್ಲಿ ನಿಮ್ಮ ಮನೆಗೆ ಹೋಗುವುದು ಹೇಗೆಂದು ಕೇಳುತ್ತಿದ್ದಾಗ ಅಂಗಡಿಯವರು ಜಾಹ್ನವಿಯನ್ನು ತೋರಿಸಿ ಅವಳು ನಿಮ್ಮ ಮಗಳು ಅವಳ ಜೊತೆ ಹೋಗು ಎಂದು ಹೇಳಿದರು. ಸರಿ ಅವಳ ಜೊತೆ ಬರೋಣ ಎಂದು ಅವಳ ಹಿಂದೆಯೇ ಓಡುತ್ತಾ ಬಂದರೆ, ಅವಳು ನನಗಿಂತ ವೇಗವಾಗಿ ಓಡುತ್ತಿದ್ದಳು. ಈಗ ಎಲ್ಲಿ ಹೋದಳು ಜಾಹ್ನವಿ? ಎಂದು ಜಾಹ್ನವಿ ಯನ್ನು ಹುಡುಕುತ್ತಾ ಒಳಗೆ ಬಂದರೆ ಏನೇನೋ ಕಲ್ಪಿಸಿಕೊಂಡು ಓಡಿಕೊಂಡು ಬಂದಿದ್ದ ಜಾಹ್ನವಿ ನಾಚಿ ನೀರಾದಳು.