Click here to Download MyLang App

ಜನಿವಾರದ ಬೀಗದಕೈ - ಬರೆದವರು : ಡಾ. ಕರ್ನೂಲ್ ರಮೇಶ ಬಾಬು | ಸಾಮಾಜಿಕ


ಆಫೀಸ್ ಗೆ ಹೊರಡಲು ತಯಾರಾಗಿ ಬ್ರೀಫ್ ಕೇಸ್ ಹಿಡಿದು ಅವಸರವಸರವಾಗಿ ಇನ್ನೇನು ಮನೆ ಬಾಗಿಲು ದಾಟಬೇಕೆನ್ನುವಷ್ಟರಲ್ಲಿ ಜೇಬಿನಲ್ಲಿದ್ದ ಸೆಲ್ ಫೋನ್ ಸದ್ದು ಮಾಡಿತು. ಅವನು ಭಾಗವಹಿಸಬೇಕಿದ್ದ ಅತಿ ಮುಖ್ಯವಾದ ಮೀಟಿಂಗ್ ಗೆ ತಡವಾಗುತ್ತಿದ್ದುದಕ್ಕೆ ಅಸಮಾಧಾನದಿಂದಲೇ ಫೋನ್ ಹೊರತೆಗೆದು ಕರೆ ಮಾಡಿದವರಾರೆಂದು ನೋಡಿದ. ತನ್ನ ತಂಗಿ ಸುಜಯಾಳಿಂದ ಕರೆ ಬಂದಿತ್ತು. ಸುಜಯಾ ಕರೆ ಮಾಡುತ್ತಿದ್ದುದೇ ಬಹಳ ಅಪರೂಪವಾಗಿ. ಗೊಣಗಿಕೊಳ್ಳುತ್ತಲೇ ಕರೆ ಸ್ವೀಕರಿಸಿದ.
’ಹಲೋ ಸುಜೀ, ಏನು ವಿಷಯ? ನಾನು ಅರ್ಜೆಂಟಾಗಿ ಒಂದು ಮೀಟಿಂಗ್ ಗೆ ಹೋಗಬೇಕು. ಏನಾದರೂ ಜರೂರು ವಿಷಯವಿತ್ತಾ?’ ಎಂದು ಕೇಳಿದ.
’ಹೌದೋ ಗುರೂ, ಬಹಳ ಜರೂರು ವಿಷಯಾನೇ. ನೆನ್ನೆ ಅಪ್ಪನ್ನ ಆಸ್ಪತ್ರೆಗೆ ಸೇರಿಸಿದ್ದೀವಿ. ರಕ್ತದಲ್ಲಿ ಶುಗರ್ ಬಹಳ ಕಡಿಮೆ ಆಗಿ ಮೈಮೇಲೆ ಪ್ರಜ್ಞೆ ತಪ್ಪಿತ್ತು’
’ಹಿಂದೇನೂ ಒಂದೆರಡು ಸಲ ಹೀಗೇ ಆಗಿತ್ತಲ್ಲಾ?.....’ ಎಂದ, ಸುಜಯಾ ಪೂರ್ತಿ ವಿಷಯ ತಿಳಿಸುವುದಕ್ಕೂ ಕಾಯದೆ.
’ಹೌದು. ಆಗೆಲ್ಲಾ ಗ್ಲುಕೋಸ್ ಕೊಟ್ಟ ಸ್ವಲ್ಪ ಹೊತ್ತಿಗೇ ಹುಷಾರಾಗುತ್ತಿದ್ದರು. ಆದರೆ ಈ ಸಲ ಸ್ವಲ್ಪ ಬೇರೆ ತರಹ ಕಾಣ್ತಿದೆ. ನೆನ್ನೆ ಪೂರ್ತಿ ಪ್ರಜ್ಞೆ ತಪ್ಪಿತ್ತು. ಗ್ಲುಕೋಸ್ ಕೊಡ್ಲಿಕ್ಕೆ ಶುರುಮಾಡಿ ಹದಿನಾರು ತಾಸಾದರೂ ಇನ್ನೂ ಸರಿಯಾಗಿ ಎಚ್ಚರ ಆಗಿಲ್ಲ’ ಎಂದಳು ಸುಜಯಾ ಆತಂಕದಿಂದ.
’ಡಾಕ್ಟರು ಏನು ಹೇಳಿದರು?’
’ಈ ಸಲ ಕೂಡಾ ರಕ್ತದಲ್ಲಿ ಶುಗರ್ ಕಡಿಮೆ ಆಗಿರೋದ್ರಿಂದೆಲೇ ಹೀಗಾಗಿರೋದು. ಆದರೆ ಈ ಸಲ ಹಾಗಾಗ್ಲಿಕ್ಕೆ ಬೇರೇನೇ ಕಾರಣ ಇರೋದ್ರಿಂದ ಬೇಗ ಎಚ್ಚರ ಆಗ್ತಿಲ್ಲ. ಇಂತಹ ಸಂದರ್ಭದಲ್ಲಿ ಕೆಲವೊಮ್ಮೆ ಮೂರು ನಾಲ್ಕು ದಿನ ಬೇಕಾಗ್ಬೋದು. ಪೂರ್ತಿ ಸರಿಯಾಗೋಕೆ . ಅಪ್ಪಗೆ ಎಪ್ಪತ್ತೈದು ವರ್ಷ ವಯಸ್ಸಾಗಿರೋದ್ರಿಂದ ಈ ಮಧ್ಯೆ ಬೇರೇನಾದ್ರೂ ಕಾಂಪ್ಲಿಕೇಶನ್ ಕಾಣಿಸಿಕೊಂಡರೆ ಜೀವಕ್ಕೂ ಅಪಾಯ ಆಗ್ಬೋದು.....ಅಂತಿದ್ದಾರೆ. ನೀನು ಒಮ್ಮೆ ಬಂದು ಹೋಗೋದು ವಾಸಿ’ ಎಂದಳು.
’ಆಗಲಿ, ಮೀಟಿಂಗ್ ಹನ್ನೊಂದೂವರೆಗೆ ಮುಗೀಬಹುದು. ತಕ್ಷಣ ಹೊರಟರೆ ಸಾಯಂಕಾಲದಷ್ಟು ಹೊತ್ತಿಗೆ ಅಲ್ಲಿ ಇರ್ತೇನೆ........’ ಆಗಾಗ್ಗೆ ಫೋನ್ ಮಾಡಿ ಅಪ್ಪನ ಕಂಡೀಶನ್ ತಿಳಿಸುತ್ತಿರು’ ಎಂದು ಫೋನ್ ಜೇಬಿಗಿಳಿಸಿ ಆಫೀಸ್ ದಾರಿ ಹಿಡಿದ. ಆಫೀಸ್ ನಿಂದಲೇ ತನ್ನ ಪತ್ನಿ ರಮಾಗೆ ವಿಷಯ ತಿಳಿಸಿ ತನ್ನ ಪ್ರಯಾಣಕ್ಕೆ ಸೂಟ್ ಕೇಸ್ ಸಿದ್ಧಪಡಿಸಲು ತಿಳಿಸಿ ಮೀಟಿಂಗ್ ಮುಗಿಯುತ್ತಲೆ ಮನೆ ಕಡೆ ಧಾವಿಸಿದ.

ಅವನ ತಂದೆ ರಾಮಚಂದ್ರರಾಯರು ಪಿ.ಡಬ್ಲು.ಡಿ ಇಲಾಖೆಯಲ್ಲಿ ಎಕ್ಸೆಕ್ಯೂಟಿವ್ ಎಂಜಿನಿಯರ್ ಆಗಿ ನಿವೃತ್ತಿ ಹೊಂದಿ ಬಳ್ಳಾರಿಯ ತಮ್ಮ ಸ್ವಂತ ಮನೆಯಲ್ಲಿ ನೆಲೆಸಿದ್ದರು. ಅವರ ಮೂರು ಮಕ್ಕಳಲ್ಲಿ ಗುರುರಾಜನೇ ಹಿರಿಯವನು. ಬೆಂಗಳೂರಿನ ರಿಯಲ್ ಎಸ್ಟೇಟ್ ಕಂಪೆನಿಯೊಂದರಲ್ಲಿ ಮ್ಯಾನೇಜರ ಆಗಿದ್ದ ಅವನಿಗೆ ಪುರುಸೊತ್ತು ದೊರಕುತ್ತಿದ್ದುದೇ ಅಪರೂಪ. ಹಾಗೊಮ್ಮೆ ಪುರುಸೊತ್ತು ದೊರಕಿದಾಗ ಬಳ್ಳಾರಿಯಲ್ಲಿದ್ದ ತಂದೆತಾಯಿಯರನ್ನು ಒಮ್ಮೆ ಭೇಟಿ ಮಾಡಿ ಬರುತ್ತಿದ್ದ. ಮಧ್ಯದವನಾದ ಸುಧಾಕರ ದೂರದ ನಾಗಪುರದಲ್ಲಿ ಎಲ್. ಐ. ಸಿ ಅಧಿಕಾರಿಯಾಗಿದ್ದ. ಅವನು ಬಳ್ಳಾರಿಗೆ ಬಂದು ಹೋಗಿ ಹಲವಾರು ವರ್ಷಗಳೇ ಕಳೆದಿದ್ದವು. ಕೊನೆಯವಳಾದ ಸುಜಯ ಇದ್ದುದರಲ್ಲಿಯೇ ಹತ್ತಿರದ ಹೊಸಪೇಟೆಯಲ್ಲಿದ್ದಳು. ತಿಂಗಳಿಗೊಮ್ಮೆಯಾದರೂ ಬಳ್ಳಾರಿಗೆ ಹೋಗಿಬರುತ್ತಿದ್ದಳು. ಹಾಗಾಗಿ. ಹೆಚ್ಚಿನ ಸಮಯ ರಾಮಚಂದ್ರರಾಯರು ಮತ್ತು ಅವರ ಪತ್ನಿ ಸುಶೀಲಾಬಾಯಿಯವರಿಬ್ಬರೇ ತಮ್ಮ ಸ್ವಂತ ಮನೆಯಲ್ಲಿ ಕಾಲ ಕಳೆಯುತ್ತಿದ್ದರು. ಮೊನ್ನೆ ಅವರನ್ನು ವಿಚಾರಿಸಿಕೊಂಡು ಹೋಗಲು ಬಂದಿದ್ದ ಸುಜಯ ಇನ್ನೇನು ಏಳು ಗಂಟೆಯ ಬಸ್ಸಿಗೆ ವಾಪಸ್ಸು ಹೋಗಬೇಕೆಂದು ತಯಾರಾಗುತ್ತಿರುವಷ್ಟರಲ್ಲಿಯೇ ರಾಯರಿಗೆ ಎಚ್ಚರ ತಪ್ಪಿತ್ತು. ಅವರ ಡಯಾಬಿಟೀಸ್ ಕಾಯಿಲೆಗೆ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದ ಅವರಿಗೆ ಹಿಂದೆಯೂ ಒಂದೆರಡು ಬಾರಿ ರಕ್ತದಲ್ಲಿ ಸಕ್ಕರೆಯ ಅಂಶ ಕಡಿಮೆಯಾಗಿ ಆಸ್ಪತ್ರೆಗೆ ಹೋಗಬೇಕಾಗಿ ಬಂದಿತ್ತು. ಆಸ್ಪತ್ರೆಯಲ್ಲಿ ಗ್ಲುಕೋಸ್ ಡ್ರಿಪ್ ಕೊಟ್ಟ ಒಂದು ಅರ್ಧ ಗಂಟೆಯಲ್ಲೇ ಪೂರ್ತಿ ಸುಧಾರಿಸಿಕೊಳ್ಳುತ್ತಿದ್ದರು. ಈ ಸಲವೂ ಹಾಗೆಯೇ ಆಗಿರಬೇಕೆಂದು ಸುಜಯ ಅಕ್ಕಪಕ್ಕದವರ ನೆರೆವಿನಿಂದ ಅವರನ್ನು ಹತ್ತಿರದ ನರ್ಸಿಂಗ್ ಹೋಮ್ ಗೆ ಕರೆದೊಯ್ದಿದ್ದಳು. ಈ ಸಲವೂ ರಕ್ತದಲ್ಲಿ ಸಕ್ಕರೆಯ ಅಂಶ ಬಹಳ ಅಪಾಯಕಾರಿ ಮಟ್ಟಿಕ್ಕೆ ಇಳಿದು ಹೋಗಿದ್ದುದು ಪತ್ತೆಯಾಗಿತ್ತು. ತಕ್ಷಣವೇ ಗ್ಲುಕೋಸ್ ದ್ರಾವಣವನ್ನು ಕೊಡಲಾರಂಭಿಸಿದರೂ, ಸಾಮಾನ್ಯವಾಗಿ ಹತ್ತಿಪ್ಪತ್ತು ನಿಮಿಷಗಳಲ್ಲಿಯೇ ಸಾಕಷ್ಟು ಸುಧಾರಣೆ ಕಂಡುಬರುತ್ತಿದ್ದುದು ಈ ಸಲ ಅರ್ಧಗಂಟೆಯಾದರೂ ಗಮನೀಯ ಸುಧಾರಣೆ ಕಂಡು ಬಂದಿರಲಿಲ್ಲ. ಅವರನ್ನು ಉಪಚರಿಸುತ್ತಿದ್ದ ಡಾ|| ರಾಜೀವ ದೇಸಾಯಿಯವರಿಗೂ ಇದು ಸ್ವಲ್ಪ ಆತಂಕ ಮೂಡಿಸಿತ್ತು. ಅವರು ಸುಶೀಲಾ ಬಾಯಿಯವರನ್ನು ಮತ್ತೊಮ್ಮೆ ಪ್ರಶ್ನಿಸಿದಾಗ, ರಾಯರಿಗೆ ಎರಡು ಮೂರು ದಿನಗಳಿಂದ ನೆಗಡಿ ಜ್ವರವಿತ್ತೆಂದೂ ಅದಕ್ಕೆ ಅವರ ಮನೆಯ ಹತ್ತಿರದ ವೈದ್ಯರು ಒಂದು ಆಂಟಿ ಬಯಾಟಿಕ್ ಕೊಟ್ಟಿದ್ದರೆಂದೂ ತಿಳಿಯಿತು. ಆ ಆಂಟಿಬಯಾಟಿಕ್ ಅಪರೂಪಕ್ಕೆ ಕೆಲವರಲ್ಲಿ ಅದರಲ್ಲಿಯೂ ಡಯಾಬಿಟೀಸ್ ಇರುವವರಲ್ಲಿ ಸಕ್ಕರೆಯ ಅಂಶವನ್ನು ತೀವ್ರವಾಗಿ ಕಡಿಮೆ ಮಾಡುವಂತಹ ಸೈಡ್ ಎಫೆಕ್ಟ್ ಹೊಂದಿರುವುದು ತಿಳಿದಿದ್ದ ಡಾ|| ರಾಜೀವ್ ದೇಸಾಯಿ, ಅಂತಹ ಗಣನೀಯ ಚೇತರಿಕೆ ಕಂಡಿರದಿದ್ದಾಗ ರಾಯರನ್ನು ಐ.ಸಿ.ಯು ನಲ್ಲಿ ದಾಖಲು ಮಾಡಿ, ಅವರು ಸುಧಾರಿಸಲು ಎರಡುಮೂರು ದಿನ ಬೇಕಾಗಬಹುದೆಂದು ಸೂಚನೆಯನ್ನು ನೀಡಿದ್ದರು. ಮರುದಿನ ಬೆಳಗಿನಲ್ಲಿಯೂ ಅಂತಹ ಗಣನೀಯ ಚೇತರಿಕೆ ಕಂಡಿರದಿದ್ದಾಗ ಸುಜಯಾ ತನ್ನ ಅಣ್ಣಂದಿರಿಬ್ಬರಿಗೂ ವಿಷಯ ತಿಳಿಸಿದ್ದಳು.


ಬೆಂಗಳೂರಿನಿಂದ ಬಳ್ಳಾರಿಗೆ ಕಾರಿನಲ್ಲಿ ಸುಮಾರು ಐದು ತಾಸಿನ ಹಾದಿ. ಬಳ್ಳಾರಿಯ ಹಾದಿ ಸವೆದಂತೆಲ್ಲಾ ಗುರುರಾಜ್ ಅವನ ತಂದೆಯ ಬಗ್ಗೆಯೇ ಯೋಚಿಸುತ್ತಿದ್ದ. ಈ ಸಲ ಅವರ ಸ್ಥಿತಿ ತುಂಬಾ ಗಂಭೀರವಾಗಿದೆಯೆಂದು ಡಾಕ್ಟರು ಹೇಳಿದ್ದುದು ಅವನ ಯೋಚನೆಗೆ ಕಾರಣವಾಗಿತ್ತು. ಒಂದು ವೇಳೆ ಈ ಸಲ ಏನಾದರೂ ಎಡವಟ್ಟಾಗಬಹುದೇ, ಹಾಗಾದರೆ ಏನು ಮಾಡಬಹುದು ಎಂಬುದರ ಕಡೆ ಅವನ ಯೋಚನೆ ಸಾಗಿತ್ತು. ಅಮ್ಮನಿಗೊಂದು ವ್ಯವಸ್ಥೆ ಮಾಡಿ, ಬಳ್ಳಾರಿಯ ಮನೆಯನ್ನು ಮಾರಿ ಮೂರೂ ಮಂದಿ ಹಂಚಿಕೊಂಡರೆ ಹೇಗೆ? ಚಿಕ್ಕ ಮನೆಯಾದರೂ, ಒಳ್ಳೆಯ ಬಡಾವಣೆಯಲ್ಲಿದ್ದುದರಿಂದ ಏನಿಲ್ಲವೆಂದರೂ ಮೂವತ್ತು ಲಕ್ಷ ಬರಬಹುದೆಂದು ಲೆಕ್ಕ ಹಾಕಿದ. ತನ್ನ ಅಮ್ಮನಿಗೂ, ಪತ್ನಿ ರಮಾಗೂ ಅಷ್ಟಕ್ಕಷ್ಟೇ . ಹೀಗಾಗಿ , ಅಮ್ಮನನ್ನು ತಮ್ಮ ಮನೆಯಲ್ಲಿಟ್ಟುಕೊಳ್ಳಲು ರಮಾ ಒಪ್ಪುತ್ತಾಳೆಯೇ? ಅಮ್ಮನನ್ನು ತಮ್ಮೊಡನಿಟ್ಟುಕೊಂಡರೆ ಆ ನೆವದಲ್ಲಿ ಮನೆ ಮಾರಾಟದ ಹಣದಲ್ಲಿ ಹೆಚ್ಚಿನ ಪಾಲನ್ನು ಕೇಳಬಹುದು ಎಂದರೆ ರಮಾ ಒಪ್ಪಬಹುದೇ ಎಂಬುದಾಗಿ ಅವನ ಮನ ಅತ್ತಿತ್ತ ಹೊಯ್ದಾಡುತ್ತಿತ್ತು. ಗುರುರಾಜ ಬಳ್ಳಾರಿ ತಲುಪಿದಾಗ ಸಂಜೆ ಸುಮಾರು ಏಳುಗಂಟೆಯಾಗಿತ್ತು.

ನೇರವಾಗಿ ಆಸ್ಪತ್ರೆಗೆ ಹೋಗಿ, ರಿಸೆಪ್ಷನ್ ನಲ್ಲಿ ವಿಚಾರಿಸಿದಾಗ ರಾಯರನ್ನು ಐ.ಸಿ.ಯು ನಿಂದ ಸ್ಪೆಷಲ್ ವಾರ್ಡಿಗೆ ಕಳಿಸಿದ್ದಾರೆಂದು ತಿಳಿಯಿತು. ರಾಯರಿದ್ದ ಸ್ಪೆಷಲ್ ವಾರ್ಡಿಗೆ ಹೋದಾಗ, ಆರಡಿ ಸುಪುಷ್ಟ ದೇಹದ ರಾಯರು ಇಡೀ ಹಾಸಿಗೆಯನ್ನು ಆಕ್ರಮಿಸಿ ಅಂಗಾತ ಮಲಗಿದ್ದರು. ಅವರ ಬಲಗೈ ಮುಂಗೈನಲ್ಲಿ ಚುಚ್ಚಿದ್ದ ನಳಿಕೆಯ ಮೂಲಕ ಗ್ಲುಕೋಸ್ ದ್ರಾವಣ ಹನಿಹನಿಯಾಗಿ ಅವರ ದೇಹ ಸೇರುತ್ತಿತ್ತು. ಅವರ ಮಂಚದ ಪಕ್ಕದಲ್ಲಿ, ಕೃಶದೇಹದ ಸುಶೀಲಾ ಬಾಯಿಯವರು ಒಂದು ಕುರ್ಚಿಯಲ್ಲಿ ಮುದುಡಿಕೊಂಡು ಕುಳಿತು ಹನುಮಾನ್ ಚಾಲೀಸದ ಪಠಣ ನಡೆಸಿದ್ದರು. ನಿಶ್ಶಬ್ದವಾಗಿ ಗುರುರಾಜ ಕೋಣೆಯೊಳಗೆ ಕಾಲಿಟ್ಟಾಗ, ಅವನನ್ನು ಗಮನಿಸಿದ ಸುಶೀಲಾ ಬಾಯಿಯವರು,
’ಬಾಪ್ಪಾ ಗುರೂ, ..........ನೋಡು ಹ್ಯಾಗೆ ಮಲಗ್ಯಾರೆ ನಿಮ್ಮಪ್ಪ, ಇನ್ನೂ ಗ್ಯಾನಾನೇ ಬಂದಿಲ್ಲ ........ಮಧ್ಯಾಹ್ನ ಐ.ಸಿ.ಯು ನಿಂದ ಈ ಕೋಣೆಗೆ ಕರೆದುಕೊಂಡು ಬಂದ್ರು’ ಎಂದರು ಕಳಕಳಿಯಿಂದ. ಗುರುರಾಜ ರಾಯರ ಪಕ್ಕಕ್ಕೆ ಹೋಗಿ, ಅವರ ಹಣೆಯ ಮೇಲೆ ಕೈಯಾಡಿಸಿ, ’ಅಪ್ಪಾ, ಇಲ್ಲಿ ನೋಡೂ, ನಾನು, ಗುರೂ ಬಂದೀನಿ...ಕಣ್ತೆಗೀ..’ ಎಂದು ಅವರ ಕಿವಿಯ ಹತ್ತಿರ ಸ್ವಲ್ಪ ಗಟ್ಟಿಯಾಗಿಯೇ ಹೇಳಿದ. ರಾಯರ ಕಣ್ರೆಪ್ಪೆಗಳು ಹೌದೋ ಅಲ್ಲವೋ ಎನ್ನುವಷ್ಟು ಅಲುಗಾಡಿದವು. ಅದಕ್ಕಿಂತ ಹೆಚ್ಚಿನ ಪ್ರತಿಕ್ರಿಯೆಯೇನೂ ಕಂಡುಬರಲಿಲ್ಲ.
’ಸುಜೀ ಎಲ್ಲಿ?’ ಎಂದು ಕೇಳಿದ ಗುರುರಾಜ.
’ಅವಳು ಮನೆಗೆ ಹೋಗ್ಯಾಳೆ. ನಿಮ್ಮಪ್ಪಗೆ ಸ್ವಲ್ಪ ಹುಷಾರಾದ್ರೆ ಗಂಜಿ ಬೇಕಾಗಬಹುದು, ತರ್ತೀನಿ ಅಂತ ಹೇಳಿ ಹೋಗ್ಯಾಳೆ. ಬರ್ತಾಳೆ....ಇನ್ನು ಸ್ವಲ್ಪ ಹೊತ್ತಿಗೆ’ ಎಂದು ಅವರು ಹಾಗೆ ಹೇಳುವುದಕ್ಕೂ ಸುಜಯ ಕೋಣೆಯೊಳಗೆ ಕಾಲಿರಿಸುವುದಕ್ಕೂ ಸರಿಹೋಯಿತು. ಅದುವರೆಗೂ ಜರುಗಿದುದೆಲ್ಲವನ್ನೂ ಅವಳು ಮತ್ತೊಮ್ಮೆ ವಿವರವಾಗಿ ಹೇಳಿದಳು.
’ನಾನು ಹೋಗಿ ಡಾಕ್ಟರನ್ನ ಕಂಡು ಬರ್ತೀನಿ. ನೀನೇನೂ ಕಾಳಜಿ ಮಾಡ್ಬೇಡ’ ಎಂದು ಸುಶೀಲಾ ಬಾಯಿಗೆ ಹೇಳಿ, ಡಾಕ್ಟರನ್ನು ಕಂಡು ಬಂದ.
’ಇದುವರೆಗೂ ನೀನು ಹೇಳಿದ್ದನ್ನೇ ಡಾಕ್ಟರೂ ಹೇಳಿದ್ರು...ಚೇತರಿಸ್ಕೋತಾರೆ....ಆದ್ರೆ ಸ್ವಲ್ಪ ಸಮಯ ಹಿಡೀತದೆ ಅಂತ ಅಂದ್ರು’ ಎಂದು ತನ್ನ ತಂಗಿ ಮತ್ತು ತಾಯಿಗೆ ಹೇಳಿದ. ತದನಂತರ, ಸುಜಯಾಳ ಹತ್ತಿರ ಲೋಕಾಭಿರಾಮವಾಗಿ ಮಾತನಾಡುತ್ತಾ ಕುಳಿತ. ರಾಯರಿಗೆ ತೊಡಿಸಿದ್ದ ಆಸ್ಪತ್ರೆಯ ಉಡುಪು ಒಂದು ಪಕ್ಕಕ್ಕೆ ಜಾರಿಹೋಗಿ ಅವರ ಎದೆಯ ಭಾಗ ಕಾಣುತ್ತಿತ್ತು. ಅವರ ಉಡುಪನ್ನು ಸರಿಪಡಿಸಿ, ಹೊದಿಕೆಯನ್ನು ಹೊದಿಸಲು ಹೋದ ಗುರುರಾಜನಿಗೆ ಅವರ ಎದೆಗೆ ಓರೆಯಾಗಿ ಅಂಟಿಕೊಂಡಿದ್ದ ಜನಿವಾರ ಕಣ್ಣಿಗೆ ಬಿತ್ತು. ಅದನ್ನು ಕಂಡು ಅಚ್ಚರಿಯಿಂದ,
’ಅರೆ.... ಅಪ್ಪನ ಮೈಮೇಲೆ ಜನಿವಾರ ಹೇಗ್ಬಂತು?’ ಎಂದು ಸುಶೀಲಾಬಾಯಿಯವರ ಕಡೆಗೆ ನೋಡಿದ. ರಾಯರು ಕಟ್ಟಾ ನಾಸ್ತಿಕರೆಂಬುದು ಮತ್ತು ಜನಿವಾರ ಧಾರಣೆಯಂತಹ ಆಚರಣೆಗಳಿಂದಲೂ ದೂರ ಎಂಬುದು ಅವರ ಮನೆಯವರಿಗೆಲ್ಲರಿಗೂ ತಿಳಿದಿತ್ತು. ಅವರಿಗೆ ದೈವದಲ್ಲಿ ಮತ್ತು ದೇವತಾರಾಧನೆಯಲ್ಲಿ ವಿಶ್ವಾಸವಿರದಿದ್ದರೂ ಹಾಗೆ ತಾವು ’ ಭಿನ್ನ ಗಣ’ಕ್ಕೆ ಸೇರಿದವರೆಂಬುದನ್ನು ಜಾಹೀರು ಮಾಡುತ್ತಿರಲಿಲ್ಲವಾದ್ದರಿಂದ ಅವರ ಅನೇಕ ಗೆಳೆಯರಿಗೆ ಅವರ ನಾಸ್ತಿಕತೆಯ ಬಗ್ಗೆ ತಿಳಿದಿರಲಿಲ್ಲ. ಅವರ ಗೆಳೆಯರಾರಾದರೂ ದೇವಸ್ಥಾನದಲ್ಲಿ ಯಾವುದಾದರೂ ಕಾರ್ಯಕ್ರಮವನ್ನು ಏರ್ಪಡಿಸಿ ರಾಯರನ್ನು ಆಮಂತ್ರಿಸಿದಾಗ, ಆ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದರಲ್ಲದೇ, ಆ ಸಮಯಕ್ಕೆ ಉಚಿತವಾಗಿಯೇ ವರ್ತಿಸುತ್ತಿದ್ದರು. ’ನನ್ನ ನಂಬಿಕೆ ನನಗೆ ಮಾತ್ರ’ ಎನ್ನುತ್ತಿದ್ದ ಅವರು ತಮ್ಮ ಕುಟುಂಬದ ಯಾರನ್ನೂ ತಮ್ಮ ವಿಚಾರಗಳತ್ತ ಸೆಳೆಯಹೋಗಿರಲಿಲ್ಲ. ಹೀಗಾಗಿ ಅವರ ಇಬ್ಬರು ಮಕ್ಕಳೂ ಪಕ್ಕಾ ಆಸ್ತಿಕ ಮನೋಭಾವವನ್ನು ಮೈಗೂಡಿಸಿಕೊಂಡಿದ್ದರು. ಸುಜಯ ಸ್ವಲ್ಪ ಮಟ್ಟಿಗೆ ರಾಯರ ವಿಚಾರಗಳಿಂದ ಪ್ರಭಾವಿತಳಾಗಿದ್ದರೂ, ಅವರ ತಂದೆಯಷ್ಟು ನಾಸ್ತಿಕಳಾಗಿಯೋ ಅಥವಾ ಅವಳ ಅಣ್ಣಂದಿರಷ್ಟು ಆಸ್ತಿಕಳಾಗಿಯೂ ಬೆಳೆದಿರಲಿಲ್ಲ .
’ಹಾಗ್ಯಾಕೆ ಕೇಳ್ತೀಯೋ ಗುರು, ನಿಮ್ಮಪ್ಪ ಜನಿವಾರ ಧರಿಸೋದೇ ಇಲ್ಲಾಂತ ಅಲ್ಲ. ಸಮಯ ಸಂದರ್ಭ ಬಂದಾಗ ಅವರಿಗಿಷ್ಟವಿಲ್ಲದಿದ್ದರೂ ಅವರು ಜನಿವಾರ ಹಾಕ್ಕೊಂಡು, ಸಂದರ್ಭ ಮುಗಿದ ಮೇಲೆ ತೆಗೆದಿಡ್ತಿದ್ದರು. ಸುಮಾರು ಒಂದು ವಾರದ ಕೆಳಗೆ ಅವರ ಆಪ್ತ ಗೆಳೆಯ ನಾಗರಾಜರಾಯರು ವೆಂಕಪ್ಪನ ಕಲ್ಯಾಣೋತ್ಸವ ಮಾಡ್ಸಿ, ಇವರನ್ನ ಕರೆದಿದ್ರು. ತಮ್ಮ ಸ್ನೇಹಿತರಿಗೆ ಮುಜುಗರ ಆಗ್ಬಾರ್ದೂಂತ ಆವಾಗ ಈ ಜನಿವಾರ ಹಾಕ್ಕೊಂಡು ಅಲ್ಲಿಗೆ ಹೋಗಿದ್ರು. ಆದರೆ.....’ ಎಂದು ಯಾಕೋ ಸುಮ್ಮನಾದರು.
’ಏನು ಆದರೆ....?’ ಎಂದು ಕೇಳಿದ ಗುರುರಾಜ.
’ಅಂಥಾ ಹೊತ್ನಲ್ಲಿ , ಮನೇಗೆ ಬಂದ ಸ್ವಲ್ಪ ಹೊತ್ತಿಗೇ ತೆಗೆದಿಡ್ತಾರೆ. ಈ ಸಲ ಯಾಕೆ ಒಂದು ವಾರದ ತನಕ ಹಾಗೇ ಹಾಕ್ಕೊಂಡಿದ್ರೋ ನನಗೂ ಗೊತ್ತಿಲ್ಲ. ಬಹುಶಃ ಮರೆತಿರಬೇಕು’ ಎಂದರು ಸುಶೀಲಾ ಬಾಯಿ.
ಜನಿವಾರದ ಜೊತೆಗೆ ಇನ್ನೂ ಒಂದು ವಿಶೇಷ ಗಮನಿಸಿದ್ದ ಗುರುರಾಜ, ’ಅಮ್ಮಾ, ಇನ್ನೂ ಒಂದು ವಿಶೇಷ ಇದೆ. ಜನಿವಾರಕ್ಕೆ ಒಂದು ಬೀಗದ ಕೈ ಕೂಡಾ ಕಟ್ಕೊಂಡಾರೆ’ ಎಂದು ಜನಿವಾರಕ್ಕಿದ್ದ ಬೀಗದಕೈನ್ನು ತೋರಿಸಿದ. ಅದುವರೆಗೂ ಅದನ್ನು ಗಮನಿಸಿರದಿದ್ದ ಸುಶೀಲಾಬಾಯಿಯವರಿಗೂ ಇದರಿಂದ ಅಚ್ಚರಿಯಾಗಿತ್ತು.
’ಏನೋಪ್ಪಾ...... ನನಗೂ ಗೊತ್ತಿಲ್ಲ. ಇದೇ ಮೊದಲು ನೋಡಿದ್ದು’ ಎಂದರು. ಸುಶೀಲಾಬಾಯಿಯವರನ್ನು ಮತ್ತು ಸುಜಯಾಳನ್ನು ಮನೆಗೆ ಕಳಿಸಿ ಆ ರಾತ್ರಿ ತನ್ನ ತಂದೆಯ ಕೋಣೆಯಲ್ಲಿಯೇ ಕಳೆದ.

ಮರುದಿನ ಬೆಳಗಿನ ಹೊತ್ತಿಗೆ ರಾಯರು ಮಿಸುಗಾಡಲಾರಂಭಿಸಿದ್ದರಲ್ಲದೇ, ಆಗಾಗ್ಗೆ ಕಣ್ತೆರೆದು ಅಕ್ಕ ಪಕ್ಕ ನೋಡಲಾರಂಭಿಸಿದ್ದರು. ಮಧ್ಯಾಹ್ನದ ಹೊತ್ತಿಗೆ ಸುಧಾಕರ ಕೂಡಾ ಬಂದಿದ್ದ. ಸುಶೀಲಾ ಬಾಯಿ ಮತ್ತು ಸುಜಯಾಳಿಗೆ ವಿಶ್ರಾಂತಿ ಕೊಟ್ಟು ಅಣ್ಣತಮ್ಮಂದಿರಿಬ್ಬರೂ ರಾಯರ ಕೋಣೆಯಲ್ಲಿಯೇ ಇದ್ದು ಅವರ ಉಪಚಾರ ನೋಡಿಕೊಂಡರು. ರಾಯರು ಸ್ವಲ್ಪ ಚೇತರಿಸಿಕೊಂಡದ್ದನ್ನು ನೋಡಿ ಇಬ್ಬರೂ ಏನೇನೋ ವಿಷಯಗಳನ್ನು ಜ್ಞಾಪಿಸಿಕೊಂಡು ಹರಟತೊಡಗಿದರು. ಮಾತಿನ ಮಧ್ಯೆ ಗುರುರಾಜ ಅವರ ತಂದೆಯ ಜನಿವಾರ ಮತ್ತು ಜನಿವಾರಕ್ಕೆ ಕಟ್ಟಿಕೊಂಡಿದ್ದ ಬೀಗದ ಕೈ ಬಗ್ಗೆ ಪ್ರಸ್ತಾಪಿಸಿದ. ಅದನ್ನು ಕೇಳಿ ಸುಧಾಕರನಿಗೂ ಕುತೂಹಲವುಂಟಾಯಿತು. ಅವನು ತಾನು ಕುಳಿತಲ್ಲಿಂದೆದ್ದು, ರಾಯರ ಜನಿವಾರಕ್ಕೆ ಕಟ್ಟಿದ್ದ ಬೀಗದಕೈನ್ನು ಕೈಯಲ್ಲಿ ಹಿಡಿದು ಪರೀಕ್ಷಕ ದೃಷ್ಟಿಯಿಂದ ನೋಡಿದ.
’ಗುರೂ, ಈ ಬೀಗದ ಕೈ ಮೇಲೆ ಒಂದು ನಂಬರ್ ಕೂಡಾ ಇದೆ..... 437. ಈ ನಂಬರ್ ನೋಡಿದರೆ ಇದು ಬಹುಶಃ ಯಾವುದೋ ಬ್ಯಾಂಕಿನ ಲಾಕರ್ ನ ಬೀಗದ ಕೈಯಾಗಿರಬಹುದು ಎನಿಸುತ್ತದೆ’ ಎಂದ. ಗುರುರಾಜ ತಾನೂ ಅದನ್ನೊಮ್ಮೆ ನೋಡಿದಾಗ ಸುಧಾಕರ ಹೇಳಿದಂತೆ ಅದು ಲಾಕರ್ ನ ಬೀಗದ ಕೈಯಾಗಿರಬಹುದು ಎನಿಸಿತು.
’ಆದರೆ, ಲಾಕರ್ ನಲ್ಲಿಡಲು ಅಪ್ಪನ ಬಳಿ ಅಂತಹುದೇನಿದೆ....?’ ಎಂದು ಗುರುರಾಜ ಹೇಳಿದಾಗ,
’ಹೌದು, ನನಗೆ ತಿಳಿದ ಮಟ್ಟಿಗೆ ಅಂತಹುದೇನೂ ಅಪ್ಪನ ಬಳಿಯಿರಲಿಲ್ಲ. ನಿನಗೆ ನೆನಪಿರಬೇಕಲ್ಲ...... ನೀನು ಬಿ.ಕಾಂ ಮುಗಿಸಿ ಎಮ್. ಕಾಂ ಗೆ ಸೇರುವಾಗ, ಅಪ್ಪ ನಾವು ಮೂವರನ್ನೂ ಕೂಡಿಸಿಕೊಂಡು ಹೇಳಿದ್ದು..... ನಿಮ್ಮೆಲ್ಲರನ್ನೂ ನೀವು ಸಾಕು ಎನ್ನಿಸುವವರೆಗೂ ನನ್ನ ಜೀವವನ್ನಾದರೂ ಒತ್ತೆ ಇಟ್ಟು ಓದಿಸುತ್ತೇನೆ. ಅದೇ ನಾನು ನಿಮಗೆ ಬಿಟ್ಟು ಹೋಗುವ ಆಸ್ತಿ. ನಿಮ್ಮೆಲ್ಲರನ್ನೂ ನಿಮ್ಮ ಅಪೇಕ್ಷೆಗೆ ತಕ್ಕಂತೆ ಓದಿಸಿದ ಮೇಲೆ ನಾನು ಮತ್ತು ನಿಮ್ಮ ಅಮ್ಮ ಇರಲು ಒಂದು ಪುಟ್ಟ ಮನೆ, ಮತ್ತು ಎಮರ್ಜೆನ್ಸಿಗೆ ಅಂತ ಬ್ಯಾಂಕ್ ನಲ್ಲಿ ಸ್ವಲ್ಪ ಹಣ ಇಷ್ಟು ಮಾತ್ರ ನಾನು ಮಾಡಬೇಕೆಂದಿರುವ ಆಸ್ತಿ. ನಿಮಗೇ ತಿಳಿದಂತೆ ನಿಮ್ಮಮ್ಮನ ಕೊರಳಿನಲ್ಲಿರುವ ಚಿನ್ನದ ತಾಳಿ, ಕೈನಲ್ಲಿರುವ ಎರಡು ಬಳೆ ಬಿಟ್ಟು ಇನ್ನಾವ ಚಿನ್ನವೂ ಇಲ್ಲ ಅಂತ ಹೇಳಿದ್ದರು. ಅಂದಮೇಲೆ ಲಾಕರ್ ನಲ್ಲಿಡುವಂತಹುದೇನಿರಬಹುದು....?’ ಎಂದು ತನ್ನನ್ನು ತಾನೇ ಕೇಳಿಕೊಂಡ ಸುಧಾಕರ.
’ಅಪ್ಪ ಒಳ್ಳೇ ಪೋಸ್ಟ್ ನಲ್ಲಿದ್ದರೂ, ಅವರು ಶುದ್ಧಹಸ್ತರು ಎಂದೇ ಎಲ್ಲರೂ ಹೇಳೋದು ಕೇಳಿದ್ದೀನಿ. ಒಂದು ಸಾರಿ ಮಾತ್ರ, ನಾನು ಕಾಲೇಜಿಗೆ ಬೈಸಿಕಲ್ ಮೇಲೆ ಹೋಗುವಾಗ, ಅವರ ಗೆಳೆಯ ಅನಂತರಾವ್ ಎದುರಿಗೆ ಬಂದಿದ್ದರು.
’ಯಾಕೆ, ನಿಮ್ಮಪ್ಪ ಸ್ಕೂಟರ್ ಕೊಡಿಸಲಿಲ್ಲೇನು? ಪಿ. ಡಬ್ಲು. ಡಿ ಯಲ್ಲಿ ಎಂಜಿನಿಯರ್ ಆಗಿ ಮಾಡಿದ ದುಡ್ಡನ್ನೆಲ್ಲಾ ಏನು ಮಾಡ್ತಾನಂತೆ ನಿಮ್ಮಪ್ಪ? ಎಂದು ಕೇಳಿದ್ದರು’ ಎಂದ ಗುರುರಾಜನ ಮಾತಿನಲ್ಲಿ, ಅವರ ಅಪ್ಪ ಹಾಗೆ ಗುಟ್ಟಾಗಿ ದುಡ್ಡು ಮಾಡಿದ್ದರೂ ಮಾಡಿರಬಹುದು ಎಂಬರ್ಥ ಸೂಸುತ್ತಿತ್ತು.
’ಕಾಲೇಜಿನಲ್ಲಿ ನನ್ನ ಫ್ರೆಂಡ್ಸ್ ಕೂಡಾ ಎಷ್ಟೋ ಜನ ನನ್ನನ್ನ ಹಾಗೆ ಕೇಳಿದ್ದಾರೆ. ಇಲ್ಲ, ನಮ್ಮಪ್ಪಾ ಹಾಗೆಲ್ಲಾ ಅನ್ಯಾಯದ ಹಣ ಮುಟ್ಟುವುದಿಲ್ಲ ಎಂದು ಹೇಳಿದಾಗಲೆಲ್ಲಾ ಅವರೆಲ್ಲಾ ಒಳಗೊಳಗೇ ನಗುತ್ತಿದ್ದುದು ನನಗೆ ಗೊತ್ತಾಗುತ್ತಿತ್ತು’ ಎಂದು ಹೇಳಿದ ಸುಧಾಕರನ ಮಾತಿನಲ್ಲೂ ಅದೇ ಛಾಯೆ ಕಾಣುತ್ತಿತ್ತು.
ಸಂಜೆ ಐದರ ಹೊತ್ತಿಗೆ ಸುಶೀಲಾ ಬಾಯಿ ಒಂದು ಫ್ಲಾಸ್ಕ್ ನಲ್ಲಿ ಕಾಫಿ ತಂದಿದ್ದರು.
ಇಬ್ಬರೂ ಕಾಫಿ ಹೀರುವಾಗಲೇ, ಸುಧಾಕರ ಕೇಳಿದ.
’ಅಮ್ಮಾ, ಅಪ್ಪನ ಜನಿವಾರದಲ್ಲಿ ಬೀಗದ ಕೈ ಇದೆಯಲ್ಲಾ, ಅದು ಬ್ಯಾಂಕ್ ಲಾಕರ್ ದೇನಾದರೂ ಇರಬಹುದಾ?’
’ಬ್ಯಾಂಕ್ ನಲ್ಲಿ ಲಾಕರ್! ಏನಿದೆ ಅವರ ಹತ್ರ ಲಾಕರ್ ನಲ್ಲಿ ಇಡ್ಲಿಕ್ಕೆ? ನಮ್ಮ ಮನೆಯ ಪತ್ರ, ಬ್ಯಾಂಕ್ ನಲ್ಲಿರೋ ಎರಡು ಎಫ್.ಡಿ, ಬ್ಯಾಂಕ್ ಪಾಸ್ ಬುಕ್ ಬಿಟ್ಟರೆ ಏನೂ ಅವರ ಹತ್ರ ಇಲ್ಲ ಈ ವಿಷಯದಲ್ಲಿ ಅವರು ನನ್ನ ಹತ್ರ ಯಾವ ಮುಚ್ಚುಮರೆ ಮಾಡೋರಲ್ಲ. ಎಫ್.ಡಿ, ಬ್ಯಾಂಕ್ ನಲ್ಲಿರೋ ಹಣ ಎಲ್ಲಾ ಸೇರಿಸಿ ಸುಮಾರು ಹತ್ತು ಲಕ್ಷ ಇರಬಹುದು ಅಷ್ಟೇ’ ಎಂದರು ಸುಶೀಲಾ ಬಾಯಿ ಖಚಿತವಾಗಿ. ಹಾಗೆಯೇ ಮುಂದುವರೆದು, ತಮ್ಮಷ್ಟಕ್ಕೇ ಎಂಬಂತೆ, ’ನನ್ನ ಮಕ್ಕಳಿಗೇನೂ ಆಸ್ತಿ ಮಾಡಿಡಲಿಲ್ಲ. ಏನಿದ್ರೂ ಅವರು ಕೇಳಿದಷ್ಟು ಓದಿಸ್ತೀನಿ. ಅದೇ ನಾನು ಅವರಿಗೆ ಕೊಡೋ ಆಸ್ತಿ ಅಂತ ಹೇಳ್ತಾ ಇದ್ರು. ನಿಮಗೂ ಹೇಳಿದ್ದೀನಿ ಅಂತಾನೂ ಹೇಳಿದ್ರು. ಸ್ವಲ್ಪ ದಿನದ ಕೆಳಗೆ ಕೂಡಾ ಅವರ ಲಾಯರ್ ಸ್ನೇಹಿತರು ನಾಗರಾಜರಾಯರು ನಿಮ್ಮಪ್ಪನಿಗೆ ವಿಲ್ ಮಾಡಿಡ್ಲಿಕ್ಕೆ ಹೇಳ್ತಿದ್ರು. ಆಗ ನಾನು ಅಲ್ಲಿಯೇ ಇದ್ದೆ. ಸುಜಯಳಿಗೂ ಒಂದು ಪಾಲು ಕೊಡಿ ಅಂತ ನಾನು ಹೇಳಿದ್ದಕ್ಕೆ, ನನ್ನ ಮಕ್ಕಳೆಲ್ಲರೂ ಚೆನ್ನಾಗಿಯೇ ಇದ್ದಾರೆ. ಅವರು ಯಾರಿಗೂ ನಾನು ಏನೂ ಬಿಟ್ಟು ಹೋಗುವುದಿಲ್ಲ. ಎಲ್ಲವನ್ನೂ ನಿನ್ನ ಹೆಸರಿಗೇ ಬಿಟ್ಟು ಹೋಗುತ್ತೇನೆ. ನಿನ್ನ ನಂತರ ಬೇಕಾದರೆ ಅವರಿಗೆ ಕೊಟ್ಟುಕೋ ಇಲ್ಲವೇ ಯಾವುದಾದರೂ ನೀನು ನಂಬಿರುವ ಧಾರ್ಮಿಕ ಸಂಸ್ಥೆಗೆ ದಾನ ಮಾಡು ಎಂದರು’. ಗುರುರಾಜ ಮತ್ತು ಸುಧಾಕರ ಇಬ್ಬರೂ ಹಣದ ವಿಷಯದಲ್ಲಿ ಒಳ್ಳೆಯ ಸ್ಥಿತಿಯಲ್ಲಿದ್ದರೂ, ಅಪ್ಪನ ಆಸ್ತಿಯ ಮೇಲೆ ಸ್ವಲ್ಪ ಆಸೆ ಇಟ್ಟುಕೊಂಡಿದ್ದರು. ಹಾಗೊಂದು ವೇಳೆ ಹಣ ದೊರೆತಿದ್ದರೆ, ಗುರುರಾಜನ ಮಗ ಯು.ಎಸ್ ಗೆ ಹೋಗಲು ಮತ್ತು ಸುಧಾಕರನ ಮಗೆ ಮೆಡಿಕಲ್ ಗೆ ಹೋಗಲು ಉಪಯೋಗವಾಗುತ್ತಿತ್ತು ಎಂಬುದು ಅವರ ಲೆಕ್ಕಾಚಾರವಾಗಿತ್ತು. ಈಗ ಸುಶೀಲಾ ಬಾಯಿಯವರು ಹೇಳಿದ್ದನ್ನು ಕೇಳಿ ಇಬ್ಬರಿಗೂ ನಿರಾಸೆಯಾಗಿತ್ತು. ಆ ದಿನ ರಾತ್ರಿ ಸುಧಾಕರ ಅವರ ತಂದೆಯ ಬಳಿಯಲ್ಲಿಯೇ ಉಳಿದ. ಅದರಿಂದ ಗುರುರಾಜನಿಗೂ ಸ್ವಲ್ಪ ವಿರಾಮ ಸಿಕ್ಕಿತ್ತು.
ಮರುದಿನ ಸುಧಾಕರ ಎದ್ದು ನೋಡಿದಾಗ ರಾಯರಾಗಲೇ ಎದ್ದು, ಮಂಚದ ಪಕ್ಕಕ್ಕೆ ಕಾಲುಗಳನ್ನು ಇಳಿಬಿಟ್ಟುಕೊಂಡು ಗೋಡೆಗೊರಗಿ ಕುಳಿತಿದ್ದರು.
’ಅಪ್ಪಾ, ಯಾವಾಗ ಎಚ್ಚರವಾಯ್ತು?’ ಎಂದು ಸುಧಾಕರ ಕೇಳಿದ.
’ಸ್ವಲ್ಪ ಹೊತ್ತಿನ ಕೆಳಗೆ ಎದ್ದೆ. ಎಲ್ಲಿದ್ದೀನಿ ಅಂತಲೇ ಗೊತ್ತಾಗಲಿಲ್ಲ. ಕ್ರಮೇಣ ಇದು ಆಸ್ಪತ್ರೆ ಅಂತ ತಿಳಿಯಿತು. ಯಾವಾಗ ನಾನಿಲ್ಲಿಗೆ ಬಂದೆ? ಅಂದಹಾಗೆ ನೀನು ಯಾವಾಗ ಬಂದೆ?’ ಎಂದರು ಸಾವಧಾನವಾಗಿ.
’ಮೊನ್ನೆ ಶುಗರ್ ಅಂಶ ತುಂಬಾ ಕಡಿಮೆ ಆಗಿ ನಿಮಗೆ ಪ್ರಜ್ಞೆ ತಪ್ಪಿತ್ತು. ಅವತ್ತು ಸುಜೀ ನಿಮ್ಮನ್ನು ಆಸ್ಪತ್ರೆಗೆ ಸೇರಿಸಿದಳು. ಸುದ್ದಿ ತಿಳಿದು ನಿನ್ನೆ ಇಲ್ಲಿಗೆ ಬಂದೆ. ಗುರೂ ಕೂಡಾ ಬಂದಾನೆ. ಮನೆಯಲ್ಲಿದ್ದಾನೆ. ಇನ್ನೇನು ಬರಬಹುದು...’ ಎಂದು ಹೇಳಿ, ತನ್ನ ಅಣ್ಣನಿಗೆ ಫೋನ್ ಮಾಡಿ ರಾಯರ ಚೇತರಿಕೆಯ ಸುದ್ದಿ ತಿಳಿಸಿದ. ಅರ್ಧ ಗಂಟೆಯ ನಂತರ ಗುರುರಾಜ ತನ್ನ ತಾಯಿ ಮತ್ತು ತಂಗಿಯರೊಡನೆ ಆಸ್ಪತ್ರೆಗೆ ಬಂದ. ಸುಶೀಲಾ ಬಾಯಿ ಕೋಣೆಯಲ್ಲಿ ಕಾಲಿಡುತ್ತಿದ್ದಂತೆಯೇ, ರಾಯರ ಬಳಿ ಧಾವಿಸಿ,
’ನನಗ್ಗೊತ್ತಿತ್ತು....ದೇವ್ರು ನನ್ನ ಕೈಬಿಡಲ್ಲಾಂತ...’ ಎಂದು ಹರುಷದಿಂದ ಹೇಳುತ್ತಾ ಹನುಮಾನ್ ಚಾಲೀಸಾದ ಪುಸ್ತಕವನ್ನು ಕಣ್ಣಿಗೊತ್ತಿಗೊಂಡರು. ಸುಜಯಾಳೂ ಚಿಕ್ಕ ಹುಡುಗಿಯಂತೆ ರಾಯರ ಬಳಿ ಹೋಗಿ ಅವರಿಗೆ ತೆಕ್ಕೆ ಬಿದ್ದಳು. ರಾಯರು ಅವಳ ಬೆನ್ನ ಮೇಲೆ ಮಮತೆಯಿಂದ ಕೈಯಾಡಿಸುತ್ತಾ,
’ಅಂದ್ರೆ, ಇದರಲ್ಲಿ ಡಾಕ್ಟರಿಗೇನೂ ಕ್ರೆಡಿಟ್ ಇಲ್ಲಾಂತೀಯಾ? ಮೇಲೆ ಹೋಗುತ್ತಿದ್ದವನನ್ನು ಮತ್ತೆ ನಿನ್ನ ಪುಣ್ಯದಿಂದ ಕೆಳಕ್ಕೆ ತಂದೀಯಾ ಅಂದ್ಮೇಲೆ ಇನ್ಮುಂದೆ ಸುಶೀ ಅಂತಾ ಕರೆಯೋದಿಲ್ಲಾ, ಸತೀ ಸಾವಿತ್ರೀ ಅಂತ ಕರೀತೀನಿ’ ಎಂದರು ರಾಯರು ತಮ್ಮ ಎಂದಿನ ಹಾಸ್ಯಪ್ರಜ್ಞೆಯಿಂದ.
’ಡಾಕ್ಟರದೂ ಪ್ರಯತ್ನ ಇದೆ. ಮನುಷ್ಯ ಪ್ರಯತ್ನಾನೂ ಬೇಕು, ದೈವ ಸಹಾಯಾನೂ ಬೇಕು’ ಎಂದರು ಸುಶೀಲಾ ಬಾಯಿ.
ಸುಶೀಲಾ ಬಾಯಿ ಮನೆಯಿಂದ ತಂದಿದ್ದ ಬಿಸಿಹಾಲನ್ನು ಸೇವಿಸಿದ ಬಳಿಕ ರಾಯರು ಇನ್ನೂ ಉತ್ಸಾಹಿತರಾಗಿ ಎಲ್ಲರೊಡನೆ ಲೋಕಾಭಿರಾಮವಾಗಿ ಹರಟೆಯಲ್ಲಿ ತೊಡಗಿದರು. ಸುಮಾರು ಒಂಭತ್ತು ಗಂಟೆಯ ಹೊತ್ತಿಗೆ ಡಾಕ್ಟರು ಬೆಳಗಿನ ಭೇಟಿಗೆ ಬಂದಾಗ,
ರಾಯರು ಹುಸಿಗಾಂಭೀರ್ಯದಿಂದ,
’ಡಾಕ್ಟರೇ ದಯವಿಟ್ಟು ಕ್ಷಮಿಸಬೇಕು. ನಿಮಗೆ ನಾವು ಏನೂ ಫೀಸ್ ಕೊಡುತ್ತಿಲ್ಲ. ಮೇಲಕ್ಕೆ ಹೋಗುತ್ತಿದ್ದ ನನ್ನ ಕೈಹಿಡಿದು ನನ್ನನ್ನು ನನ್ನ ಹೆಂಡತಿ ನಂಬಿದ ದೈವವೇ ಕೆಳಗೆ ಎಳೆದು ತಂದಿದೆಯಂತ್ತೆ..’ ಎನ್ನುತ್ತಿದ್ದಂತೆಯೇ,
’ಡಾಕ್ಟರೇ, ಅವರ ಕುಚೋದ್ಯ ಮನಸ್ಸಿಗೆ ತಗೋ ಬ್ಯಾಡ್ರಿ, ನೀವೇ ನಮಗೆ ದೇವರ ಸಮಾನರು..’ ಎಂದರು ಸುಶೀಲಾ ಬಾಯಿ.
”ರಾಯರ ಹಾಸ್ಯ ನನಗೆ ಹೊಸದೇನಲ್ಲಮ್ಮಾ...’ ಎಂದು ಡಾಕ್ಟರು ನಗುತ್ತಾ ಹೇಳಿ ಹೋದಮೇಲೆ, ಸುಧಾಕರನಿಗೆ ರಾಯರ ಜನಿವಾರದ ನೆನಪಾಯ್ತು.
’ಅಪ್ಪಾ, ನಿಮ್ಮ ಮೈಮೇಲೆ ಜನಿವಾರ ಇದೆಯಲ್ಲಾ?’ ಎಂದ ಅವರೆಡೆಗೆ ಪ್ರಶ್ನಾರ್ಥಕವಾಗಿ ನೋಡುತ್ತಾ.
’ತಮ್ಮ ಎದೆಯ ಮೇಲಿದ್ದ ಜನಿವಾರವನ್ನು ಅವರು ಒಮ್ಮೆ ತಡವಿಕೊಂಡು ’ಹೌದಲ್ಲಾ, ಇದು ಎಲ್ಲಿಂದ ಬಂತೂ’ ಎಂದು ಏನನ್ನೋ ಜ್ಞಾಪಿಸಿಕೊಳ್ಳಲೆತ್ನಿಸುತ್ತಿರುವವರಂತೆ ಕಣ್ಣು ಮುಚ್ಚಿ,
’ಇವತ್ತೆಷ್ಟು ತಾರೀಕು....?’ ಎಂದು ಕೇಳಿದರು.
’ಇವತ್ತು ಮಾರ್ಚ್ ಹದಿನಾಲ್ಕು..’ ಎಂದ ಸುಧಾಕರ.
’ಸುಮಾರು ಒಂದು ವಾರದ ಕೆಳಗೆ ನನ್ನ ಸ್ನೇಹಿತ ನಾಗಿ ಕಲ್ಯಾಣೋತ್ಸವಕ್ಕೆ ಕರೆದಿದ್ದ. ನಾಗಿ ನಿಮಗೆ ಗೊತ್ತಲ್ಲ. .. ಬಹಳ ಆಚಾರವಂತ. ಆಗ ಈ ಜನಿವಾರ ಹಾಕ್ಕೊಂಡಿದ್ದೆ. ಬಂದ್ಮೇಲೆ ತೆಗೆಯೋಣಾಂತ ಇದ್ದೆ. ಅಷ್ಟರಲ್ಲಿ ನನ್ನ ಇನ್ನೊಬ್ಬ ಸ್ನೇಹಿತ ಶೀನ ಹದಿಮೂರನೇ ತಾರೀಕು ಮಠದಲ್ಲಿ ಕನಕಾಭಿಷೇಕ ಇಟ್ಟುಕೊಂಡಿದ್ದೀನಿ. ಬರಲೇ ಬೇಕು ಅಂತಾ ಒತ್ತಾಯ ಮಾಡಿದ. ಇನ್ನೇನು ಕೆಲವೇ ದಿನವಲ್ಲಾ ಈ ಕನಕಾಭಿಷೇಕ ಕಾರ್ಯಕ್ರಮ ಮುಗಿದ ಬಳಿಕ ತೆಗೆಯೋಣಾ ಅಂತ ಜನಿವಾರ ತೆಗೆಯಲಿಲ್ಲ. ನಿನ್ನೆ ಕನಕಾಭಿಷೇಕ ಆಗಿರಬೇಕು’ ಎಂದರು. ಸುಧಾಕರ ಅನುಮಾನಿಸುತ್ತಾ, ಕೇಳಲೋ ಬೇಡವೋ ಎಂಬಂತೆ,
’ಮತ್ತೆ ಅದಕ್ಕೆ ಒಂದು ಬೀಗದ ಕೈನೂ ಇದೆಯಲ್ಲ...... ಅದು ಯಾವ ಬೀಗದ ಕೈ?’ ಎಂದು ಕೇಳಿದ. ಜನಿವಾರಕ್ಕಿದ್ದ ಬೀಗದಕೈಯನ್ನು ಅತ್ತಿತ್ತ ತಿರುಗಿಸಿ ನೋಡುತ್ತಾ,
’ ಇದು ಯಾವ ಬೀಗದ ಕೈನೋ ನನಗೆ ಗೊತ್ತಿಲ್ಲ ’ ಎಂದರು.
’ ನಿಮಗೇ ಗೊತ್ತಿಲ್ಲವೇ? ಮತ್ತೆ ಅದನ್ನು ಜನಿವಾರಕ್ಕೆ ಏಕೆ ತಗುಲಿಸಿಕೊಂಡಿದ್ದೀರಿ?’
’ಓ, ಹಾಗಾ, ಮೊದಲೆಲ್ಲಾ ಜನಿವಾರ ಹಾಕ್ಕೊತ್ತಿದ್ನಲ್ಲ. ಆಗ ಕೆಲವೊಮ್ಮೆ, ಬನೀನು ತೆಗೀಬೇಕಾದ್ರೆ ಅದರ ಜೊತೆಗೆ ಜನಿವಾರಾನೂ ಬಂದ್ಬಿಡ್ತಿತ್ತು. ಅದು ನನಗೆ ಅರಿವಾಗ್ತಾನೂ ಇರ್ತಿರ್ಲಿಲ್ಲ. ಶೀನ ನಾಗಿಗಿಂತಲೂ ಹೆಚ್ಚು ಮಡಿಮೈಲಿಗೆಯ ಪೇತಿನ ಮನುಷ್ಯ . ಈ ಮಧ್ಯೆ ಹಾಗೆಯೇ ಅಗಿ ಜನಿವಾರ ಕಳಚಿಹೋದರೆ, ಅವನಿಗ್ಯಾಕೆ ಮುಜುಗರ ಮಾಡ್ಬೇಕೂ ಅಂತ ಜನಿವಾರಕ್ಕೆ ಏನಾದರೂ ಸ್ವಲ್ಪ ಭಾರದ ವಸ್ತು ಕಟ್ಟಿಕೊಳ್ಳೋಣ ಅಂತಾ ಕಪಾಟಿನಲ್ಲಿ ಕೈಯಾಡಿಸಿದೆ. ಈ ಯಾವುದೋ ಬೀಗದ ಕೈ ಸಿಕ್ಕಿತು. ಅದನ್ನೇ ಜನಿವಾರಕ್ಕೆ ಕಟ್ಟಿಕೊಂಡೆ’ ಎಂದು ಮುಗ್ಧವಾಗಿ ಹೇಳಿದಾಗ, ಅವರಷ್ಟು ಮುಗ್ಧರಲ್ಲದ ಅವರ ಮಕ್ಕಳು ಪರಸ್ಪರ ಮುಖಮುಖ ನೋಡಿಕೊಂಡರು.