Click here to Download MyLang App

ಜಗದ್ಗುರುಗಳು ಮತ್ತು ನೂರ್ ಮೊಹಮದ್ - ಬರೆದವರು : ಪ್ರದೀಪ್ ಬೇಲೂರು

ಅಂದು ಕಾರ್ತೀಕ ಸೋಮವಾರ, ಊರಿನ ಮಧ್ಯಭಾಗದಲ್ಲಿನ ಶಂಕರನ ದೇವಸ್ಥಾನ ತಳಿರು ತೋರಣಗಳಿಂದ ಶೃಂಗಾರಗೊಂಡು ಮದುವಣಗಿತ್ತಿಯಂತೆ ಸುಂದರವಾಗಿ ಕಾಣುತ್ತಿತ್ತು. ಇದೊಂದು ಪುರಾತನ ದೇವಸ್ಥಾನ, ಎಷ್ಟು ಪುರಾತನ ಎಂದು ಕೇಳಿದರೆ ಒಬ್ಬೊಬ್ಬರು ಒಂದೊಂದು ಇಸವಿಯನ್ನು ಕ್ರಿಸ್ತ ಶಖದಲ್ಲಿ ಹುಡುಕಿ ಹೇಳುತ್ತಾರೆ. ಯಾರಿಗೂ ಸರಿಯಾದ ಮಾಹಿತಿ ಇಲ್ಲ, ಹಾಗಾಗಿ ಹಳೇ ಶಂಕರನ ಗುಡಿ ಎಂದು ಪ್ರಸಿದ್ದಿ ಹೊಂದಿದೆ. ಇದನ್ನ ಶಂಕರನ ಗುಡಿ ಅನ್ನಬಾರದು, ಶಂಕರೇಶ್ವರನ ಗುಡಿ ಅನ್ನಬೇಕು ಎನ್ನುವುದು ಕೆಲವು ಹಳೇ ತಲೆಗಳ ವಾದ. ಆದರೆ ಇದಕ್ಕೆ ಬಿದ್ದ ಹಳೇ ಶಂಕರನ ಗುಡಿ ಎಂಬ ಮುದ್ರೆ ಮಾತ್ರ ಹೋಗಲಿಲ್ಲ. ಗುಡಿ ಹಳೆಯದಾದರೂ ಒಳಗಿರುವ ಲಿಂಗ ಮಾತ್ರ ಅತಿ ಸುಂದರ, ಅಭಿಷೇಕವನ್ನು ಮಾಡಲು ಎಲ್ಲಾ ಅಲಂಕರಾವನ್ನು ತೆಗೆದಾಗ ಅದು ಎಷ್ಟು ಮುದ್ದಾಗಿ ಕಾಣುತ್ತೆ ಅಂದರೆ ಅದಕ್ಕೆ ಅಲಂಕಾರವೇ ಬೇಡ ಅನ್ನಿಸುತ್ತದೆ. ದೇವಸ್ಥಾನದ ಮುಂದೆ ಒಂದು ಕಮಾನು, ಆದರೆ ಮೇಲೆ ಒಂದು ಪುಟ್ಟ ಬಸವ, ಕಮಾನು ದಾಟಿ ಮುಂದೆ ಹೋದರೆ ಅಲ್ಲೊಂದು ದೊಡ್ಡ ಪ್ರಾಂಗಣ, ಅದರ ಆಚೆ ಇಚೆ ಭಕ್ತರು ಕೂರಲು ಎರಡು ಜಗುಲಿ, ಹೆಚ್ಚಿನ ಸಮಯ ಪ್ರಸಾದ ವಿನಿಯೋಗವೂ ಅಲ್ಲೇ ನಡೆಯುತ್ತಿತ್ತು. ಅದರ ನಂತರ ಎದುರಾಗುವುದೇ ಗರ್ಭ ಗುಡಿ, ಆ ಗರ್ಭ ಗುಡಿಯ ಮುಂದೆ ಮತ್ತೊಂದು ಪುಟ್ಟ ಬಸವ, ಇದು ಈ ಗುಡಿಯ ರೂಪರೇಷೆ.
ದೇವಸ್ಥಾನ ಈ ರೀತಿ ಕಂಗೊಳಿಸಲು ಕಾರಣ ಇಂದು ಈ ದೇವಸ್ಥಾನಕ್ಕೆ ಜಗದ್ಗುರುಗಳು ಭೇಟಿ ನೀಡಲಿದ್ದರು. ಇದು ಈ ದೇವಸ್ಥಾನಕ್ಕೆ ಅವರ ಮೊದಲ ಭೇಟಿ, ಈ ಹಿಂದೆ ಎಷ್ಟೋ ಸಲ ಅವರು ಬರುತ್ತಾರೆ ಎಂಬ ಸುದ್ದಿ ಬಂದರೂ ಹಲವು ಕಾರಣಗಳಿಂದ ಅವರು ಬರಲಾಗಲಿಲ್ಲಾ. ಈ ದೇವಸ್ಥಾನಾದ ವ್ಯವಸ್ಥಾಪಕರಿಗೆ ಇದೊಂದು ಸುದಿನ, ಅವರ ಎಷ್ಟೋ ವರ್ಷದ ಕನಸು ಇಂದು ನನಸಾಗುವುದರಲ್ಲಿತ್ತು. ಅದಕ್ಕಾಗಿ ಬೇಕಾದ ಎಲ್ಲ ವ್ಯವಸ್ಥೆಯನ್ನು ಅವರು ಸ್ವಯಂ ನಿಂತು ಮೇಲ್ವಿಚಾರಣೆ ಮಾಡುತ್ತಿದ್ದರು. ದೇವಸ್ಥಾನದ ಅಲಂಕಾರ, ಗುರುಗಳಿಗೆ ಪೂರ್ಣ ಕುಂಭ, ಫಲ ತಾಂಬೂಲ ವೇದಘೋಶಕ್ಕಾಗಿ ಸರಿ ಸುಮಾರು ೩೦ ಜನ ಋತ್ವಿಕರು, ನಾದಸ್ವರ ನುಡಿಸುವವರು, ದೇವಸ್ಥಾನದ ಒಳಗೆ ಗುರುಗಳು ಕೂರಲು ಒಂದು ದೊಡ್ಡ ಪೀಠ, ಆ ಪೀಠಕ್ಕೊಂದು ಚಂದದ ಅಲಂಕಾರ, ಶಂಕರನಿಗೆ ಅಭಿಷೇಕಕ್ಕಾಗಿ ಬೇಕಾಗುವ ವಸ್ತುಗಳು, ಗುರುಗಳು ಹಾಗು ಅವರ ಶಿಷ್ಯರಿಗೆ ಲಘು ಪಲಾಹಾರದ ವ್ಯವಸ್ಥೆ, ಸರಿ ಸುಮಾರು ಮುನ್ನೂರು ಜನ ಕೂತು ಗುರುಗಳ ಉಪನ್ಯಾಸ ಕೇಳಲು ಆಸನ, ಮೈಕ್ ಸೆಟ್ ಹೀಗೆ ಎಷ್ಟೋ ಕೆಲಸವನ್ನು ಅವರು ಅಚ್ಚುಕಟ್ಟಾಗಿ ನಿಗಾ ನೋಡಿದ್ದರು. ಹಾಗೆಯೇ ಪೂರ್ಣ ಕುಂಭದೊಡನೆ ಗುರುಗಳು ಬರುವ ದಾರಿಯನ್ನು ಸ್ವಚ್ಚಗೊಳಿಸಿ ಎರಡೆರಡು ಸರಿ ನೀರು ಹಾಯಿಸಿದ್ದರು. ಸಮಯ ಸುಮಾರು ಬೆಳಗ್ಗೆ ೮ ಗಂಟೆ, ಗುರುಗಳು ಹತ್ತು ಗಂಟೆಗೆ ಸರಿಯಾಗಿ ತಮ್ಮ ಪಾದವನ್ನು ಗುಡಿಯ ಕಡೆ ಬೆಳಸುತ್ತಾರೆ ಎಂದು ಅವರಿಗೆ ಮಾಹಿತಿ ಬಂತು, ಆ ಮಾಹಿತಿಯು ವೇಗವಾಗಿ ಊರಿನಲ್ಲೆಲ್ಲಾ ಹಬ್ಬಿತು.
ನೂರ್ ಮೊಹಮದ್, ಬೆಳಗ್ಗೆ ಆರು ಗಂಟೆಗೆ ಎದ್ದು ಬಿಡುತ್ತಾನೆ, ದಿನಚರಿಯನ್ನು ಮುಗಿಸಿ ಸ್ವಲ್ಪ ತಿಂಡಿ ತಿಂದು ಮನೆ ಬಿಟ್ಟನೆಂದರೆ ವಾಪಸ್ಸು ಬರುತ್ತಿದ್ದುದ್ದು ರಾತ್ರಿಯೇ. ನಲವತ್ತಾದರೂ ಮದುವೆಯಾಗಿರಲಿಲ್ಲಾ, ಆಗುವುದು ಅವನಿಗೆ ಬೇಕಾಗೂ ಇರಲಿಲ್ಲಾ. ಸ್ವಲ್ಪ ಸ್ಥೂಲಕಾಯದ ವ್ಯಕ್ತಿ, ಬೆಳ್ಳಗೆ ಹೊಳೆಯುವ ಮುಖ, ಹೊಳಪಿನ ಕಣ್ಣುಗಳು, ಗಲ್ಲದ ಕೆಳಗೆ ಸೊಂಪಾಗಿ ಬೆಳದಿಹ ಗಡ್ಡ, ತಲೆ ಮೇಲೊಂದು ಟೋಪಿ, ಬಿಳಿ ಜುಬ್ಬಾ, ಬಿಳಿ ಪೈಜಾಮ, ಇದು ಇವನ ವಿವರಣೆ.

ಅವನ ಬಳಿ ಒಂದು ಹಳೇ ಕಾಲದ ಅಟ್ಲಾಸ್ ಸೈಕಲ್ ಇತ್ತು, ಅದನ್ನು ಕಂಡರೆ ಅವನಿಗೆ ಎಲ್ಲಿಲ್ಲದ ಪ್ರೀತಿ, ಅದನ್ನು ಹತ್ತಿ ಸುತ್ತಾಡುವುದೇ ಅವನಿಗೆ ಪರಮಾನಂದ. ಲಹರಿಯಲ್ಲಿದ್ದರೆ ಆ ಸೈಕಲ್ನಲ್ಲಿಯೇ ಚಿಕ್ಕಮಗಳೂರು, ಹಳೇಬೀಡು, ಮೂಡಿಗೆರೆ ಅಂತ ಹೋಗಿಬಿಡುತ್ತಿದ್ದ. ಸೈಕಲ್ ಓಡಿಸುವುದು ಬಿಟ್ಟರೆ ಓದುವುದೆಂದರೆ ಇಷ್ಟ, ಕಥೆ, ಕಾದಂಬರಿ, ಕವನ, ಇತಿಹಾಸ, ಪುರಾಣಗಳು ಎಲ್ಲವನ್ನೂ ಓದುತ್ತಿದ್ದ. ಎಲ್ಲಾ ಧರ್ಮದ ಆಚಾರ ವಿಚಾರಗಳಲ್ಲಿ ಕುತೂಹಲ, ಅವನು ಯಾವುದೊ ಪುಸ್ತಕದಲ್ಲಿ ಒಮ್ಮೆ ಓದಿದ್ದ ಅದರ ಪ್ರಕಾರ ಎಲ್ಲಾ ಸಂಪ್ರದಾಯಗಳ ಹಿಂದೆ ಒಂದು ವೈಜ್ಞಾನಿಕ ಅರ್ಥವಿದೆ. ನಾವು ನಮಾಜ್ ಯಾಕೆ ಮೂರು ಹೊತ್ತು ಮಾಡಬೇಕು, ದೇವಸ್ಥಾನದಲ್ಲಿ ಸಾಷ್ಟಾಂಗ ನಮಸ್ಕಾರವನ್ನು ಯಾಕೆ ಮಾಡಬೇಕು, ಉಪವಾಸ, ಹಬ್ಬಗಳು, ಆಚರಣೆಗಳು, ಭಯ, ಭಕ್ತಿ, ಭಜನೆ ಇವೆಲ್ಲವೂ ಒಂದು ವೈಜ್ಞಾನಿಕ ಚೌಕಟ್ಟಿನಲ್ಲಿ ನಿಂತಿದೆ. ಆ ಪುಸ್ತಕವನ್ನು ಓದಿದಾಗಿನಿಂದ ಅವನಿಗೆ ಎಲ್ಲ ಆಚಾರದಲ್ಲೂ ವೈಜ್ಞಾನಿಕ ಸೊಗಡಿದೆ ಎಂದು ನಂಬಿಕೆ ಬಂದಿತ್ತು. ಅವನ ಜ್ಞಾನ ಹೆಚ್ಚಾದಂತೆಲ್ಲಾ ಎಲ್ಲ ಜಾತಿ ಪಂಗಡಗಳನ್ನು ಅರಿಯಬೇಕೆಂಬ ವಿಶೇಷವಾದ ಆಸಕ್ತಿ ಮೂಡಿತು, ಹಾಗಾಗಿ ಅವನು ಮಸೀದಿ, ದೇವಸ್ಥಾನ, ಚರ್ಚು ಎಲ್ಲ ಕಡೆಯೂ ಬೇಟಿ ನೀಡುತ್ತಿದ್ದ. ಅಲ್ಲಿಯ ಪದ್ದತಿಯಂತೆ ದೇವರಿಗೆ ನಮಸ್ಕರಿಸಿ, ಕೆಲವು ವಿಧಿ ವಿಧಾನಗಳು ತಿಳಿಯದಿದ್ದರೆ ಬಲ್ಲವರಿಂದ ಕೇಳಿ ತಿಳಿದು ಬಂದುಬಿಡುತ್ತಿದ್ದ.
ಇವನು ಇಷ್ಟೆಲ್ಲಾ ಓದಿಕೊಂಡಿದ್ದಾನೆ ಎನ್ನುವುದು ಆ ಊರಿನ ಲೈಬ್ರರಿಯನ್ ಒಬ್ಬರಿಗೆ ಬಿಟ್ಟರೆ ಬೇರಾರಿಗೂ ಗೊತ್ತಿರಲಿಲ್ಲ. ಅವರು ಇವನ ಜ್ಞಾನದ ಆಳವನ್ನು ಅರಿತಿದ್ದರು, ಒಮ್ಮೊಮ್ಮೆ ಅವರೊಡನೆಯೂ ಚರ್ಚಿಸುತ್ತಿದ್ದ. ಅವನು ಚಿಕ್ಕವನಿದ್ದಾಗ “ಮತೀಯ ಸೌಹಾರ್ದತೆ” ಎಂಬ ವಿಷಯವಾಗಿ ಭಾಷಣ ಮಾಡಿ ಬಹುಮಾನ ಗೆದ್ದಿದ್ದ.
ಮದುವೆಯಾಗಿಲ್ಲ, ಯಾವಾಗಲೂ ಸೈಕಲ್ ಹತ್ತಿ ಸುತ್ತುತ್ತಾನೆ, ಕಂಡ ಕಂಡ ಗುಡಿ, ಚರ್ಚುಗಳಿಗೆ ಹೋಗುತ್ತಾನೆ, ಯಾರೊಡನೆಯೂ ಹೆಚ್ಚು ಮಾತನಾಡುವುದಿಲ್ಲ, ಇವನ ಈ ಎಲ್ಲಾ ಗುಣಗಳನ್ನು ಹಲವಾರು ವರ್ಷದಿಂದ ಕಂಡ ಜನರು ಇವನನ್ನು ಸ್ವಲ್ಪ ಅರೆ ಹುಚ್ಚ ಎಂದು ಮನಸ್ಸಿನಲ್ಲಿಯೇ ತಿರ್ಮಾನಿಸಿದ್ದರು.
ಅಂದು ಬೆಳಗಿನ ಪತ್ರಿಕೆಯನ್ನು ನೋಡಿದ ಇವನಿಗೆ ಸಂತೋಷ, ಕುತೂಹಲ ಎರಡು ಒಮ್ಮೆಲೇ ಆಗಿತ್ತು. “ಇಂದು ನಮ್ಮೂರಿಗೆ ಜಗದ್ಗುರುಗಳ ಪಾದ ಸ್ವರ್ಶ, ಶಂಕರನ ಗುಡಿಯಲ್ಲಿ ಭಕ್ತರ ಭೇಟಿ, ಅಲ್ಲಿಯೇ ಪ್ರವಚನ” ಎಂಬ ಸುದ್ದಿಯು ಜಗದ್ಗುರುಗಳ ಭಾವ ಚಿತ್ರದೊಂದಿಗೆ ಪ್ರಕಟವಾಗಿತ್ತು.
ನೂರ್ ಮೋಹಮ್ಮದ್ಗೆ ಈ ಗುರುಗಳ ಬಗ್ಗೆ ಚನ್ನಾಗಿ ತಿಳಿದಿತ್ತು ಅವರ ಹಾಗು ಅವರ ಪವಾಡಗಳ ಬಗ್ಗೆ ಓದಿಕೊಂಡಿದ್ದ. ಇವನಿಗೆ ಅವರನ್ನು ನೋಡಿ ಆಶೀರ್ವಾದ ಪಡಿಯಬೇಕೆಂಬ ಮಹದಾಸೆ, ಅದು ಈಡೆರುತ್ತದೆಯೇ!!!! ಸಾಧ್ಯವೇ ಇಲ್ಲ ಎಂದು ಅವನ ಒಳ ಮನಸ್ಸು ಹೇಳುತ್ತಿತ್ತು. ಅವರು ಬಹಳ ಮಡಿ, ಸಂಪ್ರದಾಯ, ಎಷ್ಟೋ ಭಕ್ತರು ಅವರನ್ನು ದೂರದಿಂದಲೇ ನೋಡಿ ತೃಪ್ತಿ ಪಡುತ್ತಾರೆ, ಹೀಗಿರುವಾಗ ಅವರನ್ನು ನಾನು ಸಮೀಪಿಸಿ ಕಾಲಿಗೆ ಬಿದ್ದು ಆಶೀರ್ವಾದ ತೆಗೆದುಕೊಳ್ಳಲು ಆಗುವುದೇ? ಅವನ ಮನಸಿನಲ್ಲಿ ಒಂದು ವಿಧವಾದ ತೊಳಲಾಟ. ಇಂದು ನಾ ಅವರನ್ನು ನೋಡದಿದ್ದರೆ ಮತ್ತೆ ಅವರು ಇಲ್ಲಿಗೆ ಬರುವುದು ಇನ್ನು ಯಾವಾಗಲೋ? ಅವರು ಇರುವಲ್ಲಿಗೆ ನಾ ಹೋಗುವುದು ಯಾವಾಗಲೋ? ಹೀಗೆ ಯೋಚಿಸತೊಡಗಿದ, ಮನಸ್ಸಿನಲ್ಲಿ ಚಡಪಡಿಕೆ ಶುರುವಾಯಿತು, ನಾ ಹೋಗಿ ಅವರ ಕಾಲಿಗೆ ಬಿದ್ದರೆ ಅವರು ಹೇಗೆ ಸ್ಪಂದಿಸಬಹುದು, ಅಲ್ಲಿರುವ ಜನ ಹೇಗೆ ಸ್ಪಂದಿಸಬಹುದು ಹೀಗೆ ಹಲವಾರು ವಿಚಾರಗಳು ಅವನ ಮನಸ್ಸನ್ನು ಆವರಿಸಿತು. ಸಮಯ ನೋಡಿದ, ೯.೩೦ ಅಂದರೆ ಗುರುಗಳು ಶಂಕರನ ಗುಡಿಯ ಬಳಿ ಬರಲು ಇನ್ನು ಕೆಲವೇ ನಿಮಿಷಗಳಿದೆ, ಹೋಗ ಬೇಕೋ ಬೇಡವೋ ಎಂಬ ಅನಿರ್ದಿಷ್ಟ ಸ್ಥಿತಿಯಲ್ಲಿ ಗ್ರಂಥಾಲಯದ ಛಾವಣಿಯನ್ನು ನೋಡುತ್ತಾ ಕುಳಿತ.
ಜಗದ್ಗುರುಗಳು ಶಂಕರನ ಗುಡಿಗೆ ಪಾದ ಬೆಳಸಿದರು, ಅವರಲ್ಲೂಂದು ದಿವ್ಯ ತೇಜಸ್ಸು, ಯಾವಾಗಲೂ ಹಸನ್ಮುಖಿ. ಜ್ಞಾನಾರ್ಜನೆಯೇ ಮುಕ್ತಿಯ ಪಥ ಎಂದು ಬಲವಾಗಿ ನಂಬಿದವರು, ಲೌಕಿಕ ಕಟ್ಟಳೆಯಿಂದ ಅವರು ಬಹಳ ದೂರ, ಹೀಗೆ ಅವರು ಸಭೆ ಸಮಾರಂಭಗಳಿಗೆ ದಯಮಾಡಿಸಿ ಎಷ್ಟೋ ಸಂವತ್ಸರಗಳು ಕಳೆದುಹೋಗಿತ್ತು. ಅವರು ರಥ ಬೀದಿಯನ್ನು ದಾಟಿ ಒಂದು ದೊಡ್ಡ ರಾಜಮರ್ಗವಾಗಿ ಗುಡಿಯನ್ನು ಪ್ರವೇಶಿಸ ಬೇಕು. ಕಾರ್ತೀಕ ಮಾಸದ ಚಳಿಯನ್ನೂ ಲೆಕ್ಕಿಸದೆ ಸಾವಿರಾರು ಭಕ್ತರು ಇವರನ್ನು ನೋಡಲು ನೆರೆದಿದ್ದರು, ಬರೀ ಈ ಊರಿನವರಲ್ಲದೆ ಸುತ್ತಮುತ್ತ ಹಳ್ಳಿಗಳಿಂದಲೂ ಭಕ್ತರು ಬಂದಿದ್ದರು.
ಉದ್ದಾತ, ಅನುದ್ದಾತದ ಕ್ರಮಬದ್ಧವಾದ ಏರಿಳಿತದೊಡನೆ ವೇದಘೋಷವು ಮೊಳಗುತ್ತಿತ್ತು, ನಾದಸ್ವರದಿಂದ “ಎಂದರೋ ಮಹಾನುಭಾವುಲು” ಶ್ರೀ ರಾಗದಲ್ಲಿ ಶುಶ್ರಾವ್ಯದಲ್ಲಿ ಹೊಮ್ಮುತ್ತಿತ್ತು. ಗೋವಿಂದನ ಹಾಗು ಹರಿಯ ನಾಮಸ್ಮರಣೆಯ ಮಧ್ಯೆ ಜನರೆಲ್ಲಾ ಗುರುಗಳಿಗೂ ಜಯಕಾರ ಕೂಗುತ್ತಿದ್ದರು, ಹಗುರವಾದ ಪುಷ್ಪ ವೃಷ್ಟಿಯೂ ಆಗುತ್ತಿತ್ತು. ಪಟ್ಟ ಶಿಷ್ಯ ಹಿಡಿದಿದ್ದ ಚಾಮರದಡಿ ಮೆಲ್ಲಗೆ ನಡೆದು ಬರುತ್ತಿದ್ದ ಗುರುಗಳು ಊರಿನ ಎಲ್ಲಾ ಭಕ್ತರನ್ನು ಮುಗುಳು ನಗೆಯಿಂದ ಆಶೀರ್ವದಿಸುತ್ತಿದ್ದರು. ಅವರ ತೇಜಸ್ಸಿಗೆ ಪರವಶರಾದ ಎಷ್ಟೋ ಭಕ್ತರು ರಸ್ತೆಯಲ್ಲಿಯೇ ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಿದ್ದರು. ಅಲ್ಲೊಂದು ಭಕ್ತಿ ಭಾವದ ಮೆರವಣಿಗೆ ಹೊರಟಿದ್ದರೆ, ಲೈಬ್ರರಿಯಲ್ಲಿ ಕೂತು ಚಡಪಡಿಸುತ್ತಿದ್ದ ನೂರ್ ಮೊಹಮ್ಮದ್ ಒಂದು ಅಚಲವಾದ ನಿರ್ಧಾರಕ್ಕೆ ಬಂದ.
ಗುರುಗಳು ಶಂಕರನ ಗುಡಿಯ ಬಳಿ ಬಂದರು, ಅವರ ಮುಂದೆ ಸಿಂಗರಿಸಿದ ಒಂದು ಹಸು ಮತ್ತು ಅದರ ಕರುವನ್ನು ನಿಲ್ಲಿಸಿದರು. ಅವರು ಅದಕ್ಕೆ ಬಾಳೆ ಹಣ್ಣು ಮತ್ತು ಹುಲ್ಲನ್ನು ನೀಡಿ ಹಸು ಮತ್ತು ಕರುವಿನ ಮೈಯನ್ನು ಪ್ರೀತಿಯಿಂದ ತಡವಿ ಇನ್ನೇನು ಗುಡಿಯ ಪ್ರಾಂಗಣಕ್ಕೆ ಕಾಲಿಡಬೇಕು ಆಗ ಬಂತು ಅಲ್ಲಿಗೆ ನೂರ್ ಮೊಹಮ್ಮದ್ನ ಅಟ್ಲಾಸ್ ಸೈಕಲ್.
ಸೈಕಲ್ ಇಳಿದವನೇ ನೇರವಾಗಿ ಜನರ ಮಧ್ಯದಿಂದ, ಋತ್ವಿಕರನ್ನು ಹಾದು ಶಿಷ್ಯ ಸಮೂಹದ ಪಕ್ಕದಲ್ಲಿ ನುಸುಳಿ ಗುರುಗಳ ಹಿಂದೆ ಬಂದು ನಿಂತ. ನಯವಾದ ಧ್ವನಿಯಲ್ಲಿ “ಗುರುಗಳೇ” ಎಂದು ಕೂಗಿದ ಸುತ್ತುವರಿದಿದ್ದ ಶಬ್ದದಲ್ಲೂ ಗುರುಗಳಿಗೆ ಇವನ ಧ್ವನಿ ಕೇಳಿಸಿ, ಮೆಲ್ಲಗೆ ಅವನ ಕಡೆ ತಿರುಗಿದರು. ಅಲ್ಲಿ ನೆರೆದಿದ್ದವರೆಲ್ಲಾ ಏನು ನಡೆಯುತ್ತಿದೆ ಎಂದು ತಿಳಿಯುವಷ್ಟರಲ್ಲಿ ನೂರ್ ಮೊಹಮ್ಮದ್ ಗುರುಗಳ ಕಾಲಿಗೆ ಸಾಷ್ಟಾಂಗ ನಮಸ್ಕಾರ ಮಾಡಿಬಿಟ್ಟ.
ವೇದ ಮಂತ್ರ ನಿಂತು ಹೋಯಿತು, ನಾದಸ್ವರ ಸ್ಥಬ್ದವಾಯಿತು, ಜಯಘೋಷ ಕ್ಷೀಣಿಸುತ್ತಾ ಬಂತು, ನೆರೆದಿದ್ದವರೆಲ್ಲಾ ಎಂಟನೆ ಅದ್ಭುತ ಕಂಡಂತೆ ಆ ದೃಶ್ಯವನ್ನೇ ನೋಡುತ್ತಾ ನಿಂತು ಬಿಟ್ಟರು. ವ್ಯವಸ್ಥಾಪಕರು ಬೆವತು ಹೋದರು, ಅವರಿಗೆ ತ್ರಾಣವೇ ಹೋದಂತಾಗಿ ಈ ಕಾರ್ಯಕ್ರಮ ನಡೆಯುವುದಿಲ್ಲ ಎಂದು ಮನವರಿಕೆ ಆಯಿತು. ಶಿಷ್ಯರಿಗೆಲ್ಲಾ ಕೋಪ ನೆತ್ತಿಗೇರಿತು. ಇವನೇನೋ ಪಾದ ಮುಟ್ಟಿ ನಮಸ್ಕಾರ ಮಾಡಿಬಿಟ್ಟ ಈಗ ಗುರುಗಳು ಏನು ಮಾಡಬಹುದು ಎಂದು ಎಲ್ಲರಿಗೂ ಕಾತರ. ಒಬ್ಬೊಬ್ಬರ ಮನಸ್ಸಿನಲ್ಲಿ ಒಂದೊಂದು ಆಲೋಚನೆಗಳು ಸುಳಿದಾಡಿದವು, ಗುರುಗಳು ಈಗ ಸಿಡಿಮಿಡಿಗೊಂಡು ಈ ಕಾರ್ಯಕ್ರಮವನ್ನು ಬಿಟ್ಟು ವಾಪಸ್ಸು ಹೋಗಿ ಬಿಡುತ್ತಾರೆ, ಸ್ವಲ್ಪ ಹಿಂದೆ ಸರಿದು ತನ್ನ ಶಿಷ್ಯರಿಗೆ ಮತ್ತೆ ಮಜ್ಜನ ಮಾಡಿಕೊಂಡು ಈ ಕಾರ್ಯಕ್ರಮವನ್ನು ನಡೆಸುತ್ತೇನೆ ಎಂದು ಹೇಳುತ್ತಾರೆ, ಇಲ್ಲ ಈ ನೂರ್ ಮೊಹಮದ್ಗೆ ಈ ರೀತಿ ಮಾಡುವುದು ಸರಿಯಲ್ಲಾ ಎಂದು ಸ್ವಲ್ಪ ಶಾಸ್ತ್ರಾ ಸಂಪ್ರದಾಯದ ಪ್ರವಚನವನ್ನು ನೀಡುತ್ತಾರೆ, ವ್ಯವಸ್ಥಾಪಕರನ್ನು ಕಂಡು ಸರಿಯಾದ ವ್ಯವಸ್ಥೆಯನ್ನು ಮಾಡಿಲ್ಲ ನೀವು ಎಂದು ಗದರುತ್ತಾರೆ, ಹೀಗೆ ನಾನಾ ಆಲೋಚನೆಗಳು ರೂಪತಾಳಿತು.
ಗುರುಗಳು ತದೇಕ ಚಿತ್ತದಿಂದ ಅವನು ನಮಸ್ಕರಿಸಿದ್ದನ್ನೇ ನೋಡುತ್ತಾ ಆಗಸಕ್ಕೆ ಮುಖಮಾಡಿ ಜಗತ್ಕಾರಕನಿಗೆ ವಂದಿಸಿ ನೂರ್ ಮೊಹಮ್ಮದ್ದಿನ ಎರಡೂ ಭುಜವನ್ನು ಹಿಡಿದು ಮೆಲ್ಲಗೆ ಎತ್ತಿ ನಿಲ್ಲಿಸಿದರು. ಅವನ ಕಣ್ಣಲ್ಲಿ ಇರುವ ಪ್ರಶಾಂತತೆ ಅವರ ಗಮನಕ್ಕೆ ಬಂತು, ತಕ್ಷಣವೇ ತಮ್ಮ ಶಿಷ್ಯ ಹಿಡಿದಿದ್ದ ತಟ್ಟೆಯಿಂದ ಒಂದು ಫಲವನ್ನು ತೆಗೆದು ಅವನ ಕೈಗೆ ನೀಡಿ ತಮ್ಮ ಎರಡೂ ಕೈಗಳನ್ನು ಅವನ ತಲೆಯಮೇಲಿಟ್ಟು ಕಣ್ಣುಗಳನ್ನು ಮುಚ್ಚಿ ಆಶೀರ್ವದಿಸಿದರು.
ಅವನಿಗೆ ಮೈಯೋಳಗೆಲ್ಲಾ ಮಿಂಚಿನ ಸಂಚಾರವಾದಂತೆ ಆಯಿತು, ಬಗ್ಗಿಸಿದ ತಲೆಯನ್ನು ಎತ್ತಿ ಗುರುಗಳನ್ನು ಒಮ್ಮೆ ನೋಡಿದ, ಅವರ ಮೊಗದಲ್ಲಿ ವರ್ಣಿಸಲಾಗದ ದೈವಿಕ ಕಳೆ, ನಿಷ್ಕಲ್ಮಶ ನಗು. “ನೀನು ಇಂದು ನನ್ನ ನೋಡಲು ಬಂದೇ ಬರುತ್ತೀಯ ಎಂದು ನನಗೆ ಗೊತ್ತಿತ್ತು” ಎನ್ನುವಂತೆ ಅವರ ಕಣ್ಣುಗಳು ಇವನನ್ನೇ ನೋಡುತ್ತಿದ್ದವು. ಇದೊಂದು ಭಕ್ತಿ ಭಾವದ ಸಂಗಮವೋ ಅಥವಾ ಭಾವೈಕ್ಯತೆಯ ಸಂಗಮವೋ ಅವನು ತಿಳಿಯದಾದ.
ನೂರ್ ಮೊಹಮದ್ ಕಣ್ಣಿಲ್ಲಿ ನೀರು ತುಂಬಿಕೊಂಡು ಒಂದು ಧನ್ಯತಾ ಭಾವದೊಡನೆ ಗುರುಗಳಿಗೆ ಮತ್ತೊಮ್ಮೆ ನಮಸ್ಕರಿಸಿ ಅಲ್ಲಿಂದ ಮೆಲ್ಲನೆ ಹೆಜ್ಜೆ ಇಡುತ್ತಾ ತನ್ನ ಸೈಕಲ್ ಕಡೆಗೆ ಹೊರಟ. ಅಲ್ಲಿ ನೆರೆದಿದ್ದವರೆಲ್ಲಾ ತಾವಾಗಿಯೇ ಹಿಂದಕ್ಕೆ ಸರಿದು ಅವನಿಗೆ ದಾರಿ ಮಾಡಿಕೊಟ್ಟರು, ಅವನು ಹೋದ ದಾರಿಯನ್ನೇ ನೋಡುತ್ತಿದ್ದ ಜನಗಳಿಗೆ ವಾಸ್ತವದ ಅರಿವಾಗಲು ಸ್ವಲ್ಪ ಸಮಯ ಹಿಡಿಯಿತು.
ಗುರುಗಳು ವೇದಘೋಷ ಹಾಗು ನಾದಸ್ವರ ಮತ್ತೆ ಚಾಲನೆಯಾಗಲಿ ಎಂದು ಆದೇಶವಿಟ್ಟರು
ಮಾರೆನೆಯ ದಿನ ಪತ್ರಿಕೆಗಳಲ್ಲಿ, ಮನೆಗಳಲ್ಲಿ, ಬೀದಿ ಬೀದಿಗಳಲ್ಲಿ ನೂರ್ ಮೊಹಮ್ಮದ್ ಮಾಡಿದ್ದು ಸರಿಯಾ ಅದಕ್ಕೆ ಗುರುಗಳು ಪ್ರತಿಕ್ರಯಿಸಿದ ರೀತಿ ಸರಿಯಾ ಎಂದು ಚರ್ಚೆಗಳು ನಡೆದವು. ಪರ ವಿರೋಧದ ಅಭಿಪ್ರಾಯಗಳು ಹೊರ ಹೊಮ್ಮಿತು, ಮಡಿ ಮೈಲಿಗೆಯ, ಅಚಾರ ವಿಚಾರಗಳ ಬಗ್ಗೆ ಸುದೀರ್ಘವಾದ ಲೇಖನಗಳು ಹೊರಬಂದವು.
ಆದರೆ ಅವರು ಜಗತ್ತಿಗೇ ಗುರುಗಳು, ಅವರಿಗೆ ಎಲ್ಲರೂ ಸಮಾನ, ಮೇಲಾಗಿ ಅವರು ಪತ್ರಿಕೆಯನ್ನು ಓದುವುದಿಲ್ಲ, ಅವರೊಡನೆ ಅಸಂಬದ್ದ ಚರ್ಚೆಯನ್ನು ಆಡುವ ಧೈರ್ಯ ಯಾರಿಗೂ ಇಲ್ಲ ಮತ್ತೆ ನೂರ್ ಮೊಹಮದ್ ಇದೆಕ್ಕೆಲ್ಲಾ ಯಾವತ್ತೂ ತಲೆ ಕೆಡೆಸಿಕೊಂಡವನಲ್ಲ.