Click here to Download MyLang App

ಜಗತ್ತಿನ ಕೊನೇದಿನಗಳ ಒಂದು ಬೆಳಗು - ಬರೆದವರು : ದಯಾನಂದ

‘ಉಸ್ಸಪ್ಪಾ’ ಎಂದು ಏದುಸಿರು ಬಿಡುತ್ತಾ ಅವರಿಬ್ಬರೂ ಎಲೆಗಳೆಲ್ಲಾ ಉದುರಿದ್ದ ಬೋಳು ಮರವೊಂದರ ಕೆಳಗೆ ಕುಸಿದು ಕೂರುವ ಹೊತ್ತಿಗೆ ಮೂಡಲಿಂದ ತಿಳಿನೀಲಿಯ ಕೆಳಗೆ ಬೆಳ್ಳನೆಯ ರೇಖೆಗಳು ನಡುನೆತ್ತಿಯ ಕಡೆಗೆ ಇಷ್ಟಿಷ್ಟೇ ಹರಿಯುತ್ತಿದ್ದವು. ಆಗಿನ್ನೂ ಇರುಳು ಕರಗುತ್ತಾ ಮಸುಕು ಮಸುಕುಕಾಗಿ ಬೆಳಕು ಬೆಳ್ಳಗಾಗುತ್ತಿತ್ತು. ಸದ್ದೇ ಮಾಡದೆ ದಿನದ ಬದುಕಿಗೆ ಹೊರಟ ಕೊಕ್ಕರೆ ಸಾಲು, ಕಾಗೆ- ಕೋಗಿಲೆಗಳ ಕಿತ್ತಾಟ, ಚೀರುತ್ತಿರುವ ಗಿಳಿಗಳು, ದೂರದಲ್ಲೆಲ್ಲೋ ಧುಮ್ಮಿಕ್ಕುವ ನೀರಿನ ಮರ್ಮರದ ಜತೆಗೆ ಬೆಳಗು ಎಂಬುದು ಅಲ್ಲಿ ಸಗ್ಗಗಟ್ಟುತ್ತಿತ್ತು. ಎದೆಬಡಿತದ ಸದ್ದೇ ಜೋರಾಗಿದ್ದ ಅವರಿಬ್ಬರಿಗೆ ಈ ಹೊರಗಿನ ಗದ್ದಲ ಹೆಚ್ಚು ತಾಕಿದಂತಿರಲಿಲ್ಲ. ಇಬ್ಬನಿ ಸುರಿಯುತ್ತಿದ್ದರೂ ಅವರಿಬ್ಬರ ಮುಖ ಮೈಗಳು ಬೆವರಿನಿಂದ ನೆಂದು ತೊಪ್ಪೆಯಾಗಿದ್ದವು. ಎಷ್ಟು ದೂರ ನಡೆದರೋ, ಎಷ್ಟು ದೂರ ಓಡಿದರೋ, ಎಷ್ಟು ಕಡೆ ಇನ್ನು ಓಡಿದ್ದು ಸಾಕು ಎಂದು ಕುಂತು ಸಾವರಿಸಿಕೊಂಡರೋ, ಎಲ್ಲವೂ ಮರೆತು ಹೋದಂತೆ ಈಗ ಒಬ್ಬರಿಗೊಬ್ಬರು ತಾಗಿಕೊಂಡು ಕುಳಿತು ನಿರಾಳತೆಯ ಮೊದಲ ತುದಿಯನ್ನು ಮುಟ್ಟುವಹಾಗಿದ್ದರು.

ಬ್ಯಾಗಿನಿಂದ ಬಾಟಲಿ ತೆಗೆದ ಹುಡುಗಿ ಗುಟುಕು ನೀರು ಕುಡಿದು, ಬಾಟಲಿಯನ್ನು ಅವನ ಕಡೆಗೆ ಚಾಚಿ ವಿಚಿತ್ರವಾಗಿ ನಕ್ಕಳು. ಆ ನಗೆಗೆ ಆವರೆಗಿನ ಆಯಾಸವನ್ನು ನೀಗಿಸುವ ಶಕ್ತಿಯಿದ್ದರೂ ಅವನಲ್ಲಿ ಆ ನಗೆ ವಿಚಿತ್ರವಾದ ಭಯವನ್ನೂ ಮೂಡಿಸಿತು. ಅವನು ಅವಸರದಲ್ಲಿ ನೀರು ಕುಡಿಯುತ್ತಿದ್ದಂತೆ ಕೆಮ್ಮು ಹತ್ತಿ, ನೀರು ಮೂಗಿನಿಂದ ನೆತ್ತಿಗೇರಿತು. ಅವನ ನೆತ್ತಿ ತಟ್ಟಿ ಸಾವರಿಸಿದ ಅವಳು, ‘ಸರಿಯಾಗಿ ನೀರು ಕುಡಿಯೋಕೂ ಬರಲ್ಲ, ಬಚ್ಚಾ ನೀನು’ ಎಂದು ನಗುತ್ತಾ ಅವನನ್ನು ಕೆಣಕಿದಳು.

ನೆತ್ತಿಗೆ ಹತ್ತಿದ್ದ ನೀರು ಬಿಟ್ಟರೆ ಸಾಕು ಎಂಬಂತೆ ಸಾವರಿಸಿಕೊಳ್ಳುತ್ತಿದ್ದ ಅವನು ಅವಳು ಕೆಣಕಿದ್ದಕ್ಕೆ ಏನೂ ಹೇಳದೆ ಕಣ್ಣು ಬಾಯಿ ದೊಡ್ಡದು ಮಾಡುತ್ತಾ ಎದೆ ನೀವಿಕೊಂಡು ‘ಗರ್‌.. ಗರ್‌…’ ಮಾಡಿ ಜೋರಾಗಿ ನೆತ್ತಿ ತಟ್ಟಿಕೊಂಡ. ಇನ್ನೂ ಕೊಸರುತ್ತ ಗಂಟಲು ನೀವಿಕೊಳ್ಳುತ್ತಿದ್ದವನನ್ನು ತನ್ನತ್ತ ಸೆಳೆದುಕೊಂಡ ಅವಳು ಅವನ ತುಟಿಗೆ ತುಟಿ ಸೇರಿಸಿ ಕಣ್ಣು ಮುಚ್ಚಿದಳು. ನೆತ್ತಿ, ಗಂಟಲು, ಎದೆ, ಕೆಮ್ಮು ಎಲ್ಲವನ್ನೂ ಮರೆತ ಅವನು ಈ ಕ್ಷಣಕ್ಕೆ ತುಟಿ ಎಂಬುದು ಮಾತ್ರ ಸತ್ಯ ಎಂಬಂತೆ ಅವಳ ತುಟಿಯೊಳಗೆ ತನ್ನ ತುಟಿ ಬೆಸೆದು ಕಣ್ಣು ಮುಚ್ಚಿ ಕಳೆದುಹೋದ.


ಕಣ್ಣು ಬಿಟ್ಟಾಗ ಮೂಡಲಿಂದ ಹರಿಯುತ್ತಿರುವ ಬೆಳಕು ಹೆಚ್ಚೆಚ್ಚು ಬೆಳ್ಳಗಾಗುತ್ತಾ ಹಳದಿಗಟ್ಟುತ್ತಿತ್ತು. ತುಟಿಗಳು ಬೇರೆ ಬೇರೆಯಾದಾಗ ಇಬ್ಬರಿಗೂ ಹೊಟ್ಟೆ ಚುರ್ರೆಂದಿತು. ಹಿಂದಿನ ರಾತ್ರಿ ಏನು ತಿಂದಿದ್ದರೋ ಇಬ್ಬರಿಗೂ ನೆನಪಾಗಲಿಲ್ಲ.

‘ನಾನು ಹೋಗಿ ತಿನ್ನೋಕೆ ಏನಾದ್ರೂ ತರ್ತೀನಿ. ನೀನು ಇಲ್ಲೇ ಇರು’ ಎಂದು ಎದ್ದು ಹೊರಡಲು ಮುಂದಾದವನ ಜಗ್ಗಿ ಎಳೆದು ಕೂರಿಸಿಕೊಂಡಳು.

‘ಸಿನಿಮಾಗಳಲ್ಲಿ ಆಗೋಹಾಗೆ ನೀನು ಹೋದ ಮೇಲೆ ಯಾರಾದ್ರೂ ಬಂದು ನನ್ನ ಬಾಯಿ ಮುಚ್ಚಿ ಎಳಕೊಂಡು ಹೋದ್ರೆ ಏನು ಮಾಡ್ತೀಯಾ’ ಎಂದು ಕೊಂಚ ಆತಂಕ ಹಾಗೂ ಹೆಚ್ಚು ಕೀಟಲೆಯಿಂದ ಅವನ ಮುಖ ನೋಡಿದಳು. ಐದಾರು ಮಂದಿ ಅವಳ ಬಾಯಿ ಮುಚ್ಚಿ ಬಲವಂತವಾಗಿ ಎಳೆದುಕೊಂಡು ಹೋಗುತ್ತಿರುವ ದೃಶ್ಯ ಬೇಡವೆಂದರೂ ಅವನ ಕಲ್ಪನೆಗೆ ಸಿಕ್ಕು ಚಿತ್ರವಾಗಿ ಕಣ್ಣಮುಂದೆ ಹಾದುಬಂದು ಅವನಿಗೆ ಹಿಂಸೆಯಾಯಿತು. ಒಬ್ಬನೇ ಹೋಗಬೇಕೋ, ಇಲ್ಲೇ ಉಳಿಯಬೇಕೋ ಅಥವಾ ಇಬ್ಬರೂ ಎದ್ದು ಹೋಗಬೇಕೋ ಏನೊಂದೂ ಸರಿಯಾಗಿ ಗೊತ್ತಾಗದೆ ಅವನು ತಲೆ ಕೆರೆದುಕೊಂಡು ಆಕಾಶದ ಕಡೆಗೆ ನೋಡಿದ.

‘ನೀನೇ ಯಾಕೆ ಹೋಗಿ ತಿನ್ನೋಕೆ ಏನಾದ್ರೂ ತರಬೇಕು. ಇಲ್ಲೂ ಹೀರೋಯಿಸಮ್ ತೋರಿಸ್ಬೇಡ ಆಯ್ತ. ಬರೀ ಮನೆ ಬಿಟ್ಟು ಓಡಿಬರೋದು ಮುಖ್ಯ ಅಲ್ಲ, ಹೊಟ್ಟೆ ಬಗ್ಗೇನೂ ಯೋಚನೆ ಮಾಡಿಕೊಂಡಿರಬೇಕು’ ಎನ್ನುತ್ತಾ ಅವಳು ಬ್ಯಾಗಿನಿಂದ ಬಿಸ್ಕೆಟ್‌ ಪ್ಯಾಕ್‌ ತೆಗೆದು ಅವನ ಕಡೆಗೆ ಚಾಚಿದಳು. ಅವನು ಪ್ಯಾಕ್‌ ಹರಿದ, ಇಬ್ಬರೂ ತಿಂದು, ತಿನ್ನಿಸಿಕೊಂಡು ನೀರು ಕುಡಿದ ಮೇಲೆ ಒಂದು ಮಟ್ಟಕ್ಕೆ ಹೊಟ್ಟೆ ಪರವಾಗಿಲ್ಲ ಎನಿಸಿ ಜೀವಕ್ಕಿಷ್ಟು ಸಮಾಧಾನವಾಯಿತು. ಮುಂದೆ ಯಾವ ದಿಕ್ಕಿಗೆ ಹೋಗಬೇಕು, ಏನು ಮಾಡಬೇಕು ಎಂಬುದು ಇಬ್ಬರಿಗೂ ಸ್ಪಷ್ಟವಾಗೇನೂ ಇರಲಿಲ್ಲ. ಹಾಗೇ ಅಲ್ಲೇ ಕುಳಿತು ಮಾಡುವುದೇನು ಎಂಬುದೂ ಗೊತ್ತಿರಲಿಲ್ಲ.

‘ನಾವ್ಯಾಕೆ ಇಷ್ಟೊಂದು ರಿಸ್ಕ್‌ ತಗೊಂಡು ಮನೆ ಬಿಟ್ಟು ಬಂದೋ’ ಅವಳ ಪ್ರಶ್ನೆ.

‘ನೀವೇ ಅಲ್ವಾ ಹೇಳಿದ್ದು ಓಡಿ ಹೋಗೋಣ, ಅಪ್ಪಂಗೆ ಗೊತ್ತಾದ್ರೆ ಸಿಗಿದು ಹಾಕ್ತಾನೆ ಅಂತ’ ಅವನ ಉತ್ತರ.

‘ಅಪ್ಪಂಗೆ ಗೊತ್ತಾಗಿಲ್ದೇ ಇತ್ತಾ?’

‘ಗೊತ್ತಿತ್ತೇನೋ ಆದ್ರೂ ಇಷ್ಟು ಮುಂದುವರೀಬಹುದು ಅನ್ನೋ ಅಂದಾಜಿರಲಿಲ್ವೋ ಏನೋ’

‘ಅಮ್ಮನಿಂದ ಹೇಳಿಸಿದ್ರೆ, ಕೊನೆಗೆ ಅತ್ತೂ ಕರೆದು ಊಟ ಬಿಟ್ಟು ರಂಪ ಮಾಡಿದ್ರೆ ಮುದ್ದಿನ ಮಗಳು ಅಂತ ಒಪ್ತಿದ್ದನೋ ಏನೋ’

‘ಇಲ್ಲ ಬಿಡು ನಿಮ್ಮಪ್ಪ ಅಷ್ಟು ಸುಲಭಕ್ಕೆ ಒಪ್ಪೋ ಮನುಷ್ಯ ಅಲ್ಲ’

‘ಅವನಿಗೆ ಏನು ಸಮಸ್ಯೆ ಇತ್ತು. ಕೊನೆಗೂ ನನ್ನ ಯಾವನಿಗಾದ್ರೂ ತಗಲಾಕಲೇಬೇಕಿತ್ತಲ್ಲ. ಎಲ್ಲಾ ಹೆಣ್ಣುಮಕ್ಕಳ ಹಣೆಬರವೂ ಕೊನೆಯಾಬೇಕಿರೋದು ಮದುವೇಲೇ ತಾನೇ? ಪ್ರೀತೀನೂ…’

‘ಹಾಗೇನೂ ಇಲ್ವಲ್ಲಾ, ನಾನು ಈಗಲೂ ನಿನ್ನ ಮದುವೆ ಆಗಬೇಕು ಅಂತೇನೂ ಇಲ್ಲ. ನಾವು ಪ್ರೀತಿಸಿದ್ವಿ ಹೌದು, ಆದ್ರೆ ಅದು ಮದುವೆಯಲ್ಲೆ ಮುಗೀಬೇಕು ಅಂತೇನೂ ಇಲ್ಲ. ಅಲ್ಲದೆ ನನಗೆ ಮದುವೆ ಅನ್ನೋ ಸಿಸ್ಟಮ್ ಬಗ್ಗೆನೇ ನಂಬಿಕೆ ಇಲ್ಲ’
ಗಂಭೀರವಾಗುತ್ತಿದ್ದ ಅವನ ಮಾತು ಕೇಳುತ್ತಾ, ‘ಎಷ್ಟೊಂದು ಮೆಚ್ಯೂರ್ ಆಗೋಗಿದ್ದೀಯೋ’ ಎಂದು ಅವಳು ಅವನ ತುಟಿಗೆ ಇನ್ನೊಮ್ಮೆ ತುಟಿ ಬೆರೆಸಿ ಅವನ ಕೈಯನ್ನು ಎದೆಯ ಮೇಲಕ್ಕೆ ಎಳೆದುಕೊಂಡಳು.

ಅವನು ಅವಳ ಜೌವ್ವನದೆದೆ, ತುಂಬುನಡು, ಉಬ್ಬಿದಂಡನ್ನು ಅದುಮುತ್ತಿರುವಂತೇ, ಅವಳು ಅವನ ಬೆನ್ನು ಎದೆಯನ್ನೆಲ್ಲಾ ಪರಚುತ್ತಾ ಅವನ ಪ್ಯಾಂಟಿಗೆ ಕೈ ಹಾಕಿದಳು. ಅವನೂ ಅವಳ ಪ್ಯಾಂಟಿಗೆ ಕೈ ಹಾಕಿದ. ಇಬ್ಬರೂ ಬರಬರನೆ ಬಟ್ಟೆ ಕಳಚುತ್ತಾ ಮೈಮನಸ್ಸನ್ನೆಲ್ಲಾ ನೆಕ್ಕಿ ನೆಕ್ಕಿಸಿಕೊಂಡು ಬಿಸಿಯಾಗಿ, ಹಸಿಯಾಗಿ ಹಗುರಾದರು. ಗಾಳಿಯಲ್ಲಿ ಗುದ್ದಾಡಿದವರಂತೆ ಇಬ್ಬರೂ ಜಗ್ಗಾಡಿ ಬಿದ್ದು, ನೇವರಿಸಿಕೊಳ್ಳುತ್ತಾ, ಅಪ್ಪಾಡುತ್ತಾ, ಮುದ್ದಾಡುತ್ತಾ ಆ ಬೆಳಗಲ್ಲಿ ಬೆಳಗಾದರು.


‘ಈ ಅವಸ್ಥೇಲಿ ನಮ್ಮಪ್ಪನ ಕೈಗೆ ಸಿಕ್ಕಿದ್ರೆ ಇಬ್ರನ್ನೂ ಇಲ್ಲೇ ಸಿಗಿದೇ ಹಾಕ್ತಿದ್ದ. ನಾನೀಗ ನಿನ್ನ ಜೊತೆ ಓಡಿ ಬಂದಿದ್ದೀನಿ ಅಂತ ಮನೇಲಿ ಅದೆಂಥಾ ರಮಾರುಮಿ ನಡೀತಿದ್ಯೋ ಏನೋ. ಸ್ಟೇಷನ್‌ಗೇನಾದ್ರೂ ಹೋಗಿರ್ತಾರ. ಒಂದು ವೇಳೆ ನೀನು ನಮ್ಮೋನೇ ಆಗಿದ್ದಿದ್ರೆ ಇಷ್ಟೊತ್ತಿಗೆ ಅಂತಸ್ತು ಅದೂ ಇದೂ ಅಂತ ಒಂದೂರು ಲೆಕ್ಕಾಚಾರ ಹಾಕ್ತಿದ್ರು ಬಿಟ್ರೆ, ಹೆಚ್ಚೇನೂ ಸಮಸ್ಯೆ ಆಗ್ತಿರಲಿಲ್ಲ ಅಲ್ವಾ’ ಅವಳು ಅವಳ ಪಾಡಿಗೆಂಬಂತೆ ಮಾತಾಡಿಕೊಳ್ಳುತ್ತಿದ್ದಳು.

‘ಅಫ್ಟ್ರಾಲ್ ಧರ್ಮ ಅನ್ನೋದು ಮನುಷ್ಯನ ಬದುಕನ್ನ ಎಷ್ಟೊಂದು ಅತಂತ್ರ ಮಾಡಿಬಿಡುತ್ತೆ ನೋಡು, ಮನುಷ್ಯ ಬದುಕೋಕೆ ಯಾವುದನ್ನೆಲ್ಲಾ ಸಿಸ್ಟಮ್ ಅಂತ ಕಟ್ಟಿಕೊಂಡಿದ್ದಾನೋ ಕೊನೆಕೊನೆಗೆ ಅವೇ ಮನುಷ್ಯನ ಸಹಜತೆಯನ್ನ, ಸ್ವಾತಂತ್ರವನ್ನ ಕಸಿದುಕೊಂಡುಬಿಟ್ಟಿವೆ. ಈ ಧರ್ಮವೂ ಸೇರಿದ ಹಾಗೆ’ ಅವಳ ಈ ಮಾತು ಅವನೊಳಗೆ ವಿಚಿತ್ರವಾದ ತಳಮಳ ಉಂಟು ಮಾಡಿ, ಎದೆ ತುರಿಸಿಕೊಳ್ಳುತ್ತಾ ಅವನು ಎದ್ದು ಕುಳಿತ.

‘ಏನು ಗೊತ್ತಾ ಬಡಪಾಯಿಗಳು ಪ್ರೀತಿ ಮಾಡಬಾರ್ದು. ಮಾಡಿದ್ರೂ ಬೇರೆ ಜಾತಿ, ಬೇರೆ ಧರ್ಮದವರನ್ನ ಪ್ರೀತಿ ಮಾಡಬಾರದು. ಬೇರೆ ಜಾತಿ, ಬೇರೆ ಧರ್ಮದವರನ್ನ ಪ್ರೀತಿ ಮಾಡಿದ್ರೂ ಅವರಲ್ಲಿ ಶ್ರೀಮಂತರ ಮನೆ ಮಕ್ಕಳನ್ನ ಮಾಡಬಾರದು’ ಅವನು ಇನ್ನೂ ಏನೇನೋ ಹೇಳುತ್ತಿದ್ದನೇನೋ ಅಷ್ಟರಲ್ಲಿ ತಡೆದ ಅವಳು, ‘ಈಗ ಮಾಡಬಾರದು, ಮಾಡಬಾರದು ಅಂದ್ರೆ ಏನು ಬಂತು ಪ್ರಯೋಜನ. ನಾವು ನೀರಿಗೆ ಬಿದ್ದಾಗಿದೆ. ಈಜಬೇಕು, ಇಲ್ಲ ಮುಳುಗಿ ಸಾಯಬೇಕು’ ಎಂದಳು ಅವನಿಗೆ ಧೈರ್ಯ ತುಂಬುವ ದನಿಯಲ್ಲಿ.

‘ಇಲ್ಲಿ ಹಾಗೂ ಹೀಗೂ ಕ್ಲಾಸ್‌ ಮ್ಯಾಚ್‌ ಆಗುತ್ತೆ ನೋಡು, ಕ್ಯಾಸ್ಟ್‌ ಅಲ್ಲ, ರಿಲಿಜಿನ್ ಅಲ್ಲ. ನಿಮ್ಮಪ್ಪ ಅದೇ ಸಾಮಿಲ್‌ನ ವರ್ಕರ್‌ ಅಲ್ಲದೆ ಓನರ್‌ ಆಗಿದ್ರೆ ನಮ್ಮಪ್ಪ ಒಂಚೂರು ಬೇರೆನೇ ಥರ ಯೋಚ್ನೆ ಮಾಡ್ತಿದ್ನೇನೋ. ಕ್ಯಾಪಿಟಲ್ ಯಾರಲ್ಲಿ ಎಷ್ಟು ಇದೆ ಅನ್ನೋದರ ಮೇಲೆನೇ ನಮ್ಮ ಲೈಫ್, ಡಿಗ್ನಿಟಿ ಆಫ್ ಲೈಫ್ ಎಲ್ಲಾ ಡಿಸೈಡ್ ಆಗೋದು ಎಂಥಾ ಕೆಟ್ಟ ಸಿಸ್ಟಮ್ ಅಲ್ವಾ’ ಅವಳು ತುಂಬಾ ಗಂಭೀರವಾಗಿ ಮಾತನಾಡುತ್ತಿದ್ದಾಳೆಂದು ಅವನು ಗಾಬರಿಗೊಂಡ.

‘ಮುಂದೇನು?’ ಅವನು ಕೇಳಿದ ಪ್ರಶ್ನೆ ಅವನಿಗೇ ಕೇಳಿಕೊಂಡ ಹಾಗಿತ್ತು. ಅವಳು ಗಟ್ಟಿಯಾಗಿ ಅವನ ಕೈ ಹಿಡಿದುಕೊಂಡಳು.

ಹತ್ತಿರದಲ್ಲಿ ನೀರು ಝುಳುಝುಳ ಎನ್ನುವ ಸದ್ದು ಕೇಳಿ ಅವರಿಬ್ಬರೂ ಎದ್ದು ಕೈ ಕೈ ಹಿಡಿದುಕೊಂಡೇ ಅತ್ತ ನಡೆದರು. ಅಡವಿಯ ನಡುವೆ ಸಣ್ಣ ಝರಿ ಸುರಿಯುವ ಜಾಗದಲ್ಲಿ ತುಸು ಹಳ್ಳದಂತಾಗಿ ಆ ಸಣ್ಣ ಕಣಿವೆಯಲ್ಲಿ ಇನ್ನೂ ಕತ್ತಲೆ ಮಲಗಿತ್ತು. ಇಬ್ಬರೂ ಸಾವಕಾಶ ಆ ಸಣ್ಣ ಕಣಿವೆ ಇಳಿದು ನೀರು ಮುಟ್ಟಿ ಖುಷಿಗೊಂಡರು. ಇಬ್ಬರೂ ಝರಿಯ ಬುಡಕ್ಕೆ ಹೋಗಿ ಬೀಳುವ ನೀರಿಗೆ ತಲೆಕೊಟ್ಟು ತಣ್ಣಗಾದರು. ಆಳವಿಲ್ಲದ ಹಳ್ಳದಲ್ಲಿ ಈಜುತ್ತಾ ನೀರಾಟವಾಡಿದರು. ನೀರಿಗೆ ಬಿದ್ದ ಮೇಲೆ ನಡೆದ, ಓಡಿದ, ಕೂಡಿದ ಆಯಾಸವೆಲ್ಲಾ ಕಳೆದಂತಾಗಿ ಮೈ ಮನಸ್ಸು ಲವಲವಿಕೆಗೂಡಿತು. ನೀರಲ್ಲೇ ಅವಳ ತುಟಿಗೆ ತುಟಿ ಬೆಸೆದು ದೀರ್ಘವಾಗಿ ಚುಂಬಿಸಿದ. ಅವಳ ಕಣ್ಣುಗಳನ್ನೇ ನೋಡುತ್ತಾ ಕವಿತೆ ಹೇಳಲು ಶುರುಮಾಡಿದ.

‘ಹುಡುಗಿ, ನಾನು ನಿಜಕ್ಕೂ ಮುಟ್ಟಬೇಕೆಂದು
ತೀವ್ರವಾಗಿ ಹಂಬಲಿಸುವುದು
ನಿನ್ನ ಮೋಹಕ ಮೊಲೆಗಳನ್ನು
ಮಾತ್ರ ಅಲ್ಲ
ಅದರ ಹಿಂದಿರುವ ಹೃದಯವನ್ನೂ’

ನೀರಲ್ಲೇ ಕಾಲು ಚಾಚಿ ಕುಂತು ಕವಿತೆ ಕೇಳುತ್ತಿದ್ದವಳು ಕವಿತೆ ತುಸು ಪೋಲಿ ಎನಿಸಿ ನಾಚಿದರೂ ನಂತರದ ಭಾವುಕವೆನಿಸಿದ ಸಾಲುಗಳನ್ನು ಕೇಳಿ ಅವಳ ಕಣ್ಣಲ್ಲಿ ನೀರು ಜಿನುಗಿತು. ಅವಳ ಕಣ್ಣಾಲಿಯ ನೀರು ಕಂಡು ಅವನ ಕಣ್ಣೂ ಹನಿಗೂಡಿದವು. ಇಬ್ಬರೂ ಅಪ್ಪಿಕೊಂಡು ಮತ್ತೆ ಮುತ್ತನ್ನಿಟ್ಟುಕೊಳ್ಳುತ್ತಾ ಅತ್ತರು.

‘ಪ್ರೇಮದ ತೀವ್ರವಾದ ಪ್ರತಿಕ್ರಿಯೆ ಯಾವುದು
ಹೆಪ್ಪುಗಟ್ಟುವುದಲ್ಲ,
ದ್ರವಿಸುವುದು, ನೀರಾಗುವುದು, ಬಿಡುಗಡೆಗೊಳ್ಳುವುದು,
ಬಿಡುಗಡೆಯೊಳಗೇ ಸೆರೆಯಾಗುವುದು’
ಅವಳ ಕವಿತೆಗೆ ಅವನು ‘ವ್ಹಾವ್.. ವ್ಹಾವ್..’ ಎಂದ.

ಅತ್ತ ಮೂಡಲಿಂದ ಬೆಳಕು ಇನ್ನಷ್ಟು ಗಟ್ಟಿಯಾಗುವ ಹೊತ್ತಿಗೆ ಇಬ್ಬರೂ ನೀರಿನಿಂದ ಎದ್ದು ವದ್ದೆಯಾಗಿದ್ದ ಬಟ್ಟೆಗಳನ್ನು ಕಳಚುತ್ತಾ ಬೆತ್ತಲಾದರು, ಬಯಲಾದರು, ಸಹಜವಾದರು. ನಾನು-ನೀನು ಎಂಬುದೇ ಇಲ್ಲವೆಂಬಂತೆ ಇಬ್ಬರೂ ಅಪ್ಪಿ ಮುದ್ದಾಡಿ ಒಂದಾದರು, ಬೇರೆಯಾದರು, ಮತ್ತೆ ಒಂದಾದರು. ಮತ್ತೆ ಮತ್ತೆ ಬಿಡುಗಡೆಗೊಳ್ಳುತ್ತಾ ಸೆರೆಯಾದರು. ಅವಳ ಮೈಮೇಲೆ ಅವನು ಬೆವರ ಹನಿಗಳಾಗಿ ಮೂಡುತ್ತಾ ಹೋದ, ಅವಳು ಇಬ್ಬನಿಯಾಗಿ ಕರಗುತ್ತಾ ಹೋದಳು.