Click here to Download MyLang App

ಜಂಬೂಕನ ಕಥೆ - ಬರೆದವರು : ಕೌಂಡಿನ್ಯ ಕೊಡ್ಲುತೋಟ

ಪ್ರಸ್ತುತ ಹೆದ್ದಾರಿಯ ದಿಣ್ಣೆಯೆ ಮೇಲಿರುವ ನಾನು ಜಂಬೂಕ. ಜಂಬುನೇರಳೆ ಜಾತಿಗೆ ಸೇರಿದ ಮರ. ಜನಿಸಿ ಸುಮಾರು ೨೫೦-೩೦೦ ವರ್ಷಗಳಾಗಿರಬಹುದು, ನನಗೂ ಇಷ್ಟು ವರ್ಷಗಳಿಂದ ನಿಂತಲ್ಲೇ ನಿಂತು ಬೇಸರವಾಗುತ್ತಿದೆ. ಆದ್ದರಿಂದ ನಾನು ನನ್ನ ಆತ್ಮಕಥೆಯನ್ನು ಸಂಕ್ಷಿಪ್ತವಾಗಿ ಹೇಳಬಸುತ್ತೇನೆ.
ಮಲೆನಾಡಿನ ಮಳೆಕಾಡಿನಲ್ಲಿ ಹುಟ್ಟಿದವನು ನಾನು, ನನ್ನ ಪಕ್ಕದಲ್ಲಿದ್ದ ನನ್ನದೇ ಜಾತಿಯ ಮರಕ್ಕೆ ಅಜ್ಜಾ ಎಂದೇ ಸಂಭೋದಿಸಿಕೊಂಡು ಬೆಳೆದಿದ್ದೆ. ಹಿಂಭಾಗದಲ್ಲಿ ಹರಿಯುತ್ತಿದ್ದ ತೊರೆಯ ಏಕತಾನದ ಹರಿವೇ ನಮಗೆ ಸುಂದರ ಗಾಯನವಾಗಿತ್ತು. ಈ ತೊರೆ ಇರುವ ಕಾರಣದಿಂದಲೋ ಏನೋ, ಅದೆಷ್ಟೋ ಪ್ರಾಣಿ, ಪಕ್ಷಿಗಳು ಈ ಪ್ರದೇಶಕ್ಕೆ ಬರುತ್ತಿದ್ದವು. ಕೆಲವು ಜಾತಿಯವು ನಾವು ಉದುರಿಸಿದ ಹಣ್ಣುಗಳನ್ನು ತಿಂದು, ಕಷ್ಟ–ಸುಖ ವಿಚಾರಿಸಿಕೊಂಡು ಹೋಗುತ್ತಿದ್ದವು. ಕಾಡುಕೋಣ, ಹುಲಿ, ಚಿರತೆ, ಜಿಂಕೆ ಕಾಡುಹಂದಿ, ನರಿ, ಮೊಲ ಮುಂತಾದವು ನಮ್ಮ ತಾಣಕ್ಕೆ ಬೇಟಿ ನೀಡುತ್ತಿದ್ದ ದಿನನಿತ್ಯದ ಅಥಿತಿಗಳಾಗಿದ್ದರು. ಆಗಾಗ ಬರುತ್ತಿದ್ದ ’ಹೆಬ್ಬಾವು’ ಬೇಟೆಯಾಡುತ್ತಿದ್ದ ರೀತಿ ನನಗೆ ತುಂಬಾ ಇಷ್ಟವಾಗುತ್ತಿತ್ತು. ಆದರೆ ಅದರ ಬಾಯಿಗೆ ಸಿಕ್ಕುತ್ತಿದ್ದ ಪ್ರಾಣಿಯ ಸ್ಥಿತಿ ನೋಡಿ ಹೊಟ್ಟೆ ಚುರ್ ಗುಡುತ್ತಿದ್ದದ್ದೂ ಸುಳ್ಳಲ್ಲ.
ಆಗಿನ್ನೂ ನನ್ನದು ಪ್ರಾಯದ ವಯಸ್ಸು. ನಾನು, ಎದುರಿನ ಹಲಸು, ಪಕ್ಕದ ಮದ್ದಾಲೆ, ಹುಣಾಲು, ಹೊನ್ನೆ, ಮತ್ತಿ, ಬಿದಿರು, ಹೀಗೆ ನಮ್ಮದೆಲ್ಲಾ ಒಂದು ಗುಂಪು. ಈ ಗುಂಪಿಗೆ ನನ್ನ ಅಜ್ಜ ಜಂಬುಕನೇ ನಾಯಕ. ಅವನು ಹೇಳುವ ಸುಂದರ ಕಥೆಗಳನ್ನು ಕೇಳುತ್ತಾ ಕಾಲ ಕಳೆಯುತ್ತಿದ್ದೆವು. ವಿಪರ್ಯಾಸವೆಂದರೆ ಆಗ ನಮಗ್ಯಾರಿಗೂ ಮನುಷ್ಯ ಎಂಬ ಪ್ರಾಣಿಯ ದರ್ಶನವೇ ಆಗಿರಲಿಲ್ಲ. ಆದರೆ ಇಲ್ಲಿಗೆ ಬರುವ ಪ್ರಾಣಿ–ಪಕ್ಷಿಗಳಿಂದ ಮಾತ್ರಾ ನಾವು ಆ ಮನುಷ್ಯನ ಮತ್ತು ಅವನ ಕ್ರೂರತೆಯಬಗ್ಗೆ ಕೇಳಿದ್ದೆವು. ಅದೊಂದು ದಿನ ಎಂದಿನಂತೆ ನಮ್ಮ ಮಾತುಕತೆ ನಡೆಯುತ್ತಿತ್ತು. ತೊರೆಯೂ ಪ್ರಶಾಂತಚಿತ್ತವಾಗಿ ಹಿನ್ನೆಲೆ ಸಂಗೀತ ನಡೆಸುತ್ತಿತ್ತು. ತನ್ನ ಹೆರೆಗಳ ತುಂಬಾ ತುಂಬಿಕೊಂಡ ಅದ್ಭುತ, ಬಲಾಢ್ಯ ಹಣ್ಣುಗಳನ್ನು ಹೊತ್ತಿದ್ದ ಹಲಸು ಖುಷಿಯಿಂದ ಉಬ್ಬಿಹೋಗಿತ್ತು. ಅದು ತನ್ನ ಫಲಗಳ ಬಗ್ಗೆ ಗುಣಗಾನ ಮಾಡುತ್ತಿತ್ತು. ಆಗ ಬಂದ ನೋಡಿ...ನಾವು ಹಿಂದೆಂದೂ ಕಂಡಿರದ ಮನುಷ್ಯ! ಅವನು ತನ್ನ ಹರಿತವಾದ ಆಯುಧದಿಂದ ಹಲಸಿನಮರದ ಎಲ್ಲಾ ಫಲಗಳನ್ನೂ ಕೊಯ್ದು ತನ್ನ ಚೀಲ ತುಂಭಿಸಿಕೊಂಡು ಅಲ್ಲಿಂದ ಮಾಯವಾದ. ಕ್ಷಣಾರ್ಧದಲ್ಲಿ ಹಲಸಿನ ಉತ್ಸಾಹ ಉಡುಗಿ ಅದು ಜಿನುಗಿಸಿದ ಕಣ್ಣೀರು ವರುಣನ ಸಾನಿಧ್ಯದಲ್ಲಿ ಕಾಣದೇ ಮರೆಯಾಗಿತ್ತು.
ಕಾಲವು ಕಳೆಯುತ್ತಾ ಕಳೆಯುತ್ತಾ ಮನುಷ್ಯನ ಅತಿಯಾದ ಆಗಮನದಿಂದ ನಮ್ಮ ಆತಂಕ ಹೆಚ್ಚುತ್ತಾ ಸಾಗುತ್ತಿತ್ತು. ಹೀಗಿರುವಾಗ ಆಷಾಢದ ಒಂದು ಮಳೆಯಲ್ಲಿ ಈಜಿಬಂದ ಒಂದು ಕಾಡು ಮಲ್ಲಿಗೆಯ ಬೀಜ ನನ್ನ ಬುಡದಲ್ಲಿ ಬಂದು ನೆಲೆ ನಿಂತಿತ್ತು. ಮುಂದೆ ನಿಧಾನವಾಗಿ ಅದು ನನ್ನ ದೇಹವನ್ನು ಬೆಸೆಯುತ್ತಾ ಸುಂದರವಾದ ಬಳ್ಳಿಯಿಂದ ತನ್ನ ಹೂವಿನ ಗಂಧವನ್ನು ಹೊರಹೊಮ್ಮಿಸುತ್ತಾ ಸುತ್ತಮುತ್ತಲ ಪ್ರದೇಶಕ್ಕೆ ನವ ಚೈತನ್ಯವನ್ನು ಒದಗಿಸಿತ್ತು. ನಾನು ಮತ್ತು ಅವಳು(ಬಳ್ಳಿ) ದಿನವಿಡೀ ಮಾತುಕತೆ ನಡೆಸುತ್ತಾ ಚೇಷ್ಟೆ, ತಮಾಷೆಗಳಲ್ಲಿ ಕಾಲಕಳೆದುಬಿಡುತ್ತಿದ್ದೆವು. ಅವಳು ಬಂದ ನಂತರವೇ ನನ್ನ ಗುಣಕ್ಕೆ ಹೃದಯ ವೈಶಾಲತೆಯ ಸ್ಪರ್ಷ ದಕ್ಕಿದ್ದು. ಮುಂದೆ ನನಗೆ ಅವಳೊಂದಿಗೆ ಲಗ್ನವಾಗಿದ್ದು, ಚಳಿಗಾಲದ ಒಂದು ಸಂಜೆ ಮಾನವನ ಶಿಕಾರಿಯಿಂದ ತಪ್ಪಿಸಿಕೊಳ್ಳಲು ನನ್ನತ್ತ ನುಗ್ಗಿದ ಕಾಡೆಮ್ಮೆಯ ಪಾದದ ಅಡಿಯಲ್ಲಿ ಸಿಕ್ಕ ನನ್ನವಳ ಬುಡ ಹಠಾತ್ತನೆ ಮಣ್ಣನ್ನು ಸೀಳಿಕೊಂಡು ಮಾರುದ್ದದಲ್ಲಿ ಬಿದ್ದಿತ್ತು. ಹೀಗೆ ನಮ್ಮವರು ಅಂದುಕೊಡಿದ್ದವರಿಂದಲೇ ನನ್ನವಳ ಅಂತ್ಯವಾಗಿತ್ತು. ಆದರೆ ಮುಂದೆ ಇದನ್ನು ಕೊಲೆ ಅಲ್ಲ ಅಪಘಾತ ಎಂದು ಎಲ್ಲರು ಒಮ್ಮತದ ನಿರ್ಧಾರ ಕೈಗೊಂಡಿದ್ದರು. ನಾನು ಮಾತ್ರಾ ವಿರಹ ವೇದನೆಯಲ್ಲಿ ಮೂಕನಾಗಿದ್ದೆ. ಇದಾದನಂತರ ನನ್ನ ದೇಹಕ್ಕೆ ಅನೆಕ ರೀತಿಯ ಬಳ್ಳಿಗಳು ಹಬ್ಬಿದ್ದವು, ಆದರೆ ಅವ್ಯಾವುವೂ ನನ್ನವಳ ನೆನಪು ಅಳಿಸುವ ಶಕ್ತಿಯನ್ನು ಹೊಂದಿರಲಿಲ್ಲ.
ಒಮ್ಮೆ ನಾವುಗಳು ಜೋರು ಹಾಸ್ಯದಲ್ಲಿ ತೊಡಗಿದ್ದೆವು. ಮತ್ತೀ ಮರದ ಎಲೆಯಲ್ಲಿನ ಗಂಪಿನ ಅಂಶವನ್ನು ಆಡಿಕೊಂಡು ಅದಕ್ಕೆ ರೇಗಿಸುತ್ತಿದ್ದೆವು. ಆಗ ಆದ ಢುಂ... ಎಂಬ ಸದ್ದು ನಮ್ಮ ಎದೆಯನ್ನು ನಡುಗಿಸಿಬಿಟ್ಟಿತ್ತು. ಎರೆಡು ದಿನವಾದ ಮೇಲೆ ಯಾರೋ ಕಾಡುಹಂದಿಯನ್ನು ಶಿಕಾರಿ ಮಾಡಿದರೆಂಬುದು ತಿಳಿಯಿತು. ಅನಂತರದ ನಮ್ಮ ಸಂಭಾಷನೆಗಳೆಲ್ಲವೂ ಈ ಶಿಕಾರಿ ಮತ್ತು ಅದರ ಪರಿಣಾಮಗಳಮೇಲೆಯೇ ನಡೆದಿರುತ್ತಿತ್ತು.
ನಾನೀಗ ಮುಂಚಿನಂತೆ ಪೀಕಲಾಗಿರಲಿಲ್ಲ. ವಿಶಾಲವಾದ ಹೆರೆಗಳನ್ನು ಹರಡಿ ಎತ್ತರಕ್ಕೆ, ದಪ್ಪಗೆ ಬೆಳೆಯುತ್ತಾ ಹೆಣಕೆಯ ತುಂಬಾ ಹಣ್ಣು ಬಿಡತೊಡಗಿದ್ದೆ. ಅಜ್ಜ ಇತ್ತೀಚೆಗೆ ಫಸಲುಕೊಡುವುದನ್ನು ನಿಲ್ಲಿಸಿದ್ದರಿಂದಲೋ ಅಥವಾ ನನ್ನ ಹಣ್ಣುಗಳು ತುಂಬಾ ರುಚಿ ಇತ್ತೋ ತಿಳಿಯದು, ಕೆಲವು ದಿನಗಳಲ್ಲಿಯೇ ನನ್ನದು ನುರಾರು ಪ್ರಾಣಿ ಪಕ್ಷಿಗಳ ಆಶ್ರಯತಾಣವಾಗಿ ಮಾರ್ಪಟ್ಟಿತ್ತು. ಪೊಟರು ಬಿದ್ದ ನನ್ನ ಒಂದುಭಾಗ ಇಣಚಿಗೆ ಸೂರಾದರೆ, ಕೆಂದಳಿಲು ತನ್ನ ಸೃಜನಾತ್ಮಕತೆಯಿಂದೆ ನನ್ನ ಎರೆಡು ಕೊಂಬೆಯ ಮಧ್ಯೆ ಚಪ್ಪರದ ರೀತಿಯ ಪುಟ್ಟ ಮನೆಯನ್ನು ನಿರ್ಮಿಸಿ ಬದುಕುತ್ತಿತ್ತು. ಹಾರು ಬೆಕ್ಕಿನ ಮನೆ ನನ್ನ ಇನ್ನೊಂದು ದಿಕ್ಕಿನಲ್ಲಿ ಪ್ರತಿಷ್ಟಾಪಿಸಲ್ಪಟ್ಟಿತ್ತು. ಉಳಿದಂತೆ ಕಾಡುಗಿಳಿ, ಶ್ಯಾಮನಹಕ್ಕಿ, ಮಂಗಟ್ಟೆ, ಗೋಪೀಹಕ್ಕಿ, ಭಾರಧ್ವಾಜ, ಜೇನು ಗಿಡುಗ ಮುಂತಾದ ಮಲೆನಾಡಿನ ಸುಂದರ ಪಕ್ಷಿಗಳು ನನ್ನನ್ನೇ ನನ್ನ ಆಶ್ರಯವನ್ನೇ ಪಡೆದಿತ್ತು. ಇದನ್ನು ನಾನು “ನನ್ನ ಬದುಕಿನ ಸುವರ್ಣ ಕಾಲ” ಎಂದೇ ಬಣ್ಣಿಸುತ್ತೇನೆ. ನಾನು ಮತ್ತು ನನ್ನ ಗುಂಪು ವರ್ಷದ ಮೊದಲ ಮಳೆಯನ್ನು ಆನಂದದಿಂದ ಆಹ್ವಾನಿಸಿದ್ದೆವು. ಮತ್ತು ಅದನ್ನು ಆಸ್ವಾದಿಸುತ್ತಿದ್ದೆವು. ಅದರೆ ಈ ಭಾರಿಯ ಮಳೆ ತನ್ನ ಪ್ರಚಂಡ ಶಕ್ತಿ ತೋರಿ ಧೋ…ಎಂದು ಸುರಿದ ಹೊಡೆತಕ್ಕೆ ನನ್ನ ಪ್ರೀತಿಯ ಜಂಬುಕ ಅಜ್ಜ ನೆಲಕ್ಕುರುಳಿದ್ದ. ಹಾಗೂ ಅವನ ಜೊತೆ ಅವನನ್ನೇ ಅವಲಂಬಿಸಿದ್ದ ಬಳ್ಳಿಗಳು, ಪಾಚಿ, ಅಣುಬೆ, ಹಕ್ಕಿ ಗೂಡುಗಳೇಲ್ಲಾ ನಿರ್ನಾಮವಾಗಿತ್ತು. ನಮ್ಮುಗಳ ಆಕ್ರಂದನ ಮುಗಿಲು ಮುಟ್ಟಿತ್ತು. ನಮ್ಮ ಗುಂಪಿನ ನಾಯಕನಾದ ಅಜ್ಜ ಹೋದಾಗಿನಿಂದ ನಮ್ಮನ್ನು ಮೌನ ಆಳಲು ಶುರುಮಾಡಿತ್ತು. ಅಂತಹಾ ಸಂದರ್ಭದಲ್ಲಿ ಮದ್ದಾಲ ಹೊಸ ನಾಯಕನಾಗಿ ಆಯ್ಕೆಗೊಂಡಿದ್ದ. ಅತೀ ಎತ್ತರವಾಗಿ ಬೆಳೆದಿದ್ದ ಅವನು ದೂರದ ಆಗುಹೋಗುಗಳನ್ನೆಲ್ಲಾ ವರದಿ ಮಾಡುತ್ತಿದ್ದ. ಹೆಗೋ ಅಜ್ಜನ ನೆನಪು ನಿಧಾನವಾಗಿ ಮಾಯವಾಗಿತ್ತು.
ನಮ್ಮ ಬೆನ್ನಿಗೆ ಹರಿಯುತ್ತಿದ್ದ ಹಳ್ಳಕ್ಕೆ ಅದೇನೋ ಕಾಲ್ಸೇತುವೆ. ಕಟ್ಟಿದ್ದರಂತೆ, ಅಲ್ಲಿಂದ ನಮ್ಮ ಆತಂಕ ಮುಗಿಲು ಮುಟ್ಟಲಾರಂಭಿಸಿತ್ತು. ಹಿಂದೆ ತಿಂಗಳಿಗೋ ವರ್ಷಕ್ಕೋ ಒಮ್ಮೆ ಬರುತ್ತಿದ್ದ ಮಾನವರು ಈಗ ದಿನನಿತ್ಯವೂ ಗುಂಪು ಗುಂಪುಗಳಾಗಿ ಓಡಾಡಲಾರಂಭಿಸಿದ್ದರು. ಅವರುಗಳು ನಮ್ಮ ಕಾಡನ್ನು ದಾಟಿ ಇನ್ನೊಂದು ಊರಿಗೆ ಹೋಗಲು ಶುರುಮಾಡುತ್ತಿದ್ದಂತೆ ಅಲ್ಲಿ ಒಂದು ಕಾಲುದಾರಿಯೇ ನಿರ್ಮಾಣವಾಗಿತ್ತು. ಕೆಲದಿನಗಳಲ್ಲಿ ನನ್ನ ಫಲಭರಿತ ಹೆಣಕೆಗಳಿಗೆ ಶಾಲೆಗೆ ಹೋಗುವ ಮಕ್ಕಳುಗಳು ಕಲ್ಲಿನಿಂದ, ಕೋಲಿನಿಂದ ಹೊಡೆಯುವುದೂ ನಾನು ಆ ಕೋಲುಗಳನ್ನು ಕೆಲ ಸಮಯದವರೆಗೆ ನನ್ನ ಹೆಣಕೆಗಳಲ್ಲಿಯೇ ಬಂಧಿಸಿಟ್ಟುಕೊಂಡು ಆ ಮಕ್ಕಳುಗಳಿಗೆ ಸತಾಯಿಸುವುದು ಒಂದು ಆಟವೇ ಆಗಿಹೋಗಿತ್ತು. ಮಕ್ಕಳ ಆಟ ಮುಗಿಯುತ್ತಿದ್ದಂತೆ ಮಂಗಗಳ ಆಟ ಶುರುವಾಗುತ್ತಿತ್ತು. ಈ ನಡುವೆ ನಮ್ಮ ಮಾರ್ಗದಲ್ಲಿ ಓಡಾಡುತ್ತಿದ್ದ ಜುಟ್ಟ ಬಿಟ್ಟ ವ್ಯಕ್ತಿಯೊಬ್ಬ ತನ್ನ ಹರಿತವಾದ ಕತ್ತಿಯಿಂದ ನನ್ನ ಕಾಂಡದ ಚೆಕ್ಕೆ ಎತ್ತಲು ಶುರುಮಾಡಿದ್ದ. ಇದು ನನ್ನೊಳಗಿನ ಕೋಪವನ್ನು ಹಾಗೂ ನೋವನ್ನು ವ್ಯಕ್ತಪಡಿಸಲಾಗದೇನರಳಿದ್ದೆ. ಆದರೆ ಆ ವ್ಯಕ್ತಿ ಚಕ್ಕೆಗಳನ್ನು ತನ್ನ ಸ್ವಾರ್ಥಕ್ಕಾಗಿ ಬಳಸದೇ ಅದನ್ನು ಉಬ್ಬಸ, ಅಸ್ತಮಾ, ಮುಂತಾದ ಮಾನವಿರಿಗಡರುವ ಖಾಯಿಲೆಗೆ ಉಚಿತವಾಗಿ ಔಷಧ ನೀಡಲು ಬಳಸುತ್ತಿದ್ದ ಎಂದು ತಿಳಿದ ನಂತರ ನನ್ನ ಕೋಪವನ್ನು ಅಧುಮಿ ಇನ್ನೊಂದು ಜೀವವನ್ನು ಉಳಿಸುವ ಕಾರ್ಯಕ್ಕೆ ಅನವು ಮಾಡಿಕೊಟ್ಟಿದ್ದೆ.

ಅದು ಪುನರ್ವಸುವಿನ ಅಂತ್ಯದ ದಿನಗಳು, ಆದರೂ ಒಂದು ಹನಿ ನೀರೂ ನಮ್ಮನ್ನು ತಾಕಿರಲಿಲ್ಲ. ನನ್ನ ಹೆಣಕೆಯಲ್ಲಿ ಜೋತಿದ್ದ ಹಣ್ಣುಗಳು ಜಿವ ಜಲವಿಲ್ಲದೇ ಅಲ್ಲೇ ಒಣಗಿ ಹಣ್ಣು ಮುದುಕರಂತಾಗಿದ್ದವು. ಇದೆಲ್ಲವಕ್ಕೂ ಮನುಷ್ಯನ ನಗರೀಕರಣವೆ ಕಾರಣವೆಂದು ಬುದ್ದಿವಂತ ನರಿ ಇಲ್ಲಿಗೆ ಬಂದಾಗಲೆಲ್ಲಾ ಭಾಷಣ ಬಿಗಿದು ಮನುಷ್ಯರ ವಿರುದ್ಧ ಭಂಡಾಯ ಏಳಲು ನಮ್ಮನ್ನು ಸಜ್ಜು ಗೊಳಿಸುತ್ತಿದ್ದ. ಈಗ ನಮ್ಮ ಗುಂಪಿಗೆ ಹಣ್ಣುಸಂಪಿಗೆ, ಕಾಡುನೆಲ್ಲಿ, ಅಳಲೆ, ಕೊಡಸ ಮುಂತಾದ ಮರಗಳ ಸೇರ್ಪಡೆಯಾಗಿತ್ತು. ತುಂಬಾ ಹಾಸ್ಯಪ್ರಜ್ನೆಯವನಾಗಿದ್ದ ಸಂಪಿಗೆಮರ ಸದಾ ನಮ್ಮ ದುಗುಡವನ್ನು ಮರೆಸುವ ಕಾರ್ಯ ಮಾಡುತ್ತಿದ್ದ. ಹೀಗಿರುವಾಗ ಒಂದುದಿನ ಒಬ್ಬ ಮಾನವ ನಮ್ಮ ಗುಂಪಿನತ್ತ ಬಂದು ನನ್ನನ್ನೂ ಸೇರಿದಂತೆ ಇನ್ನೂ ಕೆಲ ಮರಗಳನ್ನು ತಬ್ಬಿಕೊಂಡ, ಬಾಯಲ್ಲಿ ಏನನ್ನೋ ಬಡಬಡಿಸುತ್ತಿದ್ದ. ನನ್ನ ಬುಡದಲ್ಲಿ ಕುಳಿತು ಅದೇನನ್ನೋ ಬರೆಯುತ್ತಿದ್ದ. ನಂತರ ಸ್ವಲ್ಪಹೊತ್ತು ವಿಶ್ರಮಿಸಿ ತೆರಳಿದ. ಇದಾದನಂತರ ನಮ್ಮ ನಾಯಕನಾದ ಮದ್ದಾಲೆಯು ಒಂದು ಸಭೆಯನ್ನು ಕರೆದು ಈ ಆಗುಂತಕ ಮಾನವನ ವಿರುದ್ಧ ಹೂರಾಡಲು ಸಜ್ಜಾಗಿರಿ ಎಂದಿದ್ದ. ಆದರೆ ಆಗ ನಾನು ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಾ “ಇವನನ್ನು ನೋಡಿದರೆ ಅಪಾಯಕಾರಿಯಂತೆ ಕಾಣುವುದಿಲ್ಲ, ಇವನು ಒಳ್ಳೆಯ ಮಾನವ”ನೆಂದು ವಾದಿಸಿದ್ದೆ. ನಂತರದ ದಿನಗಳಲ್ಲಿ ಪದೇ ಪದೇ ಈ ಜಾಗಗಳಲ್ಲಿ ಓಡಾಡುತ್ತಿದ್ದ. ವಿವಿಧ ಜಾತಿಯ ಸಸಿಗಳನ್ನು ನೆಡುತ್ತಿದ್ದ,.ಅಲ್ಲಲ್ಲಿ ಇಂಗು ಗುಂಡಿಗಳನ್ನು ಹೊಡೆಯುತ್ತಿದ್ದ. ಪೊಟ್ಟಣದಲ್ಲಿರುತ್ತಿದ್ದ ವಿವಿಧ ಜಾತಿಯ ಕಾಳುಗಳನ್ನು ಅಲ್ಲಲ್ಲಿ ಎಸೆಯುತ್ತಿದ್ದ. ಇದು ಪಕ್ಷಿಗಳಿಗೆ ಕೀಟಗಳಿಗೆ ಅದೆಷ್ಟೋದಿನದ ಆಹಾರವಾಗುತ್ತಿತ್ತು. ಇದನ್ನೆಲ್ಲಾ ಗಮನಿಸಿದ ನಮ್ಮ ಗುಂಪು ಮತ್ತು ಇತರ ಪ್ರಾಣಿ – ಪಕ್ಷಿಗಳು ಇವನಿಗೆ ’ಪರಿಸರ ಪ್ರೇಮಿ’ ಎಂದೇ ನಾಮಕರಣ ಮಾಡಿದ್ದೆವು ಮತ್ತು ಅವನ ಅವನಮೇಲಿದ್ದ ನಮ್ಮ ಅಭಿಪ್ರಾಯವನ್ನು ಬದಲಾಯಿಸಿಕೊಂಡಿದ್ದೆವು. ಇವೆಲ್ಲಾ ಆಗಿ ಸುಮಾರು ೧೫ ವರ್ಷಗಳೇ ಕಳೆದಿರಬಹುದು, ಈಗ ನಮ್ಮ ಗುಂಪಿನಲ್ಲಿದ್ದ ಮತ್ತಿ, ಮದ್ದಾಲೆ, ಹುಣಾಲ, ಸಂಪಿಗೆ, ಬಿದಿರು ಮುಂತಾದವುಗಳು ಮಾನವನ ಆಸೆಗೆ ಬಲಿಯಾಗಿದ್ದವು. ಉಳಿದಿರುವುದು ನಾನು, ಕೊಡಸ, ನೆಲ್ಲಿ ಮತ್ತು ಅಳಲೆ ಅಷ್ಟೇ. ನಮ್ಮ ಜೀವಕ್ಕೂ ದಿನಾಂಕ ನಿಗದಿಯಾಗಿತ್ತು. ಅಂದು ನನ್ನ ಸರದಿ ಎಂದು ನಾನು ಅದಾಗಲೇ ತೀರ್ಮಾನಿಸಿ ಉಳಿದಿರುವ ನನ್ನ ಸ್ನೆಹಿತರಬಳಿ ವಿದಾಯದ ಮಾತುಗಳನ್ನಾಡಿಯಾಗಿತ್ತು. ಅಷ್ಟುಹೊತ್ತಿಗಾಗಲೆ ಉತ್ತರದ ಕಡೆಯಿಂದ ಬಂದ ಆ ಪರಿಸರ ಪ್ರೇಮಿ ಅಲ್ಲಿ ನಡೆದ ಮರಗಳ ಮಾರಣ ಹೋಮಗಳನ್ನು ನೋಡಿ ಚಿಂತಾಕ್ರಾಂತನಾಗಿದ್ದ. ಅದೇ ಸಮಯಕ್ಕೆ ಸರಿಯಾಗಿ ಪೂರ್ವದಿಂದ ಬಂದ ೫-೬ ಜನ ಧಡೂತಿಗಳು ತಮ್ಮಬಳಿಯ ಕತ್ತಿ, ಕೊಡಲಿ, ಗರಗಸ ಮುಂತಾದ ಹತಾರ ಗಳನ್ನು ತೆಗೆದುಕೊಂಡು ನನ್ನ ಬುಡಕ್ಕೆ ಬಂದರು. ನಾನು ಕಣ್ಮುಚ್ಚಿ ಎದೆಯನ್ನು ಗಟ್ಟಿಮಾಡಿಕೊಂಡು ನಿಂತಿದ್ದೆ. ನನ್ನಲ್ಲಿನ ಆಶ್ರಿತರು... ವಲಸೆ ಹೋಗುವ ತೆಯಾರಿಯಲ್ಲಿದ್ದವು. ಹೆಣಕೆಗಳ ತುಂಭಾ ತುಂಬಿದ್ದ ತಿಳಿ ಹಸಿರ ಮಿಡಿಗಳು ಆಕ್ರಂದಿಸುತ್ತಿದ್ದವು. ಆಗ ನನ್ನ ಬಳಿ ಓಡಿಬಂದ ಆ ಪರಿಸರಪ್ರೇಮಿ ನನ್ನನ್ನು ತಬ್ಬಿ ಹಿಡಿದು ಅದೇನನ್ನೂ ಬಡಬಡಿಸತೊಡಗಿದ. ಆ ಕಟುಕರಿಗೂ ಇವನಿಗೂ ದೊಡ್ದ ಗಲಾಟೆಯೇ ಆಗಿರಬೆಕು. ನಂತರ ಆ ಧಡೂತಿಗಳು ಇವನತ್ತ ಕೈಬೆರಳು ತೋರಿಸುತ್ತಾ ನಿನ್ನನ್ನು ನೋಡ್ಕೋತೀವಿ ಎಂಬ ಭಾವದಲ್ಲಿ ಹೊರಟುಹೊದರು. ಪರಿಸರಪ್ರೇಮಿಯು ಖುಷಿಯಿಂದ ಕುಣಿದಾಡಿದ್ದ. ನನ್ನ ಮನಸ್ಸು ಕೂಡಾ ಅವನಂತೆಯೇ ಆಡುತ್ತಿತ್ತು.

ಇಂದು ಉಳಿದರೂ ನಾಳೆಯ ದಿನಗಳಲ್ಲಿ ಆ ಧಡೂತಿಗಳು ನನ್ನನ್ನು ಖಂಡಿತಾ ಉಳಿಸಲಾರರೆಂಬುದು ನನ್ನ ನಂಬಿಕೆಯಾಗಿತ್ತು. ಅಂದು ಅದೆಷ್ಟುಸಲ ಅತ್ತಿದ್ದೆನೋ ಅದೆಷ್ಟುಸಲ ದೊಡ್ಡ ನಿಟ್ಟುಸಿರು ಬಿಟ್ಟಿದ್ದೆನೋ ನನಗೆ ನೆನಪಿಲ್ಲ. ಅಂದು ಮಧ್ಯರಾತ್ರಿ ೪ ಗಂಟೆಯಾಗಿರಬಹುದು. ಉತ್ತರದ ಕಡೆಯಿಂದ ಇಬ್ಬರು ಅಪರಿಚಿತರು ಬಂದರು. ಅವರು ಕಡುಗಪ್ಪು ಶಿಲೆಯೊಂದನ್ನು ಹೊತ್ತು ತಂದಿದ್ದರು. ಅದರಮೇಲೆ ನಾಗರ ಹಾವಿನ ಚಿತ್ರವು ಕೆತ್ತಲ್ಪಟ್ಟಿತ್ತು. ಹಿಂದಿನಿಂದಲೇ ನಮ್ಮ ಪರಿಸರ ಪ್ರೇಮಿಯೂ ಬಂದಿದ್ದ. ಕೈಯಲ್ಲಿ ಹಾರೆ ಹಿಡಿದಿದ್ದ ಅವನು ಲಗುಬಗೆಯಿಂದ ನನ್ನ ಬುಡದಲ್ಲಿ ಅಗೆದು ಆ ಇಬ್ಬರು ಆಳುಗಳ ಸಹಾಯದಿಂದ ನಾಗರನ ವಿಗ್ರಹವನ್ನು ಅಲ್ಲಿ ಪ್ರತಿಷ್ಠಾಪಿಸಿ, ಕಲ್ಲಿಗೆ ಅರಿಶಿಣ ಕುಂಕುಮವನ್ನು ಲೇಪಿಸಿ, ಅಕ್ಕ ಪಕ್ಕದಲ್ಲಿ ಎರೆಡು ತ್ರಿಶೂಲಗಳನ್ನು ಊರಿ ಹೊರಟು ಹೋದರು. ಇವನ ಈ ಕೆಲಸ ನನಗೆ ವಿಚಿತ್ರವೆನಿಸಿತ್ತು. ಹೀಗೇ ನಾವುಗಳು ಯೋಚನೆಯಲ್ಲಿರುವಾಗ ಅಪರೂಪದ ಅಥಿತಿಯಾಗಿ ಬಂದ ಕರಿ ನಾಗನಿಗೆ, " ಇಂದು ನಮ್ಮ ಗುಂಪಿನಬಳಿಯೇ ಸುತ್ತಾಡುತ್ತಿರು" ಎಂದು ಮನವಿ ಮಾಡಿದ್ದೆವು. ನಮ್ಮ ನಿರೀಕ್ಷೆಯಂತೆ ಆ ಧಡೂತಿಗಳು ಇತ್ತ ಬಂದರು. ಇನ್ನೇನು ನನ್ನ ಬುಡಕ್ಕೆ ಕೊಡಲಿ ಹಾಕಬೇಕು ಎನ್ನುವಷ್ಟರಲ್ಲಿ ಕಂಡ ಆ ನಾಗನ ವಿಗ್ರಹವನ್ನು ನೋಡಿ ಹೆದರಿ ಹಿಂದೆ ಸರಿದರು. ಅದರಲ್ಲಿದ್ದ ಒಬ್ಬ ಕರೀ ಧಡೂತಿಯವ(ನಾಸ್ತಿಕನಿರಬೇಕು) “ಏ ಇದೆಲ್ಲಾ ನಿನ್ನೆ ನಮ್ಮನ್ನು ತಡೆದೆನಲ್ಲ ಅವನ ಕೆಲಸ... ನೀವ್ಯಾರೂ ಹೆದರುವ ಅವಷ್ಯಕತೆಯಿಲ್ಲ ಈ ಕಲ್ಲನ್ನು ಇಲ್ಲಿಂದ ಕಿತ್ತೆಸೆದು ನಮ್ಮ ಕೆಲಸ ಮುಗಿಸುವ” ಎಂದ. ನನ್ನಬಳಿ ಇದ್ದ ವಿಗ್ರಹವನ್ನು ಕಿತ್ತೆಸೆಯಲು ಎರೆಡು ಜನ ಮುಂದೆಬಂದರು. ಅದೇ ಸಮಯಕ್ಕೇ ಹಿಂದಿನ ತೊರೆಯ ಬದಿಯಿಂದ ಬಂದ ಅಪರೂಪದ ಅಥಿತಿ ಕರಿನಾಗ ನನ್ನತ್ತ ಧಾವಿಸಿತು. ನನ್ನ ಜೀವ ಉಳಿಸಿದ ಆಪತ್ಭಾಂದವ ನಾಗಣ್ಣನಿಗೆ ಕೃತಜ್ನತೆಗಳನ್ನು ಅರ್ಪಿಸಿ ಕಳಿಸಿಕೊಟ್ಟೆ. ಪರಿಸರಪ್ರೆಮಿ ಗೂ ಮನದಲ್ಲೇ ಸಾವಿರ ಕ್ರುತಜ್ನತೆಗಳನ್ನು ಅರ್ಪಿಸಿದ್ದೆ. ಅಷ್ಟೇ ಅಂದಿನಿಂದ ಇಲ್ಲಿಯವರೆಗೆ ನನ್ನ ಸುತ್ತಮುತ್ತಲಿನ ಅದೆಷ್ಟೋ ಮರಗಳು ನಾಶವಾದರೂ ನಾನೊಬ್ಬ ಇಲ್ಲಿ ಗರುಡಗಂಬ ದಂತೆ ನಿಂತಿದ್ದೇನೆ. ಎಲ್ಲಾ ನಾಗರಕಲ್ಲಿನ ಮಹಿಮೆಯೆಂದು ನನಗೆ ಈಗ ತಿಳಿಯುತ್ತಿದೆ.

ಈ ಎಲ್ಲಾ ಘಟನೆಗಳಾಗಿ ಸುಮಾರು ೩-೪ ವರ್ಷಗಳು ಕಳೆದಿರಬೇಕು , ಪರಿಸರ ಪ್ರೇಮಿಯ ಆಗಮನಕ್ಕಾಗಿ ನಾನು ಪರಿತಪಿಸುತ್ತಿದ್ದ ದಿನಗಳವು. ಹೀಗಿರುವಾಗ ಒಂದು ಬಿರು ಬೆಸಿಗೆಯ ಮಧ್ಯಾಹ್ನ ಪರಿಸರಪ್ರೇಮಿ ನನ್ನಬಳಿ ಬಂದ, ನಾಗರ ಕಲ್ಲಿಗೆ ನಮಸ್ಕರಿಸಿದ, ನನ್ನ ಮೈಸವರಿದ, ನಾನು ಉದುರಿಸಿದ ತಾಜಾ ಹಣ್ಣುಗಳನ್ನು ತಿಂದ. ಸ್ವಲ್ಪಹೊತ್ತು ಅದೇನೋ ಹಾಡುತ್ತಿದ್ದ ...ಅದರ ಸಾಲುಗಳು ಹಿಗಿತ್ತು (ಸರಿಯಾಗಿ ನೆನಪಿಲ್ಲ) “ನಶಿಸುತಿದೆ ಕಾನನ ಎದ್ದೇಳು ಮಾನವ, ಅಳುತಲಿದೆ ಕಾನನ…” ನಂತರ ತನ್ನ ಚಿಲದಿಂದ ಹಗ್ಗ ಒಂದನ್ನು ತೆಗೆದು ನನ್ನ ಬಲಿಷ್ಠವಾದ ಕೊಂಬೆಗೆ ಹಾಕಿದ, ಕೆಳಗೆ ಕುಣಿಕೆಯಾಕಾರ ಮಾಡಿದ. ನಾನು ದಡ್ಡ, ಅವನು ಜೋಕಾಲಿಕಟ್ಟಲು ಹೀಗೆ ಮಾಡುತ್ತಿದ್ದಾನೆಂದುಕೊಂಡೆ, ಆದರೆ ಅವನು ನೇಣು ಕುಣಿಕೆ ಹೊಸೆಯುತ್ತಿದ್ದಾನೆಂದು ಆನಂತರ ತಿಳಿಯಿತು. ಒಮ್ಮೆ ಭೂದೇವಿಗೆ, ಇನ್ನೊಮ್ಮೆ ಗಗನಕ್ಕೆ ನಮಸ್ಕರಿಸಿ ಆ ಕುಣಿಕೆಯೊಳಗೆ ತಲೆಯಿಟ್ಟುಬಿಟ್ಟ! ನಾನು ಬೇಡವೆಂದು ಬಡಿದುಕೊಂಡೆ, ಕೊಂಬೆಯನ್ನು ಮುರಿದು ಬೀಳುವಂತೆ ಜೋರಾಗಿ ಅಲ್ಲಾಡಿಸಿದೆ, ವಾಯುವಿನಲ್ಲಿ ನನ್ನ ಈ ಹೆಣಕೆಯನ್ನು ತುಂಡರಿಸುವಂತೆ ಬೇಡಿಕೊಂಡೆ. ಊ ಹೂಂ... ಇದ್ಯಾವುದೂ ಪ್ರಯೋಜನವಾಗಲಿಲ್ಲ. ನನ್ನ ಪ್ರಾಣ ಉಳಿಸಿದ ನಾ ಕಂಡ ಏಕೈಕ ಶ್ರೇಷ್ಠ ಮಾನವನ ಜೀವ ನನ್ನಿಂದಲೇ ತೆಗೆಯಲ್ಪಟ್ಟಿತ್ತು. ಅವನ ಸಾವಿಗೆ ಕಾರಣ ಏನೆಂಬುದು ಇಂದಿಗೂ ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ. ಆದರೆ ಅವನ ನೆನಪು ಮಾತ್ರಾ ಸದಾ ನನ್ನಲ್ಲಿ ಹಸಿರಾಗಿದೆ.

ಇದೆಲ್ಲಾ ಘಟಿಸಿ ಇಂದಿಗೆ ಸುಮಾರು ವರ್ಷಗಳಾಗಿರಬಹುದು. ಈಗ ನನ್ನ ಎದುರಲ್ಲಿ ಡಾಂಬರಿನ ವಿಶಾಲವಾದ ರಸ್ತೆ ಮೈತಾಳಿದೆ. ಬಲ ಪಕ್ಕದಲ್ಲಿ ಬಸ್ಸಿನ ತಂಗುದಾಣವು ದಾರಿಹೋಕರಿಗೆ ತಂಪೆರೆಯುತ್ತಿದೆ! ನನ್ನ ಬುಡದ ನಾಗರ ಕಲ್ಲಿಗೆ ಜನರೆಲ್ಲಾ ಸೇರಿ ಕಾಂಕ್ರೀಟಿನ ಗುಡಿ ಕಟ್ಟಿಸಿದ್ದಾರೆ. ನಾಗಪಂಚಮಿಯಂದು ಇಲ್ಲಿ ಜನವೂ ಜನ, ನಾಗಣ್ಣನಿಗೆ ಹಾಲೆರೆಯುವುದೇನು, ಆರತಿ, ನೈವೇದ್ಯಗಳೇನು? ಹೂಂ… ಇದನೆಲ್ಲಾ ನೋಡಿ ನನಗೆ ನಗಬೇಕೋ ಅಳಬೇಕೋ ತೋಚುವುದಿಲ್ಲ. ಆದರೆ ಈ ಹಬ್ಬದ ಸಮಯದಲ್ಲಿ ನನ್ನ ಹೆಣಕೆಯಲ್ಲಿ ಹಣ್ಣುಗಳಿರುವುದಿಲ್ಲ, ಆದ ಕಾರಣ ನನ್ನೆಡೆಗೆ ಯಾರೂ ಕಲ್ಲನ್ನಾಗಲಿ ಕೋಲನ್ನಾಗಲಿ ಎಸೆಯುವುದಿಲ್ಲ.
ಬಹಳ ವರ್ಷಗಳ ಸ್ನೇಹಿತನಾದ ನೆಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಗೆ ಧರೆಗುರುಳಿದ. ಈಗ ನನ್ನ ಸುತ್ತಮುತ್ತ ತುಂಬಿಹೋಗಿರುವ ನೀಲಗಿರಿ, ಅಕೇಶಿಯಾ ಮರಗಳ ಜಂಬವನ್ನು ಅಡಗಿಸುತ್ತಿದ್ದ ನೆಲ್ಲಿ ಇಲ್ಲದೇ ಒಂಟಿತನ ಇನ್ನಿಲ್ಲದಂತೆ ಕಾಡತೊಡಗಿದೆ. ನೀಲಗಿರಿ ಎಲೆಗಳ ಹಾಸಿನ ಪ್ರಭಾವಕ್ಕೆ ನನ್ನ ಯಾವೊಂದು ಹಣ್ಣಿಗೂ ಮಣ್ಣಿನೊಳು ಬೆರೆತು ಗಿಡವಾಗುವ ಅವಕಾಶಗಳೇ ಸಿಕ್ಕಿಲ್ಲ. ಇತ್ತೀಚೆಗೆ ಸರಿಯಾಗಿ ಮಳೆ ಕೂಡಾ ಆಗುತ್ತಿಲ್ಲದ ಕಾರಣ, ನನ್ನಲ್ಲಿ ಮುಂಚಿನ ಶಕ್ತಿ ಇಲ್ಲವಾಗಿದೆ. ಮಾತಾಡಲು ಯಾರೂ ಇಲ್ಲದೇ, ಟೊಂಗೆಗಳಲ್ಲಿ ಹಣ್ಣುಗಳಿಲ್ಲದೇ, ಪೊಟರೆಗಳಲ್ಲಿ ಪ್ರಾಣಿಗಳಿಲ್ಲದೇ, ಚಿಲಿಪಿಲಿ ಹಕ್ಕಿಗಳಿಲ್ಲದೇ, ಪಾಚಿ, ಬಂದಳಿಕೆ, ಅಣುಬೆಗಳಿಲ್ಲದೇ ನನಗೆ ತುಂಬಾ ಬೆಸರವಾಗುತ್ತಿದೆ. ಹೀಗೆ ಬೋಳಾಗಿ ಬದುಕುವುದಕ್ಕಿಂತಾ ಮುಂದೆ ಬರುವ ದೊಡ್ಡ ಮಳೆಯಲ್ಲಿ ಬಿದ್ದುಬಿಡುವುದೇ ಲೇಸೆನಿಸುತ್ತಿದೆ. ಆದರೆ ಮಾನವರೇ ಹೆದರಬೇಡಿ... ನಾನು ನಿಮ್ಮ ನಾಗನ ಬನದಮೇಲೆ ಬೀಳುವುದಿಲ್ಲ, ನಿಮ್ಮ ರಸ್ತೆಯಮೇಲೆ ಬೀಳುವುದಿಲ್ಲ, ಬಸ್ ತಂಗುದಾಣದಮೇಲೆಯೂ ಬೀಳುವುದಿಲ್ಲ. ಬದಲಿಗೆ ಎಡ ಪಕ್ಕದ ಕಾಲೀ ಜಾಗದಲ್ಲಿ ಬೀಳುತ್ತೇನೆ. ನಾನು ಬಿದ್ದ ತಕ್ಷಣ ನನ್ನೊಡಲಿಗೆ ನೀವು ಕೊಡಲಿ ಹಾಕಿ ನನ್ನನ್ನು ಬೇಕಾದುದಕ್ಕೆ ಬಳಸಿಕೊಳ್ಳಲೂ ನನ್ನ ಸಂಪೂರ್ಣ ಅನುಮತಿಯಿದೆ. ಆದರೆ ನನ್ನ ಕಳೆಬರಹದ ಜಾಗದಲ್ಲಿ ಒಂದು ಸಸಿ ನೆಡುವುದನ್ನು ಮಾತ್ರಾ ಮರೆಯಬೇಡಿ, ಯಾಕೆಂದರೆ ನಿಮಗೆ ಕಡಿಯಲು ಮುಂದೆ ಮರಗಳು ಬೇಕಲ್ಲಾ... ನಮಸ್ಕಾರ.

ಇಂತೀ,
ನಿಮ್ಮವ,
ಜಂಬುನೇರಳೇ ಮರ.