Click here to Download MyLang App

ಜಂಬಳ್ಳಿ ಬಸ್ಟ್ಯಾಂಡ್ - ಬರೆದವರು : ದುಷ್ಯಂತ ಕೊಡಸೆ

ಅಲ್ಲಾ ಅಪ್ಪಣ್ಣ ಬೇಗ ಹೋಗಾಣ ಅಂತ ಅಂದ್ರೆ ಇಷ್ಟ್ಹೊತ್ತು ಆಯ್ತಲಪ್ಛ ಎಂದು ರಾಮಣ್ಣ ಹೇಳಿದಾಗ ಮಧ್ಯರಾತ್ರಿ 12 ಘಂಟೆ. ಅಪ್ಪಣ್ಣ ಮತ್ತು ರಾಮಣ್ಣ ಸ್ನೇಹಿತ ಗುರುಪ್ರಸಾದನ ಮದುವೆಯ ಸಲುವಾಗಿ ಹೊಸನಗರಕ್ಕೆ ಹೋಗಿದ್ದರು. ಮದುವೆ ಮನೆಯಲ್ಲಿ ಹಳೆಯ ಫ್ರೆಂಡ್ಸ್ ಸೇರಿ ಕಾಡು ಹರಟೆ ಹರಟುತ್ತಾ ಇರುವಾಗ ಟೈಮ್ ಗೊತ್ತಾಗೋದಾದ್ರೂ ಹೇಗೆ? ಇಲ್ಲ ಸಲ್ಲದ ಮಾತು ಆಗಲೇ ಸಮಯ ಮೀರಿಸಿತ್ತು. ಕೊನೆಗೆ ಊಟ ಆಗಿ ಹೊರಡುವಾಗ ಘಂಟೆ 12! ಎಲ್ಲಾ ಫ್ರೆಂಡ್ಸ್ಗು ಹೇಳಿ ಹೊರಟರು. ರಾಮಣ್ಣ ಬೈಕ್ ನಿಲ್ಸಿದ್ ಜಾಗಕ್ಕೆ ಮೊಬೈಲ್ ಟಾರ್ಚ್ ಹಾಕಿ ಹೊರಟ. ಅವನ ಹಳೆಯ ಬೈಕ್ ನೋಡಿಕೊಂಡು "ತೋಥ್ಹ್ ಒಂದ್ ಬೈಕ್ ತಗಳಾನ ಅಂದ್ರೆ ಮನೇಲಿ ಯಾವಗ್ಲು ಏನಾದ್ರೂಂದು ಪ್ರಾಬ್ಲಮ್.." ಈ ಗುಜೂರಿ ಬೈಕ್ ನಂಬ್ಕೊಂಡ್ ಎಲ್ಲಿಗ್ ಹೋಗೋಕೂ ಹೆದ್ರಿಕೆ ಅಪ್ಪಣ್ಣ, ಎಲ್ಲಿ ಕೈ ಕೊಡುತ್ತೆ ಗೊತ್ತಿಲ್ಲ ನಡಿ ದೇವ್ರ್ಮೇಲೆ ಬಾರಾಹಾಕಿ ಹೋಗನ. ಬಿಡು ರಾಮಣ್ಣ ನಿನ್ಹತ್ರ ಈ ಬೈಕಾದೃ ಐತೆ ನನ್ ಎಲ್ಲಿ ಹೋಗೋದ್ ಇದ್ರೂ ನಡ್ಕೊಂಡೆ ಸಾಯ್ಬೇಕು ಅಂತ ಅಪ್ಪಣ್ಣ ಹೇಳಿದಾಗ ರಾಮಣ್ಣನಿಗೆ ಸ್ವಲ್ಪ ಸಮಾಧಾನವಾಯ್ತು.

ಈಗಾಗ್ಲೆ ಟೈಮ್ ಹನ್ನೆಲ್ಡುವರೆ ಅಗ್ತಾ ಬಂತು ಸ್ಟಾರ್ಟ್ ಮಾಡು ನಡಿ ಅಂತ ಅಪ್ಪಣ್ಣ ತನ್ನ ವಿಶಿಷ್ಠ ಶೈಲಿಯಲ್ಲಿ ಬೈಕ್ ಹಿಂದೆ ಏರೀದ. ಹೌದ್ ಮಾರಾಯ ಹೊರಡನ ಅಂತ ಬೈಕ್ ನ ಕಿಕ್ ತನ್ನ ಶಕ್ತಿ ಬಿಟ್ಟು ತುಳಿದ; ಬೈಕ್ ಗುಡೂರ್ ಗುಡೂರ್ ಎಂದು ಆಫ್ ಆಯ್ತು. ಮತ್ತೆ ಅದೇ ರೀತಿ ತನ್ನೆಲ್ಲ ಶಕ್ತಿ ಬಿಟ್ಟು ತುಳಿದ ಬೈಕ್ ಗುಡೂರ್ ಗುಡೂರ್ ಗುಡೂರ್ ಎಂದು ಗೋಗೂರಿತ ಹೊರಟಿತು.

ಹೋಗುವ ದಾರಿಯಲ್ಲಿ ಒಂದು ವಾಹನದ ಸುಳಿವು ಇರಲಿಲ್ಲ ಕಾಡು ದಿಟ್ಟಿಸಿ ಇವರ ಚಲನೆಯನ್ನೇ ನೋಡುವಂತೆ ಬಾಸವಾಗುತಿತ್ತು. ಮಿಂಚು ಹುಳುಗಳು ಕಾಡನ್ನು ಅಲಂಕರಸಿದ್ದವು, ಚಂದ್ರ ಇವರನ್ನೇ ಹಿಂಬಲಿಸಿ ಬರುತಿದ್ದ. ದಾರಿಯಲ್ಲಿ ಒಮ್ಮೊಮ್ಮೆ ಒಂದು ಕಾಡು ಪ್ರಾಣಿಗಳು ಬೈಕಿನ ಲೈಟ್‌ಗೆ ಕಣ್ಣು ಕೊಟ್ಟು ಮಾಯವಾಗುತ್ತಿದ್ದವು. ಇಬ್ಬರ ಮನಸಲ್ಲೂ ಒಂದು ರೀತಿಯ ಅವ್ಯಕ್ತ ಭಯ, ಬೈಕ್ ಗುಡೂರ್ರ್ ಎಂದು ಹೊಂಡ ಗುಂಡಿ ಹತ್ತಿ ಇಳಿಯುತ್ತಿತ್ತು. ಬೈಕಿನಲ್ಲಿ ಹಿಂದೆ ಕಾಲುಚಾಚಿ ಕುಳಿತಿದ್ದ ಅಪ್ಪಣ್ಣ ಕುಂತಲ್ಲೆ ಯೋಚಿಸಿದ, ತಲೆಯಲ್ಲಿ ಚಿತ್ರವಿಚಿತ್ರ ಕಲ್ಪನೆಗಳು ಮೂಡತೊಡಗಿದವು. ಅವನ ತಲೆಯಲ್ಲಿ ಅವರಿವರು ಹೇಳಿದ ಜಂಬಳ್ಳಿ ದೆವ್ವದ ಕಥೆಗಳೆ ಹರಿದಾಡುತ್ತಿದ್ದವು. ಏನಾದರೂ ಮಾತನಾಡುತ್ತ ಹೋದರೆ ದಾರಿ ಸಾಗುವುದು ಗೊತ್ತಾಗೋದಿಲ್ಲ ಎಂದು ಭಾವಿಸಿ ರಾಗ ತೆಗೆದ..

"ರಾಮಣ್ಣ ಆ ಜಂಬಳ್ಳಿ ಹತ್ರ ದೆವ್ವದ್ ಕಾಟ ಅಂತರಲ ಹೌದನೋ!" ಎಂದು ಅಪ್ಪಣ್ಣ ಸಣ್ಣ ಸ್ವರದಲ್ಲಿ ಕೇಳಿದ. "ನಾವ್ ಯಾವಾಗ್ಲೂ ಕಂಡಿಲ್ಲ ನೋಡು ಆದ್ರೆ ನಿಂಗೆ ಗೊತ್ತಲಾ ನಮ್ಮೂರಿನ್ ಸಮಾಚಾರ ಆ ರವೀಂದ್ರ ಮತ್ತೆ ಸರಸ್ವತಿ ಗಂಡ ಸುರೇಶ ನೋಡಿದರೆ ಅಂತ ಊರಲ್ಲಿ ಸುದ್ದಿ ಇರೋದ್.."

ಸಾಗರದಿಂದ ತೀರ್ಥಳ್ಳಿ ಹೋಗುವ ದಾರಿಯ ಮಧ್ಯೆ ಬರುವ ಒಂದು ತಿರ್ಕಾಸೆ ಜಂಬಳ್ಳಿ. ಅಲ್ಲಿ ತಿಂಗಳಿಗೆ ಒಂದೋ ಎರಡೋ ಆಕ್ಸಿಡೆಂಟ್ ಆಗೋದು ಸಾಮಾನ್ಯವಾಗಿತ್ತು. ಆಕ್ಸಿಡೆಂಟ್‌ನಲ್ಲಿ ಪ್ರಾಣ ಬಿಟ್ಟವರಿಂದ ಹಿಡಿದು ಅರ್ಧ ಪ್ರಾಣ ಉಳಿಸಿಕೊಂಡವರ ತನಕ ಇದ್ದರು. ಅದರೆ ಜನರ ಕಲ್ಪನೆಯ ಕಥೆಯಲ್ಲಿ ಅವರದ್ದೇ ಶೈಲಿಯಲ್ಲಿ ಕಥೆಗಳು ರೂಪು ಪಡೆದಿರುತ್ತಿದ್ದವು. ವೇಗವಾಗಿ ಬಂದು ಕಂಟ್ರೋಲ್ ಸಿಗದೇ ಬಿದ್ದರೂ ದೆವ್ವದ ಕಾಟ ಎಂದು ಕಥೆಗಳು ತಿರುವು ಪಡೆಯುತಿದ್ದವು. ಜನರ ಬಾಯಿಂದ ಬಾಯಿಗೆ ಕಥೆ ಯಾವುದೋ ತಾರಕಕ್ಕೆ ಹೋಗಿ ಮುಟ್ಟಿರುತ್ತಿದ್ದವು.

ರವೀಂದ್ರ ಪದವಿ ಮುಗಿಸಿದ ಖುಷಿಯಲ್ಲಿ ಸಿನಿಮಾ ನೋಡಲು ಶಿವಮೊಗ್ಗ ಪೇಟೆಗೆ ಹೋಗಿದ್ದ, ಸಿನಿಮಾ ಮುಗಿದ ಮೇಲೆ ಬಾರ್ ಕಡೆ ಹೆಜ್ಜೆ ಹಾಕಿ ಪಿಂಗಾರ ಬಾರ್‌ನಲ್ಲಿ ಒಂದ್ ಪೆಗ್ ಏರಿಸಿ ಹೊರಡುವುದರಲ್ಲಿ ಕೊನೆಯ ಬಸ್ ಹೊರಡಲು ಬಾಮ್ಪ್ ಬಾಮ್ಪ್ ಎಂದು ಹಾರ್ನ್ ಮಾಡುತ್ತಾ ರೆಡಿ ಆಗಿತ್ತು. ರವೀಂದ್ರ ಬಸ್ಸೇರಿ ಕಿಟಕಿ ಪಕ್ಕ ಸೀಟ್ ಹಿಡಿದು ಕುಳಿತು ಜಂಬಳ್ಳಿ ಹಿಂದಿನ ಸ್ಟಾಪ್‌ ಹೆದ್ದಾರಿಪುರಕ್ಕೆ ಟಿಕೆಟ್ ತೆಗೆದುಕೊಂಡ. ಜಂಬಳ್ಳಿ ಹಿಂದಿನ ಸ್ಟಾಪ್ ಟಿಕೆಟ್ ತೆಗಿಯಲೂ ಕಾರಣ ಅವನ ಸೈಕಲ್ ಅಲ್ಲೆ ಸಾಬರ ಅಂಗಡಿಯಲ್ಲಿ ನಿಲ್ಲಿಸಿ ಹೋಗಿದ್ದ. ಶಿವಮೊಗ್ಗ ಖಾಸಗಿ ಬಸ್‌ ಸ್ಟ್ಯಾಂಡ್‌ನಿಂದ ಬಸ್ ಗೋರ್ ಗೋರ್ ಎಂದು ಸದ್ದು ಮಾಡುತ್ತಾ ಹೊರಟಿತು. ಬಸ್‌ ಇನ್ನೂ ಪೆಸಿಟ್‌ ಕಾಲೇಜ್‌ ದಾಟಿ ತಾವರೆಕೊಪ್ಪಕ್ಕೆ ಬರುವಷ್ಟರಲ್ಲಿ ರವೀಂದ್ರ ಪೆಗ್‌ ನಶೆ ಜೋರಾಗಿದ್ದರಿಂದ ನಿದ್ರೆಗೆ ಜಾರಿದ್ದ; ಬಸ್ ಕಂಡಕ್ಟರ್ ಹೆದ್ದಾರಿಪುರ ಸ್ಟಾಪ್ನಲ್ಲಿ ಎಚ್ಚರ ಮಾಡಿದಾಗ್ಲೇ ರವೀಂದ್ರ ಎದ್ದಿದ್ದು. ಕಣ್ಣು ಉಜ್ಜುತ್ತ ವಾಚ್ ನೋಡಿದರೆ ಘಂಟೆ 10.45. ಅಯ್ಯಯ್ಯೋ ಲೇಟ್‌ ಆಗಿ ಬಿಡ್ತಲ್ಲ ಎಂದು ಭಯದಿಂದ ಸಾಬಾರ ಅಂಗಡಿ ಬಳಿ ಬಂದು ಸೈಕಲ್ ಹೊರತೆಗೆದ. ರೋಡಿಗೆ ಸೈಕಲ್ ತೆಗೆದುಕೊಂಡು ಹೋಗಿ ಒಂದು ಕಾಲನ್ನು ಪೆಡಲ್ ಮೇಲೆ ಇಟ್ಟು ಇನ್ನೊಂದು ಕಾಲನ್ನು ನೆಲದಿಂದ ತಳ್ಳೂತ್ತ ಸೀಟ್ ಮೇಲೆ ಏರಿಕುಳಿತ. ಸುತ್ತಲಿನ ಭಯಾನಕ ಕಾಡು ತಿನ್ನುವಂತೆ ಇವನನ್ನೆ ನೋಡುವಂತೆ ಭಾಸವಾಯಿತು. ತಣ್ಣನೆ ಬೀಸುವ ಗಾಳಿ ಮುಖಕ್ಕೆ ಚುಂಬಿಸುತಿತ್ತು, ಕಾಡಿನಲ್ಲಿ ಸಣ್ಣ ಕಡ್ಡಿ ಮುರಿದರು ರವೀಂದ್ರನ ಜಂಘಾಬಲವೆ ನಡುಗಿದಂತೆ ಆಗುತ್ತಿತ್ತು. ಭಯದ ಭೀತಿಯಲ್ಲಿ ಭಾಗ್ಯಲಕ್ಷ್ಮಿ ಡಾಬಾ ದಾಟಿ ಜಂಬಳ್ಳಿ ತಿರ್ಕಾಸ್ ಬಂದಿದ್ದೆ ರವೀಂದ್ರನಿಗೆ ತಿಳಿಯಲಿಲ್ಲ. ಮೈಯೆಲ್ಲಾ ಬೆವರಿ ನೀರಾಗಿತ್ತು. ಮನಸ್ಸಿನಲ್ಲಿ ಯಾವ ಯಾವ ದೆವ್ವದ ಸಿನಿಮಾಗಳು ಒಂದು ಕ್ಷಣ ಮಿಂಚಿ ಮರೆಯಾದವು. ಜಂಬಳ್ಳಿ ತಿರ್ಕಾಸ್ ಇಂದ ಮುಂದೆ ಹೋದರೆ ಒಂದು ಹಳೆಯ ಬಸ್ಸ್ಟಾಪ್. ನೋಡಲು ಥೇಟ್‌ ದೆವ್ವದ ಮನೆಯಂತೆ ಇದ್ದ ಬಸ್ಸ್ಟಾಪ್ ಸುತ್ತಲು ದಟ್ಟವಾದ ಕಾಡು, ಬಸ್ಸ್ಟಾಪ್ ನ ಗೋಡೆಗಳ ಮೇಲೆ ಕಾಲೇಜು ಹುಡುಗರ ಪ್ರೇಮ ಕಾವ್ಯಗಳು, ಆಶ್ಲೀಲ ಪದಗಳು, ಫೋನ್ ನಂಬರ್‌ಗಳು ಹೀಗೆ ಎನ್ ಎನೋ ಗೀಚಿದ್ದವು. ಜೀರುಂಡೆಗಳ ಕ್ರಾಚ್ ಕ್ರಾಚ್ ಕ್ರಾಚ್ ಎಂಬ ಚೀರಾಟ. ಬಸ್ಸ್ಟಾಪ್ ನ ಎಡಕ್ಕೆ ರವೀಂದ್ರನ ಊರಿಗೆ ದಾರಿಯಿತ್ತು. ಮರದ ಕೊಂಬೆಗಳು ರಸ್ತೆ ಕಡೆಗೆ ಬಾಗಿದ್ದವು. ಮಿಂಚು ಹುಳುಗಳು ಕಾಡಿನ ಮಧ್ಯ ತಾರೆಗಳಂತೆ ಪಳ ಪಳನೆ ಮಿಂಚುತ್ತಿದ್ದವು. ಇಂತಹ ಕ್ಷಣ ಒಬ್ಬ ಕವಿಗೆ ಅನುಭವಕ್ಕೆ ಬಂದಿದ್ದರೆ ಒಂದು ರೊಮ್ಯಾಂಟಿಕ್‌ ಕಾವ್ಯವನ್ನೇ ಬರೆದುಬಿಡುತ್ತಿದ್ದರೇನೋ. ಆದರೆ ರವೀಂದ್ರನ ಪಾಡು ಆ ಸುಂದರ ಘಳಿಗೆಯನ್ನು ಆಸ್ವಾಧಿಸುವುದಿರಲಿ, ಯಾವುದೇ ಅನಾಹುತಾಗಳಾಗದೇ ಮನೆಗೆ ಹೋದರೆ ಸಾಕು ಎನ್ನುವಂತಾಗಿತ್ತು.

ರವೀಂದ್ರನ ಸೈಕಲ್ ಜಂಬಳ್ಳಿ ಬಸ್ಸ್ಟಾಪ್ ಬಳಿ ಬರುತ್ತಿದ್ದಂತೆ ಚಕ್ಕ್ ಎಂದು ಅವನಿಗೆ ತಿಳಿಯದಂತೆ ಅವನ ಕೈಗಳು ಬ್ರೇಕ್ ಒತ್ತಿದ್ದವು. ಮುಂದೆ ನೋಡಿದರೆ ಕತ್ತಲಲ್ಲಿ ಆಸ್ಪಸ್ಟವಾಗಿ ಕಾಣುತಿದ್ದ ಇಪ್ಪತ್ತರ ಹರೆಯದ ಹುಡುಗಿ. ಅವಳ ಸೌಂದರ್ಯ ಎಂತಹ ಯುವಕರನ್ನು ಮರಳು ಮಾಡದಿರಲೂ ಸಾಧ್ಯವೆ ಇರಲಿಲ್ಲ. ಹಣೆಯ ಮೇಲೆ ಸಣ್ಣ ಬೊಟ್ಟು, ನೀಳಾಕಾರದ ಕೇಶ ಒಟ್ನಲ್ಲಿ ಸೌಂದರ್ಯ ದೇವತೆ. ರವೀಂದ್ರ ನಡುಗುತ್ತಲೆ ಯಾರು ನೀನು ಎಂದು ಕೇಳಿದ. "ನಾನು ಇಲ್ಲೇ ಜಂಬಳ್ಳಿಯವಳು ಲಾಸ್ಟ್ ಬಸ್‌ಗೆ ಬಂದೆ ಅಣ್ಣ ಬರ್ತೀನಿ ಅಂದಿದ್ದ ಇನ್ನು ಬಂದಿಲ್ಲ ಎನ್ನುತ್ತಿದಂತೆಯೆ ಓಹ್ ಈಗ ಶಿವಮೊಗ್ಗದಿಂದ ಬಂತಲ್ಲ ಆ ಬಸ್ಅಲ್ಲಿ ಬಂದ್ರ ಎಂದು ರವೀಂದ್ರ ಕೇಳಿದ. " ಹಾ ಈಗ ಬಂದೆ ಅಣ್ಣ ಇನ್ನು ಬಂದಿಲ್ಲ ಅದ್ಕೆ ಇಲ್ಲೇ ಕಾಯ್ತಾ ಇದ್ದೆ ಅಂದಳು. ಹಾಗಾದ್ರೆ ನಾನು ಕೊಡಸೆಗೆ ಹೋಗೋವನು ಬನ್ನಿ ನಿಮ್ಗೆ ನಿಮ್ ರೋಡ್ ತನಕ ಬಿಟ್ಟು ನಾನು ಕೊಡಸೆಗೆ ಹೋಗ್ತಿನಿ ಎನ್ನುವಷ್ಟರಲ್ಲೇ ಸೈಕಲ್ ಕ್ಯಾರಿಯರ್ ಮೇಲೆ ಹುಡುಗಿ ಕುಳಿತಿದ್ದಳು. ಸರಿ ಹೊರಡೋಣ ಎಂದು ರವೀಂದ್ರ ಸೈಕಲ್ ತುಳಿಯುತ್ತ "ಏನ್ರಿ ನಿಮ್ ಹೆಸರು ಹೇಳೆ ಇಲ್ಲ ಎಂದು ಕೇಳಿದ. "ಹೆಸ್ರ್ ತಗೊಂಡ್ ಏನ್ ಮಾಡೋಕೆ ಆಗುತ್ತೆ ಬಿಡಿ ಎಂದು ಹುಡುಗಿಯ ಮಧುರ ಸ್ವರ ಬಂತು. "ಅಲ್ರಿ ಆದ್ರೂ ನೀವ್ ಈತರ ಊರಿಗೆಲ್ಲ ಬರ್ಬೇಕಾದ್ರೆ ಬೇಗ ಹೊರಡಬೇಕು. ಇಲ್ಲ ಕಾಡಲ್ಲಿ ಒಬ್ರೇ ಕಾಯೋಕೆ ಆಗುತ್ತಾ.? ನೋಡಿ ಒಂದ್ ನರಮನ್ಸ್ರಾದ್ರು ಇದಾರಾ ಇಲ್ಲಿ ಎಂದು ರವೀಂದ್ರ ಭಯದ ದ್ವನಿಯಲ್ಲಿ ಹೇಳಿದ. ರವೀಂದ್ರ ಎಷ್ಟೋ ಬಾರಿ ಡಬಲ್ ನಲ್ಲಿ ಹೋಗಿದ್ದ ಅದರೆ ಈಗಾ ಮಾತ್ರ ಸೈಕಲ್ ತುಂಬ ಭಾರಾ ಅನ್ಸಿದ್ರು ಅದರ ಬಗ್ಗೆ ಏನು ಮಾತಾಡದೆ ಸೈಕಲ್ ಪೆಡಲ್ಗಳನ್ನು ಶಕ್ತಿ ಬಿಟ್ಟು ತುಳಿಯುತ್ತಿದ್ದ; ಕಾರಣ ಸೌಂದರ್ಯ ದೇವತೆ ಸೈಕಲ್ ಹಿಂದೆ ಇದ್ದಳು.

ಭಯ ಇದ್ದರು ಸುಂದರವಾದ ಹುಡುಗಿಯನ್ನು ಬಿಟ್ಟು ಹೋಗಲು ಮನಸು ಬರಲು ಸಾಧ್ಯವೇ? ಹಾಗೆ ಹೋಗುತ್ತಿದಂತೆ ಹುಡುಗಿ ಇಲ್ಲೇ ನಿಲ್ಸಿ ಇಲ್ಲಿಂದ ಮನೆಗ್ ಹತ್ರ ಆಗುತ್ತೆ ಎಂದು ಹೇಳಿದಾಗ ರವೀಂದ್ರ ಸೈಕಲ್ ನಿಲ್ಲಿಸಿದ. ಸರಿ ಹುಷಾರಾಗಿ ಹೋಗಿ ಎಂದು ಹೇಳುತ್ತ ರವೀಂದ್ರ ಪೆಡಲ್ ತುಳಿಯಲು ಕಾಲು ಇಡುತ್ತಿದ್ದಂತೆ ಹಿಂದಿನಿಂದ ವಿಚಿತ್ರ ದ್ವನಿ ಇಂದ ಥ್ಯಾಂಕ್ಸ್ ಎಂದು ಹೇಳಿತು. ರವೀಂದ್ರ ಹಿಂದೆ ತಿರುಗುತ್ತಿದಂತೆ ವಿಚಿತ್ರ ರೀತಿಯ 8 ಅಡಿ ಎತ್ತರದ ಹುಡುಗಿ, ಮೈ ತುಂಬ ಹರಡಿದ ಕೂದಲು ರವೀಂದ್ರನಿಗೆ ಎದೆ ಝಲ್ ಎಂದು ಜೀವವೇ ಹೋದಂಗ್ಆಯ್ತು. "ಮತ್ತೆ ಹಿಂದಿನಿಂದ ವಿಚಿತ್ರ ದ್ವನಿ, ಹಿಂದೆ ತಿರಗಬೇಡ ಹೋಗು ಬದ್ಕೋ.." ಎನ್ನುವಷ್ಟರಲ್ಲಿ ರವೀಂದ್ರ ಯಾವುದೋ ವಿಶೇಷ ಶಕ್ತಿ ಮೈಮೇಲೆ ಬಂದವನ ಹಾಗೆ ಸೈಕಲ್ ಪೆಡಲ್ ತುಳಿಯಲು ಶುರು ಮಾಡಿದವ ಮತ್ತೆ ನಿಂತಿದ್ದು ಮನೆಯಲ್ಲಿಯೇ.

ಬೆಳಿಗ್ಗೆ ಎದ್ದು ನೋಡಿದಾಗ ರವೀಂದ್ರನ ಕಾಲುಗಳಲ್ಲಿ ತರಚಲು ಗಾಯಗಳು, ಸೈಕಲ್ ತುಳಿದ ರಭಸಕ್ಕೆ ಚೈನ್ ತುಂಡಾಗಿತ್ತು. ರಾತ್ರಿ ಘಟನೆ ರವೀಂದ್ರನ ಮೈ ನಡುಗಿಸುತಿತ್ತು. ಹೆದರಿ ಜ್ವರದಿಂದ ಒಂದು ವಾರ ಮಲಗಿದ್ದ. ಇದಾದ ನಂತರ ರವೀಂದ್ರ ಒಂದು ರೀತಿಯ ಚಿಂತೆಯಲ್ಲೇ ಇರುತ್ತಿದ್ದ.

ಸ್ವಲ್ಪ ದಿನಗಳ ನಂತರ ಸರಸ್ವತಿ ಗಂಡ ಸುರೇಶ ಕೊಡಸೆ ಮಾವನ ಮನೆಗೆ ಬಂದಿದ್ದ. ಸುರೇಶ ತನ್ನ ಲಾರಿ ಒಂದನ್ನು ಇಟ್ಟುಕೊಂಡು ಮರಳು ಸಾಗಿಸುತಿದ್ದ. ಹೀಗೆ ಮರಳು ಜಂಬಳ್ಳಿಯ ಗೌಡರ ಮನೆಗೆ ಹಾಕುವ ಆರ್ಡರ್ ಇದ್ದಿದ್ದರಿಂದ ಕೊಡಸೆ ಮಾವನ ಮನೆಗೆ ಹೋಗಿ ಊಟ ಮಾಡಿ ಮನೆಗೆ ಹೋಗುವುದು ಎಂದು ಯೋಚಿಸಿ ಮಾವನ ಮನೆಗೆ ಬಂದಿದ್ದ. ರಾತ್ರಿ ಊಟ ಮುಗಿಸಿದ ನಂತರ "ಮಾವ ನನ್ ಮನೆಗೆ ಹೋಗ್ಬೇಕು ಬೆಳಿಗ್ಗೆ ಒಂದ್ ಆರ್ಡರ್ ಇತ್ತು ಹಾಗಾಗಿ ಈಗ್ಲೆ ಹೋಗ್ಬೇಕು ಅಂತ ಹೇಳಿ ಲಾರ್ರಿ ಡ್ರೈವರ್ ಕರ್ಕೊಂಡ್ ಹೊರಟ. ಹೊರಡುವಾಗಲೆ ಗಂಟೆ "12" ರ ಗಡಿ ದಾಟಿತ್ತು. ಗೋರ್ರೋ ಎಂದು ಸದ್ದು ಮಾಡುತ್ತಾ ಲಾರಿ ಜಂಬಳ್ಳಿ ಕಡೆಗೆ ಸಾಗಿತು. ಕೊಡಸೆ ಪ್ಲಾಂಟೇಶನ್‌ ದಾಟಿ ಜಂಬಳ್ಳಿ ಬಸ್ಸ್ಟಾಪ್ ಬಳಿ ಲಾರಿ ಬರುತ್ತಿದ್ದಂತೆ ಲಾರಿ ಬೆಳಕಿಗೆ ಅಡ್ಡವಾಗಿ ಒಂದು ಹುಡುಗಿ ಕಾಡಿನ ಒಳಹೊಕ್ಕಳು. ರವೀಂದ್ರ ನೋಡಿದ ವಿಚಿತ್ರ ಆಕೃತಿಯ ಹುಡುಗಿಯ ಹೊಲಿಕೆಯೇ..! ನಿಳಕೇಶ, 8 ಅಡಿ ಎತ್ತರ, ಬಿಳಿ ಸೀರೆ ನೋಡನೋಡುತ್ತಿದ್ದಂತೆ ಕಾಡಿನಲ್ಲಿ ಲೀನವಾಗಿತ್ತು. ಸುರೇಶನಿಗೂ ಜೀವ ಬಾಯಿಗೆ ಬಂದಂಗೆ ಆಯ್ತು.

"ಲೋ ಬೇಗ ಹೋಗೋ ಯಾವ್ದೋ ಹೆಣ್ಣ್ ದೆವ್ವ ಜೀವ ತೆಗ್ದ್ ಬಿಡುತ್ತೆ ಎಂದು ಸುರೇಶ ಕಿರುಚುವ ದ್ವನಿಯಲ್ಲಿ ಡ್ರೈವರ್ ಗೆ ಹೇಳಿದ.." ಸುರೇಶ ಹೇಳುವ ಮೊದಲೇ ಡ್ರೈವರ್ ವೇಗವನ್ನು ಹೆಚ್ಚಿಸಿ ಲಾರಿ ತೀರ್ಥಳ್ಳಿ ರಸ್ತೆ ಕಡೆಗೆ ತಿರುಗಿಸಿದ್ದ. ಗೊರ್ರೋ ಗೋರ್ರೋ ಎಂದು ಹೋಗುತ್ತಿದ್ದ ಲಾರ್ರಿಯ ಕಿರುಚಾಟದ ನಡುವೆಯು ವಿಚಿತ್ರ ದ್ವನಿ ಇಂದ " ಬೋಳಿಮಕ್ಳ ಬದ್ಕೊಂಡ್ರಿ, ನಿಂತ್ರೆ ನಿಮ್ ಹೆಣ ಬೀಳುತ್ತೆ ಎಂದು ಕೂಗು ಕೇಳುತ್ತಿದ್ದವು.." ಸುರೇಶ ಮತ್ತವನ ಡ್ರೈವರ್‌ನ ಬಿಸಿ ಉಸಿರು ಲಾರಿ ಗ್ಲಾಸ್ ಮೇಲೆ ಹಿಮದಂತೆ ಹೆಪ್ಪುಗಟ್ಟಿತ್ತು.
ಭಯದಲ್ಲಿ ವೇಗದಮಿತಿ ಹೆಚ್ಚಿತ್ತು. ಕಣ್ಮುಚ್ಚಿ ಬಿಡುವಷ್ಟರಲ್ಲಿ ಲಾರಿ ರಾಜು ಮಾಸ್ಟರ್ ಮನೆ ದಾಟಿ ಶಿವಪುರದ ದೇವಸ್ಥಾನದ ಬಳಿ ಬಂದಿತ್ತು. ಅಲ್ಲೇ ಲಾರಿಯನ್ನು ದೇವಸ್ಥಾನದ ಪಕ್ಕ ನಿಲ್ಲಿಸಿ ಇಬ್ಬರು ದೇವರಿಗೆ ಕೈ ಮುಗಿದು ಜಾಗ ಖಾಲಿ ಮಾಡಿದರು.

ಈ ಘಟನೆಗಳು ನಡೆದ ಮೇಲೆ ಮತ್ತೆ ಕಥೆಗಳು ಸೃಷ್ಟಿ ಯಾಗತೊಡಗಿದವು. ಒಬೊಬ್ಬ್ಬರು ಒಂದು ರೀತಿ ಕಥೆ ಹೆಣೆಯುತಿದ್ದರು. ಗದ್ದೆ ತೋಟದ ಕೆಲಸಕ್ಕೆ ಬಂದವರಿಗೆ ಈ ಕಥೆಗಳು ಹಬ್ಬವಾಗಿದ್ದವು. ನಡೆದ ಕಥೆಗೆ ಇವರ ಸ್ವಂತ ಕಥೆ ಸೇರಿಸಿ ಮತ್ತೊಂದು ಹಾದಿಗೆ ಕೊಂಡೊಯ್ಯಿತಿದ್ದರು. ಈ ಕಥೆಗಳೆಲ್ಲ ಅಪ್ಪಣ್ಣ ಮತ್ತು ರಾಮಣ್ಣನ ಕಿವಿಗೂ ಬಿದ್ದಿತ್ತು. ಅದಕ್ಕೆ ಅಪ್ಪಣ್ಣ ಜಂಬಳ್ಳಿ ಬಸ್ಸ್ಟಾಪ್ ದೆವ್ವದ್ ವಿಚಾರ ತೆಗ್ದಿದ್ದು.

ರಾಮಣ್ಣನ ಬೈಕ್ ಗುಡೂರ್ರ್ ಎಂದು ಸಾಗುತ್ತಲೇ ಇತ್ತು. ಇನ್ನು ಸಾಗುವ ದಾರಿ ತುಂಬ ಇತ್ತು. ಕತ್ತಲು ಇವರನ್ನು ಸುತ್ತುವರೆದಿತ್ತು, ಕಾಡು ಇವರ ಗೋಳನ್ನು ನೋಡಿ ಹಾಸ್ಯ ಮಾಡಿ ನಗುವಂತೆ ಭಾಸವಾಗುತಿತ್ತು. ರವೀಂದ್ರ ಮತ್ತು ಸುರೇಶನ ಕಥೆಗಳನ್ನು ಮೆಲಕು ಹಾಕುತ್ತ ಹಾಕುತ್ತ ಜಂಬಳ್ಳಿ ಕೂಡಾ ಸಮೀಪಿಸುತಿತ್ತು. "ಅಲ್ಲೋ ರಾಮಣ್ಣ ದೆವ್ವ ಭೂತ ಎಲ್ಲಾ ನಿಜವಾಗ್ಲು ಇರೋದ್ ಹೌದನಾ? ನನ್ ಎಷ್ಟೋ ಸರಿ ರಾತ್ರಿ ಲಾಸ್ಟ್ ಬಸ್ಗೆ ಬಂದು ಜಂಬಳ್ಳಿಲಿ ಇಳ್ದಿದೀನಿ ಒಂದ್ ಸಾರಿನೂ ಹಂಗರೇ ನಂಗ್ ಕಾಣೊದ್ದ್ ಬೇಡ್ವ! "ಏನ್ ಹೇಳ್ತಿದಿಯ ಅಪ್ಪಣ್ಣ, ಅಂದ್ರೆ ನಿಂಗ್ ದೆವ್ವ ಕಾಣಬೇಕಿತ್ತು ಹಂಗಾದ್ರೆ ಎಂದು ರಾಮಣ್ಣ ಮಾತು ಮುಗಿಸಿದ. ಹಂಗಲ್ಲ ರಾಮಣ್ಣ ಜನ ಮಾತಾಡೋದ್ ನೋಡಿದ್ರೆ ನಾವ್ ದಾರಿಲಿ ಹೋಗೋ ಹಾಗ್ ಇಲ್ಲಾ, ದೈಯದ್ ಕಾಟ ಇವ್ರೇ ಸೃಷ್ಟಿ ಮಾಡಿದರೋ! ಇಲ್ಲಾ ನಿಜ್ವಾಗ್ಲೂ ದೆವ್ವ ಭೂತ ಇದಾವ ಒಂದು ತಿಳಿಯಲ್ಲ ನೋಡು.."

ಇವರ ಹರಟೆಯ ಬರದಲ್ಲಿ ಜಂಬಳ್ಳಿ ತಿರ್ಕಾಸ್ ಬಂದಿದ್ದೆ ಗೊತ್ತಾಗಿರಲಿಲ್ಲ. ಇನ್ನೇನು ತಿರ್ಕಾಸ್ ದಾಟಿ ಮುಂದೆ ಹೋಗುತ್ತಿದ್ದಂತೆಯೆ ಗೋರ್ರೋ ಗೋರ್ರೋ ಎಂದು ಗೋಗರೆಯವು ಬೈಕ್ನ ಶಬ್ದದ ನಡುವೆಯು ಇಬ್ಬರ ಎದೆ ಬಡಿತ ಕಾಡಿನಲ್ಲಿ ಪ್ರತಿದ್ವನಿಸುತಿತ್ತು. ಬಸ್ಸ್ಟಾಪ್ ಬಳಿ ಹೋಗುತ್ತಿದ್ದಂತೆ ರಾಮಣ್ಣನ ಬೈಕ್ ದೀಪದ ಎದುರು ಒಂದು ಹೆಂಗಸು ಹೋಗುತ್ತಿರುವುದನ್ನು ಕಂಡು ರಾಮಣ್ಣ ದಂಗಾಗಿ ಚಕ್ಕನೆ ಬ್ರೇಕ್ ಅದುಮಿದ. ಬೈಕ್ ಗೋರ್ರೋ ಎನ್ನುತ್ತಲೇ ನಿಂತಿತು. ನಿಧಾನ ಸ್ವರಃದಲ್ಲಿ "ಅಪ್ಪಣ್ಣ ಯಾರೋ ಈ ಹೆಂಗ್ಸು ಇಷ್ಟ್ ಹೊತ್ತಲ್ಲಿ ಒಂದೇ ಹೋಗ್ತಿದೆ, ದೇವ್ವನ ಏನೋ ಎಂದು ರಾಮಣ್ಣ ಭಯಬೀತಾನಾದ. ಅಪ್ಪಣ್ಣ ಭಯದಲ್ಲಿ ನಡಗುತ್ತಾ "ರಾಮಣ್ಣ ನಮ್ಮ್ ಕಥೆ ಮುಗೀತು ತಗ ಇವತ್ತ್, ನಮುನ್ ಸುಮ್ನೆ ಬಿಡಲ್ಲ ಈ ದಯ್ಯ; ಆದ್ರೂ ಅಪ್ಪಣ್ಣ ನಂಗೆ ಯಾರೋ ತಲೆ ಕೆಟ್ಟು ಹೋಗ್ತಾ ಇರೋ ಹಂಗೆ ಕಾಣ್ತದೆ! ಏನಾದ್ರೂ ಆಗ್ಲಿ ಧೈರ್ಯ ಮಾಡಿ ಕೇಳೇ ಬಿಡೋಣ ಎಂದು ರಾಮಣ್ಣ ಹೇಳಿದರು ಅವನ ದ್ವನಿಯಲ್ಲಿ ನಡುಕ ಇತ್ತು.."


"ನಿಂಗೇನ್ ಹುಚ್ಚ! ಹೋಗ್ತಿರೋ ಮಾರಿನ ಮೈ ಮೇಲೆ ಎಳ್ಕೊಂಡ್ಂಗೆ ಆಗ್ತದೆ; ಅಲ್ಲಾ ಅಪ್ಪಣ್ಣ ಏನಾದ್ರೂ ಆಗ್ ಹೋಗ್ಲಿ ಒಂದ್ ಮಾತು ಕೇಳಿ ನೋಡಣ ದೇವ್ರ್ ನೆನಸ್ಕೊಂಡು ಎಂದು ರಾಮಣ್ಣ ಮೆಲ್ಲ ದ್ವನಿಯಲ್ಲೇ ಹೇಳಿದ.."

ಇಬ್ಬರ ಸಂಭಾಷಣೆ ಮುಗಿಯೋ ಅಷ್ಟ್ರಲ್ಲಿ ಹೆಂಗಸು ಮುಂದೆ ಸಾಗಿದ್ದಳು. "ಸರಿ ಏನಾದ್ರೂ ಆಗ್ಲಿ ಇಷ್ಟ್ ಆದ್ಮೇಲೆ ದೇವ್ರ್ ಮೇಲೆ ಬಾರ ಹಾಕಿ ಹೋಗಿ ಮಾತಾಡ್ಸನ ತಗ ಎಂದ ಅಪ್ಪಣ್ಣ.." ಗಾಳಿ ತಣ್ಣನೆ ಬೀಸುತ್ತಿತು ಮರದ ಕೊಂಬೆಗಳು ಗಾಳಿಯ ತಾಳಕ್ಕೆ ತಕ್ಕಂತೆ ಬೀಸುತಿದ್ದವು. ರಾಮಣ್ಣ ಬೈಕ್ ಕಿಕ್ ತುಳಿದ ಗುಡೂರ್ರ್ ಎಂದು ಬೈಕ್ ದೀಪ ಹತ್ತಿ ಹಾಗೆ ನಂದಿತು. ಮತ್ತೆ ಜೋರಾಗಿ ತುಳಿದ ಗುಡೂರ್ರ್ ಗುಡೂರ್ರ್ ಎಂದು ತನ್ನ ರಾಗ ಹಾಡುತ್ತಾ ಸ್ಟಾರ್ಟ್ ಆಯಿತು. ಹೆಂಗಸು ನಿಲ್ಲದೆ ಹಿಂದು ತಿರುಗದೆ ಸಾಗುತ್ತಲೇ ಇದ್ದಳು. ರಾಮಣ್ಣನ ಬೈಕ್ ಹೆಂಗಸಿನತ್ತ ಹೊರಟಿತು.

ಬೈಕ್ ಹೆಂಗಸಿನ ಪಕ್ಕ ಹೋದಾಗಲು ಇವರನ್ನು ಲೆಕ್ಕಿಸದೆ ಮುಂದೆ ಹೋಗುತ್ತಲೆ ಇದ್ದಳು. ಕೆಂಪು ಬಣ್ಣದ ಸೀರೆ, ಮೂಡಿಗೆ ಮಲ್ಲಿಗೆ ಹೂವು, ತಲೆ ಮೇಲೆ ಒಂದು ಬಿಳಿ ಸೆರಗು ಒಂದು "45" ರ ಹರೆಯ ಆ ಹೆಂಗಸಿಗೆ. ರಾಮಣ್ಣ ಮತ್ತು ಅಪ್ಪಣ್ಣನಿಗೆ ಸ್ವಲ್ಪ ದೈರ್ಯ ಬಂತು. ಕಾರಣ ಇವರು ಕೇಳಿದ್ದ ಕಥೆಗಳಲ್ಲಿ "20" ರ ಹರೆಯದ ಹುಡಿಗಿ, ಹಾಗಾಗಿ ಭಯ ಇದ್ದರೂ ಸ್ವಲ್ಪ ದೈರ್ಯ ಮಾಡಿ ರಾಮಣ್ಣ ಕೇಳಿದ. "ಒಯ್ ನಿಲ್ರಿ ಇಲ್ಲಿ ಯಾರ್ ನೀವು ಈ ಮಧ್ಯ ರಾತ್ರಿ ಎಲ್ಲಿಗ್ ಒಬ್ರೇ ಹೋಗ್ತಾ ಇದೀರ ಎಂದು ಭಯದಲ್ಲೇ ರಾಮಣ್ಣ ಕೇಳಿದ.." ಹೆಂಗಸು ನಡಿಯುತ್ತ ಇದ್ದವಳು ಅಲ್ಲೆ ನಿಂತಳು ಇಬ್ಬರಿಗೂ ಭಯ ಆದರೂ ದೇವರ ಜಪ ಮನಸಿನಲ್ಲಿ ಮಾಡುತ್ತಾ ಅಪ್ಪಣ್ಣ ಕೇಳಿದ.

"ಯಾಕ್ರೀ ನಿಮಗೇನ್ ಹೊತ್ತು ಗೊತ್ತು ಇಲ್ಲನು, ಈ ರಾತ್ರಿ ಒಂಟಿ ಹೆಂಗ್ಸು ಅದು ಈ ರೋಡಲ್ಲಿ ಹೋಗ್ತಾ ಇದಿರಲ! ಈ ರೋಡು ಮೊದ್ಲೇ ಸರಿ ಇಲ್ಲ ದೆವ್ವದ್ ಕಾಟ ಅಂತೇ ನಿಮಗೇನ್ ಮಾತ್ ಬರಲ್ವಾ! ಎಂದು ಒಂದೆ ಉಸಿರಲ್ಲಿ ಹೇಳಿ ಮುಗಿಸಿದ. ಹೆಂಗಸು ಇವರನ್ನೇ ನೋಡುತ್ತಾ "ಸ್ವಾಮಿ ನಾನು ಗರ್ತಿಕೆರೆ ಅವ್ಳು ನಮ್ ಅಕ್ಕನ ಮನೆಗೆ ಹೋಗಿದ್ದೆ ರಿಪ್ಪೀನ್ಪೇಟೆ ತಂಕ ಬಸ್ನಲ್ಲಿ ಬಂದೆ ಈ ಕಡೆ ಕೊನೆ ಬಸ್ ಹೊರಡು ಹೋಗಿದೆ ಅಂದ್ರು, ಅದ್ಕೆ ಇನ್ನೇನ್ ಮಾಡೋದ್ ಅಂತ ಅಲ್ಲಿಂದ ನಡ್ಕಂಡೆ ಹೊಂಟೆ ಎಂದು ಉತ್ತರಿಸಿದಳು. "ಅಲ್ರಿ ಆದ್ರೂ ಅಲ್ಲೆ ಪೇಟೆಲೆ ಎಲ್ಲಾದ್ರು ಇದ್ಧು ನಾಳೆ ಬೆಳಿಗ್ಗೆ ಬರೋಕ್ ಆಗಿಲ್ವ! ಈ ಜಾಗ ಸರಿ ಇಲ್ಲಾ ಏನಾದ್ರೂ ಹೆಚ್ಚು ಕಮ್ಮಿ ಆದ್ರೆ ಯಾರ್ ಗತಿ ಲಾರಿ ಪಾರಿ ಅವ್ರ್ ಹೋಗೋರ್ ಏನಾದ್ರೂ ಹೆಚ್ಚು ಕಮ್ಮಿ ಮಾಡಿದ್ರೆ ಯಾರ್ ಕೇಳೋಕ್ ಬರ್ತಾರೆ ಇಲ್ಲಿ ಎಂದು ರಾಮಣ್ಣ ಘದರಿಸುವ ದ್ವನಿಯಲ್ಲೇ ಕೇಳಿದ. "ಸ್ವಾಮಿ ಪೇಟೆಲಿ ಯಾರ್ ಮನೆ ಬಾಗ್ಲು ತಟ್ಟನ ಹೇಳಿ! ಏನಾದ್ರೂ ಆಗ್ಲಿ ಅಂತ ನಡ್ಕಂಡೆ ಹೊಂಟೆ ಇನ್ನೇನ್ ಹಮಾ ದೂರ ಏನ್ ಇಲ್ಲಾ ಬಿಡಿ ಇನ್ನೊಂದ್ ಎರ್ಡ್ ಮೈಲೂ ಹೋದ್ರೆ ನಮ್ ಮನೆ ಬತಿತೆ ಎನ್ನುತ್ತ ಮುಖ ಕೆಳಗೆ ಹಾಕಿದಳು.."

"ರಾಮಣ್ಣ ಒಂದ್ ಕೆಲ್ಸ ಮಾಡನ ಮನೆ ತಂಕ ಬಿಟ್ಟೆ ಹೋಗ್ಬಿಡಾಣ ಮತ್ತೆ ಏನಾದ್ರೂ ಹೆಚ್ಚು ಕಮ್ಮಿ ಆದ್ರೆ ಯಾರ್ ನೋಡೋದ್ ಈ ಒಂಟಿ ಹೆಂಗ್ಸ್ನ ಎಂದು ಅಪ್ಪಣ್ಣ ಹೇಳಿದಾಗ ಸರಿ ತಗ ಹಂಗೆ ಮಾಡಾನ ಎಂದು ರಾಮಣ್ಣ ಉತ್ತರಿಸಿದ. " ಆಗಲೇ ನಡುರಾತ್ರಿ ಗಂಟೆ ಒಂದರ ಆಸುಪಾಸಿನಲ್ಲಿತ್ತು, ರಸ್ತೆಯಲ್ಲಿ ಯಾವ ಸದ್ದು ಇರಲಿಲ್ಲ. ಕಾಡಿನಲ್ಲಿ ಅದೇ ಜೀರುಂಡೆಗಳ ಕ್ರಾಚ್ ಕ್ರಾಚ್ ಕಿರುಚಾಟ. ಅಪ್ಪಣ್ಣ ಮತ್ತು ರಾಮಣ್ಣನಿಗೆ ಭಯ ಸ್ವಲ್ಪ ಕಡಿಮೆ ಆಗಿದ್ದರೂ ಮನದಲ್ಲಿ ಆತಂಕ ಇದ್ದೆ ಇತ್ತು. ಹೆಂಗಸು ಇವರಿಂದ ಸಹಾಯ ಆಗುವ ನಿರೀಕ್ಷೆಯಲ್ಲೇ ನಿಂತಿದ್ದಳು.

"ರಾಮಣ್ಣ ಇನ್ನು ಜಾಸ್ತಿ ಹೊತ್ತು ಇಲ್ಲಿ ಇರೋದ್ ಒಳ್ಳೇದ್ ಅಲ್ಲ ಬೈಕ್ ಸ್ಟಾರ್ಟ್ ಮಾಡು ಬಿಟ್ ಬರನ ಎನ್ನುತ್ತ ಬೈಕ್ ಹಿಂದಿನ ಸೀಟ್ ಇಂದ ಅಪ್ಪಣ್ಣ ಕೆಳಗಿಳದ. ಏನಮ್ಮ ನಿನ್ ಹೆಸ್ರೆ ಕೇಳೋದ್ ಮರೆತು ಹೋಯ್ತು ನೋಡು ಎಂದು ರಾಮಣ್ಣ ಕೇಳಿದಾಗ! "ಹೆಸ್ರ್ ತಗಂಡ್ ಏನ್ ಮಾಡದ್ ತಗಳಿ ಸ್ವಾಮಿ, ನಂಗು ಅಲ್ಲಿಂದ ಬಂದು ಕೈ ಕಾಲ್ ಎಲ್ಲಾ ಬಿದ್ದ್ ಹೋಗ್ಯಾವೆ ಎಂದು ಬೇಸರದ ದ್ವನಿಯಲ್ಲಿ ನುಡಿದಳು.." "ಹೌದು ಅಷ್ಟ ದೂರದಿಂದ ನಡ್ಕೋಂಡ್ ಬಂದ್ರೆ ಇನ್ನೇನ್ ಆಗ್ತದೆ! ಸರಿ ಈಗ ಬೈಕ್ ಹತ್ತು ನಿನ್ನ ನಿಮ್ ಮನೆ ಹತ್ರ ಬಿಟ್ ಬರ್ತಿವಿ ಎನ್ನುತ್ತ ರಾಮಣ್ಣ ಬೈಕ್ ಕಿಕ್ ತುಳಿದಾಗ ಬೈಕ್ ಗುಡೂರ್ರ್ ಎಂದು ಆಫ್ ಆಯ್ತು.. "ತೋಥ್ಹ್ ಈ ಬಡ್ಡಿಮಗಂದ್ ಒಂದ್ ದಿನ ಆದ್ರೂ ಒಂದ್ ಕಿಕ್ಗೆ ಸ್ಟಾರ್ಟ್ ಆಗೋದ್ ಬೇಡ್ವಾ!" ಅಂತ ಬೈಕ್ನ ಶಪಿಸುತ್ತ ಮತ್ತೆ ತುಳಿದ ತನ್ನ ಮಾಮೂಲಿ ದಿನಚರಿಯಂತೆ ಬೈಕ್ ಗುಡೂರ್ರ್ ಗುಡೂರ್ರ್ ಎಂದು ತನ್ನ ಕುರುಡು ದೀಪ ಹತ್ತಿಸಿಕೊಂಡು ಹೊರಡಲು ಸಿದ್ದವಾಯ್ತು.

"ಏನಮ್ಮ ಇನ್ನು ಎನ್ ಯೋಚ್ನೆ ಮಾಡ್ತಾ ನಿಂತಿದ್ಯಾ ಹತ್ತು ಬೈಕ್ನ ಎಂದು ಹೆಂಗಸಿಗೆ ಅಪ್ಪಣ್ಣ ಹೇಳಿದ. " ಸರಿ ಸ್ವಾಮಿ ಎನ್ನುತ್ತ ತನ್ನ ಸೀರೆ ಮೊಣಕಾಲುವರೆಗೂ ಎತ್ತಿ ಅಪ್ಪಣ್ಣನ ಭುಜದ ಸಹಾಯದಿಂದ ಬೈಕ್ ಏರಿದಳು. ಅಪ್ಪಣ್ಣನು ಹೇಗೋ ಕಷ್ಟ ಪಟ್ಟು ಚೂರುಜಾಗದಲ್ಲೇ ಕುಳಿತು "ಸರಿ ರಾಮಣ್ಣ ಕುಂತ್ಕೊಂಡ್ವಿ ನಿಧಾನ ಹೊರಡು ಎನ್ನುತ್ತ ಬೈಕ್ ಹಿಂದಿನ ಕಬ್ಬಿಣದ ಸಣ್ಣ ಸರಳನ್ನು ಹಿಡಿದು ಕುಳಿತ.." ಗೋರ್ರೋ ಗೋರ್ರೋ ಎಂದು ತನ್ನ ಸಂಗೀತ ಹೇಳುತ್ತ ಬೈಕ್ ಹೊರಟಿತು.

ಅಪ್ಪಣ್ಣನ ತಲೆಯಲ್ಲಿ ಹಿಂದೆ ನಡೆದ ಘಟನೆಗಳು ಒಂದು ಬಾರಿ ಹಾದು ಹೋದವು. ಅವುಗಳನ್ನು ನೆನಸಿಕೊಂಡಾಗ ಮತ್ತೆ ಭಯ ಅಪ್ಪಣ್ಣನನ್ನು ಆವರಿಸಿತು. ಮತ್ತೆ ಇಲ್ಲ ಸಲ್ಲದ ಆಲೋಚನೆಗಳು ತಲೆಗೆ ಹೊಕ್ಕವು. ಇದೆಲ್ಲಾ ಕನಸಾ ಅಥವಾ ನನಸಾ ಎಂದು ತನ್ನಲ್ಲೇ ತಾನು ಪ್ರಶ್ನೆ ಮಾಡಿಕೊಂಡು ಮನಸಲ್ಲೇ ಹೆಂಗಸಿನ ದೈರ್ಯಕ್ಕೆ ಮೆಚ್ಚಿಗೆ ಸೂಚಿಸಿದ. ಆದರೂ ಏನೋ ಒಂದು ರೀತಿಯ ಕಳವಳ.

ಸುಣ್ಣದಬಸ್ತಿ ಏರು ಹತ್ತಿ ಗರ್ತಿಕೆರೆಯತ್ತ ಬೈಕ್ ಸಾಗಿತ್ತು. ಗರ್ತಿಕೆರೆ, ಸಣ್ಣದಬಸ್ತಿ, ತೀರ್ಥಳ್ಳಿ ಹೋಗುವ ರಸ್ತೆಯಲ್ಲಿ ಸಿಗುವ ಊರುಗಳು. ಇನ್ನೇನು ಗರ್ತಿಕೆರೆ ಕಾಲೇಜು ಸಮೀಪದಲ್ಲಿತ್ತು ಅಷ್ಟ್ರಲ್ಲಿ ಹೆಂಗಸು "ಸ್ವಾಮಿ ಆ ಇಸ್ಕುಲ್ ಹತ್ರ ನಿಲ್ಸಿ ಅಲ್ಲಿಂದ ಒಳ್ಗೆ 4 ಹೆಜ್ಜೆ ಹಾಕಿದ್ರೆ ನಮ್ಮ್ ಮನೆ ಬರ್ತದೆ ನನ್ ಅಲ್ಲಿಂದ ಹೋಗ್ತಿನಿ ಎಂದು ಹೆಂಗಸು ಹೇಳಿದಳು.."
"ಅಲ್ಲಮ್ಮ ಮನೆ ಹತ್ರನೇ ಬಿಡ್ತಿವಿ ತಗ ಎಂದು ಅಪ್ಪಣ್ಣ ಮಾತು ಮುಗಿಸುವ ಅಷ್ಟ್ರಲ್ಲಿ ಹೆಂಗಸು ಇಲ್ಲ ಸ್ವಾಮಿ ನಂಗ್ ಇಲ್ಲೇ ಬಿಟ್ರೆ ಸಾಕು ನನ್ ಹೋಗ್ತಿನಿ ಎನ್ನುವ ಅಷ್ಟ್ರಲ್ಲಿ ಕಾಲೇಜು ಬಂದೆ ಬಿಟ್ಟಿತ್ತು.. ರಾಮಣ್ಣ ಬೈಕ್ ವೇಗ ನಿಯಂತ್ರಿಸಿ ರಸ್ತೆ ಇಂದ ಬೈಕ್ ಕೆಳಗೆ ಇಳಿಸಿ ಬ್ರೇಕ್ ಹಾಕಿ ನಿಲ್ಲಿಸುವಷ್ಟ್ರಲ್ಲಿ ಅಪ್ಪಣ್ಣ ಬೈಕ್ನಿಂದ ಇಳಿದಿದ್ದ. "ಏನಮ್ಮ ಇಲ್ಲೇ ಸಾಕ ಹಾಗಾದ್ರೆ ಹೋಗ್ತಿಯ ಮನೆಗೆ ಇಲ್ಲಾ ಬಿಟ್ಟೆ ಬರ್ಬೇಕಾ ಎಂದು ರಾಮಣ್ಣ ಕೇಳಿದಾಗ, ಸಾಕ್ ಸ್ವಾಮಿ ಇಷ್ಟ್ ಉಪಕಾರ ಮಾಡಿದ್ರಲಾ ಸಾಕು ನನ್ ಇನ್ ಹೋಗ್ತಿನಿ ತಗಳಿ" ಎನ್ನುತ್ತ ಅಪ್ಪಣ್ಣನ ಭುಜದ ಸಹಾಯದಿಂದ ಬೈಕ್ನಿಂದ ಕೆಳಗಿಳಿದಳು. "ಹುಷಾರ್ ಕಣಮ್ಮ ಇನ್ಮೇಲೆ ಇಷ್ಟ್ ಹೊತ್ತಲ್ಲಿ ಹೊರ್ಗೆಲ್ಲ ಹೋಗ್ಬೇಡ ಎನ್ನುತ್ತ ಅಪ್ಪಣ್ಣ ಬೈಕ್ ಹಿಂದೆ ಹತ್ತಿ ಕುಳಿತ." ರಾಮಣ್ಣನ ಬೈಕ್ ಮಾಮೂಲಿಯಂತೆ ಎರಡನೇ ಕಿಕ್ಗೆ ಸ್ಟಾರ್ಟ್ ಆಗಿ ತನ್ನ ಸಂಗೀತ ಶುರು ಮಾಡಿತು.

"ರಾಮಣ್ಣ ತಿರಗ್ಸು ಹೋಗಣ ಎಂದು ಅಪ್ಪಣ್ಣ ಹೇಳಿದಾಗ ನೋಡೋ ಆ ಹೆಂಗ್ಸು ಹೋಯ್ತ ಎಂದು ಹೇಳುತ್ತಲೇ ರಾಮಣ್ಣ ಬೈಕ್ ತಿರುಗಿಸಿದ." ಹಾ ರಾಮಣ್ಣ ಹೋದ್ಳು ಅಂತ ಕಾಣ್ತದೆ ನಾವ್ ಹೋಗಣ ನಡಿ ಈಗಾಗ್ಲೆ ಘಂಟೆ 2 ಆಗ್ತಾ ಬಂತು ಎಂದ ಅಪ್ಪಣ್ಣ" ಬೈಕ್ ನಿಧಾನವಾಗಿ ಚಲಿಸತೊಡಗಿತು.

"ಅಲ್ಲೋ ರಾಮಣ್ಣ ಅಷ್ಟ ದೂರದಿಂದ ಬಂದ್ವಿ ಅದು ಆ ಜಂಬಳ್ಳಿ ಬಸ್ಟ್ಯಾಂಡ್ ಹತ್ರನೇ ಹೆಂಗ್ಸು ಸಿಗ್ಬೇಕಾ? ಯಾಕ್ ಹಿಂದೆನೇ ಸಿಗ್ಬರ್ದಿತ್ತ ಎಂದು ಅಪ್ಪಣ್ಣನನ್ನು ಪ್ರಶ್ನೆ ಮಾಡಿದ; "ನಾನು ಅದೇ ಯೋಚ್ನೆ ಮಾಡ್ತಿದ್ದೆ ಅಪ್ಪಣ್ಣ ಆದ್ರೆ ಈಗ್ ನಮಗೆನ್ ತೊಂದ್ರೆ ಆಗಿಲ್ಲ ಅಲ ಬಿಡು ಎಂದು ರಾಮಣ್ಣ ಉತ್ತರಿಸಿದ." ಅದು ಹೌದ್ ತಗ ನಾವ್ ಮೊದ್ಲು ಮನೆ ಸೇರನ ಇಲ್ಲಾ ಮತ್ ಯಾರಾದ್ರೂ ಸಿಕ್ರೆ ಕಷ್ಟ! ಬೆಳಿಗ್ಗೆ ಬೇರೆ ತೋಟದ್ ಕೆಲ್ಸ ಇದಾವೆ ಎನ್ನುವಾಗ ಜಂಬಳ್ಳಿ ಬಸ್ಸ್ಟಾಪ್ ದಾಟಿ ಬೈಕ್ ಮನೆಯತ್ತ ಸಾಗಿತ್ತು.


ಬೆಳಗಾಗುವ ಹೊತ್ತಿನಲ್ಲಿ ರಾತ್ರಿ ನಡೆದ ಘಟನೆ ಊರಿನವರ ಬಾಯಿಂದ ಬಾಯಿಗೆ ಹರಿದಾಡಿತ್ತು. ಎಲ್ಲಾ ವಿಚಾರ ಮಾಡಿದಾಗ ಗರ್ತಿಕೆರೆ ಕಾಲೇಜು ಬಳಿ ಯಾವ ಮನೆಯು ಇರಲಿಲ್ಲ. ರಾಮಣ್ಣ ಮತ್ತು ಅಪ್ಪಣ್ಣ ವರ್ಣನೇ ಮಾಡಿದ ರೀತಿಯ ಯಾವ ಹೆಂಗಸು ಅಲ್ಲಿರಲಿಲ್ಲ. ರಾಮಣ್ಣ ಮತ್ತು ಅಪ್ಪಣ್ಣನಿಗೆ ಜಂಬಳ್ಳಿ ಬಸ್ಟ್ಯಾಂಡ್ ಬಳಿ ಸಿಕ್ಕ ಹೆಂಗಸು ನಿಗೂಢವಾಗೆ ಉಳಿದಳು. ಜಂಬಳ್ಳಿ ಬಸ್ಟ್ಯಾಂಡ್ ಕೂಡ ಎಲ್ಲರ ಭಯದ ತಾಣವಾಗೆ ಉಳಿಯಿತು.