Click here to Download MyLang App

ಚೂಪು ಮೂತಿಯ ಇಲಿ - ಬರೆದವರು : ಕಾರ್ತಿಕ್ ಭಟ್

ಅದು ಧಾರವಾಡದ ಚೂಪು ಮೂತಿಯ ಇಲಿ, ನಗರದ ಖಾನಾವಳಿಯೊಂದರ ಅಡುಗೆ ಕೋಣೆಯಲ್ಲಿ ತನ್ನ ಸಾಮ್ರಾಜ್ಯ ಮಾಡಿಕೊಂಡಿತ್ತು. ಬಿಲದಲ್ಲಿ ಅಡಗಿ ಕುಳಿತಿದ್ದ ಇತರ ಪುಕ್ಕಲು ಇಲಿಗಳಿಗೂ ಇದೇ ಇಲಿ ಆಹಾರ ಪೂರೈಕೆ ಮಾಡುತ್ತಿತ್ತು. ರಾತ್ರಿ ಖಾನಾವಳಿಯ ಬಾಗಿಲು ಹಾಕಿದ್ದೇ ತಡ ಈ ಇಲಿ ಅಡುಗೆ ಮನೆಗೆ ರಾಜಾರೋಷವಾಗಿ ಕಾಲಿಟ್ಟು ಉಳಿದಿದ್ದ ರೊಟ್ಟಿ ಚಪಾತಿ, ಕಾಳಿನ ಪಲ್ಲೆ ಎಲ್ಲವನ್ನೂ ಕಬಳಿಸಿ ಬಿಲದ ಇತರ ಇಲಿಗಳಿಗೂ ಎತ್ತೊಯ್ಯುತ್ತಿತ್ತು. ಎಲ್ಲವಕ್ಕೂ ಅದೇ ಆಹಾರ ಒಗ್ಗಿಹೋಗಿತ್ತು. ಹೀಗೆ ಸುಮಾರು ದಿನಗಳಿಂದ ಖಾನಾವಳಿಯ ಮಾಲೀಕರು ಈ ಇಲಿಯ ಹಾವಳಿಯನ್ನು ಸಹಿಸಿಕೊಂಡು ಹೋಗುತ್ತಿದ್ದರು. ಬರುಬರುತ್ತ ಎಲ್ಲ ಇಲಿಗಳೂ ಸೇರಿ ಹಾವಳಿಯಿಟ್ಟು ಖಾನಾವಳಿಯ ಅಡುಗೆ ಮನೆಯನ್ನು ರಾತ್ರಿ ಕಳೆಯುವುದರಲ್ಲಿ ಲೂಟಿಹೊಡೆದು ಬಿಡಲು ಆರಂಭಿಸಿದವು. ಹೀಗೆ ಒಮ್ಮೆ ಖಾನಾವಳಿಯ ಬಾಗಿಲು ಹಾಕಿ ಮಾಲೀಕ ಇನ್ನೇನು ಹೊರಹೋದ ಎನ್ನುವಷ್ಟರಲ್ಲಿ ಈ ಚೂಪು ಮೂತಿಯ ಇಲಿ ಚಂಗನೆ ಹಾರಿ ಚಪಾತಿ ರೊಟ್ಟಿಗಳನ್ನು ಎಸೆದಿದ್ದ‌ ಬಕೇಟಿನ ಬಳಿ ಬಂತು. ಇತರ ಇಲಿಗಳು ಬೇರೆಬೇರೆ ಜಾಗಗಳಿಗೆ ಲಗ್ಗೆ ಹಾಕಿದವು, ಹೋಟೇಲ್ ಮಾಲೀಕ ಹೊರಗಡೆಯೇ ಇರುವುದಾಗಿ ಅವನ ಮಾತುಗಳನ್ನು ಕೇಳಿ ಈ ಚೂಪು ಮೂತಿಯ ಇಲಿ ಖಚಿತಪಡಿಸಿಕೊಂಡಿತು.
ಹೊರಗೆ ಮಾಲೀಕ ಯಾರದ್ದೂ ಜೊತೆ..
"ನಮ್ ಖಾನಾವಳಿಯಾಗ ಬಾಳ ಇಲಿ ಕಾಟ ಏನ್ ಮಾಡೋದ್ ತಿಳಿವಲ್ತ " ಎಂದು ಹೇಳಿದ್ದು ಕೇಳಿ ಈ ಚೂಪು ಮೂತಿಯ ಕಿವಿ ನೆಟ್ಟಗಾಯಿತು. ಮುಂದೆನು ಹೇಳಬಹುದು ಎಂದು ಬಾಗಿಲಿನ ಬಳಿ ಕೇಳುತ್ತ ನಿಂತಿತು.

ಮತ್ತೊಬ್ಬ,
"ನಮ್ಮ ಅಂಗಡ್ಯಾಗೂ ಹಿಂಗ ಇದ್ವ ಎಲ್ಲಾ ಇಸಾ ಹಾಕಿ ಕೊಂದಬಿಟ್ನಿ... ನೀನು ಹಂಗ ಮಾಡ.. ಸುಮ್ಮ ಮತ್ತ ಬಾಳಾದ್ರ ನಿಂಗ ತಲಿಬ್ಯಾನಿ ನೋಡ್" ಅಂದ.

ಅದನ್ನು ಕೇಳಿದ್ದೆ ತಡ ಈ ಚೂಪು ಮೂತಿಯ ಇಲಿ ಕಣ್ಣು ಅಗಲ ಮಾಡಿಕೊಂಡು ಖಾನಾವಳಿಯ ಮಾಲೀಕ ಏನು ಮಾಡುತ್ತಾನೆ ಎಂದು ಕೇಳಲು ಆರಂಭಿಸಿತು.

ಆಗ ಖಾನಾವಳಿಯ ಮಾಲೀಕ.
"ಹಂಗ ಮಾಡ ಬೇಕಾತ್ ನೋಡಿಗ್" ಅಂದ. ತಕ್ಷಣವೇ ಈ ಇಲಿಗೆ ತಳಮಳ‌ಶುರುವಾಯಿತು. ‌ನಾಳೆ ಇವನು ಪಕ್ಕಾ ನಮಗೆ ವಿಷ ಹಾಕುತ್ತಾನೆ ಎನ್ನುತ್ತ ಬಕೇಟಿನಲ್ಲಿನ ರೊಟ್ಟಿಯ ತುಂಡನ್ನು ತಿನ್ನತೊಡಗಿತು. ಇವತ್ತೇ ಇಲ್ಲಿನ ಕೊನೆ ಊಟ ಎಂಬ ಬೇಸರಕ್ಕೆ ಅದು ಒಳಗಾಗಿತ್ತು. ಕೊಂಚ ಹೊತ್ತಾಗಿತ್ತು. ಎಲ್ಲರೂ ಹೋದರು ಎಂದು ಕೊಂಡಿದ್ದ ಇಲಿಗೆ ಮತ್ತೆ ಮಾತು ಕೇಳಲು ಆರಂಭವಾಯಿತು.
ಮತ್ತೊಬ್ಬ,
"ಇದ ನೋಡಪಾ ನಾ ಇಟ್ಟಿದ್ದ ನಮ್ಮ ಅಂಗಡಿಯೊಳಗ್.. ಮಗಂದ ಎಲ್ಲ ಇಲಿನೂ ಬೆಳಿಗ್ಗೆ ಅನ್ನದ್ರಾಗ ಸತ್ತಬಿದ್ದಿದ್ವು.. ತೊಗೊ ನೀನು ಈಗ ಹಾಕ ನಾಳೆಂದ್ರ ಮಜಾ ನೋಡ್" ಎಂದು ಇಲಿಗೆ ಹಾಕುವ ವಿಷದ ಪ್ಯಾಕ್ ಕೊಟ್ಟ.
ಈ ಮಾತು ಕೇಳುತ್ತಿದ್ದಂತೆಯೇ ಚೂಪುಮೂತಿಯ ಇಲಿ ಬಕೇಟಿನಿಂದ ಹಾರಿ ತನ್ನ ಬಿಲದ ಕಡೆಗೆ ಓಡಲು ಆರಂಭಿಸಿತು. ಕೆಲವೇ ಕ್ಷಣಗಳಲ್ಲಿ ಮಾಲೀಕ ಬಾಗಿಲು ತೆಗೆದ, ಅದನ್ನರಿಯದ ಇತರ ಇಲಿಗಳು ಅತ್ತಿತ್ತ ಓಡಲು ಶುರುಮಾಡಿದವು. ಈ ಚೂಪುಮೂತಿಯ ಇಲಿ ಓಡಿ ಬಿಲದ ಬಳಿ ಬರುತ್ತಿತ್ತು. ಒಳ‌ಬಂದ ಆ ಮಾಲೀಕ ಇಲಿಗಳನ್ನು ಕಂಡು ಹೊಡೆಯಲು ಮುಂದಾದ ಕೆಲವಷ್ಟು ಇಲಿಗಳು ಅವನ ಹೊಡೆತಕ್ಕೆ ಸಿಕ್ಕು ಕಣ್ಣೆದುರೇ ಸತ್ತಿದ್ದನ್ನು ನೋಡಿ ಚೂಪುಮೂತಿಯ ಇಲಿಗೆ ಭಯ ಹೆಚ್ಚಾಯಿತು ಇನ್ನು ಇಲ್ಲಿರುವುದು ಒಳಿತಲ್ಲ ಎಂದು ಅರಿತು, ವೇಗವಾಗಿ ಬಾಗಿಲಿನ ಬಳಿ ಓಡಿ ಬಂತು. ಅತ್ತಿತ್ತ ನೋಡಿ ರಸ್ತೆಯಲ್ಲಿ ನಿಲ್ಲಿಸಿದ್ದ, ಯಾವುದೋ ಟಂಟಂನ ಸಂಧಿಯಲ್ಲಿ ಅಡಗಿ ಕುಳಿತು ಬಿಟ್ಟಿತು. ತನ್ನ ಸ್ನೇಹಿತರೂ ಬರುತ್ತಾರೆಯೇ ಎಂದು ಇನ್ನೇನು ಖಾನಾವಳಿಯ ಬಳಿ ನೋಡುವುದೇ ತಡ ಟಂಟಂ ಹೊರಟೇಬಿಟ್ಟಿತು. ತನ್ನ ಸ್ನೇಹಿತರನ್ನು ಬಿಟ್ಟು ದೂರ ಎಲ್ಲೋ ಹೊರಟಿರುವುದು ಚೂಪುಮೂತಿಯ ಇಲಿಗೆ ಸಹಿಸಲಾಗಲಿಲ್ಲ. ಒಂದಷ್ಟು ನಿಮಿಷ ಕಳೆದಿತ್ತು. ಹೊರಟಿದ್ದ ಟಂಟಂ ಒಮ್ಮಲೇ ನಿಂತಿತು. ಅಬ್ಬ ನಿಂತಿತಲ್ಲ ಎಂದು ನಿಟ್ಟುಸಿರುಬಿಟ್ಟ ಇಲಿ ಪುಣ್ಯಕ್ಕೆ ಬೀಳಲಿಲ್ಲ ಎಂದು ಸಮಾಧಾನ ಪಟ್ಟು ಕೆಳಗಿಳಿಯಿತು‌. ಕೆಲವೇ ಕ್ಷಣಗಳಲ್ಲಿ ಟಂಟಂ ಪುನಃ ಅಲ್ಲಿಂದ ಹೊರಟುಹೋಯಿತು. ಯಾವ ಜಾಗ ಎಂದು ನೋಡಿದ ಇಲಿಗೆ ತಾನು ರಸ್ತೆಯ ಮಧ್ಯ ಇಳಿದಿರುವುದು ತಿಳಿಯಿತು. ಎರಡೂ ಬದಿಗಳಲ್ಲಿ ದೊಡ್ಡ ದೊಡ್ಡ ಬಸ್ಸು ಲಾರಿಗಳು ತಿರುಗುತ್ತಿದ್ದವು. ಇಲ್ಲೇ ಇದ್ದರೆ ಯಾವುದಾದರೂ ಗಾಡಿಯ ಕೆಳಗೆ ಸಿಕ್ಕಿ‌ ಸಾಯುತ್ತೇನೆ ಎಂದರಿತು ರಸ್ತೆಯ ಒಂದು ಅಂಚಿನ ಕಡೆಗೆ ಓಡಿ ಬಂತು. ದಡ ಸೇರಿ ಏನುಮಾಡುವುದು ಎಲ್ಲಿ ಹೋಗುವುದು ಎಂದು ಅತ್ತಿತ್ತ ನೋಡುತ್ತಿದ್ದ ಆ ಚೂಪುಮೂತಿಯ ಇಲಿಗೆ ಹಿಂದಿನಿಂದ ಯಾರೋ ಬಂದಂತಾಯಿತು. ತಿರುಗಿ ನೋಡಿದ ಇಲಿಗೆ ದೊಡ್ಡ ದೊಡ್ಡ ಮೀಸೆ, ಚಾಕುವಿನಂತ ಕೋರೆ ಹಲ್ಲುಗಳಿದ್ದ ದೊಡ್ಡ ಮೊಳ ಬೆಕ್ಕು ತನ್ನ ಕೈಯಿಂದ ಹೊಡೆಯಲು ಬರುತ್ತಿತ್ತು. ಮಹಾಗಣಪತಿ ಕಾಪಾಡು ಎನ್ನುತ್ತ ಇಲಿ ದಿಕ್ಕಾಪಾಲಾಗಿ ಓಡಲು ಆರಂಭಿಸಿತು. ಸುಮಾರು ದೂರದವರೆಗೂ ಆ ಬೆಕ್ಕು ಇದನ್ನು ಅಟ್ಟಿಸಿಕೊಂಡು ಬಂತು. ಹುಬ್ಬಳ್ಳಿ ಕಲಘಟಗಿ ಕತ್ರಿಯ ಟೋಲ್ ನಾಕಾದ ಬಳಿ ನಿಂತಿದ್ದ ಒಂದು sleeper coach ಬಸ್ಸಿಗೆ ಚೂಪು‌ಮೂತಿಯ ಇಲಿ ಹೊಕ್ಕಿ ಬಿಟ್ಟಿತು. ಅದರ ಪುಣ್ಯಕ್ಕೆ ಅದು ಬಾಗಿಲಿನಿಂದ ಒಳ ನುಗ್ಗಿದ್ದು ಯಾರಿಗೂ ಸಹ ಕಾಣಲಿಲ್ಲ. ಅದರ ಹಿಂದೆಯೇ ಬಂದ ಬೆಕ್ಕು ತಾನೂ ಒಳಹೋಗಲು ಮೆಟ್ಟಿಲು ಏರಿತು ಎನ್ನುವಷ್ಟರಲ್ಲಿ ಯಾರೋ ಅದನ್ನು ಕಾಲಿನಲ್ಲಿ ದೂಡಿ ಹೊರದಬ್ಬಿದರು. ಬೇಟೆ ತಪ್ಪಿದ ಬೆಕ್ಕು ತನ್ನದೇ ಭಾಷೆಯಲ್ಲಿ ಬಯ್ಯುತ್ತ ಓಡಿಹೋಯಿತು. ಇತ್ತ ಯಾವುದೋ ಸೀಟಿನ ಕೆಳಗೆ ಹೋಗಿ ಚೂಪು ಮೂತಿಯ ಇಲಿ ಅಡಗಿ ಕುಳಿತಿತು. ಕೆಲ ನಿಮಿಷಗಳಲ್ಲಿ ಬಸ್ಸು ಕಲಘಟಗಿಯ ಬೈಪಾಸಿನ ಕಡೆಗೆ ಚಲಿಸಲು ಆರಂಭಿಸಿತು.
ಚೂಪು ಮೂತಿಯ ಇಲಿಗೆ ತಾನು ಎಲ್ಲಿಗೆ ಹೊರಟಿದ್ದೇನೆ ಎಂದು ತಿಳಿದಿರಲಿಲ್ಲ..
ಚಳಿಗಾಲದ ಸಮಯದಲ್ಲಿ ಸುಂಯ್ ಎಂದು ಬಸ್ಸು ಸಾಗುತ್ತಲಿತ್ತು. ಹುಬ್ಬಳ್ಳಿ , ಕಲಘಟಗಿ, ಯಲ್ಲಾಪುರ, ಅಂಕೋಲ, ಕುಮಟ, ಹೊನ್ನಾವರ,ಭಟ್ಕಳ, ಕುಂದಾಪುರ, ಉಡುಪಿ ನಿಲ್ದಾಣಗಳನ್ನು ದಾಟಿ ಬಸ್ಸು ಮಂಗಳೂರಿನತ್ತ ಸಾಗುತ್ತಲಿತ್ತು. ಬೆಳಗು ಸನಿಹದಲ್ಲಿದೆ. ಇತ್ತ ಬೇಸರದಿಂದಲೇ ಚೂಪು ಮೂತಿಯ ಇಲಿ ಎಲ್ಲಿ ಹೋಗುವುದು ಅಲ್ಲಿ ಏನು ಮಾಡುವುದು ಎಂದು ಯೋಚಿಸುತ್ತ ಕುಳಿತಿತ್ತು. ಬೆಳಗಿನ ಸಮಯ ಏಳಕ್ಕೆ ಬಸ್ಸು ಮಂಗಳೂರು ತಲುಪಿದೆ. ಕೆಲಕಾಲ ಹೊರಬಾರದೇ ಸುಮ್ಮನೆ ಒಳಗೇ ಕುಳಿತಿತ್ತು. ಒಳಗಿದ್ದ ಜನರೆಲ್ಲ ಒಬ್ಬರ‌ ಹಿಂದೆ ಒಬ್ಬರಂತೆ ಇಳಿದರು. ಎಲ್ಲರೂ ಇಳಿದರು ಎಂಬುದನ್ನು ಅರಿತ ಚೂಪು ಮೂತಿಯ ಇಲಿ ವೇಗವಾಗಿ ಓಡುತ್ತ ಬಾಗಿಲಿನಿಂದ ಹೊರಗೆ ಹಾರಿತು. ಬಸ್ಸುನಿಂತಿದ್ದ ರಸ್ತೆಯ ಬದಿಯ ಸಣ್ಣ ಹೊಟೇಲಿಗೆ ನುಗ್ಗಿ ಬಿಟ್ಟಿತು. ಅದಾಗಲೇ ಕೆಲವಷ್ಟು ಜನ ಅಲ್ಲಿ ಓಡಾಡುತ್ತಿದ್ದರು. ಅಂತೂ ಇಂತೂ ಕಷ್ಟಪಟ್ಟು ಮೂಲೆಯ ಒಂದು ಬಿಲಕ್ಕೆ ಹೊಕ್ಕಿತು. ಬಿಲದಿಂದ ಒಳ ಹೊಕ್ಕ ಇಲಿ ಅಬ್ಬ ಪ್ರಾಣ ಉಳಿಯಿತು ಎಂದು ನಿಟ್ಟುಸಿರು ಬಿಡುತ್ತ ಹೊರ ನೋಡುತ್ತಿತ್ತು. ಕೆಲ ನಿಮಿಷಗಳು ಕಳೆದವು ಚೂಪು ಮೂತಿಯ ಇಲಿ ಹಸಿವಿನಿಂದಾಗಿ ಅತ್ತಿತ್ತ ನೋಡುತ್ತ ಏನು ಮಾಡಲಿ ಎಂದು ಯೋಚಿಸುತ್ತಿತ್ತು. ನೋಡು ನೋಡುತ್ತ ಮೋಟು ಬಾಲದ ಕೆಲವಷ್ಟು ಇಲಿಗಳು ಬಿಲಕ್ಕೆ ಹೊಕ್ಕವು ಈ ಚೂಪು ಮೂತಿಯ ಇಲಿಯನ್ನು ನೋಡಿ ಒಂದು ಇಲಿ ಅರಚಲು ಆರಂಭಿಸಿತು...
"ಏ ಯಾರ್ ಮಾರಾಯಾ ನೀ...ಸಾವಾ... ಇಲ್ಲಿ ಎಂಥಕ್ಕ ಬಂದೆ... ಹೋಗ ಹೋಗ" ಎಂದು ಕೂಗಿತು...
ಎಲ್ಲ ಮೋಟು ಬಾಲದ ಇಲಿಗಳು ಈ ಚೂಪು ಮೂತಿ ಇಲಿಯ ಸುತ್ತ ನಿಂತು ಗುರಾಯಿಸತೊಡಗಿದವು. ಹೆದರಿದಂತ ನಿಂತಿದ್ದ ಈ ಇಲಿಯ ಬಳಿ ಬಂದ ಒಂದು ಇಲಿ
"ನಿ ಯಾರು ಮಾರಾಯಾ ಎಲ್ಲಿಂದ ಬಂದ್ಯಾ.... ಇದು ನಮ್ ಮನಿಯ... ಹೆರಗ ಹೋಗ" ಎಂದಿತು...

ಆಗ ಈ ಇಲಿ "ಗೊತ್ತಿದ್ದಿದ್ದಿಲ್ರಿ.... ಅಣ್ಣಾರ್ ಹೊಕ್ಕೆನ್ ಇರ್ರಿ... ಕಡಿಬ್ಯಾಡ್ರಿಪಾ.." ಎನ್ನುತ್ತ ಬಿಲದಿಂದ ಆಚೆ ನೋಡಿ ಯಾರು ಇರದನ್ನು ಖಚಿತ ಪಡಿಸಿಕೊಂಡು ಹೋಟೆಲಿನ ಹೊರಕ್ಕೆ ವೇಗವಾಗಿ ಓಡಿತು. ಓಡುತ್ತ ರಸ್ತೆಯ ಆಚೆ ಬಂದು ಒಂದು ಕಸದ ಗುಡ್ಡೆಯ ಹತ್ತಿರ ಬಂತು. ಅಲ್ಲೇ ಬಿದ್ದಿದ್ದ ಒಂದಷ್ಟು ಆಹಾರ ತುಂಡುಗಳನ್ನು ತಿಂದು ಹಸಿವು ನೀಗಿಸಿಕೊಂಡಿತು. ಅಂತೂ ಇರಲು ಒಂದು‌ ಜಾಗಸಿಕ್ಕತು ಎಂದು ಅಲ್ಲೇ ಕಸದ ಗುಡ್ಡೆಯಲ್ಲಿ ಒಂದು ಜಾಗ ನೋಡಿಕೊಂಡಿತು. ಹಾಯಾಗಿ ಅಲ್ಲಿಯೇ ಬಿದ್ದಿದ್ದ ತಿಂಡಿ ಚೂರುಗಳನ್ನು ತಿನ್ನುತ್ತ ಕುಳಿತಿದ್ದ ಈ ಚೂಪು ಮೂತಿಯ ಇಲಿಗೆ ಏನೋ ಸದ್ದು ಮಾಡುತ್ತ ಹತ್ತಿರವೇ ಬರುತ್ತಿರುವುದು ಅನುಭವಕ್ಕೆ ಬಂತು. ನೋಡು ನೋಡುತ್ತಲೇ ಎರಡು ದಾಂಡಿಗ ಹೆಗ್ಗಣಗಳು ಅದರ ಬಳಿ ಬಂದವು. ಕೋರೆ ಹಲ್ಲುಗಳಿದ್ದ ಹೆಗ್ಗಣಗಳು ಈ ಚೂಪು ಮೂತಿಯ ಇಲಿಗಳನ್ನು ನೋಡಿ ಅದನ್ನು ಕಚ್ಚಿಯೇ ಬಿಟ್ಟವು ಎನ್ನುವಷ್ಟರಲ್ಲಿ "ಅಣ್ಣಾರ ಬ್ಯಾಡ್ರಿ... ನಂಗ ಕಚ್ಚಾಕ ಹೋಗ್ ಬ್ಯಾಡ್ರಿ..‌ ಬಿಟ್ ಬಿಡ್ರಿ... " ಎಂದು ಚೂಪು ಮೂತಿಯ ಇಲಿ ಬೊಬ್ಬೆಹಾಕಿತು. ಸಿಟ್ಟಿನಿಂದ ಹತ್ತಿರ ಬಂದ ಒಂದು ಹೆಗ್ಗಣ "ಯಾವು....ಪಿದಾಯಿ ಪೋಲೆ..." ಎಂದು ತುಳುವಿನಲ್ಲಿ ಬಯ್ಯತ್ತ ಹೇಳಿತು. ಬದುಕಿದೆಯಾ ಬಡ ಜೀವ ಎನ್ನುತ್ತ ಚೂಪು ಮೂತಿಯ ಇಲಿ ಅಲ್ಲಿಂದ ಓಡಿ ಹೊರ ಬಂದಿತು. ಅತ್ತಿತ್ತ ನೋಡುತ್ತ ನೋಡುತ್ತ ರಸ್ತೆಯ ಒಂದು ಬದಿಯಿಂದ ಓಡಲು ಶುರುಮಾಡಿತು. ಸುಮಾರು ದೂರ ಓಡಿದ್ದ ಚೂಪು ಮೂತಿಯ ಇಲಿಗೆ ಸುಸ್ತು ಹೊಡಿಯಿತು. ಅಲ್ಲಿಯೆ ಪಕ್ಕದಲ್ಲಿದ್ದ ಕಟ್ಟಿಗೆ ರಾಶಿಯ ಸಂದಿಯೊಳಗೆ ಹೊಕ್ಕಿಕೊಂಡಿತು. ಸ್ವಲ್ಪಕಾಲ ಕಳೆಯುವುದರೊಳಗೆ ಒಂದು ಚುಚುಂದ್ರ(ಸಣ್ಣ ಗಾತ್ರದ ಇಲಿ) ತನ್ನ ಹತ್ತಾರು ಮರಿಗಳನ್ನು ಸೇರಿಸಿಕೊಂಡು ಹೊರಟಿತ್ತು. ಇವರ ಬಳಿ ಇದ್ದರೆ ಸಹಾಯ ಆಗಬಹುದು ಎಂದುಕೊಂಡು ಚೂಪುಮೂತಿಯ ಇಲಿ ಅವುಗಳ ಬಳಿ ಹೋಯಿತು. ಇದರ ಆಗಮನ ಕಂಡ ಚುಚುಂದ್ರದ ಮರಿಗಳು ಹೆದರಿ ಅದರ ಅಮ್ಮನ ಹಿಂದೆ ಅಡಗುತ್ತವೆ. ಯಾರು ಎಂದು ತಿರುಗಿ ನೋಡಿದ ಚುಚುಂದ್ರ ಈ ಚೂಪು ಮೂತಿಯ ಇಲಿಯನ್ನು ನೋಡಿ ಒಮ್ಮಲೆ ಹೆದರಿಸಲು ಬರುತ್ತದೆ. ಅದು ಹೆದರಿಸುತ್ತಿದೆ ಎಂದರಿತ ಈ ಚೂಪು ಮೂತಿಯ ಇಲಿ
"ಅಕ್ಕಾರ ನಾ ಏನು ಮಾಡಂಗಿಲ್ಲ ರೀ... ನಾನು ನಿಮ್ ಕೂಡ ಇರಬಹುದ ಏನ್ರಿ. ನಾ ಬ್ಯಾರೆ ಊರಿನವ ರೀ... ಇಲ್ಲಿ ಎಲ್ ಇರಬೇಕ ಗೊತ್ತಾಗವಲ್ತ್ರಿ" ಎಂದು ಹೇಳಿತು. ಆಗ ಆ ಚುಚುಂದ್ರ
"ಎಂಥ... ಅದೆಲ್ಲ ಆಗ್ಲಿಕ್ಕಿಲ್ಲ.... ಮಂಡೆ ಹಾಳ್ ಮಾಡ್ಬೇಡ್ ಮಾರಾಯಾ... ಮೊಳ ಬಂದ್ರೆ ಕೆಲಸೆಲ್ಲ ಹಾಳು". ಎಂದು ತನ್ನ ಮರಿಗಳ ಗುಂಪಿನೊಂದಿಗೆ ಮುಂದೆ ಹೋಗಿ ಬಿಟ್ಟಿತು.
ಮತ್ತೆ ಅದೇ ಕಟ್ಟಿಗೆ ರಾಶಿಯ ಬಳಿ ಬಂದ ಚೂಪು ಮೂತಿಯ ಇಲಿಗೆ, ಡಸಕ್ಕನೆ ಎರಡು ಮೊಳ ಬೆಕ್ಕುಗಳು ಕಾಣಿಸಿಕೊಂಡವು. ಎದ್ದು ಬಿದ್ದು ಆ ಇಲಿ ಕಟ್ಟಿಗೆ ರಾಶಿಯ ಪೂರ ಒಳಗೆ ಹೊಕ್ಕಿ ಕುಳಿತಿತು. ಇಲಿಯ ವಾಸನೆ ಗ್ರಹಿಸಿದ ಆ ಎರಡು ಮೊಳಗಳು ಬಾಲ ಎತ್ತಿಕೊಂಡು ಬಂದು ಆ ಕಟ್ಟಿಗೆಯ ರಾಶಿಯತ್ತ ಮೂಸಿ ಮೂಸಿ ನೋಡ ತೊಡಗಿದವು. ಇತ್ತ ಚೂಪು ಮೂತಿಯ ಇಲಿ ಜೀವ ಬಾಯಿಗೆ ಬಂದವರಂತೆ ಹೆದರಿ ಕುಳಿತಿತ್ತು. ಇಲಿಯ ವಾಸನೆ ಕಂಡುಹಿಡಿದ ಒಂದು ಮೊಳಬೆಕ್ಕು ತನ್ನ ಚೋಟ(ಪಂಜು)ನ್ನು ಕಟ್ಟಿಗೆಯ ಕಿಂಡಿಯಿಂದ ಒಳ ಹಾಕಿ ಹುಡ್ರ್ಯ್ಞಾಂ.... ಹುಡ್ರ್ಯ್ಞಾಂ.... ಎಂದು ತನ್ನ ಭಾಷೆಯಲ್ಲಿ ಏನೋ ಹೇಳತೊಡಗಿತು. ಬೆಕ್ಕಿನ ಚೋಟು ತನ್ನನ್ನು ಮುಟ್ಟಿಯೇ ಬಿಟ್ಟಿತು ಎಂದು ಹಿಂದೆ ಹಿಂದೆ ಹೊರಟಿದ್ದ ಚೂಪು ಮೂತಿಯ ಇಲಿಗೆ ಹಿಂದಿನಿಂದ ಏನೋ ಬಡಿದಂತಾಯಿತು. "ಅಯ್ಯೋ ಈ ಬದಿಯಿಂದ ಮತ್ತೊಂದು ಬೆಕ್ಕು ಬಂತು" ಎನ್ನುತ್ತ ಹಿಂತಿರುಗಿತು. ಅಲ್ಲಿ ನೋಡಿದರೆ ಇದರಷ್ಟೆ ಗಾತ್ರದ ಕಂದು ಬಣ್ಣದ ಅಗಲ ಕಿವಿಯ ಇಲಿಯೊಂದು ಹಾಯಾಗಿ ಕುಳಿತು ಏನೋ ತಿನ್ನುತ್ತಿತ್ತು. ಇದರಿಂದ ಬಡಿಸಿಕೊಂಡು ಕೊಂಚ ಹೆದರಿದ ಆ ಇಲಿ, ಈ ಇಲಿಯನ್ನು ನೋಡಿದ ಮೇಲೆ ಅದೂ ಕೂಡ ಇಲಿ ಎಂದು ತಿಳಿದು..
"ಬ್ಯಾವರ್ಶಿ.... ಎಂತ ಮರ್ಲ ಮಾರಾಯಾ ನಿಂಗೆ" ಎಂದಿತು. ಆಗ ಚೂಪು ಮೂತಿ ಇಲಿ "ತಪ್ಪಾತ್ರಿ ಅಣ್ಣಾರ ಗೊತ್ತಾಗ್ಲಿಲ್ರಿ ಬೆಕ್ಕ ಬಂದಿದ್ವಲ್ರಿ ಹೆದರಿ ಹಿಂಗ ಬಂದೆರಿ" ಎಂದಿತು...
ಆಗ ಆ ಅಗಲ ಕಿವಿಯ ಕಂದು ಇಲಿ " ಎಲ್ಲಿಯವ ಮಾರಾಯಾ ನೀ ಇದೆಂತ ಭಾಷೆ ಒಂದು ಸಹ ಅರ್ಥವಾಗ್ಲಿಕ್ಕಿಲ್ಲ... ಸಾವಾ... ಯಾವ್ ಊರಾ ನಿಂದು". ಆಗ ಚೂಪು ಮೂತಿಯ ಇಲಿ ತನ್ನ ಕಥೆಯನ್ನೆಲ್ಲ ಆ ಅಗಲ ಕಿವಿಯ ಕಂದು ಇಲಿಯ ಮುಂದೆ ಹೇಳಿಕೊಂಡಿತು.
ಚೂಪು ಮೂತಿಯ ಇಲಿಯ ಕಂಡು ಅಗಲ ಕಿವಿಯ ಕಂದು ಇಲಿ ಮರುಕ ಪಟ್ಟು
"ನನ್ ಮನೆಯಲ್ಲಿ ಎಲ್ಲ ಸಹ ಸಿಕ್ತದೆ. ನಾನು ಸಹ ಒಬ್ಬನೇ ಇದ್ದೇನೆ ಅಲ್ಲಿ" ಎಂದಿತು. ಖುಷಿಯಿಂದ ಚೂಪು ಮೂತಿಯ ಇಲಿ ಹೊರಗೆ ತೋರಿಸುತ್ತ
"ದೋಸ್ತ ಹೊರಗ ಬೆಕ್ಕ ಅದಾವಲ್ಲೊ ಏನ ಮಾಡೊದ್" ಎಂದಿತು.
"ಆ ಪುಚ್ಚೆ ಎಂಥ ಸಹ ಮಾಡುದಿಲ್ಲ.... ಬಾ.... ಬಲಪು..." ಎನ್ನುತ್ತ ಆ ಅಗಲ ಕಿವಿಯ ಇಲಿ ಹೊರಗಿಳಿದು ಓಡಲು ಶುರುಮಾಡಿತು.
ಹಾಗೂ ಹೀಗೂ ಧೈರ್ಯಮಾಡಿ ಚೂಪು ಮೂತಿಯ ಇಲಿ ಅದರ ಹಿಂದೆಯೆ ಓಡಿತು. ಇಲಿಗಳು ಓಡುತ್ತಿರುವುದನ್ನು ಕಂಡ ಬೆಕ್ಕುಗಳು ಅವನ್ನು ಅಟ್ಟಿಸಿಕೊಂಡು ಬರಲು ಆರಂಭಿಸಿದವು. ಹಿಂದೆಯಿದ್ದ ಚೂಪು ಮೂತಿಯ ಇಲಿ "ದೋಸ್ತ ಬೆಕ್ಕ ಬರಾಕತ್ತಾವೋ..." ಎಂದು ಕೂಗಲು ಶುರುಮಾಡಿತು. ಕಂದು ಬಣ್ಣದ ಇಲಿ ಓಡಿ ಹೋಗಿ ಮೀನೂಟದ ಹೋಟೇಲಿನ ಗೋಡೆಯ ಕಿಂಡಿಯಲ್ಲಿ ಹೊಕ್ಕಿಬಿಟ್ಟಿತು. ಇನ್ನೇನು ಬೆಕ್ಕು ಹಿಡಿದೇ ಬಿಟ್ಟಿತು ಎನ್ನುವಷ್ಟರಲ್ಲಿ ಚೂಪು ಮೂತಿಯ ಇಲಿಯೂ ಸಹ ಅದೇ ಬಿಲಕ್ಕೆ ಹೊಕ್ಕಿಬಿಟ್ಟಿತು. ಒಳ ಹೊಕ್ಕ ಚೂಪುಮೂತಿಯ ಇಲಿಗೆ ಅಬ್ಬ ಬದುಕಿದೆ ಎಂದು ನಿಟ್ಟುಸಿರು ಬಿಡುತ್ತ ಅಗಲ ಕಿವಿಯ ಇಲಿಯತ್ತ ನೋಡಿತು... ನಗುತ್ತ ಕುಳಿತಿದ್ದ ಅಗಲ ಕಿವಿಯ ಇಲಿಗೆ ಈ ಇಲಿ
"ಅಲ್ಲಪಾ ದೋಸ್ತ... ನಾ ಸ್ವಲ್ಪದ್ರಾಗ ಬೆಕ್ಕಿನ ಕಡೆ ಸಿಕ್ಕೊತಿದ್ದೆ.... ನೀ ನಗಾಕತ್ತಿಯಲ್ಲೋ...ಯಾಕೋ"...
ಆಗ ಅಗಲ ಕಿವಿಯ ಇಲಿ " ಮಸ್ತ ಗಮತ್ತ್ ಆಂಡ...? ಎಂಚ್ ಉಲ್ಲಾರ ?" ಎಂದು ಹೇಳಿತು....
ಹಣೆ ಚಚ್ಚಿಕೊಂಡ ಚೂಪು ಮೂತಿಯ ಇಲಿ "ಏನಪಾ ಇದ್ ನಂಗೇನು ತಿಳಿವಲ್ತಪಾ" ಎಂದಿತು.
ಅಗಲ ಕಿವಿಯ ಇಲಿ "ಅದು ನನ್ನ ಭಾಷೆ ಮಾರಾಯಾ... ನಿಂಗೆ ಅದು ಅರ್ಥ ಆಗ್ಲಿಕ್ಕಿಲ್ಲ... ಊಟ ಮಾಡ್ತೆಯಾ?" ಎಂದು ಕೇಳಿತು. ಅಹುದು ಎಂದು ತಲೆಯಾಡಿಸಿದ ಚೂಪು ಮೂತಿಯ ಇಲಿ ಸುಮ್ಮನೆ ಕುಳಿತಿತು. ಕೊಂಚ ಸಮಯದ ಬಳಿಕ ಅಗಲ‌ಕಿವಿಯ ಕಂದು ಬಣ್ಣದ ಇಲಿ ಹೋಟೇಲಿನ ಕಸದ ಬುಟ್ಟಿಯಿಂದ ಹೊಟ್ಟೆಯ ಭಾಗದ ಮಾಂಸವಿಲ್ಲದ ಬರಿ ತಲೆ ಮತ್ತು ಬಾಲವಿರುವ ಮೀನುಗಳ ಅವಶೇಷ ಎತ್ತಿಕೊಂಡು ಬಂದು ಈ ಚೂಪು ಮೂತಿಯ ಇಲಿಗೆ ನೀಡಿತು. ಅದರ ವಾಸನೆ ಕಂಡು ಚೂಪುಮೂತಿಯ ಇಲಿಗೆ ವಾಕರಿಕೆ ಬಂದಂತಾಯಿತು. "ಯಪ್ಪಾ ಏನಪಾ ಇದ್.... ಗಬ್ಬ ವಾಸನಿ... ಇದ ಬ್ಯಾಡೊ ನಂಗ್... ತರಕಾರಿಹಂತಾದ್ ಏನರ ಕೊಡೊಪಾ" ಎಂದಿತು. ಆಗ ಅಗಲ ಕಿವಿಯ ಇಲಿ "ಅದೆಲ್ಲ ಈಗ ಸಿಗ್ಲಿಕ್ಕಿಲ... ರಾತ್ರೆ ತೆಕ್ಕೊಂಡು ಬರುವಾ" ಎಂದಿತು. ಚೂಪು ಮೂತಿಯ ಇಲಿ ಆ ಮೀನಿನ ಅವಶೇಷ ತಿನ್ನದ್ದನ್ನು ನೋಡಿ ಈ ಇಲಿಯೆ ಅದನ್ನು ಕಬಳಿಸಿತು. ರಾತ್ರಿಯಾಗುತ್ತಿತ್ತು. ಅಗಲ‌ಕಿವಿಯ ಇಲಿ ಹೊಟೇಲಿನಿಂದ ಜನ ಖಾಲಿಯಾಗಿದ್ದಾರೆ ಎಂದು ಗಮನಿಸಿ ಅಡುಗೆ ಮನೆಗೆ ನುಗ್ಗಿ, ಒಂದಷ್ಟು ಹಸಿ ಮೀನು ಹಾಗೂ ತರಕಾರಿ ತುಂಡುಗಳನ್ನು ಎತ್ತಿಕೊಂಡು ಬಂತು. ಇತ್ತ ಹಸಿವಿನಿಂದ ಹಪಹಪಿಸುತ್ತಿದ್ದ ಚೂಪು ಮೂತಿಯ ಇಲಿ ತರಕಾರಿ ತುಂಡುಗಳನ್ನು ಕಂಡು ಗಬಗಬನೆ ತಿನ್ನತೊಡಗಿತು. ಆಗ ಆ ಕಂದು ಇಲಿ "ಎಂಥ ವಿಚಿತ್ರ ಮಾರಾಯಾ... ತಿನ್ಲಿಕ್ಕೆ ಮೀನ ಸಹ ಉಂಟು ನೀನು ತರಕಾರಿ ತಿಂತೆಯಲ್ಲ... ಎಂತ ಮರ್ಲ ನಿಂಗೆ"... ಆಗ ಚೂಪು ಮೂತಿಯ ಇಲಿ " ದೋಸ್ತ ಈ ಮೀನ ಎಲ್ಲ ನಾ ತಿಂದಿಲ್ಲಪಾ.... ನಂಗ ಇಲ್ಲಿ ಚಪಾತಿ ರೊಟ್ಟಿ ಸಿಗತ್ತೇನ ತಿನ್ನಾಕ್ " ಎಂದು ಕೇಳಿಕೊಂಡಿತು. ಚಪ್ಪರಿಸಿ ಮೀನು ತಿನ್ನುತ್ತಿದ್ದ ಅಗಲ‌ಕಿವಿಯ ಕಂದು ಇಲಿ ಒಂದು ಕ್ಷಣ ತಿನ್ನುವುದನ್ನು ನಿಲ್ಲಿಸಿ
"ಏನಾ ಚಪಾತಿ ರೊಟ್ಟಿಯಾ? ಎಂಕ್ ಅರ್ಥ ಆಯಿಜಿ" ಎಂದು ಗೊಣಗಿಕೊಂಡಿತು. ಆಗ ಚೂಪು ಮೂತಿಯ ಇಲಿ "ರೊಟ್ಟಿ ಚಪಾತಿಯಂದ್ರ ಹಿಟ್ಟಿಂದ ಮಾಡ್ತಾರಲ್ಲೊ... ತಿನ್ನಾಕ್ ಭಾರಿ ಇರತ್ತೊ..." ಎಂದು ವಿವರಣೆ ಕೊಟ್ಟಿತು. ಕಂದು ಇಲಿ "ಅದು ಇಲ್ಲಿ ಸಿಕ್ಕಲಿಕ್ಕಿಲ್ಲ ಮಾರಾಯಾ" ಎಂದಿತು. ಬೇರೆ ದಾರಿಯಿಲ್ಲದೇ ಚೂಪು ಮೂತಿಯ ಇಲಿ ಅದೇ ತರಕಾರಿ ತುಂಡುಗಳನ್ನು ತಿಂದು ಹೊಟ್ಟೆ ತುಂಬಿಸಿಕೊಂಡಿತು. ಹೀಗೆ ಕೆಲವಷ್ಟು ದಿನ ಕಳೆದಿತ್ತು. ಚೂಪು ಮೂತಿಯ ಇಲಿಗೆ ಅದೇಕೋ ಇಲ್ಲಿನ ಆಹಾರ ಒಗ್ಗಲಿಲ್ಲ , ಒಮ್ಮೆ ಅಗಲ ಕಿವಿಯ ಕಂದು ಇಲಿಯ ಬಳಿ "ದೋಸ್ತ ನಂಗ್ ಇಲ್ಲಿ ಊಟಾ ಸರಿ ಆಗವಲ್ತ. ನಂಗ್ ರೊಟ್ಟಿ ಚಪಾತಿ ತಿನ್ನಬೇಕ್ ಅನ್ಸಾತೇತಿ... ನಂಗ್ ಎಲ್ಲಿಂದರ ತಂದ ಕೊಡೊ" ಎಂದಿತು. ಮತ್ತೆ ಕಂದು ಇಲಿ "ಅಯ್ಯ ಕೊರಗಜ್ಜ ... ನೀನು ಹೇಳುದು ನಾ ಕಾಣೆ ಇಲ್ಲ ಅದೆಲ್ಲ ಇಲ್ಲಿ ಸಿಕ್ಕಲಿಕ್ಕಿಲ್ಲವೋ".... ಮತ್ತೆ ಅಳುಮುಖ ಮಾಡಿದ ಚೂಪು ಮೂತಿಯ ಇಲಿ
" ದೋಸ್ತ್... ನನಗೆ ಧಾರವಾಡ ಬಸ್ಸಿಗ್ ಹತ್ತಿಸಬಿಡೋ... ಹೊಳ್ಳಿ ಹೊಕ್ಕೆನ ನಾ ಧಾರವಾಡಕ್ಕ...ಕೈ ಮುಗಿತೇನಿಪಾ.... ನಂಗ್ ಇಲ್ಲಿ ಇರಾಕ ಆಗವಲ್ತ್" ಎಂದು ಬೇಡಿಕೊಂಡಿತು....
ಕೆಲಹೊತ್ತು ಯೋಚಿಸಿದ ಕಂದು ಇಲಿ "ಆಯ್ತು ಮಾರಾಯಾ ನಾಳೆ ನೀ ಹೊಗ್ತೆ ಆಯ್ತಾ... ಮಂಡೆ ಸಮಾ ಇಲ್ಲ ಇವಂಗೆ... ಪಿರಿಪಿರಿ ಗಿರಾಕಿ" ಎಂದು ಗೊಣಗಿತು.
ಮರುದಿನ ಬೆಳಿಗ್ಗೆ ಕಂದು ಇಲಿ
" ಏ ಮರ್ಲ ಹೋಗ್ವ ಬಾ" ಎಂದು ಚೂಪು ಮೂತಿಯ ಇಲಿಯನ್ನು ಕರೆದುಕೊಂಡು ಬಸ್ಸನ್ನು ಹಿಡಿಯಲು ಹೊರಟಿತು. ರಸ್ತೆಯ ಆ ಬದಿಯಲ್ಲಿ ಧಾರವಾಡ ಧಾರವಾಡ ಎನ್ನುತ್ತ ಕಂಡಕ್ಟರ್ ಕೂಗುತ್ತಿದ್ದ ತಕ್ಷಣ ಚುರುಕುಗೊಂಡ ಚೂಪು ಮೂತಿಯ ಇಲಿ ಓಡಲು ಅಣಿಯಾಯಿತು. ಆಗ ಕಂದು ಬಣ್ಣದ ಇಲಿ "ಪುಚ್ಚೆ ಬರ್ಕ ಮಾರಾಯಾ... ಬಲುಪು" ಎನ್ನುತ್ತ ಎಚ್ಚರಿಕೆಯಿಂದ ಕರೆದುಕೊಂಡು ಹೋಗಿ ಬಸ್ಸಿನ ಬಳಿ ಬಿಟ್ಟಿತು. ಖುಷಿಯಿಂದ ಚೂಪುಮೂತಿಯ ಇಲಿ ಅಗಲ ಕಿವಿಯ ಕಂದು ಬಣ್ಣದ ಇಲಿಗೆ ಟಾಟಾ ಮಾಡುತ್ತ ಒಳಹೊಕ್ಕಿ ಅಡಗಿ ಕುಳಿತಿತು...
ಕೊಂಚ ಸಮಯದ ಬಳಿಕ ಹೊರಟ ಬಸ್ಸನ್ನು ನೋಡುತ್ತ ಕಂದು ಬಣ್ಣದ ಇಲಿ "ಮತ್ತೆ ಇಂತ ಮಳ್ಳ ಸಿಕ್ದೆ ಹೋಗ್ಲಿ" ಎನ್ನುತ್ತ ತನ್ನ ಬಿಲದತ್ತ ಓಡಿತು...‌


ನಮಗೂ ಸಹ ಹೀಗೆ, ಎಲ್ಲೆಲ್ಲೋ ತಿರುಗಿ ಏನೆಲ್ಲ ತರತರದ ಆಹಾರ ತಿಂದ ಮೇಲೆ ನಮ್ಮ ಊರೆ ನಮಗೆ ಆರಾಮದಾಯಕ ನಮ್ಮ ಊಟವೇ ನಮಗೆ ಹಿತ....
"ಏನೇನೋ ಕಂಡ ಮೇಲೂ ನಮ್ಮೂರೆ ನಮಗೇ ಮೇಲು...."