Click here to Download MyLang App

ಚಿರಂಜೀವಿ - ಬರೆದವರು : ಅಶೋಕ ತಾರದಾಳೆ | ಸಾಮಾಜಿಕ

ಬೆಳಗಿನ ಸಮಯ

“ಅಪ್ಪಾ ಮನುಷ್ಯರೇಕೆ ಕೆಲವೊಬ್ಬರು ಕೆಟ್ಟವರು , ಕೆಲವರು ಒಳ್ಳೆಯವರು. ಎಲ್ಲರೂ ಒಳ್ಳೆಯವರಾಗಿ ಇರಬಹುದಲ್ಲ” ಎಂದು ಕೇಳಿದನು ಚಿರಂಜೀವಿ
“ಆ.....ಎಲ್ಲ ಕಲ್ಲೂ ಶಿಲೆಯಾಗಬೇಕಿಲ್ಲ ಅಲ್ವಾ??” ಎಂದನು ನಾರಾಯಣ
“ಹುಟ್ಟಿದೊಡನೆ ಮಗುವಿಗೆ ಅಳಲು ಯಾರು ಹೇಳಿ ಕೊಡ್ತಾರೆ ?? ಯಾಕೆ ಅಳುತ್ತದೆ, ಯಾಕೆ ನಗುವುದಿಲ್ಲ???”
“ಬಂಧನಗಳು ಕಳಚಿದಾಗ ಶಬ್ದವಾಗುತ್ತದೆ. ನಗು ಬರಲು ನಿನಗೆ ಏನಾದರೂ ಅರ್ಥವಾಗಬೇಕು ಆದರೆ ಅಳಲು ಯಾವುದೂ ಅರ್ಥವಾಗಬೇಕಿಲ್ಲ . ಎಲ್ಲೋ ಮಿಡಿದ ಭಾವನೆಗಳು ಕಣ್ಣನ್ನು ತೇವ ಮಾಡುತ್ತವೆ ಕೆಲವೊಮ್ಮೆ ಉಕ್ಕಿ ಹರಿಯುತ್ತವೆ”
“ಸತ್ಯ ಯಾವುದು ಸುಳ್ಳು ಯಾವುದು ಎರಡೂ ನಾವೇ ನೆಟ್ಟ ಒಂದೇ ಬೀಜದ ಮರಗಳಲ್ಲವೇ??”
“ಹೆಸರಿಗೆ ಎಲ್ಲ ಮಾವು ಒಂದೇ ಅದರೂ ಸಿಹಿ ಬೇರೆಯದೇ ಅಲ್ಲವೇ ...ಸತ್ಯವು ನಾಗರಿಕತೆ ಅನಾಗರಿಕತೆಯನ್ನು ಬೇರ್ಪಡಿಸುವ ಒಂದು ತೆಳು ಪರದೆ “
“ನಿನ್ನ ಪ್ರಶ್ನೋತ್ತರ ಇನ್ನು ಸಾಕು, ನಡಿ ಕಾಲೇಜ್ ಗೆ ಲೇಟಾಯ್ತು. ಇವತ್ತು ಲಾಸ್ಟ ಡೇ ಬೇರೆ “ ಎಂದು ಎದ್ದನು ನಾರಾಯಣ
“ ಆಯ್ತು ಪ್ರಭುಗಳೇ ನಾವಿನ್ನು ನಿರ್ಗಮಿಸುತ್ತೇವೆ ಅನುಮತಿ ನೀಡಿ “
“ತಥಾಸ್ತು “ ಎಂದು ನಕ್ಕನು ನಾರಾಯಣ
ಸಂಜೆ ಬಂದ ಚಿರಂಜೀವಿ ಬ್ಯಾಗನ್ನು ಮೂಲೆಗೆ ಎಸೆದು ಸೋಫಾ ಮೇಲೆ ಏನೋ ವಿಚಾರ ಮಾಡುತ್ತಾ ಕುಳಿತ
ಮಗ ವಿಚಾರಮಗ್ನನಾಗಿದ್ದನ್ನು ನೋಡಿ ನಾರಾಯಣ
“ಏನು ಯುವರಾಜರು ಚಿಂತಾಕ್ರಾಂತರಾಗಿದ್ದಾರೆ ??? ಎನ್ ಸಮಾಚಾರ ??”
“ಏನಿಲ್ಲ ಸಾವೆಂಬುದು ಎಲ್ಲರಿಗೂ ನಿಶ್ಚಿತ ತಾನೇ ??? ಮತ್ತೇಕೆ ಜನ ಹೀಗಾಗುತ್ತಾರೆ ಎಲ್ಲ ಸರಿಯಿರುವ ಹುಚ್ಚರಂತೆ?? . ಮನುಷ್ಯನೇಕೆ ಹೀಗೆ ??. ಸಾವೆಂಬುದು ತನ್ನ ಬೆನ್ನ ಮೇಲೆ ಬರೆದ ಶಾಶನವೆಂದುಗೊತ್ತಿದ್ದರೂ ಅವನಿಗೇಕೆ ತೀರದ ಹುಚ್ಚು ಚಪಲ??.”
ಮಗನ ಅಸಹಜ ಪ್ರಶ್ನೆಗೆ ದಿಗ್ಭ್ರಾಂತನಾದರೂ ಸುಧಾರಿಸಿಕೊಂಡು
“ಹಾ....ಆ.... ಜೀವನವೆಂಬುದು ನಿರ್ಮಲ ಪರಿಶುದ್ದ ಸ್ಪಟಿಕ ಸ್ವರೂಪಿ ಝರಿಯಂತೆ. ಯಾರಿಗೂ ಗೊತ್ತಿಲ್ಲ ಅದು ಹೇಗೆ ಹುಟ್ಟಿತು ಯಾಕೆ ಹುಟ್ಟಿತು ಅಂತ. ಆದರೆ ಅದು ಅದಕ್ಕೆ ತಿಳಿಯದೆ ಒಂದು ಗುರಿಗೆ ಬದ್ಧವಾಗಿದೆ. ಮೊದ ಮೊದಲು ತಾನು ಒಂಟಿಯೇನಿಸಿದರೂ ನಂತರ ತನ್ನಂತೆ ಹುಟ್ಟಿ ಹರಿಯುವ ಝರಿಗಳೊಂದಿಗೆ ಸೇರಿದಾಗ ಖುಷಿಯಿಂದ ಬೆರೆಯುತ್ತದೆ ತನ್ನತನವನ್ನೇ ಗುರುತಿಸಲಾಗದ ಮಟ್ಟಿಗೆ ಆಳವಾಗಿ. ಅದಕ್ಕೆ ಹರಿಯುವದೊಂದೇ ಗೊತ್ತು ತನ್ನ ಬಳಸಿಕೊಂಡು ಬೆಳೆಯುತ್ತಿರುವ ಹತ್ತಾರು ಜೀವಗಳ ಪರಿವೆ ಅದಕ್ಕಿಲ್ಲ ಇದ್ದರೂ ಅಹಂ ಎಂಬುದು ಅದಕ್ಕೆ ಗೊತ್ತಿಲ್ಲ. ಝರಿ ಶುದ್ದವಾಗಿದ್ದರೂ ಕೆಲವೊಮ್ಮೆ ಅದರ ಜೊತೆ ಸೇರುವ ಸಂಗಾತಿಗಳು ಸರಿಯಿರುವುದಿಲ್ಲ . ಯಾರೋ ಒಬ್ಬ ಬಂದು ಉಚ್ಚೆ ಹೊಯ್ಯುತ್ತಾನೆ, ಹೇಲುತ್ತಾನೆ. ನಿರ್ಮಲವಾಗಿದ್ದ ಝರಿ ಕಲುಷಿತವಾಗುತ್ತದೆ. ಕೊನೆಗೆ ನದಿಯಾಗಿ ಸಮುದ್ರ ಸೇರುವಾಗ ಝರಿಯದು ತನ್ನ ಕಲ್ಪನೆಗೂ ಮಿರಿ ಬೆಳೆದಿರುತ್ತದೆ . ಆದರೆ ಕೆಲವೊಮ್ಮೆ ಕೆಟ್ಟ ದಾರಿ ಹಿಡಿದು ಸಾಗಿದ ಝರಿಗಳು ಕೊಳಚೆ ನೀರಾಗಿ ನಿಂತು ಕೊಳೆಯುತ್ತಿವೆ, ಇನ್ನು ಕೆಲವೊಂದು ಬೇಗ ಬತ್ತಿ ಹೋಗುತ್ತವೆ ಹೋಗುವಾಗ ಬೆಳೆಸಿದ ಆಲದ ಮರ ನೂರಾರು ಅಡಿ ಹಬ್ಬುತ್ತದೆ. ಕೆಲವೊಂದು ಕಲ್ಯಾಣಿವಾಗಿ ದೇವರಿಗೆ ತಿರ್ಥವಾಗುತ್ತವೆ ಮತ್ತೆ ಕೆಲವೊಂದು ಸರೋವರವಾಗಿ ಮನಸಿಗೆ ಮುದ ನೀಡುತ್ತವೆ. ಈ ಇಳೆಯ ಮೇಲೆ ಉದ್ಭವಿಸಿದ ಪ್ರತಿಯೊಂದು ಕಣಕ್ಕೂ ಅಣು ಅಣುವಿಗೂ ಕೊನೆಯೆಂಬುದಿದೆ ಮತ್ತು ಅದರಲ್ಲೇ ಆರಂಭವಿದೆ . ಇದೆ ಸೃಷ್ಟಿಯ ವೈಚಿತ್ರ್ಯ. ಕೊನೆಯಲ್ಲಿ ಎಂಬುದರಲ್ಲಿ ಪ್ರತಿ ಕಣದ ಸಾರ್ಥಕತೆಯಿದೆ”
“ಏನೂ ಅರ್ಥವಾಗಲಿಲ್ಲ ಹುಜೂರ್. ನಾ ಮಕ್ಕೋತಿನಿ. ನಾಳೆ ಅಜ್ಜಿ ಮನೆಗೆ ಹೋಗ್ತಿನಿ”
“ಹ....ಸರಿ...ಸಮಯಕ್ಕೆ ಎಂತ ಕಠಿಣ ದ್ವಂದ್ವವನ್ನು ಅರ್ಥ ಮಾಡಿಸುವ ಶಕ್ತಿಯಿದೆಯಂತೆ..”
ಗೋಡೆಗೆ ತೂಗುಬಿಟ್ಟ ಗಡಿಯಾರ ನಕ್ಕಂತಾಯಿತು. ಗಂಟೆ ಆರಾಗಿತ್ತು.


ಮರುದಿನ ಬೆಳಗ್ಗೆ

“ಅಜ್ಜಿ ....................” ಎಂದು ಚೀರುತ್ತಾ ಅಡಿಗೆ ಮನೆಗೆ ಓಡಿದನು
“ಯಾರದು.....?? ಚೀರು ಎನ್ “ ಪ್ರತಿಧ್ವನಿಸಿತು ಅಜ್ಜಿ ಧ್ವನಿ
“ಹಾ .....”
ಅಡಿಗೆ ಮನೆ ಕಡೆ ಓಡಿ ಹೋಗುವಾಗ ಕಂಡ ಹಾರ ಹಾಕಿದ ಅಜ್ಜನ ಫೋಟೋ ಅವನ ಮನಸಿನ ಯಾವುದೋ ಮೂಲೆಯಲ್ಲಿ ಸೇರಿ ಮಾಯವಾಗಿತ್ತು ಯಾವಾಗ ಸಿಡಿಯುವುದೋ ಗೊತ್ತಿಲ್ಲ
“ಅಯ್ಯ ನನ್ನ ಮಗನ ಒಬ್ನೇ ಬಂದ್ಯಾ ...??
“ಹಾ..ಅಪ್ಪ ಬಸ್ ಹತ್ತಿಸಿ ಬಿಟ್ಟ, ನಾ ಬಂದೆ “
“ಎಷ್ಟ ಸೊರಗಿದಿ ಹೊಟ್ಟೆ ತುಂಬಾ ಊಟ ಮಾಡೋದಿಲ್ಲೇನ್ “
“ನಿಂಗ್ ಹಂಗs ಅನಿಸ್ತದ ಬಿಡು..ಭಾಳ ದಿನಾ ಆದ ಮ್ಯಾಲ್ ನೋಡಾಕತ್ತಿಲಾ ಅದಕ್ಕ”
“ಬಾ ಉಟ ಮಾಡ್ ಬಾ ಬಿಸಿ ರೊಟ್ಟಿ ಮಾಡೆನಿ “
“ನಂಗ್ ಈಗ ಹಸಿವಿಲ್ಲ ಆಮ್ಯಾಲ್ ಮಾಡ್ತಿನಿ”
“ಎಷ್ಟು ಹಸಿವಿದ್ದಷ್ಟು ತಿನ್ನು ಬಾ ”
ಚಿರು ಎಷ್ಟೇ ಬೇಡ ಅಂದರೂ ಬಿಡದೆ ಎರಡು ರೊಟ್ಟ ತಿನಿಸಿದಳು ಮಮತೆಯಿಂದ ಅಜ್ಜಿ
“ನಾ ಸರೂ ಕಾಕು ಮನಿಗ್ ಹೋಗಿ ಬರ್ತೀನಿ “
“ಅವಳು ಹೊಟ್ಟಿಲಿ ಅದಾಳ ಹುಷಾರು ಕಾರಬಾರ್ ಮಾಡಬ್ಯಾಡ್ “
“ಹಾ ಆಯಿತು, ಮುಗಿತೋ ಇಲ್ಲೋ ನಿನ್ನ ಪ್ರವಚನ”
ಎಂದವನೇ ಪಕ್ಕದ ಮನೆಗೆ ಓಡಿದ
“ಕಾಕು... ಕಾಕು... ಸರೂ ಕಾಕು..” ಎಂದು ಕರೆಯುತ್ತ ಮನೆ ಒಳಗೆ ಹೋದ
“ಯಾರೋ ...ಚಿರು ಎನ್? ಬಾರೋ ಎಪ್ಪಾ ..ನೋಡಿ ಎಷ್ಟ್ ದಿವಸ್ ಅಗಿತ್ತ್. ಈಗ ನೆನಪ ಆದ್ನಿ ನಿಂಗ್ ನಾ” ಎಂದಳು ಸರಿತಾ
“ಹಂಗೇನಿಲ್ಲ ಕಾಕು ಶಾಲಿ ಬಿಟ್ಟ ಬರಾಕ ಆಗೋದಿಲ್ಲ ಅದಕ ಬಂದಿಲ್ಲ ..ಆರಾಮ್ ಅದಿ...” ಎಂದನು
ಅವಳು ಅಲ್ಲೇ ಮಂಚದ ಮೇಲೆ ಸೊಂಟದ ಮೇಲೆ ಕೈಯಿಟ್ಟುಕೊಂಡು ಕೂತಿದ್ದಳು
“ಹಿಂಗ್ ಅದೇನಿ ನೋಡ್ ಮನ್ಯಾಗ ಎಲ್ಲ ಆರಾಮಾ ??..ಶಾಲಿ ಹೆಂಗ್ ನಡದೈತಿ ?
“ಹಾ ಎಲ್ಲ ಆರಾಮ್ ಅದಾರ್ ...ಶಾಲಿ ಚೊಲೋ ನಡದೈತಿ “
“ಊಟ ಮಾಡು ..ಮೆಂತೆ ಪಲ್ಯ ಮಾಡೆನಿ ??”
“ಬ್ಯಾಡ ಕಾಕು ಈಗ ತಾನೇ ತಿಂದ ಬಂದಿನಿ “
“ಇರ್ಲಿ ಸ್ವಲ್ಪ ತಿನ್ನು ಬಾ ಎಷ್ಟ ಸೊರಗಿದಿ ನೋಡ. ಆ ಸೊಕ್ಕಿನ ಮುದುಕಿ ಎನೂ ಮಾಡಿರುದಿಲ್ಲ “
“ನಾನೇನ್ ನಾಚ್ಕೊದಿಲ್ಲ ..ಹೊಟ್ಟಿ ತುಂಬೈತಿ “
“ಹಂಗಾದ್ರ ಚಾ ರೇ ಕುಡಿಲಾ “
“ಅಯ್ಯೋ ಕಾಕು ರೆಸ್ಟ್ ತಗೋರಿ ನಂಗ್ ಏನೂ ಬ್ಯಾಡ “
ಹೀಗೆ ಏನೇನೋ ಹರಟುತ್ತ ಕುಳಿತರು. ಸರಿತಾ ಅವನ ಬಾಲ್ಯದ ದಿನಗಳನ್ನು ನೆನೆಪಿಸಿಕೊಡುತಿದ್ದಳು ಅವನು ತನ್ನ ಕೀಟಲೆಗಳನ್ನು ಹೇಳಿ ನಗಿಸುತಿದ್ದ
ನೋಡು ನೋಡುತ್ತಾ ಸೂರ್ಯ ಕಳುವಾಗಿದ್ದ . ಶಶಿ ಟಾರ್ಚು ಹಾಕಿ ಹುಡುಕಲು ಬಂದಿದ್ದ. ಹುಡುಕಲು ಬಂದವನು ನಕ್ಷತ್ರವನ್ನು ನೋಡಿ ಅವಳಿಗೆ ಗಾಳ ಹಾಕುತ್ತ ನಿಂತು ಬಿಟ್ಟ.
ಸಂಜೆ
ಚಿರುವಿನ ಅಜ್ಜಿ ಅವನ ಕೈ ಕಾಲು ತೊಳೆದು ವಿಭೂತಿ ಪಟ್ಟಿ ಬಳಿದು ಟೀ ಕೊಟ್ಟು ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಟಿವಿ ನೋಡುತ್ತಾ ಕುಳಿತಿದ್ದಳು
“ಎವ್ವ... ಎವ್ವ.... ಎವ್ವ ...” ಎಂದು ಯಾರೋ ಕರೆದಂತಾಯ್ತು
ಅಜ್ಜಿ ದಡಬಡಿಸಿ ಎದ್ದು ಹೊರಗೆ ಬಂದಳು ಜೊತೆಗೆ ಚಿರುನೂ ಓಡಿ ಬಂದ
“ಸರವ್ವನಿಗೆ ಬ್ಯಾನಿ ಶುರು ಆಗಿದಾವ ದವಡ ಬಾ “ ಎಂದು ಗಾಭರಿಯಿಂದ ಕರೆದನು ಸರಿತಾಳ ಗಂಡ
“ನಡಿ ನಡಿ ...ಚಿರು ನೀ ಇಲ್ಲೇ ಟಿವಿ ನೋಡ್ಕೊತ್ ಕೂರು ...ನಾ ಬರೋದ ತಡ ಆಗತೈತಿ ನೀ ಆಕಡೆ ಬರಬ್ಯಾಡ್...ಅಲ್ಲೇ ಒಲಿ ಮ್ಯಾಲ್ ಬದನೆ ಕಾಯಿ ಪಲ್ಯ ಮಾಡಿ ಇಟ್ಟೆನಿ, ಸಣ್ಣ ಗಿಂಡಿಯೊಳಗ ಮೋಸರ್ ಅಯ್ತಿ, ದೊಡ್ಡ ಬೊಗಾಣಿಲಿ ಹಾಲು ಅಯ್ತಿ, ಬಿಸಿ ಚಪಾತಿ ತಗೊಂಡ ಊಟ ಮಾಡಿ ಮಲ್ಕೋ “ ಎಂದು ಒಂದು ಬಿಡದೆ ಎಲ್ಲ ಹೇಳಿ ಮಾಸ್ತರನನ್ನು ರಜೆ ಕೇಳಿ ಹೋಗುವ ವಿದ್ಯಾರ್ಥಿಯಂತೆ ಅವಸರದಿಂದ ಓಡಿ ಹೋದಳು.
ಒಳಗೆ ಬಂದ ಚಿರುವನಲ್ಲಿ ಏನೋ ಸಣ್ಣ ಭಯ, ಕಾತುರ, ಮೇಲಿಂದ ಮೇಲೆ ಕಿವಿಗೆ ಪ್ರವಹಿಸುವ ಸರೂ ಕಾಕುವಿನ ನರಳಾಟ ಅವನ ಮನಸಲ್ಲಿ ಸಣ್ಣ ಕೋಲಾಹಲವನ್ನೇ ಎಬ್ಬಿಸಿತ್ತು.
ಹಾರ ಹಾಕಿದ ಅಜ್ಜನ ಫೋಟೋ ಏಕೋ ನೋಡಿ ನಕ್ಕಂತಾಯಿತು
ಏಕೋ ಟಿವಿ ನೋಡಲಾಗಲಿಲ್ಲ ಅವನಿಗೆ ಅದು ಕಾರಣವಿಲ್ಲದೆ ಬೊಗಳುವ ನಾಯಿಯಂತೆ ತೋರಿತು.
ಒಂದು ಸಣ್ಣ ಬೀಜ ಸಾವಿರಾರು ತೆನೆ ಕೊಡುವುದು , ಬೆಳೆದು ಹೆಮ್ಮರವಾಗುವುದು , ಕಣ್ಣಿಗೂ ಕಾಣದ ವಿರ್ಯಾಣುವದು ಸಹಸ್ರಕೋಟಿ ಜೀವಕೋಟಿಯನ್ನು ಆಳುವುದು, ರೂಪಿಸುದು... ಕಲ್ಪನೆಗೂ ನಿಲುಕದ ವಿಸ್ಮಯ... ಪ್ರತಿ ಜೀವಿಗೂ ಒಂದು ಹೊಟ್ಟೆ , ಹೊಟ್ಟೆ ಹೊರೆಯಲು ಒಂದು ಕೆಲಸ, ಒಳ್ಳೆಯದೋ ಕೆಟ್ಟದ್ದೋ ಅದು ಹೊಟ್ಟೆಗೆ ಗೊತ್ತಾಗುವುದಿಲ್ಲ ಅದಕ್ಕೆ ಅದು ಬೇಕಾಗಿಲ್ಲ ...ಮನಸು ಹೇಳುವುದೆಲ್ಲ ಕೇಳಲಾಗುವುದಿಲ್ಲ ಕೆಲವೊಮ್ಮೆ ಏಕೆಂದರೆ ಹೊಟ್ಟೆಯ ಹಸಿವು ಮನಸಿಗೆ ನಿಲುಕದ್ದು. ಅದರದ್ದೆನಿದ್ದರೂ ಭಾವನೆಗಳು ಮಾತ್ರ. ಮನಸಿನ ಹಸಿವಿಗೆ ಹೊಟ್ಟೆಯ ಹಸಿವನ್ನು ದಿಕ್ಕರಿಸಿ ಬಾಳುವ ಶಕ್ತಿ ಇಲ್ಲ. ಹೊಟ್ಟೆಗಾಗಿ ಸಂಪಾದಿಸಲು ಶುರು ಮಾಡಿದ ಜೀವ ಹೊಟ್ಟೆ ತುಂಬಿದ ಮೇಲೆ ಬೆಳೆಯುವ ಪರಿ ಅಗಾಧ . ಆಗ ಹೊಟ್ಟೆಯದು ಕೇವಲ ತಿಂದದ್ದನ್ನು ದೇಹಕ್ಕೆ ಕರಗಿಸುವ ಒಂದು ಯಂತ್ರ ಮಾತ್ರ. ಮನಸಿನ ಸಾಮ್ರಾಜ್ಯ ವದು ವಿಚಿತ್ರ ಅದಕ್ಕೆ ಅವಳಿ ಜವಳಿ ರಾಜರು.. ರಾಜರನ್ನು ಆರಿಸುವಾಗ ಎಡವಿದರೆ ನೀರಡಿಕೆ ತಡೆಯಲಾರದೆ ಸಾಯುತ್ತಿರುವಾಗ ನೀರಲ್ಲಿ ವಿಷ ಬೆರೆಸಿ ಕುಡಿಸಿದ ಹಾಗೆ.
“ಒಹ್ ಏನಿದು ತಲೆ ಎಲ್ಲೆಲ್ಲೋ ಗಿರಿಕಿ ಹೊಡೆಯುತ್ತಿದೆ ಗಾಳಿಗೆ ಸಿಕ್ಕ ತರಗೆಲೆಯಂತೆ” ಎಂದುಕೊಂಡನು ಚಿರು
ನರಳಾಟ ಇನ್ನು ಮುಂದುವರೆದಿತ್ತು . ಅಜ್ಜಿ ಸಮಾಧಾನಿಸುತ್ತಿದ್ದಳು
ಒಂಬತ್ತು ತಿಂಗಳು ಅಮ್ಮನಲ್ಲಿ ಅಮ್ಮನಾಗಿ ಬೆಳೆದ ಜೀವವದು ಒಮ್ಮೆ ಲೇ ಬೇರೆಯಾದಾಗ ಆಗುವ ಆಘಾತ ಎಂತದೆ ಅರಿವನ್ನು ತಟ್ಟುವಂತದು.. ಆಘಾತವನ್ನೇ ಅಕ್ಷರಗಳಲ್ಲಿ ವ್ಯಕ್ತಪಡಿಸುವಷ್ಟು ಜ್ಞಾನಿಯಲ್ಲ ಆ ಮಗು ಅದಕ್ಕೆ ಏನೋ ಅದು ಹುಟ್ಟಿದೊಡನೆ ಅಳುತ್ತದೆ ಜಾತ್ರೆಯಲ್ಲಿ ತಾಯಿಯನ್ನು ಕಳೆದುಕೊಂಡ ಮಗುವಿನ ಹಾಗೆ, ಬೇರು ಕಳೆದುಕೊಂಡ ಮರದ ಹಾಗೆ, ದಿಕ್ಕು ತಪ್ಪಿದ ಝರಿಯ ಹಾಗೆ....

ಮತ್ತೆ ಬೆಳಗ್ಗೆ

ಮಗು ಅಳುವ ಸದ್ದು ಕೇಳಿಸಿತು. ಒಂದ್ ಅರೆ ಕ್ಷಣ ನಿಶಬ್ದ ಪ್ರಕೃತಿಯದು ಎದ್ದು ನಿಂತು ಗೌರವ ಸಲ್ಲಿಸುವಂತೆ ತೋರುತಿತ್ತು. ಅಳು ಏಕೋ ಕಿರಿ ಕಿರಿ ಎನಿಸಲಿಲ್ಲ ಅದೊಂದು ಯಾವುದೊ ದೇವರ ಪ್ರಾರ್ಥನೆಯಂತೆ ತೋರುತಿತ್ತು. ಪ್ರತಿ ಅಳುವಿನ ರಾಗದಲ್ಲೂ ಓಂ ಕಾರವದು ಅನುರಣಿಸುತಿತ್ತು
“ಬಿಸಿ ನೀರ ತಗೊಂಡ ಬನ್ನಿ, ಹಂಗ ಒಂದ ಕುಡುಗೋಲು ತಗೊಂಡ್ ಬನ್ನಿ ತೊಳ್ಕೊಂಡು “ ಎಂದು ಅಜ್ಜಿ ಒಂದರ ಮೇಲೊಂದರಂತೆ ಆದೇಶವಿಯುತಿದ್ದಳು
ಈ ಕ್ಷಣದಲ್ಲಿ ತಾಯಿಯ ಮುಖಾರವಿಂಧವದು ಹೇಗಿರಬಹುದು ಎಂದು ಕಲ್ಪಿಸಿಕೊಳ್ಳಲು ಹೋಗಿ ಸೋತುಬಿಟ್ಟ . ನೋವು, ಸಂತೋಷ , ಗಾಭರಿ, ಧೈರ್ಯ ಎಲ್ಲವನ್ನು ಒಂದೇ ಬಾರಿಗೆ ಮುಖದ ಚಿತ್ರಪಟದಲ್ಲಿ ವ್ಯಕ್ತಪಡಿಸುವುದು ತಾಯಿಗೆ ಮಾತ್ರ ಸಾಧ್ಯವೆನಿಸಿತು.
ರಾತ್ರಿ ಮೂರು ಗಂಟೆ. ನಕ್ಷತ್ರ ಎಣಿಸುತ್ತ ಮಲಗಿದ್ದ ಕಂಗಳ ಮೇಲೆ ಮೂಡಿದ ಕರಿ ಪರದೆಯಲ್ಲಿ. ಒಲೆ ಮೇಲೆ ಇಟ್ಟ ಹಾಲು ತಣ್ಣಗಾಗಿತ್ತು .
ಅಜ್ಜಿ ಸೆರಗಿನಿಂದ ಮುಖ ಒರೆಸಿಕೊಳ್ಳುತ್ತಾ ಒಳಗೆ ಬಂದಳು. ಮುಖದಲ್ಲಿ ಸಂತೃಪ್ತ ಭಾವ.ಕಣ್ಣಲ್ಲಿ ಕತ್ತಲೆ ನಗುತಿತ್ತು
“ಅಜ್ಜಿ ಯಾವ ಮಗು ಆಯ್ತ್ ??”
“ಗಂಡು ಮಗಿ ಆಯ್ತ್ ನೋಡ ದೇವರ್ ಕಣ್ ಬಿಟ್ಟ ಕೊನೆಗೂ...ನೀ ಇನ್ನು ಮಲಗಿಲ್ಲೇನ್ .ಮಕ್ಕೋ ಭಾಳ ಲೇಟ ಅಗೆತಿ ಮುಂಜಾನೆ ಮಾತಡುವಿಯಂತೆ” ಎಂದಳು ಅಜ್ಜಿ
ಕೇಳುವ ಪ್ರಶ್ನೆಗಳು ನೂರಾರಿದ್ದರೂ ಅವನೆಲ್ಲ ಮುಸುಕಿನೊಳಗೆ ಸುತ್ತಿಕೂಂಡು ಮಲಗಿಬಿಟ್ಟ.
ಯಾರೋ ಅಳುವ ಸದ್ದು ..ಹೊಸದಾಗಿ ಹುಟ್ಟಿದ ಮಗುವಿನದು ಎಂದುಕೊಂಡ ...ಆದರೆ ಅದು ಎಳೆ ಧ್ವನಿಯಲ್ಲ... ಹಾಗೆ ಒಂದೇ ಧ್ವನಿಯೂ ಅಲ್ಲ.... ಅಲ್ಲಿ ಸಮಾಧಾನವಿಲ್ಲ ..ತಡಬಡಿಸಿ ಎದ್ದು ಪಡಸಾಲೆಗೆ ಓಡಿ ಬಂದ.
ಅಜ್ಜಿ ಮಲಗಿದ್ದಳು ಇನ್ನೆಂದೂ ಏಳಲಾರೆನೆಂಬಂತೆ . ಝರಿಯದು ಸಮುದ್ರವನ್ನು ಸೇರಿತ್ತು .ಕಣ್ಣೆರಡವು ಬೆವರುತಿದ್ದವು ದಣಿವಾಗಿ. ನಾರಾಯಣ ಒಂದು ಮೂಲೆಯಲ್ಲಿ ನೋವಿನ ಖಜಾನೆಯಂತೆ ನಿಂತಿದ್ದ. ಓಡಿ ಹೋಗಿ ಅಪ್ಪನನ್ನು ಅಪ್ಪಿಕೊಂಡ ಖಜಾನೆ ಚೆಲ್ಲಿಬಿಟ್ಟಿತು.
ಮಗುವದು ಮತ್ತೆ ಅಳಹತ್ತಿತ್ತು ....ಸರೂ ಕಾಕು ಮೊಲೆ ತೊಟ್ಟನ್ನು ಮಗುವಿನ ಬಾಯಲಿಟ್ಟಳು....ಕಾರಣ ತಿಳಿಯದೆ ಇದ್ದರೂ ...ಅರಿವಿಲ್ಲದೆ ಇದ್ದರೂ ಮಗುವಿನ ಅಳು ತನ್ನನ್ನು ಧರೆಗಿಳಿಸಿ ತಾನು ಧರೆಗಿಳಿದ ಅಜ್ಜಿಗಾಗಿ ಇರಬಹುದೇನೋ ಅನಿಸಿತು ಚಿರುಗೆ.
ಮಗು ಮೊಲೆಯಲ್ಲಿ ತೊಟ್ಟನ್ನು ಹೊರಗೆ ಚೆಲ್ಲಿ ನಕ್ಕಿತು
ಚಿರುಗೆಕೋ ಅಜ್ಜಿ ಮತ್ತೆ ನಕ್ಕಂತಾಯಿತು
ಸಾವು ಬದುಕಿನ ಎರಡು ಜೀವಂತ ವಿಸ್ಮಯಗಳ ನಡುವೆ ಚಿರು ನಿಂತಿದ್ದ ತಾನೆ ಕೇಳಿದ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಶುದ್ದ ಸಂತನಂತೆ.
ಅಲ್ಲಿ ಎಲ್ಲರೂ ಅಳುತಿದ್ದರು ಕೆಟ್ಟವರು ಮತ್ತು ಒಳ್ಳೆಯವರು.