Click here to Download MyLang App

ಗೋಧಕ್ಕ - ಬರೆದವರು : ವಿಭಾ ಎಂ. ವಿ

"ಏ ಗೋಧೂs... ಇವತ್ತ ನಮ್ಮ ರಾಮಣ್ಣಂದು ಹುಟ್ಟಿದಹಬ್ಬ ಅಂತ ನೋಡು... ಅದರ ಸಲವಾಗಿ ಇಲ್ಲೇ ನಮ್ಮ ಬೆಳಟ್ಟಿ ಒಳಗ ಸಂಗೀತ ಕಾರ್ಯಕ್ರಮ ಅದ ಅಂತ.. ಅಕಿ ರೇಡಿಯೋದಕಿ ಹೇಳಲಿಕತ್ತಿದ್ಲು, ರಾಮಣ್ಣನ ಬಗ್ಗೆ ಎಷ್ಟ್ ಛಂದ ವಿವರಣಾ ಕೊಡ್ಲಿಕತ್ತಿದ್ದಳು ಗೊತ್ತೇನು ನಿಂಗ... ನಂಗ ಅರ ಅದನ್ನ ಕೇಳಿ, ರಾಮಣ್ಣ ಇವತ್ತ ಇಲ್ಲೇ ಇದ್ದಿದ್ದರ ಎಷ್ಟ ಸಂತೋಷ ಪಡತಿದ್ದ ಅಂತ ನೆನಸ್ಕೊಂಡ್ರ ಖುಷಿ ಆಗ್ಲಿಕತ್ತದ ನೋಡು... " ಎಂದು ಮುಕುಂದರಾಯರು ಗೋಧಕ್ಕಗ ಹೇಳುತ್ತಿದ್ದರು...

ಪಾಪ ಮುಕುಂದರಾಯರಿಗೆ ಏನು ಗೊತ್ತು, ಗೋಧಕ್ಕಾಗ ರಾಮಣ್ಣಂದು ಸುದ್ದಿ ಅಂದ್ರ 4 ಕಿವಿ ಅಂತ... ಅವರು ತಮ್ಮ ಸ್ನೇಹಿತ , ಸ್ನೇಹಿತ ಅನ್ನೋಕಿಂತ ಅಣ್ಣನ ಸ್ಥಾನದಾಗ ಇದ್ದ ರಾಮಣ್ಣ ಉರ್ಫ್ ಪಂ. ರಾಮಚಂದ್ರರಾವ್. ಉಪಾಧ್ಯಾಯ ಅವರ ಬಗ್ಗೆ ರೇಡಿಯೋ ಒಳಗ ಕೇಳಿ ಭಾಳ ಖುಷಿ ಆಗಿ ಬಿಟ್ಟಿದ್ರು. ಅವತ್ತ ಅವರಿಗೆ ಹಿಡಿಯವರು ಯಾರು ಇದ್ದಿದ್ದಿಲ್ಲ...

"ಹುನ್ರಿ ಪಾ... ನಂಗೂ ಇಲ್ಲೇ ಕೇಳಸ್ತು... ನಿಮಗ ಕಿವಿ ಕೇಳಸುದಿಲ್ಲ ಅಂತ ಇಡೀ ವಠಾರಕ್ಕ ಕೇಳು ಹಂಗ ಹಚ್ಚಿರತೀರಿ ಆ ರೇಡಿಯೋ, ಅಂದ ಮ್ಯಾಲ ನಂಗ ಕೇಳಸುದಿಲ್ಲೆನು? ಎಲ್ಲ ಕೇಳಿದೆ ನಿಮ್ಮ ರಾಮಣ್ಣಂದು ವರ್ಣನಾ... ಈಗೇನು ನೀವು ಎದ್ದು ಬಂದು ಛಾ ತೊಗೋತಿರ್ಯೋ ಏನು ಅದನ್ನು ತಂದು ಕೈಯಾಗ ಕೊಡಬೇಕೋ... ಕೈಯಾಗ ಆ ಪತ್ರಿಕಾ ಹಿಡಕೊಂಡು ರೇಡಿಯೋ ನ ಊರ ಮಂದಿಗೆ ಕೇಳುಹಂಗ ಹಚ್ಕೊಂಡು ಕೂತ ಬಿಟ್ರ ಆತೇನು? ನನಗೂ ವಯಸ್ಸು ಆಕ್ಕೋತ ಬಂತು... ಕಾಲು ಹಿಡಕೊಂಡ ಬಿಟ್ಟಾವು... ಒಂಚೂರು ಬಂದು ತೊಗೊಂಡು ಹೋಗ್ರಿ ಛಾ " ಎಂದು ಗೋಧಕ್ಕ ಮುಕುಂದರಾಯರಿಗೆ ಹೇಳುತ್ತಿದ್ದರು.

ಗೋಧಕ್ಕ - ಮುಕುಂದರಾಯರದು ಆರಕ್ಕ ಏರಲಾರದ, ಮೂರಕ್ಕ ಇಳಿಲಾರದ ಇದ್ದಿದ್ದರಾಗ ನಡಸ್ಕೊಂಡು ಹೊಂಟಿರುವಂತಹ ಚಂದದ ಸಂಸಾರ. ಗೋಧಕ್ಕನ ಚಾಣಾಕ್ಷತನದಿಂದ ರೊಕ್ಕ ಉಳದು, ಈಗ ಕಡಿ ಕಾಲಕ್ಕ ಅಂತ ಯಾರ ಮುಂದು ಕೈ ಒಡ್ಡಲಾರದ, ತಮ್ಮದು ತಾವು ನೋಡಿಕೊಂಡು ಹೋಗುವ ಹಂಗ ಇರುವ ಚೊಕ್ಕ ಸಂಸಾರ. ಈ ಹುಣ್ಣಿಮಿಗೆ ಗೋಧಕ್ಕ- ಮುಕುಂದರಾಯರ ಸಂಸಾರಕ್ಕ ಭರ್ತಿ 60 ವಸಂತಗಳ ಸಂಭ್ರಮ. ಸಂಭ್ರಮ ಅನ್ನೋದು ಅವರ ದಿನದೊಳಗ ಇದ್ದ ಇರ್ತಿತ್ತು, 60 ಅಂತ ಹೊಸದಾಗಿ ಸಂಭ್ರಮ ಅಂತ ಕಾರ್ಯಕ್ರಮ ಮಾಡ್ಲಿಕ್ಕೆ ಅದ್ರಾಗ ಏನೂ ಹೊಸಾದು ಇರಲಿಲ್ಲ, ಅಷ್ಟ ಚೈತನ್ಯನೂ ಮುಕುಂದರಾಯರಿಗೆ ಇರಲಿಲ್ಲ..

ಗೋಧಕ್ಕ ಲಗ್ನ ಆಗಿ ಮುಕುಂದರಾಯರ ಮನಿಗೆ ಬಂದಾಗ, 22 ವರ್ಷದ ಹುಡುಗಿ. ಕೈಯಾಗ 2 ಪಾಟ್ಲಿ, 4 ಬಿಲವಾರ ಮತ್ತ 2 ಎಳಿ ಗುಂಡಿನ ಸರ ಹಾಕಿ ಗೋಧಕ್ಕನ ಅಪ್ಪ ಶ್ಯಾಮರಾಯರು ಗೋಧಕ್ಕನ ಲಗ್ನ ಮಾಡಿದ್ರು. ಶ್ಯಾಮರಾಯರ 9 ಮಂದಿ ಮಕ್ಕಳ ಭರ್ತಿ ಸಂಸಾರದಾಗ ಗೋಧಕ್ಕ ಕಡಿಯಕಿ. ಆದ್ರ ಲಗ್ನ ಆಗಿಂದ ಅತ್ತಿಮನಿಗೆ ಕಾಲಿಟ್ಟ ಮ್ಯಾಲ ಗೋಧಕ್ಕ ಇಲ್ಲಿನ ಹಿರಿ ಸೋಸಿ. ಹಿಂಗಾಗಿ ತವರಮಾನ್ಯಾಗ ಎಲ್ಲರಿಗೂ ಗೋಧು ಆಗಿದ್ರು, ಇಲ್ಲೇ ಅತ್ತಿಮನಿಗೆ ಬಂದಮ್ಯಾಲ ಎಲ್ಲರಿಗೂ ಗೋಧಕ್ಕ ಆಗಿ, ಮುಕುಂದರಾಯರಿಗೆ ಅಷ್ಟ ಗೋಧು ಆಗಿ ಉಳಕೊಂಡಿದ್ಲು. ಒಂದು ಕೆಲ್ಸದ್ದ ರುಚಿ ಗೊತ್ತಿಲ್ಲದ ಗೋಧು, ಇಲ್ಲೇ ಅತ್ತಿಮನಿಗೆ ಬಂದ ಮ್ಯಾಲ ಅತ್ಯಾಬಾಯರ ಕೃಪಾದಿಂದ ಅಗದೀ ಚಂದ ಸಂಸಾರ ಮಾಡುದನ್ನ ಕಲತಿದ್ದಳು.

ಅತ್ಯಾಬಾಯರು ಅಗದೀ ಚಾಣಾಕ್ಷ ಹೆಂಗಸು. ಆಗದ ಹೆಂಗ? ಗೋಧಕ್ಕನ ಮಾವ ಅತ್ಯಾಬಾಯರನ್ನ ಬಿಟ್ಟು ಹೋದಾಗ ಅತ್ಯಾಬಾಯಾರಿಗೆ ಬರೇ 19 ವರ್ಷ. ಅಷ್ಟ ಅಲ್ಲದ ಕೈಯಾಗ 2 ಗಂಡು, 1 ಹೆಣ್ಣು ಕೂಸಿನ ಜವಾಬ್ದಾರಿ... ಇಷ್ಟ ಅಲ್ಲದ 30 ಎಕರೆ ಮಸಾರಿ ಹೊಲ, 6 ಎತ್ತು , 8 ಆಕಳ , 2 ಎಮ್ಮಿ... 19 ವರ್ಷದ ಅತ್ಯಾಬಾಯರು ರಗಡ ಬೆವರು ಸುರಿಸಿ, 30 ಎಕರೆ ಹೊಲಾನ ಬರೋಬ್ಬರಿ ನೋಡಿಕೊಂಡು, 2 ಗಂಡು ಮಕ್ಕಳಿಗೂ 15 ಎಕರೆ ಕೊಟ್ಟರು ಅಂದ್ರ, ಅವರ ಎಷ್ಟು ಚಂದ ಸಂಸಾರ ಮಾಡಿರಬೇಕು ನೀವ ವಿಚಾರಮಾಡ್ರಿ. ಹಿಂಗಾಗಿ ಅತ್ಯಾಬಾಯರು ಜೀವನಾನ ಭಾಳ ಕಂಡವ್ರು. ಇನ್ನ ಅಂಥವರ ಕೈಯಾಗ ಪಳಗಿದಕಿ ಗೋಧಕ್ಕ. ಹಿಂಗಾಗಿ ಯಾರೂ ಏನು ಒಂದು ಮಾತು ಅನ್ನದಂಗ ಚಂದಳ್ ಸಂಸಾರ ಮಾಡಿ, ಇವತ್ತಿಗೂ ಎಪ್ಪತ್ನಾಲ್ಕೋ ಎಪ್ಪತ್ತೈದೋ ವರ್ಷ ಆದ್ರು, ರಾಮ ಏಳಸು, ಕೃಷ್ಣ ಕೂಡಸು ಅನ್ಕೋತ ಯಾರ ಮ್ಯಾಲೂ ಭಾರ ಆಗದ ತಾನು, ತನ್ನ ಗಂಡ ಅನ್ಕೊಂಡು ಇದ್ಳು.

ಇನ್ನ ಮುಕುಂದರಾಯರು ಅತ್ಯಾಬಾಯರ ದೊಡ್ಡ ಮಗ. ದೊಡ್ಡ ಮಗ ಆಗಿದ್ದಕ್ಕ ಅವ್ವನ ಸಂಗಡ ರಗಡ ಜೀವನ ನೋಡಿದ್ರು. ಜೀವನದಾಗ ಕಷ್ಟ ಅಂತ ಬಂದಾಗ ಲಕ್ಷ್ಮೀದೇವಿ ಜೋತಿಗೆ ಇದ್ರು, ಜವಾಬ್ದಾರಿ ಇಂದ ನಿರ್ಣಯ ಮಾಡೋ ಕೆಲಸ ಪುಟ್ಟ ಮುಕುಂದರಾಯರ ಮ್ಯಾಲ ಇತ್ತು. ಅಪ್ಪನ ದೇಹಕ್ಕ ಅಗ್ನಿ ಕೊಟ್ಟು, ಅಪ್ಪನ ಋಣ ಮುಗಸ್ಕೊಂಡಾಗ ಮುಕುಂದರಾಯರು ಇನ್ನ ಮುಕ್ಕು ಆಗೇ ಇದ್ದ ಕಾಲ. ಒಂದು ಅಂದಾಜಿಗೆ 14 ವರ್ಷ. ಅಪ್ಪ ಹೊದಮ್ಯಾಲ ಮುಕ್ಕು ಆಗಿದ್ದವ ಒಮ್ಮೆ ಒಂದ ದಿನದಾಗ ಮುಕುಂದರಾಯರು ಆಗಿ , ಎಲ್ಲ ಮನಿಕೆಲ್ಸದವರ ಕೈಯಾಗ ದೊಡ್ಡಪ್ಪಾರು ಆಗಿಬಿಟ್ಟ. ಒಂದಿಷ್ಟು ದಿನಾ ಅಭ್ಯಾಸ ಕಮತ ಜೊತಿಗೆ ಮಾಡಿದ್ದ ಮುಕುಂದ, ಆಮೇಲೆ ಮೆಟ್ರಿಕ್ ಆದಮ್ಯಾಲ ಬಂದ ಮಾಸ್ತರ ನೌಕರಿ ಹಿಡದು ಮನಿ ಬಿಟ್ಟಿದ್ದ. ಊರು ಊರು ಸುತ್ತೋ ಮಗ, ವಲಿ ಮುಂದ ಕೂಡೋದು ನೋಡಲಾರದ ಅವರ ಅವ್ವ, ಗೋಧಕ್ಕನ್ನ ಮನಿ ತುಂಬಸ್ಕೊಂಡು ಮುಕುಂದರಾಯರ ಕೆಲಸ ಕಡಿಮಿ ಮಾಡಸಿದ್ಳು.

ಗೋಧಕ್ಕ ತವರ ಮನ್ಯಾಗ ಕಡಿ ಮಗಳು ಆಗಿದ್ದರಿಂದ ಅಕಿಗ ಹುಚ್ಚಿದ್ದ ಎಲ್ಲಾ ಕಲಾದ್ದೂ ಕಲಿವಣಿಗಿ ಆಗಿತ್ತು. ಕಸೂತಿ ಹಾಕುದು , ಕುಚ್ಚ ಕಟ್ಟುದು, ಸಂಗೀತ ಹಿಂಗ ಎಲ್ಲಾ ವಿದ್ಯಾದು ಸ್ವಲ್ಪ ಸ್ವಲ್ಪ ಜ್ಞಾನ ಅಕಿಗೆ ಸಿಕಿತ್ತು. ಅಲ್ಲೇ ಸಂಗೀತ ಕಲಿಸುವ ಅಕ್ಕವರ (ಅಕ್ಕವರು= ಗುರುಗಳು) ಮನಿಗೆ ರಾಮ (ರಾಮಣ್ಣ) , ಅಲ್ಲೇ ಇವರೆಲ್ಲ ಹಾಡು ಹಾಡುಮುಂದ ಬಂದು ಕೂಡತಿದ್ದ. ಅಕ್ಕವರ ತಂಗಿ ಮಗ ಇದ್ದಿದ್ದರಿಂದ, ಅವಾ ಹಂಗ ಕೂಡೋದು ಎಲ್ಲರಿಗೂ ಸಹಜ ಅನಸ್ತಿತ್ತು. ಅವತ್ತ ಏನರ ಹಂಗ ಸಂಗೀತ ಕೇಳೋದು , ಅದ ಸಂಗೀತನ ರಾಮಣ್ಣನ ಜೀವನ ರೂಪಸ್ತದ ಅಂತ ಗೊತ್ತಿದ್ರ ಉಪಾಧ್ಯಾಯ ಮಾಸ್ತರರು (ರಾಮಣ್ಣನ ತಂದಿ ಅವರು) ಬಹುಶಃ ರಾಮಣ್ಣನ ಮನಿ ಬಿಟ್ಟು ಹೊರಗ ಹಾಕ್ತಿದ್ದಿಲ್ಲ ಕಾಣಸ್ತದ... ಅಥವಾ ಹಂಗ ಮನಿ ಬಿಟ್ಟು ಹೊರಗ ಹಾಕಿದ್ದಕ್ಕ ಅಷ್ಟ ಛೋಲೋ ಸಂಗೀತಗಾರ ಆದ್ನೋ ಗೊತ್ತಿಲ್ಲ. ಆದ್ರ ರಾಮ ಅಂದ್ರ ಗೋಧುಗ ಒಂದು ತರಹ ಸಾಫ್ಟ್ corner... ಇನ್ನ ಇಕಿ ಹಂಗ ಅವನ್ನ ಮಾರಿ ಕಂಡಾಗ ಎಲ್ಲ ಅವನ್ನ ನೋಡ್ಕೋತ ಕೂತ್ರ, ಮದ್ಲ 13 ವರ್ಷಕ್ಕ ಚಿಗುರು ಮೀಸಿ ಬರ್ತಿದ್ದ ರಾಮ ಅರ ಹೆಂಗ ಬಿಡ್ತಾನ.. ಹುಡುಗಿ ಆಗಿ ಅಕಿನ ಹಂಗ ಅಂದ್ರ, ಇನ್ನ ನಾ ಹೆಂಗ ಇರಬಾರದು ಅಂತ ಒಂದು ದಿನ ಊರ ಮಠದ ಹಿಂದಿನ ಸಂದಿ ಒಳಗ ಒಂದು ದಿನ ಅಕಿ ಕೈ ಹಿಡದು ಹೇಳೇ ಬಿಟ್ಟಿದ್ದ "ನಾ ದೊಡ್ಡವ ಆದಮ್ಯಾಲ , ನಿಮ್ಮ ಮನಿಗೆ ಬಂದು ನಿಮ್ಮಪ್ಪಗ ನಿನ್ನ ಲಗ್ನ ಮಾಡಿಕೊಡು ಅಂತ ಕೇಳತೆನಿ... ನಡಿತದ ಲಾ" ಅಂತ... ಅಕಿ ಗೋಧು ಆಗಿ ಮತ್ತ ಅವಾ ರಾಮ ಆಗಿ ಆಗಿದ್ದು ಅದ ಕಡಿ ಭೆಟ್ಟಿ ಅವರಿಬ್ಬರದು...

ರಾಮಣ್ಣನ ಸುದ್ದಿ ರೇಡಿಯೋನಾಗ ಕೇಳಿದ ಮ್ಯಾಲ ಇವೆಲ್ಲ ಸಂಗತಿ ನೆನಪ ಆಗಿದ್ವು ಗೋಧಕ್ಕಗ...

ಹಂಗ ನೋಡಿದ್ರ ರಾಮ, ರಾಮಣ್ಣ ಏನೂ ಗೋಧಕ್ಕಗ ಈಗೂ ದೂರ ಅಲ್ಲ. ನಶೀಬಾದಾಗ ಇದ್ದಿದ್ದು ಸಂಬಂಧ ಕೂಡೇ ಕೂಡ್ತಾವು ಅನ್ನೋಹಂಗ ರಾಮಣ್ಣಗ ಗೋಧಕ್ಕನ ನಾದ್ನಿನ್ನ ಅಂದ್ರ ಮುಕುಂದರಾಯರ ತಂಗಿ ಕುಮುದಾನ ಕೊಟ್ಟಿದ್ರು. ಹಿಂಗಾಗಿ ಕುಮುದಾನ ನೋಡ್ಲಿಕ್ಕೆ ಆತು, ಮುಂದ ಲಗ್ನಕ್ಕ ಆತು, ಆಮೇಲೆ ಅಕಿ ಬಾಣಂತನ, ಹೆತ್ತಿಬ್ಬಣ ಅನ್ಕೋತ ಕಣ್ಣಿಗೆ ಬೀಳ್ಕೊತ ನ ಇರ್ತಿದ್ರು. ಮೊದಲನೇ ಸಲ ರಾಮಣ್ಣ ಕುಮುದಾನ ನೋಡಲಿಕ್ಕೆ ಅಂತ ಬಂದಾಗ, ಅತ್ಯಾಬಾಯರ ಮೇಲ್ವಿಚಾರಣಿಯೋಳಗ, ಹೊರಗ ಒಳಗ ಅಡ್ಯಾಡೋ ಗೋಧಕ್ಕನ್ನ ನೋಡಿ ರಾಮಣ್ಣಗೂ ಆಶ್ಚರ್ಯ ಆಗಿತ್ತು. ಜೋತಿಗೆ ಎಲ್ಲಿ ಕುಮುದಾನ ಸಂಬಂಧಕ್ಕ ಬ್ಯಾಡಾ ಅಂದ್ರ ಅಂತ ಅಳುಕು ಹುಟ್ಟಿತ್ತು. ಆದ್ರ ಥೇಟ್ ಅತ್ತಿಮನಿ ಸೋಸಿ ಆಗಿದ್ದ ಗೋಧಕ್ಕಗ ಇವೆಲ್ಲ ತಲ್ಯಾಗೂ ಇಲ್ಲದ, ಕುಮುದಾನ ತನ್ನ ತವರಮನಿ ಇರು ಊರಿಗೆ ಕೊಡ್ಲಿಕತ್ತಿದ್ದಕ್ಕ ಅಕಿ ಗರಿ ಬಿಚ್ಚಿದ್ದ ನವಿಲಿನಂಗ ಆಗಿದ್ಳು. ಇನ್ನೇನು ಎಲ್ಲಾ ಸಮಾ ಆಗಿ , ಕುಮುದಾನ ಕನ್ಯಾದಾನ ಗೋಧಕ್ಕ-ಮುಕುಂದನ ಮಾಡಿ, ಒಂದನೇ ಸಲಾ ಅತ್ತಿಮನಿಗೆ ಕಳಿಸೋಮುಂದ ಅಗದೀ ಖುಷಿ ಇಂದ "ನೀ ಏನೂ ಕಾಳಜಿ ಮಾಡಬ್ಯಾಡ ಕುಮುದಾ... ಅಲ್ಲೇ ಕುಲಕರ್ಣ್ಯರ ಚಾಳನಾಗ ನಮ್ಮನಿ ಅದ... ನಮ್ಮ ವೈನಿ ಅರ ಬಂಗಾರದಂತಾಕಿ... ಏನರ ಇದ್ರ, ಅಕಿಗೆ ಹೇಳು... ನಿನ್ನ ಕೈ ಬಿಡುದಿಲ್ಲ" ಅಂತ ಹೇಳಿ ಕಳಸಿದ್ಲು.

ಅಸಲಿಗೆ ಗೋಧಕ್ಕಗ ಪೂರ್ಣ ರಾಮಣ್ಣನ ಕಥಿ ತಿಳದಿದ್ದ ಕುಮುದಾ ಬಾಣಂತನಕ್ಕ ಬಂದಾಗ. 14 ವರ್ಷಕ್ಕ ಮನಿ ಬಿಟ್ಟು ಓಡಿ ಹೋಗಿದ್ದ ರಾಮಣ್ಣ ಕಲ್ಕತ್ತಾಕ್ಕ ಹೋಗಿ, ಅಲ್ಲಿದ್ದ ದೊಡ್ಡ ಸಂಗೀತಗಾರರಿಂದ ಸಂಗೀತ ಕಲತು ಬಂದಿದ್ನಂತ. ಅವರ ಕೃಪಾದಿಂದನ ಭಾಳಷ್ಟು ಅವಕಾಶ ಅವ0ಗ ಸಿಕ್ಕು, ದಿಲ್ಲಿ ಒಳಗ ಒಂದು ಮನಿ ತೊಗೊಂಡಿದ್ದ ಅಂತ. ಆಮೇಲೆ ದಿಲ್ಲಿ ಒಳಗ ನಮ್ಮವರು ತಮ್ಮವರು ಯಾರು ಇಲ್ಲದ್ದಕ್ಕ ಬೇಜಾರ ಆಗಿ, ಒಂದು ದಿನ ನೇಪಾಳ ಯಾತ್ರಕ್ಕ ಹೋಗಿದ್ದ ಅವರ ಅಜ್ಜಿ ( ಅವರ ಅವ್ವನ ಮೌಶಿ) ಯಾರೋ ಅಚಾನಕ್ಕು ದಿಲ್ಲ್ಯಾಗ ಸಿಕ್ಕು, ಅವ0ಗ ಮನಿಗೆ ಬರುಹಂಗ ಜುಲುಮಿ ಮಾಡಿ ಕರ್ಕೊಂಡು ಬಂದ್ರು ಅಂತ. ಆಮೇಲೆ ಇಲ್ಲೇ ಬಂದ ಮ್ಯಾಲ ಅಪ್ಪ ಇಲ್ಲದ ಮನಿ ಜವಾಬ್ದಾರಿ ತೊಗೊಂಡು, ಅವ್ವನ ಒತ್ತಾಯಕ್ಕ ಬಿದ್ದು, ಕುಮುದಾಬಾಯಿನ್ನ ಲಗ್ನ ಆಗಿದ್ರು ಅಂತ.

ಇದ ಎಲ್ಲ ಹಳಿ ಕಥಿನ ನೆನಸ್ಕೊತ ಕೂತಿದ್ದ ಗೋಧಕ್ಕಗ ಕೈಯಾಗ ಸುಲಿಲಿಕತ್ತಿದ್ದು ಪುಂಡಿಪಲ್ಯಾ ಕೈಯಾಗ ಚಟ್ನಿ ಆಗಿದ್ದು ಗೊತ್ತಾಗದ ಅವನ್ನ ಮತ್ತ ಮತ್ತ ಚೂಟಗೋತ ಕೂತಿದ್ಲು. ಮುಕುಂದರಾಯರು ಬಂದು "ಗೋಧು... ನಂದ ಪೂಜಿ ಮುಗಿತು ನೋಡು... ಬಿಸಿ ಭಕ್ರಿ ಬಡಿತಿ ಏನು" ಅಂತ ಕೇಳಿದಾಗನೇ ಎಚ್ಚರ. ಲಗುನೇ ಎದ್ದು ತಾಟು ಹಾಕಿ, ಭಕ್ರಿ ಬಡಿಲಿಕ್ಕೆ ಗೋಧಕ್ಕ ಕೂತಳು.

"ಕೇಳ್ ಇಲ್ಲೇ... ಇವಾ ಅಚ್ಯುತಗ ಕಾರು ತೊಗೊಂಡು ಬಾ ಅಂತ ಹೇಳ್ತೀನಿ... ನಾನು ಮತ್ತ ನಾಣಿ ಇಬ್ರು ಕೂಡೆ ಇವತ್ತ ಸಂಜಿಕ ಬೆಳ್ಳಟ್ಟಿಗ ಹೋಗಿ ಬರ್ತೀವಿ... ನಮ್ಮ ರಾಮಣ್ಣನ ಸ್ಮರಣಾರ್ಥ ಇರು ಕಾರ್ಯಕ್ರಮ ನೋಡು... ನಾವ ಹೋಗಲಿಲ್ಲ ಅಂದ್ರ ಏನು ಚಂದ" ಅಂತ ಜೋರಾಗಿ ಬಿಸಿ ಭಕ್ರಿ ಬಡಿಲೀಕತ್ತಿದ್ದ ಗೋಧಕ್ಕಗ ಮುಕುಂದರಾಯರು ಹೇಳಿದ್ರು. ಬರೆ ಭಜನಿ, ಶೋಬಾನ ಇಂಥಾವ ಮಹಿಳಾಮಂಡಲ ಕಾರ್ಯಕ್ರಮಕ್ಕ ಅಷ್ಟ ಹೋಗತಿದ್ದ ಗೋಧಕ್ಕ ಇಂಥಾ ಕಾರ್ಯಕ್ರಮಕ್ಕ ಕರದ್ರೂ ಬರಂಗಿಲ್ಲ ಅನ್ನೋದು ಮುಕುಂದರಾಯರಿಗೆ 60 ವರ್ಷದ ಸಂಸಾರ ಹೇಳಿ ಕೊಟ್ಟಿತ್ತು. ಆದ್ರ ಏನು ಅನ್ನಸತೊ ಏನೋ, ಗೋಧಕ್ಕ ಸಟ್ಟನ "ಅಲ್ರಿ... ನೀವ ಅಷ್ಟ ಹೋದ್ರ ಏನು ಚೋಲೋ ಇರ್ತದ... ನಾನು ಬರ್ತೀನಿ ಅಂತ... ಕುಮುದಾನೂ ಬರ್ತಾಳ ಅಂತ ರಮಾಬಾಯರು ಹೇಳಲಿಕತ್ತಿದ್ರು... ಅಕಿನ್ನ ಈ ಸಲ ಮನಿಗೆ ಬಾ ಅಂತ ಕರ್ಕೊಂಡು ಬರೋಣ ಅಂತ" ಹೇಳಿದಾಗ, ಎಂದೂ ಇಲ್ಲದ ಇಂದ ಯಾಕ ಇಕಿಗೆ ಸಂಗೀತದ ಹುಚ್ಚು ಅಂತ ವಿಚಾರ ಮಾಡ್ಕೋತ , ಭಾಳ ದಿನದ ಮ್ಯಾಲ ಒಳಗಿಂದು ಜರದ ಸೀರಿ ಉಡುವ ಗೋಧಕ್ಕನ್ನ ನೋಡಿ ಕಣ್ಣತುಂಬಿಸಿಕೊಳ್ಳು ಖುಷಿಯಿಂದ ಒಂದು ಭಕ್ರಿ ಹೆಚ್ಚಿಗೆ ತಿಂದು, ಅಚ್ಯುತಗ ಹೇಳಲಿಕ್ಕೆ ಮುಕುಂದರಾಯರು ಹೊರಟರು.