Click here to Download MyLang App

ಗೋಡೆಗಂಟಿದ ಪ್ರೀತಿ - ಬರೆದವರು : ಕಂಡಿನ್ಯ ಕೊಡ್ಲುತೋಟ | ರೋಮ್ಯಾನ್ಸ್


ನಾನು, ಲವ ಮತ್ತು ರಜನಿ. ನಮ್ಮದು ಬಾಲ್ಯದಿಂದ ಬೆಸೆದಿದ್ದ ಬಾಂಧವ್ಯ. ವಯಸ್ಸಿನಲ್ಲಿ ಇಬ್ಬರೂ ನನಗಿಂತ ಕಿರಿಯರೇ, ರಜನಿ ಮತ್ತು ಲವ ಸ್ವಂತ ಅಕ್ಕ ತಮ್ಮ. ಅವರದ್ದು ತುಂಬು ಕುಟುಂಬವಿದ್ದ ದೊಡ್ಡ ಮನೆಯಾಗಿತ್ತು. ಆ ಊರಿನಲ್ಲಿ ಇದ್ದ ಆರು- ಏಳು ಮನೆಗಳ ಪೈಕಿ ಇವರದ್ದೇ ಶ್ರೀಮಂತಿಕೆ ಮತ್ತು ಹೆಸರಿದ್ದ ಮನೆಯಾಗಿತ್ತು. ನನ್ನದು ಒಂದು ಸಣ್ಣ ಕುಟುಂಬ. ನಾನು, ಅಪ್ಪ, ಅಮ್ಮ ಮತ್ತು ತಮ್ಮ. ಆದರೆ ನಮ್ಮ ಮನೆ ನಮ್ಮ ತಾಲ್ಲೂಕಿಗೇ ಪರಿಚಯವಿದ್ದ ಮನೆಯಾದ್ದರಿಂದ ಮಧ್ಯಮ ವರ್ಗದವರಾದರು ಸದಾ ಜನ ತುಂಬಿರುತ್ತಿದ್ದ ಮನೆ ನನ್ನದಾಗಿತ್ತು. ನನ್ನ ಅಪ್ಪ ಮತ್ತು ಅವರ ಅಪ್ಪ ಗಳಸ್ಯ ಕಂಠಸ್ಯ ಎನ್ನುವಂತಹಾ ಸ್ನೇಹಿತರಾದ್ದರಿಂದ ನಮ್ಮ ಸ್ನೇಹ ಕೂಡಾ ಅನಾಯಾಸವಾಗಿಯೇ ಒಲಿದದ್ದಾಗಿತ್ತು. ನನ್ನ ಮತ್ತು ಲವನದು ಒಂದು ತರಹದ ಚಡ್ಡಿ ದೋಸ್ತಿಗಳೆಂಬ ಸಂಬಂಧ. ನಮ್ಮ ಮನೆಗೂ ಮತ್ತು ಅವರ ಮನೆಗೂ ಎರಡು ಮೈಲಿಯಷ್ಟು ದೂರ. ಆದರೆ ನನ್ನ ಮನೆಯಲ್ಲಿ ಅವನು ಮತ್ತು ಅವನ ಮನೆಯಲ್ಲಿ ನಾನು ಕಳೆದ ಸಮಯಕ್ಕೆ ಲೆಕ್ಕವೇ ಇರಲಿಲ್ಲ. ನಾವುಗಳು ಮಾಡುತ್ತಿದ್ದ ಚೇಷ್ಟೆಗಳು, ಕಳೆದ ಬಾಲ್ಯದ ದಿನಗಳು ಇಂದಿಗೂ ನನ್ನ ಪಾಲಿಗೆ ಸ್ವರ್ಣ ಕಮಲವೇ ಸರಿ. ನನಗಿಂತ ಒಂದು ವರ್ಷ ಚಿಕ್ಕವಳಾಗಿದ್ದ ರಜನಿ ಮತ್ತು ನನ್ನ ಮಧ್ಯೆ ಮೊದಲು ಯಾವ ಅಡ್ಡ ಗೋಡೆಗಳೂ ಇರಲಿಲ್ಲವಾದರೂ ಬಾಲ್ಯದಿಂದ ಯೌವ್ವನಕ್ಕೆ ಕಾಲಿಡುತ್ತಿದ್ದಂತೆ ನಮಗೆ ಮೊದಲಿನಂತೆ ಇರಲಾಗದಾಗಿತ್ತು. ವರ್ಣಿಸಲಾಗದ ಭಾವವೊಂದು ಸದಾ ನಮ್ಮ ನಡುವೆ ಅಡ್ಡಲಾಗಿ ನಿಂತಿರುತಿತ್ತು. ನಾನು ಸಹಜವೆಂಬಂತೆ ಅವಳ ಮುಖಕ್ಕೆ ಮುಖ ಕೊಟ್ಟು ಮಾತನಾಡಿದಾಗಲೆಲ್ಲಾ ಅವಳ ಮುಖದಲ್ಲಿ ಮೂಡುತ್ತಿದ್ದ ಅಸಹಜತೆಯ ಭಾವವು ‘ನಾನು ಹೆಣ್ಣು, ನೀನು ಗಂಡು’ ಎಂಬ ಭೇದವನ್ನು ತೋರ್ಪಡಿಸುತ್ತಿದ್ದ ರೀತಿ ಎನ್ನಿಸುತ್ತಿತ್ತು.
ನಮ್ಮ ಆ ಜೀವನವು ದಟ್ಟ ಕಾಡುಗಳಲ್ಲಿ, ಬಸ್ಸಿನಲ್ಲಿ, ಶಾಲೆಯ ಆಟದ ಮೈದಾನದಲ್ಲಿ, ನಾವೇ ರಚಿಸಿ ನಿರ್ದೇಶಿಸುತ್ತಿದ್ದ ಅರ್ಥವಿಲ್ಲದ ನಾಟಕಗಳಲ್ಲಿ, ಕಟ್ಟಿಕೊಂಡಿದ್ದ ಕನಸುಗಳಲ್ಲಿ, ಬೆಟ್ಟದಲ್ಲಿ ತಿಂದು ತೇಗುತ್ತಿದ್ದ ಹಣ್ಣುಗಳಲ್ಲಿ, ಸಮಯ ಕಳೆಯುತ್ತಿದ್ದ ತರಲೆಗಳಲ್ಲಿ, ಪೋಷಕರಿಂದ ದೂಡಲ್ಪಟ್ಟ ಪಠ್ಯಗಳಲ್ಲಿ ಹೀಗೆ ಒಂದಕ್ಕೊಂದು ತಳಕುಹಾಕಿಕೊಂಡು ಸುಂದರವಾಗಿ ಸಾಗುತ್ತಿತ್ತು. ರಜನಿಯನ್ನು ಹೈಸ್ಕೂಲಿಗೆ ಹುಡುಗಿಯರ ಶಾಲೆಗೆ ಸೇರಿಸಿದ್ದರಿಂದಲೋ ಏನೋ, ಅವಳು ತಮ್ಮನ ಜೊತೆ ಬಿಟ್ಟರೆ ಹೆಚ್ಚು ಇರುತ್ತಿದ್ದದ್ದು ನನ್ನ ಜೊತೆಗೇ ಆಗಿತ್ತು. ಆದ್ದರಿಂದ ಅವಳಿಗೆ ನನ್ನೆಡೆಗೆ ಸ್ನೇಹವನ್ನು ಮೀರಿದ ಭಾವವೊಂದು ಮೂಡಿತ್ತೆಂಬುದು ಅವಳು ನಡೆದುಕೊಳ್ಳುತ್ತಿದ್ದ ರೀತಿಯಿಂದಲೇ ಗೊತ್ತಾಗುತ್ತಿತ್ತು. ಆದರೆ ನನಗೆ ಅವಳ ಮೇಲೆ ಅಂತಹ ಯಾವ ಭಾವನೆಗಳು ಮೂಡಿರದಿದ್ದರೂ ಒಳಮನಸ್ಸು ಮಾತ್ರಾ ನನ್ನ ಹೃದಯದ ಜೊತೆ ಮಾತಾಡಬಲ್ಲ ಗೆಳತಿಯೊಬ್ಬಳನ್ನು ಬಯಸುತ್ತಿತ್ತು.
ಹೀಗಿರುವಾಗ ಅವರ ಮನೆಯಲ್ಲಿ ಅವರ ಹಿರಿಯ ದೊಡ್ಡಪ್ಪನ ಮಗಳ ಮದುವೆ ಸಮಾರಂಭ ಹತ್ತಿರವಾಗಿತ್ತು. ಅವರಪ್ಪನಿಗಿಂತಲೂ ಹೆಚ್ಚು ನನ್ನಪ್ಪನೇ ಆ ಮದುವೆಯ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದುದರಿಂದ ನಾನೂ ಅಪ್ಪನಜೊತೆ ಹೆಚ್ಚಿನ ಸಮಯ ಅಲ್ಲೇ ಕಳೆಯುತ್ತಿದ್ದೆ. ಅಲ್ಲಿಗೆ ಒಂದುವಾರ ಮೊದಲೇ ಹತ್ತಿರದ ನೆಂಟರು-ಇಷ್ಟರುಗಳೆಲ್ಲಾ ಬಂದು ಟಿಕಾಣಿ ಹೂಡಿದ್ದರು. ನನಗೆ ಅವರ ಮನೆಯಲ್ಲಿ ಆ ಹುಡುಗರ ಟೋಳಿ(ಗುಂಪು)ಯ ಜೊತೆ ಸೇರಿಬಿಟ್ಟರೆ ಮಿಕ್ಕಿದೆಲ್ಲವನ್ನೂ ಮರೆತುಬಿಡುತ್ತಿದ್ದೆ. ಹೀಗೆ ಅವರ ಮನೆಯಲ್ಲಿಯೇ ಹೆಚ್ಚು ಸಮಯ ಕಳೆವಂತೆ ಮಾಡಿದ್ದು ಅವಳು. ಅವಳೆಂದರೆ ರಜನಿಯಲ್ಲ! ಮತ್ತೆ?
ಬಹಳ ವರುಷಗಳಿಂದ ಮುಂಬೈನಲ್ಲಿ ಬೀಡುಬಿಟ್ಟಿದ್ದ ಅವರ ಎರಡನೇ ದೊಡ್ಡಪ್ಪ ಕುಟುಂಬ ಸಮೇತರಾಗಿ ಬಂದಿದ್ದರು. ಮದುವೆಗೆ ಇನ್ನೂ ಎರೆಡು ದಿನ ಇತ್ತು. ದಿನದಿಂದ ದಿನಕ್ಕೆ ಜಮಾವಾಗುತ್ತಿದ್ದ ಆಪ್ತ ನೆಂಟರುಗಳಿಂದ ಅವರ ಮನೆ ಸಂತೋಷದ ಅಲೆಯಲ್ಲಿ ಗಿಜಿಗುಡುತ್ತಿತ್ತು. ದೊಡ್ಡವರಿಗೆ ಕಾರ್ಯಕ್ರಮದ ಕೆಲಸಗಳ ಚಿಂತೆಯಾದರೆ ನಾವುಗಳು ದೊಡ್ಡದೊಂದು ಗುಂಪು ಕಟ್ಟಿಕೊಂಡ ನಮ್ಮದೇ ಲೋಕದಲ್ಲಿದ್ದುಬಿಡುತ್ತಿದ್ದೆವು.
ಹೀಗೆ ನಮ್ಮ ಗುಂಪಿನಲ್ಲಿ ಒಬ್ಬಳಾದ ಈ ’ಹರಿಣಿ’ ಮುಂಬೈ ದೊಡ್ಡಪ್ಪನ ಮಗಳು. ಮೊದ ಮೊದಲು ಅವಳು ನನಗೆ ಎಲ್ಲರಂತೆ ಸಹಜವೆನಿಸಿದರೂ ಸಮಯ ಕಳೆದಂತೆಲ್ಲಾ ಏನೋ ಒಂದು ರೀತಿಯ ಆಕರ್ಷಣೆಯ ಕೇಂದ್ರ ಬಿಂದುವಾಗ ತೊಡಗಿದ್ದಳು. ರೂಪದಲ್ಲಿ ರಜನಿಯನ್ನು ಮೀರಿಸುವಂತೇನೂ ಇರದಿದ್ದರೂ ಅವಳ ಲಕ್ಷಣ ಭರಿತ ಮುಖ, ಆಪ್ತವೆನಿಸುವ ನಗು, ಮೋಡಿಗೊಳಿಸುವ ಮಾತು, ಲವಲವಿಕೆ, ಎಲ್ಲಕ್ಕಿಂತಾ ಹೆಚ್ಚು ಅವಳ ವಾತ್ಸಲ್ಯ ತುಂಬಿದ ಆ ನಿಷ್ಕಲ್ಮಷ ಕಣ್ಣುಗಳು ನನ್ನ ಎದೆಯಲ್ಲಿ ಇಲ್ಲಿಯವರೆಗೆ ಆಗದ ಅನುಭವನ್ನು ಸೃಷ್ಟಿಸಿತ್ತು. ಅಲ್ಲಿ ಹರಿಣಿಗೆ ನನ್ನನ್ನು ಬಿಟ್ಟರೆ ಮಿಕ್ಕವರೆಲ್ಲಾ ಹತ್ತಿರದ ನೆಂಟರೇ, ಅದರಲ್ಲೂ ಅಣ್ಣ, ತಮ್ಮ, ಅಕ್ಕ, ತಂಗಿಯರೇ ಆದ್ದರಿಂದ ಅವಳು ನನ್ನೊಂದಿಗೆ ಅಕಸ್ಮಾತ್ ಮಾತನಾಡುವ ಸಂದರ್ಭ ಬಂದರೆ ಅವಳ ಧ್ವನಿಯಲ್ಲಿ ಇರುತ್ತಿದ್ದ ಕಂಪನ ಮತ್ತು ಮುಖದಲ್ಲಿ ಆಗುತ್ತಿದ್ದ ವ್ಯತ್ಯಾಸಗಳು ನನ್ನಲ್ಲೂ ಆಗಿತ್ತಿತ್ತೆಂಬುದನ್ನು ನಾನು ಸೂಕ್ಷ್ಮವಾಗಿ ಗಮನಿಸಿದ್ದೆ. ನಾವು ಎಲ್ಲಾ ಹುಡುಗರೂ ಒಟ್ಟಾಗಿ ತೋಟ ಸುತ್ತುವುದು, ಹತ್ತಿರದ ಅಬ್ಬಿ ಹೊಂಡಕ್ಕೆ ಹೋಗಿ ನೀರಾಟವಾಡಿ ಬರುವುದು, ಕಣ್ಣಾಮುಚ್ಚಾಲೆ, ಕೇರಂ, ಪಗಡೆ, ಕ್ರಿಕೇಟ್, ಶಟಲ್ ಹೀಗೆ ಸದಾ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿರುವಾಗಲೇ ನಾನು ಮತ್ತು ಹರಿಣಿಯು ಒಬ್ಬರನ್ನೊಬ್ಬರು ತುಸು ಅರ್ಥಮಾಡಿಕೊಳ್ಳ ತೊಡಗಿದ್ದೆವು.
ಹೀಗಿರುವಾಗ, ಒಂದು ಸಂಜೆ ಕೇರಂ ಆಡಲು ಕುಳಿತಿದ್ದೆವು. ಎಲ್ಲರೂ ಬೇಕೆಂದೇ ರಜನಿಯನ್ನು ನನ್ನೆದುರಿಗೆ ಕೂರಿಸಿದರು, ಲವ ಮತ್ತು ಹರಿಣಿ ನಮ್ಮ ವಿರುದ್ದ ವಾಗಿ ಕುಳಿತರು. ಪ್ರತಿಯೊಂದು ಆಟದಲ್ಲಿ ನನಗಿದ್ದ ಕೌಶಲ ರಜನಿ ಮತ್ತು ಲವನಿಗೆ ತಿಳಿದಿತ್ತಾದ್ದರಿಂದ “ಇವನು ನಮ್ಮನ್ನು ಕೇರಂನಲ್ಲಿ ನಿರಾಯಾಸವಾಗಿ ಸೋಲಿಸಿಬಿಡುತ್ತಾನೆ” ಎಂದೇ ನಂಬಿದ್ದರು. ಆದರೆ ಹಾಗಾಗಲಿಲ್ಲ. ಅಂದು ನಾನು ಬೇಕೆಂದೇ ಸರಿಯಾಗಿ ಆಡಿರಲಿಲ್ಲ! ಕಾರಣ ಹರಿಣಿಯ ಮುಖದಲ್ಲಿ ಸಂತೋಷದ ಅಲೆಗಳನ್ನು ಕಾಣುವುದು ನನ್ನ ಉದ್ದೇಶವಾಗಿತ್ತು. ರಜನಿ ನನ್ನ ಆ ಕೆಟ್ಟ ಆಟದಿಂದ ಸಹಜವಾಗಿಯೇ ನಿರಾಸೆಹೊಂದಿದ್ದರೆ ನಾನು ಮಾತ್ರಾ ಹರಿಣಿಯ ಗೆಲುವಿನ ಕುಣಿತದಲ್ಲಿ ಕಳೆದು ಹೋಗಿದ್ದೆ. ಆ ಸೋಲು ನನ್ನನ್ನು ಮತ್ತು ಹರಿಣಿಯನ್ನು ಇನ್ನೂ ಹತ್ತಿರವಾಗಿಸಿತ್ತು. ಅವಳು ನನ್ನಬಗ್ಗೆ ತಿಳಿದಿದ್ದರೂ ಇನ್ನಷ್ಟು ತಿಳಿಯುವ ಉತ್ಸಾಹದಲ್ಲಿದ್ದಿದ್ದು ಅಂದು ರಾತ್ರಿ ನಾನು ಅಲ್ಲೇ ಉಳಿಯುವ ನಿರ್ಧಾರಕ್ಕೆ ನಾಂದಿ ಹಾಡಿತ್ತು.
ಆ ದಿನ ಊಟದ ನಂತರ ಕಣ್ಣಾಮುಚ್ಚಾಲೆ ಆಡಲು ನಿರ್ಧರಿಸಿದ್ದೆವು. ಆ ದೊಡ್ಡ ಮನೆಯ ಸಂದಿ ಗೊಂದಿಗಳಲ್ಲಿ ಅಡಗಿಕೊಂಡು ಕಳ್ಳರಾಗದೇ ಆಟ ಮುಗಿಸುವ ಉತ್ಸಾಹ ಎಲ್ಲರಲ್ಲೂ ಇತ್ತು. ಕೆಲವು ಸುತ್ತುಗಳು ಮುಗಿದು ಆಟ ತನ್ನ ತೀರ್ವತೆಯನ್ನು ಹೆಚ್ಚಿಸಿಕೊಂಡಿತ್ತು. ಈ ಬಾರಿ ರಜನಿ ಕಂಬ ಒಂದಕ್ಕೆ ಮುಖವಿಟ್ಟುˌ ಕಣ್ಣು ಮುಚ್ಚಿಕೊಂಡು, “ಕಣ್ಣಾ ಮುಚ್ಚೇ ಕಾಡೇ ಗೂಡೇ, ಉದ್ದಿನ ಮೂಟೆ ಉರುಳಿ ಹೋಯ್ತು, ನನ್ನಯ ಹಕ್ಕಿ ಬಿಟ್ಟೇ ಬಿಟ್ಟೇ ನಿಮ್ಮಯ ಹಕ್ಕಿ ಅಡಗಿಸಿಕೊಳ್ಳಿ... ಕೂಕಾ?? ಎಂದು ರಾಗವಾಗಿ ಹಾಡುತ್ತಾ ಅಡಗಿದವರ ಹುಡುಕುವುದರಲ್ಲಿ ತೊಡಗಿದ್ದಳು. ನಾನು ಮನೆಯ ಮೇಲಿನ ಟೆರೇಸ್ ಬಾಗಿಲ ಸಂದಿಯಲ್ಲಿ ಅಡಗಿದ್ದೆ. ಆಗ ಆಕಸ್ಮಿಕವಾಗಿ ಓಡಿ ಬಂದ ಹರಿಣಿಯೂ ಅಲ್ಲಿಯೇ ಬಂದು ನಿಂತಳು! ಒಬ್ಬರಿಗೊಬ್ಬರು ಅದೆಷ್ಟು ಹತ್ತಿರವಾಗಿದ್ದೆವೆಂದರೆ ನನ್ನ ಬಿಸಿಯುಸಿರು ಅವಳ ಬೆನ್ನನ್ನು ಸವರುತ್ತಿತ್ತು. ಅವಳು ಮೆಲ್ಲನೆಯ ಧ್ವಯಲ್ಲಿ “ ಸ್ವಾರಿ ನನಗೆ ಬೇರ್ಯಾವ ಜಾಗವೂ ಸಿಗಲಿಲ್ಲ ಕಣೋ..., ಮತ್ತೇ... ಮತ್ತೇ... ನಿನ್ನ ಉಸಿರು ನನಗೆ ಕಚಗುಳಿ ನೀಡುತ್ತಿದೆ ಕಣೋ” ಎಂದು ನಾಚುತ್ತಾ ಮುಗುಳ್ನಕ್ಕಿದ್ದಳು. ನಾನು ಅವಳಿಗೆ ಸುಮ್ಮನಿರುವಂತೆ ಕೈ ಸನ್ನೆ ಮಾಡಿದ್ದೆ, ಕಾರಣ ರಜನಿಯ ಗೆಜ್ಜೆ ಸಪ್ಪಳದ ಗುರುತು ನನಗೆ ಚನ್ನಾಗಿ ಗೊತ್ತಿತ್ತು. ಆಟ ಮುಗಿದು ಮಲಗುವ ತನಕವೂ ಎಲ್ಲರ ಹರಟೆ ಮುಂದುವರೆದಿತ್ತು. ಆದರೆ ನನ್ನ ಕಿವಿ ಮಾತ್ರಾ ಅವಳು ಆಗ ಬಾಗಿಲ ಸಂದಿಯಲ್ಲಿ ಉಸುರಿದ ಆ ಪಿಸುಮಾತಿನ ಗುಂಗಿನಲ್ಲೇ ಮುಳುಗಿ ಹೋಗಿತ್ತು.
ಮಾರನೆಯ ದಿನ ಬೆಳಿಗ್ಗೆ ತಿಂಡಿಯ ನಂತರ ಎಲ್ಲಾ ಶಟಲ್ ಆಟದಲ್ಲಿ ತೊಡಗಿದ್ದರು. ಆದರೆ ನನಗೆ ಮಾತ್ರಾ ಅಂದು ಆಡುವ ಮನಸ್ಸಿರಲಿಲ್ಲ. ಅಂಗಳದ ಕಟ್ಟೆಯ ಮೇಲೆ ಸುಮ್ಮನೆ ಕುಳಿತಿದ್ದ ನನ್ನ ಪಕ್ಕ ಬಂದು ಕುಳಿತ ಹರಿಣಿ “ಯಾಕೋ ಆಟ ಆಡುವುದಿಲ್ಲವಾ” ಎಂದು ಕೇಳಿದ್ದಳು? ನಾನದಕ್ಕೆ “ಇಲ್ಲ ಕಣೇ, ನನಗ್ಯಾಕೋ ಈಗ ಆಡುವ ಮನಸ್ಸಿಲ್ಲ” ಎಂದಿದ್ದೆ. ಅದಕ್ಕವಳು “ನನಗೂ ಅಷ್ಟೆ ಕಣೋ.. ಬಾ ಒಂದು ಸುತ್ತು ಕಾಡು ಸುತ್ತಿ ಬರೋಣ. ನನಗೊಬ್ಬಳಿಗೇ ಹೋಗಲು ಭಯವಾಗುತ್ತದೆ” ಎಂದಿದ್ದಳು. ನನಗೆ ‘ಇಲ್ಲ’ ಎನ್ನಲು ಕಾರಣಗಳೇ ಇರಲಿಲ್ಲವಾದ್ದರಿಂದ ಲವನಿಗೆ ತಿಳಿಸಿ ನಾವು ಹತ್ತಿರದ ಕಾಡಿನತ್ತ ಮುಖ ಮಾಡಿದೆವು. ನಮ್ಮ ಆ ನಡುಗೆಯಲ್ಲಿ ಬಹುಪಾಲು ಮೌನವೇ ತುಂಬಿದ್ದರೂ ಇಬ್ಬರೂ ಒಬ್ಬರನ್ನೊಬ್ಬರು ಹೆಚ್ಚು ತಿಳಿಯಲು ಬೇಕಾದ ಮಾತುಗಳು ಹದವಾಗಿ ವಿನಿಮಯಗೊಂಡಿದ್ದವು. ನಮ್ಮಿಬರ ನಡುವೆ ’ದಾಸು’ ನಾಯಿಯಷ್ಟು ಅಂತರವಿದ್ದಿರಬೇಕಷ್ಟೇ. ಅದು ನಮ್ಮ ಒಪ್ಪಿಗೆ ಪಡೆಯದೆಯೇ ನಮ್ಮ ಜೊತೆ ಬಂದಿತ್ತು. ಕಾಡಿನ ಮಧ್ಯ ಭಾಗದಲ್ಲಿನ ಸುರುಗಿ ಹೂವಿನ ಸುವಾಸನೆಗೆ ಹರಿಣಿ ಮಾರುಹೋಗಿ, ನನ್ನ ಬಳಿ ಆ ಹೂವನ್ನು ಕಿತ್ತುಕೊಡುವಂತೆ ಕೇಳಿಕೊಂಡಿದ್ದಳು. ಮರ ಹತ್ತಿ ಅಭ್ಯಾಸವಿತ್ತಾದರೂ ತುಸು ಮೈಗಳ್ಳನಾದ ನನಗೆ ಇಂತಹಾ ಕೆಲಸವೆಲ್ಲಾ ಬೇಸರದ್ದೇ ಆಗಿದ್ದರೂ ಕೇಳಿದವಳ ಮೇಲೆ ವಿಶೇಷ ಕಾಳಜಿ ಬೆಳೆಯುತ್ತಿತ್ತಾದ್ದರಿಂದ ಹಿಂದೆ ಮುಂದೇ ಯೋಚಿಸದೇ ಮರ ಹತ್ತಿದ್ದೆ. ಮಲೆನಾಡಿನ ಮಂದಿಗೆ ಚಳಿಗಾಲದಲ್ಲಿ ಅರಳುವ ಅತ್ಯದ್ಭುತ ಸುಗಂಧ ಬೀರುವ ಸುರುಗಿಯ ಬಗ್ಗೆ ತಿಳಿದೇ ಇರುತ್ತದೆ. ಆದರೆ ಮುಂಬೈನಲ್ಲಿ ವಾಸವಾಗಿದ್ದ ಹರಿಣಿಗೆ ಇದೊಂದು ಹೊಸ ಹೂವು. ಹರೆಯದ ಹುಡುಗಿಯರ ಸುತ್ತ ಅಲೆಯುವ ಪಡ್ಡೇ ಹೈಕಳಂತೆ ಸುರುಗಿಯ ಮಕರಂದಕ್ಕೆ ಜೇನುಗಳು ಮುತ್ತಿದ್ದವು. ಅದನ್ನು ನಯವಾಗು ಓಡಿಸುತ್ತಾ ಒಂದೊಂದೇ ಹೂಗಳನ್ನು ಎದೆ ಜೇಬಿನಲ್ಲಿ ಇಟ್ಟುಕೊಂಡಿದ್ದೆ. ಆದರೆ ಅವಳೆದುರು ಮರ ಹತ್ತುವುದರಲ್ಲಿ ನಿಪುಣನೆಂದು ತೋರಿಸಿಕೊಳ್ಳುವ ಹಂಬಲದಲ್ಲಿದ್ದ ನಾನು ಮರ ಇಳಿಯುವಾಗ ಆಯ ತಪ್ಪಿ ಕೆಳಗೆ ಬಿದ್ದಿದ್ದೆ. ಆದರೆ ಸುರುಗಿಯ ಹೂವನ್ನು ಮಾತ್ರಾ ಹರಣಿಯ ಕೈ ಸೇರಿಸಿದ್ದೆ. ರಕ್ತ ಒಸರುತ್ತಿದ್ದ ನನ್ನ ಮೊಳಕಾಲಿಗೆ ಹರಿಣಿ ತನ್ನ ವೇಲನ್ನು ಸುತ್ತಿ “ ಸೋ ಸ್ವಾರಿ ಕಣೋ ನನ್ನಿಂದ ನಿನಗೆ ಗಾಯವಾಯಿತಲ್ಲಾ ಎಂದು ಮರುಗಿದ್ದಳು. ನಾನು ಅಸಾಧ್ಯ ಉರಿಯನ್ನು ಒಳಗೇ ನುಂಗಿಕೊಂಡು “ಇಟ್ಸ್ ಓಕೆ ಕಣೇ ಹರಿಣಿ.. ನನಗೆ ಇದೆಲ್ಲಾ ಮಾಮೂಲಿ” ಎಂದು ಏನೂ ಆಗದವನಂತೆ ನಟಿಸಿದ್ದೆ. ಹೀಗೆ ನಾವು ನಮಗೇ ಗೊತ್ತಿಲ್ಲದಂತೆ ಹತ್ತಿರವಾಗತೊಡಗಿದ್ದೆವು. ಆ ದಿನ ಸಂಜೆ ನಾವು ಹುಡುಗರೆಲ್ಲಾ ಸೇರಿ ಕ್ರಿಕೇಟ್ ಆಡುತ್ತಿದ್ದೆವು. ರಜನಿ ಮತ್ತು ಹರಿಣಿ ಮಾತ್ರಾ ನಮ್ಮ ಪಂದ್ಯಕ್ಕೆ ವೀಕ್ಷಕರಾಗಿದ್ದರು. ನಾನು ಬ್ಯಾಟಿಂಗ್ ಮಾಡುವಾಗ ಹರಿಣಿ ನನ್ನನ್ನು ಇನ್ನಿಲ್ಲದಂತೆ ಹುರಿದುಂಬಿಸುತ್ತಿದ್ದರೆ, ನಾನು ಸಿಕ್ಸರ್ಗಳ ಮೇಲೆ ಸಿಕ್ಸರ್ ಗಳನ್ನು ಭಾರಿಸುತ್ತಿದ್ದೆ. ಆದರೆ ಕೆಂದಾವರೆಯಂತೆ ಅರಳಿದ ಹರಿಣಿಯ ಮುಖದ ಭಾವನೆಯ ಜೊತೆ ಬಾಡಿದ ಗುಲಾಬಿಯಂತಾಗಿದ್ದ ರಜನಿಯ ಮುಖ ನನ್ನಲ್ಲಿ ಒಂದು ಅನುಕಂಪದ ಅಲೆಯನ್ನು ಹುಟ್ಟಿಸಿತ್ತು. ಬಹಳ ಅನ್ಯೋನ್ಯವಾಗಿದ್ದ ಆ ಇಬ್ಬರೂ ಅಕ್ಕ ತಂಗಿಯರ ನಡುವೆ ಸಣ್ಣದೊಂದು ಒಡಕಿನ ಗೆರೆ ಕಂಡಿದ್ದು ಬರೀ ನನ್ನ ಕಣ್ಣಿಗೇ ಇರಬೇಕು.
ಹೀಗೆ ಮಾರನೆಯ ದಿನವೂ ಕಳೆದು ಮದುವೆಯ ದಿನವು ಬಂದಿತ್ತು. ಅಂದು ಹರಿಣಿ ಕೆಲಸದಲ್ಲಿ ತಲ್ಲೀನಳಾಗಿದ್ದರಿಂದ ನನ್ನ ಬಳಿ ಅವಳಿಗೆ ಹೆಚ್ಚು ಸಮಯ ಕಳೆಯಲಾಗಿರಲಿಲ್ಲ. ಆದರೆ ಊಟಕ್ಕೆ ನನ್ನ ಪಕ್ಕವೇ ಬಂದು ಕುಳಿತಿದ್ದಳು. ಇದು ನನಗೆ ಒಂದು ತರಹದ ಖುಷಿಯ ಜೊತೆಗೆ ಮುಜುಗರವನ್ನೂ ಉಂಟುಮಾಡಿತ್ತು. ಅಂದು ಊಟ ಮುಗಿದದ್ದೇ ಎಲ್ಲಾ ದಿಬ್ಬಣದ ಜೊತೆ ಹುಡುಗನ ಮನೆಗೆ ಹೊರಟರು. ನಾನು ಅಲ್ಲಿಗೆ ಹೋಗುವಷ್ಟು ಸಂಬಂಧಿಯಲ್ಲವಾದ್ದರಿಂದ ಅವರನ್ನು ಬೀಳ್ಕೊಟ್ಟು ಮನೆಗೆ ಹಿಂತಿರುಗಿದ್ದೆ. ನಾನು ಈಗ ಒಬ್ಬಂಟಿಯಾಗಿದ್ದರೂ ಹರಣಿಯ ನೆನಪು ಮಾತ್ರಾ ಮೈ ಮನ ಆವರಿಸಿ ಬಿಟ್ಟಿತ್ತು. ನಾಳೆ ಬೆಳಿಗ್ಗೆ ಎಷ್ಟೊತ್ತಿಗೆ ಆಗುತ್ತದೋ ಎಂದು ಕಾಯುವುದರಲ್ಲಿಯೇ ಸೂರ್ಯನ ಆಗಮನವಾಗಿತ್ತು. ಅಂದು ಬೆಳ್ಳಂಬೆಳಿಗ್ಗೆಯೇ ನನ್ನ ಕಾಲ್ ಗಾಡಿ ಮತ್ತೆ ಅವರ ಮನೆಯತ್ತ ಮುಖ ಮಾಡಿತ್ತು.
ನನಗೆ ಹರಣಿಯ ಮೇಲೆ ಉಂಟಾದ ಭಾವನೆ ಪ್ರೀತಿಯೇ ಎಂದು ಅರಿತ ನಂತರ ಅದನ್ನು ಹೇಗಾದರೂ ಅವಳಿಗೆ ತಿಳಿಸಬೇಕೆಂದು ಚಡಪಡಿಸುತ್ತಿದ್ದ ನನ್ನ ಮನದ ಹಂಬಲವನ್ನು ನೀಗಿಸಲು ಮಾರ್ಗಗಳನ್ನು ಹುಡುಕುತ್ತಿದ್ದೆ. ಅವಳ ಎದುರಿಗೆ ಹೇಳಲು ಧೈರ್ಯ ಬಾರದ್ದರಿಂದ ಸರಿಯಾದ ಸಂದರ್ಭಕ್ಕೆ ಕಾಯುತ್ತಿದ್ದ ನನ್ನ ತಲೆಗೆ ಆಗ ಕತರ್ನಾಕ್ ಐಡಿಯಾವೊಂದು ಹೊಳೆದಿತ್ತು! ಹೌದು, ನಾನು ಸೀದಾ ಬಚ್ಚಲ ಮನೆಯ ನೀರು ಕಾಯಿಸುವ ಒಲೆಯ ಬುಡದಲ್ಲಿದ್ದ ಮಸಿ ಕೆಂಡವನ್ನು ತೆಗೆದುಕೊಂಡು ಹರಿಣಿ ಹೆಚ್ಚು ಸಮಯ ಕಳೆಯುತ್ತಿದ್ದ ಆ ಮನೆಯ ಟೆರೇಸಿನ ಮೇಲೆ ಹೋಗಿ, ಅಲ್ಲಿದ್ದ ಪುಟ್ಟ ಗೋಡೋನಿನ ಗೋಡೆಯ ಮೇಲೆ ಆ ಮಸಿಯ ಕೆಂಡದಿಂದ ’ಐ ಲವ್ ಯು ಹರಿಣಿ’ ಎಂದು ದೊಡ್ಡದಾಗಿ ಗೀಚಿ, ಅದನ್ನು ಬರೆದದ್ದು ನಾನೆ ಎಂದು ಹರಿಣಿಗೆ ಮಾತ್ರಾ ಗೊತ್ತಾಗಲೆಂದು ಅದರ ಕೆಳಗೆ ಸುರಗಿ ಹೂವನ್ನು ಹೋಲುವ ಚಿತ್ರವೊಂದನ್ನು ಬಿಡಿಸಿ, ಕೆಳಗೆ ಬಂದು ಬಿಟ್ಟಿದ್ದೆ. ಅಂದು ಮದುವೆಯ ಮಾರನೆಯ ದಿನವಾದ್ದರಿಂದ ರಿಸೆಪ್ಷನ್ ನಂತಹಾ ಸಮಾರಂಭ ಒಂದನ್ನು ಏರ್ಪಡಿಸಿ, ಖ್ಯಾತ ಯಕ್ಷಗಾನ ಕಲಾವಿದರಿಂದ ಯಕ್ಷ ಪ್ರಸಂಗ ಒಂದನ್ನು ಆಡಿಸುತ್ತಿದ್ದುದರಿಂದ ನಮ್ಮ ಮನೆಯವರೂ ಸೇರಿದಂತೆ ಎಲ್ಲಾ ಊರವರು ಮತ್ತು ನೆಂಟರುಗಳು ಮನೆಯ ಅಂಗಳದ ವೇದಿಕೆಯ ಮುಂದೆ ನೆರದಿದ್ದರು. ಮನದ ಬಯಕೆಯನ್ನು ಬರೆದು ಬಂದಿದ್ದ ನನಗೆ, ನಾನು ಮಾಡಿದ್ದು ತಪ್ಪು ಎನ್ನಿಸಲು ಶುರುವಾಗಿತ್ತು. ಅಕಸ್ಮಾತ್ ಅದನ್ನು ನೋಡಿ ಹರಿಣಿ ಸಿಟ್ಟಾದರೆ? ಇಲ್ಲಾ ಬೇರೆಯಾರಾದರೂ ನೋಡಿ ಇದು ನನ್ನದೇ ಕೆಲಸವೆಂದು ಕಂಡುಹಿಡಿದುಬಿಟ್ಟರೆ? ನಾನೂ ಸಹ ಲವನ ಜೊತೆ ಯಕ್ಷಗಾನವನ್ನು ವೀಕ್ಷಿಸುತ್ತಿದ್ದೆನಾದರೂ ನನ್ನ ಮನಸ್ಸು ಮಾತ್ರಾ ಕಲಸಿದ ಮೊಸರವಲಕ್ಕಿಯಂತಾಗಿತ್ತು. ಹರಣಿ ನನ್ನ ಮತ್ತೊಂದು ಪಕ್ಕ ಬಂದು ಕುಳಿತು ಅಲ್ಲಿ ನಡೆಯುತ್ತಿದ್ದ ಪ್ರಸಂಗದ ಅರ್ಥವನ್ನು ಕೇಳುತ್ತಿದ್ದರೆ ನನ್ನ ಭರತನಾಟ್ಯವಾಡುತ್ತಿದ್ದ ನಾಲಿಗೆ ಅಂದು ಯಕ್ಷಗಾನದ ವೈಭವವನ್ನು ಅವಳಿಗೆ ವಿವರಿಸುವಲ್ಲಿ ವಿಫಲವಾಗಿತ್ತು. ಆದರೆ ಆ ಪ್ರಸಂಗದ ಮಾಧುರ್ಯಕ್ಕೆ ನಾನು ಮನಸೋತು ಕಥೆಯ ಒಳ ಹೊಕ್ಕೆನಾದ್ದರಿಂದ ನನ್ನ ಪಕ್ಕ ಕುಳಿತಿದ್ದ ಹರಿಣಿ ಅಲ್ಲಿಂದ ಮಾಯವಾಗಿದ್ದನ್ನು ಗಮನಿಸಿರಲಿಲ್ಲ. ಸ್ವಲ್ಪ ಸಮಯದ ನಂತರ ಮತ್ತೆ ಗೋಡೆಯ ಮೇಲೆ ಗೀಚಿದ್ದ ಮಸಿ ಕೆಂಡದ ಮಸಿಯ ನೆನಪಾಗಿ, ಯಾರಾದರೂ ನೋಡುವುದರೊಳಗೆ ಅದನ್ನು ಅಳಿಸಿ ಬಂದುಬಿಡಬೇಕೆಂದು ಟೇರಾಸಿನ ಕಡೆಗೆ ಓಡಿದ್ದೆ. ಆದರೆ ಅಲ್ಲಿ ನಡೆದುದ್ದೇ ಬೇರೆ!
ಹೌದು, ಹರಿಣಿ ಆ ಗೋಡೆಯನ್ನೇ ದಿಟ್ಟಿಸುತ್ತಾ ನಿಂತಿದ್ದಳು! ಅದನ್ನು ಕಂಡ ನನ್ನ ಕೈ ಕಾಲುಗಳು ತನಗರಿವಿಲ್ಲದಂತೆಯೇ ನಡುಗತೊಡಗಿದ್ದವು. ನನ್ನ ಎದೆಯ ಬಡಿತವು ಯಕ್ಷಗಾನದವರ ಮದ್ದಳೆ ಸ್ವರವನ್ನೇ ಹೋಲುತ್ತಿತ್ತು. ಅಲ್ಲಿದ್ದರೆ ಕೆಲಸ ಕೆಡಬಹುದೆಂದು ಅಲ್ಲಿಂದ ಓಟ ಕೀಳಲು ಹೊರಟಾಗ ಅಲ್ಲೇ ಯಾರೋ ಕುಡಿದಿಟ್ಟಿದ್ದ ಲೋಟವೊಂದಕ್ಕೆ ನನ್ನ ಕಾಲು ತಗುಲಿ ಟಣ್.. ಎಂದು ಶಬ್ಧವಾಗಿತ್ತು. ತಕ್ಷಣ ತಿರುಗಿದ ಹರಿಣಿ ಓಡಲು ಹೊರಟಿದ್ದ ನನ್ನನ್ನು ನಿಲ್ಲಿಸಿ, ಏ... ಇದು ನೀನೇ ಬರದಿದ್ದು ಅಲ್ವೇನೋ? ಎಂದು ಮೇಷ್ಟ್ರು ವಿದ್ಯಾರ್ಥಿಗಳನ್ನು ಕೇಳುವಂತೆ ಕೇಳಿದ್ದಳು. ನಾನು ನನ್ನ ಗಂಟಲ ಪೆಟ್ಟಿಗೆ ಸರಿಪಡಿಸಿಕೊಂಡು ಹ..ಹ.. ಹೌದು ಎಂದಿದ್ದೆ. ನೀನು ನನ್ನನ್ನು ಈ ದೃಷ್ಟಿಯಲ್ಲಿ ನೋಡುತ್ತಿದ್ದೆಏನೋ?, ನಾನು ನಿನ್ನನ್ನು...ಹೀಗೆ ಏನಾದರೊಂದು ನೆಪ ಒಡ್ಡಿ ಅವಳು ನನ್ನನ್ನು ತಿರಸ್ಕರಿಸುತ್ತಾಳೆ ಎಂದೇ ನಾನು ನಂಬಿದ್ದೆ. ಆದರೆ ಅಂದು ಅಲ್ಲಿ ಹಾಗಾಗಲಿಲ್ಲ! ಮೆಲ್ಲನೆ ನನ್ನ ಬಳಿ ಬಂದ ಹರಿಣಿ ನನ್ನ ಎರಡೂ ಬುಜದ ಮೇಲೆ ತನ್ನ ಕೈಗಳನ್ನಿರಿಸಿ... “ನನಗೂ ನೀನಂದ್ರೆ ತುಂಬಾ ಇಷ್ಟ ಕಣೋ..., ಸಿಕ್ಕರೆ ನನಗೆ ನಿನ್ನಂತಾ ಗೆಳೆಯ ಗಂಡನಾಗಿ ಸಿಗಬೇಕು” ಎನ್ನುತ್ತಾ ನನ್ನ ಹತ್ತಿರವಾಗಿದ್ದಳು. ನನ್ನ ಮತ್ತು ಅವಳ ಕಣ್ಣುಗಳ ಮಿಲನವಾಗಿ, ಕೈಗಳು ಒಂದನ್ನೊಂದು ಬೆರೆತಿದ್ದವು. ಆಗ ಜಗುಲಿಯ ಮೆಟ್ಟಿಲ ಕೆಳಗಿನಿಂದ “ಹರಿಣೀ ಎಲ್ಲಿದ್ದೀಯ? ಬಾರೇ ಊಟಕ್ಕಾಯಿತಂತೆ” ಎಂಬ ರಜನಿಯ ಧ್ವನಿ ನಮ್ಮಿಬ್ಬರನ್ನು ಬೇರೆ ಮಾಡಿತ್ತು. ನನ್ನ ಕೈಗಳಿಂದ ತನ್ನ ಕೈಗಳನ್ನು ಬಿಡಿಸಿಕೊಂಡ ಹರಿಣಿಯು ಕೆಳಗೆ ಓಡುತ್ತಾ, ಒಮ್ಮೆ ನಿಂತು ನನ್ನ ಮುಖವನ್ನು ಇನ್ನೊಮ್ಮೆ ನೋಡಿ ಹೂ ನಗೆ ನಕ್ಕು ಮಾಯವಾಗಿದ್ದಳು. ನಾನು ಈ ಲೋಕವನ್ನೇ ಮರೆತು ಖುಷಿಯ ಅಲೆಯಲ್ಲಿ ತೇಲುತ್ತಾ ಮನೆ ತಲುಪಿದ್ದೆ. ಅಂದು ರಾತ್ರಿ ನಿದ್ರೆ ಎಂಬುದು ನನ್ನ ಪಾಲಿಗೆ ಗಗನ ಕುಸುಮವೇ ಆಗಿತ್ತು. ನಾಳೆ ಬೆಳಿಗ್ಗೆ ಎಷ್ಟು ಹೊತ್ತಿಗೆ ಆಗುತ್ತದೋ ಅವಳನ್ನು ಯಾವಾಗ ಮಾತನಾಡಿಸುತ್ತೇನೋ ಎಂದು ಚಡಪಡಿಸುತ್ತಿದ್ದ ನನಗೆ ಅವಳು ನಾಳೆ ಸಂಜೆಯೇ ಮುಂಬೈಗೆ ಹೋರಡುತ್ತಾಳೆಂಬುದೂ ಗೊತ್ತಿದ್ದದ್ದು ಹೊಟ್ಟೆಯಲ್ಲಿ ನಿಂಬೇಹಣ್ಣನ್ನು ಹಿಂಡಿದಂತಾಗಿತ್ತು. ಬೆಳಿಗ್ಗೆ ಎದ್ದು ಇನ್ನೇನು ಅವರಮನೆಗೆ ಹೊರಡಬೇಕೆಂಬ ತಯಾರಿಯಲ್ಲಿದ್ದೆ ಆದರೆ ಶಿವಮೊಗ್ಗದಲ್ಲಿ ಚಿಕ್ಕಪ್ಪನೊಂದಿಗೆ ಇದ್ದ ನನ್ನ ಅಜ್ಜಿಗೆ ಸೀರಿಯಸ್ ಆಗಿದ್ದರಿಂದ ಅಪ್ಪನ ಜೊತೆ ಹೊರಡುವ ಅಲ್ಲಿಗೆ ಅನಿವಾರ್ಯತೆ ನನ್ನದಾಗಿತ್ತು.
ಆಸ್ಪತ್ರೆಗೆ ಹೋದಮೇಲೆ ಕೇಳಬೇಕೆ? ನಾನು ಮನೆ ಮುಟ್ಟುವುದರಲ್ಲಿ ಸಂಜೆ ಐದು ಗಂಟೆಯಾಗಿತ್ತು. ತಡ ಮಾಡದೇ, ಅಮ್ಮನ ಬಳಿ “ಲವನ ಮನೆಗೆ ಹೋಗಿ ಬರ್ತೀನಿ” ಎಂದು ಹೇಳಿ ಅವರ ಒಪ್ಪಿಗೆಗೂ ಕಾಯದೇ ಅವನ ಮನೆಯತ್ತ ಓಡಿದ್ದೆ. ಅಲ್ಲಿ ನನ್ನ ಊಹೆಯಂತೆಯೇ ಹರಿಣಿ ಹೋಗಿಯಾಗಿತ್ತು. ಅವರನ್ನು ಬೀಳ್ಕೊಡಲು ಲವ ಮತ್ತು ರಜನಿಯೂ ಹೋಗಿದ್ದರೆಂಬುದನ್ನು ಬಿಕೋ ಎನ್ನುತ್ತಿದ್ದ ಮನೆಯೇ ಸಾರುತ್ತಿತ್ತು. ರಜನಿಯ ಅಮ್ಮ ವಸುಂದರತ್ತೆಯು ನನ್ನ ಬಳಿ ಅದೂ-ಇದೂ ಮಾತನಾಡುತ್ತಿದ್ದರೆ ನನ್ನ ಗಮನ ಮಾತ್ರಾ, ನಾನು ಟೆರೇಸಿನ ಮೇಲೆ ಗೀಚಿದ್ದ ಮಸಿಯನ್ನು ಅಳಿಸಿಬಿಡಬೇಕೆನ್ನುವತ್ತಲೇ ಇತ್ತು. ನಾನು ಸಂದರ್ಭ ನೋಡಿಕೊಂಡು ಮನೆಯ ಮಹಡಿಯ ಮೆಟ್ಟಿಲುಗಳನ್ನು ಹತ್ತುವುದರಲ್ಲಿದ್ದೆ ಆದರೆ ಆಗ ಕೆಳಗಡೆಯಿಂದ ಕೂಗಿದ ರಜನಿಯ ಅಮ್ಮ “ ಮಾಣೀ.. ನಿಮ್ಮ ಮನೆಯಿಂದ ಲ್ಯಾಂಡ್ ಲೈನ್ಗೆ ಫೋನು ಬಂದಿತ್ತು... ನಿನ್ನಜ್ಜಿ ಹೋಗಿಬಿಟ್ಟರಂತಪ್ಪ... ನೀನು ಈಗಲೇ ಮನೆಗೆ ಹೊರಡಬೇಕಂತೆ” ಎಂದಿದ್ದು ನನ್ನನ್ನು ಮೇಲೆ ಹತ್ತದಂತೆ ತಡೆದಿತ್ತು. ಹರಿಣಿಯನ್ನು ಕೊನೆಯಬಾರಿ ನೋಡಲಾಗದ ನೋವು ಮತ್ತು ಮಸಿಯನ್ನು ಅಳಿಸಲಾಗದ ಭಯದ ಜೊತೆಗೆ ಅಜ್ಜಿಯನ್ನು ಕಳೆದುಕೊಂಡ ದಖಃವನ್ನೂ ಸೇರಿಸಿಕೊಂಡು ಮನೆಯತ್ತ ಹೆಜ್ಜೆ ಹಾಕಿದ್ದೆ. ಆಗ ಈ ಮೊಬೈಲ್ ಫೋನ್ ಇಲ್ಲದಿದ್ದದ್ದು ನನ್ನ ಮತ್ತು ಹರಿಣಿಯ ಸಂಬಂಧ ಮತ್ತೆ ಚಿಗುರುವ ಭರವಸೆಯನ್ನು ಅಳಿಸಿಹಾಕಿದ್ದರೂ ಕೆಲ ದಿನಗಳ ನಂತರ ಸಿಕ್ಕ ರಜನಿ “ನೀನು ಮತ್ತು ಹರಿಣಿ ಒಬ್ರನ್ನೊಬ್ರು ಎಷ್ಟು ಪ್ರೀತಿಸ್ತಿದ್ರಿ ಅಂತ ನನಗೆ ಗೊತ್ತಿದೆ, ನಾನು ಈ ಬಾರಿ ಬೇಸಿಗೆ ರಜಕ್ಕೆ ಮುಂಬೈಗೆ ಹೋಗುತ್ತೇನೆ, ಆಗ ದೊಡ್ಡಪ್ಪನ ಬಳಿ ನಿಮ್ಮಿಬ್ಬರ ವಿಷಯ ಪ್ರಸ್ತಾಪಿಸುತ್ತೇನೆ, ಹರಿಣಿಗೂ ನಿನ್ನ ಬಗ್ಗೆ ತಿಳಿಸ್ತೀನಿ” ಎಂದಿದ್ದು ನನ್ನಲ್ಲಿ ಹೊಸದೊಂದು ಭರವಸೆಯನ್ನು ಹುಟ್ಟಿಸಿತ್ತು. ಆಗ ರಜನಿಯ ಮುಖದಲ್ಲಿ ತ್ಯಾಗದ ಭಾವ ಎದ್ದು ಕಾಣತ್ತಿದ್ದದ್ದು ಮಾತ್ರಾ ಸುಳ್ಳಲ್ಲ.
ಇಷ್ಟು ಹೊತ್ತು ನಾನು ನಿಮಗೆ ಹೇಳುತ್ತಿದ್ದದ್ದು ನನ್ನ ಮೂವತೈದು ವರುಷದ ಹಿಂದಿನ ನೆನಪುಗಳನ್ನು. ನನಗೀಗ ಮದುವೆಯ ವಯಸ್ಸಿಗೆ ಬಂದ ಒಂದು ಮಗಳಿದ್ದಾಳೆ. ಅವಳು ಹಿಂದೊಂದು ದಿನ ನಾನು ಹೀಗೇ ಇದನೆಲ್ಲಾ ಮೆಲುಕು ಹಾಕುತ್ತಿರುವಾಗಲೇ ನನ್ನ ಬಳಿ ಬಂದು, “ಅಪ್ಪಾ... ಏನು?, ಹಗಲು ಕನಸು ಕಾಣ್ತಿದ್ದೀಯಾ?, ನಾನು ನಿನ್ನ ಬಳಿ ಸ್ವಲ್ಪ ಮಾತನಾಡಬೇಕಿತ್ತು” ಎಂದಳು. ನಾನು ಅವಳ ಬಳಿ ಏನೆಂದು ಕೇಳಿದೆ. ಅದಕ್ಕವಳು “ನಾನು ನಮ್ಮದೇ ಜಾತಿಯ ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದೇನೆ. ಅವರ ಅಪ್ಪ ಅಮ್ಮ ಮುಂಬೈನಲ್ಲಿರುತ್ತಾರೆ. ಹುಡುಗ ಬೆಂಗಳೂರಿನಲ್ಲೇ ಸಾಫ್ಟ್ವೇರ್ ಇಂಜಿನಿಯರ್. ನೀನು ಒಪ್ಪಿದರೆ ಅವರು ಮದುವೆಯ ಮಾತು ಕತೆಗೆ ನಾಳೆಯೇ ನಮ್ಮ ಮನೆಗೆ ಬರುತ್ತಾರಂತೆ” ಎಂದಳು. ನಾನು, ನನ್ನ ಪ್ರೇಮ ಕಥೆಯಂತೆಯೇ ನನ್ನ ಮಗಳದ್ದೂ ಆಗಬಾರದೆಂದು ತಕ್ಷಣದಲ್ಲಿ ಒಪ್ಪಿದ್ದೆ. ಮಾರನೆಯ ದಿನ ಹುಡುಗನ ಕಡೆಯವರು ನಮ್ಮ ಮನೆಗೆ ಹುಡುಗಿ ನೋಡುವ ಶಾಸ್ತ್ರಕ್ಕೆಂದು ಬಂದರು. ಹುಡುಗ-ಹುಡುಗಿ ಇಬ್ಬರೂ ಪರಿಚಯಸ್ತರೇ ಆದ್ದರಿಂದ ಎಲ್ಲೆಡೆ ನಡೆಯುವಂತೆ ಪಾನಕ ಕೊಡುವ ಸಂಪ್ರದಾಯ ನಡೆಯಲಿಲ್ಲ! ಆದರೆ ನನಗೆ ಅಲ್ಲಿ ಸ್ವೀಟ್ ಶಾಕ್ ಒಂದು ಕಾದಿತ್ತು... ಮೂವತ್ತೈದು ವರುಷಗಳ ಹಿಂದೆ ಹರಿಣಿಯ ಎದುರು ಅದರಿದ್ದ ಕಾಲುಗಳು ಇಂದು ಸಹಾ ಅದೇ ರೀತಿ ಅದರಿದವು. ನನ್ನ ಮನಸ್ಸು ಮತ್ತೆ ಹಿಂದಕ್ಕೆ ನುಸುಳಿದರೆ ಹುಡುಗನ ತಾಯಿಯ ಕಣ್ಣುಗಳು ನಾನು ಊರಿನಿಂದ ತಂದು ಬಟ್ಟಲಲ್ಲಿಟ್ಟಿದ್ದ ಸುರುಗಿ ಹೂವನ್ನೇ ತದೇಕ ಚಿತ್ತದಿಂದ ನೋಡುತ್ತಿತ್ತು! ನನ್ನ ಒಪ್ಪಿಗೆಯನ್ನು ಕೇಳಿದ ಮಗಳಿಗೆ ತಲೆಯಲ್ಲಾಡಿಸುವ ಮೂಲಕ ನಾನು ಈ ಮದುವೆಗೆ ಒಪ್ಪಿಗೆ ಸೂಚಿಸಿದೆ. ಒಳ ಮನಸ್ಸು ಮಾತ್ರಾ “ನಿನಗೆ ತಾಯಿಯಾಗಬೇಕಿದ್ದವಳು ನಿನ್ನ ಅತ್ತೆಯ ಸ್ಥಾನದಲ್ಲಿದ್ದಾಳಮ್ಮ... ಸಂತೋಷ” ಎನ್ನುತ್ತಿತ್ತು. ನಾನು ಮತ್ತು ಹರಿಣಿ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡು ವಿಷದದ ನಗು ನಕ್ಕು ಮುಂದಿನ ಕಾರ್ಯಗಳತ್ತ ಗಮನ ಹರಿಸಿದೆವು.