Click here to Download MyLang App

ಗುಂಗು - ಬರೆದವರು : ವಿನೋದಕುಮಾರ್ ಕುಲಕರ್ಣಿ

ಸುತ್ತಲೂ ಕತ್ತಲು ಕತ್ತಲಾಗಿದ್ದಿತು. ಯಾರೂ ಕಾಣುತ್ತಿರಲಿಲ್ಲ. ಯಾರೆಂದರೆ ಯಾರೂ. ಬೆಳಕಿನ ಸುಳಿವೂ ಇಲ್ಲ. ತಂಪಾದ ಗಾಳಿ ನನ್ನತ್ತಲೇ ಬೀಸಿ ಚಳಿ ಹುಟ್ಟಿಸುತ್ತಿತ್ತು. ನಾಲ್ಕು ದಿನಕ್ಕಾಗುವಷ್ಟು ಹೊಟ್ಟೆ ಬಿರಿದು ತಿಂದು ತೆಗಿದ್ದ ನನಗೆ ನಿದ್ದೆಯ ಕೊರತೆಯೇ. ಹಾಯಾಗಿ ಕಣ್ಣು ಮುಚ್ಚಿಕೊಳ್ಳುತ್ತಿತ್ತು. ಎದೆ ತೆರೆದು ಹೊಟ್ಟೆ ಮೇಲೆ ಕೈಯಾಡಿಸುತ್ತಾ ಮಲಗಿದ್ದ ನನಗೆ ಇನ್ನೊಂದು ಲೋಕ ಅದಾಗಲೇ ತೆರೆದುಕೊಳ್ಳುತ್ತಿತ್ತು. ನಾನಾಗಿಯೇ ಎದ್ದು ನಿಂತುಕೊಂಡು ಅತ್ತಿತ್ತ ನೋಡಿ ಕಣ್ದೆರದೆ. ಅದ್ಯಾವುದೋ ಮನುಷ್ಯಾಕೃತಿ ನನ್ನನ್ನು ಆ ಲೋಕಕ್ಕೆ ಕೈ ಹಿಡಿದು ನಡೆಸಿಕೊಂಡು ಹೋದಂತೆ ಅನ್ನಿಸಿತು. ಅಲ್ಲಿ ಬೆಳಕಿತ್ತು. ಬಿಸಿಲು, ಧಗೆ. ಆದರೆ ಯಾರ ಸುಳಿವೂ ಇರಲಿಲ್ಲ. ಅದು ಅಕ್ಷರಸಹ ಕಗ್ಗಾಡು. ಬೆವರು ಮೈಯಿಂದ ಚಣಿಯ ತೊಡಗಿತು. ಆಗಾಗ, ಮಡಿವಾಳ ಹಕ್ಕಿಯ “ಉಂಕ್ ಉಂಕ್” ಎಂಬ ಸದ್ದು, ಪೊದೆಯಿಂದ ಪೊದೆಗೆ ಹಾಡುತ್ತ ನಲಿಯುತ್ತಿರುವ ಸೂರಕ್ಕಿ, ದೂರದ ದಟ್ಟಡವಿಯ ಮಧ್ಯೆ ಗಂಟಿಕ್ಕಿ ಕೂಗುತ್ತಿತ್ತುವ ಹೆಣ್ಣು ನವಿಲಿನ ಕೂಗು ಪ್ರತಿಧ್ವನಿಸುತ್ತಿತ್ತು. ನನಗೆ ಅದ್ಯಾವುದರ ಮಂಪರೋ, ಭ್ರಮೆಯೋ ತಿಳಿಯಲಿಲ್ಲ ಈ ಕಾಡಿನ ಮುಂಭಾದಲ್ಲಿ ಬಂದು ನಿಂತೆ. ಪಕ್ಕದಲ್ಲೆ ಆಚೆ ಬದಿಗೆ ಒಂದು ಬೃಹತ್ತಾದ ಮರ ಬಹುಶಃ ಕಾಡು ಸಂಪಿಗೆ ಮರವಿರಬೇಕು ಎಂದುಕೊಂಡೆ. ಕೆಳಗೆ ಬಿದ್ದು ಮುಂಜಾವಿನ ಇಬ್ಬನಿಗೆÉ ತೊಯ್ದು ಕಪ್ಪಗಾಗಿದ್ದ ಹೂಗಳ ಘಮ, ಘಮ್ಮನೆ ಸುವಾಸನೆ ಬೀರುತ್ತಿತ್ತು.
ಅಗಾಧ ಬೆಟ್ಟ, ಗುಡ್ಡಗಳ ಸಾಲುಗಳು ಅಲ್ಲಲ್ಲಿ ಹಸಿರು ಬಣ್ಣದ ಕುಪ್ಪಸಕ್ಕೆ ಕೆಂಪು ವರ್ಣದ ಬಟನ್ನುಗಳನ್ನು ಜೋಡಿಸಿರುವಂತೆ ಮುತ್ತುಗದ ಮರÀಗಳು ಬಿಸಿಲಿನ ಕಿರಣಗಳಿಗೆ ಹೊಳೆಯುತ್ತಿದ್ದವು. ಅಲ್ಲೆಲ್ಲೊ ಹರಟೆಮಲ್ಲ ಹಕ್ಕಿಗಳ ಗುಂಪಿನ ಗದ್ದಲದ ರಂಪಾಟ. ಕಾಡು ಈಗ ತನ್ನನ್ನೆ ಮದುವೆಗೆ ಬಂದ ಬಂಧುಗಳನ್ನು ಒಳಗೆ ಸ್ವಾಗತಿಸುತ್ತಿರುವ ಹಸಿರು ಸೀರೆಯ ಹೆಣ್ಣು ವೆಲ್ಕಮ್ ಎಂದು ಕೈ ಮುಗಿಯುತ್ತ ತಲೆ ಬಾಗಿ ಸ್ವಾಗತಿಸುತ್ತಿದ್ದಂತೆ ತೋರಿತು. ಅರೇ ಕ್ಷಣ ನಾನೇಕೆ ಇಲ್ಲಿಗೆ ಬಂದೆ ಎಂದು ಯೋಚಿಸಿದೆ. ಏನೊಂದು ತಿಳಿಯದೇ ಹತ್ತು ಹೆಜ್ಜೆ ನಡೆದು ಮುಂದೆ ಬಂದೆÀ. ಕಾಲು ದಾರಿಯೊಂದು ಜಿಂಕೆಗಳೊ, ಸಾರಂಗಗಳೊ, ಕಾಡುಹಂದಿಗಳೊ ಮಾಡಿದ್ದ ಹಾದಿ ಕವಲು ಕವಲಾಗಿ ಮುಂದುವರೆದಿತ್ತು. ಆದರೆ ಇದು ಪ್ರಾಣಿಗಳು ಮಾಡಿದ ದಾರಿಯಾಗಿರದೆ ಮನುಷ್ಯ ಜಾತಿಯವರೇ ನಡೆದಾಡಿ ದಾರಿ ಮಾಡಿಕೊಂಡಿರುವಂತೆ ತೋರಿತು.
ದೂರದಲ್ಲಿ ಕಣ್ಣು ಹಾಯಿಸಿ ಸುತ್ತ ನೋಡಿದೆ. ಎಲ್ಲವೂ ಒಂದೇ ತರ. ಮರಗಳು ಬೇರೆ ಬೇರೆ ಬೇರೆಯಾಗಿರುವುದನ್ನು ತಿಳಿದರು ದೂರದಿಂದ ಎಲ್ಲವೂ ಒಂದೇ ತೆರನೆ ಕಂಡು ಕಣ್ಣು ತಿಕ್ಕಿದೆ. ಕ್ಷಣದಲ್ಲಿ ಪಕ್ಕದಲ್ಲೆ ಗಂಡು ದನಿಯೊಂದು ಪಿಸುಮಾತಿನಲ್ಲಿ ಮಾತನಾಡುತ್ತಿರುವಂತೆ ಹತ್ತಿರದಲ್ಲಿರುವವರಿಗೆ ಕೇಳುವ ಹಾಗೆ ಕೇಳಿ ಬಂತು. ಕಾಡಿನ ಈ ಉಗ್ರ ಮೌನದಲ್ಲಿ ಪ್ರಾಣಿ, ಪಕ್ಷಿ ಕೀಟಗಳ ಸದ್ದು ಕೇಳದೆ ಇದೇನಿದೂ ಮನುಷ್ಯನÀ ದನಿ. ತುಂಬಾ ಅಪ್ತವಾದ ದನಿ ಅದು. ಮತ್ತೆ ನಾನೇಕೆ ಈ ಕಾಡಿನಲ್ಲಿ ಬಂದಿಳಿದೆ. ಯಾವುದಾದರೂ ಊರಿಗೆ ಹೋಗಿದ್ದ ನೆನಪು ಬಾರದಿರದು ಅನ್ನಿಸಿ ಆ ಮಾತು ಬರುತ್ತಿದ್ದ ದನಿಗೆ ಹತ್ತಿರವಾಗಲು ಯತ್ನಿಸಿದೆ, ಅಷ್ಟರಲ್ಲಿ ಚಿಕ್ಕ ಚಿಕ್ಕ ಕೆಂಪು ಚಿಕ್ಕೆಯ ಕಪ್ಪು ಸೀರೆ ತೊಟ್ಟ ಅಮ್ಮ ನನ್ನ ಬಳಿಯೇ ಬರುತ್ತಿದ್ದಾಳೆ. ಪಕ್ಕದಲ್ಲಿ ಕಪ್ಪು ಕಾಟನ್ ಪ್ಯಾಂಟಿನ, ಕಂದು ಬಣ್ಣದ ಉದ್ದ ತೋಳಿನ ಚೆಕ್ಸ್ ಶೆರ್ಟನ್ನು ಮೇಲಾಗಿ ಮಡಿಸಿಕೊಂಡು ಅಮ್ಮನ ಜೊತೆ ಅಪ್ಪನೂ ನೆಟ್ಟಗೆ ನನತ್ತಲೇ ಬರುತ್ತಿದ್ದಾನೆ. ನಾನೂ ಅವರತ್ತ ನಡೆದೆ. ಹತ್ತಿರ ಹತ್ತಿರವಾದರು.
ಅಮ್ಮ “ನಾವ್ ಯಾಕ್ ಇಲ್ಲಿಗ್ ಬಂದ್ದೀದ್ದಿವಿ ಇಲ್ಲೇನ್ ಕೆಲ್ಸಾನಮ್ಮಾ..”ಎಂದು ಅಮ್ಮನನ್ನು ಕೇಳಿದೆ. ಅಮ್ಮ ಮಾತಾಡಲಿಲ್ಲ. “ಇದೆನ್ ಆಯ್ತ ಅಮ್ಮ ನಿಂಗೆ, ಮಾತಾಡು..” ಎಂದು ಕೂಗಿದೆ. ಅಮ್ಮನಿಂದ ಮೌನದ ಪ್ರತ್ಯುತ್ತರ. ಅಪ್ಪನ ಬಳಿಗೆ ಬಂದು “ಅಪ್ಪಾಜಿ..ಇದೇನ್ ನಾವ್ ಇಲ್ಲಿ” ಎಂದೆ. ಅಪ್ಪ ತನ್ನ ಕರ್ಚಿಫ್ನಿಂದ ಮುಖ ಒರೆಸಿಕೊಳ್ಳುತ್ತಾ “ಅಯ್ಯೋ ನಿಮ್ಮಮ್ಮಂದು ಹರಕೆ ಅಂತೆ, ಅದಕ್ಕೆ ಈ ಕಾಡು, ಮೌನ..ಎಲ್ಲಾ” ಎಂದ. “ಅಲ್ಲಪ್ಪಾ ಅಮ್ಮಾ ಯಾಕೆ ಮಾತೇ ಆಡ್ತೀಲ್ಲ” ಎಂದು ಕೇಳಿದೆ. ನಿಮ್ಮ ಅಮ್ಮ ಹರಕೆ ತೀರಿ, ಆ ಕಾಡಿನ ಗುಹೆಯಲ್ಲಿರೋ ಕಲ್ಲು ಬಂಡೆ ದ್ಯಾವ್ರೀಗೆ ತನ್ನ ಕಷ್ಟಾನ್ನೆಲ್ಲ ಪರಿಹಾರ ಮಾಡಬಿಟ್ಟೆ ಕಣಪ್ಪಾ ಎಂದು ಕೈ ಮುಗಿದು ನಮಗೆ ಪ್ರಸಾದ ನೀಡೊವರ್ಗೂ ಮಾತಿಲ್ಲ ಕತೆ ಇ¯್ಲ” ಎಂದು ಅಪ್ಪ ನಾವು ಈ ಕಗ್ಗಾಡಿಗೆ ಪಯಣ ಬೆಳೆಸಿರುವುದಕ್ಕೆ ಸಣ್ಣದಾದ ಸುಳಿವೊಂದನ್ನು ಅಪೂರ್ಣವಾಗಿ ನನ್ನೆದುರು ಬಿಚ್ಚಿಟ್ಟ. ಮಾತಿನಲ್ಲಿ ಮುಳುಗಿದ್ದ ನಮ್ಮನ್ನು ಕಂಡು ಅಮ್ಮ “ಉಶ್..ಬನ್ನಿ” ಎಂಬುವಂತೆ ಸನ್ನೆ ಮಾಡಿ ಅದೇ ಕಾಲುದಾರಿಯಲ್ಲಿ ಅಮ್ಮನ್ನದೇ ಮುಂದಾಳ್ತನಲ್ಲಿ ಮುನ್ನುಡೆಯುತ್ತಾ ಹೋರಟೆವು.
ನನಗೆ ಹಲವಾರು ಪ್ರಶ್ನೆಗಳು, ಅರೆ ಬರೆ ಬೆತ್ತಲಾದ ಉತ್ತರಗಳು ನನ್ನ ಆರನೇ ಇಂದ್ರಿಯಕ್ಕೆ ಗೋಚರಿಸಲು ಪ್ರಾರಂಭಿಸಿದವು. ಅಮ್ಮ ಅದ್ಯಾಕೆ ಈ ಕಗ್ಗಾಡಿನ ಮಧ್ಯೆ ಇರುವ ಕಲ್ಲಿನ ಮೂರ್ತಿಗೆ ಹರಕೆ ಹೊತ್ತಿರುವಳು ಎಂದು. ಅಷ್ಟಕ್ಕೂ ಆ ದೇವರಿರುವ ದಾರಿ ಅಮ್ಮನಿಗೆ ಅದ್ಹೇಗೆ ತಿಳಿದೀತು? ಎಂದೆಲ್ಲಾ ಯೋಚಿಸ ತೊಡಗಿದೆ. ಅಮ್ಮನಿಗೆ ಯಾರು ಈ ಗುಹೆಯ ದೇವರಿಗೆ ಹರಕೆ ಹೊತ್ತು ಬೇಡಿಕೊಳ್ಳಲು ಹೇಳಿದ್ದರೊ ಎಂಬುದು ಜ್ಞಾಪಕವಾಗದೆ ಮಂಕಾಗಿ ನಡೆಯತೊಡಗಿದೆ. “ಅಪ್ಪಾ ಈ ದಾರಿ ಆ ಕಲ್ಲು ದೇವರಿರೊ ಕಡೆಗೆ ಹೋಗುತ್ತೆ ಅಂತೀಯಾ?” ಎಂದು ಕೇಳಿದೆ. ಅಪ್ಪ “ನಾವ್ ಈಗ ನಡೆದಿದ್ದೇ ದಾರಿ ಮಾರಾಯ” ಎಂದು ಸುಮ್ಮನಾದ. ಅಮ್ಮ ಜೋರಾದ ಹೆಜ್ಜೆಗಳನ್ನು ಇಡುತ್ತ ವೇಗವಾಗಿ ನಡೆಯುತ್ತಲೇ ಇದ್ದಳು. ಅವಳಿಗೆ ಅದ್ಯಾವುದೋ ನೆÀಮ್ಮದಿ ಕ್ಷಣಮಾತ್ರದಲ್ಲಿ ಸಿಗುತ್ತಿರುವ ಹಂಬಲ ಕಳವಳ ಅವಳ ನಡೆಗೆಯ ಹೆಜ್ಜೆಗಳಲ್ಲಿ ಕಾಣುತ್ತಿತ್ತು. ಅಪ್ಪ ಇದ್ಯಾವುದರ ಪರಿವೆಯೆ ಇಲ್ಲದೆ ತನ್ನ ಕಾಲನ್ನು ಸೋಮಾಪುರಕ್ಕೊಂದು, ಬಂಕಾಪುರಕ್ಕೊಂದು ಎನ್ನುವಂತೆ “ಚೊರಕ್..ಪರಕ್..” ಎಂಬ ಚಪ್ಪಳಿಯ ಸದ್ದಿನೊಂದಿಗೆ ಕಾಲಿಡುತ್ತಾ ನಡೆಯುತ್ತಿದ್ದ.
ಅಮ್ಮನ ಹರಕೆ ಅದು ಇದು ಏನೆನೋ ನೆನಪಾಗ ಹತ್ತಿತು. ಅದೇ ಆ ಒಂದು ಮಟ ಮಟ ಮಧ್ಯಾಹ್ನ ಬಂದಿದ್ದ ಅಮ್ಮನ ಆಳವಾದ ಸ್ನೇಹಿತೆ ಅಮ್ಮನಿಗೆ “ನಿನ್ನ ಮಗನನ್ನಾ ಸರಿ ಮಾಡಿ, ಶಾಣ್ಯಾ ಆಗುವ ಹಾಗೆ ಮಾಡಬೇಕಂದ್ರ ನೀನು ಆ ಗಾಳಿ ಸಾಮಿ ಕಡೆ ಹೋಗಿ ಪರಿಹಾರ ಕೇಳದಿದ್ರೆ ನಾಳೆ ನಿನ್ನ ಮಗ ಇನ್ನೊಬ್ರ ತಲೆನೆ ಒಡದ್ ಬರ್ತಾನ್ ನೋಡು” ಎಂದು ಹೇಳಿದ್ದು ನೆನಪಾಯಿತು. ಅಮ್ಮ ತನ್ನ ಸ್ನೇಹಿತೆಯ ಸಲಹಯಂತೆ ಸಂಜೆಯೇ ನನ್ನನ್ನು ಕರೆದುಕೊಂಡು ಆ ಗಾಳಿ ಸಾಮಿಯ ಮುಂದೆ ತಂದು ಕೂರಿಸಿದ್ದಳು. ನಾನು ಮಾತಾಡದೆ ಅಮ್ಮನನ್ನೆ ನೋಡುತ್ತ ಕೂತಿದ್ದೆ. ಅವರಿಗೆ ಕೈ ಮುಗಿದು “ಹ್ಯಾಂಗರ ಮಾಡಿ ನನ್ನ ಮಗನ್ನ ಉಢಾಳ್ತನವನ್ನು ಕಡಿಮೆ ಮಾಡಿ..ಪುಣ್ಯ ಕಟ್ಕಾಳ್ರಿ ಸಾಮ್ಯಾರ..” ಎಂದು ಬೇಡಿಕೊಂಡಾಗ ನನಗೆ ಹೇಗೆಗೋ ಅನ್ನಿಸಿದ್ದು ನೆನೆಸಿಕೊಂಡಾಗÀ ಈಗಲೂ ಹೊಟ್ಟೆ ಹಿಸುಕಿದಂತಾಗುತ್ತದೆÉ. ಈಗ ಅದೇ ಗಾಳಿ ಸ್ವಾಮಿಯ ಪರಿಣಾಮದಿಂದ ನನ್ನಮ್ಮ ಈಗ ಕಗ್ಗಾಡಿನ ಅಡವಿ ದೇವರಿಗೆ ಹರಕೆ ಹೊತ್ತು ಮುಳ್ಳು ಕಲ್ಲಿನ ಹಾದಿಗೆ ದಾರಿ ಬೆಳೆಸಿದ್ದಾಳೆ ಎಂದು ತಿಳಿದು “ಅಮ್ಮಾ..ಬೇಡ ಕಣಮ್ಮಾ ಬಾ ಹೋಗೋಣ ಎಲ್ಲಾ ಸರಿ ಹೋಗುತ್ತೆ” ಎಂದು ಹೇಳಿ ಅವಳನ್ನು ಅಲ್ಲಿಯೇ ತಡೆದು ನಿಲ್ಲಿಸ ಬೇಕೆನ್ನಿಸಿತು ಆದರೆ ಅವಳ ಪ್ರತ್ಯುತ್ತರ ನನಗೆ ತಿಳಿಯದೇ ಇದ್ದಿರಲಿಲ್ಲ.
ನಾನು ನನ್ನ ಹುಂಬುತನದ ನಿರ್ಧಾರಗಳನ್ನೆಲ್ಲ ತ್ಯಜಿಸಿ ಈಗ ಅಮ್ಮನ ಮಾತನ್ನು ಕೇಳುವಂತಹ, ಅವಳು ಹಾಕಿದ ಗೆರೆಯನ್ನು ದಾಟದೆ ಅವಳ ಮಾತನ್ನು ಶಿರಸಾವಹಿಸಿ ಪಾಲಿಸುವಂತಹ ಮಗನಾಗಲು ನಿರ್ಧರಿಸಿದ್ದೆ. ಹಾಗಂದ ಮಾತ್ರಕ್ಕೆ ನಾನು ಅಮ್ಮನ ಮಾತನ್ನು ಮೀರಿದವನಲ್ಲ. ನನ್ನಮ್ಮ ಆ ಖಾಲಿ ಬಲೂನಿನ ಗಾಳಿ ಸ್ವಾಮಿಗೆ ಕೈ ಮುಗಿದು ಕಷ್ಟದ ಆ ದಿನದಲ್ಲೂ ಕಂತೆ ಕಂತೆ ಹಣವನ್ನು ಅವನಿಗೆ ಸುರಿದಾಗಲೇ ನಾನು ಇನ್ನು ಮುಂದೆ ಅಮ್ಮನ ಮಾತನ್ನು ಮೀರಬಾರದೆಂದು ನಿರ್ಧರಿಸಿಬಿಟ್ಟಿದ್ದೆ. ಆದರೆ ಇಂದು ನಾನು ಸರಿ ಹೋಗಿ ಅಮ್ಮನ ಮಾತು ಕೇಳುವಂತಾದರೂ ಅಮ್ಮನಿಗೆ ಆ ಗಾಳಿ ಸ್ವಾಮಿಯ ಪವಾಡವೇ ನಾನಿಂದು ಜಾಣನಾಗಿ ತಂದೆ ತಾಯಿಯ ಕೀರ್ತಿಯನ್ನು ಎತ್ತರೆತ್ತರಕ್ಕೆ ಹೆಚ್ಚಿಸಿರಲು ಕಾರಣವೆಂದು ತಪ್ಪು ತಿಳಿದಿದ್ದಳು.
ಕಾಡೊಳಗಡೆ ನಡೆಯುತ್ತಿದ್ದಂತೆ ಕಾಡು ದಟ್ಟವಾಗುತ್ತಾ ನಿಗೂಢವಾಗುತ್ತಾ ಹೋಯಿತು. ದೂರದಲ್ಲೆಲ್ಲೊ ಮೇಲಿನಿಂದ ಧುsÀಮ್ಮಿಕ್ಕುತ್ತರುವ ಜಲಧಾರೆಯ ಸದ್ದು ಕೇಳಿತು. ನನಗೆ ಆ ಜಲಪಾತದ ರಮಣೀಯತೆಯನ್ನು ಒಮ್ಮೆ ಕಣ್ತಂಬಿಕೊಳ್ಳಬೇಕೆನ್ನಿಸಿತ್ತಾದರೂ.. ಅಮ್ಮ? ಅಮ್ಮನಿಗೆ ಈ ನೀರಿನ ಹರಿವು, ನದಿ, ಝರಿಗಳು ಅದೆಷ್ಟು ಇಷ್ಟ, ಸಣ್ಣ ಸಣ್ಣ ಜಲಜಲ ಹರಿಯುವ ಝರಿಗಳೆನಾದರು ಕಂಡರೆ ನೀರಿನಲ್ಲಿ ಕಾಲುಗಳನ್ನು ಬಿಟ್ಟು ಪಟಪಟನೆ ಕಾಲು ಬಡಿದು ಸಂತಸ ಪಡುತ್ತಿದ್ದಳು. ಆದರೆ ಇದ್ಯಾವುದರ ಪರಿವೆ ಇಲ್ಲದೆ ಅದಕ್ಕಿಂತಲೂ ಮಿಗಿಲಾದ ಕಾರ್ಯವೊಂದು ಇರುವಂತೆ ಅಮ್ಮ ನಡೆಯುತ್ತಲೇ ಇದ್ದಾಳೆ. ಅಮ್ಮನಿಗೆ ಮಗನ ಮೇಲಿನ ಅಕ್ಕರೆ ಅದೆಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದಿತು? ಮಕ್ಕಳÀ ಏಳ್ಗೆಗೆ ಎಲ್ಲ ತಂದೆ ತಾಯಿಯ ಜೀವಗಳು ಅದೆಷ್ಟು ಕಾಲ ತಮ್ಮ ಜೀವವನ್ನು ಸವೆಯಲು ಪಣಕ್ಕಿಟಂತೆ ಹೋರಾಡುತ್ತಾರೆ? ಎಂದೆಲ್ಲಾ ಅನ್ನಿಸಿ ಮುಖ ಬೀಳುಚಿಕೊಂಡು ಬೇಸರವಾಯಿತು.
ಕಾಡು ದಟ್ಟವಾದಂತೆ ಈ ಮನುಷ್ಯರ ಸುಳಿವಿಗೆ ಬಾರದ ಆ ಕಲ್ಲು ದೇವರು ಅದೇಲ್ಲಿದ್ದಾನೋ ಏನೋ? ಆ ಕಲ್ಲು ಮೂರ್ತಿಯನ್ನು ಕಂಡವರಾರು? ಆ ಸ್ವಾಮಿಯ ಮಾತಿನಲ್ಲಿ ಅದೆಂತಹ ನಂಬಿಕೆ ನನ್ನ ಅಮ್ಮನ ಹೃದಯದಲ್ಲಿ ಬೆಳೆದು ಈ ಕಾಡು ಹಾದಿಗೆ ಕಾಲು ಇಟ್ಟಿತ್ತು? ಆ ಕಲ್ಲು ಮೂರ್ತಿ ಇರುವ ದಾರಿ ಅದ್ಹೇಗೆ ಅಮ್ಮನಿಗೆ ಇಷ್ಟು ಸ್ಪಷ್ಟವಾಗಿ ಗೋಚರಿಸಿದೆ? ಎನ್ನಿಸಿ ಸುತ್ತಮುತ್ತಲಿನ ಪೊದೆಗಳಡಿಯಲ್ಲಿ ಕಣ್ಣು ತೂರುತ್ತಾ ನಡೆಯತೊಡಗಿದೆ. ಕಾಲುದಾರಿಯ ಮಧ್ಯೆ ಅಕ್ಕಪಕ್ಕದಲ್ಲಿದ್ದ ಲಂಟಾನ ಪೊದೆಗಳರೆಡರ ಮಧ್ಯದ ಕಾಲುದಾರಿಯಲ್ಲಿ ದೊಡ್ಡ ಜೇಡವೊಂದು ಬಲೆಯನ್ನು ಹೆಣೆದಿತ್ತು. ವೇಗವಾಗಿ ನಡೆಯುತ್ತಿದ್ದ ಅಮ್ಮನ ವೇಗವನ್ನು ಅದು ತಡೆದು ನಿಲ್ಲಿಸಿತು. ನಾನು ಅಪ್ಪ ಹೋಗಿ ಜೇಡವನ್ನು ಅಮ್ಮನಿಂದ ಬಿಡಿಸಿ ಮತ್ತೆ ನಡೆಯ ತೊಡಗಿದೆವು. ಅಮ್ಮನ ಏಕಾಂತದ ನಡಿಗೆಗೆ ಈಗ ಮತ್ತಷ್ಟು ಗಾಂಭೀರ್ಯ ಹುಟ್ಟಿಕೊಂಡಿತ್ತು.
ಮತ್ತದೇ ಜಲಧಾರೆಯ ಧುಮ್ಮಿಕ್ಕುವ ಸದ್ದು. ಕೆಲವು ಬಾರಿ ದೂರವಾಗಿ ಮತ್ತೆ ಕೆಲವುಬಾರಿ ಹತ್ತಿರವಾಗುತ್ತಿತ್ತು. ಅಪ್ಪ ಆ ಸದ್ದಿಗೆ ಮರುಳಾಗಿ ಸುತ್ತಲೂ ಒಮ್ಮೆ ಧುಮ್ಮಿಕ್ಕುತ್ತಿರುವ ನೀರಿನ ಸದ್ದಿಗೆ ಕಿವಿಗೊಟ್ಟ. ಅದೆಲ್ಲಿದೆಯೋ ತಿಳಿಯಲಿಲ್ಲ. ನನ್ನನ್ನು ಎಲ್ಲಿರಬಹುದೆಂದು ಸನ್ನೆಯಲ್ಲೆ ಕೇಳಿದ ನನಗೂ ತಿಳಿಯದೇ ತಿಳಿಯದು ಎಂಬಂತೆ ಸನ್ನೆ ಮಾಡಿದೆ. ಅಮ್ಮನಿಗೆ ಜಲಧಾರೆಯ ಸದ್ದು ಕೇಳಿಸಿರಲಿಲ್ಲವೋ? ಅಥವಾ ಕೇಳಿÀಸಿದರೂ ಕೇಳದ ಹಾಗೆ ನಡೆಯುತ್ತಿರುವಳೋ? ಕೇಳಿರಬೇಕು. ತನಗೆ ಬಂದೊದಗಿದ ಕಷ್ಟವನ್ನು ತಿಳಿದಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಪರಿಹಾರ ಮಾಡಿ ಈಗ ನಾಲ್ಕು ಮಂದಿಯ ಮುಂದೆ ಈತ ನನ್ನ ಮಗ ಎಂದು ಹೇಳಿಕೊಳ್ಳುವಂತೆ ಮಾಡಿದ್ದ ಆ ಒಂಟಿ ದೇವರ ಹುಡುಕಾಟದಲ್ಲಿ ಒಂಟಿಯಾಗಿಯೇ ಹೋರಾಡುತ್ತಿರುವಂತೆ ನನ್ನಮ್ಮ ಕಂಡÀಳು. ಅಮ್ಮನಿಗೆ “ಅಮ್ಮಾ ನಾನು ಬದಲಾಗಿದ್ದೆನೆ ಈಗ ನಿನ್ನ ಮಾತಿಗೆ ಮರು ಮಾತಾಡಲ್ಲ..ಕ್ಷಮಿಸಿಬಿಡು ನನ್ನನ್ನು.. ಈ ಕಷ್ಟವೆಲ್ಲಾ ಯಾಕೆ ನಿನಗೆ..” ಎಂದು ಹೇಳಬೇಕೆಂದು ಅನ್ನಿಸಿ “ಅಮ್ಮಾ..” ಎಂದು ಕೂಗಿದೆ. ಅಮ್ಮಾ ಗಾಬರಿಯಿಂದ ಕ್ಷಣಾರ್ಧದಲ್ಲಿ ತಿರುಗಿ ನೋಡಿದಳು. ಆ ನೋಟಕ್ಕೆ ನಾನು ಹೇಳಬೇಕೆಂದುಕೊಂಡಿದ್ದೆಲ್ಲಾ ಮರೆತು ಮತ್ತೆ ಮಗುವಿನಂತಾದೆ. ಏನಿಲ್ಲವೆಂಬಂತೆ ಗೋನು ಅಲ್ಲಾಡಿಸಿ ನಡೆಯತೊಡಗಿದೆ. ಈ ರಹದಾರಿಗೆ ಕೊನೆಯೆಂಬುದು ಇದ್ದರೆ ಸಾಕು ಎನ್ನಿಸಿ ಅಪ್ಪನತ್ತ ನೋಡಿದೆ. ಹರಿಯುತ್ತಿರುವ ಜಲಧಾರೆಯ ಸದ್ದಿನ ಸ್ನಿಗ್ಧ ಹುಡುಕಾಟದಲ್ಲಿ ಅಪ್ಪ ನಿರತನಾಗಿದ್ದ.
ಅಲ್ಲ..ಅದ್ಯಾಕೆ ಅಪ್ಪನಿಗಿರದ ಸಂಕಟ, ನೋವು ಅಮ್ಮನಿಗೆ ಇಷ್ಟು ದೊಡ್ಡದಾಗಿ ಮನೆ ಮಾಡಿದೆ. ಹಲವು ದಿನಗಳ ಕಾಲ ಮಕ್ಕಳಾಗದೇ ನರಳಾಡಿದ್ದ ಅಮ್ಮನಿಗೆ ಅಪ್ಪನ ಕಡೆಯ ಸಂಬಂಧಿಗಳು ಹಿಯಾಳಿಸಿದ್ದರ ಪರಿಣಾಮ ನೊಂದು ಬೆಂದು ಬೇಸತ್ತು ಹೋಗಿದ್ದಳು. ನಾನು ಹುಟ್ಟಿದ ದಿನದಿಂದ ನಾನು ಬೆಳೆದು ದೊಡ್ಡವನಾಗುವವರೆಗೂ ಇದ್ದ ಸಂತಸ, ಖುಷಿ ಎಲ್ಲವೂ ಮತ್ತೆ ಮಾಯವಾಗಿದ್ದು ನನ್ನ ಜನ್ಮಜಾತ ಗುಣವಾದ ಕಿಡಿಗೇಡಿತನದಿಂದ.
ಒಂದೊಮ್ಮೆ ನನ್ನ ಗೆಳೆಯರ ಜೊತೆ ಕ್ರಿಕೆಟ್ ಆಡುತ್ತಿದ್ದಾಗ, ಅಂದಿನ ಆಟ ಮಾತ್ರ ಎಂದಿನಂತಿರದೆ ತುಂಬಾ ಹುರುಪಿನಿಂದ ಕೂಡಿದ್ದಿತ್ತು. ನನ್ನ ಆಪ್ತ ಗೆಳೆಯ ಪ್ರಲಬ್ಧನೂ ನನ್ನ ಜೊತೆಯೇ ವಿರುದ್ಧದ ತಂಡದವರೊಡನೆ ಸೆಣಸಾಡಲು ಸಿದ್ಧನಿದ್ದ. ಬೌಲು ಎಸೆದಿದ್ದೆ ಬ್ಯಾಟಿಂಗು ಮಾಡುತ್ತಿದ್ದ ಧನಂಜಯ ಮುಂದೆ ಬಂದು ಬ್ಯಾಟು ಬೀಸಿದ. ಬೌಲು ಸರಿಯಾಗಿ ನನ್ನ ಗೆಳೆಯ ಪ್ರಲಬ್ಧನ ಕೈಯಲ್ಲಿ ಹೋಗಿ ನೇರವಾಗಿ ಕೈ ಸೇರಿತು. ಆದರೆ ಔಟಾದ ಧನಂಜಯ ತನ್ನ ಎಂದಿನ ತಿರಾದೆ ತೆಗೆದು ಮಾತಿಗಿಳಿದ. ನಾವೆಲ್ಲ ಕೇಕೇ ಹಾಕುತ್ತಾ ಸಂತಸದಿಂದ ಕೂಗಾಡುತ್ತಿದ್ದವು. ಧನಂಜಯನಿಗೆ ತಾನು ಔಟಾಗಿದ್ದೆ ಒಂದು ತಡೆದುಕೊಳ್ಳಲಾಗದ ಸೋಲಾಗಿತ್ತು. ಆಟದಲ್ಲಿ ಸೋಲು, ಗೆಲುವು ಇದ್ದಂತೆಯೇ ಧನಂಜಯನ ರಂಪಾಟಗಳು ಅಷ್ಟೆ ಮಾಮೂಲಾಗಿದ್ದವು. ಆದರೆ ಅಂದು ಮಾತಿನ ಎಲ್ಲೆ ಮೀರಿ ಬಾಯಿಗೆ ಬಂದ ಹಾಗೆ ಧನಂಜಯ ಮಾತನಾಡಲು ಆರಂಭಿಸಿದ್ದ. ಬೌಲಿಂಗು ಮಾಡಿದ ನನ್ನ ಮೇಲೆ ಅವನ ಹರಿತದ ಮಾತುಗಳ ಏಟು ಬೀಸಿ ಬರುತ್ತಿದ್ದವು. ಮಾತಿನ ಹರಿಯನ್ನು ತಡೆದುಕೊಳ್ಳಲಾಗದೆ ನಾನೂ ಮಾತಿಗಿಳಿದು ಆಟ ಮುಂದುವರೆಸುವಂತೆ ಕೇಳಿಕೊಂಡೆ. ಆತನಿಗೆ ತನ್ನ ವೀಕೆಟನ್ನು ಮರಳಿ ನೀಡಬೇಕೆನ್ನವುದೇ ಅವನ ತಿರಾದೆಯಾಗಿತ್ತು. ಅವನ ಮಾತುಗಳು ಹೆಚ್ಚಾಗಿ ನನಗೆ ಸಹಿಸಿಕೊಳ್ಳಲಾಗದೆ ಜೋರು ದನಿಯಲ್ಲಿ ಸುಮ್ಮನಿರುವಂತೆ ಒತ್ತಾಯಿಸಿದೆ. ಆತ ನನ್ನ ಎದೆಯ ಮೇಲೆಯೇ ಬಂದು ಬ್ಯಾಟಿನಿಂದ ನನ್ನ ತಲೆಗೆ ಹೊಡೆಯಲು ಮುಂದಾದ. ನಾನು ಅದರಿಂದ ತಪ್ಪಿಸಿಕೊಳ್ಳಲು ಮುಂದಾದರೂ ಆ ಹೊಡೆತ ನನ್ನ ತಲೆಗೆ ತಾಗಿ ನೋವಾಯಿತು. ತಲೆಗೆ ತಾಗಿದ ಏಟು ಅವನನ್ನು ಕೊಂದೆ ಬೀಡುವಷ್ಟು ಕೋಪ ಹುಟ್ಟಿಸಿತ್ತು. ಅವನ ಕಪಾಲಿಗೆ ಒಂದು ಬಾರಿಸಲು ಮುಂದಾದೆ ಅಷ್ಟು ಹೊತ್ತು ಸುಮ್ಮನೆ ನಿಂತಿದ್ದ ಪ್ರಲಬ್ಧ ನನ್ನನ್ನು ತಡೆದು “ಬಾ..!ಮನೆಗೆ” ಎಂದು ನನ್ನನ್ನು ಮನೆಯತ್ತ ಕರೆದುಕೊಂಡು ಹೋಗಲು ನಿಂತ. ನಾನು ಅವನ ಬಲವಾದ ಹಿಡಿತದಿಂದ ಅವನನ್ನು ಹೊಡೆಯಲು ಯತ್ನಿಸಿದೆ ಆದರೂ ಅವನ ಹಿಡಿತ ಸಡಿಸಲಿಲ್ಲ. “ಬಾ..ಬಾ..” ಎನ್ನುತ್ತಲೇ ಎಳೆದುಕೊಂಡು ಹೋರಟ. “ಬಿಡಲ್ವೊ ನಿನ್ನ ಅದ್ಹೇಗ ಬರ್ತೀಯಾ ಇನ್ಮೇಲೆ ಆಡೋಕೆ ನೋಡ್ತೀನಿ ನನ್ಮಗನೆ, ನಾಳೆ ನಮ್ಮ ಹುಡುಗ್ರಿಗೆ ಹೇಳಿದ್ರೆ ನಿನ್ನನ್ನ ಸಾಯ್ಸೆ ಬಿಟ್ತಾರೆ ಮಗ್ನೆ..” ಎಂದು ಚೀರು ದನಿಯಲ್ಲಿ ಒದರುತ್ತಾ ಮನೆಯತ್ತ ಬಂದು ಮಾತು ನಿಲ್ಲಿಸಿದೆ.
ಆದರೆ, ಆ ಕ್ಷುಲ್ಲಕ ಯುದ್ಧ ಅಲ್ಲಿಗೆ ನಿಲ್ಲದೆ ಧನಂಜಯನ ಅವಾಂತರದಿಂದ ನನ್ನ ಮನೆಯ ಬಾಗಿಲವರೆಗೂ ಬಂದು ನಿಂತಿತು. ಧನಂಜಯನ ತಾಯಿ ಬಾಗಿಲ ಬಳಿ ನಿಂತು ಒದರಾಡಲು ಪ್ರಾರಂಭಿಸಿದ್ದಳು. ಸುದ್ದಿ ತಿಳಿದ ಅಮ್ಮ್ಮ ಒಳಗಿದ್ದ ನನ್ನನ್ನು ಹೊರ ಕರೆದು “ಇದೇನು..” ಎಂದು ಕೇಳುವಂತೆ ಅವರತ್ತ ಕೈ ಮಾಡಿದರು. ಧನಂಜಯನ ತಾಯಿ “ಅವನನ್ನು ಏನ್ ಕೇಳ್ತೀರಾ, ಇಲ್ಲ ಕೇಳಿ ಹೇಳ್ತೀನಿ” ಎಂದು ನಡೆದ ಸಂಗತಿಗೆ ತುಸು ಹೆಚ್ಚೇ ಖಾರದ ಒಗ್ಗರಣೆಯನ್ನು ಸೇರಿಸಿ ಹೇಳಿದಳು. ಅಮ್ಮ ಅವರಿಗೂ ಏನನ್ನು ಹೇಳದೆ, ನನಗೂ ಒಂದು ಮಾತನ್ನು ಬೈಯದೆ ಅಳುತ್ತಾ ಕುಸಿದು ಕೂತಳು. ಬಹುಶಃ ನನ್ನ ಮಗ ಅಂಥÀವನಲ್ಲ ಎಂದು ಹೇಳ ಬೇಕೆಂದುಕೊಂಡಳೊ?ಏನೋ? ಅಮ್ಮ ತುಟಿಕ್ಪಿಟಿಕ್ ಎನ್ನಲಿಲ್ಲ. ಅವಳಿಗೆ ಅದೆಲ್ಲಾ ಸತ್ಯವಾಗಿ ತೋರಿತು. ಧನಂಜಯನ ತಾಯಿಯ ಮಾತಿನ ದಾಟಿಯ ಎದುರಿಗೆ ಅಳುತ್ತ ಕೂತ ಅಮ್ಮಾ ಅದೆಷ್ಟು ಮುಗ್ಧಳು ಎಂದೆನಿಸಿತು. ಧನಂಜಯ ಪಕ್ಕದಲ್ಲಿ ನಿಂತುಕೊಂಡು ಇದೆಲ್ಲವನ್ನು ಊಹಿಸಿರದ ನೋಟದಲ್ಲಿ, ಕ್ಷಮೆಯನ್ನು ತಾನೇ ಕೇಳುವವನಂತೆ ನಿಂತಿದ್ದ. ಧನಂಜಯನ ತಾಯಿ ನನ್ನತ್ತ ನೋಡಿ “ಏಯ್ ಹುಡ್ಗಾ ಅದ್ಯಾರೋ ಕರ್ಕೊಂಡು ಬಂದು ನನ್ನ ಮಗನ್ನಾ ಸಾಯಿಸ್ತೀನಿ ಅಂದ್ಯಲ್ಲಾ, ನೆನಪಿಟ್ಕೊ ನಾನು ಟೀಚರ್ರು ನನ್ನ ಕೈ ಕೇಳಗೆ ನಿನ್ನಂಥ ನೂರಾರು ಹುಡುಗ್ರು ಕಲಿತು ಹೋಗ್ಯಾರೆ ಅವರಲ್ಲಿ ಅರ್ಧ ಜನ ನಿನ್ನಂತವರೇ..ಹುಷಾರು” ಎಂದು ನನ್ನನ್ನು ಹೆದರಿಸಿ ಹೋದಳು. ಆಗ ನಾನು ಅಂತಹವನಲ್ಲ ಎಂದು ಹೇಳಬೇಕಿತ್ತು ಎನ್ನಿಸಿದರು ಹೇಳಲಿಲ್ಲ. ದಾರಿಯಲ್ಲಿ ನಡೆದು ಹೋಗುತ್ತಿದ್ದ ಧನಂಜಯನಿಗೆ “ಇನ್ನು ಮುಂದೆ ಆ ಹುಡುಗನ ಜೊತೆ ಆಡುವದು ಬೇಡ..” ಎಂದು ಅವನ ತಾಯು ಹೇಳುತ್ತಿರುವುದು ನನಗೂ ಅಮ್ಮನಿಗೂ ಜೋರಾಗಿಯೇ ಕೇಳಿದ್ದಿತು.
ಅಂದು ಅಮ್ಮ ಮಾತನಾಡಲಿಲ್ಲ. ಮತ್ತೆ ಮಾತನಾಡಿಸಲು ಮೂರು ದಿನ ತೆಗೆದುಕೊಂಡು ನನಗೆ ಬುದ್ಧಿ ಹೇಳಲು ಬಂದಳು. ಆದರೆ ಧನಂಜಯನ ತಾಯಿಯ ಮಾತುಗಳು ಅಮ್ಮನ ತಲೆಯನ್ನು ಕಂಗೆಡೆಸಿದಂತೆ ನನ್ನಲ್ಲೂ ರೇಜಿಗೆ ಹುಟ್ಟಿಸಿತ್ತು. ಅವತ್ತು ಅಮ್ಮನಿಗೆ ತೊದಲು ತೊದಲಾಗಿ ಎಲ್ಲವನ್ನೂ ಹೇಳಲು ಯತ್ನಿಸಿ, ಏನೂ ಹೇಳಲಾಗದೆ ತೆಪ್ಪಗಾಗಿದ್ದೆ. ರಾತ್ರಿ ರೂಮಿನಲ್ಲಿ ಅಪ್ಪನೆದುರು ಅಮ್ಮ ಅಳುತ್ತಾ “ನಮ್ಮ ಮಾನ ಮರ್ಯಾದೆ ಎಲ್ಲಾ ತೆಗೆದಬಿಟ್ಟಾ” ಎಂದು ಗೋಗರೆಯುತ್ತ ಅಮ್ಮ ಅಳತೊಡಗಿದಾಗ ಅಪ್ಪ “ಏನಾಗಲ್ಲ ಸುಮ್ನೀರೆ..” ಎಂದು ಹೇಳಿ ಸಮಾಧಾನ ಮಾಡಿದ್ದ.
ಮುಂದೊಂದು ದಿನ ನಾನು ಕಾಲೇಜಿನಲ್ಲಿದ್ದಾಗ ಶಾಲ್ಮಲಾ ಎಂಬುವಳು ನನಗೆ ಎಲ್ಲರಿಗಿಂತ ತುಂಬಾ ಹತ್ತಿರವಾದಳು. ಶಾಲ್ಮಲೆ ನನ್ನ ನೋಟದಲ್ಲಿ ಅವಳು ಎಂದಿಗೂ ನನಗೆ ದೊರೆಯಲಾಗದ ಒಳ್ಳೆಯ ಸ್ನೇಹಿತೆ ಮಾತ್ರ. ಆದರೆ ಅವತ್ತು ನಾನು ಅವಳನ್ನು ಮನೆಗೆ ಅಪ್ಪ, ಅಮ್ಮನನ್ನು ಪರಿಚಯಿಸಿಕೊಡಲು ಕರೆದುಕೊಂಡು ಬಂದಾಗ ನನ್ನ ಜೊತೆ ಸದರದಿಂದ ವರ್ತಿಸುತ್ತಿದ್ದ ಶಾಲ್ಮಲಾ ಹಾಗೂ ನನ್ನ ಮೇಲೆ ಅಮ್ಮನ ಕಣ್ಣುಗಳು ಅನುಮಾನ ಹುಟ್ಟಿಸಿದ್ದವು. ಅಮ್ಮನಿಗೆ ನನ್ನ ಮಗ ಎಲ್ಲಿ ಹಾದಿ ತಪ್ಪಿ ಹೋಗುತ್ತಾನೆಂಬ ಭಯ. ಅದಕ್ಕೆ ಅಂದಿನ ರಾತ್ರಿ ಅಮ್ಮ ನನ್ನ ಕೊಣೆಗೆ ಬಂದು “ನೀನು ಅವಳಿಂದ ಆದಷ್ಟು ದೂರಾನೇ ಇರೋದು ನಮಗೂ, ನಿನಗೂ ಎಲ್ಲದಕ್ಕೂ ಒಳ್ಳೆಯದು ಸರಿನಾ..”ಎಂದು ಹೇಳಿ ಹೊರ ನಡೆದಿದ್ದಳು. ನನಗೆ ಅಂದು ನಿದ್ದೆ ಬರಲಿಲ್ಲ. ಅಪ್ತ ಸ್ನೇಹಿತೆಯೊಬ್ಬಳನ್ನು ಸುಖಾಸುಮ್ಮನೆ ದೂರ ಮಾಡುವುದು ಅದೇಷ್ಟರ ಮಟ್ಟಿಗೆ ಸರಿ ಎಂಬುದು ನನ್ನ ವಾದವಾಗಿತ್ತು. ಆದರೆ ಅಮ್ಮನ ಬಳಿ ಅದನ್ನು ಹೇಳಿಕೊಳ್ಳುವಷ್ಟರಲ್ಲಿ ಶಾಲ್ಮಲಾ ಹೇಳದೆ ಕೇಳದೆ ಅವಳ ಅಪ್ಪನಿಗೆ ವರ್ಗವಾದ ಊರಿಗೆ ಪ್ರಯಾಣ ಬೆಳೆಸಿದ್ದಳು.
ಅಂದು ನಾನು ಏಕಾಂಗಿಯಾದೆ. ಅಮ್ಮನಲ್ಲಿ ನನ್ನ ಬಗೆಗೆ ಕಲ್ಪಿತವಾಗಿದ ತಪ್ಪು ಅನಿಸಿಕೆಗಳೆಲ್ಲ ತನ್ನಿಂದ ತಾನೇ ದೂರಾದವಾದರೂ ನನಗೆ ದುಃಖವಾಗಿದ್ದಿರಲಿಲ್ಲ. ಅಂದು ನಾನು ಅಮ್ಮನ ಪಾಲಿಗೆ ನೆಚ್ಚಿನ ಮಗನಾದೆ. ಅಂದಿನಿಂದ ಹಿಡಿದು ಮುಂದೆ ನನ್ನ ಕೊನೆ ವರ್ಷದ ಪಿಯು ರಿಸಲ್ಟ್ ಪೇಪರಿನಲ್ಲಿ ಬಂದಾಗಿನವರೆಗೂ ನಡೆದದೆಲ್ಲಾ ಗಾಳಿ ಸ್ವಾಮಿಯ ಪವಾಡದಂತೆ ತೊರಿ, ಈಗ ಅಮ್ಮನಿಗೆ ಈ ಕಗ್ಗಾಡಿನ ದಾರಿಯಲ್ಲಿ ನಡೆಯಬೇಕಾಗಿ ಬಂದ ನಿಗೂಢ ಕತೆಯಾಗಿತ್ತು.
ಕಾಡು ಈಗ ನನಗೆ ಅಸಹ್ಯವಾಗಿ ತೋರಿತು. ಆ ಕಲ್ಲುದೇವರು ನನ್ನಲ್ಲಿ ಜಿಗುಪ್ಸೆಯನ್ನು ಹುಟ್ಟಿಸುತ್ತಿದ್ದ. ಅಮ್ಮನ ಮೇಲೆ ಹುಚ್ಚು ಕೋಪವೊಂದು ತಾಳಿ ಮೈಕೊಡರಿತು. ಅಮ್ಮ ಜೋರಾಗಿ ನಡೆಯುತ್ತಿದ್ದವಳು ಒಂದು ವಿಶಾಲವಾಗಿದ್ದ ತೆರೆದ ಜಾಗದಲ್ಲಿ ಬಂದು ನಿಂತಿದ್ದೆ ಹಿಂದೆಯಿಂದ ಬರುತ್ತಿದ್ದ ನನಗೂ ಅಪ್ಪನಿಗೂ ಅದೇಕೆ ನಿಂತಕೊಂಡಳು ಎಂಬಿಬುದು ಬೇಗನೆ ಅರ್ಥವಾಗಲಿಲ್ಲ. ಅಪ್ಪ ನಾನು ಅಮ್ಮನ ಮುಂದೆ ಬಂದು ನಿಂತು ನೋಡಿದೆವು. ಎಡಗಡೆಯ ಗುಡ್ಡದ ಮೂಲೆಯಲ್ಲಿ ಕಂಡ ಬಂಡೆಯ ಒಳಗಡೆ ಒಂದು ಗುಹೆ ನಿರ್ಮಾಣವಾಗಿತ್ತು. ಅಮ್ಮ ಅನುಮಾನದಿಂದಲೇ ಆ ಗುಹೆಯತ್ತ ಅಪ್ಪನೊಂದಿಗೆ ನಡೆದಳು. ನನಗೆನೂ ಅಲ್ಲಿಗೆ ತೆರಳಲು ಮನಸ್ಸಾಗಲಿಲ್ಲ. ಬಲಗಡೆಯಿದ್ದ ಕಲ್ಲ ಬಂಡೆಯ ಮೇಲೆ ನಿಂತು ದೂರದ ಬೆಟ್ಟಗುಡ್ಡಗಳನ್ನು ನೋಡಿದೆ. ಸುಂದರವಾದ ದೃಶ್ಯ ಮೈನವೀರೆಳಿಸಿದಂತಿತ್ತು. ದೂರದ ಬೆಟ್ಟದ ಸಾಲುಗಳು ಕಂಗೊಳಿಸುತ್ತಿರುವುದು ಒಂದೆಡೆಯಾದರೆ ಅಲ್ಲೆ ನನ್ನ ಮುಂದೆಯೇ ಗಂಡು ನವಿಲೊಂದು ತನ್ನ ಗರಿಯನ್ನು ಬಿಚ್ಚಿ ನೃತ್ಯ ಮಾಡುತ್ತಿತ್ತು. ಸುತ್ತಮುತ್ತ ನಾಲ್ಕಾರು ಹೆಣ್ಣು ನವಿಲುಗಳು ಅತ್ತಿತ್ತ, ವಧುವಿನೆಡೆ ಕಣ್ಣೋಟ ಬೀರುತ್ತಾ ಅಡ್ಡಾಡುತ್ತಿದ್ದವು. ಈ ದೃಶ್ಯವನ್ನು ತೋರಿಸಬೇಕೆಂದು ಅಮ್ಮನನ್ನು ಕರೆಯಬೇಕೆಂದುಕೊಂಡೆ ಅಮ್ಮ ಅದಾಗಲೇ ಗುಹೆಯ ಒಳ ನಡೆದಿದ್ದಳು. ಆದರೂ ಆ ಗುಹೆ ಏನೂ ಅಷ್ಟಾಗಿ ದೊಡ್ಡದಾಗಿರುವಂತೆ ತೋರಲಿಲ್ಲ. ದೂರದಿಂದಲೇ ಗುಹೆಯೊಳಗೆ ಕಣ್ಮಚ್ಚಿ ಧ್ಯಾನಸ್ಥಳಾಗಿ ಕೂತಿರುವುದು ಕಾಣಿಸಿತು. ಅಪ್ಪ ಅಮ್ಮನನ್ನು ಬಿಟ್ಟು ದೂರದಲ್ಲಿ ಏನೋ ಕಂಡವನಂತೆ ನನ್ನತ್ತ ಉತ್ಸಾಹದಿಂದ ಓಡುತ್ತ ಬಂದ.
ನಾನು ನವಿಲಿನ ಈ ಸರಸ ಸಲ್ಲಾಪದ ನೃತ್ಯವನ್ನು ತೋರಿಸಬೇಕೆನ್ನುವಷ್ಟರಲ್ಲಿ ಅಪ್ಪ “ಲೋ ಮಗನೆ..ಇಲ್ಲ ಕೇಳೂ..ಸರಿಯಾಗಿ ಕೇಳು.” ಎಂದು ನನ್ನ ಮಾತನ್ನು ನಿಲ್ಲಿಸಿ ಏನನ್ನೊ ಕೇಳುವಂತೆ ಹೇಳಿದ. ನನಗೆ ನವಿಲಿನ ನೃತ್ಯದಲ್ಲಿ ಮುಳುಗಿದ್ದ ಯೋಚನೆಯೆಲ್ಲ ಬುಡಮೇಲಾಗಿ ಧಾರಕಾರವಾಗಿ ನೀರು ಬೀಳುತ್ತಿರುವ ಸದ್ದು ಸ್ಪಷ್ಟವಾಗಿ ಕೇಳಿಸಿತು. ನಾನು ಹಲ್ಲು ಕಿರಿದು ಅಪ್ಪನ ಮುಖವನ್ನೊಮ್ಮೆ ನೋಡಿ ಅಮ್ಮ ಕುಳಿತಿದ್ದ ಗುಹೆಯತ್ತ ಒಮ್ಮೆ ನೋಡಿದೆ. ಅಪ್ಪಾ “ಬಾ ನಾನು ನೀನು ಹೋಗಿ ಒಂದ್ಸಲ ಮುನುಗಿ ಬರೋನ..” ಎಂದು ನನ್ನನ್ನು ಕರೆದುಕೊಂಡು ಹೊರಟ. ಅಪ್ಪನಿಗೆ ಅಮ್ಮನತ್ತ ಮುಖ ಮಾಡಿ “ಹೇಳಿ ಹೋದರಾಯಿತು” ಎಂದೆ. ಅಪ್ಪ “ಇರ್ಲಿ.. ಬಾರೋ” ಎಂದು ಕೈ ಹಿಡಿದು ಕರೆದುಕೊಂಡು ಹೋದ.
ಹರಿಯುತ್ತ ಮೇಲಿನಿಂದ ಧುಮ್ಮುಕ್ಕುತ್ತಿರುವ ನೀರಿನ ಸದ್ದು ಅಷ್ಟೆ ಅಲ್ಲದೆ ಅದರ ಸುಂದರವಾದ ನೋಟವು ನನ್ನನ್ನು ಹಿಂದೆಂದೂ ಕಾಣದ ಕಲ್ಪನಾ ಲೋಕಕ್ಕೆ ಕರೆತಂದತ್ತಿತ್ತು. ಅಪ್ಪನೂ ಬೇರಗಾಗಿ ಆ ದೃಶ್ಯವನ್ನೆ ಬಾಯಿ ತೆರೆದು ನೋಡುತ್ತಿದ್ದ. ಬೆಳ್ಳಗೆ ಹಾಲಿನಂತೆ ನೊರೆ ಎಬ್ಬಿಸುತ್ತಿದ್ದ ನೀರು ಕೆಳಗಡೆ ಹಚ್ಚ ಹಸಿರಿನಿಂದ ಬದಲಾಗಿದ್ದು ಕಂಡು ಅಚ್ಚರಿಯಾಯಿತು. ಅಪ್ಪ ನೀರಿಗಿಳಿಯೊಣವೆಂದ. ನನಗೆ ಭಯ ಆಗಿದ್ದಿತು. ಹಸಿರು ನೀರಿನ ಸೆಳೆತ ಬೃಹತ್ತಾದ ಬಂಡೆ ಕಲ್ಲಿನ ಮಧ್ಯದಿಂದ ಧುಮ್ಮಿಕ್ಕುವ ನೀರು ಭಯ ಹುಟ್ಟಿಸುವಂತಿತ್ತು. ಆದರೆ ದೂರದಿಂದಲೇ ಅದನ್ನು ಕಂಡು ಅದಕ್ಕೆ ಮಾರು ಹೋದ ಜೀವಿಯೆ ಈ ಜಗದಲ್ಲಿ ಇಲ್ಲ ಎಂದೆನಿಸಿ ಧೈರ್ಯ ಮಾಡಿ ನೀರಿಗಿಳಿದು ಅಪ್ಪ, ನಾನು ತಂಪಾದ ಶುದ್ಧ ನೀರಿನಲ್ಲಿ ಮಿಂದು ಬಂದೆವು.
ಮರಳಿ ಅಮ್ಮ ಕುಳಿತಿದ್ದ ಗುಹೆಯ ಕೆಗೆ ನಡೆಯುತ್ತಿದ್ದಾಗ ಒಂದು ಕಪ್ಪಾದ ನೆರಳಿನಾಕೃತಿ ಕುಣಿಯುತ್ತಿರುವುದು ನನಗೆ ಕಂಡಿತು. ಅಪ್ಪನನ್ನು ನೋಡಿದೆ ಅಪ್ಪನೂ ಅದನ್ನು ನೋಡಿ ಗಾಬರಿಯಾಗಿದ್ದ ಎಂದು ತಿಳಿಯಿತು. ಹತ್ತಿರವಾಗುತ್ತಿದದ್ದೆ ಅಪ್ಪ “ಕರಡಿ..”ಎಂದು ಉದ್ಗರಿಸುತ್ತಿದ್ದದ್ದು ಕೇಳಿ ಬೆಚ್ಚಿಬಿದ್ದೆ. ಅಪ್ಪ ತಡಮಾಡದೇ ನೆಲದಲ್ಲಿ ಎಂತಹದಕ್ಕೊ ತಡಕಾಡುತ್ತಾ “ಕಲ್ಲು ತೊಗೋ..ಕಲ್ಲು” ಎಂದು ಹೇಳಿದನ್ನು ಕೇಳಿ ಕಲ್ಲುಗಳನ್ನು ಹುಡುಕಿದ್ದೆ, ದೊಡ್ಡದಾದ ಕಲ್ಲೊಂದನ್ನು ಕೈಲ್ಲಿ ಹಿಡಿದು ಇಬ್ಬರೂ ಜೋರಾಗಿ ಕೂಗಿಕೊಳ್ಳುತ್ತಾ ಗುಹೆಯತ್ತ ಓಡುತ್ತಿದ್ದದ್ದೆ ಗುಹೆಯಲ್ಲಿದ್ದ ಅಮ್ಮ ನಮ್ಮ ಕೂಗನ್ನು ಕೇಳಿ ಎಚ್ಚೆತ್ತುಕೊಂಡು ಹೊರಗೆ ನೋಡಿದರು ಎಂದು ಕಾಣುತ್ತದೆ ಅಮ್ಮನ ವಿಕಾರವಾದ ಕೂಗು ಗುಹೆಯಿಂದ ಜೋರಾಗಿ ಪ್ರತಿಧ್ವನಿಸಿತು. ಆ ಕೂಗು ಆ ಕರಡಿಯಷ್ಟೆ ವಿಕಾರವಾಗಿತ್ತು. ಅಪ್ಪ ಮುಂದೆ ಬಂದು ಕರಡಿಗೆ ಕಲ್ಲು ಎಸೆದ. ಕರಡಿ ಹೆದರಿಕೊಂಡು ಓಡಿ ಹೋಯಿತೋ? ಇಲ್ಲವೋ? ಅಷ್ಟರಲಿ ನನಗೆ ಯಾರೋ ತಳ್ಳಿದ ಅನುಭವವಾಗಿ ಮೇಲಿಂದ ಕೆಳಗೆ ದಬಕ್ಕನೆ ಬಿದ್ದವನಂತೆ ಮೇಲೆದ್ದು ಕೂತೆ.
ಅಯ್ಯೋ! ಮತ್ತದೆ ಕತ್ತಲು. ಯಾರೂ ಇಲ್ಲ. ಕಣ್ದೆರೆದು ಸಮಯವನ್ನು ನೋಡಿದೆ ಮೂರುಗಂಟೆಯ ರಾತ್ರಿ. ಇದೆಲ್ಲ ಕನಸು ಎಂದು ಹೇಳುವುದು ನನಗೆ ಈಗಲೂ ಆಗದು. ಇದು ನನಗೆ ನಡೆದ ಘಟನೆಯಷ್ಟೆ ಸ್ಪಷ್ಟ. ಅಮ್ಮ ಊಹಿಸಿಕೊಂಡಂತೆ ನಾನು ಸಂಪೂರ್ಣವಾಗಿ ಬದಲಾದಂತೆ ತೋರಿದರು, ಮೊದಲಿನಿಂದಲೂ ನಾನು ಅಸಭ್ಯನೆನಲ್ಲ. ಅಮ್ಮನಿಗೆ ಈ ಕತೆಯನ್ನು ನಡೆದ ಘಟನೆಯಷ್ಟೆ ಸ್ಪಷ್ಟವಾಗಿ ಹಲವಾರು ಬಾರಿ ಹೇಳಿ ಹೇಳಿ ಬೇಸರ ಹುಟ್ಟಿಸಿದ್ದೇನೆ. ಆದರೆ ಕಣ್ಣು ತೆರೆದು ಕುಳಿತಿದ್ದಾಗ ಗೋಚರಿಸಿದ ಅದೆಷ್ಟೋ ದೃಶ್ಯಗಳು, ಕಣ್ಮುಚ್ಚಿಕೊಂಡು ನೋಡಿದಾಗ ಕಂಡ ಆ ಕಗ್ಗಾಡು, ಕಾಲು ಹಾದಿ, ಕಾಡುಸಂಪಿಗೆ, ಸೂರಕ್ಕಿ, ಹರಟೆಮಲ್ಲ, ಹೆಣ್ಣು ನವಿಲಿನ ಕೂಗಿನ ಪ್ರತಿಧ್ವನಿ, ಗುಹೆ, ಜಲಧಾರೆ, ಹಚ್ಚಹಸಿರಿನ ನೀರು, ಅವಿತು ನಿಂತಿದ್ದ ಕರಡಿ ಇವೆಲ್ಲವೂ ನಾನು ನಿಜವಾಗಿ ಕಂಡಿರದಿದ್ದರೂ ಕಂಡಷ್ಟೆ ಸಪೂರವಾದ ಸತ್ಯ.