Click here to Download MyLang App

ಗಲಭೆ - ಬರೆದವರು : ಚಂದ್ರಕಾಂತ್ ವಡ್ಡು, ಸಂಪಾದಕರು ಸಮಾಜಮುಖಿ ಪತ್ರಿಕೆ

ಹೊರಕೋಲಿಯ ಪಲ್ಲಂಗದ ಮೇಲೆ ತುಸು ವಿರಾಮವಾಗಿ ಉರುಳಿಕೊಂಡಿದ್ದ ಬಷೀರ್ ಸಾಹೇಬರು ತಮ್ಮ ಕೈಯಲ್ಲಿದ್ದ ದಿನ ಪತ್ರಿಕೆ ಬಿಚ್ಚಿದ ತಕ್ಷಣ ಅದರೊಳಗೆ ಅಡಗಿ ಕುಳಿತಿದ್ದ ಸುದ್ದಿ ಕಣ್ಣಿಗೆ ರಾಚಿತು. ನಂಬಲಿಕ್ಕಾಗದೆ ಮಾಸಿ ಮಸುಕಾಗಿದ್ದ ಕನ್ನಡಕವನ್ನು ಹೊರಗೆ ತೆಗೆದು ಕಣ್ಣುಜ್ಜಿಕೊಂಡು ಮತ್ತೆ ಅವಸರದಲ್ಲಿ ಧರಿಸಿ ದೃಷ್ಟಿಯನ್ನು ಅಕ್ಷರಗಳೊಂದಿಗೆ ಸಮನ್ವಯಗೊಳಿಸಲು ಪ್ರಯತ್ನಿಸಿದರು. ಕೊನೆಗೆ ನಿರುವಿಲ್ಲದೆ ಸ್ಪಂದಿಸಲೊಪ್ಪಿದ ಕಣ್ಣುಗಳೆರಡು ಪ್ರಯಾಸದಿಂದಲೇ ಅಚ್ಚಾದ ಅಕ್ಷರಗಳನ್ನು ಓದಿದವಾದರೂ ವಿಷಯ ಪ್ರಜ್ಞೆಯನ್ನು ನಂಬಿಸಲು ಮತ್ತಷ್ಟು ಕಾಲ ಹಿಡಿಯಿತು. ಅದೇ ವೇಳೆಗೆ ಚಹಾದ ಕಪ್ ಹಿಡಿದುಕೊಂಡು ಬಂದ ಸೊಸೆಯನ್ನು ದುರುಗುಟ್ಟಿ ನೋಡಿದರು. ಏನೂ ಅರ್ಥವಾಗದೆ ಪೆಚ್ಚಾದ ಸೊಸೆ ಹಿಂದಿರುಗಿದ ನಂತರ ಸುದ್ದಿಯ ತುಣುಕಿನ ಮೇಲೆ ಮತ್ತೊಮ್ಮೆ ಕಣ್ಣಾಡಿಸಿದರು.

“ಮಾಳಾಪುರದಲ್ಲಿ ಕೋಮು ಗಲಭೆ: ಮೂರು ಸಾವು”

ಸತ್ತವರ ಹೆಸರುಗಳಿಗಾಗಿ ಹುಡುಕಿ ನಿರಾಶರಾದರು. ಹೇಳಲಾಗಿದೆ, ತಿಳಿದು ಬಂದಿದೆ ಇತ್ಯಾದಿ ಅಸ್ಪಷ್ಟ ವರದಿ ಬರೆವ ಪೇಪರಿನವರಿಗೆ ಕಂಡದ್ದನ್ನು ಖಚಿತವಾಗಿ ಬರೆವ ಬುದ್ಧಿ ಯಾವಾಗ ಬರುತ್ತದೋ ಎಂದು ಮನಸ್ಸಿನಲ್ಲಿಯೇ ಗೊಣಗುತ್ತ ಥಟ್ಟನೆ ಸ್ಮೃತಿಪಟಲಕ್ಕೆ ನುಗ್ಗಿದ ಕೆಲವು ಹೆಸರುಗಳು, ಅವರ ಆಕಾರಗಳು ಮುಜುಗರವನ್ನುಂಟುಮಾಡಿ ಬಲವಂತವಾಗಿಯೇ ‘ಅವರು ಇರಲಿಕ್ಕಿಲ್ಲ’ ಎಂದು ತಮ್ಮನ್ನು ತಾವೇ ನಂಬಿಸಿಕೊಳ್ಳುತ್ತ ಹಾಸಿಗೆ ಬಿಟ್ಟೆದ್ದರು.

ಬಾಗಿಲಿನ ಹಿಡಿಕೆಗೆ ಸಿಗೆ ಹಾಕಿದ್ದ ಪೈಜಾಮ-ಜುಬ್ಬಗಳನ್ನು ಯಾಂತ್ರಿಕವಾಗಿ ತಮ್ಮ ದೇಹಕ್ಕೆ ತಗುಲಿಸಿಕೊಂಡು ಚಪ್ಪಲಿ ಮೆಟ್ಟಿದರು. ಅಡುಗೆ ಮನೆಯ ಬಾಗಿಲಂಚಿನಿಂದ ಅಚ್ಚರಿಯ ಕಣ್ಣುಗಳನ್ನು ತೂರಿಸಿದ ಫಾತೀಮಾಗೆ ಮಾವ ಹೊರಟದ್ದು ಎಲ್ಲಿಗೆ ಎಂದು ಕೇಳಬೇಕೋ ಬೇಡವೋ ಎಂಬ ಸಂದಿಗ್ಧ, ಕೇಳಿದರೆ ಯಾವುದೋ ಚಿಂತೆಯಲ್ಲಿರುವ ಮಾವಯ್ಯ ಗದರಬಹುದು. ಕೇಳದಿದ್ದರೆ ಮಧ್ಯಾಹ್ನ ಊಟಕ್ಕೆ ಬರುವ ಗಂಡ ‘ಅಪ್ಪನ ಬಗ್ಗೆ ಸ್ವಲ್ಪನೂ ಕಾಳಜಿಯಿಲ್ಲ ನಿನಗೆ’ ಎಂದು ಹೀಯಾಳಿಸಿಯಾನು. ಆಕೆಯ ನಿರ್ಧಾರ ಆಕಾರ ಪಡೆವ ಮುಂಚೆಯೇ ಬಷೀರ್ ಸಾಹೇಬರು ರಸ್ತೆಗಿಳಿದಾಗಿತ್ತು.

ನಿಧಾನ ಹೆಜ್ಜೆಗಳಲ್ಲಿ ಭಾರ ಹೃದಯ ಹೊತ್ತು ನಡೆದಿದ್ದ ಬಷೀರ್ ಸಾಹೇಬರಿಗೆ ಎದುರು ಸಿಕ್ಕ ಅನೇಕ ಜನ ‘ಸಲಾಂ ಆಲೇಕುಂ’ ಚೆಲ್ಲುತ್ತಲೆ ಸಾಹೇಬರನ್ನು ವಿಚಿತ್ರವಾಗಿ ನೋಡಿ ಕೇಳಬೇಕೆಂದುಕೊಂಡ ಏನನ್ನೋ ಕೇಳಲಾಗದೆ ನಡೆದುಹೋಗುತ್ತಿದ್ದರು. ತೀರಾ ನಿರ್ಲಿಪ್ತವಾಗಿ ಲೆಕ್ಕಾಚಾರದ ನಡೆ ಇಡುತ್ತಿದ್ದ ಸಾಹೇಬರಿಗೆ ಪ್ರತಿವಂದನೆ ಸಲ್ಲಿಸುವುದರ ಹೊರತಾಗಿ ಮತ್ತೇನೂ ಅರ್ಥವಾಗುವಂತಿರಲಿಲ್ಲ. ಮನಸ್ಸಿನಲ್ಲಿ ಊಹೆ, ತರ್ಕಗಳ ಭಾರೀ ಸಂತೆ ನೆರೆದಿತ್ತು. ನೀಳವಾಗಿ ಇಳಿಬಿದ್ದಿದ್ದ ಗಡ್ಡದೊಳಗೆ ಬಲಗೈ ಬೆರಳುಗಳನ್ನು ಬಾಚಣಿಕೆಯ ಹಲ್ಲುಗಳಂತೆ ತೂರಿಸಿ ಅಭ್ಯಾಸಬಲದಿಂದ ನೀವಿಕೊಳ್ಳುತ್ತಿದ್ದರು. ಅಂಡರ್ ಬ್ರಿಜ್ ಇಳಿಯುತ್ತಿರುವಾಗ ಸಿಕ್ಕ ಕಾಸೀಂ ಕೇಳಿಯೇ ಬಿಟ್ಟ,

“ಕ್ಯಾ ಚಾಚಾ, ಆಪ್‍ಕಾ ಟೋಪಿ ಕಹಾ....”

ಬಷೀರ್ ಸಾಹೇಬರಿಗೆ ಆವಾಗಲೇ ಲೋಪದ ಅರಿವಾಗಿ ಪೆಚ್ಚು ಗಲಿಬಿಲಿಯಿಂದ ತಲೆಮೇಲೆ ಕೈ ಆಡಿಸಿಕೊಂಡರು. ಆ ಟೋಪಿ ಇಲ್ಲದ ಸಾಹೇಬರನ್ನು ಗುರುತಿಸಲು ಸಾಧ್ಯವಾಗುವುದು ತೀರಾ ಹತ್ತಿರದವರಿಗೆ ಮಾತ್ರ. ಇವತ್ತು ರೂಮಿಟೋಪಿ ಇಲ್ಲದ ಸಾಹೇಬರನ್ನು ಅದೆಷ್ಟು ಜನ ಗುರುತು ಹಚ್ಚದೆ ಮುಂದೆ ಸಾಗಿದ್ದರೋ. ಬಹುಶಃ ಅವರ ನೆನಪಿನಂತೆ ಟೋಪಿ ಇಲ್ಲದೆ ಹೊರಗೆ ಕಾಣಿಸಿಕೊಂಡದ್ದು ಇವತ್ತು ಮೊದಲ ಸಲ ಅಂತ ಕಾಣಿಸುತ್ತದೆ.

“ಅರೆ! ಭೂಲ್‍ಗಯಾರೇ ಕಾಸೀಂ....”

ದಟ್ಟವಾಗಿ ಹರವಿಕೊಂಡಿದ್ದ ಸೂನ್‍ಪಾಪಡಿ ಗಡ್ಡದ ಆವರಣದಲ್ಲಿ, ಬಿರಿದ ತುಟಿಗಳಿಂದ ಹೌದೋ ಅಲ್ಲೋ ಅನ್ನುವಂತೆ ಜಾರಿದ ಆ ನಗುವಿನ ತುಂಬೆಲ್ಲ ಮಾಳಾಪುರದ ಸುದ್ದಿಯ ಕಹಿ ಬೆರೆತು ಕಪ್ಪಿಟ್ಟಿತ್ತು.

ಸೀದಾ ಗ್ರಂಥಾಲಯದ ಒಳಹೊಕ್ಕು ಅಲ್ಲಿ ಬೀಸಾಡಿದ್ದ ದಿನಪತ್ರಿಕೆಗಳನ್ನೆಲ್ಲ ಒಂದೊಂದಾಗಿ ಕೈಗೆತ್ತಿಕೊಂಡು ಸುದ್ದಿಯ ಹೆಚ್ಚಿನ ವಿವರಗಳಿಗಾಗಿ ಬೆದಕಿದರು. ಸತ್ತ ಮೂವರು ಯಾರೆಂದು ಬಗೆಹರಿಯದೆ ದುಗುಡ ಹೆಚ್ಚಿತು. ಕಳವಳದ ಕಣ್ಣುಗಳಲ್ಲಿ ಊರ ಮುಖಗಳೆಲ್ಲ ಒಂದೊಂದಾಗಿ ತೇಲಿಬಂದು ‘ಗುರುತಿಸು ಮೂವರನ್ನು ನೋಡೋಣ’ ಎಂಬಂತೆ ಸವಾಲೆಸೆದವು. ‘ಇವರಂತೂ ಆಗಿರಲಿಕ್ಕಿಲ್ಲ’ ಎಂದು ಪ್ರಾರಂಭವಾಗುವ ಊಹೆ ಸರಪಳಿಗೆ ಅವರ ಕುರಿತ ಅನುಮಾನದ ಕೊಂಡಿ ಗಟ್ಟಿಗೊಂಡಂತಾಗಿ ಪರಿಚಿತರನ್ನು ನೆನಪಿನ ಭಿತ್ತಿಗೆ ತಂದುಕೊಳ್ಳಲೇ ಭಯವಾಗತೊಡಗಿತು. ಹಾಗೆ ನೋಡಿದರೆ ಆ ಊರಲ್ಲಿ ಯಾರು ಅಪರಿಚಿತರು?

ಬಷೀರ್ ಸಾಹೇಬರು ಆ ಊರವರಿಗೆಲ್ಲ ಪ್ರೀತಿಯ ಗೌರವದ ತುರುಕ ಮಾಷ್ಟ್ರು ಆಗಿದ್ದವರು. ಸರಿಸುಮಾರು ಅರ್ಧ ಶತಮಾನದ ಹಿಂದೆ ಮಾಳಾಪುರದ ಪ್ರಾಥಮಿಕ ಶಾಲೆಯಲ್ಲಿ ಮಾಸ್ತರಿಕೆ ಆರಂಭಿಸಿದಾಗ ಆ ಶಾಲೆಯೂ ಪ್ರಾರಂಭವಾಗಿ ಒಂದು ವರ್ಷವಾಗಿತ್ತಷ್ಟೆ. ಸ್ವಂತ ಕಟ್ಟಡವೂ ಇರಲಿಲ್ಲ; ಹನುಮಂತ ದೇವರ ಗುಡಿ ಜಗುಲಿಯ ಮೇಲೆ ಇವರು ಸರ್ವೀಸ್ ಪ್ರಾರಂಭ ಮಾಡಿದಾಗ ಬೆರಳೆಣಿಕೆಯ ಮಕ್ಕಳು ಮಾತ್ರ ‘ಸಾಲಿ ಗುಡಿ’ಗೆ ಬಂದು ಕೂಡುತ್ತಿದ್ದುದು. ಅವರಾರೂ ತಾವಾಗೇ ಒಂದು ದಿನವೂ ಶಾಲೆಗೆ ಬಂದಿದ್ದಿಲ್ಲ. ಒಬ್ಬ ವಿದ್ಯಾರ್ಥಿಗೆ ಇಬ್ಬರು ಆಳಿನಂತೆ ಹೊತ್ತುಕೊಂಡು ಬಂದ ಬಿಸಾಡಿ ಹೋದಾಗ ಅವರನ್ನೆಲ್ಲ ಪಳಗಿಸುವ ಪಾಳಿ ಮೇಷ್ಟರದೆ. ಅಳುತ್ತ, ಸಿಂಬಳ ಸುರಿಸುತ್ತ, ಮೇಷ್ಟ್ರನ್ನು ನೋಡಿ ಭಯದಿಂದ ಥರಗುಡುತ್ತ ಕರಿ ನೀರಿನ ಶಿಕ್ಷೆ ಅನುಭವಿಸುವವರಂತೆ ಸ್ಲೇಟಿನಲ್ಲಿ ಅಕ್ಷರ ತಿದ್ದುತ್ತಿದ್ದರು. ಅಕ್ಷರ ತಿದ್ದಿದ್ದಕ್ಕಿಂತ ಬಳಪ ತಿಂದದ್ದೇ ಹೆಚ್ಚು. ಮಧ್ಯಾಹ್ನ ಊಟಕ್ಕೆಂದು ಮನೆಗೆ ಹೋದ ವಿದ್ಯಾರ್ಥಿಗಳು ತಿರುಗಿ ಶಾಲೆಗೆ ಬರುತ್ತಿದ್ದದ್ದು ಅಪರೂಪ. ಏಕೆಂದರೆ ಶಾಲೆಗೆ ಹೊತ್ತುತಂದು ಹಾಕಲು ಆ ವೇಳೆಯಲ್ಲಿ ಮನೆಯಲ್ಲಿ ಗಣಮಕ್ಕಳಾರೂ ಇರುತ್ತಿರಲಿಲ್ಲ.

ಸಾಹೇಬರ ತಲೆಗೆ ರೂಮಿಟೋಪಿ ಅಂಟಿಕೊಂಡದ್ದು ಈ ಸಮಯದಲ್ಲಿಯೇ. ತಮಗೆ ನೌಕರಿ ದೊರಕಿದ ಸುದ್ದಿಯನ್ನು ಸ್ನೇಹಿತರು, ಸಂಬಂಧಿಕರಿಗೆಲ್ಲ ಕಾರ್ಡು ಹಾಕಿ ಸಾಕಷ್ಟು ಪಬ್ಲಿಸಿಟಿಯನ್ನು ಕೊಟ್ಟಿದ್ದ ಬಾಬಾ. ಅನೇಕ ಬಂಧುಗಳು ಮನೆಗೆ ಬಂದು ಶಹಭಾಷ್‍ಗಿರಿ ಕೊಡತೊಡಗಿದಂತೆ ಹಿತ್ತಿಲಲ್ಲಿ ಓಡಾಡಿಕೊಂಡಿದ್ದ ಕೋಳಿಗಳ ಸಂಖ್ಯೆ ಅರ್ಧಕ್ಕರ್ಧ ಕಮ್ಮಿಯಾಗಿತ್ತು. ಬಾಬಾನ ಉಮೇದು ಇಂಥ ಖರ್ಚುಗಳಿಗೆಲ್ಲ ಸೊಪ್ಪು ಹಾಕಿರಲಿಲ್ಲ. ಇವತ್ತಿಗೂ ಸಾಹೇಬರ ದೇಹದ ಒಂದು ಭಾಗವಾಗಿಯೇ ಗುರುತಿಸಲ್ಪಡುವ ರೂಮಿಟೋಪಿಯನ್ನು ಹೈದರಾಬಾದಿನಲ್ಲಿದ್ದ ಭಾವ ಕಳುಹಿಸಿಕೊಟ್ಟಿದ್ದ. ಮೊದಮೊದಲು ಅದನ್ನು ಧರಿಸುವಾಗ ಒಂಥರಾ ಮುಜುಗರವೆನ್ನಿಸಿ ಹಿಂಸೆಯಾಗುತ್ತಿತ್ತು. ಬಹುಶಃ ಬಳ್ಳಾರಿಯಂತಹ ಪರಿಚಿತ ಸ್ಥಳದಲ್ಲೇ ಇರುವುದಾಗಿದ್ದರೆ ಟೋಪಿ ಇಟ್ಟುಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲವೇನೋ. ಆದರೆ ನೌಕರಿ ಮಾಳಾಪುರದಲ್ಲಿ ಇದ್ದುದರಿಂದ ಕಿರಿಕಿರಿ ತುಸು ತಗ್ಗಿತ್ತು.

ಹಳ್ಳಿಯಲ್ಲಿ ಸಾಹೇಬರ ವ್ಯಕ್ತಿತ್ವಕ್ಕೆ ವಿಶೇಷ ಮೆರುಗನ್ನಿತ್ತ ಟೋಪಿ ಊರವರ ವಿಸ್ಮಯ ಬೆರೆತ ಗೌರವಕ್ಕೆ ಕಾರಣವಾಗಿತ್ತು. ಗ್ರಾಮದ ಹೆಣ್ಣು ಮಕ್ಕಳಂತೂ ತುರುಕ ಮಾಷ್ಟ್ರು ಶಾಲೆಗೆ ಹೋಗುವ ವೇಳೆಗೆ ಸರಿಯಾಗಿ ನೀರಿಗೆಂದೋ, ರಂಗೋಲಿಗೆಂದೋ ನಾನಾ ನೆಪದಲ್ಲಿ ಹೊರಗೆ ಸುಳಿದು ಟೋಪಿ ನೋಡಿ ಸೆರಗನ್ನು ಬಾಯಿಗೆ ತುರುಕಿಕೊಂಡು ಶಬ್ದವಾಗದಂತೆ ನಗುತ್ತಿದ್ದರು. ದನ ಕಾಯುವ ಹುಡುಗರು ಬೇಕಂತಲೇ ದನಗಳ ಕಣ್ಣಿ ಕಿತ್ತುವುದನ್ನು  ತಡಮಾಡಿ ಮಾಷ್ಟರು ಶಾಲೆಗೆ ಹೊರಟಾಗಲೇ ಹೊರಬೀಳುತ್ತಿದ್ದರು. ‘ಟೋಪಿವಾಲಾ’ ಅಂತ ಕಿರುಚಿ ದೊಡ್ಡ ಎಮ್ಮೆಯ ಡೊಳ್ಳು ಹೊಟ್ಟೆಯ ಹಿಂದೆ ಅಡಗಿಕೊಂಡು ವಿಚಿತ್ರ ಖುಷಿ ಅನುಭವಿಸುತ್ತಿದ್ದರು. ಇವುಗಳಿಗೆಲ್ಲ ಸ್ವಲ್ಪವೂ ತಲೆಕೆಡಿಸಿಕೊಳ್ಳುವ ಪೈಕಿ ಅಲ್ಲದ ಸಾಹೇಬರು ನಕ್ಕು ಸುಮ್ಮನಾಗುತ್ತಿದ್ದರು. ಊರ ಜನರ ಒಡನಾಟ ಬೆಳೆದಂತೆ ಹಿರಿಯರಿಗೆ ಹೆದರಿಕೊಂಡ ಹುಡುಗರು ತಮ್ಮ ಚೇಷ್ಟೆಗಳನ್ನು ತ್ಯಜಿಸಿ ಮಾಷ್ಟರನ್ನು ಊರವರಂತೆಯೇ ಕಾಣತೊಡಗಿದರು. ಟೋಪಿಯನ್ನು ಹಳ್ಳದರಾಯನಗುಡಿ ಕಳಸದಂತೆಯೇ ಭಕ್ತಿ, ನಿರ್ಲಕ್ಷ್ಯ, ಸಹಜತೆಯಿಂದ ನೋಡುವಂತಾಯ್ತು.

ಮಾಳಾಪುರದಂತಹ ಹಳ್ಳಿಯಲ್ಲಿ ಬಾಡಿಗೆಗೆಂದು ಯಾರೂ ಮನೆ ಕಟ್ಟಿಸುವಂತಿರಲಿಲ್ಲ. ಮಾಷ್ಟ್ರು ಮನೆ ಸಿಕ್ಕದೆ ಒದ್ದಾಡುತ್ತಿದ್ದಾಗ ಓಸಿಮಲ್ಲೇಶಿ ತನ್ನ ನಾಲ್ಕಂಕಣದ ಮನೆಯಲ್ಲಿ ಅದ್ಹೇಗೋ ಭಾಗ ಮಾಡಿ ಸಾಹೇಬರಿಗೆ ಒಂದು ಕೋಣೆಯಷ್ಟು ಜಾಗೆಯನ್ನು ಬಿಟ್ಟುಕೊಟ್ಟಿದ್ದ. ಸಂಡಾಸು, ಬಚ್ಚಲು ಇಲ್ಲದ ಆ ಮನೆಯಲ್ಲಿ ಸಾಹೇಬರಿಗೆ ಮೊದಮೊದಲು ಕಿರಿಕಿರಿಯೆನಿಸಿ ಅಲ್ಲಿಂದ ವರ್ಗಾ ಮಾಡಿಸಿಕೊಂಡು ಯಾವಾಗ ಹೋದೇನೋ ಎನ್ನುವಂತಾಗುತ್ತಿತ್ತು. ಬರುಬರುತ್ತಾ ಬಹಿರ್ದೆಶೆ, ಸ್ನಾನಕ್ಕಾಗಿ ಊರ ಎಲ್ಲರಂತೆ ನಾರಿಹಳ್ಳವನ್ನು ನೆಚ್ಚಿದರು.

ಮೈಬಗ್ಗಿಸಿ ಎಂದೂ ದುಡಿಯದ ಮಲ್ಲೇಶಿಯ ಲೆಕ್ಕಾಚಾರಗಳೆಲ್ಲ ಬರೀ ಶ್ರಮವಿಲ್ಲದೆ ಗಳಿಸುವಂತಹ ಸೂತ್ರ ಕಂಡುಹಿಡಿವ ದಿಕ್ಕಿನಲ್ಲಿರುತ್ತಿದ್ದವು. ಊರಲ್ಲಿ ಮಟ್ಕ ಬಗ್ಗೆ ತಿಳಿವಳಿಕೆ ಸಂಪಾದಿಸಿದ ಮೊದಲಿಗ ಈತ. ಅದಕ್ಕೆಂದೇ ‘ಓಸಿ ಮಲ್ಲೇಶಿ’ ಎಂಬ ಅಡ್ಡ ಹೆಸರು. ಯಾವತ್ತೂ ಶಾಲೆಗೆ ಮಣ್ಣು ಹೊತ್ತಿರದ ಮಲ್ಲೇಶಿಯ ಗಣಿತದಲ್ಲಿಯ ಜಾಣ್ಮೆ ಓದು ಕಲಿತವರು ಜಕ್ಕು ಹೊಡೆಯುವಂತಹದು. ಮಾಗಾಣಿಯಲ್ಲಿ ಒಂದು ಸುತ್ತು ಹಾಕಿಬಂದರೆ ಸಾಕು ಇವರ ತೋಟದ ಹುಣಸೆ ಗಿಡಗಳು ಈ ವರ್ಷ ಇಂತಿಷ್ಟೇ ಕಾಪು ಬಿಡುತ್ತವೆ ಎಂದು ಬರೀ ಹೂಬಿಟ್ಟ ಮರಗಳನ್ನು ನೋಡಿಯೇ ಅಂದಾಜು ಕಟ್ಟಿಬಿಡುತ್ತಿದ್ದ. ಗುತ್ತಿಗೆ ವ್ಯವಹಾರ ಮಾಡುವವರು ಮತ್ತು ತೋಟದ ಒಡೆಯರು ಮಲ್ಲೇಶಿಯನ್ನು ಸಂಪರ್ಕಿಸಿ ಸಲಹೆ ಪಡೆದ ನಂತರವೇ ಮುಂದಿನ ಮಾತುಕತೆಗೆ ಕೂಡುತ್ತಿದ್ದುದು. ಅದಕ್ಕೆ ಪ್ರತಿಫಲವಾಗಿ ತಿಮ್ಮಣ್ಣನ ಚಾದಂಗಡಿಯ ಒಗ್ಗರಣೆ ಮೆಣಸಿನಕಾಯಿಯೇ ಮಲ್ಲೇಶಿಯ ಏಕೈಕ ಸಂಪನ್ಮೂಲ. ಹೊರಹೊರಗೆಯೇ ತಿರುಗುತ್ತ ಮನೆಯಲ್ಲಿ ಇದ್ದವರಾರು, ಸತ್ತವರಾರು ಎಂದು ಕೂಡ ಮೂಸಿನೋಡದ ಮಲ್ಲೇಶಿಯ ಹೆಂಡತಿ ಯಂಕಮ್ಮ ಅನೇಕ ಸಲ ಸಾಹೇಬರೆದುರು ಗೊಳೋ ಎಂದು ತೋಡಿಕೊಳ್ಳುತ್ತಿದ್ದಳು. ಗಂಡ ಹೆಂಡತಿ ಜಗಳ ಬಗೆಹರಿಸುವ ಭಾರ ಸಾಹೇಬರ ಮೇಲೆ ಬಿದ್ದು ಅದು ಹೆಚ್ಚುಕಮ್ಮಿ ಅವರ ದಿನಚರಿಯ ಭಾಗವೇ ಆಗಿಬಿಟ್ಟಿತು. ಹಬ್ಬಹರಿದಿನಗಳು ಬಂದರಂತೂ ಮಲ್ಲೇಶಿ ವಲ್ಲಿ ಜಾಡಿಸಿ ಹೆಗಲಿಗೆ ಇಳಿಬಿಟ್ಟುಕೊಂಡು ಕಾಣೆಯಾಗಿಬಿಡುತ್ತಿದ್ದ. ಯಾವುದೋ ಊರಿನ ಬಯಲಾಟ, ಮತ್ತೊಂದೂರಿನ ಇಸ್ಟೀಟು ಮುಂತಾಗಿ ಅಲೆದು ಊರಿಗೆ ಹಿಂದಿರುಗುವಷ್ಟರಲ್ಲಿ ನಾಲ್ಕಾರು ದಿನಗಳು ಉರುಳಿರುತ್ತಿದ್ದವು. ಬಯಲಾಟದ ಹೆಣ್ಣೇನಾದರು ಅಡ್ಜಸ್ಟ್ ಆಗಿಬಿಟ್ಟರೆ ಊರನ್ನು ವಾರಗಟ್ಟಲೇ ಮರೆತಂತೆಯೇ ಲೆಕ್ಕ. ಇತ್ತ ಯಂಕಮ್ಮನ ಕಣ್ಣೀರಿಗೆ ಸಾಹೇಬರ ಸಾಂತ್ವನೇ ದಿಕ್ಕು.

ಎದುರಿಗೆ ಕುಂದರಿಸಿಕೊಂಡು ಹೇಳಿದ್ದನ್ನೆಲ್ಲ ವಿಧೇಯವಾಗಿ ಕೇಳುವ ಮಲ್ಲೇಶಿ, ಸಾಹೇಬರ ಉಪದೇಶಕ್ಕೆ ಎಂದೂ ಎದುರಾಡದಿದ್ದರೂ ಆತನ ಸ್ವಭಾವದ ಬಾಲ ಮಾತ್ರ ನೆಟ್ಟಗಾಗಲಿಲ್ಲ. ಮಾಷ್ಟ್ರು ಮದುವೆ ಮಾಡಿಕೊಂಡು ಬಂದಾಗ ಸಣ್ಣ ಕೋಣೆಯ ಅವರ ಪರದಾಟ ನೋಡಲಾಗದೆ ಮತ್ತೊಂದು ಅಂಕಣವನ್ನು ಬಿಟ್ಟುಕೊಟ್ಟಿದ್ದ.

ಮದುವೆಯಾದ ಎರಡನೇ ವರ್ಷದಲ್ಲಿ ಸಲೀಮ ಹುಟ್ಟಿದ್ದು. ಆಗ ಹೆಂಡತಿಗೆ ಮಕ್ಕಳಾಗದಂತೆ ಆಪರೇಷನ್ ಮಾಡಿಸಲು ಸಾಹೇಬರು ಮುಂದಾದಾಗ ಮಾಳಾಪುರದಲ್ಲಿಯೂ ಬಳ್ಳಾರಿಯಲ್ಲಿಯೂ ದೊಡ್ಡ ರಂಪವಾಗಿ ಸಮುದಾಯದ ಅನೇಕರು ನಿರ್ಧಾರ ಬದಲಿಸಬೇಕೆಂದು ಸಲಹೆ, ಒತ್ತಾಯ, ಬೆದರಿಕೆ ಎಲ್ಲ ಒಡ್ಡಿದರು. ಮಾಳಾಪುರದ ಮುಲ್ಲಾಸಾಬ್ ಸಾಹೇಬರನ್ನು ತರಾಟೆಗೆ ತೆಗೆದುಕೊಂಡು ಅವರು ಹೇಗೆ ಧರ್ಮಬಾಹಿರ ನಿಲುವು ತಾಳಿದ್ದಾರೆಂದು ತರ್ಕಿಸಿದ. ಸಾಹೇಬರದು ಒಂದೇ ಪಟ್ಟಾಗಿತ್ತು-ಛಲ ಸಾಧಿಸಿಯೇ ಬಿಟ್ಟರು. ಜೊತೆಗೆ ಅನೇಕ ಪ್ರೀತಿಪಾತ್ರರಲ್ಲಿ ಮನಸ್ತಾಪ ಕಟ್ಟಿಕೊಂಡರು. ಮುಲ್ಲಾಸಾಬನಂತೂ ಮಸೀದಿಯಲ್ಲಿ ನಮಾಜಿಗೆ ಬಂದಾಗ ಎದುರಿಗೆ ಸಿಕ್ಕರೂ ಮುಖ ತಿರುವಿದ. ಬಳ್ಳಾರಿಯ ಜುಮ್ಮಾ ಮಸೀದಿಗೆ ಒಂದು ದೂರು ಅರ್ಜಿಯನ್ನೂ ಬರೆದುಹಾಕಿದ. ಅಂದು ಮಾತುಬಿಟ್ಟಿದ್ದ ಮುಲ್ಲಾ ಸಾಹೇಬರನ್ನು ಮಾತಾಡಿಸಿದ್ದು ಹತ್ತುವರ್ಷಗಳ ಹಿಂದೆ ಅವರು ನಿವೃತ್ತರಾಗಿ ಊರುಬಿಡುವಾಗ.

ಪೇಪರು ಓದಿಸಿ ಕೇಳುವವರು, ಅರ್ಜಿಪತ್ರಗಳನ್ನು ಬರೆಸುವವರು, ಜಮೀನಿಗೆ ಸಂಬಂಧಿಸಿದ ಕಾಗದಪತ್ರಗಳಿಗೆ ವಿವರಣೆ ಕೇಳುವವರು ಹೀಗೆ ಜನ ಒಂದಿಲ್ಲೊಂದು ರೀತಿಯಲ್ಲಿ ಸಾಹೇಬರನ್ನು ನೆಚ್ಚಿದ್ದರು. ಸಣ್ಣಪುಟ್ಟ ಜಗಳ ತಕರಾರುಗಳು ಸಹ ಇವರೆದುರೇ ಚರ್ಚೆಯಾಗಿ ತೀರ್ಮಾನ ಕಂಡುಕೊಳ್ಳುತ್ತಿದ್ದವು.

ನಾರಿಹಳ್ಳದಲ್ಲಿ ಬಡಕೊಂಡು ಬಂದವನೆಂಬ ಐತಿಹ್ಯವುಳ್ಳ ಆ ಊರಿನ ಹನುಮಂತ ದೇವರನ್ನು ಹಳ್ಳದರಾಯ ಅಂತಲೇ ಕರೆಯುವುದು. ವರ್ಷಕ್ಕೊಮ್ಮೆ ಸುತ್ತಲಿನ ಹತ್ತಿಪ್ಪತ್ತು ಹಳ್ಳಿ ಜನರನ್ನು ಕಲೆಹಾಕುವ ಜಾತ್ರೆಯಲ್ಲಿ ಬೃಹತ್ ಗಾತ್ರದ ತೇರನ್ನು ಎಳೆಯಲಾಗುತ್ತಿತ್ತು. ಈ ಜಾತ್ರೆಗೂ ಜಗಳಕ್ಕೂ ಅನ್ಯೋನ್ಯ ಸಂಬಂಧ. ದೇವರ ಶಾಪದಿಂದಲೇ ಪ್ರತಿವರ್ಷ ಜಗಳ ಸಂಭವಿಸುವುದೆಂಬುದು ಹಳ್ಳಿಗರ ನಂಬಿಕೆ. ಬಹಳಷ್ಟು ಜನ ಆ ವರ್ಷದ ಜಗಳ ಹೇಗೆ ಎಲ್ಲಿಂದ ಪ್ರಾರಂಭವಾಗಿ ಯಾವ ಹಂತಕ್ಕೆ ತಲುಪಬಹುದು ಎಂಬ ಕುತೂಹಲದಿಂದಲೇ ನೆರೆಯುತ್ತಿದ್ದರು. ಜಾತ್ರೆಯ ಬಹುಮುಖ್ಯ ಮನರಂಜನೆಯೇ ಜಗಳವಾಗಿರುತ್ತಿತ್ತು. ಆಕಸ್ಮಿಕವಾಗಿ ಯಾವುದಾದರೊಂದು ವರ್ಷ ಜಗಳವಿಲ್ಲದೆ ಜಾತ್ರೆ ಮುಗಿದುಬಿಟ್ಟರೆ ಜಾತ್ರೆಗೆ ಬಂದ ಜನ ಏನನ್ನೋ ಕಳೆದುಕೊಂಡ ಹಳಹಳಿಕೆಯಿಂದ ಹಿಂದಿರುಗುತ್ತಿದ್ದರು. ಜಗಳವನ್ನು ತೀರ ಹತ್ತಿರದಿಂದ ನೋಡಿ, ನಂತರ ತಿಂಗಳುಗಟ್ಟಲೆ ಅದನ್ನು ಬಣ್ಣಿಸುವ ಅವಕಾಶ ಪಡೆಯುವ ಹುಮ್ಮಸ್ಸಿನಲ್ಲಿ ತೇರು ಎಳೆಯುವ ಸಮಯದಲ್ಲಿ ಅತ್ಯಂತ ಆಯಕಟ್ಟಿನ ಜಾಗೆಗಳನ್ನು ಹಿಡಿಯಲು ಜನ ಮುಂದಾಗುತ್ತಿದ್ದರು. ಅನೇಕ ಸಲ ಈ ಜಾಗೆಗಾಗಿ ನಡೆವ ನುಗ್ಗಾಟವೇ ಆ ವರ್ಷದ ಜಗಳಕ್ಕೆ ನಾಂದಿಯಾಗಿ ಬಿಡುತ್ತಿತ್ತು!

ಪಕ್ಕದೂರಾದ ಬಸಾಪುರದವರಿಗೂ ಮಾಳಾಪುರದವರಿಗೂ ಒಂದಿಲ್ಲೊಂದು ಕಾರಣಕ್ಕೆ ಜಿದ್ದು ಏರ್ಪಟ್ಟು ವಾತಾವರಣ ಕಹಿಗಟ್ಟುತ್ತಿತ್ತು. ಕಾರಣ ಯಾವುದಾದರು (ಇಲ್ಲದಿದ್ದರೂ!) ಆದೀತು, ಜಗಳ ಮಾತ್ರ ಘಟಿಸಿಯೇ ತೀರಬೇಕು ಎಂಬ ಸಿದ್ಧಾಂತಕ್ಕೆ ಬದ್ಧರಾದ ಜನ ಅವರು. ಕಾಲು ತುಳಿದದ್ದು, ಲಡಿಬಿಡಿ ಆಟದಲ್ಲಿ ಮೋಸ ಮಾಡಿದ್ದು, ಬೇಕಂತಲೇ ಬಾಳೇಹಣ್ಣನ್ನು ತಲೆಗೆ ತೂರಿದ್ದು ಇತ್ಯಾದಿ ಕ್ಷುಲ್ಲಕ ವಿಚಾರಗಳ ಜೊತೆಗೆ ‘ಬಸಾಪುರದವರು ಬರುವವರೆಗೆ ತೇರು ಎಳೆಯಕೂಡದು’ ಎಂದು ಒಂದು ಬಣ, ‘ಅದ್ಹೇಗೆ ಆದೀತು?’ ಎಂದು ಮತ್ತೊಂದು ಗುಂಪು ವಾದ ಹೂಡಿ ಜಗಳ ತಾತ್ವಿಕ ರೂಪು ಪಡೆದುಕೊಳ್ಳುವುದು ಸಾಮಾನ್ಯವಾಗಿತ್ತು. “ಪೂರ್ವದಲ್ಲಿ ಈ ತೇರು ನಮ್ಮೂರಿಗೆ ಸೇರಿದ್ದು. ಯಾವಾಗಲೋ ನಮ್ಮೂರಲ್ಲಿ ಭೀಕರ ಕ್ಷಾಮ ಬಿದ್ದು ಜಾತ್ರೆ ಮಾಡಲಾಗದ ಸಂದರ್ಭದಲ್ಲಿ ಮಾಳಾಪುರದವರು ತೇರನ್ನು ಎಳೆದೊಯ್ದಿದ್ದಾರೆ. ಆದ್ದರಿಂದ ಈ ತೇರಿನ ಮೇಲೆ ನಮ್ಮದೂ ಅರ್ಧ ಹಕ್ಕಿದೆ” ಇದು ಬಸಾಪುರದವರ ಬೇಡಿಕೆ. “ಅದೆಲ್ಲ ಸುಳ್ಳು ಹಾಗಂತ ನಿಮ್ಮಲ್ಲೇನಾದರೂ ದಾಖಲೆ ಇದ್ದರೆ ತಗೊಂಬರ್ರಿ....” ಮಾಳಾಪುರದವರ ಲಾ ಪಾಯಿಂಟು.

ಹೀಗೆ ವಿಚಿತ್ರ ಆಯಾಮ ಪಡೆದಿದ್ದ ಜಟಿಲ ಸಮಸ್ಯೆಯನ್ನು ಬಗೆಹರಿಸುವುದು ಅಸಾಧ್ಯವೆನ್ನಿಸಿ ವರ್ಷಕ್ಕೊಮ್ಮೆ ಜಗಳ ತಪ್ಪಿದ್ದಲ್ಲ ಎಂಬುದನ್ನು ಎರಡೂ ಬಣದವರು ಮನಗಂಡು ಶಿರಸಾವಹಿಸಿ ಪಾಲಿಸುತ್ತಿದ್ದರು. ಯಾರಾದರೂ ಹೇಳಿದ ತೀರ್ಮಾನ ಆ ವ್ಯಕ್ತಿಯ ಊರಿನ ಪರ ವಾಲಿರುತ್ತಿತ್ತು ಅಥವಾ ಹಾಗಿರದಿದ್ದರೂ ಇನ್ನೊಂದೂರಿನವರು ಆತ ಮತ್ತೊಂದೂರಿಗೆ ಸೇರಿದವ ಎಂಬ ಕಾರಣಕ್ಕಾಗಿಯೇ ಸುತರಾಂ ಒಪ್ಪುತ್ತಿರಲಿಲ್ಲ. ಒಂದು ವರ್ಷವಂತೂ ತೇರಿನ ಗಾಲಿಗಳಿಗೆ ಹಿಂದಿನಿಂದ ಸನ್ನೆ ಹಾಕುವ ಸಂದರ್ಭದಲ್ಲಿ ವಿರಸ ಬಂದು ವಿಕೋಪ ತಲುಪಿತ್ತು. ತುರುಕ ಮಾಷ್ಟರೇ ಮಧ್ಯೆ ಬಂದು ಸಮಾಧಾನಿಸಿದ್ದರು. ಜಾತ್ರೆಯ ಮರುದಿನ ಪಂಚಾಯಿತಿ ನಡೆಸಿ ಎಲ್ಲ ಸಾಂಪ್ರದಾಯಿಕ ವಾದಗಳು ಉದುರಿದ ನಂತರ ಸಾಹೇಬರು ಎರಡೂ ಬಣದವರು ಒಪ್ಪುವಂತಹ ತೀರ್ಮಾನ ಹೇಳಿದ್ದು ಇವತ್ತಿಗೂ ಐತಿಹಾಸಿಕ ತೀರ್ಪಾಗಿ ಉಳಿದಿದೆ. ಅಂದು ಆದ ತೀರ್ಮಾನದಂತೆ ತೇರಿಗೆ ಕಟ್ಟುವ ಎರಡೂ ಮಿಣಿಗಳನ್ನು ಎರಡೂ ಊರಿನವರಿಗೆ ಒಂದೊಂದರಂತೆ ಹಂಚಿ ಬೇರೆ ಊರಿನವರು ಅವಕಾಶವಿದ್ದೆಡೆ ಮಿಣಿ ಎಳೆಯಬಹುದಾಯ್ತು. ಸನ್ನೆ ಹಾಕುವುದನ್ನೂ ಒಂದೊಂದು ಗಾಲಿ ಒಂದೊಂದು ಊರವರಿಗೆಂದು ಭಾಗ ಮಾಡಿದ್ದರಿಂದ ಮೇಜರ್ ಜಗಳಗಳು ಇಲ್ಲವಾದವು. ಅದೆಲ್ಲಕ್ಕಿಂತ ಹೆಚ್ಚಾಗಿ ಪರಂಪರಾಗತ ವಿರಸ ಬಗೆಹರಿದ ನಿರುಮ್ಮಳತೆ ಜನರನ್ನು ಆವರಿಸಿದ್ದರಿಂದ ಕಾಲುಕೆದರುವ ಮನಸ್ತತ್ವ ನಿಯಂತ್ರಣಕ್ಕೊಳಗಾಯಿತು. ಸಾಹೇಬರ ಉಸ್ತುವಾರಿಯಲ್ಲೇ ಆದಷ್ಟು ಸೌಹಾರ್ದಯುತವಾಗಿ ಜಾತ್ರೆ ಜರುಗತೊಡಗಿತ್ತು.

ನೆನಪಿನ ಸುರುಳಿ ಬಿಚ್ಚಿಕೊಳ್ಳುತ್ತಿದ್ದಂತೆಯೇ ನಿರಾಶೆಯ ಬಣ್ಣ ಸಾಹೇಬರ ಎದೆಯೊಳಗೆ ತಳಮಳ ಚಿತ್ರಿಸಿತು. ಆ ಚಿತ್ರದೊಳಗಿನ ರಂಗುಗಳೆಲ್ಲವೂ ಕಳೆ ಕಳೆದುಕೊಂಡು ಕಡುಕಪ್ಪು ಮುಸುಕು ಹೊದ್ದು ಒಳಗೇ ನಿಡುಸುಯ್ಯತೊಡಗಿದವು. ಗ್ರಂಥಾಲಯದಿಂದ ಎದ್ದವರು ಸೀದಾ ಮನೆಯ ಕಡೆ ದಾಪುಗಾಲು ಹಾಕಿ ಮತ್ತೆ ಮಂಚದ ಮೇಲೆ ಉರುಳಿದರು. ಕಣ್ಣು ಮುಚ್ಚಿದರೆ ಮಾಳಾಪುರದಲ್ಲಿ ಕಳೆದ ದಿನಗಳು, ಸಂಪರ್ಕಕ್ಕೆ ಬಂದ ಜನ, ಅಲ್ಲಿಯ ಒತ್ತೊತ್ತಾದ ಮನೆ, ಹೊಲ, ಹಳ್ಳ.... ಎಲ್ಲ ರೆಪ್ಪೆಯ ಒಳಗೆ ಮೆತ್ತಿಕೊಂಡು ಕಾಡುತ್ತವೆ. ಆಗಾಗ ಬೆಚ್ಚನೆಯ ಉಸಿರನ್ನು ಗಾಳಿಗೆ ತೂರಿಸಿ ಮಗ್ಗುಲು ಬದಲಿಸುವ ಸಮಯದಲ್ಲಿ ಟೇಬಲ್ಲಿನ ಮೂಲೆಯಲ್ಲಿ ಇಟ್ಟ ರೂಮಿಟೋಪಿ ವೇದನೆಯನ್ನು ಉದ್ದೀಪಿಸುತ್ತದೆ. ಆ ಟೋಪಿಯೊಂದಿಗೇ ಅಲ್ಲವೆ ಅವರ ಮಾಳಾಪುರದ ಬದುಕು ಬೆಳೆದು ನಿಂತದ್ದು!

ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಕಾರ್ಯರೂಪಕ್ಕಿಳಿಸುವ ಹುಮ್ಮಸ್ಸಿನಲ್ಲಿ ಹಳ್ಳಿಯ ಓಣಿ-ಕೇರಿಗಳನ್ನೆಲ್ಲ ತಿರುಗಿ ಜನರಿಗೆ ತಿಳಿವಳಿಕೆ ನೀಡಿದ್ದು; ಹೆದರಿಸಿ ಬೆದರಿಸಿ ಮಕ್ಕಳನ್ನೆಲ್ಲ ಹಾಜರಿ ಪುಸ್ತಕದಲ್ಲಿ ದಾಖಲಿಸಿದ್ದು; ಶಾಲೆ ಪ್ರಾರಂಭವಾಗಿ ತಿಂಗಳೊಪ್ಪತ್ತಿನಲ್ಲಿ ಒದ್ದುಕೊಂಡು ಬಿಡುವ ಅನೇಕ ಮಕ್ಕಳ ಪಾಲಕರನ್ನು ಕರೆಸಿ ಮತ್ತೆ ಬುದ್ಧಿ ಹೇಳುವ ಸಹನೆ ತೋರಿದ್ದು- ಅದರ ಪರಿಣಾಮವೇ ಅಲ್ಲವೆ ಕ್ರಮೇಣ ಶಾಲೆ ಬೆಳೆದು ಹೈಸ್ಕೂಲು ಮಂಜೂರಾದದ್ದು?

ಆಗಲೆ ನಾಯಕರ ಹುಲಿಗೆವ್ವ ಬೀಜದಂತಹ ಪ್ರಶ್ನೆಯನ್ನು ಸಾಹೇಬರಿಗೆಸೆದು ದಂಗುಬಡಿಸಿದ್ದು. ಅವಳ ಪ್ರಶ್ನೆಯಲ್ಲಿ ಮುಗ್ಧತೆಯೊಂದೇ ಅಲ್ಲ ಕಟುವಾಸ್ತವ ಬೆಸೆದುಕೊಂಡಿತು! ‘ಸಾವ್ಕಾರ್ರ ಹೊಲಕ್ಕೆ ಕೂಲಿಗೆ ಕಳಿಸಿದರೆ ಹತ್ತು ರೂಪಾಯಿ ಕೊಡ್ತಾರೆ, ನಿಮ್ಮ ಶಾಲೆಗೆ ಕಳಿಸಿದರೆ ನೀವೆಷ್ಟು ಕೊಡ್ತೀರಿ?’ ಆವತ್ತಿನ ಹುಲಿಗೆವ್ವನ ಪ್ರಶ್ನೆಗೆ ಸಾಹೇಬರಲ್ಲಿ ನಿವೃತ್ತಿಯ ನಂತರವೂ ಉತ್ತರ ಅಂಕುರಿಸಿಲ್ಲ.

ಎಲ್ಲ ಔಪಚಾರಿಕ ಕ್ರಮಗಳೆಲ್ಲ ಮುಗಿದು ಮದುವೆ ಹಂತದಲ್ಲಿರುವ ಬೀಗಸ್ತನಗಳನ್ನು ಮೂಕರ್ಜಿ ಮೂಲಕ ಬಿಡುಗಡೆ ಮಾಡಿಸುತ್ತಿದ್ದ ನಲ್ಲಣ್ಣನ ನೀಚತನವನ್ನು ಉಪಾಯದಿಂದ ಬಯಲಿಗೆಳೆದ ನಂತರ ಅದೆಷ್ಟೋ ಮದುವೆಗಳು ಸರಾಗವಾಗಿ ನೆರವೇರಿದ್ದವು. ತಮ್ಮ ಮಾತಿಗೇಕೆ ಊರಲ್ಲಿ ಅಷ್ಟೊಂದು ಬೆಲೆ ಇತ್ತೆಂದು ಅನೇಕ ಬಾರಿ ಸಾಹೇಬರು ತಮ್ಮನ್ನು ತಾವೇ ಕೇಳಿಕೊಂಡದ್ದಿದೆ. ಆ ‘ಬೆಲೆ’ಯ ಹಿಂದೆ ಕೆಲಸ ಮಾಡಿದ ತಮ್ಮ ಸಹೃದಯದ ಅರಿವು ಮಾತ್ರ ಅವರಲ್ಲಿ ಮೂಡಿರಲಿಲ್ಲ. ಅಂತೆಯೇ ಅಹಂಕಾರದ ಮೊಟ್ಟೆಗೆ ಸಾಹೇಬರ ವ್ಯಕ್ತಿತ್ವ ಕಾವನ್ನೆಂದೂ ಕೊಡಲಿಲ್ಲ.

“ಬಾಬಾ....ಬಾಬಾ”

ಮಧ್ಯಾಹ್ನದ ಊಟಕ್ಕೆ ಬಂದಿದ್ದ ಸಲೀಮ ಕೂಗಿ ಎಬ್ಬಿಸಿದ.

“ಬಾಬಾ.... ನಿನ್ನೆ ಮಾಳಾಪುರದಲ್ಲಿ ಗೋಲಿಬಾರಾಗಿ ನೀಲಕಂಠ ಸತ್ತನಂತೆ”

ಬೆಳಿಗ್ಗೆಯಿಂದ ಸಾಹೇಬರ ಮನಸ್ಸಿನೊಳಗೆ ಒಗಟಿನ ಮೊನಚಾಗಿ ಕೊರೆಯುತ್ತಿದ್ದ ಸತ್ತವರ ಹೆಸರೊಂದನ್ನು ಕೇಳಿ ಎದೆ ಧಸಕ್ಕೆಂದಿತು. ಏನೂ ಅರ್ಥವಾಗದವರಂತೆ ದಿಟ್ಟಿಸಿದರು.

“ಅದೇ ನೀವು ಬಾಡಿಗೆಗಿದ್ದಿರಲ್ಲ.... ಮಲ್ಲೇಶಪ್ಪನ ಮಗ ನೀಲಕಂಠನಂತೆ ಸತ್ತದ್ದು. ಇನ್ನೂ ಎರಡು ಹೆಣ ಬಿದ್ದಿವೆಯಂತೆ, ಯಾರೆಂದು ಗೊತ್ತಾಗಿಲ್ಲ....”

ಥಟ್ಟನೆ ನೆನಪಿನ ಭಿತ್ತಿಗೆ ಅಪ್ಪಳಿಸಿದ್ದು ಯಂಕಮ್ಮನ ಆಕೃತಿ. ಅದರೊಂದಿಗೆ ತೇಲಿಬಂದ ಸಾಹೇಬರು ನೀಡಿದ ಸಾಂತ್ವನ, ಅಡ್ನಾಡಿ ಮಲ್ಲೇಶಿಯ ಊರೂರು ಅಲೆತ, ಒಂದು ರಾತ್ರಿ ದೌರ್ಬಲ್ಯದ ಗಳಿಗೆ....ಅದಕ್ಕಾಗಿ ಹೃದಯದಲ್ಲೊಂದು ನಿರಂತರ ಕೊರಗಿನ ಹಣತೆಯನ್ನಿರಿಸಿಕೊಂಡದ್ದು.... ಯಾವುದೂ ಎದುರಿಗಿದ್ದ ಸಲೀಮನಿಗೆ ಅರ್ಥವಾಗುವಂತಿರಲಿಲ್ಲ.

ಹಾಗೇ ಸುಮಾರು ಹೊತ್ತು ಅರೆ ಪ್ರಜ್ಞಾಸ್ಥಿತಿಯಲ್ಲಿ ಒರಗಿಕೊಂಡ ಸಾಹೇಬರು ಕಣ್ಣುಬಿಟ್ಟಾಗ ಒಂದು ಪಕ್ಕದಲ್ಲಿ ಮಗ ಸೊಸೆ ಆತಂಕದಿಂದ ಮಂಕಾಗಿ ನಿಂತಿದ್ದರು. ಎದುರಿಗೆ ಟೇಬಲ್ಲಿನ ಮೇಲೆ ಪ್ರಸ್ತುತತೆಯನ್ನು ಕಳೆದುಕೊಂಡ ರೂಮಿಟೋಪಿ, ಮನಸ್ಸಿನ ಒಳಗೆ ತಾವು ಜೀವಿತದ ಉದ್ದಕ್ಕು ಶ್ರದ್ಧೆಯಿಂದ ಕಲಿಸಿದ ವಿದ್ಯೆಯಲ್ಲೇ ಏನೋ ಊನವಿರಬೇಕೆಂಬ ಅಸ್ಪಷ್ಟ ಕೊರಗಿನ ಕುಣಿತ.