Click here to Download MyLang App

ಗಂಡಬಿದಿರು ಎಂಬ ಧರ್ಮದಂಡ - ಬರೆದವರು : ಗುರುರಾಜ ಕುಲಕರ್ಣಿ

ನಮ್ಮ ಗುರುಸಂಗಪ್ಪ ಸ್ವಾಮಿಗಳ ಬಗ್ಗೆ ನಿಮಗೆ ಗೊತ್ತಾ ? ಇಲ್ಲ, ಅಲ್ಲಾ ?
ಅದ್ಯಾವುದೋ ಹೆಂಗಸಿನ ಜೊತೆ ಇದ್ದ ಸ್ವಾಮಿಯನ್ನು ಟೀವಿ ವಾಹಿನಿಯೊಂದು ಟ್ರ್ಯಾಪ್‌ ಮಾಡಿ, ಅದರ ಹಸಿಬಿಸಿ ದೃಶ್ಯಗಳನ್ನು ಪ್ರಸಾರ ಮಾಡಿದ್ದರಿಂದ ಆ ಸ್ವಾಮಿಯ ಹೆಸರು ನಿಮಗೆ ಗೊತ್ತಿರುತ್ತದೆ. ತಾವಾಯ್ತು, ತಮ್ಮ ಮಠ-ಸಾಲಿ-ಸಾಲಿ ಹುಡುಗರು ಎಂದು ನಮ್ಮೂರಲ್ಲೇ ಇರುವ ನಮ್ಮ ಸ್ವಾಮಿಗಳ ಬಗ್ಗೆ ನಿಮಗೆಲ್ಲಿ ಗೊತ್ತಿರಬೇಕು ?
ದೊಡ್ಡ-ದೊಡ್ಡ ಇಂಜನೀಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜುಗಳನ್ನು ತೆಗೆದು ಮರ್ಸಿಡೀಸ್ ಕಾರುಗಳಲ್ಲಿ ಅಡ್ಡಾಡುವ ಜರತಾರಿ ಜಗದ್ಗುರುಗಳು ನಿಮಗೆ ಗೊತ್ತಿರಬೇಕು, ಆದರೆ “ತಮ್ಮಾ ಬಡ್ಡಿ ಗಟ್ಟಿ ಇರದಿದ್ದರೆ ಮರ ಎಷ್ಟು ದೊಡ್ಡದಾಗಾಕ ಸಾಧ್ಯ ಐತಿ ?” ಎಂದು ಪ್ರಶ್ನಿಸುತ್ತಾ ಪ್ರಾಥಮಿಕ ಶಿಕ್ಷಣಕ್ಕೆ ಒತ್ತುಕೊಡುತ್ತಾ, ನಮ್ಮ ಹಳ್ಳಿಯಲ್ಲಿ ಸಣ್ಣ ಶಾಲೆ ನಡೆಸುವ, ತಮ್ಮ ಪೂರ್ವಾಶ್ರಮದ ಹೀರೊ ಸೈಕಲ್ ತುಳಿಯುತ್ತಾ ಓಡಾಡುವ ನಮ್ಮ ಸ್ವಾಮಿಗಳು ನಿಮಗೆ ಅಪರಿಚತರೇ ಇರಬೇಕು.
ಅದ್ಯಾವುದೋ ಮಠದ ಇಬ್ಬರು ಮರಿ ಸ್ವಾಮಿಗಳು ಮಠದ ಆಸ್ತಿ ಸಲುವಾಗಿ ಮಚ್ಚಿಮೂರುಪಾಲು ಜಗಳ ಮಾಡುವ ಸುದ್ದಿ ಪೇಪರಿನ್ಯಾಗ ಬಂದಿರುತ್ತದೆ, ಹಿಂಗಾಗಿ ಅವರ ಹೆಸರು ನಿಮಗೆ ಗೊತ್ತಿರ ಬೇಕು. ಆದರೆ ಸಕಲ ಭೋಗ ಲಾಲಸೆಗಳನ್ನು ಬದಿಗೊತ್ತಿ, ತಮಗೆ ಪಿತ್ರಾರ್ಜಿತವಾಗಿ ಬಂದ ಆಸ್ತಿಯನ್ನು ಮಠದ ಹೆಸರಿಗೆ ಬರೆದು, ತಮ್ಮಷ್ಟಕ್ಕೆ ತಾವಿರುವ ನಮ್ಮ ಸ್ವಾಮಿಗಳ ಬಗ್ಗೆ ನಿಮಗೆ ಗೊತ್ತಿಲ್ಲ ಎನ್ನುವುದರಲ್ಲಿ ಆಶ್ಚರ್ಯವಿಲ್ಲ.
ಟೀವಿಗಳಲ್ಲಿ “ಶನಿಯ ವಕ್ರದೃಷ್ಟಿಯಿಂದ ಪಾರಾಗುವುದು ಹೇಗೆ ? ಗುರುವಿನ ಕೃಪಾದೃಷ್ಟಿಯನ್ನು ಗಳಿಸುವುದು ಹೇಗೆ?” ಇತ್ಯಾದಿಗಳ ಬಗ್ಗೆ ಬೆಳಿಗ್ಗೆ ಬೆಳಿಗ್ಗೆ ತಲೆಕೊರೆಯುವ ಸ್ವಾಮಿಗಳು ನಿಮ್ಮ ಮನಸ್ಸಿನಲ್ಲಿ ನೆಲೆಯೂರಿರುವಾಗ ಲಕ್ಷ್ಮಿಪುರದಂತಹ ದೂರದ ಹಳ್ಳಿಯಲ್ಲಿ ತಮ್ಮದೇ ಮಟ್ಟದಲ್ಲಿ ಮೌಢ್ಯಾಚರಣೆ ವಿರುದ್ಧ ಸಮರ ಸಾರಿರುವ ಗುರುಸಂಗಪ್ಪ ಸ್ವಾಮಿಗಳು ನಿಮ್ಮ ಮನಸ್ಸಿನ ಕದ ತಟ್ಟಿಲ್ಲವೆಂದರೆ ಅದರಲ್ಲೇನು ವಿಶೇಷ?
ನಮ್ಮ ಲಕ್ಷ್ಮೀಪುರ ಜಿಲ್ಲಾ ಸ್ಥಳದಿಂದ ದೂರದ ಮೂಲೆಯಲ್ಲಿನ ಒಂದು ಹಳ್ಳಿ. ನಮ್ಮೂರಲ್ಲಿ ಒಂದು ಸುಮಾರು ಮುನ್ನೂರು-ನಾಕನೂರು ವರ್ಷಗಳ ಇತಿಹಾಸ ಹೊಂದಿರುವ ಒಂದು ಮಠ ಇದೆ- ಮೂರ್ಕಲ್‌ ಮಠ ಅಂತ. ಆ ಮಠದ ಸ್ವಾಮಿಗಳೇ ಗುರುಸಂಗಪ್ಪ ಸ್ವಾಮಿಗಳು. ಅಧಿಕೃತ ಕಾರ್ಯಕ್ರಮಗಳಲ್ಲಿ “ಶ್ರೀಗಳು”, “ಸ್ವಾಮಿಗಳು” ಎಂದು ಅವರನ್ನು ಕರೆದರೂ, ನಮ್ಮೂರಿನ ಬಹುತೇಕರು ಅವರನ್ನು “ಅಜ್ಜಾವರು” ಎಂದೇ ಹೇಳುವುದು.
ಅವರು ಸ್ವಾಮಿಗಳು ಅಂದರ ಒಂದು ಬ್ಯಾರೆ ರೀತಿಯ ಸ್ವಾಮಿಗಳೆ.. ಅವರಿಗೆ ಸನ್ಯಾಸದ ದೀಕ್ಷೆ ಆಗಿತ್ತಾ , ಯಾರಾದ್ರೂ ಅವರಿಗೆ ಮಠದ ಪಟ್ಟಕಟ್ಟಿದ್ದರಾ ? ಊಹ್ಞೂಂ, ನನಗೆ ಖಾತರಿಯಾಗಿ ಗೊತ್ತಿಲ್ಲ.. ಈಗಿನ ಬಹುತೇಕ ಸ್ವಾಮಿಗಳು ಅರ್ಧಾ ಫೂಟು-ಮುಕ್ಕಾಲು ಪೂಟು ಗಡ್ಡ ಬಿಟ್ಟಿರತಾರೆ, ಜನ ಕೂಡ ಅವರ ಯೋಗ್ಯತೆಯನ್ನು ಗಡ್ಡದ ಉದ್ದದ ಆಧಾರದ ಮೇಲೆ ಅಳೆಯುತ್ತಾರೆ. ಆದರೆ ನಮ್ಮ ಸ್ವಾಮಿಗಳೋ ಗಲ್ಲ-ತಲೆ ಪೂರ್ತಿ ನುಣ್ಣಗೆ ಹರಗಿಸಿಕೊಂಡಿರತಾರೆ! ದೂರದಿಂದ ನೋಡಿದರೆ ನಿಮಗೆ ಏನೂ ಅನ್ನಿಸದಿರಬಹುದು, ಆದರೆ ಒಂಚೂರು ಹತ್ತಿರದಿಂದ ಅವರನ್ನು ನೋಡಿದರೆ, ಅರವತ್ತರ ಆಸುಪಾಸಾಗಿದ್ದರೂ ನಿರಿಗೆಗಟ್ಟದ ಮುಖ, ಶಾಂತವಾದ ಅಗಲವಾದ ಕಣ್ಣುಗಳು, ಮುಗುಳು ನಗುವ ತುಟಿಗಳು, ಸಮಾಧಾನ ತರುವ ಮಾತುಗಳು ನೋಡಿದರೆ ನಿಮಗೆ ಇದೊಂದು ʼದೇವನೊಲಿದ ಜೀವʼ ಎಂದು ಅನ್ನಿಸಿ, ಅಡ್ಡ ಬೀಳುತ್ತೀರಿ !
ಈಗಿನ ಬಹುತೇಕ ಸ್ವಾಮಿಗಳು ಮೂಢನಂಬಿಕೆಗಳನ್ನು ಹಂಚುತ್ತಿರುವಾಗ, ಆಧ್ಯಾತ್ಮದ ಹೆಸರಿನಲ್ಲಿ ಸುಡೋ-ಸಾಯನ್ಸ್‌ನ್ನು ಜನಪ್ರಿಯ ಮಾಡುತ್ತಿರುವಾಗ, ಅದಕ್ಕೆ ವಿರುದ್ಧವಾಗಿ ನಮ್ಮ ಸ್ವಾಮಿಗಳದು ಶುದ್ಧ ವಿಜ್ಞಾನ ನಿಷ್ಠೆ. “ನಮ್ಮ ಹಿರ್ಯಾರಿಗೆ ಪವಾಡ ಅನಿಸಿದ ಭಾಳಷ್ಟು ಸಂಗತಿಗಳನ್ನು ನಮ್ಮ ವಿಜ್ಞಾನ ತರ್ಕಯುಕ್ತವಾಗಿ ವಿವರಿಸತೈತಿ. ಇನ್ನ ವಿಜ್ಞಾನದ ತರ್ಕಕ್ಕ ಸಿಗದಂತಾ ಕೆಲುವು ಸಂಗತಿಗಳು ಅದಾವು, ಅವುಗಳನ್ನು ಸೈತ ವಿಜ್ಞಾನ ಒಂದಿಲ್ಲ ಒಂದು ದಿವ್ಸ ಕಂಡು ಹಿಡಿದ..ಹಿಡಿತೈತಿ” ಎನ್ನುವುದು ಅವರು ಆವಾಗಾವಾಗ ಹೇಳುವ ಮಾತು. ಪ್ರತಿ ವರ್ಷ ಮಠದ ಶಾಲೆಯಲ್ಲಿ ನಡೆಯುವ ವಿಜ್ಞಾನ ಪ್ರದರ್ಶನದಲ್ಲಿ ಅವರು ಉತ್ಸಾಹದಿಂದ ಭಾಗವಹಿಸುತ್ತಾರೆ. ಮಠದ ಜಾತ್ರೆಯಲ್ಲಿ ಬೆಂಗಳೂರಿನಿಂದ ತಜ್ಞರನ್ನು ಕರೆಯಿಸಿ “ಪವಾಡ ಬಯಲು” ಕಾರ್ಯಕ್ರಮ ಮಾಡುತ್ತಾರೆ. ನಿಮಗೆ ಮೊನ್ನೆ ನಡೆದ ಒಂದು ಘಟನೆ ಹೇಳಬೇಕು. ನಾನು ನಮ್ಮ ಸ್ವಾಮಿಗಳನ್ನು ಭೆಟ್ಟಿಯಾಗಿ, ಮಾತುಮುಗಿಸಿ ಬರುವಾಗ ಅಡ್ಡಬಿದ್ದು ನಮಸ್ಕಾರ ಮಾಡಿದೆ. ಆವಾಗ ನನ್ನ ಕೊರಳಲ್ಲಿ ಕಟ್ಟಿಕೊಂಡಿದ್ದ ತಾಯತ, ಅವರ ಕಣ್ಣಿಗೆ ಬಿದ್ದಿದೆ. ಅದು ನಮ್ಮವ್ವ ಯಾವುದೋ ಗುಡಿಗೆ ಹೋದಾಗ ತಂದು ಕಟ್ಟಿದ ತಾಯತ. “ತಮ್ಮಾ, ಹತ್ತಿರ ಬಾ ಇಲ್ಲೆ” ಎಂದು, ಇನ್ನೇನು ಬಾಗಿಲು ದಾಟಿಹೋಗುತ್ತಿದ್ದ ನನ್ನನ್ನು ಕರೆದರು. ಹತ್ತಿರ ಹೋದ ನನ್ನ ಕುತ್ತಿಗೆಗೆ ಕೈಹಾಕಿ ಫಟ್‌ ಎಂದು ಹರಿದುಹಾಕಿದರು. “ರಟ್ಟಿ ಗಟ್ಟಿ ಇದ್ದ ಮನಶ್ಯಾ ಯಾರೂ ಹಿಂಗ ನಂಬಿಕಿ ಮ್ಯಾಗ ಅವಲಂಬಿತ ಆಗಬಾರದು” ಎಂದು ಹೇಳಿ ಕಳುಹಿಸಿದ್ದರು!
ನಮ್ಮ ಸ್ವಾಮಿಗಳ ಮಾತು ಬಹಳ ಕಡಿಮೆ. ಮಾತು,ಮಾತು,ಮಾತಿನ ಗೈರತ್ತಿನಲ್ಲಿಯೇ ಕರಾಮತ್ತು ನಡೆಸುವವರು ಜನಪ್ರಿಯರಾಗಿರುವಾಗ, “ಮಾತೇ ಮಾಣಿಕ್ಯ” ಎಂದು ನಂಬಿ, ಅದಕ್ಕೆ ಅಷ್ಟು ಮರ್ಯಾದೆ ಕೊಟ್ಟು ಜಿಪುಣತನದಿಂದ ಖರ್ಚು ಮಾಡುವ ನಮ್ಮ ಸ್ವಾಮಿಗಳು ನಮ್ಮೂರಿಗಷ್ಡೇ ಪರಿಚಿತರಾಗಿ ಉಳಿದಿರೋದು ವಿಶೇಷ ಅಲ್ಲ. ಹೌದು, ನಮ್ಮ ಸ್ವಾಮಿಗಳು ಮಿತಭಾಷಿಗಳು. ಅವರು ಆಡುವ ಮಾತುಗಳು ಬಹಳ ಸಮಚಿತ್ತದಿಂದ, ಬಹಳ ಸಮಯೋಚಿತವಾಗಿ ಆಡಿದ ಮಾತುಗಳು. ನಮ್ಮ ಮಠದ ಕಾರ್ಯಕ್ರಮದೊಳಗ ಸಂಪ್ರದಾಯದ ಪ್ರಕಾರ ಕೊಟ್ಟಕೊನೆಗೆ ಉದ್ಘೋಷಕರು “ಈಗ ಶ್ರೀಗಳಿಂದ ಆಶೀರ್ವಚನ” ಎಂದು ಹೇಳಿದ ಮೇಲೆ, ತಮ್ಮ ಗಂಭೀರ ದನಿಯಲ್ಲಿ ಭಾವಪೂರ್ಣವಾಗಿ ಒಂದು ಕವನದ ನುಡಿಯನ್ನೋ, ಒಂದು ವಚನವನ್ನೋ ಓದಿ ಹೇಳಿ, “ಶಿವ ಎಲ್ಲಾರಿಗೂ ಒಳ್ಳೆಯದು ಮಾಡಲಿ” ಎಂದು, “ಓಂ ನಮಃ ಪಾರ್ವತೀ ಪರಮೇಶ್ವರ ಹರಹರ ಮಹಾದೇವ” ಎಂದು ಘೋಷಿಸಿ ತಮ್ಮ ಕ್ಲುಪ್ತ ಭಾಷಣ ಮುಗಿಸೋದು ಅವರ ರೂಢಿ. ಜನರೂ ಕೂಡ “ಹರಹರ ಮಹಾದೇವ” ಎಂದು ದನಿಗೂಡಿಸಿ ಅಂದಿನ ಕಾರ್ಯಕ್ರಮಕ್ಕೆ ಮಂಗಳ ಹಾಡುವುದನ್ನು ಸಂಪ್ರದಾಯ ಮಾಡಿಕೊಂಡಿದ್ದಾರೆ.
ಮಠದ ಆಡಳಿತಕ್ಕೆ ಸಂಬಂಧಿಸಿದ, ಮಠ ನಡೆಸುವ ಶಾಲೆಯ ಆಡಳಿತಕ್ಕೆ ಸಂಬಂಧಿಸಿದ ವಿಷಯಗಳಲ್ಲಿಯೂ ಸ್ವಾಮಿಗಳ ಮಾತಿನ ಮಿತಿ ಬಹುತೇಕ – “ಹೂಂ”, “ಸರಿ”, “ಹಂಗ ಮಾಡರಿ” ಕೋಟಾದಲ್ಲಿಯೇ ಮುಗಿದುಹೋಗುತ್ತದೆ. ಯಾವಗಲಾದರೊಮ್ಮೆ – “ಹಿಂಗ ಬ್ಯಾಡ, ಹಂಗ ಮಾಡರಿ”, “ಅದನ್ನು ಹೇಳಿದ್ದೆನೆಲ್ಲ, ಏನು ಮಾಡಿದಿರಿ?” ಎಂಬ ಮೂರು-ನಾಲ್ಕು ವಾಕ್ಯಗಳವರೆಗೆ ಸಂಭಾಷಣೆ ಬೆಳೆಯುತ್ತದೆಯೇ ಹೊರತು ಅದಕ್ಕಿಂತ ಹೆಚ್ಚಿಗೆ ಇಲ್ಲ. ಅವರು ಯಾರ ಮೇಲೂ ಸಿಟ್ಟಿನಿಂದ ಮಾತನಾಡಿದ್ದು, ಅಥವಾ ದನಿ ಏರಿಸಿದ್ದು ಇಲ್ಲವೇ ಇಲ್ಲ. ಆದರೂ ಅವರ ವ್ಯಕ್ತಿತ್ವದ ಪ್ರಭಾವದಿಂದಾಗಿ, ಯಾರೋಬ್ಬರೂ ಸುಳ್ಳು ಹೇಳುವ, ಇಲ್ಲವೇ ಕೆಲಸ ತಪ್ಪಿಸುವ ಧೈರ್ಯಮಾಡುವುದಿಲ್ಲ.
ಕೆಲವೇ ಕೆಲವು ಸಂದರ್ಭಗಳಲ್ಲಿ ಅವರು ಮಾತಿನಲ್ಲಿ ಧಾರಾಳಿಗಳಾಗಿರುತ್ತಾರೆ. ಮೊದಲನೆಯ ಸಂದರ್ಭ ಅವರ ಶಿಷ್ಯಗಣದಲ್ಲಿ ಅಣ್ಣ-ತಮ್ಮಂದಿರ ಜಗಳವೋ, ಅಕ್ಕ-ಪಕ್ಕ ಮನೆಯವರ ಜಗಳವೋ ಪಂಚಾಯ್ತಿಗಾಗಿ ಮಠಕ್ಕೆ ಬಂದಾಗ. ಎರಡೂ ಕಡೆಯವರ ಮಾತುಗಳನ್ನು ಕೇಳಿ ಅವರು ತಮ್ಮ ಗಂಭೀರ ದನಿಯಲ್ಲಿ ನಿರ್ಣಯ ಹೇಳಿದರೆ ಅದಕ್ಕೆ ಎದುರು ಹೇಳುವ ಹಾಗೆಯೇ ಇಲ್ಲ. ನಿರ್ಣಯ ತನ್ನ ಪರವಾಗಿ ಬರದಿದ್ದವ ಸಹಿತ ಸ್ವಾಮಿಗಳ ಸಮಾಧಾನದ ಮಾತುಗಳಿಗೆ ತಲೆದೂಗಿ ಹೋಗುತ್ತಾನೆ. ಹೀಗಾಗಿಯೇ ಎಲ್ಲೋ ಏನೋ ಜಗಳಗಳಾದಾಗ ಸತ್ಯ ತನ್ನ ಕಡೆಯಿದೆ ಎಂದುಕೊಂಡವನು “ನಡಿ ಅಜ್ಜಾರ ಕಡೆ ಹೋಗೋಣು” ಎಂದು ಎದುರಾಳಿಗೆ ಮಾತಿನಲ್ಲಿ ಕುಸ್ತಿ-ಪಟ್ಟು ಹಾಕುವುದು, ಎದುರಾಳಿಗೆ ಅಷ್ಟು ಆತ್ಮವಿಶ್ವಾಸವಿರಲಿಲ್ಲವೆಂದರೆ, ಅಲ್ಲಿಯೇ ಜಗಳಮುಗಿಸಿಕೊಳ್ಳುವುದು ಸಹಜ. ಸ್ವಾಮಿಗಳು ಲೆಕ್ಕಕ್ಕಿಂತ ಹೆಚ್ಚು ಮಾತನಾಡುವ ಇನ್ನೊಂದು ಸಂದರ್ಭವೆಂದರೆ, ಯಾವುದೋ ಸಾವು, ಅವಘಡ ಉಂಟಾದಾಗ ಸಂಬಂಧಿಕರಿಗೆ ಸಾಂತ್ವನ ಹೇಳುವಾಗ. ತಾವು ಓದಿದ ಸಾಹಿತ್ಯ, ತತ್ವಜ್ಞಾನ, ತಮ್ಮ ಜೀವನಾನುಭವವನ್ನು ಹಿತ-ಮಿತವಾಗಿ ಸೇರಿಸಿ ದುಃಖಿತರನ್ನು ಸಮಾಧಾನ ಮಾಡುವುದರಲ್ಲಿ ಅವರು ತಜ್ಞ ಕೌನ್ಸಿಲರ್‌ ತರವೇ ಇದ್ದಾರೆ. ಸ್ವಾಮಿಗಳು ಮೂರನೆ ಸಂದರ್ಭದಲ್ಲಿ ವಾಕ್‌ಸ್ವಾತಂತ್ರ್ಯ ತಗೋಳ್ಳೋದು ವಿದ್ಯಾರ್ಥಿಗಳ ಎದುರು ವಿಜ್ಞಾನದ ವಿಷಯ ಮಾತನಾಡುವಾಗ. ಆವಾಗ ಅವರಿಗೆ ತಮ್ಮ ಪೂರ್ವಾಶ್ರಮದ ಮಾಸ್ತರಿಕೆಯ ಹುಮ್ಮಸ್ಸು ವಾಪಸ್ಸು ಬಂದಿರುತ್ತದೆ.
ಪ್ರತಿಯೊಬ್ಬ ಸಂತನಿಗೆ ಒಂದು ಇತಿಹಾಸವಿದೆ ಎಂದು ಹೇಳುವ ಮಾತಿನಂತೆ ನಮ್ಮ ಸ್ವಾಮಿಗಳಿಗೂ ಒಂದು ಇತಿಹಾಸವಿದೆ. ಊರಲ್ಲಿ ನೀವು ಯಾರಿಗೆ ಕೇಳಿದರೂ ಅಜ್ಜಾವರು ಪೂರ್ವಾಶ್ರಮದಲ್ಲಿ ಮಾಸ್ತರರಾಗಿದ್ದರು, ಅವರು ಸಂನ್ಯಾಸ ಸ್ವೀಕರಿಸಲು ಹೇಗೆ ಒಂದು ಘಟನೆ ಕಾರಣವಾಯಿತು ಎಂದು, ತಾವು ಕೇಳಿದ ವಿಷಯಕ್ಕೆ ತಮ್ಮದೇ ಮಸಾಲೆ ಸೇರಿಸಿ ಹೇಳುತ್ತಾರೆ. ತಡೀರಿ…ತಡೀರಿ… ಅವರಿವರನ್ನು ಯಾಕೆ ಕೇಳಬೇಕು? ಆವಾಗ ಅವರ ವಿದ್ಯಾರ್ಥಿಯಾಗಿದ್ದು ಈಗ ಅವರ ಶಿಷ್ಯನಾಗಿರುವ ನಾನೇ ಹೇಳತೇನಿ.

ಸ್ವಾಮಿಗಳ ಇತಿಹಾಸ ಹೇಳುವುದಕ್ಕಿಂತ ಮೊದಲು ಮಠದ ಇತಿಹಾಸ ಹೇಳುವದು ಒಳ್ಳೆಯದು. ಆಗಲೇ ಹೇಳಿದಂತೆ ನಮ್ಮೂರಿನ ಮಠದ ಹೆಸರು ಮೂರ್ಕಲ್‌ ಮಠ ಅಂತ. ಹಿಂದ ಒಬ್ಬ ಪ್ರಭಾವಿ ಯೋಗಿಗಳು ಸಂಚಾರಕ್ಕೆ ಬಂದಾಗ ಇಲ್ಲಿ ಮೂರು ಕಲ್ಲು ಇಟ್ಟು ಅಡಿಗೆ ಮಾಡಿದ್ದರಂತ. ಯೋಗಿಗಳು ಹೋಗುವಾಗ ತಮ್ಮ ಸೇವೆ ಮಾಡಿದ್ದ ದೊಡ್ಮನಿ ಬಸಪ್ಪ ಎಂಬ ಗೃಹಸ್ಥನೊಬ್ಬನಿಗೆ ಈ ಮೂರು ಕಲ್ಲುಗಳನ್ನು ಪೂಜೆ ಮಾಡುವಂತೆ ಹೇಳಿದ್ದರಂತೆ. ಆ ಬಸಪ್ಪ ಆ ಕಲ್ಲುಗಳನ್ನು ಒಂದು ಕಟ್ಟೆಯ ಮೇಲೆ ಸ್ಥಾಪಿಸಿ ಪೂಜೆ ಮಾಡಲು ತೊಡಗಿದನಂತೆ. ಕಾಲಾನಂತರ ಅದೇ ಕಟ್ಟೆಯ ಸುತ್ತ ಕಟ್ಟಡವಾಗಿ, ಅದೇ ದೊಡ್ಡ ಮಠವಾಗಿದೆ. ಮಠಕ್ಕೆ ಒಬ್ಬ ಮರಿಯನ್ನು ಬಿಡುವ ಪದ್ಧತಿಯೂ ಶುರುವಾಗಿ, ಈ ಮಠದ ಪರಂಪರೆಯಲ್ಲಿ ೫-೬ ಮಠಾಧೀಶರೂ ಆಗಿ ಹೋಗಿದ್ದಾರೆ. ಹಿಂದೆ ಯಾರೋ ಒಬ್ಬ ಸ್ವಾಮಿಗಳಿಗೆ, ಇಲ್ಲಿರುವ ಮೂರು ಕಲ್ಲುಗಳು ಶಿವಲಿಂಗಗಳಂತೆ ಕಂಡು, ಅವರು ಮಠದ ಹೆಸರನ್ನು ಸಂಸ್ಕೃತೀಕರಣಗೊಳಿಸಿ “ತ್ರಿಲಿಂಗೇಶ್ವರ ಮಠ” ಎಂದು ಬದಲಿಸಿದ್ದರಂತೆ. ಜನರ ನಡುವೆ ಇನ್ನೂ “ಮೂರ್ಕಲ್‌ ಮಠ” ಎಂದೇ ಪ್ರಚಲಿತವಿದ್ದರೂ, ಗರ್ಭಗುಡಿಯ ಬಾಗಿಲ ಮೇಲೆ “ಶ್ರೀ ತ್ರಿಲಿಂಗೇಶ್ವರ ಪ್ರಸನ್” ಎಂದು ಬರೆದಿದ್ದು ಇದೆ.
ಈಗ ಇಲ್ಲಿ ನಿತ್ಯ ನಡೆಯುವ ದಾಸೋಹ ನೋಡಿದವರು ಶತಮಾನಗಳ ಹಿಂದೆ ಅಡುಗೆ ಮಾಡಿದ್ದ ಯೋಗಿಯದೇ ಪ್ರಭಾವ ಎಂದು ಹೇಳುವುದನ್ನು ನಾನು ಕೇಳಿದ್ದೇನೆ. ಆದರೆ ಮೂವತ್ತು-ಮೂವತ್ತೈದು ವರ್ಷಗಳ ಹಿಂದೆ ಹಾಳು ಬಿದ್ದು ಹೋಗಿದ್ದ ಮಠವನ್ನು ನೋಡಿರುವ ನನ್ನಂತ ಹಳಬರಿಗೆ, ಈಗ ನಡೆಯುತ್ತಿರುವ ಅನ್ನ ದಾಸೋಹ, ಅಕ್ಷರ ದಾಸೋಹಕ್ಕೆ ಆಗಿನ ಯೋಗಿಗಿಂತ ಈಗಿನ ಸ್ವಾಮಿಗಳ ಕರ್ತೃತ್ವ ಶಕ್ತಿಯೇ ಕಾರಣವೆಂದು ಗೊತ್ತು.
ಈಗಿನ ಸ್ವಾವಿಗಳಿಗಿಂತ ಹಿಂದಿನ ಪೀಠಾಧಿಪತಿಗಳು ಪಟ್ಟಕ್ಕೆ ಬರುವ ಕಾಲಕ್ಕೆ ಮಠ ತನ್ನ ಉಚ್ಛ್ರಾಯ ಸ್ಥಿತಿಗೆ ತಲುಪಿತ್ತಂತೆ. ಭಕ್ತರು ಕೊಟ್ಟ ಕಾಣಿಕೆಗಳಿಂದ, ಉಂಬಳಿಗಳಿಂದ ಸಾಕಷ್ಟು ಜಾಗ, ಹೊಲ-ಗದ್ದೆಗಳನ್ನು ಹೊಂದಿ ಶ್ರೀಮಂತ ಮಠವಾಗಿತ್ತಂತೆ. ಹೀಗಾಗಿ ಈ ಮಠದ ಮೇಲೆ ನಾಡಿನ ದೊಡ್ಡ ಪ್ರಭಾವಶಾಲಿ ಮಠದ ಕಣ್ಣು ಬಿದ್ದು, ಈ ಮಠವು ತಮ್ಮ ಪರಂಪರೆಯ ತಮ್ಮದೇ ಸಂಸ್ಥಾನದ ಶಾಖಾಮಠ ಎಂದು ಹಕ್ಕು ಸ್ಥಾಪಿಸಲು ಶುರು ಮಾಡಿದರಂತೆ. ಸ್ವಾತಂತ್ರ್ಯ ಪ್ರಿಯರಾದ ಹಿಂದಿನ ಸ್ವಾಮಿಗಳು “ಈ ಮಠದ ಹಕ್ಕುದಾರರು ಈ ಊರಿನ ಭಕ್ತರು, ಬೇರೆ ಯಾರಿಗೋ ಯಾಕೆ ಶಾಖಾಮಠವಾಗಿರಬೇಕು?” ಎಂದು ಕೋರ್ಟು ಕಟ್ಟೆ ಹತ್ತಿದ್ದರಿಂದ ಒಂದು ಕೋರ್ಟಿನಲ್ಲಿ ಇವರ ಪರವಾಗಿ, ಮತ್ತೊಂದು ಕೋರ್ಟಿನಲ್ಲಿ ಅವರ ಪರವಾಗಿ ತೀರ್ಪು ಬಂದು, ಕೇಸು ಹಲವಾರು ವರ್ಷಗಳವರೆಗೆ ನಡೆಯಿತಂತೆ. ಇದೆಲ್ಲದರ ನಡುವೆ ಟೆನೆನ್ಸಿ ಆಕ್ಟ್‌ ಬಂದು, ಮಠದ ಹೊಲಗಳನ್ನು ಕೆಲ ಪ್ರಭಾವಿ ರೈತರೇ ತಮ್ಮ ಹೆಸರಿಗೆ ಮಾಡಿಕೊಂಡಿದ್ದರಂತೆ. “ಮಠದ ಆಸ್ತಿ ಅಂದರ ಊರಿನ ಆಸ್ತಿ, ಅದನ್ನು ಉಳಿಸಬೇಕಂತ ನಾ ಗುದ್ದ್ಯಾಡಕತ್ತಿದರ ಈ ಹರಾಮಖೋರರು ನನ್ನ ಬೆನ್ನಿಗೆ ಚೂರಿ ಹಾಕಿದರಲ್ಲ” ಎಂದು ನೊಂದುಕೊಂಢಿದ್ದ ಸ್ವಾಮಿಗಳು, ಅದೇ ಕೊರಗಿನಲ್ಲಿ ಜೀವ ಬಿಟ್ಟಿದ್ದರಂತೆ. ಅದಕ್ಕಿಂತ ಮೊದಲು ಕೋರ್ಟಿಗಾಗಿ ಅಲೆದಾಡಿ ಬಹಳಷ್ಟು ಹಣ ಖರ್ಚು ಮಾಡಿದ್ದರಿಂದ ಮಠದ ಖಜಾನೆಯೂ ಖಾಲಿಯಾಗಿತ್ತಂತೆ. ಅ಼ಷ್ಟು ದಿನಗಳವರೆಗೂ ಹಕ್ಕು ಸಾಧಿಸಲು ಹೋರಾಡಿದ್ದ ಪ್ರಭಾವಿ ಮಠ, ಮೂರ್ಕಲ್‌ ಮಠದ ಜಮೀನೂ ಟೆನೆನ್ಸಿ ಆಗಿ ಹೋಗಿ, ಖಜಾನೆಯೂ ಬರಿದಾದಮ್ಯಾಲೆ ಇದರ ಬಗ್ಗೆ ಮೋಹ ಬಿಟ್ಟುಬಿಟ್ಟಿತಂತೆ. ಇಂತಹ ಖಾಲಿ ಜೋಳಿಗೆಯ ಮಠಕ್ಕೆ ಯಾವ ತಂದೆ-ತಾಯಿಗಳು ತಾನೆ ತಮ್ಮ ಮಗನನ್ನು ಮರಿಯಾಗಿ ಬಿಡುತ್ತಾರೆ? ಹಿಂಗಾಗಿ ಮಠದ ಪೀಠವೂ ಖಾಲಿಯಾಗೇ ಇತ್ತು.
ಇದೆಲ್ಲಾ ಕತೆ ನಾನು ಹುಟ್ಟುವದಕ್ಕಿಂತ ಮೊದಲಿನದು. ನನಗೆ ನೆನಪಿರುವಂತೆ ನಾವು ಸಾಲಿಗೆ ಹೋಗುವ ಕಾಲಕ್ಕಂದರೆ ಮಠದ ಕಟ್ಟಡ ಶಿಥಿಲಗೊಂಡಿತ್ತು. ದೊಡ್ಮನಿ ಬಸಪ್ಪನ ವಂಶಜರು ಯಾರಾದರೂ ಬಂದು ಕಸ ಹೊಡದು, ಥಳಿ-ರಂಗೋಲಿ ಹಾಕಿ, ಪೂಜೆ ಮಾಡಿದರೆ ಮಾಡಿದರು ಇಲ್ಲವೆಂದರೆ ಇಲ್ಲ. ಆನಂತರ ಕುರಿ ಕಾಯುವವರೋ, ದನ ಕಾಯುವವರೋ ಮಠದ ವಠಾರದಲ್ಲಿ ತಂದ ಬುತ್ತಿ ತಿಂದು, ಕಟ್ಟಿ ಮ್ಯಾಲೆ ಚಕ್ಕಾ ಆಡಿ ಹೋಗುವರು. ಮಠದ ಜಾತ್ರೆಯಂತೂ ನಿಂತೇಹೋಗಿತ್ತು. ಈ ಸಮಯಕ್ಕ ಹಿತ್ತಲಮನಿ ಮಾಸ್ತರರು ನಮ್ಮ ಸಾಲಿಗೆ ಹೆಡ್‌ ಮಾಸ್ತರರಾಗಿ ಬಂದರು. ಅವರೇ ಈಗಿನ ನಮ್ಮ ಸ್ವಾಮಿಗಳು. ಅವರ ಪೂರ್ವಾಶ್ರಮದ ಪೂರ್ಣ ಹೆಸರು ಶ್ರೀ.ಜಿ.ಎಮ್. ಹಿತ್ತಲಮನಿ ಅಂತ -ಗುರುಸಂಗಪ್ಪ ಮಲ್ಲಪ್ಪ ಹಿತ್ತಲಮನಿ. ಅಲ್ಲಿಯವರೆಗೂ ನಮ್ಮ ಸಾಲಿಯಲ್ಲಿ ಬಹುತೇಕ ಮಾಸ್ತರುಗಳು, ಅಕ್ಕೋರುಗಳು ಬರೀ ಮುಲ್ಕಿ ಪರೀಕ್ಷಾ ಪಾಸಾದವರು ಇರುತ್ತಿದ್ದರು. ಅಲ್ಲೊಬ್ಬರು ಇಲ್ಲೊಬ್ಬರು ಮ್ಯಾಟ್ರಿಕ್‌ ಆದವರು, ಟಿಸಿಎಚ್‌ ಆದವರು ಇರುತ್ತಿದ್ದರು. ಅಂತಹ ದಿನಗಳಲ್ಲಿ ಬಿ.ಎಸ್ಸಿ ಕಲಿತಿದ್ದ ಹಿತ್ತಲಮನಿ ಗುರುಗಳು ನಮ್ಮ ಊರಿಗೆ ಹೆಡ್‌ಮಾಸ್ತರರಾಗಿ ಬಂದದ್ದು ಒಂದು ಅಚ್ಚರಿಯೇ ಸರಿ. ಮಾಸ್ತರರೂ ನಮ್ಮದೇ ಊರಿನವರು. ಅವರ ಅಪ್ಪ ಹಿತ್ತಲಮನಿ ಮಲ್ಲಪ್ಪ ಊರಿನ ದೊಡ್ಡ ಕುಳಗಳಲ್ಲಿ ಒಬ್ಬರಾಗಿದ್ದವರು. ಬಿ.ಎಸ್ಸಿ. ಕಲಿತು, ಮುಂದೆ ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕೆಂದುಕೊಂಡಿದ್ದ ಮಾಸ್ತರರು ತಮ್ಮ ತಂದೆಯ ಅಕಾಲಿಕ ಮರಣದಿಂದಾಗಿ ಊರಿಗೆ ಮರಳಿದ್ದರು. ಅಗಾಧ ಆಸ್ತಿಗೆ ಏಕೈಕ ವಾರಸುದಾರರಾಗಿದ್ದ ಅವರು ತಮ್ಮ ತಾಯಿಯ ಒತ್ತಡಕ್ಕೆ ಮಣಿದು ಊರಿಗೆ ಬಂದಿದ್ದರು. ಶಾಲೆಯ ಮ್ಯಾನೇಜ್ಮೆಂಟಿನಲ್ಲಿದ್ದ ಹಿರಿಯರಿಗೆಲ್ಲ ಹಿತ್ತಲಮನಿ ಮಲ್ಲಪ್ಪನವರ ಬಗ್ಗೆ ಗೌರವ ಇದ್ದಿದ್ದರಿಂದ ಇವರನ್ನು ಶಾಲೆಗೆ ಹೆಡ್ಮಾಸ್ಟ್ರನ್ನಾಗಿ ನೇಮಿಸಿಕೊಂಡಿದ್ದರು.
ಹಿತ್ತಲಮನಿ ಗುರುಗಳು ಬಂದ ಮೇಲೆ ನಮ್ಮ ಶಾಲೆಗೆ ಒಂದು ಜೀವಕಳೆ ಬಂದಂತಾಯಿತು. ಅಲ್ಲಿಯವರೆಗೆ ತೂಕಡಿಸುತ್ತಾ ಸಾಗುತ್ತಿದ್ದ ನಮ್ಮ ಶಾಲೆಯ ಚಟುವಟಿಕೆಗಳು ಮೂಡಲ ಹೋರಿ ಕಟ್ಟಿದ ಚಕ್ಕಡಿಯಂತೆ ಜಿಗಿ-ಜಿಗಿದು ಓಡತೊಡಗಿದವು. ಊರಲ್ಲಿ ಒಕ್ಕಲುತನ, ದಲಾಲಿ ಅಂಗಡಿ, ಬಡ್ಡಿ ವ್ಯವಹಾರ ಮಾಡಿಕೊಂಡು, ಮಾಸ್ತರಿಕೆಯನ್ನು ಸೈಡ್‌ ಬಿಜಿನೆಸ್‌ ಮಾಡಿಕೊಂಡಿದ್ದ ಹಳೆಕಾಲದ ಮಾಸ್ತರುಗಳು ಹೊಸ ಹೆಡ್‌ ಮಾಸ್ತರರು ಮುಟ್ಟಿಸಿದ ಚುರುಕಿನಿಂದ ಸರಿಯಾದ ಸಮಯಕ್ಕೆ ಶಾಲೆಗೆ ಬರತೊಡಗಿದರು. ಅಲ್ಲಿಯವರೆಗೆ “ಹುಡುಗೂರು ಹರಿತಾವು” ಎಂದು ಭದ್ರವಾಗಿ ಕಪಾಟಿನಲ್ಲಿ ಕೀಲಿ ಹಾಕಿ ಇಡಲಾಗಿದ್ದ ಲೈಬ್ರರಿಯ ಪುಸ್ತಕಗಳನ್ನು ಹೆಡ್ಮಾಸ್ತರರ ನಿರ್ದೇಶನದಂತೆ ವಾರಕ್ಕೊಂದರಂತೆ ವಿದ್ಯಾರ್ಥಿಗಳಿಗೆ ಓದಲು ಹಂಚಲು ಶುರುವಾಗಿ ನನ್ನಂತಹವರಿಗೆ ಓದಿನ ರುಚಿ ಹತ್ತತೊಡಗಿತ್ತು. "ಹುಡುಗೂರು ಮುರಿತಾರ” ಎಂದು ಸಂದಕದೊಳಗಿಟ್ಟು ಕೀಲಿ ಹಾಕಲಾಗಿದ್ದ ಕ್ರಿಕೆಟ್‌ ಬ್ಯಾಟು, ಸ್ಟಂಪುಗಳೂ ಹೆಡ್ಮಾಸ್ತರರ ಆದೇಶದಿಂದ ಹುಡುಗರ ಕೈಗತ್ತಿದ್ದಷ್ಟೇ ಅಲ್ಲ, ಸಾಲಿ ಬಿಟ್ಟ ಮೇಲೆ ಹೆಡ್ಮಾಸ್ತರರೇ ನಮ್ಮ ಜೊತೆ ಆಡಲು ಬಂದು ಪ್ರೋತ್ಹಾಹ ಕೊಡತೊಡಗಿದರು. “ಹುಡುಗೂರು ಒಡೀತಾರ” ಎಂದು ಕಪಾಟಿನೊಳಗೆ ಇಟ್ಟು ಕೊನೆಗೆ ಇಲಿಯೋ ಹೆಗ್ಗಣವೋ ಕಾಟಕ್ಕೆ ಒಡೆದು ಹೋಗುತ್ತಿದ್ದ ವಿಜ್ಙಾನ ಪ್ರಯೋಗದ ಸಾಮಾನುಗಳು, ಹೆಡ್‌ಮಾಸ್ತರರು ವಾರಕ್ಕೊಮ್ಮೆಯಂತೆ ವಿದ್ಯಾರ್ಥಿಗಳಿಗೆ ಪ್ರಯೋಗ ಮಾಡಿ ತೋರಿಸಲು ನಿರ್ಧರಿಸಿದ್ದರಿಂದ ಬೆಳಕು ಕಂಡವು.

ಹಿತ್ತಲಮನಿ ಗುರುಗಳ ಪ್ರಭಾವದಿಂದ ಇಡೀ ಶಾಲೆಗೆ ವಿದ್ಯುತ್‌ ಸಂಚಾರವಾಗಿತ್ತಾದರೂ ನಮ್ಮ ಕ್ಲಾಸಿನ ಮೇಲೆ ಮಾಸ್ತರರ ಪ್ರಭಾವ ಇನ್ನೂ ಹೆಚ್ಚಾಗಿತ್ತು. ಯಾಕೆಂದರೆ ಅವರು ನಮ್ಮ ಕ್ಲಾಸ್‌ ಮಾಸ್ಟರ್‌ ಆಗಿದ್ದರು. ಅವರು ಇನ್ಶರ್ಟ್‌ ಮಾಡಿಕೊಳ್ಳುತ್ತಿದ್ದ ರೀತಿ, ಪ್ಯಾಂಟಿನ ಹಿಂದಿನ ಕಿಸೆಯಲ್ಲಿ ಬಾಚಣಿಕೆ ಇಟ್ಟುಕೊಳ್ಳುವ ಪದ್ಧತಿ, ಮಿರಿಮಿರಿ ಮಿಂಚುವ ಹೀರೋ ಸೈಕಲ್‌ ಹತ್ತಿ ಬರುತ್ತಿದ್ದ ಠೀವಿ, ಸಂಜೆ ಆಡಲು ಬರುವಾಗ ಮೂರು ಪಟ್ಟಿ ಇರುವ ಟ್ರ್ಯಾಕ್‌ ಪ್ಯಾಂಟ್‌ ಹಾಕಿಕೊಂಡು ಬರುತ್ತಿದ್ದದ್ದು, ಎಲ್ಲ ಅದೇ ಆಗ ಹದಿವಯಕ್ಕೆ ಕಾಲಿಡುತ್ತಿದ್ದ ನಮಗೆ ಒಂದು ಸೋಜಿಗವೇ ಆಗಿದ್ದಿತು. ನಾನು ಮತ್ತು ನನ್ನ ಗೆಳೆಯ ಹುಣಸೀಮರದ ಮುತ್ತ್ಯಾ ಇಬ್ಬರೂ ನಾವು ದೊಡ್ಡವರಾದಮೇಲೆ ಹಿತ್ತಲಮನಿ ಸರ್‌ ಗತೇ ಆಗಬೇಕು ಎಂದು ಮಾತನಾಡಿಕೊಳ್ಳುತ್ತಿದ್ದೆವು.

ನಾನು ಮತ್ತು ಹುಣಸಿಮರದ ಮುತ್ತ್ಯಾ ಬಾಲ್ಯ ಸ್ನೇಹಿತರು, ಇಬ್ಬರೂ ಓದಿನಲ್ಲಿ ಉಳಿದವರಿಗಿಂತ ಚುರುಕು. ಇಬ್ಬರೂ ಆಟ-ಪಾಟಗಳಲ್ಲಿ ಮುಂದು. ಇಬ್ಬರೂ ಆಪ್ತ ಸ್ನೇಹಿತರೂ ಹೌದು, ಪ್ರತಿಸ್ಪರ್ಧಿಗಳೂ ಹೌದು. ಒಂದು ವರ್ಷ ಕ್ಲಾಸಿಗೆ ನಾನು ಮೊದಲ ಸ್ಥಾನ ಪಡೆದರೆ ಮತ್ತೊಂದು ವರ್ಷ ಅವನು. ಮುತ್ತ್ಯಾನಿಗೂ ನನಗೂ ಹಿತ್ತಲಮನಿ ಸರ್‌ ಬಂದಮ್ಯಾಲೆ ಒಬ್ಬರ ಮ್ಯಾಲೆ ಇನ್ನೊಬ್ಬರು ಜಿದ್ದಾ-ಜಿದ್ದಿ ಮಾಡಲು ಇನ್ನೂ ಹೆಚ್ಚಿನ ಅವಕಾಶ ಸಿಕ್ಕವು. ವಚನ ಬಾಯಿಪಾಠ ಮಾಡಿ ಒಪ್ಪಿಸುವ ಸ್ಪರ್ಧೆ, ನಿಬಂಧ ಸ್ಪರ್ಧೆ, ಸ್ಪೆಲ್ಲಿಂಗ್‌ ಸ್ಪರ್ಧೆ, ಭಾಷಣ ಸ್ಪರ್ಧೆ ಹೀಗೆ. ಇವಷ್ಟೇ ಅಲ್ಲದೇ ಇನ್ನೂ ಹಲವಾರು ಸ್ಪರ್ಧೆಗಳು ಮಾಸ್ತರರಿಗೆ ಗೊತ್ತಾಗದ ಹಾಗೆ ನಮ್ಮಿಬ್ಬರ ನಡುವೆ ನಡೆಯುತ್ತಿದ್ದವು. ಯಾರು ಮೊದಲು ಸಾಲಿಗೆ ಬಂದು, ನಮ್ಮೆಲ್ಲರಿಗಿಂತ ಮೊದಲೇ ಬಂದಿರತಿದ್ದ ಹಿತ್ತಲಮನಿ ಸರ್‌ ಅವರ ಹೊಸಾ ಹೀರೋ ಸೈಕಲ್‌ ಒರಸಿ ಇಡುತಾರೆ, ಅವರು ವಿಜ್ಙಾನದ ಪ್ರಯೋಗಗಳನ್ನು ಮಾಡುವಾಗ ಅವರ ಅಸಿಸ್ಟಂಟ್‌ ಆಗಿ ಹೆಚ್ಚಿಗೆ ಶಭಾಸ್‌ಗಿರಿಯನ್ನು ಯಾರು ಪಡೆಯುತ್ತಾರೆ…. ಹೀಗೆ
ಅದು “ಶಿಕ್ಷೆಯ ಮೂಲಕವೇ ಶಿಕ್ಷಣ” ಎಂದು ಎಲ್ಲ ಶಿಕ್ಷಕರೂ ನಂಬಿದ್ದ ಕಾಲ. ನಮ್ಮ ಹಿತ್ತಲಮನಿ ಗುರುಗಳೂ ಅದಕ್ಕೆ ಹೊರತಾಗಿರಲಿಲ್ಲ. ಮುಲ್ಕಿ ಪರೀಕ್ಷೆ ಪಾಸಾಗಿ ಬಂದಿದ್ದ ಹಿಂದಿನ ಕಾಲದ ಮಾಸ್ತರುಗಳು ಕಪಾಳಕ್ಕೆ ʼಛಟೀರ್‌ʼ ಎಂದು ಬಿಗಿದೋ, ಕತ್ತು ಬಗ್ಗಿಸಿ ಬೆನ್ನಿಗೆ ʼಧಂʼ ಎಂದು ಲಗಾಯಿಸಿಯೋ ಶಿಕ್ಷಣ ಕೊಡುವ ಕರ್ತವ್ಯವನ್ನು ನಿಭಾಯಿಸುತ್ತಿದ್ದರು. ಡಿಗ್ರೀ ಓದಿ ಬಂದಿದ್ದ ನಮ್ಮ ಹಿತ್ತಲಮನಿ ಗುರುಗಳು ಇಂತಹ ಶಿಲಾಯುಗದ ಪದ್ಧತಿಗೆ ತಿಲಾಂಜಲಿ ಇತ್ತಿದ್ದರು. ಅವರು ಒಂದು ಎರಡುವರೆ-ಮೂರು ಫೂಟು ಉದ್ದದ ಗಂಡು ಬಿದಿರಿನ ಕೋಲನ್ನು ತಂದು ಕ್ಲಾಸ್‌ ರೂಮಿನಲ್ಲಿ ಇಟ್ಟಿದ್ದರು. ಅದರಿಂದ ಶಿಷ್ಯಗಣದ ಅಂಗೈಗೆ ಶಿಕ್ಷೆ/ಶಿಕ಼ಣ ಪ್ರದಾನ ಮಾಡುತ್ತಿದ್ದರು. ಅದೇ ಗಂಡು ಬಿದಿರು ಭೂಗೋಳದ ಪಿರಿಯಡ್ಡಿನಲ್ಲಿ ನಕಾಶೆಯಲ್ಲಿ ಉತ್ತರ ದಿಕ್ಕು ಯಾವುದು, ನೈರುತ್ಯ ದಿಕ್ಕು ಯಾವುದು ಎಂದು ತೋರಿಸಲು, ಜೀವಶಾಸ್ತ್ರ ಪಿರಿಯಡ್ಡಿನಲ್ಲಿ ಅನ್ನನಾಳ, ಜಠರ, ದೊಡ್ಡ ಕರುಳು-ಸಣ್ಣ ಕರುಳು ಎಲ್ಲಿವೆ ಎಂದು ಚಾರ್ಟಿನಲ್ಲಿ ತೋರಿಸಲು ಉಪಯೋಗವಾಗುತ್ತಿತ್ತು. ಗುರುಗಳು ಅದನ್ನು ಮೇಜಿನ ಮೇಲ್ಮೈಯ ಮೇಲೆ ನಿಲ್ಲಿಸಿ, ಬಾಗಿಸಿ, ತೊಂಭತ್ತು ಡಿಗ್ರೀ ಕೋನ, ನಾಲ್ವತ್ತೈದು ಡಿಗ್ರೀ ಕೋನವನ್ನು ತೋರಿಸಲು ಉಪಯೋಗಿಸುತ್ತಿದ್ದರು. ನನಗೇನು ಗೊತ್ತಿತ್ತು, ಹಿತ್ತಲಮನಿ ಗುರುಗಳ ಈ ಗಂಡು ಬಿದಿರೇ ಹಲವಾರು ಜೀವನಗಳ ದಿಕ್ಕು ಬದಲಾಯಿಸಲು ಕಾರಣವಾಗುತ್ತದೆ, ಮತ್ತು ಅದರಲ್ಲಿ ನನ್ನದೂ ಪಾಲಿರುತ್ತದೆಯೆಂದು?
~~~~~~~~~~~~~~~~~~~~~~~~~~~~~~~~~~~
ಅದಾಗಿದ್ದು ಹೀಗೆ - ಆವಾಗಿನ ಶೈಕ್ಷಣಿಕ ಪರಿಸರದಲ್ಲಿ ಗೈಡ್‌ ಪುಸ್ತಕಗಳ ಬಗ್ಗೆ ಬಹಳಷ್ಟು ಅನಾದರ, ತೆಗಳಿಕೆ ಇತ್ತು. ಕಷ್ಟಪಟ್ಟು ಉತ್ತರ ಬರೆಯುವುದು ಬಿಟ್ಟು ಗೈಡ್‌ ಪುಸ್ತಕದಿಂದ ವಿದ್ಯಾರ್ಥಿಗಳು ಉತ್ತರ ಕಾಪಿ ಮಾಡುತ್ತಾರೆ ಎಂದು ಸಕಾರಣವಾಗಿ ಶಿಕ್ಷಕರು ಗೈಡುಗಳ ಬಗ್ಗೆ ಅಸಮಾಧಾನ ಹೊಂದಿದ್ದರು. ಹಾಗೆಯೇ ಆವಾಗಿನ ಸಿನೆಮಾದ ಬಗ್ಗೆ ಕೂಡ ಸಮಾಜದಲ್ಲಿ ಸದಭಿಪ್ರಾಯವಿರಲಿಲ್ಲ. ಸಿನೆಮಾ ಹಾಡುಗಳನ್ನು ಗುನುಗುವುದು, ಹಾಡುವುದು ಅನೈತಿಕ ಕಾರ್ಯಗಳಲ್ಲಿ ಎಣಿಸಲ್ಪಡುತ್ತಿದ್ದವು. ʼಸತಿಸಕ್ಕೂಬಾಯಿʼ, ʼಸತ್ಯ ಹರಿಶ್ಚಂದ್ರʼ ಇತ್ಯಾದಿ ಸಾಲಿ ಮಕ್ಕಳಿಗಾಗಿ ಬೆನೆಫಿಟ್‌ ಶೋ ಇಡುವಂತಹ ಸಿನೆಮಾಗಳನ್ನು ಬಿಟ್ಟು ಉಳಿದ ಸಿನೆಮಾ ನೋಡಿದರೆ “ಹುಡುಗ ಅಭ್ಯಾಸ ಮಾಡುವುದು ಬಿಟ್ಟು ಚೈನಿಗೆ ಬಿದ್ದಾನ” ಎಂದು ಹೇಳಲಾಗುತ್ತಿತ್ತು. ಮತ್ತೆ ನಮ್ಮ ಪಾಲಕರ ಆರ್ಥಿಕ ಪರಿಸ್ಥಿತಿಯಿಂದಾಗಿ ಪಠ್ಯಪುಸ್ತಕ-ನೋಟುಪುಸ್ತಕಗಳಿಗಾಗಿ ದುಡ್ಡು ಹೊಂದಿಸುವದೇ ಕಷ್ಟದ್ದಾಗಿದ್ದರಿಂದ ಗೈಡ್‌ ಕೊಳ್ಳಲೋ, ಸಿನೆಮಾ ನೋಡಲೋ ದುಢ್ಢು ಎಲ್ಲಿ ಬರಬೇಕು? ಅನಿವಾರ್ಯವಾಗಿ ನಾವು ಒಳ್ಳೆಯ ಹುಡುಗರಾಗಿಯೇ ಉಳಿಯುತ್ತಿದ್ದೆವು.
ಈಗಿನ ಮಕ್ಕಳು ಪುಸ್ತಕಕ್ಕೆ, ರಟ್ಟಿರುವ ನೋಟು ಬುಕ್ಕಿಗಾಗಿ ಬ್ರೌನ್‌ ಶೀಟ್‌ ರೊಕ್ಕ ಕೊಟ್ಟು ಕೊಂಡು ಕವರು ಹಾಕಿಕೊಳ್ಳುವುದನ್ನು ನೋಡಿದರೆ ನಮ್ಮ ಕಾಲ ಎಷ್ಟು ಬಡತನದ್ದಿತ್ತೆಂದು ಅನ್ನಿಸುತ್ತದೆ. ನಮ್ಮ ಕಾಲದಲ್ಲಿಯೋ ʼಲೇಖಕʼ ಎಂದು ಬರೆದಿರುತ್ತಿದ್ದ ದಪ್ಪ ರಟ್ಟಿನ ನೋಟುಬುಕ್ಕುಗಳಿಗೆ ʼಕವರುʼ ಹಾಕುವ ಪ್ರಮೇಯವೇ ಇರುತ್ತಿರಲಿಲ್ಲ. ಪಠ್ಯ ಪುಸ್ತಕಗಳಿಗೆ ʼಸಂಯುಕ್ತ-ಕರ್ನಾಟಕʼ ಪತ್ರಿಕೆಯ ಹಳೆಯ ಹಾಳೆಯನ್ನೇ ಕವರು ಹಾಕಿಕೊಂಡು ಜತನು ಮಾಡಿಟ್ಟುಕೊಂದಿರುತ್ತಿದ್ದೆವು. ನಿಮಗೆ ಗೊತ್ತಾ? ಭಾರತ ವಿಶ್ವಕಪ್‌ ಗೆದ್ದಾಗಿನ ಸುದ್ದಿ ಇದ್ದ ಹಾಳೆಯನ್ನು ಪುರಮಾಶಿ ಕವರ ಹಾಕಿಕೊಂಡಿದ್ದ ನಾನು ಆ ಸುದ್ದಿಯನ್ನು ವರ್ಷಪೂರ್ತಿ ಓದಿ ಸಂತೋಷಿಸಿದ್ದೆ.
ನಮ್ಮ ಕ್ಲಾಸ್‌ರೂಂಗಳ ಪರಿಸರದ ಬಗ್ಗೆ ನಿಮಗೊಂದು ಕಲ್ಪನೆ ಬರಲಿ ಎಂದು ಅಷ್ಟೆಲ್ಲ ವಿವರ ಹೇಳಬೇಕಾಯಿತು. ಇರಲಿ, ಮರಳಿ ಹಿತ್ತಲಮನಿ ಸರ್‌, ಹುಣಶಿಮರದ ಮುತ್ತ್ಯಾ ಮತ್ತು ನನ್ನ ಕತೆಗೆ ವಾಪಸ್‌ ಹೋಗೋಣ. ಆ ದುರ್ದಿನದಂದು ಹುಣಶಿಮರದ ಮುತ್ತ್ಯಾ ಸಾಲಿಗೆ ಗೈಡು ತೊಗೊಂಡು ಬಂದಿದ್ದ. ಯಾವಾಗಲೂ ಅವನೊಂದಿಗೆ ಜಿದ್ದಾ-ಜಿದ್ದಿಯಲ್ಲಿರುವ ನನಗೆ ಅವನು ಅವತ್ತು ಪಾಟೀ ಚೀಲದಲ್ಲಿದ್ದ ಗೈಡನ್ನು ನನಗೇ ತೋರಿಸಲೂ ಒಪ್ಪಲಿಲ್ಲ. ನನಗೆ ಅವನ ಮ್ಯಾಲೆ ಸಿಟ್ಟು ಬಂತು, ಹೊಟ್ಟೆಕಿಚ್ಚೂ ಆಯಿತು. ಆದ್ದರಿಂದ ನಾನು ಮಾಸ್ತರರು ಕ್ಲಾಸಿಗೆ ಬಂದ ಕೂಡಲೇ ಮುತ್ತ್ಯಾ ಗೈಡು ಪುಸ್ತಕ ಕೊಂಡು ತಂದಿದ್ದ ವಿಷಯ ಚಾಡಿ ಹೇಳಿದೆ. ಸಿಟ್ಟಿಗೆದ್ದ ಮಾಸ್ತರರು ಮುತ್ತ್ಯಾನಿಗೆ ಪಾಟೀಚೀಲ ಎತ್ತಿಕೊಂಡು ಹತ್ತಿರ ಬರಲು ಹೇಳಿದರು. ಪಾಟೀಚೀಲದಲ್ಲಿ ಕೈಹಾಕಿ ಪುಸ್ತಕ ತೆಗೆದಾಗ ಮುತ್ತ್ಯಾ ಮಾಡಿದ ಇನ್ನೊಂದು ಪಾತಕಕರ್ಮ ಹೊರಗೆ ಬಂತು. ರದ್ದಿ ಪೇಪರಿನಲ್ಲಿ ಕವರು ಹಾಕಿದರೆ ಅದು ʼಲಪ-ಲಪʼ ಆಗುತ್ತದೆಂದು, ಸಿನಿಮಾ ಪೋಸ್ಟರ್‌ ಹಚ್ಚುವ ಮೈಬೂ ಸಾಬನ ಹತ್ತಿರ ಹಳೆಯ ಪೋಸ್ಟರ್‌ ಇಸಿದುಕೊಂಡು, ಆ ದಪ್ಪ ಹಾಳೆಯಿಂದ ಗೈಡಿಗೆ ಕವರ್‌ ಹಾಕಿದ್ದ. ಅದರ ಮೇಲೆ ಕಲ್ಪನಾನೋ, ಆರತಿಯೋ ಯಾರೋ ಒಬ್ಬ ನಟಿ ನೃತ್ಯ ಮಾಡುವ ಭಂಗಿಯ ಚಿತ್ರ ಇತ್ತು. ನಮ್ಮ ಗುರುಗಳಿಗೆ ಸಿನೇಮಾ ನಟಿಯ ಚಿತ್ರ ನೋಡಿ ಮೊದಲೇ ಬಂದಿದ್ದ ಸಿಟ್ಟು ನೆತ್ತಿಗೇರಿತು. ಅವರಷ್ಟು ಸಿಟ್ಟು ಮಾಡಿಕೊಂಡದ್ದು ನಾನ್ಯಾವತ್ತೂ ನೋಡಿರಲಿಲ್ಲ. ಅವರ ಅ ಸಿಟ್ಟು ನೋಡಿ ಮುತ್ತ್ಯಾ ಅಷ್ಟೇ ಅಲ್ಲ ನಾನೂ ಇತರ ಹುಡುಗರೂ ನಡುಗಿ ಹೋದೆವು. ಮಾಸ್ತರರು “ನಾ ಹೇಳಿದ ಅಭ್ಯಾಸ ನಿನಗ ತಿಳೀಲಿಲ್ಲ ಅಂದರ ಹತ್ತು ಸಲ ಕೇಳು ಹತ್ತ ಸಲ ಹೇಳಿಕೊಡತೇನಿ. ಅದನ್ನು ಬಿಟ್ಟು ಗೈಡ್‌ ಪುಸ್ತಕಾ ತೊಗೊಂಡು ಬರತೀ?” ಎನ್ನುತ್ತಾ ಗಂಡುಬಿದಿರಿನ ಪ್ರಸಾದ ಕೊಡತೊಡಗಿದರು. ಸಿಟ್ಟಿನ ಭರದಲ್ಲಿ ಅಂಗೈಗಷ್ಟೇ ಹೊಡೆಯಬೇಕೆಂಬ ತಾವೇ ಮಾಡಿಕೊಂಡಿದ್ದ ಕಟ್ಟಲೆಯನ್ನೂ ಮುರಿದು ಮುತ್ತ್ಯಾನ ಬೆನ್ನು, ಕುಂಡಿ, ಕಾಲುಗಳಿಗೂ ಬಾರಿಸತೊಡಗಿದರು. ನಡು ನಡುವೆ “ನಿನಗ ದಿಮಾಕ ಮಾಡಾಕ ಸಿನೆಮಾ ನಟಿಯರ ಚಿತ್ರ ಬೇಕಲ್ಲಾ?” ಎಂದು ಹಂಗಿಸುತ್ತಾ ಗಂಡುಬಿದಿರಿನಿಂದ ಪ್ರಹಾರ ಮಾಡಿದರು. ಮುತ್ತ್ಯಾ ಆರ್ತನಾದದಲ್ಲಿ ಅಳುತ್ತಾ, “ತಪ್ಪಾತು ಸರ್‌, ಇನ್ನೊಮ್ಮೆ ಮಾಡೂದಿಲ್ಲರಿ ಸರ್‌” ಎಂದು ಅಂಗಲಾಚುತ್ತಿದ್ದ. ಗುರುಗಳ ಗಂಡುಬಿದಿರಿನ ರುದ್ರನರ್ತನವನ್ನು ನೋಡುತ್ತಾ ನಾವೆಲ್ಲಾ ಹೆದರಿಕೊಂಡು ಮುದುರಿ ಕುಳಿತಿದ್ದೆವು. ಕೈ ಸೋಲುವವರೆಗೆ ಹೊಡೆದ ಗುರುಗಳು, ಕೊನೆಗೆ ಮುತ್ತ್ಯಾನಿಗೆ “ಈಗ ಹೋಗಿ ನಿಮ್ಮಪ್ಪ-ನಿಮ್ಮವ್ವನ ಕರಕೊಂಡು ಬಾ. ನಿನ್ನ ಸಾಲ್ಯಾಗ ಇಟಗೋಬೇಕೋ ಅಥವಾ ಟೀಸೀ ಕೊಟ್ಟು ಕಳಸಬೇಕೋ ಅಂತ ವಿಚಾರ ಮಾಡಬೇಕು” ಎಂದು ಹೇಳಿ ಕಳುಹಿಸಿ, ತಾವೂ ಸ್ಟಾಫ್‌ ರೂಮಿಗೆ ಹೋದರು.
ಅವತ್ತು ಚಾಡಿ ಹೇಳಿ, ಮುತ್ತ್ಯಾನಿಗೆ ಹೊಡಿಸಿದ ಪಾಪ ಪ್ರಜ್ಙೆ ನನಗಿನ್ನೂ ಕಾಡುತ್ತಾ ಇದೆ. ಯಾಕೆಂದರೆ ಆವತ್ತು ಕ್ಲಾಸ್ ರೂಮಿನಿಂದ ಹೊರ ಹೋದ ಮುತ್ತ್ಯಾ ವಾಪಾಸು ಬರಲೇ ಇಲ್ಲ!

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಮಾಸ್ತರರ ಕಡೆಯಿಂದ ಹೊಡೆತ ತಿಂದ ಮುತ್ತ್ಯಾ ಮನೆಗೆ ಹೋಗಿರಲೇ ಇಲ್ಲ. ಎಲ್ಲಿಗೆ ಹೋದನೋ ಯಾರಿಗೂ ಗೊತ್ತಿಲ್ಲ. ಊರಿನ ಜನರೆಲ್ಲಾ ಅವನನ್ನು ಹುಡುಕಿದ್ದಾಯಿತು. ಬಸ್-ಸ್ಟ್ತಾಂಡಿನಲ್ಲಿ ಚಾದಂಗಡಿ ಇಟ್ಟುಕೊಂಡಿದ್ದ ಪ್ರಭಯ್ಯ ತಾನೇ ಬೆಳಗಿನಿಂದ ಅಂಗಡಿಯಲ್ಲೇ ಇರುವುದಾಗಿಯೂ, ಯಾವ ಹುಡುಗನೂ ಟೆಂಪೊ, ಬಸ್ಸು ಹತ್ತಿ ಹೋಗಿಲ್ಲವೆಂದು ಸಾಕ್ಷಿ ನುಡಿದ. ಊರಿನ ಬಾವಿ, ಬಣವಿಗಳಲ್ಲಿ ಹುಡುಕಿದರೂ ಮುತ್ತ್ಯಾನ ಸುದ್ದಿ ಸಿಗಲಿಲ್ಲ.

ಶಾಲೆಯಲ್ಲಿ ವಯಸ್ಸಿನಲ್ಲಿಯೂ, ಅನುಭವದಲ್ಲಿಯೂ ಹಿರಿಯರಾಗಿದ್ದ ಮುಲ್ಕಿ ಪಾಸಾದ ಹಳೆ ಹುಲಿಗಳು ತಮ್ಮ ತಲೆಮೇಲೆ ಈ ಹೆಡ್ಮಾಸ್ತರರನ್ನು ತಂದು ಕೂಡಿಸಿದ್ದಕ್ಕೆ ಮೊದಲೇ ಅಸಮಾಧಾನಗೊಂಡಿದ್ದರು. ಹೆಡ್‌ ಮಾಸ್ತರರು ಅವರಿಗೆ ಸರಿಯಾದ ಸಮಯಕ್ಕೆ ಶಾಲೆಗೆ ಬಂದು, ಸರಿಯಾಗಿ ಪಾಠ ಹೇಳಲು ತಾಕೀತು ಮಾಡಿದ್ದರಿಂದ ಇನ್ನೂ ಕಿರಿಕಿರಿಗೊಂಡಿದ್ದರು. ಅವರಿಗೆ ಈ ಮುತ್ತ್ಯಾನ ಕಣ್ಮರೆ ಪ್ರಸಂಗ ಹೆಡ್‌ ಮಾಸ್ತರರ ಮೇಲೆ ಸೇಡು ತೀರಿಸಿಕೊಳ್ಳಲು ಸರಿಯಾದ ಅವಕಾಶ ಮಾಡಿಕೊಟ್ಟಿತು. ಅವರು ಮ್ಯಾನೇಜ್ಮೆಂಟಿನವರ ಹತ್ತಿರ ಹೆಡ್‌ ಮಾಸ್ತರರ ಬಗ್ಗೆ ತಕರಾರು ಮಾಡಿದರು. ಮ್ಯಾನೇಜ್ಮೆಂಟಿನವರು ಹೆಡ್‌ ಮಾಸ್ತರರಿಗೆ ನೋಟೀಸು ಕೊಟ್ಟರು. ಶಿಷ್ಯನ ಒಳಿತಿಗಾಗಿ ಅವನನ್ನು ಹೊಡೆದದ್ದೇ ನೆವವಾಗಿ, ಅವನು ಓಡಿ ಹೋಗಿತ್ತಾನೆ ಎಂದು ಎಣಿಸಿರದ ಹೆಡ್‌ ಮಾಸ್ತರರು ಮೊದಲೇ ಆಘಾತಕ್ಕೊಳಗಾಗಿದ್ದರು. ಅದರ ಮೇಲೆ ಸಹೋದ್ಯೋಗಿಗಳ, ಮ್ಯಾನೇಜ್ಮೆಂಟಿನವರ ಕಿತಾಪತಿಯಿಂದಾಗಿ ಇನ್ನಷ್ಟು ಖಿನ್ನರಾದರು. ಅದೇ ಖಿನ್ನತೆಯಿಂದ ಶಾಲೆಯ ನೌಕರಿಗೆ ರಾಜೀನಾಮೆ ಕೊಟ್ಟು, ಒಂದು ದಿನ ಮೂರ್ಕಲ್‌ ಮಠ ಹೊಕ್ಕು, ತಾನು ಸಂನ್ಯಾಸ ಸ್ವೀಕರಿಸಿದ್ದೇನೆ ಎಂದು ಘೋಷಿಸಿಬಿಟ್ಟರು!
ಅವರಿಗೆ ಸಮಾಧಾನ ಮಾಡಿ ಮನೆಗೆ ಮರಳಿ ಕರೆತರಲು ಬಹಳಷ್ಟು ಜನರು ಪ್ರಯತ್ನ ಪಟ್ಟರೂ ಹಠವಾದಿಯಾದ ಅವರು ಯಾರ ಮಾತನ್ನೂ ಕೇಳಲಿಲ್ಲ. ಇದ್ದೊಬ್ಬ ಮಗ ಸಂನ್ಯಾಸಿಯಾದನೆಂದು ಅವರ ತಾಯಿಯೂ ಕೊರಗಿ ಕೊರಗಿ ತೀರಿಕೊಂಡರು. ಆ ನಂತರ ಅವರು ತಮ್ಮೆಲ್ಲ ಆಸ್ತಿಯನ್ನು ಮಠಕ್ಕೆ ಬರೆದು ಕೊಟ್ಟರು. ಜೊತೆಗೆ ಅವರ ಚರಾಸ್ತಿಗಳಾಗಿದ್ದ ಹೀರೋ ಸೈಕಲ್ಲು ಮತ್ತು ಗಂಡುಬಿದಿರು ಕೂಡ ಮಠ ಸೇರಿಕೊಂಡವು. ಗುರುಗಳು ಗಂಡುಬಿದಿರನ್ನು ಕೈಯ್ಯಲ್ಲಿ ಧರ್ಮ ದಂಡದಂತೆ ಹಿಡಿದುಕೊಂಡು ಮಠದ ಚುಕ್ಕಾಣಿಯನ್ನು ಸಂಭಾಳಿಸುತ್ತಾ ಅಭಿವೃದ್ಧಿಯೆಡೆಗೆ ನಡೆಸತೊಡಗಿದರು.
ಇದಾದ ನಂತರ ಶಾಲೆ ನಡೆಸುತ್ತಿದ್ದ ಮ್ಯಾನೇಜ್ಮೆಂಟಿನವರು ತಮ್ಮತಮ್ಮಲ್ಲೇ ಜಗಳಾಡಿಕೊಂಡು, ಶಾಲೆಯನ್ನು ಮುಚ್ಚುವ ಹಂತಕ್ಕೆ ತಂದಿಟ್ಟರು. ಇನ್ನೇನು ಶಾಲೆ ನಡೆಸಲು ಸಾಧ್ಯವಾಗದಾದಾಗ, ಮಠದ ಸ್ವಾಮಿಗಳ ಕೊರಳಿಗೆ ಕಟ್ಟಿದ್ದರು. ಶಿಕ್ಷಣದ ಬಗ್ಗೆ ಅತೀವ ಕಾಳಜಿಯಿದ್ದ ನಮ್ಮ ಹಿತ್ತಲಮನಿ ಗುರುಗಳು, ಅರ್ಥಾತ ಈಗಿನ ಗುರುಸಂಗಪ್ಪ ಸ್ವಾಮಿಗಳು ʼಬಿಟ್ಟೇನೆಂದರೂ ಬಿಡದೀ ಮಾಯೆʼ ಎಂದು ಶಾಲೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. ಹಿಂದಿನ ಅವರ ಸಿಟ್ಟಿನ ಸ್ವಭಾವ ಸಂಪೂರ್ಣ ಬದಲಾಗಿ ಈಗ ಶಾಂತ ಸ್ವಭಾವವಾಯಿತು. ಅವರಂತೂ ಮಕ್ಕಳಿಗೆ ಶಿಕ್ಷೆ ಕೊಡುವ ಮಾತು ದೂರ ಉಳಿಯಿತು. ಶಾಲೆಯ ಯಾವ ಶಿಕ್ಷಕರೂ ಮಕ್ಕಳ ಮೈಮುಟ್ಟುವಂತಿಲ್ಲ. ಇಂದು ಅವರು ನಡೆಸುವ ಶಾಲೆ ಸುತ್ತೂರುಗಳಲ್ಲಿ ಮಾದರೀ ಶಾಲೆಯಾಗಿದೆ.
ಇದು ನಮ್ಮ ಗುರುಸಂಗಪ್ಪ ಸ್ವಾಮಿ ಉರ್ಫ ಮೂರ್ಕಲ್ಲು ಮಠದ ಶ್ರೀಗಳ ಪೂರ್ವಾಶ್ರಮದ ಪುರಾಣ.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಇದೆಲ್ಲಾ ನಡೆದು ಮೂವತ್ತು-ಮೂವತ್ತೈದು ವರ್ಷಗಳೆ ಆಗಿ ಹೋಗಿವೆ. ಹುಣಶೀಮರದ ಮುತ್ತ್ಯಾ ಓಡಿ ಹೋದಾಗ ಅವರವ್ವ ಬಂದು, ಹಿತ್ತಲಮನಿ ಗುರುಗಳ ಅವ್ವನಿಗೆ “ನಾನು ನನ್ನ ಮಗನನ್ನು ಕಳಕೊಂಡಂಗ ನೀನೂ ನಿನ್ನ ಮಗನ್ನ ಕಳಕೋ” ಎಂದು ಶಪಿಸಿ, ಮಣ್ಣು ತೂರಿ ಹೋಗಿದ್ದಳಂತೆ. ಹೀಗಾಗಿಯೇ ಮಾಸ್ತರರು ಸಂನ್ಯಾಸಿಯಾದರೆಂದು ಊರಿನ ಕೆಲ ಜನ ಮಾತನಾಡಿಕೊಂಡರು. ಮತ್ತೂ ಒಂದಿಷ್ಟು ಜನ ಮಾಸ್ತರರ ಅಪ್ಪ ಹಿತ್ತಲಮನಿ ಮಲ್ಲಪ್ಪ ಮೂರ್ಕಲ್‌ ಮಠದ ಆಸ್ತಿ ನುಂಗಿದ್ದಾ, ಕೆರೆಯ ನೀರು ಕೆರೆಗೆ ಹೋಗುದು ಖರೆ ಅದಕ್ಕ ಹಿಂಗಾತು ಎಂದು ಮಾತನಾಡಿಕೊಂಡರು.

ಇನ್ನು ಮುತ್ತ್ಯಾನ ಬಗ್ಗೆಯೂ ಹಲವಾರು ಜನ, ನೂರಾರು ಮಾತನಾಡಿದರು. ಯಾರೋ “ಹುಬ್ಬಳ್ಳಿ ಬಸ್-ಸ್ಟ್ಯಾಂಡಿನ್ಯಾಗ ಬೂಟ್‌ ಪಾಲಿಶ್‌ ಮಾಡ್ತಾ ಕೂತಿದ್ದ ಮುತ್ತ್ಯಾನ್ನ ನೋಡಿದ್ವಿ” ಅಂತ ಹೇಳಿದರ, ಮತ್ತ್ಯಾರೋ “ಗದಗಿನ ರೈಲ್ವೇ-ಸ್ಟೇಶನ್ನ್ಯಾಗ ಮುತ್ತ್ಯಾ ಚಾ ಮಾರತಾ ಇದ್ದ” ಅಂತ ಹೇಳಿದ್ದರು. ಮತ್ತೊಬ್ಬರ್ಯಾರೋ “ಕೂಡಲಸಂಗಮದಾಗ ತಾವ ಕಣ್ಣಾರೆ ಮುತ್ತ್ಯಾನ ಹೆಣಾ ತೇಲಿ ಬಂದದ್ದು ನೋಡಿದಿವಿ” ಅಂತ ಹೇಳಿದ್ದರು. ಯಾವ ಸುದ್ದಿ ಎಷ್ಟು ಖರೇ ಇತ್ತೋ ಏನೋ? ಮುತ್ತ್ಯಾ ಅಂತೂ ಮರಳಿ ಊರಿಗೆ ಬರಲಿಲ್ಲ. ಸ್ವಲ್ಪ ವರ್ಷದಾಗ ಸಣ್ಣ ಪುಟ್ಠ ಕೆಲಸಾ ಮಾಡಿಕೊಂಡಿದ್ದ ಅವನ ಅವ್ವಾ ಅಪ್ಪಾನೂ ಊರು ಬಿಟ್ಟು ಹೋಗಿದ್ದು ಯಾರ ಗಮನಕ್ಕೂ ಬರಲೇ ಇಲ್ಲ.

ಈ ವರ್ಷಗಳಲ್ಲಿ ನಾನು ಕಾಲೇಜು ಮುಗಿಸಿ, ಊರಿಗೆ ಬಂದು ಅಪ್ಪ ನಡೆಸುತ್ತಿದ್ದ ಅಂಗಡಿಯ ವ್ಯವಹಾರದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದೆ. ಈಗ ಮದುವೆಯೂ ಆಗಿ, ಮಕ್ಕಳೂ ಆಗಿದ್ದಾರೆ. ಈಗಲೂ ನಮ್ಮ ಗುರುಸಂಗಪ್ಪ ಗುರುಗಳ ಹತ್ತಿರ ಅಗಾಗ ಹೋಗಿ, ಅವರಿಂದ ಮಾರ್ಗದರ್ಶನ ತೆಗೆದುಕೊಳ್ಳುತ್ತಾ ಇರುತ್ತೇನೆ. ಉಳಿದವರೊಂದಿಗೆ ಹೆಚ್ಚೂ ಕಮ್ಮಿ ಮೌನಿಯಾಗಿಯೇ ಇರುವ ಗುರುಗಳು, ನನ್ನೊಢನೆ ಶಿಷ್ಯ ವಾತ್ಸಲ್ಯದಿಂದ ಒಂಚೂರು ಹೆಚ್ಚು ಮಾತನಾಡುತ್ತಾರೆ.
ನನ್ನ ಹಳೆಯ ಗೆಳೆಯ, ಪ್ರತಿಸ್ಪರ್ಧಿ ಮುತ್ತ್ಯಾನನ್ನು ಬಡಿಸಿದ್ದರ ಪಾಪಪ್ರಜ್ಞೆ ವರ್ಷಗಳು ಉರುಳಿದಂತೆ ಕಡಿಮೆಯಾಗುತ್ತಾ ಬಂದಿದೆ. ಗೆಳೆಯನ ನೆನಪು ಈಗಾ ಮಸಕಾಗಿ, ಅಳಿಸಿ ಹೋಗುತ್ತಿದೆ ಎಂದುಕೊಳ್ಳುತ್ತಿರುವಾಗಲೇ ಮೊನ್ನೆ ʼಮುತ್ತುರಾಜ್‌.ಹುಣಶೀಮರದʼ ಹೆಸರಿನಿಂದ ಫೇಸ್-ಬುಕ್‌ ಫ್ರೆಂಡ್‌ ರಿಕ್ವೆಸ್ಟ್‌ ಬಂತು. ಅದನ್ನು ಒಪ್ಪಿಕೊಂಡ ತಕ್ಷಣ “ಫೋನ್‌ ನಂಬರ್‌ ಪ್ಲೀಜ್” ಎಂಬ ಮೆಸೇಜು. ಫೋನ್‌ ನಂಬರ್‌ ಕೊಟ್ಟ ಎರಡೇ ನಿಮಿಷಕ್ಕೇ ದಶಕಗಳಿಂದ ಕಳೆದು ಹೋಗಿದ್ದ, ಸತ್ತಿದ್ದಾನೋ ಬದುಕಿದ್ದಾನೋ ಎಂದು ಕೂಡ ಗೊತ್ತಿಲ್ಲದಿದ್ದ ನನ್ನ ಗೆಳೆಯನ ಜೊತೆ ಮಾತನಾಡುತ್ತಿದ್ದೆ! ಎಲ್ಲಾ ತಂತ್ರಜ್ಞಾನದ ವರಪ್ರಸಾದ.
ಫೋನಿನಲ್ಲಿಯೇ ಇಬ್ಬರೂ ನಮ್ಮ-ನಮ್ಮ ಇತ್ಯೋಪರಿಗಳನ್ನು ಹೇಳಿಕೊಂಡೆವು. ಅವನು ಓಡಿ ಹೋದ ಮೇಲೆ ನಢೆದ ಘಟನೆಗಳನ್ನು ನಾನು ಸಾದ್ಯಂತವಾಗಿ ವಿವರಿಸಿದೆ. ನಮ್ಮ ನೆಚ್ಚಿನ ಹಿತ್ತಲಮನಿ ಗುರುಗಳು ಈಗ ಮೂರ್ಕಲ್‌ ಮಠದ ಸ್ವಾಮಿಗಳಾಗಿರುವ ವಿಷಯವನ್ನೂ ಹೇಳಿದೆ. ಮುತ್ತ್ಯಾ ಉರ್ಫ ಈಗಿನ ಮುತ್ತುರಾಜ್‌, “ಬಾಗಲಕೋಟಿಯೊಳಗ ಒಂದು ಬಿಸಿನೆಸ್‌ ಮೀಟಿಂಗಿಗೆ ಹೊಂಟಿದ್ದೆ, ಊರು ಹತ್ತಿರ ಬಂದಾಗ, ನಿನ್ನ ನೆನಪಾಯ್ತು. ನೋಡೂನು ಅಂತ ಫಸ್ಬುಕ್ ನ್ಯಾಗ ಹುಡಕಿದರ ನೀನು ಸಿಕ್ಕ ಬಿಡಬಕ!“ ಎಂದು ಅಚ್ಚರಿ ವ್ಯಕ್ತಪಡಿಸಿದ. ಕೊನೆಗೆ ಮುತ್ತುರಾಜ್‌ “ನಾನೀಗ ಲಕ್ಷೀಪುರದಿಂದ ಒಂದು ಹದಿನೈದು ಕಿಲೋಮೀಟರ್‌ ದೂರದಾಗ ಇದ್ದೇನಿ. ನೀ ಖಾಲಿ ಇದ್ದಿಯಂದರ ಹೇಳು, ಈಗ ಕಾರ ಹೊಳ್ಳಸಾಕ ಡ್ರೈವರಗ ಹೇಳತೇನಿ, ಹದಿನೈದು ನಿಮಿಷದಾಗ ಲಕ್ಷ್ಮೀಪುರದೊಳಗ ಇರತೇನಿ.” ಎಂದ. ಅದಕ್ಕೆ ನಾನು “ ಏ ಯಾಕಾಗವಲ್ದು, ಬಂದು ಬಿಡು…..ನಮ್ಮ ಗುರುಗಳನ್ನೂ ಬೆಟ್ಟಿಯಾಗಿ ಬರೂಣ, ಅವರಿಗೂ ಖುಶಿಯಾಕ್ಕತಿ” ಎಂದೆ. ನಾನು ಫೋನು ಇಟ್ಟು ಹದಿನೈದು ನಿಮಿಷವೂ ಆಗಿರಲಿಲ್ಲಾ ಮುತ್ತುರಾಜನ ಹಡಗಿನಂತಾ ಕಾರು ನಮ್ಮ ಅಂಗಡಿ ಮುಂದೆ ಬಂದು ನಿಂತಿತು. ಮುತ್ತುರಾಜ ಕೆಳಗಿಳಿಯದೇ, ನನಗೇ ಕಾರನ್ನೇರಲು ಹೇಳಿದ. “ಬಾಗಲಕ್ವಾಟಿ ಮೀಟಿಂಗಿಗೆ ತಡಾ ಅಕ್ಕತಿ. ಮುಂದಿನ ಸಲ ಬಂದಾಗ ನಿಮ್ಮ ಮನಿಗೆ ಬರತೇನಿ. ಈಗ ಇಬ್ಬರೂ ಗುರುಗಳನ್ನ ಬೆಟ್ಟ್ಯಾಗಿ ಬರೂಣು ನಡಿ” ಎಂದು ನನಗೆ ದಬಾಯಿಸಿ, ಮಠಕ್ಕೆ ಹೋಗಲು ಡ್ರೈವರನಿಗೆ ನಿರ್ದೇಶಿಸಿದ. ಮೂವ್ವತ್ತೈದು ವರ್ಷಗಳ ನಂತರ ಅವನನ್ನು ನೋಡಿದ ನನಗೆ, ಅವನಿಗೂ ನನ್ನಂತೆಯೇ ಅರ್ಧ ಬಕ್ಕ ತಲೆ, ಅಲ್ಲಲ್ಲಿ ಬಿಳಿ ಕೂದಲು, ಗುಡಾಣದ ಹೊಟ್ಟೆ ಇರುವುದನ್ನು ನೋಡಿ ಸಮಾಧಾನವಾಯಿತು. ಆದರೆ ಅವನ ಕೊರಳಲ್ಲಿನ ಹೆಬ್ಬೆರಳು ಗಾತ್ರದ ಬಂಗಾರದ ಚೈನು, ಕೈಗೆ ಕಟ್ಟಿದ ಬ್ರೇಸಲೆಟ್‌ ನೋಡಿ ನನ್ನ ಕಣ್ಣು ಕುಕ್ಕಿತು. ಇಷ್ಟು ವರ್ಷಗಳ ನಂತರವೂ ನನಗೆ ಅವನ ಬಗ್ಗೆ ಸ್ಪರ್ಧಾ ಮನೋಭಾವ ಕಡಿಮೆಯಾಗದ್ದನ್ನು ನೋಡಿ, ನನ್ನ ಬಗ್ಗೆ ನನಗೇ ನಾಚಿಕೆಯಾಯಿತು. ಅದು-ಇದು ಮಾತನಾಡುವದರಲ್ಲಿ ಮಠ ಬಂದಿತು.

ಸ್ವಾಮಿಗಳ ಕೋಣೆಗೆ ನಾನು ಮುತ್ತುರಾಜ್‌ನನ್ನು ಕರೆದುಕೊಂಡು ಹೋದರೆ, ಗುರುಗಳಿಗೆ ಅವನ ಗುರುತೇ ಸಿಗಲಿಲ್ಲ. ನಾನು ಅವನ ಬಗ್ಗೆ ಹೇಳಿದ ಮೇಲೆ ಗುರುಗಳಿಗೆ ಎಲ್ಲಾ ನೆನಪಾಯಿತು. ಗುರುಗಳು ಒಮ್ಮಿಂದೊಮ್ಮೆಗೆ ಭಾವಾವೇಶರಾಗಿ “ತಮ್ಮಾ, ಮುತ್ತು, ಮುತ್ತಣ್ಣಾ, ಅವತ್ತು ಸಿಟ್ಟಿನ ಕೈಯ್ಯಾಗ ಬುದ್ಧಿ ಕೊಟ್ಟು, ನಿನಗ ಹಂಗ ಹೊಡದಬಿಟ್ಟಿದ್ನೆಲ್ಲೋ” ಎಂದು ಮುತ್ತುರಾಜನಿಗೆ ತೆಕ್ಕೆ ಬಿದ್ದು ಅಳತೊಡಗಿದರು. “ಅವತ್ತು ನನ್ನ ಕೈಯ್ಯಾಗ ಇದ್ದ ಈ ಗಂಡುಬಿದಿರು ನನ್ನ ನಿನ್ನ ಜೀವನಾನ ಬದಲ ಮಾಡತ್ತ ಅಂತ ತಿಳದಿರಲಿಲ್ಲಾ” ಎಂದು ಗೊಳೋ ಎನ್ನುತ್ತಾ ತಮ್ಮ ಕೈಯ್ಯಲ್ಲಿನ ಧರ್ಮ ದಂಡವನ್ನು ಬಿಸುಟರು. “ಇರ್ಲಿ ಗುರುಗಳ, ಆಗಿದ್ದೆಲ್ಲಾ ಒಳ್ಳೆಯದಕ್ಕ ಆಗೇತಿ” ಎನ್ನುತ್ತಾ ಮುತ್ತುರಾಜ ತನ್ನ ಕಣ್ಣೀರನ್ನು ಒರೆಸಿಕೊಂಡನು. ಹಲವಾರು ವರ್ಷಗಳಿಂದ ಸಮಚಿತ್ತದಲ್ಲಿಯೇ ಇರುವ ಗುರುಗಳನ್ನು ನೋಡಿರುವ ನಾನು ಇವತ್ತು ಮೊದಲ ಬಾರಿಗೆ ಅಷ್ಟು ದುಖದಲ್ಲಿ ನೋಡಿದೆ. ಅವರಿಗೆ ಒಮ್ಮೆಲೇ ಹತ್ತು ವರ್ಷ ಜಾಸ್ತಿ ವಯಸ್ಸಾದಂತೆ ಅನಿಸಿತು.

ಭಾವನೆಗಳು ತಹಬಂದಿಗೆ ಬಂದ ಮೇಲೆ, ಗುರುಗಳು ಮುತ್ತುರಾಜನನ್ನು ಕೂಡಿಸಿ, ಅವನ ಜೀವನದ ಬಗ್ಗೆ ಕೇಳತೊಡಗಿದರು. ಅವನು ಲಕ್ಷ್ಮೀಪುರದಿಂದ ಓಡಿಹೋದ ಮೇಲಿನ ವಿವರಗಳನ್ನು ಹೇಳತೊಡಗಿದ. ಯಾವುದೋ ಊರಿನಲ್ಲಿ ಹೋಟಲ್ ನಲ್ಲಿ ಕೆಲಸ ಮಾಡಿದ್ದು, ಟ್ರಕ್ಕಿನಲ್ಲಿ ಕ್ಲೀನರ ಆಗಿದ್ದು, ಬಸ್-ಸ್ಟ್ಯಾಂಡಿನಲ್ಲಿ ಕೂಲಿಯಾಗಿ ಕೆಲಸ ಮಾಡಿದ್ದು, ಕೊನೆಗೆ ಒಂದು ಅಂಗಡಿಯಲ್ಲಿ ಕೆಲಸಕ್ಕೆ ಸೇರಿ, ಮಾಲಕರ ವಿಶ್ವಾಸ ಗಳಿಸಿ, ಈಗ ಅವರ ಮಗಳನ್ನೇ ಮದುವೆಯಾಗಿರುವದನ್ನು ಹೇಳಿದ.
“ಯಾವ ಅಂಗಡಿ, ಕಿರಾಣಿ ಅಂಗಡಿಯೇನ್?” ಎಂದು ಗುರುಗಳು ಪ್ರಶ್ನಿಸಿದರು.
“ಅಲ್ಲ ಗುರುಗಳ, ಬ್ರ್ಯಾಂಡೀ ಶಾಪ್‌” ಎಂದು ಉತ್ತರಿಸಿ, ಮುತ್ತುರಾಜ ಮುಂದುವರಿದು, ಆವಾಗ ಒಂದೇ ಇದ್ದ ಅಂಗಡಿಯಿಂದ ವ್ಯವಹಾರ ಬೆಳೆಸಿ ಈಗ ನಾಲ್ಕು ಬ್ರ್ಯಾಂಡೀ ಅಂಗಡಿಗಳೂ, ಎರಡು ಬಾರ್‌ ಗಳನ್ನು ಮಾಡಿದ ತನ್ನ ಜೈತ್ಯಯಾತ್ರೆಯ ಬಗ್ಗೆ ಹೇಳಿಕೊಳ್ಳುತ್ತಲಿದ್ದ.
ಬ್ರ್ಯಾಂಡಿ ವಿಷಯ ಬರುವವರೆಗೆ ನಾನು ಅವನ ಮುಖವನ್ನೇ ನೋಡುತ್ತಾ ಅವನ ಮಾತನ್ನು ಕೇಳುತ್ತಿದ್ದೆ. ಆ ವಿಷಯ ಬಂದೊಡನೆ, ಗುರುಗಳ ಪ್ರತಿಕ್ರಿಯೆ ಏನು ಎಂದು, ಅವರ ಕಡೆ ನೋಡಿದೆ. ಏನಾಗುತ್ತಿದೆ ಎಂದು ನನಗೆ ಗೊತ್ತಾಗೋದಕ್ಕೆ ಮೊದಲೇ ಗುರುಗಳು ಬಿದ್ದಿದ್ದ ತಮ್ಮ ಧರ್ಮ ದಂಡವನ್ನು ಎತ್ತಿಕೊಂಡು, ಮುತ್ತುರಾಜನಿಗೆ ಜಬ್ಬತೊಡಗಿದ್ದರು. “ನಾನು ನಮ್ಮ ಹಳ್ಳಿಗಳೊಳಗ ಈ ಸಾರಾಯಿ ಪಿಶಾಚಿಯನ್ನು ಓಡಿಸಬೇಕೆಂದು ಗುದ್ದ್ಯಾಡತಿದ್ದರ, ನೀನು ಬ್ರ್ಯಾಂಡಿ ಮಾರಿದ ರೊಕ್ಕದ ದಿಮಾಕು ತೋರ್ಸಾಕ ಬಂದೀ? “ ಎಂದು ಒದರಾಡತೊಡಗಿದ್ದರು. ಮುತ್ತುರಾಜ, “ ಇಲ್ಲ ಗುರುಗಳ, ತಪ್ಪಾತು… ಇನ್ನ ಇಂತಾ ಕೆಲಸಾ ಮಾಡೂದಿಲ್ಲಾ” ಎಂದು ಆರ್ತನಾದ ಮಾಡುತ್ತಿದ್ದ, ಥೇಟು ಮುವ್ವತ್ತೈದು ವರ್ಷಗಳ ಹಿಂದೆ ಮಾಡಿದಂತೆಯೇ…