Click here to Download MyLang App

ಖಿನ್ನತೆ - ಬರೆದವರು : ಅಜಯ್ ಕುಮಾರ್ ಎಂ ಗುಂಬಳ್ಳಿ

ಆಫೀಸಿನಲ್ಲಿ ಕಿರಿಕಿರಿ, ಗಲಾಟೆ, ಮುನಿಸುಗಳು ಸರ್ವೇಸಾಮಾನ್ಯ. ಇವೆಲ್ಲವೂ ಎರಡು ವಾರಗಳಿಂದ ಮತ್ತಷ್ಟೂ ಹೆಚ್ಚಾಗಿತ್ತು. ಮ್ಯಾನೇಜರ್ ಗೋಪಿ ವಿಚಾರಿಸಿದ್ದಕ್ಕೆ ಅಟೆಂಡರ್ ಮುನಿಯಪ್ಪ ಹೀಗಂದ;
‘ಸರ್, ಮಂಜೇಶ ಇತ್ತೀಚೆಗೆ ತುಂಬಾ ಸಿಟ್ಟಾಗ್ತಾರೆ. ಆಫೀಸಿನ ಸಿಬ್ಬಂದಿಗಳೊಂದಿಗೆ ಅಷ್ಟೇ ಅಲ್ಲ. ಗ್ರಾಹಕರ ಬಳಿಯೂ ಜಗಳ ಆಡ್ತಾರೆ. ಪ್ರತಿಯೊಬ್ಬರನ್ನು ಅನುಮಾನದಿಂದ ನೋಡ್ತಾರೆ. ಅದರಿಂದ ದಿನವೂ ಗಲಾಟೆಗಳು ನಡೀತಿವೆ’
‘ಹೌದಾ. ಅವನನ್ನ ನನ್ನ ಚೇಂಬರ್‍ಗೆ ಕಳಿಸಿ’
‘ಓಕೆ ಸರ್’
ಫೈಲುಗಳನ್ನು ಟೇಬಲ್ ಮೇಲೆ ದಿಕ್ಕಾಪಾಲಾಗಿ ಹರಡಿಕೊಂಡಿದ್ದ ಮಂಜೇಶನಿಗೆ ವಿಷಯ ತಿಳಿಸಿ, ಮುನಿಯಪ್ಪ ಒಳಗೆ ನಡೆಯ ಬಹುದಾದ ಸನ್ನಿವೇಷವನ್ನು ಕಲ್ಪಿಸಿಕೊಂಡ. ಮಂಜೇಶ ಎದ್ದದ್ದೇ, ಕೆಲವರು ಗೆಳೆಯನ ಸ್ಥಿತಿಗೆ ಮರುಗಿದರೆ, ಹಲವರು ಖುಷಿಪಟ್ಟರು.
‘ಮೇ ಐ ಕಮ್ ಇನ್ ಸರ್’ ವಿನಂತಿಸಿ ಒಳಗೆ ನಡೆದು ಮಂಜೇಶ
‘ಸರ್ ಕರೆದ್ರಂತೆ’ ಅಂದ.
‘ಹೌದು. ಯಾಕೆ? ಆರೋಗ್ಯ ಸರಿಯಿಲ್ವಾ?’
‘ಹಾಗೇನು ಇಲ್ಲ ಸರ್’
‘ಗ್ರಾಹಕರ ಜೊತೆ ಸಿಟ್ಟಾಗ್ತೀರಂತೆ. ನಿಜನಾ’
‘ಇಲ್ವಲ್ಲಾ ಸರ್.’
‘ನಮ್ಮದು ವಿಮಾ ಕಂಪನಿ. ನೀವು ಗ್ರಾಹಕರ ಜೊತೆ ಹೀಗೆ ನಡಕೊಂಡ್ರೆ ಅವ್ರಿಗೆ ನಮ್ಮ ಮೇಲೆ ವಿಶ್ವಾಸ ಇರುತ್ತಾ. ಆರೋಗ್ಯ ಸರಿಯಲ್ಲದಿದ್ರೆ ರಜಾ ತಗೊಳ್ಳಿ. ಇದೇ ಕೊನೆ ಎಚ್ಚರಿಕೆ. ಗೊತ್ತಾಯ್ತ’ ಗೋಪಿ ಸ್ವಲ್ಪ ಒರಟಾಗಿ ಹೇಳಿದರು.
‘ನಂಗೆ ಗೊತ್ತಿಲ್ಲ ಸರ್. ಯಾಕೋ ಮನಸೇ ಸರಿಯಿಲ್ಲ. ಬದುಕೋಕೆ ಇಷ್ಟ ಇಲ್ಲ’
‘ಅಂಥದ್ದು ಏನಾಗಿದೆ ನಿಮಗೆ. ಸಂಕೋಚ ಇಲ್ದೆ ಹೇಳಿ. ತೀರ ಪರ್ಸನಲ್ ಇದ್ರು ಹೇಳಿ. ಆದರೆ ಒಂದು ವಿಷಯ ನೆನಪಿಟ್ಕೊಳ್ಳಿ. ಪ್ರತಿ ಸಮಸ್ಯೆಗೂ ಪರಿಹಾರ ಖಂಡಿತ ಇದೆ. ಇಗ್ನೋರ್ ನೆಗೆಟಿವಿಟಿ’ ಪ್ರೀತಿಯಿಂದ ಹೇಳಿದರು ಗೋಪಿ.
‘ಸರ್ ಸರ್’ ಮಂಜೇಶ ತಡವರಿಸುತ್ತಿದ್ದನ್ನು ಗಮನಿಸಿ ಮ್ಯಾನೇಜರ್
‘ಹೊರಗಡೆ ಹೋಗೋಣ ಬನ್ನಿ. ಮೈಂಡ್ ಫ್ರೆಶ್ ಆಗುತ್ತೆ’ ಎಂದು ಸೀಟಿಂದ ಮೇಲೆದ್ದರು.
ಕಾರ್ ಸ್ಟಾರ್ಟ್ ಆಯಿತು. ‘ಬನ್ನಿ ಮಂಜೇಶ್’ ಆತ್ಮೀಯತೆಯಿಂದ ಕೈಹಿಡಿದು ಕಾರಿನೊಳಕ್ಕೆ ಎಳೆದು ಗೋಪಿ ಮ್ಯೂಸಿಕ್ ಸಿಸ್ಟೆಮ್ ಆನ್ ಮಾಡಿದರು. ‘ಬಾರೆ ಬಾರೆ ಚಂದದ ಚೆಲುವಿನ ತಾರೆ’ ಹಾಡು ಕೇಳುತ್ತಿತ್ತು. ಮಂಜೇಶನಿಗೆ, ಮ್ಯಾನೇಜರ್ ತನ್ನನ್ನು ಕೆಲಸದಿಂದ ತೆಗೆದಾರೆಂಬ ಸಂದೇಹವಿತು.
‘ಸರ್ ಇನ್ಮುಂದೆ ಹೀಗೆ ಮಾಡಲ್ಲ. ಕೆಲಸದಿಂದ ತೆಗಿಬೇಡಿ’ ಎನ್ನುತ್ತ ಗೋಗರೆದ.
ಗೋಪಿ ಸೀಟ್‍ಬೆಲ್ಟ್ ಹಾಕಿ ‘ಆತಂಕ ಬೇಡ. ಆರಾಮವಾಗಿರು’ ಎನ್ನುತ್ತ ಸ್ಟಿಯರಿಂಗನ್ನು ತಿರುಗಿಸುತ್ತ ಗೇರ್‍ಗಳನ್ನು ಬದಲಾಯಿಸುತ್ತಿದ್ದರು. ಕಾರು ಅರವತ್ತಕ್ಕಿಂತ ಹೆಚ್ಚಿನ ವೇಗದಲ್ಲಿ ಹೈವೇ ನುಗ್ಗಿ ಉದ್ಯಾನವನದತ್ತ ಚಲಿಸಿತು. ಸಿಟಿಗಳಲ್ಲಿ ಇರುವ ಸಣ್ಣ ನೆಡುತೋಪು ಎಂದರೆ ಪಾರ್ಕ್. ಕಾರಿನಿಂದ ಇಬ್ಬರು ಇಳಿದರು. ಗೋಪಿ ಮರ-ಗಿಡ-ಬಳ್ಳಿ ಗಳನ್ನು ತೋರಿಸುತ್ತ ‘ಎಷ್ಟು ಚೆಲುವಿದೆ ಅವುಗಳಲ್ಲಿ’ ಎಂದರು. ಮಂಜೇಶ ಬೆಪ್ಪನಂತೆ ನಿಂತಿದ್ದನ್ನು ನೋಡಿ
‘ಏನ್ ಹೇಳು ನಿನ್ ಸಮಸ್ಯೆ’ ಗೆಳೆಯನಂತೆ ಕೇಳಿದರು.
“ಸರ್, ಎರಡು ತಿಂಗಳಿಂದೆ ತಲೆನೋವು ಶುರುವಾಯ್ತು. ಚಿಕಿತ್ಸೆ ತಗೊಂಡ್ರು ಮತ್ತೆ ಮತ್ತೆ ಬರುತ್ತಿತು. ಸರಿಹೋಗಬಹುದು ಅಂತ ನಾನು ಸುಮ್ನಾದೆ. ಒಂದು ವಾರದಿಂದ ಕೈಕಾಲುಗಳು ಜೋಮು ಹಿಡಿಯುತ್ತವೆ. ಒಂದೊಂದು ಸಾರಿ ನಡುಗುತ್ತವೆ. ಹೃದಯ ಬಡಿತ ಹೆಚ್ಚಾಗುತ್ತೆ. ಉಸಿರಾಡಲು ಕಷ್ಟ ಅನ್ನಿಸ್ತಿದೆ. ಇದ್ದಕ್ಕಿದ್ದಂತೆ ಭಯ ಮತ್ತು ಆತಂಕ ಆಗುತ್ತೆ. ಯಾರ ಮೇಲೇಯು ನಂಬಿಕೇನೆ ಇಲ್ಲ ಸರ್. ಜೀವನಾನೆ ಬೇಡ ಅನ್ನಿಸ್ತಿದೆ” ಎಂದು ವಿವರಿಸಿದ ಮಂಜೇಶ.
‘ಖಿನ್ನತೆ ಅಷ್ಟೇ. ಏನು ಗಾಬರಿ ಆಗ್ಬೇಡ. ಒಳ್ಳೆಯ ಯೋಚನೆ ಮಾಡು. ಚೆನ್ನಾಗ್ ಊಟತಿಂಡಿ ಮಾಡು. ಬೆಳಿಗ್ಗೆ ಎದ್ದು ಜಾಗಿಂಗ್ ಮಾಡು. ಧ್ಯಾನ ಮಾಡು. ನಿನ್ನ ಹವ್ಯಾಸಗಳನ್ನು ಬದಲು ಮಾಡ್ಕೋ. ನೆಗೇಟಿವ್ ಯೋಚನೆ ಮಾಡ್‍ಬೇಡ. ಅತಿ ಯೋಚನೆಯು ಒಳ್ಳೆದಲ್ಲ. ಸರಿ ನಾ’ ಅನ್ನುತ್ತ ಗೋಪಿ ಅವನನ್ನು ಉರಿತುಂಬಿಸಿದರು.
‘ನಂಗೆ ತಲೆ ಕೆಟ್ಟಿರಬೇಕು ಸರ್. ತುಂಬಾ ಕಷ್ಟ ಆಗ್ತಿದೆ. ಆತ್ಮಹತ್ಯೆ ಯೋಚನೆ ಬರ್ತಿದೆ’ ಇದ್ದದ್ದನ್ನು ಹೇಳಿದ ಮಂಜೇಶ.
ಅವನ ಪರಿಸ್ಥಿತಿ ಗಮನಿಸಿ ಗೋಪಿ ‘ನಾಳೆ ಡಾಕ್ಟರ್ ಮೀಟ್ ಮಾಡೋಣ’ ಒಂದೇ ಮಾತೇಳಿದರು.
‘ಆಯ್ತು ಸರ್’ ಒಪ್ಪಿದ ಮಂಜೇಶ.
ಉದ್ಯಾನವನದಲ್ಲಿ ಅಡ್ಡಾಡುತ್ತ ಮ್ಯಾನೇಜರ್ ಗೋಪಿ, ಮನಸ್ಸು ಮತ್ತು ಸುಪ್ತ ಮನಸ್ಸಿನ ಬಗ್ಗೆ ತಿಳಿದಷ್ಟು ವಿವರಿಸಿದರು.
ಮಂಜೇಶನಿಗೆ ಏನೂ ಅರ್ಥವಾಗಲಿಲ್ಲ. ಅವನಿಗೆ ಕಿರಿಕಿರಿ ಎನಿಸುತ್ತಿತ್ತು.
ಮನೆಗೆ ಬಂದು ಮಂಜೇಶ ಯಾರೊಂದಿಗು ಮಾತಾಡದೇ ಸೀದಾ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡ.
ಠೀವಿ ನೋಡುತ್ತಿದ್ದ ರಂಗಮ್ಮ ಮಗನ ರೂಮಿನ ಬಾಗಿಲು ತಟ್ಟಿದಳು.
‘ಏನಮ್ಮ ನಿನ್ ಗೋಳು’ ರೇಗಿದ.
‘ಬಾಗಿಲು ತೆಗೀ’ ಕಾಳಜಿಯಿಂದ ರಂಗಮ್ಮ ಹೇಳಿದಳು.
ಸಿಡುಕಿನಲ್ಲಿಯೇ ಚಿಲಕ ತೆಗೆದು ‘ಏನು’ ಅಂದ.
‘ನಿನ್ನ ಮುಖದಲ್ಲಿ ನಗುನೇ ಇಲ್ಲ. ಯಾವಾಗ್ಲೂ ಸಪ್ಪಗೆ ಇರ್ತೀಯ. ಅದ್ಯಾನ ನಿನ್ ಕಷ್ಟ ಯ್ಯೋಳಪ್ಪ’ ಗೋಗರೆದಳು.
‘ಯಾನು ಇಲ್ಲ ಕನ ವೋಗವ್ವ’ ಗದರಿದ.
‘ಕೈಕಾಲು ಮುಖ ತೊಳಿ, ದೇವಸ್ಥಾನಕ್ಕೆ ಹೋಗಿದ್ದು ಬರವು’ ರಂಗಮ್ಮ ಒತ್ತಾಯ ಪಡಿಸಿದಳು.
ಬೆಳ್ಳಿಗುಡ್ಡದ ದುರ್ಗಿಯ ಗುಡಿಗೆ ಹೋದರು. ಅಲ್ಲಿ ಹೆಚ್ಚು ಜನ ಭಕ್ತಾದಿಗಳು ನೆರೆದಿದ್ದರು. ಪೂಜಾರಿ ದಾನಪ್ಪನಿಗೆ ದೇವರು ಬಂದು, ಅವನು ಮೊಳೆಗಳಿದ್ದ ಖುರ್ಚಿಯ ಮೇಲೆ ಕೂತು ಕಷ್ಟಗಳನ್ನು ಕೇಳುತ್ತಿದ್ದ. ಭಕ್ತಾದಿಗಳು ಅತ್ಯಂತ ಧನ್ಯತಾ ಭಾವದಲ್ಲಿ ‘ಸ್ವಾಮಿ’ ಎಂದು ಉದ್ಗರಿಸಿ ತಮ್ಮ ಸಮಸ್ಯೆಯನ್ನು ಹೇಳುತ್ತಿದ್ದರು.
ಅವನು ಮನುಷ್ಯನ ಸ್ವಾಭಾವಿಕ ಸಮಸ್ಯೆಗಳನ್ನೆ ವಿಭಿನ್ನವಾಗಿ ಹೇಳುತ್ತ ‘ಅಮವಾಸ್ಯೆ ದಿನ ಕರಿಕೋಳಿ ಬಲಿ ಕೊಟ್ಟು ಪೂಜೆ ಮಾಡಿಸು. ಮುಂದಿನದು ನನಗೆ ಬಿಡು’ ಅಭಯ ನೀಡುತ್ತ, ಒಂದು ವಿಭೂತಿ ಹುಂಡೆ ಕೊಟ್ಟು, ಬಕೆಟ್‍ನಲ್ಲಿ ತುಂಬಿಟ್ಟಿದ್ದ ತುಳಸಿ ನೀರನ್ನು ಅವರ ಮುಖಕ್ಕೆ ಬೆಚ್ಚುವಂತೆ ಚಿಮುಕಿಸಿ ಕಳಿಸುತ್ತಿದ್ದ.
ದೇವಸ್ಥಾನದ ಆವರಣ ಪ್ರಶಾಂತವಾಗಿತ್ತು. ಗಂಧದ ಕಡ್ಡಿಯ ಘಮಲು, ಹೂಗಳ ಸುಗಂಧ, ದೊಡ್ಡ ಅರಳಿಮರ ಇವೆಲ್ಲವೂ ಅಲ್ಲಿ ಸಕರಾತ್ಮಕ ವಾತಾವರಣ ನಿರ್ಮಿಸಿದ್ದವು.
ಮಂಜೇಶನಿಗೆ ಸ್ವಲ್ಪ ಹಿತವೆನಿಸಿತು. ಅವನು ದೇವರನ್ನು ಪ್ರಾರ್ಥಿಸುತ್ತ ‘ನನ್ನ ಕಷ್ಟ ವಾಸಿ ಮಾಡಿದರೆ, ನಿನಗೆ ಒಂದು ಸಾವಿರ ರೂಪಾಯಿ ಕಾಣಿಕೆ ಹಾಕುತ್ತೀನಿ’ ಹರಕೆ ಕಟ್ಟಿಕೊಂಡ.
ಅವರ ಸರದಿ ಬಂದು ಇಬ್ಬರೂ ಹೋಗಿ ‘ಸ್ವಾಮಿ’ ಎಂದಾಗ
ದಾನಪ್ಪ ‘ಮನಸ್ಸಿಗೆ ನೆಮ್ಮದಿ ಇಲ್ಲ. ನಿಮ್ಮ ಸುತ್ತಮುತ್ತಲೂ ಹಗೆತನದವರೇ. ಜನರ ಕೆಂಗಣ್ಣು ನಿಮ್ಮ ಮೇಲೆ. ಮಗನು ಹೇಗೇಗೋ ಆಡುತ್ತ, ನಿಮ್ಮ ಮಾತನ್ನೆ ಕೇಳುತ್ತಿಲ್ಲ’ ಎಂದು ತೀರ್ಥ ಎರಚಿ, ತುಳಸಿ ಕೊಟ್ಟು ‘ನಾನೀದೀನಿ’ ಅಂದ.
ಪೂಜಾರಿ ದಾನಪ್ಪನಿಗೆ ಬಿಪಿ, ಶುಗರ್ ಇತ್ತು. ಆಗಾಗ ಅವನು ಮಾತ್ರೆಗಳನ್ನು ತರಲು ಆಸ್ಪತ್ರೆಗೆ ಹೋಗಿಬರುತ್ತಿದ್ದ.
ಅವನು ಕೊಟ್ಟದ್ದನ್ನು ಕಣ್ಣಿಗೆ ಒತ್ತುಕೊಂಡು, ಭಕ್ತಿಯಿಂದ ಅವಳು ‘ಆಯ್ತು ಸ್ವಾಮಿ’ ಎಂದಳು.
ಮಂಜೇಶನಿಗೆ ತಲೆಯ ಮೇಲೆ ಏನೋ ಹರಿದಾಡಿದಂತೆ ಆಗುತ್ತಿತ್ತು. ತಲೆಯನ್ನು ಮುಟ್ಟಿ ಮುಟ್ಟಿ ನೋಡಿಕೊಳ್ಳುತ್ತ ಭಯ ಪಡುತ್ತಿದ್ದ.
***
ಮುಂಜಾನೆ ಐದಕ್ಕೆ ಎಚ್ಚರಾದ ಮಂಜೇಶನಿಗೆ ಮಲಗಿದ್ದಂಗೆ ಆಗಿರಲಿಲ್ಲ. ಮೆದುಳಲ್ಲಿ ಅರ್ಥಹೀನ ಯೋಚನೆಗಳು ಓಡಾಡುತ್ತಲೇ ಇದ್ದವು. ಎದ್ದ ಮೇಲೂ ಅದೇ ಸ್ಥಿತಿ ಮುಂದುವರೆಯಲು ಗೊಂಬೆ ತರ ಕುಳಿತೇ ಇದ್ದ. ಹಿಂದಲೇ ನೋವು ಶುರುವಾಯ್ತು.
ಅವ್ವನ ಒತ್ತಾಯಕ್ಕೆ ರೆಡಿಯಾಗಿ ಆಫೀಸಿಗೆ ಹೊರಟ. ಅವನಲ್ಲಿ ಅರ್ಥಹೀನ ಯೋಚನೆಗಳು ಬರುತ್ತಿದ್ದವು. ಆಫೀಸಿನ ಮೇಲ್ಛಾವಣಿ ಕುಸಿದು ಬಿದ್ದುಬಿಡುವ ಭಯ ಅವನನ್ನು ಅತಿಯಾಗಿ ಕಾಡಿತು. ತಲೆಮೇಲೆ ಕೈಯಿಟ್ಟು ಛೇರಿನಲ್ಲಿ ಸಪ್ಪಗೆ ಕುಳಿತಿದ್ದ. ಅಮಿತ್ ಪ್ರೀತಿಯಿಂದ ಮಾತನಾಡಿದರೂ ಮಂಜೇಶ್ ಬಾಯ್ತೆರೆಯಲಿಲ್ಲ.
ಹತ್ತು ಗಂಟೆಗೆ ಗೋಪಿ ಬಂದಾಗ ಎಲ್ಲರೂ ಅವನಿಗೆ ನಮಸ್ಕರಿಸಿದರು. ಮಂಜೇಶ ಕಣ್ಮುಚ್ಚಿ ಕುಳಿತಿದ್ದ. ಮ್ಯಾನೇಜರ್ ಒಳನಡೆದು ಬೆಲ್ ಒತ್ತಿದರು. ಮುನಿಯಪ್ಪ ಬಂದು ‘ಸರ್’ ಎಂದಾಗ ‘ಮಂಜೇಶ್’ ಎಂದರಷ್ಟೇ ಗೋಪಿ.
‘ಮಂಜೇಶ್ ಮುಖ ಕಳೆಗುಂದಿತ್ತು. ನಗುವಿನ ಒಂದು ಗೆರೆಯೂ ಇರಲಿಲ್ಲ. ಗೋಪಿ ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಹೆಚ್ಚಿನ ಸಮಯವನ್ನು ತಗೊಂಡ. ನಿಧಾನವಾಗಿ ಪ್ರತಿಕ್ರಿಯಿಸುತ್ತಿದ್ದ. ಅವನು ಮಾತು ಮುಗಿಸುವುದರೊಳಗೆ ಎಂಟು ಸಲ ಆಕಳಿಸಿದ. ಗೋಪಿ ಮಂಜೇಶನನ್ನು ಕರೆದುಕೊಂಡು ‘ಮನೊಲ್ಲಾಸ’ ಆಸ್ಪತ್ರೆಗೆ ಹೊರಟರು.
ಆಸ್ಪತ್ರೆಯ ಒಳಗೆ ನಿಶಬ್ದತೆ ಇತ್ತು. ಎಲ್ಲಾ ರೋಗಿಗಳು ಮತ್ತವರ ಕಡೆಯವರು ತಮ್ಮ ಸರದಿಗಾಗಿ ಕಾಯುತ್ತ ಕುಳಿತಿದ್ದರೆ, ಕೆಲವರನ್ನು ಗೋಡೆಯಲ್ಲಿನ ಠೀವಿ ಸೆಳೆದಿತ್ತು. ಅದರಲ್ಲಿ ಮಾನಸಿಕ ರೋಗ ಲಕ್ಷಣಗಳು ಮತ್ತು ಚಿಕಿತ್ಸೆ ಬಗ್ಗೆ ವಿವರಣೆ ಬರುತ್ತಿತ್ತು.
‘ಹೇಗಿದ್ದೀರಿ? ಗೋಪಿ’ ಡಾ. ಶಿವರಾಮ್ ಕೇಳಿದರು.
‘ಫೈನ್ ಸರ್’
‘ಗುಡ್ ಟ್ಯಾಬ್ಲೆಟ್ ಮುಂದುವರೆಸಿ’ ಎಂದು ಡಾ. ಶಿವರಾಮ್
‘ಇವರ್ಯಾರು’ ಪ್ರಶ್ನಿಸಿದರು.
‘ನನ್ನ ಸಹೋದ್ಯೋಗಿ ಸರ್. ತಿಂಗಳಿಂದ ಇವರ ನಡವಳಿಕೆ ಬದಲಾಗಿದೆ’ ಗೋಪಿ ಹೇಳಿದ.
‘ಏನಾಗುತ್ತೆ ನಿಮ್ಗೆ. ಮುಚ್ಚುಮರೆ ಇಲ್ದೆ ಹೇಳಿ’ ಡಾ. ಶಿವರಾಮ್ ಕೇಳಿದರು.
ಮಂಜೇಶ ಅವರನ್ನೆ ನೋಡುತ್ತ
‘ಸರ್ ನನಗೆ ಇದ್ದಕ್ಕಿದ್ದಂತೆ ಕೋಪ, ಆತಂಕ ಆಗುತ್ತೆ. ಒಬ್ನೆ ಇರೋದಕ್ಕೆ ಭಯ. ಯಾರಾದರು ಬಂದು ನನ್ನನ್ನ ಹೊಡಿತಾರೋ ಅನ್ಸುತ್ತೆ. ನಿದ್ರೆ ಸರಿಯಾಗಿ ಬರಲ್ಲ. ಆಸಕ್ತೀನೇ ಇಲ್ಲ. ಮಂಕಾಗೇ ಇರ್ತೀನಿ. ಆಗಾಗ ಕೈಕಾಲುಗಳು ನಡುಗುತ್ತವೆ. ಸತ್ತೋಗ್ಬೇಕು ಅನ್ಸುತ್ತೆ’ ಇಷ್ಟು ಹೇಳಿದ. ವ್ಯಾಖ್ಯಾನಿಸಿಲಾಗದ ಅನೇಕ ಲಕ್ಷಣಗಳು ಅವನಲ್ಲಿದ್ದವು.
ಡಾ. ಶಿವರಾಮ್ ಮುಂದುವರೆದು
ಮಂಜೇಶನ ಕುಟುಂಬದ ಇತಿಹಾಸ, ಅವನ ಅಭ್ಯಾಸಗಳು, ಕೆಲಸ, ಮದ್ಯ-ಬೀಡಿ ಚಟ ಇದೆಯೇ? ಇನ್ನಿತರ ಮಾಹಿತಿ ತಿಳಿದು, “ಟೀವಿ, ಪೇಪರಲ್ಲಿ ನನ್ದೇ ವಿಷಯ ಬರುತ್ತೆ ಅನ್ನಿಸುತ್ತ. ಕಿವಿಯಲ್ಲಿ ಯಾರೋ ಕೂಗಿದಂತೆ, ಹಾಡು ಹೇಳಿದಂತೆ ಆಗುತ್ತಾ. ಯಾರೋ ನನ್ನನ್ನು ಹಿಂಬಾಲಿಸುತ್ತಿದ್ದಾರೆ. ನನ್ನನ್ನು ನಿಯಂತ್ರಣ ಮಾಡುತ್ತಾರೆ ಅನ್ನಿಸುತ್ತ’ ಆಳವಾಗಿ ಕೆದಕಿ ಕೆದಕಿ ಕೇಳಿದರು.
‘ಆತರ ಏನೂ ಆಗಲ್ಲ ಸರ್. ಹೇಳಿದ್ನಲ್ಲ ಅಷ್ಟೆ’ ಅಂದ ಮಂಜೇಶ.
ಅವನ ಕುಟುಂಬದಲ್ಲಿ ಯಾರಿಗು ಮಾನಸಿಕ ರೋಗವಿಲ್ಲ. ಅವನ ಮನೆಯ ಎಲ್ಲರೂ ಅವನಿಗೆ ಪ್ರೋತ್ಸಾಹ ನೀಡುವರು. ಮನೆಯಲ್ಲಿ ನಿರಂತರ ಜಗಳಗಳು, ಜಮೀನಿನ ಕಲಹಗಳಿಲ್ಲ. ಮದ್ಯ ಸೇವನೆಯನ್ನು ಕಾಲೇಜಿನ ದಿನಗಳಲ್ಲೆ ಕಲಿತಿದ್ದ. ವಿವಾಹಿತ ಹೆಂಗಸೊಬ್ಬಳ ಬಗ್ಗೆ ತಲೆಕೆಡಿಸಿಕೊಂಡಿದ್ದ. ಅತಿಯಾದ ಮತ್ತು ನಕರಾತ್ಮಕ ಯೋಚನೆ ಅವನ ಬಲಹೀನತೆ ಆಗಿತ್ತು.
ಎಲ್ಲದರ ಆಧಾರದ ಮೇಲೆ ಡಾ. ಶಿವರಾಮ್ ಅವನಿಗೆ ಮೂರು ತಿಂಗಳಿಗೆ ಟ್ಯಾಬ್ಲೆಟ್ ಬರೆದು ಕೊಟ್ಟು ‘ಮಿಸ್ ಮಾಡದಂಗೆ ತಗೋಬೇಕು. ಮದ್ಯ ಸೇವನೆ ಬಿಡು. ವ್ಯಾಯಾಮ ಮಾಡು. ಒಳ್ಳೆಯ ಯೋಚನೆ ಮಾಡು. ನಂಬಿಕೆ ಇರಲಿ’ ತಿಳಿ ಹೇಳಿದರು.
‘ಮಾತ್ರೆನಾ ಕಮ್ಮಿ ಮಾಡಿ ಸರ್’ ಮಂಜೇಶ ಡಾಕ್ಟರಲ್ಲಿ ವಿನಂತಿಸಿದ.
‘ಉಷಾರಾಗ್ತೀಯ ಹೋಗು’ ಡಾ. ಶಿವರಾಮ್ ನಕ್ಕರು. ಗೋಪಿ ಫೀಸನ್ನು ಮೊದಲೇ ಪಾವತಿ ಮಾಡಿ ಆಗಿತ್ತು.
‘ಬರ್ತೀವಿ ಸರ್’ ಗೋಪಿ ಹೇಳಿ ಇಬ್ಬರು ಅಲ್ಲಿಂದ ಹೊರಟರು.
‘ಇಷ್ಟು ಮಾತ್ರೆಗಳಿಂದ ನಂಗೆ ಅಡ್ಡ ಪರಿಣಾಮ ಆಗ್ಬಿಟ್ರೆ ಏನ್ ಸರ್ ಮಾಡೋದು’ ಆತಂಕ ವ್ಯಕ್ತ ಪಡಿಸಿದ ಮಂಜೇಶನಲ್ಲಿ ವಿಪರೀತ ಅನುಮಾನವು ಇತ್ತು.
‘ಏನು ಆಗಲ್ಲ. ಭಯ ಬೇಡ’ ಎಂದ ಗೋಪಿ.
‘ನನಗೆ ಅಂಥದ್ದೇನು ಆಗಿಲ್ಲ. ಇಷ್ಟೊಂದು ಮಾತ್ರೆಗಳು ಬೇಡ ಸರ್’
‘ನಾನು ಆರು ತಿಂಗಳು ಈ ಮಾತ್ರೆಗಳನ್ನು ನುಂಗಿದ್ದೇನೆ. ಈಗಲೂ ಕಂಟಿನ್ಯೂ ಮಾಡ್ತಿದ್ದೀನಿ. ನನಗೂ ನಿನ್ನಂತೆ ಆಗುತ್ತಿತ್ತು. ನಿರ್ಲಕ್ಷ್ಯ ಮಾಡ್‍ಬೇಡ. ಮಾನಸಿಕ ಖಾಯಿಲೆಗಳು ತೀವ್ರವಾದರೆ ಬದುಕೇ ನಾಶ ಆಗಿಬಿಡುತ್ತೆ’ ಗೋಪಿ ಹೇಳಿದ.
ಮಂಜೇಶನಿಗೆ ತಲೆಯ ಮೇಲೆ ಏನೋ ಹರಿದಾಡಿದಂತೆ ಆಗಲು ಶುರುವಾಯ್ತು. ಅರ್ಥವಿಲ್ಲದ ಯೋಚನೆಗಳು ತಲೆಗೆ ಬರತೊಡಗಿದವು. ಕಾರು ಅಪಾಘಾತಕ್ಕೀಡಾಗುವ ಅಂಜಿಕೆ ಕಾಡತೊಡಗಿತು.
ಮಂಜೇಶ ‘ಸರ್ ನಂಗೆ ಹುಚ್ಚು ಹಿಡಿಯುತ್ತೆ ಅನ್ಸುತ್ತೆ’ ವಿಪರೀತ ಭಯಭೀತನಾಗಿದ್ದ.
ಗೋಪಿ ಕಾರು ನಿಲ್ಲಿಸಿ, ಅವನನ್ನು ಸಂತೈಸಿದರು. ಮಂಜೇಶ ಸಿಟಿಗೆ ಒರಗಿ ಮಲಗಿದ. ಕಣ್ಣು ಮುಚ್ಚಿದ್ದನ್ನಷ್ಟೆ; ಮೆದುಳಲ್ಲಿ ಮತ್ತದೇ ಯೋಚನೆಗಳು ಓಡಾಡುತ್ತಿದ್ದವು.
***
ಬೆಳಿಗ್ಗೆ ಆರು ಗಂಟೆಗೆ ಎಲ್ಲರಿಗು ಸುದ್ದಿ ತಿಳಿದಿತ್ತು. ಆಫೀಸಿಗೆ ಬಂದ ಎಲ್ಲರೂ ಒಟ್ಟಿಗೆ ಮಂಜೇಶನ ಮನೆಗೆ ಹೊರಟರು.
ಗೋಪಿ ಹನ್ನೊಂದು ಗಂಟೆಗೆ ಆಫೀಸಿಗೆ ಬಂದ. ಹೆಚ್ಚಿನ ಖುರ್ಚಿಗಳು ಖಾಲಿ ಖಾಲಿ ಆಗಿದ್ದವು. ಟೇಬಲ್ ಮೇಲೆ ಪ್ಲಾಸ್ಟಿಕ್ ಕವರ್‍ನಲ್ಲಿ ಹೂವಿನ ಹಾರ ಇತ್ತು. ಆಶ್ಚರ್ಯದಿಂದ ಗೋಪಿ ‘ಎಲ್ಲಾ ಎಲ್ಲೋದ್ರು. ಇದೇನಿದು ಹಾರ’ ಮುನಿಯಪ್ಪನನ್ನು ಕೇಳಿದ.
ಸಪ್ಪಗೆ ಬಂದ ಮುನಿಯಪ್ಪ ‘ಸರ್ ಮಂಜೇಶ ಇನ್ನಿಲ್ಲ’ ಎಂದ.
ಗೋಪಿಗೆ ಮೈಯಲ್ಲಿ ವಿದ್ಯುತ್ ಪ್ರವಹಿಸಿದಂತಾಗಿ ‘ಏನಾಯ್ತು’ ಅನ್ನಲು
‘ಮಧ್ಯರಾತ್ರಿ ನೇಣು ಹಾಕೊಂಡಿದ್ದಾನೆ’ ಎಂದು ಮುನಿಯಪ್ಪ ತಿಳಿಸಿದ.
ಗೋಪಿಗೆ ತಲೆ ಮೇಲೆ ಏನೋ ಹರಿದಾಡಿದಂತೆ ಆಯ್ತು. ಇದ್ದಷ್ಟು ಅವನು ನಲುಗಿಹೋದ.