Click here to Download MyLang App

ಕೊರೋನವೆಂಬಕಾಯಿಲೆಯು ನೀರೆಂಬಅಮ್ಮಾಜಿಯು - ಬರೆದವರು : ವಿಜಯ ಮೋಹನ್

ಬಿಸಿಲು ಯಾಕೊ ತನ್ನ ಪಾಡಿಗೆ ತಾನಿರದಂಗೆ. ದಗ ದಗನೆಂದು ಕಾವು ಕಕ್ಕುತ್ತ, ಭೂಮಿ ಮ್ಯಾಲಿನ ಜೀವ ರಾಶಿಗಳನ್ನು, ಕೆಳಗು ಮ್ಯಾಲು ರವರವನೆಂದು ಬೇಯಿಸುತ್ತಿತ್ತು. ಹಕ್ಕಿ ಪಕ್ಷಿಗಳೆಂಬ ಕಣ್ಣೋಟವು, ದಿಕ್ಕು ದಿಕ್ಕಿಗೆಲ್ಲ ಹೊರಳುತ್ತಿದ್ದರು. ಒಂದಿಷ್ಟು ಅಲುಗಾಡದಂತೆ ಗರಬಡಿದ ಗಾಳಿಯೆನ್ನುವುದು. ಬೀಸಲಾರದೆ ಬಿಂಕವಾಗೆ ನಿಂತಿತ್ತು, ಅಮ್ಮಾಜಮ್ಮನ ಮನೆಯ ಎದುರಿನಲ್ಲಿರುವ. ನೇರಳೆ ಮರದ ಮೇಲೆ. ಗಾಳಿಯಿಲ್ಲದೆ. ನೀರಿಲ್ಲದೆ, ದಾಹದ ದಣಿವನ್ನು ತಡೆದುಕೊಳ್ಳಲಾರದೆ. ಮರದ ಮೇಲಿದ್ದ ಹಕ್ಕಿ ಪಕ್ಷಿಗಳೆನ್ನುವವು. ಮೈ ಮೇಲಿನ ಪುಕ್ಕವನ್ನು ಕೆದರಿಕೊಂಡು ಕುಂತಿದ್ದವು. ತಮ್ಮ ತಮ್ಮ ರೆಕ್ಕೆಗಳನ್ನು ಹಿಗ್ಗಲಿಸಿಕೊಂಡು, ಮುಲಾಜಿಲ್ಲದೆ ಕಾವು ಕಕ್ಕುತ್ತಿರುವ ಸೂರ್ಯದೇವನ ದಿಕ್ಕಾರಕ್ಕೆ ಸಜ್ಜುಗೊಂಡಿದ್ದವು. ಅಮ್ಮಾಜಿಗು ಅಂಗೆ ಇತ್ತಿತ್ತಲಾಗಿ ಜೀವವೆನ್ನುವುದು, ಒಳಗಿದ್ದರು ನಿಸೂರೆನಿಸುತ್ತಿಲ್ಲ, ಹೊರಗಿದ್ದರು ಇರಗೊಡಿಸುತ್ತಿಲ್ಲ, ಸೆಕೆಯ ಉಮ್ಮರವೆಂಬೋದು, ಅವಳ ಕತ್ತುಕಂಕುಳಲ್ಲೆಲ್ಲಾ, ರವ ರವನೆ ಕುಮುಲುತ್ತಿತ್ತು, ಯಕ ಇಂತ ಬಿಸಿಲಿದ್ದರೆ ಕೊರೋನ್ವೆಂಬ ಕಾಯಿಲೆ ಕಂಟ್ರೋಲಾಗಿರತೈತಂತೆ ಕಣಕೊ. ಅವನು ಹಾಲಿನ ಡೈರಿ ಈರನಾಗನೆಂಬೋನು, ಬಸ ಬಸನೆಂಬ ಉಸಿರು ದಬ್ಬಿಕೊಂಡು, ಅವಳು ಸಣ್ಣಾಗಪ್ಪೋರ ಸರೋಜಿ ಕೂಟೆ ಊದುತ್ತಿದ್ದ. ಅವನ ದ್ವನಿ ಅಮ್ಮಾಜಿಯ ಕಿವಿಯವರೆಗು ಬಿತ್ತು. ಮತ್ತೆ ಇಂತ ಬ್ಯಾಸಿಗೇಲು ರಾಶಿ ರಾಶಿ ಎಣ ಬೀಳ್ತ್ತಾವಂತಲ್ಲೊ. ರಾತ್ರಿ ಟಿ,ವಿ, ನೋಡುವಾಗ ನಿನ್ನ ಕಣ್ಣು ನೆತ್ತಿಮ್ಯಾಲಿರ್ತ್ತಾವೇನಲ?ದೇಶ್ದಲ್ಲಿರೊ ಡಾಕ್ಟರುಗಳನ್ನ, ವಿಜ್ಞಾನಿಗಳನ್ನ, ಯಾಮರಿಸುತ್ತಿರೊ ಕಾಯಿಲೆ ಕಣೊ.ದುಡಿಯೊ ಕೈಗಳಿಗೆ ಕೆಲಸವಿಲ್ದಂಗ್ ಮಾಡ್ತು. ಹಸ್ದಿರುವ ಹೊಟ್ಟೆಗಳಿಗೆ ಹಿಟ್ಟಿಲ್ಲದಂಗೆ ಮಾಡ್ತು, ಸರೋಜಿ ತನ್ನ ಮುಂದಿರುವ,ಕಡ್ಲೆ ಕಾಯಿ ಬೀಜವನ್ನ ಸುಲಿಯೋದು ಬಿಟ್ಟು. ಸರ ಸರನೆ ಮಾತಾಡ್ಬುಟ್ಲು, ಇಂಗೆ ಎಂದು ಬಾರದ ಇಂತ ದೇಶದ ದುಸ್ಸ್ಥಿತಿಗೆ. ಊರಲ್ಲಿನ ಜನಕ್ಕೆ, ಕುಂತರು ಕೊರೋನಾದ ಮಾತೆ, ನಿಂತರು ಅದೇ ಕಾಯಿಲೆಯ ಮಾತೆ, ಆದರೆ ಈ ಕೊರೋನಾವೆಂಬ ಕಾಯಿಲೆಯಿಂದ, ದೇಶದಲ್ಲಿ ನಡಿಯುತ್ತಿರುವ ನಾನಾ ವೈಪರೀತ್ಯಗಳ ನಡುವೆ.ಜನ ಭಯ ಆತಂಕ, ಸುಖ ದುಃಖ, ಅನುಮಾನ ಅವಮಾನಗಳಲ್ಲಿ, ಪರದಾಡುತ್ತಿದ್ದರೆ. ಅಮ್ಮಾಜಿಯೆಂಬೋಳು ನೀರಿಲ್ಲ ನೀರಿಲ್ಲವೆಂಬ, ಬಿನ್ನವಾದ ಚಿಂತೇಲಿ ಬೇಯುತ್ತಿದ್ದಳು. ಅಂತಚಿಂತೆ ಹೊತ್ತುಕೊಂಡುನಿಂತಿದ್ದ ಅಮ್ಮಾಜಿಗೆ. ಸರೋಜಿಯ ಜೋಪಡಿ ಕೆಳಗೆ, ಈರನಾಗನ ಮಾತಿನ ದಾಟಿಯನ್ನಕೇಳಿಸಿಕೊಂಡು. ಅವಳ ತುಟಿಯೊಳಗೆ ಉಕ್ಕಿದ, ಸುಕ್ಕು ಸುಕ್ಕಾದ ನಗುವೊಂದು ಈಚೆ ಬರ್ದಂಗೆ. ಅದು ಅಮ್ಮಾಜಿಯ ಬಾಯಲ್ಲೆ ಒಣಗಿ ಹೋಯಿತು. ತನಗು ಕೂಡ ಒಬ್ಬಳೆ ಇರಲು ಮನಸ್ಸಿಲ್ಲದೆ, ಸರೋಜಮ್ಮನ ಜೋಪಡಿ ಕೆಳಕ್ಕೋಗಿ ನಿಂತುಕೊಂಡಳು.ಅಮ್ಮಯ ನಮ್ಮಳ್ಳಿವಳಕ್ಕೆ, ಯಾವ್ ದೊಡ್ಡರೋಗ್ವು ಬರಲ್ಲ ತಗೀರಿ. ಈಕೊರೋನ್ವೇನಿದ್ರು, ಬರಿಪ್ಯಾಟೆಯವರನ್ನೆ ಆಟ ಆಡಸ್ತಿರೋದು. ಯಾಕ್ ಗೊತ್ತೆ? ಊರು ಈರನಾಗೇನಳ್ಳಿವಳಗೆ, ಮಾಸ್ಕು ಹಾಕೊವರಿಲ್ಲ. ಮಾತ್ರೆ ನುಂಗೊವರು ಇಲ್ಲ, ಇಂತ ಜನಗಳನ್ನ ನೋಡೆ ಅದು ಎದರಿಕೊಂಡೈತೆ,ಎಂದು ಅವಳಿಗವಳೆ, ಊರಿನ ಜನರನ್ನ ಸಮರ್ಥಿಸಿ ಕೊಂಬುವಾಗ. ಅಂಗನ್ನಬ್ಯಾಡ ಸರೋಜಕ್ಕ? ನೆನ್ನೆ ದಿನ ಅವನು ಕುನ್ನಾಲಿ ನಾಗನೆಂಬೋನ್ನ. ಒಂದಿಷ್ಟು ತಲೆ ನೋವು, ಜ್ವರ ಅಂದಿದ್ದಕ್ಕೆ, ಆಸ್ಪತ್ರೆಯವರು ಕರ್ಕೊಂಡೋಗಿ, ಅದೆಲ್ಲೊ ಹಾಸ್ಟೆಲ್ಲಿನೊಳಗೆ ಕೂಡಾಕ್ಕೆಂಡವರಂತೆ. ಎಂದ ಅಮ್ಮಾಜಮ್ಮಳ ದ್ವನಿಗೆ.ಬಾರೆ ಅಮ್ಮಾಜಿ, ಈಕಡಿಕ್ಕೆ ಬಂದು ಕುಂತುಕಾ ಬಾ ಎಂದು. ನಿಂತಿದ್ದ ಅಮ್ಮಾಜಮ್ಮಳನ್ನÀ, ಎಡಗಡೆ ಪಕ್ಕಕ್ಕೆ ಕರೆದಳು, ಊನಕ್ಕಯ್ಯ ಅವನು ಒಂದಿನಕ್ಕಾರ, ಒಂದು ಮೂಗುನೋವು, ತಲೆ ನೋವು, ಅಂತ ಮಲಗಿದವನಲ್ಲ. ಎಂದು ಈಸಲ ಈರನಾಗ. ಬಸ ಬಸನೆ ಉಸಿರು ಕಕ್ಕುತ್ತ ಮಾತಾಡಿದ್ದಕ್ಕೆ, ಲೇ ಅಪ್ಪಯ್ಯ ಕಾಯಿಲೆಗೆ ಕಾಲ ಮುಖ್ಯವಲ್ಲ, ಮನುಷ್ಯರು ಮುಖ್ಯವಲ್ಲ, ಅವರವರ ಗ್ರಾಚಾರ ಮುಖ್ಯಕಣೊ ಎಂದು ಸರೋಜಮ್ಮ, ಅವಳ ಅಡಿಕೆಲೆ ಚೀಲದಿಂದ, ಅರೆಬಾಡಿದ ವೀಳ್ಯದೆಲೆಗೆ ಸುಣ್ಣ ಸವರಿಕೊಂಡಳು. ಮತ್ತೀಸಲ ಸಣ್ಣುಡುಗರಿಗೆ ಬರ್ತೈತಂತೆ?ಕಣಕ, ಈ ಕೊರೋನವೆಂಬೊಕಾಯಿಲೆ. ಮನುಷ್ಯರ ಮಕಾನೋಡಿ ಮಣೆ ಹಾಕ್ತೈತೇನೊ?ಅಂದವಳ ಮಾತಿಗೆ, ಈರನಾಗ ಇನ್ನೊಂದು ಸಲ, ಅವನ ಬಾಯೊಳಗಿನ ಹಲ್ಲುಗಳನ್ನೆಲ್ಲ, ಈಚೆ ನುಗ್ಗಿಸಿಕೊಂಡು ಕಿಸಕ್ಕನೆ ನಗಲಾರಂಬಿಸಿದ, ಲೇ ಅಪ್ಪಯ್ಯ, ನಿನಗೆ ಎಪ್ಪತ್ತಾರುಸಲ ಉತ್ತರ ಹೇಳಾಕಾಗಲ್ಲ, ನೋಡೋಗು ನಿನ್ನ ಜಿವದನ ಬಿಸಲಾಗೆಂಗೆ, ಬಾಯಿ ಬಿಟ್ಟುಕೊಂಡು ನಿಂತಾವೆ. ಎಲ್ಲಾರ ಹೊಡಕೊಂಡೋಗಿ ನೀರು ಕುಡುಸೋಗು. ಎಂದ ಸರೋಜಮ್ಮ ಅವಳ ಮುಂದಿರುವ, ಬಿತ್ತನೆ ಬೀಜದ ಕಡ್ಲೆ ಕಾಯಿಯನ್ನು,ಗಾರೆ ನೆಲದ ಹಾಸಿನಲ್ಲಿ ಕುಕ್ಕಿ ಕುಕ್ಕಿ ಸುಲಿಯ ತೊಡಗಿದಳು. ಎಲ್ಲಕ್ಕ ಕುಡಿಯಾಕು ನೀರಿಲ್ಲ, ಬಳಸಾಕು ನೀರಿಲ್ಲ, ಇವನು ದನಗಳಿಗೆ ನೀರೆಲ್ಲಿಂದ ಕುಡುಸ್ತ್ತಾನೆ? ಅಂದ ಅಮ್ಮಾಜಿಯ ಮಾತಿಗೆ, ಯಾರು ನೆಟ್ಟಗೆ ಉತ್ತರ ಹೇಳ್ಲಿಲ್ಲ.
ಊರಲ್ಲಿ ಇತ್ತಿತ್ತಲಾಗಿ ಸರಿಯಾಗಿ ನೀರು ಬಿಡದಂಗಾಗಿ. ಮನೆ ಮನೆಯಾಗು, ಜನ ನೀರಿಗಂತಲೆ ತಲೆಕೆಡಿಸಿಕೊಂಡಿದ್ದರು. ಅದೊರೊಳಗಾಗಿ ಅಮ್ಮಾಜಿಗಂತು, ನೀರೆ ಬದುಕು. ನೀರೆಂದರೆ ಪಂಚಪ್ರಾಣ. ಅವನು ನೀರ್ ಬಿಡೊ ವಾಟರ್ ಮ್ಯಾನು. ಮೂರ್ ದಿನಕ್ಕೊಂದು ಸಲ ಬಿಟ್ಟರೆ ಬಿಡತ್ತಾನೆ, ಬಿಡಲಿಲ್ಲವೆಂದರೆ ಹದಿನೈದು ದಿವಸವಾದರು ನೀರೇ ಬಿಡುತಿಲ್ಲ. ಅಂತ ನೀರುಬಿಡೊ ಆಂಜನಿಯನ್ನ ಕಾರಣ ಕೇಳೀರೆ. ಮೋಟ್ರು ಸುಟ್ಟೋಗೈತೆ ತಾಳ್ರಮ್ಮ. ಇಲವಾದರೆ ಕರೆಂಟಿಲ್ಲಕಣಮ್ಮ ಲೋಡಾಗಿಲ್ಲಕಣಮ್ಮ, ಎಂದಗಲಿ ಅಥವ ಇವತ್ತು ಬಿಡತ್ತೀನಿ, ನಾಳೀಕ್ ಬಿಡತ್ತೀನೆಂದೊ, ಸಬೂಬೇಳಿಕೊಂಡು. ಸತಾಯಿಸುತ್ತಿರುವ ಇಂತ ಗಳಿಗೆಯಲ್ಲಿ. ನೀರಿಲ್ಲದ ಅವಳ ಮನೆಯಲ್ಲಿ, ಅಮ್ಮಾಜಮ್ಮನ ಆತ್ಮನಿರಾಳವಿಲ್ಲದ. ನಿತ್ರಾಣಕ್ಕೆ ನಿಂತು ಬಿಟೈತೆ.
ಹೊಟ್ಟೆ ಬಟ್ಟೆಗೆಂಬ ಬದುಕು ನೆಚ್ಚಿಕೊಂಡು. ಬೆಂಗಳೂರು ಸೆರಿದ್ದ ಊರಿನ ಜನ, ಇದ್ಯಾವುದೊ ವಕ್ಕರಸ್ಬಾರದ ರೋಗವೊಂದು ವಕ್ಕರಿಸಿ. ಇದ್ದ ಬದ್ದವರೆಲ್ಲ ವಾಪಸ್ಸು ಬಂದು, ಊರು ಸೇರಿ ಕೊಂಡರು. ಇದರೊಳಗೆ ಇವನ್ಯಾವೊನೊ ಅಮ್ಮಾಜಮ್ಮನ ಮಗ. ಪ್ರಸನ್ನ ಅಂಬೋನು, ವಾಪಸ್ಸು ಬಂದು. ಮನೇಲಿ ಮುನ್ನೂರು ಮೂವತ್ತು ಗಳಿಗೇಲು, ಸೋಪುಜ್ಜುಜ್ಜಿ ಕೈ ತೊಳಿತಾ ಅವನೆ. ಈ ಗಳಿಗೇಲಿ ಅವಳ ಮನೆಯ ಬಚ್ಚಲ ನೀರು, ಸಳ ಸಳನೆ ಈಚೆ ಬಂದಿದ್ದು ನೋಡಿ. ಅಮ್ಮಾಜಿ ದಡ ಬಡಾಯಿಸಿ. ಮನೆಯೊಳಿಕ್ಕೆ ತಿರುಗಿ ಓಡಿ ಹೋದಳು, ಲೇ ಪ್ರಸನ್ನ ನಿನಗೆ ಗ್ಯಾನ ಎಂಗೈತಲಾ? ಮನೇಲಿ ಒಂದುತೊಟ್ಟು ನೀರಿಲ್ಲ. ಸುಮ್ಮ ಸಮ್ಮುನೆ ಕೈಯಾಕ್ ತೋಳಿತಿದ್ದೀಯೊ? ಮುಖ ಸಿಂಡರಿಸಿಕೊಂಡು, ಮಗನನ್ನು ಬೈದ ಅಮ್ಮಾಜಿ. ಮನೇಲಿ ಸುಮ್ಮನೆ ಕುಂತುಕೊಳ್ಳದೆ, ಊರಮುಂದೆ ಒಣಗಿ ನಿಂತಿರುವ ಟ್ಯಾಂಕಿಯತ್ತಿರ ಹೋದಳು. ಅಲ್ಲಿ ಬ್ರಹ್ಮಾಂಡ್ವಾಗಿ ಸಾಲುಗಟ್ಟಿ ನಿಂತಿರುವ. ಪಾತ್ರೆ ಪಡಗ, ಬಕೀಟು ಬಿಂದಿಗೆಗಳ, ಮದ್ಯೆ ಹೋಗಿ, ಅಮ್ಮಾಜಿಯ ಬಿಂದಿಗೆಗಳು, ಯಾವ ಸಾಲಿನಲ್ಲಿ ಕುಂತಿರಬೇಕೆಂದು ಹುಡುಕ ತೊಡಗಿದಳು. ಇನ್ನು ಅವಳ ಬಿಂದಿಗೆಗಳನ್ನ ನೆಟ್ಟಗೆ ಗುರುತಿಸಿರಲಿಲ್ಲ. ಅಲ್ಲೆ ಟ್ಯಾಂಕಿಯ ಪಕ್ಕದಲ್ಲಿನ ರೋಡಿನಲ್ಲಿ. ಜನ ಬಿಲ್ಲು ಬಾಣ ಹಿಡುಕೊಂಡವರಂತೆ, ದಡಾ ಬಡಾ ಅನ್ನುತ್ತ, ಓಡಿ ಹೋಗುತ್ತಿದ್ದುದ್ದನ್ನು ನೋಡಿದಳು, ಇವಳಿಗು ಕುತೂಹಲ ತಡಿಯಲಾರದೆ, ದಾಪು ಗಾಲಲ್ಲಿ ಬರ ಬರನೆ ನಡೆದು ಹೋದಳು. ಇದ್ಯಾವುದೋ ಬರ್ಬಾರದ ಕಾಯಿಲೆಯಿಂದ, ಲಾಕ್ ಡೌನು, ಲಾಕ್ ಡೌನು, ಅಂತ ಸರ್ಕಾರ ಘೋಷಣೆ ಮಾಡಿರೊ ಗಳಿಗೆಯೊಳಗೆ. ಯಾರು ಮಾರೊವರು ನೆಟ್ಟಗಿಲ್ಲದಂಗಾಗಿದ್ದಾರೆ, ಕೊಂಡುಕೊಳ್ಳೋವರು ಈಚೆ ಬರ್ದಂಗಾಗಿದ್ದಾರೆ, ಭೂಮಿ ಮ್ಯಾಲೆ ಬೆಳೆದಿರೊ ಪಡಿ ಪದಾರ್ಥಗಳಿಗೆ. ಬೆಲೆಯಿಲ್ಲದಂಗಾಗಿರೊ ಇಂತಸಮೇವಿನಲ್ಲಿ. ಅವನು ಈರಭದ್ರನ ತ್ವಾಟದೊಳಗೆ. ಆಳುದ್ದದ ಬಾಳೆ ಗೊನೆಗಳು, ಮೈಬಾರವಾಗಿ ಜೋತುಬಿದ್ದಿದ್ದವು.ನೋಡಾಕೆರೆಡು ಕಣ್ಣು ಸಾಲದಂತ, ನಿಗಿ ನಿಗಿ ಪಸಲು,ನೋಡುತಿದ್ರೆ ಇನ್ನೊಂದು ಗಳಿಗೆ ಅಂಗೆ, ನೋಡಾನೆನ್ನುವ ವೈಭೋಗದ ಪಸಲು. ಕೊಟ್ಟಷ್ಟು ಕೊಡು ಬರ್ರಿ. ಅಂತ ಯಾವ ಮಂಡಿ ಮಾರ್ಕೆಟಿನಲ್ಲಿ ಅಂಗಲಾಚೀರು, ಯಾರುಹತ್ತಿರಕ್ಕೆ ಸುಳಿದಿರಲಿಲ್ಲ, ಈ ಮೂರುತಿಂಗಳ ಕೆಳಗೆ, ಬಾಂಕಿನಲ್ಲಿ ಎರಡುವರೆ ಲಕ್ಷದಷ್ಟು, ಲೋನು ತಗಂಡು.ಇನ್ನಿಲ್ಲದ ತಾಪತ್ರಯದೊಳಗೆ ಬೆಳೆದ ಬಾಳೆ ಗೊನೆಗಳನ್ನ,ಈ ಲಾಕ್ ಡೌನ್ ಪ್ರಯುಕ್ತ ಕೇಳೋರಿಲ್ಲದಂಗಾಗೆವರೆ. ಅಂತಾದ್ದರಲ್ಲಿ ಹಣ್ಣೆಲ್ಲ ಉದುರುದುರಿ ಮಣ್ಣಾಗ್ತಿರುವಾಗ. ಅವನು ತಾನೆ ಏನ್ ಮಾಡ್ತ್ತಾನೆ? ಕೈಗೆ ಬಂದತುತ್ತು ಬಾಯಿಗ್ ಬರ್ಲಿಲ್ಲವಲ್ಲ? ಈಗ್ ಲೋನು ತೀರಿಸುವ ಪಾಡೇನು?ಅವನ ಮನೆ ಮಂದಿಯ ಖರ್ಚುಗಳೇನು?ಅಂಬೊ ಅವನೊಳಗಿನ ಹೊಟ್ಟೆಯ ಉರಿಗೆ, ದಿಕ್ಕು ತೋಚದಂಗಾಗಿ,ಅವನೆ ಟ್ರಾಕ್ಟರಿಟ್ಟು ಬಾಳೆ ಗಿಡಗಳನ್ನೆಲ್ಲ ಹಾಳು ಮಾಡ್ತಾಅವನೆ. ಅವನೆಣುತಿ ಮಂಗಳಮ್ಮ, ಬಾಯಿ ಬಾಯಿ ಬಡುಕೊಂಡು, ತ್ವಾಟದಲ್ಲಿ ಉರಳಾಡ್ತಾ ಅವಳೆ, ಕೊಂಬೊವರು ಒಳಗವರೆ, ತಿಂಬವರು ಒಳಗವರೆ,ಬೆಳದವರ ಪಾಡೇನು?ಅಲ್ಲಿ ಅದ್ವಾನ ಆಗ್ತಿರೋದು ನೋಡುತಿದ್ರೆ. ನೋಡಿದವರ ಹೊಟ್ಟೆ ಬಗಬಗನಂತ ಉರುದೋಯಿತು.
ಇಂತ ಲಕ್ಷ ಲಕ್ಷದ ಲುಕ್ಸಾನುಗಳು, ಪರ್ಪಂಚದ ಮೂಲೆ ಮೂಲೇಲು. ಲೆಕ್ಕವಿಲ್ಲದಷ್ಟು ನಡೆದೋದ್ವು. ಜನ ದುಡ್ಡು ದುಗ್ಗಾಣಿಯಿಲ್ಲದೆ, ಹೊತ್ತೊತ್ತಿಗೆ ಊಟವು ಇಲ್ಲದೆ, ಏಸೊ ಸಂಸಾರಗಳು ಬೀದಿ ಪಾಲಾದವು ಅನ್ನೊದನ್ನ. ಅಮ್ಮಾಜಿಯ ನಡುಮನೆಯ ಮೂಲೆಲಿರುವ, ಟೀವಿವೊಳಗೆ ನೋಡುತ್ತಿದ್ದರೆ,ಅವಳಿಗು ಜೀವ ರೋಸಿ ಹೋಗೈತೆ,ಇದು ಇನ್ನೆಂತ ಕಾಯಿಲೆಯಿರ್ಬೇಕೊ ಭಗವಂತ? ಆಸ್ಪತ್ರೆಗಳಲ್ಲಿ ಜಾಗವಿಲ್ಲವಂತೆ, ಪೇಶೆಂಟುಗಳಿಗೆ ಹಾಸಿಗಗಳಿಲ್ಲವಂತೆ, ಗಾಳಿ ಅಂಬೋದು ಇಲ್ಲವೆ ಇಲ್ಲವಂತೆ. ಅಲದು ಅಲದು, ರಸ್ತೆ ಮ್ಯಾಲೆ ಜೀವ ಬಿಡತ್ತಾಅವರೆ. ಅಂಗೆ ಜೀವ ಬಿಟ್ಟವರನ್ನ ಸುಡಾಕೆ ಜಾಗವಿಲ್ಲವಂತೆ. ಟೀವಿಯವರು ತೋರ್ಸಿದ್ದೇ ತೋರುಸ್ತಾ ಅವರೆ, ಅವಳು ನೋಡಿದ್ದೆ ನೋಡ್ತಾ ಅವಳೆ.ಅಂಗಿದ್ಮ್ಯಾಲೆ ಲಕ್ಷ ಲಕ್ಷ ಸುರಿಯೊ ಆಸ್ಪತ್ರೇಲು ಸಾಯಂಗಿದ್ರೆ. ಇಲ್ಲಿಂದ ಅಲ್ಲೀತಕ ಹೋಗಿ ಒದ್ದಾಡೋದ್ಯಾಕೆ?ಸುಮ್ಮನಿಲ್ಲೆ ಇದ್ದು, ಇಲ್ಲೆ ಸಾಯಾನ್ ಬಿಡು. ಆಸ್ಪತ್ರೆವರಗು ಯಾಕ್ ಹೋಗ್ ಬೇಕು?ಯಾವತ್ತಿದ್ರು ಒಂದಿನ ಸಾಯ್ಬೇಕಲ್ಲ?ಅಮ್ಮಾಜಿ ದೇಶಕ್ಕೆ ಬಂದೊದಗಿರುವ, ಇಂತ ದೊಡ್ಡ ಕಾಯಿಲೆಯನ್ನ ಕುರಿತು. ಅವಳೆದುರಿಗೆ ಸಂಕಟಗಳನ್ನ, ವಿನಿಮಯ ಮಾಡಿಕೊಳ್ಳಲು. ಯಾರೆ ಸಿಕ್ಕಿದರು ಸಲೀಸಾಗಿ ಮಾತಾನಾಡುವ ಅಮ್ಮಾಜಿ. ಈಗೀಗ ಆ ಕಾಯಿಲೆಗೆ ಎದುರೋದನ್ನೆ ಕಮ್ಮಿ ಮಾಡಿಕೊಂಡಿದ್ದಾಳೆ. ಮತ್ತೆ ಕೊರೋನ ಬಂದಾಗ್ ನೋಡ್ಕಳಾನ ಬಿಡು? ಈಗ್ ಸದ್ಯಕ್ಕೆ ಕುಡಿಯಾಕ್ ನೀರಿಲ್ಲವಲ್ಲ? ಅವಳ ಮನೆಯಲ್ಲಿ ಕುಡಿಯಲು,ಮತ್ತು ಬಳಸಲು, ಇಲ್ಲದ ನೀರಿಗೆ ಪರದಾಡುತ್ತಿದ್ದಾಳೆ. ಕೊರೋನ ಕಾಯಿಲೆಗೆ ಎದರಿಕೊಂಡು. ಬೆಂಗಳೂರಿನಿಂದ ಬಂದಿರೊ ಮಗ. ಪ್ರಸನ್ನನೆಂಬೋನು. ಮನೆಯಲ್ಲಿ ಎಪ್ಪತ್ತಾರು ಸಲ ಸೋಪುಜ್ಜಿ ಉಜ್ಜಿ, ಕೈ ತೊಳೆಯುತ್ತಿರುವುದೆ, ಅವಳಲ್ಲಿ ಇನ್ನಿಲ್ಲದ ಆತಂಕ ಹುಟ್ಟಿಕೊಂಡೈತೆ,ಒಟ್ಟಿನಲ್ಲಿ ಅವಳು ಕಾಯಿಲೆಗೆ ಎದರುತ್ತಿಲ್ಲ, ಇಲ್ಲದ ನೀರಿಗೆ ಎದರುತ್ತಿದ್ದಾಳೆ.ಎಂಬುವುದು ಅವಳ ಮಗ ಪ್ರಸನ್ನನಿಗು ಗೊತ್ತು, ಆದರೆ ಸಂಶೋದನೆಯ ಪ್ರಕಾರ, ಈ ಖಾಯಿಲೆ ಕೈಯ್ಯಲ್ಲೆ ಜಾಸ್ತಿ ಇರುತ್ತದೆಯೆಂದು. ಅವರವರ ಕೈಗಳನ್ನು, ಆಗಾಗ್ಗೆ ಸೋಪಿನಲ್ಲಿ ತೊಳಿಯುತ್ತಿರಬೇಕೆಂದು. ಆಶಾಕಾರ್ಯಕರ್ತೆಯರಿಂದ, ಟೀವಿ ಮಾದ್ಯಮಗಳಿಂದ, ಆರೋಗ್ಯ ಕಾರ್ಯಕರ್ತರಿಂದ, ಪ್ರಸಾರವಾದ ಹಿನ್ನಲೆಯಲ್ಲಿ, ಇವನು ನಾಜೋಕಿನುಡುಗ, ಆಗಾಗ ಕೈ ತೊಳೆಯುತ್ತಲೆ ಇದ್ದಾನೆ.ಲೇ ನಮಗ್ಯಾರಿಗು ಇಲ್ಲದಿರೊ ದೊಡ್ರೋಗ. ನಿನ್ನ ಕೈಲೆ ಕಚ್ಚಿಕಂಡೈತೇನಲ?ಯಾಕೊ ನೀರೆಲ್ಲ ಇಂಗ್ ಸುರಿತಿದ್ದೀಯಾ?ಎಂದು ಕೆಂಡಾಮಂಡಲದ, ಕಿಡಿ ರವಳಿಸಿಕೊಳ್ಳುತ್ತಲೆ ಇರುವ. ಅಮ್ಮಾಜಿಯ ಮಾತಿಗೆ. ಅಮ್ಮೋ ಈ ಕೊರೋನ್ವೆಂಬ ಕಾಯಿಲೆ, ಜಾಸ್ತಿ ಕೈಯ್ಯಲ್ಲೆ ಇರ್ತೈತಂತೆ ಕಣಮ್ಮ. ಇಂಗೆ ಕೈ ತೊಳಿತಾ ಇದ್ರೆ, ಕಾಟ ಕೊಡಲ್ಲವಂತೆ ಕಣಮ್ಮ. ಅಂದವನ ಮಾತನ್ನು, ಅವಳು ಯಾವತ್ತಿಗು ನಂಬುವ ಸ್ಥಿತಿಯಲ್ಲಿಲ್ಲದ ಅಮ್ಮಾಜಿ. ರಾತ್ರಿ ಹೊಲೆಯ ಮ್ಯಾಲೆ, ಕಮ್ಮಗೆ ಕುದ್ದ, ಕೋಲು ಬಾಯಾಗಳ ಬಿಸಿ ಮುದ್ದೆಯನ್ನ. ಕಾಳಿನೆಸರಲ್ಲಿ ಉಂಡು, ತೋರ್ಸಿದ್ದೇ ತೋರುಸೊ ಟೀವಿನ ನೋಡುತ್ತಿದ್ದರೆ. ಅದೇ ಅರ್ದ ಕಾಯಿಲೆಯೆಂದು.ಹಟ್ಟಿ ಬಯಲಲ್ಲಿ ಜಮ್ಮಿನ ಚಾಪೆಯಾಸಿ. ತಲೆಯನ್ನ ದಿಂಬಿಗಿಟ್ಟವಳ ಕಣ್ಣುಗಳು, ಮೋಡದೊಟ್ಟೆಯನ್ನ ಸೀಳಿ ಸೀಳಿ ಉರುಳಾಡುತ್ತಿದ್ದ. ನಿಗಿ ನಿಗಿ ಚಂದ್ರಮ್ಮುನ್ನ ನೋಡತೊಡಗಿದವು. ಹಾಲು ಚೆಲ್ಲಿದ ಆನಂದದ ಬೆಳದಿಂಗಳಲ್ಲಿ. ಎದುರು ಮನೆ ಗಂಗಮ್ಮಣ್ಣಿ ಬಂದು, ಚಾಪೆ ಮ್ಯಾಲೆ ಕುಂತು ಕೊಂಡಳು. ಯಾಕಕ ಇನ್ನು ಮಲಗಲಿಲ್ಲವೆ? ಎಂದ ಅಮ್ಮಾಜಿಯ ಪ್ರಶ್ನೆಗೆ, ಇಲ್ಲುಡುಗಿ ನಿದ್ದೆ ಅಂಬೋದು, ಏಸೊ ರಾತ್ರಿಗಳಿಂದ ಕಣ್ಣಿಗೆ ಕಚ್ಚಿ ಕೊಂಬುತ್ತಿಲ್ಲ.ಎಂದು ಗಂಗಮ್ಮಣ್ಣಿಯ ಮಗಳ ಬದುಕು ಅತಂತ್ರವಾಗಿದ್ದು. ಇದ್ಯಾವುದೊ ಕೊರೋನ್ವೆಂಬೋದು ವಕ್ಕರಿಸಿ, ದಿಕ್ಕಾಪಾಲಾಯಿತೆಂದ ಕತೆಯೊಂದನ್ನ. ಅವಳೆದೆಯ ಕಣ್ಣೀರು ತೊಟ್ಟಿಕ್ಕಿಸಿಕೊಂಡು. ಹೇಳ್ತಾ ಕುಂತುಕೊಂಡಳು. ಒಂದೆ ಕೊಂಬೆಮ್ಯಾಲೆ, ಒಂದು ಗಳಿಗೆಯು ಅಗಲದಂತೆ, ಆಡುತ್ತಿದ್ದ ಅರಗಿಳಿಯಂಗಿದ್ದ, ಗಂಡ ಹೆಣುತಿನ, ನೋಡಾಕೊಂದು ಆನಂದ್ವಾಗುತ್ತಿತ್ತು. ಹೋದ್ಸಲ ಮಗಳು ಯುಗಾದಿ ಹಬ್ಬಕ್ಕೆಂದು ಬಂದು. ಲಾಕ್ಡೌನಿಗೆ ಸಿಗಾಕ್ಕೆಂಡು ಇಲ್ಲೆ ನಿಂತು ಬುಟ್ಟಳು, ದೇಶಕ್ಕೆ ಇದೆಂತಾ ಲಾಕ್ ಡೌನಮ್ಮಣ್ಣಿ? ಒಳ್ಳೆ ರಾವು ಬಡದಂಗಾಗೋಯಿತಲ್ಲೇ. ಭೂಮಿ ಮ್ಯಾಲಿನ ಜನರ ಪಾಡು ಪಾಡಾಯಿತಲ್ಲುಡುಗಿ, ಇವಳು ನನ್ನ ಮಗಳೆಂಬೋಳು ಬಂದು, ಇಲ್ಲೆ ಸೇರಿಕೊಂಡಳು. ಅವನು ಅಳಿಯನೆಂಬೋನು ಬೆಂಗಳೂರು ಬಿಟ್ಟು ಬರಲೇಇಲ್ಲ. ಪೋನ್ ಮಾಡ್ದಾಗ್ಲೆಲ್ಲ, ಬರಂಗಿಲ್ಲಮ್ಮ ಇಲ್ಲಿ ಪೋಲೀಸಿನವರು ಬಿಡತಿಲ್ಲ. ಎಂದು ಕೇಳಿದಾಗೆಲ್ಲ ಸಲೀಸಾಗಿ ಹೇಳ್ತಿದ್ದ ಕಳ್ಳನನ್ಮಗ. ಅಲ್ಲೆ ಬೆಂಗಳೂರಿನಲ್ಲಿ, ಯಾವುದೊ ಹಿಂದಿ ಹುಡುಗೀನೊಬ್ಬಳನ್ನ ತಗಲಾಕ್ಕೆಂಡು. ಈಗ ನನಗೆ ಹೆಣುತಿ ಬ್ಯಾಡ ಅಂತಾ ಕುಂತವನಮ್ಮಯ್ಯ. ಎಂದವಳ ಗಂಗಮ್ಮಣ್ಣಿಯ ಉಸಿರು ಬಾರವಾಗಿ, ಬಾಯಿಂದ ಈಚೆ ನುಗ್ಗುತು. ಇಂಗೆ ಮಗಳ ಬದುಕು ನಡು ನೀರಲ್ಲಿ ನಿಂತಂಗಾಯಿತಲ್ಲಮ್ಮಣ್ಣಿ? ಆ ಹುಡುಗಿ ಈಗ ಯಾವ್ ಕೆರೆ ಬಾವಿ ನೋಡ್ಕಾಬೇಕು? ಅನ್ನಂಗಾಗೈತೆ, ಈಗ್ ನೋಡೀರೆ ನಮ್ಮುಡುಗಿ ನನಗೆ ನನ್ನ ಗಂಡ ಬೇಕೆ ಬೇಕಂತ. ಹಗಲು ರಾತ್ರಿ ಅಳುತಾ ಕುಂತವಳೆ, ಅಂತವಳನ್ನ ಈ ಮೂರು ತಿಂಗಳಿಂದ, ಚಿನ್ನಾಪುರದ ಶನಿಮಾದೇವನಿಗೆ ಸುತ್ತಿಸಿ ಬಂದ್ವಿ, ಇನ್ನು ಎರಡು ವಾರಕ್ಕೆ, ನಿನ್ನ ಗಂಡುನ್ನ ಕರಸ್ತ್ತೀನಿ ಬಾಲಕಿ, ಅಂತ ಹೇಳಿತ್ತು. ಅಂತ ಸತ್ಯವಾದ ದೇವರ ಬಾಗಲನ್ನೆ. ಹಿಂದು ಮುಂದು ನೋಡ್ದಂಗೆ ಮುಚ್ಚಿಸಿ ಬಿಟ್ರಲ್ಲ? ಯಾವತ್ತು ಅಜ್ಜಿ ಮುತ್ತಜ್ಜಿ ಕಾಲ್ದಲ್ಲು ಕಾಣದ. ಇಂತ ದಿಕ್ಕು ದಿಕ್ಕನ್ನೆ ಕೆಡಿಸುತ್ತಿರುವ.ವಿಚಿತ್ರವನ್ನ ಕಂಡಂಗಾಯಿತಲ್ಲಮ್ಮಣ್ಣಿ. ಆರತಿಗಳಿಲ್ಲ, ಹರಕೆ ಪೂಜೆಗಳಿಲ್ಲ, ಜಾತ್ರೆ ಜಾಗಟೆಗಳಿಲ್ಲ, ಎಂದು ಕಂಡರಿಯದ. ಗುಡಿ ಗುಂಡಾಂತರಗಳನ್ನೆ ಮುಚ್ಚಿಸ್ಬುಟ್ರಲ್ಲ. ಭೂಮಿಮ್ಯಾಲೆ ಎಂತೆಂತ ಭೂಪರವರಮ್ಮಣ್ಣಿ? ಎಂದ ಗಂಗಮ್ಮಳ ಮಾತಿಗೆ. ಇರ್ಲಿ ಬಿಡಕ, ಇಷ್ಟು ದಿನ ಗುಡಿಯ ಪೂಜಾರಪ್ಪುಗಳೇನು ಕಮ್ಮಿಯಿರಲಿಲ್ಲ, ನೂರುರೂಪಾಯಿ ಕೊಟ್ಟೋರಿಗೆ ನೇರವಾದ ದರ್ಶನ, ಸಾವಿರ ರೂಪಾಪಾಯಿ ಕೊಟ್ಟೋರಿಗೆ ಸರಿಯಾದ ಪೂಜೆ, ಕಾರಲ್ಲಿಳಿದು ಬಂದೋರಿಗೆ, ಗರ್ಭ ಗುಡಿಯಲ್ಲಿ ಪೂಜೆ ಮಾಡಿಕೊಡೋರು. ನಮ್ಮಂತ ಹಳೆ ಸೀರೇರೋದ್ರೆ, ಅಲ್ಲೆ ಮಂಗಳಾರತಿ ಐತೆ ತಗಳ್ರಮ್ಮ ಅನ್ನೋವರು. ಅಂತ ಬೇರಿಂಗಡದ ಜನವಿರೋದಿಕ್ಕೆ ಇರ್ಬೇಕು. ಇಂತ ತಬ್ಬಲಿನನ್ಮಗನ ಕಾಯಿಲೆ ಬಂದಿರೋದು. ನೋಡೆಂಗೈತೆ?ಈಗ ಬಗಲು ಮುಚ್ಚಿಸಿರೋವರು ಪಾಠ ಕಲಿಬೇÀಕು. ಮುಚ್ಚಿರೋವರು ಪಾಠ ಕಲೀಬೇಕು ಕಣಕ, ಎಂದು ಮಾತಾಡತಆಡತ, ಅಮ್ಮಾಜಿ ಎರಡು ಕಟವಾಯಿಗಳನ್ನು ಹಿಗ್ಗಲಿಸಿಕೊಂಡು ಆಕಳಿಸತೊಡಗಿದಳು. ಅಂತ ಆಕಳಿಕೆಯನ್ನ ಅರ್ಥ ಮಾಡಿಕೊಂಡ ಗಂಗಮ್ಮಣ್ಣಿ. ಅಮ್ಮಯ್ಯ ನಾನಿನ್ನು ಉಂಡೆ ಇಲ್ಲ, ನೀನು ಮಲಗಂಗಿದ್ರೆ ಮಲಗಮ್ಮಯ್ಯ. ಎಂದು ಎದ್ದು ಹೊರಟು ಹೋದಳು, ಇವಳಿಗು ಕೂಡ ನಿಗಿ ನಿಗಿ ಚಂದ್ರನನ್ನು. ನೋಡಲಾರದ ಕಣ್ಣು, ಜೋಲುಗರಿಯ ತೊಡಗಿದವು.
ಶುರುವಾಯಿತೇನೊ ನಿನ್ನ ಹಳೆ ಚಾಳಿ? ಹೊತ್ತುಟ್ಟಾಕಿಲ್ಲ ಕೈತೊಳಿತಿದ್ದೀಂiÀiಲ್ಲೊ, ನಮಗಿಲ್ಲಿ ಸಾಯಾರಿಗೆ ಬಿಡಾನ ಅಂದ್ರು, ಒಂದು ಸೊನೆ ನೀರಿಲ್ಲವಲ್ಲೊ? ನಿನಗೆ ಆಪತ್ತು ಬಂದು ಚಾಪೇಲಿ ಸುತ್ತುಕೊಂಡೋಗ. ಎಂದು ಮಗ ಪ್ರಸನ್ನನಿಗೆ ಹಿಡಿ ಶಾಪ ಹಾಕಿಕೊಂಡು, ಹಿಂಚಿಂಚೆ ಕಣ್ಣಿಗ್ಗಲಿಸುತ್ತಿರುವ ಸೂರ್ಯ ದೇವನ ಮುಂದೆ. ಕಸ ಕಡ್ಡಿ, ಮುಸುರೆ, ಮೈಲಿಗೆಯೆಂದು, ಒದ್ದಾಡುತ್ತಿದ್ದ ಅಮ್ಮಾಜಿಗೆ, ಈಗ ದೇಶಕ್ಕೊದಗಿರುವ ಆಪತ್ತಿಗಿಂತ. ಅವಳ ಮನೆಯಲ್ಲಿ, ಹೊತ್ತು ಗೊತ್ತಿಲ್ಲದೆ ಖರ್ಚಾಗುತ್ತಿರುವ, ನೀರಿನದೆ ಇನ್ನಿಲ್ಲದ ಸಂಕಟವಾಗಿ ಕಾಡುತ್ತಲೆ ಇದೆ. ಅಂಗೆ ಅದೇನೀರಿನ ಗ್ಯಾನದಲ್ಲಿ, ಬಿಸಿ ಬಿಸಿ ಕಾಫಿಯನ್ನು ಲೋಟಗಳಿಗೆ ಬಗ್ಗಿಸುತ್ತಿದ್ದಳು. ಯಕ ಟ್ಯಾಂಕಿಲಿ ನೀರು ಬರ್ತ್ತಾ ಅವ್ವಂತೆ, ಎಂದು ರಸ್ತೆಯಲ್ಲಿ ಭದ್ರಣ್ಣೋರುಡುಗಿ,ಪುಷ್ಪ ಅಂಬೋಳು ಕೂಗಿದ ಮಾತಿಗೆ. ಅಮ್ಮಾಜಿ ತುಟಿಗಿಟ್ಟುಕೊಂಡಿದ್ದ ಕಾಪಿ ಕಪ್ಪು ಬಿಟ್ಟು,ಊರು ಮುಂದೆಯಿದ್ದ ಟ್ಯಾಂಕಿಯತ್ತಿರ ಸರ ಸರನೆ ಓಡಿ ಹೋದಳು.
ಊರಲ್ಲಿ ಈಗೀಗ ಮನೆ ಮನೆಯಲ್ಲು, ನೆಗಡೆ ಕೆಮ್ಮು ಜ್ವರವೆಂದು ನಳ್ಳುತ್ತಿದ್ದಾರೆ. ಆದರೆ ಯಾರಿಗ್ಯಾರು ಎಲ್ಲು ಹೊರಗಡೆ ಉಸಿರು ಬಿಡುತ್ತಿಲ್ಲ. ಯಾರ್ ಮುಂದೆ ಯಾರು ನನಗೆ ಉಷಾರಿಲ್ಲವೆಂದು, ಸಲೀಸಾಗಿ ಹೇಳಿ ಕೊಳ್ಳುತ್ತಿಲ್ಲ,ಇದೊಂದು ತರದ ಅನುಮಾನ, ಮತ್ತು ಅವಮಾನದ ಕಾಯಿಲೆ, ಹೋದ್ ಸಲ ಕೊರೋನ ಬಂದವರ ಮನೆಗಳನ್ನೆಲ್ಲ. ಸೀಲ್ ಡೌನ್ ಮಾಡಿದ್ದು. ಊರಿಂದೂರಿಗೆ ಬಂದವರನ್ನ ನಿರ್ದಾಕ್ಷಿಣ್ಯವಾಗಿ ಓಡಿಸಿದ್ದು ತಿಳುಕೊಂಡರೆ. ಇಂತ ತಬ್ಬಲಿ ನನ್ ಮಗನ ಕಾಯಿಲೆಯ ಬಗ್ಗೆ. ಯಾರು ಘಂಟಾ ಘೋಷ್ವಾಗಿ ಹೇಳಿಕೊಳ್ಳುತ್ತಿಲ್ಲ. ಮುದ್ದೇನಳ್ಳಿಯಿಂದ ಬರುತ್ತಿದ್ದ ಆರ್,ಎಂ,ಪಿ, ಡಾಕ್ಟ್ರತ್ತರ ತೋರಿಸಿಕೊಂಡು ಒಳೊಳಗೆ ನೀಸೂರಾಗ್ತ್ತಾ ಅವರೆ, ಅಂಗೇನಾರ ದಾಟಿ ತಾಲ್ಲೋಕು ಆಸ್ಪತ್ರೆಗೆ ಹೋದರೆ, ಕೋರೋನವೆಂದು ಕೂಡಾಕ್ಬಿಡತ್ತಾರೆ. ಸತ್ತರೆ ಸಾಯ್ಬಹುದು, ಇದ್ದರೆ ಇರ್ಬಹುದು, ಅಂಬಂಗಾಗೆ ಅಲ್ಲವೆ? ಅದೆಲ್ಲೊ ಚಾಮರಾಜ ನಗರದಲ್ಲಿ,ಅದೆಂತದ್ದೊ ಅಮ್ಲಜನಕವೆಂಬ ಗಾಳಿಯಿಲ್ಲದೆ. ಬೇಕಾದಷ್ಟು ಜನ ಪ್ರಾಣ ಕಳುಕೊಂಡಿದ್ದು. ಎಂದು ರಾತ್ರಿ ಟಿ, ವಿ ನೋಡಿದವರ ಬಾಯಲ್ಲಿ.ಬಿಸಿ ಬಿಸಿಯಾಗಿ ಚರ್ಚೆಯಾಗುತ್ತಿತ್ತು. ಯಾರು ಗೌರ್ಮೆಂಟು ಆಸ್ಪತ್ರೇನ, ತಿಳುಕೊಳ್ಳೋವರೆ ಇಲ್ಲದಂಗಾದ್ರು. ಆವತ್ತು ಬೆಳಗ್ಗೆ ಎಂಟು ಮೂವತ್ತರ ವೇಳೆಯಲ್ಲಿ, ಅದೇ ಸಣ್ಣೀರನ ಹೆಂಡತಿ ಸೀನ್ತಾ ಅವಳೆಂದು. ಸಣ್ಣೀರ ಆರ್, ಎಂ, ಪಿ, ಡಾಕ್ಟ್ರು ಸುರೇಶಪ್ಪÀ ಎಂಬೋರಿಗೆ. ಪೋನ್ ಮಾಡಿ ಕರೆಸಿಕೊಂಡಿದ್ದ, ಇನ್ನೇನು ಡಾಕ್ಟ್ರು. ಅವರ ಮನೆ ಮುಂದೆ ಗಾಡಿ ಇಳಿಯೊವೊತ್ತಿಗೆ. ಎಲ್ಲಿದ್ಲೊ ಏನೊ? ಆಶ ಕಾರ್ಯಕರ್ತೆ ನಾಗಮ್ಮ ಅಂಬೋಳು. ಅಣೊ ನೀನಿಂಗೆ ಊರಾಕ್ ಬಂದು ಟ್ರೀಟ್ಮೆಂಟು ಕೊಡಂಗಿಲ್ಲಣೊ? ನೀನಿಂಗೆ ಬರ್ತಾಇದ್ರೆ, ನಾನು ಕಂಪ್ಲೇಂಡ್ ಮಾಡತ್ತೀನಿ, ಎಂದು ದಡ ಬಡಾಯಿಸಿ ಮಾತಾಡ ತೊಡಗಿದಳು. ಸಣ್ಣೀರನಿಗೆ ಮೈಮ್ಯಾಲೆ ಬೆಂಕಿ ಬಿದ್ದಂಗಾಯಿತು.ಓಯ್ ಅಮ್ಮಣ್ಣಿ ಇದ್ರೆ ನಾವಿರ್ತ್ತೀವಿ, ಸತ್ತರೆ ನಾವುಸಾಯ್ತ್ತೀವಿ, ಅದು ನಮ್ಮಿಷ್ಟ,ನಾವೆ ಕರ್ಸಿರೋದು. ನೀನ್ಯಾರಿಗೆ ಕಂಪ್ಲೇಂಡ್ ಕೊಡುತ್ತೀಯಾ. ಕೊಡೋಗು ನೋಡಾನ. ಎಂದು ಎತ್ತರದ ದ್ವನಿಯಲ್ಲಿ ಅಬ್ಬರಿಸುತ್ತಿದ್ದ. ಸಣ್ಣೀರನ ಕೂಗಾಟವನ್ನು ಕೇಳಿಸಿಕೊಂಡ. ಊರಿನ ಒಂದಷ್ಟು ಜನರು ಅಲ್ಲಿಗೆ ಜಮಾಯಿಸಿಬಿಟ್ರು. ಅಮ್ಮಣ್ಣಿ ನಿಮ್ಮಾಸ್ಪತ್ರೆಯವರಿಗೇಳೋಗು. ದಿನಾ ಊರಾಕೆ ಗೌರ್ಮೆಂಟು ಡಾಕ್ಟ್ರನ್ನ ಕಳಸ್ಲಿ.ಅಂದ ದೊಡ್ಡೆಂಕಟಪ್ಪನ ಮಾತಿಗೆ, ನಿಜಾ ನಿಜಾ ಅಂತ ಕಾನೂನು ಕೇಳೊವರು.ನಿತ್ಯ ನಮ್ಮೂರಿಗೆ ನಿಮ್ಮ ಗೌರ್ಮೆಂಟ್ ಡಾಕ್ಟ್ರು ಬಂದೋಗ್ಲಿ. ಆಗ ನಾವು ಈ ಆರ್, ಎಂ, ಪಿ ಡಾಕ್ಟ್ರನ್ನ ವಾಪಸ್ ಕಳಸ್ತ್ತೀವಿ, ಎಂದು ಎಲ್ಲರು ಒಗ್ಗಟ್ಟಾಗಿ ದಬಾಯಿಸಿಬಿಟ್ಟರು. ಆಶಾಕಾರ್ಯಕರ್ತೆನಾಗಮ್ಮ ಹೇಳುತ್ತಿದ್ದ. ಅವಳ ಎದೆಯಲ್ಲಿದ್ದ ರೂಲ್ಸೆಂಬ ಮರು ಮಾತುಗಳೆಲ್ಲ, ಅವಳ ಗುಲಾಬಿ ಬಣ್ಣದ ಸೀರೆಯನ್ನ, ಗಸ ಗಸನೆ ತೀಡುತ್ತಿದ್ದ ಗಾಳಿಯಲ್ಲಿ ತೇಲಿ ಹೋದವು. ಈ ಜಗಳದ ರಸ್ತೆಯಿಂದ. ವಾಪಸ್ಸು ಬಂದ ಅಮ್ಮಾಜಿ, ಇಷ್ಟಿಷ್ಟೆ ಎಳೆ ಹುಡುಗರ ಉಚ್ಚೆಬಂದಂಗೆ ಬರುತ್ತಿರುವ ನೀರಿಗಾಗಿ. ನಿಂತು ನಿಂತು ಕಾಲು ನೋಯಿಸಿಕೊಳ್ಳುತ್ತಿದ್ದಳು.
ಅವನು ಬೆಟ್ಟದ ಸೀನನೆಂಬೋನು. ಸಣ್ಣುಡುಗನಿಂದ ಯಾರತ್ತಿರವು, ಒಂದು ಒದೆ ತಿಂದ ಹುಡುಗನಲ್ಲ. ಮಿಡ್ಲಿಸ್ಕೂಲಿನಲ್ಲಿ ನೆಟ್ಟಗೆ ಪಾಠ ಬರೆಯದಿದ್ದಕ್ಕೆ. ಒಂದು ಒದೆಕೊಟ್ಟಿದ್ದ ಗಂಗಾದರಯ್ಯ ಮೇಷ್ಟ್ರುನ್ನೆ. ತಿರುಗಿಸಿ ಕಪಾಳಕ್ಕೆ ಒಡೆದಿದ್ದ ಮಿಂಡ್ರಿನನ್ಮಗ, ಅವನಿಗೆ ಹೊಡೆತದ ಬೆಲೆ ಗೊತ್ತಿರಲಿಲ್ಲ,ಈಗ ಅವನ ಮನೇಲು, ತಪ್ಪಿ ತಾಕಿದ್ದಕ್ಕೆ ಯಾವಾಗಲು ಹೆಂಡತೀನ ಒಡೆಯುತ್ತಿದ್ದ ಭೂಪನನ್ನ. ನಡು ರಸ್ತೇಲಿ ಸುಮ್ಮ ಸುಮ್ಮನೆ ಓಡಾಡತಿರೋದು ಕಂಡು. ಈಗ್ ಪೋಲಿಸಿನವರು ಒದೆ ಕೊಟ್ಟವರಂತೆ, ಅವನ ಮೈ ನೋವಿಗೆ ಹೆಂಡತಿ ಕಾವುಕೊಡುತ್ತ ಕುಂತವಳಂತೆ.ಭದ್ರಣ್ಣನ ಅಂಗಡಿ ಮುಂದೆ ಕುಂತಿದ್ದ.ಮಯ್ಯೂರಿ ಎಂಬೋನ ಬಾಯಲ್ಲಿ, ಬೀಡಿ ಹೊಗೆಯ ಜೊತೆಮಾತು ಈಚೆ ಬಂತು.
ನೆನ್ನೆಯಿಂದ ಈರ್ನಾಗ ಮಾಡೊ ಕೆಲಸಾಬಿಟ್ಟು. ಉಂಬೊ ಹಿಟ್ಟು ಬಿಟ್ಟು, ಡಿ, ಸಿ, ಸಿ ಬ್ಯಾಂಕಿನತ್ತಿರ ಕಾವಲು ಕಾಯುತ್ತಿದ್ದಾನೆ.ಇದ್ಯಾಕಲ ಹುಡುಗ? ನೆನ್ನೆಯಿಂದ ಟೌನಿಗು ಮನಿಗು. ಎಪ್ಪತ್ತಾರು ಸಲ, ನಾಯಲದಂಗೆ ಅಲಿತಿದ್ದೀಯ? ಸರೋಜಮ್ಮ ರಸ್ತೇಲಿ ಹೋಗುತ್ತಿದ್ದವನನ್ನು ಕರೆದು ಕೇಳಿದಳು.ಹಾಲಿನ ಬಟವಾಡೆ ದುಡ್ಡು ತರ್ಬ್ಯಾಡವೇನಕ?ಅಲ್ಲಿ ಬ್ಯಾಂಕಿನೊಳಗೆ ಜನವೊ ಜನ ಕಣಕ್ಕೊ. ಮಾರು ಮೈಲಿ ಕ್ಯೂ ನಿಲ್ಲಿಸೆವರೆ, ಹಿಟ್ಟು ನೀರು ಬಿಟ್ಟು, ಬೆಳಿಗ್ಗೆ ಆರು ಗಂಟೆಗೋದವನು.ಇವಾಗಲೆ ಬರ್ತ್ತಾ ಇರೋದು.ಇನ್ನು ಜನ ಎಂತೆಂತ ಪಾಡು ಪಡ್ಬೇಕೊ ಏನೊ? ಅಂಗೇಳ್ತಿದ್ದ ಈರ್ ನಾಗ. ನೆಟ್ಟಗೆ ಗಾಡಿ ನಿಲ್ಲಸದಂಗೆ ಬರ್ರನೆ ಹೋಗೆ ಬುಟ್ಟ,
ಆವತ್ತೆ ನಡು ಮಧ್ಯಾನ, ರವ ರವನೆ ರಾಚುತಿದ್ದ ಬಿಸಿಲಿನ ನಡುವೆ. ಕಡ್ಲೆ ಕಾಯಿ ರಾಶಿಯ ಮುಂದೆ, ಲಟ ಲಟನೆಂದು ಪೈ ಪೋಟಿಲಿ ಸುಲಿಯುತ್ತಿದ್ದವರೆಲ್ಲ, ಕುಯೊ ಕುಯನೆಂದು ಬಡುಕೊಂಡು ಬಂದ ಆಂಬುಲೆನ್ಸಿನ. ಶಬ್ದದ ಕಡೆ ಓಡ ತೊಡಗಿದರು. ಏನಂತೆ? ಏನಂತೆ? ಕೇಳಿದವರ ಪ್ರಶ್ನೆಗಳಿಗೆ,ಅಯ್ಯೊ ಕುನ್ನಾಲಿ ನಾಗ ಹೋಗ್ಬುಟ್ನಂತೆ, ಯವ್ವ ಕಲ್ಲಂತ ಆಳು, ಅಂತೋನಿಗೆ ಇಂತಾ ಸಾವು ಬಂತೆ? ಶಿವನೆ.ಜನಾದ್ ಜನವೆಲ್ಲ ರವ ರವನೆ ನೊಂದು ಬಿಟ್ಟರು.
ಅವನೆಣುತಿ ಬಿಮ್ಮನೆಸಿ ಬ್ಯಾರೆ, ಪಿಳ್ಳೆ ಕೋಳಿಯಂತ, ಎರಡು ಸಣ್ಣುಡುಗರನ್ನಬಿಟ್ಟು ಹೊರಟೋದ್ನೆ? ಊರು ಇಂತ ಅಕಟಕಟವೆಂಬ ಸುದ್ದಿಗಾಗಿ ತಲ್ಲಣಗೊಂಡಿತು. ವಾನ ಸಂಸಾರಮು ದಿಕ್ಕು ಲ್ಯಾಕ ಪಾಡು ಪಾಯಿನೆ? ಹಿಟ್ಟಿಟ್ಟಿಗು ಬರುತ್ತಿದ್ದ ಹಟ್ಟಿ ಗುಡುವಯ್ಯನಿಗು, ಹೊಟ್ಟೆ ಬಗ ಬಗನೆ ಉರಿಯಿತು. ಹೋಗುವಾಗ ಸಲೀಸಾಗೆ ಹೋದ, ಬರುವಾಗ ಸಾವಾಗಿ ಬಂದ, ಇಡಿಊರಿಗೂರೆ ಸೂತಕದ ಸಂಕಟಕ್ಕೆ ತುತ್ತಾಯಿತು. ಇಂತಾ ಮಾಯದಾ ಕಾಯಿಲೆಯಿಂದ, ಅವನನ್ನ ಯಾರು ಮುಟ್ಟಲಿಲ್ಲ, ಒಂದಿಡಿ ಮಣ್ಣಾಕ್ಲಿಲ್ಲ, ಇಷ್ಟಲ್ಲದೆ ಅವನ ಮನೆಹತ್ತಿರಕ್ಕೆ ಯಾರು ಸುಳಿಯದಾದರು. ಅವನೆಂಡತಿ ಮಕ್ಕಳನ್ನ, ಇನ್ನಿಲ್ಲದ ಅನುಮಾನವಾಗಿ ನೋಡ ತೊಡಗಿದರು.ಅದೇ ರಾತ್ರಿ ಅಮ್ಮಾಜಿಗೆ ನಿದ್ದೆಯೆಂಬೋದು ಕಣ್ಣಿಗೆ ಕಚ್ಚಿಕೊಳಲಿಲ್ಲ. ಮೆಲ್ಲಗೆ ಸರೋಜಿಯ ಜೋಪಡಿಕೆಳಕ್ಕೋಗಿ ಕುಂತುಕೊಂಡಳು, ಅವಳಾತುಮದಲ್ಲಿದ್ದ ದುಃಖದ ಕಟ್ಟೆಯೊಂದು ದಾರಳ್ವಾಗಿ ಹೊಡಕಂತು. ನೋಡಕ್ಕಯ್ಯ ಕುನ್ನಾಲಿನಾಗ, ಬಂದು ಬಳಗ. ನನ್ನವರು ತಮ್ಮವರು ಅಂಬೋರಿಲ್ಲದೆ. ಆಂಬುಲೆನ್ಸನಿಂದ ಇಳಿಸಿದ ಅರ್ದ ಗಂಟೆಯೊತ್ತಿಗೆ, ಮಣ್ಣು ಪಾಲಾದ, ಈಗ್ಗೆ ಎರೆಡೊರುಷದ ಕೆಳಗೆ, ಕೆಮ್ಮು ಗೂರಲಾಗಿ, ಕಣ್ಣು ಮುಚ್ಚಿಕೊಂಡ ನಮ್ಮಪ್ಪುನ್ನ, ಮಣ್ಣು ಮಾಡಬೇಕಾದ್ರೆ, ನಮ್ಮಪ್ಪನಿಗೆ ಸರಿಯಾದ ಮೋಕ್ಷಕ್ಕಾಗಿ. ಗಂಡುಮಕ್ಕಳೆ ಶಾಸ್ತ್ರ ಮಾಡ್ಬೇಕಂದ್ರು. ನಾವು ಅಪ್ಪನಿಗೆ ಹುಟ್ಟಿದ್ದು ಬರಿ ಮೂರು ಹೆಣ್ಣು ಮಕ್ಕಳು. ಶಾಸ್ತ್ರ ಮಾಡಂಗಿಲ್ಲವಲ್ಲ? ನಮ್ಮ ಚಿಗಪ್ಪನ ಮಗನೊಬ್ಬ, ಅರ್ದ ಎಕರೆ ಹೊಲ ಪಾಲು ಕೊಡಾತಂಕ. ನಾನು ತಲಗೊರವಿ ಇಕ್ಕಲ್ಲ, ಎಂದು ಮೊಂಡುಬಿದ್ದು ಕುಂತು ಬುಟ್ಟ. ಇದಕ್ಕೆ ನಮ್ಮ ಗಂಡಂದಿರು ಒಪ್ಪಿಕೊಳ್ಳದೆ,ಒದ್ದಾಡ್ ಬಿಟ್ರು, ಅಂಗು ಇಂಗುಅವರನ್ನ ಒಪ್ಪಿಸಿ, ನ್ಯಾಯ ತೀರ್ಮಾನಮಾಡಿ. ಅವನಿಗೆ ಅರ್ದ ಎಕರೆ ಹೊಲವನ್ನ, ಬಿಟ್ಟು ಕೊಡತ್ತೀವಿ, ಎಂದು ಒಪ್ಪಿದ ಮ್ಯಾಲೆ. ಮಧ್ಯಾನ ಹನ್ನೊಂದು ಗಂಟೆಗೆ ಮಣ್ಣಾಗ್ಬೇಕಿದ್ದ ನಮ್ಮಪ್ಪುನ್ನ, ಇನ್ನೇನು ಕಣ್ಣಾಗಿನ ಬೆಳಕು, ಕರಗಿ ಹೋಗುತೈತೆ ಅಂಬುವ ಸಂಜೇಲಿ. ಮಣ್ಣು ಮುಚ್ಚೀವಿ ಕಣಕ್ಕ, ಆವತ್ತು ಸಾವಿಗಂತಲೆ ಶಾಸ್ತ್ರ ಪುರಾಣ್ವನ್ನ ಬರದಿಟ್ಟವರು, ಇವತ್ತು ಕುಟುಂಬದವರಿಗೆ ಕೊಡದಂಗೆ. ಜೆ, ಸಿ, ಪಿ,ಲಿ ತೋಡಿದ ಗುಂಡಿಗೆ. ಸಾಲು ಸಾಲಿಡಿದು ಅವರೆ ಮಣ್ಣು ನೂಕುತಾ ಅವರಲ್ಲ, ಮತ್ತೆ ಈ ಶಾಸ್ತ್ರ ಪುರಾಣ ಬರದವರು ಎಲ್ಲಿಗೋದ್ರಕ್ಕ? ಅಮ್ಮಾಜಿಯ ಕಣ್ಣಲ್ಲಿ ನೀರು ಅವಾಗವೆ ಸುರಿಯತೊಡಗಿದವು.ಅಮ್ಮಣ್ಣಿ ಈಗ್ ಬಂದಿರೊ ಕಾಯಿಲೆಯೊಳಗೆ,ಸಾವೆಂಬೋದು ಅರ್ದ ಎಕರೆಯವನ್ನು ಬಿಡಲ್ಲ. ಹತ್ತೆಕರೆಯವನ್ನು ಬಿಡಲ್ಲ. ಅರ್ಧ ಎಕರೆ ಹೊಲ ಕೇಳಿದ ಗನಂದಾರಿ ನನಮಗ. ಇಲ್ಲೆ ಗೂಟ ಹೊಯಿಸಿಕೊಂಡಿರಲ್ಲ ಬಿಡಮ್ಮಣ್ಣಿ. ಎಲ್ಲ ಅವರವರಾತುಮಕ್ಕೆ ಅವರು ತಿಳಕಂಡು ಬಾಳ್ಬೇಕುಡುಗಿ,ಆವಾಗಲೆ ಬದುಕು ಭಯವಾಗಿರೋದು. ಈಗ ಅಳೇದ್ಯಾವುದುನ್ನು ತಿಳುಕೊಂಡು ಅಳು ಬ್ಯಾಡ? ಸುಮ್ಮನೆ ಮಲಗೋಗಮ್ಮಯ್ಯ, ಎಂದ ಸರೋಜಮ್ಮನ ಮಾತಿಗೆ, ಅಮ್ಮಾಜಿ ವಾಪಸ್ಸು ಬಂದು ತಲೆ ದಿಂಬಿಗಾಕುವಾಗ, ಅವಳ ಕಣ್ಣುರೆಪ್ಪೆಗಳು ಇನ್ನು ತೇವದಲ್ಲೇ ಅಂಟಿಕೊಂಡಿದ್ದವು.
ಅರ್ದ ಜನ ಮನೇಲಿರುವ ಆದಾರ್ ಕಾರ್ಡುಗಳನ್ನ ಹುಡುಕುತ್ತಿದ್ದಾರೆ, ಮತ್ತೆ ನೂಕು ನುಗ್ಗಲಿನಲ್ಲಿ ನಿಂತವರೆ. ಯಾಕೆಂದರೆ ಕೊರೋನ ಬರ್ದಂಗೆ ಇಂಜಕ್ಷನ್ ತಗಳಾಕಂತೆ.ಇನ್ನು ಅರ್ದ ಜನ ಆ ಇಂಜೇಕ್ಷನ್ನಿನ ಬಗ್ಗೆ.ಇಲ್ಲ ಸಲ್ಲದ ಗುಲ್ಲೆಬ್ಬಿಸಿಕೊಂಡು ಕುಂತವರಂತೆ.
ಕುನ್ನಾಲಿ ನಾಗಣ್ಣ ಸತ್ತ ಮ್ಯಾಲೆ, ಅಮ್ಮಾಜಿಯ ಮಗ ಪ್ರಸನ್ನನಿಗೆ. ನಾಗಣ್ಣನ ಮನೆಯ ಕೊರೋನವೆಂಬೋದು. ನಮ್ಮನೇ ತಂಕ ಬರೋದು ಖಚಿತವೆಂಬ ಬೀತಿಯಲ್ಲಿ. ತನ್ನೆರೆಡು ಕೈಗಳನ್ನ ಇನ್ನಷ್ಟು ಹೆಚ್ಚಾಗಿ ತೊಳಿಯಲಾರಂಬಿಸಿದ. ಎಲ್ಲೊ ಎಂಟೆ ಎಂಟು ಬಿಂದಿಗೆ ನೀರು ಸಿಕ್ಕಿದ್ದವು. ಅನ್ಯಾಯ್ವಾಗಿ ಅ ನೀರುನ್ನು ಪೋಲ್ ಮಾಡ್ತ್ತಾನಲ್ಲ? ಅಂಬೊ ಅವಳೆದೆ ಸಂಕಟ ಈನಡುವೆ ಇನ್ನು ಹೆಚ್ಚಾಯಿತು. ಅಮ್ಮಾಜಿಗೆ ಬಳಸಾಕು ನೀರಿಲ್ಲ, ಕುಡಿಯಾಕು ನೀರಿಲ್ಲ, ಊರಲ್ಲಿದ್ದ ಒಂದೇ ಒಂದು ಫಿಲ್ಟರ್ ನೀರಿನ ಘಟಕವೆಂಬೋದು. ಕೆಟ್ಟು ಕೈಕೊಟ್ಟು ವರ್ಷಕ್ಕೆ ಬಂತು, ಅಂಗಂತ ಯಾರು ಕೈ ಕಟ್ಟಿ ಕುಂತಿರಲಿಲ್ಲ, ಗ್ರಾಮ ಪಂಚಾಯಿತಿಗಳಿಗೆ, ಪಿ, ಡಿ, ಓ, ಗಳಿಗೆ, ತಾಲ್ಲೋಕಿನ ಎಮ್, ಎಲ್ ಏ, ವರೆಗು, ಅರ್ಜಿಗಳು ಹೋಗಿ ಹೋಗಿ ಮುಟ್ಟಿ ಬಂದವು, ಆ ನೀರಿನ ದಾತುವರ್ಯಾರು ಊರಿಗೆ ಬರಲೆ ಇಲ್ಲ.
ಇವತ್ತು ಕುಡಿಯೊ ನೀರಾದ್ರು ತರಸಾನ ಅಂದ್ರೆ. ಸೈಕಲ್ಲಿಗೆ ಎರಡು ಬಿಂದಿಗೆ ಕಟ್ಟಿಕೊಂಡು, ಬೆಳಿಗ್ಗೆ ಹೋದ ಪ್ರಸನ್ನ, ಬಿಸಿಲು ನೆತ್ತಿ ಸುಡುವಾಗ, ಖಾಲಿ ಬಿದಿಗೆಗಳನ್ನಿಡುಕೊಂಡು ವಾಪಸ್ಸು ಬಂದ, ಎಲ್ಲಲ ನೀರು?ಅಮ್ಮಾಜಿ ತಡಬಡಾಯಿಸಿ ಕೇಳಿದಳು, ಅಮ್ಮೋ ಚೆನ್ನ ಸಾಗರ್ದವರು, ಊರೊಳಿಕ್ಕೆ ಬಿಟ್ಟಕಳತಿಲ್ಲ ಕಣಮ್ಮ, ಮತ್ತೆ ನಾನು ನೀರೆಲ್ಲಿಂದ ತರ್ಲಿ?ಅಂದ ಕಿನ್ನನಾಗಿ, ಯಾಕಂತೋ? ಯಾಕಂದ್ರೆ ಈಗ್ ಬಂದಿರೊ ಕಾಯಿಲೆ. ನಿಮ್ಮೂರಿಂದ ನಮ್ಮೂರಿಗ್ಯಾಕ್ ಬರ್ಬೇಕು? ಅಂತ, ನಾವು ನೀರು ಕೊಡಲ್ಲ, ಕೀರು ಕೊಡಲ್ಲವೆಂದು, ರೋಡಿನ ತುಂಬ ಬೇಲಿ ಎಳಕೊಂಡು ಕುಂತವರಮ್ಮ ಅಂದ. ಮಗನ ಮಾತಿಗೆ, ಇನ್ನು ಎಂತೆಂತ ಪರುಸ್ಥಿತಿ ಬರ್ಬಹುದೆಂಬ ಲೆಕ್ಕಾಚಾರದೊಳಗೆ. ಅಮ್ಮಾಜಿಯ ಮುಖ ಬಣ್ಣ ಬಿಟ್ಟಗಂತು, ಮತ್ತೇನ್ ಕುಡಿಬೇಕಪ್ಪ ಎಂದು ಮನಸ್ಸು ಕಳಾಹೀನವಾಯಿತು, ಮಗ ಮರು ಮಾತಾಡದಂಗೆ, ತಿರುಗಿ ಬಚ್ಚಲಿಗೆಹೋಗಿ, ತನ್ನೆರೆಡು ಕೈಗಳನ್ನು ಉಜ್ಜಿ ಉಜ್ಜಿ ತೊಳಕೊಂಡ. ಲೇ ಅಪ್ಪಯ್ಯ ಇವು ನೀರಲ್ಲ ಕಣೊ?ತುಪ್ಪ ಅಂದ್ಕಳೋ, ಎಂದು ನಯವಾಗಿ ಹೇಳಿದವಳ ಮಾತಿಗೆ, ಅಮ್ಮೊ ಒಪ್ಪತ್ತು ಉಣ್ಣಬ್ಯಾಡ ಅನ್ನು, ಸುಮ್ಮನಿದ್ದು ಬಿಡತ್ತೀನಿ, ಆದ್ರೆ ಕೈ ತೊಳಿ ಬ್ಯಾಡ ಅಂತ ಮಾತ್ರ ಹೇಳ್ಬ್ಯಾಡೆಂದು. ಯಾವತ್ತು ಇಲ್ಲದವನು ಇವತ್ತು ಕಾರವಾಗಿಮಾತಾಡ್ಬುಟ್ಟ. ಅವನ ಘಾಟಿನ ಮುಖವನ್ನ ನೋಡಲಾರದೆ. ಅಮ್ಮಾಜಿಯು ಮೊಗ್ಗುಲಿಗೆ ಮುಖಾತಿರುಗಿಸಿ ಕೊಂಡವಳ ಕಣ್ಣಿಗೆ. ಅಲ್ಲೆ ನಡುಮನೆಯ ಗ್ವಾಡೇಲಿ ತೂಗಾಡುತ್ತಿದ್ದ. ನಾಲ್ಕನೆ ತರಗತಿಯಲ್ಲಿರುವ ಮಗಳು ಸುಶೀಲೆಯ ಬ್ಯಾಗು. ಬಲವಾದ ದೂಳಿನಲ್ಲಿ ಮೊಂಡು ಬಿದ್ದು ಕುಂತಿತ್ತು. ಊರಿನುಡುಗರು ಇಸ್ಕೂಲೆಂಬ ಶಬುದ ಮರೆತು. ಇಲ್ಲಿಗೆ ವರ್ಷವಾಗ್ತಾಬಂತು. ಬುಕ್ಕು ತಗಿಯಂಗಿಲ್ಲ? ಬ್ಯಾಗು ವದರಂಗಿಲ್ಲ? ಅದೆಂತಾದ್ದೊ ಬರಬಾರದ ಕೊರೊನ್ವೆಂಬರೋಗ ಬಂದು. ಇಸ್ಕೂಲಿನ ಮಕ್ಕಳೆಲ್ಲ ದಿಕ್ಕಾ ಪಾಲಾದರು, ಅಮ್ಮಾಜಿಯ ಮನೆಯ ಮುಂದಗಡೆಯೆ ಇದ್ದ ಇಸ್ಕೂಲಿನಲ್ಲಿ. ಹತ್ತು ಗಂಟೆಯೊತ್ತಿಗೆ ಹಾಲು ಕುಡಿಯುತ್ತಿದ್ದ ಬಿಸಿ ಲೋಟಗಳ ಸದ್ದಿಲ್ಲ. ಕೈ ಮುಗಿದು ಪ್ರಾರ್ಥನೆಗೆ ನಿಂತುಕೊಳ್ಳುತ್ತಿದ್ದ, ಮುದ್ದು ದೇವರುಗಳ ರಾಗವಿಲ್ಲ. ಒಳಗೆ ಕಲ ಕಲನೆಂದು ಬಡುಕೊಳ್ಳುತ್ತಿದ್ದ, ಪೈಪೋಟಿಯ ಹುಡುಗುರಿಲ್ಲ. ಮದ್ಯಾನದೊತ್ತಿಗೆ ಬಿಸಿ ಅನ್ನವುಂಬುವ ತಟ್ಟೆಗಳ ಜಾಗಟೆಯಿಲ್ಲ. ಯಾಕೊ ಅಮ್ಮಾಜಿಯ ಎದೆಯೊಳಗೆ ತಾನು ಒಂಟಿಯಾಗಿ. ಏನೊ ಕಳಕಂಡಂಗಾಡತಾ ಅವಳೆ. ಅದು ಯಾಕೆಂದರೆ, ಮೇಷ್ಟ್ರುಗಳು ಮನೆಯ ಕಡೆ ಹೋದ್ಮ್ಯಾಲೆ.ಇಸ್ಕೂಲಿನ ನೀರಿನ ಟ್ಯಾಂಕಿಗೆ ಒಂದು ಪೈಪಾಕಿಕೊಂಡು, ಮನೆಯ ಹಂಡೆ ತೊಟ್ಟಿಗಳಿಗೆಲ್ಲ, ನೀರು ತುಂಬಿಸಿಕೊಳ್ಳುತ್ತಿದ್ದಳು,ಊರಲ್ಲಿ ಇವಳಂಗೆ ಬಟ್ಟೆ ಹೊಗೆಯವರು, ಮುಸುರೆ ತೊಳಿಯವರು, ದನಾಕರುಗಳನ್ನ ಮೈ ತೊಳಿಯವರು, ಬಾಲಾಟವಾಡುವ ಪಡ್ಡೆ ಹುಡುಗರು,ರಜೆ ಐತೆ ಅಂದರೆ, ಮೂರೊತ್ತು ಇಸ್ಕೂಲಿಗಂಟಿಕೊಂಡೆ ಇರೋವರು. ಪದೇ ಪದೆ ಟ್ಯಾಂಕಿಯ ಕ್ಯಾಪೆ ಕಿತ್ತಾಕುವ ಕೋತಿಗಳ ಕಾಟ ಬ್ಯಾರೆ. ಎಡ್ಮೇಷ್ಟ್ರು ಎಲ್ಲಾರ್ಗು ಹೇಳಾತಂಕ ಹೇಳೀರು, ಯಾರು ಕೇಳ್ತಿರಲಿಲ್ಲ, ಅವರ್ಗು ಜೀವ ರೋಸಿ ರೋಸಿ, ನೀರಿನ ಕಲೆಕ್ಷನ್ನನ್ನೆ ತಗಸ್ ಬುಟ್ರು. ಯಾಕಂತೆ? ಅದುಕ್ಕು ಲಾಕ್ ಡೌನಂತೆ, ಅವರ ಹುಡುಗ್ರು ಒಳಕ್ ಬರಾವರ್ಗು ಅವರಿಗೆ ನೀರ್ ಬ್ಯಾಡವಂತೆ.
ಹೋದ್ ಸಲ ಹೊಸ ಕೊರೋನಾ ಬಂದಾಗ. ಬೆಂಗಳೂರಿನಿಂದ ಊರಿಗೆ ಬಂದವರನ್ನೆಲ್ಲ, ಬೇಕಾದ್ದಂಗೆ ಓಡಿಸಿ, ಓಡ್ಸಿ, ದಿಕ್ಕೆಡಿಸುತ್ತ ತಬ್ಬಲಿಗಳನ್ನ ಮಾಡ್ ಬುಟ್ರು.ಈ ಸಲ ಊರೂರಿಗು ಬಂದು, ಎಲ್ಲರನ್ನು ಮುಟ್ಟುತ್ತೀನಂತ, ಕಣ್ಣಾ ಮುಚ್ಚಾಲೆಯಾಡುತ್ತಿರುವ ಕೊರೋನಾದಿಂದ. ಈಗ ಯಾರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಯಾರಿಗ್ಯಾರು ಮುಲಾಜಿಕ್ಕುತ್ತಿಲ್ಲ,ಹೋಗವರು ಹೋಗ್ ಬಹುದು, ಬರೋವರು ಬರ್ಬಹುದು, ಯಾರು ಮಾಡೀರೊ ಈಹುಚ್ಚು ದರ್ಬಾರನ್ನ?ಈರನಾಗ ರೋಡಿನೊಳಗೆ ಯಾರಕೂಟೊ ಜೋರಾಗೆ ಹೇಳ್ತಿದ್ದ.
ದಿಬ್ಬೂರಿನ ಪಿ, ಡಿ, ಒ, ಸರೋಜಿಯ ಅಕ್ಕನ ಮಗ ಕೇಶವನೆಂಬೋನು, ಅವರ ವ್ಯಾಪ್ತಿಗೆ ಒಳಗೊಂಡಿರುವ, ಆಶಾಕಾರ್ಯಕರ್ತೆಯರಿಗೆ ಎಮ್, ಎಲ್, ಎ, ಸಾಯಾಬ್ರು, ಆಹಾರದ ಕಿಟ್ಟು ಕೊಡುತ್ತಾರೆಂದು, ನೀವು ಎಂಟನೆ ತಾರೀಕು ಬೆಳಿಗ್ಗೆ ಹತ್ತು ಗಂಟೆ ಹೊತ್ತಿಗೆ. ಕಡ್ಡಾಯ್ವಾಗಿ ನಮ್ಮ ಗ್ರಾಮ ಪಂಚಾಯಿತಿಲಿ. ಹಾಜರಿರ್ಬೇಕೆಂದು, ಎಪ್ಪತ್ತಾರ್ಸಲ ಪೋನ್ ಮಾಡಿ ಮಾಡಿ ಹೇಳಿದ್ನಂತೆ, ಆವತ್ತು ಎಮ್, ಎಲ್, ಎ ಸಾಯಾಬ್ರು ಬಂದು, ಎಷ್ಟೊತ್ತು ಕಾದು ನಿಂತರು. ಆಶಾ ಕಾರ್ಯಕರ್ತೆಯೆಂಬೋರು ಒಬ್ಬರು ಪತ್ತೆಯಿರಲಿಲ್ಲವಂತೆ. ಅದಿಕ್ಕೆ ನಮ್ಮುಡುಗ ಕೇಶವನ್ನ, ಸಾಯಾಬ್ರು ಬಾಯಿಗ್ ಬಂದಂಗ್ ಬೈದವರಂv ಕಣಮ್ಮಣ್ಣಿ, ಕಿಟ್ಟು ತಗಳವರಿಗೆ ದರ್ದು ಇಲ್ಲದಿದ್ದಮ್ಯಾಲೆ, ಅವನು ಪಿ, ಡಿ, ಓ, ಅಂಬೋನು ಏನ್ ಮಾಡ್ತ್ತಾನೆ? ಎತ್ತಿಗೆ ಜ್ವರ ಬಂದರೆ, ಎಮ್ಮಿಗೆ ಬರೆ ಎಳದ್ರಂತೆ. ಅಂಗಾಗಿ ನೆನ್ನೆಯಿಂದ ನಮ್ಮುಡುಗ ಹಿಟ್ಟು ನೀರು ಬಿಟ್ಟು ಕುಂತವನೆಂದು. ಅದೇ ಸರೋಜಮ್ಮಳ ಸಂಕಟವನ್ನ, ಆಲಿಸಿಕೊಂಡು ಕುಂತಿದ್ದ ಅಮ್ಮಾಜಿ, ಯಕ ಇದು ಬರಿ ಕೊರೋನ್ವಲ್ಲ ತಗಿಯಕ್ಕ? ಬೇಕ್ ಬೇಕಾದೊರಿಗೆ, ಬಣ್ಣಾನು ಬಳಿತಾ ಐತೆ, ಸುಣ್ಣಾನು ಬೆಳಿತಾಐತೆ. ಎಂದು ಉಬ್ಬೇರಿಸಿದ ಅಮ್ಮಾಜಿ, ಕೊರಾನಾದ ಬಗ್ಗೆ ಸಮರ್ಥಿಸಿಕೊಂಡಳು. ಕಾಯಿಲೆ ಬಳಿತಿಲ್ಲ ಕಣಮ್ಮಣ್ಣಿ, ಈ ಕಾಯಿಲೇನ ಬಳಸ್ಕಂಡು, ಜನ ಎಂಗೆಂಗ್ ಬೇಕೊ, ಅಂಗಂಗೆ ಅವರಿಗವರೆ ಬಳಕಂತ ಅವರೆ.ಎಂದು ಸರೋಜಿ ಉತ್ತರ ಹೇಳೀಳು.
ಯಾರ್ ಎಂಗಾರ ತಲೆ ಉಯಿಸುಕೊಳ್ಳಿ ಬಾರೆ ಅಮ್ಮಣ್ಣಿ. ನಿನ್ ತಲೆವೊಳಗೆ ಹೇನಿದ್ರೆ ಹುಡುಕಾನ. ಎಂದು ನಾಕನೆತರಗತಿಯ ಮಗಳು ಸುಶೀಲೆಯನ್ನ. ತೊಡೆ ಮ್ಯಾಲೆಳುಕೊಂಡ ಅಮ್ಮಾಜಿ. ಮಗಳನ್ನು ಹಟ್ಟಿ ಬಯಲಲ್ಲಿ ಕುಂಡರಿಸಿಕೊಂಡು, ತಲೆಯನ್ನು ಬಿಚ್ಚಿ ಕೊಡವಿದಳು.ಅವಳ ತಲೆಯಲ್ಲಿ ಅಂಗೆ ಹೇನು ಹಾಯುತ್ತ ಹಾಯುತ್ತ, ತಾಯಿ ಮಗಳಿಗಿಬ್ಬರಿಗು, ಕಣ್ಣು ಜೋಂಪುಗರಿಯ ತೊಡಗಿದವು. ಅಮ್ಮಾಜಿಗೆ ಕುಂತರು ನೀರಿಂದೆ ಕನಸು, ಮಲಗೀರು ನೀರಿನದೆ ಕನಸು, ಅಂಗೆ ತೂಕಡಿಸಿದ ಕನಸಿನಲ್ಲಿ, ಇದ್ದಕ್ಕಿದ್ದಂಗೆ ಅಮ್ಮಾಜಿಯ ಮಾಳಿಗೆ ಮ್ಯಾಲೆ. ಶಿವ ಪರಮಾತ್ಮನೆಂಬ, ದೇವಾನುದೇವ ಬಂದು ಕುಂತು ಬುಟ್ಟ. ಅಂಗೆ ಕುಂತವನು, ಅವನ ತಲೆಯ ಮೇಲಿನ ಗಂಗಮ್ಮನಿಂದ. ಇದ್ದ ಬದ್ದ ನೀರನ್ನೆಲ್ಲ ಸುರಿಯ ತೊಡಗಿದ. ಅಮ್ಮಾಜಿಯ ಹಂಡೆ, ತೊಟ್ಟಿ, ಬಚ್ಚಲು, ನಡುಮನೆ ಅಡುಗೆ ಮನೆ, ಎಲ್ಲವು ತುಂಬಿಕೊಂಡು, ಅವಳ ಹಟ್ಟಿ ಬಯಲೆಲ್ಲ ಸಮುದ್ರವಾಗತೊಡಗಿತು. ಅಂತ ಸಮುದ್ರದೊಳಗೆ ಇವನ್ಯಾವೋನು, ಬೆಂಗಳೂರಿನಿಂದ ಬಂದಿರುವ ಪ್ರಸನ್ನನೆಂಬೋನು. ಬರಿ ಕೈಗಳನ್ನ ಮಾತ್ರ ಉಜ್ಜಿ ಉಜ್ಜಿ ತೋಳಿತಿದ್ದ, ಆದರೆ ಅಂತ ಸಮುದ್ರದಲ್ಲಿ ಅಮ್ಮಾಜಿಯು ಒಳಗೊಂಡಂತೆ. ಆನಂದ್ವಾಗಿ ಮನೆ ಮಕ್ಕಳೆಲ್ಲ ತೊಯ್ದುತೊಯ್ದು ಆಡುತ್ತಿರುವಾಗ. ಊರಿನ ಜನಾದ್ ಜನವೆಲ್ಲ, ಅಮ್ಮಾಜಿಯ ಮನೆ ಮುಂದೆ ಜಮಾಯಿಸಿ. ಯಾಕಪ್ಪ ಶಿವನೆ? ಇವಳೊಬ್ಬಳ ಮನೆ ಮುಂದೆ ಮಾತ್ರ ಸುರಿತಿದ್ದೀಯಾ? ಒಂದು ಕಣ್ಣಿಗೆ ಬೆಣ್ಣೆ. ಇನ್ನೊಂದು ಕಣ್ಣಿಗೆ ಸುಣ್ಣ ಇಕ್ಕೋ ಬುದ್ದಿನ. ನೀನು ಯಾವ್ ಪಕ್ಷದವರಿಂದ ಕಲ್ತಪ್ಪ? ಎಂದು ದಬಾಯಿಸ ತೊಡಗಿದರು, ಎಲೈ ಭಕ್ತರೆ ಲೋಕದೊಳಗೆ ನೀರಿಗಾಗಿ. ತಬಸ್ಸು ಮಾಡಿದವರಲ್ಲಿ. ಮೊದಲನೆಯವನು ಭಗಿರಥನೆಂಬೋನಿದ್ದರೆ. ಎರಡನೆಯವಳು ಅಮ್ಮಾಜಿಯಾದ್ದರಿಂದ, ನನ್ನ ತಲೆಯ ಮೇಲಿನ ಗಂಗಮ್ಮನ ಒತ್ತಾಯಕ್ಕೆ ಬಂದಿದ್ದೇನೆಂದು. ಶಿವಪರಮಾತುಮ ನಾಜೋಕಿನ ಉತ್ತರವನ್ನೇಳಿ ನುಳುಚಿಕೊಳ್ಳುತ್ತಾನೆ. ಜನ ದೂಸುರ ಮಾತಾಡ್ದಂಗೆ, ಸುಮ್ಮನೆ ನಿಂತು ಬಿಡುತ್ತಾರೆ. ಆನಂದ್ವಾದ ಹಟ್ಟಿಬಯಲ ಸಮುದ್ರದೊಳಗೊಂದು. ಹೂವಿನ ತೆಪ್ಪ ಬಂದು, ಇವಳನ್ನು ಇವಳ ಮಕ್ಕಳನ್ನು ಹತ್ತಿಸಿಕೊಂಡು ತೇಲುತ್ತಿರುವಾಗ. ಅತಿರೇಕದ ಆನಂದದಲ್ಲಿದ್ದ ಅಮ್ಮಾಜಿಗೆ, ಬಚ್ಚಲ ಮನೆಯಲ್ಲಿ ದಡಾರನೆಂದು, ಸದ್ದು ಮಾಡಿದ ಬಕೀಟೊಂದು ಕೆಳಕ್ಕುರುಳುತ್ತದೆ. ತಟ್ಟನೆ ಬೆಚ್ಚಿಬಿದ್ದು ಕಣ್ಣು ಬಿಡುತ್ತಾಳೆ. ಅದು ಅಪ್ಪಟವಾದ ಕನಸುಮಾತ್ರ, ಒಳಕ್ಕೋಗಿ ನೋಡೀರೆ, ಮಗ ಬಚ್ಚಲಿನಲ್ಲಿ ಕೈತೊಳೆಯುತ್ತಿರುತ್ತಾನೆ, ತೂ ಪಾಪುರ್ ನನ್ ಮಗನೆ, ನಿನ್ ಕೈಯ್ಯಲ್ಲಿ ಅದೇನ್ ಕಚ್ಚಿಕಂಡೈತೊ? ನಿನಗ್ ನೆಲ್ ಪಟ್ಟ ಬರಾ, ಎಂದು ಬೈದುಕೊಂಡು, ಇನ್ನಿಲ್ಲದ ನೀರಿಗಾಗಿ, ಟ್ಯಾಂಕಿಯ ಹತ್ತಿರಕ್ಕು, ಮನೆಯ ಹತ್ತಿರಕ್ಕು, ಎಪ್ಪತ್ತಾರುಸಲ ತಿರುಗಾಡ್ತ್ತಾನೆ ಅವಳೆ, ಅವಳಮಗ ಮಾತ್ರ ಈಸಲ ಅಮ್ಮಾಜಿಗೆ ಕಾಣ್ದಂಗೆ. ಕೊಟ್ಟಿಗೆ ಬಾಗಲಲ್ಲಿ ಕಳ್ಳ ಬೆಕ್ಕಿನಂಗೆ ಕೈ ತೊಳಿತಾನೆ ಅವನೆ.ಯಾಕೊ ಕೊರೋನವೆಂದರೆ, ನಿನ್ನೊಬ್ಬನಿಗೆ ಅಷ್ಟೊಂದು ಭಯವೆಂದು ಊರಿನವರು ಕೇಳೀರೆ. ಈಗ ಮೂರನೆ ಅಲೆ ನಮ್ಮಂತವರಿಗೆ ಜಾಸ್ತಿ ಬರೋದು. ಅಂತ ಹೇಳಿಕೊಂಡು ತಿರುಗಾಡ್ತಾ ಅವನೆ, ಅಮ್ಮಾಜಿಯ ಮಗನ ಕಣ್ಣಲ್ಲಿನ ಕಳಾಹೀನತೆ. ಕೊರೋನವೆಂಬ ಭಯದಿಂದ ಇಷ್ಟಿಷ್ಟೆ ಬಸುರಾಗುತ್ತಲೆ ಇತ್ತು*******