Click here to Download MyLang App

ಕೃತ್ರಿಮ - ಬರೆದವರು : ಕಾರ್ತಿಕ್ ಭಟ್ | ಹಾರರ್

ಅಸೂಯೆ, ದೇವರು ಮಾನವನಿಗೆ ಇದ್ದನ್ನು ಕೊಟ್ಟನೊ ಅಥವಾ ಮಾನವನ ತನ್ನ ಅಲೋಚನೆಗಳನ್ನು ಮಥಿಸಿದಾಗ ಇದು ಹುಟ್ಟಿತೊ ಎಂಬುದು ಯಾರಿಗೂ ಗೊತ್ತಿರದ ವಿಷಯ.
ನಾಗರಿಕತೆ ಬೆಳೆದಂತೆ ಮಾನವ ಬುದ್ಧಿವಂತನಾಗುತ್ತ ಹೋದ. ಒಂದು ಕಾಲದಲ್ಲಿ ಅಸಾಧ್ಯವೆನಿಸುತಿದ್ದ ಕಷ್ಟಕಾರಿ ಕಾರ್ಯಗಳನ್ನು ತನ್ನ ಬುದ್ಧಿ ಮತ್ತೆ ಸತತ ಪ್ರಯತ್ನದಿಂದ ಕಣ್ಣಿನ ರೆಪ್ಪೆ ಮಿಟುಕುವಷ್ಟು ಕಾಲದಲ್ಲಿ ಮಾಡುವ ಚಾಕಚಕ್ಯತೆ ಗಳಿಸಿಕೊಂಡ. ಓರ್ವ ವ್ಯಕ್ತಿ ಒಂದು ಹಂತದಲ್ಲಿ ಉನ್ನತಿ ಸಾಧಿಸುತ್ತ ಹೋದರೆ ಮತ್ತೊಂದು ಹಂತದಲ್ಲಿ ಅವನ ವಿರೋಧಿಗಳ ಕೆಂಗಣ್ಣಿಗೆ ಗುರಿಯಾಗತೊಡಗಿದ. ಹೊಟ್ಟೆಕಿಚ್ಚು ಅರ್ಥಾತ್ ಅಸೂಯೆ ಎಂಬುದು ಜಗದ ಅತ್ಯಂತ ಕೆಟ್ಟ ಸೃಷ್ಟಿ ಎನ್ನಬೇಕೆ ಎಂಬ ಗೊಂದಲ ಸದಾ ಕಾಡುತ್ತದೆ. ಒಬ್ಬನ ಉನ್ನತಿಯ‌ನ್ನು ನೋಡಿ ಅಸೂಯೆಪಟ್ಟು ಛಲದಿಂದ ತಾವೂ ಅಂತಹ ಉನ್ನತಿ ಪಡೆಯಬೇಕೆಂಬ ಹಂಬಲ ಮಾನವನ ಅಭಿವೃದ್ಧಿಯ ದೃಷ್ಟಿಯಲ್ಲಿ ಉತ್ತಮವೇ. ಆದರೆ ಒಬ್ಬನ ಉನ್ನತಿಯನ್ನು ನೋಡಿ ಅವನನ್ನು ಹೇಗಾದರೂ ಹಾಳು ಮಾಡಬೇಕೆಂಬ ಹಂಬಲ ಜಗದ ಅತಿ ನಿಕೃಷ್ಟ ಸಂಗತಿಯೆನಿಸುತ್ತದೆ. ಇಂತಹ ಮನೋಭಾವನೆಯ ಜನರಿಂದ ಕೇವಲ ಒಬ್ಬಿಬ್ಬರಿಗಲ್ಲದೇ ಇಡೀ ಸಮಾಜಕ್ಕೆ ಅತ್ಯಂತ ಹಾನಿಯುಂಟಾಗುತ್ತದೆ. ಈ ಬಗೆಯ ಅಸೂಯೆ ಉನ್ನತಿಯಲ್ಲಿರುವ ವ್ಯಕ್ತಿಯನ್ನು ಚಾರಿತ್ರಿಕವಾಗಿಯಲ್ಲದೇ ಶಾರೀರಿಕವಾಗಿಯೂ ನಾಶಮಾಡಿಬಿಡುವ ಕೆಲಸಕ್ಕೆ ಪ್ರಚೋದಿಸಿಬಿಡುತ್ತದೆ. ಒಟ್ಟಿನಲ್ಲಿ ತಮಗೇನು ಲಾಭವಾಗುತ್ತದೆಯೋ ಇಲ್ಲವೊ ತಮ್ಮ ವಿರೋಧಿ ನಾಶವಾಗಬೇಕಷ್ಟೆ ಎಂಬ ದುಷ್ಟ ಆಲೋಚನೆ ಈ ತರದ ಅಸೂಯೆಯ ಫಲ ಎನ್ನಬಹುದು.
ಅಸೂಯೆಯನ್ನು ಪರಸ್ಪರ ಕಾರ್ಯಕ್ಷಮತೆಯಲ್ಲಿ ಹಿಮ್ಮಟ್ಟಿಸುವ ಬದಲು ಎದುರಾಳಿಯನ್ನು ಸಾಯಿಸುವ ಮಟ್ಟಿಗಿನ ಹೊಟ್ಟೆಯುರಿ ಪಡುವ ಜನರೂ ಇದ್ದಾರೆ.

ಭಾರತೀಯರ ಪರಂಪರಾಗತ ಸಂಪತ್ತು ವೇದಗಳಲ್ಲಿ ಅದ್ಯಾವುದರ ಮಾಹಿತಿ ಇಲ್ಲ. ಎಲ್ಲವೆಂದರೆ ಎಲ್ಲವುಗಳ ಮಾಹಿತಿ ಈ ವೇದಗಳಲ್ಲಿ ಉಲ್ಲೇಖವಿದೆ. ನಮ್ಮಲ್ಲಿ ಹಲವಾರು ಜನರಿಗೆ ತಿಳಿದಂತೆ ವೇದಗಳು ನಾಲ್ಕು ವಿಭಾಗಗಳಲ್ಲಿ ವಿಂಗಡಣೆಯಾಗಿದೆ. ಜಗದ ಸೃಷ್ಟಿ ಹಾಗೂ ಅದರ ಲಕ್ಷಣ, ಮನರಂಜನಾ ಕಾವ್ಯ ನಾಟಕಗಳು, ಸಂಗೀತ, ರಾಗಗಳು ಕ್ರಮವಾಗಿ ಋಗ್ವೇದ,ಯಜುರ್ವೇದ, ಸಾಮವೇದಗಳಲ್ಲಿ ಉಲ್ಲೇಖಿತವಾಗಿವೆ. ಯಥಾ ಪ್ರಕಾರ ದೇವರ ಸ್ಮರಣಗಳೂ ಪ್ರಸ್ತಾಪಿತವಾಗಿವೆ. ಇನ್ನು ಕೊನೆಯ ವಿಭಾಗವಾದ ಅಥರ್ವಣವೇದದಲ್ಲಿ ಶತ್ರುಗಳ ನಿಗ್ರಹದ ಬಗೆಗಿನ ವಿಚಾರಗಳಿವೆ. ಪೂರ್ವಕಾಲದಲ್ಲಿ ಋಷಿ ಮುನಿಗಳು ಋಗ್ವೇದ,ಯಜುರ್ವೇದ,ಸಾಮವೇದಗಳನ್ನು ಅವುಗಳಲ್ಲಿ ತಿಳಿಸಿದಂತಹ ವಿಧಾನಗಳಿಂದ ದೇವತೆಗಳನ್ನು ಸಂತುಷ್ಟ ಪಡಿಸಲು ಬಳಸಿದರೆ ಕೊನೆಯದಾದ ಅಥರ್ವಣ ವೇದಗಳ ತಂತ್ರಗಳನ್ನು ತಮ್ಮ ದೈವೀಕಾರ್ಯಗಳಿಗೆ ಅಡ್ಡ ಬರುತ್ತಿದ್ದ ರಾಕ್ಷಸಾದಿ ದೈತ್ಯರನ್ನು ಮಟ್ಟಹಾಕಲು ಬಳಸುತ್ತಿದ್ದರು.
ಶತಮಾನಗಳು ಉರುಳಿದವು, ತಲೆಮಾರುಗಳು ಬದಲಾದವು ಮುಗ್ದರಾಗಿದ್ದ ಜನರಲ್ಲಿ ಕ್ರೌರ್ಯ ಆವರಿಸುತ್ತ ಹೋಯಿತು. ಮತ್ತೊಬ್ಬನ ಉನ್ನತಿಯನ್ನಾಗಲಿ, ವಿರೋಧಿಯ ಸಂತಸವನ್ನಾಗಲಿ ಕೊನೆಗೆ ಸ್ವತಃ ಬಂಧುಗಳ ಹಿತವಾಗಿರುವುದನ್ನೂ ಸಹಿಸದಂತಹ ಹಂತಕ್ಕೆ ಮನುಷ್ಯನ ಹೊಟ್ಟೆಕಿಚ್ಚು ಬಂದುನಿಂತಿತು. ನ್ಯಾಯ ಎಂಬ ಯಂತ್ರಕ್ಕೆ ಹೆದರಿದ ದುರ್ಮಾರ್ಗಿಗಳು ವಾಮಮಾರ್ಗದ ಮೂಲಕ ಕುಂತಂತ್ರವನ್ನು ಹೂಡಲು ಶುರುವಿಟ್ಟುಕೊಂಡರು. ಹೀಗೆ ಆರಿಸಿಕೊಂಡ ವಾಮಮಾರ್ಗವೇ ಮಾಂತ್ರಿಕ ವಿದ್ಯೆಯ ಪ್ರಯೋಗ. ವಾಮಾಚಾರ-ಮಾಟ ಮಂತ್ರಗಳ ಪ್ರಯೋಗ.
ನನ್ನ ಗಮನಕ್ಕೆ ತೋಚಿದ ಕೆಲವಷ್ಟು ಪ್ರಸಂಗಗಳನ್ನು ಸಣ್ಣ ಕಥೆಗಳ ರೂಪದಲ್ಲಿ ನಿಮ್ಮೆದುರು ಇಟ್ಟಿದ್ದೇನೆ.

ಮಂಡೂಕ ಪ್ರಯೋಗ
ಅದೊಂದು ತುಂಬಿದ ಕುಟುಂಬ ತಂದೆ ತಾಯಿ ನಾಲ್ವರು ಮಕ್ಕಳು . ಎಲ್ಲರೂ ಗಂಡು ಮಕ್ಕಳೇ. ಅವರದು ಒಂದು ಮಧ್ಯಮ ಕುಟುಂಬ. ಬಾಡಿಗೆಯ ಮನೆಯಲ್ಲಿ ವಾಸವಿದ್ದರು. ಸ್ವಂತ‌ಮನೆಯ ಕನಸು ಎಲ್ಲರ‌ ಕಣ್ಣಿನಲ್ಲಿಯೂ ಇತ್ತು. ತೀರಾ ಉನ್ನತ ಶಿಕ್ಷಣ ಅಲ್ಲದಿದ್ದರೂ ಸಾಮಾನ್ಯ ಉದ್ಯೋಗವನ್ನು ಹೊಂದುವಂತಹ ಶಿಕ್ಷಣ ಎಲ್ಲರೂ ಪಡೆದಿದ್ದರು. ಹೀಗೆ ತಂದೆಯು ತನ್ನ ಪಿರ್ತಾರ್ಜಿತ ಆಸ್ತಿಯಾದ ಜಾಗಕ್ಕಾಗಿ ಕೆಲವಷ್ಟು ವ್ಯಾಜ್ಯಗಳನ್ನು ಕೋರ್ಟಿನಲ್ಲಿ ಎದುರಿಸುತ್ತಿದ್ದ. ಅಪ್ಪ ಚಿಕ್ಕಪ್ಪ ದೊಡ್ಡಪ್ಪರ ಆಸ್ತಿ ಕಲಹವನ್ನು ಮಕ್ಕಳು ಹಲವು ವರುಷಗಳಿಂದ ಕಾಣುತ್ತಲಿದ್ದರು. ಹೀಗಿರುವಾಗ ಅದೊಂದು ದಿನ ಇವರ ತಂದೆ ಕೋರ್ಟಿನ ವ್ಯಾಜ್ಯ ಗೆದ್ದು ಬಿಟ್ಟರು. ಎಲ್ಲರ ಸಂತಸಕ್ಕೆ ಪಾರವೇ ಇರಲಿಲ್ಲ. ಕೆಲವಷ್ಟು ದಿನ ಕಳೆದಿವೆ ತಂದೆ ತಾನು ಕೋರ್ಟಿನಲ್ಲಿ ಗೆದ್ದುಕೊಂಡ ಜಾಗದಲ್ಲಿ ಮನೆ ನಿರ್ಮಿಸುವ ಬಯಕೆಯನ್ನು ಹೊಂದಿ ಅಲ್ಲಿ ಮನೆ ನಿರ್ಮಿಸಲು ಅರಂಭಿಸಿದ. ಜಾಗ ಅಗೆಯುವಾಗ ಚಿತ್ರವಿಚಿತ್ರ ನಮೂನೆಯ ತಾಯತಗಳು, ಯಾವುದೋ ಯಂತ್ರ ಬರೆದಿದ್ದ ತಗಡುಗಳು ಪತ್ತೆಯಾದವು. ಯಾವುದಕ್ಕೂ ತಲೆಗೊಡದೇ ತಂದೆ ಮನೆ ನಿರ್ಮಿಸಿ ಮುಗಿಸಿದ. ಅದು ಮಳೆಗಾಲ ಕೆಲವಷ್ಟು ದಿನಗಳು ಕಳೆದ ಮೇಲೆ ಮನೆಯ ಹೊರಗೆ ಒಂದು ಬದಿಯ ಮೂಲೆಯಲ್ಲಿ ರಾಶಿ ರಾಶಿ ಕಪ್ಪೆಗಳು ಕಾಣಿಸಿಕೊಂಡವು. ಮಳೆಗಾಲವಲ್ಲ ಬಂದಿರಬಹುದು ಎಂದು ಎಲ್ಲರೂ ಸುಮ್ಮನಾದರು. ಅಂದಿನಿಂದ ರಾತ್ರಿಯಾಗುತ್ತಲೇ ಎಲ್ಲ ಕಪ್ಪೆಗಳು ಜೋರಾಗಿ ವಟರ್ ವಟರ್ ಎನ್ನುವ ಶಬ್ದ ಮಾಡಲು ಆರಂಭಿಸಿದವು. ಇವುಗಳಿಂದ ರೋಸಿಹೋದ ಮನೆಯ ಜನ ಎರಡು ದಿನಗಳ ಬಳಿಕ ಕಪ್ಪೆಗಳು ಆವರಿಸಿದ್ದ ಜಾಗಕ್ಕೆ Acid, ಫಿನಾಯಿಲ್ ಗಳನ್ನು ಹಾಕಿ ಅವುಗಳನ್ನು ನಾಶ ಮಾಡಿದರು. ಒಂದುವಾರ ಕಳೆದಿರಬಹುದು. ತಂದೆ ಇದ್ದಕ್ಕಿದ್ದ ಹಾಗೆ ಕಾಲುನೋವು ಆವರಿಸಿ ಹಾಸಿಗೆ ಹಿಡಿದ. ವಾರಕಳೆಯುತ್ತಲೇ ತಂದೆಯ ಮುಖ ಕೈ ಕಾಲುಗಳೆಲ್ಲ ಊದಿಕೊಳ್ಳುತ್ತ ಹೋದವು, ಯಾವ ವೈದ್ಯರಿಗೂ ಕಾರಣವೆನೆಂದು ತಿಳಿಯಲೂ ಇಲ್ಲ. ಹಾಗೆ ಒಂದು ತಿಂಗಳೊಳಗೆ ಇಡಿ ದೇಹವೇ ಕಪ್ಪೆಯ ತರಹ ಊದಿಕೊಂಡು , ಮುಖದಿಂದ ಕಣ್ಣುಗಳೆರಡು ಆಚೆ ಬಂದಂತಾಗಿ ತಂದೆ ಅಸುನೀಗಿದ. ಇಡೀ ಕುಟುಂಬವೇ ದುಃಖಿತವಾಯಿತು. ವೈದ್ಯರಿಗೂ ಇಳಿಯದ ವಿಚಿತ್ರ ಕಾಯಿಲೆ ತಂದೆಗೆ ಏಕೆ-ಹೇಗೆ ಬಂದಿತು ಎಂದು ಎಲ್ಲರೂ ಮರುಗಿದರು. ಒಂದು ತಿಂಗಳು ಕಳೆಯಿತು ನಾಲ್ವರಲ್ಲಿ ಒಬ್ಬ ಮಗನಿಗೆ ಅಪಘಾತವಾಗಿ ಕಾಲು ಕಳೆದುಕೊಂಡು ಅವನೂ ಹಾಸಿಗೆ ಹಿಡಿದ ನೋಡುನೋಡುತ್ತ ಒಂದು ತಿಂಗಳು ಕಳೆಯುವುದರಲ್ಲಿ ಅವನ ಶರೀರವೂ ಸಹ ಕಪ್ಪೆಯಂತೆ ಊದಿಕೊಳ್ಳಲು ಶುರುವಾಯಿತು. ಕೆಲವೇ ವಾರಗಳಲ್ಲಿ ತಂದೆಯಂತೆ ಅವನೂ ಸಹ ಕಣ್ಣು ಮುಖದಿಂದ ಆಚೆ ಬಂದಂತಾಗಿ ಮೃತಪಟ್ಟ. ಇಡೀ ಕುಟುಂಬ ಮತ್ತೆ ದುಃಖದಲ್ಲಿ ಮುಳುಗಿಹೋಯಿತು. ಮಗನಿಗೂ ತಂದೆಯಂತೆಯೇ ಏಕೆ ಆಯಿತು ಎಂದು ಅರ್ಥಮಾಡಿಕೊಳ್ಳದ ಸ್ಥಿತಿಗೆ ಕುಟುಂಬ ಬಂದುನಿಂತಿತು. ಹಾಗೆಯೇ ಮತ್ತೊಂದು ತಿಂಗಳ ಬಳಿಕ ಮನೆಯಲ್ಲಿಯೇ ಜಾರಿಬಿದ್ದ ಮತ್ತೊಬ್ಬ ಮಗನೂ ಸಹ ಕೆಲತಿಂಗಳಿನಲ್ಲಿ ಶರೀರವೆಲ್ಲ ಊದಿಕೊಂಡು ಕಪ್ಪೆಯಂತಹ ಆಕಾರದಲ್ಲಿ ಮೃತನಾದ. ಈ ಬಾರಿ ಹೆದರಿದ ಕುಟುಂಬಕ್ಕೆ ದಿಕ್ಕೇ ತೋಚದಂತಾಯಿತು. ಯಾರೋ ಏನೋ ಮಾಂತ್ರಿಕತೆ ಮಾಡುತ್ತಿರುವ ಬಗ್ಗೆ ಸಂಶಯ ಮೂಡಿತು. ಹೇಗೆ ಇದರಿಂದ ಪಾರಾಗಬೇಕು ಎನ್ನುವಷ್ಟರಲ್ಲಿ ಮತ್ತೊಬ್ಬ ಮಗ ಜ್ವರದಿಂದ ಹಾಸಿಗೆ ಹಿಡಿದ ಕೆಲವೇ ವಾರಗಳಲ್ಲಿ ಅವನೂ ಸಹ ಕಪ್ಪೆಯ ರೀತಿ ಮುಖ, ಶರೀರವೆಲ್ಲ ಊದಿಕೊಂಡು ಸತ್ತುಹೋದ. ಈಗ ಉಳಿದ ತಾಯಿ ಹಾಗೂ ಒಬ್ಬನೇ ಒಬ್ಬ ಮಗನಿಗೆ ಏನು ಮಾಡಬೇಕು ಎಂಬುದೇ ತೋಚದಂತಾಯಿತು. ಅಂತೂ ಯಾರೋ ನೀಡಿದ ಮಾಹಿತಿಯ ಮೇಲೆ ಬೇರೆ ಊರಲ್ಲಿ ಇದ್ದ ಓರ್ವ ದೈವೀ ಆರಾಧಕರಲ್ಲಿ ತೆರಳಿ ಇದರ ಪ್ರಸ್ತಾಪವಿಟ್ಟರು. ಬಳಿಕ ಕೆಲದಿನಗಳ ನಂತರ ಆ ವ್ಯಕ್ತಿ ಇವರ ಮನೆಗೆ ಬಂದು ಅಷ್ಟಮಂಗಲ ಮುಂತಾದ ಪ್ರಶ್ನೆಗಳನ್ನು ಇಟ್ಟು ನೋಡಿದಾಗ ಇವರ ಸಂಬಂಧಿಗಳೇ ಈ ಜಾಗದ ಮೇಲೆ ಮಂಡೂಕ ಪ್ರಯೋಗ ಅಂದರೆ ಕಪ್ಪೆಯ ಪ್ರಯೋಗ ಮಾಡಿದ್ದಾಗಿ ತಿಳಿಯುತ್ತದೆ. ಬಳಿಕ ಸೂಕ್ತ ಹವನ, ದುಷ್ಟಶಕ್ತಿಯ ಉಚ್ಚಾಟನೆಯ ಬಳಿಕ ಆ ಮನೆಯಲ್ಲಿ ನಡೆಯುತ್ತಿದ್ದ ಸಾಲು ಸಾಲು ಮರಣ‌ಗಳ ಸರತಿ ನಿಂತಿತು. ತಂದೆ ಕೋರ್ಟಿನಲ್ಲಿ ಗೆದ್ದ ಈ ಜಾಗದಲ್ಲಿ ಮನೆ ನಿರ್ಮಿಸಿದ್ದನ್ನು ಸಹಿಸದ ರಕ್ತಸಂಬಂಧಿಗಳೇ ಅಸೂಯೆಯಿಂದಾಗಿ ಈ ರೀತಿ ಮಾಡಿದ್ದು ಅವರಿಗೆ ಮನನವಾಯಿತು.

ಕುಟ್ಟಿಚಾತನ್ ಪ್ರಯೋಗ
ತಂದೆ ತಾಯಿ ಹಾಗೂ ಅವರಿಗೆ ಇಬ್ಬರು ಹೆಣ್ಣುಮಕ್ಕಳು. ಕಾಲೇಜು ಮುಗಿಸಿದ್ದರು. ತಂದೆ ಇಬ್ಬರಿಗೂ ಮದುವೆಗಾಗಿ ವರಗಳನ್ನು ನೋಡುತ್ತಿದ್ದರು. ಒಂದು ದಿನ ಸಂಜೆ ಸಮಯ ಹಿರಿಯ ಮಗಳು ಏತಕ್ಕೋ ಹೊರಹೋಗಿದ್ದಳು ದಿಢೀರನೆ ಮಳೆ ಪ್ರಾರಂಭವಾಗ ತೊಡಗಿತು. ರಸ್ತೆಯ ಮೇಲಿದ್ದ ಆಕೆ ಹತ್ತಿರವೇ ಇದ್ದ ಒಂದು ಅರಳಿಮರದ ಕಟ್ಟೆಯ ಬಳಿ ಮಳೆಯಿಂದ ತಪ್ಪಿಸಿಕೊಳ್ಳಲು ನಿಂತುಕೊಂಡಳು. ಕೊಂಚ ಬಯಲಿನಂತಿದ್ದ ಆ ಸ್ಥಳ ಮಳೆಯಿಂದಾಗಿ ನಿರ್ಜನವಾಗಿತ್ತು. ತಾಸು ಕಳೆದರೂ ಮಳೆ ಕಡಿಮೆಯಾಗಲಿಲ್ಲ. ಕಡೆಗೆ ತನ್ನ ಸೋದರಿಗೆ ಕರೆಮಾಡಿದ ಆಕೆ ತಾನಿದ್ದ ಸ್ಥಳ ತಿಳಿಸಿ ಗಾಡಿ ತೆಗೆದುಕೊಂಡು ಬರುವಂತೆ ತಿಳಿಸಿದಳು. ಹತ್ತು ನಿಮಿಷದಲ್ಲಿ ಅವಳ ಸೋದರಿ ತನ್ನ ದ್ವಿಚಕ್ರ ವಾಹನದಲ್ಲಿ ಬಂದು ಅಕ್ಕನನ್ನು ಕೂರಿಸಿಕೊಂಡು ಮಳೆಯಲ್ಲಿಯೇ ತರಾತುರಿಯಾಗಿ ಮನೆಯತ್ತ ಚಲಿಸಿದಳು. ಮನೆಗೆ ಬಂದು ಇಬ್ಬರೂ ಮಳೆಯಿಂದ ನೆನೆದಿದ್ದ ಕಾರಣ ಮತ್ತೆ ಶುಭ್ರವಾಗಿ ಬಂದು ತಂದೆತಾಯಿಯ ಬಳಿ ಕುಳಿತರು. ಕೆಲಕ್ಷಣಗಳಾಗಿವೆ ಅಷ್ಟರಲ್ಲಿಯೇ ಅಕ್ಕ ತೀವ್ರವಾದ ನೋವಿನಿಂದ ಮುಖ ಕಿವುಚುತ್ತಿರುವುದನ್ನು ಕಂಡ ತಾಯಿ ಏನಾಯಿತು ಎಂದು ಕೇಳುತ್ತಾಳೆ. ಅದಕ್ಕೆ ಅವಳು ಏನಿಲ್ಲ ಮಳೆಯಲ್ಲಿ ನೆನೆಯುತ್ತಾ ತುಂಬಾ ಸಮಯ ನಿಂತಿದ್ದೆನಲ್ಲ ಅದಕ್ಕೆ ಬೆನ್ನು ನೋವು ಎನ್ನುತ್ತಾಳೆ. ಎಲ್ಲರೂ ಅದಕ್ಕೆ ಅಷ್ಟು ಗಮನ ಕೊಡದೇ ಸುಮ್ಮನಾಗುತ್ತಾರೆ. ಮರುದಿನ ಅದೇ ಸಂಜೆ ಸಮಯಕ್ಕೆ ಮತ್ತೆ ಅಕ್ಕನಿಗೆ ಬೆನ್ನು ಕೈಕಾಲು ನೋವುಗಳು ಆರಂಭವಾಗುತ್ತದೆ. ಆಗ ತಾಯಿ ಅವಳ ಬಳಿ ಬಂದು ಸೂಕ್ಷ್ಮವಾಗಿ ಕೈ ಕಾಲುಗಳನ್ನು ನೋಡಿದಾಗ ಒಂದು ವಿಚಿತ್ರ ಎದುರಾಗುತ್ತದೆ. ಅವಳ ಕೈ ಕಾಲುಗಳ ಮೇಲೆಲ್ಲ ಬಾರುಕೋಲಿನಿಂದ ಹೊಡೆದ ಗುರುತುಗಳು ಕಾಣಿಸುತ್ತವೆ. ಬೆನ್ನಿನ ಮೇಲೆಯೂ ಸಹ ಅಂತಹುದೇ ದೊಡ್ಡ ದೊಡ್ಡ ಗುರುತುಗಳು. ದಿಗ್ಭ್ರಾಂತಿಗೊಂಡ ಮನೆಯವರೆಲ್ಲ ವೈದ್ಯರ ಬಳಿ ಕರೆದೊಯ್ಯುತ್ತಾರೆ. ವೈದ್ಯರು ಅವನ್ನು ಯಾರೋ ಹೊಡೆದ ಗುರುತುಗಳೇ ಎಂದು ದೃಡ ಪಡಿಸುತ್ತಾರೆ. ಮನೆಯಲ್ಲಿಯೇ ಇರುವ ತಮ್ಮ ಮಗಳಿಗೆ ಅದ್ಯಾರು ಹೊಡೆದರು ಎಂದು ಅವರಿಗೆ ತಿಳಿಯುವುದೇ ಇಲ್ಲ. ಮತ್ತೆ ಮರುದಿನ ಅದೇ ಸಮಯಕ್ಕೆ ಅಕ್ಕ ಬೆನ್ನು ನೋವು ಕೈ ಕಾಲು ನೋವುಗಳನ್ನು ಅನುಭವಿಸಲು ಪ್ರಾರಂಭಿಸುತ್ತಾಳೆ‌. ಅಹುದು ಮತ್ತೆ ಅವಳ ಬೆನ್ನು ಕೈ ಕಾಲುಗಳ ಮೇಲೆ ಹೊಡೆದ ಗುರುತುಗಳು ಮೂಡಿದ್ದವು. ಮನೆಮಂದಿಗೆ ಅದೇನು ವಿಚಿತ್ರ ಜರುಗುತ್ತಿದೆ ಎಂಬುದೇ ತಿಳಿಯುವುದಿಲ್ಲ. ಮರುದಿನ ಸಂಜೆ ಎಲ್ಲರೂ ಅವಳೆದುರೇ ಕುಳಿತಿದ್ದರು ಚೆನ್ನಾಗಿಯೇ ಇದ್ದ ಅವಳು ನೋಡುನೋಡುತ್ತಿದ್ದಂತೆಯೇ ನೋವಿನಿಂದ ಬಳಲಲು ಆರಂಭಿಸಿದಳು ಕೈ ಕಾಲುಗಳ ಮೇಲೆಲ್ಲ ಹೊಡೆದ ಗುರುತುಬಿದ್ದವು. ಮನೆಯ ಜನಕ್ಕೆ ಏನು ಜರುಗುತ್ತದೆ ಎಂಬುದೆ ಅರ್ಥವಾಗದಂತಾಯಿತು. ಮರುದಿನ ಮತ್ತೆ ಸಂಜೆಯ ಸಮಯಕ್ಕೆ ತಾಯಿ ಅವಳಿಗೆ ದೇವರ ಕುಂಕುಮ ಹಚ್ಚಿಕೊಂಡು ಕೂರುವಂತೆ ಸೂಚಿಸಿದಳು ಅದರಂತೆ ಮಾಡಿದ ಅವಳಿಗೆ ಕೆಲಕ್ಷಣಗಳಲ್ಲಿ ಒಂದು ವಿಚಿತ್ರ ಎದುರಾಯಿತು. ಎಲ್ಲರೂ ಎದುರಿಗಿದ್ದರೂ ಯಾರೋ ಒಬ್ಬ ಕುಳ್ಳಗಿನ ಬೋಳುತಲೆಯ ವ್ಯಕ್ತಿ ಅವಳತ್ತ ಬಂದು ಅವಳಿಗೆ ಕೋಲಿನಲ್ಲಿ ಹೊಡೆಯತೊಡಗಿದ. ಅವನ ಹೊಡೆತದ ತೀವ್ರತೆ ತಾಳದೇ ಅವಳು ನೆಲಕ್ಕೆ ಬಿದ್ದು ಒದ್ದಾಡತೊಡಗಿದಳು. ಮನೆಮಂದಿಯಲ್ಲ ಅದಾಗಲೇ ಭಯಭೀತರಾಗಿದ್ದಾರೆ. ಕೆಲತಾಸಿನ ಬಳಿಕ ಸಾವರಿಸಿಕೊಂಡ ಆಕೆ ತನಗೆ ಹೊಡೆದ ಆ ಕುಳ್ಳ ವ್ಯಕ್ತಿ ಬಗ್ಗೆ ಕೇಳುತ್ತಾಳೆ. ಅಸಲಿಗೆ ಆಕೆಗೆ ಹೊರತು ಪಡಿಸಿ ಇನ್ಯಾರಿಗೂ ಆ ವ್ಯಕ್ತಿ ಕಾಣಿಸಿರುವುದೇ ಇಲ್ಲ. ಎಲ್ಲರೂ ಸಹ ತಮಗಾರೂ ಕಾಣಿಸಲಿಲ್ಲ ಎಂದು ತಿಳಿಸುತ್ತಾರೆ. ತಂದೆ ತಾಯಿಗೆ ಯಾರೂ ತಮಗಾಗದವರು ಏನೋ ಮಾಂತ್ರಿಕತೆ ಮಾಡುತ್ತಿರಬೇಕು ಎಂಬ ಸಂಶಯಕ್ಕೆ ಬೀಳುತ್ತಾರೆ. ಮರುದಿನ ಓರ್ವ ಮಂತ್ರವಾದಿಯ ಬಳಿ ತಮ್ಮ ಮಗಳನ್ನು ಕರೆದೊಯ್ದು ನಡೆಯುತ್ತಿರುವ ವಿಚಿತ್ರಗಳನ್ನು ತೆರೆದಿಡುತ್ತಾರೆ. ಆಗ ಮಂತ್ರವಾದಿ ಅಂಜನ ಮುಂತಾದ ವಿದ್ಯೆಗಳಿಂದ ಸಮಸ್ಯೆಯ ಮೂಲವನ್ನು ಹುಡುಕುತ್ತಾರೆ. ಅವರ ಮಗಳು ಅಂದು ಮಳೆಯಲ್ಲಿ ಯಾವುದೋ ಮರದ ಬಳಿ ನಿಂತಿದ್ದ ಸಮಯದಿಂದ ಈ ಸಮಸ್ಯೆ ಪ್ರಾರಂಭವಾಗಿದ್ದು, ಬೇರೆ ಯಾರೋ ತಮ್ಮ ಸ್ವಾರ್ಥಕ್ಕಾಗಿ ಕುಟ್ಟಿಚಾತನ್ ಎಂಬ ಕೇರಳಿಯ ಮಾಂತ್ರಿಕತೆಯ ಶಕ್ತಿಯನ್ನು ಬಳಸಿಕೊಂಡಿದ್ದಾರೆ. ತನ್ನ ಕೆಲಸ ಸಾಧಿಸಲು ವಿಫಲವಾದ ಆ ಕುಟ್ಟಿಚಾತನ್ ಎಂಬ ಶಕ್ತಿಯು ಪುನಃ ತನ್ನನ್ನು ಸೃಷ್ಟಿಸಿದವರಿಗೆ ಕಾಟಕೊಡಲು ಆರಂಭಿಸಿದೆ. ಅದನ್ನು ಸೃಷ್ಟಿಮಾಡಿದ್ದ ಆ ಮಾಂತ್ರಿಕ ಅದನ್ನು ಅವರ ಮಗಳು ನಿಂತ ಜಾಗದಲ್ಲಿ ದಿಗ್ಭಂದಿಸಿ ತೆರಳಿದ್ದ. ಬಳಿಕ ಅವರ ಮಗಳು ಅಲ್ಲಿ ನಿಂತಿದ್ದ ಕಾರಣಕ್ಕೆ ಆ ಕುಟ್ಟಿಚಾತನ್ ಎಂಬ ಶಕ್ತಿ ಅವಳನ್ನೇ ಹಿಂಬಾಲಿಸಿ ಬಂದಿದೆ ಎಂಬ ವಿಷಯಗಳನ್ನು ತಂದೆತಾಯಿಯರಿಗೆ ತಿಳಿಸುತ್ತಾರೆ. ಅದರ ಗುರಿ ನಿಮ್ಮ ಮಗಳಲ್ಲ ಸುಮ್ಮ ಸುಮ್ಮನೆಯೇ ನಿಮ್ಮ ಮಗಳಿಗೆ ಅದು ತೊಂದರೆ ಕೊಡುವುದಿಲ್ಲ ಬದಲಾಗಿ ನೀವು ಸಂಜೆಯ ಸಮಯ ಮನೆಯ ದೇವರಿಗೆ ದೀಪ ಹಚ್ಚಿದ ಬಳಿಕ ಆ ಕುಟ್ಟಿಚಾತನ್ ಶಕ್ತಿಗೆ ತೊಂದರೆಯಾಗುತ್ತದೆ ಆ ಕಾರಣಕ್ಕೆ ಅದು ತನ್ನನ್ನು ಕರೆದುಕೊಂಡು ಬಂದ ನಿಮ್ಮ ಮಗಳಿಗೆ ಹೊಡೆಯಲು ಆರಂಭಿಸುತ್ತದೆ ಎಂಬೆಲ್ಲ ಅಂಶಗಳೂ ಮಂತ್ರವಾದಿಯಿಂದ ತಿಳಿಯುತ್ತದೆ. ಬಳಿಕ ಆ ಮಂತ್ರವಾದಿ ಆ ಕುಟ್ಟಿಚಾತನ್ ಶಕ್ತಿಯನ್ನು ಆಹ್ವಾನಿಸಿ ನಿರ್ಜನ ಕಾಡಿನಲ್ಲಿ ದಿಗ್ಭಂಧಿಸಿ ಬರುತ್ತಾನೆ. ಕಡೆಗೆ ಅವರ ಮಗಳಿಗೆ ಆ ತರಹದ ಅನುಭವಗಳು ಆಗುವುದು ನಿಂತುಹೋಗುತ್ತದೆ.

ಪ್ರತಿಮಾ ಪ್ರಯೋಗ
ಎರಡು ಮನೆಗಳು ಅಕ್ಕಪಕ್ಕದಲ್ಲಿವೆ. ಒಂದಕ್ಕೊಂದು ತಾಗಿಕೊಂಡಂತೇ ಇವೆ. ಎರಡು ಅಡಿಯ ಜಾಗಕ್ಕಾಗಿ ಎರಡೂ ಮನೆಗಳ ಜನರಿಗೆ ದಿನ ನಿತ್ಯವೂ ಜಗಳ. ಎರಡೂ ಮನೆಯವರು ಹಾಗೆ ನೋಡಿದರೆ ಸಂಬಂಧಿಗಳೂ ಹೌದು. ಸುಮಾರು ವರುಷಗಳಿಂದ ಈ ಜಗಳ ನಡೆದುಕೊಂಡು ಬಂದಿತ್ತು. ಪರಸ್ಪರ ಬೈದುಕೊಳ್ಳುವುದು ಎರಡೂ ಮನೆಯವರಿಗೆ ಸಾಮಾನ್ಯವಾಗಿ ಹೋಗಿತ್ತು. ಹೀಗಿರುವಾಗ ಒಂದು ದಿನ ಒಂದು ಮನೆಯ ಹಿರಿಯನೊಬ್ಬ ಆ ಮನೆಯ ಇನ್ನೊಬ್ಬನೊಡನೆ ವಾದವಿವಾದ ಶುರುವಿಟ್ಟುಕೊಂಡ ನೋಡು ನೋಡುತ್ತ ವಿವಾದ ತಾರಕಕ್ಕೇರಿತು. ಈರ್ವರಿಂದಲೂ ನಿಂದನೆಗಳು ಮಿತಿಮೀರಿ ಕೇಳತೊಡಗಿದವು. ಅರ್ಧಮುಕ್ಕಾಲು ಗಂಟೆಯಾದರೂ ಕಲಹ ತಂಪಾಗುವ ಲಕ್ಷಣ ಕಾಣಿಸಲಿಲ್ಲ. ತಕ್ಷಣ ಆ ಒಂದು ಮನೆಯ ಹಿರಿಯನಿಗೆ ಪಕ್ಕದ ಮನೆಯ ಯುವಕನೋರ್ವ ಬಂದು ತಳ್ಳಿಯೇ ಬಿಟ್ಟ. ತಕ್ಷಣ ಕ್ರೋಧಿತನಾದ ಆ ಹಿರಿಯ, ವಯಸ್ಸಿನಲ್ಲಿ ಸಣ್ಣವನಾದ ನೀನು ನನ್ನ ಮೇಲೆ ಕೈ ಮಾಡಿದೆಯಾ ಇದಕ್ಕೆ ನೀನು ಅನುಭವಿಸುತ್ತೀಯ ಎಂದು ಅರಚುತ್ತಾ ತನ್ನ ಮನೆ ಸೇರಿಕೊಂಡ. ಕೆಲವಾರಗಳು ಜಾರಿದವು. ಒಂದು ಹಬ್ಬದ ದಿನ ಎರಡೂ ಮನೆಗಳಿಗೆ ದೂರದ ಸಂಬಂಧಿಯೊಬ್ಬ ಬಂದ ಎರಡೂ ಮನೆಯವರೊಂದಿಗೆ ಸಮದೃಷ್ಟಿಯಿಂದ ಭೇದವೆಣಿಸದೇ ನಗುನಗುತ್ತ ಕಾಲವನ್ನು ಕಳೆದ ವಾರದ ಬಳಿಕ ಅಲ್ಲಿಂದ ಹಿಂತಿರುಗುವಾಗ ಎರಡೂ ಮನೆಯ ಜನರಲ್ಲಿ ಪರಸ್ಪರ ಎಂದಿಗೂ ಜಗಳವಾಡಬೇಡಿ ಎಂದು ಸಮಾಧಾನಿಸಿ ತೆರಳಿದ. ಒಂದು ಹದಿನೈದು ದಿನದ ಬಳಿಕ ಪಕ್ಕದ ಮನೆಯ ಹಿರಿಯನನ್ನು ತಳ್ಳಿದ್ದ ಆ ಯುವಕ ತೀವ್ರ ಜ್ವರದಿಂದಾಗಿ ಹಾಸಿಗೆ ಹಿಡಿದು ಮಲಗಿದ. ವಾರ ಕಳೆದರೂ ಜ್ವರದ ತಾಪ ಕುಂದಲಿಲ್ಲ. ವೈದ್ಯರ ಚಿಕಿತ್ಸೆಗೂ ಜ್ವರ ನಿಲ್ಲುವ ಲಕ್ಷಣ ಕಾಣಲಿಲ್ಲ. ಎರಡು ದಿನಗಳಲ್ಲಿ ಆ ಯುವಕನ ಒಂದುಕಾಲು ತಿರುಚಿಕೊಂಡು ತ್ರಾಣವಿಲ್ಲದಂತಾಯಿತು. ಮನೆಮಂದಿಗೆಲ್ಲ ಗಾಬರಿ, ಯುವಕನಿಗೆ ಯಾವುದೋ ಕಾಯಿಲೆ ಆವರಿಸಿದೆ ಎಂದು ತಿಳಿದುಕೊಂಡರು. ಮರುದಿನ ಮತ್ತೊಂದು ಕಾಲು ಸಹ ಹಾಗೆಯೇ ತಿರುಚಿಕೊಂಡು ನಿತ್ರಾಣವಾಯಿತು. ಮನೆಮಂದಿ ಗಾಬರಿಯಿಂದ ವೈದ್ಯರನ್ನು ಕರೆಸಿದರು. ವೈದ್ಯರಿಗೂ ಹೀಗೇಕೆ ಆಗುತ್ತಿದೆ ಎಂದು ತಿಳಿಯಲಿಲ್ಲ. ವಾರ ಕಳೆಯುವುದರಲ್ಲಿ ಆ ಯುವಕನ ಎರಡೂ ಕೈಗಳು , ಸೊಂಟದ ಭಾಗ, ಬೆನ್ನು ಎಲ್ಲವೂ ನಿತ್ರಾಣವಾಗತೊಡಗಿದವು. ಬರಿ ಕುತ್ತಿಗೆಯಲ್ಲಿ ಜೀವವಿದ್ದ ಹಾಗೆ ಯುವಕ ನರಳಾಡುತ್ತಿದ್ದ. ವಾರದ ಬಳಿಕ ಕುತ್ತಿಗೆಯಲ್ಲೂ ತ್ರಾಣ ಕಳೆದುಕೊಂಡು ಒದ್ದಾಡುತ್ತ ಅಸುನೀಗಿದ. ಅಂದು ಈ ಯುವಕನಿಂದ ತಳ್ಳಿಸಿಕೊಂಡಿದ್ದ ಆ ಪಕ್ಕದ ಮನೆಯ ವ್ಯಕ್ತಿ ಈ ಯುವಕನ ಮೇಲೆ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದ. ಹಬ್ಬಕ್ಕೆಂದು ಸಂಬಂಧಿಯಾಗಿ ಎರಡೂ ಮನೆಗೆ ಬಂದಿದ್ದ ಆ ವ್ಯಕ್ತಿಯ ಮೂಲಕ ಪಕ್ಕದ ಮನೆಯ ಆ ಯುವಕನ ಕೂದಲು,ಕಾಲಿನಿಂದ ಮೆಟ್ಟಿದ ಮಣ್ಣು, ಉಗುರು, ಎಂಜಲು, ಬಟ್ಟೆಯ ಚೂರು ಇತ್ಯಾದಿಗಳನ್ನು ಗುಟ್ಟಾಗಿ ಸಂಗ್ರಹಿಸಿ ತರುವಂತೆ ಕೇಳಿಕೊಂಡಿದ್ದ. ಸ್ವತಃ ಸಂಬಂಧಿ ಎಂಬುದನ್ನೂ ಮರೆತು ಆ ವ್ಯಕ್ತಿ ಆ ಯುವಕನ ಆಯಾ ವಸ್ತುಗಳನ್ನು ತಂದು ಆ ವ್ಯಕ್ತಿಗೆ ನೀಡಿದ್ದ. ಬಳಿಕ ಆ ಪಕ್ಕದ ಮನೆಯ ವ್ಯಕ್ತಿ ಆ ಯುವಕನ ಮೇಲೆ ಪ್ರತಿಮಾ ಪ್ರಯೋಗ ಎಂಬ ಭೀಕರ ಮಾಂತ್ರಿಕ ಪ್ರಯೋಗವನ್ನು ಮಾಡಿಸಿಬಿಟ್ಟ. ಮಾಂತ್ರಿಕ ತಾನು ತಯಾರಿಸಿದ್ದ ಹಿಟ್ಟಿನ ಗೊಂಬೆಗೆ ಆ ಯುವಕನ ಕೂದಲುಗಳನ್ನು ಅಂಟಿಸಿದ, ಬಟ್ಟೆಯ ಚೂರನ್ನು ಅದಕ್ಕೆ ಹೊದಿಸಿದ, ಉಗುರಿನ ಚೂರನ್ನು ಸಿಕ್ಕಿಸಿದ, ಮಣ್ಣನ್ನು ಲೇಪಿಸಿದ ಹೀಗೆ ಆ ಯುವಕನ ದೇಹದ ಪ್ರತಿರೂಪ ಎಂಬಂತೆ ಆ ಗೊಂಬೆಯನ್ನು ಮಲಗಿಸಿದ. ಇತ್ತ ಆ ಮಂತ್ರವಾದಿ ಸೂಜಿಯಿಂದ ಒಂದೊಂದೆ ಅಂಗವನ್ನು ಚುಚ್ಚುತ್ತ ಹೋದಂತೆ ಅಲ್ಲಿ ಆ ಯುವಕನ ಒಂದೊಂದೆ ಅಂಗ ನಿತ್ರಾಣವಾಗುತ್ತ ಹೋಯಿತು. ಕೊನೆಗೆ ಆ ಗೊಂಬೆಯ ರುಂಡ ಮುರಿಯುವ ಮೂಲಕ ಆ ಯುವಕ ಅಸುನೀಗಿಬಿಟ್ಟ.
ಇದು ಮಾಂತ್ರಿಕ ಜಗತ್ತಿನ ಅತ್ಯಂತ ಕ್ರೂರ ಪ್ರಯೋಗ ಎಂಬುದು ನಂಬಲರ್ಹ ಸತ್ಯ.

ಪ್ರಚೋದನಾ ಪ್ರಯೋಗ
ಸಣ್ಣ ಕುಟುಂಬವೊಂದರಲ್ಲಿ ತಂದೆ ತಾಯಿ ಹಾಗೂ ಒಬ್ಬ ಮಗ. ಕೂಲಿ ಮಾಡಿ ಬದುಕುವ ಕುಟುಂಬವದು. ತಂದೆಗೆ ಒಬ್ಬ ಆಪ್ತ ಸ್ನೇಹಿತನಿದ್ದ ಅವನೊಡನೆಯೇ ಇವನು ದಿನವೂ ಕೂಲಿ ಕೆಲಸಕ್ಕೆ ತೆರಳುತ್ತಿದ್ದ. ಹೀಗೆ ಹಲವು ವರ್ಷಗಳು ಸಾಗಿದ್ದವು. ಒಮ್ಮೆ ಈತನಿಗೆ ಲಾಟರಿಯಲ್ಲಿ ಭರ್ಜರಿ ಹಣ ಬಹುಮಾನವಾಗಿ ದೊರೆತುಬಿಟ್ಟಿತು. ಕುಟುಂಬಕ್ಕೆ ಸಂತಸವೋ ಸಂತಸ. ತಮ್ಮ ಕಷ್ಟಕಾಲ ಕಳೆಯಿತೆಂದು ಎಲ್ಲರೂ ನಿಟ್ಟುಸಿರು ಬಿಟ್ಟರು. ದೊರೆತ ಹಣದಿಂದ ಆತ ಒಂದು ಭವ್ಯವಾದ ಮನೆಯನ್ನು ನಿರ್ಮಿಸಿದ. ಗೃಹಪ್ರವೇಶಕ್ಕೆ ತನ್ನ ಎಲ್ಲ ಸ್ನೇಹಿತರನ್ನೂ ಕರೆದು ಸಿಹಿ ಹಂಚಿದ. ಮನೆನೋಡಿದ ಎಲ್ಲರೂ ಕಣ್ಣಗಲಿಸಿದರು. ಆವನ ಆಪ್ತ ಸ್ನೇಹಿತನೂ ತನ್ನ ಬಹುಕಾಲದ ಸ್ನೇಹಿತ ಭಾರಿ ಮನೆ ಕಟ್ಟಿದ್ದಾನೆಂದು ಒಳಗೊಳಗೆ ಅಂದುಕೊಂಡ. ಆನಂತರ ಅವನೊಡನೆ ಆ ಕುಟುಂಬದ ಒಡೆಯ ಕೂಲಿ ಕೆಲಸಕ್ಕೆ ಬರುವುದನ್ನು ನಿಲ್ಲಿಸಿ ಬೇರೆ ಕೆಲಸಕ್ಕೆ ಸೇರಿಕೊಂಡ. ಕೆಲತಿಂಗಳುಗಳಾದವು, ಅದೊಂದು ಅಮವಾಸ್ಯೆಯ ದಿನ ಮನೆಯ ಬಾಗಿಲಿನ ಎದುರಿಗೆ ಯಾರೋ ಕೋಳಿಯ ರುಂಡ , ಲಿಂಬೆಹಣ್ಣು ಮುಂತಾದ ವಾಮಾಚಾರ ವಸ್ತುಗಳನ್ನು ಅಚ್ಚು ಕಟ್ಟಾಗು ಜೋಡಿಸಿಟ್ಟಿದ್ದರು. ಒಂದೊಮ್ಮೆ ಅವನ್ನು ನೋಡಿ ಗಾಬರಿಗೊಂಡರೂ ಅದೇನು ಆಗುವುದಿಲ್ಲ ಎಂಬ ಭರವಸೆಯ ಮೇಲೆ ಅವನ್ನೆಲ್ಲ ತೆಗೆದು ಹೊರಗೆ ಎಸೆಯುತ್ತಾರೆ. ಹದಿನೈದು ದಿನದ ಬಳಿಕ ಪೌರ್ಣಮಿಯ ದಿನ ಮತ್ತೆ ಮನೆಯ ಬಾಗಿಲಿನ ಎದುರು ಆಡಿನ ತಲೆ, ರಕ್ತದಲ್ಲಿ ಕಲಸಿದ ಅನ್ನ ಮತ್ತೂ ಹಲವಾರು ವಸ್ತುಗಳು ‌ಜೋಡಿಸಿಟ್ಟುರುತ್ತಾರೆ. ಮರುದಿನ ಅವನ್ನು ಕಂಡ ಮನೆಮಂದಿ ಒಂದು ಕ್ಷಣ ದಿಗ್ಭ್ರಾಂತರಾಗುತ್ತಾರೆ. ತಮಗೆ ಯಾರೋ ವಾಮಾಚಾರ ಮಾಡುತ್ತಿದ್ದಾರೆಂದು ಅವರಿಗೆ ಅನುಮಾನ ಕಾಡಲು ಶುರುವಾಗುತ್ತದೆ. ಕೆಲದಿನಗಳು ಸಂದಿವೆ ರಾತ್ರಿ ಸಮಯದಲ್ಲಿ ಮನೆಯಲ್ಲಿನ ವಸ್ತುಗಳು ಇದ್ದಕ್ಕಿಂದತೆಯೇ ಬೀಳಲು ಶುರುವಾಗುತ್ತದೆ. ಮೊದಮೊದಲು ಒಂದೇ ಕೋಣೆಯಲ್ಲಿ ಉಂಟಾಗುತ್ತಿದ್ದ ಸನ್ನಿವೇಶಗಳು ಬರುಬರುತ್ತ ಎಲ್ಲ ಕೋಣೆಗಳಿಗೂ ವ್ಯಾಪಿಸುತ್ತದೆ. ರಾತ್ರಿಯಾದರೆ ಸಾಕು ಮನೆಮಂದಿ ಭಯ ಬೀಳಲು ಆರಂಭಿಸುತ್ತಾರೆ. ಏನು ಮಾಡಬೇಕು ಎಂದು ತಡಕಾಡುತ್ತಿರುವಾಗ ಯಾರದ್ದೋ ಸಲಹೆಯ ಅನ್ವಯ ಓರ್ವ ಮಾಂತ್ರಿಕನ ಬಳಿ ಬಂದು ನಡೆಯುತ್ತಿರುವ ಘಟನೆಗಳ ಬಗ್ಗೆ ವಿವರಿಸುತ್ತಾರೆ. ಆ ಮಾಂತ್ರಿಕ ಅಷ್ಟಮಂಗಲ ಪ್ರಶ್ನೆಯನ್ನು ಹಾಕಿ ತಾಳೆ ನೋಡಿದಾಗ ಮನೆ ಯಜಮಾನ ಪರಿಚಯದ ಗೆಳೆಯರೇ ಮನೆಯ ಮೇಲೆ ಪ್ರಚೋದನಾ ಪ್ರಯೋಗ ಮಾಡಿಸಿದ್ದಾರೆ. ನಿಮ್ಮ ಮನೆಯ ಎದುರಿಗೆ ಕ್ಷುದ್ರ ಶಕ್ತಿಗಳಿಗೆ ಪ್ರಿಯವಾದ ರಕ್ತ ಭಕ್ಷ್ಯಗಳನ್ನಿಟ್ಟು ಅವನ್ನು ನಿಮ್ಮ ಮನೆ ಪ್ರವೇಶವಾಗುವಂತೆ ಮಾಡಿದ್ದಾರೆ. ದಿನೇ ದಿನೇ ಸುತ್ತಮುತ್ತಲಿನ ಅತೃಪ್ತ ಪ್ರೇತಗಳು ನಿಮ್ಮ ಮನೆಯನ್ನು ಪ್ರವೇಶಿಸಿ ಮನೆಯಲ್ಲಿ ಚೇಷ್ಟೆಯನ್ನು ಆರಂಭಿಸುತ್ತಿವೆ ಎಂಬೆಲ್ಲ ವಿಷಯಗಳು ತಿಳಿದು ಬರುತ್ತದೆ. ಅವನ ಬಹುಕಾಲದ ಗೆಳೆಯ ಈತನ ಉನ್ನತಿಯನ್ನು ಸಹಿಸದೇ ಅವನ ಮೇಲೆ ಈ ಪ್ರಚೋದನಾ ಪ್ರಯೋಗ ಮಾಡಿಸಿಬಿಟ್ಟಿದ್ದ. ಕೊನೆಗೆ ಮಾಂತ್ರಿಕ ವಿಧವಿಧದ ಹವನಗಳನ್ನು ಕೈಗೊಂಡು ಮನೆಯಲ್ಲಿನ ಪ್ರೇತಗಳನ್ನು ಉಚ್ಚಾಟನೆಗೊಳಿಸುತ್ತಾನೆ. ತದನಂತರ ಮನೆಯಲ್ಲಿ ಅಂತಹ ಘಟನೆಗಳು ನಿಂತು ಹೋಗುತ್ತವೆ.

ಮೇಲಿನ ನಾಲ್ಕು ಕಥೆಗಳನ್ನೂ ಸೂಕ್ಷ್ಮವಾಗಿ ಗಮನಿಸಿದಾಗ ಈ ಅಸೂಯೆಯ ಕ್ರೌರ್ಯ ಏನೆಲ್ಲ ಮಾಡುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಸ್ವಂತ ಸಂಬಂಧ , ಗೆಳತನ ಎಲ್ಲವನ್ನೂ ಮೀರಿ ನುಸುಳುವುದೇ ಈ ಅಸೂಯೆಯ ಲಕ್ಷಣ. ಎದುರಾಳಿಯನ್ನು ಮುಖಾಮುಖಿ ಗೆಲ್ಲದೇ ಹಿಂದಿನಿಂದ ವಾಮಾಚಾರಗಳಂತಹ ಪ್ರಯೋಗಗಳನ್ನು ಮಾಡಿಸುವುದು ಎಲ್ಲದಕ್ಕಿಂತ ಹೇಯ ಕೃತ್ಯ. ತಮ್ಮ ತಪ್ಪಿಲ್ಲದಿದ್ದರೂ ಇಂತಹ ವಾಮಾಚಾರಕ್ಕೆ ಅದೆಷ್ಟೋ ಜನ ನೋವು ಅನುಭವಿಸುತ್ತಾರೆ. ಇಂದು ಒಬ್ಬನು ಮಾಡಿಸಿದ ವಾಮಾಚಾರ, ದುಷ್ಟಶಕ್ತಿಗಳ ಪ್ರಯೋಗದಿಂದ ಮತ್ತೊಬ್ಬರ ನಾಶವಾಗಬಹುದು ಆದರೆ ಮುಂದೊಮ್ಮೆ ಆ ವಾಮಾಚಾರ ಪ್ರಯೋಗದ ಪಾಶ ಮತ್ತೊಂದು ರೂಪದಲ್ಲಿ ಸ್ವತಃ ಅವರಿಗೇ ನೇಣು ಕುಣಿಕೆಯಾಗಿ ಮರಳಿ ಬಂದೇ ಬರುತ್ತದೆ. ಒಂದು ವಿಷಯಕ್ಕೆ ವಾದ ವಿವಾದ ಉಂಟಾಗುವುದು ಸ್ವಾಭಾವಿಕ, ಎಲ್ಲರೂ ಒಂದೇ ತೆರನಾಗಿ ಆಲೋಚಿಸುವುದಿಲ್ಲ. ಅದಕ್ಕಾಗಿ ನಮ್ಮ ವಾದ ಒಪ್ಪದವರ ವಿರುದ್ಧ ಇಂತಹ ನೀಚ ಕೃತ್ಯಕ್ಕೆ ಎಂದಿಗೂ ಕೈ ಹಾಕಬಾರದು. ಮಾಟಮಂತ್ರಾದಿ ಕೃತ್ರಿಮಗಳನ್ನು ಮಾಡಲು ಮನುಷ್ಯನ ಗುಣವಾದ ನಂಬಿಕೆ
ಎಂಬುವುದನ್ನು ಎಂದಿಗೂ ಅಸ್ತ್ರಮಾಡಿಕೊಳ್ಳಬಾರದು. ತನ್ನವರೆಂಬ ನಂಬಿಕೆಯಿಂದಾಗಿಯೆ ಮನುಷ್ಯ ಸಲಿಗೆಯನ್ನು ನೀಡಿ ಆಪ್ತತೆಯನ್ನು ಬೆಳೆಸಿಕೊಳ್ಳುತ್ತಾನೆ. ಇಂತಹ ಆಪ್ತತೆಗೆ ವಂಚನೆ ಎಸಗುವುದರಿಂದ ಅದೇನು ತೃಪ್ತಿ ಸಿಗಬಹುದು ? ಅತಿಯಾಸೆ, ಅಸೂಯೆಯನ್ನು ಬೀಡುವುದು ಮನುಜನಿಗೆ ಅಸಾಧ್ಯ ಆದರೆ ಅವುಗಳ ತೀವ್ರತೆಯನ್ನು ಕಡಿಮೆಗೊಳಿಸುವ ತಾಳ್ಮೆಯನ್ನಾದರೂ ಆತ ಹೊಂದಬೇಕು. ತಾನೂ ಬದುಕಿ ಇತರರನ್ನೂ ಬದುಕಲು ಬಿಡಬೇಕು. ಅದೇ ಅಲ್ಲವೇ ಮಾನವೀಯತೆ.