Click here to Download MyLang App

ಕಾಮಧೇನು ಕಾಳಿ - ಬರೆದವರು : ಅಣ್ಣಪ್ಪ ಬುತ್ತಿ

ಪ್ರತಿನಿತ್ಯದಂತೆ ಕೊಡಲಿಯನ್ನು ಮಸೆದು ಹರಿತಗೊಳಿಸಿ ಅರಣ್ಯದ ಕಡೇ ಗುಡ್ಡಪ್ಪ ಹೊರಟ, ಕಟ್ಟಿಗೆಯನ್ನು ತುಂಡು ಹಾಕುವುದು ಸಾಗುತ್ತಾ ಇತ್ತು. ಮದ್ಯಾಹ್ನದ ಬಿಸಿಲಿನ ಬೇಗೆಗೆ ತಂದಿದ್ದ ನಿರೆಲ್ಲವೂ ಖಾಲಿಯಾಗಿ ಬಾಯಾರಿಕೆಯಿಂದ ಗುಡ್ಡಪ್ಪ ಬಳಲಿಹೋಗಿದ್ದ. ದಿನವು ಊಟ ತರುತ್ತಿದ್ದ ಗೌಡರ ಮತ್ತೊಬ್ಬ ಜೀತದಾಳು ಗಂಟೆ ಮೂರಾದರು ಬರಲಿಲ್ಲ. ಬಾಯಾರಿಕೆಯಿಂದ ಗುಡ್ಡಪ್ಪ ಊರ ಹೊರಗಿನ ಬಾವಿಯ ಕಡೇ ಸಾಗಿದ ಎಷ್ಟೋ ಹೊತ್ತು ಕಾಯ್ದು ಕುಳಿತರು, ಊರಿನ ಕಡೆಯಿಂದ ಬಾವಿಯ ಸಮೀಪ ಯಾರು ಸುಳಿಯಲಿಲ್ಲ.
ಬಾಯಾರಿ ಬಸವಳಿದಿದ್ದ ಗುಡ್ಡಪ್ಪ ವಿಧಿ ಇಲ್ಲದೆ ಯೋಚಿಸತೊಡಗಿದ. ಮದ್ಯಾಹ್ನದ ಹೊತ್ತು ಊರಿಗೆ ಹೋಗಿ ಯಾರನ್ನು ನೀರು ಕೇಳುವಂತಿರಲಿಲ್ಲ. ಕೊನೆಗೇ ಗುಡ್ಡಪ್ಪ ಬಾವಿಯ ಹತ್ತಿರ ಬಂದು ನೀರನ್ನು ತುಂಬಿ ಇನ್ನೇನು ನೀರು ಕುಡಿಯಬೇಕು ಎನ್ನುವಸ್ಟರಲ್ಲಿ ದಾರಿಹೋಕ ಬ್ರಾಹ್ಮಣನೊಬ್ಬ ಗುಡ್ಡಪ್ಪನನ್ನು ನೋಡಿ ಅವನನ್ನು ತಡೆದು, ವಿಚಾರಿಸಿದ. ನಂತರ ಊರ ಜನರನ್ನು ಸೇರಿಸಿದನು. ಗುಡ್ಡಪ್ಪ ಏನೆಲ್ಲಾ ಹೇಳಿದರೂ ಯಾರು ಕೇಳಲಿಲ್ಲ. ತಾನು ಜೀತಕ್ಕೆ ಇದ್ದಂತಹ ಗೌಡರ ಮನೆಯವರು ಸಹ ಏನು ಹೇಳಲಿಲ್ಲ.
ಬಾವಿಯನ್ನು ಮುಟ್ಟಿ ಅಪವಿತ್ರ ಮಾಡಿದಕ್ಕೆ ಪ್ರತಿಯಾಗಿ ಗುಡ್ಡಪ್ಪನು ಊರಿಂದ ಬಹಿಷ್ಕಾರ ಹಾಕಲ್ಪಟ್ಟನು. ಹೀಗೆ ಊರಿಂದ ದೂರಾನೇ ಉಳಿದ. ಗುಡ್ಡಪ್ಪ ಕಟ್ಟಿಗೆ ಕಡಿದು ಪಟ್ಟಣಕ್ಕೆ ಒಯ್ದು ಮಾರಿ ಬಂದ ಸ್ವಲ್ಪ ದುಡ್ಡಿನಲ್ಲಿ ಅರಣ್ಯದ ಸಮೀಪವೇ ಗುಡಿಸಲನ್ನು ಕಟ್ಟಿಕೊಂಡನು.
ದಿನಕಳೆದಂತೆ ಗುಡ್ಡಪ್ಪ ಮದುವೆಯಾದನು. ಹೆಂಡತಿಯ ತವರು ಮನೆಯವರು ಬಳಲಿಯಾಗಿ ಒಂದು ಎಮ್ಮೆಯನ್ನು ಕೊಟ್ಟಿದಷ್ಟೇ, ಶಿವಾ! ತಿರುಗಿ ಗುಡ್ಡಪ್ಪನ ಬಳಿಗೆ ಒಮ್ಮೇಯೂ ಬಂದಿರಲಿಲ್ಲ. ಗಂಡ-ಹೆಂಡತಿಯರು ಅಷ್ಟೇ ತಮ್ಮ ಜೀವನ ದೂಡಿಕೊಂಡು ಬದುಕಿದ್ದರು. ಆದರೆ ಯಾರ ವಕ್ರದೃಷ್ಠಿ ಗುಡ್ಡಪ್ಪನ ಸಂಸಾರದ ಮೇಲೆ ಬಿದ್ದಿತ್ತೋ ಏನೋ, ಗುಡ್ಡಪ್ಪನ ಹೆಂಡತಿ ಖಾಯಿಲೆಗೆ ಬಿದ್ದಳು. ಗುಡ್ಡಪ್ಪನಿಗೆ ಏನು ಮಾಡಬೇಕು ಎಂದು ತಿಳಿಯದಂತಾಯ್ತು. ಊರಿನಲ್ಲಿ ಹೋಗಿ ಯಾರನ್ನು ಎತ್ತು ಚಕ್ಕಡಿಯನ್ನು ಕೇಳುವಂತಿರಲಿಲ್ಲ. ಅಷ್ಟುದೂರ ಸಾಗಿ ಪಟ್ಟಣಕ್ಕೆ ಗುಡ್ಡಪ್ಪ ಹೆಂಡತಿಯನ್ನು ಕರೆದುಕೊಂಡು ಹೋಗಲಾಗಲಿಲ್ಲ. ಡಾಕ್ಟ್ರು ಸಹ ಅರಣ್ಯದ ಕಾಲು ದಾರಿ ಹಿಡಿದು ಊರಿಗೆ ಬಾರದಾದರು. ಹೀಗೆ ದಿನಗಳು ಕಳೆದು ಕಾಯಿಲೆ ಉಲ್ಬಣವಾಗಿ ಗುಡ್ಡಪ್ಪನ ಹೆಂಡತಿ ಸಾವನ್ನಪ್ಪಿದಳು. ಮತ್ತೆ ಗುಡ್ಡಪ್ಪ ಒಂಟಿಯಾದ. ಇತ್ತ ಬಳಲಿಗೆ ಕೊಟ್ಟಂತಹ ಎಮ್ಮೆ ಒಂದು ಕರುವಿಗೆ ಜನ್ಮ ನೀಡಿತ್ತು, ಆ ಕರುವಿಗೆ ತನ್ನ ಹೆಂಡತಿಯ ಹೆಸರಾದ “ಕಾಳೀ” ಎಂದು ಹೆಸರಿಟ್ಟನು. ಕೆಲದಿನಗಳಲ್ಲಿ ಕಾಳಿಯ ತಾಯಿ ಅಂದರೆ ಬಳಲಿಗೆ ಕೊಟ್ಟಿದ್ದ ಎಮ್ಮೆಯು ಅರಣ್ಯದಲ್ಲಿ ಮೇಯಲು ಹೋಗಿ ಕಾಣದಂತಾಗಿತ್ತು.
ಇತ್ತ ಗುಡ್ಡಪ್ಪ ತಿಂಗಳು ಗಟ‍್ಟಲೇ ಅರಣ್ಯದಲ್ಲಿ ಹುಡುಕಿದರೂ ಎಮ್ಮೆ ಸಿಗಲೇ ಇಲ್ಲ. ಜೀವನವೂ ದುಸ್ತರವೇನಿಸಿತು. ಗುಡ್ಡಪ್ಪ ಕಟ್ಟಿಗೆಯನ್ನು ಕಡಿಯುವುದನ್ನು ನಿಲ್ಲಿಸಿದ. ಮನೆಯಲ್ಲಿದ್ದ ಕರುವನ್ನು ನೋಡಿಕೊಳ್ಳದಾದ, ಏನು ತೋಚದಂತಾಗಿ ಹಾಸಿಗೆಯನ್ನ ಹಿಡಿದ. ಆದರೆ ಸಣ್ಣ ಕರು “ಕಾಳೀ” ಹಸುವಿನಿಂದ ಜೋರಾಗಿ ಕೂಗುತ್ತಿತ್ತು. ಗುಡ್ಡಪ್ಪನಿಗೆ ವೀಪರಿತ ಸಿಟ್ಟು ಬಂದು ಕರುವನ್ನು ಅರಣ್ಯದಲ್ಲಿ ಬಿಟ್ಟು ಬಂದ. ಆದರೇ ಆ ಕರು ಕೂಗುತ್ತಲೇ ಅವನನ್ನು ಹಿಂಬಾಲಿಸಿತು, ಆ ಕರುವಿನ ಕೂಗಿಗೆ ಗುಡ್ಡಪ್ಪ ಕರಗಿ ಹೋದ.
ಚಿಕ್ಕದಿರುವಾಗಲೇ ತಾಯಿ ಎಮ್ಮೆ ಕಳೆದುಕೊಂಡ ಕಾಳಿಗೆ ಗುಡ್ಡಪ್ಪನೇ ತಂದೆ-ತಾಯಿ ಎಲ್ಲವೂ ಆದ. ಗುಡ್ಡಪ್ಪನಿಗೆ ಕರು ಸಾಕುವುದು ಒಂದು ದೊಡ್ಡ ಸವಾಲಾಗಿತ್ತು. ಕಾಳಿ ಇನ್ನೂ ಹಾಲು ಕುಡಿಯುವ ಕರು ಆಗಿತ್ತು. ಆದರೆ ಕರುವಿಗೆ ಹಾಲು ಎಲ್ಲಿಂದ ತರಬೇಕು? ಊರಲ್ಲಿ ಯಾರನ್ನು ಕೇಳುವಂತಿರಲಿಲ್ಲ, ಕರುವನ್ನು ಮನೆಯಲ್ಲಿ ಬಿಟ್ಟು ಪಟ್ಟಣಕ್ಕೆ ಹೋಗುವಂತಿರಲಿಲ್ಲ. ಗುಡ್ಡಪ್ಪ ಯೋಚಿಸಿದ ನನ್ನ ಜೊತೆ ಪಟ್ಟಣಕ್ಕೆ ಕರುವನ್ನು ಕರೆದುಕೊಂಡು ಹೋದರೆ ಹೇಗೆ? ಎಂದು ಯೋಚಿಸಿದ.
ಮರುದಿನ ಬೇಳಗ್ಗೆಯೇ ಕರುವಿನೊಂದಿಗೆ ಪಟ್ಟಣಕ್ಕೆ ಹೊರಟ ಅಲ್ಲಿಯ ಅಂಗಡಿಯಲ್ಲಿ ಹಮಾಲಿ ಕೆಲಸ ಮಾಡಿ ಬಂದ ದುಡ್ಡನಲ್ಲಿ ಕಾಳಿಗೆ ಹಾಲು ಕೊಂಡು ಕುಡಿಸಿದ. ಹಸಿವಿನಿಂದಲೇ ಇದ್ದ ಕಾಳಿ ಹಾಲು ಕುಡಿದು ಜಿಗಿದಾಡತೋಡಗಿದಳು. ಸಂಜೆ ಆಗುತ್ತಲೇ ಊರ ದಾರಿ ಹಿಡಿದರು. ಹೀಗೆ ದಿನಗಳು ಸಾಗುತ್ತಿರಲು ಒಂದು ದಿನ ಸಂಜೆ ಕತ್ತಲೆ ಆದರೂ ಕೆಲಸವು ಮುಗಿಯಲಿಲ್ಲ. ಊರಿಗೆ ಹೋಗುವುದು ಹೇಗೆ? ಊರಲ್ಲಿ ರಾತ್ರಿ ವೇಳೆ ಕಳ್ಳತನ ಆಗುತ್ತಿವೆ! ಇಲ್ಲೇ ಇದ್ದರೆ ನಾನು ಕೂಡಿಟ್ಟ ಹಣದ ಗತಿ ಏನು? ಎಂದು ಯೋಚಿಸಿದ. ಏನೇ ಆಗಲಿ ಊರು ಸೇರುವುದು ಒಳಿತು ಎಂದು ಊರದಾರಿ ಹಿಡಿದ.
ಅರಣ್ಯದಲ್ಲಿ ಕತ್ತಲು ಅಧಿಕವಾಗಿತ್ತು. ಒಂದು ದೀಪವೂ ಸಹ ಗುಡ್ಡಪ್ಪನ ಬಳಿ ಇರಲಿಲ್ಲ. ಕಾಲು ದಾರಿ ಹಿಡಿದು ಹೊರಟ ಗುಡ್ಡಪ್ಪ ದಾರಿ ತಪ್ಪಿದ. ಅರಣ್ಯದಲ್ಲಿ ರಾತ್ರಿ ಆಗುತ್ತಲೇ ವಿಚಿತ್ರವಾದ ಸದ್ದಗಳು ಕೇಳಿಸತೊಡಗಿದವು, ಗುಡ್ಡಪ್ಪನಿಗೆ ಭಯವು ಉಂಟಾಗ ತೊಡಗಿತು. ಜೊತೆಗೆ ಕಾಳಿ ಇದ್ದಿದ್ದರಿಂದಾಗಿ ಒಂದು ರೀತಿಯ ದೈರ್ಯ ಬಂತು. ರಾತ್ರಿ ಅರಣ್ಯದಲ್ಲಿ ಇದ್ದರೇ ಜೀವಕ್ಕೆ ಆಪತ್ತು ಎಂದು ಬಗೆದು, ಊರ ದಾರಿ ಹುಡುಕತೊಡಗಿದನು. ಎಷ್ಟೇ ಹುಡುಕಿದರು ಚದುರಿ ಹೋಗಿದ್ದ ಕಾಲು ದಾರಿಯಲ್ಲಿ ಊರ ದಾರಿಯನ್ನು ಕಾಣದಾದ. ಈ ಕಡೇ ಊರ ದಾರಿ ಆ ಕಡೇ ನಗರದ ದಾರಿ ಎರಡು ಸಿಗದೇ ಒದ್ದಾಡತೊಡಗಿದ. ಇದ್ದಕ್ಕಿಂದ್ದಂತೆ ಕಾಳೀ ಒಂದೇ ಕಡೆ ಎಳಯತೊಡಗಿದಳು. ಗುಡ್ಡಪ್ಪ ಕಾಳಿಯನ್ನು ಮುಂದೆ ಬಿಟ್ಟು ಅದನ್ನು ಹಿಂಬಾಲಿಸಿದ ಸ್ವಲ್ಪ ಹೊತ್ತಿನ ನಂತರ ಸೀದಾ ಗುಡ್ಡಪ್ಪ ಮನೆಯನ್ನು ಮುಟ್ಟಿದ. ಬಾಯಿ ಇರದ ಪ್ರಾಣಿಯ ಆ ಶಕ್ತಿಗೆ ಗುಡ್ಡಪ್ಪ ಮೂಕನಾಗಿದ್ದ. ಆಗ ಕಾಳೀಯ ಮೇಲಿನ ಪ್ರೀತಿ ಇನ್ನಷ್ಟು ಹೆಚ್ಚಾಯಿತು. ಕಾಳೀಯು “ದೇವರೇ ನನಗೆ ಕೊಟ್ಟ ವರವೆಂದು” ಗುಡ್ಡಪ್ಪ ಅಂದೇ ಬಗೆದನು.
ಕಾಲ ಕಳೆದಂತೆ ಕಾಳೀ ಬೆಳೆದು ದೊಡ್ಡವಳಾದಳು. ಗುಡ್ಡಪ್ಪ ಸರಕಾರಿ ಪಶು ಆಸ್ಪತ್ರೆಯಲ್ಲಿ ನಶೀ ಕಟ್ಟಿಸಿದ. ಮುಂದೆ ಕಾಳೀ ಕರುವಿಗೆ ಜನ್ಮ ನೀಡಿದಳು. ಗುಡ್ಡಪ್ಪ ಕೆಲಸಕ್ಕೆ ಹೋಗುವುದನ್ನು ಬಿಟ್ಟು ಕಾಳೀಯನ್ನು ಚೆನ್ನಾಗಿ ಮೇಯಿಸತೋಡಗಿದನು. ಕಾಳೀ ಮೇಯ್ದು ದಸ್ಟಪುಷ್ಟವಾದಳು. ಪ್ರತಿದಿನ ನಗರಕ್ಕೆ ಕಾಳೀಯೊಂದಿಗೆ ಅರಣ್ಯದಲ್ಲಿ ಹಾದು ಹೋಗಿ ಹಾಲು ಮಾರಿ ಬರುತ್ತಿದ್ದ. ಬರುವಾಗ ಮಧ್ಯಾಹ್ನದ ಬಿಸಿಲು ನೆತ್ತಿಯ ಮೇಲೆ ಎರುತ್ತಿದ್ದರಿಂದ ಅಯಾಸಗೊಂಡ ಗುಡ್ಡಪ್ಪ ಕಾಳೀಯ ಬೆನ್ನೇರಿ ಸವಾರಿ ಮಾಡುತ್ತಿದ್ದ. ದಿನಗಳು ಊರಳಿದಂತೆ ಕಾಳೀಯೂ ಮುಂಗಾಲು ಮಡಚಿ ಗುಡ್ಡಪ್ಪನನ್ನು ತನ್ನ ಬೆನ್ನಮೇಲೆ ಕೂರಿಸಿಕೊಂಡು ಬರುವುದು ರೂಡಿಯಾಗಿತ್ತು.
ಕಾಳೀಯ ಕೃಪೆಯಿಂದ ಮನೆಯಲ್ಲಿ ದನಗಳ ಸಂಖ್ಯೆ ಹೆಚ್ಚಾಯಿತು. ಅರಣ್ಯದ ಮೂಲೆ-ಮಲೆಯನ್ನು ತಿಳಿದಿದ್ದ ಕಾಳೀ ಎಲ್ಲ ದನಗಳನ್ನು ಒಗ್ಗೂಡಿಸಿ ಮೆಯ್ದು ಬರುತ್ತಿದ್ದಳು ಇದರಿಂದ ಗುಡ್ಡಪ್ಪ ದನಗಳ ಹಿಂದೆ- ಹಿಂದೆ ಹೋಗುವುದು ತಪ್ಪಿ, ಮಧ್ಯಾಹ್ನದ ಹೊತ್ತಿನಲ್ಲಿ ಅರಣ್ಯದ ನಡುವೆ ಇದ್ದ ಅರಳಿ ಮರದ ಕೆಳಗೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ. ಹೀಗಾಗಿ ಗುಡ್ಡಪ್ಪ ಮತ್ತು ಕಾಳೀಯ ನಡುವೆ ಒಂದು ರೀತಿಯ ಅನ್ಯೋನತೆ ಇತ್ತು. ತಾಯಿಯನ್ನ ಕಳೆದುಕೊಂಡಿದ್ದ ಕಾಳೀಗೆ ಗುಡ್ಡಪ್ಪ ತಾಯಿ ಆಗಿದ್ದರೇ…ತನ್ನವರನ್ನೆಲ್ಲಾ ಕಳೆದುಕೊಂಡ ಗುಡ್ಡಪ್ಪನಿಗೆ ಕಾಳೀಯೇ ಎಲ್ಲವೂ ಆಗಿದ್ದಳು.
ದನಗಳ ಸಂಖ್ಯೆ ಹೆಚ್ಚಾದಂತೆ ಉತ್ಪನ್ನವು ಹೆಚ್ಚಾಯಿತು. ಗುಡ್ಡಪ್ಪ ಸಣ‍್ಣ ಮನೆ ಕಟ್ಟಿದ. ಕಾಳೀಯಿಂದ ಸುಂದರ ಜೀವನ ನೆಡಸತೊಡಗಿದ. ಇತ್ತ ನಗರವು ಬೆಳೆದಂತೆ ಅರಣ್ಯ ಒತ್ತುವರಿ ಮುಂದುವರೆದಿತ್ತು. ಕಾಡು ಪ್ರಾಣಿಗಳು ಊರಿಗೆ ಆಗಾಗ ಬೇಟಿ ಕೊಡುತ್ತಿದ್ದವು. ಜನರ ಕೂಗಾಟ, ಬಡದಾಟ, ಬೆಂಕಿ, ಮುಂತಾದವುಗಳಿಗೆ ಅಂಜಿ ಒಡಿ ಹೋಗುತ್ತಿದ್ದವು. ಆದರೆ ಇತ್ತಿಚಿಗೆ ಕಾಡುಕೋಣವೊಂದು ರಾತ್ರಿ ಊರಿಗೆ ನುಗ್ಗಿ ಹೊರಗಡೆ ಕಟ್ಟಿದ ದನಗಳ ಮೇಲೆ ದಾಳಿ ಮಾಡಿ ಗಾಯಗೊಳಿಸುತ್ತಿತ್ತು. ಚಪ್ಪರ ಗುಡಿಸಲನ್ನು ನೆಲಸಮ ಮಾಡುತಿತ್ತು. ಇದು ಊರಿನವರಿಗೆ ತೆಲೆನೋವಾಗಿತ್ತು.
ಕಾಡುಕೋಣದ ಕಾಟ ರಾತ್ರಿಯಲ್ಲದೇ ಹಗಲೂ ಮು0ದುವರೆಯಿತು. ಒಮ್ಮೆ ಗುಡ್ಡಪ್ಪನ ದನದ ಹಿಂಡಿನಲ್ಲಿ ಕಂಡು, ದನಗಳನ್ನ ಗುದ್ದತೊಡಗಿತು. ಕಾಳೀಯ ಹಿರಿಯ ಮಗ ಬೈರ ಬಲಶಾಲಿಯಾಗಿದ್ದ. ಕಾಡು ಕೋಣದ ಮೇಲೆ ಎಗರಿ ನಿಂತಿತು. ಬೈರ ಮತ್ತು ಕಾಡುಕೋಣದ ನಡುವೆ ಘೋರ ಗುದ್ದಾಟವು ಆರಂಭವಾಯ್ತು. ಇವುಗಳ ತಿಕ್ಕಾಟಕ್ಕೆ ಸಣ್ಣ ಗಿಡಗಳೆಲ್ಲವೂ ನೆಲಕಚ್ಚಿದವೂ. ಇವುಗಳ ಆರ್ಭಟಕ್ಕೆ ಊರಿನವರೆಲ್ಲರೂ ಅಲ್ಲಿ ಜಮಾಯಿಸಿದರು. ಆದರೆ ಯಾರೂ ಸಹ ಕಾಡುಕೋಣವನ್ನ ಹೊಡಿಯುವುದಿರಲಿ ಅವುಗಳ ಸಮೀಪವೂ ಹೊಗಲಿಲ್ಲ.
ಆದರೆ ಕಾಳೀ ತನ್ನ ಮಗನಿಗೆ ಬೆಂಬಲವಾಗಿ ಮುನ್ನುಗ್ಗಿದಳು. ಗುಡ್ಡಪ್ಪ ಎಲ್ಲಿದ್ದನೋ ಎನೋ ಓಡೋಡಿ ಬಂದು ಬಡಗಿ ಹಿಡಿದು ಕೋಣವನ್ನ ಹೊಡೆಯತೋಡಗಿದ. ಸಿಟ್ಟಿಗೆದ್ದ ಕಾಡುಕೋಣವು ಗುಡ್ಡಪ್ಪನಿಗೆ ಗುದ್ದಿತು. ಆಗ ಊರಿನವರೆಲ್ಲಾ ಹೋ….. ಎನ್ನುವ ಸದ್ದು ಕೇಳಿ ಕಾಡುಕೋಣ ಓಡಿಹೋಯ್ತು.
ಊರಿನವರು ಕಾಡುಕೋಣವನ್ನ ಮುಗಿಸಲು ಗುಡ್ಡಪ್ಪನ ಬೈರನನ್ನ ದಾಳವನ್ನಾಗಿಸಲು ಸಂಚುರೂಪಿಸಿದರು. ಗುದ್ದಾಟದಲ್ಲಿ ಬೈರ ಹೈರಾಣಾಗಿದ್ದರೆ, ಗುಡ್ಡಪ್ಪ ತನ್ನ ಕಾಲನ್ನು ಮುರಿದುಕೊಡಿದ್ದ. ಗುಡ್ಡಪ್ಪನನ್ನ ಒಲಿಸಿಕೊಳ್ಳಲು ಕೆಲವರು ಗುಡ್ಡಪ್ಪನಿಗೆ ಊಟದ ವ್ಯವಸ್ಥೆ ಮಾಡಿದರು. ಗುಡ್ಡಪ್ಪನಿಗೆ ನಗರಕ್ಕೆ ಹೋಗಿ ಹಾಲು ಹಾಕುವುದು ಆಗಲಿಲ್ಲ, ಆಗ ಊರಿನವರೇ ಹಾಲು ಕೊಂಡುಕೊಂಡರು. ಬೈರನಿಗೆ ತಿನ್ನಿಸಲು ನವಣೆ, ರಾಗಿ, ಹುಳ್ಳಿ ನೀಡಿದರು. ನಂತರ ತಮ್ಮ ಮನದ ಇಂಗಿತವನ್ನು ಗುಡ್ಡಪ್ಪನಿಗೆ ಊರಿನವರು ಹೇಳಿದರು.
ಇಷ್ಟು ವರ್ಷ ಊರಿನಿಂದ ದೂರವೇ ಉಳಿದಿದ್ದ ಗುಡ್ಡಪ್ಪನಿಗೆ ಊರ ಜನರು ಮಾತನಾಡಿಸಿ, ತನಗೆ ಸಹಾಯ ಮಾಡಿದ್ದಕ್ಕೆ ವೀಪರಿತ ಸಂತೋಷವಾಯ್ತು. ಆದರೆ ಬೈರನನ್ನು ಕಳುಹಿಸಿಕೊಡಲು ಮನಸ್ಸು ಬರಲಿಲ್ಲ. ಆದರೆ ಜನರ ಒತ್ತಾಸೆ ಅವನನ್ನು ಮೂಕನನ್ನಾಗಿಸಿತು,.
ಯೋಚನೆಯಂತೆ ಬೈರ ತಿಂದು ಬಲಿಷ್ಠನಾದ. ಕಾಳೀಯ ಜೊತೆ ಉಳೀದೆಲ್ಲಾ ದನಗಳನ್ನು ಮೇಯಲು ಬಿಟ್ಟು ಬೈರನನ್ನು ಮಾತ್ರ ಉಳಿಸಿಕಂಡರು. ಬೈರ ಬಾರದಿದ್ದನ್ನು ಕಂಡ ಕಾಳೀ ತಿರುಗಿ ಮನೆಕಡೆ ಬಂದು ಕೂಗತೊಡಗಿದಳು, ಆದರೆ ಬೈರ ಕೂಗಾಡದಂತೆ ತಿನ್ನಲು ಹುಳ್ಳಿ ಕಾಳನ್ನು ನೀಡಿದ್ದರು. ದಾರಿ ಕಾಣದೇ ಕಾಳೀ ಉಳಿದ ದನಗಳ ಕಡೆ ಸಾಗಿದಳು. ಕಾಳೀ ಹೋದ ಮೇಲೆ ಬೈರನೊಬ್ಬನನ್ನೇ ಊರ ಹೊರಗೆ ಕಾಡುಕೋಣ ಬರುವ ದಾರಿಯಲ್ಲಿ ಮರಕ್ಕೆ ಕಟ್ಟಿ ಬಂದರು. ಸಂಜೆ ಆಗುತ್ತಲೇ ಕಾಡುಕೋಣ ಮತ್ತು ಬೈರನ ಮಧ್ಯೆ ಗುದ್ದಾಟವು ಆರಂಭವಾಗಿತ್ತು. ರಣಭಯಂಕರ ಕಾದಾಟದಲ್ಲಿ ಬೈರನಿಗೆ ಅತಿಯಾಗಿ ಗಾಯಗಳಾಗಿದ್ದವು. ಕಟ್ಟಿದ ಹಗ್ಗವು ಕೊರಳಿಗೆ ಸುತ್ಕೊಂಡು ಮಾರಣಾಂತಿಕವಾಗಿತ್ತು. ಊರಿನವರು ಹೋಗುವಷ್ಟರಲ್ಲೇ ಬೈರ ನೆಲಕಚ್ಚಿದನು.
ಗುಡ್ಡಪ್ಪ ಸುದ್ದಿ ಕೇಳಿ ನಿಂತ್ರಾಣ(ಮೂರ್ಚೆ)ಗೊಂಡನು. ಊರಿನವರು ಆ ಸೊಪ್ಪು ಈ ಸೊಪ್ಪು ತಂದು ಹಾಕಿದರೂ ಬೈರ ಉಳಿಯಲಿಲ್ಲ. ಇದು ಗುಡ್ಡಪ್ಪನಿಗೆ ಗಾಯದ ಮೇಲೆ ಬರೆಯಳೆಂದಾಯ್ತು.
ಕಾಡುಕೋಣದ ಹಾವಳಿ ದಿನಪೂರ್ತಿ ಸಾಗುತ್ತಲೇ ಇತ್ತು. ಇದನ್ನು ತಡೆಯಲಾಗದೆ ದನಗಳನ್ನು ಊರ ಜನ ಮಾರತೊಡಗಿದರು. ದುಡುಮೆ ಇಲ್ಲದೇ ಜನ ಊರನ್ನು ಬಿಡತೊಡಗಿದರು. ಆದರೆ ಈಗ ತಾನೇ ಊರ ಜನರನ್ನು ಸೇರಿದ್ದ ಗುಡ್ಡಪ್ಪ ಅವರನ್ನು ಕಳೆದುಕೋಳ್ಳಲು ಇಷ್ಟ ಇರಲಿಲ್ಲ. ಗುಡ್ಡಪ್ಪ ಹೇಳಿದ. “ ಈ ಸಾರಿ ನನ್ನ ಕಾಳೀ ಆ ಕಾಡುಕೋಣವನ್ನು ಮುಗಿಸುವಳು” ಎಂದನು. ಊರಿನವರು ಅದು ಮುದಿ ಎಮ್ಮೆ ಎಂದು ಜರಿದರು. ಆದರೆ ಗುಡ್ಡಪ್ಪ ತನ್ನ ಪಟ್ಟು ಬಿಡಲಿಲ್ಲ. ಎಲ್ಲರಿಗೂ ಈಟೀ, ಭರ್ಚಿ, ಹಾರೆ ಮತ್ತು ಬಲೆಯೊಂದಿಗೆ ಪಾಳು ಕಟ್ಟಡದಲ್ಲಿರಲು ಹೇಳಿದ. ಗುಡ್ಡಪ್ಪನೇ ಕುಂಟ್ಟುತ್ತಾ ಹೋಗಿ ಕಾಡುಕೋಣ ಬರುವ ದಾರಿಗೆ ಕಾಳೀಯನ್ನ ಬಿಟ್ಟು ಬಂದನು. ಇಲ್ಲಿ ಗುಡ್ಡಪ್ಪನ ಉಪಾಯ ಬೇರೇನೆ ಆಗಿತ್ತು.
ಎಂದಿನಂತೆ ಕಾಡುಕೋಣ ದಾರಿಹಿಡಿದು ಬಂದಿತು. ಕಾಳಿಯನ್ನು ಕಂಡು ಓಡೋಡಿ ಎಗರಲು ಕಾಡುಕೋಣ ಬಂದಿತು. ಆದರೆ ಕಾಳೀ ನಶಿಗೆ ಬಂದಿದ್ದರಿಂದ ಕಾಡುಕೋಣಕ್ಕೆ ಶೌರ್ಯ ಉಡುಗಿ ಗಂಡಸುತನವು ಮಾತನಾಡಿತು. ಕಾಳೀ ಮುಂದೆ ಸಾಗುತ್ತಾ ಪಾಳು ಬಿದ್ದ ಕಟ್ಟಡಕ್ಕೆ ಬಂದಿತು. ಕಾಳಿಯನ್ನು ಹಿಂಬಾಲಿಸುತಾ ಕಾಡುಕೋಣ ಪಾಳು ಕಟ್ಟಡದೊಳಗೆ ಬರಲು ಬಾಗಿಲನ್ನ ಭದ್ರಪಡಿಸಿ ಕಾಡುಕೋಣಕ್ಕೆ ಬಲೆ ಬೀಸಿ ನೆಲಕ್ಕೆ ಕೆಡವಿದರು. ಊರ ಜನರೆಲ್ಲಾ ಸೇರಿ ತಮ್ಮ ಆಯುಧದಿಂದ ಚುಚ್ಚಿ-ಚುಚ್ಚಿ ಕಾಡುಕೋಣವನ್ನು ಮುಗಿಸಿದರು.
ಕಾಳೀ ಈಗ ಇಡೀ ಊರಿಗೆ ದೇವರ ರೂಪದಲ್ಲಿ ಕಂಡಳು. ಮಗನನ್ನು ಕೊಂದ ಸೇಡನ್ನು ಕಾಳೀ ತೀರಿಸಿಕೊಂಡ ಹೆಮ್ಮೆ ಅದರಲ್ಲಿ ಮೂಡಿತ್ತು. ಕಾಳೀಯ ಬಗ್ಗೆ ವಿವರವಾಗಿ ಊರಿನವರಿಗೆ ಗುಡ್ಡಪ್ಪ ಹೇಳಿದ. ಈಗ ಯಾರಿಗಾದರೂ ಅನಾರೋಗ್ಯವಾದರೆ, ಹೆರಿಗೆ ನೋವಾದರೆ ನಗರಕ್ಕೆ ಹೋಗಲು ಗುಡ್ಡಪ್ಪನ ಕಾಳೀಯನ್ನೇ ಕರೆದ್ಯೊಯುತ್ತಿದ್ದರು. ಕಾಳೀ ಊರಿನವರಿಗೆಲ್ಲಾ ಒಂದು ರೀತಿ ಮರಭೂಮಿಯಲ್ಲಿ ಸಿಕ್ಕ ಒಂಟೆಯಾದಂತೆ ಅಗಿತ್ತು. ಕಾಳೀಯಿಂದಾಗಿ ಗುಡ್ಡಪ್ಪ ಅಪಾರ ಗೌರವವನ್ನು ಪಡೆದ. ಒಟ್ಟಿನಲ್ಲಿ ಕಾಳಿಯಿಂದಾಗೆ ಗುಡ್ಡಪ್ಪ ಎಲ್ಲವನ್ನು ಪಡೆದ.
ಕೆಲವು ಕೆಟ್ಟ ಜನರು ನಗರದವರೊಂದಿಗೆ ಸೇರಿ ಅರಣ್ಯದಲ್ಲಿ ಅಕ್ರಮ ಚಟುವಟಿಕೆ ನೆಡೆಸಲು ಪ್ರಾರಂಭಿಸಿದರು. ಆ ಕಡೆ ಊರ ಜನ ಬರದಂತೆ ಮಾಡಲು ಕಾಡಿನಲ್ಲಿ ಹುಲಿ ಇದೆ ಎಂದು ಹೆದರಿಸಿದರು. ರಾತ್ರೋರಾತ್ರಿ ಮರಗಳ ಕಳ್ಳತನ ಶುರುವಾಯ್ತು. ದುಡ್ಡಿನಾಸೆಗೆ ಅರಣ್ಯವೆಲ್ಲಾ ಕರಗತೊಡಗಿತು. ಬೆಲೆ ಬಾಳುವ ಗಂಧದ ಮರ ತೇಗದ ಮರಗಳು ಊರ ಅಂಚಿಗೆ ಇದ್ದವು. ಅಲ್ಲಿ ಮರ ಕಡಿಯಲು ಮುಳ್ಳಿನ ಪೊದೆಗಳು ಅಡ್ಡಿಯಾಗಿದ್ದವು.
ಅರಣ್ಯದಲ್ಲಿ ಮರಗಳ ಸಂಖ್ಯೆ ಕಡಿಮೆ ಆದ್ದರಿಂದಲೋ ಎನೋ ಈ ವರ್ಷ ಮಳೆ ಬರಲೇ ಇಲ್ಲ ಬೀಕರವಾದ ಬರಗಾಲ ಆವರಿಸಿತು,. ಊರ ಜನರು ಅರಣ್ಯದಲ್ಲಿನ ಗಿಡ ಮರಗಳ ಸೊಪ್ಪು ತಿಂದು ಹೇಗೋ ಬದುಕಿದ್ದರು. ಆದರೆ ಸಣ್ಣ ಮಕ್ಕಳು ತಿನ್ನಲು ಎನು ಸಿಗದೇ ಕೇವಲ ಎಲುಬಿನ ಹಂದರವಾಗಿದ್ದರು. ಅರಣ್ಯವನ್ನೆಲ್ಲಾ ಸುತ್ತಾಡಿ ದನಗಳು ಮೇಯ್ದರು ಹೂಟ್ಟೆ ತುಂಬಾ ಮೇವು ಸಿಗುತ್ತಿರಲಿಲ್ಲ. ಉಳಿದ ದನಗಳು ಹಾಲು ಕರೆಯುವುದನ್ನು ಕಡಿಮೆ ಮಾಡಿದರು, ಕಾಳೀ ಕಡಿಮೆ ಮಾಡಿರಲಿಲ್ಲ.
ಈಗ ಊರಿನ ಚಿಕ್ಕ-ಚಿಕ್ಕ ಮಕ್ಕಳೆಲ್ಲಾ ಗುಡ್ಡಪ್ಪನ ಮನೆ ಸೇರಿದರು. ಮಕ್ಕಳಿಲ್ಲದ ಗುಡ್ಡಪ್ಪನಿಗೆ ಮನೆ ತುಂಬಾ ಮಕ್ಕಳನ್ನು ಕಂಡು ಖುಷಿಯಾಯ್ತು. ಈ ಮುದಿ ವಯಸ್ಸಿನಲ್ಲಿ ಗುಡ್ಡಪ್ಪನಿಗೆ ಆಯಾಸ ಇಂಗಿಸಲು ಚಿಕ್ಕ ಮಕ್ಕಳು ಅವಶ್ಯವಿದ್ದರು. ಅವರಿವರೆನ್ನದೇ ಎಲ್ಲರಿಗೂ ಹಾಲು ನೀಡಿ ಸಂತೈಸುತ್ತಿದ್ದ. 4-5 ತಿಂಗಳು ಹಾಲು ಕುಡಿದ ಮಕ್ಕಳು ಚೇತರಿಸಿಕೊಂಡು ದಷ್ಟಪುಷ್ಟವಾಗಿ ಬೆಳೆದು ನಿಂತಿದ್ದರು. ಅವರು ಗುಡ್ಡಪ್ಪಜ್ಜನ ಮನೆ ಬಿಟ್ಟು ತಮ್ಮ ಮನೆಗೆ ಹೋಗಲು ಹಿಂದೇಟು ಹಾಕುತ್ತಿದ್ದರು.
ಬೇಸಿಗೆ ಕಳೆದು ಮಳೆಗಾಲ ಆರಂಭವಾಯ್ತು ಹನಿ ಹನಿಯಾಗಿ ಬಿದ್ದ ಮಳೆಗೆ ಅರಣ್ಯದಲ್ಲಿ ಪೊದೆಗಳಲ್ಲಿ ಹುಲ್ಲು ಚಿಗುರತೊಡಗಿತು. ಸಮಯಸಾಧಿಸಿದ ಮರಗಳ್ಳರು ಇನ್ನು ಬಿಟ್ಟರೇ ದಟ್ಟವಾಗಿ ಪೊದೆ ಬೆಳೆಯುತ್ತದೆ. ನಮಗೆ ಮರಗಳನ್ನು ಕಡೆಯುವುದು ಅಸಾಧ್ಯ ಎಂದು ಬಗೆದರು. ಇದ್ದಕ್ಕೆ ಪರಿಹಾರವನ್ನು ಹುಡುಕುತ್ತಾ ಇದ್ದರು.
ಗುಡ್ಡಪ್ಪ ಕುಂಟುತ್ತಾ ದನಗಳನ್ನು ಅರಣ್ಯದಲ್ಲಿ ಬಿಟ್ಟು ದಿನನಿತ್ಯ ವಿಶ್ರಾಂತಿ ಪಡೆಯುವ ಅರಣ್ಯದ ಮಧ್ಯದಲ್ಲಿರುವ ಅರಳಿಮರದಡಿ ಹೋಗಿ ವರಗಿಕೊಂಡ. ಮಧ್ಯಾಹ್ನದ ಹೊತ್ತಿಗೆ ಮರಗಳ್ಳರು ಕಾಡಿಗೆ ಬೆಂಕಿಯನ್ನು ಹಚ್ಚಿದರು. ಹುಲ್ಲು ಒಣಗಿದ್ದರಿಂದ ಬೆಂಕಿ ಬೇಗನೇ ಈಡೀ ಅರಣ್ಯವನ್ನೇ ಆವರಿಸಿತು. ದಟ್ಟವಾದ ಹೊಗೆಯು ಅರಣ್ಯದ ತುಂಬೆಲ್ಲಾ ಹರಡಿತು.
ಇದರ ಮಧ್ಯೆಯೇ ದನಗಳೆಲ್ಲವೂ ಓಡಿ ಹೋಗಿ ಮನೆಯನ್ನು ಸೇರಿದವು. ಕಾಳೀ ಮನೆಯ ಹತ್ತಿರ ಬಂದಾಗ ಗುಡ್ಡಪ್ಪ ಇರದಿದ್ದನ್ನು ಕಂಡು ಪುನಃ ದಿನಾಲು ಗುಡ್ಡಪ್ಪನಿರುವ ಜಾಗಕ್ಕೆ ಓಡತೊಡಗಿತು. ಈ ಮೊದಲೇ ಓಡೋಡಿ ಮನೆ ಮುಟ್ಟಿದ್ದ ಮುದಿ ಎಮ್ಮೆ ಕಾಳೀ ತಡಮಾಡದೇ ಅರಣ್ಯದಲ್ಲಿ ಹೊಕ್ಕು ಗುಡ್ಡಪ್ಪನಿರುವ ಜಾಗ ಹುಡುಕತೊಡಗಿತು. ದಟ್ಟ ಹೊಗೆ ಆವರಿಸಿದ್ದರಿಂದ ಕಾಳೀಗೆ ದಾರಿ ಕಾಣದಾಯ್ತು.
ಇತ್ತ ಗುಡ್ಡಪ್ಪ ಪ್ರಾಣಿ ಪಕಿ಼ಗಳ ಕೂಗಾಟವನ್ನು ಕೇಳಿ ಎಚ್ಚರಗೊಂಡು ನೋಡಲು ಬೆಂಕಿಯು ಅರಣ್ಯವನ್ನೆಲ್ಲಾ ವ್ಯಾಪಿಸಿತ್ತು. ದಟ್ಟ ಹೊಗೆಯ ಮಧ್ಯೆ ಊಸಿರಾಟ ಕಷ್ಟವಾಗಿತ್ತು. ಜೀವ ಉಳಿಸಿಕೊಳ್ಳಲು ಕುಂಟುತ್ತಾ ಓಡತೊಡಗಿದ. ಓಡಲು ಆಗದಿದ್ದರಿಂದ ಬೆಂಕಿಗೆ ಈಡಾಗುತ್ತೇನೆಂದು ಕೂಗಾಡತೊಡಗಿದ. ಜೋರಾಗಿ ಚೀರಾತೊಡಗಿದ. ಗುಡ್ಡಪ್ಪನ ದ್ವನಿಯನ್ನು ( ಚೀರುವುದನ್ನು ) ಕೇಳಿ ಕಾಳೀ ಆ ಕಡೇ ಧಾವಿಸಿದಳು.
ಗುಡ್ಡಪ್ಪಜ್ಜ ದಟ್ಟವಾದ ಹೊಗೆಯ ನಡುವೆ ಉಸಿರು ಸಿಕ್ಕು ನೆಲಕ್ಕೆ ಬಿದ್ದು ಬಿಟ್ಟ. ಅಸ್ಟರಲ್ಲೇ ಓಡೋಡಿ ಬಂದ ಕಾಳೀ ಗುಡ್ಡಪ್ಪ ಬಿದ್ದಿದ್ದನ್ನು ನೋಡಿ ಕಣ್ಣೀರನ್ನ ಹಾಕತೊಡಗಿತು. ತನ್ನ ಮೇಲೆ ಹತ್ತುವಂತೆ ತನ್ನ ಮುಂಗಾಲನ್ನು ಮಡಚಿ ಗುಡ್ಡಪ್ಪನ ಬಳಿ ಕುಳಿತುಕೊಂಡಿತು. ಕಾಳೀಯನ್ನು ಕಂಡ ಗುಡ್ಡಪ್ಪ ಏಳಬೇಕು ಎನ್ನುವಷ್ಟರಲ್ಲೇ ಉಸಿರು ನಿಂತು ಬಿಟ್ಟಿತು. ಆದರೆ ತನ್ನ ಜೀವನದಲ್ಲಿ ಕಾಮಧೇನು ಅಗಿದ್ದ ಕಾಳೀಯನ್ನು ನೋಡಿದ ಸಂತೋಷವು ಅವನ ಮುಖದಲ್ಲಿ ಎದ್ದು ಕಾಣುತ್ತಿತ್ತು.
ಕಾಳೀ ಈಗಲೂ ಸಹ ಗುಡ್ಡಪ್ಪನನ್ನು ಬಿಟ್ಟು ಹೋಗಿದ್ದರೇ ಬದಕುತ್ತಿತ್ತೇನೋ?! ಆದರೆ ತನ್ನ ಜೀವವೇ ಆಗಿದ್ದ ಗುಡ್ಡಪ್ಪನನ್ನ ನೆಕ್ಕುತ್ತಾ ಎಬ್ಬಿಸಲು ಪ್ರಯತ್ನಸಿತು. ದಟ್ಟ ಹೊಗೆಯ ಮಧ್ಯೆ ಕಾಳೀಯ ಮಡಚಿದ ಕಾಲು ಮೇಲೆ ಏಳಲೇ ಇಲ್ಲ. ಓಡೋಡಿ ದಣಿದಿದ್ದ ಕಾಳೀಗೆ ಉಸಿರಾಟ ಸಾಕಾಗಲಿಲ್ಲ, ದೊಪ್ಪನೆಂದು ಗುಡ್ಡಪ್ಪನ ಮಗ್ಗುಲಲ್ಲಿ ಬಿದ್ದು ಕಾಳೀ ಪ್ರಾಣ ಬಿಟ್ಟಿತು.