Click here to Download MyLang App

ಕಳ್ಳ - ಬರೆದವರು : ರೂಪಾ ಜೋಶಿ | ಥ್ರಿಲ್ಲರ್

ಅರೆರೆ! ಅವಳಾಗಲೇ ಎದ್ದು ಹೋಗಿದ್ದಾಳೆ!! ಮತ್ತೆ...ಆ ಬ್ಯಾಗ್ ಅಲ್ಲೇ ಬಿಟ್ಟು ಹೋಗಿದ್ದಾಳೆ! ''ಬಿಡಬೇಡಾ ಹೋಗಿ ಅದರಲ್ಲಿ ಏನಿದೆ ಹುಡುಕು.'' ಕಳ್ಳ ಮನಸಿನ ಕರೆಗೆ ಓಗುಟ್ಟು ನಾನು ಜಾಗೃತನಾದೆ. ಸುತ್ತಲೊಮ್ಮೆ ದೃಷ್ಟಿ ಹರಿಸಿ, ಯಾರಿಲ್ಲವೆಂದು ಖಚಿತಪಡಿಸಿಕೊಂಡು, ಮೆಲ್ಲಗೆ ತೆವಳತೊಡಗಿದೆ.``ಲೋ ಯಾಕೊ ದುರ್ಬುದ್ಧಿ ನಿನಗೆ?'' ವಿವೇಕ ಎಚ್ಚರಿಸಿತು. ಮತ್ತೆ ಅವಳು ನನ್ನ ಅಷ್ಟು ಕಾಡ್ತಾಳಲ್ಲಾ..ಅದು ಸರೀನಾ? ಪ್ರಶ್ನೆ ಹಾಕಿ ಅದರ ಬಾಯಿಮುಚ್ಚಿಸಿ ಮುಂದುವರಿದೆ. `ಅಯ್ಯೋ ಸುಸ್ತಾಗಿದೆ.'... ಒಂದೆರಡು ನಿಮಿಷ ತಡೆದು ಮತ್ತೆ ಮುಂದುವರಿಯೋಣ. ಛೇ ಈ ಬಟ್ಟೆ ಬಲು ಭಾರ. ಕಿತ್ತೊಗೆದು ಮುಂದೆ ಸಾಗಿದರೆ? ಬೇಡ...ಬೇಡ...ಮತ್ತೆ ಎಲ್ಲರೂ ನಕ್ಕು ಮಾನ ಕಳೀತಾರೆ. ಮತ್ತೆ ಅವಳಿದ್ದಾಳಲ್ಲಾ..ನನ್ನತ್ತ ಕೈ ತೋರಿಸಿ ನಕ್ಕು ಅಪಮಾನ ಮಾಡ್ತಾಳೆ. ಈಗ ಮತ್ತಷ್ಟು ಹುರುಪಿನಿಂದ ಮುಂದೆ ಸಾಗಿದ್ದೆ ಆಹಾ! ತೀರಾ ಸಮೀಪ ಬಂದಿದ್ದೇನೆ. `ಇವತ್ತು ಅವಳಿಗಿದೆ ಹಬ್ಬ' ಮನ ಖುಶಿಯಿಂದ ಕುಣಿಯಿತು. ಅದೆಷ್ಟು ಚೆಂದ! ಆಸೆ ತಡೆಯಲಾರದೇ ಒಂದು ಸುತ್ತು ಜೀಕಿ ಗುರಿಮುಟ್ಟಿಯೇ ಬಿಟ್ಟೆ. ಬಾಯ್ದೆರೆದು ಕುಳಿತಿದ್ದ ಬ್ಯಾಗಿನಲ್ಲಿ ಕೈ ತೂರಿಸಿ, ಶಕ್ತಿಹಾಕಿ ಎಳೆದೆ. ಬಣ್ಣ ಬಣ್ಣದ ಪುಸ್ತಕಗಳು.!! ಎರಡೂ ಕೈಗಳಲ್ಲಿ ಹಿಡಿದು ಜಗ್ಗಾಡಿ ಸುತ್ತಮುತ್ತತೂರಾಡಿ ಕೇಕೇ ಹಾಕುತ್ತ ವಿಜಯೋತ್ಸವ ಆಚರಿಸತೊಡಗಿದೆ.

ಎಲ್ಲಿಂದಲೋ ಓಡಿಬಂದ ಅವಳು ಮನೆ ಹಾರಿಹೋಗುವ ರೀತಿ ಕೂಗಿದಳು. "ಅಮ್ಮಾ ಬೇಗ ಬಾ. ಪಾಪು ನನ್ನ ಪುಸ್ತಕವನ್ನೆಲ್ಲಾ ಹರಿದುಹಾಕ್ತಿದೆ..'' ಅವಳು ಕುಸಿದು ಕುಳಿತು, ಕಾಲು ಜಾಡಿಸಿ ಚೀರಿ ಚೀರಿ ಅಳುತ್ತಿದ್ದಾಳೆ. ಧಾವಿಸಿ ಬಂದ ಅಮ್ಮನ ಕೋಪದಿಂದ ತಪಿಸಿಕೊಳ್ಳಲು, ನಾನು ಅವಳಿಗಿಂತ ಜೋರಾಗಿ ಅಳತೊಡಗಿದೆ. "ಅಯ್ಯೋ ಏನಾತೋ ಏನಾರಾ ಚುಚ್‍ತೇನೊ? ಅಮ್ಮ ನನ್ನ ಮೈ ಕೈ ತುಂಬೆಲ್ಲ ಗಾಭರಿಯಿಂದ ಕೈಯ್ಯಾಡಿಸಿದರೆ, ನಾನು ಅವಳ ಸ್ಪರ್ಷಕ್ಕೆ ಮಳ್ಳಾಗಿ ಗಟ್ಟಿಯಾಗಿ ತಬ್ಬಿಕೊಂಡೆ. `` ಎಲ್ಲಿ..ಆ.. ಮಾಡು.'' ನನ್ನ ಬೊಚ್ಚುಬಾಯೊಳಗೆ ಕೈಯ್ಯಾಡಿಸಿ, ಚಪ್ಪರಿಸಲೆಂದು ಇಟ್ಟುಕೊಂಡಿದ್ದ ಪೇಪರ್ ಚೂರನ್ನು ಕಿತ್ತೆಸೆದು, `ಥೂ ಕೊಳಕಾ' ಎಂದಾಗ, ನಾನು ಪೆಚ್ಚು ಪೆಚ್ಚಾಗಿ ನಕ್ಕಿದ್ದೆ.