Click here to Download MyLang App

ಕರೆ - ಬರೆದವರು : ಹರೀಶ ಕೃಷ್ಣಪ್ಪ

ಶಿವ ಪ್ರತಿದಿನ ನಡುರಾತ್ರಿಯವರೆಗೂ ಕಂಪ್ಯೂಟರ್ ಮುಂದೆ ಕುಳಿತುಕೊಂಡು ಇತ್ತ ದೃಷ್ಟಿಯನ್ನೂ ಅತ್ತ ಆರೋಗ್ಯವನ್ನೂ ಕೆಡಿಸಿಕೊಂಡು ಜೊತೆಗೆ ದೇಹದ ತೂಕವನ್ನೂ ಹೆಚ್ಚಿಸಿಕೊಳ್ಳುವ ಈ ಸಾಫ್ಟ್ವೇರ್ ಉದ್ಯೋಗ ಏತಕ್ಕಾದರೂ ಆರಿಸಿಕೊಂಡೆನೆನ್ನುವುದು ನಿತ್ಯವೂ ಯೋಚಿಸುವ ವಿಚಾರ, ಆದರೆ ವಿಧಿಯಿಲ್ಲ. ತಂದೆಯು ಎಷ್ಟು ಹೇಳಿದರೂ ಕೇಳದೆ, ತನ್ನದೇ ಆದ ಬದುಕನ್ನು ರೂಪಿಸಿಕೊಳ್ಳಲು ನಗರಕ್ಕೆ ಬಂದು ಆಗಲೇ ಹತ್ತು ವರ್ಷಗಳು ಕಳೆದಿದೆ. ಸುಂದರವಾದ ಮಾಲಿನ್ಯವಿಲ್ಲದ ಹಳ್ಳಿಯ ಪರಿಸರವೆಲ್ಲಿ, ಸದಾ ಶಬ್ದ, ವಾಯು ಮಾಲಿನ್ಯಗಳಲ್ಲಿ ಮುಳುಗಿ ಏಳುವ ಇಲ್ಲಿಯ ಪರಿಸರವೆಲ್ಲಿ. ತಂದೆಯ ಮಾತುಗಳು ಸದಾ ಕಿವಿಯಲ್ಲಿ ಗುಯ್ ಗುಡುತ್ತಿರುತ್ತದೆ "ಮಗು ನಗರದಲ್ಲಿ ಏನಿದೆ? ನೀನು ಇಲ್ಲೇ ಇದ್ದು ಬೇಸಾಯ ಮಾಡಿ ಹತ್ತು ಜನರಿಗೆ ಊಟ ಒದಗಿಸುವ ಕಾರ್ಯ ಬಹಳ ಶ್ರೇಷ್ಠವಾದದ್ದು. ನೀನೇನು ಬಿಸಿಲಿನಲ್ಲಿ ದುಡಿಯುವ ಹಾಗೇನು ಇಲ್ಲ, ಇರುವ ಹೊಲದ ಮೇಲ್ವಿಚಾರಣೆಗೆ ಅಣ್ಣನಿಗೆ ಸಹಾಯ ಮಾಡಿದರೆ ಸಾಕು. ನೀನು ಸಂಪಾದಿಸುವ ಹಣಕ್ಕಿಂತ ಹೆಚ್ಚು ತೃಪ್ತಿ ಸಿಗುತ್ತದೆ. ಹೋಗುವ ಮುನ್ನ ಮತ್ತೊಮ್ಮೆ ಯೋಚಿಸು" ಎಂದು ಎಷ್ಟು ಹೇಳಿದರೂ ಕೇಳದೆ ಶಿವ ತನ್ನದೇ ದಾರಿ ಹಿಡಿದಿದ್ದ.

ಸೋಮವಾರದಿಂದ ಶುಕ್ರವಾರದವರೆಗೂ ದುಡಿತ, ಕೆಲವು ವೇಳೆ ಇದು ಶನಿವಾರ ಮತ್ತು ಭಾನುವಾರಕ್ಕೂ ವಿಸ್ತರಿಸುತ್ತದೆ. ಕೆಲವೊಮ್ಮೆ ನಮ್ಮ ವಯ್ಯಕ್ತಿಕ ಜೀವನವೇ ಇಲ್ಲವೆಂಬ ಭಾವನೆ ಮೂಡುವುದು. ಇನ್ನು ಹೆಂಡತಿ ಅಂಬಿಕಾಳೂ ಸಾಫ್ಟ್ವೇರ್ ಉದ್ಯೋಗಿಯಾದ ಕಾರಣ , ಈ ಭಾವನೆ ಇನ್ನು ಹೆಚ್ಚಾಗಿ ಕಾಡುತ್ತದೆ. ಒಂದು ವೇಳೆ ಶನಿವಾರ , ಭಾನುವಾರ ರಜ ಇದ್ದರೂ ಕುಟುಂಬದೊಂದಿಗೆ ನೆಮ್ಮದಿಯಾಗಿ ಕಳೆಯಲು ಸಾಧ್ಯವೇ ? ಬೇರೆ ಇತರೆ ಬಾಕಿ ಉಳಿದ ಕೆಲಸಗಳಿಗೆ ವಿನಿಯೋಗವಾಗುತ್ತದೆ. ಇಲ್ಲವೇ ಲ್ಯಾಪ್ಟಾಪ್ ಅಥವಾ ಮೊಬೈಲ್ ಗಳಲ್ಲೇ ಕಳೆದು ಹೋಗುತ್ತೇವೆ. ಯಾಂತ್ರಿಕ ಬದುಕು ಜೀವವಿರುವ ಯಾಂತ್ರಿಕ ಬದುಕು.

ಸಾಫ್ಟ್ವೇರ್ ಉದ್ಯೋಗಿಗಳ ಮಕ್ಕಳು ತಮ್ಮ ತಂದೆ ತಾಯಿಗಳ ಜೊತೆ ಕಳೆಯುವ ಸಮಯವಾದರೂ ಎಷ್ಟು? ಇಬ್ಬರೂ ಕೆಲಸಕ್ಕೆ ಹೋಗಿ ಮಕ್ಕಳನ್ನು ಶಿಶು ವಿಹಾರಕ್ಕೆ ಕಳಿಸುವುದು ಸರ್ವೇ ಸಾಮಾನ್ಯ. ಹಾಗಾಗಿ ಮಕ್ಕಳ ಮತ್ತು ಪೋಷಕರ ಸಂಬಂಧ ಮೊದಲಿನಷ್ಟು ಸ್ವಾರಸ್ಯಕರವಾಗಿಲ್ಲ. ನಾವು ಬಾಲ್ಯದಲ್ಲಿ ನಮ್ಮ ತಂದೆ ತಾಯಂದಿರ ಹತ್ತಿರ ಕಳೆದ ಕ್ಷಣಗಳೂ ಈಗ ನಮ್ಮ ಮಕ್ಕಳೊಂದಿಗೆ ಕಳೆಯುತ್ತಿರುವ ಕೆಲವೇ ಕ್ಷಣಗಳಿಗೂ ಅಜಗಜಾಂತರ ವ್ಯತ್ಯಾಸ. ಆರ್ಥಿಕವಾಗಿ ಎಷ್ಟೇ ಮುಂದುವರೆದಿದ್ದರೂ ನಮ್ಮ ತಂದೆ ತಾಯಿಗಳ ಹತ್ತಿರವಿದ್ದ ನೆಮ್ಮದಿ ನಮ್ಮಲ್ಲಿದೆಯೇ? ಈ ಪ್ರಶ್ನೆಗೆ ಉತ್ತರ ನಮಗೆ ಗೊತ್ತಿದ್ದರೂ ಏನು ಮಾಡಲಾರದಂತ ಪರಿಸ್ಥಿತಿ.ಮನದಲ್ಲಿ ಮಾತ್ರ ಏನೋ ಕಳೆದು ಕೊಳ್ಳುತ್ತಿರುವ ಭಾವನೆ.

ಶಿವ , ತನ್ನೂರಿಗೆ ಹೋಗಿ ಸುಮಾರು ತಿಂಗಳುಗಳೇ ಆಗಿದ್ದವು. ತಂದೆ ತಾಯಿಯ ಹತ್ತಿರ ಫೋನಿನನಲ್ಲಿ ಮಾತುಕತೆ ಅಷ್ಟೇ ಅದೂ ಯಾವಾಗಾದರೊಮ್ಮೆ. ತಂದೆ ನನ್ನಿಂದ ಏನನ್ನೂ ಬಯಸುತ್ತಿರಲಿಲ್ಲ. ಹೊಲದ ದುಡಿಮೆಯಲ್ಲೇ ಜೀವನ ಸಾಗಿಸುತ್ತಿದ್ದರು. ಅಣ್ಣ ಡಿಗ್ರಿ ಮುಗಿಸಿದ್ದರೂ ವ್ಯವಸಾಯ ಮಾಡುತ್ತಾ ತಂದೆ ಜೊತೆಯಾಗಿ ನಿಂತ. ತನ್ನ ಊರು ಭಾವನದುರ್ಗ ನಗರದಿಂದ ಕೇವಲ ೪೦ ಕಿಲೋಮೀಟರ್ಗಳಷ್ಟೇ ದೂರ. ಕಾರಿನಲ್ಲಿ ಒಂದು ಗಂಟೆಯಲ್ಲೇ ಸೇರಬಹುದಿತ್ತು. ಬಸ್ಸಿನಲ್ಲಿ ಸುಮಾರು ಒಂದೂವರೆ ಗಂಟೆ, ಆದರೂ ಊರಿನ ಕಡೆ ಹೋಗಿರಲಿಲ್ಲ.

ಒಂದು ಶನಿವಾರ ಆಫೀಸಿನ ಕೆಲಸವಿರಲಿಲ್ಲ. ಹೆಂಡತಿ ಮಗಳೊಂದಿಗೆ ತನ್ನ ತಾಯಿಯ ಮನೆಗೆ ಹೋಗಿದ್ದಳು. ತನ್ನಲ್ಲಿ ಏನೋ ಒಂದು ತರಹದ ಶೂನ್ಯ ಭಾವ, ಜೊತೆಗೆ ತಂದೆಯ ನೆನಪು ಪದೇ ಪದೇ ಕಾಡುತಿತ್ತು. ಮನಸಿಲ್ಲದ ಮನಸಿನಲ್ಲೇ ಪ್ರಯತ್ನ ಪೂರ್ವಕವಾಗಿ ಮಲಗಲು ಪ್ರಯತ್ನಿಸುತ್ತಾ, ತಂದೆಗೆ ಕರೆ ಮಾಡಲು ಫೋನ್ ಉಡುಕುತಿದ್ದ. ಅಷ್ಟರಲ್ಲಿ ಬಾಗೀಲು ಬಡಿದ ಸದ್ದು. ಕೆಲವೊಮ್ಮೆ ಅವನಿಗೆ ಕನಸಿನಲ್ಲಿ ಬಾಗಿಲು ಬಡಿದಂತೆ ಯಾರೋ ಕರೆದಂತೆ ಅನುಭವ. ಆದರೆ ಎದ್ದು ನೋಡಿದರೆ ಶಬ್ದದ ಸುಳಿವು ಸಿಗುತ್ತಿರಲಿಲ್ಲ. ಬರುತ್ತಿರುವ ಶಬ್ದವನ್ನು ಕಡೆಗಣಿಸಿ ಮತ್ತೆ ಫೋನ್ ಹುಡುಕಲು ಶುರುಮಾಡಿದ. ಆದರೆ ಶಬ್ದದ ತೀವ್ರತೆ ಹೆಚ್ಚಾಗುತ್ತಾ ಹೋಯಿತು. ಹೊ! ಶಬ್ದ ನಿಜವಾದದ್ದೇ ಎಂದು ಖಾತ್ರಿಯಾಯಿತು.

ಬಾಗಿಲನ್ನು ತೆರೆದ, ಅವನಿಗೊಂದು ಆಶ್ಚರ್ಯ ಕಾದಿತ್ತು. ಪ್ರೀತಿಯ ತಂದೆ ಅವನೆದುರಿದ್ದರು. ಒಂದು ಕ್ಷಣ ಸ್ಥಬ್ದನಾದೆ, ಮಾತೇ ಹೊರಡಲಿಲ್ಲ. ಕೆಲವೊಮ್ಮೆ ಯಾರ ಬಗ್ಗೆ ಹೆಚ್ಚು ಯೋಚಿಸುತ್ತಿರುತ್ತೇವೋ ಅವರು ನಮ್ಮನ್ನು ಹುಡುಕಿಕೊಂಡು ಬರುತ್ತಾರೆ ಇಲ್ಲವೇ ಕರೆಯಾದರುಮಾಡುತ್ತಾರೆ, ಈ ಸ್ಥಿತಿಯನ್ನು ಅರಿತು ಅವರೇ ಮುಗುಳ್ನಗುತ್ತ ಮಾತನ್ನಾರಂಭಿಸಿದರು. ಕೂಡಲೇ ತಂದೆಯನ್ನು ಮನೆಯೊಳಗೇ ಕರೆದು, ಸೋಫಾದಲ್ಲಿ ಕುಳ್ಳರಿಸಿ, ಕುಡಿಯಲು ಎನ್ನನಾದರೂ ತರಲು ಅಡುಗೆ ಮನೆಗೆ ಹೊರಟ. ಅವರು ಅವನನ್ನು ತಡೆದು ಏನು ಬೇಡವೆಂದು, ಸೊಸೆ ಮೊಮ್ಮಗಳ ಬಗ್ಗೆ ವಿಚಾರಿಸಿದರು. ನಂತರ ಕೂಡಲೇ ಊರಿಗೆ ಬರಬೇಕೆಂದು ಆದೇಶಿದರು. ಶಿವ ಮತ್ತೆ ಮೌನಕ್ಕೆ ಶರಣಾದ , ಇದನ್ನು ಗಮನಿಸಿದ ಅವರು ಮನೆಯೆಲ್ಲಿ ಎಲ್ಲರೂ ಆರೋಗ್ಯವಾಗಿದ್ದಾರೆ. ಆದರೆ ಎಲ್ಲರು ನಿನ್ನನು ನೋಡಬೇಕೆಂದು ಕಾಯುತಿದ್ದಾರೆ ಅಷ್ಟೇ. ಫೋನ್ ಮಾಡಿದರೆ ಏನಾದರೊಂದು ಕಾರಣ ಹೇಳಿ ತಪ್ಪಿಸಿ ಕೊಳ್ಳುತಿದ್ದೆ, ಆದುದರಿಂದ ನಾನೇ ಬರಬೇಕಾಯಿತು. ಬೇಗನೆ ಸಿದ್ಧನಾಗು ಸಂಜೆಯೊಳಗೆ ಹಳ್ಳಿಯನ್ನು ಸೇರಬಹುದು. ಶಿವ ಈಗ ಏನನ್ನೂ ಯೋಚಿಸದೆ ತಕ್ಷಣ ಸಿದ್ಧನಾದೆ.

ಹೊರಡುವ ಮುನ್ನ ಹೆಂಡತಿಗೆ ಕರೆಮಾಡಿ ಹಳ್ಳಿಗೆ ಹೋಗುತ್ತಿದ್ದೇನೆ ನಾಳೆ ಬರುತ್ತೇನೆಂದು ತಿಳಿಸಿದ. ಅವಳು ತನ್ನ ತಾಯಿಯ ಮನೆಯಲ್ಲೇ ಉಳಿಯುವುದೆಂದು ತೀರ್ಮಾನಿಸಿದಳು. ಶಿವ ಕಾರನ್ನು ಸ್ಟಾರ್ಟ್ ಮಾಡಿದ, ಪಕ್ಕದಲ್ಲಿ ತಂದೆ ಮಾತನ್ನ ಮುಂದಿವರೆಸಿದರು. ಊರಿನ ಬಗ್ಗೆ ವಿವರಿಸುತ್ತಾ ಅಲ್ಲಿಯವರೆಗೆ ನಡೆದ ಎಲ್ಲ ವಿಷಯಗಳನ್ನೂ ತಿಳಿಸಿದರು. ರಾಜ್ಯ ಹೆದ್ದಾರಿಯ ಬಗ್ಗೆ ಚರ್ಚೆ ನಡೆಯುತ್ತಿದೆ, ಆ ರಸ್ತೆ ನಮ್ಮ ಹೊಲದ ಮೇಲೆಯೇ ಹಾದುಹೋಗುವ ಸಾಧ್ಯತೆ ಇದೆಯೆಂದು ಬಹಳ ನೋವಿನಿಂದ ಹೇಳಿಕೊಂಡರು. ಇದರಿಂದ ನಮ್ಮ ಹೊಲದ ಸಾಕಷ್ಟು ಭಾಗ ಕಡಿತವಾಗುತ್ತದೆಂದೂ, ಸಾದ್ಯವಾದರೆ ಸ್ವಲ್ಪ ಹೊಲಗದ್ದೆಯನ್ನು ಖರೀದಸಬೇಕೆಂದೂ ಮುಂದೆ ಉಪಯೋಗಕ್ಕಾ ಬರುತ್ತದೆಂದೂ ಮಗನಿಗೆ ಸಲಹೆ ನೀಡಿದರು. ಶಿವನಿಗೂ ಸಹ ಹಳ್ಳಿಯಳ್ಳಿ ಒಂದು ತೋಟವನ್ನು ಮಾಡಿಕೊಳ್ಳಬೇಕೆಂದು ಬಹಳ ಉದ್ದೇಶವಿತ್ತು, ಸರಿಯಾದ ಸಮಯ ಈಗ ಒದಗಿ ಬಂದಿತ್ತು. ಸರಿಯಾದ ಸ್ಥಳವಿದ್ದರೆ ತಕ್ಷಣ ಖರೀದಿಸುತ್ತೇನೆಂದು ತಿಳಿಸಿದ. ಅವರು ಬಹಳ ಸಂತೋಷದಿಂದ ವ್ಯವಸಾಯಕ್ಕೆ ಯೋಗ್ಯವಾದಮತ್ತು ನೀರಾವರಿ ಇರುವ ಮೂವತ್ತು ಎಕರೆ ಜಾಗ ಆಗಲೇ ನೋಡಿದ್ದೇನೆ , ನೀನು ನೋಡು ಇಷ್ಟವಾದರೆ ಕೂಡಲೇ ತೆಗೆದುಕೋ. ಶಿವ ಹೂ ಎಂದ, ಅವರ ಮುಖದಲ್ಲಿ ಬಹಳ ಉತ್ಸಾಹ ಕಾಣುತಿತ್ತು. ಅವನ ಮನಸಿನಲ್ಲಿ ಪದೇ ಪದೇ ಯಾಂತ್ರಿಕ ಬದುಕಿನ ಬಗ್ಗೆ ಯೋಚನೆ ಕಾಡುತಿತ್ತು . ಎಷ್ಟು ದಿವಸ ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡುವುದು ? ತನ್ನದೇ ಆದ ಸ್ವಂತ ವ್ಯಾಪಾರ ಮಾಡುವುದೇ ಒಳಿತೆಂದು ತೀರ್ಮಾನಿಸಿದ್ದೆ.

ಸುಮಾರು ಅರ್ಧ ಗಂಟೆ ನಗರವನ್ನು ಬಿಡುವುದೇ ಆಯಿತು. ತುಂಬಾ ಟ್ರಾಫಿಕ್ ಮತ್ತೆ ಬಹಳಷ್ಟು ಸಿಗ್ನಲ್ಗಳನ್ನು ದಾಟುವಷ್ಟರಲ್ಲಿ ಸಾಕು ಸಾಕಾಯಿತು. ತಂದೆ ನಿಧಾನಾವಾಗೆ ಚಾಲನೆ ಮಾಡೆಂದು ಹೇಳುತ್ತಲೇ ಬರುತಿದ್ದರು. ಪ್ರತಿ ಸಿಗ್ನಲ್ನಲ್ಲಿ ನಿಂತಾಗಲೂ ಪಕ್ಕದ ವಾಹನ ಚಾಲಕರು ಅವರನ್ನೇ ನೋಡಿ ಏನೋ ಮಾತಾಡಿ ಕೊಳ್ಳುತಿದ್ದರು. ತಂದೆಯೂ ಅದನ್ನು ಗಮನಿಸಿದರೂ ಮಾತುಕತೆ ಮುಂದುವರೆಸಿದರು.

ಶಿವ ತನ್ನ ಮುಂದಿನ ನಿರ್ಧಾರದ ಬಗ್ಗೆ , ಇರುವ ಕೆಲಸ ಬಿಟ್ಟು ಯಾವುದಾದರು ವ್ಯಾಪಾರ ಮಾಡಬೇಕೆಂದು ಅವರ ಸಲಹೆಯನ್ನು ಕೇಳಿದೆ. ಈ ತೀರ್ಮಾನಕಕ್ಕೆ , ಇದು ಒಳ್ಳೆಯ ನಿಲುವು, ಹಳ್ಳಿಯಲ್ಲಿ ವ್ಯವಸಾಯದ ಮೇಲ್ವಿಚಾರಣೆ ನೋಡಿಕೊಳ್ಳುವುದೂ, ನಿವೇಶನಗಳನ್ನು ಕೊಂಡು ಮನೆಗಳನ್ನು ಕಟ್ಟಿಸಿ ಬಾಡಿಗೆಗೆ ಕೊಡುವುದೂ ,ಪ್ರಾಣಿ ಸಾಕಾಣಿಕೆ, ಅಥವಾ ಹಾಲು ಉತ್ಪಾದನೆ ಘಟಕ ಸ್ಥಾಪಿಸುವುದೂ , ಈಗೆ ಸಾಕಷ್ಟು ಅವರ ಪರಿಮಿತಿಯಲ್ಲಿ ಇರುವುದನ್ನು ತಿಳಿಸಿ. ನೀನೇ ಯೋಚಿಸಿ ಇನ್ನು ಯಾವುದಾದರೂ ಇಷ್ಟವಾದಲ್ಲಿ ಅದನ್ನೇ ಆಯ್ಕೆ ಮಾಡಿಕೋ ಎಂದರು.

ತಂದೆ ಮತ್ತೊಂದು ವಿಷಯವನ್ನು ತಿಳಿಸಿದರು. ಪಕ್ಕದ ತಾಲ್ಲೂಕಿನಲ್ಲಿ ವಿಮಾನ ನಿಲ್ದಾಣ ಬರುವುದರಿಂದ ಈ ರಸ್ತೆಯು ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ. ವಿಮಾನ ನಿಲ್ದಾಣದ ಸಲುವಾಗಿ ಸುತ್ತಮುತ್ತಲಿನ ಸಾಕಷ್ಟು ಹಳ್ಳಿಗಳಿಗೆ ತೊಂದರೆಯಾಗಲಿದೆ. ಬಹುಪಾಲು ಹಳ್ಳಿಗಳ ಹೊಲಗದ್ದೆಗಳು ವಿಮಾನ ನಿಲ್ದಾಣ ಮತ್ತು ರಸ್ತೆಗಳ ಪಾಲಾಗುತ್ತದೆ. ಉಳಿದದ್ದು ವ್ಯವಸಾಯಕ್ಕೆ ಯೋಗ್ಯವಿದ್ದರೂ ಹೆಚ್ಚು ಹಣ ಬರುತ್ತದೆ ಎಂದು ರೈತರು ಖಾಸಗಿ ಸಂಸ್ಥೆಗಳಿಗೆ ಮಾರುತ್ತಾರೆ. ಸೋಮಾರಿಗಳಾಗಿ ಹಣವನ್ನು ದುಂದು ವೆಚ್ಚ ಮಾಡಿ, ಕೊನೆಗೆ ತಮ್ಮ ಸ್ಥಳಗಳಲ್ಲೇ ಕೂಲಿ ಕೆಲಸ ಮಾಡುವ ಪರಿಸ್ಥಿತಿ ಉಂಟಾಗುತ್ತದೆ. ಅನ್ನವನ್ನು ನೀಡುವ ನೆಲದಲ್ಲಿ ಸೌಧಗಳನ್ನು ನಿರ್ಮಿಸುತ್ತಾ ಹೋದರೆ ಮುಂದೊಂದು ದಿನ ತಿನ್ನುವುದಕ್ಕೂ ಗತಿ ಇಲ್ಲದಂತಾಗುತ್ತದೆ. ಚಿನ್ನ ಕೊಟ್ಟರೂ ಅನ್ನ ಸಿಗುವುದಿಲ್ಲ. ಇದನ್ನು ವಿದ್ಯಾಂವಂತರಾದ ನಿಮ್ಮಂಥವರೇ ಯೋಚಿಸದಿದ್ದರೆ ಇನ್ನು ರೈತರು ಏನು ಯೋಚಿಸುತ್ತಾರೆಂದು ಬಹಳ ವಿಷಾದದಿಂದ ಹೇಳಿದರು. ಈ ಮಾತುಗಳನ್ನು ಕೇಳುತ್ತಾ ತಾನೇ ಯೋಚಿಸದ ಹಲವು ವಿಷಯಗಳನ್ನು ತಿಳಿದು ಕೊಂಡಿರುವುದು ಬಹಳ ಆಶ್ಚರ್ಯವನ್ನುಂಟು ಮಾಡಿತು. ಅವರು ಹೇಳಿದ್ದ ರೈತರ ಜೀವನ, ಒಬ್ಬ ರೈತನ ಬಳಿಯೇ ಕೇಳಿದ್ದೆ, ಐ ಟಿ ಪಾರ್ಕ್ (ತಂತ್ರ ಜ್ಞಾನ ಕೇಂದ್ರ) ಗಾಗಿ ಇದ್ದ ಜಮೀನನ್ನು ಮಾರಿ, ಬಂದ ಹಣವನ್ನು ಕಳೆದುಕೊಂಡು, ತನ್ನ ಜಮೀನಿನಲ್ಲೇ ಕಟ್ಟಿದ್ದ ಸಂಸ್ಥೆಯಲ್ಲಿ ಕಾವಲುಗಾರನಾಗಿ ಕೆಲಸ ಮಾಡುತಿದ್ದ. ವಿಮಾನ ನಿಲ್ದಾಣ ಬರುವುದರಿಂದ ಅಪಾರ್ಟ್ಮೆಂಟ್ಸ್ (ಬಹು ಮಹಡಿ) ಅಥವಾ ಸಾಫ್ಟ್ವೇರ್ ಸಂಸ್ಥೆಗಳಿಗೆ ಸ್ಥಳ ಕೊಡುವುದರಿಂದ ಸಾಕಷ್ಟು ಲಾಭಗಳಿವೆಂದು ಶಿವ ಭಾವಿಸಿದ್ದೆ.

ಆದರೆ ತಂದೆಯ ಮಾತುಗಳನ್ನು ಕೇಳಿದ ಮೇಲೆ ಬೇರೆ ರೀತಿ ಯೋಚಿಸುವಂತಾಯಿತು. ಅಪಾರ್ಟ್ಮೆಂಟ್ ಗಳಿಂದ ಕೆಲವು ಜನಗಳಿಗೆ ಉಪಯೋಗವಾಗಬಹುದೂ ಆದರೆ ವ್ಯವಸಾಯದಿಂದ ಹಲವರಿಗೆ ಅನ್ನ ನೀಡಬಹುದು.ವಿದ್ಯಾವಂತರಾದ ನಾವೇ ಯೋಚಿಸದಿದ್ದರೆ? ಎಂದು ಮರು ಪ್ರಶ್ನೆ ಅವನಲ್ಲಿ ಉದ್ಭವಿಸಿತು. ತನ್ನ ಯೋಚನೆ ಯೋಜನೆಯಾಗಿ ಪರಿವರ್ತಿತವಾಯಿತು. ಇದರ ಪ್ರಕಾರ ಸ್ನೇಹಿತರೊಡಗೂಡಿ ಸಾಕಷ್ಟು ಹೊಲಗದ್ದೆಗಳನ್ನು ಖರೀದಿಸುವುದು. ವ್ಯವಸಾಯಕ್ಕೆ ಯೋಗ್ಯವಾದದ್ದನ್ನು ಅದನ್ನೇ ಮುಂದುವರೆಸುವುದು. ಉಳಿದ ಸ್ಥಳಗಳಲ್ಲಿ ತೋಟ, ಹೈನುಗಾರಿಕೆ , ಪಶುಪಾಲನೆ ಮತ್ತು ಇತರೆ ಅನುಕೂಲಕರವಾದ ಕೆಲಸಗಳನ್ನು ಬೃಹತ್ ರೀತಿಯಲ್ಲಿ ಯೋಜಿಸಬೇಕೆಂದು ತೀರ್ಮಾನಿಸಿದ. ನಮ್ಮಿಂದ ಇತರರಿಗೆ ಸ್ವಲ್ಪವಾದರೂ ಉಪಯೋಗವಾಗುತ್ತದೆ ಎಂದು ತಂದೆಗೆ ತಿಳಿಸಿದರೆ ಬಹಳ ಸಂತೋಷ ಪಡುತ್ತಾರೆಂದು, ಆದರೆ ಕಾರ್ಯ ರೂಪಕ್ಕೆ ತಂದು ನಂತರ ತಿಳಿಸುವುದು ಒಳ್ಳೆಯದೆಂದು ತೀರ್ಮಾನಿಸಿ, ಮಾತುಕತೆ ಮುಂದುವರೆಸಿದ.

ಕಾರು ನಗರವನ್ನು ಬಿಟ್ಟು ಊರಿನ ಹಾದಿಯನ್ನು ಹಿಡಿದಿತ್ತು. ಆಗಲೇ ಅಲ್ಲಲ್ಲಿ ಹೆದ್ದಾರಿಯ ಗುರುತುಗಳನ್ನು ಮಾಡಿದ್ದರು. ವಿಮಾನ ನಿಲ್ದಾಣಕ್ಕೆ ಸೇರುವ ರಸ್ಥೆಯ ಕೆಲಸ ಕೂಡ ಶುರುವಾಗಿತ್ತು. ಹಲವು ಸ್ಥಳಗಳಲ್ಲಿ ಖಾಸಗಿ ಸಂಸ್ಥೆಗಳ ಬೋರ್ಡುಗಳು ರಾರಾಜಿಸುತ್ತಿದ್ದವು, ಶಿವ ತನ್ನ ಕಣ್ಣನ್ನು ತಾನೇ ನಂಬಲಾಗಲಿಲ್ಲ ಅಷ್ಟು ಬದಲಾವಣೆ. ಜೊತೆಗೆ ತಂದೆಯ ಸವಿಸ್ತಾರವಾದ ವಿವರಣೆ. ತನ್ನ ಯೋಜನೆಯ ಅಡಿಪಾಯ ಬಲವಾಗುತ್ತಾ ಹೋಯಿತು. ಮುಂಬರುವ ದಿನಗಳ ಕಲ್ಪನೆಯನ್ನೂ ಮೀರಿ ಕಾರ್ಯವನ್ನು ದೃಢ ಸಂಕಲ್ಪಂದಿಂದ ಕಾರ್ಯಗತ ಮಾಡುತ್ತೇನೆಂದು ಮನಸಿನಲ್ಲೇ ನಿರ್ಧರಿಸಿದ. ಅಷ್ಟರಲ್ಲಿ ಮನೆ ಸಮೀಪಿಸಿತು. ಕಾರನ್ನು ನಿಲ್ಲಿಸಿ, ಇಬ್ಬರೂ ಕಾರಿನಿಂದಿಳಿದರು . ತಂದೆಯು ತಾನು ಕೊಟ್ಟಿಗೆಯ ಕಡೆ ಹೊರಟು , ಅವನ್ನನ್ನು ಒಳಗೆ ಹೋಗಬೇಕೆಂದು ಹೇಳಿದರು.

ಶಿವ ಬಾಗಿಲನ್ನು ಮೆಲ್ಲನೆ ತಟ್ಟಿದಾಗ, ಒಳಗಿನಿಂದಲೇ ಯಾರು ಎಂದು ಕೇಳುತ್ತಲೇ ತಾಯಿ ಬಾಗಿಲು ತೆರೆದರು. ಮಗನನ್ನ ಕಂಡು ಮುಖದಲ್ಲಿ ಸಂತೋಷ ಬಂದರೂ ಮರುಕ್ಷಣದಲ್ಲೇ ಕಣ್ಣಲ್ಲಿ ನೀರು, ಏನೆಂದು ಸನ್ನೆಯಿಂದಲೇ ಕೇಳಿದ. ಅದಕ್ಕವರು ಅವನ ಕೈಯಿಡಿದು ತಂದೆಯ ಕೊಠಡಿಗೆ ಕರೆದುಕೊಂಡು ಹೋದರು. ಹಾಸಿಗೆಯಲ್ಲಿ ತಂದೆ ಅವನಿಗಾಗಿ ಕಾಯುತ್ತ ಕುಳಿತಿದ್ದರು. ಶಿವ ತಕ್ಷಣ ಕಿಟಕಿಯಿಂದಾಚೆ ಕೊಟ್ಟಿಗೆಯ ಹತ್ತಿರ ನೋಡಿದ. ತಂದೆಯ ರೂಪ ಮುಗುಳ್ನಗೆಯೊಂದಿಗೆ ಗಾಳಿಯಲ್ಲಿ ಮಾಯವಾಯಿತು. ಅದೇ ಮುಗುಳ್ನಗೆಯಿಂದ ತಂದೆ ಅವನನ್ನು ನೋಡುತಿದ್ದರು. ತಂದೆಯ ಈ ವಿಸ್ಮಯಕಾರಿ ಕರೆಗೆ ಆಶ್ಚರ್ಯಗೊಂಡ, ಅವರ ಆರೋಗ್ಯದ ಬಗ್ಗೆ ವಿಚಾರಿಸಿ, ಶಿವ ತನ್ನ ಯೋಜನೆಯನ್ನು ಹೇಳಲು ಬಹಳ ಉತ್ಸಾಹದಿಂದ ಅವರ ಬಳಿ ನಡೆದೆ.