Click here to Download MyLang App

ಕಪ್ಪು ಕಡಲು - ಬರೆದವರು : ಹರೀಶ ಕೃಷ್ಣಪ್ಪ

ಒಂದಾನೊಂದು ಕಾಲದಲ್ಲಿ ಒಂದು ವಿಶಾಲವಾದ ಕಡಲ ತೀರ. ಅಲ್ಲೊಬ್ಬ ಬಹಳ ವಯಸ್ಸಾದ ಮುದುಕ.ವಯಸ್ಸಾದ ಕಾರಣದಿಂದ ದೋಣಿಯಲ್ಲಿ ದೂರ ಹೋಗಲಾರದೆ, ಪ್ರತಿ ದಿನ ಬೆಳಗ್ಗೆ ಇಂದ ರಾತ್ರಿಯವರೆಗೆ ಸಮುದ್ರ ತೀರದಲ್ಲೇ ಬಲೆಯನ್ನು ಬೀಸಿ ಎಷ್ಟು ಮೀನು ಸಿಗುತ್ತವೋ ಅಷ್ಟರಲ್ಲೇ ತೃಪ್ತಿಯನ್ನು ಹೊಂದುತಿದ್ದ. ಅವನ ಹತ್ತಿರ ಒಂದು ಒಳ್ಳೆಯ ನಾಯಿಯಿತ್ತು ಮತ್ತು ಒಂದು ಸೋಮಾರಿ ಸ್ವಭಾವದ ಕಪ್ಪುಬೆಕ್ಕಿತ್ತು. ನಾಯಿಯ ಹೆಸರು ಟಾಮಿ. ಬೆಕ್ಕಿನ ಹೆಸರು ಸೋಮಿ.

ಆ ಮುದುಕ "ಟಾಮಿ!" ಎಂದು ಜೋರಾಗಿ ಕರೆದ. ಕರೆದ ಒಂದೇ ಕೂಗಿಗೆ ನಾಯಿ ಬಾಲವನ್ನು ಅಲ್ಲಾಡಿಸುತ್ತ ಅವನ ಬಳಿ ಓಡಿ ಬಂತು. "ಟಾಮಿ, ನನಗೆ ಬಾಯಾರಿಕೆಯಾಗಿದೆ ಸ್ವಲ್ಪ ನೀರು ತಾ" ಎಂದನು. ಹೇಳಿದ ತಕ್ಷಣ ನಾಯಿ ಓಡಿ ಹೋಗಿ ನೀರನ್ನು ತಂದಿತು. ಮುದುಕ ಬಹಳ ಸಂತಸ ಗೊಂಡನು. ನಾಯಿಗೆ ಒಂದು ಮೀನನ್ನು ಎಸೆದನು, ಟಾಮಿ ಅಷ್ಟೇ ವೇಗದಿಂದ ಅದನ್ನು ಬಾಯಲ್ಲಿ ಹಿಡಿಯಿತು.

"'ಸೋಮಿ!" ಎಂದು ಬೆಕ್ಕನ್ನು ಕರೆದ, ಅದು ಬರಲಿಲ್ಲ. "ಸೋಮಿ, ಸೋಮಿ!" ಎಂದು ಮತ್ತೊಮ್ಮೆ ಕರೆದ, ಆದರೆ ಅದು ಬರಲಿಲ್ಲ. " ಸೋಮಿ, ನಿನಗೆ ಮೀನು ಬೇಕಾ?" ಎಂದು ಹೇಳಿದ ತಕ್ಷಣವೇ ಮನೆಯ ಮೇಲಿಂದ ಎಗರಿ, ತನ್ನ ಕಾಲುಗಳನ್ನು ಮುಂದೆ ಮಾಡಿ "ಮಿಯಾವ್" ಎಂದು ತನ್ನ ಇರಿವಿಕೆಯನ್ನು ಮುದುಕನಿಗೆ ತಿಳಿಸಿತು. ಮುದುಕ ತನ್ನ ಟೋಪಿಯನ್ನು ತರಲು ಅದಕ್ಕೆ ಹೇಳಿತು, ಆದರೆ ಬೆಕ್ಕು, ಮೊದಲು ಮೀನು, ನಂತರ ಕೆಲಸ ಎಂದಿತು. ಮುದುಕನಿಗೆ ಬೆಕ್ಕಿನ ಮೇಲೆ ಸ್ವಲ್ಪ ಕರುಣೆ ಇದ್ದರಿಂದ, ಮೀನನ್ನು ಕೊಟ್ಟನು. ಬೆಕ್ಕು ಮೀನನ್ನು ಹೊಟ್ಟೆಯಲ್ಲಿ ಇಳಿಸಿ. ಮನೆಯಿಂದ ಅವನು ಕೇಳಿದ ಟೋಪಿಯನ್ನು ತಂದು ಕೊಟ್ಟಿತು.

ಟಾಮಿಯು " ಕಪ್ಪು ಬೆಕ್ಕು, ಸೋಮಾರಿ ಬೆಕ್ಕು, ಕೆಟ್ಟ ಬೆಕ್ಕು" ಎಂದು ಜೋರಾಗಿ ಹೇಳಿತು. ಇದನ್ನು ಕೇಳಿಸಿಕೊಂಡ ಮುದುಕ ಆ ರೀತಿ ಹೇಳಬಾರದೆಂದು ಎಚ್ಚರಿಸಿದನು.

ಮರುದಿನ ಮುದುಕನು ಅನಾರೋಗ್ಯದಿಂದ ಮಲಗಿದ್ದನು. ವಿಪರೀತ ಜ್ವರ. "ಟಾಮಿ!" ಎಂದು ಜೋರಾಗಿ ಕರೆದ. ಕರೆದ ಒಂದೇ ಕೂಗಿಗೆ ನಾಯಿ ಬಾಲವನ್ನು ಅಲ್ಲಾಡಿಸುತ್ತ ಅವನ ಬಳಿ ಓಡಿ ಬಂತು. "ಟಾಮಿ" ಅಲ್ಮೇರಾದಿಂದ ಮಾತ್ರೆಗಳ ಡಬ್ಬವನ್ನು ತೆಗೆದುಕೊಂಡು ಬಾ ಎಂದನು . ಟಾಮಿ ಎಷ್ಟೇ ಪ್ರಯತ್ನಿಸಿದರೂ ಎತ್ತರದಲ್ಲಿದ್ದ ಅಲ್ಮೆರಾದಿಂದ ಡಬ್ಬವನ್ನು ತೆಗೆಯಲು ಸಾಧ್ಯವಾಗಲಿಲ್ಲ.

"'ಸೋಮಿ" ಎಂದು ಬೆಕ್ಕನ್ನು ಕರೆದ, ಅದು ಬರಲಿಲ್ಲ. "ಸೋಮಿ, ಸೋಮಿ!" ಎಂದು ಮತ್ತೊಮ್ಮೆ ಕರೆದ, ಆದರೆ ಅದು ಬರಲಿಲ್ಲ. " ಸೋಮಿ, ನಿನಗೆ ಮೀನು ಬೇಕಾ?" ಎಂದು ಹೇಳಿದ ತಕ್ಷಣವೇ ಮನೆಯ ಮೇಲಿಂದ ಎಗರಿ, ತನ್ನ ಕಾಲುಗಳನ್ನು ಮುಂದೆ ಮಾಡಿ "ಮಿಯಾವ್" ಎಂದು ತನ್ನ ಇರಿವಿಕೆಯನ್ನು ಮುದುಕನಿಗೆ ತಿಳಿಸಿತು. ಮೀನನ್ನು ಕೊಡು ಎಂದು ಕೇಳಿತು. " ಸೋಮಿ" ಈ ದಿನ ನನಗೆ ಅನಾರೋಗ್ಯವಿರುವುದರಿಂದ ಮೀನನ್ನು ಹಿಡಿಯಲು ಹೋಗಲಿಲ್ಲ , ನಾಳೆ ನಿನಗೆ ಕೇಳಿದಷ್ಟು ಮೀನನು ಕೊಡುತ್ತೇನೆ. ಬೇಗ! , ಸೋಮಿ, ಮಾತ್ರೆಯ ಡಬ್ಬ ತೆಗುದುಕೊಂಡ ಬಾ ಎಂದನು. " ಸೋಮಿ, ನೀನು ತೆಗೆದು ಕೊಂಡು ಬರೆದೆ ಇದ್ದರೇ, ನಾನು ಏಳಲು ಸಾಧ್ಯವಾಗುವುದಿಲ್ಲ. ಎಂದು ವಿಷಾದದಿಂದ ಕೇಳಿದನು. ಆದರೂ ಬೆಕ್ಕಿಗೆ ಕರುಣೆ ಬರಲಿಲ್ಲ. ಮುದುಕನಿಗೆ ಏನು ಮಾಡಬೇಕು ಎಂದು ತೋಚದೆ , ಸಂಕಟದಿಂದ ಅತ್ತನು. ಬೆಕ್ಕು ಮಾತ್ರೆಯ ಡಬ್ಬದ ಹತ್ತಿರ ಹೋದರೂ , ಅದನ್ನು ಮುದುಕನಿಗೆ ಕೊಡುವ ಗೋಜಿಗೆ ಹೋಗಲಿಲ್ಲ. ಟಾಮಿ "ಬೌ ಬೌ ಬೌ " ಎಂದು ಸೊಮಿಯ ಹತ್ತಿರ ಹೋಗಿತ್ತು. ಸೊಮಿ ಅಲ್ಲಿಂದ ಓಡಿತು, ನಾಯಿ ಅದರ ಹಿಂದೆ ಓಡಿತು. ಬೆಕ್ಕು ಓಡುವ ಬರದಲ್ಲಿ ಮಾತ್ರೆ ಡಬ್ಬವನ್ನು ಕೆಳಗೆ ಬೀಳಿಸಿತ್ತು. ಟಾಮಿಯು "ಕಪ್ಪು ಬೆಕ್ಕು, ಸೋಮಾರಿ ಬೆಕ್ಕು, ಕೆಟ್ಟ ಬೆಕ್ಕು" ಎಂದು ಜೋರಾಗಿ ಕೂಗಿತು.

ಮುದುಕ ಟಾಮಿಯನ್ನು ಕರೆದು ಕೆಳಗೆ ಬಿದ್ದಿದ್ದ ಮಾತ್ರೆಯ ಡಬ್ಬನ್ನು ತೆಗೆದು ಕೊಡುವಂತೆ ಕೇಳಿದನು. ತತ್ ತಕ್ಷಣ ಟಾಮಿ ಮಾತ್ರೆಯ ಡಬ್ಬವನ್ನು ಕೊಟ್ಟಿತು. ಮುದುಕ ಮಾತ್ರೆಯನ್ನು ಹಾಕಿಕೊಂಡು ಸ್ವಲ್ಪ ವಿಶ್ರಾಂತಿಯನ್ನು ತೆಗೆದುಕೊಂಡನು.


ಮರುದಿನ ಎದ್ದಾಗ ಜ್ವರ ಮಾಯವಾಗಿತ್ತು ,ಮುದುಕ ಆರೋಗ್ಯವಾಗಿದ್ದ. ಆ ದಿನ ಬಲೆಯನ್ನು ಬೀಸಿದ ಮರುಕ್ಷಣದಲ್ಲೇ ಬಹಳಷ್ಟು ಮೀನುಗಳು ದೊರೆತವು. ತನ್ನ ಮನೆಯ ಮುಂದೆ ಆರಾಮ ಕುರ್ಚಿಯಲ್ಲಿ ಕುಳಿತು, ಸಮುದ್ರದ ಅಲೆಗಳನ್ನೇ ನೋಡುತ್ತಾ ಕುಳಿತಿದ್ದನು.

ಟಾಮಿ ಮುದುಕನ ಬಳಿ ಬಂದು, ಬೆಕ್ಕಿನಿಂದ ಯಾವ ಕೆಲಸವೂ ಆಗುತ್ತಿಲ್ಲ. ಆ ದುಷ್ಟ ಬೆಕ್ಕನ್ನು ಇಲ್ಲಿಂದ ಓಡಿಸ ಬೇಕೆಂದಿತು. ಬೆಕ್ಕಿನ ಮೇಲೆ ಕರುಣೆ ಇದ್ದ ಮುದುಕ, ಆ ರೀತಿ ಹೇಳಬಾರದೆಂದು.ಸೋಮಿಯೂ ಬದಲಾಗಿ ಒಳ್ಳೆಯ ಬೆಕ್ಕಾಗುತ್ತದೆ.ಅದಕ್ಕೆ ಟಾಮಿ, ಅದರ ತಾಯಿಗೂ ಇದೆ ರೀತಿ ಹೇಳುತ್ತಿದ್ದಿರಿ. ಆದರೆ ಅದು ಪ್ರತಿ ರಾತ್ರಿ ನಿಮ್ಮ ಬಲೆಯನ್ನೇ ಹಾಳು ಮಾಡುತಿತ್ತು. "ಟಾಮಿ" , ಸೋಮಿಯು ಒಳ್ಳೆಯ ಬೆಕ್ಕಾಗುತ್ತದೆ.ಸ್ವಲ್ಪ ಕಾಯಬೇಕು ಅಷ್ಟೇ ಎಂದನು. ಸರಿ, ನೀವು ಹೇಳಿದ ಹಾಗೆ ಆಗಲಿ. ಈಗ ನನಗೆ ಹಸಿವಾಗುತ್ತಿದೆ, ಮೀನನ್ನು ಕೊಡಿ ಎಂದಿತು. ಮುದುಕ ನಗುತ್ತಾ ಮೀನನ್ನು ಎಸೆದನು. ಟಾಮಿ ಅಷ್ಟೇ ವೇಗದಿಂದ ಅದನ್ನು ಬಾಯಲ್ಲಿ ಹಿಡಿಯಿತು.ಮುದುಕ ಟಾಮಿಯ ಬೆನ್ನನ್ನು ಸವರಿದ.ಅದು ನಿದ್ದೆಗೆ ಜಾರಿತು. ಇದನ್ನು ನೋಡುತಿದ್ದ ಹಸಿವಿನಿಂದ ಕಂಗಾಲಾಗಿದ್ದ ಸೋಮಿ ತಕ್ಷಣವೇ ಮನೆಯ ಮೇಲಿಂದ ಎಗರಿ, ತನ್ನ ಕಾಲುಗಳನ್ನು ಮುಂದೆ ಮಾಡಿ "ಮಿಯಾವ್" ಎಂದು ತನ್ನ ಇರಿವಿಕೆಯನ್ನು ಮುದುಕನಿಗೆ ತಿಳಿಸಿತು. ಮೀನನ್ನು ಕೊಡು ಎಂದು ಕೇಳಿತು.ಮುದುಕ ಮೃದುವಾದ ಮಾತಿನಿಂದ ಮುಂದೆ ಈ ರೀತಿ ಮಾಡಬಾರದೆಂದು ಹೇಳಿ, ಅದರ ಪಾಲಿನ ಮೀನನ್ನು ಕೊಟ್ಟನು. ಸಂತೋಷದಿಂದ ಮೀನನ್ನು ತಿಂದು , ಅವನ ಕೈಯನ್ನು ನೆಕ್ಕುತಿತ್ತು. ಮುದುಕ ಹಾಗೆಯೇ ನಿದ್ದೆಗೆ ಜಾರಿದ.

ಯಾರೋ ಎಳೆದಂತಾಗಿ ಮುದುಕ ಎದ್ದಾಗ , ಏನೋ ಸುಡುತ್ತಿರುವ ವಾಸನೆ ಬರುತಿತ್ತು. ಏನೆಂದು ಮೇಲೆ ನೋಡಿದರೆ ಮನೆಯ ಮೇಲ್ಚಾವಣಿಗೆ ಬೆಂಕಿ ಬಿದ್ದು ಸುಡುತ್ತಿತ್ತು.

"ಟಾಮಿ, ಸೋಮಿ, ತಕ್ಷಣ ನೀರು ತನ್ನಿ, ಬೇಗ ಬೇಗ ನೀರು ತನ್ನಿ", ಬೆಂಕಿಯನ್ನು ತಕ್ಷಣ ಆರಿಸಬೇಕೆಂದು ಕೂಗಿ ಕೊಂಡನು. ಟಾಮಿ ಒಂದೇ ಸರಿ ಓಟಕಿತ್ತು ಬಕೀಟಿಲಲ್ಲಿ ಎಷ್ಟು ಸಾದ್ಯವೋ ಅಷ್ಟು ನೀರನ್ನು ತರುತಿತ್ತು. ಅದರ ಸೋಮಾರಿ ಸೋಮಿ ಕದಲಲಿಲ್ಲ. ಮುದುಕ ಮೀನನ್ನು ಕೊಟ್ಟ ನಂತರ ನೀರನ್ನು ತರಲು ಹೋಗುತಿತ್ತು. ಸ್ವಲ್ಪ ಸಮಯದ ನಂತರ ಮಲಗಿ ಬಿಡುತಿತ್ತು. ಮತ್ತೆ ಮೀನನ್ನು ಹಾಕಿದರೆ ನೀರನ್ನು ತರುತಿತ್ತು. ಇದು ಈಗೆ ಮುಂದುವರೆಯುತಿತ್ತು. ಟಾಮಿ ಮಾತ್ರ ತನ್ನ ಶಕ್ತಿ ಇರುವ ವರೆಗೂ ಮುದುಕನಿಗೆ ಸಹಾಯ ಮಾಡಿತು. ಆದರೆ ಸಮಯ ಮೀರಿ ಹೋಗಿತ್ತು. ಬೆಂಕಿ ಮನೆಯನ್ನು ಆಕ್ರಮಿಸಿಕೊಂಡು. ಎಲ್ಲವೂ ಸುಟ್ಟು ಹೋಯಿತು. ಮುದುಕನಿಗೆ ಮನೆ ಇಲ್ಲದಂತಾಯಿತು.

"ಅತಿಯಾಯಿತು, ಇನ್ನು ಈ ಕೆಟ್ಟ ಕರಿ ಬೆಕ್ಕು ನನಗೆ ಬೇಕಿಲ್ಲ!, ಎಂದು ಕೋಪದಿಂದ ಸಮುದ್ರಕ್ಕೆ ಎಸೆದನು. ಆ ಬೆಕ್ಕು ಎಲ್ಲಿ ಹೋಯಿತೋ ತಿಳಿಯಲಿಲ್ಲ. ಆದರೆ ನೀಲಿ ಕಡಲು ಕಪ್ಪು ಕಡಲಾಗಿ ಮಾರ್ಪಟ್ಟಿತು."


ಆದರೆ ಸ್ವಲ್ಪ ಸಮಯದ ನಂತರ ಸುಟ್ಟ ಮನೆ ಕಡೆ ಕಪ್ಪು ಬಣ್ಣದ ಬೆಕ್ಕಿನ ಮರಿ ಬರುತಿತ್ತು. ಮುದುಕ ಕೋಪದಿಂದ ಕರಿಯ ಬೆಕ್ಕಿಗೆ ಇಲ್ಲಿ ಜಾಗವಿಲ್ಲ ಎಂದು ಅಲ್ಲಿಂದ ಮರಿಯನ್ನು ಓಡಿಸಿದ. ಇದನ್ನು ಗಮನಿಸುತ್ತಿದ್ದ ಟಾಮಿ , ಒಡೆಯನೇ ಈಗಲಾದರೂ ನಿಮಗೆ ತಿಳಿಯಿತಲ್ಲ ಕೆಟ್ಟ ಬೆಕ್ಕಿನ ಬುದ್ದಿ ಅಷ್ಟು ಸಾಕು ಎಂದಿತು.


ಮುದುಕ ಉತ್ಸಾಹದಿಂದ ಈ ನಮ್ಮ ಮೊದಲ ಕೆಲಸ ಮನೆಯನ್ನು ಕಟ್ಟುವುದು ಎಂದನು. ಟಾಮಿಯು ಅದಕ್ಕೂ ಮೊದಲು ಹಸಿವು. ಮುದುಕ ಮೀನುಗಳಿಲ್ಲ ಎಂದನು. ಅದಕ್ಕೆ ಟಾಮಿ , ಮೊದಲು ಮೀನನ್ನು ಹಿಡಿಯಬೇಕು. ಮುದುಕ ಕಪ್ಪು ಸಮುದ್ರಕ್ಕೆ ಬಲೆಯನ್ನು ಬೀಸಿದಾಗ ಸ್ವಲ್ಪ ಮೀನುಗಳೇ ಸಿಕ್ಕವು. ಮರುದಿನ ಅಷ್ಟೇ ಮೀನುಗಳು, ದಿನೇ ದಿನೇ ಮೀನುಗಳ ಸಂಖ್ಯೆ ಕಡಿಮೆಯಾಗುತ್ತಾ ಹೋಯಿತು. ಮುದುಕ ಮತ್ತು ನಾಯಿಯ ಹಸಿವು ಹೆಚ್ಚುತ್ತಾ ಹೋಯಿತು. ಬಲೆಯನ್ನೂ ಎಸೆಯಲು ಶಕ್ತಿ ಇಲ್ಲದಂತಾಯಿತು.

ಸಮುದ್ರದ ಕಡೆ ತಿರುಗಿ ಇದಕ್ಕೆ ಕಾರಣವೇನು, ತಾನು ಮಾಡಿದ ತಪ್ಪೇನು? ಎಂದು ಕೇಳುತಿದ್ದನು.

" ಒಳ್ಳೆಯದರ ಮೇಲಿದ್ದ ನಿನ್ನ ನಂಬಿಕೆಯನ್ನು ಕಳೆದುಕೊಂಡೆ." ಎಂದು ಶಾಂತವಾದ ಧ್ವನಿಯೊಂದಿಗೆ ಮನೆಯ ಮೇಲೆ ಪಕ್ಷಿಯೊಂದು ನುಡಿಯುತಿತ್ತು.

ಅದಕ್ಕೆ ಮುದುಕ "ಸೋಮಿಯಲ್ಲಿ ಯಾವ ಒಳ್ಳೆಯತನವೂ ಇರಲಿಲ್ಲ. " ಎಂದನು. ಪಕ್ಷಿಯು, "ಎಲ್ಲರಲ್ಲೂ ಒಳ್ಳೆಯದು ಕೆಟ್ಟದ್ದು ಎರಡೂ ಇರುತ್ತದೆ. ಆದರೆ ಯಾವುದನ್ನು ನಾವು ನಂಬುತ್ತೇವೋ ಅದರ ಮೇಲೆ ಪರಿಣಾಮಗಳು ನಮಗೆ ಆಗುತ್ತದೆ" .

ಸೊಮಿಯಾ ಸೋಮಾರಿತನ ಕೆಟ್ಟ ಬುದ್ಧಿಯೇ ಮನೆಯು ಸುಡುವುದಕ್ಕೆ ಕಾರಣವೆಂದು ಮುದುಕನು ಹೇಳಿದ.

ಅದಕ್ಕೆ ಪಕ್ಷಿ ಹೌದು, ಆದರೆ ಅದಕ್ಕೂ ಮುಂಚೆ ಅದು ನಿನ್ನ ಪ್ರಾಣವನ್ನು ರಕ್ಷಿಸಿತು. ಒಂದಲ್ಲ ಎರಡು ಬಾರಿ. ಮೊದಲು ಮಾತ್ರೆಯ ಡಬ್ಬವನ್ನು ಬೀಳಿಸಿ. ನೀನು ಅಂದುಕೊಂಡಿದ್ದು ಆಕಸ್ಮಿಕವಾಗಿ ಬಿತ್ತೆಂದು, ಆದರೆ ಅದು ಉದ್ದೇಶ ಪೂರ್ವಕವಾಗಿಯೇ ಬೀಳಿಸಿತ್ತು. ಎರಡನೇ ಬಾರಿ ಬೆಂಕಿಯಲ್ಲಿ ಮನೆ ಸುಡುತ್ತಿರಲು , ನೀನು ಮತ್ತು ಟಾಮಿ ಇಬ್ಬರು ಮಲಗಿರಲು ನಿನ್ನನು ಎಬ್ಬಿಸಿದ್ದು ಈ ಸೋಮಿಯೇ. ಇಲ್ಲದಿದ್ದರೆ ಮನೆಯ ಜೊತೆಗೆ ನೀನು ಮತ್ತು ಟಾಮಿ ಇಬ್ಬರೂ ಸುತ್ತು ಹೋಗುತ್ತಿದ್ದೀರಿ. ಆದರೆ ನೀನು ಮಾಡಿದ್ದಾದರೂ ಏನು? ಅದನ್ನು ಸಮುದ್ರಕೆ ಎಸೆದೆ. ಮೊದಲೇ ಹೇಳಿದಂತೆ ಒಳ್ಳೆಯದೂ ಕೆಟ್ಟದ್ದು ಎಲ್ಲರಲ್ಲೂ ಇದೆ, ನೀನು ಯಾವುದನ್ನು ಆಯ್ಕೆಮಾಡುತ್ತೀಯೋ ಅದು ನಿನಗೆ ಬಿಟ್ಟಿದ್ದು ಎಂದು ಚಂಗನೆ ಹಾರಿ ಹೋಯಿತು.

ಟಾಮಿಯ ಬೌ ಬೌ ಕಿರುಚುವಿಕೆ ಬಂದ ಕಡೆ ನಡೆದನು. ಮತ್ತೆ ಅದೇ ಕಪ್ಪು ಬೆಕ್ಕು ಮರಿ, ಭಯದಿಂದ ಮುದುರಿಕೊಂಡು ಚೆಂಡಿನಂತೆ ಕಾಣುತಿತ್ತು. ಟಾಮಿ ಅದರ ಮೇಲೆ ಕಿರುಚ್ಚತ್ತಲೇ ಇತ್ತು. ಟಾಮಿ ಇದು ನಮ್ಮ ಕೊನೆಯ ಮೀನಿನನ್ನು ಕದಿಯಲು ಹೊಂಚು ಹಾಕುತ್ತಿದ್ದೆ. ಇದನ್ನು ಓಡಿಸಬೇಕು ಎಂದಿತು. ನಿಮಗೆ ಗೊತ್ತಲ್ಲವೇ ಕರಿಯ ಕೆಟ್ಟ ಬೆಕ್ಕಿನ ಬುದ್ಧಿ.

"ಇಲ್ಲ, ಟಾಮಿ, ಅದಕ್ಕೂ ನಮ್ಮ ಹಾಗೆ ಹಸಿವಾಗಿದೆ. ನೋಡು ಎಷ್ಟು ಬಡವಾಗಿದೆ." ಟಾಮಿ ಬೊಗಳುತಿದ್ದರೂ ಇದ್ದ ಮೀನನ್ನು ಮೂರು ಭಾಗವನ್ನು ಮಾಡಿ , ಎಲ್ಲರಿಗೂ ಹಂಚಿದನು. ಬೆಕ್ಕಿನ ತಲೆಯನ್ನು ನೇವರಿಸಿದನು , ಬೆಕ್ಕು ಭಯದಿಂದ ಅವನನ್ನು ತನ್ನ ಉಗುರುಗಳಿಂದ ಕೆರೆಯುತಿತ್ತು.

ಟಾಮಿಯು " ಕಪ್ಪು ಬೆಕ್ಕು, ಸೋಮಾರಿ ಬೆಕ್ಕು, ಕೆಟ್ಟ ಬೆಕ್ಕು" ಎಂದು ಜೋರಾಗಿ ಹೇಳಿತು.ಇದನ್ನು ಕೇಳಿಸಿಕೊಂಡ ಮುದುಕ ಆ ರೀತಿ ಹೇಳಬಾರದೆಂದು ಇದಕ್ಕೆ ನಾವು ಹೊಸಬರು, ನಾವು ಯಾರೆಂದು ತಿಳಿಯದು. ಅದಕ್ಕೆ ಈ ರೀತಿ ಮಾಡುತ್ತಿದೆ.

ಮೂವರೂ ಮೀನನ್ನು ತಿಂದರು. ಮುದುಕ ಸಮುದ್ರದ ಕಡೆ ನೋಡುತಿದ್ದನು. ನಾಯಿ ಮೆಲ್ಲಗೆ ನಮ್ಮ ಹತ್ತಿರ ಮೀನಿಲ್ಲ, ಇನ್ನು ನಾವು ಹಸಿವಿನಿಂದ ಸಾಯಬೇಕು ಎಂದಿತು. ಬೆಕ್ಕಿನ ಮರಿ ಸುಟ್ಟ ಮನೆಯ ಚಾವಣಿಯನ್ನು ಹತ್ತಿ ಕುಳಿತಿತು. ಪಕ್ಷಿ ಹಾರಿಬಂದು, ಮುದುಕನಿಗೆ ಈಗ ಸಮುದ್ರಕ್ಕೆ ಬಲೆಯನ್ನು ಬೀಸು ಎಂದಿತು. ಕಪ್ಪು ಸಮುದ್ರ ಏನು ಸಿಗದು ಎಂದನು ಮುದುಕ. ಪಕ್ಷಿ ನಂಬಿಕೆ ಮುಖ್ಯವೆಂದು ತಿಳಿಸಿ ಮೌನವಯಿಸಿತು.

ಈಗ ದೃಢ ವಿಶ್ವಾಸದಿಂದ ಬಲೆಯನ್ನು ಬೀಸಿದ. ಆಶ್ಚರ್ಯ!! ಬಲೆಯ ತುಂಬಾ ಮೀನುಗಳು. ಪಕ್ಷಿ ಹಾರುತ್ತ ," ಜೀವನದಲ್ಲಿ ನಂಬಿಕೆ ಬಹಳ ಮುಖ್ಯ , ನಂಬಿಕೆ ಇಲ್ಲದ ಜೀವನ , ಮೀನುಗಳಿಲ್ಲದ ಬಲೆಯಿದ್ದ ಹಾಗೆ". ಈಗ ನಿನಗೆ ಒಳ್ಳೆಯದರ ಮೇಲೆ ವಿಶ್ವಾಸ ಬಂದಿದೆ.

ಮರುದಿನದಿಂದ ಎಲ್ಲರಲ್ಲೂ ಹೊಸ ಉತ್ಸಾಹ , ಹೊಟ್ಟೆ ತುಂಬಾ ಊಟ, ಮೈ ತುಂಬಾ ಶಕ್ತಿ . ಮತ್ತೆ ಮನೆಯನ್ನು ಕಟ್ಟಿದ. ಆಶ್ಚರ್ಯಕರ ರೀತಿಯಲ್ಲಿ ಕಪ್ಪು ಕಡಲು ತಿಳಿಯಾಗುತ್ತಾ ಬಂದಿತು. ಅವನು ಮುಂದೆಂದೂ ಒಳ್ಳೆಯದರ ಬಗ್ಗೆ ನಂಬಿಕೆಯನ್ನು ಕಳೆದು ಕೊಳ್ಳದೆ ,ಟಾಮಿ ಮತ್ತು ಹೊಸ ಕರಿಯ ಬೆಕ್ಕಿಗೆ ಸೋಮಿ ಎಂದೇ ಹೆಸರಿಟ್ಟು ಬಹಳ ಕಾಲ ಸುಖವಾಗಿದ್ದನು.